ಪಂಪಕವಿ ಕನ್ನಡದ ಮೊದಲ ಮಹಾಕವಿ, ಕಾಲ ಮಾನದಿಂದ; ಮೊದಲನೆಯ ದರ್ಜೆಯ ಮಹಾಕವಿ, ಕಾವ್ಯ ಸತ್ವದಿಂದ. ಕನ್ನಡದ ಆದಿಕವಿಯಾಗಿರುವಂತೆ ಆದರ್ಶಕವಿಯೂ ಆಗಿರುವ ಪಂಪ ತನ್ನ ತರುವಾಯದ ಕವಿಗಳಿಗೆ ಸ್ಫೂರ್ತಿ ತುಂಬಿ ದಾರಿ ತೋರಿಸಿದ್ದಾನೆ. ಕನ್ನಡದ ಕವಿಗಳಿಗೆ ಪಂಪ ಹಾಕಿಕೊಟ್ಟಿದ್ದು ರಾಜಮಾರ್ಗ. ಕನ್ನಡವಿರಲಿ, ಬೇರೆ ಯಾವುದೇ ಭಾಷೆಯಲ್ಲೂ ಪಂಪನಂಥ ಕವಿಗಳು ಕಡಮೆಯೇ. ಪಂಪ ಎರಡು ಮಹಾಕಾವ್ಯಗಳನ್ನು ಉತ್ತರಾಧಿಕಾರಿಗಳಾದ ಕನ್ನಡಿಗರಿಗೆ ಬಿಟ್ಟು ಹೋಗಿದ್ದಾನೆ. ಒಂದು ವಿಕ್ರಮಾರ್ಜುನ ವಿಜಯಇನ್ನೊಂದು ಆದಿಪುರಾಣ’. ನಾವು ಎಂಥ ಶ್ರೇಷ್ಠ ತವನಿಧಿಯ ವಾರಸುದಾರರೆಂಬುದನ್ನು ನೆನೆಸಿಕೊಂಡರೆ ರೋಮಾಂಚನವಾಗುತ್ತದೆ. ಇಂದು ಜಾಗತಿಕ ಭಾಷೆಯಾಗಿರುವ ಇಂಗ್ಲಿಷ್ ಭಾಷೆ ಇನೂ ಗುಡ್ಡಗಾಡಿನವರ, ಶೈಶವಾವಸ್ಥೆಯ ಆದಿವಾಸಿಗಳ ತೊದಲು ಭಾಷೆಯಾಗುತ್ತಿದ್ದ ಕಾಲಕ್ಕೆ ಪಂಪ ಎರಡು ಮಹಾಕಾವ್ಯಗಳನ್ನು ಕನ್ನಡದಲ್ಲಿ ಬರೆದು ಒಮ್ಮೆಲೇ ಕನ್ನಡ ಭಾಷೆಗೆ ಹೈಮಾಚಲೋನ್ನತಿಯನ್ನು ತಂದುಕೊಟ್ಟು ಮಾಡಿರುವ ಮಹದುಪಕಾರ ತೀರಿಸಲು ಆಗುವಂತಹುದಲ್ಲ.

ಪಂಪ ಸೌಂದರ್ಯದೊಂದಿಗೆ ಮಾನವನ ಸ್ವಭಾವದ ಪಾತಳಿಗಳನ್ನು ಸೂಕ್ಷ್ಮವಾಗಿ ಗುರುತಿಸಿರುವ ಕವಿ. ಮನುಷ್ಯ ಜೀವನದ ಎತ್ತರದ ಮನಃಸ್ಥಿತಿಗಳನ್ನೂ ಅಧಃಪತನದ ಕತ್ತಲೆಯ ಚಿತ್ತಸ್ಥಿತಿಯನ್ನೂ ಸ್ಥಿತಪ್ರಜ್ಞನಂತೆ ಸಮಚಿತ್ತದಿಂದ ಪರಿಭಾವಿಸಿ ಚಿತ್ರಿಸಿರುವ ದೈತ್ಯ ಪ್ರತಿಭೆಯ ಕವಿ. ತನ್ನ ಕಾಲದ ಸತ್ಯಗಳನ್ನು ಮೌಲ್ಯಗಳನ್ನು ಉಜ್ಜಲ ಪ್ರತಿಮೆಗಳಲ್ಲಿ ಗರಿಗರಿಯಾಗಿ ಹಿಡಿದಿರಿಸಿರುವ ಸಮರ್ಥ ಕವಿ. ಕನ್ನಡದಲ್ಲಿ ಇಂಥ ನಿರ್ಭಿಡೆಯ ಹಿತವಾದ, ಮಿತವಾದ, ಪ್ರಸನ್ನವಾದ, ಅನಾಯಾಸವಾದ ಲಾಸ್ಯವಾಡುವ ಬರವಣಿಗೆ ಅಪರೂಪ, ತಾರಕದಲ್ಲೂಕೀರಲು ಧ್ವನಿ ಬರದಂತೆ ಸುಸ್ವರವನ್ನು ನುಡಿಸಬಲ್ಲ ಧೀಮಂತಕವಿ. ಭಾವಸಂಕ್ರಮಣದ ವಿವಿಧ ನೆಲೆಗಳನ್ನು ಮುಟ್ಟಿದವನು. ಮನಸ್ಸಿನ ಅರಿವು ಮರವೆಗಳ ಸಂಧ್ಯಾ ಕಾಲದ ಸೊಗಸನ್ನು ಕಂಡವನು. ಅಂತರಂಗಕ್ಕೆ ಅದ್ಭುತ ಒಳನೋಟ ಹರಿಸಿದವನು. ಅಲ್ಲಿ ಸಂಭವಿಸುವ ಏಳುಬೀಳಿನ ತರಂಗಲೀಲೆಯನ್ನು ನಿಚ್ಚಳವಾಗಿ ತೋರಿಸಬಲ್ಲವನು. ಸ್ಥಾಯೀಭಾವದ ನಡುವೆ ಬರುವ ಸಂಚಾರಿ ಭಾವಗಳನ್ನು, ದೈವೀಭಾವದ ಜತೆಗೆ ಹೆಜ್ಜೆ ಹಾಕುವ ರಾಕ್ಷಸಭಾವಗಳನ್ನು ಯಶಸ್ವಿಯಾಗಿ ದಾಖಲಿಸಿದವನು. ಒಟ್ಟಿನಲ್ಲಿ, ಒಂದು ಮಾತಿನಲ್ಲಿ ಹೇಳುವುದಾದರೆ ಪಂಪಕವಿ ಮಾನವ ಮನಸ್ಸಿನ ವಿಪುಲಾಕಾಶ ದರ್ಶನ ಮಾಡಿಸಿದ ಮೇರುಕವಿ. ಒಂದು ಕಾವ್ಯ ಮಹತ್ತರವಾದುದಾಗಿದ್ದರೆ, ಸತ್ವಶಾಲಿಯಾಗಿದ್ದರೆ ಎಲ್ಲ ತಲೆಮಾರಿನಲ್ಲಿಯೂ ಬೆಲೆ ಕಟ್ಟಿಸಿಕೊಳ್ಳುತ್ತಿರುತ್ತದೆ. ಸಾವಿರ ವರ್ಷವಾದರೂ ಪಂಪ ಸಾವು ಇರದ ಕವಿಯಾಗಿ ಅಮರನಾಗಿದ್ದಾನೆ, ಸಾವಿರದ ಅಮೃತಪುತ್ರನಾಗಿದ್ದಾನೆ. ಇಂದಿಗೂ ಆತ ಪ್ರಸ್ತುತನಾಗಿದ್ದಾನೆ. ಪಂಪನ ಕಾವ್ಯದ ಪ್ರೇರಣೆಗಳನ್ನು ಗುರುತಿಸಲಾಗಿದೆ. ಅವನ ಕಾವ್ಯದ ಪರಿಕಲ್ಪನೆಗಳೂ ಬಹುಮಟ್ಟಿಗೆ ನಮಗೆ ತಿಳಿದುಬಂದಿವೆ. ಪಂಪನ ಧೋರಣೆಗಳನ್ನು, ಅದರ ವಿವಿಧ ನೆಲೆಗಳನ್ನು ಈ ವಿಚಾರಸಂಕಿರಣದಲ್ಲಿ ಅರಿಯಬಹುದಾಗಿದೆ.

ಕನ್ನಡ ಕಾವ್ಯ ವಿಮರ್ಶೆಯಲ್ಲಿ, ಮುಖ್ಯವಾಗಿ ಸಾಹಿತ್ಯ ಚರಿತ್ರೆಯಲ್ಲಿ ಪಂಪಯುಗ ಸತ್ವಶಾಲಿಯಾದದ್ದು, ರೈಸ್‌ರವರು ಪಂಪನ ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಮೊದಲು ಮುದ್ರಿಸಿದರು, ಇಂಗ್ಲಿಷ್ ಪೀಠಿಕೆಯೊಂದಿಗೆ. ಅನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಮುದ್ರಣ ಬೆಳ್ಳಾವೆ ವೆಂಕಟನಾರಪ್ಪ ಅವರೊಡನೆ ಇನ್ನೂ ಕೆಲವು ವಿದ್ವಾಂಸರ ಸಹಕಾರದಿಂದ ಹೊರಬಂದಿತು. ಅದರ ಮೂರು ಮರುಮುದ್ರಣಗಳನ್ನು ಮೈಸೂರು ವಿಶ್ವವಿದ್ಯಾಲಯ ಮಾಡಿದೆ. ಪಂಪಭಾರತ ದೀಪಿಕೆಯನ್ನು ಆಚಾರ್ಯ ದೊಲನ ಹೊರತಂದ ಮೇಲೆ ಪಂಪನ ಕಾವ್ಯಾಭ್ಯಾಸಕ್ಕೊಂದು ಹೊಸ ಆಯಾಮ ದೊರೆಯಿತು. ಪಂಪಭಾರತವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಸಗನ್ನಡ ಗದ್ಯಾನುವಾದದೊಂದಿಗೆ ಅಚ್ಚುಹಾಕಿಸಿದ್ದೂ ಅರ್ಥಪೂರ್ಣವಾಗಿದೆ. ಮುಳಿಯ ತಿಮ್ಮಪ್ಪಯ್ಯನರ ನಾಡೋಜಪಂಪ (೧೯೩೮) ತರಯವಾಯ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ವತಿಯಿಂದ ಬೆಳಕು ಕಂಡಿರುವ ‘ಪಂಪ ಒಂದು ಅಧ್ಯಯನಇಲ್ಲಿ ಉಲ್ಲೇಖನೀಯ. ಇನ್ನೂ ಕೆಲವು ಪುಸ್ತಕಗಳೂ ಲೇಖನಗಳೂ ಈ ಪ್ರಮುಖ ಕವಿಯ ಕಾವ್ಯ ಸಂಬಂಧವಾಗಿ ಹೊರಬಿದ್ದಿವೆ. ಪಂಪನ ಸಹಸ್ರಮಾನೋತ್ಸವವನ್ನು ನಲವತ್ತು ವರ್ಷಗಳ ಹಿಂದೆ ಇಲ್ಲಿಗೆ ಸಮೀಪದ ಲಕ್ಷ್ಮೇಶ್ವರದಲ್ಲಿ ವೈಭವವಾಗಿ ಆಚರಿಸಿ ಒಂದು ಸ್ಮರಣ ಸಂಪುಟವನ್ನು ಪ್ರಕಟಿಸಿದ್ದುಂಟು. ಈಗ ಇದೇ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇಂಥ ಒಂದು ವಿಚಾರಸಂಕಿರಣವನ್ನು ಸ್ಥಳೀಯರ ಸಹಕಾರದೊಂದಿಗೆ ಹಮ್ಮಿಕೊಂಡಿರುವುದು ಅತ್ಯಂತ ಅರ್ಥಪೂರ್ಣವಾಗಿದೆ, ಔಚಿತ್ಯಪೂರ್ಣವಾಗಿದೆ. ಏಕೆಂದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಹೊಸಯುಗವನ್ನು ಉದ್ಘಾಟಿಸದ ಪಂಪನ ತಾಯಿ ಈ ಅಣ್ಣಿಗೆರಿಯ ಜೋಯಿಸ ಸಿಂಘನ ಮೊಮ್ಮಗಳಾದ ಅಬ್ಬಣಬ್ಬೆ ಎಂಬುದಾಗಿ ಪಂಪನ ತಮ್ಮ ಜಿನವಲ್ಲಭನ ಶಾಸನದಿಂದ ತಿಳಿದು ಬಂದಿದೆ. ಪಂಪ ಚೊಚ್ಚಲ ಕೂಸು. ಚೊಚ್ಚಲ ಹೆರಿಗೆ ತೌರುಮನೆಯಲ್ಲಿ ನಡೆಯುವುದು ಕನ್ನಡನಾಡಿನಲ್ಲಿ ಮೊದಲಿನಿಂದಲೂ ವಾಡಿಕೆಯಲ್ಲಿದೆ. ಅದರಿಂದ ಪಂಪ ಅಣ್ಣಿಗೆರಿಯಲ್ಲಿ ಹುಟ್ಟಿರಬಹುದು.

ಕರ್ನಾಟಕದ ಇತಿಹಾಸದಲ್ಲಿ ಅಣ್ಣಿಗೆರಿಯ ಸುತ್ತು ಮುತ್ತಲ ಪ್ರದೇಶ ಮಹತ್ವವೆನಿಸಿದೆ. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಈ ಭಾಗ ಹಿಂದಿನಿಂದಲೂ ಅಂತ್ಯಂತ ಫಲವತ್ತಾದುದು. ಅಣ್ಣಿಗೆರಿಯ ಒಂದು ಬದಿಗೆ ಗದಗ, ಕೋಳಿವಾಡ, ಮುಳಗುಂದ, ಬಾದಾಮಿಯೂ ಇನ್ನೊಂದು ಬದಿಗೆ ಬನವಾಸಿಯ ಸೆರಗೂ ಸೇರಿಕೊಂಡಿದೆ. ಇವೆಲ್ಲ ನಮ್ಮ ನಾಡಿನ ಸಾಂಸ್ಕೃತಿಕ ನಕ್ಷೆಯಲ್ಲಿ ಅಚ್ಚಳಿಯದೆ ನಿಲ್ಲುವ ಶಿಖರಗಳು. ಕದಂಬರು ಚಾಲುಕ್ಯರು; ಪಂಪ, ನಯಸೇನ, ಕುಮಾರವ್ಯಾಸ, ಚಾಮರಸರು ಆಗಿ ಹೋದ ನೆಲೆಗಳಿವು. ಇಂಥ ಚೈತನ್ಯದಾಯಿ ನೆಲದ ನಡುವೆ ಕೇಂದ್ರಬಿಂದುವಿನಂತಿರುವ ಅಣ್ಣಿಗೆರಿಯಲ್ಲಿ ನಿಂತು ವಿಚಾರಸಂಕಿರಣ ನಡೆಸುತ್ತಿದ್ದೇವೆ ಎಂಬುದನ್ನು ನೆನೆದಾಗ ಹರ್ಷ ಪುಳಕವಾಗುತ್ತದೆ. ಎಲ್ಲಿಯ ಅಣ್ಣಿಗೇರಿ, ಎಲ್ಲಿಯ ಬೋದನ; ಆದರೂ ಸಾವಿರ ವರ್ಷದ ಹಿಂದೆ ಇಲ್ಲಿಂದ ಒಂದು ಸಾವಿರ ಕಿಲೋಮೀಟರ್ ದೂರದ ಲೆಂಬುಳ ಪಾಟಕಕ್ಕೆ, ಸಪಾದಲಕ್ಷ ಪ್ರದೇಶಕ್ಕೆ ಪಂಪನೂ ಅವನ ಬಂಧುಗಳೂ ಅಂದು ಪ್ರಯಾಣ ಮಾಡಿದ್ದು ಇಂದಿಗೂ ಒಂದು ಮಹಾಸಾಹಸ.

ಅಂತೂ ಅಣ್ಣಿಗೆರಿಯ ಜನ ಭಾಗ್ಯಶಾಲಿಗಳು. ಪಂಪನನ್ನು ಹೆತ್ತ ತಾಯಿ ಅಬ್ಬಣಬ್ಬೆ ನಮ್ಮ ಊರಿನವಳು ಎಂದು ಸಂಬಂಧ ಹೇಳಿಕೊಳ್ಳುವ ಏಕೈಕ ಹಕ್ಕುದಾರಿಕೆಯುಳ್ಳವರು, ಇಡೀ ಕರ್ನಾಟಕದಲ್ಲಿ ಅಣ್ಣಿಗೆರಿಯವರು ಮಾತ್ರ. ಊರಿನ ಜನ ಸಜ್ಜನರು. ಪಂಪನ ತಾಯಿಯ ತವರೂರಿನವರು ತಾವು ಎಂಬ ಅಭಿಮಾನಧನರು. ಅಣ್ಣಿಗೆರಿಯ ನೆರೆಹೊರೆಯಲ್ಲಿ ಅಮೃದ್ಧವಾಗಿರುವ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಸಂಪತ್ತನ್ನು ಸೂರೆ ಮಾಡಿ ತನ್ನ ಕಾವ್ಯಗಳಲ್ಲಿ ಚಿರಸ್ಥಾಯಿಗೊಳಿಸಿರುವ ಪಂಪನ ಸ್ಮರಣೆಯ ವ್ಯಾಜದಿಂದ ನಾಡಿನ ದೂರದೂರದ ಊರುಗಳಿಂದ ಬಂದಿರುವ ಎಲ್ಲಬಲ್ಲಿದರನ್ನೂ ತೆರೆದ ತೋಳುಗಳಿಂದ ಬರಮಾಡಿಕೊಳ್ಳಲು ತಾವೆಲ್ಲ ಉತ್ಸಾಹ ತೋರಿದ್ದೀರಿ. ಅಣ್ಣಿಗೇರಿಯ ಸಮಸ್ತರೂ ಸಮೀಪದ ಸ್ಥಳದವರೂ ಶಿವರುದ್ರಪ್ಪ ಹುಬ್ಬಳ್ಳಿಯವರ ಪ್ರತಿಭಾಶಾಲಿ ಮುಂದಾಳುತನದಲ್ಲಿ ಎಷ್ಟೊಂದು ಏರ್ಪಾಟುಗಳನ್ನು ಮಾಡಿದ್ದೀರೆಂಬುದನ್ನು ಕೆಳಗೆ ಕುಳಿತಿರುವ ನಾವೆಲ್ಲ ಅಲ್ಲದೆ ಮೇಲೆ ನಿಂತು ನೋಡುತ್ತಿರುವ ಪಂಪನೂ ಅವನ ತಾಯಿಯೂ ನಮಗಿಂತ ಹೆಚ್ಚು ನಲಿಯುತ್ತಿದ್ದಾರೆ. ಪಂಪನಿಗೆ ಅವನ ತಾಯಿ ಅಬ್ಬಣಬ್ಬೆ “ಪಂಪ, ನಿನ್ನ ದೊರೆ ಅರಿಕೇಸರಿನಿನಗೆ ಮಾಡಿದ ಮರ‍್ಯಾದೆ, ಕೊಟ್ಟು ಬಿರದು ಬಾವಲಿ ಅಗ್ರಹಾರ ಆಭರಣ ಅವೆಲ್ಲ ಹಾಗಿರಲಿ. ಅದೇನು ಮಹಾಬಿಡು. ಅಗೋ ನೋಡು, ಸಾವಿರ ವರ್ಷ ಆದ ಮೇಲೂ ನನ್ನ ತೌರುಮನೆ ಅಣ್ಣಿಗೆರಿಯವರು ಈಗ ಮಾಡತಾ ಇರೋ ಮಹಾ ಸಡಗರ ಸಂಭ್ರಮ, ವಿದ್ವಾಂಸರನ್ನು ಕರೆಸಿ ತೋರಿಸುತ್ತಿರುವ ಗೌರವ ಅರಮನೆ ಮರ‍್ಯಾದೆಗಿಂತ ದೊಡ್ಡದು” ಎಂದು ಮಹಾ ಅಭಿಮಾನದಿಂದ ಬೀಗಿ ಹೇಳುತ್ತಿರುವಂತೆ ನನ್ನ ಅಂತರಂಗಕ್ಕೆ ಭಾಸವಾಗುತ್ತಿದೆ. ನಿಜಕ್ಕೂ ಇದು ಅಪೂರ್ವಯೋಗ, ಶುಭಗಳಿಗೆ, ಅಮೃತ ಮುಹೂರ್ತ. ನಿಮಗೂ ನಮಗೂ ಪಂಪನ ಶ್ರೀರಕ್ಷೆಯಿದೆ ಎಂಬುದು ಸೌಭಾಗ್ಯದ ವಿಷಯ. ತಾವೆಲ್ಲ ಇಂದು ನಾಳೆ ಈ ವಿಚಾರ ಸಂಕಿರಣದಲ್ಲಿ ಪಾಲುಗೊಂಡು ಇದರ ಪ್ರಯೋಜನ ಪಡೆಯಬೇಕೆಂದು ಕೋರುತ್ತೇನೆ. ನಿಮ್ಮೆಲ್ಲರ ಸೌಹಾರ್ದ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅದರ ಅಧ್ಯಕ್ಷನಾಗಿ ತಮಗೆಲ್ಲ ಹೃತ್ಪೂರ್ವಕವಾಗಿ ಸ್ವಾಗತ ಬಯಸುತ್ತೇನೆ.

(ಪಂಪ ಕವಿ ವಿಚಾರ ಸಂಕಿರಣದ ಉದ್ಘಾಟನೆಯ ಕಾರ್ಯ ಕ್ರಮದಲ್ಲಿ ಮಾಡಿದ ಭಾಷಣ)

(ಕನ್ನಡ ನುಡಿ, ಜೂನ್ ೧೬, ೧೯೮೫)

* * *