ಮುಂಬಯಿ ಪಾಪಕೂಪದ ಮರಳುಗಾಡೆಂದು ನಿಂದಿಸುವವರುಂಟು. ನನ್ನ ಪಾಲಿಗೆ ಅಲ್ಲಿ ಹಲವು ಓಯಸಿಸ್ಸುಗಳಿವೆ. ಸಮುದ್ರದ ನಂಟು ಇದ್ದರೂ ಉಪ್ಪಿಗೆ ಬಡತನವಿಲ್ಲ. ತಮ್ಮ ಹೃದಯವಂತಿಕೆಯ ಸ್ನೇಹವನ್ನು ಧಾರಾಳವಾಗಿ ಸುರಿಯುವ ಹಲವಾರು ಆಪ್ತರಿದ್ದಾರೆ. ಇತ್ತೀಚೆಗೆ ಈ ಸ್ನೇಹ ವರ್ಷದ ಒಂದು ಸಿಹಿ ಧಾರೆ ವಿಚ್ಛಿನ್ನವಾಯಿತು. ಸಾವು ಸಹಜ, ಋತುನಿಯಮ ನಿಜ. ಆದರೆ ಅದು ತರುವ ನೋವು ಬೇಗೆ ಮಾಗದು. ಅಂಥದೊಂದು ಮಾಯದ ಗಾಯ ಕೃಷ್ಣಕುಮಾರ ಕಲ್ಲೂರರ ನಿಧನ. ಅವರ ಮರಣದಿಂದ ನನಗೆ ವೈಯಕ್ತಿಕವಾಗಿ ಒಬ್ಬ ಹಿರಿಯ ಸಾಹಿತಿ ಮಿತ್ರರು ಇಲ್ಲವಾಯಿತೆಂಬುದು ದೊಡ್ಡ ಮಾತಲ್ಲ. ಆದರೆ ಮುಂಬಯಿ ಒಬ್ಬ ಮಹಾನ್ ಕನ್ನಡಿಗನನ್ನು ಕಳೆದುಕೊಂಡಿತು. ಕನ್ನಡ ಸಾಹಿತ್ಯಕ್ಕೆ ಒಬ್ಬ ಸಮರ್ಥ ಲೇಖಕ, ಚಿಂತಕ ಹಾಗೂ ಶೋಧಕ ನಷ್ಟವಾದಂತಾಯಿತು.

ಮುಂಬಯಿ ನನಗೆ ಹಳೆಯ ನಂಟು, ಹಲವು ಸಲ ಹೋಗಿ ಬಂದಿದ್ದೇನೆ. ೧೯೬೬ರಲ್ಲಿ ಆರುವಾರ ಭಾಷಾ ವಿಜ್ಞಾನದ ಗ್ರೀಷ್ಮ ಶಾಲೆಗಾಗಿ ಸಿಡೆನ್ ಹ್ಯಾಮ್ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಬೀಡು ಬಿಟ್ಟಿದ್ದೆ. ೧೯೭೮ರಲ್ಲಿ ಪರಿಷದಧ್ಯಕ್ಷನಾಗಿ ಮುಂಬಯಿಗೆ ಹೋದಾಗ, ಅನಂತರ ನಾಲ್ಕೈದು ಸಲ ಭೇಟಿ ಕೊಟ್ಟಾಗ ಅಲ್ಲಿನ ಸಾಹಿತ್ಯಾಸಕ್ತರು ತೋರಿದ ವಿಶ್ವಾಸ ಬತ್ತದ ತೊರೆ. ನಾನು ಮತ್ತೆ ಮತ್ತೆ ಮುಂಬಯಿಗೆ ಹೋಗಿ ಬರಲು ಕಾರಣ; ಅಲ್ಲಿನ ಆತ್ಮೀಯರ ಅಯಸ್ಕಾಂತ ಸೆಳೆತ. ಎಷ್ಟು ತಡೆದರೂ ಮುಂಬಯಿ ಹೆಸರು ಹೇಳಿದೊಡನೆ ಸುರುಳಿ ಉರುಳುವ ಹಸಿರು ನೆನಪುಗಳು!

ಹಿರಿಯ ಸಮಾಜ ಸೇವಕ, ವಿಶಿಷ್ಟ ಚೌಪದಿ ಸಾಹಿತಿ, ಸರ್ವೋದಯ ಸಾಧಕ ದಿನಕರ ದೇಸಾಯಿಯವರ ಮಹಡಿ ಹತ್ತಿ, ಹತ್ತಿರ ಕುಳಿತು ತಾಸುಗಟ್ಟಲೆ ಹರಟಿದ್ದು ಅಂತರಂಗದ ತುಂಬೆಲ್ಲ ಅನುಸರಣಿಸುತ್ತದೆ. ಉತ್ತಮ ಕಾದಂಬರಿಕಾರ, ಸೌಮ್ಯ ಸಾಹಿತಿ ವ್ಯಾಸರಾಯ ಬಲ್ಲಾಳರ ಹಿತಮಿತ ಮೃದು ಮಾತುಗಾರಿಕೆಯೂ ಅಷ್ಟೇ ರಸವತ್ತಾದ ಅತಿಥ್ಯವೂ ಮನಸ್ಸಿನಲ್ಲಿ ನೆಲೆಯೂರುತ್ತದೆ. ಒಳನಾಡಿನವರಿಗೂ ಹೊರನಾಡಿನವರೆಗೂ ಸದಾ ಸ್ನೇಹ-ಸಹಕಾರಗಳನ್ನು ತಮಗಿಂತಲೂ ಮೊದಲೇ ರಾಯಭಾರಿಯಾಗಿ ರವಾನಿಸಿ ಹಿಂದುಗಡೆಯಿಂದ ಮೆಲ್ಲಗೆ ಬರುವ ಶ್ರೀನಿವಾಸ ಹಾವನೂರರು; ಕವಿ ‘ಬಾನುಲಿ ಹರಿಕಾರ’ ಆತ್ಮೀಯ ಗೆಳೆಯ ಬಿ.ಎ. ಸನದಿ; ಸದ್ದುಗದ್ದಲಕ್ಕೆಳಸದೆ ಸಂಶೋಧನೆಯಲ್ಲಿ ತೊಡಗಿ ನಮ್ಮಂಥವರಿಗೆ ಮನೆಯಲ್ಲಿ ಬಿಡಾರ ಮಾಡಿಕೊಡುವುದರಲ್ಲಿ ಸಂತೋಷ ಕಾಣುವ ಬ್ಯಾತನಾಳರು; ಅಲ್ಲಿ ಕಾಣಿಸಿಕೊಂಡು ಇಲ್ಲಿ ಮಾತಾಡಿ ಅವರೆಲ್ಲಿ ಎಂದು ತಿರುಗಿ ನೋಡುವುದರಲ್ಲೆ ಮತ್ತೆಲ್ಲೊ ಮಿಂಚಿ ಮಾಯಾವಾಗುವ ಸಾರ್ಥಕ ಹೆಸರಿನ ಸಂತೋಷಕುಮಾರ ಗುಲ್ವಾಡಿ; ವೃತ್ತಿ ಗೌರವದ ಸುಳಿಯಲ್ಲಿ ಸಿಕ್ಕಿದ್ದರೂ ಕನ್ನಡಕ್ಕಾಗಿ ಬಿಡುವ ಮಾಡಿಕೊಳ್ಳುವ ಆದ್ಯರು, ರುದ್ರಮೂರ್ತಿಯವರು, ಎ.ಎಸ್.ಕೆ.ರಾಯರು, ಸದಾನಂದ ಸುವರ್ಣರು: ಪ್ರಣಯ ಗೀತೆಗಳ ರಸಿಕ ಕವಿ ಕುಲಕರ್ಣಿಯವರು, ಶ್ರೇಷ್ಠ ಕಲಾವಿದ ವರ್ಖೇಡಿಯವರು ಮನೆಗೆ ಕರೆದೊಯ್ದು ಅವರ ಕಲೆಯ ದರ್ಶನ ಮಾಡಿಸಿ ಮಹದುಪಕಾರವೆಸಿಗಿದ್ದು; ಮೊಗವೀರರು, ಭಿಲ್ಲರು, ಭಂಟರು, ತೌಳದು ತಂತಮ್ಮ ಸಂಘಸಂಸ್ಥೆಗಳ ಆಲನೆಟ್ಟು ಕನ್ನಡಗರಿಗೆ ನೀರು ನೆರಳು ನೀಡುವ ತಂಗುದಾಣಗಳು; ಕನ್ನಡ ಬಾವುಟ ನೆಟ್ಟ ಚಿದಂಬರ ದೀಕ್ಷಿತರ ವಿಶ್ವವಿದ್ಯಾಲಯ, ಅದಕ್ಕೆ ನೀರೆರೆವ ಸುನೀತಶೆಟ್ಟಿ, ಸುನೀತಿ ಉದ್ಯಾವರ; ನಾನಿರುವಷ್ಟು ದಿನ ಕೊಠಡಿ ತೆರವು ಮಾಡಿಕೊಟ್ಟು ಮಿತ್ರತ್ವದ ಕಾವು ಕೊಡುವ ಮೈಸೂರು ಅಸೋಸಿಯೇಷನ್; ಕನ್ನಡ ನುಡಿಯ ಸೊಗಡು ಹಂಚುವ ತಾಯಿ ನುಡಿ ಪತ್ರಿಕೆ – ಎಲ್ಲಾ ಅಲೆ ಅಲೆಯಾಗಿ ತೆಂಕಣಗಾಳಿಯಾಗಿ ತೇಲಿ ಬರುತ್ತದೆ. ಇವೆಲ್ಲದರ ನಡುವೆ ಕನ್ನಡದ ಬೆಳಕು ಹಾಯಿಸುತ್ತಿದ್ದ ದೀಪಸ್ತಂಭವೊಂದು ಕಾಲನ ಕರೆಯಲ್ಲಿ ಮುಳುಗಿದ್ದು ಮಾತ್ರ ಮರುಕಳಿಸುವ ದುಃಖ.

ಕೃಷ್ಣಕುಮಾರ ಕಲ್ಲೂರರ ಬಳಿಗೆ ಕರೆಯೊಯ್ದ ಉಪಕಾರಿ ಸ್ಥೂಲಕಾಯರಾದರೂ ಚುರುಕು ನಡಿಗೆಯ ಗೆಳೆಯ ಜಿ.ಡಿ. ಜೋಶಿ. ಕಲ್ಲೂರರ ಮುಖಪರಿಚಯ ಅದೇ ಹೊಸದು. ಅದುವರೆಗೆ ಅವರ ನಾಟಕ-ಕಥೆ-ಕವನಗಳನ್ನೇ ಅಲ್ಲದೆ ಇತರ ವೈಚಾರಿಕ ಬರವಣಿಗೆಯ ಪರಿಚಯವಿತ್ತು. ಕರ್ನಾಟಕ ಕಾಲಿಂಗ್, ಕರ್ನಾಟಕದ ಡೈರೆಕ್ಟರಿ ನೋಡಿದ್ದೆ. ಭಾರತಿ ಪತ್ರಿಕೆ ಓದಿದ್ದೆ. ಅದರ ಹಿಂದೆ ಇದ್ದ ಗಂಭೀರ ಸಂಶೋಧಕ – ಚಿಂತನಶೀಲ ಸಾಹಿತಿಯನ್ನು ಕಾಣುವ ಬಯಕೆ ಕೈಗೊಡಿದ್ದಕ್ಕೆ ನೆಮ್ಮದಿ ಉಸಿರಾಡಿತ್ತು.

ಪರಸ್ಪರ ಪರಿಚಯವಾದ ಕ್ಷಣಗಳಲ್ಲೇ ಇವರು ಮಾಮೂಲಿ ಉಭಯ ಕುಶಲೋಪರಿ ಸಾಂಪತ್ರತ ಸಂಭಾಷಣೆಗೆ ವಿದಾಯ ಹೇಳಿದರು. ನೇರವಾಗಿ ಸಾಹಿತ್ಯ ಚರ್ಚೆಗೇ ತೊಡಗಿದರು. ನನ್ನ ಒಂದೆರಡು ಪುಸ್ತಕಗಳನ್ನು ಹೆಸರಿಸಿ ಬೆನ್ನು ತಟ್ಟಿದರು. ಕೃತಜ್ಞತೆಯ ಭಾರ ಹೇರಿದರು. ಛಂದಸ್ಸು, ಅಲಂಕಾರಶಾಸ್ತ್ರ, ಭಾಷಾವಿಜ್ಞಾನ – ಹೀಗೆ ಹೊರಟಿತು ವಿಚಾರಲಹರಿ. ಇಂಗ್ಲಿಷ್‌ನಲ್ಲಿ ಕನ್ನಡ ಸಾಹಿತ್ಯ ಕುರಿತು ಬರವಣಿಗೆ ಸಾಲದೆಂಬ ಅತೃಪ್ತಿಯನ್ನು ತೋಡಿಕೊಂಡರು. ತಮ್ಮಿಂದ ಇನ್ನೂ ಹೆಚ್ಚಿನ ಲೇಖನ ಕೃಷಿ ಆಗದಿದ್ದುದಕ್ಕೆ ವಿಷಾದಿಸಿದರು. ಅವರು ಇಂಗ್ಲಿಷ್‌ನಲ್ಲಿ ಬರೆದಿದ್ದ ಮೇಲಚ್ಚು ಪ್ರತಿಯನ್ನು ಪ್ರೀತಿಯಿಂದ ಕೊಟ್ಟರು. ಕುಗ್ಗುತ್ತಿರುವ ಆರೋಗ್ಯದಿಂದಾಗಿ ಪ್ರಯಾಣ ಮಿತಿಗೊಂಡಿರುವುದನ್ನು ತಿಳಿಸಿದರು. ಪರಿಷತ್ತಿನ ಚಟುವಟಿಕೆಗಳನ್ನೂ ಕನ್ನಡದ ಇತ್ತೀಚಿನ ಒಲವುಗಳನ್ನೂ ಪ್ರಶ್ನಿಸಿ, ಪರಿಚಯಿಸಿಕೊಂಡರು. ಅವರೊಡನೆ ಸಾರ್ಥಕ ನಿಮಿಷಗಳು ಸಂದುವು. ತುಂಬ ಶಿಸ್ತು – ವಿಶ್ವಾಸಗಳಿಂದ ಮನೆಯ ಹೊರಗಡೆ ಬಂದು ಬೀಳ್ಕೊಟ್ಟರು.

೧೯೪೧ರಲ್ಲಿ ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಿ ಒಂದು ಪುಸ್ತಕ ಬಿಡುಗಡೆ ಮಾಡಲು ಒಪ್ಪಿಸಿದ್ದೆ. ಕಡೆಯ ಗಳಿಗೆಯಲ್ಲಿ ಅವರು ಬರಲಾಗಲಿಲ್ಲ. ಮತ್ತೆ ಸಮ್ಮೇಳನಗಳು ನಡೆಯುತ್ತವೆ. ಆದರೆ ಇನ್ನು ಅವರು ಎಂದೂ ಬರಲಾಗುವುದಿಲ್ಲ. ಕರ್ನಾಟಕದ ರಸ್ತೆ ಸಾರಿಗೆ, ರೈಲು, ಬಂದರು, ಪ್ರವಾಸಧಾಮ ಕುರಿತು ಅವರ ಹಾಗೆ ಮಾತಡಬಲ್ಲ, ಬರೆಯಬಲ್ಲ ಸಮರ್ಥರು ಬಹಳ ಕಡಮೆ. ಅದರಿಂದಾಗಿ ಅವರ ನಿಧನ ಬರಿಯ ಸಾವಲ್ಲ. ದೊಡ್ಡ ನಷ್ಟ ಎಂಬುದು ಸ್ಪಷ್ಟ.

ಮುಂದಿನ ಸಲ ಮುಂಬಯಿಗೆ ಹೋದಾಗ ಮನಸ್ಸು ಕೃಷ್ಣಕುಮಾರರನ್ನು ಕಾಣಲು ಹಾತೊರೆಯುತ್ತದೆ. ಮಾಸದ ನೆನಪು ಮನಸ್ಸಿಗೆ ಹಳೆಯ ದಿನಗಳ ರಸನಿಮಿಷಗಳನ್ನು ಸ್ಮರಣೆಗೆ ತರುತ್ತದೆ. ಈಗ ಅವರು ಕೇವಲ ಒಂದು ನೆನಪು. ಆದರೆ ಆ ನೆನಪು ಕಹಿಯಾದುದಲ್ಲ. ತೊಗಲ ಕಣ್ಣೆದುರು ಕಲ್ಲೂರರು ಇಲ್ಲ. ಬಗೆಗಣ್ಣಿನೆದುರು ಅವರು ಅಳಿಯುವುದಿಲ್ಲ, ಸುಳಿಯುತ್ತಲೇ ಇರುತ್ತಾರೆ. ಅದೊ ಅಲ್ಲಿ ಕೃಷ್ಣಕುಮಾರ ಕಲ್ಲೂರರು, ಅವರ ಹಿಂದೆಯೇ ಕನ್ನಡದ ನೆರಳು!

(ಕನ್ನಡ ನುಡಿ, ಜುಲೈ , ೧೯೮೨)

* * *