ದೃಶ್ಯ 18

ಸಿದ್ಧ ಹುಸೇನಿಯವರು ನಿಂಗವ್ವನಲ್ಲಿಗೆ ಬರುವರು. ಗೆಳೆಯರ ಕೋಪವನ್ನು ಕಂಡು ನಿಂಗವ್ವ ಅಂಜಿದಳು. ಚೆನ್ನನ ಬಂಧನದ ವಿಷಯವಾಗಿ ತನ್ನಲ್ಲಿ ಯಾವ ತಪ್ಪಿಲ್ಲವೆಂದೂ ಊರಜನ, ಗೌಡ, ಕುಲಕರ್ಣಿ : ಎಲ್ಲರೂ ಒಂದಾಗಿ ಸರಕಾರಕ್ಕೆ ತಿಳಿಸಿ ಚೆನ್ನನನ್ನು ಹಿಡಿಸಿದರೆಂದೂ ಹೇಳುತ್ತಾಳೆ.

ಇದನ್ನು ನಂಬದ ಚೆನ್ನನ ಗೆಳೆಯರು ಸುಳ್ಳು ಪ್ರೀತಿಯಿಂದ ಕರೆಯಿಸಿಕೊಂಡು ನೀನೇ ಚೆನ್ನನನ್ನು ಹಿಡಿಸಿಕೊಟ್ಟುದಾಗಿ ಆಪಾದಿಸಿ, ಜರಿದು, ನಿಂಗವ್ವನ ಮೂಗು ಕೊಯ್ದರು. ಚೆನ್ನನನ್ನು ಕಳೆದುಕೊಂಡು ಬದುಕಿರಲಾರೆನೆಂದೂ ಸೊಗಲದ ಗುಡ್ಡದಲ್ಲಿ ಪ್ರಾಣಕಳೆದುಕೊಳ್ಳುವುದಾಗಿಯೂ ಹೇಳಿ ಹುಸೇನಿ ಹೊರಟು ಹೋದನು.

ಮೂಗನ್ನು ಕಳೆದುಕೊಂಡು ಅವಮಾನಿತಳಾದ ನಿಂಗವ್ವ ಚೆನ್ನನಿಗೆ ಮೋಸಮಾಡಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾಳೆ. ಎನ್ನ ಮೂಗನ್ನು ಸಿದ್ಧನು ಕೊಯ್ದು ಸಮಾಜದಲ್ಲಿ ತಾನು ಮುಖವೆತ್ತಿ ತಿರುಗದಂತೆ ಮಡಿದನೆಂದು ಅವನನನ್ನು ಜರಿಯುತ್ತಾಳೆ. ಆದರೆ ಇದಕ್ಕೆಲ್ಲ ತಾನೇ ಕಾರಣವೆಂಬ ಅರಿವು ಮರುಕ್ಷಣವೇ ಅವಳಲ್ಲುಂಟಾಗುವುದು. ಹಣದಾಶೆಗೆ ಜೋತು ಬಿದ್ದು ತಾನು ಅಲ್ಲದ ಕಾರ್ಯ ಮಾಡಿದ್ದರಿಂದಲೇ ತನಗೆ ಈ ಗತಿಯಾಯಿತೆಂದು ಆಲಾಪಿಸುತ್ತಾಳೆ. ನೆರೆಹೊರೆಯ ಜನವೆಲ್ಲ ತನ್ನನ್ನು ನೋಡಿ ನಗುತ್ತಾರೆ ಎಂಬುದೇ ಅವಳ ದುಃಖದ ಮುಖ್ಯಾಂಶವಾಗಿದೆ.

ನಿಂಗವ್ವ

ಕಾಲಬಿದ್ದ ಹೇಳತೇನಿ ಕೇಳೋ ಎಣ್ಣಾ
ಬಿಡೋ ಕೋಪವನಾ
ನನ್ನ ಕಡೆ ತೆಪ್ಪ ಏನ ಇಲ್ಲ ತಿಳಿಯೋ ನೀನಾ

ಊರ ಮಂದಿ ಸಾಸಮಾಡಿ ಪ್ರಿಯಾನ್ನಾ
ಹಿಡಿದ ಕೊಟ್ಟಾರೊ ಅವನಾ
ಇಷ್ಟೆಲ್ಲಾ ತಿಳಿದು ಮಾಡಿರಿ ದಯಾ ಕರುಣಾ

ಗೌಡ ಕುಲರ್ಣಿದು ಅವನ ಮ್ಯಾಲ ಕಣ್ಣಾ
ಇತ್ತ ಸಂಪೂರ್ಣಾ
ಒಳಗಿಂದೊಳಗೆ ಕರಿತಂದ್ರ ಸರಕಾರನಾ

ಸಿದ್ದ

ಏನ ಘಾತಾ ಮಾಡಿದೆಲೆ ಬೆರಕಿ ರಂಡೆ
ಬಾರಾ ಹುಚ್ಚಮುಂಡೆ
ನಿನ್ನ ಮೂಗ ಕೋದ ಒದುತೇನಿ ಎಲೆಮಿಂಡಿ

ಜೀವದ ಗೆಳಿಯಾನ್ನ ಹಿಡಿದ ಕೊಟ್ಟಿ ಮೋಸಮಾಡಿ
ಸರಕಾರಕ್ಕ ಹೇಳಿ ಚಾಡವನಾ
ಪ್ರೀತಿಲಿಂದ ಕರಿಸಿಕೊಂಡಿ ದೌಡಮಾಡಿ

ಹೇಸಿ ಕಲಕಿ ರಂಡೆ ನಿನ್ನ ಲಗುಮಾಡಿ
ಚಂಡಹಿಡಿದ ದೂಡಿ
ಈ ಸಬಾದಾಗ ಮಾಡತೇನಿ ಮಾನಗೇಡಿ

ನಿಂಗವ್ವ

ಅಯ್ಯೋ ಏನ ಅದೃಷ್ಟಾ ಬ್ರಹ್ಮ ಬರದಾನೊ ಕೆಟ್ಟಾ
ಮಾನಾ ಕಳದಾನೊ ಹೈವಾನಾ ಬೇಮಾನಾ

ಕೂಡಿದ ಜನದಾಗ
ಕೋದಾನೊ ಎನ ಮೂಗ
ತೋರಲ್ಯಾಂಗ ಮುಖವನಾ
ನಾ ಇನ್ನಾ

ದುಡ್ಡಿನ ಆಸೆಕ
ಬಿದ್ದಿನೋ ಪಾಸೆಕ
ನೋಡರಿ ಸೆರೆಸೂರಿನಾ
ಅಪಮಾನಾ

ನೆರಿಹೊರಿ ಜನನೋಡಿ
ನಗತಾರೋ ತಲೆಗೂಡಿ
ಮಾಡಲಿ ಇನ್ನೇನಾ
ಸೈತಾನಾ

* * *

ದೃಶ್ಯ 19

ಚೆನ್ನನನ್ನು ಪೋಲೀಸರು ಬಂಧಿಸಿ ಬೆಳಗಾವಿಗೆ ಒಯ್ಯುತ್ತಿದ್ದಾರೆ. ಚೆನ್ನನನ್ನು ಬಂಧಿಸಿದ ಹುರುಪಿನಲ್ಲಿರುವ ಪೋಲೀಸರು ಸಹಜವಾಗಿ ಚೆನ್ನನನ್ನು ದಬಾಯಿಸುತ್ತಿದ್ದಾರೆ. ಪೋಲೀಸರಿಗೆ ಮುಖ್ಯವಾಗಿ ಬೇಕಾಗಿರುವುದು ಚೆನ್ನನ ಅವಮಾನ. ಅದಕ್ಕೆ ಪುಷ್ಟಿ ಕೊಡುವಂತೆ ಫೌಜದಾರನೂ ಚೆನ್ನನನ್ನು ನಾಡಮೇಲೆ ಮೆರೆಯಿಸುವಂತೆ ಹುಕುಮು ಕೊಟ್ಟಿದ್ದಾನೆ. ಆದ್ದರಿಂದ ತಮಗೆ ದೊರೆತ ಅಧಿಕಾರ, ಅವಕಾಶಗಳನ್ನು ಚೆನ್ನನೆದುರಿಗೆ ಹೇಳಿ ಜಂಬಕೊಚ್ಚಿಕೊಳ್ಳುತ್ತಿದ್ದಾರೆ : ಪೋಲೀಸರು, ನಾಡಿನ ಎಲ್ಲ ಭಾಗಗಳಲ್ಲಿ ತಿರುಗಾಡಿಸಿ ಕೋರ್ಟಿಗೆ ತರುತ್ತೇವೆ. ಫಾಸಿ ಕೊಡುತ್ತೇವೆ ಎಂದು ಹಿಗ್ಗಿನಿಂದ ಹೇಳುತ್ತಾರೆ. ಸರಕಾರದ ಆಜ್ಞೆಯೇ ಹೀಗಿರುವಾಗ ಅವರಿಗೆ ಯಾವ ಅಂಜಿಕೆಯೂ ಇಲ್ಲ. ಚೆನ್ನನು ಹಿಂದೆ ಬಹಳ ಜನರನ್ನು ಕಾಡಿಕಾಡಿ ಭಂಗಿಸಿದ್ದನ್ನು ನೆನಪಿಸಿಕೊಟ್ಟ ಸಿಪಾಯಿಗಳು ನಿನ್ನ ರಿಣಹರಿಯಿತೆಂದು ಸಂತೋಷಪಡುತ್ತಾರೆ.

ಸೆರೆಸಿಕ್ಕ ಕಾರಣವಾಗಿ ಚೆನ್ನ ಜರ್ಜರಿತನಾಗಿದ್ದಾನೆ. ಮತ್ತೆ ಮೇಲೆ ಈ ಪೋಲೀಸರಾಡುವ ಮಾತುಗಳು ಅವನನ್ನು ತೀರ ಹಿಂಸೆಗೊಳಗುಮಾಡಿವೆ. ಜನರಿಗೆ ಕೈಮುಗಿದು ತನ್ನ ಸ್ಥಿತಿಯನ್ನು ಹೇಳುವಲ್ಲಿ. ತನ್ನ ಮೇಲೆ ದೇವರು ಕೋಪಗೊಂಡಿದ್ದಾನೆ ಎಂದು ಹಳಹಳಿಸುವಲ್ಲಿ ಚೆನ್ನನ ನಿರಾಶೆ ಒಡೆದು ತೋರುತ್ತಿದೆ. ತನ್ನ ಯತ್ನಗಳೆಲ್ಲ ಕೈ ಮೀರಿ ಸೆರೆ ಸಿಕ್ಕಿರುವೆ, ಈ ಕ್ಷಣಕ್ಕಂತೂ ಹೋಗುತ್ತೇನೆ ಎಂದು ಆಸೆಯ ಒಂದು ಎಳೆಯನ್ನು ಹಿಡಿದಿದ್ದಾನೆ ಚೆನ್ನ.

ಪೋಲೀಸರು

ಬ್ಯಾಗ ನಡಿಯೋ ಚೆನ್ನಾ ನೀಚನಾ
ಬ್ಯಾಗ ನಡಿಯೋ ಚೆನ್ನ ॥

ದೇಶ ದೇಶವ ತಿರಗಿ ತರತೇವ ಕೋರ್ಟಿಗಿ
ಕೊಡತೇವ ಪಾಶಿಯನಾಈ ಕ್ಷಣಾ
ಸರಕಾರ ಹುಕಮಾಆಗೇತಿ ಹಿಂಗ ನೇಮಾ
ಅಂಜಿಕೆ ನಮಗೇನಾಈ ಕ್ಷಣಾ
ಬಾಳಮಂದಿ ಸುಲಕೊಂಡಮಾಡಿದ್ಯೊ ಹಿಂಗ ಭಂಡಾ
ತೀರೀತೊ ನಿನ್ನ ರಿಣಾಈ ಕ್ಷಣಾ

ಚೆನ್ನ

ಶರಣ ಮಾಡುವೆ ಜನಕ ದೈವಕ
ಶರಣ ಮಾಡುವೆ ಜನಕ
ಮುನಿದಾನೊ ಭಗವಾನಾಬಂದಿತೊ ಕಠೀಣಾ
ಅಗಣಿತಾದಿತೊ ಜನಕದೈವಕ
ಮೀರಿತೊ ಎನ್ನ ಯತನಾಮಾಡಲಿ ಇನ್ನೇನಾ
ಪೋಗುವೆನೀ ಕ್ಷಣಕದೈವಕ
ಧಾರವಾಡದೀಶನಉಳವಿ ಬಸವೇಶನ
ಇರವೇನೊ ನಿಮ್ಮ ಬಾಲಕದೈವಕ

* * *

ದೃಶ್ಯ 20

ಪೋಲೀಸರಿಗೆ ದಾರಿ ನಡೆದು ದಣಿದಾಗ ಗಚ್ಚಿನ ಕುರುಬಗಟ್ಟಿಯಲ್ಲಿ ವಸತಿ ನಿಲ್ಲುವ ಪ್ರಸಂಗ ಬಂದಿತು. ಚಾವಡಿಯಲ್ಲಿ ಇಳಿದುಕೊಂಡಿರುವಾಗ ಚೆನ್ನನು ಅಲ್ಲಿಂದ ಪಾರಾಗಬೇಕೆಂಬ ಹಂಚಿಕೆಮಾಡಿ ಪೋಲೀಸರಿಗೆ ಹಣ ಕೊಟ್ಟು ಸೆರೆ : ಸಿಂದಿ ಮತ್ತು ತಿಂಡಿ : ತಿನಿಸು ತರಲು ತಿಳಿಸುವನು. ಅದರಂತೆ ಪೋಲೀಸನೊಬ್ಬ ಹೋಗಿ ಕೊಂಡು ತರುವನು.

ಚೆನ್ನನು ಪೋಲೀಸರಾದ ಅಬ್ದುಲ್ ಕಾಸಿಮರಿಗೆ ಸೆರೆ ಕುಡಿಸಿ ಅಮಲೇರುವಂತೆ ಮಾಡುತ್ತಾನೆ. ಪೋಲೀಸರಿಗೆ ಸ್ಮತಿ ತಪ್ಪುತ್ತದೆ. ಈ ಸಮಯ ಸಾಧಿಸಿ ಚೆನ್ನ ಚಾವಡಿ ಜಿಗಿದು ಪಾರಾಗುತ್ತಾನೆ. ಅವನಿಗೆ ತನ್ನ ಗೆಳೆಯರನ್ನು ಆದಷ್ಟು ಬೇಗ ಕೂಡಬೇಕೆಂಬ ಹಂಬಲ. ಅದಕ್ಕೆ ಮೊದಲು ಬೇಡಿಯನ್ನು ಕತ್ತರಿಸಿಕೊಳ್ಳಲು ಗೆಳೆಯ ಕುಂಬಾರ ಸಿದ್ದಣ್ಣನ ಮನೆಗೆ ಬರುತ್ತಾನೆ. ಅಲ್ಲಿ ಸಿದ್ದಣ್ಣನಿಂದ ಬೇಡಿಯನ್ನು ಕತ್ತರಿಸಿಕೊಂಡು ಅವನ ಉಪಕಾರವನ್ನು ಸ್ಮರಿಸಿ ಹೊರಡುತ್ತಾನೆ.

ಬಹಳ ಹೊತ್ತಿನ ಮೇಲೆ ಪೋಲೀಸರಿಗೆ ಎಚ್ಚರವಾದಾಗ ಚೆನ್ನ ತಪ್ಪಿಸಿಕೊಮಡು ಹೋಗಿದ್ದ ಇನ್ನು ಅವನಿಗಾಗುವ ಶಿಕ್ಷ ತಮಗೇ ಬರುತ್ತದೆಂದು ಪೋಲೀಸರು ಹೆದರಿದರು. ತಮಗೆ ಸೆರೆ : ಸಿಂದಿ ಕುಡಿಸಿ ಮೋಸಮಾಡಿದ್ದಾನೆ. ಉಂಡು ತಿಂದು ನೌಕರಿ ಮಾಡಿಕೊಂಡಿದ್ದ ತಮ್ಮ ಬಾಯಿಗೆ ಚೆನ್ನ ಮಣ್ಣು ಹಾಕಿದ, ಅಯ್ಯೋ ಘಾತವಾಯಿತು ಎಂದು ಪೋಲೀಸರು ಗೋಳಾಡುತ್ತಾರೆ. ಹೊರಗೆ ಕತ್ತಲು ಗಾಢವಾಗಿ ಕವಿದಿರುವಾಗ ಎತ್ತ ಹುಡುಕೋಣವೆಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.

 

ಚೆನ್ನ

ಯುಕ್ತಿಲಿಂದ ಪಾರಾಗಿ ಹೋಗುವೆನಾ ॥ ಪ ||

ಸಿಂದಿ ಸೆರೆ ಮನಮುರಿ ಕುಡಸುವೆನಾ
ಅಮಲವಾಗುವಂತೆ ಮಾಡುವೆನ
ಸಿಪಾಯರನಾ ಎಬಿಸುವೆನಾ ತಿಳಿಸುವೆನಾ
ರೂಪಾಯಿ ರೊಕ್ಕ ಮಾಡುವೆ ಸೂರಿsಯನಾ
ಲಾಡು ಬರ್ಪೆ ಜಿಲೇಬಿ ತಿನ್ನಿಸುವೆನಾ

ಪೋಲೀಸರು

ಅಬ್ದುಲ್ ಕಾಸೀಮ ಕುಡಿಯೋಣ ಬಾಟ್ಲಿಯನಾ ॥ ಪ ||

ಪುರಮಾಸಿ ತಿದ್ದಿ ಮೀಸಿ ಕುಡಿಯಬೇಕಲ್ಲಾ
ಹಿಂತಾ ಅಮಲು ಎಂದೆಂದು ಆಗಿದ್ದಿಲ್ಲಾ
ಫಳಾರಾ ಮನೋಹರಾ ದೊರಕೀತಲ್ಲಾ

ಕಟ್ಟಿ ಚೆನ್ನ ಬಾದೂರಾ ರಾಜೇದ ಮ್ಯಾಲಾ
ಬೇಕಾದಷ್ಟು ಸಾಕಷ್ಟು ಮಾಡ್ಯಾನಲ್ಲಾ
ನಿದ್ದಿ ಅಮಲು ಬಂದಿತು ತಡೆಯೋದಿಲ್ಲಾ
ನೆರಳಿಗೆ ಸಂಪಾಗಿ ಮಲಗೂನಲ್ಲಾ

ಚೆನ್ನ

ನಿದ್ದೆ ಹತ್ತಿ ಮಲಗ್ಯಾರೋ ಎಲ್ಲಾರು ಸಿಪಾಯರು
ಕೈಸೆರಿ ಆತೋ ಕೆಲಸಾ

ಕಂಬಾರ ಸಿದ್ದಣ್ಣನಂತೇಲಿ ಹೋಗುವೆ ನಾ ಇನ್ನಾ
ಕಡಿಸಿಕೊಂಡ ಕಬ್ಬಿಣ ಸರಪಣಿ ಹೋಗುವೆ ನಾ

ಮೂರ ಆಳುದ್ದ ಗ್ವಾಡಿ ಜಿಗಿತೇನಿ ಲಗುಮಾಡಿ
ಆರ ತಾಸ ರಾತ್ರ್ಯಾಗ ಹೋಗುವೆ ಬ್ಯಾಗ

ಗೆಳಿಯಾರ ಮುಖವ ನಾ ಯಾವಾಗ ನೋಡೇನಾ
ದೇಶದೊಳು ಧಾರವಾಡದೀಶನ ದಯದಿಂದ

ಪೋಲೀಸರು

ಘಾತವಾದೀತಯ್ಯೋ ಮಾಡುನೂ ಇನ್ಹೆಂಗ
ಮೋಸಮಾಡ ಹೋದೋ ಚೆನ್ನಾ

ಸರಕಾರ ಮುಂದ ನಿಂತಹೇಳೂಣು ಏನಂತ
ಚೆನ್ನಗಾಗು ಶಿಕ್ಷೆ ನಮಗಾದುದು ಬಂತೋ ಈಗ
ಮೋಸಮಾಡಿ ಹೋದೋ ಚೆನ್ನಾ

ಸಿಂದಿಸೆರೆವ ಕುಡಿಸಿ ಹಾಕ್ಯಾನೋ ನಮಗ ಫಾಸಿ
ಉಣ್ಣು ತಿನ್ನು ಬಾಯಿಲೆ ಮಣ್ಣು ಹಾಕಿಕೊಂದೊ
ಮೋಸಮಾಡಿ ಹೋದೋ ಚೆನ್ನಾ

ಕತ್ತಲ ಇಂಜಾನಾ ಹುಡಕೂದು ಹ್ಯಾಂಗನಾ
ದೇಶದೊಳು ಧಾರವಾಡದೀಶನಾ
ಮೋಸಮಾಡಿ ಹೋದೋ ಚೆನ್ನಾ

* * *

ದೃಶ್ಯ 21

ಚೆನ್ನನನ್ನು ಹಿಡಿಯಲು ಅಸಮರ್ಥರಾದ ಪೋಲೀಸರು ನಿಸ್ತೇಜರಾಗಿದ್ದಾರೆ. ಮತ್ತೊಮ್ಮೆ ಫೌಜದಾರನಲ್ಲಿಗೆ ಬಂದು ಕ್ಷಮೆ ಕೇಳಿಕೊಳ್ಳಬೇಕಾದ ಪ್ರಸಂಗ ಅವರಿಗೆ ಪ್ರಾಪ್ತವಾಗಿದೆ. ಪೋಲೀಸರು ಹೀಗೇ ಹೌಹಾರಿ ತಿರುಗುತ್ತಿರುವಾಗ ಸೊಪ್ಪಡ್ಲದ ಭೂಮಿಯಲ್ಲಿ ಫೌಜಧಾರನ ಭೆಟ್ಟಿಯಾಯಿತು. ಚೆನ್ನನು ತಮಗೆ ರಾತ್ರಿ ಮೋಸಮಾಡಿ ತಪ್ಪಿಸಿಕೊಂಡು ಹೋದುದನ್ನು ಪೋಲೀಸರು ಫೌಜದಾರನಲ್ಲಿ ಹೇಳಿ ಅವನ ಕ್ಷಮೆಯನ್ನು ಬೇಡವರು. ಈಗ ಇದು ಫೌಜದಾರನಿಗೆ ವೈಯಕ್ತಿಕ ಪ್ರತಿಷ್ಠೆಯಾಯಿತು. ಆದ್ದರಿಂದ ತಾನೊಬ್ಬನೆ ಚೆನ್ನನನ್ನು ಹಿಡಿಯುತ್ತೇನೆ ಎಂದು ಪೋಲೀಸರನ್ನು ಕಳುಹಿಸಿಕೊಟ್ಟ. ಇನ್ನೇನು ತಾನು ಸೊಪ್ಪಡ್ಲದ ದಾರಿ ಕೇಳಿ ಮುಂದುವರಿಯಬೇಕು, ಅಷ್ಟು ಹೊತ್ತಿಗೆ ಚೆನ್ನನೇ ಎದುರಾದನು.

ಫೌಜದಾರನನ್ನು ನೋಡಿದಕೂಡಲೇ ಮಾರುವೇಷದಲ್ಲಿದ್ದ ಚೆನ್ನನ ಸ್ಥಿತಿ ಸಂದಿಗ್ಧವಾಯಿತು. ಇನ್ನು ಚೆನ್ನನು ಓಡಿಹೋಗುತ್ತಾನೆಂದು ಭಾವಿಸಿದ ಫೌಜದಾರನು ಅವನಿಗೆ ನಿಲ್ಲುವಂತೆ ಹೇಳಿ ನೀನು ಎತ್ತ ಓಡಿಹೋದರೂ ನಿನ್ನನ್ನು ಬೆನ್ನುಹತ್ತಿ ಕಡಿಯುತ್ತೇನೆ ಎನ್ನುವನು. ಕುದುರೆಯ ಕಾಲಲ್ಲಿ ತುಳಿಸಿ ಕೊಲ್ಲವ ಬೆದರಿಕೆಯನ್ನು ಹಾಕುವನು.

ಚೆನ್ನನೂ ಸೊಪ್ಪು ಹಾಕುವುದಿಲ್ಲ. ಫೌಜದಾರನ ಮೂಗು ಕೊಯ್ಯುವುದಲ್ಲದೆ ಅವನ ಕುದುರೆಯ ಕಾಲನ್ನು ಕಡಿದು ಹಾಕುವುದಾಗಿ ಗರ್ಜಿಸುವನು. ಹೆದರಿದ ಫೌಜದಾರನು ಮಗನಂತೆ ರಕ್ಷಿಸಬೇಕೆಂದು ಕ್ಷಮೆ ಕೇಳುವನು.

ಪೋಲೀಸರು

ಕರುಣವಿರಲಿ ರಾಜಾ ಶಿರವ ಬಾಗುವೆನ
ಕರುಣವಿರಲಿ ॥ ಪ ||

ಕಟ್ಟಿಯ ಚೆನ್ನಾಕೋದಾನೋ ಗೋಣಾ
ಮೋಸಮಾಡಿ ಹ್ವಾದಾನೊ ರಾತ್ರ್ಯಾಗ ಪಾರಾಗಿ
ಮಾಡರಿ ದಯಾಕರುಣಾ

ಹೊಟ್ಟಿದಸಿಂದ ಪಾದಕ ಬಿದ್ದ ಕೈಯ ಮುಗದ ಬೇಡುವೆ
ತೆಪ್ಪ ಮಾಫ ಮಾಡರಿ
ಕೈಯ ಮುಗದ

ರಾಣಿ ಸರಕಾರಾ ಪೇಶವೆ ದರಬಾರಾ
ಬಡವರ ಮ್ಯಾಲೆ ದಯಕರುಣವಿರಲಿ
ಮಾಡರಿ ದಯಾಕರುಣಾ

ಫೌಜದಾರ

ತುಡುಗಚೆನ್ನ ದಾವಲ್ಲಿ ಇರತಾನ ಹುಡಕರ‌್ಯೋ ॥ ಪ ||

ಬೆಟಗೇರಿ ಊರಾ
ನಿಟವಾದ ಶಾರಾ
ಡೇರೆ ಹೊಡೆದ ಸಾಹೇಬ ಇರತೇನೋ ಇಲ್ಲೆ ನಾ

ಹತ್ತಿ ಕುದರಿಯನಾ
ಹೋಗುವೆ ನಾನಾ
ಚೆನ್ನ ಇರವುವ ಮೆಟ್ಟಿಗೆ ಹುಡುಕುತ ಹೋಗುವೆನಾ

ಸಪ್ಪಡ್ಲ ದಾರಿ
ಯಾವದ ಹೇಳರಿ
ತಿರುವುತ ಫೇರಿ ಹೊಡೆಯುತ ಕುದರಿಯನಾ

ಫೌಜದಾರ

ನಿಲ್ಲೊ ನಿಲ್ಲೊ ಕಟ್ಟಿಯ ಚೆನ್ನಾ
ತುಡಗರೊಳು ಜಾಣಾ
ಕುದರಿ ಕಾಲಾಗ ತುಳಸುವೆ ನಿನ್ನಾ

ವೇಶ ಹಾಕಿ ಹಿಡಿದ ನಿಂತಿ ದಾರಿ
ಮೋಸ ಮಾಡುದು ಬಲ್ಲೆಯೊ ಭಾರಿ
ನೀನು ಎಲ್ಲಿ ಹೋದರ ಹತ್ತಿ ಬೆನ್ನಾ

ಕಡುವೆನೋ ನಿನ್ನಾ
ಮೀರಿ ನಿಂತಿದಿ ಗಡಿನಾಡಿನೊಳಗ
ಶೂರತಾನವು ತಿಳಿಯಲೋ ಈಗ

ಚಿಚ್ಚಗತ್ತಿ ಬಂದೂಕ ತಯಾರ ಕಡದ ನಿನ್ನಾ
ಕುದರಿ ಕಾಲಾಗ ತುಳಸುವೆ ನಿನ್ನಾ
ಮೂರ ಲೋಕದೊಳಗ ಜಾಹೀರಾ

ಧೀರ ಆಗಿ ನಿಂತಿದೋ ಮುಂಜೋರಾ
ನನ್ನ ಕೈಯಾಗ ಪಾರಗೋ ನೀನಾ
ಕೆಡವತೇನೋ ನಿನ್ನಾ ಕುದುರಿ ಕಾಲಾಗ ತುಳಿಸುವೆ ನಿನ್ನಾ

ಚೆನ್ನ

ಬಾರೊ ಬಾರೋಲೆ ಫೌಜದಾರಾ ನೀನಾ
ಅಹಂಕಾರ ಬಿಡೊ ನೀನಾ
ಜಿಗದ ಮೂಗ ಕೊಯ್ಯುವೆನು ನಾನಾ ॥ ಪ ||

ಒಂದ ಕಡತಕ್ಕ ಕುದರಿಯ ಕಾಲಾ
ಕಡದ ಕೆಡವೇನು ಭೂಮಿಯ ಮ್ಯಾಲಾ
ತುರ್ತಾ ತುರ್ತ ತೋರಿಸೊ ನಿನ್ನ ಬಂಟಸ್ತಾನಾ
ಜಿಗದ ಮೂಗ ಕೊಯ್ಯುವೆ ನಾನಾ

ಉಪ್ಪಿನ ಬೆಟಗೇರಿ ತುರಮಂದ್ಯಾಗ
ಸಾಹೇಬ ಇಳದಾನೊ ಡೇರೇದ ಒಳಗ
ಡೇರೇದಮ್ಯಾಗ ಗುರಿಯಿಟ್ಟ ಬಂದೂಕನಾ
ಹೊಡೆದ ಸಾಹೇಬನಾ

ಸಾಸಮಾಡಿ ಬಂದಿರೋ ಹಿಡಿಯಾಕ ನನ್ನಾ
ಲೇಸ ಮಾಡಿಕೊಳ್ಳರೋ ಕಾರ್ಯವನ
ನೆಲಕ ಒಗುತೇನಿ ಪೌಜದಾರನಾ
ಕಡದ ಕುದರಿsನಾ

ಫೌಜದಾರ

ಕೊಲ್ಲಬ್ಯಾಡೋ ಎನ್ನಾಚೆನ್ನಪ್ಪಣ್ಣಾ
ಬೀಳುವೆ ನಿಮ್ಮ ಕಾಲನಾ

ತಿಳಿ ಎನ್ನ ತಪ್ಪಾ
ಮಾಡಬೇಕೋ ಮಾಪಾ
ಮಗನ ಸರಿಯೋ ನಾನಾ
ಚೆನ್ನಪ್ಪಣ್ಣಾ ಬೀಳುವೆ ನಿಮ್ಮ ಕಾಲನಾ

ಹೆಂಡರ ಮಕ್ಕಳ ಮಾರಿನೋಡಿ
ನಮಗ ಬಿಡರಿ
ಇಡತೇವಿ ಹಡದ ಹೆಸರಾ
ಚೆನ್ನಪ್ಪಣ್ಣಾ ಬೀಳುವೆ ನಿಮ್ಮ ಕಾಲನಾ

ಸರಕಾರ ಚಾಕರಿ
ಯಾರಿಗೆ ಬೇಕರಿ
ಕೊಡತೇವಿ ರಾಜೇನಾಮೀನಾ
ಚೆನ್ನಪ್ಪಣ್ಣಾ ಬೀಳುವೆ ನಿಮ್ಮ ಕಾಲನಾ

* * *

 ದೃಶ್ಯ 22

ಚೆನ್ನನ ಕೈಯಲ್ಲಿ ಸೋತು ಬಸವಳಿದು ಬಂದ ಫೌಜದಾರ ತನ್ನ ಮೇಲಧಿಕಾರಿಯೆದುರು ಎಲ್ಲ ವಿಷಯವನ್ನೂ ಸವಿಸ್ತಾರವಾಗಿ ತಿಳಿಸಿ ಚೆನ್ನನನ್ನು ಹಿಡಿಯಲು ಮುಂದಿನ ಉಪಾಯವೇನೆಂದು ಕೇಳುತ್ತಾನೆ. ಗೌಡರಿಗೆ, ಪೋಲೀಸಿನವರಿಗೆ ಯಾರಿಗೂ ಚೆನ್ನನು ಸಿಗುತ್ತಿಲ್ಲ. ಸಿಕ್ಕರೂ ಆಗಿಂದಾಗಲೇ ಉಪಾಯವಾಗಿ ನುಣುಚಿಕೊಂಡು ಹೋಗುತ್ತಾನೆ. ತಮ್ಮ ಇಲಾಖೆಗೇ ಇದು ಅಪಮಾನಕರ ಸಂಗತೆಯೆಂದು ಚಡಪಡಿಸುತ್ತಾರೆ. ಅಷ್ಟೇ ಅಲ್ಲ, ಅವನನ್ನು ಹಿಡಿಯಲು ಹೋದವರಿಗಾದ ಗತಿಯನ್ನು ಸ್ಮರಿಸಿಕೊಳ್ಳುತ್ತಾರೆ. ಆದ್ದರಿಂದ ಈಗೇನು ಮಾಡಬೇಕೆಂದು ದೀರ್ಘವಾಗಿ ಆಲೋಚಿಸುತ್ತಾರೆ. ಕೊನೆಗೆ ಅವನನ್ನು ಹಿಡಿದುಕೊಟ್ಟವರಿಗೆ ಏಳುಹಳ್ಳಿಯ ಇನಾಮು ಕೊಡುವ ತೀರ್ಮಾನವಾಗುತ್ತದೆ. ಈ ಬಹುಮಾನದ ಆಶೆಗಾದರೂ ಜನರು ಚೆನ್ನನನ್ನು ಹಿಡಿದುಕೊಡಬಹುದೆಂದು ಮಾತನಾಡಿಕೊಂಡು ಡಂಗುರ ಹೊಡೆಯುವವನನ್ನು ಕರೆಯಿಸಿದರು.

ಡಂಗುರ ಹೊಡೆಯುವವನು ಬಂದು ಕರೆಸಿದ ಕಾರಣವನ್ನು ವಿನಯಪೂರ್ವಕ ಕೇಳಿಕೊಳ್ಳುತ್ತಾನೆ. ಯಾವ ಅಪರಾಧವನ್ನೂ ಮಾಡಿರದ ತನ್ನನ್ನೇಕೆ ಕರೆಸಿದರೆಂದು ತಳವಾರನಿಗೆ ಅಂಜಿಕೆ. ತಾನೇ ಮುಂದಾಗಿಯಾವ ದನದ ಗೋಣು ಮುರಿದಿಲ್ಲವೆಂದೂ ಚರ್ಮ ಸುಲಿದಿಲ್ಲವೆಂದೂ ವಿವರಿಸುತ್ತಾನೆ. ಸೇವೆಗೆ ತಯಾರಾಗಿ ಬಂದಿರುವ ತನಗೆ ಕೆಲಸವೊಪ್ಪಿಸಬೇಕೆಂದು ವಿನಂತಿಸಿಕೊಳ್ಳುತ್ತಾನೆ. ಫೌಜದಾರ ಡಂಗುರದ ವಿಷಯ ಹೇಳುವೆನು. ಡಂಗುರ ಸಾರಲ್ಪಟ್ಟಿತು.

ತಳವಾರ

ಏ ಎಪ್ಪಾ ಮಾಡತೆನ ಮುಜರಿ
ಏ ತಂದೆ ಮಾಡತೇನಿ ಮುಜರಿ

ಯಾಕ ನನ್ನ ಕರಸಿದಿರಿ
ದಗದ ಏನ ಐತಿ
ಹೇಳಬೇಕ ಧೊರಿ
ನಾ ಬಂದೇನಿ ಆಗಿ ತಯಾರಿ

ಯಾವ ದನದ ಗೋಣ ಕೋದಿಲ್ಲಾ
ಚರಮ ಸುಲಿದಿಲ್ಲಾ
ಅಪರಾಧ ಮಾಡಿಲ್ಲಾ
ನಾ ಬಂದೇನಿ ಆಗಿ ತಯಾರಿ

ಧಾರವಾಡ ಊರಶ್ಯಾರ
ಗುಜ್ಜರ ಅಲ್ಲೇ ನಮ್ಮ ಕೇರಿ
ಸ್ವಾಮಿ ಚಾಕರಿ
ನಾ ಬಂದೇನಿ ಆಗಿ ತಯಾರಿ

* * *

ದೃಶ್ಯ 23

ಡಂಗುರವನ್ನು ಕೇಳಿ ಶಿವಾಪುರದ ಗೌಡ ಫೌಜದಾರನಲ್ಲಿಗೆ ಬಂದು ಚೆನ್ನನನ್ನು ಹಿಡಿದುಕೊಡುವುದಾಗಿ ಹೇಳಿ ವೀಳ್ಯೆ ಹಿಡಿಯುವುದು ಈ ದೃಶ್ಯದ ವಿಷಯ. ತಾನು ಚೆನ್ನನನ್ನು ಹಿಡಿದುಕೊಟ್ಟರೆ ಏಳು ಹಳ್ಳಿಯ ಇನಾಮು ಸಿಗುವುದಲ್ಲದೆ ಹೆಚ್ಚು ಪ್ರಸಿದ್ಧಿಗೆ ಬರವೆನೆಂಬ ಧೋರಣೆಯಲ್ಲಿದ್ದಾನೆ ಶಿವಾಪುರದ ಗೌಡ.

ಈ ಆಶೆಯಿಂದಲೇ ಚೆನ್ನನನ್ನು ಹಿಡಿದು ತರುತ್ತೇನೆ. ಅಪ್ಪಣೆಯನ್ನು ಕೊಡಬೇಕು ಎಂದು ವಿನಂತಿಸಿಕೊಳ್ಳುತ್ತಾನೆ. ಚೆನ್ನನಂಥವನನ್ನು ಒಂದೆರಡು ದಿನಗಳಲ್ಲಿ ಹಿಡಿಯಲಾಗುವುದಿಲ್ಲವೆಂದೂ ಮೂರು ತಿಂಗಳು ಮುದ್ದತ್ತು ಕೊಡಬೇಕೆಂದೂ ಕೇಳಿಕೊಳ್ಳುತ್ತಾನೆ. ತಾನು ಕೇಳಿಕೊಳ್ಳುತ್ತಿರುವ ಮೂರು ತಿಂಗಳು ಗೌಡನಿಗೆ ದೀರ್ಘ ಅವಧಿ ಎನ್ನಿಸಿದರೂ ಆ ಹೊತ್ತಿಗೆ ಹಿಡಿದೇ ಹಿಡಿಯುತ್ತೇನೆ ಎಂಬ ವಿಶ್ವಾಸ ತಾಳಿದ್ದಾನೆ.

ಶಿವಾಪುರ ಗೌಡ ತನ್ನ ಪೌರುಷವನ್ನು ಕೊಚ್ಚುಕೊಳ್ಳುತ್ತ ಚೆನ್ನನನ್ನು ಆವಾಚ್ಯವಾಗಿ ಬೈಯುತ್ತಾನೆ. ತನ್ನ ಮುಂದೆ ಅವನ ಆಟ ಸಾಗಲಾರದು. ತಪ್ಪದೇ ಹಿಡಿದುಕೊಡುವೆನೆನ್ನುತ್ತಾನೆ. ಕಳ್ಳನಾದಂಥ ಚೆನ್ನನ ಕೀರ್ತಿ ರಾಜ್ಯಕ್ಕೇ ಹಬ್ಬಿದೆ; ಆದರೆ ಅವನು ತನ್ನ ಕೈಯಲ್ಲಿ ಪಾರಾಗಿ ಹೋಗುವುದು ಕಠಿಣವಿರುವುದೆಂದು ತನ್ನ ಪರಾಕ್ರಮದ ಮೇಲೆ ಹೆಮ್ಮೆಯಿಟ್ಟುಕೊಂಡು ಹೇಳುತ್ತಾನೆ ಗೌಡ.

ಶಿವಾಪುರ ಗೌಡ

ಕೊಡಬೇಕರಿ ಹುಕಮಾ
ಚೆನ್ನಪ್ಪಗ ಹಿಡಿದ ಕೊಡುವೆ ನಾನಾ

ಮೂರ ತಿಂಗಳ ಮುದ್ದತ್ತ ಕೊಡಬೇಕರಿ ನಮಗ
ಹಿಡದೇನಿ ವೀಳೆವನಾ
ಚೆನ್ನಪ್ಪಗ ಹಿಡದ ಕೊಡುವೆ ನಾನಾ

ತುಡಗ ಸೂಳೆಮಗಾ ಬಿಡುದಿಲ್ಲರಿ ಅವಗ
ತಿಳಿದಹೋಗಲಿ ಅವನ ಶೌರ್ಯವನಾ
ಚೆನ್ನಪ್ಪಗ ಹಿಡಿದ ಕೊಡುವೆ ನಾನಾ

ಕಳ್ಳ ಚೆನ್ನನ ಕೀರ್ತಿ ರಾಜೇಕ ಹಬ್ಬೇತಿ
ಪಾರಾಗಿ ಹೋಗಲಿನ್ನಾ
ಚೆನ್ನಪ್ಪಗ ಹಿಡಿದ ಕೊಡುವೆ ನಾನಾ

* * *