ಕೆದಂಬಾಡಿ ಜತ್ತಪ್ಪರೈ (೧೯೧೧) ಕೃಷಿಕರು. ಕೃಷಿಯ ಜತೆಗೆ ಸಾಹಿತ್ಯ ವ್ಯವಸಾಯವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಹೊಲದಲ್ಲಿ ಉತ್ತು ಬಿತ್ತು ಬೆಳೆ ತೆಗೆದಂತೆ ಕೋವಿಗೆ ಮುದ್ದು ತುಂಬಿ ಕಾಡಿಗೆ ನುಗ್ಗಿ ಭರ್ಜರಿ ಬೇಟೆಯಾಡಿ ಮೆಚ್ಚುಗೆಗಳಿಸಿದವರು. ಈ ಬೇಟೆಗಾರ – ರೈತ, ತನ್ನ ವೃದ್ಧಾಪ್ಯದಲ್ಲಿ ಬರಹಗಾರನಾಗುವ ಸಹಾಸಕ್ಕೆ ಕೈ ಹಾಕಿದರು. ಅರವತ್ತರ ವಯಸ್ಸಿನಲ್ಲಿ ಪಷ್ಟ್ಯಬ್ದಿಮಾಡಿಸಿಕೊಂಡು, ಸಾಧ್ಯವಾದರೆ ಪಿಂಚಣಿಯನ್ನೂ ಮಾಸಾಶನವನ್ನೂ ಪಡೆದು ನಿವೃತ್ತಿ ಜೀವನ ನಡೆಸುವುದು ವಾಡಿಕೆ, ಕೆದಂಬಾಡಿ ಜತ್ತಪ್ಪ ರೈಗಳಿಗೆ ಇಂಥ ವಯಸ್ಸಿನಲ್ಲಿ ಒಮ್ಮೆಲೇ ಲೇಖಕನಾಗುವ ಮನಸ್ಸು ಹುಟ್ಟುದ್ದು ಒಂದು ಅಪೂರ್ವ ಆಕಸ್ಮಿಕ. ಅವರು ಬರವಣಿಗೆಗೆ ತೊಡಗಿದ್ದೂ ಕನ್ನಡದಲ್ಲಿ ಅಪರೂಪವಾದ ಬೇಟೆ ಸಾಹಿತ್ಯದಿಂದ ಸ್ವಾನುಭವವೇ ಅವರ ಬಂಡವಾಳ. ವಿಶ್ವವಿದ್ಯಾಲಯದ ಪದವಿ, ಸಾಹಿತಿಗಳ ಬೆಂಬಲ – ಇವು ಯಾವು ಇಲ್ಲದೆ ತನ್ನ ಅನುಭವವನ್ನು ಎರಕ ಹಾಕಿ ಬರೆದ ಅವರ ಚೊಚ್ಚಲ ಕೃತಿ ಬೇಟೆಯ ನೆನಪುಗಳುಕನ್ನಡದಲ್ಲಿ ಅಪೂರ್ವ ಕೃತಿಗಳ ಸಾಲಿಗೆ ಸೇರಿದೆ. ಒಂದೇ ದೀನದಲ್ಲಿ ಜತ್ತಪ್ಪ ರೈ ಸಾಹಿತ್ಯ ವಲಯದಲ್ಲಿ ಸೈ ಎನಿಸಿಕೊಂಡರು. ಈಡೊಂದು ಹುಲಿಯೆರಡು, ಬೇಟೆಯ ಉರುಳು – ಎಂಬ ಇನ್ನೆರಡು ಮೃಗಯಾ ಸಾಹಿತ್ಯ ಗ್ರಂಥಗಳನ್ನು ರಚಿಸಿದರು. ಅಲ್ಲಿಂದ ಮುಂದೆ ಜತ್ತಪ್ಪ ರೈ ತಮ್ಮ ಕಣ್ಣನ್ನು ತಾಯಿನುಡಿಯಾದ ತುಳು ಭಾಷೆಯತ್ತ ಹೊರಳಿಸಿದರು. ‘ತುಳುತ್ತ ಪೊರ್ಲು’ ಬಂದಿತು. ಅನಂತರ ಕನ್ನಡದ ಕೆಲವು ಹೆಸರಾಂತ ಕೃತಿಗಳನ್ನು ತುಳುವಿಗೆ ಅನುವಾದಿಸತೊಡಿಗಿದರು. ಚೋಮನ ದುಡಿ, ಯಮನ ಸೋಲು, ಅಜ್ಜಬಿರು, ತಿಗೆತ್ತ ಹನಿ – ಎಂಬ ಹೊತ್ತಗೆಗಳು ಒಂದರ ಬೆನ್ನ ಹಿಂದೆ ಒಂದರಂತೆ ಬಂದುವು. ಇದೀಗ ಕಳೆದ ತಿಂಗಳು ಮದಪ್ಪಾಂದಿ ನೆಂಪುಎಂಬ ದೊಡ್ಡ ಕಾದಂಬರಿ ಹೊರಬಂದಿದೆ. ಎರಡನೆಯ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಗವಾಗಿ ಜನವರಿ ೧೨ರಂದು ಶನಿವಾರ ಬೆಳಗ್ಗೆ ಮಂಗಳೂರಿನ ಪುರಭವನದಲ್ಲಿ ಈ ಹೊಸ ಭಾಷಾಂತರ ಪುಸ್ತಕವನ್ನು ಬಿಡುಗಡೆ ಮಾಡುವ ಸಂತೋಷ ನನ್ನ ಪಾಲಿಗೆ ಕಾದಿತ್ತು. ಜತ್ತಪ್ಪ ರೈಯವರ ಕೈಗೆ ನಾನು ಬಿಡುಗಡೆ ಮಾಡಿದ ಮೊದಲ ಪ್ರತಿಯನ್ನಿಟ್ಟು ಅಭಿನಂದನೆ ಹೇಳಿದೆ. ಅವರ ಅಗಲವಾದ ಮುಖ ಮತ್ತಷ್ಟು ಅಗಲವಾಗಿ ಅರಳಿದ್ದನ್ನು ನೋಡಿ ಆನಂದ ಪಟ್ಟೆ, ತುಂಬಿದ ಇಡೀ ಸಭೆ ಕರತಾಡನ ಮಾಡಿ ಜತ್ತಪ್ಪ ರೈ ವಿಚಾರವಾಗಿ ಅವರಿಗಿರುವ ಪ್ರೀತ್ಯಾದರಗಳನ್ನು ಪ್ರಕಟಿಸಿದರು.

‘ಮಂದಪ್ಪಾಂದಿ ನೆಂಪು’ ಎಂಬುದು ಕನ್ನಡದ ಹಿರಿಯ ಲೇಖಕರಾದ ನಿರಂಜನರ ಸುಪ್ರಸಿದ್ಧ ಕಾದಂಬರಿ ‘ಚಿರಸ್ಮರಣೆ’ಯ ತುಳು ಅನುವಾದ. ಸ್ವಲ್ಪ ಓದಿದೆ. ಮೊದಲಿನಷ್ಟು ನಿಕಟತೆ ಇಲ್ಲದ್ದರಿಂದ ಸಲೀಸಾಗಿ ಓದುವುದು ಆಗಲಿಲ್ಲ; ನಮ್ಮ ಮಹತ್ವದ ಲೇಖಕರಲ್ಲಿ ಒಬ್ಬರಾದ ನಿರಂಜನರ ಕೃತಿ ಸಮರ್ಪಕವಾಗಿ ತುಳುವಿಗೆ ಅನುವಾದ ಆಗಿದೆಯೊ ಇಲ್ಲವೊ ಎಂಬ ಅನುಮಾನ. ಎರಡು ದಿನ ಬಿಟ್ಟು ಅಲ್ಲಿನ ಇತರ ತುಳು ಬಲ್ಲ ಲೇಖಕರನ್ನು ತುಳು ಪುಸ್ತಕ ಹೇಗಿದೆ ಎಂದು ವಿಚಾರಿಸಿದೆ. ನಾನು ಕೇಳಿದ ಎಲ್ಲರ ಬಾಯಲ್ಲೂ ಒಂದೇ ಅಭಿಪ್ರಾಯ – ‘ಭಾಷಾಂತರ ಒಳ್ಳೆಯದಾಗಿದೆ, ಜತ್ತಪ್ಪ ರೈಗಳ ತುಳು ಜೇನುತುಪ್ಪ’. ಕೇಳಿ ಖುಷಿಯಾಯಿತು. ಕನ್ನಡದ ಉತ್ತರ ಕೃತಿಗಳನ್ನು ತುಳುವಿಗೆ ಸಮರ್ಥವಾಗಿ ಅನುವಾದ ಮಾಡುತ್ತಿರುವ ಜತ್ತಪ್ಪ ರೈಯವರನ್ನು ಕೃತಜ್ಞತೆಯಿಂದ ನೆನೆದೆ. ಇದು ಅವಶ್ಯ ಆಗಬೇಕಾದ ಕೆಲಸ. ಕೇವಲ ಅಮೆರಿಕ ಇಂಗ್ಲೆಂಡ್ ರಷಿಯಾದ ಕೃತಿಗಳೇ ಅಲ್ಲದೆ ನಮ್ಮ ನೆರೆ ಹೊರೆಯ ಭಾಷಾ ಕೃತಿಗಳಿಗೂ ಭಾಷಾಂತರದ ಭಾಗ್ಯ ಬರಬೇಕು. ಈ ಔಚಿತ್ಯ ಪ್ರಜ್ಞೆ ಸಾಹಿತ್ಯ ವಲಯದಲ್ಲಿ ಸಾಂಕ್ರಾಮಿಕವಾಗಿ ಹರಡಲಿ ಎಂದು ಹಾರೈಸುತ್ತೇನೆ. ಕಡಮೆ ಸಂಖ್ಯೆಯ ಓದುಗರಿರುವ ತುಳು ಭಾಷೆಯಲ್ಲಿ ಇದನ್ನು ಪ್ರಕಟಿಸುವ ಧೈರ್ಯ ಮಾಡಿದ ಸ್ಪಂದನ ಪ್ರಕಾಶನ (ಜಯನಗರ, ಬೆಂಗಳೂರು) ಒಳ್ಳೆಯ ಕೆಲಸ ಮಾಡಿದೆ.

* * *