ಕಡಲ ಕಾಂಬಾಸೆ ಕಡಲುವರಿದಿತ್ತು ನನ್ನ ಮನಸಿನೊಳಗೆ
ವರುಷವಿಪ್ಪತ್ತು ಮೂರು ತುಂಬುತಿರೆ ನಿನ್ನ ಕಂಡ ದಿನಕೆ
ಕಡೆಗೆ ಬಲು ದಿನಕೆ ನಿನ್ನ ದರ್ಶನವು ಲಭಿಸಿತೆನಗೆ ಜಲಧಿ,
ಇಂದು ಬಂದಿರುವೆ ನಿನ್ನ ಎದುರಿನಲಿ ದೈವಕೃಪೆಯ ಬಲದಿ.

ನಿನ್ನ ಭೂಮತೆಯ ಭವ್ಯ ಚಿತ್ರವನು ಮನದಿ ಮೂಡಿಸಿದ್ದೆ
ನಿನ್ನ ಘೋಷವನು ನನ್ನ ಕಲ್ಪನೆಯ ಕಿವಿಯೊಳಾಲಿಸಿದ್ದೆ.
ಇಂದು ಕಂಡೆನಾ, ತುಂಬಿ ಬಂದಿತೋ ನನ್ನ ಮನದ ಬಯಕೆ
ಕಂಡ ಸಂತಸಕೆ ನನ್ನ ವಾಣಿಯಲಿ ಹಾಡುವಾಸೆ ನನಗೆ !

ಎತ್ತ ನೋಡಿದರು ನೀಲ ನೀಲ ಜಲ ಕಲ್ಲೋಲ ರುಂದ್ರಮಾಲೆ !
ಕೆಳಗೆ ನೀಲಜಲ ಮೇಲೆ ನೀಲತಲ, ದಿಟ್ಟಿ ಸೋಲುವೋಲೆ,
ಎಲ್ಲೆಲ್ಲು ನೀಲ, ಭೂಮತೆಯ ಕುರುಹು ಬರಿಯ ನೀಲಿಯಂತೆ,
ನೀನೆ ತೋರುತಿಹೆ ನನ್ನ ಕಂಗಳಿಗೆ ನೀಲ ಬೊಮ್ಮನಂತೆ !

ಏನು ಅಬ್ಬರವೊ ಏನು ಉಬ್ಬರವೊ ನಿನ್ನ ಗರ್ಭದಲ್ಲಿ !
ರುದ್ರ ವೀಣೆಗಳ ತುಮುಲ ನಾದವೋ ನಿನ್ನ ಮೊರೆವ ರಾಗ
ಪ್ರಳಯ ಭೈರವನು ಲೋಕ ಲೋಕಗಳ ಮೆಟ್ಟಿ ಕುಣಿಯುವಾಗ
ಅವನ ತಾಂಡವಕೆ ತಾಳ ಹಾಕುವೆಯ ತೆರೆಯ ತಾಳದಲ್ಲಿ ?

ನಾದ ಬ್ರಹ್ಮದಾ ವ್ಯಕ್ತ ರೂಪವೋ ನಿನ್ನ ವೇದಘೋಷ !
ಲೋಕ ಲೋಕಗಳ ಮೋಹನಿದ್ರೆಯಿಂದೆಚ್ಚರಿಸೆ ಮೊಳಗುವಂತೆ
ವಿಶ್ವಕವಿಯು ತಾ ಕಟ್ಟಿ ಹಾಡುತಿಹ ಚೈತನ್ಯ ಕವನದಂತೆ
ಏನು ಆದರೂ ಏನು ಹೋದರೂ ನಿಲ್ಲದಂಥ ಘೋಷ !

ಸೃಷ್ಟಿಕರ್ತನನು ಕುರಿತು ಪ್ರಾರ್ಥನೆಯ ಮಾಡುತಿರುವೆಯೇನು ?
ನಿನ್ನ ಪ್ರಾರ್ಥನೆಗೆ ನನ್ನ ಪ್ರಾರ್ಥನೆಯ ಬೆರಸುತಿರುವೆ ನಾನು.
ನಿತ್ಯ ಪ್ರಾರ್ಥನೆಯ ಸತ್ಯಚೇತನವೆ ನಮಸ್ಕಾರ ನಿನಗೆ
ನಿನ್ನ ಘೋಷದಲಿ ನನ್ನ ದನಿಯನೂ ಬೆರೆಸುವಾಸೆ ನನಗೆ.

ನಾನಿಲ್ಲಿ ಬರುವ ಮೊದಲಲ್ಲು ನೀನು ಇಂತೆ ಮೊರೆಯುತಿದ್ದೆ
ನಾನು ಬಂದಿಲ್ಲಿ ನಿಂತು ನೋಡುತಿರೆ ಇಂತೆ ಮೊರೆಯುತಿರುವೆ
ನಾನು ಹೋದರೂ ಎಂದಿನಂತೆ ನೀನಿಂತೆ ಹಾಡುತಿರುವೆ !
ನೀಲ ಬಾನಿನಾ ಭವ್ಯ ಮೌನದೆದೆಗೇನೊ ನುಡಿಯುತಿರುವೆ.

ಏನು ಆಟವೋ ಎಂಥ ಬೇಟವೋ ನಿನ್ನ ತೆರೆಗೆ ದಡಕೆ
ನಿಮಿಷ ನಿಮಿಷಕೂ ಬಂದು ದಡದೆಡೆಗೆ ಬಡಿಯುವಾಸೆ ಅವಕೆ !
ವರುಷ ವರುಷಗಳು ಉರುಳಿ ಹೋದರೂ ಮುಗಿಯದಂಥ ಆಟ
ಬುವಿಯ ಹೆಣ್ಣಿಗೂ ಕಡಲ ಗಂಡಿಗೂ ತೀರದಿರುವ ಬೇಟ !

ಭವ್ಯ ಕಲೆಗಾರನಲ್ಪಕೃತಿಯಲೂ ಚೆಲುವು ಪೂರ್ಣಗೊಂಡು
ಬರುವ ತೆರದಿ, ಇದೊ ಕಪ್ಪೆಚಿಪ್ಪುಗಳು ಬೀಳುತಿಹವು ಬಂದು !
ಕಡಲ ಗರ್ಭದಾ ಮುತ್ತು ರತುನಗಳು, ಇಂತು ಬಾರವೇಕೆ ?
ಕಪ್ಪೆಚಿಪ್ಪುಗಳೊ ಮುತ್ತು ರತುನಗಳೊ, ಅದರ ಘನತೆ ಅದಕೆ.

ತೆರೆಯ ಚವರಿಗಳೊ ವಾದ್ಯಘೋಷಗಳೊ, ನಿಜಕು ರಾಜ ನೀನು
ನಿನ್ನ ಗಾಂಭೀರ‍್ಯ ನಿನ್ನ ವಿಸ್ತಾರ ಮತ್ತೆ ಯಾರಿಗಿಹುದು ?
ಬುವಿಯ ತೆರದಲ್ಲಿ ಬುವಿಯ ದೊರೆಗಳಿಗೆ ದಾಸನಲ್ಲ ನೀನು
ನಿನ್ನ ರಾಜತನ ನಿನ್ನ ವೈಭವವು, ನಿನಗೆ ಮೀಸಲಹುದು !

ನಿನ್ನ ನೀಲ ಜಲದೆದೆಯ ಮೇಲುಗಡೆ ಕೋಟಿ ನಾವೆ ತೇಲಿ
ಹೋಗುತಿಹವು ಕಾಣ್ ತೆರೆಗಳಗ್ರದಲಿ ತೃಣಗಳನ್ನು ಹೋಲಿ !
ಒಮ್ಮೆ ನಿನ್ನ ತೆರೆ ಎತ್ತಿ ಎಸೆಯಿತೋ, ಮುಗಿಯಿತದರ ಪಾಡು
ಮನುಜ ಸಾಹಸದ ಕಿಡಿಗಳಂತೆ ಅವು ತೇಲುತಿಹವು ನೋಡು.

ಕಡಲ ಕರೆಯ ನುಣ್ ಮಳಲ ಮೇಲುಗಡೆ ನನ್ನ ಹೆಸರ ಬರೆದೆ !
ಒಂದು ತೆರೆಯನಿನ್ನೊಂದು ಅಟ್ಟಿ ಮುಂದೋಡುತಿರುವ ಪರಿಗೆ
ನಿಬ್ಬೆರಗು ಹೊಡೆದು ತೆರೆಯ ಲೀಲೆಯನು ನೋಡಿ ನೋಡಿ ನಿಂದೆ,
ಅಯ್ಯೊ ಕಂಡೆನೇ, ತೆರೆಯು ನುಗ್ಗಿತೋ ನನ್ನ ಕಾಲಕೆಳಗೆ !

ಬಂದ ತೆರೆಯು ಭುಸ್ಸೆಂದು ನುಗ್ಗಿ ಅಪ್ಪಳಿಸಿತಯ್ಯ ದಡಕೆ !
ಮರಳ ಮೇಲೆ ಬರೆದೆನ್ನ ಹೆಸರು ನಿರ್ನಾಮವಾಯ್ತು ಚಣಕೆ.
ಹೆಸರು ಹೋಯಿತೇ ಎಂದು ಕೊರಗುತಿರೆ ಏನೊ ಆಯ್ತು ಮನಕೆ,
ನನ್ನ ಬೆಳ್ತನಕೆ ನಾನೆ ನಾಚುತ್ತ, ನನ್ನ ನೋಡಿ ನಕ್ಕೆ !

ನಿನ್ನ ಕಾಣುತ್ತ ನಿನ್ನ ರೂಪದಲಿ ನಾನೆ ಕರಗಿಹೋದೆ
ಮತ್ತೆ ನೋಡಿದರೆ ನೀಲ ನೀಲ ಜಲ ನೀನೆ ಎಲ್ಲವಾದೆ !
ನಿನ್ನ ಘೋಷದಲಿ ನನ್ನ ಎದೆಯ ದನಿ ಲೀನವಾಯಿತೆಲ್ಲ
ನಿನ್ನ ಎದುರಿನಲಿ ನನ್ನತನಕೆ ಏನೇನು ಉಳಿಯಲಿಲ್ಲ !