ಕನ್ನಡ ಸಾಹಿತ್ಯ ಪರಿಷತ್ತು ಈ ವರ್ಷ (೧೯೮೦) ಆಲೂರರು, ಹಳಕಟ್ಟಿಯವರು ಮತ್ತು ಪ್ರೇಮಚಂದ್ ಈ ಮೂವರು ಮಹನೀಯರ ಶತಮಾನೋತ್ಸವವನ್ನು ಆಚರಿಸುತ್ತಲಿದೆ. ಮೊದಲ ಇಬ್ಬರು ಕನ್ನಡದಲ್ಲಿ ಬರೆದವರು, ಕರ್ನಾಟಕದಲ್ಲಿ ಬಾಳಿದವರು. ಪ್ರೇಮಚಂದರು ಉರ್ದು, ಹಿಂದಿ ಭಾಷೆಗಳಲ್ಲಿ ಬರೆದವರು. ಅವರ ಲೇಖನಿ ಉರ್ದುವಿನಲ್ಲಿ ಆರಂಭಿಸಿ ಹಿಂದಿಯಲ್ಲಿ ನಿಂತಿತು. ಆದರೆ ಸವ್ಯಸಾಚಿಯಂತೆ ಹಿಂದಿ, ಉರ್ದು ಎರಡು ಭಾಷೆಗಳಲ್ಲೂ ಉತ್ಕೃಷ್ಟ ಕೃತಿಗಳನ್ನು ರಚಿಸಿದ್ದಾರೆ. ಹಿಂದಿ ಉರ್ದು ಮಿಶ್ರಿತ ಹಿಂದೂಸ್ಥಾನಿ ಭಾಷೆಯನ್ನು ಇವರು ಮಾನ್ಯ ಮಾಡಿದ್ದಾರೆ. ಅಲ್ಲದೆ ಲಿಪಿ ಸುಧಾರಣೆ ಆಗಬೇಕೆಂಬ ವಿಚಾರದಲ್ಲಿ ಇವರು ರೋಮನ್ ಲಿಪಿಗಿಂತ ದೇವನಾಗರಿ ಲಿಪಿಯೇ ಭಾರತದ ಸಂದರ್ಭದಲ್ಲಿ ಉತ್ತಮವಾದುದು ಎಂದು ಅಭಿಪ್ರಾಯ ಪಟ್ಟಿದ್ದರು.

‘ಹಿಂದಿ ಕಾದಂಬರಿ ಸಾರ್ವಭೌಮ’, ‘ಹಿಂದಿ ಕಾದಂಬರಿ ಜನಕ’ ಎಂಬ ಹೆಸರಿಗೆ ಪಾತ್ರರಾಗಿರುವ ಪ್ರೇಮಚಂದರನ್ನು ರಶಿಯಾದ ಮ್ಯಾಗ್ಸಿಂ ಗಾರ್ಕಿಗೆ ಸಾಮಾನ್ಯವಾಗಿ ಹೋಲಿಸುವುದುಂಟು. ಇದಕ್ಕೆ ಕಾರಣ ಇವರ ಕೃಷಿಕರ, ಕೂಲಿಗಾರರ ಕೊರಳಾಗಿ ಬರೆದಿರುವುದು. ಸಾಮಾನ್ಯವಾಗಿ ಮೂಕರ ವೇದನೆ ಸಂವೇದನೆಯನ್ನು ಇವರ ಬಹುಪಾಲು ಕೃತಿಗಳಲ್ಲಿ ಆಲಿಸಬಹುದಾಗಿದೆ. ದೀನದಲಿತರ ಗೋಳಿನಬಾಳು ಇವರ ನೂರಾರು ಕಥೆಗಳಲ್ಲಿ ಹರಳುಗೊಂಡಿದೆ. ಅದರಂತೆ ಇವರ ಹತ್ತಾರು ಕಥೆಗಳಲ್ಲಿ ಪದ ದಲಿತರ ದುಃಖ ದುಮ್ಮಾನಗಳು ಹೆಪ್ಪುಗಟಿವೆ.

ಪ್ರೇಮಚಂದ್ರರು ಪ್ರಗತಿಶೀಲ ಜನವಾದಿ ಲೇಖಕರು. ಜನಪರವಾದ ಧೋರಣೆ ತಳೆದವರು. ಆನ ಬದುಕಲೆಂದು ಸಾಹಿತ್ಯ ರಚನೆಯಾಗಬೇಕೆಂದು ೭೦೦ ವರ್ಷಗಳ ಹಿಂದೆ ನಮ್ಮ ರಾಘವಾಂಕ ಕವಿ ಹೇಳಿದ್ದು, ಅದರ ಅನುಸರಣೆ, ಆಚರಣೆ ಎಂಬಂತೆ ಪ್ರೇಮಚಂದರ ಬರವಣಿಗೆ ಇದೆ. ಇವರದು ಆಡಂಬರವಿಲ್ಲದ ಸರಳವಾದ ಭಾಷೆ. ಆ ಭಾಷೆಯಲ್ಲಿ ಪೆಡಸಿಲ್ಲ. ಇವರು ಬಳಸಿದ್ದು ಹರಕು ಗುಡಿಸಲು, ಮುರುಕು ಜೋಪಡಿಯಲ್ಲಿ ವಾಸಿಸುವ ಬಡಬಗ್ಗರ ಜೀವಂತ ಭಾಷೆ. ಹೀಗಾಗಿ ಅವರ ಭಾಷೆಯಲ್ಲಿ ದೇಶಿ ಶಬ್ದಗಳು ನರ್ತನ ಮಾಡುತ್ತಿರುತ್ತವೆ.

ಪ್ರೇಮಚಂದರು ೧೯೩೫ರ ಜನವರಿಯಲ್ಲಿ ಕರ್ನಾಟಕಕ್ಕೂ ಹತ್ತು ದಿನಗಳ ಕಾಲ ಆಗಮಿಸಿದ್ದರು. ಆಗ ಬೆಂಗಳೂರು-ಮೈಸೂರು ನಗರಗಳನ್ನು ನೋಡಿ ಆನಂದ ಪಟ್ಟು ತಮ್ಮ ‘ಹಂಸ’ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ. ಶ್ರೀರಂಗಪಟ್ಟಣ, ಕನ್ನಂಬಾಡಿಕಟ್ಟೆ – ಬೃಂದಾವನ, ಮೈಸೂರು ಅರಮನೆ, ಬೆಂಗಳೂರು ಲಾಲ್‌ಬಾಗ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತು – ಕುರಿತು ತುಂಬ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಇಬ್ಬರು ಮೂವರು ಕನ್ನಡ ಸಾಹಿತಿಗಳ ವಿಚಾರವಾಗಿ ಇವರ ಅಭಿಪ್ರಾಯ ಪರಿಭಾವನಾರ್ಹವಾಗಿದೆ. ಕನ್ನಡ ಸಾಹಿತ್ಯ ತುಂಬ ಶ್ರೀಮಂತವಾದುದೊಂದೂ ಕನ್ನಡ ಭಾಷೆ ಉತ್ತಮ ಪರಂಪರೆಯನ್ನು ಪಡೆದು ಸೊಗಸಾಗಿದೆಯೆಂದೂ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಭಾರತದಲ್ಲೇ ಒಂದು ಅನನ್ಯ ಹಾಗೂ ಅಸಾಧಾರಣ ಸಂಸ್ಥೆಯೊಂದೂ, ಈ ಸಂಸ್ಥೆ ಕನ್ನಡ ಭಾಷೆ-ಸಾಹಿತ್ಯಗಳ ಸಂವರ್ಧನೆಗೆ ಅದ್ಭುತವಾದ ಕೆಲಸ ಮಾಡುತ್ತಿದೆಯೆಂದೂ ಶ್ಲಾಘಿಸಿದ್ದಾರೆ. ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಒಂದು ಭವ್ಯ ಕಟ್ಟಡವಿದೆಯೆಂದು ತಿಳಿಸಿ ಅದನ್ನು ನೋಡಿ ಅಚ್ಚರಿ ಸೂಚಿಸಿದ್ದಾರೆ. ಬೆಳ್ಳಾವೆ ವೆಂಕಟನಾರಣಪ್ಪನವರ ಸೇವೆ, ವ್ಯಕ್ತಿತ್ವ ಅದ್ಭುತವಾದುದೆಂದು ಕೊಂಡಾಡಿದ್ದಾರೆ. ಸಾಹಿತ್ಯ ಪರಿಷತ್ತು ಉತ್ತಮ ಗ್ರಂಥಗಳನ್ನು ಕೂಡ ಪ್ರಕಟಿಸುತ್ತಿದೆಯೆಂದಿದ್ದಾರೆ.

ಈ ವರ್ಷದ ಮಾರ್ಚಿ ೨೦ರಿಂದ ೨೨ರ ವರೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ “ಶಾಂತಿ ಮತ್ತು ನಿಶ್ಯಸ್ತ್ರೀಕರಣಕ್ಕಾಗಿ ಶಿಕ್ಷಣ ಮತ್ತು ರಾಷ್ಟ್ರೀಯ ಸಂಸ್ಕೃತಿ ಸಂರಕ್ಷಣ”ದ ಅಂತರರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಸಾವಿರಕ್ಕೂ ಮಿಕ್ಕಿ ಪ್ರತಿನಿಧಿಗಳಿದ್ದರು. ಭಾರತದ ಎಲ್ಲಾ ಪ್ರಾಂತಗಳಿಂದ ಬಂದ ಪ್ರತಿನಿಧಿಗಳಲ್ಲದೆ ೬೩ ಬೇರೆ ರಾಷ್ಟ್ರಗಳ ಮತ್ತು ೧೪ ಅಂತರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು.

ಇಷ್ಟು ದೊಡ್ಡ ಮಟ್ಟದ ಮಹತ್ವದ ಸಮ್ಮೇಳನವನ್ನು ವಿಶ್ವಶಾಂತಿ ಸಮಿತಿಯ ಸಹಯೋಗದೊಡನೆ ಏರ್ಪಡಿಸಿದ್ದವರು ಪ್ರೇಮಚಂದರ ಶತಮಾನೋತ್ಸವ ಸಮಿತಿಯವರು. ಪ್ರೇಮಚಂದರ ಗೌರವಾರ್ಥ ಏರ್ಪಾಟಾಗಿದ್ದ ಈ ಸಮ್ಮೇಳನದಲ್ಲಿ ಅವರ ಕೃತಿಗಳ ವಿಚಾರವಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮೆಚ್ಚುಗೆ ವ್ಯಕ್ತಪಟ್ಟಿತು. ಎಲ್ಲ ಭಾಷಣಕಾರರು ಸಾಮಾಜಿಕ ಅನ್ಯಾಯ, ಆರ್ಥಿಕ ಶೋಷಣೆ, ಸಾಂಸ್ಕೃತಿಕ ಅಧಃಪತನ – ಇವುಗಳ ವಿರುದ್ಧ ಪ್ರೇಮಚಂದರು ನಡೆಸಿದ ಹೋರಾಟವನ್ನು ಮತ್ತೆ ಮುಂದುವರಿಸಿ ಎತ್ತಿ ಹಿಡಿಯಲು ಕರೆಕೊಟ್ಟರು. ನೀಲಂ ಸಂಜೀವರೆಡ್ಡಿಯವರು ಸಮ್ಮೇಳನಕ್ಕೆ ಕಳಿಸಿದ ಸಂದೇಶದಲ್ಲಿ.

“ಪ್ರೇಮಚಂದರು ಆಧುನಿಕ ಹಿಂದು ಉರ್ದು ಕಾದಂಬರಿಯ ಜನಕರಾಗಿದ್ದು ಭಾರತದ ಸಂಕೀರ್ಣ ಸಂಸ್ಕೃತಿಯ ನೈಜ ಪ್ರತಿನಿಧಿಯಾಗಿದ್ದರಲ್ಲದೆ ಹಿಂದೂ – ಮುಸ್ಲಿಂ ಸೌಹಾರ್ದದಲ್ಲಿ ಅಕುಟಿಲವೂ ತೀವ್ರವೂ ಆದ ನಿಷ್ಠೆಯುಳ್ಳವರೂ ಆಗಿದ್ದರು.” ಎಂದು ತಿಳಿಸಿದ್ದರು. ಹಿಂದಿ ಸಾಹಿತ್ಯದ ಅತಿರಥ ಮಹಾರಥರೂ ಶತಮಾನೋತ್ಸವ ಸಮಿತಿ ಸದಸ್ಯರೂ ಆದ ಕೈಫಿ ಅಜ್ಮಿ, ಡಾ|| || ಎಚ್.ಆರ್. ಬಚ್ಚನ್, ಡಾ|| || ಶಿವಮಂಗಲ ಸಿಂಧ್ ಸುಮನ್, ಸುಭಾಷ್ ಮುಖ್ಯೋಪಾಧ್ಯಾಯ, ಜಿ.ಆರ್.ತಬನ್, ಉಪೇಂದ್ರನಾಥ ಅಷ್ಕ, ಡಾ|| || ಮುಲ್ಕರಾಜ ಆನಂದ, ಡಾ. ಖಮರ್ ರ‍್ಯಾಸ್, ಡಾ.ಮಹದೇವ ಸಹಾ, ವಿಶ್ವನಾಥ ತ್ರಿಪಾಠಿ, ಕೇವಲ್ ಗೋಸ್ವಾಮಿ, ಪ್ರಾ|| ಸತೀಶ್ ಚಂದ್ರ – ಮೊದಲಾದವರು ಈ ಸಮ್ಮೇಳನದಲ್ಲಿ ಹಾಜರಿದ್ದರು. ರಾಷ್ಟ್ರವ್ಯಾಪಿ ಕಾರ್ಯಕ್ರಮಗಳನ್ನು, ವಿಚಾರ ಸಂಕಿರಣಗಳನ್ನು, ಸಭೆ ಸಮಾರಂಭಗಳನ್ನು ಪ್ರೇಮಚಂದ ಅವರ ಸಾಹಿತ್ಯ ಕುರಿತು ಏರ್ಪಡಿಸಲು ಕರೆ ಕೊಟ್ಟರು. ಪ್ರೇಮಚಂದರು ಜನಸಾಮಾನ್ಯರ ವ್ಯಕ್ತಿಯಾದುದರಿಂದ ಈ ಸಮ್ಮೇಳನದಲ್ಲಿ ಕಾರ್ಮಿಕ ಸಂಘಗಳ ಪ್ರತಿನಿಧಿಗಳೂ ಭಾಗವಹಿಸಿದ್ದರು: ಅಧ್ಯಾಪಕರು, ಪತ್ರಿಕಾ ಕರ್ತರು, ಲೇಖಕರು, ಯುವಕರು ಹಾಜರಿದ್ದರು.

ಕೇಂದ್ರ ಸರ್ಕಾರದ ವಾರ್ತಾ-ಪ್ರಸಾರ ಸಚಿವರಾದ ವಸಂತ ಸಾಠೆಯವರು : “ಸಮಕಾಲೀನ ಸಮಾಜವನ್ನು, ಅದರಲ್ಲಿಯೂ ಕೆಳಗಿನ ಪದದಲಿತ ಸ್ತರದಲ್ಲಿರುವ ಜೀವನವನ್ನು ವಾಸ್ತವತೆಯಿಂದ ಚಿತ್ರಿಸಿದ ಧೀಮಂತ ಸಾಹಿತಿ ಪ್ರೇಂಚಂದ್. ಠಾಗೂರ್ ಘಾಲೀಬ್‌ರಂತೆ ಪ್ರೇಮಚಂದರು ಕೂಡ ರಾಷ್ಟ್ರದ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂದರ್ಭಗಳಿಗೆ ಹೊಸ ಅಂತರ್ದೃಷ್ಟಿ ಕೊಟ್ಟರು. ಭಾರತದ ರಾಷ್ಟ್ರೀಯ ಆಂದೋಲನದ ಮುಖವಾಣಿ ಹಳೆಯ ಹಾಗೂ ಹೊಸ ಸಂಪ್ರದಾಯಗಳು ನಡುವಿನ ಸಂಘರ್ಷವನ್ನು ಪ್ರೇಮಚಂದರು ಸಮರ್ಥವಾಗಿ ಬಿಂಬಿಸಿದ್ದಾರೆ. ಲೆನಿನರಿಗೆ ಗಾರ್ಕಿ ಹೇಗೋ ಹಾಗೆ ಗಾಂಧೀಜಿಯವರಿಗೆ ಪ್ರೇಮಚಂದ್” – ಎಂದು ಅಭಿಪ್ರಾಯ ತಿಳಿಸಿದ್ದಾರೆ. ಟಾಲ್‌ಸ್ಟಾಯ್ ಬರವಣಿಗೆ ರಷಿಯಾದ ಕ್ರಾಂತಿಯ ಕನ್ನಡಿಯಾಗಿರುವಂತೆ ಪ್ರೇಮಚಂದರ ಬರವಣಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಹಜ ದರ್ಪಣವಾಗಿದೆ. ಮಣ್ಣಿನ ಮಗನಾದ ಈ ಲೇಖಕರು ಜನಸಮುದಾಯಕ್ಕೆ ಸದಾ ಸ್ಪಂದಿಸುತ್ತಿದ್ದರು. ಪ್ರೇಮಚಂದರ ಸಮಕಾಲೀನರೂ ಲೆನಿನ್ ಶಾಂತಿ ಪಾರಿತೋಷಕ ವಿಜೇತರು ಉರ್ದು ರಾಷ್ಟ್ರ ಕವಿಯೂ ಆದ ಫೈಜ್ ಅಹಮದ್ ಫೈಜರು ಮುಕ್ತಕಂಠರಾಗಿ ಪ್ರೇಮಚಂದರನ್ನು ನೆನೆದರು. ವಿಶ್ವ ಸ್ವಾತಂತ್ರ್ಯ ಮತ್ತು ಮಾನವೀಯತೆ ಬಗೆಗೆ ಪ್ರೇಮಚಂದರಲ್ಲಿದ್ದ ಆದರ್ಶ ಏಷಿಯಾದ ಲೇಖಕರಲ್ಲಿ ಸೃಜನಶೀಲ ಚಟುವಟಿಕೆಯನ್ನು ಪ್ರೇರೇಪಿಸಿತು. ಶಾಂತಿ ಮತ್ತು ನಿಶ್ಯಸ್ತ್ರೀಕರಣಗಳ ವಿಚಾರದಲ್ಲಿ ತೊಡಗಲು ಬೇಕಾದ ಚಿತ್ತಸ್ಥೈರ್ಯವನ್ನು ಅವರು ತಂದುಕೊಟ್ಟರು. ಬಡವರ ನೋವು ಸಾವುಗಳನ್ನು ನಿರೂಪಿಸುವಲ್ಲಿ ಅವರು ಸಿದ್ಧಹಸ್ತರಾಗಿದ್ದರು.

ಸಾಮ್ರಾಜ್ಯಷಾಹಿ ಆಡಳಿತ ಕಾಲದಲ್ಲಿ ಅವರು ಅವಕಾಶಹೀನರ ಪರವಾಗಿ ಲೇಖನಿ ಹಿಡಿದರು. ಪ್ರೇಮಚಂದರ ಶತಮಾನೋತ್ಸವ ಕಾರ್ಯಕ್ರಮಗಳು ಮಾಸ್ಕೊ, ಲೆನಿನ್ ಗ್ರಾಡ್, ಟಾಷ್ಕೆಂಟ್‌ಗಳಲ್ಲೂ ನಡೆದಿದೆ. ಅವರ ಹತ್ತಾರು ಕತೆ ಕಾದಂಬರಿಗಳು ಸೋವಿಯತ್ ದೇಶದ ಭಾಷೆಗಳಲ್ಲಿ ಅವತರಿಸಿದೆ. ಹೊಸ ಅಂತರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗಾಗಿ ಶೋಧನ ನಡೆದಿರುವ ವರ್ತಮಾನಕ್ಕೆ ಪ್ರೇಮಚಂದರು ತುಂಬ ಪ್ರಸುತ್ತರಾಗಿದ್ದಾರೆ. ಅವರ ಕತೆ ಕಾದಂಬರಿಗಳಲ್ಲಿ ಭಾರತದ ಜನರ ಹೋರಾಟದ ಬದುಕಿಗಾಗಿ ನಡೆಸಿದ ಹೋರಾಟದ ಸಹಜಚಿತ್ರ ಕಣ್ಣಿಗೆ ಕಟ್ಟಲು ಕಾರಣ, ಪ್ರೇಮಚಂದರು ನೊಂದ ಹೃದಯದಿಂದ, ಬೆಂದ ಬದುಕಿನಿಂದ ಬರೆದದ್ದು. ಅವರ ಬರವಣಿಗೆಯಲ್ಲಿ ಸಮಕಾಲೀನ ನಗ್ನಸತ್ಯ ತಾಂಡವವಾಡುತ್ತದೆ. “ಭಾರತದಲ್ಲಿ, ಜಗತ್ತಿನಲ್ಲಿ ಇಂದಿಗೂ ಎಲ್ಲಿ ಜನತೆ ಶಾಂತಿ, ನ್ಯಾಯ, ರಾಷ್ಟ್ರೀಯ ಸ್ವಾತಂತ್ರ್ಯ, ಸಾಮಾಜಿಕ ಪ್ರಗತಿ, ಆತ್ಮ ಗೌರವ ಮತ್ತು ಒಂದು ಹಿಡಿ ಕೂಳಿಗಾಗಿ ದುಡಿಯುತ್ತಿದೆಯೋ ಅಲ್ಲೆಲ್ಲ ಪ್ರೇಮಚಂದರು ನಿನದಿಸುತ್ತಾರೆ” ಎಂಬ ರೋಮೇಶ ಚಂದರ ಹೇಳಿಕೆ ಯಥೋಚಿತವಾಗಿದೆ. ಪ್ರೇಮಚಂದರು ತಮ್ಮನ್ನು ಗ್ರಾಮೀಣ ಜನ ಸಮುದಾಯದಲ್ಲಿ ಕಂಡರು. ಗ್ರಾಮ ಜೀವನದ ಭಾರತ ಅವರಲ್ಲಿ ಒಡಮೂಡಿದೆ. ಪ್ರೇಂಚಂದರ ವಿಶೇಷ ಅಂಚೆ ಚೀಟಿಯನ್ನು ಕಳೆದ ತಿಂಗಳು ಕಮಲಾದೇವಿ ಚಟ್ಟೋಪಾಧ್ಯಾಯರು ದೆಹಲಿಯಲ್ಲಿ ಬಿಡುಗಡೆ ಮಾಡಿದರು.

(ಕನ್ನಡ ನುಡಿ, ಆಗಸ್ಟ್ ೧೬, ೧೯೮೦)

* * *