(ಬಾಲಕೃಷ್ಣ ಬರುವಿಕೆ)

ಬಾಲಕೃಷ್ಣ : ಯಲೈ ಮಾನವ, ಯೀ ಸಭಾಭದ್ರ ಮಣಿ ಮಂಟಪಕ್ಕೆ ಬಂದು ಸದ್ಭಕ್ತಿಯಿಂದ ಮಾತನಾಡಿಸುವ ಮಾನವ ನೀನು ದಾರೈ ಭಟಕುಟಂಬಿ ॥ಯಲೈ ಸಾರಥಿ ನಾವು ದಾರೆಂದರೆ ಯೀ ಚತುರ್ದಶ ಭುವನ ಭೂಮಂಡಲವನ್ನು ಕುಕ್ಷಿಯಲ್ಲಿಟ್ಟು ರಕ್ಷಿಸುವ ನಿಟಲಾಕ್ಷಿ ಪ್ರಿಯವೇದಗಳನ್ನು ಕದ್ದೊಯ್ದು ಸಮುದ್ರದಲ್ಲಿ ಅಡಗಿರುವ ರಕ್ಕಸರನ್ನು ಕೊಂದು, ಆ ವೇದಗಳನ್ನು ತಂದು ಬ್ರಹ್ಮನಿಗೆ ಕೊಡುವುದಕ್ಕಾಗಿ ಮತ್ಸ್ಯರೂಪವಂ ಧರಿಸೋಣವಾಯಿತು – ಕೂರ‌್ಮನವತಾರವನ್ನೆತ್ತಿ ಭೂ ಭಾರವಂ ಪಡಿಯೋಣವಾಯಿತು. ಈ ಭೂಮಿಯನ್ನು ಸುರಳೆ ಸುತ್ತಿರುವ ರಕ್ಕಸರನ್ನು ಸೀಳುವದಕ್ಕೋಸ್ಕರ ವರಾಹಾವತಾರವಂ ಧರಿಸೋಣವಾಯಿತು. ಶಿಶು ಪ್ರಹ್ಲಾದನ ಸಂರಕ್ಷಣೆಗೋಸ್ಕರ ನರಸಿಂಹಾವತಾರ ಧರಿಸೋಣವಾಯಿತು. ಬಲಿಚಕ್ರವರ್ತಿ ದೆಶೆಯಿಂದ ವಾಮನವತಾರವಂ ಧರಿಸೋಣವಾಯಿತು. ತಂದೆ ದೆಶೆಯಿಂದ ತಾಯಿಯ ಸಂಹರಿಸುವದಕ್ಕೋಸ್ಕರ ಪರಶುರಾಮರ ಅವತಾರವಂ ಧರಿಸೋಣವಾಯಿತು. ಭೂ ಭಾರದ ದಿಶೆಯಿಂದ ರಾವಣನನ್ನು ಸಂಹಾರ ಮಾಡುವುದಕ್ಕೋಸ್ಕರ ಶ್ರೀರಾಮರ ಅವತಾರವಂ ಧರಿಸೋಣವಾಯಿತು ಪಿತಮಾತೆಯರ ಸೆರೆಬಂಧನ ಪರಿಹಾರ ಮಾಡುವುದಕ್ಕೋಸ್ಕರ ಹಿಮಾಚಲಕ್ಕೆ ದಕ್ಷಿಣ ಭಾಗದಲ್ಲಿ ಹರಿಯುವ ರಕ್ತವೆಂಬ ಪುಣ್ಯ ಭೂಮಿಯೋಳ್, ಗುರ್ಜರ ವಾಸವಾದ ಶೂರಸೇನ ದೇಶದಲ್ಲಿ ಯಮುನಾ ನದಿಗೆ ಅತಿ ದೂರವೆನಿಸುವ ರಾಜಧಾನಿಯಾದ ಮಧುರಾ ನಗರದಲ್ಲಿ ವುಗ್ರಸೇನರಾಯನ ಮಗನಾದ ಭ್ರಷ್ಟ ಕಂಸನನ್ನು ನಷ್ಠ ಮಾಡುವದಕ್ಕೋಸ್ಕರ, ರೋಹಿಣಿ ದೇವಿ ಗರ್ಭದಲ್ಲಿ ಕ್ರಿಷ್ಣನ ಅವತಾರವಾಗಿ ಜನಿಸೋಣವಾಯಿತು. ಅದು ಹ್ಯಾಗೆಂದರೆ ಕಳೆದ ದ್ವಾಪರಾಂತರದಲ್ಲಿ ನೂರುತೊಂಬತೈದು ಕೋಟಿ ಯೈವತ್ತೆಂಟು ಲಕ್ಷದ ಯಂಭತ್ತು ಸಾವಿರದ ಯಂಟುನೂರ ಯಂಭತ್ತನಾಲ್ಕನೇ ವಿಜಯನಾಮ ಸಂವತ್ಸರದ ಶ್ರಾವಣಮಾಸದ ಕೃಷ್ಣ ಪಕ್ಷ ಅಷ್ಟಮೀ ಮಂಗಳವಾರ ಅರ್ಧರಾತ್ರೆ ರೋಹಿಣಿ ನಕ್ಷತ್ರಂ ಯೀ ರೀತಿ ಬಿರುದು ಹೊತ್ತಂಥ ಗೋಪಾಲಕ್ರಿಷ್ಣಮೂರ್ತಿಯೆಂದು ತಿಳಿಯಲಾ ಸಾರಥಿ.

ಸಾರಥಿ : ಯೀ ಸಭಾಂತರಂಗ ಸ್ಥಳಕ್ಕೆ ಯೇನು ಕಾರಣ ಬರೋಣವಾಯಿತೈ ಸ್ವಾಮಿ.

ಕ್ರಿಷ್ಣ : ಯಲೈ ಸಾರಥಿ, ಯೀ ಸಭಾ ಮಧ್ಯಂತರಂಗಸ್ಥಳಕ್ಕೆ ನಾ ಆಗಮಿಸಿದ ಕಾರಣವೇನೆಂದರೆ ವೈಕುಂಠಕ್ಕೆ ದಿಗ್ವಿಜಯವಂ ಮಾಡುವದಕ್ಕೋಸ್ಕರ ಶ್ರೀ ಕೃಷ್ಣನ ಬಿರುದು ಮರೆಯದೆ ದೇವಕಿ ವಸುದೇವರಾಯರನ್ನು ಕಂಸ ದೈತ್ಯನು ಸೆರೆಯಲ್ಲಿರಿಸಿರುವನಾದ ಕಾರಣ, ಆ ಸೆರೆ ಬಂಧನವಂ ಪರಿಹಾರ ಮಾಡುವದಕ್ಕೆ ಬಂದುದಾಯಿತೋ ಸಾರಥಿ ॥

ದರುವೂ

ಬೇಡಿಕೊಂಬೆನು ತಾಯಿ ಈಗಾ ಯನ್ನ
ಗಾಡದಿಂ ಕಳುಹಿಸು ಬೇಗಾ – ಖೋಡಿ
ನಾರದ ಪೇಳ್ದ ಕುಹಕ ಮಾತನು ಕೇಳೀ
ಗಾಢದಿಂದಲಿ ಯನ್ನ ಘಾತಿಸುವ ದುರ್ಗುಣಕೇ ॥ಬೇಡಿಕೊಂಬೆನು ॥

ಕೃಷ್ಣ : ಹೇ ಮಾತೆ. ಇಂದು ನಿಮ್ಮ ಚರಣಾರವಿಂದಗಳಿಗೆ ವಂದನೆಯನ್ನು ಮಾಡಿ ಇಂದು ನಾ ಬೇಡುವೆ. ಆದರೆ ನಾರದ ಪೇಳ್ದ ಕುಹಕ ಮಾತನು ಕೇಳಿ ಖೂಳ ಕಂಸನು ನಿಮ್ಮ ಬಾಳುಗೆಡಿಸಿ ಹಾಳು ಮಾಡಿರುವನು. ಆ ಭ್ರಷ್ಟನಿಗೆ ಕಾಲ ವದಗಿತು – ಅವನಿಗೆ ಬ್ರಹ್ಮನು ಬರೆದ ಹಣೆಬರಹವು ಕಡಿಮೆ ಆಯಿತು. ಯಿನ್ನು ಯಿಂದೂ ಮುಂದು ತಿಳಿದು ಬಹು ಎಚ್ಚರವಾಗಿರಬೇಕಮ್ಮಾ ತಾಯೇ.

ದರುವೂ

ಆರು ಮಕ್ಕಳ ಹಿಂದೆ ನಾನು – ಬಹು ಕಾಡಿ
ನೊಳಗೆ ವುಟ್ಟಿದೆನೂ ॥ಏಳು ಪಿಂಡಗಳೆಲ್ಲಾ
ಹೇಳಾದೆಲೆ ಕಳಕೊಂಡೆ ಕಾಲ
ವದಗೀತಮ್ಮಾ ಮದಲಿನ್ನು ಮಾವನಿಗೆ ॥ಬೇಡಿ ॥
ಅಸುರಮರ್ದನನಮ್ಮಾ ನಾನು
ನಿನ್ನ ಬಸರಿನೊಳಗೆ ಹುಟ್ಟಿದೆನೂ ॥
ಕಸಮೂಳ ಮಾವ ಚನ್ನೆಸರು
ಕಳಕೊಂಬುವದಕೆ ವಸುಧೆಯೋಳ್
ನೆಲಸಿಹ ಗುರುಲಿಂಗನಾಣೆನಮ್ಮಾ ॥
ಬೇಡಿಕೊಂಬೆನು ತಾಯಿ ಯೀಗಾ॥

ಕೃಷ್ಣ : ಹೇ ಜನನೀ, ನಿನ್ನ ಗರ್ಭಾಂಬುದಿಯೋಳ್ ಹುಟ್ಟಿದೆನೆಂದು ತಾತ್ಸಾರ ಮಾಡಬ್ಯಾಡ ಕಂಡ್ಯಾ. ಧಾವ ಅಸುರರ ಪಡೆಯನ್ನು ಅಡಗಿಸಿ ಅವರಿಗೆ ನಾನೇ ಗಂಟಲಿಗೆ ಗಾಣ ಕಣ್ಣಿಗೆ ಶೂಲ. ಮದಗರ‌್ವದಿಂದ ಯಿರುವ ದುರುಳ ಕಂಸನ ಶಿರವನ್ನು ಗರಗರನೆ ಮುರಿದು ತುಂಡು ತುಂಡನ್ನು ಕೆಡಹಿ ಯೀ ಭೂ ಮಂಡಲದಲ್ಲಿ ಯಿರುವ ಹಿಂಡು ಭೂತ ಪಿಶಾಚಿಗಳಿಗೆ ತಂಡ ತಂಡದೀ ತೃಪ್ತಿಯಂಪಡಿಸುತ್ತೇನೆ. ಯೀ ಮಾತು ಸುಳ್ಳೆಂದು ತಿಳಿಯಲಾಗದಮ್ಮ ಜನನೀ, ಯೀ ವಸುಧೆಯೋಳ್ ಗುರುಲಿಂಗೇಶನ ಪಾದದಾಣೆಯು ಯಿನ್ನು ಆಲಸ್ಯ ಮಾಡದೆ ಯನ್ನನ್ನು ಗೋಕುಲಕ್ಕೆ ಕಳಿಸು. ಇಂದು ಯಶೋದೆ ಗರ್ಭದಲ್ಲಿ ದುರ್ಗಿದೇವಿ ಜನಿಸಿ ಯಿರುವಳು. ಆ ದುರ್ಗಿ ದೇವತೆಯನ್ನು ಯಿಲ್ಲಿಗೆ ತಂದುಕೋ. ಯಿಲ್ಲಿಗೆ ತಂದ ತರುವಾಯ ನಾಲ್ಕಾರು ದಿನದ ಮ್ಯಾಲೆ ಬಂದು ಆ ಖುಲ್ಲ ಕಂಸನ ಸೊಲ್ಲಡಗಿಸಿ ಬಿಡುತ್ತೇನೆ ಯನ್ನನ್ನು ಗೋಕುಲಕ್ಕೆ ಕಳುಹಿಸಮ್ಮಾ ಮಾತೆ.

ದರುವೂ

ಆಗಾ ವಸುದೇವಾನು – ಬಕನಾ
ಕಂಡೂ ಬೇಗಾ ಬೀಗಾಮುದ್ರಿಯು
ಸಡಲೀ ಬಾಗಿಲು ತೆಗೆದಾಗಾ ॥ದುರ್ಗಿ
ಜನಿಸಿದ್ದಾ ಮನೆಯೊಳಗಿದ್ದಾ ಜನರೆಲ್ಲಾ
ನಿದ್ರೇಗೈಯ್ಯುತ್ತಿರಲು ರವುದ್ರಾ
ದಿಂದೆಲ್ಲಾ ಶಿಶುವೊ ಯಶೋದೆ ಹಾಸಿಗೆ
ಮ್ಯಾಲೆ ತಂದಿಡಲು ಯಶೋದೆ
ಹೆಣ್ಣೂ ಕೂಸನು ತಂದು ಶಶಿಮುಖಿಗೇ
ಕೊಡಲೂ ನಾ ಕೊಡಲೂ ॥

ಚಾರರು : ಹೇಳ್ಬೇಕೋ ನಮ್ಮ ರಾಜರಿಗೆ ಹೇಳ್ಬೇಕೂ ॥ಯೀ ಮಾತು ನಮ್ಮಾ ಕಂಸಾಗೆ ಹೇಳ್ಬೇಕು.

ದರುವೂ

ಬಾರೈಯ್ಯ ಕಂಸಾ ಬಾರೈಯ್ಯ ॥
ನಿನ್ನ ತಂಗಿ ಹಡದಳೂ ಚಿನ್ನದಾ
ಬೊಂಬೆಯಂತಾ ಕೂಸೂ ॥ಬಾರೈಯ್ಯ

ಚಾರರು : ಹೇ ರಾಜಾ ನೀವು ಹೇಳಿದ ಪ್ರಕಾರ ಯೀ ಅರಮನೆ ಸುತ್ತಲೂ ಗಸ್ತು ಮಾಡುವ ತತ್ಕಾಲದೋಳ್ ಅರಳಿಮರ ಅಲ್ಲಾಡಲು – ಕುಕ್ಕುಟವೂ ಕೂಗಲೂ ಗಾರ್ಧಭ ದನಿಯಂ ಮಾಡಲು, ಈ ಮೂರು ವಾರ್ತೆಗಳಂ ಕೇಳಿ ನಿಮಗೆ ತಲ್ಪಿಸಿದ್ದೇವಯ್ಯಿ ರಾಜಾ – ಸೂರ‌್ಯಸಮತೇಜಾ.

ಕಂಸ : ಯಲಾ ಚಾರರೇ, ನಮ್ಮ ತಂಗಿಯ ಗರ್ಭದಲ್ಲಿ ಶಿಶುವು ಹುಟ್ಟಿರುವದು – ನಿಜವೇನೋ ಚಾರರುಗಳಿರಾ.

ದರುವೂ

ಕೊಡು ತಂಗಿ ಕೂಸನ್ನಾ ಕಡುವೇಗದಲಿ
ಈಗಾ ಕಡಿದು ಬಿಡುವೇ ನೋಡೂ
ಈಗಾ ಬೇಗಾ ॥

ದರುವೂ

ಧಾರು ಹೇಳಿದರಮ್ಮಾ ಕೂಸಿನ ಸುದ್ಧೀ
ಧಾರು ಹೇಳಿದರಮ್ಮಾ ॥ಧಾರು ಹೇಳಿದರಮ್ಮಾ
ಕ್ರೂರ ಕಂಸಗೇ ಸುದ್ದೀ
ಹೂಂಕರಿಸುತ್ತಾ ಮಾರಿಯಂತೆ ಬರುವಾ
ಧಾರು ಹೇಳಿದರಂಮ್ಮಾ ಕ್ರೂರ ಕಂಸಗೆ ಸುದ್ದಿ ॥ಧಾರು ॥

ದೇವಕಿ : ಅಮ್ಮಾ ಸಖಿಯರಿರಾ ಯಿಂಥಾ ಅಂದ ಚೆಂದವುಳ್ಳ ಕಂದನನ್ನು ಕೊಲ್ಲುತ್ತೇನೆಂದು ಯಮ್ಮ ಅಣ್ಣನು ಧಾರನೇ ಭೋರ್ಗರೆದು ಭಾರಿಕೋಪವನ್ನು ತಾಳಿ ಬಹು ರವುದ್ರಾವತಾರನಾಗಿ ಕೊಲ್ಲುವುದಕ್ಕೆ ಬಂದರೇ, ಈ ಅಂದ ಚಂದವುಳ್ಳ ಕೂಸನ್ನು ಹ್ಯಾಗೆ ಕೊಡಬೇಕಂಮ್ಮಾ ತಾಯಿಗಳಿರಾ. ಯೀ ಕೂಸಿನ ಸುದ್ಧಿ ಯಂಥಾ ಪಾಪಿಷ್ಟರು ಹೇಳಿದರಪ್ಪಾ ಸಾರಥಿ ॥ಅಪ್ಪಾ ಸಾರಥಿ, ಆವತ್ತಿನ ದಿನ ಸತಿಪತಿಯೀರ‌್ವರೂ ನಮ್ಮ ಅಣ್ಣನ ಖಡ್ಗಕ್ಕೆ ಆಹುತಿಯನ್ನು ಕೊಡುತ್ತೇವೆ ಯೆಂದು ಭಾಷೆಯನ್ನು ಕೊಟ್ಟಿದ್ದೆವೂ, ಯಿವತ್ತಿಗೇ ತಪ್ಪಲಿಕೆ ಬಾರದೂ. ಈ ಕೂಸನ್ನು ತೆಗೆದುಕೊಂಡು ಹೋಗಿ ನಮ್ಮ ಅಣ್ಣನ ಖಡ್ಗಕ್ಕೆ ನಾನು ಕೊಟ್ಟರೆ ನನಗೆ ಪಾಪ-ನೀನು ಕೊಟ್ಟರೆ ನಿನಗೆ ಪಾಪ. ಆದ್ದರಿಂದ ಮೇಲಕ್ಕೆ ಹಾರಿಸುವಂಥವನಾಗೋ
ಸಾರಥಿ.

ಕಂಸ : ಯಲೈ ಸಾರಥಿ. ಇದು ಹೆಣ್ಣು ಕೂಸೊ ಗಂಡು ಕೂಸೊ ನಿನ್ನ ನೇತ್ರಗಳಿಂದ ದ್ರಿಷ್ಟಿ ಪೂರ್ತಿಯಾಗಿ ನೋಡೋ ಸಾರಥಿ.

ದರುವೂ

ಹಿಡಿ ಹಿಡೀ ಸಾರಥಿ ಈಗಾ ಕಡು ದುರುಳಾ
ಶಿಶುವಿನಾ ಕಡಿದು ಬಿಡುವೆ ನೋಡೋ
ಈಗಾ ಬೇಗಾ ಕಡುಬೇಗಾ ॥

ದ್ವಿಪದೆ

ಯಲೋ ಯಲೋ ಭ್ರಷ್ಟ ಕಂಸನೆ ಕೇಳೋ
ಯಿಷ್ಟ್ಯಾಕೆ ಯನ್ನಯ ಮ್ಯಾಲೆ ಕಡುಕೋಪ
ನಿನ್ನ ವೈರಿಯು ಶ್ರೀ ಕೃಷ್ಣನು
ಗೋಕುಲದಲ್ಲಿ ದಿನಕೊಂದು ಛಾಯವಾಗಿ ಬೆಳೆಯುವನು
ಈ ಮಾತು ನಿನ್ನ ಸರಗಿಗೆ ಗಂಟಿಕ್ಕೆಂದು
ದುರ್ಗಿ ನುಡಿದು ಬೈಲಾದಳೂ ॥

ದರುವೂ

ಹರನೇ ನಿನ್ನ ನಂಬಿದುದಕೇ ಪೊರೆ
ಯದೋದೆ ನಯನೇ – ಹರನೇ
ಪೊರೆವಂತೆ ಮಾಡಿದ ಮುರಹರನೇ
ಪಾರ್ವತೀಶ ಹರನೆ ॥

ತಂಗಿ ದೇವಕಿಯಳನ್ನು ಹಿಂದೆ ಸೆರೆಮನೆ
ಯೊಳಗಿಟ್ಟೆ ಭಂಗವೂ ಬಂತಯ್ಯೋ
ಯನಗೆ ತುಂಗ ವಿಕ್ರಮ ನಿನ್ನಾಜ್ಞೆಗೊ ಡೆಯೆ ಹರನೆ ॥

ಶ್ರಿಷ್ಟಿ ಪಾಲಕರೊಳಗೆ ನಾನು ಶ್ರೇಷ್ಠನೆನಿಸಿಕೊಂಡು
ಬಂದೆ ಕಷ್ಟವೂ ಬಂತಯ್ಯೋ
ಯನಗೆ ಶ್ರಿಷ್ಟಿಕರ್ತನೆ ಕಾಯೋ ಈಗಾ ॥

ವುಗ್ರಸೇನ ಭೂಪತಿಯ ಗರ್ಭದಲ್ಲಿ
ಜನಿಸಿ ನಾನು ನಿರ್ಭಯದ
ಧೈರ‌್ಯದಿಂದಾ – ತಬ್ಬಲಿ ಮಗನಾದೆನಯ್ಯೋ ॥

ಯಾರಿಗೇಳಲಿ ನಾನು
ಯೆನ್ನ ಮೋರೆ ತೋಯಿದಂತೆ
ಆಯಿತೋ ಮುರಹರನೆ ಕಾಯೋ
ಈಗಾ ವುರುಗ ಭೂಷಣಾ ಪರಮ ಪೋಷಣಾ ॥ಹರನೇ ॥5 ॥

ಕಂಸ : ಅಯ್ಯೋ ಹರಹರಾ ಶಿವಶಿವಾ, ಯೇನು ವಿಪತ್ತು ತಂದು ವೊಡ್ಡಿದೋ ಸಾಂಬಶಿವಾ, ನಾನು ಎಷ್ಟು ಮಾಡಿದರೂ ಯನ್ನ ಕಾರ್ಯಂಗಳೆಲ್ಲಾ ಭ್ರಷ್ಟವಾಗಿ ಹೋಯಿತಲ್ಲೋ ಸಾರಥಿ ॥ಯೀ ವ್ಯಾಳೆಯಲ್ಲಿ ಹ್ಯಾಗೆ ಮಾಡಲೋ ಸಾರಥಿ ॥ಯಲಾ ಸಾರಥಿ ಬಂದಿದ್ದೆಲ್ಲಾ ಬರಲಿ ಸಾಂಬಶಿವನ ದಯವೊಂದಿರಲೀ ಸಾಯುವವನಿಗೆ ಸಮುದ್ರ ಮೊಣಕಾಲುದ್ದವೆಂದು ಹೇಳಿರುವರು. ಈ ವ್ಯಾಳೆಯಲ್ಲಿ ನಮ್ಮ ತಂಗಿ ಪೂತನಿ ಯಿರುವಳಲ್ಲಾ – ಆ ಪೂತನಿಯನ್ನು ಕರೆಸಿ ವೊಂದೊಂದು ಕುಚಕ್ಕೆ ಏಳೇಳು ಖಂಡುಗಾ ವಿಷವನ್ನು ತುಂಬಿಕೊಂಡು ಆ ಗೋಕುಲಕ್ಕೆ ಹೋಗಿ ಆನಂದ ಗೋಪಾಲಕನನ್ನು ಕೊಂದು ಬಾರೆಂದು ಹೇಳುವೆನು. ತೀವ್ರವಾಗಿ ಈ ಸಭಾಂತರಕ್ಕೆ ಬರಹೇಳೋ ಸಾರಥಿ॥

(ಪೂತನಿ ಬರುವಿಕೆ)

ಸಾರಥಿ : ತಾವು ಬಂದು ನಿಂದಿರತಕ್ಕಂಥವರು ಧಾರಂಮ್ಮೋ ಧಾರೂ ॥

ಪೂತನಿ : ಯಲಾ ಮಾನವಾ ಯಮ್ಮನ್ನು ಧಾರೋ ಯೆಂದು ಭಯವಿಲ್ಲದೆ ಕೇಳುವದಕ್ಕೆ ನೀನು ಧಾರೋ ಸೇವಕಾ ॥ಯಲಾ ಸಾರಥಿ ನಾವು ಧಾರೆಂದರೆ ಖಂಡುಗ ಅಕ್ಕಿ ಅನ್ನವನ್ನೇ ವುಂಡು ಡರ‌್ರನೆ ತೇಗಿ ಬರ‌್ರನೆ ಹೂಸಿ ದೊಡ್ಡ ದೊಡ್ಡ ಗಿರಿಗಳನ್ನು ಅಪ್ಪಳಿಸಿ ಕುಪ್ಪಿಗಳನ್ನಿಡುವ ಕಂಸ ರಾಜೇಂದ್ರನಿಗೆ ತಂಗಿಯಳಾದ ಪೂತನಿಯೆಂದು ತಿಳಿಯೋ ಸಾರಥಿ ॥ಯಲಾ ಸಾರಥಿ, ಯೀ ರಂಗಸ್ಥಳಕ್ಕೆ ನಾನು ಬಂದ ಪರಿ ಹ್ಯಾಗಂದರೆ ನಮ್ಮ ಅಣ್ಣೈಯ್ಯನಾದ ಕಂಸ ರಾಜೇಂದ್ರನು ಚಿಂತಾಕ್ರಾಂತನಾಗಿ ಯಿರುವನಂತೆ. ಅದು ತಿಳಿಯುವ ಕಾರಣಾ ಬಂದು ಯಿರುತ್ತೇನೆ ಜಾಗ್ರತೆ ಭೇಟಿ ಮಾಡಿಸೊ ಸಾರಥಿ.

ಪೂತನಿ : ನಮೋನ್ನಮೋ ಹೇ ಅಣ್ಣೈಯ್ಯ.

ದರುವೂ

ಅಣ್ಣಾ ಯಾತಕೆ ಮುಖ ಬಣ್ಣಾಗುಂದಿ
ರುವದೂ ಖಿನ್ನನಾಗಿರುವದೂ ಯೇನೋ
ಗಿರಿಯಲ್ಲಿ ಬಲವಾದ ದೊರೆತಾನ ನಮಿ
ಗುಂಟೂ – ಧರಿಸೋ ಧೈರ‌್ಯಾವಾ ಈಗಾ ಬೇಗಾ ॥

ಪೂತನಿ : ಹೇ ಅಣ್ಣಯ್ಯ, ನಿನ್ನ ಮುಖವು ಕಂದಿ ಕುಂದಿ ಕಪ್ಪಾಗಿರುವುದಕ್ಕೆ ಯೇನು ಕಾರಣ. ಧಾವ ಜಟ್ಟಿಗಳು ಬಂದು ನಿನ್ನ ಮೇಲೆ ಮುಷ್ಟಿ ಯುದ್ಧಕ್ಕೆ ನಿಂತಿರುವರೋ ಹ್ಯಾಗೆ, ಸವಿಸ್ತಾರವಾಗಿ ಹೇಳೋ ಅಣ್ಣಾ ನೀತಿಶಾಸ್ತ್ರವಂ ಬಲ್ಲ ಕಾರುಣ.

ಕಂಸ : ಹೇ ತಂಗಿಯಾದ ಪೂತನಿಯೇ ಕೇಳು ನಿನ್ನನ್ನು ಈ ಶೃಂಗಾರವಾದ ಸಭಾಂತರಕ್ಕೆ ಕರೆಸಿದ ಕಾರ‌್ಯವೇನೆಂದರೆ ನಾನು ನೆನ್ನೆ ದಿವಸದಲ್ಲಿ ಚಿಕ್ಕ ತಂಗಿಯಾದ, ದೇವಕಿದೇವಿಯನ್ನು ವಸುದೇವರಾಯನನ್ನು ಕರೆಸಿ ಪುಣ್ಯಾ ಪಡಿಯಬೇಕೆಂದು ಕನ್ಯಾದಾನವನ್ನು ಮಾಡಿ ಲಗ್ನವನ್ನು ಮಾಡಿದೆನು. ಇದೂ ಅಲ್ಲದೆ – ಅತಿ ವಿಜೃಂಭಣೆಯಿಂದ ಮೆರವಣಿಗೆ ಸಹ ಮಾಡಿಸಿದೆನು. ಆ ಕಾಲದಲ್ಲಿ ಆಕಾಶವೇಣಿ ನುಡಿದಳು ಏನಂದರೆ, ಯೀ ದೇವಕಿ ಗರ್ಭದಲ್ಲಿ ಏಳನೆ ಗರ್ಭದ ಶಿಶುವು ವುದ್ಭವಿಸಿ ನಿನ್ನ ಸಂಹರಿಸುತ್ತಾನೆಂದು ನುಡಿಯಲಾಗಿ, ಯೀ ಏಳನೆಯ ಗರ್ಭದಲ್ಲಿ ಹುಟ್ಟಿದ  ಶಿಶುವನ್ನು ಸಂಹಾರ ಮಾಡುವ ಕಾಲದಲ್ಲಿ, ನಿನ್ನ ವೈರಿ ಗೋಕುಲದಲ್ಲಿ ವುಟ್ಟಿರುವನು ಅವನೇ ಸಂಹಾರ ಮಾಡತಕ್ಕವನೆಂದು ನುಡಿದು ಅಂತರಿಕ್ಷದಲ್ಲಿ ಹೊರಟು ಹೋಯಿತು. ಆದ ಕಾರಣ ನೀನು ನಿನ್ನ ಸ್ತನಂಗಳಿಗೆ ವಿಷವನ್ನು ತುಂಬಿಕೊಂಡು ಆ ವಿಷದ ಮೊಲೆಯನ್ನುಣಿಸಿ ಆ ವೈರಿಯನ್ನು ಕೊಂದು ಬರುವಂಥವಳಾಗಮ್ಮ ತಂಗಿ.

ಪೂತನಿ : ಅದೇ ಪ್ರಕಾರ ಹೋಗಿ ಕೊಂದು ಬರುತ್ತೇನೋ ಅಗ್ರಜಾ ಯೀ ಮಾತು ಸಹಜಾ ॥

ಕಂಸ : ಭಲಾ ಭಲಾ ಹೇ ತಂಗಿ, ಇನ್ನೂ ಆಲಸ್ಯ ಮಾಡಲೇನು ಕಾರಣಾ ಜಾಗ್ರತೆಯಿಂದ ಗೋಕುಲಕ್ಕೆ ಪೋಗಿ ಆನಂದ ಗೋಪಾಲನನ್ನು ಕೊಂದು ಬರುವಂಥವಳಾಗಮ್ಮಾ ತಂಗಿ ॥

ದರುವು

ಜೋ ಜೋ ಜೋ ಯೆಂದು ಜೋಗುಳವ
ಪಾಡಿರೇ ಸೋಜಿಗವಾದ ರಂಗೈಯ್ಯಗೆ ॥
ಬೇಗಾನೆ ಮಲಗಿಸಿರೆ ಬೆಣ್ಣೆವುಂಬೊ
ರಂಗೈಯ್ಯಗೆ ಯಣ್ಣೆಯು ಹಾಕೀರೆ
ತಣ್ಣಾನೆ ಕಾಡಿಗೆಯ ತೆಗೆದು – ಕಣ್ಣೀಗೆ
ತೀಡೀರೆ ಹಂಸತೂಲಿಕದ – ಹಾಸಿಗೆಯು
ಹಾಸೀರೆ ಅಚ್ಚುತಂಗೆ ಹಾಲ್ಕುಡಿಸಿ
ಚಪ್ಪಾನೆ ಮಲಗಿಸೀರೆ ॥

ಪೂತನಿ : ನಮೋನ್ನಮೊ ಸಭಾಸ್ಥಾನವೆ.

ದರುವೂ

ಮಗುವೀನ ಕೊಡಿರಮ್ಮಾ ಮೊಲೆಹಾಲು ಕೊಡುವೇನು
ಮಗುವಿಲ್ಲದಿಂದೀಗೆ ॥ಮೂರು ದಿನವಾಯಿತಮ್ಮಾ॥

ಹಡದಾ ಅಣುಗಾನ ಬಿಟ್ಟು – ಅಡವಿ ಪಾಲಾ
ದೆನಮ್ಮಾ – ಅಯ್ಯಯ್ಯ – ಆಯಾಸವಾದ
ವಮ್ಮಾ ಕುಚಗಳೂ ಕೈಯ್ಯ ಮುಟ್ಟಲಿ
ಗೊಡವೂ ಕರಗೂತೀ ಹಾಲಮ್ಮಾ ಮಗುವೀನ ಕೊಡಿರಮ್ಮಾ ॥ ॥

ಪೂತನಿ : ಅಮ್ಮಾ ತಾಯಿಗಳಿರಾ, ಮಗುವಿಲ್ಲದಿಂದಿಗೆ ಮೂರು ದಿನಗಳಾಯಿತಮ್ಮಾ ತಾಯೇ ॥ಯನ್ನ ಕುಚಗಳೋಳ್ ಹಾಲು ಭೋರ್ಗರಿಸುವವೂ – ವಂದರಗಳಿಗೆ ಮಗುವನ್ನು ಕೊಡುವಂಥವ ರಾಗಿರಮ್ಮಾ ತಾಯಿಗಳಿರಾ.

ದರುವೂ

ವುಟ್ಟಿದೆ ಮಧುರೆಯೋಳ್ – ಬಿಟ್ಟೋಡಿದೆ
ಗೋಕುಲಕ್ಕೆ ವಿಕಟ ಪೂತನಿಯ
ಕುಚವನ್ನು ಮುಟ್ಟಿ ಪೀರಿದೆ – ಕೋಲನ್ನ ಕೋಲೆ॥
ಸತ್ತು ಹೋಗೆಲೆ ಮೂಳೆ
ಛಿ ಹೋಗಾಲೆ ಜೀವಾಳೆ – ಕತ್ತೆ ಕಾಲಿಗೆ ಕಟ್ಟಿ
ಯಳೆಯೀರಿ ಇವಳನ್ನು ಕೋಲನ್ನ ಕೋಲೆ ॥

ಕೃಷ್ಣ : ಯಲಾ ಸಾರಥಿ, ಆ ಭ್ರಷ್ಟ ಕಂಸಾಸುರನ ತಂಗಿಯಾದ ಪೂತನಿಯೂ ಹಾಲು ಕುಡಿಸುವೆನೆಂದು ವಿಷದ ಮೊಲೆಯಂ ಕೊಟ್ಟು ಯನ್ನ ಕೈಯಲ್ಲಿ ಪ್ರಾಣವನ್ನು ತೆಗೆಸಿಕೊಂಡಳು. ಆದ್ದರಿಂದ ಇವಳ ಮುಖವನ್ನು ನೋಡಲಾಗದು. ಗಾರ್ಧಭದ ಕಾಲಿಗೆ ಕಟ್ಟಿ ಆಚೆಗೆ ಯಳೆಸುವಂಥವನಾಗೋ
ಸಾರಥಿ.

ಕಂಸ : ಯಲಾ ಸಾರಥಿ – ನಮ್ಮ ತಂಗಿಯಾದ ಪೂತನಿಯೂ ಕೃಷ್ಣನನ್ನು ಕೊಲ್ಲುವೆನೆಂದು ಹೋದವಳು ಈವತ್ತಿಗೆ ಮೂರು ದಿವಸವಾಯಿತು. ಇನ್ನೂ ಬರಲಿಲ್ಲವಲ್ಲೊ ಸಾರಥಿ ॥ಯಲಾ ಸಾರಥಿ ನಮ್ಮ ತಂಗಿಯ ಕೈಯ್ಯಲ್ಲಿ ಕೃಷ್ಣನು ಸತ್ತನೇನೋ ಸಾರಥಿ.

ಸಾರಥಿ : ಕೃಷ್ಣನ ಕೈಲಿ ನಿಮ್ಮ ತಂಗಿ ಸತ್ತಳೈಯ್ಯ ರಾಜಾ.

ಕಂಸ : ಹರಹರಾ ಶಿವಶಿವಾ, ಕೃಷ್ಣನ ಕೈಯಲ್ಲಿ ನಮ್ಮ ತಂಗಿ ಸತ್ತು ಹೋದಳೇನೋ ಸಾರಥಿ ॥ಹರಹರಾ ನಾನು ವೋರ‌್ವನಾದೆನು – ಇನ್ನು ಹ್ಯಾಗೆ ಮಾಡಲೋ ಸಾರಥಿ.

 

ಗೊಲ್ಲಕಥೆ ಪ್ರಾರಂಭ

ದ್ವಿಪದೆ ಮಧ್ಯಮಾವತಿ ರಾಗ

ಶ್ರೀ ಗಜಮುಖನನು ಪ್ರಾರ್ಥಿಸಿ ಬೇಗದಿ ಸರಸ್ವತಿಯ ಪಾದಕ್ಕೆ
ಕರಗಳಂ ಮುಗಿಯುತಾ ಬೇಗದಿ ಮತಿಯನು ಬೇಡುವೆ
ಸೂಗೂರು ಪ್ರಾಣೇಶನಿಂದು ಪಾಲಿಪುದು ದಯದಿ
ಶ್ರೀ ಗೊಲ್ಲ ಚರಿತ್ರೆಯ ಭಾಗವತನು ಸರಸದಿಂದಾ ॥
ಬುಧಜನ ಮೆಚ್ಚಲ್ ಈ ಗೊಲ್ಲ ಕಥೆಯನು
ಸೂಗೂರು ಪ್ರಾಣೇಶನ ದಯದಿ ಸರ‌್ವರು ಕೇಳೀ.

ದ್ವಿಪದೆ

ಶ್ರೀ ರಮ್ಯ ವೇದಾಂತ ಶಿದ್ದಾಂತಮಹುದು
ಸಾರವಾದ ಹರಿಕಥೆ ಸಾರದೊಳಗೊಂದು
ಯೀ ಕಥೆಗೆ ಆಧಾರಕರ್ತ ಪ್ರಾಣೇಶನನು
ಬೇಕೆಂದು ಪೇಳಿಸಿದುದಾಂ ಪೇಳ್ವ
ಮುದದೀ ಗೊಲ್ಲ ಕುಲದವರ ಕಥೆಯನು
ಯಲ್ಲರಿಗು ಗೋಚರವೆ ಮೆಲ್ಲನೆ ವಿವರಿಪೆ ಬಲ್ಲವರು ಮೆಚ್ಚಲ್
ಪ್ರಾತಃಕಾಲದೊಳೆದ್ದು ಪರಮಾತ್ಮನಾದ ಗೋಪಾಲಕೃಷ್ಣನಂ
ಹೃದಯದೋಳ್ ಸ್ಮರಿಸಿ ಮುಖಮಜ್ಜನವನೆ ಮಾಡಿ
ಮಡಿಯನೆ ಉಟ್ಟು ಬೇಗದಲಿ ಬಾಂಜಲದಲಿ ತೊಳದು
ನೂತನ ದಧಿಯನು ನೆರೆ ಭಾಂಡದೊಳಗೆ ಹಾಕಿ
ಕಡಗೋಲು ನೇಣಂ ಪಿಡಿದು ಬೇಕಾದವರ ತಾಳಮದ್ದಳೆ
ಗತಿಯಲಿ ಕಾಲಂದಿಗೆ ಗೆಜ್ಜೆ ಗಲ್ಲುಗಲ್ಲೆನುತ
ಶ್ರೀಲೋಲಚರಿತೆಯು ಶೀಘ್ರದಲಿ ಮನೆ ಮಾಡಿ
ಮೇಲಾದ ನವನೀತ ಮೆಲ್ಲನೇ ತೆಗೆದು
ಬಾಲೆ ಮಜ್ಜನಗೈದು ಬೇಗದಲಿ ನೂತನದ ॥
ನೀಲವರ್ಣದ ಸೀರೆ ಉಟ್ಟು ಬಿಳಿಯ ಕಂಚುಕವ ತೊಟ್ಟು
ಮೇಲಾದ ಜರತಾರಿ ಶರಗು ನಿಂದೆಶೆಯೆಂದು
ಲೋಲಕುಂತಳೆ ತನ್ನ ಬೈತಲೆಯ ಮುತ್ತುಗಳು
ಸಾಲಿಂದ ಶೌರಿಯು ಹೊಳೆವ ಕೇದಿಗೆಯು ಹರಳು
ಬಂಗಾರವೂ ಹಿತದಿಂದಲಿಟ್ಟು ರತ್ನಕೆತ್ತಿದ ವಾಲೆ
ರಮಣೀಯವಾದ ಸ್ವರ್ಣಖಚಿತದ ಬುಗುಡಿ
ಕರ್ಣಬಾವುಲಿಯು ಮುತ್ತಿನಾ ಮೂಗುತಿಯು
ಮುದದಿಂದಲಿಟ್ಟು ರತ್ನಹಾರವು ರಮಣಿ ಚಿಂತಾಕುವಿಟ್ಟು
ವಿಸ್ತಾರಸರಿಗೆಯಂ ಹೊಳೆವ ಕಟ್ಟಾಣಿ ಕೊರಳಲ್ಲಿ
ಪರಿಪರಿಯ ಸರಗಳನೆ ಹಾಕಿ ಬೆರಳಿನಲಿ ವುಂಗುರವು
ತೋಳ ಭಾಪುರಿಯು ಹರಡಿ ಕೈ ಕಂಕಣವು
ಹಸ್ತಕಡಗಗಳು ಸರಿಯಾದ ವಸ್ತುಗಳು ಕರದಲ್ಲಿ ಧರಿಸಿ
ಮೃಗರಾಜ ಮದ್ಯದಿಂತೊಪ್ಪುವ ನಡುವಿಂಗೆ
ಝಗಿಝಗಿಪ ವಡ್ಯಾಣ ಚಲುವೆ ತಾನಿಟ್ಟು
ಕಾಲಂದಿಗೆ ಗೆಜ್ಜೆ ಕಿರಿಪಿಲ್ಲಿ ಮೇಲಾದ
ಸರಪಣಿಯಂ ಮುದದಿಂದಲಿಟ್ಟು ಪ್ರಿಯವಾದ ಸುರಹೊನ್ನೆ
ಹಾರಸರಗಳನು ನುಣ್ಣನೆ ತುರುಬಿಗೆ ನೂತನದಲಿ ಕಟ್ಟಿ
ಮೆರೆಸುವಾ ಪಣೆಯಲ್ಲಿ ಕಸ್ತೂರಿಬಟ್ಟು ಶ್ರೀಗಂಧ
ಶೀಘ್ರದಲಿ ಧರಿಸಿ ಕರ್ಪೂರ ತಾಂಬೂಲನೀಡಿ ರತ್ನ ಕೊಡದಲ್ಲಿ ರಮಣಿ
ಷರಾದಧಿ ವಿಕ್ರಹಿತದಿಂದ ಹೊತ್ತು ಮತ್ತೆ ಗಜಗಾಮಿನಿಯು
ಮೆಲ್ಲನೇ ತನ್ನ ಚಿತ್ತದ ಸೂಗೂರು ಪ್ರಾಣೇಶನ ಸ್ಮರಿಸಿ
ಅರ್ತಿಯಿಂದಲಿ ಬಂದು ತೆರೆಯಲ್ಲಿ ನಿಂದೂ ॥

ದರುವೂ

ಗೊಲ್ಲರಮ್ಮಾ ನಾವೂ ಲೋಕಾದಲ್ಲಿ
ಕ್ಷೀರಾ ಮಾರುವಾರಮ್ಮಾ – ಫುಲ್ಲನಾಭ
ನಾದ ಕೃಷ್ಣಯ್ಯ ಯೆಲ್ಲಿ ಕಾಯ್ದುಕೊಂ
ಡಿದ್ದನಮ್ಮಾ ಗೊಲ್ಲಾರೇನೇ ನಾವೂ ಲೋಕಾ ॥
ಕರ್ಣಾಗೊಲ್ಲಾರಮ್ಮಾ ಪೂರ್ಣ
ಚಂದ್ರಾಮುಖಿ ನೀಲವರ್ಣ ದೈವವಮ್ಮಾ ನಾವು ಲೋಕಾ  ॥
ಪೂಜಾ ಗೊಲ್ಲಾರಮ್ಮಾ
ನಾವು ಮೂಜಗದೊಳಗಧಿಕಾರಮ್ಮಾ
ನಾವೂ ರಾಜುವಾನಾ ಭಾನು ತನ್ನ – ತೇಜದಿಂ
ಸಲಹೂವಾನಮ್ಮಾ ಲೋಕನಾಥ
ಕೇಳೇ ಲೋಕದೊಳೂ ಸೂಗೂರುವಾಸಾನು
ಬೇಕಾದ ಭಕ್ತಿಹಾನಮ್ಮಾ ॥
ಗೊಲ್ಲರೇನೇ – ನಾವೂ ॥

ಕಂಸ : ಯಲಾ ಸಾರಥಿ ॥ಹರಹರಾ ಯೇನು ಮೋಸವಾಯಿತೋ ಸಾರಥಿ ॥ಧರ್ಮವನ್ನು ಪಡೆಯಬೇಕೆಂದದ್ದಕ್ಕೆ ಕರ್ಮವು ಯಿಂದೆಲೆ ಸಂಭವಿಸಿತೋ ಸಾರಥಿ ॥ಯಲಾ ಸಾರಥಿ ಆಲಸ್ಯ ಮಾಡಲೇನು ಕಾರಣವಿಲ್ಲಾ. ಆ ಗೋಕುಲದಲ್ಲಿ ಯಿರುವ ಗೋಪಾಲಕೃಷ್ಣನನ್ನು ನಿಮ್ಮ ಮಾವನಾದ ಬಲ್ಲಿದ ಕಂಸನು ಬಿಲ್ಲು ಹಬ್ಬ ಮಾಡುವನೆಂದು ಮೆಲ್ಲನೆ ಕರೆತಾರೈ ಸಾರಥಿ.

ಸಾರಥಿ : ಸ್ವಾಮಿ ಕೃಷ್ಣಮೂರ್ತಿ, ನಿಮ್ಮ ಮಾವನಾದ ಕಂಸಾಸುರನು ನಿಮ್ಮನ್ನು ಕರೆದುಕೊಂಡು ಬರುವಂತೆ ಅಪ್ಪಣೆಯಾಗಿದೆ ಸ್ವಾಮಿ.

ಕೃಷ್ಣ : ನಮೋನ್ನಮೋ ಮಾವೈಯ್ಯ, ನನ್ನನ್ನು ಯೀ ಸನ್ನಿಧಿಗೆ ಕರೆಸಿದ ಕಾರ‌್ಯವೇನೈ ದೊರೆಯೇ ನಿಮಗ್ಯಾರು ಸರಿಯೇ.

ಕಂಸ : ಯಲಾ ಸಾರಥಿ, ನಮ್ಮ ಅರಮನೆ ದ್ವಾರದಲ್ಲಿ ನಿಂತು ದೀರ್ಘದಂಡ ನಮಸ್ಕಾರಗಳಂ ಮಾಡುವರು ಧಾರೋ ಸಾರಥಿ.

ಸಾರಥಿ : ತಮ್ಮ ಸೋದರಳಿಯನಾದ ಕೃಷ್ಣಮೂರ್ತಿಗಳು ಬಂದಿದ್ದಾರೈ ದೊರೆಯೇ ನಿನಗಿದು ಸರಿಯೇ.

ಕಂಸ : ಭಲಾ ಭಲಾ ಹಾಗಾದರೆ ಯಿವನೇನೋ ಕೃಷ್ಣನು. ಹಾಗಾದರೆ ಯಿವನ ಸಾಹಸವಂ ನೋಡುವೆನೋ ಸಾರಥಿ ॥ಯಲಾ ಸಾರಥಿ ಗೋಕುಲದಲ್ಲಿ ದನಗಳನ್ನು ಕಾಯುತ್ತಿದ್ದ ಗೊಲ್ಲನಿವನೇನೋ, ಗೊಲ್ಲರ ಮನೆಯಲ್ಲಿ ಹಾಲು ಮೊಸರು ಕದ್ದು ತಿನ್ನುವ ಗೊಲ್ಲನಿವನೇನೋ ॥ಯಲಾ ಕೃಷ್ಣ ಯಮ್ಮ ಹೆಣ್ಣು ಮಕ್ಕಳ ಗರ್ಭದಲ್ಲಿ ಪುಟ್ಟಿ ನಮಗೆ ಶತ್ರುವಾಗಿ ಬಂದು ನಿಂತಲ್ಲಾ, ಬಂದರೇನು ಅನುಮಾನವಿಲ್ಲಾ ಮುಷ್ಟಿ ಯುದ್ಧಕ್ಕೆ ನಿಲ್ಲೋ ಕಳ್ಳ ಕೃಷ್ಣ.

ದರುವೂ

ನಡದು ಬಾರೆಲೊ ಕಡಲಶಯನಾ
ಅಡಿಗಳೆರಡು ಖಡ್ಗದಿಂದಾ ಕಡಿದು
ಬಿಡುವೆ ನೋಡೊ ಯೀಗ – ಹರುಷ
ದಿಂದಾಲಿ ಪರಾಕ್ರಮದಿಂದಾಲಿ ॥

ದರುವೂ

ಮಾವನೆಂದು ಬಂದರೆ ಪಂಥದ
ಮಾತಾಡುವರೇನೊ ಬಿಲ್ಲು ಹಬ್ಬವ ತೋರೊ
ಯೀಗ ಹರುಷದಿಂದಾಲಿ ಪರಾಕ್ರಮದಿಂದಾಲಿ ॥

ಕೃಷ್ಣ : ಹೇ ಮಾವಾ, ಸೋದರಮಾವ ಕರೆಸಿದನೆಂದು ಸಂತೋಷಭರಿತನಾಗಿ ಬಂದರೆ ಯಿಂಥಾ ಪಂಥದ ಪೌರುಷದ ಮಾತು ಆಡುವಿಯಲ್ಲಾ. ಆಡಿದರೇನು ಅನುಮಾನವಿಲ್ಲಾ. ಯೀಗ ಬಿಲ್ಲು ಹಬ್ಬವ ತೋರೊ ಮಾವಾ ದಿವ್ಯ ಪ್ರಭಾವಾ.

ದರುವೂ

ಯೆಲ್ಲಿ ಬಿಲ್ಲು ಹಬ್ಬ ಬಾರೊ – ಸೊಲ್ಲು
ಅಡಗುವಂತೆ ಹಬ್ಬ ಮೆಲ್ಲನೆ ಬಂತಲ್ಲೋ –
ನಿನಗೆ ಹುಲು ಮಾನವಾ – ನಿಲ್ಲು ನಿಲ್ಲೆಲೊ ಮಾಧವಾ ॥

ಕಂಸ : ಯಲಾ ಕಳ್ಳ ಕೃಷ್ಣ, ಬಿಲ್ಲು ಹಬ್ಬವ ತೋರೆಂದು ಮೆಲ್ಲನೆ ಪೇಳುತ್ತೀಯಲ್ಲಾ ನಿನ್ನ ಕೊಲ್ಲುವದೇ ಸಹಜಾ ಮುಷ್ಟಿಯುದ್ಧಕ್ಕೆ ನಿಲ್ಲೋ ಗೊಲ್ಲಾ.

ಕೃಷ್ಣ : ಯಲಾ ಕಂಸಾ ನಿನ್ನ ಯೀಗಲೆ ಮಾಡುವೆನು ಧ್ವಂಸಾ ನಿನ್ನನ್ನು ಯೀ ರಣಭೂಮಿಗೆ ಬಲಿಯನ್ನು ಕೊಡುವದೇ ಸಹಜಾ ನಿಲ್ಲುವಂಥವನಾಗೋ ಭ್ರಷ್ಟಾ.

ಕಂಸವಧೆಯಿಲ್ಲಿಗೆ ಸಂಪೂರ್ಣ