ಈ ಬಗೆಯ ಸಡಿಲವಾದ ವಾಕ್ಯರಚನೆಯಿಂದ ವಿಷಯನಿರೂಪಣೆ ಜಾಳಾಗಿರುವುದು ಕಂಡು ಬರುತ್ತದೆ. ಪುನರುಕ್ತಿ ದೋಷವಂತೂ ತುಂಬಿ ತುಳುಕಿದೆ : “ಎರಡನೆಯದಾಗಿ, ವರ್ಣನಾತ್ಮಕ ಭಾಷಾ ವಿಜ್ಞಾನಿಗಳು ಯಾವ ರೀತಿ ಆಡಬಹುದಾಗಿದ್ದಿತು, ಅಥವಾ ಯಾವುದು ಶಿಷ್ಟರೂಪ ಎಂಬುದನ್ನು ಗಣಿಸದೆ, ಭಾಷೆಯ ರೂಪಗಳನ್ನು ಇದ್ದಕ್ಕಿದ್ದಂತೆ ಪರಿಗಣಿಸಬೇಕು. ಜನರು ಏನು ಅನ್ನಬಯಸುತ್ತಾರೆಂಬುದಕ್ಕಿಂತ ಅವರು ಏನು ಅನ್ನುತ್ತಾರೆ ಎಂಬುದು ಮಹತ್ವದ್ದು. ಎಂದರೆ ಅವನು ಜನರು ಆಡಿದ್ದನ್ನು ಉಪಯೋಗಿಸುತ್ತಾರೆ. ಅವುಗಳ ಆದರ್ಶರೂಪಗಳನ್ನು ಕೊಡಲು ಹೋಗುವುದಿಲ್ಲ. ಇದೂ ಅಲ್ಲದೆ ಆಡುಮಾತಿನ ಎಲ್ಲ ಪ್ರಭೇದಗಳೂ ಆತನಿಗೆ ಗ್ರಾಹ್ಯ. ಒಂದು ಪ್ರಭೇದವನ್ನು ಬಿಟ್ಟು ಇನ್ನೊಂದನ್ನು ಸ್ವೀಕರಿಸುವ ಪ್ರಶ್ನೆಯಿಲ್ಲ. ಅವನಿಗೆ ಒಂದು ರೂಪು ಹೆಚ್ಚು. ಇನ್ನೊಂದು ರೂಪ ಕಡಿಮೆಯಲ್ಲ. ಒಂದು ಸರಿ, ಇನ್ನೊಂದು ತಪ್ಪಲ್ಲ; ಒಂದು ಪವಿತ್ರ, ಇನ್ನೊಂದು ಅಪವಿತ್ರವಲ್ಲ. ಅವನಿಗೆ ಯಾವ ಭಾಷೆಯೇ ಆಗಲಿ, ಭಾಷೆಯ ಯಾವ ರೂಪವೇ ಆಗಲಿ ಎಲ್ಲವೂ ಯೋಗ್ಯವೇ. ಅವನು ಯಾವುದರ ಬಗೆಗೆಯೂ ನಿರ್ಣಯ ಕೊಡಲು ಹೋಗುವುದಿಲ್ಲ. ವರ್ಣಾನಾತ್ಮಕ ಭಾಷಾಶಾಸ್ತ್ರಜ್ಞನ ಕೆಲಸವೆಂದರೆ ಭಾಷೆಯನ್ನು ಇದ್ದಕ್ಕಿದ್ದಂತೆ ವರ್ಣಿಸುವುದು. ಅದರ ಅರ್ಥನಿರ್ಣಯ ಮಾಡುವ ಕೆಲಸ ಮಾನವಶಾಸ್ತ್ರಜ್ಞನಿಗೆ ಬಿಟ್ಟದ್ದು. ಉದಾಹರಣೆಗೆ ‘ನಾನು ತಿಂದೆನು’ ಮತ್ತು ‘ನಾ ತಿನ್ನಿ’ ಎಂಬ ರೂಪಗಳಿದ್ದರೆ ಮೊದಲನೆಯದು ಸರಿ, ಎರಡನೆಯದು ತಪ್ಪು ಎಂದು ಆತ ಹೇಳುವುದಿಲ್ಲ. ಆದರೆ ಈ ಎರಡೂ ರೂಪಗಳು ಕನ್ನಡದ ಅವಶ್ಯಕ ಅಂಗಗಳು. ವರ್ಣನಾತ್ಮಕ ಭಾಷಾಶಾಸ್ತ್ರಜ್ಞ ಮಾಡುವ ಕೆಲಸವೆಂದರೆ -ಯಾವ ರೂಪು ಯಾವ ಸಂದರ್ಭದಲ್ಲಿ ಬಳಸಲ್ಪಡುತ್ತದೆ ಎಂಬುದನ್ನು ವರ್ಣಿಸುವುದು. ಈ ರೂಪು ಹಾಗೇಕೆ, ಈ ರೂಪು ಹೀಗೇಕೆ ಎನ್ನುವುದು ಇನ್ನೊಬ್ಬ ಶಾಸ್ತ್ರಜ್ಞನ ಕೆಲಸ. ಅದೇ ರೀತಿ ಕನ್ನಡದಲ್ಲಿ ಹೋಗೋಣ, ಹೋಗೋಮು, ಹೋಗೋಣು, ಹೋಗೂಮು, ಹೋಗಾಮು; ಇದ್ದಾನೆ, ಇದ್ದಾನ, ಅದಾನ, ಹಾನ ಮುಂತಾದ ವಿವಿಧ ರೂಪಗಳು ದೊರೆಯಬಹುದು. ಇವನ್ನೆಲ್ಲ ಇದ್ದಕ್ಕಿದ್ದಂತೆ ವರ್ಣಿಸುವುದು ಭಾಷಾವಿಜ್ಞಾನಿಗಳ ಕೆಲಸ. ಹೆಚ್ಚೆಂದರೆ ಅವು ಬಳಕೆಯಾಗುವ ಸಂದರ್ಭಗಳನ್ನು ಕೊಡಬಹುದು” (ಪು. ೨೦).

ಈ ದೀರ್ಘ ಪ್ಯಾರಾವನ್ನು ನಾಲ್ಕು ಮಾತುಗಳಲ್ಲಿ ಸಂಗ್ರಹಿಸಿಕೊಡಿರೆಂದು ಪರೀಕ್ಷೆಯಲ್ಲಿ ಕೊಡಬಹುದು. ಸಾರಾಂಶವಿಷ್ಟು; ವಸ್ತುವನ್ನು ಸ್ವಷ್ಟವಾಗಿ ಹಾಗೂ ನೇರವಾಗಿ ನಿವೇದಿಸುವುದರತ್ತ ಆದ್ಯ ಗಮನ ಹರಿಸಬೇಕಿತ್ತು. ಉದಾಹರಣೆಗಳನ್ನು ಆದಷ್ಟೂ ಕನ್ನಡ ಭಾಷೆಯಿಂದ ಆರಿಸಿ ಕೊಡುವುದು ಅಗತ್ಯ. ಯಾಕಂದರೆ, ಯಾಕೆಂದರೆ ಎಂಬಂತಹ ಎರಡೆರಡು ರೂಪಗಳ ಬಳಕೆ ಸಾಧುವಲ್ಲ. ಇದು ಶಾಸ್ತ್ರಗ್ರಂಥ ಆದುದರಿಂದ, ಲೇಖಕರು, ಯಾವುದಾದರೂ ಒಂದು ರೂಪವನ್ನುಪಯೋಗಿಸುವುದು ಸೂಕ್ತ. ಇಂಗ್ಲಿಷ್, ತಲಪು ಎಂಬ ಮಾನ್ಯ ರೂಪಗಳಿಗೆ ಈ ಗ್ರಂಥದಲ್ಲಿ ಇಂಗ್ಲಿಷ್, ತಲುಪು ಎಂಬ ರೂಪಗಳಿರುವುದನ್ನು ಗುರುತಿಸಬಹುದಾದರೂ ಅದೇನೂ ದೋಷವಲ್ಲ. ‘ಅಲ್ಪಡು’ ಹತ್ತಿಸಿಕೊಂಡು ನಿಂತ ಅನೇಕಾನೇಕ ಕರ್ಮಣಿ ಪ್ರಯೋಗಗಳಿದ್ದರೂ ಅವಕ್ಕೂ ಈ ಹೇಳಿಕೆ ಅನ್ವಯಿಸುತ್ತದೆ. ಆದರೆ ಮುದ್ರಣ ಸ್ಖಾಲಿತ್ಯಗಳ ಹಾವಳಿ ಸಹಿಸುವುದು ಕಷ್ಟ. ಮುದ್ರಣ ಹಾಗೂ ಬಳಸಿರುವ ಕಾಗದ ತಕ್ಕಮಟ್ಟಿಗಿವೆ -ಇಂಥ ಶಾಸ್ತ್ರ ವಿಷಯದ ಗ್ರಂಥದಲ್ಲಿ ಮುದ್ರಣ ದೋಷಗಳು ಆದಷ್ಟೂ ಇಲ್ಲದಿರುವುದೂ, ಒಳ್ಳೆಯ ಮುದ್ರಣ ಹಾಗೂ ರಕ್ಷಾಕವಚ, ಒಳ್ಳೆಯ ಕಾಗದದ ಬಳಕೆ – ಇವೆಲ್ಲ ಅಪೇಕ್ಷಣೀಯ.

ಕನ್ನಡ ಧ್ವನಿಮಾ (ಎಂ.ಜಿ ವೆಂಕಟೇಶಯ್ಯ); ಲೇಖಕರಿಗೆ ಬರೆಯಲು ಆರಿಸಿಕೊಂಡಿರುವ ವಿಷಯದ ಮೇಲಿನ ಪ್ರಭುತ್ವ ಸಾಲದು. ಆಧುನಿಕ ವಿಚಾರಗಳ ಹಾಗೂ ಕೃತಿಗಳ ಪರಿಚಯವೂ ಇಲ್ಲ. ಹಳೆಯ, ಒಮ್ಮೊಮ್ಮೆ ಅನಧಿಕೃತವಾದ, ಹೊತ್ತಗೆಗಳ ಹೇಳಿಕೆಗಳನ್ನು ಆಶ್ರಯಿಸಿ ಎಡವುತ್ತಾರೆ. ಓದುಗರಿಗೆ ದಿಕ್ಕು ತಪ್ಪಿಸುತ್ತಾರೆ. ವಿವರಣೆಯಲ್ಲಿ, ವಿಷಯ ನಿರೂಪಣೆಯಲ್ಲಿ ಖಚಿತತೆ, ವೈಜ್ಞಾನಿಕತೆ ಕಡಿಮೆ.

ರಾಮನು ಎಂಬ ಶಬ್ದವನ್ನು ತೆಗೆದುಕೊಂಡು ಧ್ವನಿಮಾಗಳಾಗಿ ವಿಭಜಿಸುತ್ತಾ (ಪು. ೧೨) – “ಮೊದಲನೆಯ ಪದದಲ್ಲಿ ೫ನೆಯ ಅಂಶವಾದ ಉಚ್ಚಾರಣೆಯ ಸೌಕರ್ಯಕ್ಕಾಗಿ ಬಂದ ಅಂಶ. ಆದುದರಿಂದ ಈ ಪ್ರಯೋಗದಲ್ಲಿ ಇದನ್ನು ಧ್ವನಿಮಾ ಎಂದು ಗಣಿಸಲಾಗುವುದಿಲ್ಲ. ಆರನೆಯ ಅಂಶವಾದ ‘ಉ’ ಪ್ರಥಮಾ ವಿಭಕ್ತಿಯನ್ನು ಸೂಚಿಸಲು ಬಂದ ಅಂಶ (ವಿಭಕ್ತಿ ಪ್ರತ್ಯಯ) ವಾದುದರಿಂದ ಅದನ್ನು ಇಲ್ಲಿ ಧ್ವನಿಮಾದಂತೆ ಗಣನೆ ಮಾಡುವುದಿಲ್ಲ. ಮಿಕ್ಕವು ಧ್ವನಿಮಾಗಳು, ಆದುದರಿಂದ ಕನ್ನಡ ಬರಹದಲ್ಲಿಯೂ ಮಾತಿನಲ್ಲಿಯೂ ಬರುವ ಅಕ್ಷರಗಳನ್ನೆಲ್ಲಾ ಎಲ್ಲಾ ಪ್ರಯೋಗಗಳಲ್ಲಿಯೂ ಧ್ವನಿಮಾಗಳೇ ಎಂದು ಲೆಕ್ಕಿಸಲಾಗುವುದಿಲ್ಲ” – ಎಂಬುದಾಗಿ ಬರೆದಿದ್ದಾರೆ. ಅವೈಜ್ಞಾನಿಕ ಬರಹಕ್ಕೆ ಇದು ಒಳ್ಳೆಯ ಉದಾಹರಣೆ.

ಪುಟ ೧೫ರಲ್ಲಿ “ಕುದುರೆ ಎಂಬ ಪದದಿಂದ |ಕ| ತೆಗೆದು ಆಕಿದರೆ – ದುರೆ. (ಇದಕ್ಕೆ ಆ ಅರ್ಥವಿಲ್ಲ). ಆದುದರಿಂದ ಕನ್ನಡದಲ್ಲಿ |ಕ| ಒಂದು ಧ್ವನಿಮಾ….ಸುರಿ = ಧಾರೆಯಾಗಿ ಬೀಳು; ಕುಸುರಿ = ಗಂಜಿ. |ಕ| ಸೇರಿಸುವುದರಿಂದ ಅರ್ಥವು ಬೇರೆಯಾಯಿತು”- ಎಂದು ಬರೆಯುತ್ತಾರೆ. ಆದರೆ ಇಲ್ಲಿ ತೆಗೆದು ಹಾಕಿದ್ದೂ, ಸೇರಿಸಿದ್ದೂ |ಕ| ಅಲ್ಲ, ಕು, ಅಲ್ಲದೆ |ಕ| ಎಂಬುದು ಒಂದು ಧ್ವನಿಮಾ ಎಂದು ಉದ್ದಕ್ಕೂ ವಿವರಿಸಿದ್ದಾರೆ. ಆದರೆ |ಕ| ಎಂಬುದು ಒಂದು ಧ್ವನಿಮಾ ಅಲ್ಲ. ಅದರಲ್ಲಿಕ್ + ಅ (ಕ್ ಮತ್ತು ಅ) ಎಂಬ ಎರಡು ಧ್ವನಿಮಾಗಳಿವೆ. ಉಳಿದ ಕಡೆಗಳಲ್ಲೂ |ರ|, |ಮ|, |ವ|, |ಣ|, |ದ|, (ಪು. ೧೧) ಇದೇ ತಪ್ಪನ್ನೆಸಗಿದ್ದಾರೆ. ಇಂಥ ಶಿಥಿಲ ವಾಕ್ಯಗಳಿಂದ ಗ್ರಂಥದ ಮೌಲ್ಯ ಮಾಸಿದೆ.

ಶಬ್ದಾವರ್ತ ನಿರುಕ್ತ (ಎಂ.ಜಿ. ವೆಂಕಟೇಶಯ್ಯ) : ಸಂಖ್ಯಾಶಾಸ್ತ್ರವನ್ನು ಉಪಯೋಗಿಸಿಕೊಂಡು ಸಾಹಿತ್ಯ ಕೃತಿಗಳಿಗೆ ಅನ್ವಯಿಸಿ ಕೆಲವು ನಿಯಮಾವಳಿಗಳನ್ನು ನಿರೂಪಿಸುವ ಭಾಷಾವಿಜ್ಞಾನದ ಒಂದು ಕ್ರಮವನ್ನನುಸರಿಸಿ ಬರೆದ ಗ್ರಂಥವಿದು. ಶಬ್ದಗಳ ಪುನರುಕ್ತಿಯೆನ್ನೇ ತಳಹದಿಯಾಗಿ ಇಟ್ಟುಕೊಂಡು ಲೇಖಕರ ಶೈಲಿಗೆ ಸಂಬಂಧಪಟ್ಟ ಕೆಲವು ಅಂಶಗಳನ್ನು ವಿವರಿಸಲು ತಾವು ಪ್ರಯತ್ನ ಪಟ್ಟಿರುವುದಾಗಿ ಇದರ ಬರೆಹಗಾರರ ಅರಿಕೆ.

ಮೂವರು ಹೆಸರಾಂತ ಬರೆಹಗಾರರ ಮೆಚ್ಚುಗೆ ಹೊತ್ತರೂ ಈ ಹೊತ್ತಗೆಯ ಮೌಲ್ಯವಾಗಿ ಉಪಯುಕ್ತತೆಯಾಗಲಿ ಹೆಚ್ಚಿಲ್ಲ – ಪ್ರಯೋಜನವಂತೂ ಓದುಗರಿಗೆ ಕನಸಿನ ಗಂಟು. ಸಾಹಿತ್ಯ ಪರಿಷತ್ತು ಈ ಪುಸ್ತಕದ ಪ್ರಕಟಣೆಗೆ ಹಾಕಿದ ಹಣ ಸಮುದ್ರಕ್ಕೆ ನೀರು ಸುರಿದಂತೆ ಪೋಲಾಗಿದೆ.

ಮೊದಲ ಮೂರು ಪುಟಗಳುದ್ದಕ್ಕೂ ಲೇಖಕರು ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡು ಬಡಾಯಿ ಕೊಚ್ಚಿಕೊಂಡಿರುವುದು ಅನಾವಶ್ಯಕ.

ಎರಡನೆಯ ಅಧ್ಯಾಯ ‘ನಿಯಮ’ – ಇದು, ಹಿಂಡಿ ಹಿಂಜಿ ಬರೆದರೆ ಹೇಗೆ ಪುಟಗಳನ್ನು ತುಂಬಿಸಬಹುದೆಂಬುದಕ್ಕೆ ಉತ್ತಮ ಉದಾಹರಣೆ, ಲೇಖಕರು ತಾವು ಅನುಸರಿಸಿರುವ ನಿಯಮವನ್ನು ನೇರವಾಗಿ ನಿಖರವಾಗಿ ನಾಲ್ಕು ಮಾತುಗಳಲ್ಲಿ ಹೇಳದೆ, ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ, ತಾವು ಯಾವ ಯಾವ ನಿಯಮಗಳನ್ನು ಅನುಸರಿಸಿಲ್ಲವೆಂಬುದರ ದೊಡ್ಡ ಪಟ್ಟಿ ಕೊಟ್ಟಿದ್ದಾರೆ. ಇಂಥ ಚಮತ್ಕಾರಗಳಿಂದ ಲಭಿಸುವ ಲಾಭ ಶೂನ್ಯ.

ಮುವ್ವತ್ತು ವರ್ಷಗಳ ಹಿಂದೆ ಬರೆದ ಹಸ್ತಪ್ರತಿ ಈಗ ಅಚ್ಚಾಗುತ್ತಿದೆಯೆಂದು ನಿವೇದಿಸುತ್ತಾರೆ. ಅಂದೂ ಬಹುಶಃ ಈ ಬಗೆಯ ದ್ರಾವಿಡ ಪ್ರಾಣಾಯಾಮದಂತಹ ಬರೆಹ ಬೇಕಿದ್ದರಲಾರದು, ಇಂದಿನಂತೆ.

ಮುಖ್ಯವಾದ ದೋಷ ಸಂಕ್ಷಿಪ್ತತೆಯ ಸ್ಪಷ್ಟತೆಯ ಅಭಾವ. ಇಡೀ ಗ್ರಂಥವನ್ನು ಇಪ್ಪತ್ತು ಪುಟಗಳ ಲೇಖನ ಪರಿಮಿತಿಯಲ್ಲಿ ಅಳವಡಿಸಬಹುದು. ಅದನ್ನು ಹಿಂಜಿ ೧೬೫ ಪುಟಗಳಿಗೆ ಹಿಗ್ಗಿಸಿದ್ದಾರೆ. ಪುನರಾವೃತ್ತಿ ಹಾಗೂ ಪ್ರಾಪ್ತ ಪದಸಂಖ್ಯೆ-ಇದಿಷ್ಟೇ ಈ ಪುಸ್ತಕದ ತಿರುಳು. ಈ ಸಾರವನ್ನು ಸಾರುವುದಕ್ಕೆ ಒಂದೆರಡು ಉದಾಹರಣೆಗಳು ಸಾಕು. ಅದರ ಜೊತೆಗೆ ಹದಿನಾಲ್ಕು ಪುಟಕ್ಕೂ ಮೀರಿ ಇಂಗ್ಲಿಷ್ ವಾಕ್ಯಗಳು ಉದಾಹೃತವಾಗಿವೆ. ಮೂಗಿಗಿಂತ ಮೂಗುತಿಯೇ ಭಾರ ಎಂಬ ಸಾಮತಿಗೆ ಸಾಕ್ಷಿ ಹೇಳಲು, ಸ್ಥಿತಿಸ್ಥಾಪನ ಶಕ್ತಿ ಇದೆಯೆಂದು ‘ಸಿಕ್ಕಾಪಟ್ಟೆ’ ಅಳತೆ ಮೀರಿ ಎಳೆದರೆ ರಬ್ಬರು ಕೂಡ ತುಂಡಾಗಿಬಿಡುತ್ತದೆ.

ಲೇಖಕರು -ಕವಿರಾಜಮಾರ್ಗ (೯, ೩೭), ಕವಿರಾಜಮಾರ್ಗಂ (೧೦, ೩೯) ಪಂಪಾಶತಕ (೧೦.೩೭), ಪಂಪಾಶತಕಂ (೧೨, ೪೦) – ಹೀಗೆ ಎರಡೆರಡು ವಿಧವಾಗಿ ಹೆಸರಿಸಿರುವುದು ಕೂಡ ಇಂಥ ಗ್ರಂಥಗಳಲ್ಲಿ ಸರಿಯಾಗದು, ಫೋನೀಂ, ಮಾರ್ಫೀಂ ಎಂಬ ಇಂಗ್ಲಿಷ್ ಶಬ್ದಗಳನ್ನು ಬಳಸಿದ್ದಾರೆ, ಹಲವು ಕಡೆ. ಆದರೆ ಅವುಗಳಿಗೆ ಕನ್ನಡದಲ್ಲಿ ರಚಿತವಾಗಿರುವ ಭಾಷಾವಿಜ್ಞಾನ ಗ್ರಂಥಗಳಲ್ಲಿ ಧ್ವನಿಮಾ, ಆಕೃತಿಮಾ ಎಂಬ ಪಾರಿಭಾಷಿಕ ಶಬ್ದಗಳ ಬಳಕೆ ಆಗಿದೆ, ಮಾನ್ಯವೂ ಆಗಿದೆ. ಈ ಲೇಖಕರೂ ಅವನ್ನೇ ಉಪಯೋಗಿಸಬೇಕಾದ್ದು ಉಚಿತ.

ಪುಟ ೩೬ರಲ್ಲಿ ‘ಪೋನೀಂ’ ವಿವರದಲ್ಲಿ ಎಡವಿದ್ದಾರೆ; ಪ, ದ, ಮ, -ಗಳಲ್ಲಿ ಅವರು ತಿಳಿದಂತೆ ಒಂದೊಂದು ಧ್ವನಿಮಾ ಇಲ್ಲ, ಎರಡೆರಡು ಧ್ವನಿಮಾಗಳಿವೆ. ಪುಟ ೪೧ರಲ್ಲಿ ‘ಮಾರ್ಫೀ’ ವಿವರ ಕೂಡ ಸ್ಥೂಲವಾಗಿ ಒಪ್ಪಬಹುದೇ ಹೊರತು ಭಾಷಾ ವಿಜ್ಞಾನದ ನಿರೂಪಣೆಗೆ ಅನುಗುಣವಾಗಿಲ್ಲ, ಬದ್ದ ಆಕೃತಿಮಾ ಎಂಬುದಕ್ಕೆ ಅವರು ಶುದ್ಧ ‘ಮಾರ್ಫೀಂ ಎಂದು ಹೇಳಿದ್ದಾರೆ.

ಹೀಗೆ ಈ ತಪ್ಪುಗಳ ಪಟ್ಟಿಯನ್ನು ಇನ್ನೂ ಬೆಳೆಸಬಹುದು. ಅಗತ್ಯವಿಲ್ಲ, ಒಟ್ಟಿನಲ್ಲಿ ಲೇಖಕರು ಬೆಟ್ಟಕ್ಕೆ ಕಲ್ಲುಹೊತ್ತ ವ್ಯರ್ಥ ಸಾಹಸ ಮಾಡಿದ್ದಾರೆ. ಅಮೂಲ್ಯ ವಿರಾಮ ವೇಳೆಯನ್ನು ಕಳೆದು ವೃಥಾ ಶ್ರಮಪಟ್ಟ ಲೇಖಕರು ಬಹುಶ್ರುತರಾದುರಿಂದ ಇದೇ ಸಮಯವನ್ನು ಉಪಯೋಗಿಸಿಕೊಂಡು ಕನ್ನಡ ಭಾಷೆ – ಸಾಹಿತ್ಯಗಳ ಸಂದರ್ಭನೆಗೆ ಸಹಕಾರಿಯಾಗಬಲ್ಲ ಗ್ರಂಥ ರಚಿಸಬಹುದಿತ್ತು.

ಛಂದಸ್ಸಿನ ಔಚಿತ್ಯ (ಶಿವರಾಮ ಐತಾಳ) : ಇದು ಛಂದಸ್ ಶಾಸ್ತ್ರ ವಿಷಯವಾಗಿ ಬರೆದ ಪುಸ್ತಿಕೆ. ಇದುವರೆಗೆ ಕನ್ನಡದಲ್ಲಿ ಛಂದಸ್ಸನ್ನು ಕುರಿತು ಪ್ರಕಟವಾಗಿರುವ ಪುಸ್ತಕಗಳು ಕಡಮೆ. ಬಿಡಿ ಲೇಖನಗಳು ಬಹಳ., ಈ ಹಿನ್ನಲೆಯಲ್ಲಿ ಇದಕ್ಕೊಂದು ಸ್ಥಾನವಿದೆಯಲ್ಲದೆ ಬರೆಹದ ಮೇಲ್ಮೆಯಿಂದಾಗಿಯೂ ಇದಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದುವರೆಗಿನ ಛಂದಸ್ಸನ್ನು ಕುರಿತು ಬರೆದ ಹೊತ್ತಗೆಗಳಲ್ಲಿ ಸ್ವತಂತ್ರವಾಗಿ ವಿವರಣೆ ಗೌಣವಾಗಿತ್ತು. ಇದರಲ್ಲಿ ಸ್ವೋಪಜ್ಞತೆಗೆ ಆದ್ಯತೆ.

ಹಳಗನ್ನಡ, ನಡುಗನ್ನಡ, ಹೊಸಗನ್ನಡ -ಇವುಗಳ ಸಾಹಿತ್ಯ ವಿಕಾಸವನ್ನು ಛಂದಸ್ಸಿನ ಹಾಗೂ ಭಾಷೆಯ ದೃಷ್ಟಿಯಿಂದ ಇಲ್ಲಿ ಮಾಡಿರುವ ವಿಹಂಗಮ ರೂಪದ ಸಮೀಕ್ಷೆ ಮನನೀಯ. ಭಾಷೆಗೂ ಛಂದಸ್ಸಿಗೂ, ಗದ್ಯಕ್ಕೂ ಛಂದಸ್ಸಿಗೂ, ಕವಿತೆಗೂ ಛಂದಸ್ಸಿಗೂ ಇರುವ ಸಂಬಂಧ ಹಾಗೂ ಅಗತ್ಯಾನಗತ್ಯಗಳ ವಿವೇಚನೆ ಇಲ್ಲದೆ.

ನೃತ್ಯ, ಸಂಗೀತ, ಸ್ವರಾಘಾತ ಮೊದಲಾದ ಬೇರೆ ಬೇರೆ ನಿಟ್ಟಿನಿಂದಲೂ ಛಂದಸ್ಸಿನ ಅಗತ್ಯ-ಔಚಿತ್ಯವನ್ನು ವಿಮರ್ಶಿಸಿದ್ದಾರೆ. ಅಘಾತದ ದೃಷ್ಟಿಯಿಂದ ಮಾಡಿರುವ ವಿವೇಚನೆ ಇನ್ನೂ ಪರಿಶೀಲನಾರ್ಹ, ಬಹುವಾಗಿ ಹೇಳಿಕೆಗಳನ್ನು ಉದಾಹರಣೆಗಳಿಂದ ಸ್ಪಷ್ಟಪಡಿಸಲಾಗಿದೆ. ಇದರಲ್ಲಿ ಔಚಿತ್ಯ ಚರ್ಚೆಯೋ ದೊಡ್ಡದಾಗಿ ಛಂದಸ್ಸಿನ ಔಚಿತ್ಯದ ಸರಿಯಾದ ಕಲ್ಪನೆ ಮಾಡುವುದಿಲ್ಲ.

ಶಾಸ್ತ್ರೀಯ ಬರೆಹಕ್ಕೆ ಅನುಗುಣವಾದ ಭಾಷೆ ಇಲ್ಲಿದ್ದರೂ ಲೇಖಕರು ಒಮ್ಮೊಮ್ಮೆ ಭಾವುಕತೆಯಿಂದ ಮೂಲ ವಿಷಯ ನಿರೂಪಣೆಯಿಂದ ದೂರ ಸರಿಯುತ್ತಾರೆ. ಹಲವು ಕಡೆ ವಾಕ್ಯಗಳನ್ನೂ ಕೆಲವು ಪುಟಗಳನ್ನೂ ಧಾರಾಳವಾಗಿ ಬಿಡಬಹುದಾಗಿತ್ತು. ಉದಾಹರಣೆ – ಪುಟ ೧೪, ೧೯, ೨೨ ರಿಂದ ೨೮. ಹಾಗೆ ನೋಡುವುದಾದರೆ ಪುಟ ೧೩ ರಿಂದ ೨೮ರ ವರೆಗಿನ ೧೬ ಪುಟಗಳ ವಿವರಣೆಯನ್ನು ಅಯ್ದಾರು ಪುಟಗಳಲ್ಲಿ ಅಡಕಗೊಳಿಸಬಹುದಿತ್ತು.

ಈ ಕೃತಿಯ ಜೊತೆಗೆ ಇದೇ ಸಾಹಿತ್ಯವಾಹಿನಿ ಮಾಲೆಯಲ್ಲಿ ಇದೇ ವರ್ಷ ಪ್ರಕಟವಾಗಿರುವ ಈ ಲೇಖಕರ ‘ಕನ್ನಡ ಛಂದಸ್ಸಿನ ಪರಿಚಯ’ ಎಂಬ ಪುಸ್ತಿಕೆಯನ್ನು ಅವಲೋಕಿಸಬಹುದು; ಇದರಲ್ಲಿ ಅಂಶಗಣ ಹಾಗೂ ಅದರಲ್ಲಿ ನಡೆಯುವ ಏಳೆ ಮುಂತಾದ ಕನ್ನಡ ಮಟ್ಟುಗಳ ಸಂಗ್ರಹ ಪರಿಚಯವಿದೆ. ಗೀತಿಕೆ ಕುರಿತ ಇವರ ವಿವರಣೆ ಪ್ರಶ್ನಾರ್ಹ. ಇವರು ಕೊಡುವ ಲಕ್ಷ್ಯಗಳು ಸಮರ್ಪಕವಾಗಿರುವಂತೆ ತೋರುವುದಿಲ್ಲ.

ಛಂದೋಂಬುಧಿ (ರಾಮಚಂದ್ರರಾವ್) : ನಾಗವರ್ಮನ ಛಂದೋಂಬುಧಿಯನ್ನು ಈಗಾಗಲೇ ಇಬ್ಬರು ವಿದ್ವಾಂಸರು ಮುದ್ರಿಸಿದ್ದಾರೆ. ಅವುಗಳಲ್ಲಿ ೧೮೭೪ರಲ್ಲಿ ಅಚ್ಚಾದ ರೆ|| ಎಫ್. ಕಿಟೆಲ್ಲರ ಪ್ರತಿಯನ್ನೇ ಈ ಪ್ರತ್ಯೇಕ ಸಂಪಾದಕರು ಆಧರಿಸಿದ್ದಾರೆ.

ಈ ಸಂಪಾದಿತ ಕೃತಿಯಲ್ಲಿ ಹೇಳಿಕೊಳ್ಳುವಂತಹ ಹೆಚ್ಚಿನ ಸಂಶೋಧಕ ದೃಷ್ಟಿ ಇಲ್ಲವೇ ಸಾಮಗ್ರಿ ಇಲ್ಲ. ಹಿಂದಿನ ಮುದ್ರಣವನ್ನಷ್ಟೇ ಅನುಸರಿಸಿರುವ ಈ ಪ್ರಯತ್ನ ಅನಗತ್ಯವೆಂದೇ ಹೇಳಬೇಕಾಗುತ್ತದೆ. ಕಾರಣ ಗ್ರಂಥಸಂಪಾದನಾ ಶಾಸ್ತ್ರದ ಪರಿಚಯ ಕೂಡ ಈ ಸಂಪಾದಕರಿಗಿಲ್ಲ. ಅಯ್ದೂವರೆ ಪುಟದ ಮುನ್ನುಡಿಯಲ್ಲೂ ಛಂದೋಂಬುಧಿಯ ಬಗೆಗೆ ತಿಳಿಸಿರುವ ಮಾತುಗಳೆಲ್ಲ ಚರ್ವಿತಚರ್ವಣವೇ ಹೊರತು ಹೊಸದೇನೂ ಹೇಳಿಲ್ಲ.

ಮುಖ್ಯವಾದ ಕೊರತೆ ಈ ಮುದ್ರಣಕ್ಕೆ ಬೇರೆ ಯಾವ ಓಲೆಗರಿ ಹಸ್ತಪ್ರತಿಯನ್ನೂ ಬಳಸಿಕೊಳ್ಳದಿರುವುದು, ಇದರಿಂದ ಈ ಗ್ರಂಥ ಪ್ರಮಾಣಭೂತವಾದ ಮುದ್ರಣವಾಗಲಾರದು. ಮುದ್ರಣದಿಂದ ಮುದ್ರಣಕ್ಕೆ ಲಭ್ಯವಾದ ಆಧಾರ ಸಾಮಾಗ್ರಿಯನ್ನು ಉಪಯೋಗಿಸಿಕೊಂಡು ಪ್ರಗತಿ ಕಾಣಬೇಕು. ಹಾಗಾದಾಗಲೇ ತರುವಾಯದ ಮುದ್ರಣಗಳ ಸಾರ್ಥಕ್ಯ, ಇಲ್ಲಿ ಅಂಥ ಪರಿಷ್ಕಾರ ಕಂಡು ಬರುವುದಿಲ್ಲ.

ಗ್ರಂಥದುದ್ದಕ್ಕೂ ಹಾಸುಹೊಕ್ಕಾಗಿರುವ ಮುದ್ರಣ ಸ್ಖಾಲಿತ್ಯಗಳು ಓದುಗರನ್ನು ತಪ್ಪುದಾರಿಗೆಳೆಯುತ್ತವೆ. ವಿದ್ವಾಂಸರಿಗೆ ತಲೆನೋವು ತರಿಸುತ್ತವೆ. ಷಟ್ಪದಿ ಪದ್ಯಗಳೆಲ್ಲ ಮೂಲ ಗ್ರಂಥದ ಭಾಗಗಳಾಗಿ ಸೇರ್ಪಡೆಯಾಗಿವೆ. ಇವು ಪ್ರಕ್ಷಿಪ್ತಗಳಿರಬಹುದೆ ಎಂಬ ಸೂಚನೆಯೂ ಇಲ್ಲ. ಪದ್ಯಗಳ ಅಕಾರಾದಿ, ಅರ್ಥಕೋಶ, ಪಾಠಾಂತರಗಳು, ವಿಶೇಷ ಟಿಪ್ಪಣಿಗಳು, ಕವಿ ಕೃತಿ ವಿಚಾರವಾದ ಪ್ರೌಢವಿಮರ್ಶೆ, ಛಂದಸ್ಸಿನ ಬಗೆಗೆ ನಾಗವರ್ಮನ ಕೊಡುಗೆ ಕುರಿತ ಸೂಚನೆ-ಇವು ಯಾವೂ ಇಲ್ಲದೆ ಈ ಗ್ರಂಥ ಕೇವಲ ಒಂದು ‘ಬಜಾರ್ ಎಡಿಷನ್’ಆಗಿ ನಿಂತಿದೆ. ಇದರ ಅವಲೋಕನದಿಂದ ಸ್ಪಷ್ಟವಾಗುವ ಒಂದು ವಿಚಾರವೆಂದರೆ ಛಂದೋಂಬುಧಿಯ ಉತ್ತಮ ಪರಿಷ್ಕೃತ ಸಂಪಾದಿತ ಮುದ್ರಣವೊಂದರ ಅಗತ್ಯ ಇನ್ನೂ ಇದ್ದೇ ಇದೆ-ಎಂಬುದು.

ಕೇಶಿರಾಜ -(ಶ್ರೀನಿವಾಸನ್) : ಈ ಪುಸ್ತಿಕೆ ಸಾಹಿತ್ಯವಾಹಿನಿ ಮಾಲೆಯಲ್ಲಿ (ಸಂಖ್ಯೆ ೨೨) ಪ್ರಕಟವಾಗಿದೆ. ಇದರಲ್ಲಿ ಕೇಶಿರಾಜನ ಪರಿಚಯವಿದೆ. ಜೊತೆಗೆ ಶಬ್ದಮಣಿ ದರ್ಪಣದ ಸ್ಥೂಲ ಪರಿಚಯವಿದೆ.

ವರ್ಣ ಸಮಾಮ್ನಾಯ, ಕೇಶಿರಾಜನ ಕನ್ನಡ ಪ್ರಜ್ಞೆ, ವಿಭಕ್ತಿ ಪಲ್ಲಟ, ಗಮಕ ಸಮಾಸ, ಛಿಛಿಕುಳಕ್ಞಳ ವಿಚಾರ, ಶ್ರುತಿಸಹ್ಯ ಸಂಧಿ, ಸಮಸಂಸ್ಕೃತ, ಮೊದಲಾದುವನ್ನು ಕುರಿತು ಕೇಶಿರಾಜನ ವಿವರಣೆ ಏನೆಂಬುದನ್ನು ಇಲ್ಲಿ ಸಂಗ್ರಹವಾಗಿ ತಿಳಿಸಿಕೊಟ್ಟಿದ್ದಾರೆ.

ಈ ಪುಸ್ತಿಕೆಯಲ್ಲಿ ಮೊದಲ ಹತ್ತು ಪುಟದಲ್ಲಿ ಬಂದಿರುವ ವಿಷಯ ಅನುಚಿತ, ಅದೇ ಪುಟಗಳಲ್ಲಿ ಶಬ್ದಮಣಿದರ್ಪಣದ ಪರಿಚಯಕ್ಕೆ ಮೀಸಲಿರಿಸಿದ್ದರೆ ಉಪಯುಕ್ತತೆ ಇನ್ನೂ ಹೆಚ್ಚುತ್ತಿತ್ತು. ಮೂರನೇಯ (ವಾಸ್ತವವಾಗಿ ಮೊದಲನೆಯ) ಪುಟದಲ್ಲಿ ಬಂದಿರುವ ಇಂಗ್ಲಿಷ್ ವಾಕ್ಯಗಳ ಉಲ್ಲೇಖ ಅಲ್ಲಿನ ವಿವರಣೆಗೆ ಹೊಂದಿಕೊಳ್ಳುವುದೇ ಇಲ್ಲ.

ಇದರ ೧೨ನೆಯ ಪುಟದಲ್ಲಿ ಕಾಲ್ಡ್ ವೆಲ್ಲನ ಗ್ರಂಥವಾದ ತೌಲನಿಕ ದ್ರಾವಿಡ ಭಾಷೆಗಳ ವ್ಯಾಕರಣ ಕುರಿತು ಬರೆಯುತ್ತಾ ‘ಇತ್ತೀಚೆಗೆ ಮೂರನೆಯ ಮುದ್ರಣವನ್ನು ಕಂಡಿದೆ’ ಎಂದಿದ್ದಾರೆ. ಆದರೆ ಇತ್ತೀಚೆಗೆ, ಅಂದರೆ ೧೯೫೬ರಲ್ಲಿ, ಅದು ಕಂಡದ್ದು ಮೂರನೆಯ ಮುದ್ರಣವಲ್ಲ, ನಾಲ್ಕನೆಯದು,

ಇಂಥ ಕೆಲವು ಅಂಕಿ ಅಂಶಗಳ ಅರೆಕೊರೆಗಳ ಹೊರತು ಈ ಪುಸ್ತಿಕೆ ಕೇಶಿರಾಜನ ಶಬ್ದಮಣಿದರ್ಪಣ ವ್ಯಾಸಂಗಿಗಳಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಪ್ರವೇಶಿಕೆ.

ಪಂಪಭಾರತ ದೀಪಿಕೆ : (ಡಿ.ಎಲ್. ನರಸಿಂಹಾಚಾರ್ಯ) : ಬಿ.ಎ. (ಅನರ್ಸ್) ಎಂ.ಎ. ತರಗತಿಗಳ ಪ್ರೌಢ ವಿದ್ಯಾರ್ಥಿಗಳಿಗೆ ಪಂಪಭಾರತವನ್ನು ಹಲವಾರು ವರ್ಷ ಪಾಠ ಹೇಳಿದ ಅಚಾರ್ಯರು ಅದರಲ್ಲಿ ಎದುರಾಗುವ ಸಿಕ್ಕುಗಳನ್ನು ಬಿಡಿಸುವ ಸುಳಿವು ಕಂಡು ಕೊಂಡರು, ಹಿಡಿದ ಅನ್ವೇಷಕ ಜಾಡನ್ನು ಬಿಡದೆ ಮತ್ತೆ ಮತ್ತೆ ಪಂಪಭಾರತವನ್ನೇ ಮನನ-ಮಾಡಿದರು, ಅಂತಹ ಒಂದು ಅಧ್ಯಯನ, ಸಂಶೋಧನೆ ಹಾಗೂ ಉನ್ನತ ಪಾಂಡಿತ್ಯ-ಇವುಗಳ ಪೂರ್ಣಫಲ ಈ ವ್ಯಾಖ್ಯಾನ ಗ್ರಂಥ. ಈ ಟೀಕೆ ಸಾಕಷ್ಟು ವಿಸ್ತಾರವಾಗಿಯೂ ಪ್ರತಿಪದಾರ್ಥ ಸಹಿತವಾಗಿಯೂ, ರಚಿತವಾಗಿದೆ. ಇದೊಂದು ವಿದ್ವತ್ ಸಾಹಸ, ವ್ಯಾಕರಣ, ಛಂದಸ್ಸು, ಪೂರ್ವಕಥಾವೃತ್ತಾಂತ ಶಬ್ದಾರ್ತ ನಿರ್ಣಯ, ಆಕರ ಗ್ರಂಥಗಳು-ಮೊದಲಾದ ಹಲವಾರು ವಿಷಯಗಳು ನಿರೂಪಿತವಾಗಿವೆ, ಇವೆಲ್ಲ ಪಂಪಭಾರತ ಕಾವ್ಯದ ರಸಾಸ್ವಾದನೆಗೆ ಇಂಬಾಗಿ ನಿಲ್ಲುತ್ತವೆ. ವ್ಯಾಖ್ಯಾನ ಗ್ರಂಥಗಳ ಪ್ರಾಚೀನ ಪರಂಪರೆಯನ್ನು ಸುಸಮರ್ಥ ರೀತಿಯಲ್ಲಿ ಆಚಾರ್ಯರು ಮುಂದುವರಿಸಿಕೊಂಡು ಬಂದಿರುವುದನ್ನಿಲ್ಲಿ ನಿಚ್ಚಳವಾಗಿ ನೋಡಬಹುದು.

ಪಂಪಭಾರತ ಸಂಶೋಧಕರಿಗೆ ಆಡುಂಬೊಲ, ಅದರಲ್ಲಿ ಅನೇಕ ಗಂಟುಗಳಿವೆ. ‘ಪಂಪಭಾರತ ದೀಪಿಕೆ’ ಅನೇಕ ಗಂಟುಗಳನ್ನು ತೆಗೆದು ಹಾಕಿದೆ. ಸಿಕ್ಕುಗಳನ್ನು ಬಿಡಿಸಿದ್ದರೂ ಬಲ್ಲವರಿಗೇ ಇಲ್ಲಿ ಬೆರಗೇನೂ ಇಲ್ಲವೆಂದು ದೀಪಿಕಾಕಾರರು ಅರಿಕೆ ಮಾಡಿದ್ದಾರೆ. ಬಲ್ಲವರಿಗೇ ಇಲ್ಲಿನ ಬೆರಗು ಗೋಚರಿಸುವುದು, ಪಂಪಭಾರತವನ್ನು ಸ್ವಂತವಾಗಿ ವ್ಯಾಸಂಗ ಮಾಡಲಿಚ್ಚಿಸುವವರಿಗೂ ಬೋಧಿಸುವವರಿಗೂ ಇದರಿಂದ ಮಹದುಪಕಾರವಾಗಿದೆ.

ಹೀಗಿದ್ದೂ ಕೆಲವು ಕಡೆ ವ್ಯಾಖ್ಯಾನಕಾರರು ನೀಡಿರುವ ವಿವರಣೆ, ಸೂಚನೆ, ಅರ್ಥೈಸುವಿಕೆ -ಇವು ಅನುಮಾನಕ್ಕೆಡೆ ಮಾಡಿಕೊಟ್ಟಿರುಬಹುದು. ಅದನ್ನು ಅವರೇ ಒಪ್ಪಿಕೊಂಡು ಹೇಳಿರುವ ಮಾತುಗಳಿವು : “ಹಲವೆಡೆಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ; ನನ್ನದೇ ಸರಿಯೆಂಬ ಹಠವೇನೂ ಇಲ್ಲ, ಜಿಜ್ಞಾಸುವಿನ ದೃಷ್ಟಿಯಿಂದ ಕೆಲವಂಶಗಳನ್ನು ಚರ್ಚಿಸಿದೆ. ನನಗೆ ಸಂದೇಹವೆಂದು ತೋರಿದೆಡೆಗಳಲ್ಲಿ ಪ್ರಶ್ನೆ ಚಿಹ್ನೆಯನ್ನು ಧಾರಾಳವಾಗಿ ಬಳಸಿದ್ದೇನೆ; ತಿಳಿಯದ ಅಂಶಗಳಿಗೂ ಇದೇ ಚಿಹ್ನೆಯನ್ನು ಅಲ್ಲಲ್ಲಿ ಹಾಕಿದೆ. ಈ ಪ್ರಶ್ನೆ ಚಿಹ್ನೆಗಳನ್ನು ತೆಗೆದು ಹಾಕುವ ಕೆಲಸ ಮುಂದಿನ ವಿದ್ವಾಂಸರಿಗೆ ಸೇರಿದುದಾಗಿದೆ. ಈ ಕ್ಷೇತ್ರದಲ್ಲಿ ಸಂಶೋಧನೆ ಮುಂದುವರಿದು ಹೊಸ ಆಧಾರಗಳು ತಲೆದೋರುವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಾಗಬಹುದು. ಇವನ್ನೆಲ್ಲ ಸಹಾನುಭೂತಿಯಿಂದ ನೋಡಬೇಕೆಂದು ನನ್ನ ನಮ್ರತೆಯ ವಿನಂತಿ” (ಪು.xiv)

ಆಚಾರ್ಯರು ಶಬ್ದಾರ್ಥ ವ್ಯಾಖ್ಯಾನದ ಜೊತೆಗೆ ಅಲ್ಲಲ್ಲಿ ತೀರ ಅಗತ್ಯವೆಂದು ತೋರಿದೆಡೆಗಳಲ್ಲಿನ ಪಂಪನ ಪ್ರತಿಭೆಯ ಪರಿಭಾವನೆಯನ್ನೂ ಸಂಗ್ರಹವಾಗಿ ನಡೆಸುತ್ತಾರೆ, “ಈ ಪದ್ಯದಲ್ಲಿ ಪರಶುರಾಮನ ಅಧಿಕಾರವಾಣಿ, ಅವನ ದರ್ಪ, ಸ್ವಪ್ರತಾಪದಲ್ಲಿ ನಂಬಿಕೆ, ಶಿಷ್ಯನ ವಿಧೇಯತೆಯಲ್ಲಿ ವಿಶ್ವಾಸ, ಅಂಬೆಯ ವಿಷಯವಾಗಿ ಪರಿತಾಪ, ಮದುವೆ ಶೀಘ್ರವಾಗಿ ನಡೆಯಲೆಂಬ ಉತ್ಸುಕತೆ, ಶಿಷ್ಯನು ತನ್ನ ಮಾತನ್ನು ನಡಸುತ್ತಾನೋ ಇಲ್ಲವೋ ಎಂಬ ಸಂದೇಹ ಮುಂತಾದ ಭಾವತುಮುಲ ಒಟ್ಟಿಗೆ ಸೇರಿಕೊಂಡಿವೆ; ಚಿಕ್ಕ ವಾಕ್ಯಗಳು ಕ್ರಿಯಾವೇಗವನ್ನು ಪ್ರತಿಬಿಂಬಿಸುತ್ತವೆ” (ಪು. ೩೦)

ಈ ದೀಪಿಕೆಯ ಬೆಳಗಿನಲ್ಲಿ ಪಂಪಭಾರತವನ್ನು ಚೆನ್ನಾಗಿ ತಿಳಿಯಬಹುದು.

ಈ ಗ್ರಂಥದಲ್ಲಿ ಎದ್ದು ಕಾಣುವ ಒಂದೇ ಕೊರತೆಯೆಂದರೆ ಮುದ್ರಣಕಾರ್ಯದಲ್ಲಿ ತೋರಿರುವ ತಾಟಸ್ಥ ಅಥವಾ ಔದಾಸೀನ್ಯ. ಇಂಥದೊಂದು ಅಪೂರ್ವಗ್ರಂಥದ ಅಚ್ಚಿನ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದರೆ ಪುಟ ಪುಟವೂ ಕಾರುವ, ನಾಲ್ಕು ಪುಟದ ಒಪ್ಪೋಲೆಗೂ ಮೀರಿದ ದೋಷಗಳು ಕಡಮೆಯಾಗಬಹುದಿತ್ತು.

ಹರಿಹರನ ಕೃತಿಗಳುಒಂದು ಸಂಖ್ಯಾನಿರ್ಣಯ (ಹೀರೆಮಲ್ಲೂರು ಈಶ್ವರನ್): ಕನ್ನಡದ ಮಹಾಕವಿಗಳಲ್ಲಿ ಹರಿಹರನೂ ಒಬ್ಬ. ಆತನ ರಗಳೆಗಳು ಅನೇಕ. ಹರಿಹರ ಎಷ್ಟು ರಗಳೆಗಳನ್ನು ಬರೆದಿದ್ದ ಎಂಬುದನ್ನು ಖಚಿತವಾಗಿ ಹೇಳಲು ತೊಡಕುಗಳಿವೆ. ಹರಿಹರನ ಕಾವ್ಯಮುದ್ರಿಕೆ ‘ಹಂಪೆಯ ವಿರೂಪಾಕ್ಷ’, ಈ ಮುದ್ರಿಕೆಯುಳ್ಳ ರಗಳೆಗಳೆಲ್ಲ ಹರಿಹರನವು ಎಂಬ ನಂಬಿಕೆಯಿದೆ. ಈ ಮುದ್ರಿಕೆ ಇಲ್ಲದ ಮಾತ್ರಕ್ಕೆ ಅವು ಹರಿಹರಕೃತವಲ್ಲ ಎಂಬ ಭಾವನೆ ಹೇಗೆ ಅಗ್ರಾಹ್ಯವೋ, ಹಾಗೆ ಈ ಮುದ್ರಿಕೆ ಇರುವ ರಗಳೆಗಳೆಲ್ಲ ಹರಿಹರಕೃತವೆಂದು ತಿಳಿಯುವುದೂ ತಪ್ಪಾದೀತು, ಮೂರು ಮುಖ್ಯ ಕಾರಣಗಳಿಂದ :

ಅ. ಒಂದು ರಗಳೆಗೆ ಒಂದಕ್ಕಿಂತ ಹೆಚ್ಚಿನ ಮುದ್ರಿಕೆಗಳು ಭಿನ್ನ ಭಿನ್ನ ಮಾತೃಕೆಗಳಲ್ಲಿರುತ್ತವೆ.

ಆ. ಮೂಲದ ಕಾವ್ಯ ಮುದ್ರಿಕೆಗಳನ್ನು ಪಲ್ಲಟ ಮಾಡಿ ಕೃತ್ರಿಮ ಮುದ್ರಿಕೆಗಳನ್ನು ಸೇರಿಸಲಾಗಿರುತ್ತದೆ.

ಇ. ಹರಿಹರನ ಹೆಸರಿನಲ್ಲಿ ಆತನ ಅಭಿಮಾನಿಗಳಿಂದ ರಗಳೆಯ ರಚನೆಯಾಗಿರುತ್ತದೆ.

ಇವುಗಳಲ್ಲಿ ಮೂರನೆಯ ಕಾರಣವನ್ನು ಒತ್ತುಕೊಟ್ಟು ಗುರುತಿಸಬೇಕಾಗುತ್ತದೆ. ದಾಸರ ಕೀರ್ತನೆಗಳೂ ಶರಣರ ವಚನಗಳೂ ಸರ್ವಜ್ಞನ ವಚನಗಳೂ ಹೀಗೆ ಆಗಿರುವುದುಂಟು. ಅಷ್ಟೇಕೆ ಹಳಗನ್ನಡ ಕಾವ್ಯಗಳಲ್ಲೂ, ಕಡೆಗೆ ವ್ಯಾಕರಣ, ಛಂದಸ್ಸು ಮೊದಲಾದ ಶಾಸ್ತ್ರೀಯ ಕೃತಿಗಳಲ್ಲೂ ಹೀಗೆ ಪ್ರಕ್ಷಿಪ್ತಗಳ ಸೇರ್ಪಡೆ ನಡೆದಿದೆ.

ಈ ಬಗೆಯ ತೊಡಕನ್ನು ಹರಿಹರನ ರಗಳೆಗಳ ಸಂಖ್ಯಾನಿರ್ಣಯದಲ್ಲೂ ಎದುರಿಸಬೇಕಾಗುತ್ತದೆ. ಇದು ಸಾಮಾನ್ಯ ಓದುಗರ ಸಮಸ್ಯೆಯಲ್ಲ, ನಿಜ. ವಿದ್ವತ್ ಪ್ರಪಂಚಕ್ಕೆ ಸಂಬಂಧಪಟ್ಟ ಈ ಸಿಕ್ಕನ್ನು ಬಿಡಿಸುವ ಉದ್ದೇಶದಿಂದ ರಚಿತವಾದ ಹೊತ್ತಗೆ ಇದು.

ಲೇಖಕರು ತಮಗೆ ದೊರೆತ ರಗಳೆಯ ಮಾತೃಕೆಗಳ ಆಧಾರದಿಂದ ಪ್ರಸ್ತುತ ಪ್ರಬಂಧದಲ್ಲಿ ಹರಿಹರ ವಿರಚಿತ ರಗಳೆಗಳ ಸಂಖ್ಯೆ ೧೦೬ ಎಂದು ಅಭಿಪ್ರಾಯ ಪಟ್ಟಿದ್ದಾರೆ. “ಸಂಸಾರ ಹೇಯ ಎಂಬ ಹೆಸರಿನ ಒಂದು ರಗಳೆ ಹರಿಹರ ವಿರಚಿತ ಅಹುದೋ ಅಲ್ಲವೋ ಎಂಬ ಪ್ರಶ್ನೆಗೆ ಉತ್ತರ ಹೇಳುವುದಕ್ಕೆ ಈಗ ಸಿಕ್ಕಿರುವ ಮಾತೃಕೆಗಳ ಅಧಾರವಷ್ಟೇ ಸಾಲದ್ದರಿಂದ” ಆ ರಗಳೆಯ ಕರ್ತೃತ್ವವನ್ನು ಅನುಮಾನದ ಪರದೆಯಲ್ಲಿರಿಸಿದ್ದಾರೆ.

ಹರಿಹರನ ರಗಳೆಗಳಲ್ಲಿ ಅಚ್ಚಾದುವನ್ನೂ ಅಪ್ರಕಟಿತವಾದುಗಳನ್ನೂ ಹಸ್ತಪ್ರತಿಗಳನ್ನೂ ಬಳಸಿಕೊಂಡಿದ್ದಾರೆ. ಇದು ಅಚ್ಚಿಗೆ ಸಿದ್ದವಾದುದ್ದು ೧೯೫೪ರಲ್ಲಿ ಅಚ್ಚಾದದ್ದು ೧೯೭೧ರಲ್ಲಿ (ಜನವರಿಯಲ್ಲಿ). ಹದಿನೆಂಟು ವರ್ಷಗಳ ನಡುವಿನ ಗಡುವಿನಲ್ಲಿ ಹರಿಹರನ ಕೃತಿಗಳ ವಿಚಾರದಲ್ಲಿ ವಿಪುಲವಾದ ವಿಮರ್ಶೆ ಹೊರಬಂದಿದೆ. ಅವುಗಳಲ್ಲಿ ದೇವೀರಪ್ಪನವರ ಗ್ರಂಥವಂತೂ ಗಮನಾರ್ಹ, ಸಧ್ಯಕ್ಕಂತೂ ಅದೇ ಉಪಾದೇಯ.

ಹೀಗಾಗಿ ಈ ಗ್ರಂಥ ಅನೇಕ ವಿವರಗಳಲ್ಲಿ ಸಮಕಾಲೀನ ತೀರ್ಮಾನದ ನಿಲುವಿಗೆ ನಿಲುಕದೆ, ನಿಲ್ಲದೆ ಹೋಗುವುದು ಸಹಜವೇ ಹಾಗೆಂದು ಲೇಖಕರೂ ಬಲ್ಲರು : “ಈ ಪ್ರಬಂಧದಲ್ಲಿ ಹರಿಹರಕೃತ ರಗಳೆಗಳ ಸಂಖ್ಯಾ ನಿರ್ಣಯದ ಬಗೆಗೆ ನಾನು ವ್ಯಕ್ತಪಡಿಸಿರುವ ಅಭಿಪ್ರಾಯ ಇದಮಿತ್ಥಂ ಎಂದು ಹೇಳುವ ಧಾರ್ಷ್ಟ್ಯ ನನಗಿಲ್ಲ. ಪಂಡಿತರು ಸಾಧಾರಪೂರ್ವಕವಾಗಿ ಇದರಲ್ಲಿ ಹೆಚ್ಚು ಕಡಿಮೆ ಮಾಡಿ ತೋರಿಸಬಹುದಾದರೆ ಮಾನ್ಯವೆ.”

ಲೇಖಕರು ಸಾಕಷ್ಟು ಸಂಶೋಧನೆ (೭) ನಡಸಿದ್ದಾರೆ, ಬಹುವಾಗಿ ಶ್ರಮಪಟ್ಟಿದ್ದಾರೆ. ಈ ವಿಷಯದಲ್ಲಿ ಅನೇಕ ವಿದ್ವಾಂಸರ ನೆರವು ಕೂಡ ಪಡೆದಿದ್ದಾರೆ. ಆದರೆ ಅವರ ಬರೆಹ ಬಹಳ ಸರಳವಾಗಿದ್ದು ಅಳತೆಯಿಲ್ಲದ ಬೆಳೆದುಬಿಟ್ಟಿದೆ. ಸಂಕ್ಷಿಪ್ತತೆಗಿಂತ ವಿಸ್ತಾರದತ್ತ ಒಲವು ತೋರಿದ್ದಾರೆ. ತೀರ ಸಣ್ಣ ಸಾಮಾನ್ಯ ವಿಚಾರಗಳನ್ನೂ ಮಹತ್ತಾಗಿ ತಿಳಿದು ಲಂಬಿಸಿಬಿಡುತ್ತಾರೆ. ಹರಿಹರಕೃತ ರಗಳೆಗಳ ನಿರ್ಧಾರ ಎಂಬ ಅಧ್ಯಾಯ ಅಣುವನ್ನು ಬ್ರಹ್ಮಾಂಡವಾಗಿ ಪರಿಗಣಿಸುವುದು ಹೇಗೆಂಬುದಕ್ಕೆ ಪ್ರಮಾಣವಾಗಿದೆ. ಇಲ್ಲೆಲ್ಲ ಪ್ರಾರಂಭದ ಅಧ್ಯಾಯಗಳಲ್ಲಿ ಬಂದ ಪ್ರಸ್ತಾಪವೇ ಪುನಃ ಪುನಃ ಬಂದು ಪುನರುಕ್ತಿಯ ದೋಷಕ್ಕೆ ಪಕ್ಕಾಗಿದೆ.

ಹೊಸದಲ್ಲದ ಅಂಶಗಳನ್ನು ಹೆಚ್ಚಾಗಿ ಹೊತ್ತಿರುವುದರಿಂದ ಸಂಶೋಧನೆಯ ಮಟ್ಟ ಕಡಮೆ ಆಗಿದೆ.

ಅನ್ಯ ಸಾಹಿತ್ಯದಿಂದ

ಈ ವಿಭಾಗದ ವಿಮರ್ಶೆಗೆ ಬಂದಿರುವ ಒಟ್ಟು ಗ್ರಂಥಗಳು ಹತ್ತು. ಅವುಗಳಲ್ಲಿ ಇಂಗ್ಲಿಷ್ ಸಾಹಿತ್ಯಕ್ಕೆ ಸಂಬಂಧಿಸಿದ ಗ್ರಂಥ ಒಂದು ಪಾತ್ರ. ಸಂಸ್ಕೃತ ಸಾಹಿತ್ಯಕ್ಕೆ ಸೇರಿದ ಕೃತಿಗಳು ಎಂಟಿವೆ. ಉಳಿದ ಹೊತ್ತಗೆ ತಮಿಳು ಸಾಹಿತ್ಯಕ್ಕೆ ಸೇರಿದ ಕೃತಿಗಳು ಎಂಟಿವೆ, ಉಳಿದ ಒಂದು ಹೊತ್ತಗೆ ತಮಿಳು ಸಾಹಿತ್ಯಕ್ಕೆ ಸಂಬಂಧಪಟ್ಟದೆ.

ಈ ಅನ್ಯಸಾಹಿತ್ಯಕ್ಕೆ ಸಂಬಂಧಿಸಿದಂತೆ ರಚಿತವಾದ ಗ್ರಂಥಗಳನ್ನು ವಿಮರ್ಶೆಯ ನಿಕಷಕ್ಕೆ ಒರೆಹಿಡಿದು ನೋಡಿದಾಗ ತೃಪ್ತಿಗಿಂತ ನಿರಾಶೆಯೇ ಅಧಿಕ. ಎಲ್ಲ ಮಾನದಂಡದಿಂದಲೂ ನಿಲ್ಲುವ ಗ್ರಂಥವೆಂದರೆ ಕನ್ನಡ ವಾಲ್ಮೀಕಿ ರಾಮಾಯಣ. ಇದು ಎರಡು ಬೃಹತ್ ಸಂಪುಟಗಳಲ್ಲಿದೆ. ಮೂಲ ಸಂಸ್ಕೃತ ವಾಲ್ಮೀಕಿ ರಾಮಾಯಣದ ನೇರವಾದ ಕನ್ನಡ ಅನುವಾದವಿದು. ಹೊಸಗನ್ನಡ ವಾಙ್ಮಯಕ್ಕೆ ಇದು ಗಟ್ಟಿಕೊಡುಗೆ. ಎ.ಆರ್. ಕೃಷ್ಣಾಶಾಸ್ತ್ರಿಗಳ “ವಚನ ಭಾರತ’ದಂತೆ ಜನಪ್ರಿಯತೆಯನ್ನು ಗಳಿಸಬಲ್ಲ ಈ ಗ್ರಂಥ ವಿದ್ವಾಂಸರಿಗೂ ಉಪಯುಕ್ತ.

ಉಳಿದ ಗ್ರಂಥಗಳಲ್ಲಿ ‘ಪದ್ಮ ಪುರಾಣದ ಕಥೆ’ ಕೂಡ ಇದೇ ಹೆದ್ದಾರಿಯನ್ನು ತುಳಿದಿದ್ದರೆ ಅದರ ಪ್ರಯೋಜನ ಹೆಚ್ಚುತ್ತಿತ್ತು.

‘ಸಂಸ್ಕೃತ ವಾಙ್ಮಯಕ್ಕೆ ಜೈನ ಕವಿಗಳ ಕಾಣಿಕೆ’ ಕೃತಿಯೂ ಇನ್ನೂ ಪರಿಷ್ಕಾರ-ಗೊಳ್ಳುವುದಕ್ಕೆ ಅವಕಾಶವಿತ್ತು. ಅದರಲ್ಲಿ ಪರಿಚಯಿಸಿರುವ ಆಯಾ ಕವಿಯ ಕೃತಿಯಿಂದ ಉದಾಹರಣೆಗಾಗಿ ಅರಿಸಿಕೊಟ್ಟ ಕೆಲವಾದರೂ ಮಾದರಿ ಸಾಲುಗಳಿಲ್ಲದಿರುವುದರಿಂದ ಕವಿ ಮತ್ತು ಕೃತಿಯ ಪರಿಚಯ ಅಪೂರ್ಣವಾಗಿಯೇ ನಿಲ್ಲುತ್ತದೆ.

ಇಲ್ಲಿನ ಇನ್ನಿತರ ಗ್ರಂಥಗಳು ‘ತಕ್ಕಮಟ್ಟಿಗಿವೆ’ ಎಂಬ ಮಟ್ಟದಿಂದ ಮೇಲೇಳುವುದಿಲ್ಲ.

ಸಂಕ್ಷಿಪ್ತ ಇಂಗ್ಲಿಷ್ ಸಾಹಿತ್ಯ ಚರಿತ್ರೆ : “ಆದಷ್ಟು ಪ್ರಯತ್ನಪಟ್ಟು ಆಂಗ್ಲ ಸಾಹಿತ್ಯದ ಪ್ರಾರಂಭದ ಕಾಲದಿಂದ ಅಧುನಿಕ ಮನ್ವಂತರದವರೆಗೆ ಇಲ್ಲಿ ಅನೇಕ ಪ್ರಚಲಿತ ಗ್ರಂಥಗಳ ಆಧಾರದಿಂದ ಬರೆಯಲು ಹೆಣಗಲಾಗಿದೆ”-ಎಂದು ಎಸ್. ರಮಾನಂದರು ಸರಿಯಾಗಿಯೇ ಹೇಳಿದ್ದಾರೆ. ಅವರ ಹೆಣಗಾಣ ಪುಸ್ತಕದ ಪುಟ ಪುಟದಲ್ಲೂ ಪುಟಿಯುತ್ತದೆ. ಲೇಖಕರು ತಮ್ಮ ಗ್ರಂಥದ ಹಸ್ತಪ್ರತಿ ಸಿದ್ಧವಾದೊಡನೆಯೇ ಅಚ್ಚಿಗೆ ಕೊಡುವ ಮೊದಲು (ಅಥವಾ ಬದಲು) ಕನ್ನಡ ಬಲ್ಲವರಿಗೆ ಹಾಗೂ ಇಂಗ್ಲಿಷ್ ಸಾಹಿತ್ಯ ಚೆನ್ನಾಗಿ ತಿಳಿದವರಿಗೆ ತೋರಿಸಿ, ತಿದ್ದಿಸಿ, ಪರಿಷ್ಕರಿಸಿ ಪ್ರಕಟಿಸಿದ್ದಾರೆ ಮಹದುಪಕಾರ ಮಾಡಿದಂತೆ ಆಗುತ್ತಿತ್ತು.

“ಸಾಮಾನ್ಯ ಓದುಗನಿಗಲ್ಲದೆ (ಮುಖ್ಯವಾಗಿ ಕನ್ನಡ) ಇತರ ವಿದ್ಯಾರ್ಥಿಗಳಿಗೂ ಈ ಹೊತ್ತಗೆ ಗ್ರಾಹ್ಯವೆನಿಸುವುದೆಂದು ನಮಗೆ ಇದೆ. ಕಾಲೇಜು ವಿದ್ಯಾರ್ಥಿಗಳಿಗಂತೂ ಇದು ಒಳ್ಳೆ ಉಪಯುಕ್ತಗಾಗಿದೆಯೆಂದು ಹೇಳದಿರೆವು” – ಎಂಬ ತಪ್ಪುಗ್ರಹಿಕೆ ಬೇರೆ ಲೇಖಕರು ತಳೆದಿರುವುದು ವಿಷಾದನೀಯ ಇದು ‘ಒಳ್ಳೆ ನಿರುಪಯುಕ್ತವಾಗಿರುವುದಷ್ಟೇ’ ಅಲ್ಲ ಓದುಗರನ್ನು ತಪ್ಪುದಾರಿಗೆಳೆದು ಇಕ್ಕಟ್ಟಿನಲ್ಲಿ ಸಿಕ್ಕುಹಾಕುವ ಭೀತಿಯಿದೆ.

ಇಲ್ಲಿಯ ಚಾರಿತ್ರಿಕ ಅಂಶಗಳು ರಸಿಕ ಓದುಗರಿಗೆ ತುಂಬ ಹಿಡಿಸೀತು -ಎನ್ನುತ್ತಾರೆ, ಇದೆಂಥ ಅಭ್ಯಾಸದ ಹೇಳಿಕೆಯೆಂಬ ಸ್ವಲ್ಪ ಕಲ್ಪನೆಯೂ ಲೇಖಕರಿಗೆ ಇದ್ದಂತೆ ತೋರುವುದಿಲ್ಲ ಮೊದಲನೆಯದಾಗಿ ಇದು ಸಾಹಿತ್ಯ ಚರಿತ್ರೆ. ಎರಡನೆಯದಾಗಿ ಸಾಹಿತ್ಯಕ್ಕೇ ಇಲ್ಲಿ ಮುಖ್ಯ ಪ್ರಾಶಸ್ತ್ಯ. ಹೋಗಿರುವಾಗ ಚಾರಿತ್ರಿಕ ಅಂಶಗಳು – ಸಾಹಿತ್ಯ ಚರಿತ್ರೆ – ರಸಿಕ ಓದುಗರು – ಇವುಗಳ ಧ್ರುವಗಳ ಅಂತರವನ್ನು ಸಾರುತ್ತವೆ. ಚಾರಿತ್ರಿಕಾಂಶಗಳು ರಸಿಕ ಓದುಗರಿಗೆ ತುಂಬ ಹಿಡಿಸುವುದು ಹೇಗೆ ಎಂಬುದು ಅರ್ಥವಾಗದು.

ಲೇಖಕರಿಗೆ ಕನ್ನಡದ ಪರಿಚಯ ಏನೇನೂ ಸಾಲದು. ಆದುದರಿಂದ ಅದರ ವಿಚಾರ ಪ್ರಸ್ತಾಪಿಸುವುದು ಅನಗತ್ಯ. ಇಂಗ್ಲಿಷಿನ ಪರಿಚಯವೂ ಸರಿಯಾಗಿ ಇದ್ದಂತೆ ತೋರದು. ಸಂಸ್ಕೃತ ಶಬ್ದಗಳ ಬಳಕೆಯಲ್ಲಿ ಹವಣು ಇಲ್ಲ. ಶಬ್ದಗಳ ದುಂದುಗಾರಿಕೆ ದಂಗು ಬಡಿಸುತ್ತದೆ. ಹೆಕ್ಕಿದಲ್ಲಿ ಸಿಕ್ಕುವ ಮುದ್ರಣ ಸ್ಖಾಲಿತ್ಯಗಳ ಮಾತಂತಿರಲಿ, ಪ್ರತಿ ಪುಟದಲ್ಲೂ ಪ್ರಯೋಗವಾಗಿರುವ ಶಿಥಿಲ ವಾಕ್ಯಗಳೂ, ಅಪಶಬ್ದಗಳೂ ಕಣ್ಣಿಗೆ ರಾವು ಬಡಿಯುತ್ತವೆ : ಉದಾ : ಪ್ರಾಶಸ್ತಿ, ಕೆಲವುಗಳಂತೂ, ಶತಮಾನುಸಾರ, ಅಲ್ಪ್ರೇಡು, ರಸಮಾಧುರಿ, ಹೇಳಿಕೆಗಳಲ್ಲಿ ಹಾಳೆಯಿಂದ ಹಾಳೆಗೆ (ಒಮ್ಮೊಮ್ಮೆ ಒಂದೇ ಹಾಳೆಯಲ್ಲಿ) ವಿರೋಧಾಭಾಸಗಳು ಹೇರಳ.

ಅಸ್ಪಷ್ಟತೆ ಲೇಖಕರ ದೀರ್ಘ ವಾಕ್ಯಗಳ ವೈಶಿಷ್ಟ್ಯ. ವಾಕ್ಯದಿಂದ ವಾಕ್ಯಕ್ಕೆ ಇದ್ದಿರಬಹುದಾದ ಹೊಂದಾಣಿಕೆಯನ್ನು ಹುಡುಕಬೇಕಾಗುತ್ತದೆ. ಅವರು ಒಟ್ಟಾರೆ ಏನು ಹೇಳುವರೆಂಬುದೇ ಹಲವು ಸಲ ತಿಳಿಯಲಾಗುವುದಿಲ್ಲ.

ಇದ್ದಕ್ಕಿದ್ದ ಹಾಗೆ ಆಶ್ಚರ್ಯ ಸೂಚಕ ಚಿಹ್ನೆಗಳು ರಾರಾಜಿಸುತ್ತವೆ. ಪುನರುಕ್ತಿಯಂತೂ ವಿಪರೀತ. “೧೪ನೆಯ ಶತಮಾನದಲ್ಲಿ ಎಂದರೆ ಆಂಗ್ಲ ಭಾಷೆಗೊಂದು ಸುವ್ಯವಸ್ಥಿತ ಸ್ವರೂಪ ಉಂಟಾಯಿತು” (ಪು.೧). ಇಲ್ಲಿ ‘ಎಂದರೆ’ ಎಂಬ ಶಬ್ದಪ್ರಯೋಗದ ಅಗತ್ಯವೇನು? “ಅಂತೆಯೇ ಒಂದು ತೂಕ” ಅವನು ಹಿಡಿದದ್ದು ನಮಗೆ ಗೋಚರಿಸುವುದು” (ಪು. ೧೦)- ಈ ವಾಕ್ಯ ಅರ್ಥವಾಗದು. “ಬೇಜಾರು ಸೋಂಕಾಂಶದಲ್ಲಿಯೂ ತಲೆತೋರದು” (ಪು. ೧೪), “ನಿಷ್ಪ್ರಹಿ ನಾಟಕೀಯತೆ” (ಪು. ೧೫), “ಪ್ರರೂಢಪ್ರದೀರ್ಘ” – ಎಂಬ ರೂಪ ಇವರಿಗೆ ಪ್ರಿಯ. ಅಂತೂ ದೋಷಗಳ ರಾಶಿ ಹೊತ್ತು ಗ್ರಂಥ ನೀರಸವೂ, ಕೊರತೆಗಳ ಒರತೆಯೂ ಆಗಿದೆ. ಈ ಪುಸ್ತಕ ಓದಿ ಮುಗಿಸಿದ ವಿಮರ್ಶಕನಿಗೆ ಅನ್ನಿಸುವುದು; ಲೇಖಕರು ಯಾವುದಾದರೂ ಒಂದು ಉತ್ತಮವೆಂದು ಮಾನ್ಯವಾದ ಇಂಗ್ಲಿಷಿನಲ್ಲೇ ರಚಿತವಾದ ಸಾಹಿತ್ಯ ಚರಿತ್ರೆಯನ್ನು ನೇರವಾಗಿ ಅನುವಾದ ಮಾಡಿ, ಅನುವಾದವನ್ನು ಕನ್ನಡ ಬಲ್ಲವರಿಗೊಮ್ಮೆ ಅಮೂಲಾಗ್ರ ತೋರಿಸಿ ಪ್ರಕಟಿಸಬೇಕಿತ್ತು.

ಸಂಸ್ಕೃತವಾಙ್ಮಯಕ್ಕೆ ಜೈನ ಕವಿಗಳ ಕಾಣಿಕೆ : ಕನ್ನಡ ಸಾಹಿತ್ಯದ ಮೊದಲ ಕೆಲವು ಶತಮಾನಗಳ ಸಾಹಿತ್ಯ ಕೃಷಿಯೆಲ್ಲ ಜೈನ ಕವಿಗಳಿಂದಲೇ ನಡೆದಿರುವುದನ್ನು ಕುರಿತು ಸಾಕಷ್ಟು ಬರೆಹ ಬಂದಿದೆ. ಇದರಂತೆ ತಮಿಳು ಸಾಹಿತ್ಯದಲ್ಲೂ ನಡೆದಿದೆ. ಆದರೆ ಸಂಸ್ಕೃತ ಸಾಹಿತ್ಯಕ್ಕೆ ಜೈನ ಕವಿಗಳ ಆಚಾರ್ಯರ ಕಾಣಿಕೆ ಏನೆಂಬುದರ ಬಗೆಗೆ ಹೆಚ್ಚಿನ ಬರೆಹವಿಲ್ಲ. ಕನ್ನಡದಲ್ಲಂತೂ ಅಂತಹ ಒಂದು ಹೊತ್ತಗೆಯ ಅಗತ್ಯವಿತ್ತು. ಈ ಗ್ರಂಥ ಅಂಥ ಒಂದು ಬೇಡಿಕೆಯನ್ನು ಸಮರ್ಥವಾಗಿ ಪೂರೈಸುತ್ತದೆ.

ಲೇಖಕರಾದ ಕೆ. ಭುಜಬಲಿಶಾಸ್ತ್ರಿಗಳು, ಸಿದ್ಧಾಂತಾಚಾರ್ಯ ನ್ಯಾಯಭೂಷಣ ಪಂಡಿತ ಮೊದಲಾದ ಉಪಾಧಿಪಾತ್ರರು. ಸಹಜವಾಗಿಯೇ ಬಹುಭಾಷಾ ವಿಶಾರದರಾಗಿರುದರ ಜೊತೆಗೆ ಜೈನಾಗಮನಗಳನ್ನೂ, ಸಾಹಿತ್ಯ ಶಾಸ್ತ್ರಗಳನ್ನೂ, ಪರಂಪರೆಯ ಪದ್ಧತಿಯಲ್ಲಿ ಕ್ರಮವಾಗಿ ಕಲಿತವವರು, ಜೈನಾಚಾರ್ಯರ ಬದುಕೂ ಕೃತಿಗಳೂ ಶಾಸ್ತ್ರಿಗಳಿಗೆ ಕರತಲಾಮಲಕ. ಹೀಗಾಗಿ ಈ ಹೊತ್ತಗೆ ಬರೆಯಲು ಅವರಿಗೆ ಎಲ್ಲ ಸಿದ್ಧತೆ, ಆರ್ಹತೆ ಇದೆ. ಫಲವಾಗಿ ಗ್ರಂಥ ಉಪಯುಕ್ತವಾಗಿ ರೂಪಗೊಂಡಿದೆ.

ಹಳಗನ್ನಡ ಜೈನ ಕಾವ್ಯಗಳನ್ನು ಬೋಧಿಸುವವರಿಗೆ ಈ ಗ್ರಂಥದಿಂದ ಆಗುವ ಪ್ರಯೋಜನ ಅಪಾರ. ಸಾಮಾನ್ಯವಾಗಿ ಪ್ರತಿ ಜೈನ ಪುರಾಣದಲ್ಲೂ ಪ್ರಾರಂಭದಲ್ಲಿ ಪುರಾತನ ಜೈನಾಚಾರ್ಯರ ಸ್ತುತಿಯಿರುತ್ತದೆ. ಅವರ ಕಾಲ-ಕೃತಿಗಳನ್ನು ತಿಳಿಯಲು ಸಹಾಯಕ ಸಾಮಗ್ರಿ ತೀರ ಕಡಮೆ. ಈ ಗ್ರಂಥ ಆ ವಿಚಾರದಲ್ಲಿ ನೆರವಿಗೆ ಒದಗಿಬರುತ್ತದೆ.

ಸ್ಥೂಲವಾಗಿ ಕ್ರಿಸ್ತಶಕ ಆರಂಭದಿಂದ ಹದಿನೆಂಟನೆಯ ಶತಮಾನದ ತನಕ ಆಗಿ ಹೋದ ಪ್ರಮುಖ ಜೈನ ಸಂಸ್ಕೃತ ಲೇಖಕರ ಪರಿಚಯ ಇದರಲ್ಲಿದೆ. ಅವರಲ್ಲಿ ಕೆಲವರಿಗೆ ಸಂಬಂಧಿಸಿದಂತೆ ಹೆಚ್ಚು ಚಾರಿತ್ರಿಕ ಉಲ್ಲೇಖಗಳು ಉಪಲಬ್ದವಿಲ್ಲ. ಕೆಲವು ಆಚಾರ್ಯವನ್ನು ಕುರಿತು ಕಥೆಗಳೂ ಕಲ್ಪನೆಗಳೂ ಕೋಡಿವರಿದಿವೆ. ಗೌರವದ ಅಧಿಕ್ಯದಿಂದ ಜನತೆ ಅವರನ್ನು ಪವಾಡಪುರುಷರನ್ನಾಗಿ ಮಾಡಿರುವುದೂ ಉಂಟು. ಇಂತಹ ಕಡೆಗಳಲ್ಲಿ ಪ್ರಮಾಣವೆಂದೂ ಯಾವುದನ್ನೂ ಅಂಗೀಕರಿಸಬೇಕೆಂಬುದು ಕಷ್ಟ ಸಾಧ್ಯ ತೀರ್ಮಾನ. ಈ ಗ್ರಂಥದಲ್ಲಿ ಅಂಥ ವಿಚಾರದಲ್ಲಿ ಸಂಭಾವ್ಯ ಅಂಶಗಳಿಗೆ ಆದ್ಯತೆಯಿತ್ತು ಉಳಿದ ಉತ್ಪ್ರೇಕ್ಷೆಗಳಿಗೆ ಆದಷ್ಟೂ ಕತ್ತರಿಪ್ರಯೋಗ ಮಾಡಿರುವುದು ಸೂಕ್ತ ತೀರ್ಮಾನ.

ಲೇಖಕರೂ ನಿರೂಪಣೆ ಶುಷ್ಕವಾಗದಂತೆ ಪ್ರಯತ್ನಿಸಿದ್ದಾರೆ. ಶೈಲಿ ತಿಳಿಯಾಗಿದ್ದರೂ ಒಮ್ಮೊಮ್ಮೆ ಇಂದಿನ ಕಾಲದ್ದೆಂದು ಅನಿಸುವುದಿಲ್ಲ. ಮೂಲಕೃತಿಗಳಿಂದ ಆಯಾ ಲೇಖಕರ ಶಕ್ತಿಯನ್ನು ಬಿಂಬಿಸುವ ಉಕ್ತಿಗಳನ್ನೂ ಶ್ಲೋಕ – ಗದ್ಯಗಳನ್ನು ಇನ್ನೂ ಉದಾಹರಿಸಬೇಕಿತ್ತು.

ಪ್ರತಿಯೊಂದು ಪರಿಚಯ ಲೇಖನದ ಕಡೆಯಲ್ಲೂ ಆಯಾ ಆಚಾರ್ಯರ ಒಟ್ಟು ಕೃತಿಗಳ ಅಕಾರಾದಿ ಪಟ್ಟಿಯನ್ನೂ, ಅವುಗಳಿಗೆ ಸಂಬಂಧಿಸಿದಂತೆ ಭಾರತೀಯ ಸಾಹಿತ್ಯದಲ್ಲಿ, ಕಡೆಗೆ ಕನ್ನಡದಲ್ಲಿಯಾದರೂ, ಇದುವರೆಗೆ ಬಂದಿರುವ ಸಾಹಿತ್ಯ ಕೃತಿ ಲೇಖನಗಳ ವಿವರನ್ನೂ ಕೊಡಬೇಕಿತ್ತು. ಮತ್ತು ಸಂಸ್ಕೃತ ಜೈನ ಕವಿಗಳ ಕೃತಿಗಳು ಪ್ರಕಟಿತ ಯಾ ಅಪ್ರಕಟಿತ ವಿವರ ಬೇಕಿತ್ತು. ಪ್ರಕಟವಾಗಿದ್ದರೆ ಪ್ರಕಾಶಕರು, ಸಂಪಾದಕರು ಪ್ರಕಟನೆಯಾದ ವರ್ಷ. ಬೆಲೆ ಮೊದಲಾದವನ್ನು ತಿಳಿಸಬಹುದಿತ್ತು. ಅದರಂತೆ ಗ್ರಂಥಕ್ಕೆ ಸಂಬಂಧಿಸಿದಂತೆ ಇದರ ಅಂತ್ಯದಲ್ಲಿ ಅನುಬಂಧವಾಗಿ ಇದರಲ್ಲಿ ಬಂದಿರುವ ವ್ಯಕ್ತಿ ಹಾಗೂ ಕೃತಿಗಳ ಅಕಾರಾದಿ ಅಗತ್ಯ ಬೇಕಿತ್ತು ಗ್ರಂಥದ ಪ್ರಯೋಜನವನ್ನು ಹೆಚ್ಚಿಸುವ ದೃಷ್ಟಿಯಿಂದ ಇವೆಲ್ಲ ಗಮನಾರ್ಹ. ಪುಟ ೧೮೭ರಲ್ಲಿ ಕಡೂರು ಜಿಲ್ಲೆ ಎಂಬುದು ಈಗಿಲ್ಲ. ಇದು ಚಿಕ್ಕಮಗಳೂರು ಜಿಲ್ಲೆ ಆಗಬೇಕು. ಅಲ್ಲೇ ಮಧುಗಿರಿ ತಾ. ಎಂಬುದು ಮೂಡಿಗೆರೆ ತಾಲ್ಲೂಕು ಎಂದು ತಿದ್ದುಪಡಿ ಆಗಬೇಕು.

ಲೇಖಕರ ವೈದುಷ್ಯವನ್ನು ಗ್ರಂಥದುದ್ದಕ್ಕೂ ಕಾಣುತ್ತೇವೆ. ಸಂಸ್ಕೃತ, ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಗಳ ಗ್ರಂಥಗಳನ್ನು ಶಾಸನಗಳನ್ನೂ ವಿಪುಲವಾಗಿ ಉಪಯೋಗಿಸಿ ಕೊಂಡಿದ್ದಾರೆ. ಸುಮಾರು ಮುವ್ವತ್ತೈದು ಜೈನ ಸಂಸ್ಕೃತ ಕವಿಗಳ ಜೀವನದ ಜೊತೆಗೆ ಸಾಹಿತ್ಯದ ಪರಿಚಯ ಮಾಡುವಾಗ ತನ್ಮಯರಾಗಿಬಿಡುತ್ತಾರೆ. ಅಲ್ಲದೆ ಪ್ರತಿಯೊಬ್ಬ ಜೈನ ಕವಿಯ ವಿಚಾರ ಬರೆಯುವಾಗಲೂ ಸಮಕಾಲೀನ ಸಚಾರ್ಯರ ವಿವರವೂ ಬಂದಿರುವುದು ಪ್ರಶಂಸನೀಯ. ಆದರಿಂದ ಓದುಗರಿಗೆ ಮುಂದಿನ ಅಳವಾದ ಅಭ್ಯಾಸಕ್ಕೆ ಅನುಕೂಲವಿದೆ.

ಪ್ರಾರಂಭದ ನಾಲ್ಕು ಅಧ್ಯಾಯಗಳಲ್ಲಿ ಜೈನಾಚಾರ್ಯರ ಪರಂಪರೆಯನ್ನೂ, ಸಂಘ (ಮೂಲ ಸಂಘ ಇತ್ಯಾದಿ) ಪರಂಪರೆಯನ್ನೂ, ಗ್ರಂಥಲೇಖನ ಪದ್ಧತಿ ಶ್ರುತ ಜ್ಞಾನದ ಸ್ಥಾಪನೆಯನ್ನೂ ಜೊತೆಗೆ ಶ್ರುತಜ್ಞಾನದ ವಿವರಣೆಯನ್ನೂ ತಿಳಿಸಿದ್ದಾರೆ. ಇದರಿಂದ ಉಳಿದ ಅಧ್ಯಾಯಗಳಲ್ಲಿ ಬರುವ ಕವಿಗಳನ್ನೂ ಅಲ್ಲಿನ ಪರಿಭಾಷೆಯನ್ನೂ ಅರಿತುಕೊಳ್ಳಲು ನೆರವಾಗುತ್ತದೆ.

ಪ್ರಾಸಂಗಿಕವಾಗಿ ಇತರ ಅನೇಕ ವಿಷಯಗಳ ಉಲ್ಲೇಖ ಬಂದಿದೆ. ಸಾಂಸ್ಕೃತಿಕ ಅಧ್ಯಯನದ ವಿದ್ಯಾರ್ಥಿಗಳಿಗೆ ಎದುರಾಗುವ ಸಂಘ, ಗಣ, ಗಚ್ಚ, ಪಿಂಭ, ಯಾಪನೀಯ ಪಂಥ-ಮೊದಲಾದವಕ್ಕೂ ಇಲ್ಲಿ ನೆರವಾಗುವ ವಿವರಣೆಯಿದೆ (ಪು. ೪, ೫, ೬)