ಸಂ: ಜಿ.ಎಸ್. ಭಟ್ಟ, ಕೆ.ವೈ. ಶಿವಕುಮಾರ್. ಮಿತ್ರ ಪ್ರಕಾಶನ ಕುವೆಂಪುನಗರ, ಮೈಸೂರು-೯ : ಬೆಲೆ ೧೨ ರೂ. : ೧೯೮೨.

ಇದು ೧೦ ಲೇಖನಗಳ ಸಂಕಲನ, ಇವುಗಳಲ್ಲಿ ‘ಬದುಕು ಬರೆಹ’ ಎಂಬ ಮೊದಲನೆಯ ಲೇಖನ ಬಿಟ್ಟು ಉಳಿದ ೯ ಲೇಖನಗಳು ಕಾರಂತರ ಒಂದೊಂದು ಕೃತಿಯನ್ನು ವಿವೇಚಿಸಿರುವ ಲೇಖನಗಳು. ಸಂಪಾದಕರು ಕೇವಲ ೯ ಸಾಲಿನ ಅರಿಕೆಯಲ್ಲಿ “ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಡಾ|| ಶಿವರಾಮ ಕಾರಂತ ಅವರ ಕೃತಿಗಳ ವಿಮರ್ಶಾ ಸಂಕಲನವನ್ನು ಓದುಗರ ಮುಂದಿಡಲು ನಮಗೆ ತುಂಬಾ ಸಂತೋಷವಾಗುತ್ತದೆ. ಕಾರಂತರ ಆಯ್ದ ಕೆಲವು ಕೃತಿಗಳನ್ನಷ್ಟೇ ವಿಮರ್ಶಿಸಿದ ಸಂಕಲನವಿದು. ಈ ಕೃತಿಯನ್ನು ಹೊರತರಲು ಅಗತ್ಯವಾದ ಲೇಖನಗಳನ್ನು ಸಕಾಲದಲ್ಲಿ ಒದಗಿಸಿದ ವಿದ್ವಾಂಸರುಗಳಿಗೆ ನಮ್ಮ ಕೃತಜ್ಞತೆಗಳು” ಎಂದು ತಿಳಿಸಿದ್ದಾರೆ.

ಈ ಅರಿಕೆ ಓದುಗರನ್ನು ತುಂಬಾ ತಪ್ಪುದಾರಿಗೆ ಎಳೆಯುವ, ದಿಕ್ಕು ತಪ್ಪಿಸುವ ರೀತಿಯಲ್ಲಿದೆ. ಒಟ್ಟಿನಲ್ಲಿ ಜವಾಬ್ದಾರಿಯಿಂದ ಬರೆದ ಸಂಪಾದಕೀಯವಲ್ಲ. ಈ ಸಂಕಲನದಲ್ಲಿ ಅಳವಡಿಸಿರುವ ಲೇಖನಗಳು ಈ ಸಂಕಲನಕ್ಕೆಂದೇ ಹೊಸದಾಗಿ ಬರೆದಿದ್ದ ಅಥವಾ ಬಹಳ ಹಿಂದೆಯೇ ಪ್ರಕಟವಾಗಿದ್ದುದನ್ನು ಇಲ್ಲಿ ಆಯ್ದುಕೊಳ್ಳಲಾಗಿದೆಯೇ ಎಂಬುದರ ಬಗ್ಗೆ ಸ್ವಷ್ಟವಾದ ತಿಳಿವಳಿಕೆ ಕೊಟ್ಟಿಲ್ಲ. ಹೀಗೆ ನಿರ್ದಿಷ್ಟ ಗುರಿ ಉದ್ದೇಶವಿಲ್ಲದ ಆಯೋಜನಾಬದ್ಧ ಸಂಕಲನದಿಂದ ಸಂಪಾದಕರು ನಿರ್ವಹಿಸಬೇಕಾದ ಹೊಣೆಯಿಂದ ಜಾರಿಕೊಂಡಂತಾಗಿದೆ. ಇದು ಯಾರೂ ಮಾಡಬಹುದಾದ ಬಹು ಸುಲಭ ಕಾರ್ಯ, ಇದಕ್ಕೆ ಹೊಣೆಗಾರಿಕೆ ಬೇಕಿಲ್ಲ, ಹಣ ಇದ್ದರೆ ಸಾಕು ಎಂಬಂತೆ ಆಶ್ರಯ ಸಂಪಾದನ ಕಾರ್ಯವಾಗಬಾರದು, ಇದರಲ್ಲಿನ ವ್ಯವಸ್ಥಿತ ಯೋಜನಾಬದ್ಧ ಸಂಘಟನೆ ಇರುವಂತೆ, ಓದುಗರಿಗೆ ಅವಶ್ಯ ಒದಗಿಸಬೇಕಾದ ಉಪಯುಕ್ತ ಮಾಹಿತಿಗಳನ್ನು ನೀಡಿ ನೆರವಾಗುವಂತೆ ಶ್ರಮ ಪಡಬೇಕು. ಉದಾಹರಣೆಗೆ ಈ ಸಂಕಲನದ ಮೊದಲನೆಯ ಲೇಖನವಾದ ‘ಬದುಕು ಬರೆಹ’ ಎಂಬುದು ಅದೇ ಲೇಖಕರ ಅದೇ ಹೆಸರಿನ ಪರಿಷ್ಕಾರದ ಮುದ್ರಣದ (೧೯೮೨) ಪುಟ ೧ ರಿಂದ ೨೧ರ ವರೆಗೆ ಇರುವ ಭಾಗವಾಗಿದೆ. ಆದರಂತೆ ಇಲ್ಲಿನ ಇನ್ನೂ ಕೆಲವು ಲೇಖನಗಳು ಬೇರೆ ಕಡೆ ಈಗಾಗಾಲೇ ಪ್ರಕಟವಾಗಿವೆ. ಹೀಗಾಗಿ ಇಲ್ಲಿನ ಲೇಖನಗಳ ಪ್ರಕಟಿತ ವರ್ಷ, ಗ್ರಂಥ ಅಥವಾ ಪತ್ರಿಕೆ, ಆಕರ, -ಇವುಗಳ ನಿರ್ಧೇಶನವಿಲ್ಲ. ಇವು ಎಲ್ಲಿಂದ ಎತ್ತಿಕೊಂಡಿದೆಯೆಂದು ತಿಳಿಯುವುದಿಲ್ಲವಾದ್ದರಿಂದ ಚಾರಿತ್ರಿಕ ಸಮೀಕ್ಷೆಗೆ ಬೇಕಾದ ಪೂರ್ವ ಸಿದ್ಧತೆಯನ್ನು ಒದಗಿಸಿಕೊಡುವುದಿಲ್ಲ.

ಇಂತಹ ಸಂಕಲನಗಳಿಗೆ ತನ್ನದೇ ಆದ ಪ್ರಯೋಜನಗಳೂ ಇರುತ್ತವೆ. ಆದರಂತೆ ಇದಕ್ಕೆ ಸ್ವಾಗತವಿದ್ದೇ ಇದೆ. ಅಷ್ಟೇ ಅಲ್ಲ. ಮಹತ್ವವೂ ಇದೆ. ಒಬ್ಬ ಲೇಖಕನ ಕೃತಿಗಳನ್ನು ಅವು ಎಲ್ಲ ಶ್ರೇಷ್ಠವಿರದಿರಬಹುದು (ಯಾವುದೋ ಲೇಖಕನ ಎಲ್ಲ ಕೃತಿಗಳು ಶ್ರೇಷ್ಠವಾಗಿರುವುದು ಸಾಧ್ಯವೂ ಇಲ್ಲ), ಒಬ್ಬನೆ ವಿಮರ್ಶಕ ವಿಮರ್ಶೆ ಒರೆಗಲ್ಲಿಗೆ ಉಜ್ಜಿನೋಡುವುದಕ್ಕೂ ಒಂದೊಂದು ಕೃತಿಯನ್ನೂ ಒಬ್ಬೊಬ್ಬ ವಿಮರ್ಶಕ ವಿವೇಚಿಸಿ ನೋಡುವುದಕ್ಕೂ ಅಂತರವಿರುತ್ತದೆ. ಹಲವು ವ್ಯಕ್ತಿಗಳ ವಿಭಿನ್ನ ದೃಷ್ಟಿಯಲ್ಲಿ ಅಂತರವಿರುತ್ತದೆ. ಹಲವು ವ್ಯಕ್ತಿಗಳ ವಿಭಿನ್ನ ದೃಷ್ಟಿ ಕೋನದ ವಿವೇಚನೆಯನ್ನು ಸಮಷ್ಟಿಯಾಗಿ ಸಂಕಲಿಸಿಕೊಂಡಾಗ ಒಬ್ಬ ಲೇಖಕನ ಸಿದ್ಧಿ ಸಾಧನೆಗಳ ಉತ್ತುಂಗ ಶೃಂಗಗಳ ಜತೆಗೆ ಕಮರಿಕಂದರ ಪ್ರಪಾತ ಕೊರಚಲುಗಳನ್ನೂ ಕಾಣುವುದು ಸಾಧ್ಯ. ಮುಂದಿನ ಮುದ್ರಣದಲ್ಲಿ ನನ್ನ ತರುಣ ಮಿತ್ರರಾದ ಸಂಪಾದಕರು ಈ ಸಂಗತಿಗಳಿಗೆ ಗಮನ ಕೊಡುತ್ತಾರೆ ಎಂದು ಆಶಿಸುತ್ತೇನೆ.

ಇಲ್ಲಿನ ಕೆಲವು ವಿಮರ್ಶಾತ್ಮಕ ಲೇಖನಗಳು ಮಾಮೂಲಿನಂತೆ ಪ್ರಶಂಸಾತ್ಮಕ ಸ್ತರದಲ್ಲಿ ಉದ್ಗಾರ ವಾಚಕಗಳಲ್ಲಿ ವಿರಮಿಸದೆ ಒಂದು ಹೆಜ್ಜೆ ಮುಂದೆ ಹೋಗಿ ವಸ್ತುವಿನ ನಿಷ್ಠ ಬರವಣಿಗೆಗೆ ತೊಡಗಿಸಿಕೊಂಡಿರುವುದು ಪರಿಶೀಲಿಸಬೇಕಾದ ಸಂಗತಿ.

ಈ ದೃಷ್ಟಿಯಿಂದ ಮರಳಿ ಮಣ್ಣಿಗೆ’, ಅಪೂರ್ವ ಪಶ್ಚಿಮಮತ್ತು ಅಳಿದನ ಮೇಲೆ’ –ಈ ಮೂರು ಕೃತಿಗಳನ್ನು ಕುರಿತು ಬರೆದ ಮೂರು ಲೇಖನಗಳು ತುಂಬ ಮೌಲಿಕವಾಗಿವೆ. ‘ಮರಳಿ ಮಣ್ಣಿಗೆ’ ಕಾದಂಬರಿಯನ್ನು ಮೂರು ದಶಕಗಳ ಹಿಂದೆಯೇ ವಿಮರ್ಶಿಸಿ ಡಾ|| ಡಿ. ಎಲ್. ನರಸಿಂಹಾಚಾರ್ಯರು ಈ ಕಾದಂಬರಿಯ ಗುಣ-ದೋಷ ಎರಡನ್ನೂ ಪರಿಶೀಲಿಸಿದ್ದಾರೆ. ಕೃತಿಯ ವಿಶಿಷ್ಟತೆಯನ್ನು ಸುಮಾರು ೧೮ ಪುಟಗಳವರೆಗೆ ತೋರಿಸಿದ್ದು ಆದಾದ ಮೇಲೆ ತಮ್ಮ ಲೇಖನವನ್ನು ಮುಗಿಸುವ ಮುನ್ನ ಇವರು ಬರೆದಿರುವುದು “ಕೆಲವು ಕೊರತೆಗಳನ್ನು ಅವರಿಗೆ ನಿವೇದಿಸಬೇಕಾಗಿದೆ. ಕಾದಂಬರಿಯ ಮೊದಲ ಅರ್ಧ ಅಲಸಗ ಮನೆಯಾಗಿದ್ದು ಮುಂದಿನ ಭಾಗದಲ್ಲಿ ಬರುವ ಕೆಲವು ಸಂದರ್ಭಗಳ ಅಪೇಕ್ಷಣೀಯವಾದ ವಿವರಣೆಗಳು ಮಾಯವಾಗಿ ಆತುರದಿಂದ ಮುಕ್ತಾಯವಾಗಿರುವಂತೆ ಅನ್ನಿಸುತ್ತದೆ. ಕಥೆಯನ್ನು ಓದುವಾಗ ಕೆಲವು ಬೇಸರದ ನಿಮಿಷಗಳನ್ನು ಕಳೆಯಬೇಕಾಗುತ್ತದೆ. ಒಂದೇ ವಿಷಯವನ್ನು ಕುರಿತ ವರ್ಣನೆ ಕೆಲವು ಸಲ ಬಂದಿದೆ. ಪಾರ್ವತಿ, ಸತ್ಯಭಾಮೆ, ಲಚ್ಚ ಮುಂತಾದವರ ಮದುವೆಗಳ ವರ್ಣನೆ ಒಂದು ಮಾದರಿಗೆ – ಈ ಮೂರು ಮದುವೆಗಳಲ್ಲೂ ಇದೇ ಮಳೆ ಅದೇ ದಿಬ್ಬಣ, ಅದೇ ಗರ್ನಾಲುಗಳ ಹಾರಾಟ, ಅದೇ ಕೋಲಾಹಲ, ಇವುಗಳಲ್ಲಿ ಪ್ರಮುಖವಾದ ಒಂದಕ್ಕೆ ಅರ್ಧದ ಪ್ರಮಾಣವು ಕಡಿಮೆಯಾಗಿ ಬೇಸರವೂ ತಿಳಿಯಾಗುತ್ತಿತ್ತು. ಗುರಿಕಾರರ ಮದುವೆಗೆ ಶೀನನು ಹೊರಟು ರಾಜೀವಿ ಚಂದಿರಯರೊಡನೆ ಸಲಿಗೆ ಬೆಳೆಸಿದ ಸಂಗತಿಯನ್ನು ಸುಮಾರು ಒಂದು ಪ್ರಕರಣದಲ್ಲೆ ಹೇಳಿದ. ಕಥೆ ಸ್ವಾರಸ್ಯವಾಗಿದ್ದರೂ ಅದೆಲ್ಲ ಕಾದಂಬರಿಗೆ ಬೇಕೆ ಎನ್ನಿಸುತ್ತದೆ. ಶಿವನ ಸ್ವಭಾವ ನಿರೂಪಣೆಗೆ ಇದು ಅವಶ್ಯವಾದರೂ ಇಷ್ಟು ವಿಸ್ತಾರ ಅತಿ ಎನ್ನಬೇಕಾಗಿದೆ. ಪಡುಕರಾವಳಿಯ ಹಳ್ಳಿಯ ಜನರ ಬದುಕಿನ ವೃತ್ತಿಗಳ ನಾನಾ ಅಂಶದ ವಿವರಣೆಗಳು ಇಲ್ಲಿ ಕೊಟ್ಟಿರುವಷ್ಟೆಲ್ಲ ಕಾದಂಬರಿಗೆ ಬೇಕೆ? ಮೇಲಿಂದ ಮೇಲೆ ಉಳುವ ನೆಡುವ ನೀರು ಹಾಯಿಸುವ ಕೆತ್ತುವ ಹೆಣೆಯುವ ನಾನಾ ಕಸುಬಿನ ವಿವರಗಳು ಬರುವುದರಿಂದ ಇದೇನು ಸಮಾಜ ವಿಜ್ಞಾನವೂ ಎಂಬ ಸಂದೇಹ ಬರುವಂತಿದೆ. ಮುಂದೆ ಬರುವ ಕಥೆಯನ್ನು ಸವಿಯಲು ಉತ್ತುಕವಾಗಿರುವ ಮನಸ್ಸಿಗೆ ಇವೆಲ್ಲ ಬೇಸರಗೊಳಿಸುತ್ತವೆ.” ಇದರ ಮುಂದಿನ ಸಾಲಡೆ “ಇವು ಅಲ್ಲದ ವಿಷಯಗಳು, ಕಾದಂಬರಿಯ ಒಟ್ಟಂದದಲ್ಲಿ ಇವು ಮರೆತುಹೋಗುತ್ತವೆ” ಎಂದು ಅದರ ಬೆನ್ನಿಗೆ ಬರೆಯುವುದನ್ನೂ ಮರೆಯುವುದಿಲ್ಲ.

‘ಅಪೂರ್ವ ಪಶ್ಚಿಮ’ ಪ್ರವಾಸ ಕಥನ ಕೃತಿಯನ್ನು ವಿಮರ್ಶಾತ್ಮಕವಾಗಿ ಸಮೀಕ್ಷಿಸಿರುವ ಡಾ|| ಪ್ರಭುಶಂಕರ ಅವರು ಆ ಪುಸ್ತಕದಲ್ಲಿರುವ ಅನವಶ್ಯಕ ಭಾವಪರಾವಶತೆಯನ್ನು ಮತ್ತು ಸ್ವದೇಶ ಹಾಗೂ ಭಾರತೀಯ ವಿಚಾರವಾಗಿ ಬರುವ ತೀರಾ ತಾತ್ಸಾರದ ಅಭಿಪ್ರಾಯವನ್ನು ಸಕ್ರಿಯವಾಗಿ ಅಲ್ಲಗಳೆದಿದ್ದಾರೆ. “ಅಪೂರ್ವ ಪಶ್ಚಿಮ’ದಲ್ಲಿ ಅದರ ಲೇಖಕರು ವಿದೇಶದ ಪೋಲೀಸಿನವರಲ್ಲಿ ಗುಣ, ವಿನಯ, ಮರ್ಯಾದೆ ನೀಡುವ ನೆರವು – ಕುರಿತು ಮೆಚ್ಚುಗೆಯ ಮಾತುಗಳನ್ನು ಹೇಳಿ” ಈ ಸೌಜನ್ಯವನ್ನು ನಮ್ಮ ನಾಡಿನಲ್ಲಿ ಕಾಣುತ್ತೇವೆಯೆ? ಇಂತಹ ಗುಣ ಯುರೋಪಿನಲ್ಲಿ ತೀರ ಸಾಮಾನ್ಯ” ಎಂದು ಸಾರಾಸಗಟು ತೀರ್ಪು ಕೊಟ್ಟುಬಿಟ್ಟಿದ್ದಾರೆ. “ಲಂಚಕ್ಕೆ ಕೈಚಾಚುವ ಬುದ್ಧಿ ತನ್ನ ಬಂಧುಬಾಂಧವರಿಗೆ ಸಾರ್ವಜನಿಕ ಅಧಿಕಾರ ಒದಗಿಸುವ ದುರ್ನೀತಿ ವಿದೇಶದಲ್ಲಿ ಇಲ್ಲ” ವೆಂದು ಪ್ರಶಂಸಿಸಿದ್ದಾರೆ.

ಇಂತಹ ಹೇಳಿಕೆಗಳನ್ನು ಡಾ|| ಪ್ರಭುಶಂಕರ ಅವರು ಬಹಳ ಸೂಕ್ಷ್ಮವಾಗಿ ವಿಶ್ಲೇಷಿಸಿ ಅದರಲ್ಲಿರುವ ಸುಳ್ಳನ್ನು ತೋರಿಸಿಕೊಟ್ಟಿದ್ದಾರೆ. ನಮ್ಮಲ್ಲೂ ಪ್ರಾಮಾಣಿಕರಾದವರು ಲಕ್ಷ ಸಂಖ್ಯೆಯಲ್ಲಿ ಇದ್ದಾರೆ. ಪಶ್ಚಿಮದಲ್ಲೂ ಅಪ್ರಾಮಾಣಿಕರಾದವರು ಲಕ್ಷ ಸಂಖ್ಯೆಯಲ್ಲಿ ಇದ್ದಾರೆ ಎಂಬುದಾಗಿ ಪ್ರಭುಶಂಕರರು ಉದಾಹರಣೆಯಿತ್ತು ಸ್ವಷ್ಟಪಡಿಸಿ ಕಾರಂತರ ಹೇಳಿಕೆಯಲ್ಲಿರುವ ಪೊಳ್ಳನ್ನು ಬಯಲಿಗೆಳೆದಿದ್ದಾರೆ. ಇದೇ ರೀತಿ ಪಶ್ಚಿಮದ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂಬ ಪ್ರಶಂಸೆಯ ಹಿಂದೆ ನಮ್ಮ ದೇಶದ ವಿದ್ವಾಂಸರ ವಿಚಾರವಾಗಿ ವ್ಯಕ್ತವಾಗುವ ಅಸಡ್ಡೆಯನ್ನು ಪ್ರಸ್ತಾಪಿಸಿ, ಪ್ರಭುಶಂಕರರು ಈ ವಿಚಾರದಲ್ಲೂ ‘ಅಪೂರ್ವ ಪಶ್ಚಿಮದ ಲೇಖಕರು ಅಪೂರ್ವ ರೀತಿಯಲ್ಲಿ ಮುಗ್ಗರಿಸಿರುವುದನ್ನು ಸೋದಾಹರಣವಾಗಿ ಕನ್ನಡಿ ಹಿಡಿದು ತೋರಿಸಿದ್ದಾರೆ. “ನಮ್ಮ ದೇಶದಲ್ಲೂ ಪಾಂಡಿತ್ಯದಲ್ಲಿ, ಪ್ರತಿಬೆಯಲ್ಲಿ ಕಷ್ಟ ಪಟ್ಟು, ಪಟ್ಟು ಹಿಡಿದು ಕೆಲಸ ಮಾಡುವುದರಲ್ಲಿ ಪಶ್ಚಿಮದ ವಿದ್ವಾಂಸರಿಗೆ ಹೆಗಲೆಣೆಯಾಗುವ ಸಾಮರ್ಥ್ಯದ ವಿದ್ವಾಂಸರು ಪ್ರಾಚೀನ ಕಾಲದಲ್ಲೂ ಇದ್ದರು, ನಮ್ಮ ಕಾಲದಲ್ಲೂ ಇದ್ದಾರೆ ಎಂಬುದನ್ನು ಮರೆಯಬಾರದು, ಹಿಂದೆ ವೇದಗಳನ್ನು ಉಪನಿಷತ್ತು ಅರಣ್ಯಗಳನ್ನು, ಗೀತ ಮುಂತಾದುವನ್ನು ಪಾಠಗಳನ್ನು ಮಾತ್ರವಲ್ಲದೆ ಮೇಲಣ ಭಾಷ್ಯ, ಕೃತಿಗಳನ್ನು ಕೇವಲ ನೆನಪಿನ ಸಹಾಯದಿಂದಲೇ ತಲೆಮಾರು ತಲೆಮಾರುಗಳ ಕಾಲ ರಕ್ಷಿಸಿಕೊಂಡು ಬಂದವರು ಈ ದೇಶದ ಜನ ಎಂಬುದನ್ನು ಮರೆಯಬಾರದು” (ಪುಟ ೧೨೬) ಎಂಬ ಪ್ರಭುಶಂಕರರ ಅಭಿಪ್ರಾಯವನ್ನು ಧಾರಾಳವಾಗಿ ಅನುಮೋದಿಸಬಹುದು.

ಈ ಸಂಕಲನದ ಲೇಖನಗಳಲ್ಲಿ ಕಡೆಯದಾದರೂ ಅತ್ಯುತ್ತಮವಾದದ್ದು ‘ಅಳಿದ ಮೇಲೆ’ ಕಾದಂಬರಿಯ ಸಮೀಕ್ಷೆ ಡಿ.ವಿ.ಕೆ. ಮೂರ್ತಿ ಅವರು ಎರಡು ದಶಕಗಳ ಹಿಂದೆ ಪುಸ್ತಕ ಪ್ರಪಂಚದಲ್ಲಿ ನಗ್ಯ ಸತ್ಯ, ನಟ ಸೌರ್ವಭೌಮ ಕಾದಂಬರಿಗಳನ್ನು ಕುರಿತು ಮಾಡಿದ ವಿಮರ್ಶೆ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಪ್ರೇಮಚಂದ್’ ವಿಚಾರ ಸಂಕಿರಣ’ದ ಪುಸ್ತಕದಲ್ಲಿ ಅಚ್ಚಾಗಿರುವ ‘ಭಾರತೀಯ ಸಾಹಿತ್ಯದಲ್ಲಿ ವಾಸ್ತವತೆಯ ಪ್ರಜ್ಞೆ’ ಎಂಬ ಲೆಖನಗಳನ್ನು ಬರೆದ ಮೇಲೆ ಹೀಗೆ ಬಿಡುವಾಗ ಕುಳಿತು ಒಂದು ಕೃತಿಯನ್ನು ಸಾವಯವವಾಗಿ ವಿಮರ್ಶಿಸುತ್ತಿರುವುದು ‘ಅಳಿದ ಮೇಲೆ’ ಕಾದಂಬರಿ ಕುರಿತೇ ಎಂದು ಕಾಣುತ್ತದೆ. ಈ ಹಿನ್ನೆಲೆಯನ್ನು ಕೊಡುತ್ತಿರುವ ಉದ್ದೇಶ ಡಿ.ವಿ.ಕೆ, ಮೂರ್ತಿ ಅವರಿಗೆ ಇರುವ ಅಪೂರ್ವ ಸಿದ್ಧತೆ ಹಾಗೂ ವೈಕ್ತಿಕ ಸ್ನೇಹವನ್ನು ಸಾಹಿತ್ಯ ಚರ್ಚೆಯನ್ನು ಮಿಶ್ರಮಾಡದೆ ವಸ್ತುನಿಷ್ಠವಾಗಿ ಕೃತಿಯನ್ನೂ ಕೃತಿಕಾರರನ್ನೂ ಕುರಿತು ಹೇಳುವ ರೀತಿ.

‘ಅಳಿದ ಮೇಲೆ’ ಕಾದಂಬರಿಯನ್ನು ಅವರು ಸುಮಾರು ೨೮ ಪುಟಗಳ ಲೇಖನದಲ್ಲಿ ವಿವಿಧ ಮಗ್ಗಲುಗಳಿಂದ ವಿಮರ್ಶಿಸಿ ಸಾರತರವಾದ ಆರೋಗ್ಯಕರವಾದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಲೇಖಕನ ಜವಾಬ್ದಾರಿ, ಲೇಖಕನಿಗಿರುವ ಸ್ವಾತಂತ್ರ್ಯ – ಈ ಎರಡನ್ನೂ ಪ್ರಸ್ತಾಪಿಸಿದ್ದಾರೆ, ಪ್ರಕೃತಿ, ಮಾನವ, ಸಾಮಾಜಿಕ ವ್ಯವಸ್ಥೆ, ಮಾನವ ನಿರ್ಮಿತ ಮೌಲ್ಯಗಳು -ಇವನ್ನು ಭೂಮಿಕೆಯಾಗಿ ಮೊದಲ ಆರು ಪುಟಗಳಲ್ಲಿ ಕೊಟ್ಟು ಆದಾದಮೇಲೆ ‘;ಅಳಿದ ಮೇಲೆ’ ಕಾದಂಬರಿಯನ್ನು ಹಿಂಡಿ ನೋಡಿದ್ದಾರೆ. ಕಾದಂಬರಿಯ ಪಾತ್ರಗಳನ್ನೂ ಹೇಳೀಕೆಗಳನ್ನು ಸಮಯೋಚಿತವಾಗಿ ಉದಾಹರಿಸಿದ್ದು. ಅದರ ಅರೆಕೊರೆಗಳನ್ನು ಈ ಲೇಖಕನ ಪಾರದರ್ಶಕದಂತೆ ತೋರಿಸುತ್ತದೆ. ಯಶವಂತನ ವಿಕೃತವಾದ ಮಮಕಾರದ ಭೂತಗನ್ನಡಿಯಲ್ಲಿ ಸಮುದಾಯದ ನೀತಿ ನಿಯತ್ತುಗಳು ಕ್ಷುಲ್ಲಕವಾಗುತ್ತದೆ. ಆತನ ದುರಭಿಮಾನನ ಸ್ವಾನುಕಂಪ ಎಷ್ಟು ಅಪಾಯಕಾರಿ ಎಂಬುದನ್ನು ಈ ಲೇಖನ ಚೆನ್ನಾಗಿ ಕನ್ನಡಿ ಹಿಡಿದು ತೋರಿಸುತ್ತದೆ. “ಸೃಜನ ಶೀಲ ಮಾನವೀಯ ಆಶಯವೇ ಕಲೆಗೆ ಆಧಾರ, ಅದಕ್ಕೆ ಅಪವಾದವೇ ಆಗಿರುವ ಈ ಅಮಾನವೀಕರಣದ ಪ್ರಕರಣದಲ್ಲಿ ಕಲೆಯನ್ನರಸುತ್ತ ಹೋಗುವುದು. ಬೆಳಕಿನಲ್ಲಿ ಕತ್ತಲನ್ನರಸುತ್ತ ಹೋದಂತೆ, ಅಸಂಗತವೇ ಆಗಿದೆ” – ಡಿ.ವಿ.ಕೆ. ಮೂರ್ತಿ ಅವರ ಈ ಮಾತುಗಳು ಮತ್ತೆ ಮತ್ತೆ ಓದುಗರನ್ನು ಚಿಂತನಶೀಲರನ್ನಾಗಿ ಮಾಡುತ್ತವೆ. ಕಾರಂತರ ಕೃತಿಗಳನ್ನು ಈ ಲೇಖಕನದ ಮಶಾಲು ಹಿಡಿದು ನೋಡಬೇಕು.

ಹಳಗನ್ನಡ ಸಾಹಿತ್ಯ ಕೃತಿಗಳನ್ನು ಕುರಿತು, ವಿಮರ್ಶಕರು, ಪುನರ್ ಮೌಲ್ಯವಾಗಬೇಕೆಂದು ಹೇಳುವುದುಂಟು. ಈ ಮಾತು ಹಳಗನ್ನಡ ಸಾಹಿತ್ಯಕ್ಕೆ ಅಲ್ಲದೆ ಹೊಸಗನ್ನಡ ಸಾಃಇತ್ಯಕ್ಕೂ ಅನ್ವಯಿಸುತ್ತದೆ. ಅನೇಕ ಸಾಹಿತ್ಯ ಕೃತಿಗಳ ಪುನರ್ ಮೌಲ್ಯ ಅವಶ್ಯ ಆಗಬೇಕಾಗಿದೆ. ಹಾಗೆ ಬೆಲೆ ಕಟ್ಟುವ ಒಂದು ಗಟ್ಟಿ ಪ್ರಯತ್ನ ಮೂರ್ತಿಯವರ ಲೇಖನದಲ್ಲಿ ಇದೆ. ಈ ವಿಮರ್ಶೆಯ ಬೆಳಕಿನಲ್ಲಿ ಕಾರಂತರ ಕಾದಂಬರಿಗಳನ್ನು ಪುನರ್ ಪರಿಶೀಲಿಸುವ ಅಗತ್ಯ ಹೆಚ್ಚಾಗಿದೆ. ವ್ಯಕ್ತಿನಿಷ್ಠ ವಿಮರ್ಶೆಯ ದಾರಿಯಿಂದ ದೂರ ಸರಿದು ಶುದ್ಧ ವಸ್ತು ನಿಷ್ಠವಾದ, ಕೇವಲ ಕೃತಿ ನಿಷ್ಠವಾದ, ಸತ್ಯ ಬದ್ಧ ಮುಕ್ತ ವಿಮರ್ಶೆ (ಕಡಮೆ ಪ್ರಮಾಣದಲ್ಲಿಯೇ ಆಗಲಿ) ನಮ್ಮಲ್ಲಿ ಇದೆ ಎಂಬುದಕ್ಕೆ ಈ ಲೇಖನ ದಿವ್ಯ ಸಾಕ್ಷಿ. ನಮ್ಮ ಸಮಕಾಲೀನ ಸಾಹಿತಿಗಳಲ್ಲಿ ಗಣ್ಯರೆಂದು ಪರಿಗಣಿತರಾದ ಕಾರಂತರ ಕೃತಿಗಳ ವಿಮರ್ಶೆಗೆ ಈ ಲೇಖನ ಒಂದು ದಿವ್ಯತಿರುವು ಕೊಡುತ್ತದೆ.

(ಕನ್ನಡ ನುಡಿ, ಮಾರ್ಚಿ , ೧೯೮೩)

* * *