ದೃಶ್ಯ 24

ಶಿವಾಪುರದ ಗೌಡನು ಚೆನ್ನನನ್ನು ಹಿಡಿಯಲು ವೀಳ್ಯ ಸ್ವೀಕರಿಸಿದ ಸುದ್ದಿಯನ್ನು ಡಂಗುರಹೊಡೆಯುವ ತಳವಾರ ಕೇಳಿಕೊಂಡು ಚೆನ್ನನ ಬಗೆಗೆ ತುಂಬ ಮರುಕಪಟ್ಟ. ಬೇಡಿದವರಿಗೆ ಬೇಡಿದ್ದು ಕೊಡುವ, ಬಡವರ ಬಂಧುವಾಗಿರುವ ಚೆನ್ನನನ್ನು ಹಿಡಿಯಲು ಶಿವಾಪುರದ ಗೌಡ ಸಿದ್ಧವಾಗಿರುವುದನ್ನು ಕೇಳಿ ಗೌಡನ ಮೇಲೆ ಸಿಟ್ಟೂ ಬಂದಿತು. ಈತನನ್ನು ಹಾಗೇ ಬಿಡಬಾರದೆಂದು ಯೋಚಿಸಿದ ತಳವಾರ ಚೆನ್ನನಲ್ಲಿಗೆ ಬಂದು ವಿಷಯವನ್ನು ಮುಟ್ಟಿಸಿದ. ಚೆನ್ನನು ಒಂದಿಷ್ಟು ಹಣವನ್ನು ತನಗೆ ಕೊಡುತ್ತಾನೆ ಎಂಬ ಆಶೆಯನ್ನು ಹೊತ್ತೇ ತಳವಾಳ ಹೋಗಿದ್ದನು. ತಳವಾರನ ನಿರೀಕ್ಷೆ ಹುಸಿಯಾಗಲಿಲ್ಲ. ಚೆನ್ನ ಉದಾರಿಯಾಗಿ ನಡೆದುಕೊಳ್ಳುತ್ತಾರೆ : ತಳವಾರನಿಗೆ ಹಣನೀಡುವುದರ ಮೂಲಕ, ನಿನ್ನ ಹೆಸರಿನ ಮೇಲೆ ಸೆರೆ ಕುಡಿದು ಮಜಾ ಮಾಡುತೇನೆ ಎಂದು ಸ್ಪಷ್ಟವಾಗಿ ಹೇಳಿಯೇ ಅವನಿಂದ ಹಣಪಡೆದ ತಳವಾರ ಈಗ ಸೆರೆ ಕುಡಿದು ನಿಶೆಮಾಡಿಕೊಳ್ಳಲು ಸೆರೆಯ ಅಂಗಡಿಗೆ ಬಂದಿದ್ದಾನೆ.

ಸೆರೆ ಕುಡಿದ ತಳವಾರ ತನ್ನ ಗುಣ ಮತ್ತು ದೊಡ್ಡಿಸ್ತಿಕೆಗಳ ಪರಿಚಯವನ್ನು ಸೆರೆಯಂಗಡಿವನೆಂದುರು ಮಾಡಿಕೊಳ್ಳುತ್ತಾನೆ; ದಿನಾಲು ಸೆರೆ ಕುಡಿಯುವ ತಾನು ಯರೊಂದಿಗೂ ತಗಲುಮಾಡುವುದಿಲ್ಲ; ತನಗೆ ಸೆರೆಯೇನು ಪುಕ್ಕಟೆಬೇಕಿಲ್ಲ ಎನ್ನುತ್ತಾನೆ. ಹಣವು ಎಷ್ಟೇ ಹೋಗಲಿ, ಅದರ ಪರಿವೆ ತನಗೇನೋ ಇಲ್ಲ ಎನ್ನುತ್ತಾನೆ.

ತಳವಾರ

ದರ ಹಮೇಶಾ ನಾ ಸೆರೆ ಕುಡಿಯಾಂವಾ
ತಗಲ ಮಾಡಾವನಲ್ಲಾ
ರೊಕ್ಕ ಎಣಿಸಿಕೋ ಲೆಕ್ಕಮಾಡಿಕೋ
ಪುಕ್ಕಟ ಬಿದ್ದಿಲ್ಲಾ

ಮಡ್ಡ ಗಾಣಿಗ ಬಡ್ಡಿ ಕೊಡಲಾಕ
ಬಡ್ಡಿ ಸಾವಕಾರನಲ್ಲಾ
ದಡ್ಡಿಯೊಳಗ ಕುರಿಹಿಂಡ ತರಬಲಾಕ
ಕುರುಬನಲ್ಲಾಣ

ಕುಂತ ಪೆಟ್ಟಿನಮ್ಯಾಲ ಹತ್ತಹ್ವಾದರ
ದರಜ ಮಾಡಾವನಲ್ಲಾ
ರೊಕ್ಕ ಎಣಿಸಿಕೋ ಲೆಕ್ಕ ಮಾಡಿಕೋ
ಪುಕ್ಕಟ ಬಿದ್ದಿಲ್ಲಾ

* * *

ದೃಶ್ಯ 25

ಶಿವಾಪುರದ ಹೊರವಲಯ :

ಚೆನ್ನನು ಹೊಲ : ಅರಣ್ಯಗಳಲ್ಲಿ ತಲೆಮರೆಸಿಕೊಂಡು ಅಲೆಯುತ್ತಿರುವಾಗ ತಳವಾರನ ಮುಖಾಂತರ ತನಗೊದಗಿದ ಆಪತ್ತನ್ನು ಕೇಳಿಕೊಂಡನು. ಈಗ ಅದನ್ನು ಅನುಸರಿಸುವ ಸನ್ನಾಹದಲ್ಲಿ ಬೇರೊಂದು ಮಾರ್ಗ ಅನುಸರಿಸುತ್ತಾನೆ. ಗೌಡನು ತನ್ನನ್ನು ಹಿಡಿಯಲು ವೀಳ್ಯೆ ಹಿಡಿದದ್ದು ಚೆನ್ನನಿಗೆ ಕೋಪ ಬಂದಿತು. ಗೌಡನ ಮೇಲಿನ ಸೇಡಿಗೆ ಗೌಡನ ಸೊಸೆಯನ್ನು ಅಡ್ಡಗಟ್ಟಿ ಅಪಮಾನವನ್ನುಂಟು ಮಾಡುತ್ತೇನೆ ಎನ್ನುತ್ತಾನೆ. ಆದುದರಿಂದಲೇ ಮಾರುವೇಷದಲ್ಲಿ ಮರೆಯಾಗಿ ನಿಂತ. ಅವನ ನಿರೀಕ್ಷೆ ಸುಳ್ಳಾಗಲಿಲ್ಲ. ಶಿವಾಪುರದ ಗೌಡನ ಸೊಸೆ ನೀರಿಗೆ ಬರುತ್ತಿದ್ದಾಳೆ. ರಣಗುಡುವ ಬಿಸಿಲು ತಾನು ಹರೆಯದವಳು ಒಬ್ಬಳೆ ಆಗಿದ್ದೇನೆ ಆದ್ದರಿಂದ ಅನೇಕರನ್ನು ಸಂಗಡ ಬರಲು ಕೇಳಿಕೊಳ್ಳುತ್ತಿದ್ದಾಳೆ. ಕೊನೆಗೆ ಒಬ್ಬಳು ಮುದುಕಿ ಜೊತೆಯಾಗಿ ಮುಂದುವರಿಯಬೇಕೆನ್ನುವ ಹೊತ್ತಿಗೆ ಮರೆಯಾಗಿದ್ದ ಚೆನ್ನ ಥಟ್ಟನೆ ಪ್ರತ್ಯಕ್ಷನಾಗ ಅಡ್ಡಗಟ್ಟುತ್ತಾನೆ.

ಅವಳು ದಾರಿ ಬಿಡಲು ಕೇಳಿಕೊಳ್ಳುತ್ತಾಳೆ. ತನ್ನ ಮಾವ ಮತ್ತು ಗಂಡನ ಹೆದರಿಕೆ ಹಾಕುತ್ತಾಳೆ. ಆದರೆ ಚೆನ್ನ ಮೋಹವಶನಾದಂತೆ ಮಾತನಾಡುತ್ತಾನೆ. ಹಿಂದೆ ಹೆಣ್ಣನ್ನು ಮೋಹಿಸಿದವರ ಗತಿ ಏನಾಯಿತೆಂಬುದನ್ನು ಗೌಡನ ಸೊಸೆ ಹೇಳಿದರೆ ಪ್ರಾಣದಂಜಿಕೆಯನ್ನು ತಾನು ತೊರೆದಿರುವುದಾಗಿ ಚೆನ್ನನು ಹೇಳಿ, ಅವಳನ್ನು ಕುರಿತು ಅಪಮಾನ ಮಾತನಾಡುತ್ತಾನೆ. ಆದ ಅಪಮಾನಕ್ಕೆ ಶೋಕಪಡುತ್ತಾಳೆ : ಗೌಡನ ಸೊಸೆ.

ಚೆನ್ನ

ಸುದ್ದಿಕೇಳಿ ನಾ ಕೋಪವನಾಕೋಪವನಾ
ತಡಿಲಾರೆ ನಾನಾ

ಗೌಡನ ಸೊಸಿನಾ ಬಿಡಬಾರದಿನ್ನಾ
ಹೋಗಿ ಅಪಮಾನಾ
ಮಾಡಬೇಕೋ ನಾನಾ

ಹೋಗುವೆ ಬ್ಯಾಗ ಶಿವಾಪುರದಾಗ
ತುರಮಂದ್ಯಾಗ ನಿಲ್ಲುವೆನಾ
ನಿಲ್ಲವೆನಾ ಹಾಕಿ ವೇಷವನಾ

ಧಾರವಾಡದೀಶಾ ಕೊಡಬೇಕೋ ವೇಶಾ
ಸೇವಾಮಾಡುವೆ ನಂದೇಶನಾ
ನಂದೇಶಾ ಒಲಿಯೋ ಬ್ಯಾಗ ನೀನಾ

ಶಿವಾಪುರ ಗೌಡನ ಸೊಸಿ

ಕೆರಿ ನೀರಿಗೆ ಬರತೀರೇನಬರತೀರೇನ
ಗೆಳೆತ್ಯಾರು ಎಲ್ಲಾ ॥ಪ ||

ಕಲ್ಲವ್ವಾ ಮಲ್ಲವ್ವಾ ನೀಲವ್ವಾ ನಿಂಗವ್ವಾ
ವಾರಿ ನೋಟದ ಸಕಿಯಾರೆಲ್ಲಾ
ಬರ‌್ರೆ ಬ್ಯಾಗ ನೀವಾ

ಒಬ್ಬಾಕಿ ನಾನಾ ಇಲ್ಲ ಸಂಗತಿನಾ
ಪ್ರಾಯದಾಕಿ ನಾ ಹೋಗಲಾರೆ ಬಿಸಲಾಗ ನಾನ
ಬ್ಯಾಗ ಬರ‌್ರೆ ನೀವಾ

ಮಧ್ಯಾನ ಬಿಸಲಾ ಏರೇದ ಅಸಲಾ
ತಡ ಮಾಡದೆ ಹೋಗೋಣ
ಬರ‌್ರೆ ಗೆಳತ್ಯಾರೆಲ್ಲಾ

ಗೌಡನ ಸೊಸಿ

ಅಡ್ಡ ಗಟ್ಟಿ ನಿಂತಿದಿ ಮಾನಗೇಡಿ
ದಾರಿಬಿಡೊ ಯಾರಾವ ಶಿರಗೇಡಿ ॥ಪ ||

ಗಂಡುನುಳ್ಳ ಬಾಲಿಯನಾ
ತರಬುವ ರೀತೇನಾ
ಗಂಡ ಕೇಳಿದ್ರ ತಿಂದೀಯ ಲತ್ತಿ ಪೆಟ್ಟು

ಅಕ್ಕ ತಂಗೇರು ನಿನಗ
ಇಲ್ಲೇನ ಮನಿಯಾಗ
ಹುಂಬ ಜಾತಿ ಕಾಣತಿದಿ ಅಡಮುಟ್ಟ ಕೆಟ್ಟರಿಷ್ಟ

ಹುಲಿಯಂಥ ನಮ್ಮ ಮಾವಾ
ಕೇಳಿದರ ನಿನ್ನ ಜೀವಾ
ಠಾರ ಕಡದ ಹಾಕಸ್ಯಾನೋ ನಿನ್ನಾ

ಚೆನ್ನ

ನಿನ್ನ ದಸಿಂದ ಬಂದೆನೆಲೆ ಪೋರಿ
ಬಾರೆ ನಾರಿ ಮೋಹದ ಸುಂದರಿ

ನಿನ್ನ ಮುಖದ ಕಾಂತಿಸುದ್ದ ಚಂದ್ರನ ಜ್ಯೋತಿ
ನಾಗರ ಹಾವಿನಾಂಗ ಅರಭಾಟ ನೋಟ
ವೋಟ ಬಾರೆ ನಾರಿ

ತೋಳ ನೋಡ ಬಾಳಿದಿಂಡಾಬಟ್ಟಕುಚಾ ಮುತ್ತಿನ ಚಂಡಾ
ನಿರಿಗಿ ಒದಿಯತ್ತ ಬರತೀದಿ ಕುಣಿಕೊಂತ
ಸೋತ ನಿಂತೆ ಬಾರೆ ನಾರೀ

ಕಾರ್ಮುಕದಂತೆ ಕುಡಿ ಹುಬ್ಬಾನಡುವಿಗೆ ಒಪ್ಪುವ ಡಾಬಾ
ಮುಂಗಾರಿ ಸಿಡ್ಲ ಹೊಡದ್ಹಾಂಗ ನಿನ್ನ ಮಾತ ಗೀತಾ
ಬಾರೆ ನಾರೀ

ನಿಮ್ಮ ಮಾವನಾ ಮಾತಾ ಹಾಕಿಕೊಂಡೆನಾ ಪಂಥಾ
ಧೀರ ಕಟ್ಟಿಯ ಚೆನ್ನ ನಾನು ಪುಂಡಗಂಡ ಮಿಂಡ
ಬಾರೆ ನಾರೀ

ಗೌಡನ ಸೊಸಿ

ಛೀ ತಗಿ ಅಲ್ಲೊ ರೀತಿಪರನಾರಿ ಕೇಳತಿ
ಸತ್ತ ಹೋದಿಯೋ ವೆರಥಾಬಂದಾನದೊಳು
ಸತ್ತಹೋದಿಯೋ ವೆರಥಾ

ಗುರುಪತ್ನಿ ದಸಿಂದಾಯೋಗಿಧರಿಸಿದೋ ಇಂದ್ರಾ
ಮನ್ಮಥಾ ಸುಟ್ಟಹೋದಾಬಂದನದೊಳು
ಸತ್ತ ಹೋದಿಯೋ ವೆರಥಾ

ದ್ರೌಪದಿ ದಸಿಂದಾಕೀಚಕ ಮಡದ ಹೋದಾ
ಬಿಟ್ಟ ಹೋಗಪ್ಪಾ ನೀನಾಬಂದಾನದೊಳು
ಸತ್ತ ಹೋದಿಯೋ ವೆರಥಾ

ಚೆನ್ನ

ನಾರಿ ಕೇಳಕ್ಕಾ ನಿನ್ನ ನಡಕಟ್ಟಿ ಹೊರತೇನಿ
ಹೋಗಲಿ ನನ್ನ ಶಿರಾನಿನಗಾಗಿ ಹೋಗಲಿ ನನ್ನ ಶಿರಾ

ಸೀತಾಗ ರಾವಣಾ ಓದಾಂಗ ವೈತೇನಾ
ಮಾಡುವೆ ಸಂಸಾರನಾನಿನಗಾಗಿ …..

ಭಾವ ಮೈದುನರಿಗೆ ಬರತಿದ್ರ ಬಾ ಅನ್ನ
ಸಾರಿ ಹೇಳುವೆ ಧೀರಾನಿನಗಾಗಿ ……
ಎತ್ತಿಕೊಂಡ ನಿನ್ನ ಹೋಗುವೆ ಊರಾಗ
ವೈರಿಗಿ ಆಗಿ ಎದುರಾನಿನಗಾಗಿ ……
ಗೌಡನ ಸೊಸಿ

ಅಯ್ಯೋ ದೇವಾ ಮಾಡಲೇನಾ
ನಾರೇರೊಳಗ ಅಬುರ ಕಳದಾ ॥ಪ ||

ಊರ ತುರಮಂದ್ಯಾಗಹಿಡಿದ ಜಗ್ಗಿದ ಸೆರಗ
ಅಡ್ಡಾದಿಡ್ಡಿ ಆಡಿ ಮಾತನಾರೆರೊಳಗ ಅಬರು ಕಳದಾ

ಪರಪುರಷರ ಮಾರಿನೋಡಿದ್ದಿಲ್ಲವ್ವಾ ನಾರಿ
ಪತಿವ್ರತಿಗಿ ಆಡಿ ಮಾತನಾರೆಯೊಳಗ ಅಬರುಕಳದಾ

ಮಾವನ ಹೆಂಡತಿರಂಡಿಯಾಗಲಿ ಸವತಿ
ಪಂಥ ಹಾಕಿ ಗೋಳ ತಂದಾತಾಯಿತಂದಿ ಮಾನಾ ಕಳದಾ

 * * *

ದೃಶ್ಯ 26

ಚೆನ್ನನನ್ನು ಹಿಡಿದುಕೊಟ್ಟು ಏಳು ಹಳ್ಳಿಗಳ ಇನಾಮು ಪಡೆಯಬೇಕೆಂದಿದ್ದ ಶಿವಾಪುರದ ಗೌಡನಿಗೆ ತೀರ ಆಘಾತವಾಗಿದೆ. ಚೆನ್ನನಂಥವನನ್ನು ಹಿಡಿಯುವುದಾಗಿ ಎಲ್ಲರ ಮುಂದೆ ಜಂಬಕೊಚ್ಚಿಕೊಂಡು ತಿರುಗುತ್ತಿದ್ದ ತಾನು ಅವನನ್ನು ಹಿಡಿದು ಜಯ ಸಾಧಿಸುವುದು ಹೋಗಲಿ, ಅವನ ವೈರ ಕಟ್ಟಿಕೊಂಡು ಮನೆತನದ ಮಾನವನ್ನೇ ಕಳೆದುಕೊಂಡಂತಾಯಿತಲ್ಲ ಎಂಬ ಕೊರಗು ಗೌಡನದು.

ತನ್ನ ಮೇಲಿನ ಸೇಡಿಗಾಗಿ ತನ್ನ ಸೊಸೆಯನ್ನು ಹೀಗೆ ಅಡ್ಡಗಟ್ಟಿ ಅಪಮಾನಿಸುತ್ತಾನೆ ಎಂದು ಗೌಡ ತಿಳಿದಿರಲಿಲ್ಲ. ಈಗ ತನ್ನ ರೀತಿ ತನಗೇ ಮುಳುವಾದಂತಾಗಿದೆ. ಆದ್ದರಿಂದ ಶಿವಾಪುರದ ಗೌಡ ಅಪಮಾನ ಪಾಶ್ಚಾತ್ತಾಪಗಳಿಂದ ದಗ್ಧನಾಗಿ ಚಡಪಡಿಸುತ್ತಿದ್ದಾನೆ.

ತಾನೀಗ ಸರಕಾರಕ್ಕೆ ಏನೆಂದು ಹೇಳಬೇಕೆಂಬ ವಿಚಾರ ಶಿವಾಪುರ ಗೌಡನನ್ನು ಕಾಡುತ್ತಿದೆ. ಅನೇಕ ಜನರನ್ನು ಚೆನ್ನ ಮಣ್ಣುಮುಕ್ಕಿಸಿದ ಸಂದರ್ಭದಲ್ಲಿ ಅವನನ್ನು ಮೂರೇ ಮೂರು ತಿಂಗಳಲ್ಲಿ ಹಿಡಿದುಕೊಡುವುದಾಗಿ ಸರಕಾರದಿಂದ ವೀಳ್ಯೆ ಹಿಡಿದಿದ್ದವ ತಾನು. ಈಗ ತಾನೇ ಅಪಮಾನಿತನಾಗಿ ಹಿಂತಿರುವ ಪ್ರಸಂಗ ಪ್ರಾಪ್ತವಾಗಿ ಸರಕಾರಕ್ಕೆ ಏನು ಹೇಳಲಿ ಎನ್ನುತ್ತಾನೆ ಭೂಮಿಯ ಮೇಲೆ ಹುಟ್ಟಿ ತಾನು ಏನು ಸಾಧಿಸಿದಂತಾಯಿತು ಎಂದು ನಿಟ್ಟುಸಿರು ಹಾಕುತ್ತಾನೆ. ಕೊನೆಗೆ ಎಲ್ಲವನ್ನೂ ದೇವರ ಮೇಲೆ ಹಾಕಿ ತನ್ನ ಮೇಲೆ ಅವನು ಮುನಿದಿದ್ದಾನೆ ಎನ್ನುತ್ತಾನೆ. ಕೊನೆಗೆ ಚೆನ್ನನು ಮ್ಯಾದಾರ ಶಿವಪ್ಪನ ಮನೆಯಲ್ಲಿರುವುದಾಗಿ ಗೌಡ ಫೌಜದಾರನಿಗೆ ಸುಳುಹು ನೀಡುತ್ತಾನೆ.

ಶಿವಾಪುರ ಗೌಡ

ಕಟ್ಟಿಯ ಚೆನ್ನಾ ಕಳೆದಾನೊ ಮಾನವನಾ
ಉಳಿಯಲಿಲ್ಲೊ ಏನೇನಾ

ಹಿರಿಸೊಸಿನಾ ತಡದು ತಾನಾ
ಮಾಡಿದೊ ಅಪಮಾನಾ
ಉಳಿಯಲಿಲ್ಲೊ ಏನೇನಾ

ಸರಕಾರದಾಗಿನ್ನಾ ಹೇಳಲಿ ಇನ್ನೇನಾ
ಕೊಟ್ಟಿದ ವಚನಾ
ಕಟ್ಟಿಯ ಚನ್ನಾ

ಭೂಮಿಯ ಮ್ಯಾಲಿನ್ನಾ ಹುಟ್ಟಿದ ಫಲವೇನಾ
ಮುನಿದಾನೊ ಭಗವಾನಾ
ಕಟ್ಟಿಯ ಚೆನ್ನಾ

* * *

ದೃಶ್ಯ 27

ಶಿವಾಪುರದ ಗೌಡ ಕೊಟ್ಟ ಸೂಚನೆಯ ಮೇರೆಗೆ ಪೋಲೀಸರು ಒಟ್ಟಾಗಿ ಬಂದು ಮ್ಯಾದಾರ ಶಿವಪ್ಪನ ಮನೆಯನ್ನು ಮುತ್ತುತ್ತಾರೆ. ಸಿದ್ದನು ಚೆನ್ನನಿಗೆ ಬೇಗ ಪಾರಾಗಿ ಹೋಗಲು ಸಲಹೆಕೊಡುತ್ತಾನೆ. ಇಂಗ್ರೇಜಿಯವರು ನಿನ್ನನ್ನು ಹುಡುಕುತ್ತ ಬರುತ್ತಲಿದ್ದಾರೆಂದೂ ನೀನು ಅವರ ಕೈಯಲ್ಲಿ ಸಿಕ್ಕರೆ ನಿನ್ನನ್ನು ಅಪಮಾನಗೊಳಿಸುತ್ತಾರೆಂದೂ ಹೇಳಿ ಕೂಡಲೇ ಹೊರಟು ಹೋಗಲು ಒತ್ತಾಯಿಸುತ್ತಾನೆ. ಆದರೆ ಚೆನ್ನನು ನಿನ್ನನ್ನು ವೈರಿಗಳ ವಶಕ್ಕೆ ಹೇಗೆ ಬಿಟ್ಟು ಹೋಗಲಿ ಎಂದು ದುಃಖಿಸುತ್ತಾನೆ. ತಮಗೆ ಎಂಥ ದುರದೃಷ್ಟ ಸಮಯ ಬಂದಿತೆಂದೂ ತಮ್ಮ ರಿಣವೀಗ ಹರಿಯಿತೆಂದೂ ಪ್ರಲಾಪಿಸುತ್ತ ಈಗಾಗಲೇ ಹುಸೇನಿ ತನಗಾಗಿ ಪ್ರಾಣಕೊಟ್ಟುದನ್ನು ನೆನಪಿಸಿಕೊಳ್ಳುತ್ತಾನೆ.

ಚೆನ್ನನು ಪಾರಾಗಿ ಹೋದ ಮೇಲೆ ಸಿದ್ಧನು ತಾನೇ ಚೆನ್ನನೆಂದು ಪೋಲೀಸರ ವಶವಾಗುತ್ತಾನೆ.

ಪೋಲೀಸರು ಸಿದ್ಧನನ್ನು ಬಂಧಿಸಿ ಒಯ್ಯಲು ಅಣಿಯಾಗುತ್ತಾರೆ. ಜೀವದ ಗೆಳೆಯನ ರಕ್ಷಣೆಗೆ ಪ್ರಾಣಕೊಡಲು ಹೊರಟ ಸಿದ್ಧನು ಸಂತೋಷದಿಂದಲೇ ಇದ್ದಾನೆ. ಪೋಲೀಸರು ತನಗೆ ಮುಂದೆ ಕೊಡಬಹುದಾದ ತೊಂದರೆಯ ಬಗೆಗಾಗಲಿ, ಫಾಸಿಯ ಬಗೆಗಾಗಲಿ ಅವನಿಗೆ ಎಳ್ಳಿನಿತು ಚಿಂತೆಯಿಲ್ಲ. ತನಗೆ ಫಾಸಿಯಾದ ಸುದ್ದಿಯನ್ನು ಗೆಳೆಯ ಚೆನ್ನಣ್ಣನಿಗೆ ತಿಳಿಸುವಂತೆ ಸಭಾ ಜನರನ್ನು ಕೇಳಿಕೊಳ್ಳುತ್ತಾನೆ.

ಸಿದ್ಧ

ದಾಟಿಹೋಗೋ ಇಲ್ಲಿಂದ ಸುಗಜಾಣಾ
ಚೆನ್ನಪ್ಪಣ್ಣಾ ಕೇಳ ಎನ್ನ ವಚನಾ ॥ಪ ||

ಇಂಗ್ರೇಜಿಯವರು ಬರತಾರೋ ಹುಡುಕುತ ನಿನ್ನಾ
ಮಾರಿ ತಪ್ಪಿಸಿ ಹೋಗೋ ಬ್ಯಾಗನಾ

ಸರಕಾರಕ್ಹೋಗಿ ಆಗುವೆ ಭೆಟ್ಟಿ ನಾನಾ
ಬೇಕಾದ್ದ ಮಾಡಲಿ ನನಗಿನ್ನಾ

ಸಾಸಮಾಡಿ ಹುಡುಕತಾರೋ ನಿನ್ನಾ
ನೀ ಸಿಕ್ಕರ ಮಾಡತಾರೋ ಅಪಮಾನಾ

ಚೆನ್ನ

ದುಃಖ ಬಂತೋ ನನಗ ಮನದಾಗ
ನಿನ್ನ ಬಿಟ್ಟ ಹೋಗಲಿ ನಾ ಹ್ಯಾಂಗ

ನಮ್ಮ ನಿಮ್ಮ ರಿಣಾ ಹರಿತೊ ಈಗ
ಇನ್ನ ಭೆಟ್ಟಿ ಆಗೂದು ಯಾವಾಗ

ಹೆಂತಾ ವ್ಯಾಳೆ ಬಂತೊ ನಮಗೀಗ
ಶಿವಾ ಮುನದಾ ಇನ್ಹ್ಯಾಂಗ

ಪ್ರಾಣಕೊಟ್ಟ ಹುಸೇನಿ ನಿನಗಾಗಿ
ಅವನಂತೆ ಆಗಲಿ ಈಗ

ಸಿದ್ಧ

ಜೀವದ ಗೆಳಿಯಾನ ಸಲುವಾಗಿ ನಾನಾ
ಪ್ರಾಣ ಕೊಡುವೆನಾ ಇನ್ನಾ

ಕಟ್ಟಿಯ ಚೆನ್ನ ಗಿನ್ನಾ ಹೇಳರಿ ಸುದ್ದಿಯನಾ
ಹಾಕ್ಯಾರೊ ಪಾಸಿಯನಾ

ಧಾರವಾಡದೀಶನ ಉಳವಿ ಬಸವೇಶನ
ಹೊಂದುವೆ ಮುಕ್ತಿಯನಾ

* * *

ದೃಶ್ಯ 28

ಬೈರಾಗಿ ವೇಷದಲ್ಲಿಚೆನ್ನನೊಬ್ಬನೇ ರಂಗದ ಮೇಲೆ ಬರುತ್ತಾನೆ. ನಿರಾಶೆ ಅವನ ಮುಖದಲ್ಲಿ ಮಡುಗಟ್ಟಿದೆ. ಇಲ್ಲಿಯವರೆಗೆ ಗೌಡರು ತನ್ನನ್ನು ಹಿಡಿದು ಸರಕಾರಕ್ಕೆ ಒಪ್ಪಿಸಬೇಕೆಂದರು; ಪೋಲೀಸಿನವರು ತನ್ನನ್ನು ಬಂಧಿಸಬೇಕು, ಕೊಲ್ಲಬೇಕು ಎಂದು ಪ್ರಯತ್ನಿಸಿದರು. ಅವರ ಎಲ್ಲ ಪ್ರಯತ್ನಗಳೂ ನಿರರ್ಥಕವಾದವು. ಎಂಥ ಕಠಿಣ ಪ್ರಸಂಗದಲ್ಲಿಯೂ ಪಾರಾಗಿ ಬಂದ ಯಶಕ್ಕೆ ತನ್ನೊಬ್ಬನ ಪರಾಕ್ರಮ ಮಾತ್ರವಲ್ಲ. ಗೆಳೆಯರ ಸಹಕಾರವೂ ಕಾರಣವಾಗಿದೆ ಎಂಬ ಅಂಶ ಚೆನ್ನನಿಗೆ ಗೊತ್ತಿದೆ. ಜೀವದ ಹಂಗುದೊರೆದು ತನಗೆ ಜೊತೆಗೊಟ್ಟು ಮೊದಲು ಹುಸೇನಿ, ಈಗ ಸಿದ್ಧ ಮರಣವನ್ನಪ್ಪಿದುದು ಚೆನ್ನನ ಹೃದಯದ ಮೇಲೆ ಮಾಸದ ಗಾಯವನ್ನುಂಟು ಮಾಡಿವೆ. ಹಿಂದೆ ಗುಡ್ಡದಲ್ಲಿ ತಾನೊಬ್ಬನೇ ಪರದೇಶಿಯಂತೆ ತಿರುಗಾಡುತ್ತಿದ್ದಾಗ ಇಬ್ಬರೂ ಬಂದು ತನಗೆ ಆಸರೆಯೊದಗಿಸಿದ್ದು, ತನಗಾಗಿ ಜೀವ ಕೊಡುವುದಾಗಿ ಪ್ರಮಾಣಕೊಟ್ಟದ್ದು, ಜೀವದಲ್ಲಿ ಜೀವವಾಗಿ ಬೆರೆತದ್ದು : ಎಲ್ಲ ಈಗ ನೆನಪಾಗುತ್ತಿವೆ ಚೆನ್ನನಿಗೆ.

ಬಂಧು ಬಳಗ ತ್ಯಜಿಸಿ ಭೂಮಿ ಸೀಮಿ ಸುತ್ತುತ್ತಿದ್ದ ತನಗೆ ಗೆಳೆಯರೇ ಸಂಸಾರವಾಗಿದ್ದರು. ಸರ್ವಸ್ವವಾಗಿದ್ದರು. ಈಗ ಏನು ಉಳಿಯಲಿಲ್ಲ. ಗೆಳೆಯರನ್ನು ಕಳೆದುಕೊಂಡ ಮೇಲೆ ಚೆನ್ನನಿಗೆ, ಯಾವ ಆಶೆಗಳೂ ಬದುಕಿನಲ್ಲಿ ಬೇಡವೆನ್ನಿಸಿವೆ. ಆಶೆಗಳೆಲ್ಲ ಈಗ ಕೊನೆಯ ಬಾರಿಗೆ ಸಿದ್ಧನೊಂದಿಗೆ ಮುಳುಗಿ ಹೋದವು. ಆದ್ದರಿಂದ ಬೈರಾಗಿ ವೇಷಧರಿಸಿ ದೈವಕ್ಕೆ ನಮಸ್ಕರಿಸಿ ಗುಡ್ಡದ ಕಡೆಗೆ ಹೊರಟುಹೋಗುತ್ತಾನೆ.

ಚೆನ್ನ

ದೈವಕ ನಾನಾ ಮಾಡುವೆ ಶರಣಾ
ಆಗಿ ಹೋಗುವೆ ಬೈರಾಗಿ ನಾ

ಜೀವದ ಗೆಳಿಯನಾ ಆಗಲಿ ಇನ್ನಾ
ಸಂಸಾರ ಮಾಡಿ ಫಲವೇನಾ

ಕಲಗಿ ರಂಡಿದು ಕೋದ ಮೂಗವನಾ
ಹಚ್ಚಿದೇವೋ ತುರಾಯಿನಾ

ಧಾರವಾಡದೀಶನಾ ಉಳವಿನಂದೀಶನಾ
ಸ್ಮರಿಸುವೆ ನಾ ಇನ್ನಾ

***