ಏಕಾಕಿತನದ ಈ ಕಗ್ಗತ್ತಲಲ್ಲಿ
ನೆನಪು-ಪ್ರಾಚೀನ ಶಿಲಾಯುಗದ ಹಲ್ಲಿ
ಲೊಚಗುಟ್ಟಿದಂತೆ.
ಮಬ್ಬುಗಡಲ ಈ ಹಬ್ಬುಗೆಯ ತುಂಬ
ಬೃಹದಾಕಾರವಾಗಿ ಈಜುತ್ತಿರುವ ನೂರಾರು
ಭೀತಿಯ ಬಿಂಬ.
ಯಾವ ನರಮನುಷ್ಯನ ಹೆಜ್ಜೆಯೂ ಮೂಡದ
ದ್ವೀಪಾಂತರದ ತೀರದ ತುಂಬ ಬಿಸಿಲು ಕಾಸುತ್ತ
ಬಿದ್ದಿರುವ ಮೊರಡು ಬಂಡೆಗಳಂತೆ
ನೂರಾರು ಚಿಂತೆ.
ಮರುಭೂಮಿಯ ಶೂನ್ಯ ವಿಸ್ತಾರಗಳ ಮೇಲೆ
ಬಿರುಗಾಳಿ ಗೀಚಿರುವ ದೈತ್ಯ ಲಿಪಿಗಳ ಹಾಗೆ
ಅಸಂಖ್ಯ ಭಾವಗಳ ಮಾಲೆ.
ಸಮೆದ ನಾಣ್ಯಗಳಂತೆ ಬಿದ್ದಿರುವುವೆಲ್ಲ ಬೆಲೆ
ಚದುರಿರುವ ತರಗೆಲೆ.

ಏನಿದೆಚ್ಚರವೋ ನಿದ್ದೆಯೋ ಮರಣವೋ, ಇಲ್ಲ
ಪುನರ್ಜನ್ಮದರುಣೋದಯವೋ,
ವರ್ತಮಾನವಿದಸ್ಪಷ್ಟ ಅಪರಿಚಿತ ವಿನೂತನ.

ಇದು ಒಂದು ಕಿರಣವಿಹೀನ ಘನ ವಿಪಿನ ;
ನಿನ್ನ ಮಂದಸ್ಮಿತದ ತಂಗಾಳಿ ತೀಡಿದರೆ ನಿಬಿಡ ಪರ್ಣಗಳಲುಗಿ
ಝಗ್ಗನಿಳಿಯುವುದು ಆಗಾಗ ಒಂದೊಂದು ಹಿಗ್ಗಿನ ಕಿರಣ,
ಅದರ ಜೊತೆಗೇ ನುಗ್ಗುವುದು ನನ್ನೆದೆಗೆ
ಯಾವುದೋ ಜನ್ಮಾಂತರದ ಸಂಸ್ಮರಣ.