ಎಲ್ಲಿದ್ದರು ಎಂತಿದ್ದರು
ಕನ್ನಡಿಗರು ನಾವು
ಕಡಲಾಚೆಯ ಕನ್ನಡ ಕುಲ ನಾವು.

ದೇಶ ದೇಶಗಳ ಗಡಿಗಳ ದಾಟುತ
ನೆಲಸಿದರೂ ನಾವು
ಭುವನತ್ರಯವೇ ಸ್ವದೇಶವೆನ್ನುತ
ಬದುಕಿದರೂ ನಾವು
ಅಂತರಾಳಗಳ ಒಂಟಿತನದೊಳಗೆ
ಕಾಡುತ್ತಿದೆ ಕನ್ನಡ ನಾಡು.

ನಮ್ಮೊಳಗಿದೆ ಆ ಅಖಂಡ ಭಾರತ
ನಮ್ಮೊಳಗಿದೆ ಕರ್ನಾಟಕ
ಉಸಿರಿನ ಉಸಿರಾಗಿ,
ಕವಿಗಳ, ಸಂತರ, ಗುಡಿಗಳ, ನದಿಗಳ,
ಸಂಗೀತದ ಶೃತಿಯಾಗಿ
ಪುನರುಜ್ಜೀವನಗೊಳ್ಳುತ ನಮ್ಮೊಳು
ಉಜ್ವಲ ಸ್ಮೃತಿಯಾಗಿ.

ಬಿಗಿದುಕೊಂಡರೂ ಬಿಡುವಿಲ್ಲದ ದುಡಿಮೆಯ
ಚಕ್ರ ಚಲನೆಗಳ ಜತೆಗೆ
ಇಲ್ಲೂ ಇದೆ ತುಡಿಯುವ ಎದೆ
ಕನ್ನಡ ನಾಡಿಗೆ ನುಡಿಗೆ
ಬನ್ನಿರಿ ಓ ಕನ್ನಡ ಬಂಧುಗಳೇ
ನಮ್ಮೊಲವಿನ ಕರೆಗೆ.