ಕನ್ನಡ ಭಾಷೆ ತನ್ನ ಎರಡು ಸಾವಿರ ವರ್ಷಗಳ ಕಾಲ ಅಥವಾ ಅದಕ್ಕೂ ಹೆಚ್ಚಿನ ಸುದೀರ್ಘವಾದ ಚರಿತ್ರೆಯಲ್ಲಿ ಹತ್ತಾರು ಭಾಷೆಗಳಿಂದ ಪ್ರಭಾವಿತವಾಗಿದೆ. ಸಂಸ್ಕೃತ, ಪ್ರಾಕೃತ, ಅರಬ್ಬೀ, ಪಾರಸಿ, ಪೋರ್ಚುಗೀಸ್, ಇಂಗ್ಲಿಷ್, ಹಿಂದಿ, ಮರಾಠಿ ಮುಂತಾದ ಭಾಷೆಗಳ ಪ್ರಭಾವವನ್ನು ಇಲ್ಲಿ ಹೆಸರಿಸಬಹುದು.

ಕಳೆದ ಎರಡು ಶತಮಾನಗಳಿಂದ ಕನ್ನಡ ಭಾಷೆಯ ಮೇಲೆ ಇಂಗ್ಲಿಷ್ ಭಾಷೆಯ ಪ್ರಭಾವ ಕಂಡು ಬರುತ್ತಿದೆ. ಈ ಶತಮಾನದಲ್ಲಿ ಅದರಲ್ಲಿಯೂ ಈ ಶತಮಾನದ ಉತ್ತರಾರ್ಧದಲ್ಲಿ ವಿಶೇಷವಾಗಿ ಕಂಡು ಬರುತ್ತಿದೆ. ಇಂಗ್ಲಿಷ್ ಭಾಷೆ ಬಹುವಚನ ಪ್ರತ್ಯಯ ಕನ್ನಡ ಭಾಷೆಯಲ್ಲಿ ಕೆಲವು ವಿಶಿಷ್ಟ ಸಂದರ್ಭದಲ್ಲಿ ಬಳಕೆಯಾಗಿರುವುದನ್ನು ಗುರುತಿಸುವುದು ಈ ಸಣ್ಣ ಟಿಪ್ಪಣಿಯ ಉದ್ದೇಶ. ಇಂಗ್ಲಿಷ್ ಭಾಷೆಯ ಬಹುವಚನ ಪ್ರತ್ಯಯ – ಸ್ ಎಂಬುದು. ಇದು ವಿದ್ಯಾವಂತರ, ಶಿಷ್ಟರ ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿತ್ತು. ಉದಾಹರಣೆ : ಬುಕ್ಕು- ಬುಕ್ಸು, ರೂಮು-ರೂಮ್ಸು, ಡೆಸ್ಕು-ಡೆಸ್ಕು, ಚೇರು-ಚೇರ‍್ಸು, ಫ್ರೆಂಡು-ಫ್ರೆಂಡ್ಸು. ಇಲ್ಲೆಲ್ಲಾ ಗಮನಿಸಬಹುದಾಗ ಇನ್ನೊಂದು ಸಂಗತಿ ಎಂದರೆ ಇಂಗ್ಲಿಷ್ ಭಾಷೆಯಿಂದ ನಾವು ಸ್ವೀಕರಿಸುವ ನಾಮಪಗಳಿಗಷ್ಟೇ ಈ ಬಹುವಚನ ಪ್ರತ್ಯಯ ಸೇರುತ್ತದೆ. ಕನ್ನಡದ ಗಳು ಎಂಬ ಬಹುವಚನ ಪ್ರತ್ಯಯ ಕೂಡ ಈ ಇಂಗ್ಲಿಷ್ ರೂಪಗಳಿಗೆ ಸೇರುವುದು ಉಂಟು. ಉದಾ: ಬುಕ್ಕುಗಳು, ರೂಮುಗಳು, ಚೇರುಗಳು, ಡೆಸ್ಕುಗಳು, ಫ್ರೆಂಡ್ಸುಗಳು.

ಒಂದು ಭಾಷೆ ಅಗತ್ಯಕ್ಕನುಗುಣವಾಗಿ ಅನ್ಯ ಭಾಷೆಯ ಶಬ್ದಗಳನ್ನು ಸ್ವೀಕರಿಸುತ್ತಿರುತ್ತದೆ. ಅದರಂತೆ ಕನ್ನಡ ಭಾಷೆಯೂ ಇಂಗ್ಲಿಷ್ ಭಾಷೆಯಿಂದ ಸಾಕಷ್ಟು ಶಬ್ದಗಳನ್ನು ಸ್ವೀಕರಿಸುತ್ತಲಿದೆ. ಈ ಭಾಷಾ ಸ್ವೀಕರಣದಲ್ಲಿ ಮತ್ತೊಂದು ಮಹತ್ವದ ಅಂಶವೆಂದರೆ ನಮ್ಮ ಭಾಷೆಯಲ್ಲಿ ಬಹಳ ಕಾಲದಿಂದ ರೂಢಿಯಲ್ಲಿರುವ ಕೆಲವು ನಿತ್ಯೋಪಯೋಗಿ ಶಬ್ದಗಳು ಇಂಗ್ಲಿಷ್ ಶಬ್ದಗಳನ್ನು ಬಳಸುತ್ತಿರುವುದು. ಇದು ವಿಶೇಷವಾಗಿ ದೊಡ್ಡನಗರ, ಪಟ್ಟಣ, ವಿದ್ಯಾವಂತರ ಭಾಷೆಯಲ್ಲಿ ಕಂಡು ಬರುತ್ತಿದೆ. ತಾಯಿ-ತಂದೆ, ಅಕ್ಕ-ತಂಗಿ, ಅಣ್ಣ-ತಮ್ಮ ಮುಂತಾದ ಸಂಬಂಧಪಟ್ಟ ವಾಚಕ ರೂಪಗಳು ಇಂಗ್ಲಿಷ್ ಭಾಷೆಯ ಶಬ್ದಗಳನ್ನು ಬಳಸುವುದು ಕಂಡು ಬರುತ್ತದೆ. ಉದಾ: ಮದರ್-ಫಾದರ್, ಸಿಸ್ಟರ್-ಬ್ರದರ್, ವೈಫ್, ಅಂಕಲ್-ಆಂಟಿ, ಮದರ್ ಇನ್ ಲಾ-ಫಾದರ್ ಇನ್ ಲಾ, ಕಸಿನ್ – ಇತ್ಯಾದಿ.

(ಕನ್ನಡ ನುಡಿ, ಏಪ್ರಿಲ್ , ೧೯೮೦)

* * *