ದೃಶ್ಯ 8

ಗದಿಗೆಪ್ಪ ಮನೆಗೆ ಬಂದು ತಮ್ಮನಿಗೆ ಕದನಬಿಡುವಂತೆ ಹೇಳುತ್ತಾನೆ. ತ್ವಾನಗಟ್ಟಿಯ ಹಳಬರು ತನ್ನ ಮಾನ ಕಳೆದದ್ದರಿಂದ ಈ ಕತ್ತಿ ಕಠಾರಿ ತಂದಿರುವುದಾಗಿ ಚೆನ್ನನ ಸಮರ್ಥನೆ. ಸರಿಯಾದ ಮಾರ್ಗದಲ್ಲಿರುವ ತಾನು ಈ ಪಂಥಕ್ಕಾಗಿ ಪ್ರಾಣಬಿಡಲೂ ಸಿದ್ಧರಿವುದಾಗಿ ಹೇಳುತ್ತಾನೆ.

ಗದಿಗೆಪ್ಪ ತಮ್ಮನಿಗೆ ಬುದ್ಧಿವಾದ ಹೇಳುತ್ತಾನೆ : ಕತ್ತಿಯನ್ನು ತ್ವಾನಗಟ್ಟಿಯವರಿಗೆ ಒಪ್ಪಿಸಿ ಬಿಡು. ಇಂಥ ಈರ್ಷೆ ನಮಗೆ ತರವಲ್ಲ. ಊರ ಗೌಡ ಸಿಟ್ಟಿಗೆದ್ದಿದ್ದಾನೆ. ಅವನ ಸಿಟ್ಟಿಗೆ ಹುಲ್ಲುಕಡ್ಡಿಹಾಕಿ ಅದು ಇನ್ನೂ ಉರಿಯುವಂತೆ ಮಾಡುವ ಜನರಿಗೇನೂ ಕೊರತೆಯಿಲ್ಲ. ಸಿಟ್ಟು, ದಂಗೆ ಹೀಗೇ ಮುಂದುವರಿದರೆ ಊರ ಜನರೆಲ್ಲ ಒಕ್ಕಟ್ಟಾಗಿ ನಮ್ಮನ್ನು ಊರಲ್ಲಿಯೇ ಇರಗೊಡಲಿಕ್ಕಿಲ್ಲ.

ಗದಿಗೆಪ್ಪನ ಮಾತನ್ನು ಚೆನ್ನ ಒಪ್ಪಿಕೊಳ್ಳಲು ಸಿದ್ಧನಿಲ್ಲ. ತನಗಾದ ಅಪಮಾನವನ್ನು ನುಂಗಿಕೊಂಡು ಚೆನ್ನ ಕತ್ತಿಯೊಪ್ಪಿಸಲಾರ. ಅದೇ ವೇಳೆಗೆ ತನ್ನ ಪ್ರೀತಿಯ ಅಣ್ಣ ತನ್ನಿಂದಾಗಿ ತೊಂದರೆಗೊಳಗಾಗುವುದೂ ಅವನಿಗೆ ಬೇಡವಾಗಿದೆ. ಇಂಥ ಪ್ರಸಂಗದಲ್ಲಿ ಅವನಿಗೆ ತೋರಿದ್ದು ಒಂದೇ ಒಂದು ದಾರಿ : ತಾನು ಊರು ಬಿಡುವುದು. ತಾನು ಊರು ಬಿಟ್ಟು ತಳ್ಳಿ : ಮಾಡುತ್ತ ನಾಡಮೇಲೆ ಹೋಗುವುದಾಗಿಯೂ ವೈರಿಯ ಮೇಲೆ ಸೇಡು ತೀರಿಸಿಕೊಳ್ಳುವುದಾಗಿಯೂ ಹೇಳಿ ಚೆನ್ನ ಹೊರಟುಬಿಟ್ಟ. ತಾನು ಊರು ಬಿಡುವ ಪೂರ್ವದಲ್ಲಿ ಗೌಡನಿಗೆ ತನ್ನ ಕೈತೋರಿಸಬಯಸುತ್ತಾನೆ.

ಗದಿಗೆಪ್ಪ

ಬಾರೋ ಜೀವದ ತಮ್ಮಾ
ನಿನ್ನ ರೂಪ ಹುಣವಿಯ ಚಂದ್ರಾಮ

ಚಿತ್ತಿಟ್ಟ ಎನ್ನ ಮಾತಾ
ಕೇಳಪ್ಪಾ ಈ ಹೊತ್ತಾ
ಸಿಟ್ಟಿಗಿ ಬರಬೇಡೋ ತಮ್ಮಾ

ಕೊಟ್ಟಬಿಡೋ ನೀನಾ
ಬೇಕಾಗಿಲ್ಲಪ್ಪಾ ಕದನಾ
ಗೌಡ್ರ ಕರೆಸಿದ್ರೊ ತಮ್ಮಾ

ಚೆನ್ನ

ಕೇಳೋ ಮೋಹದ ಅಣ್ಣಾ
ನಿನ್ನ ಮಾತು ಮೀರಾವಲ್ಲೊ ನಾನಾ

ತ್ವಾನಗಟ್ಟಿ ಹಳಬರು
ಕಳೆದಾರೊ ನನ್ನ ಆಬರು
ಅದಕಾಗಿ ತಂದೇನೋ ನಾನಾ

ಮಾಡಲಿ ಬೇಕಾದ್ದಾ
ಅದಕ ಅದೇನೋ ಸೀದಾ
ತೋರುವೆ ನನ್ನ ಪ್ರಾಣಾ

ಹೋಗುವೆ ಗೌಡನಹಂತಿ
ಮಾಡುವೆ ಫಜೂತಿ
ಮನಿಯಾಗ ಇರೋ ನೀನಾ

ಗದಿಗೆಪ್ಪ

ಹಿಂತಾ ಹ್ಯಾವದ ಮಾತ ನಮಗ ತರವಲ್ಲಾ
ನಾವು ಬಡವರಾಗಿ ಬಾಳವೆ ಮಾಡಬೇಕಲ್ಲಾ

ಊರಗೌಡಾ ಬೆಂಕಿಹಾಕ್ಯಾರೋ ನಮ್ಮ ಮ್ಯಾಲಾ
ಉರದರ ಮ್ಯಾಲೆ ಹುಲ್ಲ ಹಾಕ್ಯಾರಲ್ಲಾ

ದಂಗೆ ಮಡಿದಾರ ಈ ಊರ ಜನರೆಲ್ಲಾ
ಒಕ್ಕಟ್ಟಾಗಿ ಊರಾಗ ಇರಗೊಡಾಕಿಲ್ಲಾ

ಚೆನ್ನ

ಅಣ್ಣಾ ಕೇಳೋ ಎನ್ನ ಮಾತ ಕುಸಿಯಾಲಾ
ನೀನು ಅಂಜಬ್ಯಾಡ ಧೈರ್ಯವ ಇರಬೇಕಲ್ಲಾ ॥

ಮನಿಬಿಟ್ಟ ಹೋಗುವೆ ಬಾಳೆ ಬೇಕಾಗಿಲ್ಲಾ
ನಮ್ಮ ನಿಮ್ಮ ರಿಣಾ ಇಂದು ತೀರಿತಲ್ಲಾ

ಬಾಳೆ ಮಾಡಿಕೊಂಡ ಇರೊ ಅನಗಾಲಾ
ತಳ್ಳಿ ಮಾಡಾಕ ಹೋಗುವೆನು ನಾಡಮ್ಯಾಲಾ

ಹುಲಿಯಾಂಗ ಗುಂಡಗ ಹೊಡೆದು ಊರಾಗೆಲ್ಲಾ
ಒದ್ದ ಮುರಿತೇನಿ ವೈರಿ ಬಾಯಾನ ಹಲ್ಲಾ

* * *

ದೃಶ್ಯ 9

ಗೌಡನು ತನ್ನ ಅಣ್ಣ ಗದಿಗೆಪ್ಪನನ್ನು ಕರೆಯಿಸಿ ತಾಕೀತು ಮಾಡಿದ್ದು ಚೆನ್ನನಿಗೆ ಕೋಪವನ್ನುಂಟು ಮಾಡಿದೆ. ಆದ್ದರಿಂದ ತನ್ನ ಮನೆಬಿಟ್ಟು ಹೊರಟವನು ಮುಂಚೆ ನಿಶ್ಚಯಿಸಿದಂತೆ ನೇರವಾಗಿ ಗೌಡನ ಮನೆಗೆ ಬರುವನು. ಗೌಡನೆದುರು ನಿಂತು ನನ್ನ ಅಣ್ಣನನ್ನು ಕರೆಸಿ ಮನಬಲ್ಲಂತೆ ಮಾತನಾಡುವ ಕಾರಣವೇನಿತ್ತು? ಎಂದು ಕೇಳುತ್ತಾನೆ. ಇದರಿಂದ ನನ್ನ ಮಾನ ಕಳೆದು ಹೋಯಿತು ಎಂದು ಕೆಂಡಾಕಾರುತ್ತಾನೆ. ನಿನ್ನ ವೈರವೇನಿದ್ದರೂ ನನ್ನೊಂದಿಗಿರಲಿ, ನನ್ನ ಅಣ್ಣನ ಮೇಲೇಕೆ? ಎಂದು ಪ್ರಶ್ನಿಸುತ್ತಾನೆ. ಮತ್ತೆ ಪ್ರತಿಭಟನೆಯ ಮಾತನಾಡಿ ನನ್ನ ಕಡೆಗೆ ತಪ್ಪಿದರೆ ರಾಣಿಸರಕಾರವೇ ಶಿಕ್ಷಿಸಲಿ ಎಂದು ನುಡಿದು ಚೆನ್ನ ಹೊರಟು ಹೋಗುತ್ತಾನೆ.

ತನಗೆ ಬಾಯಿ ತೆರೆಯಲು ಅವಕಾಶಕೊಡದಂತೆ ಮಾತನಾಡಿ ಹೋದ ಚೆನ್ನನನ್ನು ಹಾಗೇ ಬಿಡಬಾರದು ಎನ್ನಿಸಿತು ಸೊಪ್ಪಡ್ಲ ಗೌಡನಿಗೆ ಈ ಅವಮಾನದ ಸೇಡಿಗಾಗಿ ಚೆನ್ನನನ್ನು ಶಿಕ್ಷಿಸಲೇಬೇಕೆಂದು ಗೌಡನು ಪಂಚರನ್ನು ಕೂಡಿಸುತ್ತಾನೆ. ಚೆನ್ನನು ಇದುವರೆಗೆ, ತ್ವಾನಗಟ್ಟಿಯಲ್ಲಿ, ಸೊಪ್ಪಡ್ಲದಲ್ಲಿ ಮಾಡಿದ ದೊಂಬಿ ತೋರಿಸಿದ ಅವಿಧೇಯತೆ ಎಲ್ಲವೂ ವ್ಯಕ್ತವಾಗುವಂತೆ ಸರಕಾರಕ್ಕೆ ಅರ್ಜಿಯೊಂದನ್ನು ಬರೆದ ಗೌಡ. ಆದರೆ ಚೆನ್ನನ ಸೇಡಿನ ಸ್ವಭಾವವನ್ನು ಚೆನ್ನಾಗಿ ಬಲ್ಲ ಪಂಚರಿಗೆ ಅವನ ವಿರುದ್ಧ ಸಹಿಮಾಡಲು ಅಂಜಿಕೆ. ನಾಳೆ ನಮ್ಮನ್ನು ಸುಮ್ಮನೆ ಬಿಟ್ಟಾನೆಯೇ ಎಂಬ ಸಂದೇಹ. ನಿಮಗೇನೂ ಇದರಿಂದ ತೊಂದರೆಯಾಗುವುದಿಲ್ಲವೆಂದೂ ಅಂಥ ಪ್ರಸಂಗದಲ್ಲಿ ತಾನು ರಕ್ಷಣೆಗಿರುವುದಾಗಿಯೂ ಗೌಡ ಧೈರ್ಯ ಕೊಟ್ಟ ಮೇಲೆ ಎಲ್ಲರದೂ ಸಹಿಯಾಯಿತು. ರಿಪೋರ್ಟು ಬೆಟಗೇರಿಗೆ ಹೋಯಿತು.

ಚೆನ್ನ

ಯಾಕಲೇ ಗೌಡಾ ಎಷ್ಟಲೆ ನಿನ್ನ ಅಹಂಕಾರಾ ॥ ಪ ||

ಕರಸಿ ನಮ್ಮ ಅಣ್ಣಗ
ಆಡಿದಿ ಬಲ್ಲಾಂಗ
ಕಳದಿಯೊ ನನ್ನ ಅಬರೂನಾ

ಮಾಡುದಿದ್ದರೆ ನನಗ
ಮಾಡಿ ತೋರಿಸೊ ಈಗ
ಹೌದ ಅಂತೇನಿ ಬಾಹದೂರಾ

ರಂಡಿಮುಂಡ್ಯಾರ ಸೆಗಣಾ
ತಿನ್ನಾವ ನೀನಾ
ಇಷ್ಟ ಯಾಕೊ ನಿನ್ನ ಕಾರಬಾರ

ರಾಣಿ ಸರಕಾರಕ್ಕೆ
ಬೀಳುವೆ ಪಾದಕ್ಕೆ
ಹೊಡಿಯಲೊ ನನ್ನ ಶಿರಾನಾ

ಸೊಪ್ಪಡ್ಲಗೌಡ

ಕಟ್ಟಿಯ ಚೆನ್ನಾಮಾಡಿದ ಅಪಮಾನಾ
ನೋಡರಿ ಸೂರಿಯನಾ ॥ ಪ ||

ಇದ್ದಲ್ಲಿ ಈತನಾಹುಡುಕಿಸಿ ಈ ಕ್ಷಣಾ
ಮಾಡಿಸುವೆ ಶಿಕ್ಷವನಾ

ಕೂಡಿಸಿ ಪಂಚರನಾತರಸೂವೆ ಈ ಕ್ಷಣಾ
ಮಾಡುವೆ ಚೌಕಸಿನಾ

* * *

ದೃಶ್ಯ 10

ಜೀವದ ಗೆಳೆಯರಾದ ಹುಸೇನಿ, ಸಿದ್ಧರು ಚೆನ್ನನ ಮನೆಗೆ ಭೆಟ್ಟಿಗಾಗಿ ಬಂದರು. ಗದಿಗೆಪ್ಪ ನಡೆದ ಸಂಗತಿಯನ್ನು ತಿಳಿಸಿ, ಚೆನ್ನ ಸೊಗಲದ ಗುಡ್ಡ ಸೇರಿರುವುದಾಗಿ ಹೇಳುತ್ತಾನೆ. ಅವನ ವಿಚಾರಬಿಟ್ಟು ಬಾಳ್ವೆವಂತರಾಗಿ ಇರಲು ಇವರಿಗೆ ಸಲಹೆ ನೀಡುತ್ತಾನೆ.

ಆದರೆ ಈ ಜೀವದ ಗೆಳೆಯರಿಗೆ ಸಮಾಧಾನವಾಗಲಿಲ್ಲ. ಸೊಗಲದ ಗುಡ್ಡಕ್ಕೆ ಬಂದು ಚೆನ್ನನನ್ನು ಕೂಡುತ್ತಾರೆ. ಅಡವಿ ಸೇರಿದ ಚೆನ್ನದ ಸ್ಥಿತಿಗೆ ಗೆಳೆಯರಿಬ್ಬರೂ ಮರಗುತ್ತಾರೆ. ಚೆನ್ನನ ಸ್ಥಿತಿ ಚಿಂತಾಜನಕವಾಗಿದೆ. ಮುಖದ ಮೇಲೆ ಮುಂದಿನ ಕಳೆಯು ಉಳಿದಿಲ್ಲ. ಸರಿಯಾಗಿ ಅರವಿ ಅಂಚಡಿಗಳಿಲ್ಲದೆ ಅಸ್ತವ್ಯಸ್ತ ಕೂದಲು ಬಿಟ್ಟುಕೊಂಡು ನಿಂತಿರುವ ಚೆನ್ನ ಹುಚ್ಚನಂತಾಗಿದ್ದಾನೆ.

ಚೆನ್ನನು ತನ್ನ ಆತ್ಮೀಯ ಗೆಳೆಯರೆದುರು ತನಗೆ ಬಂದಿರುವ ಸ್ಥಿತಿಯನ್ನು ವಿವರಿಸುತ್ತಾನೆ; ಊಟವಿಲ್ಲದೆ ಮೂರುದಿನವಾಗಿದೆ; ಗಿಡದ ತಪ್ಪಲು ತಿಂದು ದಿನಗಳೆಯುತ್ತಿದ್ದಾನೆ. ಊರ ಗೌಡನು ತನ್ನ ಮೆಲೆ ದ್ವೇಷ ಸಾಧಿಸುತ್ತಿರುವುದರಿಂದ ತನಗೆ ಗುಡ್ಡ ಸೇರುವ ಪ್ರಸಂಗ ಪ್ರಾಪ್ತವಾಗಿದೆ ಎನ್ನುತ್ತಾನೆ. ಸಿದ್ಧ. ಹುಸೇನಿಯರು ಈಗ ಚೆನ್ನನ ಜೊತೆಗಿರಲು ನಿಶ್ಚಯಿಸಿ ಅವನಿಗೆ ಧೈರ್ಯ ಹೇಳುತ್ತಾರೆ. ನಮ್ಮ ಸಾವಿನ ತರುವಾಯವೇ ನಿನ್ನ ಸಾವು ಎಂದು ವಚನಕೊಡುತ್ತಾರೆ. ಗೆಳೆಯರಿಬ್ಬರ ತ್ಯಾಗದ ಮಾತುಗಳು ಇಂಥ ಸಮಯದಲ್ಲಿ ಚೆನ್ನನಿಗೆ ತುಂಬ ನೆಮ್ಮದಿಯನ್ನುಂಟು ಮಾಡಿದವು.

ಹುಸೇನಿ

ಬಾರೋ ನನ್ನ ಜೀವದ ಗೆಳಿಯಾ ಚೆನ್ನಣ್ಣಾ
ಬಾಳ ದಿನಕ ಆದೀತೋ ಬೆಟ್ಟೆ ತಗೊ ಶರಣಾ ॥ ಪ ||

ಮಾರಿ ಮ್ಯಾಲಿನ ಬಣ್ಣಾ
ಕಳಿಯುಗುಂದಿತೊ ಚೆನ್ನಾ
ಹಂತಾಚಿಂತಿ ಏನ ಬಂತೊ ಹೇಳೋ ನೀನಾ

ಊರ ಸೀಮಿಯ ತೊರೆದು
ಗುಡದಾಗ ಬಂದ ಕುಂತು
ಹುಚ್ಚ ಹಿಡಿದಾಂಗ ಮಾತನಾಡೂದೂ ಏನ ಕಾರಣಾ

ಬೆಳೆಸಿ ನೀ ಗಡ್ಡಾ ಜಡಿ
ಗುರತಾ ಹತ್ತದಾಂಗ ಮಾಡಿ
ಮೈಮೇಲೆ ಅರವಿ ಅಂಚಡಿ ಇಲ್ಲೊ ಏನಾ

ಚೆನ್ನ

ಕೇಳೋ ನನ್ನ ಜೀವದ ಗೆಳಿಯಾ ಹುಸೇನಾ
ನನಗ ಬಂದ ಸಂಕಟ ಹೇಳಿಲಿನ್ನೇನಾ ॥ ಪ ||

ಮೂರ ದಿವಸ ಆತೋ
ಕೂಳ ಇಲ್ಲಪ್ಪಾ ತುತ್ತಾ
ಗಿಡದ ತಪ್ಪಲ ತಿಂದ ಕಾಲ ಕಳಿತೇನಾ

ಊರಗೌಡ ನನ್ನ ಮ್ಯಾಲ
ತಳ್ಳಿ ನಡಿಸ್ಯಾನಲ್ಲಾ
ಇದಕ್ಕಾಗಿ ಸೇರೇನಿ ಗುಡ್ಡವನಾ

ಊರ ಕೇರಿಯ ಜನಾ
ಗೌಡಗ ಕಟ್ಟಿ ಬೆನ್ನಾ
ಕೊಡಬೇಕಂತಾರೋ ನನ್ನಾ

ಸಿದ್ಧ

ಚನ್ನಪ್ಪಾ ನಾನು ಹೇಳುವೆ ತಿಳಿಮನಕ ॥ ಪ ||

ಧೈರ್ಯ ಬಿಡಬ್ಯಾಡೊ ನೀನಾ
ಇರತೇವಿ ನಿನ್ನ ಬೆನ್ನಾ
ಶಾಂತ ತಗೊಳೊ ಮನಕ

ಹೋದಿಂದ ನನ್ನ ಪ್ರಾಣಾ
ನಿಂದು ಹೋಗಲೋ ಜಾಣಾ
ವಚನ ತೊಗೊಳೊ ನಿರಕ

ಸುತ್ತ ಮುತ್ತ ಹಳ್ಳಿಗಳನಾ
ಮಾಡುವೆ ಲೂಟೀನಾ
ಕುಶಿಲಿಂದ ಇರೂಣ ಕಡಿತನಕಾ

ಚೆನ್ನಪ್ಪ

ಬಪ್ಪಾರೆ ಗೆಳಿಯಾ ಧೈರ್ಯ ಕೊಟ್ಟೆಪ್ಪಾ ನನಗ ॥ ಪ ||

ಇದ್ದರ ನಿಮ್ಮಂಥಾ
ಇರಬೇಕೋ ಜೀವದ ಮಿತ್ರಾ
ಪಾದಕ್ಕೆ ಬೀಳುವ ವ್ಯಾಳೆಕ

ನಾವು ನೀವು ಸಾಯುತನಕಾ
ಜೋಡಿಲೆ ಇರವೂಣು ಟೀಕಾ
ಧಾರವಾಡ ಹಾವೇರಿ ಪ್ಯಾಟ್ಯಾಗ

* * *

ದೃಶ್ಯ 11

ಸುಬೇದಾರನ ಆಜ್ಞೆಯಂತೆ ಪೋಲಿಸರಾದ ಅಬ್ದುಲ್, ಕಾಸೀಮರು ಸೊಡ್ಲಪ್ಪ ಗೌಡನ ಸಹಾಯದಿಂದ ಚೆನ್ನನನ್ನು ಹಿಡಿಯಬೇಕೆಂದು ಬೆಟಗೇರಿಯಿಂದ ಸೊಪ್ಪಡ್ಲಕ್ಕೆ ಬಂದರು.

ಗೌಡನೆದುರಿಗೆ ತಮ್ಮ ಪೋಲೀಸು ದರ್ಪವನ್ನು ಹೇಳುತ್ತಾರೆ. ಚೆನ್ನನನ್ನು ಹಿಡಿದು ಫಜೀತಿ ಮಾಡುತ್ತೇವೆ. ಅವನು ಎಲ್ಲಿದ್ದಾನೆ ನಮಗೆ ಹೇಳು ಎನ್ನುತ್ತಾರೆ. ಅವನನ್ನು ಹಿಡಿಯಬೇಕೆಂದು ಸರಕಾರದಿಂದ ಹುಕುಮು ತಂದಿದ್ದೇವೆ; ಸಿಕ್ಕರೆ ಬೇಡಿಹಾಕಿ ಎಳೆದುಕೊಂಡು ಹೋಗುತ್ತೇವೆ ಅನ್ನುತ್ತಾರೆ. ಚೆನ್ನನ ಪುಂಡಾಟಿಕೆ ನಾಡಮೇಲೆ ಹೆಚ್ಚಾಗಿದೆಯೆಂದೂ ತೋರಿಸಿಕೊಟ್ಟರೆ ಬಂಧಿಸುತ್ತೇವೆ ಎಂದೂ ಮತ್ತೆ ಮತ್ತೆ ಹೇಳುತ್ತಿದ್ದಾರೆ.

ಇವರ ಮಾತಿನ ರೀತಿಯಲ್ಲಿ ಕಟ್ಟಿ ಚೆನ್ನನು ಸಾಮಾನ್ಯ, ಕ್ಷುಲ್ಲಕನೆಂಬ ಧ್ವನಿಯಿದೆ. ತುಡುಗುಮಾಡುತ್ತ ಅಡ್ಡಾಡುವ ಅವನದೇನು, ಒದ್ದು ಎಳೆದೊಯ್ಯುತ್ತೇವೆ ಎಂಬ ಅಹಮಿಕೆಯಲ್ಲಿ ಮಾತನಾಡುತ್ತಾರೆ. ಒಟ್ಟಾರೆ. ಚೆನ್ನನನ್ನು ಹಿಡಿಯಲು ಅತಿಯಾದ ಆತುರವನ್ನು ತೋರಿಸುತ್ತ ಬೇಗನೇ ಅವನಿರುವ ಸ್ಥಳವನ್ನು ಹೇಳಬೇಕೆನ್ನುತ್ತಾರೆ.

ಸೊಡ್ಲಪ್ಪದ ಗೌಡನಿಗೆ ಚೆನ್ನನ ತಾಕೀತು ಗೊತ್ತಿದೆ. ಆದ್ದರಿಂದಲೇ ಆತುರದಲ್ಲಿರುವ ಪೋಲೀಸರಿಗೆ ಎಚ್ಚರಿಕೆಯನ್ನು ನೀಡುತ್ತಾನೆ. ಬಹಳ ಜನ ಅವನಿಂದ ಪೆಟ್ಟು ತಿಂದಿದ್ದಾರೆಂದು ಹಳ್ಳಿಗಳ ಶ್ರೀಮಂತರನ್ನು ಲೂಟಿ ಮಾಡುತ್ತ ತಿರುಗಾಡುವ ಅವನನ್ನು ಬಂಧಿಸುವುದು ಕಠಿಣವೆಂದೂ ಹೇಳುತ್ತಾನೆ.

ಸೊಗಲದ ಗುಡ್ಡದಲ್ಲಿ ಚೆನ್ನನು ವಾಸವಾಗಿರುವನೆಂದು ಗೌಡ ಹೇಳಿದ ಮೇಲೆ ಪೋಲೀಸರು ಆ ಕಡೆ ಹೊರಡುವರು.

ಸಿಪಾಯಿಗಳು

ಗೌಡಾ ತೋರಿಸೊ ಕಳ್ಳ ಚೆನ್ನಗ
ಹಿಡಿದ ಫಜೂತಿ ಮಾಡತೇವಿ ಈಗ ॥ ಪ ||

ಹುಕಮ ತಂದೇವಿ ಸರಕಾರದಿಂದಸಿಕ್ಕಲಿ ಹಿಡತಂದ
ಬೇಡಿ ಕೈಯಾಗಹಾಕಿ ಒಯ್ಯತೇವಿ ಎಳಕೊಂಡ ಈಗ ॥
ಎಷ್ಟ ಪುಂಡಾಟಿಕೆ ಅವಂದು ನಾಡಮ್ಯಾಗಹೇಳತೇನಿ ನಿಮಗೀಗ

ತೋರಿಸೊ ಲಗುಬ್ಯಾಗರಟ್ಟಿಕಟ್ಟಿ ಎಳಕೊಂಡ ಹೋಗತೇನಿ ಈಗ
ನಮ್ಮ ಪೋಲಿಸರ ಧೈರ್ಯವ ನೀ ನೋಡಮಾಡತೇವಿ ಗಡಮುಡ
ತುಡಗ ಚೆನ್ನಗಒದ್ದ ಒಯ್ಯತೇವಿ ಎಳಕೊಂಡ ಈಗ

ಗೌಡ

ಚೆನ್ನ ಹೋಗಿ ಸೇರ‌್ಯಾನೊ ಗುಡದಾಗ
ತಪಾಸ ಮಾಡರಿ ಪೋಲಿಸರು ಲಗುಬ್ಯಾಗ ॥ ಪ ||

ಬಾಳ ಬೆರ್ಕಿ ಅದಾನ ಮೋಸಗಾರಮಾಡ್ಯಾನೊ ನಿಮಗ ಜೋರ
ಹುಶ್ಶಾರೊ ಮೈಯಮ್ಯಾಗಎಚ್ಚರಿಟ್ಟ ಹೋಗರಿ ಗುಡದಾಗ
ಎಷ್ಟೊಮಂದಿ ಅವನ ಕೈಯಾಗಸಿಕ್ಕ ಬಲ್ಲಾಂಗ

ನಷ್ಟವಾಗ್ಯಾರೀಗಸುಲಕೊಂಡ ಕಳಸ್ಯಾನೊ ದಾರ‌್ಯಾಗ
ಸುತ್ತ ಮುತ್ತ ಹಳ್ಳಿಗಳ ಲೂಟಿಓದಾನೊ ಮಟ್ಟಿಕಟ್ಟಿ
ಬರತಾನೊ ರಾತ್ರ್ಯಾಗತಳ್ಳಿ ನಡಿಸ್ಯಾನೋ ಹಿಂಗ ನಾಡಮ್ಯಾಗ

* * *

ದೃಶ್ಯ 12

ಪೋಲೀಸರು ಗುಡ್ಡದಲ್ಲಿ ಚೆನ್ನನನ್ನು ಹುಡುಕಾಡುತ್ತಾರೆ. ಚೆನ್ನನು ಕಂಟಿಗಳಲ್ಲಿ ಅಡಗಿಕೊಂಡಿರಬಹುದು : ಪ್ರಾಣಿಗಳಂತೆ, ಕಲ್ಲಿನಿಂದ ಒಗೆದು ಎಬ್ಬಿಸಬೇಕೆನ್ನುವ ಉತ್ಸಾಹದಲ್ಲಿದ್ದಾರೆ. ಬಂದೂಕುಗಳನ್ನು ಬಾರಮಾಡಿಕೊಂಡು, ಕತ್ತಿ ಹಿಡಿದುಕೊಂಡು ಚೆನ್ನನನ್ನು ಎದುರಿಸೋಣ ಎನ್ನುತ್ತಾರೆ. ಅವನು ಪಾರಾಗಿ ಹೋಗದಂತೆ ಕಾವಲಿರೋಣ ಎಂದು ಮಾತಾಡಿಕೊಳ್ಳುತ್ತಾರೆ.

ರಂಗದ ಇನ್ನೊಂದು ಬದಿಯಿಂದ, ಚೆನ್ನ : ಸಿದ್ದ : ಹುಸೇನಿ ಪ್ರವೇಶಿಸುತ್ತಾರೆ. ತಮ್ಮನ್ನು ಹುಡುಕುತ್ತ ಪೋಲೀಸರು ಬರುತ್ತಿರುವುದನ್ನು ಚೆನ್ನ ಮೊದಲು ಕಂಡು ತನ್ನ ಸ್ನೇಹಿತರಿಗೆ ಅದನ್ನು ತಿಳಿಸುತ್ತಾನೆ. ಪೋಲೀಸರಿಗೆ ತಾನೆಲ್ಲಿ ಸಿಗುತ್ತೇನೋ ಎಂದು ಹಳ್ಳಿಯ ಜನ ದುಃಖಿಸುತ್ತಿದ್ದಾರೆಂದು ಚೆನ್ನ, ಸಿದ್ಧ ಹುಸೇನಿಯರೆದುರು ಹೇಳುತ್ತಾನೆ.

ತಾವಿಬ್ಬರೂ ಇರುವವರೆಗೆಚಿಂತಿಸಬಾರದಾಗಿ ಗೆಳೆಯರಿಬ್ಬರೂ ಚೆನ್ನನಿಗೆ ಧೈರ್ಯ ನೀಡುತ್ತಾರೆ. ಪೋಲೀಸರನ್ನು ತಾವು ಹೊಡೆದು ಕೆಡಹುವುದಾಗಿ ಪೌರುಷದ ಮಾತನಾಡುತ್ತಾರೆ.

ಮೂವರೂ ಎದುರಾಗಿ ಬರುತ್ತಿರುವುದನ್ನು ಪೋಲೀಸರು ದೂರದಿಂದಲೇ ಕಂಡು, ಅವರು ಸಮೀಪಿಸಿದಂತೆ ಚೆನ್ನನನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ.

ಪೋಲೀಸರು ಸಮೀಪ ಬಂದ ಕೂಡಲೇ ಚೆನ್ನ ಮತ್ತು ಅವನ ಗೆಳೆಯರು ಅವರ ಮೇಲೆ ಹರಿಹಾಯ್ದು ಹೊಡೆದು ಪ್ರಾಣ ತೆಗೆಯುವುದಾಗಿ ಹೆದರಿಸುತ್ತಾರೆ. ಗಾಬರಿಗೊಂಡ ಪೋಲೀಸರು ಚೆನ್ನನ ಕಾಲು ಹಿಡಿದು ಕ್ಷಮಾಪಣೆ ಕೇಳುತ್ತಾರೆ.

ಸಿಪಾಯಿಗಳು

ತುಡುಗ ಚೆನ್ನನ ಹುಡಕರ‌್ಯೋ ಗುಡದಾಗ
ಕಲ್ಲಿಲೊಗದ ಕಂಟ್ಯಾಗ
ಅಡಗಿಕೊಂಡಿದ್ದಾನೋ ಹಳ್ಳಕೊಳ್ಳದಾಗ

ಮದ್ದು ತುಂಬಿ ಬಂದೂಕ ಬಾರ ಮಾಡೋಣೀಗ
ಕತ್ತಿ ಹಿರದ ಕೈಯಾಗ
ಬಡದ ಕೆಡವುನೋ ಅಡವಿ ಮಲಾ ಬಡದಾಂಗ

ಸುತ್ತಗಟ್ಟಿ ಪಾರಾ ಇರೋಣೋ ಈಗ
ಪಾರಾಗಿ ಹೋಗದ್ಹಾಂಗ
ಹುಲಿ ಕೈಯಾಗ ನರಿ ಸಿಕ್ಕರ ಹೋದೀತ್ಹೆಂಗ

ಚೆನ್ನ

ಹುಬ್ಬಗೈಯ ಹಚ್ಚಿ ನೋಡ್ರ್ಯೋ ಹುಸೇನಿ ಸಿದ್ದಣ್ಣಾ
ಈ ಗುಡ್ಡದವಾರಿ ಕೆಳಗಬಂತೋ ಸಾವಿರಾರ ಜನಾ ॥ ಪ ||

ಬಿಚ್ಚಗತ್ತಿ ಬಂದೂಕ ಪಾರ ಪೋಲೀಸ ಪಾರ್ಟಿಯನಾ
ಕುದರಿಹತ್ತಿ ಹುಡಕ್ಯಾಡತಾರೋ ಗುಡ್ಡಗೌವಾರನಾ

ಹಳ್ಳಿಪಳ್ಳಿ ಜನಾ ನೋಡೋ ನಿಂತೈತಿ ಪೋಜವನ
ಕಟ್ಟಿಚೆನ್ನಾ ಸಿಗತಾನಂತ ಮಾಡತಾರೋ ದುಃಖವನಾ

ಹುಸೇನಿ

ಚೆನ್ನಪ್ಪಣ್ಣಾ ಬಿಡಬ್ಯಾಡೊ ನೀನು ಧೈರ್ಯವನಾ
ನಾವಿಬ್ಬರೂ ಇರುತನಾ ಬಂದದ್ದು ಬರಲಿನ್ನಾ
ಹಸದ ಹುಲಿಯಾಂಗ ಗುಡಗ ಹೊಡಿತೇನಿ ಗುಡಗನಾ

ಈ ಕರಿ ಅಂಗಿ ಸಿಪಾಯರನ ಆಡತೇವಿ ಹುಡದಿಯನಾ
ಹುಕಮಕೊಟ್ಟ ನೋಡೋ ಎಣ್ಣಾ ಮಾಡಬ್ಯಾಡೋ ಅನುಮಾನಾ
ಈ ಕ್ಷಣದಾಗ ಕೆಡುತೇವಿ ವೈರಿಗಳ ಹೆಣಾ

ಪೋಲೀಸರು

ನೋಡರ‌್ಯೋ ಬ್ಯಾಗಾ
ಬಂದಾರೋ ಇಲ್ಲೇ ಮೂವರಾ

ಇವರು ಕಾಣತಾರೋ ಭಾರಿ ತುಡಗರಾ
ತರಬೂನು ಹೋಗಿ ತೀವರಾ
ಮಾಡಿ ಮುಂಗೈ ಜೋರಾ

ಮುಂದಿನ್ಯಾವ ಕಾಣಸ್ತಾನೊ ಕಟ್ಟಿ ಚೆನ್ನ ಧೀರಾ
ದೊಡ್ಡ ಮುಂಡಾಸ ಸುತ್ತಿದಾನ ಹಳದಿ ದುಂಡಕಾರಾ
ಎಷ್ಟ ಇವನ ಅಹಂಕಾರಾ

ನಮ್ಮನ ಕಂಡ ಮಾಡವಾ ಏಟ ದರಕಾರಾ
ಹಿಡಿದ ಮಾಡಬೇಕೊ ಇವರಿಗೆ ಸುಮಾರಾ
ಎಲ್ಲಾ ಪೋಲೀಸರಾ

ಚೆನ್ನ : ಹುಸೇನಿ : ಸಿದ್ಧ

ಯಾಕಲೆ ತುಡಗ ಸಿಪಾಯಿ ಬಾರೊ ಬ್ಯಾಗನಾ ॥ ಪ ||

ಒಂದ ಕಡತಕ್ಕ ತಗೊ :
ತೇವಿ ಪ್ರಾಣಾ
ತುಣಕಮಾಡಿ ಹೆಣಾ
ಹತ್ತಾಕಿಲೊ ಕೂನಾ

ದೂರದಿಂದ ನೀವು ನಗತೀರರೋ
ನೋಡಿ ನಮ್ಮನಾ
ಪಾರಾಗಿ ಹೋಗರೋ
ನೀವು ಈ ಕ್ಷಣಾ
ಒದ್ದ ಕೆಡುವತೇವ ನಿಮ್ಮನಾ
ಮಾಡತೇವಿ ಅಪಮಾನಾ

ಕಲ್ಲಹೊತ್ತ ಕಚ್ಚತೀರೋ
ಹುಲ್ಲಕಡ್ಡಿಯನಾ
ಅಂದರ ಬಿಡತೇವಿ ನಿಮಗ
ಜೀವದಾನಾ
ಇಲ್ಲದಿದ್ರ ಹೆಣಾ ಹತ್ತಾ ಕಿಲ್ಲೋ ಕೂನಾ

ಪೋಲೀಸರು

ಚೆನ್ನಪ್ಪಣಾ ಹಿಡದೇವಿ ನಿಮ್ಮ ಚರಣಾ
ಧರಮ ಸರಿ ಬಿಡರಪ್ಪಾ ನಮ್ಮನ್ನಾ
ಮಕ್ಕಳಂತ ತಿಳಿರೆಪ್ಪಾ ನೀವಿನ್ನಾ

ಕಲ್ಲ ಹೊತ್ತು ಕಚ್ಚತೇವ್ರಿ ಹುಲ್ಲಕಡ್ಡಿಯನಾ
ಹತಿಯಾರ ಒಗದು ಮಾಡತೇವ್ರಿ ಮುಜರಿಯನಾ
ನಮ್ಮ ಮ್ಯಾಲೆ ಮಾಡರಿ ಅಂತಃಕರುಣಾ

ಹಡದ ಹೆಸರ ಇಡತೇವಿ ನಿಮ್ಮನ್ನಾ
ಹಚ್ಚು ದೀಪಾ ನಿಮ್ಮದಂತ ತಿಳಿಯರಿನ್ನಾ
ಹೆಂಗಸರು ಸರಿಮಾಡಿ ಬಿಡರೋ ನಮ್ಮನ್ನಾ

* * *