ಪಠ್ಯ ಪುಸ್ತಕ ನಿರ್ದೇಶನಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ; ಪುಟ : ೮೪೭; ಬೆಲೆ : ೬೦-೦೦ ಪ್ರಕಟಣೆ ೧೯೮೩.

ಇಂಗ್ಲಿಷಿನಲ್ಲಿ ಪ್ರಕಟವಾಗಿದ್ದ ‘ಆಂಥಾಲಜಿ ಆಫ್ ಇಂಡಿಯನ್ ಲಿಟರೇಚರ್’ ಎಂಬ ಸಮಗ್ರ ಪುಸ್ತಕದ ಕನ್ನಡ ಅನುವಾದವನ್ನು ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ನಿರ್ದೇಶನಾಲಯದವರು ‘ಭಾರತೀಯ ಸಾಹಿತ್ಯ ಸಂಕಲನ’ ಎಂಬ ಹೆಸರಿನಿಂದ ಹೊರತಂದಿರುವುದು ಸಮಯೋಚಿತವಾಗಿದೆ. ಈ ಗ್ರಂಥ ತೌಲನಿಕ ಸಾಹಿತ್ಯ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ತುಂಬಾ ಸಹಾಯಕವಾಗಿದೆ. ಅಲ್ಲದೆ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ಬೆಳೆದು ಬಂದ ಒಂದು ಅಧಿಕೃತ ಪರಿಚಯವನ್ನು ಈ ಗ್ರಂಥದಿಂದ ಆಸಕ್ತರು ಪಡೆಯಬಹುದಾಗಿದೆ. ಇದರಲ್ಲಿ ಭಾರತದ ೧೬ ಭಾಷೆಗಳನ್ನು ಪರಿಚಯಿಸುವ ೧೬ ಲೇಖನಗಳಿವೆ. ಒಂದೊಂದು ಲೇಖನವನ್ನೂ ನಿರ್ದಿಷ್ಟ ಚೌಕಟ್ಟಿನಲ್ಲಿ ವ್ಯವಸ್ಥಿತವಾಗಿ ಸಂಯೋಜಿಸಲಾಗಿದೆ. ಹೀಗಾಗಿ ಎಲ್ಲ ಲೇಖನಗಳ ಒಟ್ಟು ವ್ಯಾಪ್ತಿ ಮತ್ತು ಸ್ವರೂಪವನ್ನು ಖಚಿತಪಡಿಸಲಾಗಿದೆ. ಪ್ರತಿಯೊಂದು ಲೇಖನವನ್ನು ಆಯಾ ಭಾಷೆಯಲ್ಲಿ ತಜ್ಞರಾದ ಮತ್ತು ವಸ್ತುನಿಷ್ಠವಾಗಿ ಬರೆಯಬಲ್ಲ ವಿಮರ್ಶಕರಿಂದ ಬರೆಸಿರುವುದು ಗಮನಾರ್ಹವಾಗಿದೆ. ಬಹುಮಟ್ಟಿಗೆ ಪ್ರತಿಯೊಬ್ಬ ಲೇಖಕರೂ ವಹಿಸಿಕೊಂಡ ಜವಾಬ್ದಾರಿಯನ್ನು ಆದಷ್ಟೂ ಸಮರ್ಪಕವಾಗಿ ನಿರ್ವಹಿಸಿದ್ದಾರೆನ್ನಬಹುದು.

ಇಂಗ್ಲಿಷಿನಲ್ಲಿ ಇರುವ ಮೇಲೆ ಹೇಳಿದ ೧೬ ಲೇಖನಗಳನ್ನು ಕನ್ನಡದಲ್ಲಿ ೧೬ ಜನ ಲೇಖಕರು ಅನುವಾದ ಮಾಡಿರುತ್ತಾರೆ. ಅದರಿಂದ ಅಲ್ಲಲ್ಲಿ ಅನುವಾದದ ಭಾಷೆಯಲ್ಲಿ ವ್ಯತ್ಯಾಸವೂ ವೈವಿಧ್ಯವೂ ಸಹಜವಾಗಿಯೇ ಉಂಟಾಗಿದೆ. ಆದರೆ ಅನುವಾದದ ಶೈಲಿಯಲ್ಲಿರುವ ಈ ಭಿನ್ನತೆಯಿಂದಾಗಿ ಮೂಲ ಲೇಖನದ ಆಶಯಕ್ಕೆ ಎಲ್ಲೂ ಭಂಗವುಂಟಾಗಿಲ್ಲ.

ಆಭಾರತೀಯ ಸಾಹಿತ್ಯ ಸಂಸ್ಕೃತಿಯ ತಿಳಿವಳಿಕೆಯನ್ನು ಹೆಚ್ಚು ಹೆಚ್ಚಿಗೆ ವಿದ್ಯಾವಂತ ವರ್ಗ ಪರಿಚಯಿಸಿಕೊಳ್ಳುವ ಅನುಕೂಲಗಳು ಪ್ರಯೋಜನಗಳು ಅಲ್ಲಲ್ಲಿ ಕಂಡುಬರುತ್ತವೆ. ಅದು ತಪ್ಪೇನೂ ಅಲ್ಲ. ಆದರೆ ಅದಕ್ಕೆ ಸಮಾನವಾಗಿ ಇಂಡಿಯಾದ ಪರಂಪರೆಯೂ ಪರಿಚಯವೂ ಪೂರಕವಾಗಿರುವುದು ತುಂಬಾ ಅಗತ್ಯ. ಈ ಅಗತ್ಯವನ್ನು ಮತ್ತು ಕೊರತೆಯನ್ನು ಯಶಸ್ವಿಯಾಗಿ ಪೂರೈಸುವ ಕೆಲಸವನ್ನು ಈ ಮಹತ್ವದ ಪ್ರಕಟನೆಯಾದ ‘ಭಾರತೀಯ ಸಾಹಿತ್ಯ ಸಂಕಲನ’ ನಿರ್ವಹಿಸಿದೆ. ಒಂದೇ ಸಂಪುಟದಲ್ಲಿ ಭಾರತದ ಅಧಿಕೃತ ಭಾಷೆಗಳ ಪರಿಚಯವನ್ನು ಪ್ರಾತಿನಿಧಿಕ ಸ್ವರೂಪದಲ್ಲಿ ಸಂಕಲಿಸಿರುವುದು ಮತ್ತು ಪ್ರಕಟಿಸಿರುವುದು, ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಲಭ್ಯವಾಗಿರುವ ದೊಡ್ಡ ಉಪಕಾರವಾಗಿದೆ.

ಈ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ಮುನ್ನುಡಿಕಾರರು “ಕಳೆದ ಐದು ಸಾವಿರ ವರುಷಗಳ ಅವಧಿಯಲ್ಲಿ ಬೇರೆ ಬೇರೆ ಬುಡಕಟ್ಟು ಹಾಗೂ ಗುಂಪುಗಳಿಗೆ ಸೇರಿದ ಜನರು ತಂಡೋಪತಂಡವಾಗಿ ಭಾರತಕ್ಕೆ ಬಂದು ನೆಲೆಸಿ, ಭಾರತವನ್ನು ತವರನ್ನಾಗಿಸಿಕೊಂಡಿದ್ದಾರೆ. ಹೀಗಿದ್ದರೂ ಭಾರತದಲ್ಲಿ ಅಮೆರಿಕೆಯಲ್ಲಿರುವಂತೆ ಜನಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಲ್ಲ. ಲಕ್ಷಾಂತರ ಜನರು ಭಿನ್ನಭಿನ್ನ ಮತಗಳನ್ನು ಬೋಧಿಸುತ್ತಿದ್ದು, ಭಿನ್ನ ಭಿನ್ನ ನಂಬುಗೆಗೆಳಿಗೆ ಅಂಟಿಕೊಂಡು ಎಷ್ಟೋ ವರುಷಗಳಿಂದ ಕೂಡಿ ಬಾಳುತ್ತಿದ್ದಾರೆ. ಆದರೆ ಭಾರತದ ಇತಿಹಾಸ-ದಲ್ಲಿ ಧರ್ಮಗಳ ಹೆಸರಿನಲ್ಲಿ ಕೊಲೆ, ವಿಚಾರಣೆ, ಸುಡುವುದು ನಡೆದುದು ಗೋಚರಿಸುವುದಿಲ್ಲ. ಎಲ್ಲ ಮತದವರು – ನದಿ, ಮೂರ್ತಿ, ಕುಲದೇವತೆ, ಪ್ರತಿಮೆ ಮೊದಲಾದವುಗಳ ಪೂಜೆಯಿಂದ ಮೊದಲ್ಗೊಂಡು ಏಕಮಾತ್ರ ಸ್ವತಂತ್ರ ಶಕ್ತಿದೇವತಾ ಪೂಜೆಯವರು, ದೇವತಾತೀತ ಭಾವನೆಯ ಅಂತಸ್ಥಳದಲ್ಲಿ ದೇವನನ್ನು ಆರಾಧಿಸುವವರು ಮೊದಲಾದವರೆಲ್ಲ, ಒಂದು ಹಿಂದೂ ಸಾಮಾಜಿಕ – ಧಾರ್ಮಿಕ ಚೌಕಟ್ಟಿನಲ್ಲಿದ್ದುದನ್ನು ಕಾಣುತ್ತೇವೆ” – ಎಂದು ನುಡಿದಿರುವುದು ಐತಿಹಾಸಿಕವಾಗಿ ವಸ್ತು ಸ್ಥಿತಿಯ ದಾಖಲೆಯಾಗಿಲ್ಲ.

ಹಿಂದಿನಂತೆಯೇ ಇಂದೂ ಮತೀಯ ಸಂಘರ್ಷಗಳನ್ನು ಕಾಣುತ್ತಿದ್ದೇವೆ. ಧರ್ಮದ ಹೆಸರಿನಲ್ಲಿ ನಡೆದ ಕೊಲೆ, ದೊಂಬಿಯ ವಿಚಾರ ಕುರಿತು ಬೆಳಕು ಹರಿದರೆ ಬಾನುಲಿಯಲ್ಲಿ ಕೇಳುತ್ತೇವೆ, ಪತ್ರಿಕೆಗಳಲ್ಲಿ ಓದುತ್ತೇವೆ. ಇದು ನಗ್ನ ಸತ್ಯ. ವಸ್ತು ಸ್ಥಿತಿಯನ್ನು ಸಮರ್ಪಕವಾಗಿ ದಾಖಲಿಸುವಲ್ಲಿ ಯಾವ ಹಿಂಜರಿಕೆಗಳನ್ನೂ ಮುಚ್ಚು ಮರೆಯನ್ನೂ ತೋರಬೇಕಾದ ಅಗತ್ಯವಿಲ್ಲ. ಆದರೆ ಅಷ್ಟೇ ವೈವಿಧ್ಯದ ಮಧ್ಯೆ, ಭಿನ್ನಾಭಿಪ್ರಾಯಗಳ ನಡುವೆ ಇಂಡಿಯಾ ತನ್ನ ಸಮಗ್ರತೆಯನ್ನು ಕಾಪಾಡಿಕೊಂಡು ಬಂದಿರುವುದು ಸ್ವಾಗತಾರ್ಹವಾದ ಒಂದು ಮಹಾಶ್ಚರ್ಯವಾಗಿದೆ – ಎಂಬುದನ್ನು ಮರೆಯದೆ ನೆನಪಿನಲ್ಲಿಡಬೇಕು.

ಇಂತಹದೊಂದು ಮೌಲಿಕವಾದ ಮತ್ತು ಉಪಯುಕ್ತವಾದ ಅನುವಾದ ಗ್ರಂಥವನ್ನು ಹೊರತಂದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವನ್ನು ಅಭಿನಂದಿಸುವುದು ನಮ್ಮ ಸಂತೋಷದ ಕರ್ತವ್ಯವಾಗಿದೆ.

 (ಕನ್ನಡ ನುಡಿ, ಮೇ ೧೬, ೧೯೮೫)

* * *