ಕನ್ನಡ ವಾಲ್ಮೀಕಿ ರಾಮಾಯಾಣ : ಕನ್ನಡದಲ್ಲಿ ವಾಲ್ಮೀಕಿ ರಾಮಾಯಣದ ನೇರ ಅನುವಾದ ಗ್ರಂಥಗಳು ಇದ್ದರೂ ಅವು ಅಲಭ್ಯತೆಯಿಂದಾಗಿ ಓದುಗರಿಗೆ ಯಾವುವೂ ಸಿಗುತ್ತಿಲ್ಲರಲಿಲ್ಲ. ಇತ್ತೀಚೆಗೆ ಮರುಮುದ್ರಣವಾದ ಅರಮನೆಯ ಪ್ರಕಟನೆಯೊಂದು ದೊರೆಯುತ್ತಿದೆ. ನಿಜ, ಆ ಪ್ರತಿಯಾಗಲಿ, ಕನ್ನಡದ ಇದುವರೆಗಿನ ಇತರ ಭಾಷಾಂತರಗಳಾಗಲಿ ವಾಲ್ಮೀಕಿ ರಾಮಾಯಣದ ಚಚು ತಪ್ಪದ ಅನುವಾದಗಳಾಗಿರಲಿಲ್ಲ. ಅಲ್ಲೋ ಇಲ್ಲೋ ಒಮ್ಮೊಮ್ಮೆ ಹೆಚ್ಚು ಇಲ್ಲವೇ ಕಡಮೆ ನಡೆದಿದೆ.

ಪ್ರಸ್ತುತ ಕನ್ನಡ ವಾಲ್ಮೀಕಿ ರಾಮಾಯಣ ಎರಡು ಬೃಹತ್ ಸಂಪುಟಗಳಲ್ಲಿದೆ. ಇದು ಮೂಲವನ್ನು ಬಹುಮಟ್ಟಿಗೆ ಯಥಾವತ್ತಾಗಿ ಗದ್ಯದಲ್ಲಿ ಅನುವಾದಿಸಿರುವ ಕೃತಿ : ‘ಸರಳಾನುವಾರ’ (Free translation) ಅಲ್ಲ, ನಿಖರವಾದ ವಾಸ್ತವಾನುವಾದ (Strict literal translation) ಅಥವಾ ಪದಶಃ ಅನುವಾದ.’ ವಿಶೇಷಾರ್ಥ ಇಲ್ಲವೇ ಅಭಿಪ್ರಾಯಗಳನ್ನು ತಿಳಿಸುವ ಅಗತ್ಯ ಕಂಡು ಬಂದಾಗ, ಆಯಾ ಸಂದರ್ಭಗಳಲ್ಲಿ ಅಡಿ ಟಿಪ್ಪಣಿಗಳನ್ನೂ ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ.

ಸಿ.ಎನ್. ಶ್ರೀನಿವಾಸ ಅಯ್ಯಂಗಾರ್ಯರು ಗಣಿತಶಾಸ್ತ್ರ ಪ್ರಜ್ಞರು, ಅನುವಾದ ಕಲೆಯನ್ನೂ ನಿಪುಣರು. ಇದನ್ನು ಈ ಗ್ರಂಥವೇ ಸ್ಪಷ್ಟವಾಗಿ ಸಾರುತ್ತದೆ. ಅನುವಾದ ಮಾಡುವಾಗ ತಾವು ಹೋಗಬೇಕಾದ ಮಾರ್ಗ, ಅನುಸರಿಸಬೇಕಾದ ನಿಯಮ, ಹಾಗೂ ಪಾಲಿಸಬೇಕಾದ ಧೋರಣೆ – ಇವುಗಳ ಸರಿಯಾದ ಕಲ್ಪನೆಯಿದೆ. ಇದರ ಫಲವಾಗಿ ವಾಲ್ಮೀಕಿ ರಾಮಾಯಣವನ್ನು ಚೆನ್ನಾಗಿ ಕನ್ನಡಿಸುವ ಭಗೀರಥ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.

ಇದು ಮೂಲ ವಾಲ್ಮೀಕಿ ರಾಮಾಯಣದ ಮಕ್ಕಿಕಾಮಕ್ಕಿ ಕುರುಡ ಅನುವಾದವಲ್ಲ. ಅನುವಾದಕರ ವಿದ್ವತ್ತು, ವಿಚಿಕಿತ್ಸಕ ಬುದ್ಧಿ ಹಾಗೂ ಅತ್ಯಾಧುನಿಕ ವಿಚಾರಧಾರೆಯಿಂದಲೂ ಪರಿಶೀಲನೆ ಮಾಡುವ ವೈಜ್ಞಾನಿಕ ದೃಷ್ಟಿ-ಇವನ್ನು ಹತ್ತಾರು ಕಡೆ ಕಾಣಬಹುದು : ಪ್ರಥಮ ಸಂಪುಟದ ಪ್ರಥಮ ಸರ್ಗ ‘ಸಂಕ್ಷೇಪ ರಾಮಾಯಣ’ದಲ್ಲಿ ಬರುವ ಮೊದಲ ಅಯ್ದು ಪುಟಗಳಲ್ಲಿನ ಅಡಿ ಟಿಪ್ಪಣಿಗಳನ್ನು ನೋಡಿದರೂ ಸಾಕು.

ರಾಮಾಯಣ ಕಥಾ ನಿರೂಪಣೆಯಲ್ಲಿ ಭೂತಕಾಲದಿಂದ ವರ್ತಮಾನಕಾಲ ಇಲ್ಲವೇ ಭವಿಷ್ಯತ್ ಕಾಲಕ್ಕೆ ಬದಲಾವಣೆ ಕಂಡು ಬಂದರೂ ಅದನ್ನು ಗುರುತಿಸಿ ಸಕಾರಣವಾಗಿ ವಿವರಿಸುತ್ತಾರೆ. ರಾಮಾಯಣದ ಮಂಗಳ ಶ್ಲೋಕಕ್ಕೆ ಇರುವ ವಿವಿಧಾರ್ಥ ವ್ಯಾಖ್ಯಾನಗಳನ್ನು ವಿವರಿಸುತ್ತಾರೆ. ತೀರ ಅವಶ್ಯವೆಂದು ತೋರಿದೆಡೆಗಳಲ್ಲಿ ಮೂಲಶಬ್ದ, ಪದಪುಂಜ, ಕಡೆಗೆ ಶ್ಲೋಕಗಳನ್ನೇ ಕೊಟ್ಟು ಅರ್ಥೈಸುತ್ತಾರೆ.

ರಾಮಾಯಣಗಳು ಅಪಾರ : ಜೈನ ರಾಮಾಯಣ, ಅಧ್ಯಾತ್ಮ ರಾಮಾಯಣ, ಅದ್ಬುತ ರಾಮಾಯಣ, ರಾಮಾಯಣದ ಭಾಗಗಳನ್ನು ಅರಿಸಿಕೊಂಡು ಬರೆದ ಕಾವ್ಯಗಳೂ ವಿಪುಲ. ಕೆಲವೊಮ್ಮೆ ವಾಲ್ಮೀಕಿಯ ಹೇಳಿಕೆಗೂ ಇತರ ಕೃತಿಗಳ ಹೇಳಿಕೆಗೂ ವ್ಯತ್ಯಾಸಗಳು ಕಂಡು ಬರುತ್ತವೆ. ಈ ಅನುವಾದಕರು ಅವುಗಳಲ್ಲಿ ಕೆಲವನ್ನು ಗುರುತಿಸಿದ್ದಾರೆ : ‘ಕುಶಲವರು ರಾಮನ ಔರಸ ಪುತ್ರರು, ಸೀತಾದೇವಿಯ ಇವರನ್ನು ವಾಲ್ಮೀಕಿಗಳ ಅಶ್ರಯದಲ್ಲಿ ಹೆತ್ತಳು. ಮಕ್ಕಳನ್ನು ಈಗಲೇ ರಾಮನು ನೋಡುತ್ತಿರುವುದು. ರಾಮನಿಗೂ ಆತನ ಮಕ್ಕಳಿಗೂ ಸಮಾಗಮವಾಗುವುದು ಈ ಪ್ರಕಾರವೇ. ಜೈಮಿನಿ ಭಾರತ ಗ್ರಂಥದಲ್ಲಿ, ರಾಮನ ಯಜ್ಞಾಶ್ವವನ್ನು ಕುಶಲವರು ಕಟ್ಟಿ ಹಾಕಿದರೆಂದೂ, ಅದರಿಂದ ಕುಶಲವರಿಗೂ ರಾಮಾದಿಗಳಿಗೂ ಯುದ್ಧ ಜರುಗಿ, ಯುದ್ಧಾನಂತರದಲ್ಲಿ ಇವರು ಯಾರೆಂದು ತಿಳಿಯಿತೆಂದೂ ಕಥೆಯಿದೆ. ಈ ಕಥೆಯು ವಾಲ್ಮೀಕಿ ರಾಮಾಯಣದಲ್ಲಿಲ್ಲ. ವಾಲ್ಮೀಕಿ ರಾಮಾಯಣಕ್ಕೂ ಇತರ ರಾಮಾಯಣಗಳಿಗೂ ಎಲ್ಲೆಲ್ಲಿ ಸಮನ್ವಯ ಮಾಡಲು ಆಗುವುದಿಲ್ಲವೋ, ಅಲ್ಲೆಲ್ಲಾ ವಾಲ್ಮೀಕಿ ರಾಮಾಯಣದಲ್ಲಿರತಕ್ಕ ಕಥಾ ವಿಚಾರವೇ ಯಥಾರ್ಥವಾದದ್ದು ಎಂದು ತಿಳಿಯಬೇಕು’ (ಅಡಿಟಿಪ್ಪಣಿ, ಪು.೨೨)

ವಾಲ್ಮೀಕಿಯ ಹೇಳಿಕೆಗಳನ್ನೂ, ವಾಲ್ಮೀಕಿ ರಾಮಾಯಣದ ಟೀಕಾಕಾರರ ಅಭಿಪ್ರಾಯಗಳನ್ನೂ ಈ ಅನುವಾದಕರು ಪೂರ್ವಗ್ರಹಪೀಡಿತರಾಗದೆ ಮುಕ್ತ ಮನಸ್ಸಿನಿಂದ ಪರಾಮರ್ಶಿಸಿ ತಮ್ಮ ತಿಳಿವಳಿಕೆಯನ್ನು ನಿರ್ಭೀಡೆಯಿಂದ ನಿವೇದಿಸುತ್ತಾರೆ. ವಾಲ್ಮೀಕಿ ಎಡವಿದಂತೆ ಕಂಡರೆ ಅದನ್ನು ಧಾರಾಳವಾಗಿ ಹೇಳುತ್ತಾರೆ, ಸರಿಯಿರುವುದನ್ನು ಖಚಿತವಾದರೆ ಸಮರ್ಥಿಸುತ್ತಾರೆ. ಎರಡು ಉದಾಹರಣೆಗಳನ್ನು ನೋಡಬಹುದು :

“ವಾಲ್ಮೀಕಿಗೆ ಶ್ರೀರಾಮ ಪಟ್ಟಾಭಿಷೇಕದ ಘಟ್ಟವನ್ನು ಎಷ್ಟು ಹೊತ್ತಿಗೆ ಬರೆದೇನು ಎಂಬ ಸಡಗರವಿದ್ದಂತೆ ಭಾಸವಾಗುತ್ತದೆ. ಅನೇಕ ವಿಷಯಗಳನ್ನು ಬಿಟ್ಟು ಬಿಟ್ಟಿದ್ದಾರೆ. ಕಥಾಸಂದರ್ಭಗಳನ್ನು ಒಂದನ್ನೊಂದರೊಡನೆ ಸೇರಿಸುವ ವಾಕ್ಯಗಳನ್ನು ತಿಳಿಸಿಲ್ಲ. ಹಿಂದಿನ ಸ್ವರ್ಗದಲ್ಲಿ ಹನುಮಂತನು ಗುಹನನ್ನು ಸಂಧಿಸಿ ಮಾತನಾಡಿದಾಗ, ಗುಹನು ಏನು ಹೇಳಿದನೆಂದು ತಿಳಿಸಿಲ್ಲ. ಇಲ್ಲಿ ಈಗ, ಭರತ ಲಕ್ಷ್ಮಣರೂ ಜಟಾ ವಿಸರ್ಜನೆ ಮಾಡಿದರೆಂದು ನಾವೇ ತಿಳಿದುಕೊಳ್ಳಬೇಕು. ಶತ್ರುಘ್ನನನ್ನು ವಾಲ್ಮೀಕಿ ಮರೆತೇ ಬಿಟ್ಟರು” (ಸಂಪುಟ ೨. ಪು. ೧೪೭೪, ಅಡಿಟಿಪ್ಪಣಿ). “ಸುಗ್ರೀವನು ಮಂಗಳಸ್ನಾನ ಮಾಡಿದುದನ್ನು ಹಿಂದೆಯೇ ತಿಳಿಸಿದೆ ಉತ್ಸಾಹ ಭರದಲ್ಲಿ ವಾಲ್ಮೀಕಿಗಳು ಅದನ್ನು ಮರೆತು ಮತ್ತೆ ಹೇಳಿರುವರು” (ಅದೇ, ಪು. ೧೪೭೪)

ಯುದ್ಧಕಾಂಡದಲ್ಲಿ ರಣರಂಗದಲ್ಲಿ ಹೋರಾಡಿತ್ತಿರುವ ರಾಮನನ್ನು ಒಂದು ಕಡೆ “ವೀರನಾದ ಕೌಸಲ್ಯಾದಿಂದ ವರ್ಧನನಾದ ರಾಮನು” (ಪು. ೧೪೧೬) ಎಂದು ಬರುತ್ತದೆ. ಇದಕ್ಕೆ ಇವರು ಅಲ್ಲೇ ಅಡಿ ಟಿಪ್ಪಣಿಯಲ್ಲಿ ಹೀಗೆ ಬರೆಯುತ್ತಾರೆ :

“ಯುದ್ಧರಂಗದ ಈ ಭೀಕರ ಸನ್ನಿವೇಶದಲ್ಲಿ ಕೌಸಲ್ಯೆಯ ಹೆಸರೇಕೆ ಬಂದಿತು? ಪದ್ಯ ತುಂಬುವ ಅಭಿಪ್ರಾಯದಿಂದ ವಾಲ್ಮೀಕಿ ಪದಜೋಡಣೆ ಎಲ್ಲಿಯೂ ಮಾಡಿಲ್ಲ ಎಂಬುದು ವಿದ್ವಾಂಸರ ತೀರ್ಮಾನ, ರಾಮನು ವನಕ್ಕೆ ತೆರಳುವ ಮುನ್ನ ಕೌಸಲ್ಯೆ ಮಾಡಿದ ಮಂಗಳಾಶಂಸನಗಳನ್ನು ಇಲ್ಲಿ ಸ್ಮರಿಸಿಕೊಂಡಿರಬಹುದು;… ರಾಕ್ಷಸರೇ ಮೊದಲಾದವರಿಂದ ನಿನಗೆ ಭಯ ಒದಗದಿರಲಿ, ಆಗ ನಿನ್ನ ಮಾರ್ಗಗಳು ಮಂಗಳಕರವಾಗಲಿ, ನಿನ್ನ ಪರಾಕ್ರಮ ಸಿದ್ದಿಸಲಿ-ಎಂದು ಅಶೀರ್ವಾದ ಮಾಡಿದ್ದಾಳೆ.” (ಅದೇ)

ಕೊರತೆ :

ಅ. ರಾಮಾಯಣದಲ್ಲಿ ಬರುವ ವ್ಯಕ್ತಿ, ಊರು, ನದಿ, ಬೆಟ್ಟ, ದೇವತೆಗಳು, ಹೊಗಳು – ಮೊದಲಾದ ಹೆಸರುಗಳ ಅಕಾರಾದಿ ಇಲ್ಲ.

ಆ. ಇದರಲ್ಲಿ ಅಲ್ಲಲ್ಲಿ ಉದಾಹರಿಸಿರುವ ಗ್ರಂಥಗಳ ಅಕಾರಾದಿ ಇಲ್ಲ.

ಇ. ಇದುವರೆಗೆ ಕನ್ನಡದಲ್ಲಿ ಅನುವಾದವಾಗಿರುವ ರಾಮಾಯಾಣಗಳ ಉಲ್ಲೇಖ ಇಲ್ಲ.

ಮೆಚ್ಚುಗೆ : ಮುದ್ರಣ, ರಕ್ಷಾಪುಟ, ಕಾಗದ, ರಟ್ಟು – ಇಲ್ಲ ಉತ್ತಮ.

ಮೇಲ್ಪಂಕ್ತಿ : ಉಳಿದ ಅನುವಾದಕರೂ ಸಹ ಪ್ರಸ್ತುತ ಗ್ರಂಥವನ್ನು ಮಾದರಿಯಾಗಿಟ್ಟುಕೊಳ್ಳಬಹುದು. ಈ ವಿಭಾಗದಲ್ಲಿ ವಿಮರ್ಶಿಸಿರುವ ರವಿಷೇಣನ ಜೈನ ರಾಮಾಯಾಣದಲ್ಲೂ ಅದರ ಅನುವಾದಕರಾದ ಭುಜಬಲಿಶಾಸ್ತ್ರಿಗಳು ಈ ಕ್ರಮವನ್ನೇ ಅನುಸರಿಸಬಹುದಿತ್ತೆನ್ನಿಸುತ್ತದೆ.

ಪದ್ಮಪುರಾಣದ ಕಥೆ : ಅಚಾರ್ಯ ರವಿಷೇಣದ ಸಂಸ್ಕೃತ ಮೂಲ (ಜೈನ ಪರಂಪರೆಗೆ ಸೇರಿದ) ರಾಮಾಯಣದ ಕನ್ನಡ ಸಂಗ್ರಹಾನುವಾದವಿದು (ಅನುವಾದಕರು : ಕೆ : ಭುಜಬಲಶಾಸ್ತ್ರಿ).

ಪದ್ಮ ಪುರಾಣವೆಂದರೆ ರಾಮನ ಚರಿತೆ. ಕೆಲವು ಜೈನ ಪುರಾಣಗಳಲ್ಲಿ ರಾಮನಿಗೆ ಪದ್ಮ ಎಂಬುದು ಇನ್ನೊಂದು ಪ್ರಿಯವಾದ ಹೆಸರು. ರವಿಷೇಣ ವಿರಚಿತ ಪದ್ಮ ಪುರಾಣ ಸಂಸ್ಕೃತದಲ್ಲಿ ರಚಿತವಾಗಿರುವ ಸಾಕಷ್ಟು ಪ್ರಾಚೀನವೂ ಆದ ಕಾವ್ಯ.

ಜೈನ ರಾಮಾಯಣಗಳಲ್ಲಿ ಎರಡು ಪರಂಪರೆಗಳಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ವಿಮಲಸೂರಿ, ರವಿಷೇಣ, ಸ್ವಯಂಭೂ ಹಾಗೂ ಹೇಮಚಂದ್ರರದು ಒಂದು; ಆಚಾರ್ಯ ಗುಣಭದ್ರ ಹಾಗೂ ಪುಷ್ಪದಂತರದು ಇನ್ನೊಂದು.

ವಿಮಲಸೂರಿ ಕವಿಯ ಪರಂಪರೆಗೆ ಸೇರಿದ, ಅವನ ಅನಂತರ ರಚಿತವಾದ ಕೃತಿ ಸಂಸ್ಕೃತ ಪದ್ಮ ಪುರಾಣ. ಇದು ಪೂರ್ಣವಾಗಿ ದಿಗಂಬರ ಸಂಪ್ರದಾಯಕ್ಕೆ ಅನುಸಾರವಾಗಿದೆ.

ಡಾ|| ಹೀರಾಲಾಲ್ ಜೈನ ಅವರು ವಿಮಲಸೂರಿಯನ್ನು ಯಾಪನೀಯ ಸಂಘದ ಅಚಾರ್ಯನಿರಬಹುದೆಂದು ಊಹಿಸುತ್ತಾರೆ. ಅವರ ಊಹೆಯ ಅಭಿಪ್ರಾಯವನ್ನು ಭುಜಬಲಿಶಾಸ್ತ್ರಿಗಳು ಅನುಮೋದಿಸುತ್ತಾರೆ. ಕರ್ನಾಟಕ ಹಾಗೂ ಭಾರತದ ಸಾಂಸ್ಕೃತಿಕ ಚರಿತ್ರೆಗೆ ಸಂಬಂಧಿಸಿದಂತೆ ಡಾ|| ಹೀರಾಲಾಲರ ಈ ಸೂಚನೆ ಗಮನಾರ್ಹ.

ಅನುವಾದಕರು ಜೈನ ರಾಮಾಯಣಕ್ಕೂ ವಾಲ್ಮೀಕಿ ರಾಮಾಯಣವೇ ಮೂಲವೆಂದು ಮಾತನ್ನು ಅಲ್ಲಗೆಳೆಯುತ್ತಾರೆ : “ಏಕೆಂದರೆ ಬೌದ್ಧತ್ರಿಪಿಟಕಗಳಲ್ಲಿ ಬರುವ ರಾಮ ಕಥೆಗಳು, ಮಹಾಭಾರತದಲ್ಲಿ ಅಲ್ಲಲ್ಲಿ ಉದ್ಧೃತವಾದ ರಾಮಕಥೆಗಳು, ಜೈನ ಪರಂಪರೆಯಲ್ಲಿ ಪ್ರಸಿದ್ಧವಾಗಿರುವ ವಿಮಲಸೂರಿಯ ಪಉಮಚರಿಯ ಹಾಗೂ ಆಚಾರ್ಯ ಗುಣಭದ್ರನ ರಾಮಕಥೆಗಳು ಮೊದಲಾದ ಎಲ್ಲಾ ರಾಮಕಥೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಾಚೀನ ಕಾಲದಲ್ಲಿಸ ವಾಲ್ಮೀಕಿ ರಾಮಾಯಣವು ಜನ್ಮ ತಾಳುವ ಪೂರ್ವದಲ್ಲಿ ಭರತ ವರ್ಷದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರಾಮಕಥೆಗಳು ಜನರಲ್ಲಿ ಪ್ರಚಾರದಲ್ಲಿದ್ದುವೆಂಬುದನ್ನು ನಾವು ಒಪ್ಪಲೇಬೇಕು. ಅವು ಜಾನಪದ ಕಥೆಗಳಾಗಿದ್ದು, ಜನಸಾಮಾನ್ಯರಾಡುವ ಪ್ರಾಕೃತ ಭಾಷೆಯಲ್ಲಿ ಕಥಾರೂಪದಲ್ಲಿದ್ದಿರಬೇಕು. ಇಂತಹ ಮೂಲ ಜಾನಪದ ರಾಮಕಥೆಯೊಂದರಿಂದ ಸ್ಪೂರ್ತಿಯನ್ನು ಪಡೆದು, ವಾಲ್ಮೀಕಿಯು ತನ್ನ ರಾಮಾಯಣವನ್ನು ರಚಿಸಿರಬೇಕು. ಹಾಗೆಯೇ ತ್ರಿಪಿಟಿಕಕಾರರೂ, ವಿಮಲಸೂರಿಯೂ, ಬೇರೆಯವರೂ ತಮ್ಮ ತಮ್ಮ ಪರಂಪರೆಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ರಾಮಕಥೆಗಳನ್ನೇ ಗ್ರಂಥರೂಪವಾಗಿ ಹೆಣೆದಿರಬೇಕು. ಹೀಗೆ ಇಲ್ಲಿ ಬೇರೆ ಬೇರೆ ರಾಮಾಯಣಗಳು ರೂಪುಗೊಂಡವು. ಇದೇನೂ ಅಸಂಭವವಲ್ಲ. ಹೀಗಿರುತ್ತಾ ಎಲ್ಲಾ ರಾಮಾಯಣಗಳಿಗೂ ವಾಲ್ಮೀಕಿ ರಾಮಾಯಣವೇ ಮೂಲವೆಂದು ವಾದಿಸುವುದು ಯುಕ್ತಿ ಸಂಗತವಲ್ಲ” (ಪು. ೪)

ಮೇಲಿನ ಹೇಳಿಕೆಯನ್ನು ಸಮರ್ಥಿಸಲು ಆಧಾರಗಳನ್ನಿತ್ತಿದ್ದಾರೆ, ಅಲ್ಲದೆ ಅನುವಾದಕರು ಜೈನ ಕಾವ್ಯ ಪುರಾಣ ಶಾಸ್ತ್ರಗಳಲ್ಲಿ ವಿಶಾರದರು. ಹಿಂದಿಯಲ್ಲಿ ‘ಜೈನ ರಾಮಾಯಣಕಾ ರಾವಣ’, ‘ಜೈನ ರಾಮಾಯಣಕೇ ವಿವಿಧ ರೂಪ’ – ಎಂಬ ಲೇಖನಗಳನ್ನೂ ಕನ್ನಡದಲ್ಲಿ ಜೈನ ರಾಮಾಯಣದ ವಿವಿಧ ರೂಪಗಳು ಎಂಬ ಲೇಖನವನ್ನೂ ಸಂಶೋಧನಾತ್ಮಕ ದೃಷ್ಟಿಯಿಂದ ಬರೆದಿದ್ದಾರೆ. ಅವುಗಳಲ್ಲಿ ಜೈನ ರಾಮಾಯಾಣಗಳು ವಿದ್ಯಾಧರರಿಗಿತ್ತಿರುವ ಮಹತ್ವಪೂರ್ಣವಾದ ಸ್ಥಾನವನ್ನು ಉಲ್ಲೇಖಿಸಿದ್ದಾರೆ. ಅದರಂತೆ ಈ ಪದ್ಮ ಪುರಾಣದ ಕಥೆ ಕೂಡ ವಾಲ್ಮೀಕಿ ರಾಮಾಯಣದಿಂದ ಭಿನ್ನ ಹಾಗೂ ಸ್ವತಂತ್ರವೆಂದು ತಿಳಿಸುತ್ತಾರೆ.

“ಭಾರತೀಯ ಸಂಸ್ಕೃತಿಯ ಸ್ವರೂಪವನ್ನೂ ಇದು ಬೇರೆಯೇ ರೂಪದಲ್ಲಿ ಚಿತ್ರಿಸಿದೆ. ವಾಸ್ತವಿಕವಾಗಿ ಜೈನಧರ್ಮವು ಭಾರತ ವರ್ಷಕ್ಕಿತ್ತ ಇದೊಂದು ವಿಶಿಷ್ಟ ಕಾಣಿಕೆಯಾಗಿದೆ.” ಆದುದರಿಂದ ಜೈನ ರಾಮಾಯಣದ ಮೇಲೆ ವಾಲ್ಮೀಕಿ ರಾಮಾಯಾಣದ ಪ್ರಭಾವ ಬಿದ್ದಿಲ್ಲ. ಬದಲು, ವಾಲ್ಮೀಕಿ ರಾಮಾಯಣದ ಹಲ ಕೆಲವು ವಿಷಯಗಳನ್ನು ನಿರಾಕರಿಸುವುದಕ್ಕೋಸ್ಕರ ಜೈನ ರಾಮಾಯಣ ಪ್ರಯತ್ನಿಸಿದೆ -ಎಂದು ಲೇಖಕರು ಹೇಳಿರುವುದು ಪರಿಭಾವನಾರ್ಹ. ಅದು ನಿಜವಿದ್ದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ವಿಮರ್ಶೆಗಳಲ್ಲಿ ಕೆಲವೆಲ್ಲ ಪುನರ್ ಪರಿಶೀಲನೆಗೆ ಪಕ್ಕಾಗುತ್ತವೆ. ಇದರಲ್ಲಿ ಮುದ್ರಣ ದೋಷಗಳು ಸಾಕಷ್ಟಿವೆ. ಅನುವಾದಕರು ಭಾಷಾಂತರದಲ್ಲಿ ಬಿಗಿ ತೋರದೆ ಸ್ವಲ್ಪ ಸಲೀಸುತನದ ಸ್ವಾತಂತ್ರ್ಯ ತಳೆದು ಇದನ್ನು ಸ್ವತಂತ್ರ ಕೃತಿಯಾಗಿ ಮೈತಳೆಯುವಂತೆ ಮಾಡಬಹುದಿತ್ತು.

ಓದುಗರು ಈ ಅನುವಾದವನ್ನು ಮಿರ್ಜಿ ಅಣ್ಣಾರಾಯರ ‘ರವಿಷೇಣನ ರಾಮಾಯಣ’ ಗ್ರಂಥದೊಡನೆ ತುನೆ ಮಾಡಿ ನೋಡಬಹುದು. ಒಂದಕ್ಕೊಂದು ಇವು ಪೂರಕವಾಗಿದ್ದರೂ ರಾಮಾಯಣಗಳ ತೌಲನಿಕ ವ್ಯಾಸಂಗಕ್ಕೆ ಅಣ್ಣಾರಾಯರ ಮುನ್ನುಡಿ ಉಪಯುಕ್ತ.

ದಶಕುಮಾರ ಕಥೆ : ದಂಡಿ ಸಂಸ್ಕೃತ ಗದ್ಯಸಾಹಿತ್ಯದ ರತ್ನತ್ರಯರಲ್ಲಿ ಒಬ್ಬ. ಏಳನೆಯ ಶತಮಾನದ ಈ ವಿದ್ವತ್ಕವಿ ಪದಲಾಲಿತ್ಯಕ್ಕೆ ಹೆಸರಾದವನು, ಈತನ ಪ್ರಸಿದ್ದ ಗದ್ಯಕಾವ್ಯ ‘ದಶಕುಮಾರ ಚರಿತೆ’, ಪ್ರಸ್ತುತ ಪುಸ್ತಕ ಈ ದಶಕುಮಾರ ಚರಿತೆಯ (ಕನ್ನಡ) ಸಂಗ್ರಹಾನುವಾದ (ಅನುವಾದಕರು : ಎಂ. ಕೇಶವಭಟ್).

ಕನ್ನಡಕ್ಕೆ ಈ ಅನುವಾದ ಹೊಸದಲ್ಲ. ಈಗಾಗಲೇ ದಶಕುಮಾರ ಚರಿತೆಯ ಅನುವಾದವನ್ನು ಚಂಡರಸ ಕವಿ ಚಂಪೂ ರೂಪದಲ್ಲಿ ಕನ್ನಡಕ್ಕೆ ನೀಡಿದ್ದಾನೆ, ಸುಮಾರು ಹದಿನಾಲ್ಕನೆಯ ಶತಮಾನದ ಆರಂಭದಲ್ಲಿ. ಆದರಂತೆ ಹೊಸಗನ್ನಡದಲ್ಲೂ ಅನುವಾದವಾಗಿದೆ. ‘ದಂಡಿಯ ದಶಧೀರರು’ ಎಂಬ ಹೆಸರಿನಲ್ಲಿ. ಪ್ರಸ್ತುತ ಗ್ರಂಥ ಮೂರನೆಯ ಅನುವಾದ ಗ್ರಂಥ ದಂಡಿಯ ಸಂಸ್ಕೃತ ಮೂಲವನ್ನೇ ಅನುಸರಿಸಿ ರಚಿತಲಾಗಿದ್ದರೂ ಇದು ಕೇವಲ ಸಂಗ್ರಹಾನುವಾದ.

ಈ ಅನುವಾದದ ಅಗತ್ಯವಿತ್ತೆ ಎಂಬುದು ಮೊದಲ ಅನುವಾದ ಮೇಲೆ ತಿಳಿಸಿರುವಂತೆ ಹಳಗನ್ನಡದಲ್ಲೂ ಹೊಸಗನ್ನಡದಲ್ಲೂ ದಂಡಿಯ ಗದ್ಯಗ್ರಂಥ ಕನ್ನಡಕ್ಕೆ ತರ್ಜುಮೆಯಾಗಿರುವಾಗ ಇದರ ಅವಶ್ಯಕತೆ ತೋರುವುದಿಲ್ಲ. ಒಂದು ವೇಳೆ ಹಿಂದಿನ ಅನುವಾದಗಳು ಅಸಮರ್ಪಕವಾಗಿದ್ದಲ್ಲಿ ಇಂಥ ಪ್ರಯತ್ನ ಸ್ವಾಗತಾರ್ಹ; ಅಂಥ ನ್ಯೂನತೆಗಳನ್ನು ಈ ಅನುವಾದಕರು ನಿರ್ದೇಶಿಸಿಲ್ಲ. ಬಹುಶಃ ಕೊರತೆಗಳು ಅವುಗಳಲ್ಲಿದ್ದಿಲಾರವೆಂದು ಇದರಿಂದ ಧ್ವನಿತವಾಗುತ್ತದೆ. ಹಿಂದಿನ ಎರಡು ಭಾಷಾಂತರ ಕೃತಿಗಳಿಗಿಂತ ಭಿನ್ನವಾದ ಧಾಟಿ ಧೋರಣೆ ದಾರಿ ಹಿಡಿದು ಹೊರಟ ಗ್ರಂಥವೂ ಅಪೇಕ್ಷಣೀಯವಾಗಬಹುದು. ಇವರು ಅದನ್ನೂ ಹೇಳಿಲ್ಲವಾಗಿ ಇದರದೇ ಆದ ವೈಶಿಷ್ಟ್ಯವೂ ಕಂಡು ಬರುವುದಿಲ್ಲ. ಮೂಲ ಗ್ರಂಥದ ಸಂಪೂರ್ಣನುವಾದವಾಗಿಯೋ ಎಂದರೆ, ಇದು ಸಂಗ್ರಹಾನುವಾದ; ಪಠ್ಯ ಪುಸ್ತಕ ಪ್ರಯೋಜನಾಪೇಕ್ಷೆಯಲ್ಲೇ ಪರ್ಯವಸಾನಾವಾಗುತ್ತದೆ. ಕನ್ನಡ ಚಂಪೂ ಕಾವ್ಯವಾದ ಅಭಿನವ ದಶಕುಮಾರ ಚರಿತೆಯ ಹೊಸಗನ್ನಡಾನುವಾದವಾದರೂ ಆಗಿದ್ದರೆ ಅದರಿಂದ ಹಳಗನ್ನಡ ಕಾವ್ಯವನ್ನು ಓದಿ ಅನಂದಿಸುವ ಅಪೇಕ್ಷೆಯುಳ್ಳ ಸಾಮಾನ್ಯ ಓದುಗರಿಗೆ ಸಹಾಯಕವಾಗುತ್ತಿತ್ತು.

ಕಥನಕಲೆಯಲ್ಲಿ ದಂಡಿಯ ನೈಪುಣ್ಯ ಅಪಾರವಾದದ್ದು. ಅನೇಕ ಪಾತ್ರಗಳನ್ನು ಸೃಷ್ಟಿಸಿ ವಿವಿಧ ಸನ್ನಿವೇಶಗಳ ಹರವಿನಲ್ಲಿ ಏಕಸೂತ್ರತೆಯನ್ನು ಸಾಧಿಸಬಲ್ಲ ಶಕ್ತಿ ಅವನದು. ಕಥೆಯ ಓಟದಲ್ಲಿ ಶಿಥಿಲತೆ ಬಾರದಂತೆ, ಪಾತ್ರಗಳ ಹೊಂದಾಣಿಕೆಯಲ್ಲಿ ಸಾಮಂಜಸ್ಯ ತುಂಬಿರುವಂತೆ ನೋಡಿಕೊಳ್ಳುವ ಹದ ದಂಡಿಯ ವಿಶಿಷ್ಟ ಗುಣಗಳಲ್ಲೊಂದು.

ಮೂಲದಲ್ಲಿರುವ ಮೇಲೆ ಹೆಸರಿಸಿದ ಎಲ್ಲ ಗುಣಗಳೂ ಈ ಅನುವಾದದಲ್ಲಿ ಬಂದಿಲ್ಲ. ಬದಲಾಗಿ ಸರಳ ಅನುವಾದದಲ್ಲಿ ಅವೆಲ್ಲ ಸೋರಿಹೋಗಿವೆ. ಹೀಗಾಗಿ ಇದು ನೀರಸ, ಕೃತಕ ಅನುವಾದದತ್ತ ಬಾಗಿದೆ. ಶೈಲಿ ಸಾಧಾರಣ. ಸಂಸ್ಕೃತ ಕನ್ನಡಗಳ ಹವಣರಿತ ಹದವಾದ ಹೊಂದಾಣಿಕೆಯಿಲ್ಲ. ಕಿವಿಗೆ ಒಮ್ಮೊಮ್ಮೆ ಅಹಿತವೆನ್ನಿಸುವ ಇದರ ಗದ್ಯದ ಓಟದಲ್ಲಿ ಓದುಗರನ್ನು ಸೆರೆಹಿಡಿದ ಚೆಲುವಿಲ್ಲ.

ಮೂಲದ ಸೊಗಸನ್ನು ಸಂಗ್ರಹನುವಾದದಲ್ಲಿ ಮೂಡಿಸುವ ದಿಸೆಯಲ್ಲಿ ಅನುವಾದಕರು ಅಲ್ಲಲ್ಲಿ ತುಂಬ ಶ್ರಮವಹಿಸಿದ್ದಾರೆಂಬುದನ್ನು ಒಪ್ಪಬಹುದಾದರೂ ಅವರು ನಿರೀಕ್ಷಿತ ಸಫಲತೆಯನ್ನು ಪಡೆದಿಲ್ಲ. ಜಿತೆಗೆ ಕವಿ, ಕೃತಿ, ಕಥನಕಲೆಗಳ ವಿವೇಚನೆ, ಪರಿಚಯ, ವಿಮರ್ಶೆ -ಇವುಗಳು ಪೀಠಿಕಾರೂಪದಲ್ಲಿ ಇಲ್ಲ. ಇದರಿಂದ ಓದುಗರಿಗೆ ತುಂಭ ಅಲಾಭ.

ಯಾವುದೇ ಒಂದು ಗ್ರಂಥವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸಿದರಷ್ಟೇ ಸಾಲದು. ಮೂಲ ಲೇಖಕನ, ಅದರಲ್ಲಿಯೂ ದಂಡಿಯಂಥ ಪ್ರೌಢ ಕವಿಯ ಜೀವನ – ಕಾವ್ಯಗಳ ವಿವರಗಳೂ ವಿಮರ್ಶೆಯೂ, ಮೂಲ ಸಾಹಿತ್ಯದಲ್ಲಿ ಅವುಗಳ ಸ್ಥಾನ ನಿರ್ದೇಶನವೂ ಅವಶ್ಯ ಇರಬೇಕು. ಇಲ್ಲಿ ಅಂಥ ಪರಿಶ್ರಮದ ಗೋಜಿಗೇ ಅನುವಾಧಕರು ಹೋಗದಿರುವುದು ಅರ್ಥವಾಗುವುದಿಲ್ಲ.

ಮಹಾಭಾರತದ ಪಾತ್ರಗಳು (ಮೂಲ : ನಾನಾಭಾಯ್ ಭಟ್) : ಗುಜರಾತಿ ಭಾಷೆಯಿಂದ ಹಿಂದೆ ಭಾಷೆಗೆ ಅನುವಾದವಾದ ಕೃತಿಯ ಕನ್ನಡ ಅನುವಾದವಿದು (ಅನು ಪಿ. ವೆಂಕೋಬರಾವ್) ಇದರಲ್ಲಿ ಎರಡು ಭಾಗಗಳಿದ್ದು ಎರಡನೆಯ ಭಾಗದ ವಿಮರ್ಶೆಯಷ್ಟೇ ಮುಂದೆ ಕೊಟ್ಟಿದೆ. ಮೊದಲನೆಯ ಭಾಗ ಪ್ರಕಟವಾಗಿ ವರ್ಷಗಳಾಗಿವೆ.

ಈ ಎರಡನೆಯ ಭಾಗದಲ್ಲಿ ಮಹಾಭಾರತದಲ್ಲಿ ಬರುವ ದ್ರೋಣ, ಅಶ್ವತ್ಥಾಮ, ಭೀಷ್ಮ, ಧೃತರಾಷ್ಟ್ರ ಹಾಗೂ ಶ್ರೀಕೃಷ್ಣ – ಈ ಆಯ್ದು ಪಾತ್ರಗಳ ಪರಿಚಯವಿದೆ. ಪೌರಾಣಿಕ ನೆಲಗಟ್ಟಿನ ಮೇಲೆ ನಿಂತ ಮಹಾಭಾರತ ಕಥೆ, ಕಲ್ಪನೆ, ಸನ್ನಿವೇಶ, ಘಟನೆ, ಯುದ್ದ ಮೊದಲಾದವುಗಳನ್ನು ಅಧುನಿಕ ಯುಗಕ್ಕೆ ಹೊಂದಿಸಿಕೊಂಡು ವಿವೇಚಿಸಲೆತ್ನಿಸಿದ್ದಾರೆ. ಮೂಲ ಲೇಖಕರು. ಈ ಶ್ಲಾಘ್ಯವಾದರೂ ಕೆಲವು ಕಡೆ ತುಂಬ ಆಭಾಸವಾಗಿ ತೋರುತ್ತದೆ.

ಪುಸ್ತಕದ ಒಟ್ಟು ರಚನೆ ಪೂರ್ವಾಗ್ರಹಪೀಡಿತವಾಗಿರುವಂತೆ ಕಾಣುತ್ತದೆ, ಒಂದು ವರ್ಗದ ಮೇಲ್ಮೆಯನ್ನೇ ಎತ್ತಿ ಹಿಡಿದು ಅದೇ ಸರಿಯೆಂದು ಸಾರುವ ಹಟವೂ ಕಂಡು ಬರುತ್ತದೆ. ಈ ಕೆಲವು ವಾಕ್ಯಗಳ ಮಾದರಿ ಮೇಲಿನ ಮಾತನ್ನು ಸಮರ್ಥಿಸುತ್ತದೆ :

ಬ್ರಾಹ್ಮಣ ಪುತ್ರ ಯಾರೇ ಆಗಿದ್ದರೂ ನನಗೆ ಮದನೀಯನೆ (೧೪)
ಬ್ರಾಹ್ಮಣ ಜೀವನದೊಡನೆ ಅಖಿಲ ವಿಶ್ವ ಸಾಮ್ರಾಜ್ಯವನ್ನೇ ತೂಗಿ
ನೋಡಿದರೂ ಅದಕ್ಕೆ ಇದು (ರಾಜ್ಯ) ಸಮವೆನ್ನಿಸದು (೧೯)
ನನ್ನಂತಹ (ದ್ರಪದ) ನಾಯಿಗಳು ಬೊಗಳುತ್ತಲೇ ಇರುತ್ತವೆ, …ನಿಮ್ಮಂ
ತಹ ಬ್ರಾಹ್ಮಣರು ನನ್ನ ಸ್ನೇಹದ ಯಾಚನೆ ಮಾಡಲು ಬರಬೇಕೆ? (೧೯)
ಜ್ಞಾನಕ್ಕೆ ಬ್ರಾಹ್ಮಣ ಆಗರವಿದ್ದ ಹಾಗೆ (೨೦)
ಬ್ರಹ್ಮಣರು ಪ್ರಸನ್ನರಾದರೆ ಲೋಕ ಕಲ್ಯಾಣ (೨೩)

– ಇತ್ಯಾದಿ.

ಅಲ್ಲದೆ ಈ (ಮೂಲ) ಪುಸ್ತಕ ಮೂಲಭಾರತದ ಅನುವಾದವೂ ಅಲ್ಲ, ಕಥೆಗೆ ಕಥೆಯೂ ಅಲ್ಲ. ಕಾದಂಬರಿಗೆ ಕಾದಂಬರಿಯೂ ಅಲ್ಲ. ಮೂಲಭಾರತ ವಿಮರ್ಶೆಯಂತೂ ಮೊದಲೇ ಅಲ್ಲ. ಹೀಗಾಗಿ ಇದೊಂದು ಬಗೆಯ ವಿಚಿತ್ರ ರಚನೆ. ಇನ್ನು ಕನ್ನಡ ಅನುವಾದವಂತೂ ಕುಲಗೆಟ್ಟು ಹೋಗಿದೆ. ಮೊದಲಿಗೇ ಕಣ್ಣು ಕುಕ್ಕುವುದು ಮುರಿದ ಮೊಳೆಗಳ ಹಾಗೂ ಮುದ್ರಣ ಸ್ಖಲಿತ್ಯಗಳ ಅಸದಳ ಹಾವಳಿ, ಎರಡನೆಯದಾಗಿ ಇಲ್ಲಿನ ಭಾಷೆ, ಶೈಲಿ ಓದುಗನನ್ನು ಬಿಲ್ಲುಂ ಬೆರಗಾಗಿಸುತ್ತದೆ, ಹೆಕ್ಕಿದಲ್ಲಿ ಸಿಕ್ಕುವ ‘ಸಿಕ್ಕಾಪಟ್ಟೆ’ ಪ್ರಯೋಗವಾಗಿರುವ ಕೆಲವು ಶಬ್ದಗಳು ಇಂತಿವೆ : ಚಿಡಾಯಿಸಿದ್ದರಿಂದ (೨) ಅಲಕ್ಕಾಗಿದ್ದೀರಿ (೨) ವರಾಂಡದಲ್ಲಿ (೧) ಬಾಯಿ ಇಂದ (೩) ಚರಿತಾರ್ಹ (೪) ತರಹಾವಾರಿ (೫) ಒಳ್ಳೊಯ (೫) ಅದಾಗ್ಗ್ಯೂ(೬) ಒಳ್ಳೇಯ (೭) ಘನಿಷ್ಠ (೧೨) ಶಭಾಸ್-ಶಾಭಾತ್ (೧೬) ಅಂತಸ್ಥನ್ನು (೧೯) ಧನುಷಜ್ಞನಾಗ (೧೨) ಸುಸ್ತಾದರು (೪೦) ಸ್ಯಾತಕಿ (೩೫) -ಇತ್ಯಾದಿ.

ಕೆಲವು ಕಡೆ ಒಂದೇ ಶಬ್ದ ಎರಡನೆಯ ರೂಪಗಳಿರುತ್ತವೆ: ಕೃಪಿಯೆ-ಕೃಪಿ-ಕೃಪೀ-ಈ ಮೂರು ರೂಪಗಳು ಮೊದಲನೆಯ ಪುಟದಲ್ಲೇ ಪ್ರಯೋಗವಾಗಿವೆ. ‘ಶಾಂತನು ಮಹಾರಾಜ’ ಎಂದೇ ಉದ್ದಕ್ಕೂ ಉಪಯೋಗವಾಗಿದೆ; ಪಂಪ ಭಾರತದಲ್ಲಿ ಶಂತನು ಎಂದಿದೆ.

ಪದವಿಭಾಗ ಅನೇಕ ಕಡೆಗಳಲ್ಲಿ ಸರಿಯಾಗಿಲ್ಲ; ಬಾಯಿ ಇಂದ (೩), ಮಾತನಾಡಬೇಕಾಗಿದೆ (೯), ಉಚಿತ – ವಾದದ್ದನ್ನೆ (೨೪೨) ಇತ್ಯಾದಿ.

ಕವಿ ಭಟ್ಟನಾರಾಯಣ (ಎಂ. ಜಿ. ನಂಜುಂಡಾರಾಧ್ಯ) : ಸಂಸ್ಕೃತ ಭಾಷೆಯ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬನೆಂದು ಮಾನ್ಯವಾದ ಭಟ್ಟನಾರಾಯಣನ ಏಳು ಅಂಕಗಳು ವೇಣೀಸಂಹಾರ ನಾಟಕ ವಿಸ್ತಾರವಾದ ಪರಿಚಯ ಈ ಕಿರು ಹೊತ್ತಗೆಯಲ್ಲಿದೆ.

ಇದರಲ್ಲಿ ಕವಿಯ ಕಾಲ ದೇಶ ಮತಗಳನ್ನು ಕುರಿತು ಒಂದು ಅಡಕವಾದ ಪ್ರವೇಶಿಕೆಯಿತ್ತು ನಾಟಕದ ಸಾರವನ್ನು ಸಂಗ್ರಹಿಸಿಕೊಟ್ಟಿದೆ. ಅನಂತರ ನಾಟಕದ ಪಾತ್ರಚಿತ್ರಣದಲ್ಲಿನ ಗಮನಾರ್ಹ ಅಂಶಗಳನ್ನೂ, ನಾಟಕದಲ್ಲಿ ಮೂಲಭಾರತದ ವಸ್ತುವನ್ನು ಅಳವಡಿಸಿಕೊಂಡಿರುವ ಕ್ರಮದ ಔಚಿತ್ಯವನ್ನೂ ವಿವೇಚಿಸಿದ್ದಾರೆ. ರಸಪ್ರತಿಪಾದನೆಯಲ್ಲಿ ಕವಿಯ ಶಕ್ತಿಯ ಪ್ರದರ್ಶನ, ಓಜಸ್ವಿಯಾದ ಶೈಲಿಯ ವೈಶಿಷ್ಟ್ಯ ಹಾಗೂ ಅವನ ಸೊಗಸಾದ ಅಣೆಮುತ್ತಿನಂಥ ನುಡಿಕಟ್ಟುಗಳನ್ನೂ ತಿಳಿಸಿಕೊಟ್ಟಿದ್ದಾರೆ.

ಇವೆಲ್ಲಕ್ಕೂ ಮಿಗಿಲಾಗಿ ಈ ಹೊತ್ತಗೆಯ ಕಡೆಯ ಆರು ಪುಟಗಳಲ್ಲಿ ವೇಣೀ ಸಂಹಾರದ ಪದ್ಯಗಳನ್ನೂ ಹಾಗೂ ಅದಕ್ಕೆ ಸಮಾನವಾದ ಇಲ್ಲವೇ ಅವೇ ಮೂಲವಾಗಿರುವ ಕನ್ನಡದ ಕವ್ಯಗಳಾದ ವಿಕ್ರಮಾರ್ಜುನ ವಿಜಯ ಹಾಗೂ ಸಾಹಸಭೀಮ ವಿಜಯದ ಪದ್ಯಗಳನ್ನೂ ಕೊಟ್ಟಿರುವುದು ಕನ್ನಡ ಸಾಹಿತ್ಯದ ವಿಮರ್ಶಕರಿಗೆ ಬಹುಮುಖ್ಯವಾದ ಭಾಗ. ವಾಸ್ತವವಾಗಿ ಲೇಖಕರು ಈ ಭಾಗವನ್ನೂ ಇನ್ನೂ ವಿಶದವಾಗಿ, ತೌಲನಿಕ ದೃಷ್ಟಿಯಿಂದ ಚರ್ಚಿಸಿ ಕನ್ನಡ ಕವಿಗಳು ಸ್ವೀಕರಣದಲ್ಲಿ ತೋರಿರುವ ಸ್ವೋಪಜ್ಞತೆಯನ್ನು ನಿರೂಪಿಸಿದ್ದಲ್ಲಿ ಗ್ರಂಥದ ಉಪಯುಕ್ತತೆ ಇನ್ನೂ ಹೆಚ್ಚುತ್ತಿತ್ತು. ಇದೇನೇ ಇದ್ದರೂ, ಪಂಪ ರನ್ನರ ಕಾವ್ಯಗಳನ್ನು ಅಭ್ಯಾಸ ಮಾಡುವ ಪ್ರೌಢ ವಿದ್ಯಾರ್ಥಿಗಳಿಗೆ ಈ ಕಿರುಹೊತ್ತಗೆಯ ಸಹಾಯವಿದ್ದೇ ಇದೆ.

ಶಿಲಪ್ಪಧಿಕಾರಂ (ದಕ್ಷಿಣಾಮೂರ್ತಿ) : ಮಣಿಮೇಖಲೈ, ಜೀವಿಕ ಚಿಂತಾಮಣಿ, ಕುಂಡಲಕೇಶಿ, ವಳಯಾಪತಿ ಮತ್ತು ಶಿಲಪ್ಪಧಿಕಾರಂ ಎಂಬ ಅಯ್ದು ಕಾವ್ಯಗಳು ತಮಿಳು ಸಾಹಿತ್ಯದಲ್ಲಿ ಪಂಚ ಕಾವ್ಯಗಳೆಂದೂ (ಐಂಪೆರಂ ಕಾವ್ಯಂಗಳ್=ಅಯ್ದು ಮಹಾಕಾವ್ಯಗಳು) ತಮಿಳುದೇವಿಯ ಆಭರಣಗಳೆಂದೂ ವಿಖ್ಯಾತವಾಗಿವೆ.

ಇವುಗಳಲ್ಲಿ ಒಂದಾದ ಶಿಲಪ್ಪಧಿಕಾರಂ ಮಹಾಕಾವ್ಯವನ್ನು ಈ ಹೊತ್ತಗೆಯಲ್ಲಿ ಪರಿಚಯಿಸಿದ್ದಾರೆ. ತಮಿಳು ಸಾಹಿತ್ಯದಲ್ಲಿ ಅದು ತುಂಬ ಜನಪ್ರಿಯವಾದ ಕಾವ್ಯ ಸಂಘೋತ್ತರ ಕಾಲಕ್ಕೆ ಸೇರಿದ ಈ ಕಾವ್ಯವನ್ನು ಬರೆದ ಕವಿ ಇಳಂಗೋ ಅಡಿಗಳ್. ಚೇರ ರಾಜವಂಶದ ಈ ಕವಿ ಜೈನ ಮತದವನಾದರೂ ಕಾವ್ಯ ಕೇವಲ ಜೈನಮತೀಯ ಕಾವ್ಯ ಇಲ್ಲವೇ ಪುರಾಣ ಆಗಿರದೆ, ಇಲ್ಲ ಧರ್ಮೀಯರೂ ಓದಿ ಮೆಚ್ಚಬಹುದಾದ ಸಾರ್ವಕಾಲಿಕ ಕಾವ್ಯ ರಚಿಸಿದ್ದಾನೆ.

ಹಾಗೆ ನೋಡುವುದಾದರೆ ಜೈನಧರ್ಮ ಪ್ರಚಾರದ ಅಂಶವೇ ಇದರಲ್ಲಿ ಇಲ್ಲ ಎಂಬಷ್ಟು ಕಡಮೆ ಇದೆ. ಈ ಹೇಳಿಕೆಯ ಸತ್ಯವನ್ನು ಮನಗಾಣಬೇಕಾದರೆ ಕನ್ನಡದ ಜೈನಕವಿಗಳ ಕಾವ್ಯಗಳೊಡನೆ ಈ ಕಾವ್ಯವನ್ನು ಹೋಲಿಸಿ ನೋಡಬೇಕು. ಪಂಪನ ವಿಕ್ರಮಾರ್ಜುನ ವಿಜಯ ಹಾಗೂ ರನ್ನನ ಸಾಹಸಭೀಮ ವಿಜಯ ಕಾವ್ಯಗಳ ಹೊರತು ಉಳಿದೆಲ್ಲ ಕಾವ್ಯಗಳಲ್ಲೂ ಕಡೆಗೆ ಈ ಇಬ್ಬರು ಕವಿಗಳ ಇನ್ನೆರಡು ಕೃತಿಗಳಲ್ಲೂ ಜೈನ ಧರ್ಮದ ಹಿರಿಮೆಯನ್ನು ಸಾರಿ ಸ್ಥಾಪಿಸುವ ಮನೋಧರ್ಮ ಕಂಡು ಬರುತ್ತದೆ. ಆದರೆ ತಮಿಳಿನ ಈ ಜೈನಕವಿ ಬರೆದ ಕಾವ್ಯ ಎಷ್ಟು ಧರ್ಮಾತೀತವಾದ ಕೇವಲ ಶುದ್ಧಕಾವ್ಯವಾಗಿ ನಿಲ್ಲುತ್ತದೆಯೆಂದರೆ ಕನ್ನಡದ ಜೈನಕವಿಗಳೂ ಹೀಗೆ ಕಾವ್ಯಗಳನ್ನು ರಚಿಸಬಾರದಿತ್ತೇ ಎನಿಸುತ್ತದೆ.

ಶಿಲಪ್ಪಧಿಕಾರಂ ಪ್ರೇಮಕಾವ, ಭಾಣನ (ಕಾದಂಬರಿ) ಕಾವ್ಯದಂತೆ. ಈ ಕಾವ್ಯದಲ್ಲಿ ಕಡೆಕಡೆಗೆ ಕಾಣಿಸಿಕೊಳ್ಳುವ ಕ್ರೂರ ದುರಂತತೆಯ ತೀವ್ರ ಪರಿಣಾಮಕ್ಕೆ ಅಣಿಗೊಳಿಸುವಂತೆ ಕಾವ್ಯದ ಮೊದಲರ್ಧ ಭಾಗದ ಶೃಂಗಾರದ ವೈಭವ ವರ್ಣಿತವಾಗಿದೆ. ಸೊಗಸಾದ ಈ ದೇಸೀಯ ಕಾವ್ಯದ ವರ್ಣನಾಭಾಗ ಸಾಮಾಜಿಕ ಅಭ್ಯಾಸಕ್ಕೆ ತಕ್ಕೆ ಕಾವ್ಯವೂ ಆಗಿದೆ.

ಸ್ವತಃ ರಾಜಕುಮಾರನಾಗಿದ್ದು ಕಡೆಗೆ ಸಿಂಹಾಸನ ತ್ಯಾಗಮಾಡಿ ಸನ್ಯಾಸಿಯಾದ ಕವಿ ಇಳಂಗೋ ಅಡಿಗಳ್. ಆದುದರಿಂದ ಅರಮನೆ-ಗುರುಮನೆಗಳ ಬದುಕನ್ನು ಸಜೀವವಾಗಿ ಚಿತ್ರಿಸಿದ್ದಾನೆ. ಈ ಕಾವ್ಯದ ನಾಯಕಿ ಕಣ್ಣಗಿಯು ಕಡೆಯಲ್ಲಿ ಮಹಾಸತಿಯಾಗುವುದು ಬಹಳ ಮುಖ್ಯವಾದ ಅಂಶ, ಬಹುಶಃ ಜಾನಪದ ವಸ್ತುವೊಂದನ್ನು ಆಯ್ದು ಅದಕ್ಕೆ ಮಹಾಕಾವ್ಯದ ಪಟ್ಟ ಕಟ್ಟಿದಂತೆ ತೋರುತ್ತದೆ.

ಈ ತಮಿಳು ಕಾವ್ಯದ ಎಲ್ಲ ರಸದ ತಾಣಗಳನ್ನೂ ಗುರುತಿಸಲೆತ್ನಿಸಲಾಗಿದೆ ಈ ಚಿಕ್ಕ ಹೊತ್ತಗೆಯಲ್ಲಿ, ಒಂದೊಂದು ಮುಖ್ಯ ಪಾತ್ರವನ್ನಾಯ್ದು ಪರಿಚಯಿಸಿದ್ದಾರೆ. ತನ್ನ ಪರಿಮಿತಿಯಲ್ಲಿ ಈ ಕೃತಿ ಶಿಲಪ್ಪ್ಪಧಿಕಾರಂ ಕಾವ್ಯದ ಹಿರಿಮೆಯನ್ನು ತಿಳಿಸಿಕೊಡುತ್ತದೆ.

ವಿಮರ್ಶೆಯ ಮಾನದಂಡದಿಂದ ತಮಿಳು ಸಾಹಿತ್ಯದಲ್ಲಿ ಈ ಕಾವ್ಯದ ಸ್ಥಾನವನ್ನು ಇನ್ನೂ ತೌಲನಿಕವಾಗಿ ನಿರ್ದೇಶಿಸಬಹುದಿತ್ತು. ಸಾಮಾನ್ಯ ಓದುಗರಿದೆಂದೇ ವಿಶೇಷವಾಗಿ ಸಿದ್ಧವಾಗುವ ಪ್ರಚಾರ ಮಾಲೆಯ ಪುಸ್ತಕದಲ್ಲಿ ಅದನ್ನು ನಿರೀಕ್ಷಿಸುವುದು ಸರಿಯಾಗದೆಂದು ಕೈ ಬಿಟ್ಟಂತೆ ತೋರುತ್ತದೆ.

ವಾಲ್ಮೀಕಿ ಮುನಿಗಳ ಹಾಸ್ಯಪ್ರವೃತ್ತಿ : ಉಪನ್ಯಾಸವಾಗಿ ಓದಿದ ಪ್ರಬಂಧವಿದು. ವಾಲ್ಮೀಕಿ ಮಹಾಕವಿ ತನ್ನ ರಾಮಾಯಣದಲ್ಲಿ ತೋರಿರುವ ಹಾಸ್ಯಪ್ರವೃತ್ತಿಯನ್ನು ಗುರುತಿಸುವುದು ಈ ಪ್ರಬಂಧದ ಉದ್ದೇಶ. ಈ ಉದ್ದೇಶ ಸ್ವಾಗತಾರ್ಹವೇ. ಮಾತು ಕೃತಿಗಳಲ್ಲಿ ಸೂಕ್ಷ್ಮವೂ ಅಕುಟಿಲವೂ ಆದ ಹಾಸ್ಯವನ್ನು ಗುರುತಿಸುವುದಕ್ಕೂ ಶಿಕ್ಷಣ ಸಂಸ್ಕಾರ ಚಿತ್ತವೃತ್ತಿಗಳ ಸಿದ್ಧತೆಯ ಅಗತ್ಯವಿರಬೇಕಾಗಬಹುದು. ಸುಮಾರು ಮುವ್ವತ್ತು ಪುಟಗಳ ಈ ಪುಸ್ತಿಕೆಯಲ್ಲಿ ರಂಗನಾಥಶರ್ಮರು ಹಾಸ್ಯದ ಭಾಗ ಹಾಗೂ ಪ್ರಸಂಗಗಳೆಂದು ರಾಮಾಯಣದಿಂದ ಕೆಲವನ್ನು ಉದಾಹರಿಸಿದ್ದಾರೆ.

ಆದರೆ ಅವುಗಳಲ್ಲಿ ಅರೆಪಾಲು ಹಾಸ್ಯದ ಲೇಪವೂ ಇಲ್ಲದ ಗಂಭೀರ ಸಂದರ್ಭಗಳಾಗಿರುವುದರಿಂದ ಲೇಖಕರು ಅಯ್ಕೆಯಲ್ಲಿ ವಿವೇಕ ಹಾಗೂ ಔಚಿತ್ಯ ತೋರಿಲ್ಲವೆಂದು ಸ್ಪಷ್ಟವಾಗುತ್ತದೆ. ಋಷಿಗಳಿತ್ತ ಪಾರಿತೋಷಕ, ಬ್ರಾಹ್ಮಣರ ಲೋಭ, ಹೊಟ್ಟೆಬಾಕ ವಟುಗಳು, ದಶರಥನ ಹಾಸ್ಯ ಪ್ರವ್ಞಣತೆ, ಕಡೆಗೂ ಎದ್ದ ಕುಂಭಕರ್ಣ – ಮೊದಲಾದ ಹಲವಾರು ಉಪಶೀರ್ಷಿಕೆಗಳಡಿಯಲ್ಲಿ ಬರುವ ವರ್ಣನೆಯಲ್ಲಿ ಹಾಸ್ಯವನ್ನು ಪ್ರಯತ್ನಪೂರ್ವಕವಾಗಿ ಪಂಜು ಹಚ್ಚಿ ಹುಡುಕಬೇಕು. ಅಲ್ಲದೆ ಲೇಖಕರು ಅನಾವಶ್ಯಕವಾಗಿ ವಿವರಣೆಯನ್ನು ಜಗ್ಗಿ ಜಾಳಾಗಿಸಿಬಿಡುತ್ತಾರೆ. ಅತಿಯಾದ ಮಾತುಗಳ ಮರೆಯಲ್ಲಿ ಬರಬಹುದಾಗಿದ್ದ ಹಾಸ್ಯವೂ ಜಾರಿ ಸೋರಿಬಿಡುತ್ತದೆ. ಇದೊಂದು ಸಾಮಾನ್ಯ ಪ್ರಯತ್ನವಾದುದರಿಂದ ಇನ್ನೂ ಹೆಚ್ಚಿನ ವಿಮರ್ಶೆ ಅನಾವಶ್ಯಕ. ಇದನ್ನು ಪುಸ್ತಕವೆನ್ನುವುದಕ್ಕಿಂತ ಪ್ರಚಾರ ಪುಸ್ತಿಕೆ ಎಂದು ಕರೆಯಬಹುದು.

(ಸಾಹಿತ್ಯ ವಾರ್ಷಿಕ ೧೯೭೧ : ಸಂಪಾದಕರು, ಜಿ. ಎಸ್. ಶಿವರುದ್ರಪ್ಪ, ಬೆಂಗಳೂರು ವಿಶ್ವವಿದ್ಯಲಯ, ಬೆಂಗಳೂರು ೧೯೭೩)

* * *