ಕನ್ನಡ ಜನತೆಯ ಸಾಂಸ್ಕೃತಿಕ ಜೀವನದಲ್ಲಿ ಇಂದು (ನವೆಂಬರ್ ೧) ಮಹಾದಿನ, ಮಹತ್ವದ ದಿನ. ಭಾರತದ ಬೇರೆ ಬೇರೆ ಭಾಗಗಳಿಗೆ ಒಳಪಟ್ಟದ್ದ ಕನ್ನಡ ಪ್ರದೇಶಗಳು ಒಂದು ಆಡಳಿತ ವ್ಯಾಪ್ತಿಯೊಳಗೆ ಸಮಾವೇಶಗೊಂಡ ಸುದಿನ, ಸಂತೋಷದ ದಿನ. ೧೯೫೬ರ ನವೆಂಬರ್ ತಿಂಗಳಿಂದ ಇಂದಿನವರೆಗೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ರಾರಾಜಿಸಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಈ ದಿಶೆಯಲ್ಲಿ ತಕ್ಕಮಟ್ಟಿಗೆ ಗಟ್ಟಿಯಾದ ಪ್ರಯತ್ನಗಳೂ ನಡೆದಿದೆ. ಏಕೀಕರಣಗೊಂಡ ಕನ್ನಡ ನಾಡಿಗೆ ತಡವಾಗಿಯೇ ಆದರೂ ‘ಕರ್ನಾಟಕ’ ಎಂಬ ಹೆಸರಾಗಿದೆ. ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಮೊದಲು ತಾಲ್ಲೂಕು ಮಟ್ಟದಲ್ಲಿ ಆರಂಭವಾಯಿತು. ೧೯೭೯ ರಿಂದ ಕನ್ನಡ ಭಾಷೆ ಕರ್ನಾಟಕದಲ್ಲಿ ಸಂಪೂರ್ಣವಾಗಿ ಎಲ್ಲ ಹಂತದ ರಾಜ್ಯ ಭಾಷೆಯಾಗಿದೆ. ವಿಧಾನ ಸಭೆಯಲ್ಲಿ ಆಯ-ವ್ಯಯವನ್ನು ಕನ್ನಡದಲ್ಲಿಯೇ ಮಂಡಿಸಲಾಗುತ್ತಿದೆ. ಇನ್ನೂ ಹತ್ತಾರು ಕ್ಷೇತ್ರಗಳಲ್ಲಿ ಕೆಲವು ಪ್ರಯತ್ನಗಳಾಗುತ್ತಿವೆ. ಇಷ್ಟಿದ್ದರೂ ಈಗ ಆಗಿರುವ ಕೆಲಸ ಏನೇನೂ ಸಾಲದು ಎಂಬ ವಸ್ತು ಸ್ಥಿತಿಯನ್ನು ಒಪ್ಪಿಕೊಳ್ಳಬೇಕು. ಮೂಲಭೂತವಾಗಿ ಆಡಳಿತಗಾರರ ಮನೋಧರ್ಮ ಕನ್ನಡ ಪರವಾಗಿ ಹೊರಳಬೇಕಾಗಿದೆ. ಕನ್ನಡದ ವಿಚಾರದಲ್ಲಿ ಕಳಕಳಿಯಿಂದ ಅಭಿಮಾನ ತಳೆದು ಮಾತನಾಡುವುದು ಅಭಾರತೀಯ ಇಲ್ಲವೇ ಪ್ರತ್ಯೇಕತಾವಾದಿಯ ವಾದವೆಂದು ಕೆಲವರು ವಿಚಿತ್ರವಾಗಿ ವಾದಿಸುತ್ತಾರೆ. ಅದು ಸರಿಯಲ್ಲ. ಭಾಷಾವಾರು ಪ್ರಾಂತ ರಚನೆಯಾದದ್ದೇ ಆಯಾ ಪ್ರಾಂತ್ಯದ ಭಾಷೆಗೆ ಪ್ರಾಮುಖ್ಯ ಕೊಡುವ ಉದ್ದೇಶದಿಂದ ಎಂಬುದನ್ನು ಮರೆಯಬಾರದು.

ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಕರ್ನಾಟಕದಲ್ಲಿ ಹಿರಿಯ ಮತ್ತು ಮೊದಲ ಮನ್ನಣೆ ತೋರಬೇಕಾದುದು ನಮ್ಮ ಧರ್ಮ. ಈ ಮಾತನ್ನು ಹೇಳುತ್ತಿರುವುದು ಕೇವಲ ಅಭಿಮಾನದಿಂದಲ್ಲ. ಇದು ಎಷ್ಟು ಅನಿವಾರ್ಯವಾಗಿದೆ ಎಂಬುದನ್ನೂ ಅರಿಯಬೇಕು. ಈ ದಿಕ್ಕಿನಲ್ಲಿ ಈಗ ಮೂರು ಮುಖ್ಯ ವಿಷಯಗಳಿಗೆ ಕರ್ನಾಟಕ ಸರಕಾರ ಹಾಗೂ ಕನ್ನಡ ಜನತೆ ಆದ್ಯಗಮನ ಹರಿಸಬೇಕಾಗಿದೆ. ಮೊದಲನೆಯದಾಗಿ ಶಿಕ್ಷಣ ಮಾಧ್ಯಮದ ವಿಚಾರ. ಮಹಾತ್ಮಾಜಿಯವರ ಮಾತು ಇದಕ್ಕೆ ಮೇಲ್ಪಂಕ್ತಿ ಹಾಗೂ ಮಾರ್ಗದರ್ಶಕವಾಗಿದೆ. ‘ಮಗುವಿನ ದೇಹದ ಬೆಳವಣಿಗೆಗೆ ತಾಯಿಯ ಹಾಲು ಹೇಗೆ ಅವಶ್ಯಕವೋ ಹಾಗೆಯೇ ಮನುಷ್ಯನ ಬುದ್ಧಿಯ ಬೆಳವಣಿಗೆಗೆ ತಾಯಿಯ ಹಾಲು ಹೇಗೆ ಅವಶ್ಯಕವೋ ಹಾಗೆಯೇ ಮನುಷ್ಯನ ಬುದ್ಧಿಯ ಬೆಳವಣಿಗೆಗೆ ಮಾತೃಭಾಷೆ ಅವಶ್ಯಕ. ಮಗು ತಾಯಿಯಿಂದ ಮೊದಲ ಮಾತನ್ನೂ ಪಾಠವನ್ನೂ ಕಲಿಯುತ್ತದೆ. ದೇಶದ ಮಕ್ಕಳ ಬುದ್ಧಿಯ ಬೆಳವಣಿಗೆಗೆ ಮಾತೃಭಾಷೆಯ ಹೊರತು ಬೇರೆ ಭಾಷೆಯನ್ನು ಬಳಸುವುದು ಮಾತೃಭೂಮಿಗೆ ದ್ರೋಹ; ಪಾಪವೆಂದೇ ನಾನು ಪರಿಗಣಿಸುತ್ತೇನೆ’.

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸುಲಭ, ಅಧ್ಯಾಪಕರಿಗೆ ಕಷ್ಟ; ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಕಷ್ಟ, ಅಧ್ಯಾಪಕರಿಗೆ ಸುಲಭ. ಅದರಿಂದ ವಿದ್ಯಾರ್ಥಿಗಳ ಪುರೋಭಿವೃದ್ಧಿಗಾಗಿ ಕನ್ನಡ ಮಾಧ್ಯಮವನ್ನು ಸರಕಾರ ಪ್ರೋತ್ಸಾಹಿಸಬೇಕು, ರಿಯಾಯಿತಿಗಳನ್ನಿತ್ತು ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕು. ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಪೂರ್ತಿ ವಿನಾಯಿತಿ ಇರಬೇಕು. ಶಿಕ್ಷಣ ಶುಲ್ಕರದ್ದಾಗಿ ಉಚಿತ ಶಿಕ್ಷಣ ಸೌಲಭ್ಯಸಿಗಬೇಕು. ಕನ್ನಡ ಮಾಧ್ಯಮದ ವಿದ್ಯಾರ್ಥಿ ವೇತನಗಳೂ ದೊರೆಯುವಂತಾಗಬೇಕು. ಹೀಗಾದರೆ ಈ ಪ್ರಯತ್ನ ಪರಿಣಾಮಕಾರಿಯಾಗುತ್ತದೆ, ಫಲಕಾರಿಯಾಗುತ್ತವೆ.

೨) ಇದು ಇನ್ನಷ್ಟು ಹುರಿಗೊಂಡು ನೆಲೆಗೊಳ್ಳಬೇಕಾದರೆ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರಕಾರ ಉದ್ಯೋಗಗಳಲ್ಲಿ ಶೇಕಡಾ ಇಂತಿಷ್ಟು ಸ್ಥಾನಗಳನ್ನು ಕೊಡಲಾಗುವುದೆಂದು ಮೀಸಲಿಡಬೇಕು. ಉದ್ಯೋಗದ ಬುನಾದಿಯ ಮೇಲೆಯೇ ಶಿಕ್ಷಣವೂ ರೂಪಿತವಾಗಿದೆ. ಜೀವನವೂ ಅವಲಂಬಿತವಾಗಿದೆ. ಕನ್ನಡದಲ್ಲಿ ಕಲಿತರೆ ಕೆಲಸ ಸಿಗುತ್ತದೆಂಬ ಭರವಸೆ ಬರಬೇಕು.

೩) ಇದಕ್ಕೆ ತೆಕ್ಕೆ ಹಾಕಿಕೊಂಡಂತೆ ಇರುವ ಮೂರನೆಯ ವಿಚಾರ ಲೋಕ ಸೇವಾ ಆಯೋಗಕ್ಕೆ ಸಂಬಂಧಿಸಿದ್ದು. ಲೋಕ ಸೇವಾ ಆಯೋಗ, ಈಗ ಇರುವಂತೆ ನೋಡಿದರೆ, ಕನ್ನಡಿಗರ ಹಗೆಯಂತೆ ವರ್ತಿಸುತ್ತದೆ. ಅಲ್ಲಿ ಕನ್ನಡ ವಾತಾವರಣ ಮೂಡಬೇಕಾಗಿದೆ. ಕನ್ನಡಿಗರೇ ಆದ ಸದಸ್ಯರು ಅಲ್ಲಿದ್ದರೂ ಅವರು ಕನ್ನಡ ಪರವಾದ ನಿಲುವು ತಳೆಯಬೇಕಾಗಿದೆ. ಲೋಕಸೇವಾ ಆಯೋಗದಲ್ಲಿ ಇನ್ನು ಮುಂದೆ ಕನ್ನಡದಲ್ಲಿ ಒಂದು ‘ಸಾಮಾನ್ಯ ಜ್ಞಾನ’ದ ಪ್ರಶ್ನೆಪತ್ರಿಕೆ ಎಲ್ಲ ಅಭ್ಯರ್ಥಿಗಳಿಗೂ ಕಡ್ಡಾಯ ಮಾಡಬೇಕು. ಕನ್ನಡದಲ್ಲಿಯೇ ಇಲಾಖಾ ಪರೀಕ್ಷೆಗಳನ್ನು ನಡೆಸಬೇಕು. ಸಂದರ್ಶನ ಕಾಲದಲ್ಲಿ ಕಡ್ಡಾಯವಾಗಿ ಎಲ್ಲ ಅಭ್ಯರ್ಥಿಗಳಿಗೂ ಪ್ರಶ್ನೆಗಳನ್ನು ಕನ್ನಡದಲ್ಲಿಯೇ ಕೇಳಬೇಕು. ಹೀಗೆ ಮಾಡುವುದರಿಂದ ಕನ್ನಡದಲ್ಲಿ ಕಲಿಯಲು ಹಿಂಜರಿಕೆ ನಿಂತು ಹುರುಪು ಬರುತ್ತದೆ. ಆತ್ಮವಿಶ್ವಾಸ ಮೂಡುತ್ತದೆ, ಕೀಳರಿಮೆ ತಪ್ಪುತ್ತದೆ.

೪) ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ತಾಂತ್ರಿಕ ಶಿಕ್ಷಣದಲ್ಲಿ ಇಂತಿಷ್ಟು ಸೀಟುಗಳೆಂದು ಮೀಸಲಿಡಬೇಕು. ಇದು ಬಹಳ ಮುಖ್ಯ.

ಕನ್ನಡಿಗರ ಇತಿಹಾಸ, ಸಂಸ್ಕೃತಿ, ಜೀವನ ದೊಡ್ಡದೆಂಬುದು ನಿಜ. ಅದು ಹಿಂದಿನ ಮಾತಾಯಿತು. ಇಂದಿನ ಕನ್ನಡಿಗರ ಹೊಣೆ ಹಿಂದೆ ಇದ್ದುದಕ್ಕಿಂತ ಇದು ಹೆಚ್ಚಾಗಿದೆ. ಕನ್ನಡ ಜನ ಮೊದಲು ತಮ್ಮ ದೈನದಿಂದ ಜೀವನದಲ್ಲಿ, ಎಲ್ಲ ವ್ಯವಹಾರಗಳಲ್ಲಿ ಕನ್ನಡಕ್ಕೆ ಗೌರವಸ್ಥಾನ ಕೊಡಬೇಕು. ಕನ್ನಡ ಹೊರಗಿನಿಂದ ನಮ್ಮ ಬಳಿಗೆ ಬರುವುದಿಲ್ಲ. ನಮ್ಮಿಂದ ಅದು ಮೂಡಬೇಕು. ಅಂಥ ಆತ್ಮ ಶೋಧನೆಗೆ, ಧ್ಯೇಯ ಸಮರ್ಪಣೆಗೆ ರಾಜ್ಯೋತ್ಸವ ಪ್ರೇರಣೆ ನೀಡಬೇಕು.

(ಆಕಾಶವಾಣಿ ಕೃಪೆಯಿಂದ)
(ಕನ್ನಡ ನುಡಿ, ಜನವರಿ ೧೬, ೧೯೮೫)

* * *