ಕನ್ನಡದಲ್ಲಿ ಪ್ರಕಟವಾದ ಆಯಾ ವರ್ಷದ ಒಟ್ಟು ಸಾಹಿತ್ಯವನ್ನು ಮೌಲ್ಯಮಾಪನ ಮಾಡುವ ಅಗತ್ಯ ಮತ್ತು ಮಹತ್ವವನ್ನು ಮನಗಂಡು ಪ್ರೊ. ಜಿ.ಎಸ್. ಶಿವರುದ್ರನವರು ‘ಸಾಹಿತ್ಯ ವಾರ್ಷಿಕ’ವೆಂಬ ಯೋಜನೆಯನ್ನು ರೂಪಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ತಮ್ಮ ಅಧ್ಯಾಪಕ ಸಹೋದ್ಯೋಗಿಗಳಿಂದ ವಿಮರ್ಶೆ ಬರೆಸಿ ಒಂದು ದಶಕದವರೆಗೆ (೧೯೭೨ ರಿಂದ ೧೯೮೨) ನಿರಂತರವಾಗಿ ಪ್ರತಿವರ್ಷ ‘ಸಾಹಿತ್ಯ ವಾರ್ಷಿಕ’ವನ್ನು ಹೊರತಂದರು. ಆ ಅವಧಿಯ ಕಕ್ಷೆಯೊಳಗೆ ನಾನು ಬರೆದ ಸಮೀಕ್ಷೆಗಳು ಇಲ್ಲಿವೆ. ಸಾಹಿತ್ಯದ ವಿವಿಧ ಪ್ರಕಾರದ, ಮುಖ್ಯವಾಗಿ ಕಾದಂಬರಿ ಮತ್ತು ಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದ ಈ ಬರೆಹಗಳಿಗೆ ಪ್ರೇರಣೆಯಿತ್ತ, ಈ ರಾಷ್ಟ್ರಕವಿಯಾಗಿರುವ ಪ್ರೊ. ಜಿ.ಎಸ್. ಶಿವರುದ್ರಪ್ಪ ಅವರ ವಿಶ್ವಾಸವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಆಗಾಗ ಸಮಕಾಲೀನ ಸಂಘರ್ಷಗಳಿಗೆ ಮುಖಾಮುಖಿಯಾಗಿ ನಿಂತು ಪ್ರತಿಕ್ರಿಯಿಸಿದ ಕೆಲವು ಸಾಹಿತ್ಯಕ ಮಾದರಿಗಳಿಗೆ ಇಲ್ಲಿ ಜಾಗವಿತ್ತಿದ್ದೇನೆ. ನಾಡುನುಡಿ ನೆಲಜಲ ಕುರಿತ ಪ್ರಶ್ನೆಗಳು ಎದುರಾದಾಗ ಇಂಥ ಬರೆಹಗಳಿಗೆ ಇರುವ ಪ್ರಸ್ತುತತೆ ಮನವರಿಕೆ ಆಗುತ್ತದೆ. ಅದರಿಂದ ಸಾಂಸ್ಕೃತಿಕ ದಾಖಲೆಯಾಗಿ ಇವನ್ನು ಪರಿಭಾವಿಸಬೇಕು.

ಈ ಸಂಚಯದಲ್ಲಿ ಸೇರಿರುವ ಲೇಖನಗಳು ಇದೇ ಮೊದಲ ಸಲ ಒಂದು ಪುಸ್ತಕ ರೂಪದಲ್ಲಿ ಹೊರಬರುತ್ತಿವೆ. ಅಲ್ಲದೆ ಇದುವರೆಗೆ ಹೊರಬಂದಿರುವ ನನ್ನ ಯಾವ ಗ್ರಂಥದಲ್ಲೂ ಸೇರ್ಪಡೆಯಾಗದಿದ್ದ ವಿಮರ್ಶೆಗಳೂ ಬಿಡಿ ಬರೆಹಗಳೂ ಇಲ್ಲಿವೆ. ಮುಖ್ಯವಾಗಿ ನನ್ನ ೩೫, ೩೬, ೩೭ನೆಯ ವಯಸ್ಸಿನಲ್ಲಿ, ೧೯೭೩-೭೫ನೆಯ ಇಸವಿಯಲ್ಲಿ ಬರೆದ ಬರೆಹಗಳಿಗೆ ಸಿಂಹಪಾಲು ಸಿಕ್ಕಿದೆ. ಹರೆಯದ ಹುರುಪಿನಲ್ಲಿ ಹೊರಹೊಮ್ಮಿದ ಅಂದಿನ ವಿಮರ್ಶೆಗಳಲ್ಲಿ, ದೋಷಗಳನ್ನು ಸ್ಪಷ್ಟವಾಗಿ ಹೇಳುವುದಕ್ಕೆ, ಯಾವ ಹಿಂಜರಿಕೆ ಮುಲಾಜು ಇರಲಿಲ್ಲ. ಮೂವತ್ತೈದು ವರ್ಷಗಳ ಹಿಂದೆ ಬರೆದಂತೆ ಈಗ ಇಂದು ಬರೆಯಲಾರೆ! ವಿಮಶೆಯಲ್ಲೂ ವಿನಯ ಎಂಬುದಕ್ಕೆ ತಿಲಾಂಜಲಿ ಕೊಡಬಾರದೆಂಬ ವಿವೇಕಕ್ಕೆ ಈಗ ಮೇಲುಗೈ. ಒಂದು ಕೃತಿಯ ತಪ್ಪುಗಳನ್ನು ತೋರಿಸುವಾಗ ದುರ್ಬೀನು ಹಿಡಿದು ನೋಡಬೇಕಾಗಿಲ್ಲ; ಅಬ್ಬರದಿಂದ ಲೇಖನಿಯನ್ನೇ ಖಡ್ಗದಂತೆ ಝಳಪಿಸುತ್ತ, ಈಟಿಯಂತೆ ತಿವಿಯುತ್ತ, ಗದೆಯಂತೆ ಚಚ್ಚುತ್ತ, ಗರಗಸದಂತೆ ಸೀಳುತ್ತ ಹೋಗಬೇಕಾದ್ದಿಲ್ಲ, ವಸ್ತು ನಿಷ್ಠ ವಿಮರ್ಶೆಯನ್ನು ಒಪ್ಪಿತ ಪರಿಪ್ರೇಕ್ಷ್ಯದಲ್ಲಿಯೇ ಗಂಭೀರವಾಗಿ (ವಿ)ನಯವಾಗಿ ಮಂಡಿಸಬಹುದು ಎಂಬುದು ಈಗಿನ ನನ್ನ ಮಾಗಿದ ಮನೋಧರ್ಮ. ಒಟ್ಟಾರೆ, ಇಲ್ಲಿನ ಬರೆಹಗಳಿಗೆ ಸಮಾಜೋ-ಸಾಂಸ್ಕೃತಿಕ, ಸಾಹಿತ್ಯದ ಹಾಗೂ ಚಾರಿತ್ರಿಕ ಮಹತ್ವಗಳಿವೆ.

ಸುವರ್ಣ ಕರ್ನಾಟಕ ಸವಿನೆನಪಿನ ಸಂದರ್ಭಕ್ಕಾಗಿ ಹೊರ ತರುತ್ತಿರುವ ಪುಸ್ತಕ ಮಾಲೆಯಲ್ಲಿ ಇದನ್ನು ಪೋಣಿಸಲು ಅವಕಾಶ ಕಲ್ಪಿಸಿದ ಕುಲಪತಿ ಪ್ರೊ. ಬಿ.ಎ. ವಿವೇಕರೈ ಹಾಗೂ ಪ್ರಸಾರಾಂಗದ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಒತ್ತಾರೆ ಹಾಗೂ ಪ್ರೇರಣೆ ಅವಿಸ್ಮರಣೀಯ.

ಪ್ರೊ. ಹಂಪ ನಾಗರಾಜಯ್ಯ