ಕನ್ನಡದ ಪ್ರಮುಖ ಕವಿಗಳಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಒಬ್ಬರು. ಇವರು ೧೯೦೪ ರಲ್ಲಿ ಕಡೆಂಗೋಡ್ಲು ಎಂಬ ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ೧೯೨೦ ರಲ್ಲಿ ಗಾಂದೀಜಿಯವರಿಂದ ಪ್ರಭಾವಿತರಾಗಿ ಶಿಕ್ಷಣಕ್ಕೆ ವಿದಾಯ ಹೇಳಿ ಸ್ವಯಂ ಸೇವಕರಾಗಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಗುಜರಾತ್ ವಿದ್ಯಾಪೀಠದ ವಿದ್ಯಾರ್ಥಿಯಾದರು. ಮಂಗಳೂರಿನ ತಿಲಕ ವಿದ್ಯಾಲಯವೆಂಬ ರಾಷ್ಟ್ರೀಯ ಪಾಠಶಾಲೆಯಲ್ಲಿ, ಸೇಂಟ್ ಅಗ್ನಸ್ ಎಂಬ ಮಹಿಳಾ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ನವಯುಗ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ, ರಾಷ್ಟ್ರಬಂಧು, ವಾರಪತ್ರಿಕೆಯನ್ನು ಇವರೇ ಪ್ರಾರಂಬಿಸಿದರು. ‘ಘೋಷಯಾತ್ರೆ, ಮೊದಲ ಕಾವ್ಯ ಸಂಕಲನ ಮಹಾಭಾರತದ ಕಥೆಯನ್ನು ಒಳಗೊಂಡಿದ್ದರೂ ಪರಕೀಯ ಹಿಡಿತಕ್ಕೆ ಒಳಗಾದ ಭಾರತೀಯರ ಸ್ಥಿತಿಯನ್ನು ಇಲ್ಲಿ ಚಿತ್ರಿಸಲಾಗಿದೆ. ಗಾಂದಿ ಸಂದೇಶ ಕಾವ್ಯ ಸಂಕಲನ ಗಾಂದೀಜಿಯವರ ಅಸಹಕಾರ ಚಳುವಳಿಯನ್ನು ಆರಂಬಿಸಿದ ವಸ್ತುವನ್ನು ಒಳಗೊಂಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ವಸ್ತುವುಳ್ಳ ಮತ್ತೊಂದು ಕಾವ್ಯ.ವಸ್ತ್ರಾಪಹರಣ, ಕುಣಿಕೆ, ಕವನ ಸಂಕಲನ ಬಿಕ್ಷುಕ, ಮಸಣ, ಹಳೆಯ ನೆನಪು, ಮೊದಲಾದ ಉತ್ತಮ ಕವನಗಳನ್ನು ಒಳಗೊಂಡಿದೆ.

ನಲ್ಮೆ,ಇವರ ಮುಖ್ಯವಾದ ಕಾವ್ಯ ಸಂಕಲನ. ಇದರಲ್ಲಿರುವ ಮಾದ್ರಿಯ ಚಿತೆ, ಹೊನ್ನಿಯ ಮದುವೆ, ಮುರಲೀನಾದ,- ಈ ಮೂರು ಕಥನ ಕವನಗಳು ಇವರ ಕಾವ್ಯ ಪ್ರತಿಭೆಗೆ ಸಾಕ್ಷಿಯಾಗಿವೆ. ಒಲಿದವರು ಒಂದಾಗಲು ಸಾಧ್ಯವಾಗದೆ ಮರಣದಲ್ಲಿ ಒಂದಾಗುವುದು, ಗಂಡು-ಹೆಣ್ಣಿನ ವಿರಹ, ಆದರ್ಶ ಪ್ರೇಮವನ್ನು ಇಲ್ಲಿ ಚರ್ಚಿಸಲಾಗಿದೆ. ಹಣ್ಣುಕಾಯಿ ಸಂಕಲನದಲ್ಲಿರುವ ಕವನಗಳ ವಸ್ತು-ದೇಶಪ್ರೇಮ, ಬದುಕಿನ ನೋವು, ಸೌಂದರ್ಯದ ಶೋಧ ಪತ್ರಪುಷ್ಪ, ಕವನ ಸಂಕಲನದಲ್ಲಿನ ಭಾಷಾಪ್ರೌಡಿಮೆ ಉಷೆ, ನಾಟಕದಲ್ಲಿ ಉಷಾ-ಅನಿರುದ್ಧರ, ಪ್ರಣಯ ಕಥೆಯಿದೆ ಹಿಡಂಬಿಯನ್ನು ಕೇಂದ್ರಪಾತ್ರವನ್ನಾಗಿಸಿಕೊಂಡ ನಾಟಕ ಹಿಡಂಬಿ, ದ್ರೋಣನು ತನ್ನ ಶಿಷ್ಯ ಅರ್ಜುನನಿಂದ ದ್ರುಪದನನ್ನು ಸೆರೆ ಹಿಡಿಯುವುದು, ಗುರುದಕ್ಷಿಣೆ, ನಾಟಕದ ಕಥಾವಸ್ತು ಯಜ್ಞಕುಂಡ, ಐತಿಹಾಸಿಕ ನಾಟಕದಲ್ಲಿ ರಾಜ ಪರ್ವತಸಿಂಗನ ಮಗಳು ಲೀಲಾವತಿ ತನ್ನ ಮೇಲೆ ಕಾಮಜ್ವಾಲೆ ಬೀರಿದ ಮಹಮ್ಮದ್ ಷಾನನ್ನು ಬಲಿ ತೆಗೆದುಕೊಳ್ಳುತ್ತಾಳೆ. ಮಹಾಯೋಗಿ ನಾಟಕ ಮಹಾಭಾರತದಲ್ಲಿ ಬರುವ ಮಾಂಡವ್ಯನ ಕಥೆಯನ್ನು ಹೊಂದಿದೆ. ವಿರಾಮ, ಒಂದು ಸಾಮಾಜಿಕ ನಾಟಕವಾಗಿದೆ. ಅಜಾತ ಶತ್ರು, ಕೃಷ್ಣನ ಪ್ರೇರಣೆಯಿಂದ ಕರ್ತವ್ಯ ಮಗ್ನನಾಗುವ ಯುದಿಷ್ಟಿರನ ದೃಶ್ಯವುಳ್ಳ ಏಕಾಂಕ ನಾಟಕ.

ನೈತಿಕ ಉದ್ದೇಶದ ಹಿನ್ನೆಲೆಯಿರುವ ಕಾದಂಬರಿ ಧೂಮಕೇತು. ದೇವತಾಮನುಷ್ಯ,ಕಾದಂಬರಿಯಲ್ಲಿ ಹಣ ಮತ್ತು ಸಾಮಾಜಿಕ ಸಂಭಂಧಗಳ ನಡುವೆ ಇರುವ ಕೊಂಡಿಯನ್ನು ಚಿತ್ರಿಸಲಾಗಿದೆ. ಲೋಕದ ಕಣ್ಣು, ಕಾದಂಬರಿಯಲ್ಲಿ ಕಾಮ ಬದುಕಿನ ನೋವಿಗೆ ಕಾರಣವಾಗುವುದನ್ನು ಹೇಳಲಾಗಿದೆ.

ಹಿಂದಿನ ಕಥೆಗಳು, ಗಾಜಿನ ಬಳೆ, ದುಡಿಯುವ ಮಕ್ಕಳು-ಇವರ ಕಥಾ ಸಂಕಲನಗಳು. ವಸ್ತುಕ-ವರ್ಣಕ, ನಾರಾಣಪ್ಪನ ಪ್ರತಿಭೆ, ಕವಿಕಾವ್ಯ ತತ್ವ ಮೀಮಾಂಸೆ, ಮುಂತಾದ ಇವರ ಮುಖ್ಯ ವಿಮರ್ಶಾ ಲೇಖನಗಳು. ವಾಜ್ಞ್ಮಯ ತಪಸ್ಸು, ವಿಮರ್ಶಾ ಕೃತಿಯಲ್ಲಿದೆ. ೧೯೬೫ ರಲ್ಲಿ ಕಾರವಾರದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಶಕ್ತವಾದ ಕೆಲವು ಕಥನ ಕವನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಕಡೆಂಗೋಡ್ಲು ಶಂಕರಭಟ್ಟರು ೧೯೬೮ ರಲ್ಲಿ ನಿಧನರಾದರು. ಇವರ ಇನ್ನೂ ಅನೇಕ ಕವನಗಳು, ಲೇಖನಗಳು ಅಪ್ರಕಟಿತವಾಗಿಯೇ ಉಳಿದಿವೆ.