ದೇವಕಿ : ಅಯ್ಯೋ ಹರಹರಾ ಪಾರ್ವತಿ ಪ್ರಾಣಲೋಲ, ಯೇನು ವಿಪತ್ತು ತಂದೊಡ್ಡಿದೋ, ಸಾಂಬ ಸದಾಶಿವಾ ಅಯ್ಯೋ ಶಂಭುಲಿಂಗನೇ, ಅಪರಿಮಿತವಾದ ಶೋಕಕ್ಕೆ ಅರ್ಹಳಾದೆ. ಯಾರಿಗೆ ಹೇಳಿದರೆ ಯೀ ಬಂಧಾನ ಪರಿಹಾರವಾದೀತೊ. ಶಿವಶಿವಾ ಯೆಲ್ಲಿ ಹೋಗಲಿ ಯೆಲ್ಲಿ ಅಡಗಲಿ ಕಂಣ್ಣಿನೋಳ್ ಜಲವು ಸುರಿದು ತೊಳಲಿ ಬಳಲಿ ಬ್ಯಾಸತ್ತು ಹೋದೆನೇ – ಏನು ಹಗರಣವು ಸಂಭವಿಸಿತೋ ಮಹಾದೇವಾ ನಾನ್ಯಾಗೆ ಸೈರಿಸಲಿ – ತಾಯಿ ತಂದೆಗಳಿರಾ.

ಕಂಸ : ಯಲಾ ಚಾರರಿರಾ. ಯೀ ದೇವಕಮ್ಮನ ಪ್ರಲಾಪವಂ ನೋಡಲಾರೆ. ತಂಗಿಯ ದುಃಖವಂ ಕೇಳಲಾರೇ. ಯೀ ದುಃಖವಂ ಕೇಳಿದರೇ ಯನ್ನ ಹೊಟ್ಟೆಯೊಳ್ ತಳಮಳಗೊಳ್ಳುತ್ತಲಿರುವುದು. ಯೀ ಸಂಕೋಲೆಯನ್ನು ಅತಿಜಾಗ್ರತೆಯಿಂದ ಬಿಡಿಸಿ ಬೇಡಿಯಂ ತಪ್ಪಿಸು. ಯಲಾ ಚಾರರಿರಾ, ತದನಂತರಾ ಯಿವರನ್ನು ಹಾಗೇ ಬಿಡಕೂಡದು. ಈ ಬೀಗ ಬಂಧನೆಯನ್ನು ತಪ್ಪಿಸಿ ಸೆರೆಮನೆಯೋಳ್ ಯಿಡಬೇಕಾಗುತ್ತದೆ. ಬೀಗವಂ ತೆಗಿಸಿ ಯೀ ದೇವಕಮ್ಮನನ್ನು ಯೀ ವಸುದೇವರಾಯನನ್ನು ಸೆರೆಮನೆಯೊಳಗೆ ತಳ್ಳುವಂಥವರಾಗಿರೋ ಚಾರರಿರಾ ॥

ದರುವೂ

ಇರಲಾರೆ ಇರಲಾರೆ ಯೀ ಸೆರೆಮನೆ
ಯೋಳ್ ಇರಲಾರೇನಣ್ಣಾ  ॥
ಗಂಡಾನ ಬಿಡುವೇ ಮುಂಕೊಂಡು
ನಿನ್ನಾಜ್ಞೆಯೋಳಿರುವೇ ॥
ಮಂಡೆ ಬಾಗಿಸಿಕೊಂಡೂ ಮನೆಯೊಳಾಗಿ
ರುವೇನೂ ॥ಹಿಂಡೂ ಜನರೊಳು
ನಿನ್ನಾ ದಂಡಿಸೂರೇನಣ್ಣಾ  ॥ಇರಲಾ ॥

ದೇವಕಿ : ಹೇ ಅನುಜನಾದ  ಕಂಸಾಸುರನೇ ಕೇಳು, ಯೀ ಘೋರ ಸೆರೆಮನೆಯೋಳ್ ನಾನಿರಲಾರೆ॥ಹೇ ಅಂಣೈಯ್ಯ ಹೆಣ್ಣು ಮಕ್ಕಳಲ್ಲಿ ದ್ರೋಹಾಂತರವಾದ ಕಷ್ಟವಂ ಇಡಬಾರದೆಂದು ಈ ಶ್ರೇಷ್ಟ ಸಭಾಸದರೂ ಹೇಳಿರುವರೂ. ಸಕಲವೂ ಬಲ್ಲಂಥ ಪ್ರಚಂಡರು ಕುಳಿತು ಈ ಅಖಂಡವಾದ ಬಂಧನಕ್ಕೆ ಈಡು ಮಾಡುವರೇನೋ ಅಂಣೈಯ್ಯ. ಯೀ ಸಭಾಜನರು ನಿನ್ನನ್ನು ಆಡಿಕೊಂಬುವರು. ಬ್ಯಾಡ ಬ್ಯಾಡವೋ ಯೀ ಮೂಢಬುದ್ಧಿಯೂ ಬೇಡಿಕೊಂಬುವೆನು. ಯನ್ನ ಸೆರೆ ಪರಿಹಾರ ಮಾಡೋ ದೊರೆಯೇ – ನಿನಗ್ಯಾರು ಸರಿಯೇ ॥

ಕಂಸ : ಅಮ್ಮಾ ತಂಗಿ, ನಾನು ಹಿಡಿದ ಛಲವಂ ಬಿಡುವನಲ್ಲಾ. ಹರಿಹರ ಬ್ರಹ್ಮಾದಿ ದೇವತೆಗಳಾಗಲೀ ಸುರ ನರ ಗರುಡ ಗಂಧರ್ವ ಸುರಸಿದ್ಧ ಸಾಧ್ಯ ಅಮರಗಣಂಗಳು ಬಂದು ಹೇಳುವ ಸಾಮರ್ಥ್ಯ ಯನ್ನಲ್ಲಿದ್ದು, ಯಾರು ಹೇಳಿದರೂ ನಾನು ಕೇಳುವನಲ್ಲ ತಿಳಿಯಿತೋ ಯೀ ಸೆರೆಮನೆಯು ಯೆಂದಿಗೂ ತಪ್ಪುವುದಿಲ್ಲ. ನಿನ್ನ ಕನಸಿನೋಳ್ ಬಿಡುವೆನೆಂಬುವದು ಮರಿಯಮ್ಮಾ ತಂಗೀ ಮಂಗಳಾಂಗೀ ॥ ಯಲಾ ಚಾರರೇ ನಾನು ಮಧುರೆಯೋಳ್ ಅರಮನೆಗೆ ಹೋಗುವೆನು. ಯನ್ನ ತಂಗಿಯ ಗರ್ಭದೋಳ್ ಹೆಣ್ಣು ಕೂಸು ವುಟ್ಟಲೀ ಗಂಡು ಕೂಸು ವುಟ್ಟಲೀ, ಅಕಾಲದಿ ಆಜ್ಞೆಯ ನೇಮಿಸಿ ಯಿರುವದೇನೆಂದರೆ ಅರಳೀಮರ ಅಲ್ಲಾಡುವುದು ಕುಕ್ಕುಟ ಕೂಗುವದೂ ಗಾರ್ಧಭ ಧ್ವನಿ ಮಾಡುವದು. ಆ ಸಮಯಕ್ಕೆ ನೀವು ಯೀ ಸೂಚನೆಯನ್ನು ಹೇಳಬೇಕು. ಹಾಗೆ ಹೇಳದಿದ್ದರೆ ನಿಮ್ಮನ್ನು ಕಿವಿಕಾಲ್ ಮೂಗು ಸಹಾ ಕೊಯ್ದು ಕಲ್ಲಿನ ಗಾಣಕ್ಕೆ ಹಾಕಿಸುವೆನು. ತಿಳಿಯಿತೋ ಬಹು ಯಚ್ಚರಿಕೆ, ಬಹು ವುಷಾರ್. ನಾನು ಹೋಗಿ ಬರುವೆನು ಚಾರರಿರಾ.

ದರುವೂ

ಕಂಸ ರಾಜಾ ನಡೆದನು ಮಧುರೆಗೆ
ನಡೆದಾನೂ ಮಧುರೆಗೇ ॥ಸಡಗಾರ
ದಿಂದಾಲೀ ಹಡದಾ ಕೂಸುಗಳನೆಲ್ಲಾ
ಕಡಿದೂ ಝೇಂಕರಿಸುವೆನೆಂದೂ ॥
ನಡೆದಾನು ಮಧುರೆಗೇ॥

 

(ಕೊರವಂಜಿ ಆಗಮನ)

ಕೊರವಂಜಿ : ಅಪ್ಪಾ ಸಾರಥಿ, ಯನ್ನನ್ನು ಧಾರು ಯೆಂದು ಕೇಳುತ್ತೀಯಾ. ಯನ್ನ ನಾಮಾಂಕಿತವು ಯನ್ನ ಕುಲಗೋತ್ರಗಳು ನಿನಗೆ ಹೇಳುವದಿಲ್ಲಾ. ಯೀ ಪಟ್ಟಣದ ದೊರೆಯಾದ ವುಗ್ರಸೇನ ಜರಾದೇವಿ ಗರ್ಭ ಸಂಭೂತಳಾದ ದೇವಕಮ್ಮನನ್ನು ಭೇಟಿ ಮಾಡಿಸಿದರೇ ಹೇಳುವೇ, ಭೇಟಿ ಮಾಡಿಸೈಯ್ಯ ಸಾರಥಿ.

ದ್ವಿಪದೆ

ನಮಗೆ ದೇಶಗಳಿಲ್ಲಾ ನಮಗೆ ಗ್ರಾಮಗಳೂ ಇಲ್ಲ
ನಮ್ಮ ಕುಲಗೋತ್ರಗಳು ಮಾತ್ರ ಚನ್ನಾಗಿ
ಹೇಳುವೆನು ಚಿತ್ತವಿಟ್ಟು ಕೇಳಮ್ಮಾ ನಾಗವೇಣಿ ॥

ದೇವಕಿ : ಅದು ಯೇನು ವಿಸ್ತಾರವಾಗಿ ಪೇಳಮ್ಮಾ ಕೊರವಂಜಿ.

ಕೊರವಂಜಿ : ಅಮ್ಮಾ ದೇವಕಿ – ಗುಣದಲ್ಲಿ ಭಾವಕಿ. ನಾನು ತಿರುಗಿದ ದೇಶಂಗಳನ್ನು ವಿಸ್ತಾರವಾಗಿ ಪೇಳುತ್ತೇನೆ. ವಾಮಭಾಗದಲ್ಲಿ ಕುಳಿತು, ನಿಕರ್ಣ ಶೋಭಿತಳಾಗಿ ಆನಂದದಿಂದ ಕೇಳುವಂಥವಳಾಗಮ್ಮ ಹೇ ಚಂದನಗಂಧಿ.

ದೇವಕಿ : ಹೇಳಬಹುದಮ್ಮಾ ಕೊರವಂಜಿ ॥

ದರುವೂ

ಅಂಗಮಾಗಧ ಕಳಿಂಗಾ ಕೇರಳ
ಘನ ತುರಗ ವೈದರ್ಭಾ ಪಾಂಚಾಳಾ ॥
ಅಂಗಾ-ಬರ್ಬರಾ ಬಂಗಾಳಾ
ಕಾಂಭೋಜ ತುಂಗಾದೇಶಾವಾ ಬಲ್ಲೆ
ಗೌಳಾ ಸಿಂಹಳ ಪಾಂಚಾಳಾ
ಗೋಟಕಲಾಟ ಮಾಳವಾ ಮುಖ್ಯದೇಶಗಳೂ
ಕೇಳೇ ಕಾಮಿನಿ ನಿನಗೇ ಹೇಳಾ ಬಂದೇನು ನೋಡು॥

ಕೊರವಂಜಿ : ಅಮ್ಮಾ ಕಲಕೀರವಾಣಿ, ನಾನು ತಿರುಗಿದ ದೇಶಂಗಳು ವಿಸ್ತಾರವಾಗಿ ಹೇಳುವೆನು ಕೇಳಮ್ಮಾ ನಾಗವೇಣಿ॥

ದ್ವಿಪದೆ

ಅಂಗ – ವಂಗ – ಕಳಿಂಗ – ಕೇರಳ – ಗೌಳ – ವಂಗ – ಬರ್ಭರ – ಬಂಗಾಳ – ಕಾಂಭೋಜ- ಶಿಂಹಳಾ – ಪಾಂಚಾಳ – ನೇಪಾಳಾ – ನೋಟ ಲಲಾಟ – ಕರ್ನಾಟ – ನೀಟಾದ ಪಾಂಡ್ಯ – ದ್ರಾವಿಡ – ಕುಂಭಕೋಣ ಮರಾಟಾ ಮಹಾರಾಷ್ಟ್ರ – ಪುಂಡಲಿ – ಪುಳಿಂದ್ರ – ಮಾಧವಾ ಧವಳ ಯಕ್ಷ ಗಂಧರ‌್ವ – ಯಿಂತೊಪ್ಪ – ಛಪ್ಪನೈವತ್ತಾರು ದೇಶದ – ರಾಜ್ಯದ ಪಟ್ಟದ ರಾಣಿಯರಲ್ಲಿ ನೀಟಾದ ಗದ್ದಿಗೆಯಂ ಪೇಳಿ ಮನವೊಪ್ಪಿಸಿ ಅನೇಕ ವುಡುಗರೆಯಂ ತಂದಂಥ, ಬ್ರಂಹ ಕೊರವಂಜಿಯೆಂಬೋ ನಾಮಾಂಕಿತವು ನಿನಗೆ ತಿಳಿಯಲಿಲ್ಲವೇನಮ್ಮಾ ದೇವಕೀ.

ದರುವೂ

ಬಂದ ಕೊರವಂಜಿಯನ್ನು ಕರೆಸೆನಲು
ವಿಂದ ಬೇಡಿದನೆಲ್ಲ ತರಿಸಿ –
ವಂದನೆಯಂ ಮಾಡಿ ಕುಳ್ಳಿರಿಸಿ ॥
ಕೊರ ವಂಜಿ ದಿಟ ನುಡಿದಳಂಮ್ಮಾ –
ಯಂನ್ನ ಸೆರೆಯು ನೀಗುವದೆಂದಿಗಮ್ಮಾ॥

ದೇವಕಿ : ಅಪ್ಪಾ ಸಾರಥಿ, ದೇವಲೋಕದ ಬ್ರಹ್ಮ ಕೊರವಂಜಿ ಬಂದಿರುವಳು. ಮುತ್ತು ಮಾಣಿಕ್ಯ ಕೆತ್ತಿಸಿದ ಸಿಂಹಾಸನವನ್ನು ತಂದುಹಾಕಿಸಪ್ಪಾ ಸಾರಥಿ ॥ಅಮ್ಮಾ ಕೊರವಂಜಿ, ಯನ್ನಯ ಚಿಂತೆಯು ಯನ್ನಯ ದುಃಖವು ಪರಿಹಾರ ಮಾಡುವಂಥವಳಾಗಮ್ಮ ಕೊರವಂಜಿ.

ದರುವೂ

ಯಲ್ಲರಂತೆ ಕೊರಚೆ ನಾನಲ್ಲ ಕೇಳೆ ಕಂಜಾದ ನೇತ್ರೆ –
ಬಲ್ಲೆ ಮೃತ್ಯಾ – ವಸ್ತ್ರಾಗಾಳನೂ –
ವಲ್ಲಭಾರಾನೋ ಇಸಲೀ ಬಲ್ಲೇ ॥ಯಲ್ಲರಂತೆ   ॥

ಭೂತ ಬ್ರಂಹ್ಮ ರಾಕ್ಷಸರ ಭೀತಿಯನ್ನು ಬಿಡಿಸಲು ಬಲ್ಲೆ –
ಸೋತವರ ಗೆಲಿಸಲು ಬಲ್ಲೆ –
ಸುಳ್ಳು ದಿಟವ ಮಾಡಲು ಬಲ್ಲೆ ॥ಯಲ್ಲರಂತೆ ॥

ಮಾಯಾದಿಂದಾ ಜೈಸಲು ಬಲ್ಲೆ ಮರಣದಾ
ವಸ್ತ್ರಾಗಳು ಬಲ್ಲೆ ಆಯತಾಕ್ಷಿ ವಸ್ತ್ರಾಗಳನೂ
ನೋಯದಂತೆ ತರಿಸಲು ಬಲೆ ಯಲ್ಲರಂತೆ ॥

ಕೊರವಂಜಿ : ಆಹೋ ಸಾಮಜಗಾಮಿನಿಯಾದ ಮಹಾದೇವಿಯೇ ಕೇಳೂ  ನಿನ್ನ ಕಣ್ಣಿಗೆ ನಾನೇನಾದರೂ  ಸುಳ್ಳು ಸಟೆ ಹೇಳುವ ಕೊರಚೆಯಲ್ಲಾ. ಅಂಥ ಸುಳ್ಳು ಮಾತುಗಳು ಹೇಳಿ ಹೊಟ್ಟೆ ವರೆದುಕೊಳ್ಳುವ ಕೊರಚೆಯಲ್ಲಾ ಚನ್ನಾಗಿ ಹೇಳುವೆನು ಕೇಳಮ್ಮಾ ನಾಗವೇಣಿ ॥

ದ್ವಿಪದೆ

ನಾಡಾಡೋ ಕೊರಚೆಯಲ್ಲಾ ಬೇಡುಂಬೊ ಕೊರಚೆಯಲ್ಲಾ
ತಿಂಡಿಯಾಸೆ ಯೆನಗಿಲ್ಲಾ ತಿರದುಂಬೋ ಕೊರವಿಯಲ್ಲಾ
ವುಂಡವೂಟಗಳು ಕಂಡ ಕನಸುಗಳೂ ಕಂಡ ಹಾಗೇ ಹೇಳುವೆನು
ಕೇಳಮ್ಮಾ ಮಂದಗಮನೇ ಭೂತಬ್ರಹ್ಮ
ರಾಕ್ಷಸರ ಭೀತಿಯನ್ನು ಬಿಡಿಸಲು ಬಲ್ಲೆ ಸೋತವರ ಗೆಲಿಸಲು ಬಲ್ಲೆ
ಸುಳ್ಳುದಿಟವು ಮಾಡಲು ಬಲ್ಲೆ ಘಾತಕರ ಹಲ್ಲು ಮುರಿಯಲು ಬಲ್ಲೆ
ಶೀಘ್ರದಿ ನವಗ್ರಹ ಫಲಗಳು ಹೇಳಿಕೊಡಬಲ್ಲೆ ಯಂತ್ರಗಳು ಬಲ್ಲೆ – ತಂತ್ರಗಳು ಬಲ್ಲೆ
ಚಿಂತಾಮಣಿಯು ಬಲ್ಲೆ ಸಂತಾನ ಕೊಡಬಲ್ಲೆ
ಸಾಮುದ್ರಿಕೆ ಬಲ್ಲೆ ಶಿಲ್ಪಶಾಸ್ತ್ರಗಳು ಬಲ್ಲೆ
ಪಕ್ಷಿ ಶಕುನವು ಬಲ್ಲೇ ಯಕ್ಕೆ ಬೆನಕ ಯನಗುಂಟ್ಟು
ನಿಂತಲಗ್ನಕ್ಕೆ ಮುಹೂರ್ತ ನೀಡಬಲ್ಲೆ
ಯಿನ್ನು ಮಿಕ್ಕಾದ ರಕ್ಕಸರನ್ನು ಬಲಿಯನಿಕ್ಕಲು ಬಲ್ಲೆ
ಸೆರೆಯಾಗಿದ್ದವರನ್ನೂ ಸೆರೆಯಿಂದ ಬಿಡಿಸಲು ಬಲ್ಲೆ
ಮಾಯಗಳ ಜೈಸಲು ಬಲ್ಲೆ
ಮರಣವಾಗುವವರನ್ನು ಬದುಕಿಸುವುದು ಬಲ್ಲೆ
ಯೀ ಭೂಮಿಯ ಮ್ಯಾಲೆಯಿರುವ
ದೇವರುಗಳು ಯನಗುಂಟು
ಕುಂತು ನೋಟವು ಕೇಳು ಕುರಿತು ಹೇಳುವೆನು
ಪುಲಕಾರ್ತಿ ಸೋಮೇಶ್ವರನ ಬಲುಮೆಯು ಯನಗುಂಟು
ವೊಂದೇ ಬುದ್ಧಿಯಿಂದಲೀ ಕೇಳಮ್ಮಾ ಮಂದಗಮನೇ ॥

ದರುವೂ

ಮಲ್ಲಿಗೆ ವುವ್ವಿನಾ ಶೀರೆ ತಾರೇ ಪೂಜೆ ಮಾ
ಡುವೇ ನೆಲ್ಲಿ ಮೊರದಾ ತುಂಬ ಮುತ್ತೂ
ತಂದು ನೀಡಂಮ್ಮಾ ॥ಗಂಧ ಧೂಪಾದೀಪವನ್ನು
ತಂದು ನೀಡಂಮ್ಮಾ – ಚಂದದಿಂದಾ
ಅಡಿಕೆ ವೀಳ್ಯವು ತಂದು ನೀಡಂಮ್ಮಾ

ಕೊರವಂಜಿ : ದೇವಕಿ, ನಿನ್ನ ಕಷ್ಠನಿಷ್ಟೂರಗಳು ನೆನಸಿಕೊಂಡು ನಿನ್ನ ಹಸ್ತದಿಂದಾ ಮುತ್ತು ಮಾಣಿಕ್ಯ ಮೊರದ ತುಂಬಾ ತಂದು ಯನ್ನ ಪುಟ್ಟಿಗೆ ನೀಡಮ್ಮಾ. ಮಲ್ಲಿಗೆ ವೂವಿನ ಸೀರೆ ಮೆಲ್ಲನೆ ತಂದು ನೀಡಂಮ್ಮ ದೇವಕಿ  ಗಂಧಧೂಪದಿಂದ ತಾಂಬೂಲ ದಕ್ಷಿಣೆಯು ಸಹ ಭಕ್ತಿಯಿಂದ ತಂದು ನೀಡಮ್ಮಾ ದೇವಕೀ ॥

ಚೂರ್ಣಿಕೇ ಕೊರವಂಜಿ

ಶ್ರೀ ವಿಘ್ನೇಶ್ವರಾ ಪಂಪಾಪುರಾಧೀಶ – ಜೋಗುಳದ ಯಲ್ಲಂಮ್ಮಾ ಭಾಗ್ಯದ ಚಂಡ ಮುಂಡದ ತಾಯಿ ಕೊಲ್ಲಾಪುರದಂಮ್ಮಾ – ಕಂಚಿಕಾಮಾಕ್ಷಿ – ಮದುರ ಮೀನಾಕ್ಷಿ ಚಳಪಿಳರಾಯೋ ಹರಳೀ ಘೋರನಾಥಾ ಕರಿಯ ಘಟ್ಟದರುದ್ರ – ಕರವೀರಭದ್ರಾ ಮಾಗಡಿಗಿರಿರಂಗಾ ಕಾಶೀ ಶಿವಲಿಂಗಾ ವಡ್ಡಿ ಜಗನ್ನಾಥ ಗವಿರಂಗನಾಥ ಕಂಚಿವರದಪ್ಪಾ ಕಾವೇಟಿರಂಗಾ ಅಹೋಬಳೈಯ್ಯ ಹಿರಿಯಾಳು ಆಂಜನೇಯ ಸ್ವಾಮಿ ಶ್ರೀಗುರುರಾಯಾ ಯಿಂಥಾ ದೇವತೆಯರೆಲ್ಲಾ ಯನ್ನ ಬೆನ್ನಿನಲ್ಲಿ ನಿಂತೂ ಸಹಕಾರವಾಗಲಿ ದೇವೀ.

ದರುವೂ

ಅಹುದೇನೇ ದೇವಿ – ಅಹುದೇನಂಮ್ಮಾ
ಅಹುದೇನೇ ದೇವೀ – ಅಹುದೇನೆ
ನಾನು ಕುರಿತೇಳಿದ ಮಾತು ಸರಿಯೆ
ಸುಳ್ಳೇನೇ ॥ಅಹು॥
ಹುಟ್ಟೀದೆ ಮಧುರಾಪುರೀ ಪಟ್ಟಾಣದರಸಿ
ಪೃಥ್ವಿಯೊಳಗೆ ಕನ್ನೇ – ಶ್ರೇಷ್ಟಾ
ಳೆಂದೆನಿಸಿದೇ ॥ಅಹು॥
ಬಿಸರುಹ ಲೋಚನೇ ವಸುದೇವನಿಗೆ ನಿನ್ನಾ
ವಸುಧೆ ಮೆಚ್ಚಲು ಮುನ್ನಾ – ವದಗಿ
ಮಾಡಿದ ಲಗ್ನ ॥ಅಹು ॥
ನಿನ್ನಾ ವೊಟ್ಟೆಯೋಳ್ ಕಂದ ತಾ ಜನಿಸುವನೆಂದೂ
ನಿನ್ನ ಕೊಲ್ಲಲಿ ಬಂದಾ ನಿಂಮ್ಮಣ್ಣ
ಕಂಸಾನೂ ॥ಅಹು॥

ಕೊರವಂಜಿ : ಅಮ್ಮಾ ದೇವಕಿ, ನೀನು ವುಟ್ಟಿದಂಥ ಯೆಂಟನೇ ವರುಷದಲ್ಲಿ ನಿಮ್ಮಣ್ಣನಾದ ಕಂಸಾಸುರನು ಕನ್ಯಾದಾನವಂ ಕೊಟ್ಟು ಲಗ್ನವನ್ನು ಮಾಡಿದ್ದು ಸುಳ್ಳೊ ದಿಟವೋ ಮತ್ತು ನಿನ್ನ ವಟ್ಟೆಯೋಳ್ ಗಂಡು ಕೂಸು ವುಟ್ಟುವದೆಂದು ವಚನವಂ ಕೇಳಿ ನಂಬಿ ನಿನ್ನ ಕೊಲ್ಲುವದಕ್ಕೆ ಬಂದಿದ್ದು ಸುಳ್ಳೊ ದಿಟವೊ, ಯಿನ್ನು ಮುಂದಿನ ಯೋಚನೆಗಳು ವಿಸ್ತಾರವಾಗಿ ಹೇಳುವೆನು ಕೇಳಮ್ಮಾ. ನಿನ್ನ ಎಂಟನೇ ಗರ್ಭದಲ್ಲಿ ಶ್ರೀ ಕೃಷ್ಣ ಭಗವಂತನು ವುಟ್ಟಿ ಆ ತುಂಟ ಕಂಸಾಸುರನಂ ಕೊಂದು, ನಿಮ್ಮ ಕಂಟಕ ಯಾವತ್ತೂ ಪರಿಹರಿಸುವನಮ್ಮಾ ದೇವಕೀ – ನಾನು ಹೋಗಿ ಬರುವೆ ಅಪ್ಪಣೆಯನ್ನು ದಯಪಾಲಿಸಮ್ಮಾ ನಾಗವೇಣೀ.

ದರುವೂ

ಸಾಗಿದಾಳು ಕೊರವಂಜಿ – ಸೋಗೇ
ಕಣ್ಣಿನ ಬಾಲೇ – ತತ್ತಾಥೈಯೆಂದು –
ಸಾಗಿದಳೂ ಕೊರಾವಂಜೀ ॥

ದರುವೂ

ವಂದಾನೆ ತಿಂಗಳಿಗೇ – ವಂದಾನೆ
ಭ್ರಮಿಶಾಳೋ – ಗಂಧಕಸ್ತೂರಿ ಪರಿಮಾಳಾ – ರಾಮಾ ॥

ದೇವಕಿ : ಅಮ್ಮಾ ತಾಯಿಗಳಿರಾ, ನನಗೆ ಗರ್ಭತುಂಬಿ ವಂದನೇ ತಿಂಗಳಾಯಿತು. ಗಂಧ ಕಸ್ತೂರಿ ಪುನುಗು ಜವ್ವಾಜಿಯಂ ತಂದು ಕೊಡುವಂಥವರಾಗಿರಮ್ಮಾ ತಾಯಿಗಳಿರಾ.

ದರುವೂ

ಯರಡಾನೇ ತಿಂಗಳಿಗೆ – ಯರಡಾನೇ
ಭ್ರಮಿಶಾಳೋ – ಪರಡಿ ಪಾಯಸ
ಪರಮಾನ್ನ – ರಾಮಾ ॥

ದೇವಕಿ : ಅಮ್ಮಾ ತಾಯಿಗಳಿರಾ, ಯರಡನೇ ತಿಂಗಳಾಯಿತು. ಪರಡಿ ಪಾಯಸ ಪರಮಾನ್ನ ಮಂಡಿಗೆ ಗಾರಿಗೆ ಘೃತ ಮುಂತಾದ ಯಿಂತೊಪ್ಪ ಅನ್ನವನ್ನು ವುಣಬಡಿಸಿರಮ್ಮಾ ತಾಯಿಗಳಿರಾ ॥

ದರುವೂ

ಮೂರಾನೆ ತಿಂಗಾಳಿಗೆ – ನಾರಿ
ಮೂರಾನೆ ಬ್ರಮಿಶಾಳೋ – ಮೂಡಾಲು
ದೇಶಾದ ಮಗಿ ಮಾವಿನಹಣ್ಣ ॥

ದೇವಕಿ : ಅಮ್ಮಾ ತಾಯಿಗಳಿರಾ, ಮೂರನೆ ತಿಂಗಳಾಯಿತು. ಮೂಡಲ ದೇಶದಲ್ಲಿರುವ ಮಗಿ ಮಾವಿನಹಣ್ಣ ತಂದು ಕೊಡಿರಮ್ಮಾ ತಾಯಿಗಳಿರಾ.

ದರುವೂ

ನಾಲ್ಕಾನೇ ತಿಂಗಳಿಗೆ ನಾಲ್ಕಾನೆ ಬ್ರಮಿಶಾಳೋ
ಕಾಚೀಯಾ ಹಣ್ಣು ಕೈ ತುಂಬಾ ರಾಮಾ ॥

ದೇವಕಿ : ಅಮ್ಮಾ ತಾಯಿಗಳಿರಾ, ನಾಲ್ಕನೆಯ ತಿಂಗಳಾಯಿತು. ಕಾಚಿಯ ಹಣ್ಣು ಕೈತುಂಬಾ ತಂದು ಕೊಡಿರಮ್ಮಾ ತಾಯಿಗಳಿರಾ.

ದರುವೂ

ಐದಾನೆ ತಿಂಗಳಿಗೇ ಐದಾನೆ ಬ್ರಮಿಶಾಳೋ
ಕೊಯ್ದ ಮಲ್ಲಿಗೆ ಜಾಜಿಯಲೆ ದಂಡಿರಾಮಾ ॥

ದೇವಕಿ : ಅಮ್ಮಾ ತಾಯಿಗಳಿರಾ, ಐದನೆ ತಿಂಗಳಾಯಿತು. ಕೊಯ್ಸಿದ ಮಲ್ಲಿಗೆ ಜಾಜಿ ಇಂಥಾ ಅತಿ ಚಿತ್ರವಾದ  ಪುಷ್ಪಾದಿಗಳಂ ತಂದು ಯನ್ನಾ ವಾರೆ ತುರುಬಿಗೆ ಮುಡಿಸಿರಮ್ಮಾ ತಾಯಿಗಳಿರಾ.

ದರುವೂ

ಆರಾನೆ ತಿಂಗಳಿಗೆ – ಆರಾನೆ ಬ್ರಮಿಶಾಳೋ
ಆರೀದಾ ಅನ್ನ ಕೆನೆ ಮೊಸರು ರಾಮಾ ॥

ದೇವಕಿ : ಅಮ್ಮಾ ತಾಯಿಗಳಿರಾ, ಆರನೆಯ ತಿಂಗಳಾಯಿತು. ಆರಿದ ಅನ್ನಾ ಕೆನೆ ಮೊಸರು ತಂದು ವುಣಬಡಿಸಿರಮ್ಮಾ ತಾಯಿಗಳಿರಾ.

ದರುವು

ಯೇಳಾನೆ ತಿಂಗಳಿಗೆ – ಯೇಳಾನೇ
ಬ್ರಮಿಶಾಳು – ಹೇಳಿ ಕಳುಹಿದಳೂ
ತನ್ನ ತವರೂರಿಗೇ ರಾಮಾ ॥

ದೇವಕಿ : ಅಮ್ಮಾ ಮಂತ್ರಸಾನಿ, ಯೇಳನೆಯ ತಿಂಗಳಾಯಿತು. ನಮ್ಮ ತವರೂರಿಗೆ ವೊಂದು ಚೀಟಿಯನ್ನು ಬಿಡುವಂಥವಳಾಗಮ್ಮಾ ಮಂತ್ರಸಾನಿ.

ದರುವು

ಯೆಂಟಾನೆ ತಿಂಗಳಿಗೆ ಯೆಂಟಾನೆ
ಬ್ರಮಿಶಾಳೋ ಶುಂಠಿ ಯಾಲಕ್ಕಿ
ಕೊಡಿ ತುಪ್ಪಾ ರಾಮಾ ॥

ದೇವಕಿ : ಅಮ್ಮಾ ಮಂತ್ರಸಾನಿ, ಯೆಂಟನೆ ತಿಂಗಳಾಯಿತು. ಶುಂಠಿ ಯಾಲಕ್ಕಿ ಕೊಡಿ ತುಪ್ಪವನ್ನು ತಂದುಕೊಡಿರಮ್ಮಾ ಮಂತ್ರಸಾನಿ.

ದರುವೂ

ವೊಂಬತ್ತು ತಿಂಗಳಿಗೆ ತುಂಬೀತೂ
ನವಮಾಸಾ ಸಂದೂ ಸಂದೆಲ್ಲಾ ಕಿರುಬ್ಯಾನೇ
ರಾಮಾ ॥

ದೇವಕಿ : ಅಮ್ಮಾ ಮಂತ್ರಸಾನಿ, ವಂಬತ್ತು ತಿಂಗಳಾಯಿತು. ಯನ್ನ ಸಂದು ಸಂದೆಲ್ಲಾ ಕಿರಿಬ್ಯಾನೇ ಯೆದ್ದವಲ್ಲಮ್ಮಾ ಮಂತ್ರಸಾನಿ.

ದರುವೂ

ಹತ್ತೂ  ತಿಂಗಳ ಬ್ಯಾನೆ – ವಳ್ಳೆ ಕತ್ತೀಲಿ
ಕಡಿದಂತೆ ಹೆತ್ತಮ್ಮಾ ಬೇಕೆ ಯನ್ನ ಜಲ್ಮಕ್ಕೆ
ರಾಮಾ ॥

ದೇವಕಿ : ಅಮ್ಮಾ ಮಂತ್ರಸಾನಿ, ಯನ್ನ ಹೆತ್ತ ತಂದೆ ತಾಯಿ ಇರುವರಲ್ಲಾ ಅವರನ್ನು ಕರೆಸಮ್ಮಾ ಮಂತ್ರಸಾನಿ.

ದರುವೂ

ನಡುವೀನಾ ಬ್ಯಾನೆ ತಡೆಯಲಾರೆ
ನಾ ತಾಳಲಾರೆ ನಡುವೀನಾ ಬ್ಯಾನೆ
ತಡೆಯಲಾರೆ ॥
ನಡುವಿನ ಬ್ಯಾನೆಯು ಒಡಲಲ್ಲಿ ಕಡಿದಂತೇ
ಗಡಬಡಿಸುವದೇ ವೊಡಲೊಳಗಮ್ಮಮ್ಮಾ ॥
ನಡುವಿನ ಬ್ಯಾನೆ ಆಯಾಸವಾಯಿತಂಮ್ಮಾ
ಮನಸೂ ನೋಡಮ್ಮಾ ನೋಡೇ ॥
ನಡುವೀನ ಬ್ಯಾನೇ ಆಯಾಸವಾಯಿತು ಪುರುಷನ ಸಂಗವು
ಪುರುಷನ ಗರ್ಭವು ಮೊದಲೆ ನಾವಲ್ಲೆ
ನಮ್ಮಮ್ಮಾ ನಡುವೀನಾ ಬ್ಯಾನೆ॥ ॥

ದೇವಕಿ : ಅಮ್ಮಾ ತಾಯಿಗಳಿರಾ, ಯೀ ಬ್ಯಾನೆ ನಾ ತಾಳಲಾರೆನಮ್ಮಾ ತಾಯಿಗಳಿರಾ.

ದರುವೂ

ಸ್ಮರಣೆಯು ತಪ್ಪಿತೂ ಪ್ರಜ್ಞೆಯು
ಯನಗಿಲ್ಲವೇ ನೋಡಮ್ಮಾ ನೋಡೇ ॥
ಸ್ಮರಣೆಯು ತಪ್ಪಿತೂ ಪ್ರಜ್ಞೆಯು
ಯನಗಿಲ್ಲದೇ ಸ್ಮರನ ಬಳಿಗೆ
ಹೋಗಿ ಕರ ನೀಡಿರಮ್ಮ ॥
ನಡುವೀನಾ ಬ್ಯಾನೇ ॥

ದರುವೂ

ಮಗನ ಹೆತ್ತಳು ದೇವಕೀ ವಾರಿಜಾಮುಖಿ
ಮಗನಾ ಹೆತ್ತಳು ದೇವಕಿ ॥
ಸುದತಿಮಾಡಿಧ ಪುಣ್ಯ ದೀಸೂವ್ಯಾಳ್ಳದೀ –
ವದಗಿ ಜನಿಸಿದ ಮುದದೀ ॥
ಘೋರ ಪಾತಕಾ ಸಂಹಾರೇ
ನೀರಜಾಗಾತ್ರೇ ಮುರಹರೇ ॥
ಧರಣಿ ಶುಭಪುರಿವಾಸನಾ – ವರಕರುಣ
ದಿಂದಾ ತರಳೆ ಪಡೆದಾಳು ಮಗನಾ ॥