ಕರ್ನಾಟಕ ಏಕೀಕರಣವಾಗಿ ೨೮ ವರ್ಷಗಳಾದುವು. ಇಂದಿಗೂ ಕನ್ನಡ ಮಾಧ್ಯಮ ಯಶಸ್ವಿಯಾಗಿಲ್ಲ. ಇದಕ್ಕೆ ಕಾರಣಗಳು ಹಲವು. ಕೆಲವು ಪ್ರಮುಖ ಕಾರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ತಿಳಿಯಬಹುದು. ಬಾಲವಾಡಿಗಳಲ್ಲಿ, ಪ್ರಾಥಮಿಕ-ಮಾಧ್ಯಮಿಕ ಶಾಲೆಗಳಲ್ಲಿ ಇಂದು ಇರುವ ಪರಿಸ್ಥಿತಿ ಸ್ವಾರಸ್ಯವಾಗಿದೆ. ಇಲ್ಲಿಗೆ ಹೋಗಿ ನೋಡಿದರೆ ತಿಳಿಯುತ್ತದೆ. ಬಹುಜನರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗೆ ಏಕೆ ಕಳಿಸುವುದಿಲ್ಲ? ಅವರಿಗೆ ಕನ್ನಡಾಭಿಮಾನದ ಕೊರತೆಯೆ? ಅವರು ಕನ್ನಡವನ್ನು ಪ್ರೀತಿಸುವುದಿಲ್ಲವೆ? ಮನೆಗೆ ಬಂದ ನೆಂಟರಿಷ್ಟರ ಎದುರಿನಲ್ಲಿ ಚಿಕ್ಕಮಕ್ಕಳಿಂದ ಇಂಗ್ಲಿಷ್ ವರ್ಣಮಾಲೆಯನ್ನೂ ಪದ್ಯಗಳನ್ನೊ ಹೇಳಿಸಿ ಸುಖಿಸುವಂತೆ ಕನ್ನಡ ಪದ್ಯಗಳನ್ನು ಹೇಳಿಸಿ ನಲಿಯದಿರಲು ಕಾರಣವೇನು? ನಮ್ಮ ಮಗು ಕಾನ್ವೆಂಟಿಗೆ ಹೋಗುತ್ತದೆ, ಇಂಗ್ಲಿಷ್ ಶಾಲೆಗೆ ಹೋಗುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆಯೇ ಹೊರತು ನಮ್ಮ ಮಗು ಕನ್ನಡ ಶಾಲೆಗೆ ಹೋಗುತ್ತಿದೆ ಎಂದು ಹೇಳಿಕೊಳ್ಳುತ್ತಿಲ್ಲವೇಕೆ? ಕನ್ನಡ ಶಾಲೆಗೆ ಹೋದರೆ ಎರಡನೆಯ ದರ್ಜೆಯ ಪ್ರಜೆಗಳಾಗುತ್ತಾರೆಂಬ ಭೂತ ಇವರನ್ನೇಕೆ ಕಾಡುತ್ತಿದೆ?

ಈ ಬಗೆಗೆ ನಾನು ಕಳೆದ ಹತ್ತೆಂಟು ವರ್ಷಗಳಿಂದ ಆಲೋಚಿಸಿದ್ದೇನೆ. ವಾಸ್ತವವಾದ ಕಾರಣಗಳನ್ನು ಗುರುತಿಸಲು ಪ್ರಯತ್ನಿಸಿದ್ದೇನೆ. ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಅನೇಕ ಜನ ಪೋಷಕರನ್ನು ಪ್ರಶ್ನಿಸಿದ್ದೇನೆ. ವಿವಿಧ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಅನೇಕ ಜನ ಪೋಷಕರನ್ನು ಪ್ರಶ್ನಿಸಿದ್ದೇನೆ. ಹಲವಾರು ಶಾಲೆಗಳನ್ನು ಖುದ್ದಾಗಿ ಕಂಡು ಪರಿಶೀಲಿಸಿದ್ದೇನೆ. ಆಧ್ಯಾಪಕರನ್ನೂ ಸಂದರ್ಶಿಸಿದ್ದೇನೆ. ಆ ಸಮಸ್ಯೆಯ ಸ್ವರೂಪವನ್ನು ಯಾವ ಪೂರ್ವಗ್ರಹಗಳಿಗೂ ಒಳಗಾಗದೆ ಅರಿತುಕೊಳ್ಳಲೆತ್ನಿಸಿದ್ದೇನೆ. ಲೋಕದ ಎಲ್ಲ ತಂದೆತಾಯಿಂದಿರಿಗೂ ಒಂದೇ ಚಿಂತೆ. ತಮ್ಮ ಮಕ್ಕಳು ಮುಂದೆ ಬರಬೇಕು. ಒಳ್ಳೆಯ ಕೆಲಸ ಸಿಗಬೇಕು. ಕೈತುಂಬ ಸಂಬಳ ಸಿಗಬೇಕು. ಸುಖವಾಗಿ ಬಾಳಬೇಕು, ಇದು ಲೋಕದ ರೂಢಿ ಸರಿಯೆ. ಈಗಿರುವ ಖಾಸಗಿಯವರೇ ನಡೆಸುವ ಇಂಗ್ಲಿಷ್ ಶಾಲೆಗಳಿಗೂ ಸರಕಾರಿ ಕನ್ನಡ ಶಾಲೆಗಳಿಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದು.

ಇಂಗ್ಲಿಷ್ ಬಾಲವಾಡಿ ಮತ್ತು ಶಾಲೆಗಳಲ್ಲಿ ವ್ಯವಸ್ಥೆ ಮತ್ತು ಶಿಸ್ತು ಚೆನ್ನಾಗಿದೆ. ಚಿಕ್ಕಮಕ್ಕಳು ಸಮವಸ್ತ್ರಧಾರಿಗಳಾಗಿರುತ್ತಾರೆ. ಟೈಕಟ್ಟಿಕೊಳ್ಳುತ್ತಾರೆ, ಬೂಟ್ಸು ಹಾಕುತ್ತಾರೆ, ಶುಚಿಯಾಗಿ ಬರುತ್ತಾರೆ. ಶಾಲಾ ಆವರಣ, ಒಟ್ಟು ವಾತಾವರಣ ಹಿತವಾಗಿರುತ್ತದೆ. ಒಳ್ಳೆಯ ಮೇಡಂಗಳಿರುತ್ತಾರೆ. ತರಗತಿಗಳು ಕ್ಲುಪ್ತವೇಳೆಗೆ ಸರಿಯಾಗಿ ನಡೆಯುತ್ತವೆ. ದೊಂಬಿ ಇರುವುದಿಲ್ಲ – ಇವು. ಆದರೆ ಕನ್ನಡ ಶಾಲೆಗಳಲ್ಲಿನ ಪರಿಸರವೇ ಬೇರೆ. ಇದು ನಿರಾಶೆಯ ಮಡು. ಕನ್ನಡ ಶಾಲೆಗಳು ಕುರಿಗಳ ಮಂದೆ. ದನದ ದೊಡ್ಡಿ. ಆ ಕಟ್ಟಡವೊ ದೇವರೇಗತಿ. ಮೇಲೆ ಹೆಂಚಿಲ್ಲ ಕೆಳಗೆ ಬೆಂಚಿಲ್ಲ. ಒಂದೊಂದು ತರಗತಿಗೆ ನೂರಾರು ಮಕ್ಕಳನ್ನು ಸಂತೆಯಂತೆ ಕೂಡಿರುತ್ತಾರೆ. ಜ್ಞಾನದ ಬೆಳಕು ಬರುವುದು ಹಾಗಿರಲಿ, ಸೂರ್ಯನ ಬೆಳಕೂ ಒಳಗೆ ಬೀಳುವುದಿಲ್ಲ. ಇಂಥ ಗಾಳಿ ಬೆಳಕು ಇಲ್ಲದ ಕತ್ತಲೆಗೂಡಿನ ಸರಕಾರಿ ಶಾಲೆಗಳು ಕಾರಾಗೃಹಗಳಾಗಿವೆ. ಇಲ್ಲಿನ ಅಧ್ಯಾಪಕರನ್ನು ಸರಕಾರ ಜನಗಣತಿಗೂ ಬಳಸುತ್ತಾರೆ. ದನಗಣತಿಗೂ ಕಳಿಸುತ್ತಾರೆ. ಇವರ ಮಾತಿಗೆ ಬೆಲೆಯೂ ಇಲ್ಲ, ಬಲ್ಲವೂ ಇಲ್ಲ.

ಪೋಷಕರು ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳಿಸದೆ ಕಾನ್ವೆಂಟುಗಳಿಗೇ ಕಳಿಸಲು ಕಾರಣ ಇಲ್ಲಿ ಅಡಗಿದೆ. ಕನ್ನಡ ಮಾಧ್ಯಮ ಜನಪ್ರಿಯವಾಗಬೇಕಾದರೆ ಆ ಸಮಸ್ಯೆಯನ್ನು ಸರಿಪಡಿಸಬೇಕು. ಶಿಕ್ಷಣ ಇಲಾಖೆ ಕೂಡಲೇ ಇದರ ಕಡೆ ಪೂರ್ಣ ಗಮನ ಹರಿಸಬೇಕಾಗಿದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಇರುವ ಅನುಕೂಲ ಪರಿಸರವನ್ನು ಕನ್ನಡಕ್ಕೂ ಪಟ್ಟುಹಿಡಿದು ಕಲ್ಪಿಸಿಕೊಡಬೇಕು. ಜತೆಗೆ ಇದರೊಂದಿಗೇ ಮಾಡಬೇಕಾದ ಇನ್ನೊಂದು ಕೆಲಸವಿದೆ. ಬಾಲವಾಡಿ ಮತ್ತು ಪ್ರಾಥಮಿಕ ತರಗತಿಯಲ್ಲಿ ಓದುವ ಚಿಕ್ಕಮಕ್ಕಳಿಗೆ ಈಗ ಹಾಲಿ ಜಾರಿಯಲ್ಲಿರುವ ಮೂಟೆಗಟ್ಟಲೆ ಪುಸ್ತಕ ಹೊರೆ ಹೊರುವ ಪದ್ಧತಿ ತಕ್ಷಣ ರದ್ದಾಗಬೇಕು. ಬೆನ್ನು ಮೂಳೆಗಳೆಲ್ಲ ಲಟಲಟ ಮುರಿದು ಪುಡಿಯಾಗುತ್ತವೆಯೊ ಎಂಬಂತೆ ಚೀಲದ ತುಂಬ ಪುಸ್ತಕಗಳನ್ನು ತುಂಬಿಕೊಂಡು ಮನೆಯಿಂದ ಹೊರಡುವ ಶಿಶುಗಳನ್ನು ನೋಡಿದರೆ ಅವರೇನು ಶಾಲೆಗೆ ಹೊರಟಿದ್ದಾರೆಯೊ ಪರ್ವತಾರೋಹರಣಕ್ಕೆ ಹೊರಡುತ್ತಿದ್ದಾರೆಯೊ ಎಂಬ ಸಂಶಯ ಮೂಡುತ್ತದೆ. ಈ ಎಳೆಯರಿಗೆ ಇಷ್ಟೊಂದು ಪುಸ್ತಕಗಳ ಅಗತ್ಯವಿಲ್ಲ. ಒಂದೊಂದು ತರಗತಿಯವರೂ ಒಬ್ಬೊಬ್ಬ ವಿದ್ಯಾರ್ಥಿಯೂ ಮೂವತ್ತು ಎಕ್ಸರ್‌ಸೈಜು ಎಲ್ಲವೇ ನೀಟ್ ನೋಟ್ ಪುಸ್ತಕಗಳನ್ನು ತರಬೇಕಾಗಿದೆ. ಇದೂ ಅನಗತ್ಯ. ದೇಶದಲ್ಲಿ ಕಾಗದದ ಅಭಾವ ಪರಿಸ್ಥಿತಿ ಮೂಡಲು ಇರುವ ಪ್ರಬಲ ಕಾರಣಗಳಲ್ಲಿ ಇದೂ ಒಂದಾಗಿದೆ.

ಕೋಟಿ ಸಂಖ್ಯೆಯ ಮಕ್ಕಳು ಪ್ರತಿದಿನ ವರ್ಷವಾದುದ್ದಕ್ಕೂ ಹೀಗೆ ಅನಗತ್ಯವಾಗಿ ಕಾಗದದ ಬಳಕೆಗೆ ಬಾಲವಾಡಿ ಮತ್ತು ಶಾಲೆಗಳು ಒತ್ತಾಯಿಸುವುದನ್ನು ನಿಲ್ಲಿಸಿದರೆ ಎಷ್ಟೋ ಕಾಗದದ ಉಳಿತಾಯವಾಗುತ್ತದೆ. ಹಲಗೆ(ಸ್ಲೇಟು) ಬಳಪವನ್ನೇ ಮತ್ತೆ ಬಾಲವಾಡಿಗಳಲ್ಲಿ ಕೂಡಲೇ ಬಳಕೆಗೆ ತರಬೇಕಾಗಿದೆ. ಬಾಲವಾಡಿಗೆ ಮಕ್ಕಳಿಗೆ ಹಲಗೆ ಬಳಪ ಸಾಕು, ಪೆನ್ನು ಕಾಗದ ಬೇಕಾಗಿಲ್ಲ ಎಂಬ ವಿವೇಕ ಹಾಗೂ ಜ್ಞಾನೋದಯ ಶಿಕ್ಷಣತಜ್ಞರಿಗೂ ಶಾಲಾ ಅಧ್ಯಾಪಕರಿಗೂ ಎಷ್ಟು ಬೇಗ ಉಂಟಾದರೆ ಅಷ್ಟು ನಾಡಿಗೂ ಕ್ಷೇಮ. ಅರಣ್ಯ ನಾಶವೂ ಕಡಮೆಯಾದೀತು. ಕಾಗದಕ್ಕಿರುವ ಅಭಾವ ಪರಿಸ್ಥಿತಿ ತಕ್ಕಮಟ್ಟಿಗೆ ನಿವಾರಣೆಯಾಗುತ್ತದೆ. ಕರ್ನಾಟದಲ್ಲಿ ಕನ್ನಡವೇ ರಾಜ ಭಾಷೆ. ಕರ್ನಾಟಕದಲ್ಲಿ ನೆಲಸಿದವರೆಲ್ಲ ಕನ್ನಡವನ್ನು ಮಾನ್ಯಮಾಡಬೇಕು, ಪ್ರೀತಿಸಬೇಕು. ಅದರಿಂದ ಮಾತ್ರ ಸ್ಥಳೀಯರೊಡನೆ ಸೌಹಾರ್ದ ಏರ್ಪಡಲು ಸಾಧ್ಯ. ಭಾಷಾದ್ವೀಪಗಳನ್ನು ನಿರ್ಮಿಸಲು, ಬಯಸಬಾರದು. ಅಲ್ಪಸಂಖ್ಯಾತರು ತಾವು ನೆಲೆಸಿರುವ ಕಡೆ ಅಲ್ಲಿನ ಮುಖ್ಯ ಪ್ರವಾಹದಲ್ಲಿ ಬೆರೆಯಬೇಕು. ಸುರಕ್ಷಿತ ಬದುಕಿಗೆ ಇದೇ ಸರಿಯಾದ ರಾಜಮಾರ್ಗ.

(ಆಕಾಶವಾಣಿ ಕೃಪೆಯಿಂದ : ಕನ್ನಡ ಚಿಂತನ)

* * *