ತನ್ನವರ ಒಳಿತಿಗಾಗಿ ಶತ್ರುಗಳ ಮಧ್ಯೆ ಹೋಗಿ ವಾಸಿಸಿದ. ಶತ್ರುಗಳು ತುಂಡು ಮಾಡಿ ಹಾಕಿದರು, ಗುರುಗಳ ದಯದಿಂದ ಉಳಿದ. ಶತ್ರುಗಳ ಮಧ್ಯೆಯೇ ಇದ್ದರೆ ಎಂತಹ ವಿಪತ್ತು ಎಂದು ಸ್ಪಷ್ಟವಾಯಿತು. ಆದರೂ ಹಿಂದಿರುಗುವ ಯೋಚನೆ ಇಲ್ಲ. ಅಸಮಾನ ಶಕ್ತಿ ಪಡೆದ ಮಹಾಪುರುಷನ ಮಗಳು, ಸುಂದರಿ ತನ್ನನ್ನು ಪ್ರೀತಿಸಿದರೂ ಅವಳ ಯೋಚನೆ ಇಲ್ಲ. ಮೂರು ಬಾರಿ ಸಾವು ಬಂದರೂ, ತನ್ನವರ ಕಲ್ಯಾಣಕ್ಕಾಗಿ ತಾನು ಹಿಡಿದ ಕೆಲಸವನ್ನು ಸಾಧಿಸಿಯೇ ಸಾಧಿಸಿದ ವೀರ.

ಈ ವೀರ ಕಚನ ಕಥೆ ತುಂಬ ಸ್ವಾರಸ್ಯವಾಗಿದೆ .

ದೇವತೆಗಳಿಗೂ ಚಿಂತೆ

ಬಹಳ ಹಿಂದಿನ ಮಾತು. ಸ್ವರ್ಗದಲ್ಲಿ ದೇವತೆಗಳೂ ಪಾತಾಳದಲ್ಲಿ ರಾಕ್ಷಸರೂ ಇದ್ದರು. ಅವರಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಒಬ್ಬರ ಏಳಿಗೆ ಇನ್ನೊಬ್ಬರ ಅಸೂಯೆ! ಅವರಲ್ಲಿ ಆಗಾಗ ಕದನಗಳು ನಡೆಯುತ್ತಿದ್ದವು. ಅದರಿಂದ ಅವರೆಲ್ಲರೂ ತಮ್ಮ ತಮ್ಮ ಗುರುಗಳ ಬಳಿ ಕುಳಿತು ನಾನಾ ವಿದ್ಯೆಗಳಲ್ಲಿ, ಅದರಲ್ಲಿಯೂ ಯುದ್ಧವಿದ್ಯೆಯಲ್ಲಿ, ಪಾರಂಗತರಾಗಿದ್ದರು.

ದೇವತೆಗಳಿಗೆ ಮಹಾವಿಜ್ಞಾನಿಗಳಾದ ಬೃಹಸ್ಪತ್ಯಾಚಾರ್ಯರು ಗುರುಗಳು. ರಾಕ್ಷಸರಿಗೆ ಜ್ಞಾನಸಂಪನ್ನರೂ ಮಹಾ ಪ್ರತಿಭಾಶಾಲಿಗಳೂ ಆದ ಶುಕ್ರಾಚಾರ್ಯರು ಗುರುಗಳು. ಇವರಿಬ್ಬರ ಮಾರ್ಗದರ್ಶನದಲ್ಲಿ ದೇವತೆಗಳೂ ಅಸುರರೂ ಒಬ್ಬರನ್ನು ಒಬ್ಬರು ಮೀರಿಸುವಂತಿದ್ದರು.

ಆದರೆ ಇದ್ದಕ್ಕಿದ್ದಂತೆ ರಾಕ್ಷಸರ ಬಲ ಏರಿತು. ಏಕೆಂದರೆ ಅವರ ಗುರುಗಳು ಶುಕ್ರಾಚಾರ್ಯರು ಮೃತಸಂಜೀವಿನಿ ಮಂತ್ರಸಿದ್ಧಿ ಪಡೆದರು. ಆ ಮಂತ್ರದ ಬಲದಿಂದ ಸತ್ತವರನ್ನು ಬದುಕಿಸಬಹುದು.

ಈ ಅನುಕೂಲ ದೇವತೆಗಳಿಗಿಲ್ಲ. ಯುದ್ಧ ನಡೆದರೆ ಸತ್ತ ದೇವತೆಗಳು ಸತ್ತ ಹಾಗೆಯೇ. ಆದರೆ ರಾಕ್ಷಸರು ಸತ್ತರೂ ಬದುಕುತ್ತಿದ್ದರು. ಇದರಿಂದ ರಾಕ್ಷಸರಿಗೆ ಇನ್ನೂ ಧೈರ್ಯ. ಇದು ದೇವತೆಗಳನ್ನು ತುಂಬಾ ಪೇಚಾಟಕ್ಕೆ ಗುರಿಮಾಡಿ ಯೋಚನೆಗೆ ಎಡೆಮಾಡಿತು.

ಈಗ ದೇವತೆಗಳ ಗುರಿ ಒಂದೇ ಒಂದು. ಅದು ಈ ಆಪತ್ತಿನಿಂದ ಪಾರಾಗುವುದು. ಈ ಆಪತ್ತಿನಿಂದ ಪಾರಾಗಬೇಕಾದರೆ ಅವರೂ ಮೃತಸಂಜೀವಿನಿ ಮಂತ್ರವನ್ನು ಕಲಿಯಬೇಕು.ಅದನ್ನು ಕಲಿಯುವುದು ಹೇಗೆ?

ಯಾರಾದರೂ ಶುಕ್ರಾಚಾರ್ಯರ ಶಿಷ್ಯರಾಗಿ ಆ ಮಂತ್ರವನ್ನು ಕಲಿಯಬೇಕು. ಅಂತಹ ಸಾಹಸಿ ಯಾರು? ವೈರಿನಗರವನ್ನು ಹೊಕ್ಕು ಶುಕ್ರಾಚಾರ್ಯರ ಒಲವನ್ನು ಸಂಪಾದಿಸಿ ಮೃತಸಂಜೀವಿನಿ ಮಂತ್ರವನ್ನು ಪಡೆದು ಬರಬಲ್ಲ ಧೀರ ಯಾರು? ಅವನಿಗೆ ಕಷ್ಟಗಳಿಗೆ ಗುರಿಯಾಗುವ ಧೈರ್ಯವಿರಬೇಕು, ವಿಪತ್ತುಗಳಿಗೆ ತಲೆ ಯೊಡ್ಡುವ ಸ್ಥೈರ್ಯವಿರಬೇಕು, ಗುರಿಯ ಕಡೆಗೇ ಮನಸ್ಸಿರುವ ಸ್ಥಿರತೆಯಿರಬೇಕು, ಯಾರನ್ನೂ ಒಲಿಸಿಕೊಳ್ಳುವ ನಯವಿರಬೇಕು. ಇಂತಹ ದೇವಸಮಾಜದ ವ್ಯಕ್ತಿ ಯಾರು? ದೇವತೆಗಳು ಮನಸ್ಸಿನಲ್ಲಿಯೇ ಅಳೆದರು ಸುರಿದರು. ಇಂತಹ ಅಳೆತ ಸುರಿತವಾದ ಮೇಲೆ ಅವರಿಗೆ ಅಂತಹ ದೇವಕುಮಾರನೊಬ್ಬನಿದ್ದಾನೆ ಎನಿಸಿತು. ಅವನೇ ಬೃಹಸ್ಪತಿಯ ಮಗನಾದ ಕಚ. ಅವನು ಚೆಲುವ, ಎಳೆಯ, ಗುಣಶಾಲಿ. ಎಂತಹ ಅಪರಿಚತರ ನಡುವೆಯೂ ಸ್ನೇಹ ಸಂಪಾದಿಸಬಲ್ಲ ಸರಸಿ. ಗುರಿಮುಟ್ಟುವ ಸಾಹಸಿ, ಶಕ್ತಿವಂತ. ಸರಿ, ದೇವಸಭೆ ಈ ಗುರುತರ ಕಾರ್ಯಕ್ಕೆ ಕಚನನ್ನು ಕಳಿಸುವುದೇ ಸರಿ ಎಂದು ತೀರ್ಮಾನಿಸಿತು.

ಪ್ರಾಣಾಪಾಯಇತರರ ಪ್ರಾಣಕ್ಕಾಗಿ

ಅನಂತರ ದೇವಸಮಾಜದ ಪ್ರತಿನಿಧಿಗಳು ಕಚನ ಬಳಿಗೆ ಹೋದರು. “ತರುಣನೂ, ಶಕ್ತನೂ, ಸುಂದರನೂ ಆದ ನಿನ್ನಿಂದ ದೇವತೆಗಳಿಗೆ ಸಹಾಯವಾಗಬೇಕು” ಎಂದು ಬಯಸಿದರು.

“ನನ್ನಿಂದಲೇ? ನನ್ನಂತಹ ಎಳೆಯನಿಂದ ದೇವತೆಗಳಿಗೆ ಉಪಕಾರವೆ? ಅಪ್ಪಣೆ ಕೊಡಿಸಿ, ಸಿದ್ಧನಾಗಿದ್ದೇನೆ” ಎಂದು ತರುಣವೀರ. ದೇವತೆಗಳು, “ಮಗೂ, ನಾವು ಎಷ್ಟೇ ವೀರಾವೇಶದಿಂದ ಹೋರಾಡಿ ರಾಕ್ಷಸರನ್ನು ಕೊಂದರೂ ಮಹಾಜ್ಞಾನಿಗಳಾದ ಶುಕ್ರಾಚಾರ್ಯರ ಸಂಜೀವಿನಿ ಮಂತ್ರದಿಂದ ಅವರು ಪುನಃ ಬದುಕುತ್ತಾರೆ.  ಇಂತಹ ಮೃತ್ಯುವನ್ನು ಗೆಲ್ಲುವ ಮಂತ್ರ ನಮಗೂ ದೊರೆತರೆ ನಾವೂ ಅದೇ ಬಗೆಯ ಯುದ್ಧವೈದ್ಯದ ಏರ್ಪಾಡನ್ನು ಮಾಡಬಹುದು. ಇದಕ್ಕಾಗಿ ನಿನ್ನ ಸಹಾಯ ದೇವತೆಗಳಿಗೆ ಬೇಕು” ಎಂದರು.

ವಿನಯಶಾಲಿಯಾದ ಕಚ ಅವರ ಮಾತಿಗೆ ಬೆಲೆಕೊಟ್ಟು ಆ ಮಾತನ್ನೆಲ್ಲಾ ನಮ್ರತೆಯಿಂದ ಕೇಳಿಕೊಂಡ. “ಹಿರಿಯರೇ, ನನ್ನ ಒಡಲು ಮನಸ್ಸು ಪ್ರಾಣಗಳು ದೇವಲೋಕಕ್ಕೆ ಮೀಸಲು. ನಿಮ್ಮ ಆಶಯವನ್ನು ಅಪ್ಪಣೆಯೆಂದು ಭಾವಿಸಿ ಶಿರಸಾವಹಿಸಿ ನಡೆಯುತ್ತೇನೆ” ಎಂದ. ಹೀಗೆ ಎರಡು ಮಾತಿಲ್ಲದೆ ನಗುಮೊಗದಿಂದ ಸರಸಿಯಾದ ಕಚ ಉತ್ಸಾಹದಿಂದ ಮುಂದೆ ಬಂದಾಗ ದೇವಪ್ರಮುಖರು ಗಂಭೀರರಾದರು.

“ಮಗುವೆ, ಇದು ಮಹತ್ತರವಾದ ಕೆಲಸ. ಮೊದಲು ನೀನು ವೈರಿಗಳ ರಾಜ್ಯವನ್ನು ಹೊಗಬೇಕು. ಅನಂತರ ಮಹಾಮಹಿಮರಾದ ಶುಕ್ರಾಚಾರ್ಯರನ್ನು ಕಂಡು ಅವರ ಶಿಷ್ಯವೃತ್ತಿಯನ್ನು ಸಂಪಾದಿಸಬೇಕು. ಅವರ ಮಗಳು ದೇವಯಾನಿ. ಅವಳಲ್ಲಿ ಅವರಿಗೆ ಅಪಾರವಾದ ಪ್ರೀತಿ. ಆದುದರಿಂದ ಅಲ್ಲಿ ಅವರ ಮುದ್ದಿನ ಮಗಳಾದ ದೇವಯಾನಿಯೂ ಮೆಚ್ಚುವಂತೆ ಅವರನ್ನು ಸೇವಿಸಿ ಅವರನ್ನು ಹರ್ಷಗೊಳಿಸಬೇಕು. ಅನಂತರ ಸಂಜೀವಿನಿ ಮಂತ್ರವನ್ನು ಕಲಿತು ಎಚ್ಚರಿಕೆಯಿಂದ ನಮ್ಮ ಲೋಕಕ್ಕೆ ಹಿಂತಿರುಗಬೇಕು. ಅಲ್ಲಿಂದ ಮುಂದೆ ನೀನು ಸಾವುನೋವುಗಳನ್ನು ಹಿಂದಕ್ಕಟ್ಟುವ ಮಾಂತ್ರಿಕನಾಗುವೆ.  ಆದರೆ ಇದು ಪ್ರಾಣಾಪಾಯದ ಸಾಹಸ . ಮಗುವೆ, ನೀನು ಎಚ್ಚರಿಕೆ ವಹಿಸು” ಎಂದು ಪ್ರೀತಿಯಿಂದ ಹೆಮ್ಮೆಯಿಂದ ಅವನನ್ನು ಆಶೀರ್ವದಿಸಿದರು.

ಬೃಹಸ್ಪತಿಯ ಮಗಶುಕ್ರಾಚಾರ್ಯರ ಶಿಷ್ಯ

ಧೀರನೂ ಸಂಯಮಿಯೂ ಆದ ಕಚ ನಗುನಗುತ್ತಲೇ ತನ್ನ ತಾಯಿಗೆ ಅಣ್ಣಂದಿರಿಗೆ ನಮಸ್ಕರಿಸಿ ಅವರ ಒಲುಮೆಯ ಹರಕೆಗಳನ್ನು ಪಡೆದ. ಬಳಿಕ ತಂದೆ ಬೃಹಸ್ಪತಿಗೆ ನಮಸ್ಕರಿಸಿ ಅವರ ಅಪ್ಪಣೆ ಬೇಡಿದ.  ತಂದೆಯಾದ ಬೃಹಸ್ಪತಿ ಮಗನ ಸಾಮರ್ಥ್ಯವನ್ನು ಬಲ್ಲವರು; ಅವನು ಎಸಗಬೇಕಾದ ಕಾರ್ಯದ ಮಹತ್ವವನ್ನು ತಿಳಿದವರು. ಹೆಮ್ಮೆಯಿಂದ ಮಗನನ್ನು ಆಲಿಂಗಿಸಿದರು. ಮನಸ್ಸು ಕರಗಿತು. ಮಾತುಗಳು ಸೂಸಲರಿಯದ ಪಿತೃವಾತ್ಸಲ್ಯವನ್ನು ಅವರ ಸ್ಪರ್ಶವೂ ಕಣ್ಣಹೊಳಪೂ ಪ್ರಕಟಿಸಿದುವು. ಕಣ್ಣುಗಳಲ್ಲಿ ಹರಿದ ಪ್ರೀತಿಯ ಬಾಷ್ಪಗಳನ್ನು ನೋಡುತ್ತ, ತಲೆಯನ್ನು ನೇವರಿಸಿದ ಕೈಗಳನ್ನು ಕಣ್ಣೆಗೊತ್ತಿಕೊಳ್ಳುತ್ತ ಸಂಯಮಿಯಾದ ಕಚ ನೀಲಾಕಾಶದ ಹೊಳೆಹೊಳೆವ ತಾರೆಯಂತೆ ಸಾಗಿ ಬಂದು ಅಸುರರ ಊರನ್ನು ಸಮೀಪಿಸಿದ.

ದಾನವರ ದೊರೆ ವೃಷಪರ್ವ. ಅವನ ನಗರದಲ್ಲಿ ಶುಕ್ರಾಚಾರ್ಯರು ವಾಸಿಸುತ್ತಿದ್ದರು. ಆ ಜ್ಞಾನಿ ಶ್ರೇಷ್ಠರು ತಮ್ಮ ಒಬ್ಬಳೇ ಮಗಳಾದ ದೇವಯಾನಿಯೊಡನೆ ವಾಸಮಾಡುತ್ತಿದ್ದರು. ದೇವಯಾನಿಯಲ್ಲಿ ತಂದೆಗೆ ಅಮಿತವಾದ ಪ್ರೇಮ. ಅವರ ಬಾಳಿನ ಸರ್ವಸ್ವವಾಗಿದ್ದ ಆ ಎಳೆಯ ವಯಸ್ಸಿನ ಬಾಲಿಕೆ ಬಹಳ ಕೋಪಿಷ್ಠೆಯೂ ಅಭಿಮಾನಿಯೂ ಆಗಿದ್ದಳು. ಆದರೆ ವಿದ್ಯಾವತಿಯೂ ಸುಂದರಿಯೂ ಆದ ದೇವಯಾನಿಯ ಮನಸ್ಸು ನಿರ್ಮಲವಾದದ್ದು. ಮಾತೃವಾತ್ಸಲ್ಯವನ್ನಾಗಲಿ ತನ್ನ ವಯಸ್ಸಿನ ಕುಮಾರಿಯರ ಸ್ನೇಹವನ್ನಾಗಲಿ ಕಂಡು ಅರಿಯದ ದೇವಯಾನಿ ಹಟವಾದಿಯಾಗದ್ದಳು ಅಷ್ಟೆ.

ಒಂದು ಬೆಳಿಗ್ಗೆ ಶುಕ್ರಾಚಾರ್ಯರು ಅದೇ ತಾನೇ ಸ್ನಾನ ಸಂಧ್ಯಾವಂದನೆ ಮುಂತಾದ ಮುಂಬೆಳಗಿನ ಸತ್ಕರ್ಮಗಳನ್ನು ಮುಗಿಸಿದ್ದಾರೆ. ಸ್ವಲ್ಪ ವಿರಾಮವನ್ನು ಅನುಭವಿಸುತ್ತ ಮನೆಯ ಪಡಸಾಲೆಯಲ್ಲಿ ಕುಳಿತಿದ್ದಾರೆ. ಅವರು ಕುಳಿತ ಕೃಷ್ಣಾಜಿನದ ಅಂಚಿನಲ್ಲಿ ದೇವಯಾನಿ ಕುಳಿತು ವ್ಯಾಸಂಗಮಗ್ನೆಯಾಗಿದ್ದಾಳೆ. ಮನೆಯ ಒಳಹೊರಗೆ ಒಬ್ಬಿಬ್ಬರು  ಸೇವಕರು ಸುಳಿದಾಡುತ್ತಿದ್ದಾರೆ.

ಸುಂದರನೂ ತೇಜಸ್ವಿಯೂ ಆದ ತರುಣನೊಬ್ಬ ಆಚಾರ್ಯರ ಸನ್ನಿಧಿಗೆ ಬಂದು ನಿಂತ; ಮುಗಿದ ಕೈ, ಬಾಗಿದ ತಲೆ. ಬಂದವನು ಕಚ. ದೇವಗುರುವಿನ ಮಗ ರಾಕ್ಷಸರ ಗುರುವಿನ ಮುಂದೆ ತಲೆಬಾಗಿ ನಿಂತಿದ್ದಾಣೆ.

“ಮಹಾಮಹಿಮರೆ, ಅಂಗೀರಸ ಋಷಿಗಳ ಮೊಮ್ಮಗನೂ ದೇವಗುರು ಬೃಹಸ್ಪತಿಯ ಮಗನೂ ಆದ ನಾನು ತಮ್ಮ ಮುಂದೆ ವಿದ್ಯಾರ್ಥಿಯಾಗಿ ನಿಂತಿದ್ದೇನೆ. ನನ್ನನ್ನು ಕಚನೆಂದು ಕರೆಯುತ್ತಾರೆ” ಎಂದು ವಿನಯದಿಂದ ಕೈ ಮುಗಿದು ಪ್ರಾರ್ಥಿಸಿದನು.

ಆಚಾರ್ಯರು ಮುಖವೆತ್ತಿ ಕಚನನ್ನು ಗಮನಿಸಿದರು. ಅವನ ಸುಂದರ ದೇಹವನ್ನೂ ಎಳೆಯ ಪ್ರಾಯವನ್ನೂ ಕಂಡು ಅವರ ಮನದಲ್ಲಿ ವಾತ್ಸಲ್ಯ ಉಕ್ಕಿತು. ಮುಖದಲ್ಲಿ ಹೊಳೆವ ಸುಸಂಸ್ಕಾರವನ್ನೂ, ಅದನ್ನು ಸೂಚಿಸುವ ಮೆಲುನಗೆಯನ್ನೂ, ಕಣ್ಗಳ ತೇಜಸನ್ನೂ, ಅಲ್ಲಿ ತುಂಬಿನಿಂತ ಸಂಯಮದ ಭಾವವನ್ನೂ ಗುರುತಿಸಿ ಮೆಚ್ಚಿದರು.

ತಾನು ಬೃಹಸ್ಪತಿಯ  ಮಗ ಎಂದು ಕಚ ಹೇಳಿದ್ದ. ದೇವತೆಗಳಿಗೂ ರಾಕ್ಷಸರಿಗು ಬದ್ಧ ದ್ವೇಷ. ದೇವತೆಗಳ ಗುರು ಮಗನನ್ನು ರಾಕ್ಷಸರ ಗುರುವಿನ ಬಳಿಗೆ, ಶಿಷ್ಯನಾಗು ಎಂದು, ಏಕೆ ಕಳುಹಿಸಬೇಕು?

ಶುಕ್ರಾಚಾರ್ಯರ ಒಳ ಮನಸ್ಸು ಕಚನ ಉದ್ದೇಶವನ್ನು ಗುರುತಿಸಿತು. ದೇವಗುರು ಬೃಹಸ್ಪತ್ಯಾಚಾರ್ಯರು ಅರಿಯದುದು ಯಾವುದು! ವೇದವೇದಾಂಗಗಳಲ್ಲಿ ಪಾರಂಗತರಾದ ಅವರು ಲೌಕಿಕ ಪಾರಲೌಕಿಕ ವಿದ್ಯೆಗಳಲ್ಲಿ ನಿಸ್ಸೀಮರು. ಅವರು ಅರಿಯದುದು ಒಂದೇ. ಅದು ಮೃತಸಂಜೀವಿನಿ ವಿದ್ಯೆ. ಇದಕ್ಕಾಗಿಯೇ ಬಾಲಕನು ಬಂದಿರಬೇಕು. ಇರಲಿ ನೋಡುವ, ಎಂದಿತು ಅವರ ಮನಸ್ಸು. ನಾನು ಸಾಧಿಸಿ ವಶಪಡಿಸಿಕೊಂಡ ಜ್ಞಾನ ರಾಶಿಯನ್ನು ಈತನಾದರೂ ಧರಿಸಿ ಮುಂದುವರಿಸಬಹುದೆ! ಅವರಲ್ಲಿ ಏನೋ ಆಸೆ ಮೂಡಿತು. ತಲೆದೂಗಿ ಸಮ್ಮತಿ ಸೂಚಿಸಿದರು.

ಆಚಾರ್ಯರು ಸ್ನೇಹದಿಂದ ತಮ್ಮ ಮಗಳನ್ನು ನೋಡುತ್ತ ಅಪ್ಪಣೆ ಮಾಡಿದರು. “ಮಗೂ ದೇವಯಾನಿ, ಇಂದಿನಿಂದ ಕಚ ನಿನ್ನ ಒಡನಾಡಿಯಾಗಿ ಸಹಪಾಠಿಯಾಗಿ ನಮ್ಮಲ್ಲಿರುತ್ತಾನೆ. ಇನ್ನು ಮೇಲೆ ನನ್ನ ಸೇವೆಯನ್ನು ಅವನೇ ಮಾಡತಕ್ಕದ್ದು” ಎಂದರು. ವಿಸ್ಮಿತಳಾದ ದೇವಯಾನಿ ಒಮ್ಮೆ ಕಚನನ್ನೂ ಆಚಾರ್ಯರನ್ನೂ ನೋಡುತ್ತ ಅವರ ತೀರ್ಮಾನವನ್ನು ಒಪ್ಪಿದಳು.

ಯೋಗ್ಯನಾದ ವಿದ್ಯಾರ್ಥಿ ಬಂದು ವಿದ್ಯೆಯನ್ನು ಬೇಡಿದರೆ ವಿದ್ವಾಂಸನಾದವನು ಅದನ್ನು ನಿರಾಕರಿಸಬಾರದು, ಆತನು ಯಾರೇ ಆಗಲಿ ಉಪದೇಶಿಸಬೇಕು ಎಂದು ಧರ್ಮಗ್ರಂಥಗಳು ಹೇಳುತ್ತವೆ. ಆದರೆ ಇದು ಮಹಾಮಹಿರಾದ ಶುಕ್ರಾಚಾರ್ಯರಿಗೆ ಸಹಜ ಗುಣವೇ ಆಗಿ ಪರಿಣಮಿಸಿತು. ವಿದ್ಯೆ ಎನ್ನುವುದು ಜೇನಿನ ಹಾಗೆ, ಬೆಳಿಕಿನ ಹಾಗೆ. ಕಚನಂತಹ ಶ್ರದ್ಧಾಳು ನಗುಮೊಗದಿಂದ ಅದನ್ನು ಬಯಸಿದರೆ ಶುಕ್ರಾಚಾರ್ಯರಂತಹ ಗುರುಗಳಿಗೆ ಅದನ್ನು ನೀಡುವುದರಲ್ಲೇ ಅತ್ಯಂತ ಆನಂದ.

ಶುಕ್ರಾಚಾರ್ಯರ ಮನೆಗೆ ಹೊಸ ಬೆಳಕು

ಅಂದು ಮೊದಲಾಗಿ ಕಚ ಗುರುಸೇವಾಮಗ್ನನಾದ. ಅರುಣೋದಯಕ್ಕೆ ಮೊದಲೇ ಏಳುವನು. ಸ್ನಾನಾದಿಗಳನ್ನು ಪೂರೈಸಿ ಗುರುಗಳ ಮುಂದೆ ಉಪದೇಶಕ್ಕೆ ಕೂಡುವನು. ತಾನು ಕೇಳಿದುದನ್ನು ಪುನಃಪುನಃ ಚಿಂತಿಸುತ್ತ ಮನನ ಮಾಡಿ ಗ್ರಹಿಸಿಕೊಳ್ಳುವನು. ಗುರುಗಳ ಸ್ನಾನ ಧ್ಯಾನ ಜಪಗಳ ಸಮಯದಲ್ಲಿ ಅವರೊಡನೆಯೆ ಇರುತ್ತ ಅವರಿಗೆ ಅವಶ್ಯವಾದ ಮಡಿಬಟ್ಟೆಗಳು, ಹೂವು, ದರ್ಭೆ, ಸಮಿತ್ತು ಮುಂತಾದವನ್ನು ಅಣಿಮಾಡಿ ಒದಗಿಸುವನು. ಅನಂತರ ಹಸುಗಳ ಹಾಲನ್ನು ಕರೆಯುವಾಗ ದೇವಯಾನಿಯೊಡನೆ ಸಹಕರಿಸುವನು. ಚುರುಕಿನಿಂದ ಸುಳಿದಾಡುತ್ತ ಕರುಗಳನ್ನು ತಾಯಂದಿರ ಬಳಿಗೆ ಬಿಡುವನು. ಹಾಲು ಕರೆಯುವಾಗ ಅವುಗಳನ್ನು ತಾಯಿಯ ಮುಖದ ಸಮೀಪದಲ್ಲಿ ಹಿಡಿಯುವನು. ಹಾಲಿನಿಂದ ತುಂಬಿದ ಕೊಡಗಳನ್ನು ಒಳಗಿಟ್ಟು ಕರೆದ ಆಕಳನ್ನು ಹೊರಗಟ್ಟುವನು. ಕೊನೆಗೆ ಅವೆಲ್ಲವುಗಳೊಡನೆ ತಾನು ಹೊರಟು ಕಾಡಿನ ಸೆರಗಿಗೊಯ್ದು ಮೇಯಿಸುವನು. ಆತನ ದಿನ-ದಿನದ ಉಪಚಾರದಿಂದ ಸ್ನೇಹಪೂರ್ವಕ ಸೇವೆಯಿಂದ ಗೋವುಗಳು ಮೈ ತುಂಬಿಕೊಂಡವು. ಪರಿಪುಷ್ಪವಾದ ಅವುಗಳ ಮೈಮೇಲೆ ನೊಣ ಕುಳಿತರೆ ಜಾರುವುದೋ ಎಂಬಂತೆ ಅವು ನುಣುಪೂ ಹೊಳಪೂ ಆದವು. ಕಚನು ಎಣೆಯಿಲ್ಲದ ಶ್ರದ್ಧೆಯಿಂದ ಅವುಗಳ ಗೊಂತನ್ನೂ ಕೊಟ್ಟಿಗೆಯನ್ನೂ ಗುಡಿಸಿ ಶುದ್ಧಿ ಮಾಡಿ, ಹೊಳೆಯಲ್ಲಿ ಗೋವುಗಳ ಮೈತೊಳೆದು ಕರೆತರುವನು. ದೇವಯಾನಿ ಅವಕ್ಕೆ ತಿಲಕವಿಟ್ಟು ಪೂಜಿಸುವಳು.

ಕಚನ ನಗುಮೊಗದ ಹೊಳಪೇ ವ್ಯಾಪಿಸಿಕೊಂಡಿತು ಎಂಬಂತೆ ಶುಕ್ರಾಚಾರ್ಯರ ಮನೆ ಕನ್ನಡಿಯಂತೆ ಶುಭ್ರವಾಯಿತು. ನಾನು ವಾದ್ಯ ಧ್ವನಿಗಳಿಂದ ಮನೆಯ ಗಾಳಿ ಝೇಂಕರಿಸುವುದು, ಮೆಲುದನಿಯಲ್ಲಿ ಆಲಾಪಿಸುವುದು. ಏಕಾಂಗಿನಿಯೂ ಉದಾಸೀನಳೂ ಆದ ದೇವಯಾನಿಯ ಮನಸ್ಸು ಮುದುಗೊಳ್ಳುವಂತೆ ಕಚನು ಬಗೆಬಗೆಯ ರಾಗಗಳನ್ನು ಹಾಡುವನು. ಹಲವಾರು ವಾದ್ಯಗಳನ್ನು ನುಡಿಸಬಲ್ಲ ನಿಪುಣನಾದ ಅವನು ದೇವಯಾನಿಯ ಮನಸ್ಸಿಗೆ ಪ್ರಿಯವಾಗುವಂತೆ ವೀಣೆಯನ್ನೊ ಕೊಳಲನ್ನೊ ನುಡಿಸುವನು. ಆದಾವುದರಿಂದಲೂ ಅವಳು ಉತ್ಸಾಹಗೊಳ್ಳದಿದ್ದರೆ ದೇವಲೋಕದ ನಾನಾ ಸ್ವಾರಸ್ಯಗಳನ್ನು ಕಥೆಯಾಗಿ ಹೇಳುವನು-ನಾಟಕವಾಗಿ ಅಭಿನಯಿಸುವನು. ದೇವಯಾನಿ ಇವುಗಳನ್ನು ಕಂಡು ಮೈಮರೆತು ನಗುವಳು. ಅವನ ಮನವನ್ನು ವ್ಯಾಪಿಸಿಕೊಂಡಿದ್ದ ಬೇಸರ, ಜುಗುಪ್ಸೆ, ಅಸಹನೆಗಳು ಕಳ್ಳರಂತೆ ಜಾರುವುದು. ಅವಳ ಹಸನ್ಮುಖವನ್ನು ಕಂಡು ಶುಕ್ರಾಚಾರ್ಯರು ಸಂತುಷ್ಟರಾಗುವರು.

ಕಾಡಿನಲ್ಲಿ ಸೌದೆ, ಹುಲ್ಲು ತರುವಾಗಲೆಲ್ಲ ಕಚನು ದೇವಯಾನಿಗಾಗಿ ಬಗೆಬಗೆಯ ಹೂಗಳನ್ನು ತರುವನು. ಅವನ ಪಂಚೆಯ ಗಂಟಿನಲ್ಲಿ ಬಗೆಬಗೆಯ ಸವಿಹುಳಿಯ ಹಣ್ಣುಗಳಿರುವುವು. ಬಿಗಿದುಕೊಂಡೆ ಇರುತ್ತಿದ್ದ ದೇವಯಾನಿಯ ಮುಖ ಇದರಿಂದ ಅರಳುವುದು. ಚಿಗರೆಯ ಮರಿಯಂತೆ ಕುಣಿಯುತ ತನ್ನ ನಿಡುಜಡೆಯ ತುಂಬ ಹೂಗಳನ್ನು ಮುಡಿಯುವಳು. ಹುಳಿಯ ಹಣ್ಣಿನ ರುಚಿಗೆ ಮುಖ ಡೊಂಕಾಗುವುದು. “ಆಹಾ, ಚಂದ್ರಬಿಂಬದಂತೆ ನಮ್ಮ ದೇವಯಾನಿಯ ಮುಖವೂ ಡೊಂಕಾಯಿತು” ಎಂದು ಕಚನು ಪರಿಹಾಸ್ಯ ಮಾಡುವನು. ಅಂತಹ ಹೋಲಿಕೆಯಿಂದ ವಿನೋದಗೊಂಡು ಆ ಬಾಲಿಕೆ ಮುಗುಳು ನಕ್ಕರೆ, “ನಿರ್ಮಲವಾದ ನಗೆಯನ್ನು ನೋಡಿಬಿಟ್ಟೆ, ಬೆಳದಿಂಗಳಲ್ಲಿ ನಿಂತ ಹಾಗಾಯಿತು” ಎಂದು ಕಚನ ಪ್ರಶಂಸೆ. “ಹಾಗಾದರೆ, ಬೇಗ ಹೋಗಿ ಮೈ ಒರೆಸಿಕೊ, ನಿನ್ನ ಬಣ್ಣ ಬದಲಾಗಿಬಿಟ್ಟು ಸ್ವರ್ಗದಲ್ಲಿ ನಿನ್ನ ಗುರುತು ತಪ್ಪೀತು” ಎಂದು ಪ್ರತಿಯಾಡಿ ಕಿಲಕಿಲನೆ ನಗುವಳು.

ಕಚ ಇಂಥ ಸರಸಿಯಾದರೂ ಎಣೆಯಿಲ್ಲದ ಸಂಯಮದಿಂದ ತನ್ನ ಬ್ರಹ್ಮಚರ್ಯ ವ್ರತವನ್ನು ಪಾಲಿಸಿದನು. ಅಲ್ಪವಾದ ನಿದ್ರೆ, ದೀರ್ಘವಾದ ಜಪತಪಗಳು, ಮಿತವಾದ ಆಹಾರ, ಸರ್ವದಾ ಜಾಗರೂಕವಾದ ನಡವಳಿಕೆ-ಇವುಗಳಲ್ಲಿ ಕೊರೆತೆಯಾಗದಂತೆ ಅವನ ದಿನಚರಿ ಸಾಗಿತು.

ಮಹಾಜ್ಞಾನಿಯಾದ ಶುಕ್ರಾಚಾಯ್ರು ತುಂಬು ಮನದಿಂದ ಕಚನಿಗೆ ಉಪದೇಶ ಮಾಡಿದರು. ಎಣೆಯಿಲ್ಲದ ಶ್ರದ್ಧೆಯಿಂದ ಅವೆಲ್ಲವನ್ನೂ ಲೀಲಾಜಾಲವಾಗಿ ಕಲಿತ ಕಚನು ತಂದೆ ಮಗಳ ಸ್ನೇಹಕ್ಕೆ ವಿಶ್ವಾಸಕ್ಕೆ ಪಾತ್ರನಾದನು.

ಸಾವಿನ ಮನೆಯಿಂದ ಮರಳಿದ

ನೆರೆಹೊರೆಯ ದಾನವರು, ಶುಕ್ರಾಚಾರ್ಯರ ಬಳಿ ವ್ಯಾಸಂಗ ಮಾಡುತ್ತಿದ್ದ ದಾನವ ವಟುಗಳು ಇದರಿಂದ ಚಿಂತಾಕುಲರಾದರು.  ಅಸುರ ಗುರುವಿನ ಮನವನ್ನು ಈ ನಮ್ಮ ಶತ್ರುಗಳ ಬಾಲಕ ಗೆದ್ದುಕೊಂಡರೆ ಕಷ್ಟವಲ್ಲಾ, ಏನು ಮಾಡೋಣ ಎಂದು ಚಿಂತಿಸಿದರು.

ಕೊನೆಗೊಂದು ದಿನ ಕಾಡಿನಲ್ಲಿ ಸೌದೆಯ  ಹೊರೆಯನ್ನು ಕಟ್ಟಿ ತರುತ್ತ ಆಯಾಸಗೊಂಡು ನಿರ್ಜನವಾದ ಆಲದ ಮರದಡಿಯಲ್ಲಿ ಕುಳಿತ ಕಚನನ್ನು ಮುತ್ತಿದರು.

“ಯಾರು ನೀನು?”

“ನಾನು ಕಚ, ಬೃಹಸ್ಪತ್ಯಾಚಾರ್ಯರ ಮಗ.”

“ಹಾಗಾದರೆ ಇಲ್ಲಿಗೇಕೆ ಬಂದೆ? ತಂತ್ರ ಹೂಡಿ ಸಂಜೀವಿನಿ ವಿದ್ಯೆ ಕಲಿಯಲೆಂದೋ?” ಎನ್ನುತ್ತ ಅವನ ಮೇಲೆ ಬಿದ್ದರು. ಚೂರುಚೂರಾಗಿ ಅವನನ್ನು ಸೀಳಿ ತಮ್ಮ ಬಳಿಯಲ್ಲಿದ್ದ ನಾಯಿಗಳಿಗೆ ಹಾಕಿ ತಿನ್ನಿಸಿಬಿಟ್ಟರು. ಕಚನು ಹೀಗೆ ನಾಮಾವಶೇಷವಾದ ಮೇಲೆ ತಮಗೆ ಬಂದಿದ್ದ ವಿಪತ್ತು ತೊಲಗಿತು ಎಂದುಕೊಂಡು ಸಂತೋಷಪಡುತ್ತ ಹೊರಟುಹೋದರು.

ದಾನವ ವಟುಗಳು ಕಚನ ಮೇಲೆ ಬಿದ್ದರು.

ಮಧ್ಯಾಹ್ನದ ಬಿಸಿಲು ಇಳಿಮುಖವಾಗುತ್ತಿತ್ತು. ದೇವಯಾನಿ ಕಚನಿಗಾಗಿ ಕಾಯುತ್ತಿದ್ದಳು. ಗೋವುಗಳ ಹಿಂಡು ಒಂದೊಂದಾಗಿ ಹೊರಟು ಗುಂಪಾಗಿ ಸೇರಿ ಮನೆಯನ್ನು ತಲುಪಿದವು. ದೇವಯಾನಿ ಅವುಗಳನ್ನು ಕಟ್ಟಿ ನೀರು ಮೇವಿಟ್ಟು ಅತ್ತಿತ್ತ ನೋಡಿದಳು. ಈ ವೇಳೆಗಾಗಲೆ ಒಳಸೇರಿ ಆಕಳಿಗೆ ಮೇವಿಡಲು ಮುಂದಾಗಬೇಕಿದ್ದ ಹಸನ್ಮುಖಿಯಾದ ಕಚ ಕಾಣಿಸಲಿಲ್ಲವಲ್ಲ! ದಾರಿಯಲ್ಲಿ ಏನಾದರೂ ಕಾರಣಕ್ಕೆ ತಡವಾಗಿರಬಹುದು, ಈಗ ಬಂದಾನು, ಇನ್ನೇನು ಬರಬಹುದು ಎಂದು ಎಣಿಕೆ ಹಾಕುತ್ತ ದಾರಿ ನೋಡಿದಳು. ಆದರೆ ಬರುವ ಸೂಚನೆ ಇಲ್ಲ. ನಕ್ಷತ್ರಗಳು ಆಕಾಶದಲ್ಲಿ ಕಾಣಿಸಿಕೊಂಡವು. ಎಲ್ಲಿ ಕಚ?

ಏನಾದರೂ ಅಪಾಯವಾಗಿರಬಹುದೇ ಎಂದು ಶಂಕಿಸಿದಳು. ದುಃಖದಿಂದ ಅವಳ ಮನ ಮುದುಡಿ ಹೋಯಿತು. ಮನೆಯಲ್ಲ ಬರಿದಾಗಿ ತೋರಿತು. ಅವನು ನುಡಿಸುತ್ತಿದ್ದ ವಾದ್ಯಗಳು ಅನಾಥರಂತೆ ಬಿದ್ದುಕೊಂಡಿದ್ದವು. ನಗುನಗುತ್ತ ಸುಳಿದಾಡುತ್ತಿದದ ಯುವಕನಾದ ಕಚನಿಲ್ಲದ ಮೇಲೆ ಕಾಲ ಕಳೆಯುವುದು ಹೇಗೆ? ಬಾಳೇ ಬೇಸರವೆನಿಸಿತು. ಒಂದು ವೇಳೆ ಸತ್ತೇ ಹೋಗಿದ್ದರೆ?

…. ಇದಕ್ಕೆ ಪ್ರತ್ಯುಪಾಯವನ್ನು ತಂದೆ ಬಲ್ಲರು ಎನ್ನುತ್ತ ಶುಕ್ರಾಚಾರ್ಯರನ್ನು ಸಮೀಪಿಸಿದಳು.

ಮುಖ ಬಾಡಿ ದುಃಖ ಅಪಾಯಶಂಕೆಗಳಿಂದ ದಿಗ್ಭ್ರಮೆ ಹೊಂದಿದ ದೇವಯಾನಿಯನ್ನು ಕಂಡು ಶುಕ್ರಾಚಾರ್ಯರ ಮನನೊಂದಿತು.

“ಏನು ಮಗೂ… ಏಕೆ ವ್ಯಸನ?”

“ಕಚನಿಲ್ಲ…. ತಂದೆಯೇ, ಗೋವುಗಳಾಗಲೆ ಮರಳಿ ಬಂದವು. ಕಚನ ಸುಳಿವೇ ಇಲ್ಲ. ಅವನಿಲ್ಲದೆ ನನಗೆ ಹೊತ್ತೇ ಹೋಗದು….” ಎನ್ನುತ್ತ ಅಳತೊಡಗಿದಳು.

ಅಸುರ ಗುರುಗಳು ವಿಚಾರ ಮಾಡಿದರು. ಇದೆಷ್ಟಾದರೂ ರಾಕ್ಷಸರ ನಗರ. ಕಚನಾದರೋ ಇವರ ವೈರಿಗಳಾದ ದೇವತೆಗಳಲ್ಲಿ ಒಬ್ಬ. ಅದರಿಂದ ಅವನನ್ನು ಇವರು ಕೊಂದುಹಾಕಿರಬಹುದು. ಮಗಳ ದುಃಖ ನೋಡಲಾಗದು. ಅವಳ ಸಮಾಧಾನಕ್ಕಾದರೂ ಅವನನ್ನು ಬದುಕಿಸಬೇಕಕು. ಎಂದುಕೊಂಡು ಶುಕ್ರಾಚಾರ್ಯರು ದಿವ್ಯವಾದ ಸಂಜೀವಿನಿ ಮಂತ್ರವನ್ನು ಪ್ರಯೋಗಿಸಿ “ಕಚನೇ ಬಾ”  ಎಂದು ಕರೆದರು.

ಕೂದಲೇ ನಾಯಿಗಳ ಒಡಲು ಸೀಳಿಕೊಂಡು ಜೀವಂತವಗಿ ಕಚ ಓಡೋಡಿ ಬಂದು ಗುರುಗಳ ಎದುರಿಗೆ ನಿಂತನು.

“ಏಕಿಷ್ಟು ತಡ, ಏನಾಯಿತು?” ಎಂದು ಗುರುಗಳು ಕೇಳಿದರು. ಕಚ ನಡೆದುದೆಲ್ಲವನ್ನೂ ತಿಳಿಸಿದ.

ಕಣ್ಣು ಮುಚ್ಚಿ ತೆರೆಯುವುದರಲ್ಲಿ ಶುಕ್ರಾಚಾರ್ಯರು ತಮ್ಮ ಪೂರ್ವರೂಪಿನಲ್ಲಿ ಕಂಗೊಳಿಸಿದರು.

ಗುರುಗಳು ಮನದಲ್ಲಿಯೇ ಚಿಂತಿಸಿದರು. ತಾವು ಅಂದುಕೊಂಡಂತೆಯೇ ಆಯಿತು. ಈ ಸುಂದರ ಯುವಕನನ್ನು ಅವರು ಬಾಳಗೊಟ್ಟಾರೆಯೇ? ಇರಲಿ, ಹೇಗೂ ಸಂಜೀವಿನಿ ಮಂತ್ರವಿದ್ಯೆಯಿದೆಯಲ್ಲ ಎಂದು ಸಮಾಧಾನಪಟ್ಟುಕೊಂಡರು.

ಕಚನನ್ನು ನಿರ್ಣಾಮ ಮಾಡಿದೆವು ಎಂದು ಇತರ ಶಿಷ್ಯರು ಸಂತೋಷದಿಂದಿದ್ದರು. ಗುರುಗಳು ಅವನನ್ನು ಬದುಕಿಸಿದರೂ ಕಚನಿಗೆ ಭಯವಾಗಿ ಆತ ವಿದ್ಯಾಭ್ಯಾಸವನ್ನು ತೊರೆದು ಓಡಿ ಹೋಗುವನೆಂದು ಅವರ ಊಹೆ, ಆದರೆ ಅದು ಸುಳ್ಳಾಯಿತು. ಕಚ ಎಂದಿನಂತೆ ನಗುತ್ತ ಹಾಡುತ್ತ ವ್ಯಾಸಂಗ ಮಾಡುತ್ತ ಉಳಿದ. ಇಮ್ಮಡಿ ಉತ್ಸಾಹದಿಂದ ಅವನು ಗುರುಸೇವಾತತ್ಪರನಾದ.

ಕಳೆದುಹೋಗಿದ್ದ ಒಂದು ಅಮೂಲ್ಯ ವಸ್ತು ಪುನಃ ದೊರಕಿದರೆ ಹೇಗೆ ಅದನ್ನು ಜತನಗೊಳಿಸುವರೋ ಹಾಗೆ ದೇವಯಾನಿ ಕಚನನ್ನು ಎಚ್ಚರಿಕೆಯಿಂದ ಪಾಲಿಸಿದಳು. ಆತನ ವಿದ್ಯಾಭ್ಯಾಸಕ್ಕೆ ಸ್ವಲ್ಪವೂ ಕುಂದುಂಟಾಗದಂತೆ ಅವನನ್ನು ವಿಶ್ವಾಸದಿಂದ ಉಪಚರಿಸಿದಳು. ಆತನ ಆಹಾರ ನಿದ್ರೆ ವ್ಯಾಸಂಗಗಳಲ್ಲಿ ಅಪಚಾರವಾಗದಂತೆ ನೋಡಿಕೊಂಡಳು.

ಸಮುದ್ರದಲ್ಲಿ ಕರಗಿಹೋದರೂ

ಆದರೆ ಇದರಿಂದ ಕಚನನ್ನು ಕೊಂದುಬಿಟ್ಟೆವೆಂದು ಹಿಗ್ಗಿ ಮೆರೆಯುತ್ತ ಇದ್ದ ರಕ್ಕಸರು ಪೆಚ್ಚಾದರು. ಅವನು ಎಂದಿನಂತೆ ಹಾಯಾಗಿರುವುದನ್ನು ಕಂಡು ಬೆಟ್ಟು ಕಚ್ಚಿದರು. ಗುರುಗಳು ಸಂಜೀವಿನಿ ಮಂತ್ರ ಪ್ರಯೋಗದಿಂದ ಮತ್ತೆ ಅವನನ್ನು ಬದುಕಿಸಿಕೊಂಡರು ಎಂಬುದನ್ನು ಕೇಳಿ ಚಿಂತಿತರಾದರು. ಪುನಃ ಅವನನ್ನು ಕೊಲ್ಲಬೇಕು. ಆದರೆ ಹಿಂದಿನ ಹಾಗಲ್ಲ. ಈ ಸಾರಿ ಅವನನ್ನು ಕೊಂದು ಚೆನ್ನಾಗಿ ಅರೆದು ನಾಶ ಮಾಡಬೇಕೆಂದು ತೀರ್ಮಾನಿಸಿದರು.

ಇದಕ್ಕೋಸ್ಕರ ಕಚನ ಸುಳಿದಾಟವನ್ನು ಗೊತ್ತು ಹಚ್ಚಿಕೊಂಡು ಕಾಯತೊಡಗಿದರು. ಒಂದು ದಿನ ಕಚ ದೇವಯಾನಿಗಾಗಿ ಹೂವನ್ನು ತರಲು ವನಕ್ಕೆ ಹೋಗಿದ್ದನು. ಅಲ್ಲಿ ಅವನ ಮೇಲೆ ರಾಕ್ಷಸರು ಬಿದ್ದು ಅವನನ್ನು ಸೀಳಿ ಹಾಕಿದರು. ಚೂರುಚೂರಾದ ಅವನ ದೇಹವನ್ನು ಬಂಡೆಗಳ ಮೇಲೆ ಅರೆದು ಕಡಲಿನಲ್ಲಿ ಕದಡಿಬಿಟ್ಟರು.

“ಈ ಸಲ ಮಾಡಿದ ಕೆಲಸ ಸರಿಯಾಯಿತು. ಇನ್ನು ಚಿಂತೆಯಿಲ್ಲ. ಅಷ್ಟಕ್ಕೂ ಅವನು ಬೇಕಾದರೆ ನಮ್ಮ ಗುರುಗಳೂ, ಅವರ ಮೋಹದ ಪುತ್ರಿಯೂ ಅವನನ್ನು ಸ್ವರ್ಗದಲ್ಲೋ ನರಕದಲ್ಲೋ ಹುಡುಕಿಕೊಳ್ಳಲಿ” ಎಂದು ತಮತಮಗೆ ತೋರಿದ ಹಾಗೆ ಮಾತನಾಡಿಕೊಳ್ಳುತ್ತ ತಮ್ಮ ತಮ್ಮ ಮನೆ ಸೇರಿದರು.

ಇತ್ತ ಕಚ ಹೋಗಿ ಬಹಳ ಹೊತ್ತಾದರೂ ಬರಲಿಲ್ಲವಲ್ಲ ಎಂದು ದೇವಯಾನಿ ಕಳವಳಗೊಂಡಳು. ಅಸುರರು ಪುನಃ ಅವನನ್ನು ಕೊಂದಿರಬಹುದು ಎಂದು ತರ್ಕಿಸಿದಳು. ಆಹಾರವನ್ನು ತೊರೆದು, ಅಲಂಕಾರಗಳನ್ನು ತ್ಯಜಿಸಿ, ಮಾಸಿದ ಬಟ್ಟೆಯುಟ್ಟು ತಂದೆಯ ಎದುರಿಗೆ ಬಂದು ಗೋಳಿಟ್ಟಳು. ತಂದೆಯ ಕರುಳು ಚುರ್ ಎಂದಿತು. ಶುಕ್ರಾಚಾರ್ಯರಿಗೆ ಒಬ್ಬಳೇ ಮಗಳು, ಅವಳೇ ಅವರ ಪ್ರಾಣ. ಇಂತಹ ಸ್ಥಿತಿಯಲ್ಲಿ ಅವರು ಮಗಳನ್ನು ಕಂಡಾರೆ! ಮಗಳಿಗೆ ಅಭಯವನ್ನು ಹೇಳಿ ಮತ್ತೆ ಸಂಜೀವಿನಿ ಮಂತ್ರವನ್ನು ಪ್ರಯೋಗಿಸಿದರು.

ಸಮುದ್ರದಲೆಗಳಲ್ಲಿ ಕರಗಿಹೋಗಿದ್ದ ಕಚ ಪುನಃ ಪ್ರಾಣಧಾರಣೆ ಮಾಡಿದ. ಜಲದೇವತೆಯಂತೆ ಕಂಗೊಳಿಸುತ್ತ ಹರ್ಷದಿಂದ ಗುರುಗಳ ಎದುರಿಗೆ ಬಂದು ನಿಂತ. ನಡೆದುದನ್ನೆಲ್ಲಾ ಗುರುಗಳಿಗೆ ತಿಳಿಸಿದ. ಗುರುಗಳು ಮುಗುಳ್ನಕ್ಕರು. ಗುರುಗಳ ರಕ್ಷೆ ಪಡೆದ ನನಗೆ ಇನ್ನೇನು ಕೊರತೆ ಎಂದು ಕಚ ಸಂತಸಗೊಂಡ. ಬದುಕಿ ಬಂದ ಕಚನನ್ನು ಕಂಡು ದೇವಯಾನಿ ಹಿಗ್ಗಿದಳು. ಅವಳನ್ನು ಕಂಡು ಆಚಾರ್ಯರು ಹಿರಿಹಿರಿ ಹಿಗ್ಗಿದರು.

ದೇವಯಾನಿಯ ಮನಸ್ಸು ನವಿಲಿನಂತೆ ನರ್ತಿಸಿತು. ಮತ್ತೆ ಆಟ ಪಾಠಗಳು ಆಹಾರ ವಿಹಾರಗಳು ಸುಸೂತ್ರವಾಗಿ ಸಾಗಿದವು.

ಶುಕ್ರಾಚಾರ್ಯರ ಹೊಟ್ಟೆಯಲ್ಲೆ!

ಕಚನು ಕೂದಲು ಸಹ ಕೊಂಕದೆ ಕ್ಷೇಮದಿಂದ ಹಿಂದಿರುಗಿದುದನ್ನು ಕೇಳಿ ಅಸುರರು ಒಳಗೊಳಗೇ ಕುದಿದುಹೋದರು. ಎರಡು ಸಲ ಕೊಂದೆಸೆದರೂ ಬದುಕಿಬಿಟ್ಟನಲ್ಲ! ಹಾಗಾದರೆ ಸಂಜೀವಿನಿ ಮಂತ್ರಕ್ಕೆ ಎದುರೇ ಇಲ್ಲವೆ? ಅದರಿಂದ ಇಂತಹ ಮಂತ್ರವನ್ನು ಸಾಧಿಸಿದ ಗುರುಗಳ ಬಗ್ಗೆ ಅಸುರರಿಗೆ ಹೆಮ್ಮೆಯೂ, ಭಯವೂ ಏಕಕಾಲದಲ್ಲಿ ಉಂಟಾದವು. ಆದರೂ ಕಚನನ್ನು ಏನಾದರೂ ಮಾಡಿ ಕೊಲ್ಲಬೇಕಲು. ಅವರೆಲ್ಲರೂ ಸೇರಿ ಯೋಚಿಸಿದರು.

“ಕೊಂದು ತಿನ್ನಿಸಿದರೂ ಬದುಕಿದ, ಅರದೆ ಕದಡಿದರೂ ಬದುಕಿದ. ಇನ್ನೇನು ಮಾಡೋಣ?”

“ಏ, ಅವನಲ್ಲಿ ಅಲ್ಲ ಆ ಶಕ್ತಿ ಇರುವುದು. ಆ ಶಕ್ತಿ ಇರುವುದು ನಮ್ಮ ಗುರುಗಳಲ್ಲಿ.”

“ಹಾಗಾದರೆ ನಮ್ಮ ಗುರುಗಳನ್ನೇ ಪುಡಿ ಮಾಡುವ.”

“ಹೇ ಮೂರ್ಖ ಶಿಖಾಮಣಿ, ಗುರುಗಳು ಪುಡಿಯಾದರೆ ನಾವೂ ಪುಡಿಯಾದಂತೆ. ಅವರ ಬಲದಿಂದಲೇ ನಾವು ಬದುಕಿರುವುದು.”

“ಹೌದು ಹೌದು… ನೂಕಿರೋ ಆ ಮುಠ್ಠಾಳನನ್ನು ಆಚೆಗೆ” ಎಂದು ದೊಡ್ಡ ದೊಡ್ಡ ಗಲಭೆಯೆದ್ದು ಕೂಗಾಟ ಹೊಡೆದಾಟ ಪ್ರಾರಂಭವಾಯಿತು.

ಅಷ್ಟರಲ್ಲಿ ಹಲವರೆದ್ದು ಎಲ್ಲರಿಗೂ ಸಮಾಧಾನ ಹೇಳಿ ಪುನಃ ಮಂತ್ರಾಲೋಚನೆಗೆ ತೊಡಗಿದರು.

“ಈ ಸಲ ಆ ಕಚನನ್ನು ಸುಟ್ಟು ಬೂದಿ ಮಾಡೋಣ” ಎಂದು ಒಬ್ಬರು ಸಲಹೆ ಕೊಟ್ಟರು.

“ಬೂದಿ ಮಾಡಿದರೇನು, ನಮ್ಮ ಆಚಾರ್ಯರು ಮಂತ್ರ ಹೇಳಿಬಿಟ್ಟರೆ ಸಾಕು, ಬದುಕಿಬಿಡುತ್ತಾನೆ.”

“ಹಾಗಾದರೆ ಆ ಬೂದಿಯನ್ನು ಹಾಲಿನಲ್ಲಿ ಹಾಕಿ ದೇವಯಾನಿಗೆ ಕುಡಿಸಿಬಿಡೋಣ. ಕಚನನ್ನು ಬದುಕಿಸಲು ಹೋಗಿ ಮಗಳನ್ನು ಕೊಲ್ಲಬೇಕಾಗುತ್ತದೆ. ಹಾಗೆ ಅವರು ಕೊಂದಾರೆಯೆ?” ಎಂದೊಬ್ಬ ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ.

“ಆಹಾ! ಭೇಷಾದ ಉಪಾಯ. ನಮ್ಮ ಗುರುಗಳಿಗೆ ಮಗಳ ಮೇಲೆ ಎಣೆಯಿಲ್ಲದ ಪ್ರೀತಿ. ಮೂರು ಲೋಕವನ್ನು ಬಿಟ್ಟರೂ ಮಗಳನ್ನು ಬಿಡರು.”

“ಅಬ್ಬಬ್ಬ, ಆ ಹಠಮಾರಿ ಹುಡುಗಿ ಹಾಲು ಕುಡಿದರೆ ಕಚನ ಕಥೆ ಮುಗಿದಹಾಗೆಯೇ.”

“ಎಲ! ಆಚಾರ್ಯರು ಆಗ ಕಚನನ್ನು ಬದುಕಿಸಿ ಅನಂತರ ಚೂರುಪಾರಾಗಿದ್ದ ದೇವಯಾನಿಯನ್ನೂ ಬದುಕಿಸುತ್ತಾರೆ. ಅಂತೂ ಕಚ ಉಳಿಯುತ್ತಾನೆ.”

“ಹೌದಪ್ಪ  ಹೌದು… ಹೀಗೆ ನಡೆಯುವುದರಲ್ಲಿ ಸಂಶಯವೇ ಇಲ್ಲ.”

ಆಗ ಮೂಲೆಯಲ್ಲಿ ಕುಳಿತಿದ್ದ ಕಿರುಗಣ್ಣಿನ ದಾನವನೊಬ್ಬ ಬಂದ. ಆ ಗುಂಪಿನ ಯಜಮಾನನ ಕಿವಿಯಲ್ಲಿ ಏನೇನೋ ಹೇಳಿದ. ಅದನ್ನು ಕೇಳಿ ಅವನು ತಲೆದೂಗುತ್ತ “ಹ್ಞಾ ಸರಿ, ಅದೇ ಸರಿ” ಎಂದು ಹಿಗ್ಗಿನಿಂದ ಚಿಟಿಕೆ ಹಾಕುತ್ತ ನಿಂತ. ಅನಂತರ ಇಬ್ಬರೂ ಆಲೋಚಿಸಿ, “ಈಗ ನಮ್ಮ ಮಂತ್ರಾಲೋಚನೆ ಮುಗಿಯಿತು. ಪರಿಣಾಮವನ್ನು ನೀವೇ ನೋಡುತ್ತೀರಿ” ಎಂದು ತಿಳಿಸಿದರು.

ಅವರಲ್ಲಿ ಯಾರನ್ನೂ ಬಿಡದಂತೆ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ಅಂಟಿಸಿ ಅನುಮಾನಕ್ಕೆ ಆಸ್ಪದ ಬರದಂತೆ ನಡೆಯಬೇಕೆಂದು ಕಟ್ಟಾಜ್ಞೆ ವಿಧಿಸಿದರು. ಕುತೂಹಲದಿಂದ ಅವರೆಲ್ಲ ಪಿತೂರಿಗೆ ಸಿದ್ಧರಾದರು.

ಕೆಲವು ದಿನಗಳು ಕಳೆದವು. ಕಚನು ಎಂದಿನಂತೆ ಗೋವುಗಳನ್ನು ಅಟ್ಟಿಕೊಂಡು ಹೊರಟ. ನಿಶ್ಯಬ್ದವಾದ ಕಣಿವೆಯ ಕಾಡಿನಲ್ಲಿ ದನಗಳು ಮೇಯತೊಡಗಿದವು. ಅವು ನಿಶ್ಚಿಂತೆಯಿಂದ ಹುಲ್ಲು ಮೇಯುತ್ತ ಬೆಟ್ಟದ ಮೇಲು ಮೇಲಕ್ಕೆ ಸರಿದವು. ಕಚ ನೀರಿನಲ್ಲಿ ಮುಳುಗಿ ಮುಳುಗಿ ಮೇಲೆದ್ದು ಆದಿತ್ಯನಿಗೆ ಆರ್ಘ್ಯವನ್ನು ಕೊಡುತ್ತಿರುವಾಗ ಹಲವಾರು ಕೈಗಳು ಅವನನ್ನು ಬಲವಾಗಿ ಹಿಡಿದುಕೊಂಡವು.

“ಬಾ ಬಾ…. ಸಂಜೀವಿನಿ ದೊರಕಿಸುತ್ತೇವೆ” ಎಂದು ಹಾಸ್ಯ ಮಾಡುತ್ತ ಅವರೆಲ್ಲ ಅವನನ್ನು ಹಿಂಸಿಸಿ ಕಡಿದು ಹಾಕಿದರು. ಇನ್ನೊಬ್ಬ ರಾಕ್ಷಸ ಅಲ್ಲೇ ಒಂದು ಚಿತೆಯನ್ನು ನಿರ್ಮಿಸಿದ್ದ. ಕಚನ ದೇಹವನ್ನು ಚಿತೆಯ ಮೇಲಿಟ್ಟರು. ಅವನ ಕೆಂದಾವರೆಯಂತಹ ದೇಹ ನೋಡುನೋಡುತ್ತಿರುವಷ್ಟರಲ್ಲಿ ಬೂದಿಯಾಗಿಬಿಟ್ಟಿತು. ಉಳಿದ ರಕ್ಕಸರು ಶುಂಠಿ ನಿಂಬೆ ಮುಂತಾದ ಸುಗಂಧಿತ ಖಾದ್ಯ ರಸಗಳೊಡನೆ ಆ ಬೂದಿಯನ್ನು  ಕಲೆಸಿ ಅರೆದರು. ಹೊಚ್ಚಹೊಸದಾದ ಸುರೆಯಲ್ಲಿ ಅದನ್ನು ಸೇರಿಸಿದರು.

ಸ್ವಲ್ಪ ಹೊತ್ತಿಗೆಲ್ಲ ಅಸುರಗುರುಗಳ ಮನೆಯ ಮುಂದೆ ನಯವಿನಯ ಸಂಭ್ರಮಗಳ ದನಿ ಕೇಳಿ ಬಂದಿತು. ಹೊಳೆಹೊಳೆಯುವ ಹೊನ್ನ ಕಲಶವನ್ನು ಹಿಡಿದು ದಾನವ ಪ್ರಮುಖರಿಬ್ಬರು ಭಯ ಭಕ್ತಿ ಉಲ್ಲಾಸಗೊಳೊಡನೆ ಬಂದು ನಿಂತರು.

ಶುಕ್ರಾಚಾರ್ಯರು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡು ಕುಶಲವನ್ನು ಕೇಳಿದರು. ಒಂದೆರಡು ಗಳಿಗೆ ವಿನಯದಿಂದ ಮಾತನಾಡಿ ಆ ರಕ್ಕಸರು ಬಹು ವಿನಯದಿಂದ ಆ ಕಲಶವನ್ನು ಅರ್ಪಿಸಿ, “ಹೊಸ ಬಗೆಯ ಹಸನಾದ ಸುರೆಯನ್ನು ಗುರುಗಳ ಪ್ರೀತ್ಯರ್ಥವಾಗಿ ತಂದಿದ್ದೇವೆ, ಸ್ವೀಕರಿಸಬೇಕು” ಎಂದು ಬೇಡಿಕೊಂಡರು.

ಸುರಾಪಾನದಲ್ಲಿ ಸಹಜವಾಗಿಯೇ ಆಸಕ್ತರಾಗಿದ್ದ ಆ ದಾನವ ಗುರುಗಳು ಸಂಪ್ರೀತರಾಗಿ ಅದನ್ನೆತ್ತಿ ಸೇವಿಸಿದರು.  ಅಸುರರ ಮುಖ ಹಿಗ್ಗಿ ಹೀರೇಕಾಯಿಯಾಯಿತು. “ಕೃತಾರ್ಥರಾದೆವು… ನಮ್ಮ ಬದುಕು ಸಾರ್ಥಕವಾಯಿತು. ನಾವಿನ್ನು ಬರಲಪ್ಪಣೆಯೇ?” ಎಂದು ಬೇಗ ಬೇಗೆ ಅಲ್ಲಿಂದ ಮರೆಯಾದರು.

ಇಳಿಬಿಸಿಲಿನ ಹೊತ್ತು ಆಕಳು ಬಂದು ಮನೆ ಸೇರಿದವು. ಶುಭ್ರವಾದ ಅವುಗಳ ಮೈಯೂ ಪುಷ್ಪವಾದ ಅವುಗಳ ಆಕಾರವೂ ನೋಡಿದವರ ಕಣ್ಣಿಗೆ ಹಬ್ಬವಾಗಿದ್ದವು. ಬೇಗ ಬೇಗ ಬಂದು ಅವುಗಳನ್ನು ಕಟ್ಟಿ ನೀರು ತೋರಿಸಿ ಉಪಚರಿಸುವ ಕಚನಿಲ್ಲದೆ ಅನಾಥರಂತೆ ಅತ್ತಿತ್ತ ನೋಡುತ್ತ ನಿಂತವು. ಕಾಡಿನಿಂದ ಸೀತೆ ಹೂ-ದೇವಯಾನಿಗೆ ಪ್ರಿಯವಾದ ಹೂ-ತರುವುದೆನೆಂದಿದ್ದ ಕಚ ತಂದನೋ ಇಲ್ಲವೋ ಎಂದುಕೊಳ್ಳುತ್ತಾ ಹೊರಬಂದ ದೇವಯಾನಿಗೆ ತಿಳಿದುಹೋಯಿತು. ಆದರೂ ಇಲ್ಲೆಲ್ಲಾದರೂ ಹುಡುಗಾಟಕ್ಕೆ ಅವಿತರಬಹುದೇ ಎಂಬ ಆಸೆಯಿಂದ ಹುಡುಕಿ ನೋಡಿದಳು. ಸ್ವಲ್ಪ ಹೊತ್ತು ನೋಡುವ ಎಂದು ಕಳವಳ ಪಡುವ ಮನದಿಂದ ಕಾಯ್ದು ನೋಡಿದಳು. ಕೊನೆಗೆ ಬರಿಗೈಯವಳಾಗಿ ತಂದೆಯ ಬಳಿ ಬಂದು ನಿಂತಳು.

“ತಂದೆಯೇ, ರಕ್ಕಸರು ಕಚನನ್ನು ಕೊಂದಿದ್ದಾರೆ” ಎಂದು ಹೇಳುತ್ತಾ ಅಳತೊಡಗಿದಳು.

ಆಚಾರ್ಯರು ಇದನ್ನು ಕೇಳಿ ಕೋಪಗೊಂಡರು, ಬೇಸತ್ತರು. “ಇರಲಿ, ಬ್ರಹ್ಮಚಾರಿಯಾದ ವಿದ್ಯಾರ್ಥಿಯನ್ನು ಕೊಲ್ಲುವ ಇವರಿಗೆ ಎಂದಾದರೂ ಏಳಿಗೆಯುಂಟೆ?” ಎಂದುಕೊಂಡರು.

“ಮಗೂ, ಅಸುರರು ಕಚನನ್ನು ಬಿಡುವ ಹಾಗಿಲ್ಲ, ನಾವಾದರೂ ಅವನ ಆಸೆಯನ್ನು ಬಿಡಬೇಕು.”

ಈ ಮಾತಿನಿಂದ ದೇವಯಾನಿಯ ಧೈರ್ಯ ಕುಸಿಯಿತು. ನೆಲಕ್ಕೆ ಬಿದ್ದು ಹೊರಳಾಡಿ ಅಳತೊಡಗಿದಳು. “ತಂದೆಯೇ, ನೀವಾಗಲೆ ಕಚನನ್ನು ಮರೆತಿರಾ! ಅವನ ಹಾಗೆ ನಿಮ್ಮ ಸೇವೆ ಮಾಡುವವರು ಇನ್ನೊಬ್ಬರುಂಟೆ? ಎಂತಹ ಹಸನ್ಮುಖಿ! ಹಾಗೆ ಹಾಡುವವರನ್ನು ನರ್ತಿಸುವವರನ್ನು ನಾನು ಕಂಡು ಕೇಳಿ ಅರಿಯೆ! ತಂದೆಯೇ, ನಾನು ಕಚನಿಲ್ಲದೆ ಬದುಕಲಾರೆ…”

‘ಕಚನಿಲ್ಲದೆ ನಾನು ಬದುಕಲಾರೆ’ ಎನ್ನುತ್ತಿದ್ದಾಳೆ ಪ್ರಾಣಪದಕವಾದ ಮಗಳು!

ಅವಳ ಗೋಳನ್ನು ಕಂಡು ತಂದೆಯ ಮನಸ್ಸು ಕರಗಿತು. ತಮ್ಮ ದಿವ್ಯಜ್ಞಾನದಿಂದ ಕಚ ಏನಾಗಿದ್ದಾನೆಂದು ಕಾಣಲು ಪ್ರಯತ್ನಿಸಿದರು. “ಕಚನೇ, ಎಲ್ಲಿರುವೆ?” ಎಂದು ಕೇಳಿದಾಗ “ಗುರುಗಳೆ, ನಿಮ್ಮ ಶರೀರದಲ್ಲಿದ್ದೇನೆ” ಎಂದು ಕಚನ ಜೀವ ಉತ್ತರ ಕೊಟ್ಟಿತು.

ಶುಕ್ರಾಚಾರ್ಯರು ಆಶ್ಚರ್ಯಪಟ್ಟರು. “ಬ್ರಹ್ಮಚಾರಿ, ನೀನು ನನ್ನ ಶರೀರದೊಳಗೆ ಹೇಗೆ ಬಂದೆ?” ಎಂದು ಕೇಳಿದರು.

“ನನ್ನನ್ನು ಸುಟ್ಟು ಬೂದಿ ಮಾಡಿ ಅದನ್ನು ಸುರೆಯಲ್ಲಿ ಮಿಶ್ರಮಾಡಿ ರಾಕ್ಷಸರು ನಿಮಗೆ ಕೊಟ್ಟರು. ಅದನ್ನು ನೀವು ಪಾನ ಮಾಡಿದಿರಿ. ಹಾಗಾಗಿ ನಾನು ಇಲ್ಲಿಗೆ ಬಂದೆ” ಎಂಬ ಕಚನ ವಿವರಣೆ ಕೇಳಿಸಿತು.

ಇದರಿಂದ ಆಚಾರ್ಯರು ಕೋಪಾವಿಷ್ಟರಾದರು. “ಗುರುವಿಗೆ ಅಪಚಾರ ಮಾಡುವ ಈ ದಾನವರಿಗೆ ಎಂದೂ ಏಳ್ಗೆ ಇಲ್ಲದೆ ಹೋಗಲಿ” ಎಂದು ಶಪಿಸಿದರು. ತಿಳಿಯದೆ ವಿವೇಚಿಸದೆ ದೊರೆತೆ ಸುರೆಯನ್ನು ಪಾನ ಮಾಡುವುದು ಅಧರ್ಮವಾಗಲಿ ಎಂದು ಅಪ್ಪಣೆ ಮಾಡಿದರು.

“ಮಗುವೆ ದೇವಯಾನಿ, ನೀನಿನ್ನು ಕಚನ ಆಸೆ ಬಿಡಬೇಕಮ್ಮ” ಎಂದು ಸಮಾಧಾನ ಮಾಡಲು ಪ್ರಯತ್ನಿಸಿದರು.

ಇದರಿಂದ ಹತಾಶಳಾದ ದೇವಯಾನಿ, “ಅಯ್ಯೋ ಇನ್ನೇನು ಗತಿ ತಂದೆ! ಅವನಿಲ್ಲದೆ ನಾನು ಬದುಕಲಾರೆ. ಇದು ನಿಶ್ಚಯವಾದರೆ ನನಗೆ ಮರಣವುಂಟಾಗಲಿ” ಎಂದು ಹಲುಬಲಾರಂಭಿಸಿದಳು.

ದೇವಯಾನಿಯ ಶೋಕವನ್ನು ಕಂಡು ಆಚಾರ್ಯರು ಗದ್ಗದಿತರಾದರು. ಅವಳಿಗೆ ಸತ್ಯವನ್ನು ಹೇಳಬೇಕಾಯಿತು. “ಮಗು ದೇವಯಾನಿ, ಕಚ ಈಗ ನನ್ನ ಒಡಲಲ್ಲಿದ್ದಾನೆ. ಅವನು ಬದುಕಬೇಕಾದರೆ ನಾನು ಸಾಯಬೇಕು. ಇದು ನಿನಗೆ ಒಪ್ಪಿಗೆಯೇ?” ಎಂದು ಮಗಳ ತಲೆಯನ್ನು ನೇವರಿಸಿ ವಿವರಿಸಿದರು.

“ಆಗದು ತಂದೆಯೇ…. ನಿನ್ನನ್ನುಳಿದು ನಾನು ಖಂಡಿತ ಬದುಕಲಾರೆ” ಎಂದು ಪಿತನ ಕೊರಳಿಗೆ ಬಿದ್ದು ದೇವಯಾನಿ ಅತ್ತಳು. ದೇವಯಾನಿಗೆ ಈಗ ದಿಕ್ಕೇ ತೋಚದಂತಾಯಿತು. ಆ ಕಡೆ ಕಚ, ಈ ಕಡೆ ತಂದೆ ಒಬ್ಬರು ಉಳಿಯಬೇಕಾದರೆ ಇನ್ನೊಬ್ಬರು ಸಾಯಲೇಬೇಕು. ಯಾವುದನ್ನೂ ಹೇಳಲಾರಳು-ಯಾವುದನ್ನೂ ಬಯಸಲಾರಳು. ಅವಳ ದುಃಖ ಬೆಂಕಿಯಂತೆ ಒಳಗೇ ಸುಡಲಾರಂಭಿಸಿತು. ಕ್ಷಣಕ್ಷಣಕ್ಕೆ ಅವಳ ದುಃಖದ ತೀವ್ರತೆ ಹೆಚ್ಚುತ್ತಾ ಬಂತು.  “ಇನ್ನು ನನಗೆ ಸಾವೇ ಶರಣು” ಎಂದುಕೊಂಡಳು.

ಮಗಳ ದುಃಖದ ಆವೇಗವನ್ನು ಗಮನಿಸಿದ ಆಚಾರ್ಯರು ಬಗೆಬಗೆಯಾಗಿ ಆಲೋಚಿಸಿದರು. ಈ ದುಃಖದ ಕೋಟೆಯಿಂದ ಹೊರಬರುವ ಬಗೆ ಹೇಗೆ? ಕಚನನ್ನು ಉಳಿಸದೆ ಮಗಳಿಗೆ ಸುಖವಿಲ್ಲ.  ಹಾಗಾದರೆ ಕಚನನ್ನೂ ಉಳಿಸಿ ತಾವೂ ಉಳಿಯುವ ಮಾರ್ಗ ಎಂತು? ಅದು ಒಂದೇ ಸರಿ. ಅವನಿಗೆ ಸಂಜೀವಿನಿ ಮಂತ್ರವನ್ನು ಉಪದೇಶಿಸಿ ಅವನು ಹೊರಬಂದ ಮೇಲೆ ಅವನಿಂದ ತಾನು ಬದುಕುವುದು!

ಆದರೆ ಕಚನಿಗೆ ಸಂಜೀವಿನಿಯನ್ನು ಉಪದೇಶಿಸುವುದೆ? ಅವನಿಗೆ ಅದನ್ನು ಉಪದೇಶಿಸಿದರೆ ಅದನ್ನು ದೇವತೆಗಳಿಗೆ ಕೊಟ್ಟಂತೆಯೇ ಆಯಿತು. ನಮ್ಮ ವೈರಿಗಳಿಗೆ ನನ್ನಿಂದ ಸಹಾಯವೆ? ಆಚಾರ್ಯರು ಚಿಂತಿಸಿದರು. ತನಗೆ ಈ ರೀತಿ ಅಪಚಾರ ಮಾಡಿದ ರಕ್ಕಸರ ಮೇಲೆ ಅವರಿಗೆ ಕೋಪ ಬಂತು. ಈ ಮೂರ್ಖರನ್ನು ಕಾಪಾಡಿ ಏನು ಪ್ರಯೋಜನ ಎನ್ನಿಸಿತು.

ಮಗು ದೇವಯಾನಿ, ದುಃಖಿಸದಿರು, ಈಗ ಕಚನಿಗೆ ಸಂಜೀವಿನಿಯನ್ನು ಉಪದೇಶಿಸಿ ಅವನನ್ನು ಕರೆಯುತ್ತೇನೆ. ಅವನು ಸಂಜೀವಿನಿಯನ್ನು ಮಂತ್ರಿಸಿ ನನ್ನನ್ನು ಬದುಕಿಸಲಿ” ಎಂದು ತಮ್ಮ ನಿಶ್ಚಯವನ್ನು ಪ್ರಕಟಿಸಿದರು.

ನೀರಾಡುವ ಕಂಗಳಲ್ಲಿ ಆಸೆ ತುಂಬಿಕೊಂಡು ದೇವಯಾನಿ ಎದ್ದು ನಿಂತಳು. ಮೊಳಕೆಯೊಡೆದ ಹೊಸ ಭರವಸೆಯಿಂದ ಅವಳ ದುಃಖ ಕ್ರಮವಾಗಿ ಶಮನವಾಗುತ್ತಿತ್ತು.

ಇತ್ತ ಆಚಾರ್ಯರು, “ಬ್ರಹ್ಮಚಾರಿಯಾದ ಕಚನೆ, ಗಮನವಿಟ್ಟು ಕೇಳಿಕೋ. ಈಗ ನಿನಗೆ ಮೃತ್ಯುಸಂಜೀವಿನಿ ಮಂತ್ರವನ್ನು ಉಪದೇಶಿಸುತ್ತೇನೆ” ಎಂದರು.

ಈ ಮಾತನ್ನು ಕೇಳಿ ಕಚನು ರೋಮಾಂಚಿತನಾದನು. ಎಂತಹ ಸನ್ನಿವೇಶದಲ್ಲಿ ನನ್ನ ಜೀವಿತೋದ್ದೇಶ ಸಫಲವಾಗುತ್ತಿದೆ! ದೇಹರಹಿತನಾಗಿ ಗುರುವಿನ ಒಡಲಲ್ಲಿ ವಾಸಮಾಡುತ್ತಿರುವಾಗ ನನ್ನ ಆಸೆ ಫಲಿಸುತ್ತ ಇದೆ, ನನ್ನ ಗುರಿ ಸಾಧಿತವಾಯಿತು ಎಂದು ಆನಂದಿಸಿದನು.

“ವಟುವೇ, ಸಿದ್ಧವಾಗಿರುವೆಯಾ?” ಆಚಾರ್ಯರು ಕೇಳಿದರು.

“ಆಚಾರ್ಯರೇ, ಸಿದ್ಧನಾಗಿದ್ದೇನೆ” ಎಂದು ಜೀವವೆಲ್ಲ ಕಿವಿಯಾಗಿ ಮನಸ್ಸಾಗಿ ಸ್ಥಿರನಾದನು ಕಚ.

ಆಚಾರ್ಯರು ಮಂತ್ರೋಪದೇಶ ಮಾಡಿದರು.

“ಶಿಷ್ಯನೇ, ಮಂತ್ರವು ಕರಗತವಾಯಿತೆ, ಇನ್ನೊಮ್ಮೆ ಕೇಳು” ಎಂದು ಪುನರಪಿ ಉಪದೇಶ ಮಾಡಿದರು.

ಕಚನು “ಗುರುಗಳೇ, ಮಂತ್ರವನ್ನು ಸ್ವೀಕರಿಸಿದ್ದೇನೆ. ನಿಮ್ಮ ಸೇವೆಗೆ ಸಿದ್ಧನಾಗಿದ್ದೇನೆ” ಎಂದು ಹೇಳಿದಾಗ ಆಚಾರ್ಯರು ದೃಡಮನಸ್ಸರಾಗಿ ಮಂತ್ರವನ್ನು ಪ್ರಯೋಗಿಸಿ “ಕಚನೇ ಬಾ” ಎಂದು ಕರೆದರು.

ಮರುಕ್ಷಣವೇ ಅಗಲವಾದ ಕಣ್ಗಳಿಂದ ದೇವಯಾನಿ ನೋಡುತ್ತ ನಿಂತಂತೆಯೆ ಶುಕ್ರಾಚಾರ್ಯರ ದೇಹ ಸೀಳುಸೀಳಾಯಿತು. ಕಚನು ತನ್ನ ಹಿಂದಿನ ರೂಪವನ್ನು ಧರಿಸಿ ಹೊರಬಂದನು. ತನ್ನಾಸೆಗಾಗಿ ಅಸುವನ್ನೂ ತೊರೆದು ಮಲಗಿದ ತಂದೆಯನ್ನು ಕಂಡು ದೇವಯಾನಿ ಕರಗಿ ಜರ್ಝರಿತ ಹೃದಯಳಾಗಿ ಕುಸಿಯುತ್ತಿದ್ದಂತೆಯೇ ನಗುಮುಖದಿಂದ ಕಚನು ಆಕೆಯನ್ನೂ ಗುರುವಿನ ಶರೀರವನ್ನೂ ವಂದಿಸಿದನು. ನಿಶ್ಚಲ ಮನಸ್ಸಿನಿಂದ ಆಗ ತಾನೆ ಕಲಿತ ಸಂಜೀವಿನಿಯನ್ನು ಪ್ರಯೋಗಿಸಿದನು. “ಗುರುವೆ, ಮಹಾ ಮಹಿಮರಾದ ಶುಕ್ರಾಚಾರ್ಯರೆ, ತಾವು ಬನ್ನಿರಿ”  ಎಂದು ಆಹ್ವಾನಿಸಿದನು. ಕಣ್ಣು ಮುಚ್ಚಿ ತರೆಯುವುದರಲ್ಲಿ ಶುಕ್ರಾಚಾರ್ಯರು ತಮ್ಮ ಪೂರ್ವರೂಪಿನಲ್ಲಿ ಕಂಗೊಳಿಸಿದರು. ಮಗಳನ್ನೂ ಅದೇ ತಾನೆ ಉಪದೇಶಿತನಾಗಿ ಕಂಗೊಳಿಸುತ್ತ ನಿಂತಿದ್ದ ಶಿಷ್ಯನನ್ನೂ ಪ್ರೀತಿಯಿಂದ ಆಲಿಂಗಿಸಿಕೊಂಡರು.

ಪ್ರೀತಿಯ ದೇವಯಾನಿಯಿಂದಲೇ ಶಾಪ!

ಸಂಜೀವಿನಿ ಮಂತ್ರ ಕಲಿಯಲೆಂದೇ ಬಂದಿದ್ದ ಕಚ. ಆ ಇಷ್ಟಾರ್ಥ ಕೈಗೂಡಿತು. ಆದರೂ ಕಚನ ಗುರುಸೇವೆ ಉತ್ಸಾಹದಿಂದ ಮುಂದುವರಿಯಿತು. ಮನೆಯ ಕೆಲಸ ಕಾರ್ಯಗಳಲ್ಲಿಯೂ ಅದೇ ಬಗೆಯ ಶ್ರದ್ಧೆ. ಗೋಸೇವೆಯಲ್ಲಿ ಅಂತಹುದೇ ತಲ್ಲೀನತೆ. ಗುರುಪುತ್ರಿ ದೇವಯಾನಿಯಲ್ಲಿಯೂ ಅದೇ ಬಗೆಯಾದ ವಾತ್ಸಲ್ಯ ಗೌರವಗಳು. ಹೀಗೆ ಹಲವು ವರ್ಷ ಕಳೆದ ಮೇಲೆ ಅವನ ಶಿಷ್ಯವೃತ್ತಿ ಪೂರೈಸಿತು. ವಿದ್ಯೆ ಸಂಪೂರ್ಣವಾಯಿತು.

ಅವನ ಶ್ರದ್ಧೆ, ವಿನಯಗಳಿಂದ ಶುಕ್ರಾಚಾರ್ಯರು ಸಂಪ್ರೀತರಾದರು. ಅವನ ಶಿಷ್ಯವೃತ್ತಿ ಮುಗಿಯಿತು ಎಂದು ಹೇಳಿದರು. ದೇವಲೋಕಕ್ಕೆ ಹಿಂದಿರುಗಲು ಅವನಿಗೆ ಅಪ್ಪಣೆ ದೊರೆಯಿತು.

ಕಚನ ಶಿಷ್ಯವೃತ್ತಿ ಮುಗಿಯುತ್ತಿದ್ದಂತೆಲ್ಲ ದೇವಯಾನಿ ಹೆಚ್ಚು ಉದಾಸೀನಳಾಗತೊಡಗಿದಳು. ಇಷ್ಟು ಕಾಲ ಕಚನ ನಿರ್ಮಲ ಸ್ನೇಹದ ಹೊಳೆಯಲ್ಲಿ ಮಿಂದು ಈಗ ತಾನು ಏಕಾಂಗಿಯಾಗುವೆನಲ್ಲ ಎಂಬ ಕೊರಗು ಅವಳನ್ನು ವ್ಯಾಪಿಸಿಕೊಳ್ಳಲು ತೊಡಗಿತು.

“ತಂದೆಯೇ, ಕಚನಿಲ್ಲದೆ ನಾನು ಬದುಕಲಾರೆ,” ಎಂದು ಹೇಳಿದ್ದಳು. ಮೂರು ಬಾರಿ ಸತ್ತ ಕಚನನ್ನು ಬದುಕಿಸಿಕೊಂಡಿದ್ದಳು. ಈಗ ಕಚನೇ ದೂರ ಸರಿಯುತ್ತಿದ್ದ! ಮುಂದೇನು ಮಾಡಬೇಕೆಂದರಿಯದೆ ಅಧೀರಳಾದಳು.

ಕಚನು ಆಚಾರ್ಯರನ್ನು ಬೀಳ್ಕೊಡುವ ದಿನ ಬಂದಿತು. “ಮಹಾಮಹಿಮರಾದ ಆಚಾರ್ಯರೇ, ನಾನು ನಿಮ್ಮ ಶಿಷ್ಯ ಮಾತ್ರನಲ್ಲ. ನಿಮ್ಮ ಪುತ್ರನೂ ಹೌದು, ನಿಮ್ಮ ಒಡಲಿನಿಂದ ಜನಿಸಿ ಬಂದವನು. ತಾಯಿ ಒಮ್ಮೆ ಜೀವವಿತ್ತರೆ ನೀವು ಮೂರು ಮೂರು ಬಾರಿ ಜೀವಕೊಟ್ಟಿರಿ. ನನ್ನ ಬಾಳ್ವೆ ನಿಮ್ಮ ಪಾದಗಳಲ್ಲಿ ಸಮರ್ಪಿತ” ಎಂದು ನಮಸ್ಕರಿಸಿದನು.

ಆಚಾರ್ಯರು ಆನಂದಪರವಶರಾದರು. “ಮಗುವೇ, ಯಶೋವಂತನಾಗಿ ಬಾಳು; ಧರ್ಮಿಷ್ಟನಾಗಿ ನಡೆ; ನೀನು ಕಲಿತ ವಿದ್ಯೆಯನ್ನು ಸಾರ್ಥಕವಾಗಿ ಬಳಸು” ಎಂದು ಆಶೀರ್ವದಿಸಿದರು.

ಕಚ ಅವರಿಂದ ಬೇಳ್ಕೊಂಡು ದೇವಯಾನಿಯನ್ನು ಹುಡುಕುತ್ತ ಹೊರಟ. ಮನೆಯ ಸಮೀಪದ ಪುಷ್ಪವಾಟಿಕೆಯಲ್ಲಿ ಒಬ್ಬಳೇ ಕುಳಿತು ಚಿಂತೆಯಲ್ಲಿ ಮುಳುಗಿ ಹೋಗಿದ್ದಳು.

“ದೇವಯಾನಿ, ಇಲ್ಲೇನು ಮಾಡುವೆ? ನಿನಗೇತರ ಚಿಂತೆ?” ಕಚ ಸ್ನೇಹದಿಂದ ಪ್ರಶ್ನಿಸಿದ.

“ನೀನರಿಯದ ಯಾವ ಚಿಂತೆ ನನಗಿರಬಹುದು?” ಎಂದು ಮರುಪ್ರಶ್ನೆ ಹಾಕಿದಳು ದೇವಯಾನಿ.

“ಮಹಾಮಹಿಮರಾದ ಶುಕ್ರಾಚಾರ್ಯರ ಪುತ್ರಿ ಏನನ್ನು ಬಯಸಿದರೂ ಅದು ಅವಳ ಪದತಲದಲ್ಲಿ ಸಮರ್ಪಿತವಾಗುವುದು. ಏಳು ದೇವಯಾನಿ, ನಗುನಗುತ್ತ ಈ ಬ್ರಹ್ಮಚಾರಿಯನ್ನು ಬೀಳ್ಕೊಡು.”

“ನಿನ್ನ ವಿದ್ಯಾಭ್ಯಾಸ ಮುಗಿಯಿತಲ್ಲವೆ? ಮನಸ್ಸಿನ ಆಸೆ ಕೈಗೂಡಿತು. ಮುಂದೆ ಏನು ಮಾಡುವೆ – ಬೀಳ್ಕೊಡು ಎನ್ನುತ್ತಿದ್ದೀಯಲ್ಲ?”

“ದೇವಲೋಕದವನು ನಾನು – ದೇವಲೋಕಕ್ಕೆ ಹಿಂದಿರುಗುತ್ತೇನೆ ದೇವಯಾನಿ. ಅದೇ ಅಲ್ಲವೆ ನಾನೀಗ ಮಾಡಬೇಕಾದದ್ದು?”

ನಿನ್ನ ವಿದ್ಯಾಭ್ಯಾಸ ಪೂರೈಸಿತು. ನೀನು ಕೃತಕೃತ್ಯನಾದೆ. ಇನ್ನು ಬ್ರಹ್ಮಚಾರ್ಯಶ್ರಮದಿಂದ ಗೃಹಾಸ್ಥಾಶ್ರಮವಲ್ಲವೆ?”

ಇದನ್ನು ಕೇಳಿ ಕಚನಿಗೆ ತುಂಬಾ ಸೋಜಿಗವಾಯಿತು. ಅವನು ಒಮ್ಮೆ ದೇವಯಾನಿಯನ್ನು ದಿಟ್ಟಿಸಿದ. ದೇವಯಾನಿ ಧೈರ್ಯವಾಗಿ ಹೇಳಿದಳು:

“ಹಾಗಾದರೆ ಈಗ ಗೃಹಸ್ಥನಾಗು. ನಿನ್ನ ವಿದ್ಯೆ ಪೂರ್ಣವಾಗುವವರೆಗೂ ನಾನು ಈ ಮಾತನ್ನು ಎತ್ತಲಿಲ್ಲ. ಅಸುರರು ನಿನ್ನನ್ನು ನಾಶಮಾಡಿದಾಗ ನನ್ನ ತಂದೆ ನಿನ್ನನ್ನು ಬದುಕಿಸಲು ಕಾರಣಳಾಗಿದ್ದೇನೆ. ನನ್ನನ್ನು ವಿವಾಹವಾಗು. ನಿನ್ನನ್ನು ಮೆಚ್ಚಿದವಳು ನಾನು.”

ಆಗ ಕಚ ವಿನೀತನಾಗಿ “ದೇವಯಾನಿ, ನೀನು ನನ್ನ ಗುರುಪುತ್ರಿ. ಅವರು ಹೇಗೆ ನನಗೆ ಪೂಜ್ಯರೋ ನೀನೂ ಹಾಗೆಯೇ. ಸಾಧಾರಣವಾಗಿ ಗುರು ತಂದೆಗೆ ಸಮಾನನು. ನನಗಾದರೋ ಅವರು ತಂದೆ, ಗುರುವಷ್ಟೇ ಅಲ್ಲ, ತಾಯಿಯೂ ಆದವರು. ಮೂರು ಬಾರಿ ಜೀವವಿತ್ತ ಆ ಮಹಿಮರಲ್ಲಿ ನಾನು ಅಪಚಾರವನ್ನು ತೋರುವುದೆ? ಅವರ ಒಡಲಿನಿಂದಲೇ ಮತ್ತೆ ಹುಟ್ಟಿ ಬಂದ ನಾನು ನಿನಗೆ ಸೋದರನಲ್ಲವೆ? ನೀನು ಧರ್ಮವನ್ನೂ ಆಲೋಚಿಸಬೇಕು” ಎಂದು ವಾತ್ಸಲ್ಯದಿಂದಲೂ ಸ್ನೇಹದಿಂದಲೂ ಅವಳಿಗೆ ನುಡಿದ.

ಆದರೆ ದೇವಯಾನಿ ಒಪ್ಪಲಿಲ್ಲ. “ವಿದ್ಯೆಯಲ್ಲಿ ವಂಶದಲ್ಲಿ ತಪಸ್ಸಿನಿಂದ ಉಂಟಾದ ಕಾಂತಿಯಲ್ಲಿ ನೀನು ನನಗೆ ಸಮಾನನು. ಅಂಗೀರಸ ಮಹರ್ಷಿಗಳನ್ನು ಪೂಜಿಸುವವಳು ನಾನು. ಅವರ ಮೊಮ್ಮಗನಾದ ನೀನು ನನ್ನನ್ನು ಪಾಣಿಗ್ರಹಣ ಮಾಡಿಕೊ. ರಾಕ್ಷಸರ ತಂತ್ರದಿಂದ  ನನ್ನ ತಂದೆಯ ಒಡಲಲ್ಲಿ ನೀನು ಸೇರಿದ್ದೆ, ಅಷ್ಟೆ. ನೀನು ನನ್ನನ್ನು ಸೋದರಿಯಾಗಿ ಭಾವಿಸಬೇಕಾಗಿಲ್ಲ” ಎಂದು ಅವನೊಡನೆ ವಾದ ಹೂಡಿದಳು.

“ನಿರ್ಮಲವಾದ ನಗೆಯುಳ್ಳ ದೇವಯಾನಿಯೇ, ನನ್ನನ್ನು ನೀನು ಹೀಗೆ ಭಾವಿಸಲಾಗದು. ಗುರುಪುತ್ರಿ ತಂಗಿಯಂತೆ. ಕೋಪವನ್ನು ಬಿಡು. ನಿನ್ನಲ್ಲೇ ನೀನು ಯೋಚಿಸು. ನನಗೆ ಶುಭವನ್ನು ಕೋರು. ನನ್ನನ್ನು ದೇವಲೋಕಕ್ಕೆ ಕಳುಹಿಸಿಕೊಡು” ಎಂದು ಕಚನು ಬೇಡಿಕೊಂಡನು.

ಸುಂದರಿಯಾದ ದೇವಯಾನಿಗೆ ಇದು ಸಮಾಧಾನವನ್ನು ಕೊಡಲಿಲ್ಲ. ಹತಾಶೆ ಅವಳನ್ನು ಕವಿಯಿತು. ಅಪಮಾನ ಮನಸ್ಸನ್ನು ಕೊರೆಯಿತು. ನಿರಾಸೆ ಕೋಪವಾಗಿ ಪರಿಣಮಿಸಿತು. ಕೋಪ ಶಾಪವಾಯಿತು. “ಬಹುಕಾಲದಿಂದ ನಿನ್ನಲ್ಲೇ ಪ್ರೇಮ ಹೊಂದಿದ್ದೆ, ನೀನು ಮೃತ್ಯುವಿಗೆ ತುತ್ತಾದಾಗಲೆಲ್ಲ ನಿನ್ನನ್ನು ಉಳಿಸಿದೆ. ಪ್ರೇಮವನ್ನು ತಿರಸ್ಕರಿಸುವ ನೀನು ಕೃತಘ್ನ. ಸಂಜೀವಿನಿಯನ್ನು ಪಡೆಯಲೆಂದೇ ಬಂದು ನನ್ನಲ್ಲಿ ವಿಶ್ವಾಸವನ್ನು ನಟಿಸಿದ ಧೂರ್ತ ನೀನು.  ನಿನಗೆಂದೂ ಆ ಮಂತ್ರ ಫಲಿಸದಿರಲಿ.”

ಈ ಶಾಪವನ್ನು ಕೇಳಿ ಕಚ ದಿಗ್ಭ್ರಾಂತನಾದ. ತನ್ನ ಮೃದು ಮಾತುಗಳಿಗೂ ಬಗ್ಗದೆ ಶಾಪ ಕೊಟ್ಟ ದೇವಯಾನಿಯ ಬಗೆಗೆ ಅವನಿಗೆ ಜಿಗುಪ್ಸೆ ಉಂಟಾಯಿತು. ಅದರಿಂದ ಅವನೂ “ನಾನು ಇಷ್ಟು ಕಷ್ಟದಿಂದ ಕಲಿತ ವಿದ್ಯೆ ಫಲಿಸದೆ ಹೋಗಲಿ ಎಂದು ಶಪಿಸಿದೆ, ಚಿಂತೆಯಿಲ್ಲ. ನನ್ನಿಂದ ಇದನ್ನು ಕಲಿತವರಿಗೆ ಫಲಿಸಿದರೆ ಸಾಕು. ವೇದವೇದಾಂಗ ಪಾರಂಗತರಾದ ಬ್ರಾಹ್ಮಣನ ಪುತ್ರಿಯಾಗಿಯೂ, ನಿರ್ಮಲ ಮನಸ್ಕನಾದ ನನ್ನನ್ನು ಶಪಿಸಿದೆ. ನನ್ನ ವಿನಯದ ಮಾತನ್ನು ಕೇಳದೆ ಶಾಪ ಕೊಟ್ಟೆ. ನಿನ್ನ ಈ ದರ್ಪ, ಈ ಕೋಪಗಳಿಗೆ ತಕ್ಕಂತೆ ನಿನ್ನನ್ನು ಯಾವ ಬ್ರಾಹ್ಮಣ ತರುಣನೂ ವರಿಸದೆ ಕ್ಷತ್ರಿಯನ ಪತ್ನಿಯಾಗು” ಎಂದು ಶಪಿಸಿದನು.

ಕಥೆ ಕೇಳುತ್ತ, ನಮಗೆ ಕಚನಲ್ಲಿ ಮೆಚ್ಚುಗೆಯಾಗುತ್ತದೆ. ದೇವಯಾನಿಯನ್ನು ಕಂಡು ‘ಅಯ್ಯೋ ಪಾಪ’ ಎನ್ನಿಸುತ್ತದೆ. ತಂದೆಯ ಮನೆಯಲ್ಲಿ ಒಂಟಿಯಾಗಿದ್ದ ಅವಳಿಗೆ ನಗುಮುಖದ ಲವಲವಿಕೆಯ ಕಚ ಬಂದದ್ದು ಹಬ್ಬವಾಗಿತ್ತು. ಮೂರು ಬಾರಿ ಅವನನ್ನು ಬದುಕಿಸಿದಳೇ ಅವಳು. ಈಗ ಅವನೂ ಅವಳನ್ನು ಬಿಟ್ಟು ನಡೆದ. ಪಾಪ, ಮುಂದೆ ದೇವಯಾನಿಗೆ ಏನಾಯಿತು ಎನ್ನಿಸುತ್ತದೆ, ಅಲ್ಲವೇ? ಅವಳ ಕಥೆ ಇಲ್ಲಿಗೆ ಮುಗಿಯಲಿಲ್ಲ. ದೊಡ್ಡದಾಗಿ ಬೆಳೆಯಿತು. ಅದೇ ಇನ್ನೊಂದು ಕಥೆಯಾಯಿತು.

“ಕೋಪವನ್ನು ಬಿಡು. ನನಗೆ ಶುಭವನ್ನು ಕೋರು” ಎಂದು ಕಚನು ಬೇಡಿಕೊಂಡನು.

ಚೆಲುವೆಯೂ ದುಃಖಿತೆಯೂ ಆದ ದೇವಯಾನಿ ಪ್ರಸಿದ್ಧ ರಾಜ ಯಯಾತಿಯನ್ನು ವಿವಾಹವಾದಳು.

ದೇವಲೋಕವನ್ನು ಬಿಡುವಾಗ ಕಚನು, ದೇವತೆಗಳಿಗೆ, “ನನ್ನ ಒಡಲು, ಮನಸ್ಸು, ಪ್ರಾಣಗಳು ದೇವಲೋಕಕ್ಕೆ ಮೀಸಲು” ಎಂದಿದ್ದ. ಅದರಂತೆ ನಡೆದುಕೊಂಡಿದ್ದ. ಸಂಜೀವಿನಿ ಮಂತ್ರವನ್ನು ಕಲಿತಿದ್ದ.

ಕಚನು ದೇವಲೋಕವನ್ನು ಸೇರಿ ಸಂಜೀವಿನಿ ಮಂತ್ರವನ್ನು ಇತರರಿಗೆ ಉಪದೇಶಿಸಿ ಅದರ ಫಲ ದೇವಸಮಾಜಕ್ಕೆ ದೊರಕುವಂತೆ ಮಾಡಿ ಕೀರ್ತಿಶಾಲಿಯಾದನು.

* * *