ಪ್ರತಿಕಾರರು : ಕೇಳಿಕೆ ಮುನಿಯಪ್ಪ
ಆಂಗೀರಸ ನಾಮ ಸಂವತ್ಸರದ ಆಷಾಢ ಶುದ್ಧ ಶುಕ್ರವಾರ ಪ್ರತಿ ಮಾಡಿದ್ದು

 

ಗಣಪತಿ ಶ್ಲೋಕ

ಅಗಜಾನನ ಪದ್ಮಾರ್ಕಂ – ಗಜಾನನ ಮಹರ್ನಿಶಂ
ಅನೇಕದಂತ ಭಕ್ತಾನಾಂ ಏಕದಂತ ಮುಪಾಸ್ಮಹೇ ॥
ಗಣಪತಿ ನಿನ್ನಯ ಗುಣಗಳ ಗಣಿಸಲಸದಳ
ಜಗದಿ ಸಕಲಾತ್ಮಕನೆ ಯೆಣಿಸದೆ ಯನ್ನಯ ತಪ್ಪು
ಗಣನಿಧಿ ನೀನೆಂದು ಮನದಿ ಸ್ತೋತ್ರ ಮಾಳ್ಪೆಂ ॥

ಶಾರದಾಸ್ತುತಿಕಂದ

ಸದಯಳೆ ನಿನ್ನಯ ಪಾದಾಬ್ಜವ  ಹೃದಯದಿ ಧ್ಯಾನಿಸುವೆನು
ಸಾರಸನೇತ್ರಿ ಮುದದಿಂ ವಿಧ ವಿಧದಿ  ಪ್ರಾರ್ಥಿಸುವೆನು
ಪರಬ್ರಹ್ಮಣೇ ನ್ನಮಃ ॥

ಸಭಾಸ್ತೋತ್ರ

ತಪ್ಪುಗಳಿರ್ದೊಡೆ ಸುಜನರಂ  ಗೋಪ್ಯದಿ ತಿದ್ದುವುದೆಂದು
ವಪ್ಪಿಸುತಿರ್ಪೆಂ  ಈರ್ಪೆ ನಾ ನಿಂಮ್ಮ ಪಾದಕ್ಕೆರಗುವೆ
ಅರ್ಪಿಸುವೆದೊಲಿದು  ಯನಗೆ ವಪ್ಪವ ಮತಿಯ ॥

 

ಪೀಠಿಕೆ

ಸಾರಥಿ : ಯಲಾ ಅಪ್ಪಯ್ಯ, ವಪ್ಪದಿಂದ ಬಂದಿರುವರು ಧಾರೆಂದು ಘಕ್ಕನೆ ಮಾತನಾಡಿಸುವ ಕೋಮಲಾಂಗ ನೀ ಧಾರು. ನಿನ್ನ ಜನನೀ ಜನಕರು ಪೇರ‌್ಮೆಯಿಂದ ಕರೆಯುವದಕ್ಕೆ ನಿನ್ನಯ ನಾಮಾಂಕಿತವೇನು ಯನ್ನೊಳು ಸಾರೋ ಭಟನೆ.

ಗಣಪತಿ : ಯಲಾ ಸಾರಥಿ, ಯಾದವಂ ಪೂಜಿತ ಗಣಾಧಿಪ ವೂರ್ಧ್ವಕಾಯ ಏಕದಂತ ಕೋಟಿಸೂರ‌್ಯ ರೂಪಾಂಕಿತ ಈ ರೂಢಿಯಂ ಪರಿಪಾಲಿಸುವ ಈಶ್ವರನಿಗೆ ಸಂಪ್ರೀತಿಯುಳ್ಳ ತನಯನಾಗಿ ಜನಿಸಿದ ವಿನಾಯಕನೆಂದು ತಿಳಿಯೋ ಸೇವಕ.

ದರುವು

ವಿದ್ಯವಂತನೇ ರಾಜ ಬುದ್ಧಿವಂತ
ನೇ ಸಿದ್ಧಿ ಬುದ್ಧಿ ಯೆಂಬುವಂಥ
ಸುಂದರಾಂಗನೆಯಾರ ಕಾಯೊ ಸಿದ್ಧ
ಹೃದಯಕಾಯದೊಳಿ ಕರ್ಣ
ಸ್ವರ್ಣ ವರ್ಣ ದೇವ ಗಣಪತೇ ॥

ಗಣಪತಿ : ಯಲಾ ಸಾರಥಿ, ಮೂಷಿಕ ವಾಹನ ಸುಂಡಲ ಪರಾಕ್ರಮ ಸಂಗಮನ ವರಪುತ್ರ ಭಗವತಿ ಹಸ್ತ ಗ್ರಂಥ ಪುರಾಣ ಗಜಸ್ತಂಭ ಕಾಸಿಖಾಂಡ ಆರುಶಾಸ್ತ್ರ ಹದಿನೆಂಟು ಪುರಾಣ  ಮೂವತ್ತೆರಡು ತ್ರಿಗುಣಂಗಳು ವಿದ್ಯಕ್ಕೆ ಮೊದಲಾದ ವಿಘ್ನರಾಜನೆಂದು ತಿಳಿಯುವಂಥವನಾಗೋ ಸಾರಥೀ. ಯಲಾ ಸಾರಥಿ, ಯೀ ಲೋಕದಲ್ಲಿ ಪ್ರಸಿದ್ದಿ ಹೊಂದಿದ ಸಕಲವಿದ್ಯಂಗಳಂಲ್ಲಿ ಸಕಲನಾದಂಗಳಲ್ಲಿ ಸಕಲವೇದಂಗಳಲ್ಲಿ ಆದಿಕರ್ತನಾದ ವಿಘ್ನರಾಜನೆಂದು ತಿಳಿಯುವಂಥವನಾಗೋ ಸಾರಥಿ. ಯಲಾ ಸಾರಥಿ, ನಮ್ಮ ಪಾದಕ್ಕೆ ಸದ್ಭಕ್ತಿಯುಳ್ಳ ಜಾನಕೀ ದೇವಿಯನ್ನು ಕರೆಸೋ ಸಾರಥಿ ॥

ದರುವು

ಸರೋಜದಳನಯನಾ ಘನ ಶರೀರ ॥ಸರೋಜದಳನಯನಾ ॥

ಜಾನಕಿ : ಅಪ್ಪಯ್ಯ ಪರಿಚಾರಕನೆ, ಯೀ ಮುಂಭಾಗದಿಂದ ಬಂದು ನಿಂದು ಬಂದ ಬಂದವರಂನು ವಿಚಾರ ಮಾಡುವ ನರನೇ, ಧಾವ ದೇವಕರ ಪರಿಚಾರಕನೋ ವಿಸ್ತರಿಸಿ ಹೇಳಪ್ಪಾ. ಅಪ್ಪಾ ಸಾರಥಿ ನಾವು ಧಾರೆಂದರೆ ಶ್ರೀ ಸದಾಶಿವನ ಸ್ಥಲವನ್ನು ಭಕ್ತಿಯಿಂದ ಧ್ಯಾನಿಸಿ ಯುಕ್ತಿಯಂ  ಪಡೆಯುವ ನಿಮಿತ್ತಾರ್ಥ ಪಂಪಾವಿರೂಪಾಕ್ಷ ಪಾರ್ವತಾದೇವಿಯರ ಗರ್ಭಸಂಭೂತಳಾದ ನಿತ್ಯಕಾಲಕ್ಕೂ ಸ್ಮರಣೆಯೋಳ್ ಯಿರುವ ಮುಕ್ತಿಯಿಂದ ಭಕ್ತಳಾದ ಜಾನಕೀದೇವಿಯೆಂದು ತಿಳಿಯಪ್ಪಾ ಸಾರಥಿ.

ಜಾನಕಿ : ಶ್ರೀ ಶಂಭು ಭೋಗೀಶನ ಪುತ್ರನಾದ ವಿಘ್ನೇಶ್ವರನೇ ಕೇಳು. ನಿನಗೆ ಪರಡಿ ಪಾಯಸ ಪರಮಾನ್ನ ಚಿತ್ರಾನ್ನ ಯಿಂತಿಷ್ಟು ಪದಾರ್ಥವನ್ನು ತಂದು ಪೂಜಿತಾರ್ಥವನ್ನು ಮಾಡಿದೆನು. ಹೇ ದೇವಾ ನಮಗೆ ವರವನ್ನು ದಯಪಾಲಿಸೋ ಗಣೇಂದ್ರಾ ಸದ್ಗುಣಸಾಂದ್ರಾ.

ಗಣಪತಿ : ಹೇ ಜಾನಕಮ್ಮನವರೆ ನೀವು ಬೇಡಿದ ವರವನ್ನು ಕೊಟ್ಟು ಯಿದ್ದೇನೆ. ನಿಮ್ಮ ಅರಮನೆಗೆ ತೆರಳಿರಮ್ಮಾ ಜಾನಕಮ್ಮನವರೇ.

ವಸುದೇವ : ಯಲಾ ಅಪ್ಪಯ್ಯ ಹರಿಧ್ಯಾನದಿಂದಲೂ ಶಿವಧ್ಯಾನದಿಂದಲೂ ಭಕ್ತಾನುಸಾರವಾಗಿ ಮುಕ್ತಿಯಂ ಪಡೆಯಬೇಕೆಂದು ಕಾಶೀತೀರ್ಥಯಾತ್ರೆಗಳನ್ನು ಸಲಹಿಸುವ ಹೇಮಕೂಟವೆಂಬ
ನಗರಕ್ಕೆ ಕರ್ತ ಶಿರೋರಂನ ಸಕಲ ಗುಣ ಸಂಪನ್ನ, ಸಕಲ ಧರ್ಮ ಪ್ರತಿಪಾಲಕನಾದ ದೇವಾಧಿದೇವಾ ವಸುದೇವ ರಾಯ ನಾನೇ ಅಲ್ಲವೇನೋ ಸಾರಥೀ. ಯಲಾ ಸಾರಥಿ, ಯೀ ಸೂರ‌್ಯ ಪ್ರಕಾಶಮಾನವಾದ ಮಧುರಾಪುರಿ ಪಟ್ಟಣಕ್ಕೆ ನಾನು ಬಂದ ಕಾರಣವೇನೆಂದರೆ ನಾವು ದೇಶಸಂಚಾರಿಗಳಾಗಿ ರಾಮೇಶ್ವರಕ್ಕೆ ಹೋಗಿ ಮತ್ತು ರಾಮೇಶ್ವರದಿಂದ ಕಾಶಿಯಾತ್ರೆ ಹೋಗುವ ನಿಮಿತ್ಯಾರ್ಥವಾಗಿ ಯೀ ಹೊತ್ತಿನ
ದಿನದಲ್ಲಿ ಯೀ ಮಥುರಾಪುರಿ ಪಟ್ಟಣದಲ್ಲಿ ವಸ್ತಿಯಂ ಗೈಯ್ಯಬೇಕೆಂದು ಬಾಹೋಣವಾಯಿತಪ್ಪಾ ಸಾರಥೀ.

ದರುವು

ವಸುದೇವಾ ಹೊರಟಾನು – ಕಾಶಿ
ಯಾತ್ರೆ ಹೊರಟಾನು – ಕಾಶಿಯಾತ್ರೆ ॥
ನಿರುತಾದಿಂದಲಿ ತಾನು ತ್ವರಿತಾದಿಂದಲಿ
ತಾನು – ಕಾಶೀತೀರ್ಥ ಚೆಲ್ಲಿಸುವೆ
ನೆಂದು ಹೊರಟಾನು – ಕಾಶೀ ಯಾತ್ರೆ ॥

ಜೋಪ್ದಾರಿ : ಅಹೋ ಸೇನಾಧಿಪತಿಗಳಿರಾ, ಆಹೋ ದಂಡನಾಯಕರಿರಾ, ಮುತ್ಸದ್ದಿ ಗುಮಾಸ್ತೆ ಶೇಕ್‌ದಾರ್ ದಪೇದಾರ್ ಮಾಮಲೆದಾರಾ – ಯಿನ್ನು ಬಹುಯಚ್ಚರಿಕೆ. ಅದು ಏನು ಕಾರಣವೆಂದರೆ ಮಥುರಾಪುರಿಯ ಪಟ್ಟಣಕ್ಕೆ ಅಧಿಪತಿಯಾದ ನಮ್ಮ ಕಂಸರಾಜೇಂದ್ರನು ಬರುತ್ತಾ ಯಿದ್ದಾನೆ. ಅವರಿಗೆ ಸಹಾಯವೇನೆಂದರೆ ಹೋಳಿಗೆ ಕರಿಗಡಬು ಕರ್ಜಿಕಾಯಿ ಪರಮಾನ್ನ ಕೀರು ಹಾಲು ಮೊಸರು ಬೆಣ್ಣೆ ತುಪ್ಪಾ ಯಿಂತಿಷ್ಟು ಪದಾರ್ಥವನ್ನು ಸಿದ್ಧಮಾಡಿರಬೇಕು. ಯಿದೂ ಅಲ್ಲದೆ ಯಿನ್ನು ಕಾಯಿ ಪಲ್ಯಗಳು ಬೇಕಾಗಿರುತ್ತವೆ. ಅವು ಯಾವುವೆಂದರೆ ಹಾಗಲಕಾಯಿ ಪಡವಲಕಾಯಿ ಯೀರೇಕಾಯಿ ಬೆಂಡೇಕಾಯಿ ಚಿಕ್ಕಡಕಾಯಿ – ಬದನೆಕಾಯಿ ಹಸೇಮೆಣಸಿನಕಾಯಿ ಕುಂಬಳಕಾಯಿ ಸೋರೆಕಾಯಿ ಯಿದೂ ಅಲ್ಲದೆ ಯಳೆಯ ದಿಂಡು ಬಾಳೆಕಾಯಿ ಯಿಂತಿಷ್ಟು ಪದಾರ್ಥವನ್ನು ಸಿದ್ಧಮಾಡಿರಬೇಕು. ಯಿಲ್ಲವಾಯಿತೆ ನಮ್ಮ ಕಂಸ ರಾಜೇಂದ್ರನು ಬಂದ ಮೇಲೆ ಹೇಳಿ, ವಂದೂವರೆ ದಂಮಡಿ ಜುಲ್ಮಾನು ಹಾಕಿಸಿಬಿಡುವೆ ತಿಳಿಯಿತೊ. ಇದೂ ಅಲ್ಲದೆ ಜೀವ ಜಂತುಗಳು ಬರುತ್ತವೆ. ಅವು ಯಾವೆಂದರೆ ಆನೆ ಒಂಟಿ, ಕುದುರೆ ಅವುಗಳಿಗೆ ಆಹಾರವೆಂದರೆ ವುರಳಿದಾನ್, ಹಶಿಕಡ್ಲೆ, ಹಸಿವುಲ್ಲು, ನೂರೊಂದು ಗೂಟಾ ಸಿದ್ದ ಮಾಡಿರಬೇಕು. ಯಿಲ್ಲವಾಯಿತೆ ನಮ್ಮ ಕಂಸ ರಾಜೇಂದ್ರನಿಗೆ ಹೇಳಿ ವೊಂದೂವರೆ ಕಾಸು ಜುಲ್‌ಮಾನು ಹಾಕಿಸಿ ಬಿಡುವೆ ಹುಷಾರ್ ಬಹು ವುಷಾರ್. ಯಿದರ ಮೇಲೆ ಗ್ರಾಮದ ರೈತರು ನಮಗೆ ಕೊಡತಕ್ಕ ಮರಿಯಾದೆ ಏನೆಂದರೆ, ಹನ್ನೆರಡು ಸೇರು ಅಕ್ಕಿ ವಂದು ಕುರಿ, ವಂದು ಕೋಳಿ ಯಿಪ್ಪತ್ತು ನಾಲ್ಕು ಕೋಳಿ ಮಟ್ಟಿ ಪಕ್ಕಾ ಯರಡು ದರಾಮ್ ಸಾರಾಯಿ ಚಲೋ ಯೀಚಲಮರದ ಸೇಂದಿ – ಯಿಂತಿಷ್ಟು ಪದಾರ್ಥವನ್ನು ಕೊಟ್ಟರೆ ಸರಿಹೋಯಿತು. ಯಿಲ್ಲವಾದರೆ ನಿಮಗೆ ಪೂರಾ ಶಿಕ್ಷೆಯಾಗುತ್ತೆ ನಮ್ಮ ಕಂಸ ರಾಜನು ಬರುತ್ತಾನೆ – ದ್ವಾರದಲ್ಲಿ ಬಹು ಯಚ್ಚರಿಕೆ ನಾನು ವೋಗಿ ಬರುವೆನು …… ॥

 

(ಕಂಸಾಸುರ ಬರುವಿಕೆ)

ದ್ವಿಪದೆ ರೇಗುಪ್ತಿ

ಶ್ರೀಮನ್‌ಮಹಾ ವುಗ್ರಸೇನನ ಆತ್ಮಜನು ಕಂಸಾಸುರನು ಕಡುವೇಗದಿಂದ ರತ್ನಾಂಬರವನ್ನುಟ್ಟು ರಮಣೀಯವಾದ ರತ್ನ ಕೇಯೂರ ಹಾರ ಪದಕಗಳು ಕನಕ ಕಿರೀಟ ಮಕರ ಕುಂಡಲವು ಧರಿಸಿಕೊಂಡು ಅತಿಬೇಗ ದೇಶಾಧೀಶ ಅಕ್ರೂರ ಮುಖ್ಯವಾದ ಸುರಶಾಂತಕ ಭಕಶಿತ ಶಕಟಾಸುರ ಕೊಂಟ್ರಿಕೇಶ ತ್ರುಣಾವರ್ಣ ದೈತ್ಯನಾಯಕರ ವಡಗೂಡಿ ಚಪ್ಪನ್ನೈವತ್ತಾರು ದೇಶಾಧಿಪರಿಂದ ಯನಗ್ಯಾರು ಸರಿಯೆಂದು ಕಾರ್ಕಣ್ಯದಿಂದ ಚಿಕ್ಕ ಹೋತುರು ಶ್ರೀ ಶಂಭು ಭೋಗೀಶನ ದಯದಿಂದ ಹಜಾರಕ್ಕೆ ಪೈಯಣವಾದನು.

ದರುವು ತ್ರಿವುಡೆ

ಸಂದಣಿಸಾವಿನಯೋಗ ಮಂತ್ರೀಶ
ಮುಂದೆ ಕೈಗೂಡಿದಂತಾ – ಮುಂದೆ
ದರ್ಪಣಿಗಳ ನಡೆದನು ಚಂದದಿಂದಲೀ ॥
ತಾಳಮದ್ದಳೆ ವೇಣಿ ಗಿಡೆಬಿಡಿ
ತಾಳ ತಮಟೆ ಭೇರಿ ರಭಸದಿ ಕುಂಸ
ವಾದ್ಯಗಳಿಂದ ನಡೆದನು ಚಂದದಿಂದಲೀ ॥
ಚಿಕ್ಕ ಹೋತುರು ನಿಲಯ ನೆಲಸಿದ ಆಳ್ಕರಿಂ
ಭೋಗೇಶನ ದಯದಲೀ ಸೊಕ್ಕಿನಿಂದಾ
ಆಳುತಿರ್ದನು ಕ್ರೂರ ಧನುಜೇಂದ್ರಾ ॥

ಕಂಸ : ಭಲೇ ನರಹುಳವೆ ಹೀಗೆ ಬರುವಂಥವನಾಗು. ಭಲೇ ಮಾನುಷ್ಯನೆ ಮತ್ತೂ ಹೀಗೆ ನಿಲ್ಲುವಂಥವನಾಗು. ಭಲೇ ಚಾರನೆ ಆತ್ಮ ದ್ವೇಷದಿಂದ ಧಾತ್ರೀಶನ ಭೂಮಂಡಲವಂ ತುಂಬುವಂತೆ ವೀರಹೆಜ್ಜೆಯನ್ನಿಡುತ್ತಾ ಬಂದ ಮಹಾ ಸಮರ್ಥರು ಧಾರೋ ಯೆಂದು ಅಂಜದೆ ಅಳುಕದೆ ಬಂದು ನಿಂದು ವಂದನೆಯಂಗೈದು ಕೇಳುವುದಕ್ಕೆ ನಿನ್ನ ಅಂದವಾದ ನಾಮಾಂಕಿತವೇನೋ ಚಂದದಿಂದ ಹೇಳುವಂಥವನಾಗೋ ಮಾನವಾ.

ಯಲಾ ಸಾರಥಿ, ಯೀ ಅತ್ಯಧಿಕವಾದ ಧರಾಮಂಡಲದೋಳ್ ವೊಪ್ಪುವಾ ಚಂಡಪ್ರಚಂಡ ಭುಜಬಲೋರ್ದಂಡ ಗಂಡುಗಲಿಗಳೆಂಬೋ ಸಪ್ತ ಸಮುದ್ರವನ್ನು, ಹೊತ್ತು ಹೊತ್ತಿಗೆ ಸುರ‌್ರನೆ ಸುರಿಯುವ ಮಹಾ ಬಡಬಾಗ್ನಿ ಬಿಲ್ಲುರಣೋರ್ದಂಡ ಯೀ ಪೃಥ್ವಿದೇವಿಯ ಮಿಂಡ, ಯಿನ್ನು ಮಿಕ್ಕಾದ ರಕ್ಕಸರನ್ನು ಒಕ್ಕಲಿಕ್ಕುವ ಗಂಡನೆಂಬ ಪ್ಯೆಂಡೆಯು ಯನ್ನ ಪಾದದೋಳ್ ಝನನನನ ಝೇಂಕಾರದಿಂದ ಹೂಂಕರಿಪುದು. ಯನ್ನ ಝಣ ಝಣಾಕೃತಿ ಕಾಲ ಗಗ್ಗರದ ಸಪ್ಪಳಕ್ಕೆ ಝಣಲ್ ಝಣಲ್ ಯೆಂದು ನುಡಿಯುವ ನಡುಗಟ್ಟಿನ ಗಂಟವಾರಕ್ಕೆ ಯೀ ಬ್ರಂಹ್ಮಾಂಡವೆ ದಡ್‌ಬಡ್‌ಯೆಂದು ಚಟಪಟಾಯೆಂದು ಯಿಬ್ಭಾಗವಾಗಿ ಬಿರ‌್ರನೆ ಬಿಚ್ಚುವದು. ಯನ್ನ ವುಬ್ಬೇರಿದ ಅಬ್ಬರಕ್ಕೆ ಅಭ್ರದಡಿಯೋಳ್ ಥಳಥಳನೆ ಸುರಿಯುವವು. ಯನ್ನ ಅರೆಭಯಂಕರವಾದ ಜುಂಜು ರಣಕೂದಲ ಕಂಡು ಮಾರಿಮಸಣಿಯೆಂಬೋ ಭೂತ ಪಿಶಾಚಿಗಳು ಕಿಟ್ಟನೆ ಕಿರುಚಿಕೊಂಡು ದಿಕ್ಕು ದಿಕ್ಕಿಗೆ ವೋಡಿವೋದರು. ದೂರ್ದರಿಶಿನವಾದ ಮೃದ್ಗನಾದ ಭೀಕರಕ್ಕೆ ಅಷ್ಟ ದಿಕ್ಪಾಲಕರು ತಮ್ಮ ಪಟ್ಟಣಗಳಂ ಬಿಟ್ಟು ಝರ್ಜರಿತರಾಗಿ ವೋಡಿವೋದರು. ಯಿನ್ನು ವುಳಿದಂತಾ ತ್ರಿಮೂರ್ತಿಗಳು ತಮ್ಮ ನಿಲಯ ಕವಾಟಂಗಳಂ ಬಂಧನೆಯಂ ಮಾಡಿಕೊಂಡರು. ಯನ್ನ ಕರದೋಳ್ ಪೆರ‌್ಬಕವಂ ಮಾಡುವ ಭದ್ರ ವಜ್ರಾಂಕಿತವಾದ ಖಡ್ಗವಂ ಕಂಡು ಅಹಿತಕವಾದ ಹೆದೆಗಳು ಭುಗಿಲ್‌ಭುಗಿಲ್‌ಯೆಂದು ಪರ‌್ರನೆ ಸೀಳಿ ಸರ‌್ರನೇ ಹರಿಯುವವು. ಯಿಂತಾ ಭೂಭುಜ ಬಲಶಾಲಿಯಾಗಿ ಯೀ ಮಥುರಾಪುರಿ ಪಟ್ಟಣವನ್ನು ಸ್ವಸ್ಥದಿಂದಾಳಿ ಸಮಸ್ತ ದೇಶಾಧಿಪರುಗಳೋಳ್ ವೀರಪ್ರತಾಪ ಪ್ರಖ್ಯಾತಿಯಿಂದ ಬಲವಂತನೆನಿಸಿ ವುಗ್ರಸೇನ ಜರಾದೇವಿಯ ಗರ್ಭಸಂಭೂತನಾದ ದೊರೆ ಕಂಸ ರಾಜೇಂದ್ರನೆಂದು ತಿಳಿಯುವಂಥವನಾಗೋ ಸಾರಥಿ.

ಯಲಾ ಸಾರಥಿ, ಯೀ ಶೃಂಗಾರವಾದ ಗಾಂಗೇಯ ರಂಗಮಧ್ಯಕ್ಕೆ ನಾನು ಬಂದ ಕಾರಣವೇನೆಂದರೆ, ಹಿಂದಕ್ಕೆ ಯೀ ಭೂಮಿಯನ್ನಾಳಿದ ರಾಜರಿಗೆ ಯಲ್ಲಿ ಧರ್ಮ ಯಲ್ಲಿ ಸತ್ಯಾ ಯಲ್ಲಿ ನೀತಿ ಯಲ್ಲಿ ಜಪತಪಾ ಹೀಗೆ ರಾಜತ್ವವುಳ್ಳ ಮಹಾಪ್ರಭುಗಳಿಗೆ ಸತ್ಯವೇ ಯಿಲ್ಲಾ. ಹೀಗೆ ದೊರೆತನವುಳ್ಳವರು ದುಡ್ಡಿನ ಮ್ಯಾಲೆ ಅಪೇಕ್ಷೆಯಿಟ್ಟು ಹೆಡ್ಡರಾಗಿ ಮುಂದೆ ಬರುವ ಅನುಭವಂಗಳಂ ತಿಳಿಯದೆ ಲಂಚ ಲಾವಣ್ಯಗಳಂ ತಿಂದು ಕರ್ಮವನ್ನು ಕಟ್ಟಿಕೊಂಡು ಧರ್ಮವನ್ನು ಬಿಟ್ಟು ಕರ್ಮಮಾರ್ಗವನ್ನು ಹಿಡಿದು ನರಕಕ್ಕೆ ಪ್ರಾಪ್ತಿಯಾಗಿರುವರು. ಹೀಗೆ ವಂದು ಧರ್ಮ ಮಾರ್ಗವನ್ನು ಸ್ಥಿರಮಾಡಬೇಕೆಂದು ಬರೋಣವಾಯಿತೋ ಸಾರಥಿ.

ಯಲಾ ಸಾರಥಿ, ನಮ್ಮ ತಂಗಿ ಪುತ್ಥಳಿ ಬೊಂಬೆ ವಲಪಿನಲ್ಲಿ ಶೃಂಗಾರಿ, ಮಾತಿನಲ್ಲಿ ಗುಣವಂತೆ ಜಾತಿಮುತ್ತಿಗೆ ತತ್ಸಮಾನವಾದ ನಮ್ಮ ತಂಗಿಯು ಅರಮನೆಯೊಳಿರುತ್ತಾಳೆ. ತೀವ್ರವಾಗಿ ಈ ಸಭಾಂತರಕ್ಕೆ ಬರಹೇಳೋ ಸಾರಥಿ.

ಯಲಾ ಸಾರಥಿ, ಯಿದೂ ಅಲ್ಲದೇ ಯೀ ಪೃಥ್ವಿಯಲ್ಲಿ ಧರ್ಮದ ರೀತಿ ಹ್ಯಾಂಗೆ ಧರ್ಮಕರ್ಮಗಳು ವಿಸ್ತಾರವಾಗಿ ಹೇಳೋ ಸಾರಥಿ ॥ಯಲಾ ಸಾರಥಿ, ಯೀ ಭೂಮಂಡಲದಲ್ಲಿ ಧರ್ಮದ ಲೀಲೆ ಹ್ಯಾಗಂದರೆ ವೃಕ್ಷವಿಲ್ಲದ ಸ್ಥಳದಲ್ಲಿ ವೃಕ್ಷವನ್ನು ಹಾಕಿಸಲು ಯಿದು ಮಹಾಪುಣ್ಯಾ. ಯಲಾ ಸಾರಥಿ ಕೆರೆಯಿಲ್ಲದ ಸ್ಥಳದಲ್ಲಿ ಕೆರೆಯನ್ನು ಕಟ್ಟಿಸಲು ಯಿದು ಮಹಾ ಪುಣ್ಯವೆಂದು ಹಿರಿಯರು ಹೇಳಿರುವರು. ಯಿದೂ ಅಲ್ಲದೆ ಬಾವಿಯಿಲ್ಲದ ಸ್ಥಳದಲ್ಲಿ ಬಾವಿಯನ್ನು ಅಗಿಸಲು ಯಿದು ಪುಣ್ಯವೆಂದು ತಿಳಿಯೋ ಸಾರಥಿ ॥ಯಲಾ ಸಾರಥಿ. ಯಿದೂ ಅಲ್ಲದೆ ಗುಡಿಗೋಪುರಂಗಳು ಶಿವಲಿಂಗಗಳು ಅನ್ನ ಛತ್ರಾಧಿಗಳು ಭೂದಾನ ಗೋದಾನ ವಸ್ತ್ರದಾನ ಹಿರಣ್ಯದಾನ ಇವುಗಳೆಲ್ಲಾ ಕೊಟ್ಟರೆ ಬಹು ಪುಣ್ಯವೆಂದು ಹೇಳಿರುವರೋ ಸಾರಥಿ, ಭಲೇ ಸಾರಥಿ, ಯಿವು ಯಲ್ಲಾ ಪುಣ್ಯಕ್ಕೂ ಶ್ರೇಷ್ಟವಾದ ಪುಣ್ಯ ದಾವುದೆಂದರೆ ಕನ್ಯಾದಾನವಂ ಕೊಟ್ಟು ಲಗ್ನವನ್ನು ಮಾಡಿದರೆ ಮಹಾಪುಣ್ಯವೆಂದು ತಿಳಿಯೋ ಸಾರಥಿ. ಆದ್ದರಿಂದ ನಮ್ಮ ತಂಗಿ ದೇವಕಿದೇವಿಯನ್ನು ಕೊಟ್ಟು ಲಗ್ನವನ್ನು ಮಾಡಬೇಕೆಂದು ಯನ್ನ ಮನಸ್ಸಿನಲ್ಲಿ ಧರ್ಮಬುದ್ಧಿ ಉಂಟಾಗಿರುವದು. ಆದ್ದರಿಂದ ನಮ್ಮ ತಂಗಿಯನ್ನು ಅತಿಜಾಗ್ರತೆಯಿಂದ ಕರೆಸುವಂಥವನಾಗೋ ಸಾರಥಿ॥

ದ್ವಿಪದೆ

ಮಾನಿನಿ ಶಿರೋಮಣಿ ಮಾತಿನಲಿ ಜಾಣೆ
ಅಣ್ಣಯ್ಯನ ನೋಡಬೇಕೆಂದು ಆತುರದಿ ತನ್ನಯ
ಜರತಾರಿ ಶಾಲೆಯನು ಜಾಗ್ರತೆಯಲಿ ಉಟ್ಟು
ಭರದಿ ಕುಪ್ಪಸವನ್ನು ಬಾಲೆ ತಾ ತೊಟ್ಟು
ಕೊರಳೊಳಗೆ ಮುತ್ತಿನ ಹಾರವಂ ಧರಿಸಿ
ಕೈ ಕಂಕಣವು ಹಸ್ತ ಕಡಗಗಳು ಕರದಲ್ಲಿ ಧರಿಸಿ
ಮೃಗರಾಜ ಮಧ್ಯದಿಂದೊಪ್ಪುವಾ ನಡುವಿಗೆ
ಝಗಝಗಿಪ ವಡ್ಯಾಣವೇ ತಾನಿಟ್ಟು ಕಾಲಂದುಗೆ
ಗೆಜ್ಜೆ ಘಲ್ಲು ಘಲ್ಲೆನುತ ದೇವಕೀದೇವಿ ತೆರೆಯಲ್ಲಿ ಬಂದು ನಿಂದೂ ॥

ದೇವಕೀದೇವಿ : ಅಪ್ಪಯ್ಯ ಪರಿಚಾರಕನೇ, ಯೀ ಸಭಾಭದ್ರ ಮಣಿಮಂಟಪ ಭವನಕ್ಕೆ ಬಂದ ಸರ್ಪವೇಣಿಯೊಳು ಧಾರೋ ಯೆಂದು ವಾರ್ತಿಸುವ ನೀನು ಧಾರು ನಿನ್ನ ನಾಮಾಂಕಿತವೇನು ಚೆನ್ನಾಗಿ ವರ್ಣಿಸಯ್ಯ ದ್ವಾರಪಾಲಕಾ. ಅಪ್ಪಯ್ಯ ಸಾರಥೀ, ಶಂಕು ಚಕ್ರಾಂಕಿತ ಗಜೇಂದ್ರನಂ ರಕ್ಷಿಸಿ ನಕ್ರನಂ ಚಕ್ರದಿ ವೊಕ್ಕಲಿಕ್ಕಿದ ಶ್ರೀಹರಿಯ ಪಾದಸೇವಾ ನಿರಂತರಳಾದ ಶ್ರೀಮದ್ ಪರಮೇಶ್ವರನ ಪಾದ ಪಂಕೇರುಹಕ್ಕೆ ವೊಪ್ಪಿತರಾಗಿ ವರ್ತಿಸುವ, ವಸುಮತಿಯ ಮ್ಯಾಲೆ ಮಹಾ ಪೆಸರಾದ ಮಥುರಾಪುರಿ ಪಟ್ಟಣದರಸು ವುಗ್ರಸೇನ ಜರಾದೇವಿಯರ ಗರ್ಭದಲ್ಲಿ ವುದ್ಭವಿಸಿಹ ದೇವಕೀದೇವಿಯೆಂದು ಗ್ರಹಿಸಪ್ಪಾ ದೂತಾ ಸುರಚಿರ ವಿಖ್ಯಾತಾ.

ಅಪ್ಪಾ ಸಾರಥಿ. ಯೀ ಸಭಾಂತರಕ್ಕೆ ನಾ ಬಿಜಯಂ ಮಾಡಿದ ವಿವರಗಳು ಏನೆಂದು ಕೇಳುತ್ತೀಯಾ. ಯಲಾ ಸಾರಥಿ, ನಮ್ಮ ಅಗ್ರಜನಾದ ಕಂಸ ರಾಜೆಂದ್ರನು ಯನ್ನನ್ನು ಯೀ ಸಭಾಸ್ಥಾನಕ್ಕೆ ಕರೆಸಿ ಯಿದ್ದನಾದ ಕಾರಣ ಬಾಹೋಣವಾಯಿತು. ನಮ್ಮ ಅಣ್ಣಯ್ಯನವರು ಧಾವಲ್ಲಿ ಯಿದ್ದಾರೋ ಭೇಟಿ ಮಾಡಿಸಯ್ಯ ಸಾರಥಿ.

ದೇವಕೀ : ಶಿರ ಸಾಷ್ಟಾಂಗ ಬಿನ್ನಪಂಗಳೈ ಅಣ್ಣಯ್ಯ ॥

ಕಂಸ : ದೀರ್ಘಾಯುಷ್ಯ ಶುಭ ಮಂಗಳವತಿಯಾಗಿ ಶೀಘ್ರದಿಂದ ಬರುವಂಥವಳಾಗಮ್ಮ ತಂಗಿ.

ದರುವು ರೂಪಕ

ಅಣ್ಣನೆ ಯನ್ನನೂ ಕರೆಸಿದಾ ಪರಿಯೇನೂ
ಮನ್ನಿಸಿ ಪೇಳಯ್ಯ ಸುಗುಣದಾ ಚೆನ್ನಾ ॥

ಅರಮನೆಯೊಳಗಿಹಾ ಸಖಿಯರಾ ಮೇಳದೀ
ವಿನಯದಿಂ ಕರೆಸಿದಾ ಕಾರಣವೇನಣ್ಣಾ ॥

ಮಂದಿರಾದೊಳಾಗಿ ಹಾ ಚಂದಿರಾಮುಖಿಯಳಾ
ಅಂದದಿಂ ಕರೆಸಿದಾ ಕಾರಣವೇನಂಣಾ ॥

ಸುರಚಿರ ಶುಭಾಪುರಿ ವರದನೇ
ಪಾಲಿಸೋ ಸರಸನು ರಾಮನೂ ವರಕವಿಯೊಳರಾಡಿದಾ ॥ಅಣ್ಣನೇ ॥

ದೇವಕಿ : ನಮೋ ನಮೋ ಅಣ್ಣಯ್ಯ ॥ಅರಮನೆಯೊಳಗಿರುವಳನ್ನು ಯೇನು ಕಾರಣ ಕರೆಸಿದೇ ತೀವ್ರವಾಗಿ ಹೇಳೋ ಅಣ್ಣಾ – ನೀತಿಶಾಸ್ತ್ರವಂ ಬಲ್ಲ ಕಾರುಣ್ಯನಿಧಿ.

ಕಂಸ : ಹೇ ತಂಗಿ, ನಿನ್ನನ್ನು ಯೀ ಸನ್ನಿಧಿಗೆ ಕರೆಸಿದ ವಿವರ ಹೇಳುವೆ. ಅರಗಳಿಗೆ ಸೈರಿಸಮ್ಮಾ ತಂಗಿ ಮಂಗಳಾಂಗೀ.

ಯಲಾ ಸಾರಥೀ  ಯಿಂದು ಯನ್ನ ಸಹೋದರಿಯಾದ ದೇವಕಮ್ಮನನ್ನು ಕೊಟ್ಟು ಕನ್ಯಾದಾನವನ್ನು ಮಾಡಬೇಕೆಂದು ಯನ್ನ ಮನಸ್ಸಿನಲ್ಲಿ ಧರ್ಮಬುದ್ಧಿಯುಂಟಾಗಿರುವುದು. ಆದಕಾರಣ ನಮ್ಮ ತಂಗಿಗೆ ತಕ್ಕಂಥ ವರ್ಣಶೋಭಾಯಮಾನನಾದ ಮದುವಣಿಗನನ್ನು ಜಾಗ್ರತೆಯಿಂದ ಕರೆತಾರೈ ಸಾರಥಿ.

ಸಾರಥಿ : ಅಯ್ಯ ರಾಜ ನಿಮ್ಮ ತಂಗಿಗೆ ಯೆಷ್ಟು ವರುಷ ॥

ಕಂಸ : ಯಲಾ ಸಾರಥಿ ನಮ್ಮ ತಂಗಿಗೆ ಯೆಂಟು ವರುಷಾ ॥ಆದ್ದರಿಂದ ಹದಿನಾರು ವರುಷದ ಹುಡುಗನನ್ನು ಕರೆತಾರೋ ಸಾರಥಿ.

ಸಾರಥಿ : ಅಯ್ಯ ರಾಜ, ಹದಿನಾರು ವರುಷದ ವುಡುಗನು ಎಲ್ಲೆಲ್ಲಿ ನೋಡಿದರೂ ಸಿಕ್ಕಲಿಲ್ಲಾ. ಆದ್ದರಿಂದ ಯೆಂಟೆಂಟೊರುಷದ ಯಿಬ್ಬರು ವುಡುಗರನ್ನು ಕರದುಕೊಂಡು ಬರುತ್ತೇನಯ್ಯ ರಾಜಾ.

ಕಂಸ : ಛೀ ಛೀ ಹೋಗೋ ತಬ್ಬಲಿ ಭ್ರಷ್ಟಾ, ನಿನಗೇನು ತಿಳಿಯುವುದೋ ದುಷ್ಟಾ – ಯಲಾ ಸಾರಥಿ ತ್ರೇತಾಯುಗದಲ್ಲಾದರು ವಬ್ಬ ಪುರುಷನಿಗೆ ವಂದು ಯರಡು – ಮೂರು – ನಾಲ್ಕು ಹೀಗೆ ಐದು ಮಂದಿ ಸ್ತ್ರೀಯರಿರುವುದುಂಟು. ವಬ್ಬ ಸ್ತ್ರೀಯಳಿಗೆ ಯಿಬ್ಬರು ಪುರುಷರಿರುವುದುಂಟೇನೋ ಸಾರಥಿ. ಯಲಾ ಸಾರಥಿ ನಿನ್ನಿಂದ ಆಗಲರಿಯದು. ಯನ್ನ ಮಂತ್ರಿಯಾದ ಅಕ್ರೂರನನ್ನು ತೀವ್ರವಾಗಿ ಯೀ ಸಭಾಂತರ ಸ್ಥಳಕ್ಕೆ ಬರಹೇಳೋ ಸೇವಕಾ ॥

ಅಕ್ರೂರ : ಯಲಾ ಮನುಷ್ಯನೇ, ಸಂಭ್ರಮದಿಂದ ಕುಂಭಿಣಿಯೋಳ್ ಬಂದಿರುವರು ಧಾರೋ ಯೆಂದು ಮಾತನಾಡಿಸುವ ಗಾಂಭೀರ‌್ಯವಂದಿತನು ನೀನು ಧಾರೋ ಯನ್ನೊಳು ಸಾರೊ ಭಟನೆ. ಯಲಾ ಸಾರಥಿ, ಕಂಬುಕಂದರನ ಚರಣಾರವಿಂದಮುಖ ಸುಂದರ ಸುಗುಣಾಬ್ದಿ ಗಾಂಭೀರ‌್ಯ ಪರಾಕ್ರಮ ಶ್ರೀಮದ್ ಭುಜಬಲೋರ್ದಂಡ ರೋಷಕೋವಿದನಾಗಿ ಕೇಶವಾಂತಕನ ಶತ್ರು ಕಲಾಂಬುಧಿ, ಯೀ ಮಥುರಾಪುರಿ ಪಟ್ಟಣವನ್ನು ಸ್ವಸ್ಥದಿಂದಾಳಿದ ಸಮಸ್ತ ರಾಜರ ಎದೆ ಜಲ್ಲೆಂದು ಬಿರುದುಗಳಂ ಧರಿಸಿ, ವುದ್ದಂಡ ಕೋದಂಡಪಾಣಿಯಾಗಿ ಚಂಡೋರ್ಧಂಡರಾಗಿ ಮೆರೆಯುವಾ ಕಂಸ ಭೂಪೋತ್ತಮನ ಪಟ್ಟಕ್ಕೆ ನಿರಾಕರಿಸದೆ ಯಿರುವ ಮಂತ್ರಿ ಅಕ್ರೂರನೆಂದು ತಿಳಿಯೋ ಸಾರಥಿ ॥ಯಲಾ ಸಾರಥಿ, ಯೀ ಸಭಾಂತರಕ್ಕೆ ನಾನು ಬಂದ ಕಾರಣವೇನೆಂದರೆ, ಯಮ್ಮ ರಾಜ ಕಂಸ ಭೂಪೋತ್ತಮನು ಯನ್ನ ಯೇನು ಕಾರಣ ಕರೆಸಿರುವನೋ ಅದು ತಿಳಿಯಬೇಕೆಂದು ಬಂದಿರುತ್ತೇನೆ. ನಂಮ ರಾಜನು ಧಾವಲ್ಲಿ ಯಿದ್ದಾನೋ ಭೇಟಿಯನ್ನು ಮಾಡಿಸೋ ಸಾರಥಿ.

ಅಕ್ರೂರ : ನಮೋನ್ನಮೋ ಹೇ ರಾಜ ಸೂರ‌್ಯಸಮತೇಜಾ.

ಕಂಸ : ದೀರ್ಘಾಯುಷ್ಯಮಸ್ತು. ಶುಭಮಂಗಳಕರಮಾಗಿ ಶೀಘ್ರದಿಂದ ಬರುವಂಥವನಾಗೋ ಮಂತ್ರಿ ಕಾರ‌್ಯೇಷು ತಂತ್ರಿ.

ಮಂತ್ರಿ : ರಾಜಾಧಿರಾಜರೋಳ್ ಪ್ರಖ್ಯಾತಿವೊಂದಿದ ಕಂಸ ಮಹಾರಾಜನೇ ಕೇಳೂ, ಯನ್ನನ್ನು ನಿಮ್ಮ ಸನ್ನಿಧಿಗೆ ಬಾರೆಂದು ಕರೆಸಿದ ಕಾರಣವೇನು ದೊರೆಯೆ ತಮಗ್ಯಾರು ಸರಿಯೇ.

ಕಂಸ : ಅಯ್ಯ ಮಂತ್ರಿ, ಯೀ ಸಾರಥಿಯಿಂದ ಆಗಲರಿಯದು. ಯೀ ವ್ಯಾಳೆಯಲ್ಲಿ ನಮ್ಮ ತಂಗಿಯಾದ ದೇವಕಮ್ಮನನ್ನು ಕನ್ಯಾದಾನವಂ ಕೊಟ್ಟು ಧಾರೆಯೆರೆಯಬೇಕಾಗುತ್ತದೆ. ನೀನು ಅತಿ ಜಾಗ್ರತೆಯಿಂದ ಮದುವಣಿಗನನ್ನು ತೀವ್ರದಿಂದ ಕರೆತಾರೈ ಮಂತ್ರಿ ಕಾರ‌್ಯದಲ್ಲಿ ಸ್ವತಂತ್ರಿ.

ಮಂತ್ರಿ : ಅಯ್ಯ ರಾಜ, ಆ ಮಾತು ಸಿದ್ಧವಾಗಿ ಮಾಡಿದ್ದೇನಯ್ಯ ರಾಜಾ ಮಾರ್ತಾಂಡ ತೇಜಾ.

ಕಂಸ : ಹೇ ಪ್ರಧಾನಿ, ಆ ಮಾತು ಸಿದ್ದವಾಗಿ ಮಾಡಿದ್ದೇನೆಂದು ಹೇಳಿದಷ್ಟೇ, ಅದರ ಸಂಗತಿ ತಿಳಿ ಹೇಳಯ್ಯ ಪ್ರಧಾನಿ ಮಾತಿನಲ್ಲಿ ನಿಧಾನಿ.

ಮಂತ್ರಿ : ಅಯ್ಯ ರಾಜಾ, ಅದು ಹ್ಯಾಗಂದರೆ ರಾಮೇಶ್ವರದಿಂದ ಬಂದು ಯಿದೇ ಮಥುರಾಪುರಿ ಕೊನೇ ದ್ವಾರದಲ್ಲಿ ವಸ್ತಿಯನ್ನು ಮಾಡಿದ್ದಾರಯ್ಯಾ ರಾಜಾ ರವಿಸಮತೇಜಾ.

ಕಂಸ : ಅವರು ಧಾರೋ ಕರೆತಾರಯ್ಯ ಮಂತ್ರಿ ॥

ದರುವು

ಕರೆತಾರಂದರೆ ಕರೆತಂದಿಹೆನಯ್ಯ
ಹರುಷದಿಂದ ನೋಡೀಗಾ ಬೇಗ ॥
ಹರುಷದಿ ಪುರುಷನ ಕರೆತಂದಿಹೆನಯ್ಯ
ಕಡು ಬೇಗದಿ ನೋಡೈ ರಾಜಾ ॥

ಮಂತ್ರಿ : ಹೇ ರಾಜ, ನೀನು ಕರೆತಾರೆಂದ ಮಾತಿಗೆ ಅತಿ ಕೋವಿದನಾದ ದೇವಾಧಿದೇವ ವಸುದೇವರಾಯನನ್ನು ಕರೆತಂದಿದ್ದೇನೆ, ತ್ವರಿತದಿಂದ ನೋಡಯ್ಯ ರಾಜ.

ಕಂಸ : ಅಯ್ಯ ಪ್ರಧಾನಿ, ಅವರು ಧಾವಲ್ಲಿದ್ದಾರೋ ಭೇಟಿ ಮಾಡಿಸೋ ಮಂತ್ರೀಶಾ ॥ಭಲಾ ಭಲಾ ಶಹಬ್ಬಾಷ್ – ಅಹಹಾ – ಮಂತ್ರಿ ಹಿಡಿ ಹಿಡಿ, ಯನ್ನ ಮುಂಗೈಯಲ್ಲಿರುವ ಬಂಗಾರದ ಕಡಗವಂ ಹಿಡಿ. ಇಕೋ ಹಿಡಿ ಹಿಡಿ ಪೀತಾಂಬರದ ಹೊದಿಕೆಯನ್ನು ಧರಿಸು. ನಿನ್ನಂಥಾ ಯೋಚನೆಯುಕ್ತ ಸಾಹಸವಂ ಬಲ್ಲಂತಾ ಮಂತ್ರಿಗಳನ್ನು ನಾನು ಕಾಣೆನು. ಯನ್ನ ಅನುಜೆ ದೇವಕಿಗೆ ತಕ್ಕಂಥ ನಾಗರಿಕ ಪುರುಷನನ್ನು ತಂದು ಯಿದ್ದಿ. ಇನ್ನು ತಡವೇಕೆ ಮಾಡುತ್ತಿ. ಪಂಚಾಂಗವನ್ನು ನೋಡಿ ಲಗ್ನವನ್ನು ಸ್ಥಿರಮಾಡಬೇಕಾಗುತ್ತದೆ. ಅದಕ್ಕೆ ತಕ್ಕಂಥ ಜೋಯಿಸ ಬ್ರಾಹ್ಮಣರನ್ನು ಕರೆಸಯ್ಯ ಮಂತ್ರೀಶಾ.

 

(ಬ್ರಾಹ್ಮಣರು ಬರುವಿಕೆ)

ಕಂಸ : ಯಲಾ ಸಾರಥಿ, ಇನ್ನು ಆಲಸ್ಯವನ್ನು ಮಾಡಲೇನು ಕಾರಣ. ಆ ಬ್ರಾಹ್ಮಣರಿಗೆ ಗೋದಾನ ಭೂದಾನ ವಸ್ತ್ರದಾನ ಅನ್ನದಾನ ಭೂಸುರರಿಗೆ ನಾ ಹೇಳಿದ ಪ್ರಕಾರ ದಾನವನ್ನು ಕೊಟ್ಟರೇನೋ ಸಾರಥಿ ॥ಇದು ಅಲ್ಲದೆ ರಾಜಪ್ರದಾಯಕರಿಗೆ ಭೋಜನ ತಾಂಬೂಲ ದಕ್ಷಿಣೆಯಿಂದ ಸಕಲರು ಸಂತೋಷಪಟ್ಟರೇನೋ ಸಾರಥಿ ॥ಯಿನ್ನು ತಡಮಾಡಲೇನು ಕಾರಣ ಇನ್ನು ಐದು ಮಂದಿ ಮುತ್ತೈದೆ ಸ್ತ್ರೀಯರನ್ನು ಕರೆಸೊ ಸಾರಥಿ ॥

ದರುವೂ ರೂಪಕ

ಮುತ್ತೈದೆಯರೆಲ್ಲಾರು ಅರ್ತಿಯಿಂದಾಲಿ ಬಂದು
ಚಿತ್ತಜಾಪತಿಗೆ ಉರಟಣೆಯು ಮಾಡಿದರೂ ॥

ಮುತ್ತೈದೆ : ಅಪ್ಪಾ ಸಾರಥಿ, ಕಪ್ಪೆಚಿಪ್ಪಿನೊಳು ವುತ್ಪನ್ನವಾದ ಜಾತಿಮುತ್ತಿನಂತೆ ಚೆಲ್ವಾಗಿ ಮೆರೆಯುವ ಮಾತಿನಲ್ಲಿ ಗುಣವಂತೆ, ನೀತಿಯಲ್ಲಿ ಯತಿವಂತೆಯಾದ ಕುಮುದಾಕ್ಷಿಯಂಬುವ ಮುತ್ತೈದೆ ನಾನೇ ಅಲ್ಲವೇನಪ್ಪಾ ಸಾರಥಿ.

ಅಪ್ಪಾ ಸಾರಥಿ, ಯೀ ಸಭಾಂತರಂಗಸ್ಥಳಕ್ಕೆ ನಾನು ಬಂದ ಮರ‌್ಯಾದೆ ಹ್ಯಾಗಂದರೆ, ಯೀ ಮಥುರಾಪುರಿ ಪಟ್ಟಣಕ್ಕೆ ಅಧಿಪತಿಯಾದ ಕಂಸರಾಜೇಂದ್ರನು ಯೇನು ಕಾರಣಾ ಕರೆಸಿರುವನೋ ಅದು ತಿಳಿಯಬೇಕಾಗಿ ಬಂದು ಯಿದ್ದೇವಯ್ಯ ಸಾರಥಿ.

ಕಂಸ : ಯಲಾ ಸಾರಥಿ, ಐದು ಮಂದಿ ಮುತ್ತೈದೆ ಸ್ತ್ರೀಯರು ಬಂದಿರುವರೇನೋ ಸಾರಥಿ.

ಸಾರಥಿ : ಬಂದು ಯಿದ್ದಾರೈ ರಾಜೇಂದ್ರಾ.

ಕಂಸ : ಬಂದಿರುವರೋ ಬಹಳ ಸಂತೋಷವಾಯಿತು. ಯೀ ಮಥುರಾಪುರಿ ಪಟ್ಟಣವನ್ನು ಶೃಂಗಾರದಿಂ ಅಲಂಕರಿಸಿ ಧಾರೆಯಂ ಎರೆಸುವಂಥವನಾಗೋ ಸಾರಥಿ.

ಸಾರಥಿ : ತಮ್ಮ ಆಜ್ಞೆಯಂತೆ ನಡೆದುಕೊಳ್ಳುತ್ತೇನೈ ಸ್ವಾಮಿ.

ಸೋಬಾನೆ ಪದ

ಮಾಳಿಗೆ ಏರ‌್ಯಾರೇ ವೀಳ್ಯಾವ ನೋಡಿರೇ ॥
ಏಳೆಂಟು ತರದಾ ಹಿರಿಯಾರು ॥
ಏಳೆಂಟು ತರದಾ ಹಿರಿಯಾರು ಕೂಡಿಕೊಂಡು
ವೀಳ್ಯಾವ ನೋಡಿದಾರೇ ಯರುದಾರೇ