ಪಂಜಾಬ್ ವಿಶ್ವವಿದ್ಯಾನಿಲಯದ (ಚಂದೀಗಡ) ಸಂಸ್ಕೃತ ವಿಭಾಗದ ಡಾ|| || ಡಿ.ಡಿ. ಶರ್ಮ ಅವರು ಇತ್ತೀಚೆಗೆ ಒಂದು ಹೊಸ ಇಂಡೋ-ಆರ್ಯನ್ ಉಪಭಾಷೆಯನ್ನು ಪತ್ತೆ ಮಾಡಿದ್ದಾರೆ. ಇದು ಹಿಮಾಚಲ ಪ್ರದೇಶದ ಲಹೌನ್‌ನಲ್ಲಿರುವ ಟಿಬೆಟೋ ಬರ್ಮನ್ ಭಾಷಾ ಪ್ರದೇಶದಲ್ಲಿನ ವ್ಯವಹಾರದಲ್ಲಿದೆ. ಈ ಉಪಭಾಷೆಯನ್ನು ಪಟನ್ ಕಣಿವೆಯ ಒಂದು ಚಿಕ್ಕ ಪ್ರದೇಶದಲ್ಲಿ ವಾಸವಾಗಿರುವ ನಿಮ್ನವರ್ಗದ ಜನರು ಮಾತನಾಡುತ್ತಾರೆ. ಈ ನಿಮ್ಮ ವರ್ಗದವರನ್ನು ಚಿನಾಲರು ಎಂದು ಕರೆಯುತ್ತಾರೆ. ಈ ಚಿನಾಲರು ಮಾತನಾಡುವ ಉಪಭಾಷೆ ಭಾಷಾವಿಜ್ಞಾನದ ದೃಷ್ಟಿಯಿಂದ ಅತ್ಯಂತ ಮಹತ್ವದಾಗಿದೆ. ಚಿನಾಲರಿಗೆ ಈಗಿರುವ ಅವರ ಮೂಲ ಸ್ಥಾನದ ವಿಷಯವಾಗಲಿ, ಭಾಷಾ ಮೂಲದ ವಿಷಯವಾಗಲೀ ಏನೂ ಕಲ್ಪನೆಯಿಲ್ಲ. ಯಾವ ಕಾಲದಲ್ಲಿ ಈಗ ಅವರು ವಾಸವಾಗಿರುವ ಸ್ಥಳಕ್ಕೆ ಬಂದರು ಎಂಬ ವಿಚಾರವೂ ಅವರಿಗೆ ಗೊತ್ತಿಲ್ಲ. ಇತ್ತೀಚೆಗೆ ಅವರ ಭಾಷೆಯ ವಿಚಾರದಲ್ಲಿ ತಿಳಿದು ಬಂದಿರುವ ಮಾಹಿತಿಗಳು ಮಾತ್ರ ಭಾಷಾ ವಿಜ್ಞಾನಿಗಳನ್ನು ಬೆರಗುಗೊಳಿಸಿದೆ. ಇದುವರೆಗೂ ಗೊತ್ತಿರುವ ಮಾಹಿತಿಗಳ ಆಧಾರದಿಂದ “ಸಂಸ್ಕೃತ ಭಾಷೆ ಜನಸಾಮಾನ್ಯರ ಭಾಷೆಯಾಗಿರಲಿಲ್ಲ. ಅಲ್ಲದೆ ಈ ಭಾಷೆಯನ್ನು ಇಲ್ಲಿಯವರೆಗೂ ಕೆಳವರ್ಗದವರಿಗೆ ಕಲಿಯುವ ಅವಕಾಶಗಳನ್ನು ಕಲ್ಪಿಸಿರಲಿಲ್ಲ; ಅದರಲ್ಲಿಯೂ ಶೂದ್ರರಿಗೆ ಈ ಭಾಷೆಯನ್ನು ಕಲಿಯದಂತೆ ನಿಷೇಧಿಸಲಾಗಿತ್ತು; ಸಂಸ್ಕೃತ ಭಾಷೆ ಎಂದೂ ಜನಸಾಮಾನ್ಯರ ಆಡುನುರಿಯಾಗಿ ವ್ಯಾವಹಾರಿಕ ಭಾಷೆಯಾಗಿ ರೂಢಿಯಲ್ಲಿರಲಿಲ್ಲ” ಇತ್ಯಾದಿ ಭಾವನೆಗಳು ಪ್ರಚಲಿತವಾಗಿದ್ದುವು.

ಆದರೆ ಈ ಎಲ್ಲ ಭಾವನೆಗಳನ್ನೂ ಬುಡಮೇಲು ಮಾಡುವ ಪ್ರಸಂಗ ಈಗ ಚಿನಾಲರು ಮಾತನಾಡುವ ಭಾಷೆಯ ವಿಶ್ಲೇಷಣೆಯಿಂದ ಪ್ರಕಟವಾಗಿದೆ. ಚಿನಾಲರು ನಿಮ್ನವರ್ಗಕ್ಕೆ ಸೇರಿದ ಜನಾಂಗ. ಅವರು ಮಾತನಾಡುವ ಭಾಷೆ ಸಂಸ್ಕೃತ ಭಾಷೆಯ ನಿಯಮಗಳನ್ನು ಅನುಸರಿಸಿದೆ. ಅವರ ಉಪಭಾಷೆ ಸಂಸ್ಕೃತಭಾಷೆಯ ಶಬ್ದಕೋಶವನ್ನೂ ವ್ಯಾಕರಣ ರಚನೆಯನ್ನೂ ಅನುಸರಿಸಿದೆ. ಅವರ ಉಪಭಾಷೆ ಸಂಸ್ಕೃತಭಾಷೆಯ ಶಬ್ದಕೋಶವನ್ನೂ ವ್ಯಾಕರಣ ರಚನೆಯನ್ನೂ ಅನುಸರಿದೆ. ಚಿನಾಲರ ಉಪ ಭಾಷೆಯಲ್ಲಿ ಪ್ರಾಚೀನ ಪ್ರಾಕೃತ ಭಾಷೆಗಳ ಪ್ರಾಚೀನ ರೂಪಗಳು ಉಳಿದುಕೊಂಡು ಬಂದಿದೆ. ಈ ಸೂಚನೆಗಳನ್ನು ಅವಲಂಬಿಸಿ ಚಿನಾಲರ ಪೂರ್ವಜರು, ಈಗ ಟಿಬೆಟೋ ಬರ್ಮನ್ ಭಾಷೆಗಳನ್ನು ಮಾತನಾಡುತ್ತಿರುವ ಮಂಜುಗಡ್ಡೆಯಿಂದ ಆವೃತವಾದ ಹಿಮಾಲಯದ ಪ್ರದೇಶವನ್ನು, ಸಂಸ್ಕೃತ ಭಾಷೆ ಇನ್ನೂ ವ್ಯಾವಹಾರಿಕ ಭಾಷೆಯಾಗಿ ಜೀವಂತವಾಗಿದ್ದ ಮತ್ತು ಪ್ರಾಚೀನ ಪ್ರಾಕೃತ ರೂಪಗಳು ಸಂಸ್ಕೃತ ರೂಪಗಳನ್ನು ಸ್ಥಳಾಂತರಿಸಲು ಪ್ರಾರಂಭವಾಗದ್ದ ಕಾಲದಲ್ಲಿ ಈ ಪ್ರದೇಶಕ್ಕೆ ಆಗಮಿಸಿರಬಹುದೆಂದು ಊಹಿಸಲಾಗಿದೆ. ಚಿನಾಲರ ಸಾಮಾಜಿಕ ಹಾಗೂ ಧಾರ್ಮಿಕರ ಪರಿಸರ ಮತ್ತು ಸ್ಥಿತಿಗತಿಗಳು ಬಹುಶಃ ಅವರನ್ನು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ಸ್ಪಷ್ಟವಾಗಿ ಉಳಿಸಿಕೊಳ್ಳುವ ಸಲುವಾಗಿ ಅವರ ಧಾರ್ಮಿಕ ಹಾಗೂ ಭಾಷಿಕ ಸಂಪ್ರದಾಯಗಳನ್ನು ಕಾಪಾಡಿಕೊಂಡು ಬರಬೇಕಾದ ಅಗತ್ಯ ಒದಗಿಬಂತೆಂದು ತೋರುತ್ತದೆ.

ಆಶ್ಚರ್ಯವೆಂದರೆ, ಟೆಬೆಟೋ ಬರ್ಮನ್ ಭಾಷೆಗಳ ನಡುವೆ ಈ ಚಿನಾಲರ ಉಪಭಾಷೆಯ ಅಸ್ತಿತ್ವವೂ ಅದರಲ್ಲಿಯೂ ಸಂಸ್ಕೃತ ಭಾಷೆಯ ಬಹುಮಟ್ಟಿನ ಲಕ್ಷಣಗಳನ್ನು ಸಂರಕ್ಷಿಸಿಕೊಂಡಿರುವುದು. ಈ ಸಂಗತಿ ಇದುವರೆಗೆ ಯಾವ ಭಾಷಾ ವಿಜ್ಞಾನಿಗಳ ಗಮನಕ್ಕೂ ಬಂದಿಲ್ಲದಿರುವುದು ತುಂಬಾ ಆಶ್ಚರ್ಯದ ಸಂಗತಿಯಾಗಿದೆ. ಡಾ|| || ಬಿ.ಎ. ಗ್ರಿಯರ್‌ಸನ್ ಅವರ ‘ಭಾರತದ ಭಾಷಾ ಸಮೀಕ್ಷೆ’ ಎಂಬ ಮಾಲೆಯ ಮಹೋನ್ನತ ಸಂಪುಟಗಳ ಕೂಡ ಈ ಚಿನಾಲರ ಉಪಭಾಷೆಯನ್ನು ಉಲ್ಲೇಖಿಸಿಲ್ಲ. ಬಹುಶಃ ಇಂಡೋ ಆರ್ಯನ್ ಭಾಷಾ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾವ ಭಾಷಾ ವಿಜ್ಞಾನಿಯೂ ಇಂಥದೊಂದು ಇಂಡೋ ಆರ್ಯನ್ ಉಪಭಾಷೆಯ ಇರುವಿಕೆಯನ್ನು ರೊಹತಾಂಗ್ ಕಣಿವೆಯ ಆಚೆಗೆ ಊಹಿಸಿಕೊಳ್ಳಲಾರನೆಂದು ಕಾಣುತ್ತದೆ. ಹೀಗಾಗಿ ಈ ಚಿನಾಲರ ಉಪಭಾಷೆ ಪತ್ತೆ ಆಗಿರುವುದು, ಅದರಲ್ಲಿಯೂ ಅವಿದ್ಯಾವಂತರಾದ, ಸಾಮಾಜಿಕವಾಗಿ ಅತ್ಯಂತ ಕೆಳವರ್ಗಕ್ಕೆ ಸೇರಿದ ಜನಾಂಗದವರು ಮಾತನಾಡುವ ಈ ಉಪಭಾಷೆ ಬೆಳಕಿಗೆ ಬಂದಿರುವುದು ಕುತೂಹಲಕರ. ಅದರಲ್ಲಿಯೂ ಸಂಸ್ಕೃತ ಭಾಷೆ ಸಾಮಾನ್ಯ ವರ್ಗದವರು ಮಾತನಾಡುವ ವ್ಯಾವಹಾರಿಕ ಭಾಷೆ ಆಗಿರಲಿಲ್ಲವೆಂದು ವಾದಿಸುವವರಿಗೆ ಒಂದು ಸವಾಲನ್ನು ಎಸೆದಿದೆ. ಅಲ್ಲದೆ ಈ ಉಪಭಾಷೆಯ ಪರಿಚಯದಿಂದಾಗಿ ಉದ್ಭವವಾಗಿರುವ ಎರಡನೆಯ ಪ್ರಶ್ನೆ ಏನೆಂದರೆ “ಸಂಸ್ಕೃತ ದೇವಭಾಷೆ ಆಗಿದ್ದು ಅದನ್ನು ಶೂದ್ರರೇ ಮೊದಲಾದ ಕೆಳವರ್ಗದ ಜನ ಬಳಸಲು ನಿಷೇಧಿಸಲಾಗಿತ್ತು” – ಎಂಬ ನಂಬಿಕೆಯನ್ನು ತಲೆಕೆಳಗು ಮಾಡುವ ಸಂಗತಿ. ಒಂದು ವೇಳೆ ಸಂಸ್ಕೃತ ಭಾಷೆಯನ್ನು ಕೆಳವರ್ಗದ ಜನರಿಂದ ದೂರ ಇರಿಸಿದ್ದಾಗಿದ್ದರೆ ಈಗ ಕೆಳವರ್ಗದ ಜನರಾದ ಚಿನಾಲರು ಸಂಸ್ಕೃತಕ್ಕೆ ಸದೃಶ್ಯವಾದ ಅವರ ಮಾತೃಭಾಷೆಯನ್ನು ಹೇಗೆ ಕಲಿತುಕೊಂಡುಬಂದವರು ಎಂಬ ವಿವಾದಾತ್ಮಕ ಪ್ರಶ್ನೆ ಎದುರಾಗುತ್ತದೆ. ಇದರ ಜೊತೆಗೆ ಚಿನಾಲರು ವಾಸವಾಗಿರುವ ಇದೇ ಪ್ರದೇಶದಲ್ಲಿ “ಲೊಹಾರರು” ಎಂಬ ಇನ್ನೊಂದು ಜನಾಂಗ ಕೂಡ ಇಂಡೋ-ಆರ್ಯನ್ ಉಪಭಾಷೆಯೊಂದನ್ನು ಮಾತನಾಡುತ್ತಾರೆ. ಲೊಹಾರರ ಉಪಭಾಷೆಯೂ ಹೆಚ್ಚು ಕಡಮೆ ಪಶ್ಚಿಮ ಪಹಾಡಿ ಭಾಷೆಗಳೊಡನೆ ತನ್ನ ಸಾದೃಶ್ಯವನ್ನು ಹೊಂದಿರುವಂತೆ ತೋರುತ್ತದೆ. ಆದರೆ ಲೊಹಾರರ ಭಾಷೆ ಕೂಡ ಸ್ವಲ್ಪಮಟ್ಟಿಗೆ ಚಿನಾಲರು ಮಾತನಾಡುವ ಭಾಷೆ ಉಳಿಸಿಕೊಂಡು ಬಂದಿರುವಂತೆ, ಸಂಸ್ಕೃತ ಭಾಷೆಯ ಪದ್ಧತಿಯನ್ನೂ ಒಳಗೊಂಡಿದೆ.

ಈ ಎಲ್ಲ ಸಂಗತಿಗಳನ್ನು ಮನಗಂಡಾಗ ಚಿನಾಲರು ಉಪಭಾಷೆಯ ವಿಚಾರವಾಗಿ ಇನ್ನೂ ಆಳವಾದ ವರ್ಣನಾತ್ಮಕ ಅಧ್ಯಯನ ನಡೆದು ಹೊರಬರುವ ಸಾರಾಂಶಗಳು ಅತ್ಯಂತ ಮಹತ್ವದ್ದೆಂದು ಸ್ಪಷ್ಟವಾಗುತ್ತದೆ.

(ಆಧಾರ: ಡಿ.ಎಲ್.. ಆಗಸ್ಟ್೮೦, ಪುಟ )
(ಕನ್ನಡ ನುಡಿ, ಸೆಪ್ಟೆಂಬರ್ ೧೬, ೧೯೮೦)

* * *