ವಸುದೇವರಾಯ : ಅಯ್ಯ ಸೂರ‌್ಯಚಂದ್ರಾದಿಗಳಿರಾ, ನೀವೇ ನೋಡಿರಿ. ಗರುಡಗಂದರ್ವ ಯಕ್ಷ ಕಿನ್ನರ ಕಿಂಪುರುಷರೆಂಬೋ ತ್ರಯ ತ್ರಿಶಕ್ತಿ ಕೋಟಿ ದೇವತೆಗಳೇ ನೀವೇ ನೋಡಿರಿ – ಯಿಂದ್ರ – ಅಗ್ನಿ – ಯಮ – ನೈರುತ್ಯ – ವರುಣ – ವಾಯುವ್ಯ – ಕುಭೇರ – ಯೀಶಾನ್ಯ ಮೊದಲಾದ ಅಷ್ಟ ದಿಕ್ಪಾಲಕರೇ ನೀವೇ ನೋಡಿರಿ. ಯೀ ದೇವಕಿಗೆ ಶುಭ ಮುಹೂರ್ತ ಮಾಂಗಲ್ಯ ಶಾಸ್ತ್ರವನ್ನು ಕಟ್ಟುವೆ ಸರ್ವವೂ ನೀವೇ ಅನುಗ್ರಹಿಸಬೇಕು ಸಭಾಜನರೇ ಸಜ್ಜನರೇ.

ಮುತ್ತೈದೆ : ಅಮ್ಮಾ ದೇವಕಿ, ಇನ್ನು ತಡವ್ಯಾಕೆ ಮಾಡುತ್ತೀಯ. ನಿನ್ನ ಗಂಡನಿಗೆ ಅರಿಶಿನ ಕುಂಕುಮ ಗಂಧ ಕಸ್ತೂರಿ ಇಂದಲಿ ವುರುಟಣೆಯಂ ಮಾಡಿ ಸಾಸೆಯನ್ನಿಡಬೇಕಮ್ಮಾ. ಸುಂದರಾಂಗಿ ನಾವು ಪೋಗಿ ಬರುತ್ತೇವಮ್ಮಾ ದೇವಕಿ.

ದರುವು

ಅಂದಾ ಮಾತನು ಕೇಳಿ ಚಂದಾದಿಂದಲಿ ಶಿವನೂ
ಮಂದಗಮನೆ ನೀರೆ ಬೇಗಾ ಧರಿಶಿದಳೂ
ಯನ್ನರಸಾ ಪಟ್ಟದರಸಾ ಪ್ರಾಣಕಾಂತಾ
ನಿನ್ನ ಮುಖವ ತಾರಯ್ಯ ಅಕ್ಷತೆಯಾ ಯಿಡುವೇನೂ ॥
ಭೂಮಿಯೊಳು ನರಹರೀ ಗ್ರಾಮದಲೀ ನೆಲಸಿದನೂ
ರಾಮಾಲಿಂಗನೆ ಯನ್ನ ಸಲಹೋ ದೇವಾ ॥

ದೇವಕಿ : ಹೇ ಮುದ್ದು ಮುಖದ ಮೋಹನ, ಗಂಧ ಕಸ್ತೂರಿ ಪುನುಗು ಜವ್ವಾಜಿ ಪರಿಮಳಗಳಂ ನಿನ್ನ ಮೈಗೆ ಪೂಸುವೆ. ಯಿಕ್ಕೊ ಶ್ರೀಗಂಧ ಸಂಪಿಗೆ ಕದಂಬ ಪುನುಗು ಅರಶಿನ ಕುಂಕುಮ. ಧರಿಸುವೆ ನಿನ್ನ ಮುದ್ದು ಮುಖವ ತಾರೈ ಪ್ರಾಣಕಾಂತಾ. ಹೇ ಯನ್ನ ಮನೋಪ್ರಿಯನೆ ಹೇ ಯನ್ನ ಪ್ರಾಣದೊಡೆಯನೇ, ಅತಿ ವುತ್ಸಾಹದಿಂದ ಆನಂದ ಸುಖಪಡುವಿ – ಯಿನ್ನು ನಿನ್ನಯ ಕೂಡಾ ನಾಲೇಶನಾಟವನ್ನಾಡುವೇ. ನಿನ್ನ ನಳಿನ ತೋಳುಗಳ ತಾರೈ ಪ್ರಾಣಕಾಂತಾ. ನಿನ್ನ ಭುಜಕ್ಕೆ ಸಂಪಿಗೆ ಯಣ್ಣೆಯಿಂದ ಧರಿಸುವೇನೈ ಕಾಂತಾ ಸಿದ್ದಾಂತ ॥ಯನ್ನಯ ಚದುರ ಬಿಟ್ಟು ನಿಮ್ಮ ಚದುರಿಗೆ ದಯಮಾಡಿರೈ ಪ್ರಾಣಕಾಂತಾ.

ದರುವುರೂಪಕ

ವಸುದೇವಾ ತಾನೆದ್ದು – ಶಶಿಮುಖಿಗೇ
ಅರಶಿನವೂ  ಎಸೆವೊ ಗಂಧವು ತಾನು –
ಅಚ್ಚುತಾ ನಗುತಾ – ಜಾಜಿಮಲ್ಲಿಗೇ
ದಂಡೆ ಸೋಜಿಗದೀ ಮುಡಿಸಿದನೂ ॥
ರಾಜಿಸುವೋ ಕುಸುಮವನೂ –
ಕೈಯಲ್ಲಿ ಕೊಡುವಾತಾ ಕೊಡಲೂ ॥

ವಸುದೇವರಾಯ : ಹೇ ಸುಂದರಿ ಸುರಚಿರ ಕಂಬುಕಂದರೀ, ನವನಾರೀ ಪುಂಜರೀ ಪೌರ್ಣಮಿ ಚಂದಿರಿ, ಗಿಳಿಮಾತಿನ  ಸೌಂದರೀ, ಯಿಂದು ನಿನಗೆ ಅರಿಶಿನ ಕುಂಕುಮ ಗಂಧ ಕಸ್ತೂರಿ ಪುನುಗು ಜವ್ವಾಜಿಯಂ ಧರಿಸುವೆ, ನಿನ್ನ ಬಲಹಸ್ತವ ತಾರೇ ಭಾಗ್ಯವತೀ ಮಾತಿನಲ್ಲಿ ಚಮತ್ಕೃತಿ. ಹೇ ಮಡದಿ ಮೋಹನೆ ಸದ್ಗುಣ ಸಂಪನ್ನೆ, ಯೀ ವೂರ‌್ವಿಯೋಳ್ ನಿನಗ್ಯಾರು ಸರಿಯೇ. ಮುದ್ದು ಮುಖದ ಸೌಂದರಿಯೆ ಯಿಕ್ಕೋ ನಿನ್ನ ತುರುಬಿಗೆ ಯಿರುವಂತಿಗೆ – ಶಾವಂತಿಗೆ – ಸಣ್ಣ ಮಲ್ಲಿಗೆ ಸುರಹೊನ್ನೆ ಮಂದಾರ ವುವ್ವಿನ ಸರಗಳು ನಿನ್ನ ವಾರೆ ತುರುಬಿಗೆ ಮುಡಿಸುವೆನೇ ಕಾಮಿನೀ, ಯನ್ನ ಪ್ರಾಣಾ ಪ್ರಭಾಮಿನೀ.

ಮಂಗಳಾರತಿ ದರುವೂ

ಶ್ರೀ ಲಕ್ಷ್ಮೀಪತಿ ವರವಂ ಪಡದಿಹಾ
ಪತಿ ಪಾಲಿಸೂ ಪತಿಪಾಹಿ ನಮೋ
ಕೃಪದೇಹಿ ನಮೋ ದಾಸ ನಮೋ ಪ್ರಖ್ಯಾತ
ನಮೋ  ದುರುಳರ ಕರೆಕರೆ – ಪರಿ
ಹರಿಸದೇ ಯೀ ಪರಿ ಮಾಡುವರೇ ರಾಜಾದಿ
ಭೋ ಭೂಪಾಲದಿ ಭೋ-ಮಂಗಳಾ
ಮಹಿಮ ಕೃಪಾಯನ ಸದ್ಗುರು –
ಮಂಗಳಶೃತ ಶೋಭಂಗ ನಮೋ ರಂಗ ನಮೋ
ಕೃಪಾಂಗ ನಮೋ ಮೋಹನಾಂಗ
ನಮೋ ಭವಭಂಗ ನಮೋ – ಆಶಪಾಶ
ಕ್ಲೇಶ ದೋಷ ವಿನಾಶೀ – ಶ್ರೀನಿವಾಸ
ದಾಸದಾಸ ನಮೋ ॥ಶೇಷ ನಮೋ
ಶ್ರೀನಿವಾಸ ನಮೋ – ಶ್ರೀ ಕೃಷ್ಣಾನಾನಕ
ಸೋಮೇಶ ನಮೋ ॥

ದೇವಕಿ : ಹೇ ಕಾಂತಾ, ಯಿಷ್ಟ ದೇವರ ನೆನೆದು ನಿನಗೆ ದ್ರಿಷ್ಟಿ ಆರತಿಯನ್ನೆತ್ತಿರುವೆನೋ, ಯನ್ನ ಚದುರ ಬಿಟ್ಟು ನಿಮ್ಮ ಚದುರಿಗೆ ದಯಮಾಡಿರೈ ಪ್ರಾಣಾಕಾಂತಾ ॥

ಕಂಸ : ಯಲಾ ಸಾರಥಿ. ಯಿನ್ನೂ ಮಾಡುವಂಥ ಕಾರ‌್ಯಗಳೆಲ್ಲಾ ಮಾಡಿದರೇನೋ ಸಾರಥಿ ॥ಇದೂ ಅಲ್ಲದೆ ಮೆರವಣಿಗೆಯನ್ನು ಮಾಡಬೇಕಾಗುತ್ತದೆ. ನಗಾರಿ ನವಬತ್ತು ಭೇರಿ ತಮ್ಮಟ ದುಂದುಭಿ ಮೇಳತಾಳ ಮದ್ದಳೆ ಯಿಂತಪ್ಪ ವಾದ್ಯಗಳಿಂದ ಧಾಂ ಧಾಂ ಯೆಂದು ಬೀದಿ ಮೆರವಣಿಗೆಯನ್ನು ಮಾಡಿಸು. ಇದು ಅಲ್ಲದೆ ಬಾಣಾ ಬಿರುಸು ಬಂದೂಕ್ – ಪಿಸ್ತೂಲ್ ರಾಮಸಿಂಗಿ ಕರ್ನೂಲ್ ಬಿರುಸು ಬಾಣಗಳಿಂದ ಬೀದಿ ಮೆರವಣಿಗೆಯನ್ನು ಮಾಡೋಣ ನಡಿಯೋ ಸಾರಥಿ.

ದರುವೂ

ದೇವಕಿಯ ಜನಿಸಿದಾ – ಭರದೀ
ಭುಜದೇವನವರಳಿಯ ಗರ್ಭವರದೀ ॥
ಯೆವ್ವನವಂ ಕರಸಿದಾ ಅವರಂಣಾ
ವೊಳ್ಳೇ ವಸುದೇವರಾಯರು ಚಿನ
ದಿವ್ಯಲಗ್ನವು ಚತುರ್ದಿವಸಾ
ಮಾಡಿದೇ ಮರುಳಾ ಕಂಸಾ ॥

ಕಂಸ : ಯಲಾ ಸಾರಥಿ, ಹರಹರಾ ಶಿವಶಿವಾ – ಯೇನು ಅಗಾಧವಾಯಿತೋ ಸಾರಥಿ – ಯೀವಾಗ ಅಷ್ಟದಿಕ್ಪಾಲಕರು ಯೀ ಪಟ್ಟಣದಲ್ಲಿ ಯಿರುವಂಥ – ಹಿರಿಯರು ನೀವು ನಾವುಗಳೆಲ್ಲರೂ ಕೂಡಿ ಯೀ ವಸುದೇವರಾಯರಿಗೆ ಯೀ ದೇವಕಿಗೆ ಸಂಭ್ರಮದಿಂದ ಲಗ್ನವನ್ನು ಮಾಡಿ ಮೆರವಣಿಗೆಯಂ ಮಾಡುವಂಥ ಕಾಲದಿ, ನಮ್ಮ ಮನೆದೇವತೆ ಅಂಬರ ಮಾರ್ಗದಲ್ಲಿ ಆಕಾಶವೇಣಿ ನುಡಿದಾ ಮಾತಂ ಕೇಳಿದಾ. ಹರಹರಾ ಯೇನು ಮೋಸವಾಯಿತು ಸಾರಥಿ ॥ಯಿದೂ ಅಲ್ಲದೆ ಯಿನ್ನೊಂದು ವ್ಯಾಳೆ ಹೋಗೋಣ ನಡಿಯೋ ಸಾರಥಿ.

ದರುವೂ

ಮರು ದಿವಸ ತರುಣಿಯ ಸುಂಗರಿಸಿ
ಬಂದು ವರಪೀಠದಲ್ಲಿ ಕುಳ್ಳಿರಿಸೀ ॥
ಬರುತಿರಲು ಬೀದಿಯೊಳ್ ಮೆರಸೀ
ಆಕಾಶವೇಣಿ ನುಡಿದಳಬ್ಬರದೀ ॥
ಯೀಕೆಯ ಅಷ್ಟಮ ಗರ್ಭ ನಿನಗೇ
ಬಂತು ಮೃತ್ಯು ಯಾತಕೋ ನಿನಗೆ
ಶ್ರೀಕಾಂತಾ ಯಿಂದಿರೀಶ ಹುಟ್ಟುವನು –
ಬಹು ಜೋಕೇ ವುಟ್ಟುವನು ನಿಟಿಲಾ ॥

ಕಂಸ : ಯಲಾ ಸಾರಥಿ, ಕೇಳಿದೇನೋ ಆಕಾಶವೇಣಿ ನುಡಿದ ಮಾತಂ ಸಾರಥಿ. ನಾನು ಯಿದು ಮಹಾಪುಣ್ಯವೆಂದು ಧಾರೆಯನ್ನೆರೆದು ಕೊಟ್ಟು ವಿವಾಹವಂ ಮಾಡಿದರೆ ಯನಗೆ ಅಪಕಾರವು ಹಿಂದೆಲೇ ಸಂಭವಿಸಿತು. ಅಲ್ಲವೇನೈ ಸಾರಥಿ, ಆದರೆ ಯಮ್ಮ ತಂಗಿ ಇರಲ್ಯಾಕೆ ಮುಂದೆ ನನ್ನ ಜನ್ಮಕ್ಕೆ ಹಾನಿಯಂ ಬರಲ್ಯಾಕೆ. ಯಲಾ ಸಾರಥಿ ಹಿಡಿ ಹಿಡಿ ತಂಗಿಯಾ, ಶಿರ ತುಂಡುತುಂಡಿಗೆ ಖಂಡ್ರಿಸಿ ಬಿಡುವೇ ಹಿಡಿ ಹಿಡಿಯೋ ಸಾರಥಿ ॥

ದ್ವಿಪದೆ ರೇಗುಪ್ತಿ

ಮಥುರಾ ಪಟ್ಟಣದೋಳ್ ಅನೇಕದಿಂದ ಮೆರೆಸುತ್ತಿರೆ
ಆಕಾಶವೇಣಿ ಅಕಾಲದೋಳ್ ನುಡಿಯೇ
ತಂಗಿಯ ಮದುವೆಯ ಬಹು ಸಂಭ್ರಮದಿ ಮಾಡಿದೇ
ಮರುಳ ಕಂಸ – ಆಕೆಯ
ಮಗ ನಿನ್ನ ಪ್ರಾಣವನು ತೆಗೆವನೆಂಬ
ಭೀಕರದಿ ನುಡಿಕೇಳಿ ತಾ ಖಡ್ಗವಂ ಪಿಡಿಯೇ ॥

ದರುವೂ

ಹಿಡಿ ಹಿಡಿ ಸಾರಥಿ ಹಿಡಿ ತಂಗಿಯ
ಶಿರಾ ಕಡಿದು ಬಿಡುವೆನೀಗಾ ಬೇಗಾ ॥
ತಡವು ಮಾಡದೆ ಖಡ್ಗವೂ ಝಳಪಿಸಿ
ಕಡಿದು ಬಿಡುವೆನೀಗಾ ಬೇಗಾ ॥

ಕಂಸ : ಹೇ ತಂಗಿ, ಅಣ್ಣಾ ತಂಗಿಯೆಂಬ ಋಣಾನುಬಂಧ ಇಂದಿಗೇ ತೀರಿವೋಯಿತು. ಯಿಂದು ನಿನ್ನ ತಂದೆ ತಾಯಿಗಳನ್ನು ಬಂಧು ಬಳಗವನ್ನು ನೆನಸಿಕೋ. ನಿನ್ನನು ಯೆಷ್ಟು ಮಾತ್ರಕ್ಕು ಬಿಡಲಿಕ್ಕಿಲ್ಲಮ್ಮಾ ತಂಗಿ ನೂತನಾಂಗೀ ॥

ದರುವೂ

ಬ್ಯಾಡಣ್ಣಾ ಮರ್ತ್ಯಲೋಕಾ ನಿನ್ನಾ ಪಾಲಿಸೆನ್ನಾ ॥
ಯಾಕೋ ಯೀ ಧರಣಿಗೇ – ನೂಕಿದನು ಬ್ರಂಹ್ಮ
ಸಾಕು ಹೆಣ್ಣಿನ ಜನ್ಮ ಸುಡಲಿ ಮೆಚ್ಚದು
ಲೋಕಾನಿನ್ನಾ ಪಾಲಿಸೆನ್ನಾ  ॥
ತಂದೇ ತಾಯಿಯು ನೀನೇ – ಬಂಧು ಬಳಗವು ನೀನೇ
ವಸುದೇವನಿಗೆ ಲಗ್ನವಾದಾದೊಡನೂ –
ಕೊಲ್ಲುವದೂ ಮೆಚ್ಚದು ಲೋಕಾ
ನಿನ್ನಾ ಪಾಲೀಸೆನ್ನಾ  ॥
ಗಗನಾ ಯಾನಿದು ಯನಗೊಂದ ಹಗರಣವಾಗಿದೆ
ತೆಗೆಯಣ್ಣಾ ಕೊರಳೀನಾ ಸುರಗಿ
ಮೆಚ್ಚದು ಲೋಕಾ ನಿನ್ನಾ ಪಾಲಿಸೆನ್ನಾ  ॥

ದೇವಕಿ : ಅಹೋ ಪೊಡವಿಯೋಳ್ ಸೌಭಾಗ್ಯವಂತನು ಪಿತಾಮಹನು ನೀನೇ ತಿಳಿದಂಥ ದೊರೆಯು. ನೀನೇ ನಿನ್ನ ಸಹೋದರಿಯಾದ ವಡವುಟ್ಟಿದವಳ ಮೇಲೆ ವಿಶೇಷ ವೈರತ್ವವು ಬೆಳೆಸಿ ಯನ್ನ ಮೇಲೆ, ಅಘೋರವಾದ ನೀನು ಕೋಪಾ ಮಾಡಿದರೆ, ಯನಗೆ ಅನೇಕ ಚಿಂತೆ ತೋರುವುದೋ ಅಂಣ್ಣಾ ರಾಜಾಗ್ರಣ್ಯಾ.

ದರುವು

ಬಿಡುವೋದಿಲ್ಲಮ್ಮ ನಿನ್ನಾ ಕಡಿಯುವೆನಮ್ಮಾ ತಂಗೀ
ಬಿಡಬ್ಯಾಡೆಂದ ನುಡಿವೋದಲ್ಲಮ್ಮ ತಂಗಿ
ಒಡವುಟ್ಟಿದವಳೆಂದು ಹರುಷ ಸಂಭ್ರಮ ಪಟ್ಟು
ಕಡು ಕೋಪಾದಿಂದಾಲಿ ಬಿಡುವೋದಿಲ್ಲಮ್ಮ ತಂಗೀ ॥

ಕಂಸ : ಹೇ ಅನುಜಳೆ, ನೀನು ಬಳಲಿ ಬಾಯಾರಿ ಬೆಂಡಾಗುವದ್ಯಾಕೆ – ನಾನು ಹಿಂಡು ಜನರು ಮೆಚ್ಚುವಂತೆ, ತಂಡ ತಂಡದಿ ಲಗ್ನವನು ಮಾಡಿ ಮೆರವಣಿಗೆಯನ್ನು ತರುವ ಕಾಲದೋಳ್ ಅಂಬರಮಾರ್ಗದಲ್ಲಿ, ಆಕಾಶವೇಣಿ ನುಡಿದ ಮಾತಂ ನೀ ಕೇಳಲಿಲ್ಲವೇನಮ್ಮಾ ತಂಗಿ. ಹೇ ತಂಗಿ ನಾನು ಹಿಡಿದ ಛಲವಂ ಬಿಡುವನಲ್ಲಾ. ನೀನು ಯಿರಲ್ಯಾಕೆ. ನಿನ್ನ ವೊಟ್ಟಿಯೋಳ್ ಗಂಡು ಕೂಸು ಹುಟ್ಟಲ್ಯಾಕೆ. ಮುಂದೆ ನನ್ನ ಜನ್ಮಕ್ಕೆ ಹಾನಿಯಂ ಬರಲ್ಯಾಕೆ. ನಿನ್ನಂ ಕೊಂದರೆ ನನಗೇನು ಭಯವೇ ಯಿಲ್ಲಮ್ಮಾ ತಂಗಿ – ಹೇ ಮಾಯಗಾತಿಯೇ ಹೇ ಮೋಸಗಾತಿಯೇ.

ದರುವೂ

ಪ್ರಾಣಾಪತಿಯೇ ನಮಗಿನ್ನೇನು ಗತಿಯೆ
ಯಿನ್ನೇನು ಗತಿಯೇ ನಮಗಿನ್ನೇನು ಗತಿಯೇ ॥
ಯೆಂದೆಂದು ನಾ ಕಾಣೇ ಯಿಂತಾ ಬಂಧಾನವೋ –
ಸಿಂಧೂ ಶಯನಯನ್ನಾ ಬಂದು ರಕ್ಷಿಪನೋ ಪ್ರಾಣಾ ॥
ದುರುಳಾ ಕಂಸನೂ ಯನ್ನಾ ಕಷ್ಟಾವ ಪಡಿಸುವನೂ –
ಸೃಷ್ಟೀಶಾ ನಿಮಗೊಂದು ಅಷ್ಟೈಶ್ವರ‌್ಯಾವೂ ಪ್ರಾಣಾ ॥
ದುರುಳಾ ಕಂಸನೂ ಯನ್ನಾ
ಕೊರಳು ತರಿಯುವನೋ ಕರುಣಾದಿ
ಕಾಯೋ ಯನ್ನಾ  ಚರಣಕ್ಕೆರಗುವೆನೋ ಪ್ರಾಣಾ ॥

ದೇವಕಿ : ಹೇ ಸ್ವಾಮಿಯಾದ ವೊಸುದೇವರಾಯರೇ  ಯೀ ಕಷ್ಟನಿಷ್ಟೂರ ನಾ ತಾಳಲಾರೆ. ನನಗೆ ಬಂದಂಥ ಕೊರತೆಯು ತಮ್ಮದೆಂದೂ ನೋಡದೆ ನೀವು ದೂರದೃಷ್ಟಿಯಲ್ಲಿ ನೋಡುವರೇನೋ ಕಾಂತಾ  ಯೀ ಕ್ರೂರ ದನುಜನ ಬಾಧೆ ನಿನ್ನ ಕಣ್ಣಿನಿಂದಾದರು ನೋಡಬಾರದೆ. ಯನಗೆ ಬಂಧನವಾಯಿತು ನಾನು ಏನೆಂದು ಹೇಳಲೋ ಕಾಂತಾ ಸದ್ಗುಣವಂತಾ.

ದರುವೂ

ಸತಿಯಳೇ ಯನಗಿಂತಾ ಪಥವು ತಿಳಿಯದಾ
ಮಾತು ಕ್ಷಿತಿಯೊಳಾಡುವರೇ ರಮಣೀ ॥
ಅತಿಹಿತ ಕಂಸಾನೋ ಹತವು ಮಾಡುವನೆಂದೂ
ಸಮ್ಮತದೀ ಪೇಳುತಾರೇ ರಮಣೀ ॥

ವಸುದೇವ : ಹೇ ಮೋಹದ ಮಾನಿನಿಯಳೇ ಕೇಳು – ಯೀವಾಗ ನಿಮ್ಮ ಅಣ್ಣಯ್ಯನು ಮಾಡಿದ ದುರ್ನಡತೆಗೆ ಯನ್ನನ್ನು ದೂಷಿಸುತ್ತೀಯಾ. ನಾನೇನೂ ನಿಮ್ಮ ಅಂಣೈಯನನ್ನು ಮದುವೆ ಮಾಡೆಂದು ಬೇಡಿಕೊಂಡಿದ್ದೆನೆ. ಯಿಷ್ಟಕ್ಕೂ ಈ ಮಥುರಾಪುರಿ ಪಟ್ಟಣದಲ್ಲಿ ಕನ್ನಿಕೆಯಿರುವಳೆಂದು ನಮ್ಮ ಹಿರಿಯರು ಯೇನಾದರೂ ನಿನ್ನ ಕೇಳುವದಕ್ಕೆ ಬಂದಿದ್ದರೋ – ಯಿಲ್ಲಾ. ನನ್ನ ಗ್ರಹಚಾರವಶದಿಂದ ಯೀ ಮಥುರಾಪುರೀ ಪಟ್ಟಣದಲ್ಲಿ ವಸ್ತಿಯಂ ಗೈದದ್ದು ಯನ್ನದೇ ಅಪರಾಧ. ವರವ ಕೊಡುವ ದೇವರೆಂದು ಶಿರವಂ ಬಾಗಿಸಿ ನಮಸ್ಕಾರವಂ ಮಾಡಲಿಕ್ಕೆ ಹೋದರೆ ಆ ದೇವಾಲಯವೆ ಯನ್ನ ಮೇಲೆ ಬಿದ್ದ ಹಾಗೆ ನೀನು ಈ ಮಾತುಗಳಾಡುವದಕ್ಕೆ ನಿಮ್ಮಣ್ಣನಾದ ಕಂಸಾಸುರನ ಮಾತು ನಿನಗೆ ಸಮಾಧಾನವೇ ಹ್ಯಾಗೆ. ಯಿದೂ ಅಲ್ಲದೆ ನಮ್ಮ ಹಿರಿಯರು ನಿಮ್ಮನ್ನೇನಾದರೂ ಕಷ್ಟಪಡಿಸಿದರೇ. ಯನ್ನನ್ನು ಯಿಷ್ಟು ಕಷ್ಟಕ್ಕೆ ಗುರಿಮಾಡಿದೆಯೆಂದು ನನ್ನನ್ನು ನಿಂದಿಸಬ್ಯಾಡವೇ ಕಾಮಿನೀ. ಮುಖ್ಯವಾಗಿ ನಮ್ಮ ದುರಾದೃಷ್ಟಕ್ಕೆ ಬ್ರಂಹ್ಮನು ಯೀ ರೀತಿ ಬರದು ಯಿದ್ದಾನು. ನಿನ್ನ ಮಾತು ನಿನಗೆ ಸರಿಯೇ ಕಾಮಿನಿ ನೀ ಯನ್ನ ಪ್ರಾಣಾಪ್ತ ಭಾಮಿನೀ ॥ಹೇ ಮೋಹದ ಮಾನಿನಿಯಳೇ ಕೇಳೂ, ಯೀವಾಗ ನೀನು ದುಃಖಿತಳಾಗಿ ಕಣ್ಣೀರು ಸುರಿಸಿ ಕಾತುರದಿ ತಳಮಳಗೊಂಡು ಯನ್ನ ಚರಣಾರವಿಂದಕ್ಕೆ ಯರಗಿ ಬೇಡಿಕೊಂಡರೆ ಾನೇನು ಮಾಡಲಿ. ಆದರೆ ವಂದು ನೀತಿ ಯೇಳುವೆನು ಕೇಳು. ಮುರಹರನ ಕರುಣ ಕಟಾಕ್ಷವು ನಮ್ಮ ಮ್ಯಾಲೆ ಯಿದ್ದದ್ದೆ  ಸಹಜವಾದರೆ ನಮಗೆ ಬಂದಂಥ ಕಷ್ಠಗಳೆಲ್ಲಾ ಗಾಳಿಗೊಡ್ಡಿದ ಜ್ಯೋತಿಯ ತೆರದಿ – ಮಾಯವಾಗುವದೇ ಕಾಮಿನಿ. ನೀನ್ಯಾಕೆ ಚಿಂತಿಸುತ್ತೀಯಾ ನಾನು ವೋಗಿ ಬೇಡಿಕೊಳ್ಳುತ್ತೇನೆ. ಅರಗಳಿಗೆ ಸೈರಿಸೇ ದೇವಕಿ ಗಿಳಿಮಾತಿನ ಭಾವಕೀ ॥

ದರುವೂ

ರಾಜ ರಾಜನೇ ರಾಜ ತೇಜನೇ – ಸೋಜಿಗದಾ
ಕಾರ‌್ಯ ಮಾಳ್ಪುದನ್ಯಾಯವಿದೂ ॥
ತಂಗಿ ಯಿವಳನು – ಕೊಲ್ಲುವದು
ಮಂಗಳಾಂಗನೇ ಮುಂದೆ ನಿನಗೆ ಭಂಗವಾಗುವದೂ ॥

ದರುವೂ

ದೇವ ದೇವನೇ ವೊಸುದೇವರಾಯನೇ
ತೀವ್ರದಿಂದ ಪೇಳುವೆನೂ – ದೇವತಾತ್ಮನೇ ॥
ತಂಗಿ ಮದುವೆಯೂ ಸಂಭ್ರಮದಿ
ಮಾಡಿದೇ ಕುಂದಕ ಬಂದು ವದ
ಗಿತಲ್ಲೋ ಯಿಂದಿರೇಶನೇ ॥

ದರುವೂ

ತುಂಟ ಕಂಸನೇ ನಿನಗೆ ಕಂಟಕ ಬರು
ವದೋ ನಿನ್ನ ತಂಗಿಯನ್ನು ಕೊಂದರೆ
ಅಪಕೀರ್ತಿ ಬರುವದೂ ॥ಶತ್ರು
ವಲ್ಲವೈ ಮಿತ್ರತೇಜನೇ – ಪುತ್ರಿ ಸಮಾನ
ಳಾದಾ ಯೀ ಸ್ತ್ರೀಯಳಲ್ಲವೇ ॥

ದರುವೂ

ಕರುಣದಿಂದಲಿ ಮೆರವಣಿಗೆ ಮಾಡಿದೇ
ಮೇಘದಿಂದ ವಾಣಿವಚನ ಕೇಳಲಿಲ್ಲವೇ ॥
ಅಷ್ಠಮ ಗರ್ಭದಿ ಪ್ರಾಣನಷ್ಟವಾದರೆ ಶ್ರೇಷ್ಟದಿಂದಾ
ಬಾಳ್ವರೇನೋ ದುಷ್ಟಯೋಗ್ಯನೇ ॥

ದರುವೂ

ಧರಣಿ ಶುಭಪುರೀ ಶ್ರೀ ವೆಂಕಟೇಶನು
ಸರಸಿಜಾಕ್ಷ ಪೊರೆವನಿವಳ ಕರುಣದಿಂದಲೀ ॥

ವಸುದೇವ : ಅಯ್ಯ ಪೊಡವಿಪತಿಯೇ, ನೀನು ಕಡುಮೂರ್ಖನಂತೆ ನಿನ್ನ ವಡವುಟ್ಟಿದವಳನ್ನು ಹೊಡೆದು ಬಡಿದು ಕಡಿಯಲಿಕ್ಕೆ ಹೋದರೆ, ಮೃಡನು ನಿನ್ನನ್ನು ಮೆಚ್ಚುವನೇ ಮೆಚ್ಚಲರಿಯನು. ಈ ಜಡಜಾಂಬಕಿಯಳ ಒಡಲೊಳಗಿನ ಸಡಗರವಾದ ಕೂಸುಗಳ, ಯೀ ಪೊಡವಿಯೊಳ್ ತಡಮಾಡದೆ ನಿನ್ನ ಖಡ್ಗಕ್ಕೆ ಕಡಿಯಲಿಕ್ಕೆ ಕೊಡುತ್ತೇನೈ ರಾಜ ಸುರಕಲ್ಪ ಭೋಜ ॥ಯಿಷ್ಟಕ್ಕೂ ಕೇಳದಿದ್ದರೆ ನಿನ್ನ ಚರಣದಡಿಯಲ್ಲಿ ಯನ್ನ ಶಿರವನ್ನು ಖಂಡ್ರಿಸಯ್ಯಿ ದೊರೆಯೇ ತಮಗ್ಯಾರು ಸರಿಯೇ.

ಕಂಸ : ಯಲಾ ಸಾರಥಿ, ಯೀ ವಸುದೇವರಾಯರು ಆಡುವ ಮಾತು ಕೇಳಿದೆಯಾ. ಹುಟ್ಟಿದ ಮಕ್ಕಳನ್ನೆಲ್ಲಾ ತಪ್ಪದೆ ಯನ್ನ ಖಡ್ಗಕ್ಕೆ ಆಹುತಿಯಂ ಕೊಡುತ್ತೇವೆಂದು ಯನ್ನ ಚರಣಕ್ಕೆರಗುವನು. ಯನ್ನ ಚರಣವನ್ನು ಬಿಟ್ಟು ಯೆದ್ದು ನಿಲ್ಲೆಂದು ಹೇಳೋ ಸಾರಥಿ.

ಸಾರಥಿ : ಸ್ವಾಮಿ ವಸುದೇವರಾಯರೆ, ಚರಣಗಳಂ ಬಿಟ್ಟು ಯೆದ್ದು ನಿಲ್ಲುವಂಥವರಾಗಿರೈ ಸ್ವಾಮಿ.

ಕಂಸ : ಅಯ್ಯ ವಸುದೇವರಾಯನೇ, ಯನಗೆ ನೀನು ಭಾವನಲ್ಲಾ, ಆದರೂ ವುಟ್ಟಿದ ಮಕ್ಕಳನ್ನೆಲ್ಲಾ ತಪ್ಪದೇ ಯನ್ನ ಖಡ್ಗಕ್ಕೆ ಕೊಡುತ್ತೇನೆಂದು ನಿನ್ನ ಬಾಯಿ ಮಾತು ಹೇಳುತ್ತೀಯಾ. ಯೀ ಮಾತು ನಂಬುವರು ಧಾರು. ನೀನು ದೇವಕೀದೇವಿಯು ಯೀರ‌್ವರೂ ಕೂಡಿ ವುಟ್ಟಿದ ಮಕ್ಕಳನ್ನೆಲ್ಲಾ ಯೀ ಭೂದೇವಿ ಸಾಕ್ಷಿಯಾಗಿಯೂ ಕೊಲ್ಲುವುದಕ್ಕೆ ಕೊಡುತ್ತೇವೆಂದು, ಆಕಾಶವೇಣಿ ಸಾಕ್ಷಿ ಮನಃಪೂರ್ತಿಯಾಗಿ ಭಾಷೆಯಂ ಕೊಟ್ಟರೆ ನಿಮ್ಮನ್ನು ಪ್ರಾಣದಿಂದ ಬಿಡುವೆನು. ಅಲ್ಲದೆ ಯೀ ಕಾಂತೆಯಂ ಯೀ ಧರಣಿಯ ಮ್ಯಾಲೆ ಯಿಡುತ್ತಾ ಯಿದ್ದೇನೆ. ಮೂರು ವ್ಯಾಳ್ಯಕ್ಕೂ ಈ ಭಾಷೆಯಂ ಪಾಲಿಸೋ ದೇವಾ ವಸುದೇವಾ.

ದರುವೂ

ಭಾಷೆಯಂ ಕೊಡುವೆವೋ ಕಂಸ ಈ
ಸಮಯದೊಳೂ – ಘಾಸಿ ಮಾಡದಿರೂ
ಜಗದೀಶಾ ಮುನ್ನಾ ॥ಯೀ ಕ್ಷಣದಿಂದಲೀ
ರಕ್ಷಿಸುವದೂ ಮುನ್ನಾ ಪಕ್ಷಿವಾಹನಾನ
ಕರುಣದಿಂದಾ ॥ಕರುಣದಿಂದಾ
ಹರನೊಲವಿನಿಂದಾ ಕ್ರೋಧವ ಬಿಡು
ಮೋದದಿಂದಾ ॥ಹಡೆದ ಮಕ್ಕಳನೆಲ್ಲಾ
ಖಡ್ಗಕ್ಕೆ ಕೊಡುವೆವೂ ಹಿಡಿ
ಧರ್ಮದಾ ಭಾಷೆ ವಿಹಿತದಿಂದಾ – ವಿಹಿತ
ದಿಂದಾ ಸಂತೋಷದಿಂದಾ – ವಸುಧೆಯೋಳ್
ಬೆಳಗಲ್ಲು ಯೀಶಸೋಮನ ಸಾಕ್ಷಿ
ಶಿಶುಗಳಾ ಕೊಡುವೇವೂ ಕಡಿಯ
ಲಿಕ್ಕೆ ಕಡಿಯಲಿಕ್ಕೆ ನೀ ಹೊಡಿಯಲಿಕ್ಕೆ
ತಡವು ಮಾಡದೆ ಭಾಷೆ ಕೊಟ್ಟೇವಣ್ಣಾ ॥

ದೇವಕಿ : ನಮೋನ್ನಮೋ ಅಂಣೈಯ್ಯ. ನಮ್ಮ ಗರ್ಭದಲ್ಲಿ ಜನ್ಮಿಸಿದ ಮಕ್ಕಳನ್ನೆಲ್ಲಾ ತಪ್ಪದೇ ನಿನ್ನ ಖಡ್ಗಕ್ಕೆ ಕೊಡುತ್ತೇನೋ ಅಂಣೈಯ್ಯ ॥

ದರುವೂ

ಹೆಣ್ಣಿಗೆ ಭಾಷೆಯಿಲ್ಲಾ – ಗಂಡಿಗೆ ಮಕ್ಕ
ಳಿಲ್ಲಾ ಮಂಡಾಲಾದೊಳು ನಂಬುವ
ರಿಲ್ಲಾ – ನಂಬುವರಿಲ್ಲಾ॥

ಕಂಸ : ಯಲಾ ಸಾರಥಿ, ಇವರು ಹುಟ್ಟಿದ ಮಕ್ಕಳನ್ನೆಲ್ಲ ಕಡಿಯಲಿಕ್ಕೆ ಕೊಡುತ್ತೇವೆಂದು ಭಾಷೆಯಂ ಕೊಟ್ಟರು. ಆದರೇ ವಂದು ಶಾಸ್ತ್ರ ಹೇಳಿರುವದು. ಅದು ಯಂತಾ ಶಾಸ್ತ್ರ ಅಂದರೆ ಚಾಯ ಮಾಯವ ನುಂಗಿ – ಮಾಯ ಚಾಯವ ನುಂಗಿ, ಚಾಯ ಮಾಯವನ್ನು ಯಮ ನುಂಗಿ, ಹೆಣ್ಣೆಂಬ ಮಾಯ ನೆಚ್ಚುವರೆ. ಯೀ ಸೂರ‌್ಯಚಂದ್ರಾದಿಗಳಿರುವ ಪರಿಯಂತರ ಹೆಂಣೆಂಬೊ ಮಾಯೆಯನ್ನು ನೆಚ್ಚ ಕೂಡದೆಂದು-ನುಡಿದ ಮಾತಂ ಕೇಳಿ ಯೀ ವಸುದೇವರ ಮಾತೇನೂ ಖರೆ. ಎಲಾ ಚಾರರಿರಾ, ಯೀ ದೇವಕಮ್ಮನನ್ನು ವಸುದೇವರಾಯನನ್ನು ವಿಶ್ವ ಬ್ರಹ್ಮನ ಮನಿಗೆ ಕರದೊಯ್ದು, ಕೀಲಿ ಕೀಲಿಗೆ ಬೇಡಿ ಸಂಕೋಲೆಯನ್ನು ಹಾಕಿಸಿಕೊಂಡು ಬರುವಂಥವರಾಗಿರೋ ಚಾರಗಳಿರಾ.

ದರುವೂ

ಯೆಲ್ಲಿಗೆ ಕರದೊಯ್ವೆ ಯಂಮ್ಮೊಳು
ಚಾರರೇ ದಹಿಸೂವಾ ಬಿಸಿಲೊಳು
ನಡೆಯಲಾರೆನೋ ॥
ಹಸಿವು ನೀರಡಿಕೆ – ಸಂಕಟವಾಗುವದೂ
ಬಿಸಲಿಗೆ ಬಳಲಿ ಬಾಯಾರಿರುವೇ ॥
ವಿಶ್ವಬ್ರಂಹ್ಮನ ಮನಿಗೆ – ಕಂಸ ನಮ್ಮೀ
ರ‌್ವರನೂ ಭರದಿ ಸಂಕೋಲೆಗೆ ಗುರಿಯಾ
ಮಾಡಿದನೂ ॥
ಚರರೇ ನಡಿಯಲಾರೆ – ಕಡು ತೀವ್ರದಿಂದಾ
ಮುಂದಕ್ಕೆ ಹೆಜ್ಜೆ ಯಿಟ್ಟು ನಡಿಯಲಾರೆನೋ ॥

ದರುವೂ

ಪಾಪಿ ದೈವವೇ ಯೇನು ಮೋಸಾ
ಮಾಡಿದೋ – ಖುಲ್ಲ ಕಂಸನ ಬಾಧಿಗೆ
ಸಿಲ್ಕಿ ಬಳಲಿದೆ ನಾನೀಗಾ ॥ಯಾರಿಗೇಳಲಿ
ನಾನೀಗಾ ಕ್ರೂರಕಂಸನ ಬಾಧಿಗೇ
ನೀರು ಕಣ್ಣಲಿ ಬಂದವೇ ಯೇನು
ಮೋಸವಾಯಿತೊ – ಕರುಣಗಿರಿ ಶಂಕರ
ಭರದಿ ಕಾಯೋ ಯನ್ನನೂ – ಅಹಹ ॥