ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಕಾಣಿಸಿಕೊಳ್ಳದಿರುವುದು ನಿಮ್ಮ (ಕುವೆಂಪುರವರ) ಅಭ್ಯಾಸ ಕ್ರಮ. ಅದರಿಂದ ಬಿಡಿಸಿಕೊಂಡು ಇಂದು ನೀವು ಈ ಸಭೆಯಲ್ಲಿ ಹಾಜರಾಗಿರುವುದಕ್ಕಾಗಿ ಮೊದಲು ಅಭಿನಂದಿಸುತ್ತೇನೆ. ಕೇವಲ ೭೫ ತುಂಬಿರುವ ಇನ್ನೂ ಹತ್ತಾರು ಜನ ಹಿರಿಯ ಸಾಹಿತಿಗಳು ಇದ್ದಾರೆ. ಕೆಲವು ಪ್ರಬಲವಾದ ಮತ್ತು ಪ್ರಾಮಾಣಿಕವಾದ ಕಾರಣಗಳಿಗಾಗಿ ನೀವು ಇದಕ್ಕೂ ಮಿಗಿಲಾದ ಸನ್ಮಾನಕ್ಕೆ ಪಾತ್ರರಾಗಿದ್ದೀರಿ.

ಅನೇಕ ಪ್ರಥಮಗಳ ಪುರುಷ

ಕಳೆದ ಅರ್ಧ ಶತಮಾನದಿಂದ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾಗಿರುವ ನೀವು ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಶಸ್ತಿಗಳನ್ನು ಮೊಟ್ಟಮೊದಲು ಪಡೆದವರಾಗಿ ಅನೇಕ ಪ್ರಥಮಗಳನ್ನು ದಾಖಲಿಸಿದ್ದೀರಿ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಾರ್ವಭೌಮ ಸ್ಥಾನ ಸಿಗಬೇಕೆಂದು ಪಟ್ಟು ಹಿಡಿದು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಕೇವಲ ಕನ್ನಡದ ಮೇಲಿನ ಹಾಗೂ ಕನ್ನಡಿಗರ ಮೇಲಿನ ಮಮತೆಯಿಂದ ಸಾಧಿಸಿರುವವರಲ್ಲಿ ನೀವು ಅಗ್ರಗಣ್ಯರಾಗಿದ್ದೀರಿ. “ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಬಾರಿಸು ಕನ್ನಡ ಡಿಂಡಿಮವ” ಮೊದಲಾದ ನಿಮ್ಮ ಕವಿತೆಗಳು ಪಾಂಚಜನ್ಯವಾಗಿ ಮೊಳಗಿ ಸತ್ತಂತಿಹರನು ಬಡಿದೆಚ್ಚರಿಸಿವೆ. ಕರ್ನಾಟಕ ಏಕೀಕರಣ, ಕರ್ನಾಟಕ ಎಂಬ ನಾಮಕರಣ ಹಾಗೂ ಕನ್ನಡ ರಾಜ್ಯಮಟ್ಟದಲ್ಲಿ ಆಡಳಿತ ಭಾಷೆಯಾಗುವುದು – ಈ ಮೂರು ಕನಸುಗಳು ನಿಮ್ಮ ಜೀವಿತ ಕಾಲದಲ್ಲಿಯೇ ನನಸಾಗಿ ಪರಿಣಮಿಸಿರುವುಉದ ನಮಗೆಲ್ಲಾ ಆನಂದವನ್ನು ಉಂಟು ಮಾಡಿದೆ. ಇವುಗಳು ಈಡೇರಿರುವುದರಲ್ಲಿ ನೀವು ಕನ್ನಡಿಗರಿಗೆ ಕಾಲಕಾಲಕ್ಕೆ ನೀಡಿರುವ ಮಾರ್ಗದರ್ಶನವನ್ನೂ ತುಂಬಿರುವ ಸ್ಫೂರ್ತಿಯನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇವೆ.

ಸಾಹಿತಿಗಳ ಹೊಣೆಗಾರಿಕೆ

ಇಂದು ಜಗತ್ತು ಕ್ರೂರವಾಗಿದೆ. ಮನುಷ್ಯ ಮನುಷ್ಯನಾಗಿ ಬದುಕಲು ಇರುವ ದಾರಿಗಳೆಲ್ಲಾ ರಾಡಿಯಾಗಿವೆ. ವ್ಯಕ್ತಿ ಸಂಬಂಧಗಳೆಲ್ಲಾ ಭ್ರಷ್ಟಾವಾಗುತ್ತಿವೆ. ಇದರಿಂದಾಗಿ ಮಾನವೀಯತೆ ಹೋಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯ ಒಂದು ಭಾಗ ಸಾಹಿತಿಗಳ ಮೇಲೆ ಬಿದ್ದಿದೆ. ನೀವು ಮಾನವೀಯ ಮೌಲ್ಯಗಳು ಮುಕ್ಕಾಗದ ಹಾಗೆ ಗಟ್ಟಿಯಾಗಿ ಉಳಿಸಿಕೊಳ್ಳುವುದರಲ್ಲಿ ನಮ್ಮ ಮನಸ್ಸು ತೊಡಗುವಂತೆ ಮಾಡುವ ಬರವಣಿಗೆಯನ್ನು ನೀಡುವುದರಲ್ಲಿ ಯಶಸ್ವಿಯಾಗಿದ್ದೀರಿ. ಹಾಗೆಂದು ನೀವೇನೂ ದಂತಗೋಪುರದ ನಡುವೆ ಕುಳಿತು ಕಾಲ ಕಳೆಯುತ್ತಿಲ್ಲ. ವರ್ತಮಾನದ ಬದುಕಿಗೆ ನಿಮ್ಮ ಪಂಚೇಂದ್ರಿಗಳು ಕಣ್ಣು ತೆರೆದಿವೆ. ಸಮಕಾಲೀನ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ನಿಮ್ಮಲ್ಲಿ ಸದಾ ಜಾಗೃತವಾಗಿರುವುದು ಕಂಡು ಬರುತ್ತದೆ. ತೀರಾ ಇತ್ತೀಚೆಗಷ್ಟೆ ಸಂಸ್ಕೃತ ಭಾಷೆಯನ್ನು ಪ್ರೌಢಶಾಲಾ ಶಿಕ್ಷಣ ಕ್ರಮದಲ್ಲಿ ಪ್ರಥಮ ಭಾಷೆಯಿಂದ ಪ್ರಥಮೇತರ ಸ್ಥಾನಕ್ಕೆ ವರ್ಗಾಯಿಸುವ ವಿಚಾರದಲ್ಲಿ ಚೆನ್ನಾಗಿ ಗುರುತಿಸಿ, ಅಷ್ಟೆ ನಿರ್ಭಯರಾಗಿ ಪ್ರತಿಪಾದಿಸಿದಿರಿ. ಪಟ್ಟಭದ್ರ ಹಿತಾಸಕ್ತಿಗಳನ್ನು ಧೈರ್ಯವಾಗಿ ಎದುರಿಸಬಲ್ಲ ನಿಮ್ಮ ಎಂಟೆರ್ದೆಯನ್ನು ಕಂಡು ಪ್ರಗತಿಪರ ಧೋರಣೆಗಳನ್ನೂ ತಳೆದವರೂ ಆಶ್ಚರ್ಯ ಚಕಿತರಾಗಿದ್ದಾರೆ.

ಸಂಸ್ಕೃತದ ಸ್ಥಾನ; ಕುವೆಂಪು ನಿಲುಮೆ

ಸಂಸ್ಕೃತವನ್ನು ಮಾತೃಭಾಷೆಯ ಸ್ಥಾನದಿಂದ ಮೂರನೆಯ ಭಾಷೆಯ ಸ್ಥಾನಕ್ಕೆ ತರಬೇಕು ಎಂಬ ಕರ್ನಾಟಕ ಸರ್ಕಾರವು ಕೈಗೊಂಡಿರುವ ತೀರ್ಮಾನದ ವಿರುದ್ಧ ಒಂದು ವರ್ಗದ ಜನರು ಭಯಂಕರವಾದ ಕೋಲಾಹಲವನ್ನು ಎಬ್ಬಿಸಿರುವುದನ್ನು ಎಬ್ಬಿಸಿರುವುದನ್ನು ಪತ್ರಿಕೆಗಳ ಮೂಲಕ ಗಮನಿಸಿದ್ದೇನೆ.

ವಿದ್ಯಾ ಕ್ಷೇತ್ರದಲ್ಲಿ ಸ್ಪರ್ಧೆಯು ತೀವ್ರ ಸ್ವರೂಪದಲ್ಲಿ ನಡೆಯುತ್ತಿದ್ದು, ಅದಕ್ಕಾಗಿ ಈಗ ಸಂಸ್ಕೃತವನ್ನು ಬಳಸಿಕೊಳ್ಳುತ್ತಿರುವ ಚಾತುರ್ಯವನ್ನು ಯಾರೂ ಗುರುತಿಸಬಹುದು. ಸಂಸ್ಕೃತದಲ್ಲಿ ಅಡಗಿರುವ ಅಮೂಲ್ಯವಾದ ಜ್ಞಾನ ಭಂಡಾರವನ್ನು ಜನಸಾಮಾನ್ಯರಿಗೆ ಸಂಸ್ಕೃತದ ಮೂಲಕವೇ ಒದಗಿಸಬೇಕು ಎಂಬ ಹಾಸ್ಯಾಸ್ಪದವಾದ, ವಾದದ ಹಿಂದಿರುವ ಅಭಾಸವೂ ಸುಸ್ಪಷ್ಟವಾಗಿಯೇ ಇದೆ. ಸಹಸ್ರಾರು ವರ್ಷಗಳ ಕಾಲ ಜನಸಾಮಾನ್ಯರ ಬಗ್ಗೆ ಇಲ್ಲದಿದ್ದ ಕಾಳಜಿಯನ್ನು ತಾನು ಪರಮಶ್ರೇಷ್ಠ ಎಂದು ಭಾವಿಸಿದ್ದ ಒಂದು ವರ್ಗವು ಈಗ ದಿಢೀರನೆ ಪ್ರದರ್ಶಿಸಿದೆ. ಜನ ಸಾಮಾನ್ಯರಿಗೆ ಅಮೂಲ್ಯವಾದ ಆಧ್ಯಾತ್ಮ ತತ್ವವನ್ನು ಉಪದೇಶಿಸುವುದನ್ನು ಬಿಟ್ಟು ಪಾದಪೂಜೆ, ಅಡ್ಡಪಲ್ಲಕ್ಕಿ ಉತ್ಸವಗಳಲ್ಲಿ ತನ್ಮಯವಾಗಿದ್ದ ಗುರುವರ್ಗವೂ ಕೂಡ ಇದಕ್ಕಿದ್ದಂತೆ ಎಚ್ಚತ್ತು ಜನಸಾಮಾನ್ಯರಿಗೆ ಸಂಸ್ಕೃತದ ಮಹಿಮೆಯನ್ನು ಬೋಧಿಸ ಹೊರಟಿರುವುದು ಕುತೂಹಲಕಾರಿಯಾಗಿದೆ.

ಸಮಾಜದ ಎಲ್ಲ ವರ್ಗಗಳಲ್ಲಿಯೂ ಪಟ್ಟಭದ್ರವಾಗಿರುವವರು ಸಂಸ್ಕೃತವೆಂಬ ಹಳೆಯ ಅಸ್ತ್ರವನ್ನು ಮತ್ತೊಮ್ಮೆ ಅಭಿಮಂತ್ರಿಸಿ ತಮ್ಮ ಮೇಲೆ ಪ್ರಯೋಗಿಸುತ್ತಿರುವುದನ್ನು ಜನಸಾಮಾನ್ಯರು ಈಗಲಾದರೂ ಅರ್ಥಮಾಡಿಕೊಂಡು ಸಂಪೂರ್ಣ ನಾಶದಿಂದ ಪಾರಾಗುತ್ತಾರೆ ಎಂದು ಆಶಿಸಿದ್ದೇನೆ.

ಬೋಧನೆ ಮತ್ತು ವ್ಯವಹಾರಗಳ ಎಲ್ಲ ಘಟ್ಟಗಳಲ್ಲಿಯೂ ಕನ್ನಡವೇ ಮೊದಲ ಸ್ಥಾನವನ್ನು ಗಳಿಸಿಕೊಳ್ಳುವುದು ಅನಿವಾರ್ಯವಾಗಿರುವ ಈ ಸಂಧಿ ಸಮಯದಲ್ಲಿ ಬಡಕಲು ಬಡಕಲು ಪಠ್ಯಕ್ರಮವನ್ನುಳ್ಳ ಸಂಸ್ಕೃತವನ್ನು ಕೇವಲ ಅಂಕಗಳ ವ್ಯಾಮೋಹಕ್ಕಾಗಿ ಜನರ ಮುಂದೆ ಸುಳಿದಾಡಿಸುತ್ತಿರುವ ಹಿತಾಸಕ್ತಿಗಳ ಪ್ರಯತ್ನವನ್ನು ಸಕಾಲದಲ್ಲಿ ಅರಿತು ಸಂಸ್ಕೃತವನ್ನು ಮೂರನೆಯ ವಿಷಯದ ಸ್ಥಾನಕ್ಕೆ ವರ್ಗಾಯಿಸಲು ತೀರ್ಮಾನಿಸಿರುವ ವಿದ್ಯಾಮಂತ್ರಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಈ ಧೈರ್ಯದ ಹಾಗೂ ನ್ಯಾಯ ಸಮ್ಮತವಾದ ನಿಲುವಿಗಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.

ದಲಿತ ಹಾಗೂ ಶೂದ್ರ ಕಾಳಜಿ

ನಿಮ್ಮ ಕಾವ್ಯ ದೃಷ್ಟಿ ಎಷ್ಟು ವ್ಯಾಪಕವಾಗಿದೆ ಮತ್ತು ಎಷ್ಟು ಅತ್ಯಾಧುನಿಕವಾದ ವಿಚಾರಗಳನ್ನು ಒಳಗೊಂಡು ಕ್ರಾಂತಿಕಾರಿಯಾಗಿದೆ ಎಂಬುದಕ್ಕೆ ಇನ್ನು ಎರಡು ನಿದರ್ಶನಗಳನ್ನು ಕೊಡುವುದು ಸೂಕ್ತವೆಂದು ಭಾವಿಸುತ್ತೇನೆ. ದಲಿತ ಹಾಗೂ ಶೂದ್ರರನ್ನು ಕುರಿತ ಕಾಳಜಿ ವಿಶೇಷ ಪ್ರಮಾಣದಲ್ಲಿ ಕಳೆದ ಹತ್ತು ವರ್ಷದಿಂದ ಈಚೆಗೆ ಕನ್ನಡದಲ್ಲೂ ಕಂಡು ಬರುತ್ತಿದೆ. ಆದರೆ ನೀವು ನಲವತ್ತು ವರ್ಷಗಳ ಹಿಂದೆಯೇ ‘ಶೂದ್ರ ತಪಸ್ವಿ’ ಗ್ರಂಥದಲ್ಲಿ ಸಮಸ್ಯೆಯನ್ನು ಎತ್ತಿಕೊಂಡಿದ್ದೀರಿ. ಆಗ ಅದರಿಂದಾಗಿ ನೀವು ನಮ್ಮ ಸಮಕಾಲೀನ ಸಂಪ್ರದಾಯಸ್ಥರಿಂದ ಕುಟುಟೀಕೆಗೆ ಗುರಿಯಾಗಿದ್ದೀರಿ. ಆದರೂ ನಿಮ್ಮ ಕಾವ್ಯ ಸತ್ಯ ಗೆದ್ದು ಅನೃತಗಳು ಬಿದ್ದಿವೆ, ‘ಋತುವೊಂದೇ ಗೆಲ್ವುದು ನಾನೃತಮಲ್ತು’ ಎಂಬ ಮಾತಿಗೆ ಸಾಕ್ಷಿಯಾಗಿ.

ಅದೇ ರೀತಿ ಮದುವೆ ಮಾಡುವ ಪದ್ಧತಿಯಲ್ಲಿರುವ ಪುರೋಹಿತಶಾಹಿ ಹಿಡಿತದಿಂದ, ಶಾಸ್ತ್ರಸಂಕೋಲೆಯ ಜಟಿಲತೆಯಿಂದ ವಧೂವರರ ಬಿಡಿಸಿ ಮದುವೆಯನ್ನು ಮಂತ್ರ ಮಾಂಗಲ್ಯ ವಿಧಾನಕ್ಕೆ ಇಳಿಸಿ ಸರಳೀಕರಿಸಿದ್ದೀರಿ. ಇದನ್ನು ನೀವು, ನಿಮ್ಮ ಗೆಳೆಯರೂ, ಶಿಷ್ಯರೂ ಈಗಾಗಲೇ ಬಳಕೆಗೆ ತರುತ್ತಿದ್ದರೂ ಇನ್ನೂ ಬಹುಜನರು ಆ ಧೈರ್ಯ ತೋರಲು ಹಿಂದು ಮುಂದು ನೋಡುತ್ತಿದ್ದಾರೆ.

ಇನ್ನೊಂದು ಮುಖ್ಯವಾದ ವಿಷಯದತ್ತ ಈ ಸಂದರ್ಭದಲ್ಲಿ ನಿಮ್ಮ ಗಮನ ಸೆಳೆಯುವುದು ಅಗತ್ಯವೆಂದು ತೋರುತ್ತದೆ. ಅದು ನಿಮ್ಮ ಶೈಲಿಗೆ ಸಂಬಂಧಿಸಿದ ಮಾತು. ಅದ್ಬುತ ವಿಸ್ಮಯಕಾರಿ ಘಟನೆಗಳನ್ನೂ ಸೂಕ್ಷ್ಮ ತರ ಮನೋವ್ಯಾಪಾರಗಳನ್ನು ಅತ್ಯಂತ ಸಹಜ ಎನ್ನುವಂತೆ ಆಲಿಪ್ತವಾದ ವ್ಯಾವಹಾರಿಕ ಕನ್ನಡದಲ್ಲಿ ಹಿಡಿದಿಟ್ಟಿರುವ ‘ಮಲೆಗಳಲ್ಲಿ ಮದುಮಗಳು’ ಮೊದಲಾದ ಕೃತಿಗಳು ಬದುಕಿಗೆ ಹತ್ತಿರವಾಗಿದೆ; ಬದುಕೇ ಆಗಿದೆ. ಓದುಗನನ್ನು ಅನಾಯಾಸವಾಗಿ ಆ ಕಾದಂಬರಿ ಆಳಕ್ಕೆ ಎಳೆದೊಯ್ಯುತ್ತದೆ; ಅದರ ಶೈಲಿಯ ಆಲಿಪ್ತತೆಯಿಂದಾಗಿ, ಸಂಸ್ಕೃತವನ್ನು ವೈಭವಿಸುವುದರಲ್ಲಿ ಹೆಚ್ಚು ಶಕ್ತಿ ವ್ಯಯವಾದಂತೆ ಕಂಡು ಬಂದು ಅದರ ಸೆಳೆವಿನಲ್ಲಿ ಕಾವ್ಯದ ಆಳ ಕಡಿಮೆಯಾಗಿ ಹೋಗುತ್ತಿರುವಂತೆ ‘ರಾಮಾಯಣ ದರ್ಶನಂ’ ಓದುವಾಗ ಕೂಡ ಒಮ್ಮೊಮ್ಮೆ ಅನುಭವಕ್ಕೆ ಬಂದುದು ಉಂಟು.

ಜನಭಾಷೆಗೆ ಮನ್ನಣೆಗೆ ಮನವಿ

ಕನ್ನಡದ ಸಂದರ್ಭದಲ್ಲಿ, ಸಂಸ್ಕೃತವನ್ನು, ಅದು ವಾಸ್ತವವಾಗಿ ಶಿಕ್ಷಣ ಕ್ರಮದಲ್ಲಿ ಪಡೆದುಕೊಳ್ಳಬೇಕಾದ ಪ್ರಥಮೇತರ ಸ್ಥಾನವನ್ನು ನಿರ್ಭಿಡೆಯಿಂದ ಬೆಟ್ಟು ಮಾಡಿತೋರಿಸಿದ ನೀವೇ ನಿಮ್ಮ ಕಾವ್ಯ ರಚನೆಯಲ್ಲಿ ಕಡೆಗೆ ಗದ್ಯ ಬರೆಯುವಾಗ ಕೂಡ ಸಂಸ್ಕೃತಕ್ಕೆ ಆದ್ಯತೆ ಕೊಟ್ಟಿರುವುದು ವಿಮರ್ಯಾಸವೆನಿಸುತ್ತದೆ. ಬಹುಜನರು ನಿಮ್ಮ ಸಾಹಿತ್ಯವನ್ನು ಕುರಿತು ತಳೆದ ಈ ಅಭಿಪ್ರಾಯವನ್ನು ನೀವು ಪ್ರಾಂಜಲವಾಗಿ ಸ್ವೀಕರಿಸುತ್ತೀರೆಂಬ ವಿಶ್ವಾಸದಿಂದ ನಿಮ್ಮ ಮುಂದೆ ಇದನ್ನು ತಿಳಿಸುತ್ತಿದ್ದೇನೆ.

ನಿಮ್ಮ ಇನ್ನುಳಿದ ಕಾಲದ ಬರವಣಿಗೆಯಲ್ಲಿ ನೀವು ಜನಭಾಷೆಗೆ ಮನ್ನಣೆ ಕೊಡಬೇಕೆಂದು ಕೋರುತ್ತೇನೆ. ಏಕೆಂದರೆ, ನಿಮ್ಮಂಥ ಮಹತ್ವದ ಕವಿಗಳು ಅಳವಡಿಸಿಕೊಂಡಾಗ ಜನ ಭಾಷೆಯೂ ಗೆಲ್ಲುತ್ತದೆ.

ಹಾರೈಕೆ

ಇನ್ನೂ ಹಲವು ವಸಂತಗಳನ್ನು ನೀವು ಕಾಣುವಂತಾಗಲೆಂದೂ ಅದರಿಂದ ನೀವು ಪಡೆಯುವ ಅನುಭವಶ್ರೀ ಕನ್ನಡಕ್ಕೂ ದಕ್ಕುವಂತಾಗಲೆಂದೂ ಸಾಹಿತ್ಯ ಪರಿಷತ್ತಿನ ಪರವಾಗಿ ಈ ಶುಭ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

(ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ೧೯೮೦ರ ಜನವರಿ ೧೪ರಂದು ಕುವೆಂಪು ಜನ್ಮೋತ್ಸವ ಸಮಿತಿ ಆಶ್ರಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಂಪ. ನಾಗರಾಜಯ್ಯ ಅವರು ಮಾಡಿದ ಅಭಿನಂದನಾ ಭಾಷಣ)

* * *