ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಪ್ರಸಾರದಲ್ಲಿದ್ದು, ಈಚೆಗೆ ಮೂಲೆ ಗುಂಪಾಗುತ್ತಿರುವ ಜಾನಪದ ಕಲಾ ಸಂಪ್ರದಾಯಗಳಲ್ಲಿ ’ಕಂಸಾಳೆ’ ನೃತ್ಯಕ್ಕೆ ವಿಶೇಷ ಸ್ಥಾನವಿದೆ. ಈ ಕಲೆಗೆ ತನ್ನ ಎಂದಿನ ಸ್ಥಾನ-ಮಾನವನ್ನು ಉಳಿಸಿಕೊಟ್ಟು ಅದು ಜನಪ್ರಿಯವಾಗಲು ನೆರವಾದವರಲ್ಲಿ ಮೈಸೂರು ತಾಲ್ಲೂಕಿನ ಮಹದೇವಯ್ಯನವರ ಕೊಡುಗೆ ಅಪಾರ. ಈ ಸಂಪ್ರದಾಯದಲ್ಲಿ ಹಿರಿಯರೆನಿಸಿದ್ದ ಇವರ ತಂದೆ ನಂಜಯ್ಯನವರಿಂದ ಶಿಕ್ಷಣ ಪಡೆದ ಮಹದೇವಯ್ಯ ಅನೇಕ ವರ್ಷಗಳ ಪರಿಶ್ರಮದಿಂದ, ಅನುಭವದಿಂದ ಪ್ರಾವೀಣ್ಯತೆ ಪಡೆದರು. ಶ್ರೀಯುತರಿಗೆ ಈ ಸಂಪ್ರದಾಯಕ್ಕೆ ಸಂಬಂಧಪಟ್ಟ ಹಾಡುಗಳ ಮತ್ತು ಸಾಹಿತ್ಯದ ಅರಿವಿದ್ದು, ಇವರು ಅದರ ಪ್ರದರ್ಶನ ಕಲೆಗೆ ಪೂರಕವಾಗಿದ್ದವು; ಪ್ರೇರಕವಾಗಿದ್ದವು.

ಭಕ್ತಿ ಪ್ರಧಾನವಾದ ಈ ನೃತ್ಯ ಪ್ರಕಾರವನ್ನು ಆಧುನಿಕ ರಂಗಭೂಮಿಗೆ ಅಳವಡಿಸಿ, ಅದು ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗದೆ ಪಟ್ಟಣಿಗರ ಮನ್ನಣೆಗೂ ಪಾತ್ರವಾಗುವಂತೆ ಮಾಡಿದ ಕೀರ್ತಿ ಮಹದೇವಯ್ಯನವರದು.

ದೇಶದ ನಾನಾ ಭಾಗಗಳಲ್ಲಿ ಪ್ರದರ್ಶನಗಳನ್ನು ಜರುಗಿಸಿ ಕೀರ್ತಿಗಳಿಸಿದ ಇವರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸಮ್ಮುಖದಲ್ಲಿ ನರ್ತಿಸಿ, ಅವರಿಂದ ಸುವರ್ಣ ಪದಕವನ್ನು ಪಡೆದುಕೊಂಡರು. ಅಲ್ಲದೇ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಆಶ್ರಯದಲ್ಲಿ ಅಂತರ ರಾಜ್ಯ ಸಾಂಸ್ಕೃತಿಕ ವಿನಿಮಯ ತಂಡದ ಸದಸ್ಯರಾಗಿ, ದೇಶದ ಪ್ರಮುಖ ಪಟ್ಟಣಗಳಲ್ಲಿ ಪ್ರದರ್ಶನಗಳನ್ನಿತ್ತು ತಮ್ಮ ಕಲೆಗೂ, ತಮಗೂ ಕೀರ್ತಿ ಗಳಿಸಿದ್ದಾರೆ.

ಶ್ರೀಯುತರು ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರು ಮಾಡಿ, ಈ ಕಲೆಯ ಉಳಿಯುವಿಕೆಗೂ, ಬೆಳವಣಿಗೆಗೂ ಸಹಾಯಕರಾಗಿದ್ದಾರೆ.