ಉಳಿವು-ಅಳಿವಿನ ಪರಿ ಅದೆಂತೋ, ಬಲು ವಿಚಿತ್ರವೆ ಪ್ರಿಯಸಖೀ !
ನನ್ನ ಒಲವಿನ ವ್ರಜ ಕಿಶೋರನು
ಹೋದಮೇಲಿನ್ನೆಂತು ಜೀವವ
ನಾನು ಧರಿಸಿರಬಲ್ಲೆನು ?
ನನ್ನ ಮೀರಿದ ಚೆಲುವೆಯರ ಜೊತೆಗೆನ್ನ ಮಾಧವ ಹೋದನು
ಚೆಲುವೆಯಲ್ಲದ ನನ್ನನೀ ತೆರ ಅವನು ಮರೆತೇಬಿಟ್ಟನು !

ಯಾರು ಊಹಿಸಬಲ್ಲರೇ ಸಖಿ-ಯಾರು ಊಹಿಸಬಲ್ಲರು ?
ದಿವ್ಯ ಪ್ರೇಮಿಯು ಕೂಡ ಈ ತೆರ,
ಬಾಹ್ಯರೂಪಕೆ ಮಾರುಹೋಗುತ
ತಿರುಕನಂದದಿ ನಡೆವನೆಂಬುದ ಯಾರು ಊಹಿಸಬಲ್ಲರು ?

ಅವನು ಇಂಥವನೆಂದು ಮೊದಲೇ ನಾನು ಕಾಣದೆ ಹೋದೆನು.
ಅವನ ರೂಪಕೆ ಮರುಳುಗೊಂಡೆನು, ಅವನ ಪಾದವ ನನ್ನ ಎದೆಯಲಿ
ಹಿಡಿವ ಒಂದೇ ಒಂದು ಬಯಕೆಯ
ನಾನು ಪೋಷಿಸಿಕೊಂಡೆನು !

ಕಡೆಗೆ ಉಳಿದಿಹುದೊಂದೆ ದಾರಿಯು : ಯಮುನೆಯಲಿ ನಾ ಮುಳುಗುವೆ;
ಅಥವ ಗರಳವ ಕುಡಿಯುವೆ,
ಇಲ್ಲದಿರಲೀ ತಮಾಲ ತರುವೊಳು
ಬಳ್ಳಿಯೊಂದನು ಉರುಳುಗೈದೀ
ನನ್ನ ಜೀವವ ತೊರೆಯುವೆ.

ಕಡೆಗೆ, ಓ ಸಖಿ, ಇನಿತು ಯತ್ನಗಳೆಲ್ಲ ನನ್ನನು ಕೊಲದಿರೆ,
ಶ್ಯಾಮ ನಾಮವ ಜಪಿಸಿ ಜಪಿಸೀ ಕಡೆಗೆ ಹರಣವ ನೀಗುವೆ !