ಮದರಾಸು ಕನ್ನಡಿಗರ ಈ ಸಮ್ಮೇಳನದಲ್ಲಿ ಆಹ್ವಾನಿತ ಅತಿಥಿಯಾಗಿ ಭಾಗವಹಿಸಲು ಸಂತೋಷವೆನಿಸುತ್ತಿದೆ. ಸಂತೋಷಕ್ಕೆ ಸಾಕಷ್ಟು ಕಾರಣಗಳಿವೆ. ಮೊದಲನೆಯದಾಗಿ ಬಹಳ ಕಾಲದ ಮೇಲೆ ಮದರಾಸಿನಲ್ಲಿ ಕನ್ನಡಿಗರ ಇಂಧದೊಂದು ಬೃಹತ್ ಪ್ರಮಾಣದ ಸಾಂಸ್ಕೃತಿಕ ಹಾಗೂ ಸಂಘಟಿತ ಕಾರ್ಯಕ್ರಮ ನಡೆಯುತ್ತಿವೆ. ಕನ್ನಡ ನಾಟಕಗಳಿಗೆ ದಿವ್ಯ ತಿರುವು ನೀಡಿದ ಮಹಾನ್ ನಾಟಕಕಾರ ತ್ಯಾಗರಾಜ ಪರಮಶಿವ ಕೈಲಾಸಂ ಅಧ್ಯಕ್ಷತೆಯಲ್ಲಿ ೨೯ನೆಯ ಸಾಹಿತ್ಯ ಸಮ್ಮೇಳನದ ಇಲ್ಲಿ ನಡೆದದ್ದು ೧೯೪೫ರಲ್ಲಿ. ಕೈಲಾಸಂ ಮನೆಮಾತು ತಮಿಳು. ಅವರ ಪ್ರೌಢಶಾಲೆಯ ಕಲಿಕೆ ಮುಗಿದದ್ದು ಇಲ್ಲಿ. ಪ್ರೌಢ ಶಿಕ್ಷಣ ಮದರಾಸು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಆಯಿತು. ಹೀಗಾಗಿ ಮದರಾಸಿನಲ್ಲ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅವರು ಆಯ್ಕೆಯಾದದ್ದು ಔಚಿತ್ಯಪೂರ್ಣವಾಗಿತ್ತು.

ಆ ೧೯೪೫ರ ಸಮ್ಮೇಳನದ ಏರ್ಪಾಟಿನ ಹೊಣೆ ಹೊತ್ತ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದವರು ಡಾ|| || ಉಡುಪಿ ರಾಮರಾಯರು, ಕಾರ್ಯದರ್ಶಿಯಾಗಿದ್ದವರು ಪಡುಕೋಣೆ ರಮಾನಂದರು. ಅಂದು ಮದರಾಸಿನಲ್ಲಿ ಸುಪ್ರಸಿದ್ಧ ವೈದ್ಯರಾಗಿದ್ದ ಡಾ|| || ಯು.ರಾಮರಾಯರು ಕರ್ನಾಟಕ ಏಕೀಕರಣದ ಕಟ್ಟಾ ಬೆಂಬಲಿಗರು; ಶ್ರೀ ಜಿನರಾಜ ಹೆಗ್ಗಡೆಯವರೊಡನೆ ಸಹಕರಿಸಿದವರು. ಮಂಗಳೂರಿನಿಂದ ‘ರಾಷ್ಟ್ರ ಬಂಧು’ ಪತ್ರಿಕೆ ನಡೆಯಲು ಮುಖ್ಯ ಕಾರಣರೂ ಆಧಾರಸ್ತಂಭವಾದವರೂ ಅವರೇ. ದಕ್ಷಿಣ ಕನ್ನಡ ಜಿಲ್ಲೆಗೆ ಮದರಾಸು-ಮುಂಬೈ ಎರಡು ಕಣ್ಣು. ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರಗೆ ಹೊರಟವರು ಆಶ್ರಯ ಪಡೆದು ಬಾಳುತ್ತಿದ್ದುದು ಈ ಎರಡು ಮಹಾನ್ ನಗರಗಳಲ್ಲಿ ಮದರಾಸಿನಲ್ಲಿರುವ ಸುಮಾರು ಮೂರು ಲಕ್ಷ ಜನ ಕನ್ನಡಿಗರಲ್ಲಿ ಎರಡು ಲಕ್ಷ ಜನ ದಕ್ಷಿಣ ಕನ್ನಡದವರು; ಮುಂಬಯಿಯಲ್ಲಿರುವ ಸುಮಾರು ಏಳು ಲಕ್ಷ ಜನ ಕನ್ನಡಿಗರಲ್ಲಿ ಐದು ಲಕ್ಷ ಜನ ದಕ್ಷಿಣ ಕನ್ನಡದವರು.

ಹೀಗೆ ಮದರಾಸಿಗೆ ಬಂದು ನೆಲಸಿದ ಉಡುಪಿಯ ರಾಮರಾಯರು ಇಲ್ಲಿನ ಜನಜೀವನದಲ್ಲಿ ಹಾಸುಹೊಕ್ಕಾದರು, ರಾಜಕೀಯ ಧುರೀಣರಾದರು. ಜನತೆಯ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿ ಪ್ರತಿಷ್ಠರಾಗಿ ವರ್ಧಿಷ್ಣುವಾದರು. ಈ ಮಹಾನಗರ ಶಾಸನ ಸಭೆಯ ಅಧ್ಯಕ್ಷರಾಗಿ ರಾಜಾಜಿಯ ಮೆಚ್ಚುಗೆಗಳಿಸಿದರು. ಅವರ ಅಳಿಯ ಕೆ.ಆರ್. ಆಚಾರ್ ಕೂಡ ‘ರಾಷ್ಟ್ರ ಬಂಧು’ ಪತ್ರಿಕೆಯ ಬೆನ್ನೆಲುಬಾಗಿದ್ದುದಲ್ಲದೆ ಲೋಕಸಭಾ ಸದಸ್ಯರೂ ವಿಧಾನ ಪರಿಷತ್ ಸದಸ್ಯರೂ ಆಗಿದ್ದರು. ಅವರ ಮಗ ಇಂದಿಗೂ ಮದರಾಸಿನಲ್ಲಿ ಜನಾನುರಾಗಿ ವೈದ್ಯರಾಗಿದ್ದು ಇಂದಿನ ಸಭೆಯಲ್ಲಿ ಸನ್ಮಾನಿತರಾಗಿದ್ದಾರೆ. ಈ ಎಲ್ಲ ವಿಷಯವನ್ನು ಮತ್ತಷ್ಟು ವಿಸ್ತರಿಸಲು ಇದು ತಕ್ಕ ಸಂದರ್ಭವಲ್ಲವಾದ್ದರಿಂದ ಸದ್ಯಕಿಷ್ಟು ಸಾಕೆಂದು ತಿಳಿಯುತ್ತೇನೆ. ಈ ಹಿನ್ನೆಲೆಯಲ್ಲಿ ಡಾ|| || ಯು.ಆರ್. ರಾಯರ ಹೆಸರನ್ನು ಇಂದಿನ ಸಮ್ಮೇಳನ ನಡೆಯುತ್ತಿರುವ ಕಲಾಮಂಟಪಕ್ಕೆ ಇಟ್ಟಿರುವುದು ಸಮಯೋಚಿತವಾಗಿದೆ ಎಂಬುದನ್ನು ಮನವರಿಕೆ ಮಾಡುವುದು ನನ್ನ ಪ್ರಧಾನ ಉದ್ದೇಶ.

ಇನ್ನು ಈ ವೇದಿಕೆಗೆ ನೀವು ನಾಮಕರಣ ಮಾಡಿರುವ ಹೆಸರುಗಳ ಸಮಂಜಸತೆ ಕುರಿತೂ ಎರಡು ಮಾತು ಹೇಳಬೇಕೆನಿಸುತ್ತದೆ. ಪ್ರೊ|| || ಎಂ. ಮರಿಯಪ್ಪ ಭಟ್ಟರು ಮದರಾಸಿಗೂ ಕರ್ನಾಟಕಕ್ಕೂ ರಸಸೇತುವೆಯಾಗಿದ್ದರು. ಮೈಸೂರು ಪ್ರದೇಶದಲ್ಲಿ, ವಿಶ್ವವಿದ್ಯಾಲಯದಲ್ಲಿ ಯಾವುದೇ ಕನ್ನಡ ದೊಡ್ಡ ಸಮಾರಂಭವಾದರೂ ನೇಮಕಕ್ಕೆ ಸಂದರ್ಶನವಾದರೂ ಪರೀಕ್ಷಾ ಮಂಡಲಿಗಳಿದ್ದರೂ ಮರಿಯಪ್ಪ ಭಟ್ಟರು ಇದ್ದೇ ಇರಬೇಕು! ಭಟ್ಟರಿಲ್ಲದೆ ಮದುವೆ ಹೇಗೆ ನಡೆಯದೊ ಹಾಗೆ ಮರಿಯಪ್ಪ ಭಟ್ಟರಿಲ್ಲದೆ ವಿಶ್ವವಿದ್ಯಾನಿಲಯದ ಕನ್ನಡ ಹುದ್ದೆಯ ಸಂದರ್ಶನ ನಡೆಯುತ್ತಿರಲಿಲ್ಲ ಎಂದು ಹೇಳಿದರೆ ಅದು ಉತ್ಪ್ರೇಕ್ಷಾಲಂಕಾರವಾಗದೆ ಸ್ವಭಾವೋಕ್ತಿಯಾಗಿರುತ್ತದೆ. ತಮ್ಮ ಸರಳ ಸ್ವಭಾವದಿಂದ, ಸರಸ ಸಜ್ಜನಿಕೆಗಳಿಂದ ಅವರು ಮದರಾಸು ವಿಶ್ವವಿದ್ಯಾನಿಲಯದಲ್ಲಿ ಜನಪ್ರಿಯ ಪ್ರಾಧ್ಯಾಪಕರಾಗಿದ್ದರು.

ಅವರಿಂದಾಗಿ ಅಲ್ಲಿನ ಕನ್ನಡ ವಿಭಾಗಕ್ಕೆ ವಿಶೇಷ ಮರ್ಯಾದೆಯೂ ಸಲ್ಲುತ್ತಿತ್ತು. ಆಗಿನ ದಕ್ಷ ಕುಲಪತಿ ಡಾ||  ಲಕ್ಷ್ಮಣಸ್ವಾಮಿ ಮೊದಲಿಯಾರರಂತೂ ಭಟ್ಟರನ್ನು ಗೌರವದಿಂದ ಕಾಣುತ್ತಿದ್ದರು. ಹಲವಾರು ಮೌಲಿಕ ಕನ್ನಡ ಪುಸ್ತಕಗಳ ಪ್ರಕಟಣೆ ಮದರಾಸು ವಿಶ್ವವಿದ್ಯಾನಿಲಯದಿಂದ ಹೊರಬರಲು ಸಾಧ್ಯವಾದದ್ದು ಅವರ ಪ್ರಯತ್ನದಿಂದ, ಎಂ. ವೆಂಕಟರಾವ್ ಮತ್ತು ಎಚ್. ಶೇಷಅಯ್ಯಂಗಾರ್ ಸಂಪಾದಕತ್ವದಲ್ಲಿ ಸುಮಾರು ಹತ್ತು ಹಳಗನ್ನಡ ಗ್ರಂಥಗಳು ಅಚ್ಚಾಗಿದ್ದವು. ಅನಂತರ ೧೯೪೫ರಿಂದ ೧೯೬೯ರವರೆಗೆ ಭಟ್ಟರ ನೇತೃತ್ವ ದೊರೆತ ಕನ್ನಡ ವಿಭಾಗದಿಂದ ಎಂ.ಗೋವಿಂದರಾಯರ ಸಹಸಂಪಾದಕತ್ವದಲ್ಲಿ ನಾಲ್ಕು ಪ್ರಾಚೀನ ಕೃತಿಗಳು ಮುದ್ರಣವಾದುವು. ತುಳು-ಇಂಗ್ಲಿಷ್ ಮತ್ತು ಕಿಟ್ಟೆಲರ ಕನ್ನಡ-ಇಂಗ್ಲಿಷ್ ನಿಘಂಟುಗಳು ಪರಿಷ್ಕೃತಗೊಂಡು ಮರುಮುದ್ರಣವಾದದ್ದು ಸಾಹಸದ ಪಾಂಡಿತ್ಯ ಕಾರ್ಯವಾಗಿತ್ತು. ಅವರು ಹಾಕಿ ಕೊಟ್ಟ ಕಾರ್ಯವನ್ನು ಮುಂದುವರಿಸುವುದು ಅಲಭ್ಯವಾಗಿರುವ ಈ ಗ್ರಂಥಗಳನ್ನು ಪುನರ್ ಮುದ್ರಿಸುವ ಯೋಜನೆಯನ್ನು ಹಮ್ಮಿಕೊಂಡು, ಕನ್ನಡ ವಿಭಾಗ ಮತ್ತು ಅದರ ಚಟುವಟಿಕೆಗಳು ಮತ್ತೆ ಚೈತನ್ಯಪೂರ್ಣವಾಗಿ ಕ್ರಿಯಾಶೀಲವಾಗುವಂತೆ ಮಾಡುವುದು ಡಾ|| ಕೆ.ಕುಶಾಲಪ್ಪ ಗೌಡರಿಗೂ ಡಾ|| ಕೃಷ್ಣಭಟ್ಟ ಅರ್ತಿಕಜೆಯವರಿಗೂ ಸೇರಿದ ಜವಾಬ್ದಾರಿಯಾಗಿದೆ.

ಈ ವೇದಿಕೆಯ ಇನ್ನೊಂದು ಹೆಸರಾದ ಡಾ||  ಬಿ.ಜಿ.ಎಲ್. ಸ್ವಾಮಿಯವರಂತೂ ಒಬ್ಬ ಶಕಪುರುಷನಂತೆ ಆಗಿ ಹೋದ ಮಹಾಮೇಧಾವಿ. ಹೊಸಗನ್ನಡ ದಿಗ್ಗಜಗಳಲ್ಲಿ ಒಬ್ಬರಾದ ಡಿ.ವಿ.ಜಿ.ಯವರ ಏಕೈಕ ಸುಪುತ್ರರಾದ ಬಿ.ಜಿ.ಎಲ್. ಸ್ವಾಮಿ ತಂದೆಗೂ ಮೀರಿದ ಮಿಂಚಿದ ಪ್ರತಿಭಾಶಾಲಿ. ಮದರಾಸು ಪ್ರೆಸಿಡಿನ್ಸಿ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಅವರು ದಾಖಲೆಗಳ ಪವಾಡ ಪುರುಷರಾಗಿದ್ದಾರೆ. ಸಸ್ಯವಿಜ್ಞಾನ ಕ್ಷೇತ್ರದಲ್ಲಿ ಅವರು ಮಾಡಿರುವ ಸಂಶೋಧನೆಗಳೂ ಇನ್ನೂ ನೂರು ವರ್ಷ ಅಬಾಧಿತವಗಿ ಪ್ರಶ್ನಾತೀತವಾಗಿ ನಿಲ್ಲುತ್ತವೆಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪ್ರಶಸ್ತಿ ಪಡೆದು ತಯಾರಾದ ಒಂದು ದೊಡ್ಡ ತಂಡವೇ ಇದೆ. ವಿಜ್ಞಾನಿಯಾಗಿ ಹೀಗೆ ನೂತನ ಕಿಲೊಗಲ್ಲುಗಳನ್ನು ಸ್ಥಾಪಿಸಿದ ಸ್ವಾಮಿ ಸಾಹಿತ್ಯ ಕ್ಷೇತ್ರದಲ್ಲೂ ಅನನ್ಯರು. ಕಾಲೇಜುರಂಗ, ಕಾಲೇಜುತರಂಗ, ಪಂಚಕಲಶ ಗೋಪುರ, ಹಗುರು ಹೊನ್ನು, ತಮಿಳು ತಲೆಗಳ ನಡುವೆ, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ, ಸಾಕ್ಷಾತ್ಕಾರದ ಹಾದಿಯಲ್ಲಿ – ಮೊದಲಾದ ಕೃತಿಗಳೂ ವಿಜ್ಞಾನಿಯೊಬ್ಬ ಕನ್ನಡಕ್ಕಿತ್ತ ವಿಶಿಷ್ಟ ಕೊಡುಗೆಗಳಾಗಿವೆ. ಹಸುರು ಹೊನ್ನು ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅವರ ಮರಣೋತ್ತರ ಪ್ರಕಟಣೆಯಾದ ಫಲಶ್ರುತಿ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ ದೊರೆತಿದೆ.

ಹೀಗೆ ಕನ್ನಡ ನಾಡಿನಲ್ಲಿ ಹೇಗೊ ಹಾಗೆ ನಮ್ಮ ನೆರೆಹೊರೆಯ ನಾಡಾದ ತಮಿಳು ನಾಡಿಲ್ಲೂ ‘ಇವನಾರವ ಇವನಾರವ’ ಎಂದೆನಿಸದೆ ‘ಇವ ನಮ್ಮವ ಇವ ನಮ್ಮವ’ ಎಂದೆನಿಸಿಕೊಂಡು ಮೆಚ್ಚುಗೆ ಪಡೆದ ಇಬ್ಬರು ಮಹನೀಯರ ಪುಣ್ಯ ಸ್ಮರಣೆಗಾಗಿ ಈ ವೇದಿಕೆಯನ್ನು ಬಳಸಿಕೊಂಡಿರುವುದು ತುಂಬ ಯೋಗ್ಯವಾಗಿದೆ. ಡಾ|| ಯು. ರಾಮರಾಯರನ್ನೂ ಪ್ರೊ||  ಮರಿಯಪ್ಪಭಟ್ಟರನ್ನೂ ಡಾ|| ಬಿ.ಜಿ.ಎಲ್. ಸ್ವಾಮಿಯವರನ್ನೂ ನಿಮ್ಮೊಂದಿಗೆ ನಾನೂ ಕೃತಜ್ಞತೆ ಮತ್ತು ಗೌರವದಿಂದ ಮೊದಲು ಸ್ಮರಿಸಿ, ನಮಿಸಿ, ಈ ದೂರದೃಷ್ಟಿಯ ನಿರ್ಧಾರ ಕೈಗೊಂಡ ನಿಮ್ಮನ್ನೆಲ್ಲಾ ಅಭಿನಂದಿಸಿ ಈಗ ನನ್ನ ಪುಟ್ಟ ಉಪನ್ಯಾಸವನ್ನು ಪ್ರಾರಂಭಿಸಲು ಅನುಮತಿ ಕೋರುತ್ತೇನೆ.

ಇದು ಕನ್ನಡ ನಾಡಿನೊಳಗೆ ನಡೆಯುವ ಮಾಮೂಲೀ ಸಮ್ಮೇಳನವಾಗಿರದೆ ಹೊರನಾಡಿನಲ್ಲಿ ನಡೆಯುತ್ತಿರುವ ಮದರಾಸು ಕನ್ನಡಿಗರ ಸಮ್ಮೇಳನವಾಗಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಸಂದರ್ಭೋಚಿತವೆನಿಸಬಲ್ಲ ಕೆಲವು ವಿಚಾರಗಳನ್ನು ಪ್ರಸ್ತಾಪಿಸಬಯಸುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟನಾಗಿರುತ್ತಾನೆ. ಅದರಲ್ಲಿಯೂ ಲೇಖಕನಾದವನು ತನ್ನ ಸೂಕ್ಷ್ಮ ಸಂವೇದನಶೀಲ ಸ್ವಭಾವ ಶಕ್ತಿಗಳಿಂದಾಗಿ ಮತ್ತಷ್ಟು ಭಿನ್ನನಾಗಿರುತ್ತಾನೆ. ಮಾತು ಬಲ್ಲ ವ್ಯಕ್ತಿಗಳೆಲ್ಲ, ಸಾಮಾನ್ಯನಿರಲಿ ಸಾಹಿತಿಯಿರಲಿ, ತಮ್ಮ ಎಲ್ಲ ವಿಚಾರಗಳನ್ನು ಭಾಷೆಯ ಮೂಲಕವೇ ತೋಡಿಕೊಳ್ಳಬೇಕಾದ ಅನಿವಾರ್ಯವಿರುತ್ತದೆ. ಇದರಿಂದಾಗಿ ಭಾಷೆಯ ಪಾತ್ರ ಮಹತ್ತರವಾಗಿರುವಂತೆ ಪ್ರಧಾನವೂ ಆಗಿದೆ. ಒಂದೊಂದು ಭಾಷಾ ಸಮುದಾಯಕ್ಕೆ ಅದು ಒಪ್ಪಿಕೊಂಡ ಭಾಷೆ ಅವರನ್ನು ಕೂಡಿಸುವ ಕಾಪಾಡುವ ಮಹಾಶಕ್ತಿಯಾಗಿರುತ್ತದೆ. ಶತಮಾನಗಳಿಂದ ಕನ್ನಡಿಗರನ್ನು, ಅವರು ಎಲ್ಲೇ ನೆಲಸಿರಲಿ, ಹೀಗೆ ಸೌಹಾರ್ದಯುತವಾಗಿ ಗಾಢವಾಗಿ ಭಾವನಾತ್ಮಕವಾಗಿ ಬಂಧಿಸಿರುವುದು ಕನ್ನಡ ಭಾಷೆ. ಈ ಕಾರಣಕ್ಕಾಗಿ ಮತ್ತು ಇಂಥ ಇನ್ನೂ ಹತ್ತು ಕಾರಣಗಳಿಗಾಗಿ ಕನ್ನಡ ಭಾಷೆ ಕನ್ನಡಿಗರಿಗೆ ಆರಾಧ್ಯ ದೈವವೆನಿಸಿದೆ. ಸುಮಾರು ಎರಡು ಸಾವಿರ ವರ್ಷಗಳಿಂದ ಕನ್ನಡಿಗರು ಈ ಭಾಷೆಯನ್ನು ಬಳಸುತ್ತಾ ಬೆಳೆಸುತ್ತಾ ಬಂದಿದ್ದಾರೆ. ವಿಚಾರವಂತರು, ಸಾಹಿತಿಗಳು ಕನ್ನಡ ಭಾಷೆಗೆ ಬಿಗಿ ಬಿನಿ ತಂದು ಕೊಟ್ಟಿದ್ದಾರೆ. ವೈಚಾರಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಚಿಂತನೆ ಚಲನೆಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಕಸುವು ಪಡೆದಿರುವುದರಿಂದ ಇಂದಿನ ಯುಗದ ಸಶಕ್ತ ಭಾಷೆಯಾಗಿ ಕೂಡ ಕನ್ನಡ ಉಳಿದುಕೊಂಡಿದೆ.

ಇದಿಷ್ಟೂ ಹಿಂದಿನ ಕನ್ನಡದ ಮಾತಾಯಿತು. ಗತ ಇತಿಹಾಸದ ಹಿರಿಮೆಗರಿಮೆಗಳಷ್ಟನ್ನೇ ಮೆಲುಕುಹಾಕುತ್ತಾ ಕೂಡುವ ಪರಿಸರದಲ್ಲಿ ನಾವು ಬಾಳುತ್ತಿಲ್ಲ. ಮುಂದೇನು ಎಂಬುದನ್ನೂ ಭಾವಪರವಶರಾಗದೆ ವಸ್ತುನಿಷ್ಠರಾಗಿ ನೆತ್ತಿ ತಂಪಾಗಿರಿಸಿಕೊಂಡು ಅಲೋಚಿಸಬೇಕಾಗಿದೆ. ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕೆ ಬೇಡವೆ ಎಂಬುದೇ ಹೊರನಾಡಿನಲ್ಲಿ ನಾನಾ ಕಾರಣಗಳಿಗಾಗಿ ನೆಲಸಬೇಕಾಗಿ ಬಂದಿರುವ ಕನ್ನಡಿಗರ ಎದುರು ಇರುವ ಮುಖ್ಯ ಪ್ರಶ್ನೆ. ಕನ್ನಡ ನಾಡಿನಲ್ಲೇ ಕನ್ನಡದ ಸರ್ವಾಂಗೀಣ ಅಭ್ಯುದಯಕ್ಕೆ ಇನ್ನೂ ಇಡ್ಡಿ ಆತಂಕಗಳು ಸಾಕಷ್ಟಿವೆ. ಆದರೆ ಇತ್ತೀಚೆಗೆ ಎಚ್ಚೆತ್ತ ಕನ್ನಡ ಪ್ರಜ್ಞೆಯ ಸ್ಫೋಟದಿಂದಾಗಿ ಗೋಡೆಗಳು ಕುಸಿಯುತ್ತಲಿವೆ. ಜನತೆ ಮತ್ತು ಆಳುವವರು ಕನ್ನಡ ಪರವಾದ ನಿಲುಮೆಗೆ ಸಹಮತರಾಗುತ್ತಿದ್ದಾರೆ.

ಆದರೆ ಹೊರನಾಡ ಕನ್ನಡಿಗರು ಕನ್ನಡವನ್ನು ಎಷ್ಟರ ಮಟ್ಟಿಗೆ ಅನ್ವಯಿಕ ದೃಷ್ಟಿಯಿಂದ ಅಳವಡಿಸಿಕೊಳ್ಳಲು ಸಾಧ್ಯ ಎಂಬ ವಿವೇಚನೆಯನ್ನು ಅನೇಕಾಂತ ದೃಷ್ಟಿಯಿಂದ ಮಾಡಬೇಕು. ಅತಿಭಾವುಕತೆಯಿಂದ ನುಗ್ಗಿದರೆ ಅಪಾಯಗಳಿಗೆ ಡಿಕ್ಕಿ ಹೊಡೆಯಬೇಕಾದೀತು. ಅಂದರೆ ವಸ್ತು ಸ್ಥಿತಿಯನ್ನು ಅಪ್ಪಿಕೊಂಡೇ ಸಮಸ್ಯೆಯನ್ನು ಎದುರಿಸಿ ಅರ್ಥೈಸುವುದು ಕ್ಷೇಮ ಹಾಗೂ ಅಗತ್ಯ. ಕನ್ನಡಿಗರು ಸ್ವಭಾವತಃ ಸೌಮ್ಯರು, ಸುಲಭಾಕಾಂಕ್ಷಿಗಳು ಎಂಬ ಮಾತಿದೆ. ಅಂಥಾದ್ದರಲ್ಲಿ ಕನ್ನಡ ನಾಡನ್ನು ಬಿಟ್ಟು ಧೈರ್ಯದಿಂದ ಆತ್ಮವಿಶ್ವಾಸದಿಂದ ಬೇರೆ ರಾಜ್ಯಕ್ಕೆ ಬಂದು ಚೆನ್ನಾಗಿ ಬಾಳುತ್ತಿರುವ ನಿಮ್ಮನ್ನೂ ನಿಮ್ಮ ಸಾಹಸವನ್ನೂ ಮೊದಲು ಅಭಿನಂದಿಸುತ್ತೇನೆ.

ಈಗ ಕನ್ನಡ ಭಾಷೆಯನ್ನು ಹೊರನಾಡಿಗರು ನಿತ್ಯದ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ವಿವರಣೆ ಬರುತ್ತದೆ. ಇಡೀ ಬದುಕು ನಿಂತಿರುವುದು ಆರ್ಥಿಕ ಬುನಾದಿಯ ಮೇಲೆ. ಜೀವನ ನಿರ್ವಹಣೆಗಾಗಿ ವ್ಯಾಪರವೊ ಉದ್ಯೋಗವೊ ಮಾಡಬೇಕಾಗುತ್ತದೆ. ಕನ್ನಡ ನಾಡಿನ ಒಳನಾಡಿನ ಕನ್ನಡಿಗರಂತೆ ಹೊರನಾಡಿಗರು ಕೂಡ ವ್ಯಾಪಾರ ಉದ್ಯೋಗಾದಿಗಳಲ್ಲಿ ಪೂರ್ಣವಾಗಿ ವ್ರತಸ್ಥರಂತೆ ಕನ್ನಡವನ್ನು ಬಳಸುವುದು ತೊಡಕಿನದೂ ಪೇಚಿನದೂ ಆಗುತ್ತದೆ. ಕೆಲಸ ಮತ್ತು ಜೀವನ ಕಳೆದುಕೊಳ್ಳದೆ ಇಲ್ಲೇ ಇರಬೇಕಾದರೆ ಇಲ್ಲಿನ ಜನಭಾಷೆಯನ್ನೇ ಇಲ್ಲಿನವರಂತೆ ಒಪ್ಪಿಕೊಳ್ಳಬೇಕಾದ್ದು ಅನಿವಾರ್ಯವಾಗುತ್ತದೆ. ಶಿಕ್ಷಣ ಮಾಧ್ಯಮವೂ ಅಷ್ಟೆ. ಕನ್ನಡದಲ್ಲಿ ಕಲಿತರೂ ಇಲ್ಲಿ ಕೆಲಸ ಸಿಗುತ್ತದೆಂಬ ಭರವಸೆ ಇದ್ದರೆ ಆಗಬಹುದು. ಭಾಷೆಯ ಬಳಕೆ ಪರಿಸರವನ್ನು ಅವಲಂಬಿಸುತ್ತದೆ.

ಆದರೆ ಹೊರನಾಡಿಗರು ಕೂಡ ಮನೆಯ ಹೊರಗಿನ ವ್ಯವಹಾರ ಬಿಟ್ಟು ಅವರವರ ಮನೆಯಲ್ಲಾದರೂ ಕನ್ನಡ ಬಳಕೆಯನ್ನು ನಿಲ್ಲಿಸಬಾರದು. ಇದಕ್ಕೆ ಯಾರ ಅಡ್ಡಿಯೂ ಇರಲಾರದು, ಇರಬಾರದು. ಕನ್ನಡ ಕುಟುಂಬಗಳು ಹೀಗೆ ಕನ್ನಡವನ್ನು ಬಳಕೆಯಲ್ಲಿ ಉಳಿಸಿಕೊಳ್ಳಬೇಕಾದರೆ ಇಂಥ ವಾರ್ಷಿಕ ಸ್ನೇಹ ಸಮ್ಮೇಳನಗಳನ್ನು ತುಂಬ ಸಹಕಾರಿಯಾಗುತ್ತವೆ. ಸಾಂಘಿಕ ಸಾಂಸ್ಥಿಕ ಚಟುವಟಿಕೆಗಳ ಮೂಲಕ ಹೊರನಾಡಿನಲ್ಲಿ ಕನ್ನಡವನ್ನು ಇನ್ನೂ ಜೀವಂತವಾಗಿಡಬಹುದು. ಇಂಥ ಸಾಯುದಾಯಿಕ ಕ್ರಿಯೆಯಿಂದ ಹಲವು ಪ್ರಯೋಜನಗಳಿವೆ. ಕನ್ನಡಿಗರು ಒಂದು ಛಾವಣಿಯಡಿಯಲ್ಲಿ ಕಲೆಯುತ್ತಾರೆ. ಒಂದು ಭಾಷೆಯ ಜನ ಒಂದು ಕಡೆ ಸೇರುವುದೇ ಸಡಗರ, ಹಬ್ಬ. ಭಾಷೆಗೆ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು. ಕನ್ನಡಿಗರ ಸಾಂಸ್ಕೃತಿಕ – ಭಾಷಿಕ ಎಚ್ಚರಿಕೆ ಸಂವರ್ಧನೆಗೆ ಸ್ನೇಹ ಕೂಟಗಳು ಅಮೃತಸಿಂಚನ ಮಾಡುತ್ತವೆ. ಈ ಸಮಗ್ರ ಮದರಾಸು ಕನ್ನಡಿಗರ ಸಮ್ಮೇಳನ ಅಂಥ ಕಾಯಕಲ್ಪ ಮಾಡಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ನಾವು ಇನ್ನೂ ಕನ್ನಡಿಗರಾಗಿ ಬದುಕಿದ್ದೇವೆ, ಬದುಕುತ್ತೇವೆ ಎಂದು ಈ ಸಮ್ಮೇಳನ ಸ್ಪಷ್ಟವಾಗಿ ಸಾರಿದೆ. ಸಾಭೀತು ಪಡಿಸಿದೆ.

ಆದರೆ ಇಷ್ಟಾದರೆ ಸಾಕೆ? ಕನ್ನಡವನ್ನು ಉಳಿಸಿಕೊಳ್ಳಲು ಮುಂದೇನು ಮಾಡಬೇಕು? – ಎಂಬುದನ್ನೂ ಪರಿಭಾವಿಸಬೇಕಾಗುತ್ತದೆ. ಕನ್ನಡ ನಾಡಿನಲ್ಲಿ ಹತ್ತಾರು ತಮಿಳು ಚಿತ್ರಗಳು ವರ್ಷದುದ್ದಕ್ಕೂ ಯಶಸ್ವಿಯಾಗಿ ಓಡುತ್ತವೆ. ಅನ್ಯಭಾಷೆಯ ಚಿತ್ರಗಳಿಗೆ ಕನ್ನಡ ನಾಡು ಸುಗ್ಗಿಯ ಕಣ. ಹಿಂದಿ ಚಿತ್ರ ತಯಾರಕರು ತಾವು ಹೂಡಿದ ಬಂಡವಾಳ ಹಿಂತಿರುಗಿ ಬರಲು ಮುಂಬಯಿಯಂತೆ ಬೆಂಗಳೂರನ್ನೂ ನೋಡುತ್ತಾರೆ. ತೆಲುಗು ಚಿತ್ರ ನಿರ‍್ಮಾಪಕರು ಹೈದರಾಬಾದಿನಂತೆ ಬೆಂಗಳೂರನ್ನೂ ಗಮನಿಸುತ್ತಾರೆ. ತಮಿಳು ಚಿತ್ರ ತಯಾರಕರಿಗೆ ಮದರಾಸು – ಬೆಂಗಳೂರು ಕಲೆಕ್ಷನ್ ಮೇಲೆ ಕಣ್ಣು. ಮಲೆಯಾಳಂ ಚಿತ್ರಗಳಿಗೆ ಬೆಂಗಳೂರು ಗಲ್ಲಾಪೆಟ್ಟಿಗೆ ತುಂಬಬೇಕು. ಆದರೆ ಕನ್ನಡ ಚಿತ್ರಗಳನ್ನು ಸಿದ್ಧಪಡಿಸಿದವರಿಗೆ ಅಂಗೈ ಅಗಲದ ಕರ್ನಾಟಕ ಬಿಟ್ಟರೆ ಹೊರಗಿನ ಮಾರುಕಟ್ಟೆಗಳಿಲ್ಲ. ಹೀಗೇಕೆ ಎಂಬುದರ ಪರಿಶೀಲನೆಯಿಂದ ಹೊರಡುವ ಸತ್ಯ ಸಂಗತಿಗಳು ನಮ್ಮ ಅಭಿಮಾನವನ್ನೂ ಕೆಣಕುವಂತಿದೆ. ಮುಂಬಯಿ – ಮದರಾಸು ಮಹಾನಗರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಕನ್ನಡಿಗರು ಮಾತೃಭಾಷೆಯ ಪ್ರೇಮದಿಂದ ಪ್ರೇರಿತವಾಗಿ ಸ್ಫೂರ್ತಿ ಪ್ರೋತ್ಸಾಹ ತೋರುದಿರುವುದು ಒಂದು ಕೊರತೆಯೆಂಬುದೂ ನಿಜ. ಅದಕ್ಕಿಂತ ದೊಡ್ಡ ವಿಷಾದ ಬೇರೆ ಮೂಲಕ್ಕೆ ಸೇರಿದ್ದಾಗಿದೆ.

ಕರ್ನಾಟಕ ಸರಕಾರ ಅನ್ಯಭಾಷೆಗಳಿಗೆ, ಒತ್ತಡಕ್ಕೆ ಮಣಿಯುವುದೂ ಅಲ್ಲದೆ ಸ್ವಪ್ರೇರಣೆಯಿಂದಲೂ ಕೊಡುವ ಮನ್ನಣೆ ಬಹಳವಾಯಿತೆನ್ನಬೇಕಾಗಿದೆ; ಏಕೆಂದರೆ ಈ ‘ಅತಿ ಪ್ರೀತಿ’ ಏಕಮುಖ ಸಂಚಾರವಾಗಿ ಸಾಗಿದೆ. ಇದುವರೆಗೆ ಆಗಿದ್ದು ಆಯಿತು. ಇನ್ನು ಮುಂದಾದರೂ ನಮ್ಮ ಸರಕಾರ ಗಟ್ಟಿಯಾದ ನಿಲುವಿನಿಂದ ಅನ್ಯ ಭಾಷೆಗಳ ಸಂಬಂಧ ವಲಯವನ್ನು ಪರಿಷ್ಕರಿಸಿಕೊಳ್ಳಬೇಕು. ಇಂತಿಷ್ಟು ಕನ್ನಡ ಚಿತ್ರಗಳು ಇಂತಿಷ್ಟು ದಿನಗಳವರೆಗೆ, ಕನ್ನಡಿಗರು ಲಕ್ಷಕ್ಕೂ ಮೀರಿದ ಸಂಖ್ಯೆಯಲ್ಲಿ ನೆಲೆಸಿರುವ ಮಹಾನಗರಗಳಲ್ಲಿ ಪ್ರದರ್ಶಿತವಾಗಲು ಏರ್ಪಾಟಾದರೆ ಮಾತ್ರ ಕನ್ನಡ ನಾಡಿನಲ್ಲೂ ಅದೇ ಪ್ರಮಾಣದ ಸೌಹಾರ್ದಯುತ ಏರ್ಪಾಟಿಗೆ ಅವಕಾಶ ಎಂಬ ಷರತ್ತನ್ನು ವಿಧಿಸಬೇಕು, ಪಾಲಿಸಬೇಕು. ಕೊಡು-ಪಡೆ ಎಂಬ ನೆಲೆಯಲ್ಲಿ ಈ ವ್ಯವಹಾರ ನಡೆಯಬೇಕಾದದ್ದು ಕನ್ನಡ ಚಿತ್ರೋದ್ಯಮದ ಭವಿಷ್ಯಕ್ಕೂ ಸೇರಿದ ಮಾತಾಗಿದೆ.

ಈ ನಿಬಂಧನೆ ಆಯಾ ಭಾಷೆಯನ್ನು ಮಾತೃಭಾಷೆಯನ್ನಾಗುಳ್ಳವರ ಸಂಖ್ಯೆಯನ್ನು ಅವಲಂಬಿಸಿ ಶಾಲೆಗಳನ್ನು ತೆರೆದು ಶಿಕ್ಷಣ ಸೌಲಭ್ಯವನ್ನು ಕಲ್ಪಿಸಿಕೊಡುವ ವಿಚಾರಕ್ಕೂ ಅನ್ವಯಿಸಬೆಕು. ಕೇವಲ ೩೦ ವರ್ಷಗಳ ಹಿಂದೆ ತಮಿಳುನಾಡಿಲ್ಲಿ, ಮುಖ್ಯವಾಗಿ ಅದರ ಕಲ್ಯಾಣನಗರಿ ಮದರಾಸಿನಲ್ಲಿ ಎಷ್ಟು ಕನ್ನಡ ಶಾಲೆಗಳಿದ್ದವೂ ಕನ್ನಡ ಅಧ್ಯಾಪಕರಿದ್ದರೊ ಅದರ ನಾಲ್ಕನೆಯ ಒಂದು ಭಾಗವೂ ಇಂದು ಇಲ್ಲಿ ಉಳಿದಿಲ್ಲ. ಕನ್ನಡ ನಾಡಿನಲ್ಲಾದರೊ ಇದರ ತದ್ವಿರುದ್ಧ ಪರಿಸ್ಥಿತಿಯಿದೆ; ೩೦ ವರ್ಷಗಳ ಹಿಂದೆ ಇದ್ದ ತಮಿಳು ಶಾಲೆಗಳ ನಾಲ್ಕರಷ್ಟು ಹೆಚ್ಚಾಗಿವೆ. ಬೆಂಗಳೂರು ವಾಸಿಗಳು ತಮಿಳು ಬರುವುದಿಲ್ಲ ಎಂದು ಹೇಳಿದರೆ, “ಏನು ಬೆಂಗಳೂರಲ್ಲಿದ್ದೂ ನಿಮಗೆ ತಮಿಳು ಬರೊಲ್ವೆ?” ಎಂದು ಕೇಳುವರು.

ಉದ್ಯೋಗ ಸಂಬಂಧವಾದ ಅವಕಾಶಗಳೂ ಇದೇ ನೆಲೆಯಲ್ಲಿ ವ್ಯವಹಾರವಾಗಬಹುದು. ಕರ್ನಾಟಕದಲ್ಲಿರುವ ಸಣ್ಣ ದೊಡ್ಡ ಕೈಗಾರಿಕೋದ್ಯಮಗಳಲ್ಲಿ, ರಾಜ್ಯ – ಕೇಂದ್ರ ಸ್ವಾಮ್ಯದ ವ್ಯಾಪ್ತಿಯಲ್ಲಿನ ಉದ್ದಿಮೆಗಳಲ್ಲಿ ತಮಿಳರಿಗೆ ಕೊಟ್ಟಿರುವ ಉದ್ಯೋಗ ಪ್ರಮಾಣವನ್ನು ಅನುಲಕ್ಷಿಸಿ ತಮಿಳುನಾಡಿನ ಸರಕಾರವೂ ಅಲ್ಲಿನ ಕನ್ನಡಿಗರಿಗೆ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸಿ ಕೊಡಬೇಕಾದ್ದು ನ್ಯಾಯಸಮ್ಮತವಾದ ಅಪೇಕ್ಷೆಯಾಗಿರುತ್ತದೆ. ಬೆಂಗಳೂರಿಗೆ ಸಮೀಪದ ಹೊಸೂರು ಬೃಹತ್ ಕೈಗಾರಿಕಾ ನಗರವಾಗಿ ಬೆಳೆಯುತ್ತಿದ್ದು ಅಲ್ಲಿ ಕನ್ನಡಿಗರಿಗೆ ಕಡ್ಡಯವಾಗಿ ಇಂತಿಷ್ಟು ಪ್ರಮಾಣ ಮೀಸಲಾಗಿರಿಸುವುದು ಅನಿವಾರ್ಯವೆಂದು ಈ ವೇದಿಕೆಯಿಂದ ಕನ್ನಡಿಗರು ಪರವಾಗಿ ಸೂಚಿಸಬಯಸುತ್ತೇನೆ.

ಇನ್ನು ವರ್ಷದುದ್ದಕ್ಕೂ ವಾರಕ್ಕೊಮ್ಮೆ ತಿಂಗಳಿಗೊಮ್ಮೆ ಎಂದು ಕನ್ನಡ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲು ಕೆಲವು ಏರ್ಪಾಟುಗಳ ಪ್ರಯೋಜನ ಪಡೆದುಕೊಳ್ಳುವುದು ಇಲ್ಲಿನ ಸಂಘಟಕರ ಚಾತುರ್ಯವನ್ನೂ ನಿಷ್ಠೆಯನ್ನೂ ಅವಲಂಬಿಸಿದೆ. ಕರ್ನಾಟಕದಲ್ಲಿ ಹಾಲಿ ಇರುವ ಸಾಹಿತ್ಯ, ಸಂಗೀತ, ನಾಟಕ ಮತ್ತು ಜಾನಪದ ಅಕಾಡೆಮಿಗಳಿಂದ ತಿಂಗಳಿಗೊಂದರಂತೆ ಇಲ್ಲಿ ಸರೆದಿಯ ಮೇಲೆ ಕಾರ್ಯಕ್ರಮ ಕೊಡಲು ಪ್ರಾರ್ಥಿಸಿಕೊಳ್ಳುವುದು ಒಳ್ಳೆಯದು. ಇದು ಸಾಧ್ಯವಾಗುತ್ತದೆ. ಇದರಂತೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಸಾಕ್ಷ್ಯ ಚಿತ್ರಗಳ ಪ್ರದರ್ಶನಕ್ಕೆ ಮತ್ತು ಕೆಲವು ದತ್ತಿ ಉಪನ್ಯಾಸಗಳ ಏರ್ಪಾಟಿಗೆ ನೆರವು ನೀಡಲು ಸಾಧ್ಯವಿದೆ. ಹಾಗೆಯೇ ಕನ್ನಡ – ಸಂಸ್ಕೃತಿ ಇಲಾಖೆಯವರಿಂದ ಯಕ್ಷಗಾನ, ಸುಗಮಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲು ನೆರವು ನೀಡುತ್ತದೆ. ಇವೆಲ್ಲದರ ಪೂರ್ಣ ಪ್ರಯೋಜನವನ್ನು ನೀವು ಪಡೆಯಿರಿ. ಕರ್ನಾಟಕದ ವಿಶ್ವವಿದ್ಯಾನಿಲಯಗಳ ಸಹಯೋಗದಿಂದಲೂ ವಿಚಾರ ಸಂಕಿರಣಗಳನ್ನು ಏರ್ಪಾಟು ಮಾಡಬಹುದಾಗಿದೆ. ಒಟ್ಟಾರೆ ನಿಮ್ಮಲ್ಲಿ ಇದಕ್ಕಾಗಿ ಪ್ರಯತ್ನ ಮಾಡಿ ಸಮಾರಂಭಗಳನ್ನು ವ್ಯವಸ್ಥೆ ಮಾಡಬಲ್ಲಕ್ರಿಯಾಶೀಲ ಸಂಸ್ಥೆ ಮತ್ತು ಪ್ರಭಾವಶಾಲಿ ವ್ಯಕ್ತಿಗಳು ಬೇಕಾಗುತ್ತದೆ. ತ್ಯಾಗ ಹಾಗೂ ಪ್ರಾಮಾಣಿಕ ಬುದ್ಧಿಯಿಂದ, ಕನ್ನಡದ ಪ್ರೀತಿಯಿಂದ ಮಾತ್ರ ಇಂಥ ಕೆಲಸ ಸುಲಭವಾಗುತ್ತದೆ. ನಿಮ್ಮಲ್ಲಿ ಇರುವ ಸಮರ್ಥರು ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕೆಂದು ಕೋರುತ್ತೇನೆ.

ಹೀಗೆಯೇ ಕನ್ನಡ ಕಲಿಯಲು ಆಸಕ್ತರಾದವರಿಗೆ ಕನ್ನಡ ಕಲಿಸುವ ತರಗತಿಗಳನ್ನೂ ನೀವು ನಡೆಸಬಹುದು. ಇದಕ್ಕಾಗಿ ಕನ್ನಡ – ಸಂಸ್ಕೃತಿ ಇಲಾಖೆ ಪೂರ್ಣ ಹಣ ಸಹಾಯ ಮಾಡಬಹುದು.

ನಾನು ನನ್ನ ಈ ಉಪನ್ಯಾಸವನ್ನು ಮುಗಿಸುವ ಮುನ್ನ ಒಂದು ಮುಖ್ಯವಾದ ಹಾಗೂ ಕನ್ನಡಿಗರಿಗೆಲ್ಲ ಅಭಿಮಾನ ಹೆಮ್ಮೆ ತರುವ ವಿಷಯವನ್ನು ಪ್ರಸ್ತಾಪಿಸಬಯಸುತ್ತೇನೆ. ಅದೆಂದರೆ ಇಂದು ಸಮಗ್ರ ಭಾರತದಲ್ಲಿ, ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಕನ್ನಡಕ್ಕೆ ಒಂದು ಉನ್ನತ ಮರ್ಯಾದಿತ ಸ್ಥಾನವಿದೆ ಎಂಬುದು. ೧೯೫೦ ರಿಂದ ಈಚೆಗೆ, ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕರ್ನಾಟಕಕ್ಕೆ ಅಖಿಲ ಭಾರತ ಸಾಹಿತ್ಯಕ ಸಾಂಸ್ಕೃತಿಕ ಭೂಪಟದಲ್ಲಿ ಅತ್ಯಂತ ಪ್ರತಿಷ್ಠಿತ ಮನ್ನಣೆ ದೊರೆತಿದೆ. ಇದುವರೆಗೆ ಜ್ಞಾನಪೀಠ ಸಾಹಿತ್ಯ ಪುರಸ್ಕಾರವನ್ನು ೪ ಜನರು ಪಡೆದಿರುವ ಭಾಷೆ ಮತ್ತು ಸಾಹಿತ್ಯ ಕನ್ನಡ ಎಂಬುದನ್ನು ಸಮಕಾಲೀನ ಸಾಹಿತ್ಯ ಲೋಕ ಹುಬ್ಬೇರಿಸಿ ನೋಡುವಂತಾಗಿದೆ. ಇದುವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು, ಅದು ಸ್ಥಾಪಿತವಾದ ಕಳೆದ ೩೨ ವರ್ಷಗಳಲ್ಲಿ, ೩೦ ಸಲ ಪ್ರಶಸ್ತಿ ಪಡೆದಿರುವ ಹಿಂದಿ ಭಾಷೆಯನ್ನು ಬಿಟ್ಟರೆ ೨೯ ಸಲ ಪ್ರಶಸ್ತಿ ಪಡೆದಿರುವ ಕನ್ನಡ ಭಾಷೆ ಎರಡನೆಯ ಸ್ಥಾನದಲ್ಲಿದೆ.

ನಾಟಕ ಕ್ಷೇತ್ರದ ಉನ್ನತ ಗೌರವದ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯನ್ನು ಇದುವರೆಗೆ ಪಡೆದಿರುವ ಮೂವರಲ್ಲಿ ಇಬ್ಬರು ಕನ್ನಡಿಗರು. ಇನ್ನು ಸಂಗೀತ ಕ್ಷೇತ್ರದಲ್ಲಿ ಅತ್ಯುನ್ನತವಾದ ಕಾಲಿದಾಸ ಪ್ರಶಸ್ತಿಯನ್ನು ಕನ್ನಡಿಗರಾದ ಡಾ||  ಮಲ್ಲಿಕಾರ್ಜುನ ಮನಸೂರರು ಪಡೆದಿರುತ್ತಾರೆ. ಗುಜರಾತಿನ ಡಾ|| ಉಮಾಶಂಕರ ಜೋಶಿಯವರು ‘ಇಂದು ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಪ್ರತಿಭಾಶಾಲಿಗಳು ಕನ್ನಡದಲ್ಲಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ೧೯೭೮ರಲ್ಲಿ ದೆಹಲಿಯಲ್ಲಿ ನಡೆದ ಅಖಿಲ ಭಾರತ ೫೦ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸತ್ತಾ ಆಗಿನ ಪ್ರಧಾನಿ ಮುರಾರ್ಜಿಯವರು ‘ಇಂದು ಇಡೀ ಇಂಡಿಯಾದಲ್ಲಿ ಯಾವುದೇ ಸಾಹಿತ್ಯಕ – ಸಾಂಸ್ಕೃತಿಕ ಚಳುವಳಿಗೆ ಕರ್ನಾಟಕ ಮಾತ್ರ ಮುಂದಾಳುವಾಗಿದೆ’ ಎಂದು ಕೊಂಡಾಡಿರುತ್ತಾರೆ. ಹೀಗಾಗಿ ೧೯೫೦ ರಿಂದ ೧೯೮೫ರ ವರೆಗಿನ ೩೫ ವರ್ಷಗಳು ಆಧುನಿಕ ಕನ್ನಡ ಸಾಹಿತ್ಯದ ಸುವರ್ಣಯುಗವೆಂದು ಕರೆಯಬಯಸುತ್ತೇನೆ.

ಮದರಾಸು ಕನ್ನಡಿಗರು ಈ ಮಹತ್ವದ ಸಮ್ಮೇಳನದ ಅಂಗವಾಗಿ ನಡೆಯುತ್ತಿರುವ ಬಹಿರಂಗ ಅಧಿವೇಶನಕ್ಕೆ ಅಧ್ಯಕ್ಷತೆಗೆ ವಹಿಸಲು ಆಹ್ವಾನಿಸಿ ತೋರಿದ ಪ್ರೀತಿ ಗೌರವಗಳಿಗೆ ನಾನು ಋಣಿಯಾಗಿದ್ದೇನೆ. ರಾಷ್ಟ್ರಕವಿ ಕುವೆಂಪುರವರ ಕವಿತೆಯ ಸಾಲುಗಳಿಂದ ನನ್ನ ಈ ಭಾಷಣವನ್ನು ಮುಗಿಸುತ್ತೇನೆ; ‘ಎಲ್ಲಾದರು, ಇರು ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು’. ಎಲ್ಲರಿಗೂ ನಮಸ್ಕಾರ. ಜೈಹಿಂದ್, ಜೈ ಕರ್ನಾಟಕ.

(ಕನ್ನಡ ನುಡಿ, ಜೂನ್ ೧೬, ೧೯೮೬)

* * *

* ಏಪ್ರಿಲ್ ೫,೬ (೧೯೮೬) ಮದರಾಸಿನಲ್ಲಿ ನಡೆದ ಮದರಾಸು ಕನ್ನಡಿಗರು ಸಮ್ಮೇಳನದಲ್ಲಿ ೬-೪-೧೯೮೬ರಂದು ಸಂಜೆ ಬಹಿರಂಗ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾಡಿದ ಭಾಷಣದ ಸಾರಾಂಶ.