ಬಿ.ಆರ್. ಪ್ರಾಜೆಕ್ಟ್‌ನ ಸ್ನಾತಕೋತ್ತರ ಕೇಂದ್ರದಲ್ಲಿರುವ ಕನ್ನಡ ವಿಭಾಗಕ್ಕೂ ನನಗೂ ವರ್ಷದಿಂದ ವರ್ಷಕ್ಕೆ ಸ್ನೇಹ ಮಧುರತಮವಾಗಿ ಕೆನೆಗಟ್ಟುತ್ತಿದೆ. ಕಳೆದ ವರ್ಷ ಇಲ್ಲಿ ಏರ್ಪಾಟು ಆಗಿದ್ದ ಜಾತ್ರೆಗಳು ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂತೋಷವನ್ನು ನನಗೆ ಒದಗಿಸಿಕೊಟ್ಟಿದ್ದನ್ನು ಈಗಲೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಆದಾದ ತರುವಾಯ ಕೈಲಾಸಂ ಅವರನ್ನು ಕುರಿತ ವಿಚಾರ ಸಂಕಿರಣದಲ್ಲೂ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿ ಗೌರವವನ್ನು ತೋರಿಸಿದ್ದಿರಿ. ಕಳೆದವಾರ ತಾನೆ ನಿಮ್ಮ ಸಹಕಾರದಿಂದ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯವರು ಡಾ|| ಶ್ರೀರಂಗರನ್ನು ಕುರಿತು ಏರ್ಪಾಟು ಮಾಡಿದ್ದ ವಿಚಾರ ಸಂಕಿರಣದಲ್ಲೂ ಪಾಲುಗೊಳ್ಳಲು ಪ್ರೀತಿಯಿಂದ ಬರಮಾಡಿಕೊಂಡಿದ್ದಿರಿ. ಇದೀಗ ಮತ್ತೆ ‘ಜಾನಪದ ಮತ್ತು ಪೂರಕ ಕ್ಷೇತ್ರಗಳು’ ಎಂಬ ವಿಚಾರ ಸಂಕಿರಣವನ್ನು ಏರ್ಪಾಡು ಮಾಡಿ ಅದರ ಸಮಾರೋಪ ಭಾಷಣಕ್ಕೆ ನನ್ನನ್ನು ಅಕ್ಕರೆಯಿಂದ ಕರೆಸಿದ್ದೀರಿ. ಹೀಗೆ ಮೇಲಿಂದ ಮೇಲೆ ನನ್ನ ಮೇಲೆ ನೀವು ಪ್ರೀತಿಯ ಅಭಿಷೇಕವನ್ನು ಮಾಡುತ್ತಿದ್ದೀರಿ. ಇದಕ್ಕೆ ಪ್ರತಿಯಾಗಿ ನಾನು ಏನನ್ನು ತಾನೆ ಕೊಡಬಲ್ಲೆ? ಪ್ರೀತಿಗೆ ಸಾಟಿಯಾದದ್ದು ಪ್ರೀತಿಯೆ ಎಂಬ ಹಿರಿಯರ ಅನುಭವದ ಮಾತನ್ನು ಪುರಸ್ಕರಿಸುತ್ತಾ ನನ್ನ ಪ್ರಾಂಜಲವಾದ, ಅಕಳಂಕವಾದ ಸದ್ಭಾವನೆಯನ್ನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಪ್ರೀತಿ ಅಕ್ಷಯವಾಗಲೆಂದು ಹಾರೈಸುತ್ತೇನೆ.

ಒಂದು ಕಾಲದಲ್ಲಿ ಅಸಡ್ಡೆಗೆ ಗುರಿಯಾಗಿದ್ದ ಜಾನಪದವು ಇಂದು ಅನೇಕರಿಗೆ ಅಧ್ಯಯನದ ಮತ್ತು ಶೋಧನೆಯ ವಿಶೇಷ ಆಕರವಾಗಿಬಿಟ್ಟಿದೆ. ನಗರ ಜಾನಪದ, ಲಿಖಿತ ಜಾನಪದ, ಪ್ರಾಣಿ ಜಾನಪದ, ಸಸ್ಯ ಜಾನಪದ, ಖನಿಜ ಜಾನಪದ, ಜಾತ್ರೆ ಜಾನಪದ, ಆಕಾಶ ಜಾನಪದ ಮೊದಲಾದ ಹೊಸ ಹೊಸ ಶಾಖೆಗಳನ್ನೂ ಗುರುತಿಸಿ ಅಧ್ಯಯನಿಸುತ್ತಿರುವುದು ಪ್ರಶಂಸಾರ್ಹ ವಿಷಯವೇ ಆಗಿದೆ. ‘ಕನ್ನಡ ಜಾನಪದ ವಿಶ್ವಕೋಶ’ದಂಥ ಭಾರತೀಯ ಭಾಷೆಗಳಲ್ಲೇ ಚಾರಿತ್ರಿಕ ಮಹತ್ವ ಪಡೆದ ಆಕರ ಗ್ರಂಥವನ್ನು ಯಶಸ್ವಿಯಾಗಿ ಸಿದ್ಧಗೊಳಿಸುವ ಹಂತಕ್ಕೆ ಕನ್ನಡ ಜಾನಪದ ಕಾರ್ಯ ಮುಂದುವರಿಯಿತು. ಇದು ಜಾನಪದ ಅಭ್ಯಾಸಿಗಳಿಗೆಲ್ಲ ಸಂತೋಷದನ್ನುಂಟು ಮಾಡುವ ವಿಷಯ. ಸಾಂಸ್ಕೃತಿಕ ದಾಖಲೆ ಎನಿಸಿರುವ ಜಾನಪದ ಎಲ್ಲ ಶಾಸ್ತ್ರಜ್ಞರನ್ನು ಆಕರ್ಷಿಸಿದೆ. ಕಲಾತಜ್ಞರು, ನಾಟ್ಯ ಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞರು, ಭಾಷಾ ಶಾಸ್ತ್ರಜ್ಞರು, ಮಾನವ ಶಾಸ್ತ್ರಜ್ಞರು ಮನೋವಿಜ್ಞಾನಿಗಳು ಜಾನಪದವನ್ನು ಪ್ರಮುಖ ಆಕರವೆಂದು ಭಾವಿಸಿರುವುದುಂಟು. ಆದರೆ ಸಮಷ್ಟಿಯ ಅಭಿವ್ಯಕ್ತಿ ಎನಿಸಿರುವ ಈ ಪ್ರಕಾರವನ್ನು ಯಾವುದಾದರೂ ನಿರ್ದಿಷ್ಟ ಅಧ್ಯಯನದ ವಸ್ತುವೆಂದು ಭಾವಿಸುವುದು ತಪ್ಪಾಗುತ್ತದೆ. ಅದಕ್ಕೆ ಬದಲಾಗಿ ಅದಕ್ಕೆ ಹೊಂದಿಕೊಯಾಗುವ ಹಲವಾರು ಶಿಸ್ತುಗಳ ವಿನಿಮಯ ಕ್ಷೇತ್ರವಾಗುತ್ತಿರುವುದು ಗಮನಾರ್ಹ ಸಂಗತಿ. ಇಂದು ಏರ್ಪಾಟಾಗಿರುವ ‘ಜಾನಪದ ಮತ್ತು ಪೂರಕ ಕ್ಷೇತ್ರಗಳು’ ಎಂಬ ವಿಚಾರ ಸಂಕಿರಣ ಈ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆ ಎಂದು ಭಾವಿಸಿರುವೆ.

ಜಾನಪದ ವ್ಯಾಪ್ತಿಯಲ್ಲಿ ಬರುವ ವಿಷಯಗಳು ಬೇರೆ ಬೇರೆ ಶಾಸ್ತ್ರಗಳ ದೃಷ್ಟಿಯಿಂದಲೂ ಪೂರಕವಾಗಿರುತ್ತವೆ. ಜಾನಪದೊಂದಿಗಿನ ಇಂಥ ಅಧ್ಯಯನದಿಂದಾಗಿ ಆಯಾ ಶಾಸ್ತ್ರಗಳು ಪಡೆಯಬಹುದಾದ ಲಾಭಗಳು ಮತ್ತೊಂದು ಆಯಾಮವಾಗಿಬಿಡುತ್ತವೆ. ಈ ದೃಷ್ಟಿಯಿಂದಲೂ ಪ್ರಸ್ತುತ ವಿಚಾರ ಸಂಕಿರಣ ಕರ್ನಾಟಕದ ಜಾನಪದ ಅಧ್ಯಯನದಲ್ಲಿ ಒಂದು ಹೊಸ ದಾಖಲೆಯಂದೇ ಭಾವಿಸಬೇಕು.

ಜನತೆಗೆ ತಮ್ಮದೇ ಆದ ಪರಂಪರೆ ಇದೆ. ಸಮಾಜದಲ್ಲಿರುವ ಪ್ರತಿಯೊಬ್ಬರೂ ಅನ್ಯರನ್ನು ಪರಿಚಯಿಸಿಕೊಂಡೇ ಇರುತ್ತಾರೆಂದು ಹೇಳಲಿಕ್ಕಾಗುವುದಿಲ್ಲ. ಆದರೆ ತಾವಿರುವ ವ್ಯವಸ್ಥೆಯ ಜೀವಂತಿಗೆ ಕಾರಣ ಯಾವುದಿರಬಹುದೆಂಬುದಕ್ಕೆ ಸರಿಯಾದ ಉತ್ತರ ಕೊಡದಿದ್ದರೂ ಅವನ ಗಮನಕ್ಕಂತೂ ಬಂದೇ ಇರುತ್ತದೆ. ಅವರ ಪರಂಪರೆ ನಂಬಿಕೆ ಆಚರಣೆಗಳಿಂದ ಸಂಪ್ರದಾಯಗಳ ಮೂಲಕ ಅಭಿವ್ಯಕ್ತವಾಗುತ್ತಿರುತ್ತದೆ. ಬೇರೆಯವರಿಗಿಂತ ನಾವು ಭಿನ್ನ ಎಂಬ ಸಮಷ್ಟಿ ಪ್ರಜ್ಞೆಯ ಅಭಿವ್ಯಕ್ತಿಗಳಾಗಿ ಈ ಆರಾಧನೆಗಳು ಕಾಣಿಸುತ್ತವೆ. ಒಂದೊಂದು ಜನಾಂಗಕ್ಕೂ ಒಂದೊಂದು ಜಾನಪದವಿರುವಂತೆ ಕೂಲಿಕಾರರ, ಕಾರ‍್ಮಿಕರ, ವಿದ್ಯಾರ್ಥಿಗಳ ಇವರದೇ ಜಾನಪದ ಇರಲಿಕ್ಕೂ ಸಾಧ್ಯತೆ ಇದೆ ಎಂಬುದನ್ನು ಗಮನಿಸಬೇಕು. ಒಂದು ಹಳ್ಳಿಯ ಯಾವುದೊ ಒಂದು ಕುಟುಂಬದ ನಂಬಿಕೆಗಳು, ಆಚರಣೆಗಳು ಆ ಮೂಲಕ ಸಂಪ್ರದಾಯಗಳು ಬೇರೆ ಬೇರೆ ರೀತಿಯಲ್ಲಿ ಇರಲಿಕ್ಕೂ ಸಾಧ್ಯತೆ ಇದೆ. ಹಾಗಾಗಿ ಸಮಾಜದ ಪ್ರತಿ ಘಟಕದಲ್ಲೂ ತನ್ನದೇ ಅದ ಜಾನಪದವಿರುತ್ತದೆ. ಈ ಎಲ್ಲ ಕಾರಣಗಳಿಂದ ಜಾನಪದ ವಿದ್ವಾಂಸ ಬದುಕಿನ ಎಲ್ಲ ಮಜಲುಗಳನ್ನು ಗಂಭೀರವಾಗಿ ಪರಿಗಣಿಸಲೇಬೇಕಾಗುತ್ತದೆ. ಜಾನಪದದಲ್ಲಿ ಇಂಥ ವಿಷಯಗಳು ಬರುತ್ತವೆ, ಇಂಥವು ಇಲ್ಲ ಎಂಬುವಂತಿಲ್ಲ. ಅದು ಸರ್ವಗ್ರಾಹಿಕ ಕಥೆ, ಗಾದೆ, ಒಗಟು, ಹಾಡು, ಆಟ, ಪುರಾಣಗಳು, ಒಡಪು, ಬೈಗುಳ, ಚೇಷ್ಟೆ, ಆಣೆ, ಪ್ರಮಾಣ, ಕುಣಿತ, ನಡವಳಿಕೆ, ಆರಾಧನೆಗಳು, ಹಬ್ಬಗಳು, ಜನನ, ಯೌವ್ವನ, ಮದುವೆ, ಸಾವು ಇತ್ಯಾದಿ ಇನ್ನೂ ಅನೇಕ ವಿಷಯಗಳು ಅದರ ತೆಕ್ಕೆಗೆ ಒಳಪಡುತ್ತವೆ. ಯಾವುದೇ ರೀತಿಯಲ್ಲಿ ಅಧ್ಯಯನ ನಡೆಸಿದರೂ ತಿಳಿಯಬೇಕಾದದ್ದು ಶೋಧಿಸಬೇಕಾದುದು ಇನ್ನೂ ಇದೆ ಎಂಬ ಭಾವನೆಯು ನಮಗೆ ಬರುವುದುಂಟು. ಮೇಲೆ ಪ್ರಸ್ತಾಪಿಸಿದಂತೆ ಸಾಹಿತ್ಯಾಭ್ಯಾಸಿಗಳಿಗೆ, ಮನಃಶಾಸ್ತ್ರಜ್ಞರಿಗೆ, ಮಾನವ ಶಾಸ್ತ್ರಜ್ಞರಿಗೆ, ಸಮಾಜ ವಿಜ್ಞಾನಿಗಳಿಗೆ, ಭಾಷಾಶಾಸ್ತ್ರಜ್ಞರಿಗೆ, ಇತಿಹಾಸಜ್ಞರಿಗೆ ಎಲ್ಲರಿಗೂ ಇದು ಆಕರವಾಗುತ್ತದೆ. ಸಾಹಿತ್ಯವನ್ನು ಅಧ್ಯಯನ ಮಾಡುವ ಕುತೂಹಲಿಗಳಿಗೆ ಅಲ್ಲಿಯ ಭಾಷೆ ಉತ್ಸಾಹವನ್ನು ಉಂಟು ಮಾಡಿದರೆ ಭಾಷೆಯ ಬಗೆಗೆ ತಿಳಿಯುವ ಆಸಕ್ತರಿಗೆ ಅದೇ ಭಾಷೆ ಕುತೂಹಲಕಾರಿಯದಾಗಿರುತ್ತದೆ. ನಮ್ಮ ಬದುಕಿನ ಭಾಗವಾಗಿ ಹೊರಬೀಳುವ ಕತೆ, ಪುರಾಣ, ಹಾಡು ಇವುಗಳಲ್ಲಿರುವ ಸೂಕ್ಷ್ಮ ಮನೋಭಾವನೆಗಳನ್ನು ಅರಿಯಬೇಕಾದರೆ ಮನಶಾಸ್ತ್ರಜ್ಞರ ಅವಶ್ಯಕತೆ ಇದ್ದೇ ಇರುತ್ತದೆ.

ಸಮಾಜ ಒಪ್ಪಿಕೊಂಡಿರುವ ಪ್ರತಿ ಅಂಶವೂ ಸಂಸ್ಕೃತಿಯ ಪ್ರಧಾನ ಭಾಗವಾಯಿತು. ಹಾಗಾಗಿ ಮಾನವ ಶಾಸ್ತ್ರಗಳಿಗೆ ಜಾನಪದ ಆಕರವಾಯಿತು. ಜಾನಪದ ಗರ್ಭದಲ್ಲಿರುವ ಮೌಲ್ಯಗಳ ಬಗೆಗೆ ತಿಳಿವಳಿಕೆ ಎಷ್ಟು ಬೌದ್ಧಿಕ ಕಸರತ್ತು ನಡೆದರೂ ಸಾಲದು. ಸಾಹಿತ್ಯ, ಭಾಷಾಶಾಸ್ತ್ರ, ಮಾನವ ಶಾಸ್ತ್ರ, ಮನಃಶಾಸ್ತ್ರ ಇತ್ಯಾದಿಯಾಗಿ ನಾನಾ ಶಾಖೆಯ ತಿಳಿವಳಿಕೆ ಇದ್ದರೆ ಉಪಯೋಗ ಹೆಚ್ಚಾದೀತು.

ಪರಂಪರಾಗತವಾದ ಸಂಸ್ಕೃತಿ ಮತ್ತು ನಡವಳಿಕೆಗಳನ್ನು ಮುಖ್ಯವಾಗುಳ್ಳ ಜಾನಪದವು ಸಾಮಾಜಿಕ ವ್ಯವಸ್ಥೆಯ ಪ್ರಧಾನ ಅಂಶವಾಗಿದೆ. ಒಂದು ಕವಲಿನ ಉತ್ಪತ್ತಿ ಬೌದ್ಧಿಕತೆ ಹಾಗೂ ಆ ಜನಾಂಗದ ಅಭಿವ್ಯಕ್ತಿ ವಿಧಾನಗಳನ್ನು ಗರ್ಭೀಕರಿಸಿಕೊಂಡಿರುತ್ತದೆ. ಅದರ ಸೃಷ್ಟಿಕರ್ತ ಅಗೋಚರವಾಗಿರುತ್ತಾನೆ. ಸಮಷ್ಟಿಪ್ರಜ್ಞೆಏ ಅದರ ಜೀವಳವಾಗಿರುತ್ತದೆ. ತೋಂಡಿಗುಣ ಅದರ ಮುಖ್ಯ ಲಕ್ಷಣ. ಅಂದರೆ ಸಾಹಿತ್ಯಿಕ ಬಗೆ (ಪುರಾಣ, ಐತಿಹ್ಯ, ಜನಪದ ಕಥೆ ಮತ್ತು ಕಾವ್ಯ), ಭಾಷಿಕ ಬಗೆ (ಮಾತು, ಸಂಜ್ಞೆ ಗಾದೆ, ಒಗಟು), ವೈಜ್ಞಾನಿಕ ಬಗೆ (ನಿವಾರಣೆಗಳು, ಭವಿಷ್ಯವಾದಗಳು, ಮಾಟ ಮತ್ತು ನಂಬಿಕೆಯ ಎಲ್ಲ ಪ್ರಕಾರಗಳು), ಕ್ರಿಯಾತ್ಮಕ ಬಗೆ (ಸಂಗೀತ, ನೃತ್ಯ, ಆಟ, ಹಬ್ಬ, ಪದ್ಧತಿ, ನಾಟಕ, ಕಲೆ, ಕಸೂತಿ, ಅಡುಗೆ) ಇತ್ಯಾದಿ. ಈ ಎಲ್ಲವುಗಳಲ್ಲಿ ಭಾಷೆಯನ್ನು, ಶಾರೀರಿಕ ಚಲನೆಗಳನ್ನು, ಕಾರಣ ಮತ್ತು ಪರಿಣಾಮಗಳನ್ನು ಮಾತಿನ ನಿರೂಪಣಾ ವಿಧಾನವನ್ನು ಕಾಣುತ್ತೇವೆ. ಈ ಗುಣಗಳಿಂದ ಕೂಡಿರುವ ಜಾನಪದವು ಯಾವುದೇ ಒಂದು ವಿಷಯವನ್ನು ನಿರ್ದಿಷ್ಟ ದೃಷ್ಟಿಕೋನದಿಂದ ಅಧ್ಯಯನಿಸುತ್ತದೆ. ಬದುಕಿನ ಇತರೇ ಮಜಲುಗಳೊಂದಿಗೆ ಇರುವ ಸಂಬಂಧವನ್ನು ಕಂಡುಕೊಳ್ಳುತ್ತದೆ. ಮನುಷ್ಯನ ಹುಟ್ಟು ಬೆಳವಣಿಗೆ, ನಾಗರೀಕತೆಗಳ ಬಗೆಗೂ ಅದು ವಿಶೇಷವಾಗಿ ಮಾತನಾಡುತ್ತದೆ. ಇತಿಹಾಸ, ಸಮಾಜಶಾಸ್ತ್ರವೂ ಇದೇ ಕೆಲಸವನ್ನೂ ಮಾಡುತ್ತದೆ. ಕಾನೂನಿನ ವ್ಯವಸ್ಥೆಯನ್ನು ಅರಿಯಬಹುದು. ಅದರಂತೆಯೇ ಮಾನವಶಾಸ್ತ್ರ ಸಮಾಜಶಾಸ್ತ್ರಗಳೂ ಈ ಬಗೆಗೆ ಅಧ್ಯಯನಿಸುತ್ತವೆ. ಭಾಷಾಶಾಸ್ತ್ರ ಪುರಾತತ್ವಶಾಸ್ತ್ರಗಳು ಈ ಕೆಲಸದಲ್ಲಿ ತೊಡಗುತ್ತವೆ.

ಬೇರೆ ಬೇರೆ ಬೌದ್ಧಿಕ ಕ್ಷೇತ್ರಗಳಂತೆ ಜಾನಪದಕ್ಕೂ ವಿಜ್ಞಾನ ಹಾಗೂ ಕಲಾತ್ಮಕ ಮುಖಗಳಿವೆ. ಇದು ತನ್ನ ವೈಜ್ಞಾನಿಕ ದೃಷ್ಟಿಯಲ್ಲಿ ತನ್ನ ತೆಕ್ಕೆಯ ವಿಷಯವನ್ನು ಗೊತ್ತು ಮಾಡಲು, ವಿಭಜಿಸಲು, ಮನವರಿಕೆ ಮಾಡಲು, ಧ್ವನಿಗಳನ್ನು ಅರಿಯಲು ಪ್ರಯತ್ನ ಪಡುತ್ತಾರೆ. ಮಾನವನ ಸಂದುಹೋದ ಜೀವನವನ್ನು ಕುರಿತಿರುವುದರಿಂದ ಜಾನಪದವು ಒಂದು ರೀತಿಯಲ್ಲಿ ಚಾರಿತ್ರಿಕ. ಎಲ್ಲ ವೈಜ್ಞಾನಿಕ ಶೋಧನೆಗಳಂತೆ ಸೂತ್ರ ಕಲ್ಪನೆಯ ವಿಧಾನವನ್ನು ಅನುಸರಿಸುತ್ತಿರುವುದರಿಂದ ಜಾನಪದವು ವಿಜ್ಞಾನವೂ ಎನಿಸುತ್ತದೆ. ಕವಿ ಕಲಾವಿದರ ದಾರ್ಶನಿಕರ ಉತ್ತರ ಬರಹಗಳಲ್ಲಿ ಕಾಣಿಸುವಂಥದ್ದಲ್ಲದೆ ಜನಪದರ ಹೆಚ್ಚು ಕಡಿಮೆ ಮೂಕದನಿಗಳಲ್ಲಿ ವ್ಯಕ್ತವಾದಂತೆ ಮನುಷ್ಯ ಚೇತನದ ಇತಿಹಾಸವನ್ನು ಪುನರ್ ಸ್ಥಾಪಿಸುವುದೂ ಜಾನಪದದ ಮುಖ್ಯ ಉದ್ದೇಶವಾಗಿರುತ್ತದೆ. ಇಂಥ ಸಂದರ್ಭದಲ್ಲಿ ಅದು ಭಾಗಶಃ ಚಾರಿತ್ರಿಕವಾದವನ್ನು ಮೌಖಿಕ ಸಂಪ್ರದಾಯಿಕೆಯನ್ನು ಗಂರ್ಭೀಕರಿಸಿ ಕೊಂಡಿರುತ್ತದೆ.

ಜಗತ್ತಿನ ಸೃಷ್ಟಿ, ಕಾಣದ ಜಗತ್ತಿನಲ್ಲಿರುವ ಪ್ರತಿ ವಿಷಯಗಳನ್ನು ಕುರಿತು ಹೇಳುವಂಥದ್ದನ್ನು ನಾವು ‘ಪುರಾಣ’ ಎಂದು ಕರೆಯುತ್ತಾ ಬಂದಿದ್ದೇವೆ. ಪ್ರಾಣಿಬಲಿ, ನರಬಲಿ ಅರ್ಪಿಸುತ್ತ ದೇವರನ್ನು ಸಂತೃಪ್ತಿಪಡಿಸಿ ನಮ್ಮ ಕಡೆಗೆ ಒಲಿಸಿಕೊಳ್ಳುವ ವಿಧಿವತ್ತಾದ ಕ್ರಿಯೆಗಳೂ ಪುರಾಣದ ಆವರಣದೊಳಗೇ ಬರುತ್ತವೆ. ಗಾಳಿ, ನೀರು, ಬೆಂಕಿ ಇವೆಲ್ಲವೂ ದೇವರ ಸ್ಥಾನ ಪಡೆದಿವೆ. ಜಗತ್ತು ಹೇಗೆ ಸೃಷ್ಟಿಯಾಯಿತು ಎಂಬ ಕಥೆಗಳಂತೆ ಪ್ರಳಯ ಕಥೆಗಳೂ ಇದೇ ಹಂತದಲ್ಲಿ ಬರುತ್ತವೆ. ಜನಪದ ಕಥೆಗಳೂ ಇಂಥದೇ ಆಶಯವನ್ನು ಒಳಗೊಂಡಿರುವುದುಂಟು ‘ಕಯೋಟ್’ ಎಂಬ ಒಂದು ಜಾತಿಯ ನಾಯಿಯಿಂದ ಪ್ರಪಂಚ ಹುಟ್ಟಿಕೊಂಡಿತು ಎಂಬ ವಿಷಯವನ್ನು ಉತ್ತರ ಅಮೆರಿಕದ ಪುರಾಣ ಹೇಳಿದರೆ, ದೇವರು ನೀರಿನಿಂದ ಪ್ರಪಂಚವನ್ನು ಸೃಷ್ಟಿಸಿದ ಎಂದು ವೇದಗಳು ಸಾರುತ್ತವೆ.

ಮದುವೆಯಾಗಬೇಕಾಗಿದ್ದ ವ್ಯಕ್ತಿ ಒಗಟೊಂದನ್ನು ಬಿಡಿಸಬೇಕಾಗಿದ್ದ ಸಂಗತಿಯನ್ನು ಕೆಲವು ಪುರಾಣ ಕತೆಗಳು ವಿವರಿಸಿದರೆ ದಿನನಿತ್ಯದ ಮಾತುಗಳಲ್ಲಿ ಪುರಾಣದ ಬಳಕೆಯಾಗುತ್ತದೆ. ಸತ್ಯ ಹರಿಶ್ಚಂದ್ರ, ರಾವಣ ಸನ್ಯಾಸಿ, ಬೋಳೆ ಶಂಕರಿ, ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ, ಅಂತೂ ಇಂತೂ ಕುಂತಿಮಕ್ಕಳಿಗೆ ವನವಾಸ (ರಾಜ್ಯವಿಲ್ಲ) ಮೊದಲಾದುವು ಈ ಮಾತಿಗೆ ಉದಾಹರಣೆಗಳಾಗಿವೆ. ಈವರೆಗೆ ಹೇಳಿದಂತೆ ‘ಜಾನಪದ’ ಎಂಬುದು ಸಾಹಿತ್ಯಕ ಮತ್ತು ಕಲಾತ್ಮಕ ಸಂಪ್ರದಾಯ ಹಾಗೂ ಜನಪ್ರಿಯ ಸಂಪ್ರದಾಯ ಈ ಎರಡೂ ನಿಖರವಾದ ಸಾಂಸ್ಕೃತಿಕ ಘಟ್ಟವೆನಿಸಿರುವ ಸಮಾಜಗಳಲ್ಲಿ ಕಂಡು ಬರುತ್ತದೆ. ಇವುಗಳನ್ನು ಸಂಗ್ರಹಿಸುವುದಾಗಲೀ ಅಧ್ಯಯನ ಮಾಡುವುದಾಗಲೀ ಮಾನವ ಕುಲ ವಿವರಣಾಶಾಸ್ತ್ರ ಹಾಗೂ ಮಾನವಶಾಸ್ತ್ರ ಇವುಗಳಿಗೆ ಸಂಬಂಧಪಟ್ಟದ್ದು. ಅದೇ ರೀತಿ ಚರಿತ್ರೆಗೂ ಜಾನಪದಕ್ಕೂ ಸಂಬಂಧವಿದೆ. ಪ್ರಾಚೀನ ಸಂದರ್ಭದಲ್ಲಿ ಎಲ್ಲ ಜನಾಂಗಗಳೂ ಅನಾಗರೀಕರವಾಗಿದ್ದವು. ಸಂಸ್ಕೃತಿಯನ್ನು ಕಳೆದು ಕೊಂಡಿದ್ದವು. ಆದಿವಾಸಿ ಜನತೆ ನಂಬುತ್ತಿದ್ದ ಪದ್ಧತಿ ಮತ್ತು ಆಚರಣೆಗಳು ಚರಿತ್ರಪೂರ್ವಕ ವಿಜ್ಞಾನಿಗಳ ಹೇಳಿಕೆಗಳಲ್ಲಿ ಕಂಡು ಬರುತ್ತವೆ. ಹಿಂದೆ ಬಳಕೆಯಲ್ಲಿದ್ದ ಬೆಂಕಿ ಕೊರೆಯುವ ಯಂತ್ರ ಇದಕ್ಕೊಂದು ಉದಾಹರಣೆಯಾಗಿದೆ.

ಜನಪದ ವೈದ್ಯವು ವಿಜ್ಞಾನದ ನೇರ ಮಾರ್ಗದರ್ಶಿಯಾಗಿದೆ. ಧರ್ಮ ಮತ್ತು ಜಾನಪದದ ನಡುವಿನ ಸಂಬಂಧ ಇನ್ನೂ ಹತ್ತಿರವಾದುದು. ಜನಪ್ರಿಯ ನಂಬಿಕೆಗಳ ಆಧಾರದ ಮೇಲೆ ಹುಟ್ಟಿಕೊಂಡ ಧರ್ಮ ನಂತರದ ದಿನಗಳಲ್ಲಿ ತಾತ್ವಿಕ ಧರ್ಮವಾಗಿ ರೂಪುಗೊಂಡಿತು. ಅದೇ ಕಾಲ ಕ್ರಮೇಣ ಜಾನಪದ ವಿಷಯಗಳನ್ನು ಹೀರುತ್ತ ಸಮೃದ್ಧಗೊಂಡಿರಲೂಬಹುದು. ಇವೆಲ್ಲವೂ ಪುರಾಣದ ಚೌಕಟ್ಟು ಪಡೆಯುತ್ತವೆ. ಇವುಗಳ ಒಟ್ಟು ಮೊತ್ತವನ್ನು ‘ಪುರಾಣ ಶಾಸ್ತ್ರ’ ಎಂದು ಕರೆಯುತ್ತೇವೆ. ಏಕದೇವತಾ ಬಹುದೇವತಾ ಆರಾಧನೆಗಳೂ ಇದರಲ್ಲಿ ಬರಬಹುದು. ಒಟ್ಟಾರೆ ಇವು ಜಾನಪದದ ಮುಖ್ಯ ಭಾಗವೆನಿಸುತ್ತವೆ.

ಮನುಷ್ಯನ ವ್ಯಕ್ತಿತ್ವದ ಸಿದ್ಧಾಂತಗಳಲ್ಲಿ ವಿವರಣೆ ಮತ್ತು ಅದರ ಯಶಸ್ವೀ ಕಾರ್ಯದಲ್ಲಿನ ಬೌದ್ಧಿಕತೆ, ಗುಣ ಹಾಗೂ ಇಷ್ಟಾನಿಷ್ಟಗಳನ್ನು ತೂಗುವಲ್ಲಿ – ಸಂಕೇತಗಳ ಅರ್ಥವಂತಿಕೆಯನ್ನು ವಿವರಿಸುವಲ್ಲಿ ಜಾನಪದದ ಶೋಧನೆ ಮನೋವಿಜ್ಞಾನಕ್ಕೆ ಆಕರವಾಗುತ್ತದೆ. ಮನೋವಿಜ್ಞಾನವು ಜಾನಪದ ಅರಿವಿಗಾಗಿ ಕೊಡುವ ಸಹಾಯ ಒಂದು ನಿಟ್ಟಿನದಾದರೆ ಜಾನಪದದ ತಿಳಿವಳಿಕೆಯಿಂದ ಮನೋವಿಜ್ಞಾನ ಪಡೆಯಬಹುದಾದ ಸವಲತ್ತುಗಳು ಅಪಾರ. ಹೀಗಾಗಿ ಇವೆರಡಕ್ಕೂ ಸಂಬಂಧವಿದೆ. ಇಂಥ ಅನ್ಯೋನ್ಯತೆಗಳಿಂದ ಜನತೆಯ ಜೀವನದ ಸೂಕ್ಷ್ಮತೆಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರೀತಿ ಪ್ರೇಮ ಮೊದಲಾದ ಬದುಕಿನ ಮೌಲ್ಯಗಳನ್ನು ಹಸಿವು, ಬೌದ್ಧಿಕಶಕ್ತಿ, ನೆನಪಿನ ಶಕ್ತಿ ಇತ್ಯಾದಿಗಳಲ್ಲಿ ಹುದುಗಿರುವ ಮಾನಸಿಕತೆಗಳ ಬಗೆಗೂ ಹೆಚ್ಚು ತಿಳಿವಳಿಕೆ ಪಡೆಯಲು ಜಾನಪದವನ್ನು ಮನೋವಿಜ್ಞಾನಿಗಳು ಪಡೆಯಬಹುದು.

ಅನೇಕ ಸಂದರ್ಭಗಳಲ್ಲಿ ಜಾನಪದ ಮತ್ತು ಮಾನವಶಾಸ್ತ್ರ ಪೂರಕಶಾಸ್ತ್ರಗಳಾಗಿ ಕಂಡು ಬರುತ್ತವೆ. ಅತೀ ಹಿಂದಿನ ಕತೆಗಳ ಅಧ್ಯಯನದಲ್ಲಂತೂ ಇದು ಹೆಚ್ಚು ಅರ್ಥಪೂರ್ಣತೆಯನ್ನು ಪಡೆಯುತ್ತದೆ. ಆಂಡ್ರೂಲಾಂಗ್, ಸರಜಾರ್ಜ್ ಲಾರೆನ್ಸ್ ಗೊಮ್ಮೆ, ಬೋವಾಸ್ ಮೊದಲಾದವರು ಈ ದೃಷ್ಟಿಯಲ್ಲಿ ಶೋಧನೆ ನಡೆಸಿದ್ದಾರೆ. ಮಾನವನ ಬದುಕಿನ ಬೆನ್ನೆಲುಬುಗಳಾದ ಆಚರಣೆಗಳು, ನಂಬಿಕೆಗಳು ಇವುಗಳ ಬಗೆಗೆ ಮಾನವಶಾಸ್ತ್ರಜ್ಞರು ನಡೆಸಿದ ಶೋಧನೆಗಳು ಜನಪದ ಕಥೆಗಳನ್ನು ಕುರಿತು ಅಧ್ಯಯನಿಸುವವರಿಗೆ ಮಾರ್ಗದರ್ಶನವಾದುವು. ಮರಣ ಹೊಂದಿದ್ದ ವ್ಯಕ್ತಿ ಮತ್ತೆ ಶವದ ಗುಡ್ಡೆಯಿಂದ ಎದ್ದು ಬಾರದಿರಲಿ ಎಂದು ಹಿಂದಿನ ಕಾಲದ ಮನುಷ್ಯ ಹಲವಾರು ಆಚರಣೆಗಳನ್ನು ನಡೆಸುತ್ತ ಬಂದ. ಹೀಗಾಗಿ ಮರಣ ಹಾಗೂ ದಿವಂಗತರ ಬಗೆಗೆ ಮನುಷ್ಯನಿಗೂ ಭೀತಿ ಅನೇಕ ಜನಪದ ಕಥೆಗಳಲ್ಲಿ ಪಾತ್ರಗಳಲ್ಲಿ ಕಂಡು ಬರುತ್ತದೆ. ಮಾನವಶಾಸ್ತ್ರವನ್ನು ಪ್ರಧಾನವನ್ನಾಗಿಸಿಕೊಂಡು ಇಂಥ ಶೋಧನೆಗೆ ತೊಡಗಿದವರಲ್ಲಿ ನೌಮಾನ್ ಜೆನ್ನಪ್, ಆರ‍್ನಾಲ್ಡ್‌ವಾನ್ ಜೆನ್ನಪ್ ಮೊದಲಾದವರು ಮುಖ್ಯರು.

ಸಾಂಸ್ಕೃತಿಕ ಮೌಲ್ಯಗಳ ಕಡೆಗೆ ವಿಶೇಷ ಗಮನ ಕೊಡುವ ಮಾನವಶಾಸ್ತ್ರಜ್ಞರು ಜನಪದದ ಬದುಕಿನ ನಿಕಟತೆಯನ್ನು ಹಾಗೂ ಜಾನಪದವನ್ನು ಅಧ್ಯಯನಿಸುತ್ತಾರೆ. ಏಕೆಂದರೆ ಅವರಿಗೆ ಜಾನಪದದ ಎಲ್ಲ ಮುಖಗಳೂ ಮುಖ್ಯವೆನಿಸುತ್ತವೆ. ವಿವಾಹಕ್ಕೆ ಮುಂಚೆ ಋತುವಾದ ಹೆಣ್ಣನ್ನು ಕಾಡಿಗೆ ಬಿಡುವ ಪದ್ಧತಿ, ಸತಿ ಸಹಗಮನ ಪದ್ಧತಿ, ಅಪಶಕುನವೆಂದು ಭಾವಿಸಿದ ಸಂದರ್ಭದಲ್ಲಿ ಹುಟ್ಟಿದವರನ್ನು ನೀರಿಗೆಸೆಯುವ ಪದ್ಧತಿ (ಕರ್ಣನ ಕಥೆ), ಬಾಲ್ಯ ವಿವಾಹ ಪದ್ಧತಿ ಮೊದಲಾದ ಇನ್ನೂ ಹಲವಾರು ವಿಷಯಗಳನ್ನು ಮಾನವಶಾಸ್ತ್ರ ಅಧ್ಯಯನ ನಡೆಸುತ್ತದೆ. ಆದ್ದರಿಂದ ಜಾನಪದದ ಬಗೆಗೆ ಆಸಕ್ತಿ ಇರುವವರು ಈ ಕ್ಷೇತ್ರದಲ್ಲಿ ಆಳವಾಗಿ ಅಭ್ಯಾಸ ಮಾಡುವ ಮಾನವಶಾಸ್ತ್ರದ ಬಗೆಗೂ ಅಧ್ಯಯನ ನಡೆಸುವುದು ಉತ್ತಮವೆಂದೇ ನನ್ನ ಭಾವನೆ.

ಕನ್ನಡದಲ್ಲಿ ಹಲವಾರು ಸಂಗ್ರಹ ಸಂಪಾದನಾ ಕೃತಿಗಳು ಹೊರಬಂದಿವೆ. ಆದರೆ ಜಾನಪದದ ಶಾಸ್ತ್ರೀಯವಾದ ಅಧ್ಯಯನ ನಾವು ನಿರೀಕ್ಷಿಸುವ ಮತ್ತು ಹೆಮ್ಮೆ ಪಟ್ಟುಕೊಳ್ಳುವ ಮಟ್ಟದಲ್ಲಿ ಇನ್ನೂತಕನ ಜರುಗಿಲ್ಲ. ಇಂಥ ಸಂದರ್ಭದಲ್ಲಿ ಬಿ.ಆರ್. ಪ್ರಾಜೆಕ್ಟಿನ ಕನ್ನಡ ವಿಭಾಗದವರು ಏರ್ಪಡಿಸಿರುವ ಪ್ರಸ್ತುತ ವಿಚಾರ ಸಂಕಿರಣ ಹೆಚ್ಚು ಮಹತ್ವದ ಸ್ಥಾನ ಪಡೆಯುತ್ತದೆಂದು ಭಾವಿಸಿದ್ದೇನೆ. ಇಂಥದೊಂದು ಉಪಯುಕ್ತ ಹಾಗು ಮೌಲಿಕವಾದ ಸಂಕಿರಣವನ್ನು ವ್ಯವಸ್ಥೆಗೊಳಿಸಿರುವವರನ್ನು ಹೃತ್ ಪೂರ್ವಕವಾಗಿ ಅಭಿನಂದಿಸುತ್ತೇನೆ. ನನ್ನನ್ನು ಇಷ್ಟು ಪ್ರೀತಿಯಿಂದ ಮೇಲಿಂದ ಮೇಲೆ ಬರಮಾಡಿಕೊಳ್ಳುತ್ತಿರುವ ನಿಮ್ಮ ಸೌಜನ್ಯಕ್ಕೆ ಮತ್ತೊಮ್ಮೆ ಕೃತಜ್ಞತೆ ಹೇಳುವುದಕ್ಕೆ ಹರ್ಷವೆನಿಸುತ್ತದೆ.

(ಬಿ.ಆರ್. ಪ್ರಾಜೆಕ್ಟ್ನಲ್ಲಿ ೧೯೮೫ರಲ್ಲಿ ನಡೆದಜಾನಪದ ಮತ್ತು ಪೂರಕ ಕ್ಷೇತ್ರಗಳುವಿಚಾರ ಸಂಕಿರಣದಲ್ಲಿ ಮಾಡಿದ ಸಮಾರೋಪ ಭಾಷಣ.)

* * *