ತುರುವನಹಳ್ಳಿ ನಿರ್ವಾಣ ಸಿದ್ದ ಬೆಟ್ಟ:-

ಜಿಲ್ಲೆಯಿಂದ ೪೫ ಕಿ.ಮೀ
ತಾಲ್ಲೂಕಿನಿಂದ ೩ ಕಿ.ಮೀ

ಕಡೂರಿನಿಂದ ೩ ಕಿ.ಮೀ ದೂರದಲ್ಲಿರುವ ಈ ಬೆಟ್ಟವು ಕಲ್ಲು ಬಂಡೆಗಳ ನಡುವೆ ಪ್ರಕೃತಿಯ ಮಡಿಲಿನಲ್ಲಿ ಪ್ರವಾಸಿಗರಿಗೆ ಸಂತೋಷ ನೀಡುವಂತಿದೆ. ಬೃಹತ್ ಹೆಬ್ಬಂಡೆಯ ಪಕ್ಕದಲ್ಲಿರುವ ನಿಸರ್ಗ ನಿರ್ಮಿತ ಗುಹೆಯಲ್ಲಿ ಕುಳಿತು ತಪಸ್ಸು ಮಾಡುತ್ತಿರುವಾಗ ಹುಲಿಯೊಂದು ಬಂದು ಅವರೆದುರು ಕುಳಿತಿರುತ್ತಿತ್ತಂತೆ. ಅದರ ಸ್ಮರಣಾರ್ಥವಾಗಿ ಹುಲಿ ಗದ್ದುಗೆ ನಿರ್ಮಿಸಲಾಗಿದೆ. ವಿಶೇಷ ಸಾಧಕರಾಗಿದ್ದ ನಿರ್ವಾಣ ಸಿದ್ದರು ವಾಕ್ ಸಿದ್ದಿಯನ್ನು ಹೊಂದಿದ್ದ ತಪಸ್ವಿಗಳು, ಅನೇಕ ಪವಾಡಗಳನ್ನು ಮಾಡಿದ್ದ ಇವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಸಂತರಾಗಿದ್ದರು. ಇವರು ತಪಸ್ಸು ಮಾಡಿದ್ದ ಗುಹಾಂತರ ದೇವಾಲಯ ನೋಡುಗರ ಎದೆಯನ್ನು ನಡುಗಿಸುತ್ತದೆ. ಇವರು ಐಕ್ಯರಾದ ಸ್ಥಳದಲ್ಲಿ ಸಿದ್ದೇಶ್ವರ ಲಿಂಗವನ್ನು ಸ್ಥಾಪಿಸಿದ್ದು, ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಅಭಿಷೇಕ ಪೂಜೆಯೊಂದಿಗೆ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಮಾಡಲಾಗುತ್ತದೆ. ಪ್ರಕೃತಿ ಪ್ರಿಯರಿಗೆ  ಇದೊಂದು ಉತ್ತಮ ಪ್ರವಾಸಿ ಸ್ಥಳವಾಗಿದೆ.

 

ಹಿರೇನಲ್ಲೂರು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ

ಜಿಲ್ಲೆಯಿಂದ ೫೪ ಕಿ.ಮೀ
ತಾಲ್ಲೂಕಿನಿಂದ ೧೪ ಕಿ.ಮೀ

ಹೋಬಳಿ ಕೇಂದ್ರವಾಗಿರುವ ಈ ಊರು ಕಡೂರಿನಿಂದ ೧೪ ಕಿ.ಮೀ ದೂರದಲ್ಲಿದೆ. ಕಪ್ಪು ಮಣ್ಣಿನಿಂದ ಕೂಡಿರುವ ಪ್ರದೇಶದಲ್ಲಿ ಈರುಳ್ಳಿ ಪ್ರಮುಖ ಆರ್ಥಿಕ ಬೆಳೆಯಾಗಿದೆ. ಹೊಯ್ಸಳ ಕಾಲದಲ್ಲಿ ನಿರ್ಮಾಣ ಗೊಂಡಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಇಲ್ಲಿನ ಪ್ರಮುಖ ಆಕರ್ಷಣೆ. ಅನೇಕ ಧಾಳಿಕೋರರ ಧಾಳಿಯಿಂದ ಹಾಳಾಗಿದ್ದ ದೇವಾಲಯವನ್ನು ಪ್ರಾಚ್ಯವಸ್ತು ಇಲಾಖೆಯು ಈಗ ಪುನರುಜ್ಜೀವನಗೊಳಿಸಿದೆ. ಕ್ರಿ.ಶ. ೧೨೧೫ರ ಶಿಲಾಶಾಸನದಂತೆ ಈ ಊರಿಗೆ ಹಿರಿಯನಲ್ಲೂರು ಎಂಬ ಹೆಸರು ಇದ್ದುದು ಕಂಡು ಬರುತ್ತದೆ. ೧೨೪೨ರ ಶಾಸನದಲ್ಲಿ ಈ ಊರಿಗೆ ಕೇಶವೇಶ್ವರಪುರ ಎಂಬ ಹೆಸರು ಇದ್ದುದಾಗಿ ತಿಳಿಯುತ್ತದೆ.

ಹೊಯ್ಸಳ ಶೈಲಿಯಲ್ಲಿ ಕಟ್ಟಿರುವ ಈ ದೇವಾಲಯದಲ್ಲಿ ೩ ದೇವರ ಮೂರ್ತಿಗಳಿವೆ. ಪೂರ್ವಕ್ಕೆ ಮುಖಮಾಡಿ ನಿಂತ ಶಿವಲಿಂಗದೆದುರಿಗೆ ಬೃಹತ್ ನಂದಿಯ ವಿಗ್ರಹವಿದ್ದು, ವಿಶೇಷವಾದ ಕಲಾ ಕೌಶಲ್ಯತೆಯನ್ನು ಇಲ್ಲಿ ಕಾಣಬಹುದು. ಶಿವಲಿಂಗದ ಎಡಭಾಗದಲ್ಲಿ ಕೇಶವೇಶ್ವರ ಸ್ವಾಮಿಯ ಮುಂಭಾಗದಲ್ಲಿ ಸೂರ್ಯ ದೇವರ ವಿಗ್ರಹಗಳಿದ್ದು, ಇವುಗಳು ಧಾಳಿಕೋರರ ಧಾಳಿಯಿಂದ ಹಾಳಾಗಿದ್ದು ಈಗ ಪುನರುಜ್ಜೀನವಗೊಳಿಸಲಾಗಿದೆ. ದೇವಾಲಯದ ಮೇಲ್ಭಾಗದಲ್ಲಿ ಅಷ್ಟ ದಿಕ್ಪಾಲಕರು, ನವಗ್ರಹಗಳು ಹಾಗೂ ಸಪ್ತ ಮಾತೃಕೆಯರ ವಿಗ್ರಹಗಳು ಮನಮೋಹಕವಾಗಿವೆ.

ದೇವಾಲಯದ ಮಧ್ಯ ಭಾಗದಲ್ಲಿ ಶಿವನ ಒಡ್ಡೋಲಗ, ವಿಷ್ಣು ಮಲಗಿರುವ ಭಂಗಿ ಅನೇಕ ಪುರಾಣಗಳನ್ನು ಪ್ರಸ್ತುತಪಡಿಸುವ ಶಿಲ್ಪಗಳಿವೆ. ಬಳಪದ ಕಲ್ಲಿನಿಂದ ಕೆತ್ತಿರುವ ಕಂಬಗಳ ಮೇಲಿನ ಸೂಕ್ಷ್ಮ ಕೆತ್ತನೆಗಳು ನೋಡುಗರ ಮನಸೆಳೆಯುತ್ತವೆ. ಇದು ಈ ಊರಿನ ಗ್ರಾಮ ದೇವರಾಗಿದ್ದು ನಿತ್ಯ ಪೂಜೆ ನಡೆಯುತ್ತದೆ.

ನೋಡಬಹುದಾದ ಇತರೆ ಸ್ಥಳಗಳು:- ೧೦ ಅಡಿ ಎತ್ತರದ ಆಂಜನೇಯ ವಿಗ್ರಹದ ದೇವಾಲಯ ಹಾಗೂ ಮೂರು ಕಿ.ಮೀ ದೂರದಲ್ಲಿರುವ ಮೇಲನಹಳ್ಳೀಯ ಕಲ್ಲೇಶ್ವರ ದೇವಾಲಯ.

 

ಮಲ್ಲೇಶ್ವರ

ಜಿಲ್ಲೆಯಿಂದ ೪೨ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಕಡೂರಿನ ಪೂರ್ವಕ್ಕೆ ೨ ಕಿ.ಮೀ ದೂರದಲ್ಲಿ ಮರವಂಜಿ ರಸ್ತೆಯಲ್ಲಿ ಈ ಕ್ಷೇತ್ರವಿದೆ. ರಾಮಾಯಣ ಕಾಲದಲ್ಲಿ ಮಲ್ಲಾಸುರ ಎಂಬ ರಾಕ್ಷಸನು ಇಲ್ಲಿನ ಜನರನ್ನು ಹಿಂಸಿಸುತ್ತಿದ್ದನೆಂದು ವನವಾಸದಲ್ಲಿದ್ದ ರಾಮನು ಈ ಕಡೆಗೆ ಬಂದಾಗ ಮಲ್ಲಾಸುರನನ್ನು ಸಂಹಾರ ಮಾಡಿದ್ದರಿಂದ ಮಲ್ಲೇಶ್ವರ ಎಂಬ ಹೆಸರು ಬಂದಿತೆಂಬ ಪ್ರತೀತಿಯಿದೆ. ಕ್ರಿ.ಶ. ೧೧೨೫ ರ ಶಿಲಾ ಶಾಸನದಂತೆ ಈ ಗ್ರಾಮದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಾಲಯದಿಂದಾಗಿ ಈ ಗ್ರಾಮಕ್ಕೆ ಈ ಹೆಸರು ಬಂದಿದ್ದು ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ಈ ಗ್ರಾಮವು ಬ್ರಹ್ಮಪುರವೆಂಬ ಅಗ್ರಹಾರವಾಗಿತ್ತೆಂದು ತಿಳಿದುಬರುತ್ತದೆ.

ಈಗ ಮಲ್ಲೇಶ್ವರದ ಪ್ರಧಾನ ಆಕರ್ಷಣೆ ಸ್ವರ್ಣಾಂಬ ದೇವಾಲಯ. ಈ ದೇವರಿಗೆ ಹೊನ್ನಾಳಮ್ಮ, ಮಲ್ಲೇಶ್ವರದಮ್ಮ ಎಂಬ ಹೆಸರುಗಳಿದ್ದು, ರಾಜ್ಯದಾದ್ಯಂತ ಶ್ರದ್ದಾ ಭಕ್ತಿಯಿಂದ ನಡೆದುಕೊಳ್ಳುವ ಸಹಸ್ರಾರು ಭಕ್ತರಿದ್ದಾರೆ. ಚೈತ್ರ ಮಾಸದಲ್ಲಿ ೮ ದಿನಗಳ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವವು ನಡೆಯುತ್ತದೆ. ದೇವಾಲಯದ ಪಕ್ಕದಲ್ಲಿ ಹೊಸದಾಗಿ ನಿರ್ಮಿಸಿರುವ ಪುಷ್ಕರಣಿ, ವಿಸ್ತಾರವಾದ ಉದ್ಯಾನವನವಿದ್ದು, ಪ್ರವಾಸಿಗರಿಗೆ ಮುದ ನೀಡುತ್ತದೆ.

 

ಹೇಮಗಿರಿ ಬೆಟ್ಟ

ಜಿಲ್ಲೆಯಿಂದ ೫೬ ಕಿ.ಮೀ.
ತಾಲ್ಲೂಕಿನಿಂದ ೧೬ ಕಿ.ಮೀ.


ಕಡೂರಿನಿಂದ ಸುಮಾರು ೧೬ ಕಿ.ಮೀ. ದೂರದಲ್ಲಿರುವ ಈ ಗ್ರಾಮದ ಮೊದಲನೇ ಹೆಸರು ಹೇಮಾವತಿ ಪಟ್ಟಣ. ಈಗಲೂ ಬೆಟ್ಟದ ಎಡಭಾಗದಲ್ಲಿ ಹಾಳೂರಿನ ನಿವೇಶನ, ದೇವಾಲಯಗಳನ್ನು ನೋಡಬಹುದು. ವಿಷ್ಣುಸಮುದ್ರ ಅಗ್ರಹಾರ ಎಂದು ಕರೆಯಲ್ಪಡುತ್ತಿದ್ದ ಈ ಗ್ರಾಮಕ್ಕೆ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನು ಒಂದು ಕೆರೆಯನ್ನು ಕಟ್ಟಿಸಿದ್ದು ವಿಷ್ಣುಸಮುದ್ರ ಎಂದು ಹೆಸರಾಗಿದೆ. ಕೆರೆಯ ಪಕ್ಕದಲ್ಲಿರುವ ಹೇಮಗಿರಿ ಬೆಟ್ಟ ಎಂದು ಕರೆಯುತ್ತಾರೆ. ಬೆಟ್ಟದ ಮೇಲೊಂದು ಈಶ್ವರ ದೇಗುಲವಿದ್ದು, ಇದು ಉದ್ಭವ ಮೂರ್ತಿಯಾಗಿದೆ. ಇದು ದಕ್ಷಿಣಾಭಿಮುಖವಾಗಿರುವುದರಿಂದ ಇದನ್ನು ದಕ್ಷಿಣಮೂರ್ತಿ ಎಂದು ಕರೆಯುವರು. ಇದರ ಪಕ್ಕದಲ್ಲಿ ವೀರಭದ್ರ, ಜನಾರ್ಧನ, ಶಂಭುಲಿಂಗೇಶ್ವರ ಮೂರ್ತಿಗಳಿರುವ ದೇವಾಲಯಗಳಿವೆ. ಪ್ರತಿ ವರ್ಷ ಜನವರಿ ತಿಂಗಳಲ್ಲಿ ಇಲ್ಲಿ ವಿಶೇಷವಾದ ಚಾತ್ರೆ ನಡೆಯುತ್ತದೆ.

 

ಕೆ. ಬಿದರೆ ಶ್ರೀ ದೊಡ್ಡಜ್ಜಯ್ಯನವರ ಮಠ:

ಜಿಲ್ಲೆಯಿಂದ ೭೦ ಕಿ.ಮೀ
ತಾಲ್ಲೂಕಿನಿಂದ ೩೦ ಕಿ.ಮೀ

ಕಡೂರಿನಿಂದ ೩೦ ಕಿ.ಮೀ ದೂರದಲ್ಲಿರುವ ಈ ಊರು ಸಿಂಗಟಗೆರೆ ಹೋಬಳಿಗೆ ಸೇರಿದೆ. ಪವಾಡ ಪುರುಷರಾದ ಶ್ರೀ ದೊಡ್ಡಜ್ಜಯ್ಯನವರಿಂದ ಸ್ಥಾಪಿತವಾದ ವೀರಶೈವ ಮಠವಿದ್ದು, ರಾಜ್ಯದಾದ್ಯಂತ ಅನೇಕ ಭಕ್ತರನ್ನು ಹೊಂದಿದೆ. ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ ಜಾತ್ರೆ ಹಾಗೂ ಧಾರ್ಮಿಕ ಸಭೆಗಳು ಇಲ್ಲಿ ನಡೆಯುತ್ತವೆ.

 

ಯಗಟಿಪುರ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ

ಜಿಲ್ಲೆಯಿಂದ ೬೦ ಕಿ.ಮೀ
ತಾಲ್ಲೂಕಿನಿಂದ ೨೦ ಕಿ.ಮೀ

ಕಡೂರಿನಿಂದ ೨೦ ಕಿ.ಮೀ. ದೂರದಲ್ಲಿರುವ ಈ ಗ್ರಾಮ ಹೋಬಳಿ ಕೇಂದ್ರವಾದ ಯಗಟಿಯಿಂದ ೨ ಕಿ.ಮೀ ದೂರದಲ್ಲಿದೆ. ವೇದಾವತಿ ನದಿಯ ದಡದ ಬಂಡೆಯ ಮೇಲೆ ಉದ್ಭವಿಸಿರುವ ಶ್ರೀ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿದೆ. ೧೬ ನೇ ಶತಮಾನದಲ್ಲಿ ಈ ಗ್ರಾಮಕ್ಕೆ ಅರನತೋಳಲು ಎಂಬ ಹೆಸರಿದ್ದು, ಈ ಗ್ರಾಮದ ಮುಖ್ಯಸ್ಥನಾಗಿದ್ದ ವೀರಶೆಟ್ಟಿಯ ಮನೆಯಲ್ಲಿ ಅಪಾರ ದನಗಳು ಪ್ರತಿ ದಿನ ಚೆನ್ನಾಗಿ ಹಾಲು ಕೊಡುತ್ತಿದ್ದ ಕಪಿಲೆ ಎಂಬ ಹಸುವು ಹಾಲು ಕೊಡದಿದ್ದಾಗ ದನಗಾಯಿಯಾದ ಬೀರನು ಕಪಿಲೆಯನ್ನು ಹಿಂಬಾಲಿಸಿ ಹೋದಾಗ ಮುಳ್ಳು ಪೊದೆಯ ನಡುವೆ ಇದ್ದ ಹುತ್ತದ ಮೇಲೆ ಹಾಲು ಕರೆಯುತ್ತಿರುವುದನ್ನು ನೋಡಿ ತನ್ನ ಒಡೆಯನಾದ ವೀರಶೆಟ್ಟಿಯು ಪೂಜಾ ಸಾಮಾಗ್ರಿಗಳೊಂದಿಗೆ ಬಂದು ಹುತ್ತಕ್ಕೆ ಪೂಜೆ ಮಾಡಿ ಹುತ್ತವನ್ನು ಅಗೆದಾಗ ಹುತ್ತದ ಕೆಳಗೆ ಬಂಡೆಯ ಮೇಲೆ ಮಂಡಲ ಹಾಕಿ ಮಲಗಿದ್ದ ಕಾಳಿಂಗ ಸರ್ಪವು ಸರ-ಸರನೆ ಹರಿದು ಹೋಗುತ್ತದೆ. ಸರ್ಪ ಮಲಗಿದ್ದ ಸ್ಥಳದಲ್ಲಿ ಉದ್ಭವ ಲಿಂಗ ಹಾಗೂ ಎಡ ಪಕ್ಕದಲ್ಲಿ ಗಂಗೆಯ ಕೊಳವಿದ್ದು, ವೀರಶೆಟ್ಟಿಗೆ ಶಿವನು ಪ್ರಸನ್ನನಾಗಿ ದರ್ಶನವನ್ನು ನೀಡಿದ್ದರಿಂದ ಸಂತೋಷದಿಂದ ಇಲ್ಲಿ ಒಂದು ದೇವಾಲಯವನ್ನು ಕಟ್ಟಿಸುತ್ತಾನೆ. ಹೊಯ್ಸಳ ದೊರೆಯಾಗಿದ್ದ ವೀರಬಲ್ಲಾಳನಿಗೆ ಮಕ್ಕಳಾಗದೇ ಇದ್ದ ಕಾರಣದಿಂದ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಯ ಕೀರ್ತಿಯನ್ನು ಕೇಳಿ ಇಲ್ಲಿಗೆ ಬಂದು ಹರಕೆಯ ಪೂಜೆ ಮಾಡಿದ್ದರಿಂದ ಗಂಡು ಮಗುವಾದ ಪ್ರಯುಕ್ತ ಈಗಿರುವ ವಿಶಾಲವಾದ ದೇವಾಲಯವನ್ನು ಕಟ್ಟಿಸಿಕೊಟ್ಟಿದ್ದಾಗಿ ತಿಳಿದು ಬರುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ೫ ದಿನಗಳ ಕಾಲ ಜಾತ್ರೆ ನಡೆಯುತ್ತಿದ್ದು ಮಾಘ ನಕ್ಷತ್ರದ ದಿನ ಶಿವಲಿಂಗದ ಪಕ್ಕದಲ್ಲಿರುವ ಗಂಗೆಯ ಕೊಳದಿಂದ ಗಂಗೋದ್ಭವವಾಗುವುದು ಅಚ್ಚರಿ ಹಾಗೂ ವೈಶಿಷ್ಟವಾಗಿದೆ.

ದೇವಾಲಯದ ಸುತ್ತಲಿರುವ ಕಲ್ಲಿನ ಪೌಳಿ ಹಾಲಾಗಿದ್ದುದನ್ನು ಈಗ ಪ್ರಾಚ್ಯವಸ್ತು ಇಲಾಖೆಯಿಂದ ಪುನರುಜ್ಜೀವನಗೊಳಿಸಲಾಗಿದೆ ಹಾಗೂ ದೇವಾಲಯದ ಪ್ರವೇಶ ದ್ವಾರದಲ್ಲಿ ವಿಮಾನ ಗೋಪುರ ಸಹಿತ ಮಹಾ ದ್ವಾರವನ್ನು ನಿರ್ಮಿಸಲಾಗಿದೆ. ಈಗ ಪೂರ್ವಕ್ಕೆ ಬೃಹತ್ ಶಿವನ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ.

ನೋಡಬಹುದಾದ ಸ್ಥಳಗಳು: ವೇದಾವತಿ ನದಿಯಲ್ಲಿರುವ ಬಸವನ ತೀರ್ಥ, ಯಗಟಿಯ ಆಂಜನೇಯ ಸ್ವಾಮಿ ದೇವಾಲಯ.

 

ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯ

ಜಿಲ್ಲೆಯಿಂದ ೬೫ ಕಿ.ಮೀ
ತಾಲ್ಲೂಕಿನಿಂದ ೨೫ ಕಿ.ಮೀ

ಕಡೂರಿನಿಂದ ಬೆಲಗೂರು ಮಾರ್ಗ ೨೫ ಕಿ.ಮೀ ದೂರದಲ್ಲಿದೆ. ಶ್ರೀ ಕ್ಷೇತ್ರವು ಬೃಹತ್ ಏಕಶಿಲಾ ಬೆಟ್ಟದ ಮೇಲಿದೆ. ದೇವಾಲಯದ ಸುತ್ತಮುತ್ತ ವಿವಿಧ ಸಣ್ಣಪುಟ್ಟ ದೇವಾಲಯಗಳ ಸಮುಚ್ಚಯವಿದೆ. ಕಲ್ಯಾಣ ಮಂಟಪ, ನವಗ್ರಹ ಮಂದಿರ ಪ್ರವಾಸಿಗರಿಗೆ ತಂಗಲು ಸಮುದಾಯ ಭವನವಿದೆ.