ಲಕ್ಷಣ ಗ್ರಂಥಗಳನ್ನು ಕುರಿತು. ಈ ಸಮೀಕ್ಷೆಯಲ್ಲಿ ಒಟ್ಟು ಹನ್ನೊಂದು ಪುಸ್ತಕಗಳು ಸೇರಿವೆ. ಇವುಗಳಲ್ಲಿ ನಿಘಂಟು, ಭಾಷಾ ವಿಜ್ಞಾನ, ಛಂದಸ್ಸು, ವ್ಯಾಕರಣ, ವ್ಯಾಖ್ಯಾನ, ಹೀಗೆ ವಿವಿಧ ವಿಷಯಗಳಿಗೆ ಸೇರಿದ ಪುಸ್ತಕಗಳಿವೆ.

ವಿವರ : ನಿಘಂಟಿಗೆ ಸೇರಿದ ಪುಸ್ತಕಗಳು ಮೂರು, ಭಾಷಾವಿಜ್ಞಾನಕ್ಕೆ ಸಂಬಂಧಿಸಿದವು ಮೂರು, ಛಂದಸ್ಸಿಗೆ ಸೇರಿದವು ಎರಡು, ವ್ಯಾಕರಣಕ್ಕೆ ಒಂದು, ವ್ಯಾಖ್ಯಾನ ಒಂದು, ಸಂಶೋಧನೆಗೆ ಸೇರಿದ್ದು ಒಂದು.

ಕಡೆಯ ಎರಡು ಗ್ರಂಥಗಳು ಸ್ಥೂಲವಾಗಿ ಈ ವಿಭಾಗಕ್ಕೆ ಸೇರುತ್ತವೆ. ವಾಸ್ತವವಾಗಿ ಅವೆರಡೂ ಪ್ರತ್ಯೇಕ ವಿಭಾಗವಾಗಿ ನಿಲ್ಲುತ್ತವೆಂಬುದೇ ಸಮಂಜಸ. ಆದರೆ ಅವೆರಡನ್ನೂ ಬೇರೆಯಾಗಿ ವಿಭಜಿಸುವುದಕ್ಕಿಂತ ಈ ಅಧ್ಯಾಯದಲ್ಲೇ ಅಳವಡಿಸಬಹುದೆಂದು ಭಾವಿಸಿ ‘ಇತ್ಯಾದಿ’ ಎಂದು ತಿಳಿಸಿ ಸೇರಿಸಿದ್ದೇವೆ. ಕಡೆಯಲ್ಲಿ ಹೆಸರಿಸಿದ ಆ ಗ್ರಂಥಗಳು : ಪಂಪ ಭಾರತ ದೀಪಿಕೆ, ಹರಿಹರನ ಕೃತಿಗಳು.

ಈ ವಿಭಾಗದ ವಿಮರ್ಶೆಯ ಒರೆಗಲ್ಲಿನಲ್ಲಿ ಮಿನುಗುವ ಶ್ರೇಷ್ಠ ಕೃತಿ ಪಂಪಾಭರತ ದೀಪಿಕೆ. ಈ ವರ್ಷ (೧೯೭೧)ರಚಿತವಾಗಿರುವ ಕನ್ನಡ ಗ್ರಂಥಗಳಲ್ಲೆಲ್ಲಾ ಈ ವ್ಯಾಖ್ಯಾನ ಅಪೂರ್ವ ಸ್ಥಾನ ಗಳಿಸುತ್ತದೆ. ಸಂಸ್ಕೃತ ಸಾಹಿತ್ಯದಲ್ಲಷ್ಟೇ ಹೆಚ್ಚಾಗಿ ಕಂಡು ಬರುವ ಮಲ್ಲಿನಾಥ ಮಾದರಿಯ ಮೇಲ್ಪಂಕ್ತಿಗೆ ಹೆಗೆಲಣೆಯಾಗಿ ನಿಲ್ಲುವ ಕನ್ನಡ ವ್ಯಾಖ್ಯಾನ ಗ್ರಂಥವಿದು. ಉಳಿದ ಹಳಗನ್ನಡ ಕಾವ್ಯಗಳಿಗೂ ಈ ತೆರನಾದ ದೀಪಿಕೆಗಳ ಅಗತ್ಯ ಬಹಳವಾಗಿದೆಯಾದರೂ ಇಂಥ ಕೃತಿ ರಚನೆಗೆ ಬೇಕಾದ ಸಿದ್ಧತೆ ಹೊಂದಿರುವ ಬಲ್ಲಿದರು ಬಹಳಿಲ್ಲ. ಶಾಸ್ತ್ರ ಹಾಗೂ ಸಾಹಿತ್ಯ ಕೃತಿಗಳ ಸತತಾಭ್ಯಾಸದಿಂದ ಬಂದ ಪ್ರಜ್ಞೆ ಪ್ರತಿಭೆ. ಲೋಕಾನುಭವ, ಸಹೃದಯತೆ – ಮೊದಲಾದ ಗುಣಗಳನ್ನು ವಿದ್ವಾಂಸರೊಬ್ಬರ ಕೌಶಲ್ಯವನ್ನೂ ಈ ವ್ಯಾಖ್ಯಾನದಲ್ಲಿ ಕಾಣುತ್ತೇವೆ.

ಇನ್ನುಳಿದ ಲಕ್ಷಣ ಗ್ರಂಥಗಳು ಒಟ್ಟಾರೆ ಸಂಖ್ಯೆಯಂತೆ ಸತ್ವವೂ ಕಡಿಮೆ. ಇದೇ ಬಗೆಯ ಇದೇ ಮಟ್ಟದ ಕೃತಿರಚನೆ ಮುಂದುವರಿದರೆ ಕನ್ನಡ ಭಾಷೆಯ ಭಂಡಾರಕ್ಕೆ ಯಾವ ಹೊಸ ಕೊಡುಗೆಯೂ ಬಂದಂತಾಗದು. ನಮ್ಮ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಕೂಡ ಇನ್ನೂ ಉತ್ತಮೋತ್ತಮ ಕೃತಿಗಳು ರಚನೆಯಾಗಬೇಕು.

ಸಾಹಿತ್ಯ ಸಂಶೋದನೆಗೆ ಸೇರಿದ ಹರಿಹರನ ಕೃತಿಗಳ ಗ್ರಂಥ ಸಾಧಾರಣ ಮಟ್ಟಕ್ಕೂ ಮೇಲೆ ಹೋಗುವುದಿಲ್ಲ.

ಕುಮಾರವ್ಯಾಸ ನಿಘಂಟು : ಇದರ ಸಂಪಾದಕರು ‘ಎನ್ಕೆ’ ಅವರು ಈ ಮೊದಲು ಸಿದ್ದಪಡಿಸಿರುವ ‘ಕುಮಾರವ್ಯಾಸ ಭಾರತ’ದಲ್ಲಿ ಕೊಟ್ಟಿರುವ ಶಬ್ದ ಕೋಶವನ್ನೇ ಇಲ್ಲಿಯೂ ಕೊಟ್ಟಿದ್ದಾರೆ, – “ಕುಮಾರವ್ಯಾಸನ ಕಾವ್ಯವನ್ನು ಅಭ್ಯಸಿಸುವವರಿಗೆ ಹೆಚ್ಚಿನ ಅನುಕೂಲವಾಗಲೆಂದು ಇಲ್ಲಿ ಇದನ್ನು ಪ್ರತ್ಯೇಕವಾಗಿ ಅಲ್ಪ ಮೌಲ್ಯದಲ್ಲಿ ಸಾಮಾನ್ಯರಿಗೆ ದೊರಕುವಂತಾಗಬೇಕು ಎಂಬ ಉದ್ದೇಶದಿಂದ ಪ್ರತ್ಯೇಕವಾಗಿ ಈ ಹೊತ್ತಿಗೆಯನ್ನು ತರಲಾಗಿದೆ” ಎಂಬ ಸಮರ್ಥನೆಯನ್ನಿತ್ತು. ಆದರೆ ಸಂಪಾದಕರ ಅಶ್ರದ್ದೆಯಿಂದಾಗಿ ಈ ಪ್ರಯತ್ನ ಅನವಶ್ಯಕ ಪುನರಾವರ್ತನೆಯೆಂದೇ ತೋರುತ್ತದೆ. ಇದರಲ್ಲಿ ಕುಮಾರವ್ಯಾಸನ ಜಾಣ್ಣುಡಿ ನಾಣ್ಣುಡಿ ಪಡೆನುಡಿ ಗಾದೆನುಡಿಗಳನ್ನು ವಿವರಣೆಗಳೊಡನೆ ಅಳವಡಿಸಿದ್ದಾರೆ, ನಿಜ. ಹಾಗಿದ್ದೂ ಮೇಲಿನ ವಿಮರ್ಶೆಯ ಮಾತು ಅನ್ವಯಿಸುತ್ತದೆಂಬುದನ್ನು ನಿದರ್ಶನಗಳೊಡನೆ ತೋರಿಸಬಹುದು.

ಸಂಪಾದಕರು ಮುನ್ನುಡಿಯಲ್ಲಿ “ಕುಮಾರವ್ಯಾಸನ ಅಭ್ಯಾಸಿಗಳಿಗೆ ಅತನ ಭಾಷಾ ಶೈಲಿಯನ್ನೂ, ಅತನ ಪದಪ್ರಯೋಗಗಳನ್ನೂ ಅರಿತುಕೊಳ್ಳುವುದು ಬಹಳ ಅಗತ್ಯ. ಆದರೆ ಬರಿ ಡಿಕ್ಶನರಿಯಿಂದ ಕುಮಾರವ್ಯಾಸನ ಬಳಕೆ ಮಾತುಗಳನ್ನು ಪಡೆನುಡಿಗಳನ್ನೂ ಅರ್ಥಯಿಸುವುದು ಸಾಧ್ಯವಾಗಲಿಕ್ಕಿಲ್ಲ. ಕುಮಾರವ್ಯಾಸ ಕವಿ ತನ್ನದೇ ಆದ ಶಬ್ಧ ಸಂಪತ್ತಿಯುಳ್ಳವನು. ಸಂದರ್ಭಕ್ಕೆ ಸರಿಯಾಗಿ ಹೊಸ ಹೊಸ ಪ್ರಯೋಗಗಳನ್ನು ತನ್ನ ಕಲ್ಪನಾಶಕ್ತಿಯಿಂದ, ರೂಪಕ ಸಾಮರ್ಥ್ಯದಿಂದ ನಿರ್ಮಿಸುತ್ತಾನೆ, ಚಲಾವಣೆಯಲ್ಲಿ ತಂದುಬಿಡುತ್ತಾನೆ, ಹೊಸ ನಾಣ್ಯಗಳಂತೆ ಇದಕ್ಕಾಗಿ ಕುಮಾರವ್ಯಾಸನ ಮನೋಭಾವವನ್ನರಿತುಕೊಂಡು ಆತನ ಪ್ರಯೋಗಗಳಿಗೆ ಅರ್ಥ ಹಚ್ಚಬೇಕಾಗುತ್ತದೆ” ಎಂಬುದಾಗಿ ತಿಳಿಸಿದ್ದಾರೆ, ಅವರ ಗ್ರಹಿಕೆಯನ್ನು ಸಂಪೂರ್ಣವಾಗಿ ಅನುಮೋದಿಸಬಹುದಲ್ಲದೆ ಈ ಗ್ರಹಿಕೆಯ ಹಿನ್ನಲೆಯಲ್ಲೇ ಅವರ ವಿಫಲ ಪ್ರಯತ್ನವನ್ನೂ ಪರಿಶೀಲಿಸಬಹುದು.

ಈ ನಿಘಂಟಿನಲ್ಲಿ ಮೂರು ಭಾಗಗಳೀವೆ – ನಿಘಂಟು, ಪದ ಪ್ರಯೋಗಗಳು, ಪಾರಿಭಾಷಿಕ ಪದಗಳು.

ಮೊದಲ ಭಾಗದ ಎಪ್ಪತ್ತು ಪುಟಗಳ ಸಂಕ್ಷಿಪ್ತ ನಿಘಂಟು ಸ್ಥೂಲವಾಗಿ ಅಕಾರಾದಿಯಲ್ಲಿದೆಯೆಂದು ಭಾವಿಸಬಹುದೇ ಹೊರತು ವಾಸ್ತವವಾಗಿ ಅದರಲ್ಲಿ ಕ್ರಮಪ್ರಾಪ್ತ ಅಕಾರಾದಿಯಿಲ್ಲ. ಅಲ್ಲದೆ ಬರಿಯ ಶಬ್ದ ಮತ್ತು ಅದಕ್ಕಿರುವ ಅರ್ಥವನ್ನಷ್ಟೇ ಕೊಡುವ ಶಬ್ಧಕೋಶ ಸಂಪ್ರದಾಯಕ್ಕೆ ವಿಪುಲವಾಗಿ ಪೆಟ್ಟು ಬಿದ್ದಿದೆ : ‘ಅವದಿರ ಮಡದಿ ಮಕ್ಕಳ ಕಣ್ಣ ನೀರಿನ್ನಾರ ತಾಗುವುದು’ ಎಂಬ ರೂಪವನ್ನು (ಪುಟ ೧) ಕೊಟ್ಟು ಅದರ ಅರ್ಥ ಹೇಳ ಹೊರಟಿರುವುದು ನಿಘಂಟು ಸಿದ್ಧತೆಯ ಕ್ರಮಕ್ಕೆ ಹೊರತು. ಹೀಗೆಯೇ ಅಟಮಟಿಸಿ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು, ಅಸುಗಳ ತೋಡಿದನು, ಉಂಗುರ ವಿಡಿಯ ನಡುವಿನ ನೀರೆ, ಇವನುಬ್ಬಟ್ಟಿಗೆ ಮದ್ದೆರೆವೆನು, ಇಂದಿನಲಿ ಮಹನವಮಿ ತಲೆಗಳಿಗೆ – ಇತ್ಯಾದಿ ರೂಪಗಳನ್ನು ‘ನಿಘಂಟು’ಭಾಗದಲ್ಲಿ ಕೊಟ್ಟು ಅರ್ಥ ನೀಡಿದ್ದಾರೆ.

ಅನವಧಾನದಿಂದ ಮೇಲಿನ ರೂಪಗಳು ಮೊದಲ ಭಾಗದಲ್ಲಿ ಸೇರಿರಬಹುದುದೆಂದು ಅನುಮಾನಿಸಲಿರುವ ಅವಕಾಶವನ್ನು ತಳ್ಳಿ ಹಾಕುವ ಇನ್ನಿತೆ ಉದಾಹರಣೆಗಳಿವು : ಕರಿಯ ಸೊಗಡಿನ, ಕುಸಿದಲೆಯ ಬಿಟ್ಟಿಯ ಭಾರವೊ, ಕೈ ಹತ್ತುಗೆಯ ಮೋರೆಯ, ಖುರಕೆ ರತುನವ ಸುರಿದು, ನಿರ್ನಾಮ ಭಾವದಲಿ ನುಡಿದರಂಗೈತಳದ ಬಾಯ್ಗಳಲಿ, ಬಾಯೊಳಗೆ ಬೆರಳನಿಳುಹಿ, ಬಿಂದುಧ್ವನಿ ಕಳಾಪರಿಲುಳಿತನು, ಸೆರಗದನು ಅಳವಡೆ ಸಿಕ್ಕಿ, ಸರಿಮಿಗಿಲು ಕಾದಿದರು – ಇತ್ಯಾದಿ ಇವು ಶಬ್ದಕೋಶದ ಭಾಗದಲ್ಲಿ ಹೇಗೆ ತಾನೆ ಬಂದಾವು? ಜೊತೆಗೆ ವಿಭಕ್ತಿ ಪ್ರತ್ಯಯಾಂತ ರೂಪವನ್ನು ಬೇರೆ ಕೊಡುತ್ತಾರೆ. ಸೊಗಡಿನ. ಮೋರೆಯ ಮುಂತಾದ ಷಷ್ಟ್ಯಂತ ರೂಪಗಳಾಗಲಿ, ಮೋರೆಯೊಣಗಿದುದಮರರಿಗೆ ಎಂಬಂಥ ಚತುರ್ಥಿ ಪ್ರತ್ಯಯಾಂತ ರೂಪಗಳಾಗಲಿ, ಯಾವ ನಿಘಂಟಿನಲ್ಲಿ ಕಾಣಿಕೊಂಡಾವು?

ಮೀಟು = ವೈಭವ, ಮೀಟ =ಶ್ರೇಷ್ಠ, ಮಿಂಟು=ಹೊಡೆತ, ಮೀರುವಿಕೆ (ಇತ್ಯಾದಿ) – ಇವಿಷ್ಟನ್ನೂ ಒಂದೇ ಮೂಲಶಬ್ದದ ಅಡಿ ಕೊಡಬಹುದಿತ್ತು, ಮೊಗಸು = ಕಾದಾಡು, ಮೊಗಸು =ಏರಿಹೋಗು, ಮೊಗಸು =ಯತ್ನಮಾಡು; ದಂಡಿ=ರೀತಿ, ಜಗಳ. ದಂಡಿ=ತಡಿ, ಸೀಮೆ, ದಂಡಿ=ಶೌರ್ಯಸಮಾನತೆ, ಘನತೆ. ದಂಡಿ=ಸೆಣಸಾಟ, ದಂಡಿ=ವರ್ತನೆ, ಲಾವಣಿಗೆ=ಹೊಂದಿಕೆ, ಲಾವಣಿಗೆ=ಕುದುರೆಯ ಪಾಗೆ(?), ಲಾವಣಿಗೆ= ಸಮೂಹ, ಲಾವಣಿಗೆ=ಸಂಬಂಧ, ಲಾವಣಿಗೆ=ಪ್ರಕಾರ-ಇವೆಲ್ಲಾ ಪುನರುಕ್ತಿ ಗೊಂದಲ ಗ್ರಂಥದ ಮೌಲ್ಯಕ್ಕೆ ಮಸಿ ಹಚ್ಚುತ್ತವೆ. ಇಂಥ ಕಡೆಗಳಲ್ಲೆಲ್ಲಾ ಒಂದೇ ಶಬ್ದರೂಪ ಕೊಟ್ಟು. ಅದಕ್ಕಿರುವ ಅರ್ಥ ಛಾಯೆಗಳನ್ನು ಬರೆಯಬಹುದಿತ್ತು ಮತ್ತು ಉಲ್ಲೇಖಗಳ ದುಂದುಗಾರಿಕೆಯನ್ನು ತಪ್ಪಿಸಬಹುದಿತ್ತು.

ಬೇರೆ ಬೇರೆ ಬರಬೇಕಾದ ಎರಡು ಮೂರು ಶಬ್ದಗಳನ್ನು ಒಟ್ಟಿಗೆ ಕಾಣಿಸಿರುವುದೂ ಸರಿಯಿಲ್ಲ. ಅಳವಿಗಿಟ್ಟಣಿಸು -ಎಂಬ ಉದಾಹರಣೆಯಲ್ಲಿ ಅಳವಿ, ಇಟ್ಟಣಿಸು ಪ್ರತ್ಯೇಕ ಬರಬೇಕು. ಈ ನಾನಾ ನ್ಯೂನತೆಗಳು ಉದ್ಭವಿಸಲು ಅಕಾರಾದಿಯ ಅಭಾವವಲ್ಲದೆ ಬೇರೆ ಕಾರಣಗಳೂ ಇವೆ. ಕುಮಾರವ್ಯಾಸ ಭಾರತದ ಪದ್ಯಗಳನ್ನು ಓದುತ್ತಾ ಹೊರಡ ಸಂಪಾದಕರು ಆಯಾ ಪದ್ಯದ ಕಠಿಣ ಶಬ್ಧಗಳನ್ನೂ, ಸ್ವಾರಸ್ಯಕರ ಪ್ರಯೋಗಗಳನ್ನೂ ಗುರುತು ಮಾಡುತ್ತಾ ಬಂದು ಅವನ್ನು ಮುದ್ರಣಕ್ಕೆ ಹಾಗೆಯೇ ಕೊಟ್ಟಿರಬಹುದೆಂಬ ಊಹೆಗೂ ಗ್ರಾಸವಿದೆ. ಹಾಗಿದ್ದಲ್ಲಿ ಅವರು ಗುರುತಿಸಿದ ಶಬ್ದಾದಿಗಳನ್ನು ಪಟ್ಟಿಕೆಗಳಿಗೆ ಎತ್ತಿಕೊಂಡು ಅವನ್ನು ಅಕಾರಾದಿಗೆ ಜೋಡಿಸಿ ಗ್ರಂಥ ರಚನೆ ಅಳವಡಿಸಿದ್ದರೆ ಲೇಸಾಗುತ್ತಿತ್ತು.

ನಿಘಂಟು ಅಕಾರಾದಿಯಾಗದೆ ಇರುವುದು ಅಶಾಸ್ತ್ರೀಯ. ಅದರಿಂದ ಈ ಕೋಶ ಹೆಚ್ಚು ದೋಷಪೂರಿತವಾಗಲು ಎಡೆಯುಂಟಾಗಿದೆ. ‘ಅಂಗವಣೆ’ ಶಬ್ದ ಬಂದು ನಲವತ್ತು ಶಬ್ಧಗಳಾದ ಮೇಲೆ ಅಂಗಚಿತ್ತ ಬರುತ್ತದೆ. ‘ಅಲವಟ್ಟ’ವಾದ ಮೇಲೆ ಅದರ ಕೆಳಗೇ ‘ಅಡಿತು’ ಶಬ್ಧವಿದೆ. ಅಳುವಾಸಿ, ಅಣಿಗಳೆ, ಅಗಮ, ಅಪ್ಯಾಯಿತ. ಆನೆವರಿ, ಆಪ್ಯಾಯಮಾನ, ಆಳವಿಸು, ಆಕೆ, ಆರ್, ಆಯತ – ಈ ಕ್ರಮದಲ್ಲಿ ಶಬ್ದಗಳು ಬರುವುದು ನಿಘಂಟಿಗೆ ಭೂಷಣವಲ್ಲ,. ಅವಗಡಿಸು ಎಂಬ ಶಬ್ದ ಎರಡನೆಯ ಪುಟದಲ್ಲೂ ಇದೆ. ಮೂರನೆಯ ಪುಟದಲ್ಲೂ ಇದೆ – ಒಂದೇ ಬಗೆಯ ಅರ್ಥಗಳಲ್ಲಿ.

ಆನೆವರಿ (ಪುಟ ೬) ಶಬ್ದಕ್ಕೆ ‘ಆನೆಯಂತೆ ಹರಿ’ ಎಂದು ಅರ್ಥೈಸಿ ಮತ್ತೆ ಆನೆವರಿಯ (ಪುಟ ೫) ಶಬ್ದಕ್ಕೆ ‘ಆನೆಯ ಮರಿಯಂತೆ ಹರಿದು’ ಎಂದು ಹೇಳಿರುವುದು ಆಭಾಸ. ಬಹುಶಃ ಅದು ‘ಆನೆವ (ಮ)ರಿವರಿದು’ ಎಂಬುದಕ್ಕೆ ಹೇಳಿದ ಅರ್ಥವಿರಬೇಕು. ಹಾಗಿದ್ದಲ್ಲಿ ಇದನ್ನು ಮುದ್ರಣ ದೋಷವೆಂದಾದರೂ ತೋರಿಸಬೇಕಿತ್ತು. ಇದೇ ರೀತಿ ‘ಹೊಂಗು’ಶಬ್ದ (ಪುಟ ೬೯) ನಾಲ್ಕು ಶಬ್ದಗಳಂತರದಲ್ಲಿ ಎರಡು ಸಲ ಬಂದಿದೆ. ಒಂದು ಕಡೆ ಉತ್ಸಾಹಪಡು, ಇನ್ನೊಂದು ಕಡೆ ಹಿಗ್ಗು ಎಂಬರ್ಥವಿದೆ ಅಷ್ಟೆ. ಇದರಲ್ಲಿ ಏನು ವ್ಯತ್ಯಾಸವಿದೆ?

ಆದುದರಿಂದ ಒಂದು ಶಬ್ದದ ರೂಪಾಂತರಗಳನ್ನೆಲ್ಲ ಒಂದೇ ಶಬ್ದದ ಕೆಳಗೆ ಕೊಟ್ಟಿಲ್ಲವೆಂಬುದು ಗಟ್ಟಿಯಾಯಿತು. ಮುಖ್ಯ ಉಲ್ಲೇಖ ಮೊದಲಿತ್ತು ಅದರಡಿಯಲ್ಲಿ ತತ್ಸಂಬಂಧಿಯಾದ ರೂಪಾಂತರಗಳನ್ನು ತೋರಿಸುವುದು ವೈಜ್ಞಾನಿಕ ಪದ್ಧತಿ. ಇದರಿಂದ ಶಬ್ದಗಳ ಪುನರಾವೃತ್ತಿಗೆ ಅವಕಾಶವಿರದು. ಇಲ್ಲಿ ಆಕಾರಾದಿ ಸರಿಯಿಲ್ಲದಿರುವುದರ ಫಲವಾಗಿ ಆದ ಏರುಪೇರಿನ ಜೊತೆಗೆ ಕರಿಮೊಳೆ, ಕರಿಮೊಳೆವೋಯ್ತು ಸಂವರಿಸು -ಮೊದಲಾದ ಶಬ್ದ ರೂಪಾವಳಿಯನ್ನೆಲ್ಲಾ ಕೊಡುತ್ತಾ ಹೊರಟ ಶ್ರಮವೂ ತೆಲೆದೋರಿತು. ಶಬ್ದ ರೂಪಗಳ ಆಯ್ಕೆಯಲ್ಲಿ ಆಕ್ರಮವಿರುವಂತೆ ಮೂಲರೂಪ, ನಿಷ್ಪನ್ನರೂಪಗಳ ಅಂತರವನ್ನು ಗುರುತಿಸುವಲ್ಲೂ ದೋಷವಿದೆ. ಅರ್ಥವನ್ನು ನಿರ್ಣಯಿಸುವಾಗಲೂ ಇನ್ನೂ ಮಿಗಿಲಾದ ಎಚ್ಚರದ ಅಗತ್ಯವಿತ್ತು.

ಅರ್ಥಿ (ಪುಟ ೫) ಶಬ್ದಕ್ಕೆ ಅಳ್ತಿ, ಪ್ರೀತಿ ಎಂದು ಕೊಟ್ಟಿದ್ದಾರೆ. ಅಳುಹು -ಅಳುಪು (?) ಎಂದು ಸೂಚಿಸಿದ್ದಾರೆ. ಅಣಸು -ಅಯೋಗ್ಯ ಎಂಬರ್ಥವಿದೆ. ಅಳ್ಳಿರಿ (ಪುಟ ೪) ಶಬ್ದ ಒಂದೇ ಪುಟದಲ್ಲಿ ನಾಲ್ಕು ಕಡೆ ಬಂದಿದೆ. ಅರ ಅಂದಿನ ಪುಟದಲ್ಲೊಮ್ಮೆ ಆಗಲೇ ಬಂದಿರುವುದು ಸಾಲದೆಂಬಂತೆ’ ಈ ಶಬ್ದಕ್ಕೆ ಹೆದರಿಸು, ಹಬ್ಬು, ಬಾರಿಸು, ಗರ್ಜಿಸು ಎದುರಿಗೆ ಬಂದು ಅಪ್ಪಳಿಸು ಎಂದರ್ಥ ಹೇಳುತ್ತಾರೆ. ಇದರ ಮೂಲ ಎಂತು? ಇದು ‘ಅಳ್ಳೆಗಳನ್ನು ಇರಿ’ ಎಂಬ ಶಬ್ದಗಳಿಂದಾದ ಸಮಾಸವೆ? ಇದರಲ್ಲಿ ಇಟ್ಟುಕೊಳ್ಳಬೇಕಾದಷ್ಟು? -ಹೀಗೆ ವಿವೇಚಿಸಬಹುದಿತ್ತು. ರವಣ = ಸಾಧನ, ರವಣ = ರೆಂಬೆ, ರಪಣ = ಆಯುಧ, ರಪಣ = ಸಾಧನ – ಇಷ್ಟೊಂದು ಉಲ್ಲೇಖ ಹಾಗೂ ಅರ್ಥ ಉಚಿತವೆ? ಈ ಶಬ್ದಗಳಲ್ಲಿ ‘ರಪಣ’ ಮೂಲ. ಅದಕ್ಕೆ ರೆಂಬೆ ಎಂಬರ್ಥ ಅಸಮಂಜಸವಲ್ಲವೆ? ಕೆಲವು ಶಬ್ದಗಳಿಗಾದರೂ ಮೂಲರೂಪ ಸೂಚಿಸಬಹುದಿತ್ತು; ಉದಾ : ಅಕ್ಕಡು, ಅಕ್ಕಾಡು – ಇವೆರಡೂ ‘ಅಱ್ಕಾಡು’ ರೂಪದಿಂದ ಬಂದಿವೆ. ಹುದು=ಸ್ನೇಹ ಎನ್ನುತ್ತಾರೆ, ಹುದುವು = ಪಾಲು ಎನ್ನುತ್ತಾರೆ. ಇಲ್ಲಿ ‘ಹುದು’ ಕೂಡ ‘ಹುದುವು’ ಇರಲಾರದೆ? ಚಿಂತನೀಯ. ಅಲ್ಲದೆ ಇಂಥ ಕಡೆಗಳಲ್ಲಿ ಈಗಾಗಲೇ ಹೊರ ಬಂದಿರುವ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟಿನ ಮೊದಲ ಸಂಪುಟ (ಸ್ವರಗಳ ಸಂಪುಟ) ದಲ್ಲಿ ಅನುಸರಿಸುವ ಶಾಸ್ತ್ರೀಯ ಶುದ್ಧ ಪದ್ಧತಿಯ ನೆರವನ್ನು ಈ ಸಂಪಾದಕರು ಅವಶ್ಯ ಪಡೆಯಬೇಕಿತ್ತು.

ಶಬ್ದಗಳನ್ನು ಕೊಡುವಾಗ ನಿಘಂಟಿನ ಭಾಗದಲ್ಲಿ ಅವುಗಳ ಆಕರಗಳನ್ನು ಸೂಚಿಸದಿರುವುದು ಮತ್ತೊಂದು ಕೊರತೆ. ಇದರಿಂದ ನಿಘಂಟಿನ ಪ್ರಯೋಜನ ಕುಂದಿದೆ. ಕೆಲವಾದರೂ ಅಪಶಬ್ದಗಳು ಇರಬಹುದೆನ್ನಿಸಿದರೂ ಪ್ರಯೋಗದ ಕೊರತೆ, ಪುಟ ಪದ್ಯ ಪರ್ವಾದಿಗಳೊಡನೆ ಖಚಿತ ಉಲ್ಲೇಖ ಇಲ್ಲದಿರುವುದು – ಇವುಗಳಿಂದಾಗಿ ಪತ್ತೆ ಹಚ್ಚುವುದು ಕಷ್ಟ. ಒಂದು ರೂಪ ಮುದ್ರಣಸ್ಖಾಲಿತ್ಯವೇ ಎಂಬ ಸಂದೇಹ ಬಂದಾಗ ಆಕರಗಳ ಅಭಾವದಿಂದಾಗಿ ಅನಿವಾರಿತವಾಗೇ ನಿಲ್ಲುತ್ತದೆ. ಒಂದು ನಿದರ್ಶನ: ‘ನೂರು ಸಳು ಕೆಡಹಿಗೆ’ ಎಂಬುದನ್ನಿತ್ತು ‘ಇಂದ್ರ’ ಎಂದು ಅರ್ಥ ಕೊಟ್ಟಿದ್ದಾರೆ. ಆದರೆ ಇಲ್ಲಿ ‘ನೂರು ಪಶು ಕೆಡಹಿಗೆ’ ಎಂಬ ಪ್ರಯೋಗವಿದ್ದಿರಬೇಕು. ಹಾಗಾದರೂ, ಕೊಟ್ಟಿರುವ ಅರ್ಥ ಘಟಿಸುವುದಿಲ್ಲ. ಅಂತೆಯೇ ತೀರ ಸಾಧಾರಣ ಶಬ್ದಗಳಿಗೂ ಇಲ್ಲಿ ಸ್ಥಾನವಿದ್ದು ಕೆಲವಾರು ಕಠಿಣ ಶಬ್ದಗಳನ್ನು ಕೈಬಿಟ್ಟಿರುವುದು ನ್ಯಾಯವಲ್ಲ.

ಎರಡನೆಯ ಭಾಗದಲ್ಲಿ ಆದಿಪರ್ವದಿಂದ ಹಿಡಿದು ಕೊನೆಯ ಪರ್ವದ ವರೆಗಿನ ಭಾಗಗಳಲ್ಲಿ ಒಂದೊಂದು ಪರ್ವದಲ್ಲೂ ಬರುವ ಶಬ್ದಗಳನ್ನೂ, ನುಡಿಗಟ್ಟುಗಳನ್ನೂ ಶಬ್ದ ಸಮೂಹಗಳನ್ನೂ ಕೊಟ್ಟು ಅರ್ಥಹೇಳಲು ಪ್ರಯತ್ನ ಪಟ್ಟಿದ್ದಾರೆ. ನಿಜವಾಗಿ ಮೊದಲ ಭಾಗದಲ್ಲಿ ಸೇರಲು ಅರ್ಹವಲ್ಲ ಎಂದು ನಾವು ಆಗಲೇ ಸೂಚಿಸಿದ ಆ ‘ಶಬ್ದಗಳು’ ಇಲ್ಲಿ ಬರಬೇಕಿತ್ತು. ಇಲ್ಲಿಯೂ ಸಂದೇಹಗಳು ಸಾಕಷ್ಟಿವೆ. ‘ಕುರುಬಿದರೆ ತರುಬಿದರು’ ಪ್ರಯೋಗದ ಅರ್ಥ ಪುನರ್ ಪರಿಶೀಲನಾರ್ಹ. ತೀರ ಸಾಮಾನ್ಯ ನುಡಿ ಕಟ್ಟುಗಳಿಗೂ ಪದಸಮೂಹಗಳಿಗೂ ಕೂಡ ಅರ್ಥಕೊಡಲು ಹೊರಟಿರುವುದು ಶಾಸ್ತ್ರೀಯ ವಿಧಾನಕ್ಕೆ ಬಾಹಿರ, ಕಾವನಾತನೆ ಕೊಲುವತಾನೆ, ಸಾವೆನಾತನ ಕೈಯಲಿ (-‘ಕೈಯ ಬಾಯಲಿ’ ಎಂದಿರಬಹುದೆ, ಮೂಲಪಾಠದಲ್ಲಿ?), ತನುವ ಮರೆದನು ಪುಳಕ ಜಲದಲಿ, ರಾಜ್ಯದ ಸಿರಿಗೆ ಸೋಲುವವನಲ್ಲ, – ಇಂಥವು ಕುಮಾರವ್ಯಾಸನ ಹಿರಿಮೆಯನ್ನು ಎತ್ತಿ ತೋರವು, ಅವನಿಗಷ್ಟೇ ವಿಶಿಷ್ಟವಾದ ಪ್ರಯೋಗಗಳಲ್ಲಿ ಮಡುಗಟ್ಟಿನಿಂತ ಅರ್ಥ, ಭಾವ, ನಾದ, ಧ್ವನಿಕೋಶಗಳ ಹರಹರನ್ನು ಗುರುತಿಸಬೇಕು.

ಅಲ್ಲದೆ ಇಂಥಲ್ಲಿ ಪೂರ್ಣಪಾಠ ಕೊಡುವ ಅಗತ್ಯವೂ ಇಲ್ಲ. ಆದರೆ ಮರಾಠಿ ಮೂಲರೂಪಗಳನ್ನು ಪಟ್ಟಿ ಮಾಡಿಕೊಟ್ಟಿರುವುದು ಓದುಗರಿಗೆ ತುಂಬ ಪ್ರಯೋಜನವಾಗಿದೆ. ಉದಾ : ಚಾವಟಿಯ = ಕೇಡಿಗಳು, ಮರಾಠಿ ಚಾವಟ್ : ಚೌರಾಸಿ = ೮೫, ಮರಾಠಿ ಚೌರಾಂಶಿ.

ಮೂರನೆಯ ಭಾಗದಲ್ಲಿ ಹೆಚು ತಪ್ಪುಗಳು ತಲೆಹಾಕಿಲ್ಲವಾದರೂ ಆಕಾರಾದಿಯ ಅಭಾವದಿಂದ ಇಲ್ಲಿನ ಉಪಯುಕ್ತತೆ ತಗ್ಗಿದೆ. ಆಯುಧಗಳನ್ನು ವಿವರಿಸುವಲ್ಲಿ ತೋಮರ (ಪುಟ ೧೪೭) ಎರಡು ಸಲ ನುಸುಳಿಬಿಟ್ಟಿದೆ; ಒಂದು ಕಡೆ ಅದಕ್ಕೆ ‘ಕಬ್ಬಿಣದ ಗದೆ’ ಎಂಬರ್ಥ, ಇನ್ನೊಂದು ಕಡೆ ‘ಗದೆ’ ಎಂಬರ್ಥವನ್ನು (ಒಂದೇ ಪುಟದಲ್ಲಿ) ಹೇಳಿರುವುದು ಸರಿ ಕಾಣದು. ಕುಮಾರವ್ಯಾಸ ವರ್ಣಿಸಿರುವ ವಿವಿಧ ದೇಶಗಳನ್ನು ಕುರಿತು ಹೇಳವಾದ ‘ಸಿಂಧುದೇಶವೆಂದರೆ ಜಲಪ್ರದೇಶವೆಂದಾಗಬಹುದು’ ಎಂಬ ಮಾತು ಅಸ್ಪಷ್ಟ (ಪುಟ ೧೫೪)

ಈ ನಿಘಂಟಿನ ಮೊದಲ ಪುಟದಲ್ಲೇ ಜಾಹೀರು ಪಡಿಸಿರುವ ‘ಕುಮಾರವ್ಯಾಸನ ಶಬ್ದಭಂಡಾರ ಮುದ್ರೆಯನ್ನೊಡನೆ ಸೂರೆಗೆಯ್ಯುವ ಪ್ರಪ್ರಥಮ ಶಬ್ದಕೋಶ’, ‘ಕವಿ ಕುಮಾರವ್ಯಾಸನ ಕುರಿತು ಅಭ್ಯಾಸಕ್ಕೆ ಪರಿಪೂರ್ಣ ಸಹಾಯಕ ಗ್ರಂಥ’, ‘ಕುಮಾರವ್ಯಾಸ ಭಾರತದ ಅಭ್ಯಾಸಕ್ಕೆ ಅತ್ಯವಶ್ಯಕವಾದ ಏಕೈಕ ಕೈಗನ್ನಡಿ’, ‘ಕನ್ನಡಿ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ನಿಘಂಟು’ – ಎಂಬೆಲ್ಲ ಹೊಗಳಿಕೆ ಬಹಳ ಹೆಚ್ಚಾಯಿತು. ಇದುವರೆಗೆ ಬಂದಿರುವ ಹತ್ತಾರು ಕುಮಾರವ್ಯಾಸ ಭಾರತದ ಸಂಗ್ರಹಗಳ ಶಬ್ದಕೋಶಗಳನ್ನಷ್ಟೇ ಕಲೆ ಹಾಕಿದರೂ ಇದಕ್ಕಿಂತಲೂ ಉತ್ತಮ ಕೋಶ ತಯಾರಾದೀತು.

ಆಕಾರಾದಿ ಕ್ರಮ, ಪೂರ್ವ ನಿಯೋಜಿತ ವ್ಯವಸ್ಥೆ, ಖಚಿತವಾದ ಯೋಜನೆ – ಯೋಚನೆ – ಇವುಗಳ ಅಭಾವದಿಂದಾಗಿ ನಿಘಂಟು ಓದುಗರಿಗೆ ನೆರವು ನೀಡುವುದರಲ್ಲಿ ಸೋತಿದೆ. ಹೀಗಾಗಿ ಕುಮಾರವ್ಯಾಸ ಭಾರತಕ್ಕೆ ಒಂದು ಉಪಯುಕ್ತ ಶಬ್ದಕೋಶ ಸಿದ್ಧಪಡಿಸುವ ಸಾರ್ಥಕ ಪ್ರಯತ್ನದಲ್ಲಿ ಸಂಪಾದಕರು ಸಂಪೂರ್ಣ ವಿಫಲರಾಗಿದ್ದಾರೆ, ಕುಮಾರವ್ಯಾಸ ಭಾರತಕ್ಕೊಂದು ಉತ್ತಮ ಶಬ್ದಕೋಶದ ಅಗತ್ಯ ಈಗ ಹೆಚ್ಚಾಗಿ ಕಂಡು ಬರುತ್ತದೆ.

ಶ್ರೀವತ್ಸ ನಿಘಂಟು: ಟಿ.ವಿ. ವೆಂಕಟಾಚಲ ಶಾಸ್ತ್ರೀ. ಇದೊಂದು ವಿಶಿಷ್ಟ ಮಾದರಿಯ ನಿಘಂಟು, ಪ್ರಾಚೀನ ಕೃತಿಗಳನ್ನು, ಅದರಲ್ಲಿಯೂ ಶಾಸ್ತ್ರ ಗ್ರಂಥಗಳನ್ನು ಅಭ್ಯಾಸ ಮಾಡುವವರಿಗೆ ಎದುರಾಗುವ ಸಂಖ್ಯಾ ವಿಶಿಷ್ಟ ಶಬ್ದಗಳಿಗೆ ಇಲ್ಲಿ ವಿವರಣೆ ಇದೆ. ಮಿತವ್ಯಯಾಕಾಂಕ್ಷೆ, ಖಚಿತತೆ, ಪರಂಪರೆ ಹಾಗೂ ಸೂತ್ರೀಕರಣ ವಿಧಾನ ಮೊದಲಾದವುಗಳ ಫಲವಾಗಿ ಸಾಹಿತ್ಯ ಮತ್ತು ಸಾಹಿತ್ಯೇತರ ಶಾಸ್ತ್ರ ಗ್ರಂಥಗಳಲ್ಲಿ ಸಂಖ್ಯಾ ವಿಶಿಷ್ಟವಾದ ಶಬ್ದಗಳು ಪಾರಿಭಾಷಿಕವೆಂಬಂತೆ ಪ್ರಯೋಗವಾಗಿರುತ್ತವೆ.

ಹಲವೊಮ್ಮೆ ಕೆಲವು ಕರ್ತೃಗಳು ಆಯಾ ಸಂಖ್ಯಾವಿಶಿಷ್ಟ ಶಬ್ದಗಳನ್ನು ಅವುಗಳ ವಿವರಣೆಯೊಡನೆಯೇ ಪ್ರಯೋಗಿಸಿರುವುದುಂಟು. ಇದಕ್ಕೆ ಕನ್ನಡ ಗದ್ಯ ಗ್ರಂಥವಾದ ವಡ್ಡಾರಾಧನೆಯನ್ನು ಉದಾಹರಿಸಬಹುದು. ಆದರೆ ಅನೇಕ ವೇಳೆ ವಿವರಣೆಯಿಲ್ಲದೆ ಕೇವಲ ಸಂಜ್ಞೆಯಾಗಿ ಬಳಕೆಯಾಗಿರುತ್ತದೆ. ಅಂಥ ಪ್ರಸಂಗದಲ್ಲಿ ಓದುಗರು ಸಂದರ್ಭ ಬಲದಿಂದಲೊ, ಅಭ್ಯಾಸದಿಂದ ದತ್ತವಾದ ಜ್ಞಾನದ ನೆರವಿನಿಂದಲೊ ಅವುಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಇಲ್ಲವೇ ಇತರ ಸಂವಾದಿಯಾದ ಶಾಸ್ತ್ರ ಕೃತಿಗಳಿಂದ ತಿಳಿದುಕೊಳ್ಳಬೇಕಾಗುತ್ತದೆ.

ಆದರೂ ಅದೆಲ್ಲಾ ಪ್ರಯಾಸದ ಕೆಲಸ. ಅದಕ್ಕೆ ಶ್ರಮವೊಂದೇ ಅಲ್ಲದೆ ತಕ್ಕ ಶಿಕ್ಷಣವೂ ಬೇಕಾಗುತ್ತದೆ. ಹೆಚ್ಚಿನ ಸಮುದಾಭಾವದಿಂದ ಈಗಿನ ದಿನಗಳಲ್ಲಂತೂ ಬೇರೆ ಮೂಲಗಳಿಂದ ವಿವರ ಸಂಗ್ರಹಿಸುವುದು ಸುಲಭಸಾಧ್ಯವಲ್ಲ. ಮೂಲ ಆಕರಗಳು ದೊರೆಯುವುದೂ ಕಷ್ಟ. ಅಲ್ಲದೆ ಒಮ್ಮೊಮ್ಮೆ ಒಂದು ಸಂಖ್ಯಾ ವಿಶಿಷ್ಟ ಶಬ್ದಕ್ಕೆ ಜೈನ, ವೈದಿಕ, ಶೈವ – ಹೀಗೆ ಒಂದೊಂದು ಧರ್ಮದ ಗ್ರಂಥಗಳ ವಿವರಣೆ ಒಂದೊಂದು ರೀತಿಯಲ್ಲಿರುತ್ತದೆ. ಅಷ್ಟೇ ಅಲ್ಲದೆ ಒಂದೇ ಶಬ್ದಕ್ಕೆ ಸೂಚಿತವಾಗಿರುವ ವಿವರ ಕೂಡ ಗ್ರಂಥದಿಂದ ಗ್ರಂಥಕ್ಕೆ ಬೇರೆಯಾಗುವುದೂ ಉಂಟು, ಸಾಂದರ್ಭಿಕ ಭೇಧಗಳೂ, ಅಭಿಪ್ರಾಯ ಭೇದಗಳೂ, ಅಂತರ್ಭೇದಗಳೂ ತಲೆದೋರುತ್ತವೆ.

ಶ್ರೀವತ್ಸ ನಿಘಂಟು ಸುಮಾರು ನಾಲ್ಕು ಸಾವಿರ ಸಂಖ್ಯಾ ವಿಶಿಷ್ಟ ಶಬ್ದಗಳಿಗೆ ನೂರು ಆಕರ ಗ್ರಂಥಗಳಿಂದ ಸಂಗ್ರಹಿಸಿದ ವಿವರಣೆಗಳನ್ನೊಳಗೊಂಡಿದೆ. ಕಾವ್ಯ, ಇತಿಹಾಸ, ಶಾಸ್ತ್ರ, ಪುರಾಣಾದಿ ನಾನಾ ವಿಧವಾದ ಕೃತಿಗಳ ಪರಿಶೀಲನೆಯಿಂದ ಸಿದ್ಧವಾದ ಈ ನಿಘಂಟು ಬಹುದಿನಗಳ ಅಗತ್ಯವನ್ನು ಪೂರೈಸಿದೆ. ಇದರ ಸಿದ್ದತೆ, ಸಂಗ್ರಹವಿಧಾನ, ಜೋಡಣೆಕ್ರಮ, ವಿಷಯ ನಿರ್ವಹಣೆ – ಎಲ್ಲ ಕ್ರಮಬದ್ಧವಾಗಿ ನಿಯೋಜಿತವಾಗಿದೆಯೆಂದು ಧಾರಾಳವಾಗಿ ಹೇಳಬಹುದು. ಕನ್ನಡ ಭಾಷೆ ಹಾಗೂ ಸಾಹಿತ್ಯ ಅಭ್ಯಾಸ ಮಾಡುವವರಿಗೆ ಇದು ಉಪಯುಕ್ತವಾಗಿದೆ. ಕನ್ನಡದಲ್ಲಿ ಇಂಥ ಸಂಖ್ಯಾಕೋಶ ಇನ್ನೊಂದಿಲ್ಲ ಎಂಬುದು ಇದರ ಹಿರಿಮೆಯನ್ನು ಎತ್ತಿ ಹೇಳುತ್ತದೆ.

ಇನ್ನೂ ಕೆಲವು ಕನ್ನಡ ಗ್ರಂಥಗಳನ್ನು ಅವಲೋಕಿಸಿದ್ದರೆ ಇದರ ಮೌಲ್ಯ ಅಧಿಕವಾಗುತ್ತಿತ್ತಲ್ಲದೆ ಕನ್ನಡ ಸಲಿತವರಿಗೆ, ಕಲಿಸುವವರಿಗೆ ಉತ್ತಮ ಕೈಪಿಡಿಯಾಗಲು ಸಾಧ್ಯವಿತ್ತು. ಅಕ್ಷೌಹಿಣಿ ಎಂಬ ಶಬ್ದಕ್ಕೆ ವಚನಭಾರತ ಹಾಗೂ ಕುಮಾರವ್ಯಾಸ ಭಾರತದ ವಿವರಣೆಯನ್ನೇ ಅವಲಂಬಿಸಿದ್ದಾರೆ. ಆದರೆ ಪಂಪಭಾರತದ ಪ್ರಯೋಗಕ್ಕೆ ಅದೇ ಸಂಖ್ಯೆಯನ್ನು ಅನ್ವಯಿಸಬೇಕೇ ಅಥವಾ ಜೈನಪರವಾದ ಇನ್ನೊಂದು ಸಂಖ್ಯೆಯನ್ನು ಹೇಳಬೇಕೆ ಎಂಬುದನ್ನೂ ಗಮನಿಸಬೇಕಾಗುತ್ತದೆ. ಇಂಥ ಕೆಲವು ಸಂದೇಹಗಳು ಅಲ್ಲಲ್ಲಿ ಇಣಿಕಿ ನೋಡುತ್ತವೆ. ಅಲ್ಲದೆ ಈ ಬಗೆಯ ಕೋಶಗಳು ಪ್ರಯೋಜನ ಕೂಡ ಸೀಮಿತ. ಉಳಿದ ನಿಘಂಟುಗಳಂತೆ ಎಲ್ಲರೂ ಬಳಸುವಂತಹುದಲ್ಲ.

ಈ ವಿದ್ವತ್ ಶ್ರೇಷ್ಠ ಶ್ರೀವತ್ಸ ನಿಘಂಟನ್ನು ಪರಿಶ್ರಮ ಪೂರ್ವಕ ಸಿದ್ದಪಡಿಸಿರುವ ಲೇಖಕರು ಇದರ ಮರುಮುದ್ರಣ ಸಂದರ್ಭದಲ್ಲಿ ಪರಿಷ್ಕರಿಸುವ ಸಾಧ್ಯತೆಯಿದೆ. ಈಗ ಇಲ್ಲಿ ಬಿಟ್ಟು ಹೋಗಿರುವ ಇನ್ನಷ್ಟು ಸಂಖ್ಯಾ ಸೂಚಕ ಶಬ್ದಗಳನ್ನು ಅಳವಡಿಸಬಹುದು. ಸೇರಿಸಬೇಕಾದ ಕೆಲವನ್ನು ಉದಾಹರಣೆಯೆಂದು ಸೂಚಿಸುತ್ತೇನೆ :

ಆಯುಧ – ೪ : ಬಂಧುವರ್ಮನ ಹರಿವಂಶಾಭ್ಯುದಯದಲ್ಲಿ (೧-೨೨ವ) ಪ್ರಯೋಗವಿದೆ, ಆಯುಧ-೭, : ಆಚಣ್ಣನ ವರ್ಧಮಾನ ಪುರಾಣದಲ್ಲಿದೆ. ಆವರ್ತ-೧೨ : ಷೋಡಶಭಾವನೆಯ ನೋಂಪಿಯ ಕಥೆಯಲ್ಲಿದೆ. ಅಂಬುಧಿ-೪ : ಕೊಟ್ಟಿದ್ದಾರೆ, ಆದರೆ ಆ ನಾಲ್ಕು ಯಾವುವು ಎಂಬುದನ್ನು ಹೇಳಿಲ್ಲ. ಆಗಮ – : ಶೈವ, ವೈಷ್ಣವ ಹೇಳಿದೆ, ಆದರೆ ಜೈನವೂ ಸೇರಬೇಕು, ಋದ್ಧಿ – ೭ : ಉಗ್ರಹಪ, ದೀಪ್ತತಪ, ತಪ್ತತಪ, ಮಹಾ ತಪ, ಘೋರತಪ, ಘೋರ ಪರಾಕ್ರಮ, ಘೋರ ಬ್ರಹ್ಮ ಚರ್ಯ -ಇದು ಹೊಸದಾಗಿ ಸೇರಬೇಕು (ತತ್ವಾರ್ಥಸೂತ್ರ ವೃತ್ತಿ), ಋದ್ಧಿ-೮ : ಪುಟ ೭೭ರಲ್ಲಿ ಕೊಟ್ಟಿರುವುದು ಸರಿಯಾಗಿದೆ. ಅಣಿಮೆ, ಮಹಿಮೆ ಇತ್ಯಾದಿಗೆ ತತ್ವಾರ್ಥ ಸೂತ್ರ ವೃತ್ತಿ (ಪುಟ ೫೩) ಆಕರ ತೋರಿಸಬಹುದು. ಜತೆಗೆ, ಋದ್ಧಿ- ೮ : ಇಲ್ಲಿ ಅಮೌಷದಿ, ಕ್ಷೇಶೌಷದಿ, ಜಲ್ಲೌಷದಿ, ಮಲೌಷದಿ, ವಿಡೌಷದಿ, ಸರ್ವೌಷದಿ, ಅಸ್ಯಾವಿಷ ದೃಷ್ಟ್ಯ ವಿಷಭೇದ ದಿಂದೌಷದಿ ಋದ್ಧಿ -ತತ್ವಾರ್ಥ ಸೂತ್ರ ವೃತ್ತಿ (೫೪) – ಗಮನಿಸಬೇಕು. ದಂಡನೆ – ೨೩ ಎಂದೂ ಸೇರಿಸಬೇಕು (ವಡ್ಡಾರಾಧನೆ, ಪು. ೧೨೪) ದುರ್ಗ – ೩, : ಸೇರಬೇಕು – ಎಪಿಗ್ರಾಫಿಯ ಕರ್ನಾಟಿಕ, ಸಂಪುಟ-೨ (ಪರಿಷ್ಕೃತ), ಶ್ರವಣಬೆಳಗೊಳ ಶಾಸನ ಸಂಖ್ಯೆ ೧೬೨, ಕ್ರ್ರಿ.ಶ. ೧೧೨೩, ಪುಟ. ೨೭, ಸಾಲು : ೧೦೪ರಲ್ಲಿ ಪ್ರಯೋಗವಿದೆ. ಪಯಣ – ೩. : ಇದು ಸೇರಬೇಕು – ಪೊನ್ನ ಶಾಂತಿ ಪುರಾಣಂ (೬-೨೦ವ) -ಮೂರು ಮಯಣಂಬೋಗಿ. ಪಾತ್ರ-೩ : ಅಣುವ್ರತ, ಮಹಾವ್ರತ, ಸಂಯತ ಸಮೃತ್ ದೃಷ್ಟಿ (ಷೋಷಶಭಾವನೆ ನೋಂಪಿ), ಪ್ರಣಾಮ – ೨ : ನೋಡಿ ನಮಸ್ಕಾರ ಎಂದು ಸೂಚಿಸಬೇಕು. ಬೋಧೆ-೮ : ಜೈನ ಪರಂಪರೆಯ ಅರ್ಥವನ್ನು ಕೊಡಬೇಕು – ಭಕ್ಷ್ಯ – ೧೮ : ವಡ್ಡಾರಾಧನೆಯ ಪ್ರಯೋಗವೇ ಅಧಾರ. ಮಠ-೫ : ಪಂಚಮಠ ಹೆಸರಿಸಬೇಕು, ಮಯೂರ – ೧೦ : ಹತ್ತು ಮಯೂರರನ್ನು ಹೆಸರಿಸಬೇಕು (ದಶ ಮಯೂರಕಣ್ – ವಡ್ಡಾರಾಧನೆ). ಯೋಗ – ೩, ಆತಾಪನ, ತರುಮೂಲ (ವರ್ಷಯೋಗ), ಶಿಶಿರ-ಈ ಮೂರು ಬರಬೇಕು. ವಿದ್ಯಾ – ೧೬ : ವ್ಯೋಮಗಾಮಿನಿ, ಕಾಮರೂಪಿ ಮೊದಲಾದ ಪದಿನಾರು ವಿದ್ಯೆ (ಪ್ರಯೋಗ-ಪುಷ್ಪಾಂಜಲಿ ನೋಂಪಿ). ವಿದ್ಯದೇವಿ – ೧೬ : ಷೋಡಶ ವಿದ್ಯಾ ದೇವಿಯರನ್ನು ಹೆಸರಿಸಬೇಕು. ಸಿದ್ದಾಂತ – ೨. ಉಭಯ ಸಿದ್ಧಾಂತವನ್ನು ಹೇಳಬೇಕು. ಸ್ವರಗತ – ೧೨. : ದ್ವಾದಶ ವಿಧಮಪ್ಪ.. ಹೆಸರಿಸಬೇಕು.

ಕನ್ನಡಕ್ಕೆ ಕಿಟೆಲ್ಲರ ಕೊಡುಗೆ (ವಿವಿಧ ಲೇಖಕರು) : ಕನ್ನಡ ಸಾಹಿತ್ಯ ಹಾಗೂ ಭಾಷೆಗಾಗಿ ದುಡಿದ ಪಾಶ್ಚಾತ್ಯರಲ್ಲಿ ರೆವರೆಂಡ್ ಎಫ್. ಕಿಟೆಲ್ಲರ ಹೆಸರು ದೊಡ್ಡದು. ಸ್ವತಂತ್ರ ರಚನೆ, ಅನುವಾದ, ಗ್ರಂಥ ಸಂಪಾದನೆ, ಕನ್ನಡ ಸಾಹಿತ್ಯ ಚರಿತ್ರೆ ಮತ್ತು ನಿಘಂಟು -ಹೀಗೆ ನಾನಾ ವಿಧವಾಗಿ ಅವರು ಕನ್ನಡಕ್ಕೆ ವಿಪುಲವಾಗಿ ಸೇವೆ ಸಲ್ಲಿಸಿದ್ದಾರೆ. ಇಂತಹ ಮಹನೀಯರ ಬದುಕು ಬರೆಹಗಳನ್ನು ಕುರಿತ ಕೃತಿ ಇದು.

ಧಾರವಾಡ ಕಿಟೆಲ್ ಕಾಲೇಜಿನಿಂದ ಪ್ರಕಟವಾಗಿರುವ ಈ ಸಂಸ್ಮರಣ ಸಂಪುಟ ಮೂರು ಭಾಗಗಳನ್ನೊಳಗೊಂಡಿದೆ : ಜೀವನದರ್ಶನ, ಸಾಹಿತ್ಯ ದರ್ಶನ, ನಿಘಂಟು ದರ್ಶನ, ಒಟ್ಟು ೨೪ ಲೇಖನಗಳೂ ನಾಲ್ಕು ಕವಿತೆಗಳೂ ಇವೆ. ಮೊದಲ ಭಾಗದಲ್ಲಿ ಮೂರು ಲೇಖನಗಳೂ ನಾಲ್ಕು ಕವಿತೆಗಳೂ ಇವೆ. ಈ ಭಾಗದ ಲೇಖನಗಳು ಕಿಟೆಲ್ಲರ ವ್ಯಾಪಕ ವ್ಯಕ್ತಿತ್ವವನ್ನೂ. ಅವರಿಗಿಂತ ಮೊದಲು ನಡೆದ ಕನ್ನಡ ಸಾಹಿತ್ಯ ವಿವೇಚನೆಯ ಪರಿಚಯವನ್ನೂ. ಚೆನ್ನಾಗಿ ಮನಗಾಣಿಸಿವೆ. ಕಡೆಗೆ ಕವಿತೆಗಳು ಕೂಡ ಅವರ ಸಂದೇಶವನ್ನೂ ಶ್ರಮವನ್ನೂ ಮುಂದಿಡಲು ಪ್ರಯತ್ನಿಸಿರುವುದಲ್ಲದೆ ಆ ಹಿರಿಯರನ್ನು ಸಮರ್ಥವಾಗಿ ಸೆರೆಹಿಡಿದಿದೆ.

ಎರಡನೆಯ ಭಾಗ ಸಾಹಿತ್ಯ ದರ್ಶನ ಅದರಲ್ಲಿರುವ ಆರು ಲೇಖನಗಳೂ ಅವರ ಕೃತಿಗಳ ವಿವಿಧ ಮುಖಗಳ ಪರಿಚಯ ಮಾಡಿಕೊಡಲೆತ್ನಿಸಿವೆ. ಈ ಭಾಗದಲ್ಲಿ ಸ್ಥೂಲವಾಗಿ ಕನ್ನಡ ಸಾಹಿತ್ಯ ಚರಿತ್ರೆಗೆ ಅವರ ಕೊಡುಗೆ ಎಂತಹುದೆಂಬುದರ ವಿಮರ್ಶೆಯೂ. ಛಂದೋಂಬುಧಿಯನ್ನು ಅವರು ಸಂಪಾದಿಸಿರುವ ರೀತಿಯ ಪ್ರಶಂಸೆಯೂ, ವ್ಯಾಕರಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಮಹತ್ತರ ಸೇವೆಯ ಸ್ಮರಣೆಯೂ ನಡೆದಿದೆ. ಅಂತೆಯೇ ಶಾಸನಗಳನ್ನು ಅಧ್ಯಯನ ಮಾಡಿದ ಕ್ರಮವನ್ನೂ ಅವರ ಬರವಣಿಗೆಯಲ್ಲಿ ಕಾಣುವ ವೈವಿಧ್ಯವನ್ನೂ ವಿವೇಚನೆ ಮಾಡುವ ಪ್ರಯತ್ನಗಳಿವೆ. ಐರೋಪ್ಯರು ಕನ್ನಡಕ್ಕೆ ಮಾಡಿದ ಸೇವೆಯನ್ನು ಕುರಿತ ಬರೆಹ ಇಲ್ಲಿ ಚೌಕಟ್ಟಿಗೆ ಹೊಂದಿಕೊಳ್ಳುವುದಿಲ್ಲ. ಅಂತೆಯೇ ಅವರ ‘ಬರೆಹಗಳಲ್ಲಿ ವೈವಿಧ್ಯ’-ಎಂಬ ಬರೆಹ ತೀರ ಸರಳವೂ ಜಾಳುಜಾಳೂ ಆಯಿತು.

ಮೂರನೆಯ ಭಾಗ ನಿಘಂಟು ದರ್ಶನ ಕರಿತದ್ದು. ಇಲ್ಲಿ ಕಿಟೆಲ್ಲರ ಶ್ರೇಷ್ಠ ಕೋಶದ ಬಹುಮುಖಗಳನ್ನು ಚರ್ಚಿಸಲಾಗಿದೆ. ಶಬ್ದ ಕೋಶದ ಅಭ್ಯಾಸಿಗಳಿಗೆ ಅತ್ಯಂತ ಉಪಯುಕ್ತವಾಗಬೇಕಾದ ಭಾಗವಿದು. ಇಲ್ಲಿರುವ ಲೇಖನಗಳಲ್ಲೂ ಕೆಲವು ಕೇವಲ ಮೇಲುಮೇಲಿನ, ತಪ್ಪೆಸಾರಿಸುವ ಪರಿಚಯಕ್ಕೆ ನಿಂತಿವೆ. ಎರಡು ಮೂರು ಬರೆಹಗಳಷ್ಟೇ ಆ ಬೃಹತ್ ಕೋಶದ ಓರೆಕೋರೆ ಹಾಗೂ ಹಿರಿಮೆಗಳನ್ನು ತೂಗಿ ಒರೆಹಚ್ಚಿ ನೋಡುವ ತೌಲನಿಕ ಅಧ್ಯಯನದಿಂದ ಕೂಡಿವೆ.

ಕಳೆದ ವರ್ಷವಷ್ಟೇ (೧೯೭೧) ಕಿಟೆಲ್ ಕೋಶದ ಪುನರ್ ಮುದ್ರಣ ಮುಗಿಯಿತು. ಆ ಕೋಶವನ್ನು ತೀರ ತಕ್ಕಮಟ್ಟಿಗಾದರೂ ಪರಿಷ್ಕರಿಸಿ ಮುದ್ರಿಸಿದ್ದು ಮದರಾಸು ವಿಶ್ವವಿದ್ಯಾನಿಲಯ, ಶಬ್ದಕೋಶದ ಮರು ಸಂಪಾದನೆಯಲ್ಲಿ ತಾವು ಅನುಸರಿಸಿದ ಮಾರ್ಗವನ್ನು ಹೊಸ ಸಂಪಾದಕರು ವಿವರಿಸಿದ್ದಾರೆ. ಅವರ ಲೇಖನದಿಂದ ಸಹಜವಾಗಿಯೇ ಅನೇಕ ಉಪಯುಕ್ತ ಅಂಶಗಳನ್ನು ನಿರೀಕ್ಷಿಸುತ್ತೇವೆ. ಅವರ ಬರೆಹ ಓದಿ ಮಿಗಿಸಿದ ಮೇಲೆ ಬಹುವಾಗಿ ನಿರಾಶೆಯಾಗುತ್ತದೆ. ಯಾವ ಹೊಸ ವಿಷಯ ಇಲ್ಲದ, ಹೆಚ್ಚಳವೂ ಇಲ್ಲದ ಚರ್ವಿತಚರ್ವಣ ಹಾಗೂ ವಿಷಯಾಂತರಗಳಿಂದ ಬಿರುಕುಬಿಟ್ಟಿ ಬರೆಹವದು.

ವಿಶ್ವವಿದ್ಯಾನಿಲಯದ ವತಿಯಿಂದ ಮೂವರು ಸ್ನಾತಕೋತ್ತರ ಪದವೀಧರರು ಮಾಡಲು ಸಾಧ್ಯವಿದ್ದಷ್ಟನ್ನು ಈ ಪುನರ್ ಮುದ್ರಣದಲ್ಲಿ ಮಾಡಿದಂತೆ ತೋರುವುದಿಲ್ಲ. ಅನಾಯಾಸವಾಗಿ ಕೆಲಸ ಸಾಗಿಸಿದ್ದಾರೆ. ಇನ್ನೂ ಹೆಚ್ಚು ಪರಿಷ್ಕಾರ ಮಾಡಿ ನಿಘಂಟಿನ ಮೌಲ್ಯ ಹಾಗೂ ಉಪಯುಕ್ತತೆ ಹೆಚ್ಚಿಸಲು ಸಾಧ್ಯವಿತ್ತು. ಆದಷ್ಟೂ ಬೇಗ ಈ ಮರುಮುದ್ರಣ ಹೊರತರಬೇಕೆಂಬ ತುಂಬುಹಂಬಲದಿಂದಾಗಿ ಹೆಚ್ಚು ಮುತುವರ್ಜಿಯಿಂದ ಅಗತ್ಯವಾದ ಎಚ್ಚರ ತಳೆಯಲು ಆಗದೇ ಹೋಗಿರಬಹುದೆಂಬ ಊಹೆಯೂ ಸರಿಯಲ್ಲ ನಿಘಂಟು ಮತ್ತೆ ದೊರೆಯುವಂತಾದುದೊಂದೇ ಅದರ ಮುಖ್ಯ ಪ್ರಯೋಜನ.

ನಿಘಂಟು ಕ್ಷೇತ್ರಕ್ಕೆ ಸೋದಾಹರಣ ಪೂರ್ವಕವಾಗಿ ಅವರ ಗಟ್ಟಿ ಕಾಣಿಕೆಯ ಮಹತ್ವನ್ನೂ. ಅವರು ಬಳಸಿಕೊಂಡ ಮಾತೃಕೆಗಳ ಮೇಲ್ಮೆಯನ್ನೂ : ಪಂಪರಾಮಾಯಾಣ, ಬಸವಪುರಾಣ ಮೊದಲಾದ ಹಳೆಯ ಹೊತ್ತಗೆಗಳಿಂದ ಶಬ್ದಗಳನ್ನು ಸಂಗ್ರಹಿಸಿರುವ ಕ್ರಮದ ಸೊಗಸನ್ನೂ ಇಲ್ಲಿನ ಬರೆಹಗಳು ತಿಳಿಸಿವೆ, ಈ ಕೋಶದ ಶಬ್ಧಗಳಲ್ಲಿ ಬಹುಪಾಲು ಬಸವಪುರಾಣದಿಂದ ಬಂದಿವೆ. ಜೈನ ಕಾವ್ಯಗಳನ್ನು ಬಳಸಿಕೊಳ್ಳುವಲ್ಲೂ, ಜೈನ ಧರ್ಮದ ಪಾರಿಭಾಷಿಕ ಶಬ್ದಗಳಿಗೆ ಅರ್ಥಕೊಡುವಲ್ಲೂ ಉಂಡಾಗಿರುವ ಪರಿಮಿತಿಗಳನ್ನು ಪರಿಚಯಿಸಲಾಗಿದೆ.

ಡಾ. ಬಿ.ಎಸ್. ಕುಲಕರ್ಣಿಯವರು ತಮ್ಮ ಲೇಖನದಲ್ಲಿ ಒಂದು ಕಡೆ “ಜೈನ ಪಾರಿಭಾಷಿಕ ಶಬ್ದಗಳನ್ನು ಆಯ್ದುಕೊಂಡು ಜೈನ ತತ್ವ ಪ್ರಣಾಲಿಯ ಹಿನ್ನೆಲೆಯಲ್ಲಿ ಅವುಗಳ ವಿಶಿಷ್ಟ ಅರ್ಥವನ್ನು ಕೊಡುವ ಪ್ರಯತ್ನ ಈ ನಿಘಂಟುವಿನಲ್ಲಿ ಆಗಿಲ್ಲ” (ಪುಟ ೧೦೪) ಎಂದು ಹೇಳಿದ್ದಾರೆ. ಬಿ.ಎಸ್. ಕುಲಕರ್ಣಿಯವರ ಈ ಕೊರಗಿನ ರೂಪದ ಹೇಳಿಕೆಯಲ್ಲಿ ಹೊಳೆಯುವ ಆಕ್ಷೇಪಣೆ ಅಸಾಧುವೆಂದು ತೋರುತ್ತದೆ. ಜೈನ ಮೊದಲಾದ ಧರ್ಮಗಳ ಮತೀಯಾದಿ ಪ್ರಕ್ರಿಯೆಯಗಳನ್ನು ತಿಳಿಸುವ ಎಲ್ಲ ಪಾರಿಭಾಷಿಕ ಶಬ್ದಗಳಿಗೂ ಅರ್ಥ ಹೇಳುವುದಕ್ಕೆ ಈ ಬಗೆಯ ನಿಘಂಟುಗಳಿಗಿಂತ ಪ್ರತ್ಯೇಕ ಪಾರಿಭಾಷಿಕ ಕೋಶಗಳು ಪ್ರಯತ್ನಿಸುವುದು ಲೇಸು. ಈ ವಿಚಾರದಲ್ಲಿ ನಿಘಂಟುಕಾರರು ತಳೆದ ವಿವೇಚನೆಯೇ ಸರಿಯಾಗಿದೆ.

ಈ ಹಿರಿಯ ಕೋಶದ ಹಿರಿಮೆಯನ್ನು ಅಪ್ಪೆಯವರ ಸಂಸ್ಕೃತ ಕೋಶದ ಹಿನ್ನಲೆಯಲ್ಲಿ ಒರೆಹಚ್ಚಿ ನೋಡಿದೆ. ಅಂತೆಯೇ ಅದರ ಸಂಸ್ಕೃತ ಶಬ್ದಗಳನ್ನೂ ಅಚ್ಚಗನ್ನಡ ಶಬ್ದಗಳನ್ನೂ ಗುರುತಿಸಿದ್ದಾರೆ. ಅಲ್ಲಿನ ಕೆಲವು ಹಿಂದೀ ಶಬ್ದಗಳ ಅರ್ಥ ಪರಿವರ್ತನೆ ಹಾಗೂ ಕೆಲವು ಇಂಗ್ಲಿಷ್ ಶಬ್ದಗಳ ಧ್ವನಿವ್ಯತ್ಯಾಸಗಳ ಪರಿಚಯವಿದೆ. ಕೋಶರಚನೆಯಲ್ಲಿ ದಾಸಸಾಹಿತ್ಯವನ್ನು ಹೇಗೆ ಉಪಯೋಗಿಸಿಕೊಂಡಿದ್ದಾರೆಂಬುದರ ವಿವರವಿದೆ.

ಈ ಕನ್ನಡ ನಿಘಂಟನ್ನು ತಮಿಳು. ಮಲೆಯಾಳ ನಿಘಂಟುಗಳ ಜೊತೆಯಲ್ಲಿ ಹೋಲಿಸಿದೆ. ಕಡೆಯಲ್ಲಿ ಅವರ ಲೇಖನಗಳನ್ನೂ, ಗ್ರಂಥಗಳನ್ನೂ ಒಂದು ಸೂಚಿಯಾಗಿ ಸಿದ್ಧಪಡಿಸಿ ಕೊಟ್ಟಿದ್ದಾರೆ, ಕಡೆಯ ನಾಲ್ಕು ಲೇಖಗಳು ಇಂಗ್ಲಿಷಿನಲ್ಲಿವೆ. ಇವುಗಳಲ್ಲಿ ತಮಿಳು ನಿಘಂಟು ಮತ್ತು ಕಿಟೆಲ್ಲರ ನಿಘಂಟನ್ನು ತುಲನಾತ್ಮಕವಾಗಿ ವಿವೇಚಿಸಿ ನೋಡುವ ದೃಷ್ಟಿಯಿಂದ ಬರೆದ ಲೇಖನ ತೀರ ಸಪ್ಪೆ. ಅಸಮರ್ಪಕ ಆಯಿತು. ನಿಘಂಟುಗಳಲ್ಲಿ ವಿಮರ್ಶೆ ಇಲ್ಲವೇ ತುಲನೆ ಮಾಡುವಾಗ ಗಮನಿಸಬೇಕಾದ ಅಂಶಗಳ ತಿಳಿವಳಿಕೆಯೇ ಅವರಿಗಿಲ್ಲ. ಈ ಅವಸರದಲ್ಲಿ ಕನ್ನಡ ನಿಘಂಟನ್ನು ತೆಲುಗು ನಿಘಂಟು ಜೊತೆಯಲ್ಲಿ ಹೋಲಿಸಿದರ ಬರೆಹವೂ ಸೇರಬೇಕಿತ್ತು. ಅಂತೆಯೇ ತುಳುವಿನ ಸಂಬಂಧವಾಗಿ ಲೇಖನವೊಂದರ ಅಗತ್ಯವೂ ಕಂಡುಬರುತ್ತದೆ. ವಿವಿಧ ಲೇಖಕರು ಒಬ್ಬ ವ್ಯಕ್ತಿಯ ಹಲವು ಸಿದ್ಧಿ ಸಾಧನೆಗಳನ್ನು ಕುರಿತು ಬರೆದಿರುವಾಗ ಪುನರುಕ್ತಿ ಬಾರದಂತೆ ನೋಡಿಕೊಂಡಿರುವುದು ಪ್ರಶಂಸಾರ್ಹ. ಲೇಖನಗಳು ಕೂಡ ವಿಷಯ ದೃಷ್ಟಿಯಿಂದ ಹೆಚ್ಚು ವ್ಯಾಪಕವಾಗಿವೆ.

ಕಿಟೆಲ್ಲರ ಸಾಧನೆಗಳ ಸಿದ್ಧಿಯ ಹೆಜ್ಜೆಗಳನ್ನು ಗುರುತಿಸುವ ಕೃತಜ್ಞತೆಯ ಹಿನ್ನಲೆಯಲ್ಲಿ ಅವರ ಅನೇಕ ಕುಂದು ಕೊರೆತಗಳತ್ತ, ಇತಿಮಿತಿಗಳತ್ತ ಕಣ್ಣು ಮುಚ್ಚಿಕೊಂಡಿರುವುದು ಈ ಸಂಪುಟದ ನ್ಯೂನತೆಗಳಲ್ಲೊಂದು. ಇಲ್ಲಿನ ಹೆಚ್ಚಿನ ಬರೆಹಗಳಲ್ಲಿ ವಿಮರ್ಶೆಗಿಂತ ಕೇವಲ ಮೆಚ್ಚಿಗೆಯ ನೋಟವೇ ಕಂಡು ಬರುತ್ತದೆ. ಎಲ್ಲಿಯೂ ದೋಷಗಳನ್ನು ಎತ್ತಿ ತೋರಿಸಿಯೇ ಇಲ್ಲವೆಂದಲ್ಲ’ ಪ್ರಶಂಸಾ ದೃಷ್ಟಿಯದೇ ಮೇಲುಗೈ, ಕಿಟೆಲ್ಲರನ್ನು ಕುರಿತು ಇದುವರೆಗೆ ಕನ್ನಡದಲ್ಲಿ ಬಂದಿರುವ ಲೇಖನಗಳ ಹಾಗೂ ಗ್ರಂಥಗಳ ಪಟ್ಟಿಯೊಂದನ್ನು ಕಡೆಯಲ್ಲಿ ಅನುಬಂಧವಾಗಿ ಕೊಡಬಹುದಾಗಿತ್ತು. ಇಷ್ಟು ಹೇಳಿಯೂ ಅವಶ್ಯ ನೆನಪಿಡಬೇಕಾದ ಮುಖ್ಯ ಸಂಗತಿ – ಈ ಗ್ರಂಥ ಕಿಟೆಲ್ಲರ ಬರೆಹಗಳನ್ನು ಅಭ್ಯಾಸ ಮಾಡುವವರಿಗೆ ಉತ್ತಮ ಕೈಪಿಡಿ.

ವರ್ಣನಾತ್ಮಕ ಭಾಷಾವಿಜ್ಞಾನ (ಜೆ. ಕುಳ್ಳಿ) : ಲೇಖಕರು ‘ನನ್ನ ಮಾತು’ ಎಂಬಲ್ಲಿ “ಕನ್ನಡದಲ್ಲಿ ಭಾಷಾವಿಜ್ಞಾನವನ್ನು ಕುರಿತು ಕೆಲವು ಗ್ರಂಥಗಳು ಈಗಾಗಲೇ ಪ್ರಕಟವಾಗಿದೆ. ಅವುಗಳಲ್ಲಿ ಕೆಲವು ಒಳ್ಳೆಯ ಗ್ರಂಥಗಳೂ ಇವೆ. ಆದರೆ ಅವೆಲ್ಲ ಸಕಲರಿಗೂ ತಿಳಿಯಲೆಂಬ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಪಾರಿಭಾಷಿಕತೆಯನ್ನು ಕಡಿಮೆ ಮಾಡಿವೆ. ಈ ಕಾರಣದಿಂದ ಅವುಗಳ ಉದ್ದೇಶವೂ ಫಲಿಸಿದೆ. ಪಾರಿಭಾಷಿಕತೆ ಕಡಿಮೆಯಾದಷ್ಟು ಒಂದು ಕೃತಿ ಹೆಚ್ಚು ಹೆಚ್ಚು ಸರಳವಾಗುತ್ತದೆ. ಪಾರಿಭಾಷಿಕತೆ ಹೆಚ್ಚಿದಷ್ಟೂ ವಿಶ್ಲೇಷಣೆ ಹೆಚ್ಚು ಹೆಚ್ಚು ಖಚಿತವಾಗುತ್ತದೆ. ಮೇಲಾಗಿ ಪಾರಿಭಾಷಿಕತೆ ವಿಜ್ಞಾನದ ಜೀವಾಳ. ಉಳಿದ ಮಾನವಿಕ ವಿಜ್ಞಾನಗಳಂತೆ ಭಾಷೆಯ ಅಭ್ಯಾಸವೂ ಒಂದು ವಿಜ್ಞಾನವಾಗಿರುವುದರಿಂದ, ಅಲ್ಲಿ ಪಾರಿಭಾಷಿಕ ಇರಬೇಕಾದುದು ಅನಿವಾರ್ಯ. ಭಾಷಾಭ್ಯಾಸವನ್ನು ಸರಳಗೊಳಿಸುವ ಇಲ್ಲಿಯವರೆಗಿನ ಪ್ರಯತ್ನಗಳಿಂದ ಭಾಷಾಭ್ಯಾಸ ಪ್ರಾರಂಭಿಕ ಅವಸ್ಥೆಯನ್ನು ದಾಟಿದೆ. ಈಗ ಅದರ ವೈಜ್ಞಾನಿಕ ನಿಜಸ್ವರೂಪವನ್ನು ತೋರಿಸುವ ಕಾಲ ಸನ್ನಿಹಿತವಾಗಿದೆಯೆಂಬ ವಿಚಾರದಿಂದ ಈ ಗ್ರಂಥ ಹೆಚ್ಚಾಗಿ ಪಾರಿಭಾಷಿಕಯುಕ್ತವಾಗಿದೆ” ಎಂಬುದಾಗಿ ಹೇಳಿದ್ದಾರೆ.

ಇಂಥ ಗ್ರಂಥವೊಂದು ಪಾರಿಭಾಷಿಕಯುಕ್ತವಾಗಿರುವುದು ಯುಕ್ತವೇ. ಆದರೆ ಇಲ್ಲಿನ ಅನೇಕ ಪಾರಿಭಾಷಿಕ ಶಬ್ದಗಳು ವಿವಾದಕ್ಕವಕಾಶ ಮಾಡಿಕೊಡುತ್ತವೆಯಲ್ಲದೆ ಗೊಂದಲಕ್ಕೂ ಕಾರಣವಾಗಿದೆ. ಲೇಖಕರೇ ಅರಿತು ತಿಳಿಸಿರುವಂತೆ ಕನ್ನಡದಲ್ಲಿ ಈಗಾಗಲೇ ಚಿದಾನಂದಮೂರ್ತಿ, ಹಂಪ, ನಾಗರಾಜಯ್ಯ ಮೊದಲಾದವರ ಭಾಷಾ ವಿಜ್ಞಾನ ಸಂಬಂಧಿಯಾದ ಕೆಲವು ಗ್ರಂಥಗಳು ಹೊರಬಂದಿವೆ. ಸಹಜವಾಗಿಯೇ ಅವುಗಳಲ್ಲಿ ಹಲವಾರು ಪಾರಿಭಾಷಿಕ ಶಬ್ದಗಳು ಬಳಕೆಯಾಗಿವೆ. ಈ ರೀತಿ ಈಗಾಗಲೇ ಬಳಕೆಗೆ ಬಂದಿರುವ, ಇತರ ಬರೆಹಗಾರರು ಬಳಸಿ ರೂಢಿಗೆ ತಂದಿರುವ ಪರಿಭಾಷೆಯನ್ನೇ ಈ ಲೇಖಕರೂ ಅಳವಡಿಸಕೊಳ್ಳುವುದು ಉಚಿತವೇ ಹೊರತು ಅನಗತ್ಯವಾಗಿ ಹೊಸ ಪರಿಭಾಷೆ ತರುವುದು ಅಸಾಧು. ವರ್ಣನಾತ್ಮಕ ಭಾಷಾವಿಜ್ಞಾನ ಗ್ರಂಥದಲ್ಲಿ ಆಗಲೇ ಅಂಗೀಕೃತವಾದ ಪಾರಿಭಾಷಿಕ ಶಬ್ದಗಳಿಗೂ ಪ್ರತ್ಯೇಕ ಶಬ್ದಗಳನ್ನು ಪ್ರಯೋಗಿಸಿರುವುದರಿಂದ ಇದರ ಪರಿಭಾಷೆಯಲ್ಲೇ ಮೊದಲು ಗೊಂದಲ ಪ್ರಾರಂಭವಾಗುತ್ತದೆ.

ಇಂಗ್ಲಿಷಿನ retroflex, vocal chords, flap, glide, arbitary, unrounded, affricate, phonemics, manner of articulation, place or point of articulation – ಶಬ್ದಗಳಿಗೆ ಕನ್ನಡದಲ್ಲಿ ಕ್ರಮವಾಗಿ ಪ್ರತಿವೇಷ್ಟಿತ, ಘೋಷ(ನಾದ)ತಂತು. ತಾಡಿತ, ಧ್ವನಿಜಾರು, ಯಾದೃಚ್ಛಿಕ, ನಿರೋಪ್ಠೀಕೃತ, ಸ್ಪೃಷ್ಟೋಷ್ಮ, ಧ್ವನಿಮಾವಿಜ್ಞಾನ, ಉಚ್ಛಾರ(ಣಾ) ವಿಧಾನ, ಉಚ್ಚಾರ(ಣಾ)ಸ್ಥಾನ-ಎಂಬ ಪಾರಿಭಾಷಿಕ ಶಬ್ದಗಳು ಇದುವರೆಗಿನ ಗ್ರಂಥಗಳಲ್ಲಿ ಉಪಯೋಗವಾಗಿವೆ. ಆದರೆ ಈ ಗ್ರಂಥದಲ್ಲಿ ಮೇಲಿನ ಶಬ್ದಗಳಿಗೆ ಕ್ರಮವಾಗಿ ಪರಿವೇಷ್ಟಿತ, ಧ್ವನಿಪಟಲ, ಲಘುಸ್ಪಷ್ಟ, ಸ್ರೋತ್ರ, ಅನುಕೂಲ (ಅನುಕೂಲಾತ್ಮಕ), ಅವೃತ್ತ ಈಷತ್ ಸ್ಪರ್ಶ, ಧ್ವನಿಮಾ ವಿಭಾಗ, ಧ್ವನುತ್ಪಾದನ ಪ್ರಯತ್ನ, ಧ್ವನ್ಯುತ್ಪಾದನ ಸ್ಥಾನ-ಎಂಬುದಾಗಿ ಪ್ರಯೋಗವಿದೆ.

ಇದರಿಂದ ಓದುಗರಿಗೆ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು. ಗ್ರಂಥದಿಂದ ಗ್ರಂಥಕ್ಕೆ ಶಾಸ್ತ್ರವಿಷಯಗಳನ್ನು ಕುರಿತ ಕೃತಿಗಳಲ್ಲಿ ಪರಿಭಾಷೆಯಲ್ಲಿ ವ್ಯತ್ಯಾಸವಿರಬಾರದು. ಪುಟ ೧೭೮ರಲ್ಲಿ flap ಎಂಬ ಶಬ್ದಕ್ಕೆ ‘ಲೋಡಿತ’ ಎಂದು ಸೂಚಿಸಿರುವುದು ಸರಿಯಲ್ಲ. ಅದು ತಾಡಿತ ಎಂದಿರಬೇಕು. “ಈ ಪುಸ್ತಕದಲ್ಲಿ ಅನೇಕ ಪಾರಿಭಾಷಿಕ ಪದಗಳು ಪ್ರಥಮತಃ ನಿರ್ಮಾಣವಾಗಿ, ಬಳಕೆಯಾಗಿವೆ”-ಎಂದು ಹೇಳಿಕೊಂಡಿದ್ದಾರೆ. ಆದರೆ ಮೊದಲ ಸಲ ನಿರ್ಮಾಣವಾದ ಆ ಬಗೆಯ ಮಾತುಗಳು ತೀರ ಕಡಿಮೆ, ಅಲ್ಲದೆ ಪ್ರಥಮತಃ ನಿರ್ಮಾಣಿಸುವ ಭರದಲ್ಲಿ ಎಡವಿದ್ದಾರೆ. ಮೇಲೆ ಸೂಚಿಸಿರುವಂತೆ ಅನಾವಶ್ಯಕವಾಗಿ ರೂಢಿಯ ಶಬ್ದಕ್ಕೆ ಬೇರೆ ಶಬ್ದ ಕೊಟ್ಟಿದ್ದಾರೆ. ಹಲವಾರು ಕಡೆ, ಇಂಗ್ಲಿಷಿನ lax ಎಂಬುದಕ್ಕೆ ವಿಶ್ರಾಂತ ಎಂಬ ಶಬ್ದ ಬಳಸಿದ್ದಾರೆ. ಈ ಪಾರಿಭಾಷಿಕ ಶಬ್ದ ಹಾಗೂ ಇಂಥ ಇನ್ನಿತರ ಕೆಲವು ಶಬ್ದಗಳ ಸಮರ್ಪಕತೆಯಲ್ಲಿ ಸಂದೇಹಕ್ಕವಕಾಶವಿದೆ.

ಈ ಗ್ರಂಥದಲ್ಲಿ ಎದ್ದು ಕಾಣುವ ಮತ್ತೊಂದು ದೋಷವೆಂದರೆ ವಾಕ್ಯ ರಚನೆಯಲ್ಲಿರುವ ಶೈಥಿಲ್ಯ. ಅನೇಕ ವಾಕ್ಯಗಳು ಆರಂಭವಾಗುವುದು ಒಂದು ರೀತಿ, ಮುಕ್ತಾಯವಾಗುವುದು ಮತ್ತೊಂದು ರೀತಿ; ಒಮ್ಮೊಮ್ಮೆ ಕಾಲ, ವಚನ, ಪುರುಷ, ಲಿಂಗಗಳನ್ನು ಕಡೆಗಣಿಸಿ ಕಲಸುಮೇಲೋಗರವಾಗುವುದೂ ಉಂಟು, ಅದರಲ್ಲಿಯೂ ದೀರ್ಘ ವಾಕ್ಯಗಳಲ್ಲಿ.