ಕಟ್ಟಿ ಚೆನ್ನ

ಕಟ್ಟಿ ಚೆನ್ನ ಬೆಳಗಾಂ ಜಿಲ್ಲೆಯ ಸೌದತ್ತಿ ತಾಲ್ಲೂಕಿನ ಸೊಪ್ಪಡ್ಲ ಗ್ರಾಮದ ವೀರಪುರುಷ. (ಕಟ್ಟಿ ಎಂಬುದು ಅವನ ಮನೆಯ ಹೆಸರು) ಅವನ ವಂಶಜರು ಇನ್ನೂ ಈ ಗ್ರಾಮದಲ್ಲಿದ್ದಾರೆ. 19ನೇ ಶತಮಾನದ ಉತ್ತರಾರ್ಧದಲ್ಲಿ ಚೆನ್ನ ತನ್ನ ಸಾಹಸಗುಣಗಳಿಂದಾಗಿ ಸುಪ್ರಸಿದ್ಧನಾಗಿದ್ದ. ಅವನ ಸಾಹಸ : ಶೌರ್ಯಗಳು ಈ ಸಣ್ಣಾಟದ ವಸ್ತು.

ಚೆನ್ನನ ತಂಗಿಯನ್ನು ತ್ವಾಣಗಟ್ಟಿಗೆ (ತೋರಣಗಟ್ಟಿ) ಕೊಟ್ಟಿತ್ತು. ಚೆನ್ನ ಎತ್ತು ಹತ್ತಿಕೊಂಡು ತಂಗಿ ಕರೆಯಲು ತ್ವಾನಗಟ್ಟಿಗೆ ಹೋದ. ಆ ಊರಿನ ನಿಯಮದ ಪ್ರಕಾರ ಎತ್ತಿನಿಂದ ಇಳಿದು ಅಗಸಿಯನ್ನುಪ್ರವೇಶಿಸಬೇಕಿತ್ತು. ಚೆನ್ನ ಎತ್ತು ಹತ್ತಕೊಂಡೇ ಊರೊಳಗೆ ಬಂದ. ಊರ ಗೌಡ ಇದನ್ನು ಪ್ರತಿಭಟಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಯಿತು. ಆವೇಶದ ಭರದಲ್ಲಿ ಚೆನ್ನನು ತ್ವಾನಗಟ್ಟಿ ಊರನ್ನು ದರೋಡೆಮಾಡುವುದಾಗಿ ಪ್ರತಿಜ್ಞೆಮಾಡಿದ. ತನ್ನ ಪ್ರತಿಜ್ಞೆಯನ್ನು ಪೂರೈಸಿಯೂ ಬಿಟ್ಟ. ದರೋಡೆಯ ಸಂದರ್ಭದಲ್ಲಿ ಹಳಬರ ಅಯುಧಗಳನ್ನು ಗೌಡನಲ್ಲಿದ್ದ ದಫ್ತರಗಳನ್ನು ಎತ್ತಿಕೊಂಡುಹೋದ. ಸೊಪ್ಪಡ್ಲದ ಗೌಡನಿಗೆ ತ್ವಾಣಗಟ್ಟಿಗೌಡ ಫಿರ್ಯಾದಿ ಸಲ್ಲಿಸಿದ. ಸೊಪ್ಪಡ್ಲದಗೌಡ ಚೆನ್ನನ ಅಣ್ಣ ಗದಿಗೆಪ್ಪನನ್ನು ಕರೆಸಿ ತಮ್ಮನಿಗೆ ಬುದ್ಧಿಹೇಳಲು ಒತ್ತಾಯಿಸಿದ. ಚೆನ್ನ ಅಣ್ಣನ ಹಿತೋಪದೇಶ ಲೆಕ್ಕಿಸದೆ ಊರಗೌಡನನ್ನು ಹೀಯಾಳಿಸಿಬೈದು ಊರುಬಿಟ್ಟು ಸೊಗಲದ ಗುಡ್ಡಸೇರಿದನು. ತನ್ನ ಗೆಳೆಯರಾದ ಸಿದ್ಧ ಹುಸೇನಿಯರೊಂದಿಗೆ ಸುತ್ತಲಿನ ಹಳ್ಳಿಗಳಲ್ಲಿ ದರೋಡೆ ಮಾಡುತ್ತ ಆರಾಮಾಗಿ ಉಳಿದ. ಸೊಪ್ಪಡ್ಲಗೌಡನ ಸೂಚನೆಯ ಮೇರೆಗೆ ಬೆಟಗೇರಿಯ ಪೋಲೀಸರು ಚೆನ್ನನನ್ನು ಬಂಧಿಸಲು ಹೋಗಿ ಸೋತು ಓಡಿಬಂದರು.

ಪೋಲೀಸ್ ಅಧಿಕಾರಿ ಮತ್ತು ಸೊಪ್ಪಡ್ಲಗೌಡ ಇಬ್ಬರೂ ಕೂಡಿ ಚೆನ್ನನನ್ನು ಹಿಡಿಯಲು ಕಾರ್ಯತಂತ್ರರೂಪಿಸಿದರು. ಜೂಲಗಟ್ಟಿ ನಿಂಗವ್ವನಿಗೆ ಆಸೆ : ಆಮಿಷ ತೋರಿಸಿ ಉಪಾಯದಿಂದ ಅವಳ ಮನೆಯಲ್ಲಿ ಚೆನ್ನನನ್ನು ಬಂಧಿಸಿದರು. ಬಂಧಿತ ಚೆನ್ನನನ್ನು ಬೆಳಗಾಂವಿಗೆ ಕರೆದೊಯ್ಯುವಾಗ ನಡುವೆ ಗಚ್ಚಿನ ಕುರುಬಗಟ್ಟಿಯ ಚಾವಡಿಯಲ್ಲಿ ವಸ್ತಿ ಮಾಡಿದರು. ಚೆನ್ನ ಪೋಲೀಸರಿಗೆ ಬಹಳಷ್ಟು ಸೆರೆಕುಡಿಸಿ ಮೋಸಮಾಡಿ ತಪ್ಪಿಸಿಕೊಂಡು ಪಾರಾದನು. ಪೋಲೀಸರಿಗೆ ದಿಕ್ಕು ತೋಚದಾಯಿತು. ಚೆನ್ನನನ್ನು ಹಿಡಿದುಕೊಟ್ಟವರಿಗೆ ಏಳುಹಳ್ಳಿ ಇನಾಮು ಕೊಡುವುದಾಗಿ ಸಾರಿದರು. ಶಿವಾಪುರದ ಗೌಡನು ಚೆನ್ನನನ್ನು ಹಿಡಿದುಕೊಡುವುದಾಗಿ ವೀಳ್ಯ ಹಿಡಿದನು. ಇದನ್ನು ತಿಳಿದು ಚೆನ್ನನು ಶಿವಾಪುರಗೌಡನಿಗೆ ಬುದ್ಧಿಕಲಿಸಲು ಊರ ಹೊರಗಿನ ಕೆರೆಯದಂಡೆಯಮೇಲೆ ಗೌಡನ ಸೊಸೆಯನ್ನು ಅಡ್ಡಗಟ್ಟಿ ಅಪಮಾನಿಸಿದನು. ಚೆನ್ನ ತನ್ನ ಗೆಳೆಯರೊಂದಿಗೆ ಮ್ಯಾದಾರ ಶಿವಪ್ಪನ ಮನೆಯಲ್ಲಿದ್ದಾಗ ಪೋಲೀಸರು ಆ ಮನೆಯ ಮೆಲೆ ದಾಳಿಮಾಡಿದರು. ಚೆನ್ನನ ಗೆಳೆಯ ಸಿದ್ದು ತಾನೇ ಚೆನ್ನನೆಂದು ಹೇಳಿ ಬಂಧನಕ್ಕೊಳಗಾದನು. ಅವನನನ್ನು ಗಲ್ಲಿಗೇರಿಸಲಾಯಿತು. ಚೆನ್ನ ಬೈರಾಗಿಯಾಗಿ ಗುಡ್ಡಸೇರಿದ.

1900ರ ಸುಮಾರಿಗೆ ರಚನೆಗೊಂಡಿಬಹುದಾದ ಈ ಕಟ್ಟಿ ಚೆನ್ನ ಸಣ್ಣಾಟದ ಕರ್ತೃ ಯಾರೆಂಬುದು ಸ್ಪಷ್ಟವಿಲ್ಲ. ಈ ಆಟವನ್ನು ಧಾರವಾಡ ಹಾವೇರಿ ಪೇಟೆಯವರು ಎಂದಿನಿಂದಲೂ ಆಡುತ್ತ ಬಂದಿದ್ದಾರೆ*.

 

ಗಣಸ್ತುತಿ

ಬಾ ಗಜವದನಾಬಾ ಗಜವದನಾ
ಬಾ ಗಜವದನಾಇಡೊ ಕರುಣಾ

ಮೂಸಕಧೀರಾವಾಸುಕಿ ಹಾರಾ
ಪಾಶಾಂಕುಶಧರಾಈಶ ಗಣೇಸೊರಾ

ದುರಿತ ಸಂವಾರನಾಸುರನುತ ಚರಣಾ
ವರಗುಣಭರಣಾತರಳರೊಳನುದಿನಾ

ನುತಜನಪಾಲಾಯತಿಜನಲೋಲಾ
ನೀಲಕಂಠ ಬಾಲಾಸದ್ಗುಣ ಶೀಲಾ

ದೃಶ್ಯ 1

ಸೊಡ್ಲಪ್ಪ : ಕಟ್ಟಿ ಚೆನ್ನನ ಅಣ್ಣ ಗದಿಗೆಪ್ಪ ಒಬ್ಬನೇ ರಂಗವನ್ನು ಪ್ರವೇಶಿಸುತ್ತಾನೆ. ಈಗ ಅವನ ಮನೋ ಬಯಕೆಯೆಂದರೆ ನಾಗರ ಪಂಚಮಿ ಹಬ್ಬಕ್ಕೆ ತ್ವಾನಗಟ್ಟಿಗೆ ಕೊಟ್ಟಿರುವ ತಂಗಿ ಚಿನ್ನವ್ವನನ್ನು ಕರೆಯಿಸಬೇಕೆಂಬುದು. ಹೊಲದಲ್ಲಿ ತನಗೆ ಬಿಡುವಿಲ್ಲದಷ್ಟು ಕೆಲಸ. ಕಾರಣ ತಮ್ಮನನ್ನು ಕರೆದು ಹಂಡಹೋರಿಯನ್ನು ಹೊಡೆದುಕೊಂಡು ಹೋಗಿ ತಂಗಿಯನ್ನು ಕರೆತರಲು ಹೇಳುತ್ತಾನೆ.

ಬೀಗರ ಮನೆಗೆ : ಅದೂ ತಂಗಿಯನ್ನು ಕರೆಯಲು : ಹೋಗುವುದೆಂದಾಗ ಚೆನ್ನನಿಗೆ ತುಂಬ ಸಂತೋಷದ ಭಾವ ಅವನ ಮುಖದಲ್ಲಿ ಸ್ಪಷ್ಟವಾಗಿ ಬಿಂಬಿತವಾಗುತ್ತಿದೆ. ತ್ವಾನಗಟ್ಟಿಗೆ ಹೋಗಿ ತಂಗಿಯನ್ನು ಕರೆತರಲು ಚೆನ್ನ ಒಮ್ಮೆಲೇ ಒಪ್ಪಿಕೊಳ್ಳುತ್ತಾನೆ; ಆದರೆ ಅಣ್ಣನೊಂದಿಗೆ ಅವನವೇ ಆದ ಕೆಲವು ಕರಾರುಗಳಿವೆ; ಬೀಗರಮನೆಗೆ ಹೋಗುವ ತಾನು ಸರಳ ವೇಷ ಭೂಷಣಗಳನ್ನು ಧರಿಸಿ ಹೋಗಲಾರ. ಇದರಿಂದ ಬೀಗರೆದುರಿಗೆ ತಮ್ಮ ಮಾನವೇನು? ಗೆಳೆಯರ ಗುಂಪಿನಲ್ಲಿ ಸದಾ ಕಾಮನಂತೆ ಶೋಭಿಸುವವ ತಾನು. ಆದ್ದರಿಂದ ಧರಿಸಲು ಗೋಪಿಚಂದ್ರಹಾರ, ಉಡಲು ಕರವತಕಾಟಿ ದೋತರ, ಸುತ್ತಲು ಮದರಿ ರುಮಾಲು, ಹೆಗಲ ಮೇಲೆ ಜರದ ಸೆಲ್ಲೆ ತನಗೆ ಬೇಕೆನ್ನುತ್ತಾನೆ ಚೆನ್ನ. ಇಷ್ಟೆಲ್ಲ ಸುಂದರ ವಸ್ತ್ರಾಭರಣಗಳನ್ನು ಕೊಟ್ಟರೆ ಮಾತ್ರ ತಾನು ಬೀಗರ ಮನೆಗೆ ಹೋಗುವುದಾಗಿ ಪ್ರೀತಿಯ ಕರಾರು ಹಾಕಿ ಅಣ್ಣನಲ್ಲಿ ಸಲುಗೆಯನ್ನು ತೋರುತ್ತಾನೆ. ಗದಿಗೆಪ್ಪ ನಗು ನಗುತ್ತ ಅವನ ಬಯಕೆಗಳನ್ನು ಈಡೇರಿಸುವುದಾಗಿ ಹೇಳುತ್ತಾನೆ.

ಗದಿಗೆಪ್ಪ

ಎನ್ನ ಬುದ್ದುಳ್ಳ ತಮ್ಮಯ್ಯತಿದ್ದಿ ಹೇಳುವೆ ನಿನಗ
ಸಂದೇಶ ಲಾಲಿಸೊ ಎನ್ನ ಮಾತಾ ॥

ನಾಗರ ಪಂಚಮಿಗೆತಂಗಿನ ಕರಿಲಾಕ
ಹೋಗಿ ಬಾರಪ್ಪಾ ನೀನು ಬ್ಯಾಗನಾ

ಹಂಡಹೋರಿ ಹಿಡಿಕೊಂಡಪುಂಡನಾಗಿ ಹತ್ತಿಕೊಂಡ
ಹೋಗಿ ಬಾರಪ್ಪಾ ನೀನು ಬ್ಯಾಗನಾ
ಚೆನ್ನ

ಎನ್ನ ಮತಿವಂತ ಅಣ್ಣಯ್ಯಹಿತದಿಂದ ಕೇಳೋ ನೀನಾ
ಪ್ರೀತಿಲಿಂದಲಿ ಕೊಡೊ ಅಪ್ಪಣಿನಾ ॥

ಬೀಗsರ ಮನಿತನಾಹೋಗಾಂವ ಆಗಿ ಟೀಕಾ
ಗೋಪಚಂದರ ಹಾರಾ ಕೊಡೊ ನೀನಾ

ನಾಕಮಂದಿ ಗೆಳಿಯಾರೊಳಗಇರುವಾಂವ ಕಾಮನ್ಹಾಂಗ
ದೋತರ ಕರವತಕಾಟಿ ಉಡಾವನಾ

ಮದರಿ ರುಮಾಲಸುತ್ತಿ ಜರದ ಸಲ್ಲೇವ ಹೊತ್ತು
ಇಷ್ಟು ಎಲ್ಲಾ ಕೊಟ್ಟರ ಹೋಗುವೆ ನಾ

 * * *

ದೃಶ್ಯ 2

ತ್ವಾನಗಟ್ಟಿಯಲ್ಲಿ ತಂಗಿ ಚಿನ್ನವ್ವ ತವರಿಗೆ ಹೋಗಬೇಕೆಂಬ ಆಶೆಯನ್ನು ಹೊತ್ತು ಕುಳಿತುಕೊಂಡಿದ್ದಾಳೆ. ಅಣ್ಣನು ಇದುವರೆಗೆ ಕರೆಯಲು ಬಂದಿಲ್ಲವೆಂಬ ಚಿಂತೆ ಆವರಿಸಿದೆ. ಓರಗೆಯವರೆಲ್ಲ ಈಗಾಗಲೇ ತವರು ಮನೆಗೆ ಹೋಗಿರುವುದು ಅವಳ ದುಗುಡವನ್ನು ಇನ್ನಷ್ಟು ಹೆಚ್ಚಿಸಿದೆ.

ಪರಮ್ಮ (ನೆರೆ ಮನೆಯ ಮುದುಕಿ) ಚಿನ್ನವ್ವನಿಗೆ ಸಮಾಧಾನ ಹೇಳುತ್ತ ಅಣ್ಣನ ದಾರಿಯನ್ನು ಇನ್ನೆರಡು ದಿನ ಕಾಯಬೇಕು. ಅನ್ನುತ್ತಾಳೆ. ಚಿನ್ನವ್ವನ ತವರಿನ ಬಂಧು : ಬಳಗದ ಪರಿಚಯವಿರುವ ಪರಮ್ಮನಿಗೆ ತನ್ನ ತಂಗಿ ಚಿನ್ನವ್ವನನ್ನು ಚೆನ್ನ ಎಷ್ಟೊಂದು ಪ್ರೀತಿಸುತ್ತಾನೆ ಎಂಬ ಅಂಶ ಚೆನ್ನಾಗಿ ಗೊತ್ತಿದೆ. ಆದ್ದರಿಂದಲೇ ಚೆನ್ನ ಬಿಡಲಾರ, ಕರೆಯಲು ಬಂದೇ ಬರುತ್ತಾನೆ ಎಂಬ ಭರವಸೆಯನ್ನು ತುಂಬುತ್ತಾಳೆ. ಇದೀಗ ಹಲ್ಲಿಯೂ ನುಡಿದು ಆ ಭರವಸೆಯನ್ನು ಕೊಟ್ಟಿರುವುದಾಗಿ ಹೇಳುತ್ತಾಳೆ.

ವಯಸ್ಸಿನಲ್ಲಿ ಹಿರಿಯವಳಾದ ಪರಮ್ಮ ಚಿನ್ನವ್ವನಿಗೆ ಹೆಣ್ಣುಮಕ್ಕಳು ಅನುಸರಿಸಬೇಕಾದ ನೀತಿಯನ್ನು ವಿವರಿಸುತ್ತಾಳೆ; ತಮ್ಮ ಅದೃಷ್ಟದಲ್ಲಿ ಏನಿದೆಯೋ ಅದನ್ನೇ ಹೆಣ್ಣುಮಕ್ಕಳು ಸ್ವೀಕರಿಸಿ ನಡೆದುಕೊಳ್ಳಬೇಕು. ಅತ್ತೆಮಾವರ ಸೇವೆಮಾಡಬೇಕು. ಇರುವುದನ್ನು ಉಂಡು, ಕೊಟ್ಟದ್ದನ್ನು ತೊಟ್ಟು ಸಹನೆಯಿಂದಿರಬೇಕು. ನೆರೆಹೊರೆಯವರ ಸಂಗಡ ಸಹನೆಯಿಂದ ವರ್ತಿಸಬೇಕು.

ತರುವಾಯ ಇಬ್ಬರೂ ಕೂಡಿ ಹಾಡುತ್ತ ಬೀಸುತ್ತಾರೆ.

ಚಿನ್ನವ್ವ

ತಾಯಿ ಕೇಳ ಹೇಳುವೆ ಮಾತೊಂದಮನಸ್ಸಿನೆಂದ
ಕುಸಿಲಿಂದ ಕುಸಿಲಿಂದ ॥॥

ನಾಗರಪಂಚಮಿ
ನಾಡಿಗೆ ಬಹು ಪ್ರೇಮಿ
ನಾರ‌್ಯಾರ ಹಬ್ಬಾ ಒಳೆಚಂದಾ
ಆಗುದು ಆನಂದಾ

ವಾರಿಗಿ ಗೆಳೆತ್ಯಾರೆಲ್ಲಾ
ತವರೂರಿಗೆ ಹೋದಾರಲ್ಲಾ
ಅಣ್ಣನು ಬರತಾನ ಕರಿಲಾಕ ಕುಸಿಲಿಂದ
ಕುಂತೇನ ಚಿಂತಿಲಿಂದ

ಮೂರೆತ್ರ ಗುಳ್ಳವಾ
ಮುಗದ ಹೋದೀತವ್ವಾ
ಧಾರವಾಡದೀಶನ ದಯದಿಂದ ಕುಸಿಲಿಂದ
ಕುಂತೇನ ಚಿಂತಿಲಿಂದ

ಪರಮ್ಮ

ತಂಗಿ ಚಿನ್ನವ್ವಾ ಚಿಂತಿಯು ಮಾಡಬ್ಯಾಡಇನ್ನೆರಡ ದಿನಾ ನೋಡಾ
ಬಾಳೇವ ಮಾಡದೈರ್ಯವ ಬಿಡಬ್ಯಾಡ ॥
ಕರಿಲಾಕ ನಿಮ್ಮಣ್ಣಾ
ಬರತಾನ ಕಟ್ಟಿಚೆನ್ನಾ
ನನ್ನ ಮಾತ ಖರೆವ ತಿಳಿನೋಡ
ಸುಳ್ಳ ಅಂತ ತಿಳಿಬ್ಯಾಡ   ॥ಮಾಡ॥

ಇದ ಈ ಮ್ಯೂಲಾಗ
ಗವಳಿ ನುಡದಿತ ಈಗ
ಸುಭಕರನಾದೀತ ಮುಂದ ನೋಡ
ಸುಳ್ಳ ಅಂತ ತಿಳಿಬ್ಯಾಡ    ॥ಮಾಡ॥
ಪರಮ್ಮ

ಬಂದದ್ದು ಉಣಬೇಕ ಬಾಳೆವಂತರ ಮಾತಿದು ಕೇಳಬೇಕ ॥p ಪ ||

ಅತ್ತಿಮಾವರ ನಿನಗ ದೇವರು ಇದ್ದಾಂಗ
ಪತಿವರತಿ ನಾರಿಯರ ನಡತಿ ಹಿಂಗ ಇರಬೇಕ

ಇದ್ದುದು ಉಣಬೇಕು ಕೊಟ್ಟದ್ದು ತೊಡಬೇಕ
ದೊಡ್ಡವರ ಮುನಿಮಗಳ ದೊಡ್ಡಿಸ್ತಾನ ಬೇಕವ್ವಾ ನಿನಗಿನ್ನಾ

ತಂಗಿ ಬ್ಯಾಡವ್ವಾ ಕದನಾ ಹೋದೀತ ನಮ್ಮ ಮಾನಾ
ಹೌದ್ಹೌದ ಅನ್ನಿಸಿಕೊಳ್ಳ ನೀನಾ ಕೀರ್ತಿಬರುವುದ ಜಗದಾಗ
ಚಿನ್ನವ್ವ

ಜಾತರಿಗೆ ಹೋಗವಗಜರದ ರುಮಾಲಬೇಕ
ಮ್ಯಾಲ ಸುವರ್ಣದ ಕೊಡಿಬೇಕ ಬೀ ಬೀ ಇಂಗ್ರೇಜಿ ಸರಕಾರನಾ
ಅಣ್ಣ ನಿನ್ನ ಜಲುಪಿಗಿ ರವಿರತನ ಬಹು ಜತನ

ಮ್ಯಾಲೆ ನಿ ಸುವರ್ಣದ ಕೊಡಿಬೇಕ ಚೆನ್ನಣಗ

ಎಡಕೊಂದ ನಾರಿ ಇರಬೇಕ
ಬೀ ಬೀ ಇಂಗ್ರೇಜಿ ಸರಕಾರನಾಅಣ್ಣಾ ನಿನ್ನ
ಜುಲುಪಿಗಿ ರವಿರತನಜಹುಜತನ

ಗರಡಿಯ ಮನಿಗೆ ಗಂಭೀರ ಹೋಗ್ಯಾನ
ಗಂಧದ ಲೋಡ ತಿರವ್ಯಾನ
ಬೀಬೀ ಇಂಗ್ರೇಜಿ ಸರಕಾರನಾಅಣ್ಣ ನಿನ್ನ
ಜುಲಪಿಗೆ ರವಿರತನಬಹುಜತನ

ಗಂಧದ ನೀ ಲೋಡ ತಿರಿವ್ಯಾನ ಚೆನ್ನಣಗ
ಗಂಭೀರಗ ಮಗಳ ಕೊಡಬೇಕ
ಬೀಬೀ ಇಂಗ್ರೇಜಿ ಸರಕಾರನಾಅಣ್ಣಾ ನಿನ್ನ
ಲಪಿಗಿ ರವಿರತನಬಹುಜತನ

 

ದೃಶ್ಯ 3

ಅಣ್ಣನ ಅಪ್ಪಣೆ ಹೊತ್ತು ಹಂಡಹೋರಿಯ ಮೇಲೆ ಕುಳಿತುಕೊಂಡು ಚೆನ್ನಪ್ಪ ತ್ವಾನಗಟ್ಟಿಗೆ ಬಂದ. ಯಾರೂ ಎತ್ತು ಹತ್ತಿ ಅಗಸಿಯನ್ನು ಪ್ರವೇಶಿಸುವಂತಿಲ್ಲವೆಂಬುದು ಈ ಊರ ಗೌಡನ ನಿಯಮ. ಆದರೆ ಯಾರ ದರಕಾರವೂ ಇಲ್ಲದೆ ಎತ್ತು ಹತ್ತಿಯೇ ಅಗಸಿಯ ಕಡೆಗೆ ಚೆನ್ನ ಬರುತ್ತಿರುವುದನ್ನು ಹೊಲಕ್ಕೆ ಹೊರಟ ಗೌಡ ಕಂಡು, ಕೋಪದಿಂದ ತಡೆದು, ಅಗಸಿಯ ಬಾಗಿಲಿಗೆ ಬಿಗಿಯುವಂತೆ ಹಳಬರಿಗೆ ಹೇಳುತ್ತಾನೆ. ಸಂಗೊಳ್ಳಿರಾಯಣ್ಣನನ್ನೇ ಹಾಯಗೊಟ್ಟಿಲ್ಲ. ಇವನದೇನು?

ಹಳಬರು ಬಂದು ಚೆನ್ನನನ್ನು ತಡೆದರು. ಯಾವ ಪರವೆಯೂ ಇಲ್ಲದೆ ಎತ್ತು ಹತ್ತಿ ಬರುತ್ತಿರುವ ನಿನಗೆ ಸೊಕ್ಕೆಷ್ಟು? ಎನ್ನುತ್ತಾರೆ. ಹಳಬರು. ನಿನ್ನನ್ನು ಹೊಡೆದು ಕೆಳಗೆ ಕೆಡಹುತ್ತೇವೆ. ಗಂಡಸಾಗಿದ್ದರೆ ಯುದ್ಧಮಾಡಿ ನಿನ್ನ ಪೌರುಷ ತೋರಿಸು, ಹೆಂಗಸಾದರೆ ಶರಣು ಮಾಡಿ ಹಿಂದಿರುಗು ಎಂದು ಚುಚ್ಚು ಮಾತು ಎಸೆಯುತ್ತಾರೆ. ಯಾಕೆ ಚೀರುತ್ತೀರಿ ನಿಮ್ಮನ್ನೆಲ್ಲ ಗುದ್ದಿ ಹಲ್ಲು ಮುರಿಯುತ್ತೇನೆ ಸಹಿಸಿಕೊಳ್ಳಿರಿ ಎಂಬುದು ಚೆನ್ನನ ಮಾರುತ್ತರ. ಹಳಬರು ಚೆನ್ನನನ್ನು ಹೇಡಿಯೆಂದು ಕರೆದಾಗಲಂತೂ ಅವನ ಕೋಪ ಭುಗಿಲ್ಲೆಂದಿತು.

ಚೆನ್ನ ಎತ್ತಿನಿಂದ ಕೆಳಗೆ ಇಳಿಯಲೇ ಇಲ್ಲ; ಅಷ್ಟೇ ಅಲ್ಲ, ತ್ವಾನಗಟ್ಟಿ ಊರಿನ ಬೆಳೆಗಳನ್ನು ಲೂಟಿಮಾಡುತ್ತೇನೆ ರಕ್ಷಿಸಿಕೊಳ್ಳಿರಿಯೆಂದು ಅವರಿಗೆ ಸವಾಲು ಹಾಕಿ ಹಿಂದಿರುಗುತ್ತಾನೆ.

ಈ ಸುದ್ದಿಯು ಹಳಬನ ಮುಖಾಂತರ ಗೌಡನಿಗೆ ಮುಟ್ಟಿತು.

ತ್ವಾನಗಟ್ಟಿ ಗೌ

ರಾಮ್ಯಾ ಹನುಮ್ಯಾ ಬರ‌್ಯೋ ನೀವು ಲಗುಬ್ಯಾಗ
ತಯ್ಯರಾಗರೋ ಈಗ
ಬಂಟಸ್ತಾನಾ ತೋರಿಸಬೇಕೋ ನಮಗೀಗ ॥ ಪ ||

ಗಂಡಮೆಟ್ಟ ಜಾಗಾ ಇದು ತ್ವಾನಗಟ್ಟ್ಯಾಗ
ಹಾಯಗೊಟ್ಟಿಲ್ಲೊ ರಾಯಾಗ
ಎತ್ತ ಹತ್ತಿ ಯಾವನೊ ಬರತಾನ ಅಗಸ್ಯಾಗ ॥ ಪ ||

ಧೈರ್ಯ ಇರಬೇಕೋ ತಮ್ಮ ಮನದಾಗ
ಹೋಗಿ ತರಬುನು ಅವನ
ಹುಲಿಕಯ್ಯಗ ನರಿಸಿಕ್ಕ ಹೋದೀತ ಹ್ಯಾಂಗ  ॥ ಪ ||

ಹಳಬರು

ಯಾರೋ ನೀನು ಎಷ್ಟು ಸೊಕ್ಕ ಮಾತನಾಡನೋ
ದರಕಾರಿಲ್ಲದ ಎತ್ತಹತ್ತಿ ಒಳಗ ಬಂದ್ಯೆಲ್ಲೊ॥ ಪ ||

ಗಂಡಸಾದರ ಬಂಟಸ್ತಾನಾ ಬ್ಯಾಗ ತೋರಲೋ
ಒದ್ದ ನಿನ್ನ ಕೆಡವತೇವಿ ನೆಲಕ್ಕ ಬೀಳಲೋ

ಪುಂಡನಾದರ ಯುದ್ಧಮಾಡಿ ಗೆದ್ದ ಹೋಗಲೋ
ಹೆಂಗಸಾದರ ಸೆರಣಮಾಡಿ ತಿರಗಿ ಹೋಗಲೋ

ಚೆನ್ನ

ಹೆಂಗಸುರಾಂಗ ಚೀರಬ್ಯಾಡ್ರಿ ಸ್ವಲ್ಪ ನಿಲ್ಲರೋ
ಪುಂಡ ಕಟ್ಟಿ ಚೆನ್ನನ ಒಂದು ಕೂದ್ಲಾ ಕೀಳರೋ ॥ ಪ ||

ಗುದ್ದಿ ನಿಮ್ಮ ಹಲ್ಲು ಮುರಿದೇನಿ ಪೆಟ್ಟ ತಾಳಿರೋ
ಹೆಣತಿ ಕೊಳ್ಳಾನ ತಾಳಿ ಹರಿದು ಯುದ್ಧ ಮಾಡರೋ

ತಾಯಿಹೊಟ್ಟಿ ತಣ್ಣಗಿದ್ದರ ಬದಕಿ ಹೋಗರೋ
ಜೀವದಾಸೆ ಇದ್ದರ ಮನಿಗೆ ಹೇಳಿ ಕಳುವರೋ
ಮತ್ತು ನಿಮ್ಮ ಆಪ್ತರಿದ್ದರ ಕರಸಿಕೊಳ್ಳರೋ

ಹಳಬರು

ಯಾತಕ್ಕ ಇಂಥಾ ಡೌಲಿನ ಮಾತನಾಡುವಿ ॥ ಪ ||

ಗಂಡಸ ಅದರ ಈಗ
ತೋರಿಸೋ ಕೈಯಿಂದ
ಹೌದ ಅಂತೇವಿ ಬಾದ್ದೂರಾ

ಪುಂಡ ಹುಡಗರೆಲ್ಲಾ
ನಿಂದರಗೊಡಾವರಲ್ಲಾ
ಹೊಳ್ಳಿ ಹೋಗಲೋ ಸುಮ್ಮನಾ

ನಿನ್ನಂಥಾ ಹೇಡಿನಾ
ಕಂಡಿಲ್ಲೊ ನಾವಿನ್ನಾ
ಗುಲ್ಲಮಾಡದೆ ಹೋಗೋ ಸುಮ್ಮನಾ

ಚೆನ್ನ

ಬಪ್ಪರೆ ಗೆಳಿಯಾ ತಿಳಿಯಲೋ ನಿಮ್ಮ ಬಂಟಿಸ್ತಾನಾ ॥ ಪ ||

ಇಂದಿನ ರಾತರಿs
ಹೇಳುವೆ ಖಾತರಿs
ಊರ ಮಾಡರೋ ಜ್ವಾಕೀನಾ

ಹಚ್ಚಿ ನಾ ಬೆಂಕಿ ನಾ
ಮಾಡುವೆ ಲೂಟೀನಾ
ಚೆಂಡಿ ಕೊಯ್ಯುವೆ ಕಟ್ಟಿ ನಾ

ಹೇಳತೀನಿ ಸಾರಿ
ಘಟ್ಟಿ ನೀವು ತಿಳಿಯರಿ
ಹೋಗುವೆ ಹೇಳಿ ನಾ ಇನ್ನಾ

* * *