ದೃಶ್ಯ 4

ತನ್ನಣ್ಣ ಚೆನ್ನಣ್ಣ ತ್ವಾನಗಟ್ಟಿಗೆ ಬಂದಿದ್ದುದನ್ನೂ ಹಳಬರ ಸಂಗಡ ಕದನವಾಡಿ ಊರನ್ನು ಪ್ರವೇಶಿಸಿದೆ ಹೊರಟಿರುವುದನ್ನೂ ಪರಮ್ಮನ ಮುಖಾಂತರ ಕೇಳಿಕೊಂಡಳು ಚಿನ್ನವ್ವ. ಹಿಂದಿರುಗಿ ಹೋಗುತ್ತಿದ್ದ ಅಣ್ಣನಲ್ಲಿಗೆ ಅವಳು ಕಾತರದಿಂದ ಬಂದು ಮನೆಗೆ ಬರುವಂತೆ, ತನ್ನನ್ನು ಕರೆದುಕೊಂಡು ಹೋಗುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಚೆನ್ನ, ತನಗೂ ಹಳಬರಿಗೂ ನಡೆದ ಕದನವನ್ನು ವಿವರಿಸಿ ತಾನು ಹಾಕಿರುವ ಪಂಥ ಹೇಳುತ್ತಾನೆ. ಮಾನ ಹೋದ ಮೆಲೆ ಏನು ಪ್ರಯೋಜನವೆಂದು ತಾನು ನಾಡಮೇಲೆ ತಳ್ಳಿಗೆ ಹೋಗುವುದಾಗಿ ಹೇಳುತ್ತಾನೆ.

ತಂಗಿ ಈ ಹಟಬಿಡುವಂತೆ ನಾನಾ ಪರಿಯಾಗಿ ಕೇಳಿಕೊಂಡಳು. ಇಂಥ ಪಂಥ ಹಾಕಿದರೆ ಸರಕಾರ ಬಿಡುವುದಿಲ್ಲ. ನಿನ್ನ ಜೀವಕ್ಕೆ ಇದು ಅಪಾಯ ತರುತ್ತದೆ ಎಂಬ ಬುದ್ಧಿವಾದ ಹೇಳುತ್ತಾಳೆ. ನಿನ್ನ ಇಂಥ ನಡತೆ ತಂದೆ ತಾಯಿಗಳಿಗೆ ಆಘಾತವನ್ನೊಡ್ಡಿ, ಅವರು ಪ್ರಾಣ ಬಿಟ್ಟಾರು ಎಂಬ ಹೆದರಿಕೆಯನ್ನೂ ಹಾಕುತ್ತಾಳೆ. ಆದರೆ ಚೆನ್ನನ ರೀತಿಯೇ ಬೇರೆ. ಮಾನ ಹೋದ ಮೇಲೆ ಎಂಥ ಬಾಳುವೆ ಎನ್ನುತ್ತಾನೆ. ಮಾಡಿದವರಿಗೆ ಮಾಡಿ ತೋರಿಸುವುದೇ ಯೋಗ್ಯ ಕ್ರಮ ಎನ್ನುತ್ತಾನೆ. ಹುಟ್ಟುವುದು ಸಾಯುವುದು ಯಾರಿಗೆ ಬಿಟ್ಟಿದೆ ಎಂಬ ಮಾತು ಅವನದು. ಏನೆಂದರೂ ಪಂಥ ಬಿಡಲಾರೆನೆಂದು ದೃಢವಾಗಿ ಹೇಳಿ ಚೆನ್ನ ಹೊರಟು ಹೋದನು.

ಅವನ ಈ ನಡತೆ ತಂಗಿಗೆ ಚಿಂತೆಯನ್ನುಂಟು ಮಾಡಿತು.

ಚಿನ್ನವ್ವ

ಬಾರಪ್ಪಾ ಎಣ್ಣಾ ಹೋಗಬ್ಯಾಡೋ ನೀನಾ
ಬಾರಪ್ಪಾ ಮನಿತಾನಾ
ಕರಿಲಾಕ ಬಂದ ತಿರಗಿ ಹೋಗುವರೇನಾ ॥ ಪ ||

ಕಾಲಬಿದ್ದ ಕರೀತೇನಿ ಮಾಡೊ ಕರುಣಾ
ತಂಗಿಮ್ಯಾಲ ಇಟ್ಟ ಪೂರ್ಣಾ
ದಿಕ್ಕ ಇಲದಾಂಗ ಮಾಡಬ್ಯಾಡೋ ನೀನಾ

ನಿಮ್ಮ ಹಾದಿ ನೋಡತಿದ್ದೆ ಬಾಳ ದಿನಾ
ನೆನಸಿ ನೆನಸಿ ನಾನಾ
ಸೊರಗಿ ಮರಗಿ ಸಾವತೇನಿ ಮಾಡೊ ಕರುಣಾ

ಚೆನ್ನ

ಒಲ್ಲಿನ್ಹೋಗವ್ವಾ ತಂಗಿ ಬರುದಿಲ್ಲಾ
ಮಾನಾ ಉಳಿಯಲಿಲ್ಲಾ
ನಿಮ್ಮ ಊರ ಲೂಟಿ ಮಾಡತೇನಲ್ಲಾ

ಹುಂಬಸೂಳೆ ಮಕ್ಕಳು ಇಂದು ಎನ್ನಮ್ಯಾಲಾ
ಕೈಯ ತೋರಿಸ್ಯಾರಲ್ಲಾ
ಮೀಸಿ ಇಟ್ಟ ಫಲವೇನೋ ಭೂಮಿಮ್ಯಾಲಾ

ನಮ್ಮ ಹೊಟ್ಟಿಯೊಳಗ ಬೆಂಕಿ ಬಿದ್ದೈತೆಲ್ಲಾ
ಶಾಂತವಾಗುವುದಿಲ್ಲಾ
ತಳ್ಳಿ ಮಾಡಾಕ ಹೋಗತೇನಿ ನಾಡಮ್ಯಾಲಾ
ತಂಗಿ ರಿಣಾ ಹರಕೊಳ್ಳ ಬೀಳತೇನಿ ಕಾಲಾ
ಆಸೆ ಉಳಿಯಲಿಲ್ಲಾ
ಮುಂದ ಅಣ್ಣನ ಮಾರಿ ನೀನು ಕಾಣಾಕಿಲ್ಲಾ

ಚಿನ್ನವ್ವ

ಭೂಪ ಅಣ್ಣಯ್ಯ ನಿಮ್ಮ ಕೋಪ ಶಾಂತ ಮಾಡರಿಂದು
ಸಾರಸದ್ಗುಣಶೀಲನೆ ॥ ಪ ||

ಇಂಥಾ ಪಂತ ಮನದಲ್ಲಿ ಹಿಡಿಯಬ್ಯಾಡೊ ನೀನಾ
ಇದರಿಂದ ಆದೀತ ಮುಂದೆ ಕೇಡಾನಾ
ಜನದಾಗ ಆದೀತೋ ನಗ್ಗೇಡನಾ

ಇದು ಕೆಟ್ಟ ಇಂಗ್ರೇಜಿ ಸರಕಾರನಾ
ಸುದ್ದಿ ಕೇಳಿ ಮಾಡ್ಯಾರೊ ನಿಮಗ ಠಾರಾನಾ
ಇಷ್ಟ ತಿಳಿಯಿರಿ ಮುಂದಿನ ಹುನ್ನಾರಾ

ತಾಯಿ ತಂದಿ ಕೇಳಿದರ ಹಾರಿ ಹಲ್ಲಣಾ
ಜಲ್ಲವೊಡದ ಬಿಟ್ಟಾರ ತಮ್ಮ ಪ್ರಾಣನಾ
ಇಂಥಾ ದಗದಾ ಮಾಡಬ್ಯಾಡೋ ಮತಿವಂತನಾ

ಚೆನ್ನ

ತಾಯಿ ತಂಗೆವ್ವಾ ನಿನ್ನ ಮಾತ ನೀತ ರೀತ ಕೇಳಿ
ಶಾಂತವಾದೆ ನಾನಾ ॥ ಪ ||

ಈ ಬದುಕು ಬಾಳೇವ ಯಾರಿಗಿ ಬೇಕ
ಮಾನಾ ಹೋದಿಂದ ಇದ್ದೇನ ಸುಡಬೇಕ
ಮಾಡಿದವರಿಗೆ ಮಾಡಿ ತೋರಿಸಬೇಕ

ನಾವು ಹುಟ್ಟುದು ಸಾವುದು ಒಂದು ದಿನಾ
ಜೀವದಾಸೆ ಇಟ್ಟಿಲ್ಲೊ ನಾವು ಏನೇನಾ
ನಿನ್ನ ಪಾದಸಾಕ್ಷಿ ಕೇಳವ್ವಾ ನೀನಾ

ಹಿಡಿದ ಪಂತ ಬಿಡಾವನಲ್ಲ ನಾನಾ
ಕಟ್ಟಿ ಚೆನ್ನ ಅಂಬುದ ಇದ ಕೂನಾ
ರಾಜೆದ ಮ್ಯಾಲ ಆಗಲಿ ವಾಹೀನಾ

ಚಿನ್ನವ್ವ

ಅಣ್ಣಯ್ಯ ಎನ್ನ ಮಾತು | ಕೇಳದ ಹೋದಾನ
ಶಂಬೋಶಂಕರ ನೀನು | ಕಾಯಬೇಕ ಅವನ್ನಾ

ತಾಯಿ ತಂದಿಗೆ ಸುದ್ದಿ | ಹೇಳಿ ಕಳವಲ್ಯಾ
ಎಂಥಾ ಯಾಳೇವ ಬಂತೊ | ಹ್ಯಾಂಗ ಮಾಡಲಿ ನಾ

ಬೀಗರ ಬಿಜ್ಜರ ಮುಂದೆ ಮಾನಾ | ಹೋಗುದು ಬಂತೊ
ಸರಿಬಾರದವರ ಮುಂದೆ | ಹ್ಯಾಂಗ ತೋರಲಿ ನಾ

* * *

ದೃಶ್ಯ 5

ಚೆನ್ನನ ಪಂಥದ ಅಂಜಿಕೆ ತ್ವಾನಗಟ್ಟಿಯು ಗೌಡನಿಗೆ ಇದ್ದೇ ಇದೆ. ಆದ್ದರಿಂದ ಹಳಬರಲ್ಲಿ ಕೆಲವರನ್ನು ಬೆಳೆಯ ರಕ್ಷಣೆಗೂ ಇನ್ನೂ ಕೆಲವರನ್ನು ಊರ ರಕ್ಷಣೆಗೂ ನಿಯಮಿಸುತ್ತ ಪಂಜು ಹಚ್ಚಿಕೊಂಡು ರಾತ್ರಿಯೆಲ್ಲ ಕಾಯಬೇಕೆಂದೂ ಚೆನ್ನನು ಮೋಸಗಾರನಾದುದರಿಂದ ನಿದ್ರೆಯಿಂದ ಮೈ ಮರೆಯಬಾರದೆಂದೂ ಎಚ್ಚರಿಕೆ ನೀಡುತ್ತಾನೆ. ಚೆನ್ನ ಬಂದು ಗದ್ದಲು ಮಾಡತೊಡಗಿದೊಡನೆಯೇ ಸುಳುಹುಕೊಡಬೇಕೆಂದು ಸೂಚಿಸುತ್ತಾನೆ. ಇಷ್ಟು ವ್ಯವಸ್ಥೆಮಾಡಿ ಗೌಡನಿರ್ಗಮಿಸುತ್ತಾನೆ.

ತಾವು ಕಾವಲಿದ್ದ ಸಮಯದಲ್ಲಿ ಚೆನ್ನ ಬಂದರೆ ಅವನನ್ನು ಬಂದೂಕಿನಿಂದ ಹೊಡೆದು ಉರುಳಿಸುವ ಉಮೇದಿನ ಮಾತನಾಡಿದ ಹಳಬರು ರಾತ್ರಿಯಿಡೀ ಕಾವಲಿದ್ದು ಬೆಳಗಿನ ಹೊತ್ತು ಮಲಗಿಕೊಂಡರು.

ಇದೇ ಸಮಯ ಸಾಧಿಸಿ ಚೆನ್ನನು ಬೆಳೆಗಳನ್ನು ನಾಶಮಾಡಿ ಬಣವೆಗಳಿಗೆ ಬೆಂಕಿಹಚ್ಚಿ ಊರ ದರೋಡೆ ಮಾಡಿದನು. ಹಳಿಬರ ಕತ್ತಿಗಳನ್ನು ಹೊತ್ತೊಯ್ದನು. ತರುವಾಯ ಗೌಡನ ಮನೆಗೆ ಬಂದು ತಾನು ಇದುವರೆಗೆ ಮಾಡಿದ ಕೃತ್ಯಗಳನ್ನು ಹೇಳಿ ಗೌಡನ ಎಲ್ಲ ದಫ್ತರಗಳನ್ನೂ ಕಿತ್ತೊಯ್ದನು. ಒಪ್ಪಿಸಿದ ಕೆಲಸದಲ್ಲಿ ಚ್ಯುತರಾದ ಹಳಬರ ಮೇಲೆ ಗೌಡ ಸಿಟ್ಟಾದನು.

ಹಳಬರು ಎಚ್ಚರಾಗುವ ಹೊತ್ತಿಗೆ ಎಲ್ಲ ಮುಗಿದು ಹೋಗಿತ್ತು. ಈಗ ಗೌಡನಲ್ಲಿಗೆ ಹೋಗಿ ಕ್ಷಮಾಪಣೆ ಕೇಳಿಕೊಳ್ಳೋಣವೆಂದು ಮಾತನಾಡಿಕೊಂಡರು.

ಗೌಡ

ಎಲ್ಲಾ ಹಳಬರ ಬನ್ನಿರೀಗ ಮೈದಾನಕ
ಕತ್ತಿ ಕಠಾರಿ ಹಿಡಕೊಂಡ ಲಡಾಯಿಕ ॥ ಪ ||
ಕಟ್ಟಿ ಚೆನ್ನ ಬರತಾನಂತ ಈವತ್ತ
ಅವನ ಹಿಡಿಯಾಕ ಮಾಡಬೇಕ ಒಂದ ಬೇತಾ
ಬಂದೋಬಸ್ತ ಮಾಡಬೇಕೊ ಊರ ಸುತ್ತಮುತ್ತಾ
ಕೈಯಾಗ ಸಿಕ್ಕರ ಮಾಡುವೆ ಅವಗ ಗಿರಕ
ಓದ ಹಾಕುವೆನೊ ಮಾವಿನ ಕೊಳ್ಳಕ

ಬಾಳ ಜೋಕಿಲಿಂದ ಕಾಯಬೇಕೊ ಊರಾಗನಾ
ಪಂಜ ಹಚ್ಚಿಕೊಂಡ ಇರಬೇಕೊ ಬೆಳತನಾ
ನಿದ್ದಿ ಹತ್ತಿ ಮಲಗಬಾರದೊ ಹುಸ್ಯಾರನಾ
ಬಾಳ ಮೋಸಗಾರ ಕಟ್ಟಿ ಚೆನ್ನಾ ರಾಜೇಕ
ಪಿತೂರಿ ಮಾಡಿಹಾಕಿ ಹೋದಾನ ಪಾಸೇಕ

ಜೋಳದ ನೆಲದ ಕಾಯಾಕ ನಾಲ್ಕೂ ಮಂದಿನಾ
ಅಲ್ಲಿ ಗಟ್ಟುಳ್ಳವರ ಕಳಸಬೇಕೊ ಬ್ಯಾಗನಾ
ಮದ್ದು ತುಂಬಿ ಇಟ್ಟಿರಬೇಕೊ ಬಂದೂಕನಾ
ಗದ್ದಲಾದ ಕ್ಷಣಕ ಕೊಡಬೇಕೋ ಪಾಜಕ
ಹಿಡಿದಕೊಡುವೆ ಅವಗ ಸರಕಾರಕ

ಚೆನ್ನ

ಲೂಟಿ ಮಾಡುವೆ
ತ್ವಾನಗಂಟಿ ಊರಾಗ
ತಯಾರಾಗಿ ಮಧ್ಯರಾತ್ರ್ಯಾಗ

ನಿದ್ದಿ ಹತ್ತಿ ಮಲಗ್ಯಾರೊ
ಎಲ್ಲಾ ಹಳಬರಾ
ಕತ್ತಿ ಕಠಾರಿ ಒಯ್ಯುವೆ
ಎಲ್ಲಾ ಒತ್ತರಾ
ಒಳೆ ಸಮಯ ದೊರಕಿತೊ

ಇಂದಿನ ರಾತ್ರಿನಾ
ಕೈಗೂಡಿತೊ ಎನ್ನಪಂತ ಜಗದಾಗ
ತಯಾರಾಗಿ ಹೋಗುವೆ ಮಧ್ಯ ರಾತ್ರ್ಯಾಗ

ಕಡ್ಡಿಕೊರದ ಹಚ್ಚುವೆ
ಬಣವಿಗೆ ಬೆಂಕಿ ನಾ
ಚಂಡಿಕೋದ ಹೊರುವೆ
ಕಟ್ಟಿ ಮಟ್ಟಿ ನಾ
ತಳ್ಳಿ ಮಾಡುವೆ ಹೊಕ್ಕು
ಊರಾಗ ನಾ
ಮಾಡಿತೋರಿಸುವೆ ಇವರ ಮೂಗ ಕೋದ್ಹಾಂಗ
ತಯಾರಾಗಿ ಹೋಗುವೆ ಮಧ್ಯರಾತ್ರ್ಯಾಗ

ಯಾಂವ ಬಂಟ ಆದೀರೋ
ಈ ಊರಾಗನಾ
ಬಂದು ತಡೆಯಿರೋ
ಕಟ್ಟಿ ಚೆನ್ನನಾ
ದಾಟಿ ಹೋಗುವೆ ಪಾರಾಗಿ
ಈ ಕ್ಷಣಾ
ತಯಾರಾಗಿ ಹೋಗುವೆ ಮಧ್ಯ ರಾತ್ರ್ಯಾಗ

ಹಳಬರು

ಘಾತವಾದಿತೋ ನಮಗ
ಕೇಳಿರೊ ಬ್ಯಾಗ ॥ ಪ ||

ಪುಂಡ ಕಟ್ಟಿಯ ಚೆನ್ನಾ
ಇಂದು ಕಳದಾನೊ ಮಾನಾ
ಲೂಟಿ ಮಡಿ ಹೋದಾ
ಮಾಡುನಿನ್ಹ್ಯಾಂಗ

ಕೈಯಾನ ಕತ್ತಿsನಾ
ಕಸಗೊಂಡ ಹೋದೊ ಜಾಣಾ
ಮನಿಯಾನ ಹೆಂಡತಿ
ಕೊಟ್ಟಾಂಗಾತು ಅವಗ

ಕಿತ್ತಾಂಗ ನಮ್ಮ ಮೀಸಿ
ಮಾಡಿ ಹೋದಾನೊ ಘಾಸಿ
ಏನಂತ ಹೇಳೂಣು
ಸರಕಾರದಾಗ

ನಮ್ಮ ದೊಡ್ಡಿಸ್ತಾನಾ
ಉಳಿಯಲಿಲ್ಲೊ ಏನೇನಾ
ಊರಾಗ ಮಾರಿsನಾ
ತೋರೂದು ಹ್ಯಾಂಗ

ಹಳಬರು

ಮಾಡೂದು ಇನ್ನೇನತಿ ಕೇಳಿರೋಬ್ಯಾಗ ॥ ಪ ||

ಗೌಡರ ಮನಿತನಾಹೋಗವ ಬ್ಯಾಗನಾ
ಆತನ ಪಾದಕ ಬೀಳೋಣು ಈಗ

ಮಾಡಿದ ತಪ್ಪಿಗಿಬೇಡಿಕೊಳ್ಳೋಣೋ ಮಾಫಿ
ಸರಕಾರ ಚಾಕರಿ ಎರವಾತೊ ನಮಗ

ಧಾರವಾಡದೀಶನಆತನ ದಯ ಕರುಣ
ಸಂಪೂರ್ಣ ಇರುವುದು ಎಲ್ಲಾರ ಮ್ಯಾಗ

* * *

ದೃಶ್ಯ 6

ಗೌಡ ಒಪ್ಪಿಸಿದ ಕಾರ್ಯದಲ್ಲಿ ಅಸಫಲರಾದುದರಿಂದ ಸಹಜವಾಗಿ ಹಳಬರಿಗೆ ಅಂಜಿಕೆಯುಂಟಾಗಿದೆ. ಆದುದರಿಂದ ಅಂಜುಂಜುತ್ತಲೇ ಗೌಡನ ಮನೆಗೆ ಬಂದು ಗೌಡನನ್ನು ಭೆಟ್ಟಿಯಾಗುತ್ತಾರೆ. ತಮಗೆ ಎಂಥ ಶಿಕ್ಷೆ ಕಾದಿದೆಯೋ ಎಂದು ಅವರಿಗೆ ಗಾಬರಿಯುಂಟಾಗಿದೆ. ನಡುಗುವ ದನಿಯಿಂದ, ಚೆನ್ನನು ತಮಗೆ ಮೋಸಮಾಡಿದನೆಂದೂ ಊರು, ಬೆಳೆಗಳನ್ನು ಲೂಟಿಮಾಡಿ ತಮ್ಮ ಹತಿಯಾರಗಳನ್ನು ಒಯ್ದಿರುವನೆಂದೂ ಹೇಳಿ ಕ್ಷಮಿಸುವಂತೆ ಬೇಡಿಕೊಳ್ಳುತ್ತಾರೆ.

ಹೋದ ದಫ್ತರು ಸೋತ ಹಳಬರು : ಒಟ್ಟಾರೆ ಗೌಡ ಸಿಟ್ಟಿನಿಂದ ಆಪಮಾನದಿಂದ ಅಂಜಿಕೆಯಿಂದ ಧಗಧಗಿಸುತ್ತಿದ್ದಾನೆ. ಗೌಡನ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿರುವ ವಿಚಾರವೆಂದರೆ : ಚೆನ್ನನು ತನ್ನ ದಫ್ತರಗಳನ್ನು ಕಿತ್ತುಕೊಂಡು ಹೋದದ್ದರಿಂದ ತನ್ನ ಕೆಲಸ ಹೋಗುತ್ತದೆ! ಅವನ ಕಳವಳದಲ್ಲಿ ಆಪಮಾನ, ಅಂಜಿಕೆ ಎರಡೂ ಬೆರೆತುಕೊಂಡಿವೆ.

ತ್ವಾನಗಟ್ಟಿ ಗೌಡನಿಗೆ ಬೇರೆದಾರಿ ಉಳಿಯಲಿಲ್ಲ. ಕಟ್ಟಿ ಚೆನ್ನನು ಮಾಡಿರುವ ಎಲ್ಲ ವಿಧ್ವಂಸಕ ಕಾರ್ಯಗಳನ್ನು ಅವರೂರಿನ (ಸೊಪ್ಪಡ್ಲ) ಗೌಡನಿಗೆ ಪತ್ರದ ಮುಖಾಂತರ ತಿಳಿಸುವುದಾಗಿ ನಿರ್ಧರಿಸಿ ಪತ್ರ ಬರೆಯುತ್ತಾನೆ.

ತಳವಾರನನ್ನು ಕರೆಸಿ ಪತ್ರ ಒಯ್ಯಲು ಹೇಳಿದರೆ ಅವನು ತನ್ನ ಹೆಂಡತಿಗೆ ಅಜಾರಿಯಾಗಿದೆ ಮುಂತಾಗಿ ನೆಪಹೇಳಿ ಆಗುವುದಿಲ್ಲವೆನ್ನುತ್ತಾನೆ. ಕೊನೆಗೆ ಅವನು ಬೇಡಿದಷ್ಟು ಜೋಳ ಕೊಡುವುದಾಗಿ ಗೌಡ ಹೇಳಿ ಮನವೊಲಿಸುತ್ತಾನೆ.

ಹಳಬರು

ರಾಮ ರಾಮ ಮಾಡುವೆ ಗೌಡಾ
ಮಾಡರಿ ದಯ ಕರುಣಾ ॥ ಪ ||

ಕಟ್ಟಿಯಾ ಚೆನ್ನಾಮಾಡಿ ಮೋಸವನಾ
ಓದಾನೊ ಹತಿಯಾರಾ
ಮಾಡರಿ ದಯ ಕರುಣಾ

ನಿನ್ನಿನ ರಾತ್ರಿಕೇಳರಿ ಪಜೂತಿ
ಲೂಟಿಮಾಡಿ ಹೋದಾ
ಮಾಡರಿ ದಯ ಕರುಣಾ

ತ್ವಾನಗಟ್ಟಿ ಮೂಗಕೋದಬಿಟ್ಟಾನ ಈಗ
ಕಳದಾನೊ ನಮ್ಮ ಮಾನಾ
ಮಾಡರಿ ದಯಾ ಕರುಣಾ

ಗೌಡ

ಬ್ಯಾಗ ಬರ್ರ‌್ಯೊ ಹಳಬರೆಲ್ಲಾ
ಬೆಂಕಿ ಬಿದ್ದೈತೋ ನನಗ ॥ ಪ ||

ಗೌಡಕಿ ಕೆಲಸಾ
ಹೋಗೂದು ಬಂತೋ ದಿವಸಾ
ಮಾಡಲಿನ್ಹ್ಯಾಂಗ
ಬೆಂಕಿ ಬಿದ್ದೈತೋ ನನಗ

ಸಪ್ಪಡ್ಲಿ ಗೌಡಗ
ಪತ್ರಾ ಬರೆಯುವೆನೀಗ
ಓದ ಮುಟ್ಟಸರಿ ಅವಗ
ಬೆಂಕಿ ಬಿದ್ದೈತೋ ನನಗ

ಕಟ್ಟಿಯು ಚೆನ್ನಗ
ಹುಡಿಕ್ಯಾಡಿ ಊರಾಗ
ತರಬೇಕೋ ಹತಿಯಾರಾ
ಬೆಂಕಿ ಬಿದ್ದೈತೋ ನನಗ

ತಳವಾರ

ಸಪ್ಪಡ್ಲಿಗೆ ಹೋಗುದುಲ್ಲಾ
ಲಕ್ಕೋಟಿ ಒಯ್ಯುದುಲ್ಲಾ
ಏನ ಮಾಡತಿ ಮಾಡಗೌಡಾ ಸಲಾಮ ಸಲಾಮ

ದುರಗಿಗೆ ಆಗೇತೋ ಜೋರಾ
ಹೋಗುದುಲ್ಲ ಮುಕ್ಕನೀರಾ
ಏನ ಮಾಡತಿ ಮಾಡಗೌಡಾ ಸಲಾಮ ಸಲಾಮ

ಎತ್ತೊಂದ ಸತ್ತೈತಿ
ಬಿಚ್ಚ ಪಾಲಾ ಹಾಕೂದೈತಿ
ನಾ ಹ್ವಾದರ ನನ್ನ ಪಾಲಾ ಮುಳಗತೈತಿ

ಗದಿಗೆಪ್ಪ

ಕೇಳೋ ಗೌಡಾ ಎನ್ನ ವಚನಾ
ಮಾಡತೇನ್ರಿ ನಿಮಗ ಶರಣಾ
ಏನ ಕಾರಣ ಕರಸೀರಿ ನಮ್ಮನ್ನಾ ॥ ಪ ||

ಹಂತಾ ದೌಡ ಐತಿ ಏನಾ
ಹಳಬರ ಕಳಿಸಿ ಮನಿತಾನಾ
ಮಾಡಿದ್ದೇನ ತಪ್ಪನಾನಾ

ಹೊಲದ ಹಪ್ತೆ ಎಲ್ಲಾ ರೂಪಾಯಿನಾ
ತೀರಿಸಿಬಿಟ್ಟೇನಿ ಮನ್ನೆ ನಾನಾ
ಸುಳ್ಳ ಆದರೆ ನೋಡೋ ಪಾವತಿನಾ

ಸೊಪ್ಪಡ್ಲ ಗೌಡ

ಗದಿಗೆಪ್ಪಾ ಕೇಳೋ ನೀನಾ
ನಿಮ್ಮ ತಮ್ಮ ಕಟ್ಟಿ ಚೆನ್ನಾ
ಮಾಡಿದ್ದಾನೊ ಒಂದ ಕದನಾ॥ ಪ ||

ತ್ವಾನಗಟ್ಟಿ ಊರಗೌಡನಾ
ಪತ್ರಬಂದೈತಿ ನೋಡೋ ನೀನಾ
ಕದ್ದ ತಂದಾನ ಅವನ ಕತ್ತೀನಾ

ಬುದ್ದಿಮಾತ ಹೇಳೋ ನೀನಾ
ಕೊಡಿಸಿಬಿಡೋ ಅವರ ಕತ್ತೀನಾ
ಕೊಡದಿದ್ದರಾದೀತೋ ಕಠೀಣಾ

* * *