ಹಿತಾಸಕ್ತಿಗಳ ಕೈವಾಡ

ಬಳ್ಳಾರಿ ಜಿಲ್ಲೆ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ಜಿಲ್ಲೆ, ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಕೋಲಾರ ಈ ಆರು ಜಿಲ್ಲೆಗಳು ಆಂಧ್ರಪ್ರದೇಶದ ಗಡಿಯಲ್ಲಿರುವ ಕರ್ನಾಟಕದ ಜಿಲ್ಲೆಗಳು. ಇವಿಷ್ಟು ನಮ್ಮ ಹೆಮ್ಮೆಯ ಜಿಲ್ಲೆಗಳು. ಹಿಂದೆ ರಾಜ್ಯ ಸಾಮ್ರಾಜ್ಯಗಳಿದ್ದ ಕಾಲದಲ್ಲಿ ಅವುಗಳನ್ನು ಶತ್ರುಗಳಿಂದ ಸುರಕ್ಷಿತವಾಗಿ ಕಾಪಾಡಲು ಗಡಿ ಪ್ರದೇಶದಲ್ಲಿ ಕಾವಲುಗಾರರ ವಿಶೇಷ ಪಡೆಯನ್ನು ಇರಿಸಿ ಸದಾ ಎಚ್ಚರಿಕೆಯಿಂದ ಇರುತ್ತಿದ್ದರು. ಈಗ ರಾಜ್ಯ ಸಾಮ್ರಾಜ್ಯಗಳು ರಾಜಮಹಾರಾಜರು ಹೊರಟು ಹೋಗಿ ಕೇವಲ ಪ್ರಜಾಪ್ರಭುತ್ವ ನೆಲೆಯೂರಿ ನಿಂತಿದೆ. ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಬಹು ಜನರ ಅಪೇಕ್ಷೆಯಂತೆ ಭಾಷಾವಾರು. ಪ್ರಾಂತ್ಯ ರಚನೆಯನ್ನು ಮಾಡಲಾಯಿತು. ೧೯೫೬ನೇ ಇಸವಿ ನವೆಂಬರ್ ಒಂದನೇ ತಾರೀಖು ಈಗ ಕರ್ನಾಟಕವೆಂದು ಕರೆಯುವ, ಆಗ ಮೈಸೂರು ಎಂದು ಕರೆಯುತ್ತಿದ್ದ, ಕನ್ನಡ ನಾಡಿನ ಪುನರ್ ರಚಿತ ಪ್ರದೇಶ ರೂಪುಗೊಂಡಿತು. ಕನ್ನಡ ನಾಡಿಗೆ ನ್ಯಾಯವಾಗಿ ಸೇರಬೇಕಾದ ಎಷ್ಟೋ ಭಾಗಗಳು ಅನೇಕ ಹಿತಾಸಕ್ತಿಗಳ ಕೈವಾಡದಿಂದ ಕೈತಪ್ಪಿ ಹೋಗಿವೆ. ಸೊಲ್ಲಾಪುರು, ಅಕ್ಕಲಕೋಟೆ, ಜತ್ತ, ತಾಳವಾಡಿ, ಮಡಕಶಿರಾ, ಕಾಸರಗೋಡು, ಆದವಾನಿ ಮೊದಲಾದ ಅನೇಕ ಪ್ರದೇಶಗಳು ಕರ್ನಾಟಕದ ಹೊರಗೆ ಇಂದೂ ಉಳಿದು ಬಿಟ್ಟಿವೆ. ಇದರ ಹಿಂದೆ ದೊಡ್ಡ ರಾಜಕೀಯ ಇತಿಹಾಸವೇ ಅಡಗಿ ಕುಳಿತಿದೆ. ಅದನ್ನು ಸುದೀರ್ಘವಾಗಿ ಪ್ರಸ್ಥಾಪಿಸುವ ಸಮಯ ಇದಲ್ಲ.

ಆದರೆ ನಾವು ಮುಖ್ಯವಾಗಿ ಗಮನಿಸಬೇಕಾದುದು ಈಗಿರುವ ಕರ್ನಾಟಕದ ಸಂರಕ್ಷಣೆ ಹೇಗೆ ಆಗಬೇಕು ಎಂಬುದು. ಅದಕ್ಕಾಗಿ ಈಗಿನ ಕನ್ನಡ ನಾಡಿನ ಗಡಿಯ ಭಾಗಗಳಲ್ಲಿ ವಿಶೇಷವಾಗಿ ಆಸಕ್ತಿಯನ್ನು, ಗಮನವನ್ನು ಕೊಡಬೇಕಾದುದು ತುಂಬಾ ಅಗತ್ಯ. ಮಹಾರಾಷ್ಟ್ರದವರ ರಾಜ್ಯ ವಿಸ್ತಾರದ ವಕ್ರದೃಷ್ಟಿ ಸದಾ ಕನ್ನಡ ನಾಡಿನ ಗಡಿಯ ಪ್ರದೇಶದಲ್ಲಿ ಇದ್ದೇ ಇದೆ. ಬೀದರ್ ಜಿಲ್ಲೆ, ಕಾರವಾರ ಜಿಲ್ಲೆ ಮತ್ತು ಬೆಳಗಾವಿ ನಗರ -ಇವಿಷ್ಟನ್ನು ಮಹಾರಾಷ್ಟ್ರಕ್ಕೆ ಒಪ್ಪಿಸಬೇಕೆಂದು ಅವರು ಆಗಾಗ್ಗೆ ಬೊಬ್ಬೆ ಹಾಕುತ್ತಿರುತ್ತಾರೆ.

ಬಳ್ಳಾರಿಯಲ್ಲಿ ಕನ್ನಡ ಸ್ಥಿತಿ

ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಗಡಿಯಲ್ಲಿರುವ ಜಿಲ್ಲೆಗಳನ್ನು ಅದರಲ್ಲಿಯೂ ಮುಖ್ಯವಾಗಿ ಬಳ್ಳಾರಿ ನಗರವನ್ನು ವಿಶೇಷವಾಗಿ ನೋಡಿಕೊಳ್ಳಬೇಕಾದ ಅಗತ್ಯವಿದೆ. ಕರ್ನಾಟಕ ಏಕೀಕರಣವಾಗಿ ಇದೀಗ ೨೫ ವರ್ಷಗಳು ಸಂದಿವೆ. ಇಷ್ಟಾದರೂ ಬಳ್ಳಾರಿ ನಗರದಲ್ಲಿ ಕನ್ನಡದ ವಾತಾವರಣ ಎಷ್ಟಿರಬೇಕೋ ಅಷ್ಟು ಇನ್ನೂ ಮೂಡಿಲ್ಲವೆಂದು ವಿಷಾದದಿಂದ ಹೇಳಬೇಕಾಗಿದೆ. ಬಳ್ಳಾರಿ ಜಿಲ್ಲೆಯಲ್ಲೂ ಕನ್ನಡದ ವಾತಾವರಣವನ್ನು ಉಂಟು ಮಾಡಲು ಈ ಪ್ರದೇಶದ ಸಾಹಿತಿಗಳೂ ಸಾಹಿತ್ಯೋಪಾಸಕರೂ ಹಿಂದಿನಿಂದಲೂ ಶ್ರಮಿಸುತ್ತಾ ಬಂದಿದ್ದಾರೆ. ಕೇವಲ ೩೦೦ ವರ್ಷಗಳ ಹಿಂದೆ ಆಗಿಹೋದ ವಿಜಯನಗರ ಮಹಾ ಸಾಮ್ರಾಜ್ಯ ಕರ್ನಾಟಕ-ಆಂಧ್ರಪ್ರದೇಶ ಸ್ನೇಹಕ್ಕೆ ಭದ್ರ ಬೆಸುಗೆ ಹಾಕಿದ್ದು ಅಲ್ಲದೆ ಕನ್ನಡದ ಪ್ರಚಾರಕ್ಕೆ ಸಾಕಷ್ಟು ಆಶ್ರಯ ಕೊಟ್ಟಿತ್ತು.

ಈಗ ನಡೆಯುತ್ತಿರುವ ಈ ಮೂರನೇ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಂಟಪಕ್ಕೆ ಹೆಸರಿಟ್ಟಿರುವ ವೈ.ನಾಗೇಶಶಾಸ್ತ್ರಿ, ವೇದಿಕೆಗೆ ಹೆಸರಿಟ್ಟಿರುವ ಬಳ್ಳಾರಿ ಬೀಚಿ- ಅವರು ಪ್ರಸಿದ್ಧರಾಗಿದ್ದಾರೆ. ಅದರಂತೆ ಇಂದು ಈ ಸಮ್ಮೇಳನದ ಅಧ್ಯಕ್ಷರಾಗಿರುವ ಜೋಳದ ರಾಶಿ ದೊಡ್ಡೇನೆಗೌಡರು, ಈ ಸಮ್ಮೇಳನದಲ್ಲಿ ಭಾಗವಹಿಸುತ್ತಾ ಇರುವ ಕೋ. ಚನ್ನಬಸಪ್ಪನವರು, ಡಾ|| ಎಸ್.ಎಂ. ವೃಷಭೇಂದ್ರಸ್ವಾಮಿಯವರು, ಹಿ.ಮಾ. ನಾಯಯ್ಯನವರು, ಕೆ.ವಿರೂಪಾಕ್ಷಗೌಡರು ಮೊದಲಾದ ಇನ್ನು ಅನೇಕ ಜನ ಸಾಹಿತಿಗಳು ಕನ್ನಡದ ಡಿಂಡಿಮವನ್ನು ನುಡಿಸಿದ್ದಾರೆ. ಬಳ್ಳಾರಿಯಲ್ಲೂ ಮತ್ತು ಈ ಜಿಲ್ಲೆಯಲ್ಲೂ ಇದುವರೆಗೆ ಐದು ದೊಡ್ಡ ಸಮ್ಮೇಳನಗಳೂ ನಡೆದಿವೆ. ೧೯೨೦ರ ಜೂನ್ ೨೦ ಮತ್ತು ೨೧ರಂದು ಹೊಸಪೇಟೆಯಲ್ಲಿ ರೊದ್ದ ಶ್ರೀನಿವಾಸರಾಯರ ಅಧ್ಯಕ್ಷತೆಯಲ್ಲಿ, ೧೯೨೬ರ ಮೇ ೨೨ ರಿಂದ ೨೪ರವರೆಗೆ ಬಳ್ಳಾರಿಯಲ್ಲಿ ಡಾ||  ಫ.ಗು. ಹಳಕಟ್ಟಿ ಅವರ ಅಧ್ಯಕ್ಷತೆಯಲ್ಲಿ, ೧೯೩೮ರ ಡಿಸೆಂಬರ್ ೨೯ ರಿಂದ ೨೧ರ ವರೆಗೆ ಬಳ್ಳಾರಿಯಲ್ಲಿ ರಂ. ರಾ. ದಿವಾಕರ ಅವರ ಅಧ್ಯಕ್ಷತೆಯಲ್ಲಿ, ೧೯೮೭ರ ಮೇ ೨೯ರಂದು ಹರಪನಹಳ್ಳಿಯ ಶ್ರೀ ಸಿ.ಕೆ. ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ, ೧೯೮೫ರ ಜನವರಿ ೧೮ರಿಂದ ೨೦ರ ವರೆಗೆ ಬಳ್ಳಾರಿಯಲ್ಲಿ ಡಾ||  ಗೋಕಾಕ ಅವರ ಅಧ್ಯಕ್ಷತೆಯಲ್ಲಿ ಕ್ರಮವಾಗಿ ಆರನೆಯ, ಹನ್ನೆರಡನೆಯ ೨೩ನೆಯ, ೩೦ನೆಯ ಮತ್ತು ೪೦ನೆಯ ಸಾಹಿತ್ಯ ಸಮ್ಮೇಳನಗಳು ತುಂಬಾ ಯಶಸ್ವಿಯಾಗಿ ಇಲ್ಲಿ ನಡೆದಿವೆ.

ಅಪರೂಪದ ವ್ಯಕ್ತಿ

ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಎರಡು ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ನಡೆದಿದ್ದು ಇದೀಗ ಮೂರನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಇಂದು ಆರಂಭಗೊಂಡಿದೆ. ಇದಕ್ಕೆ ಅಧ್ಯಕ್ಷರಾಗಿರುವ ಜೋಳದ ರಾಶಿ ದೊಡ್ಡನಗೌಡರು ವಯೋವೃದ್ಧರೂ, ಜ್ಞಾನವೃದ್ಧರೂ, ಶೀಲವೃದ್ಧರೂ ಆಗಿದ್ದಾರೆ. ಅವರು ಗಮಕಿಯೂ ಹೌದು, ಸಾಹಿತಗಳೂ ಹೌರು. ಸಂಗೀತ, ಸಾಹಿತ್ಯ, ಶ್ರೀಮಂತಿಕೆ, ವಿದ್ವದ್ ಇವೆಲ್ಲಾ ಒಬ್ಬರಲ್ಲಿ ಕಂಡು ಬರುವುದು ಅಪರೂಪ. ಇವರು ಅಂತಹ ಅಪರೂಪದ ವ್ಯಕ್ತಿಗಳು. ಇವರ ಆತ್ಮ ಚರಿತ್ರೆ ಈಗಾಗಲೇ ಪ್ರಕಟವಾಗಿದೆ. ಇವರ ಗಮಕ ಎಂದರೆ ಅದು ಕೇವಲ ಆತ್ಮಾನಂದಕ್ಕಾಗಿ ತನ್ಮಯತೆಯಿಂದ ಲೋಕವೆಲ್ಲಾ ಮರೆತು ತನಗೆ ತಾನೇ ಹಾಕಿಕೊಳ್ಳುವ ಭಾವನಿರ್ಭರವಾದ ವಿಶಿಷ್ಟ ಹಾಡುಗಾರಿಕೆ. ಅಂಥವರು ಈ ಸಮ್ಮೇಳನಕ್ಕೆ ಅಧ್ಯಕ್ಷರಾಗಿರುವುದು ನನಗೆ ಹೆಚ್ಚು ಸಂತೋಷವನ್ನುಂಟು ಮಾಡಿದೆ.

ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಉದ್ದೇಶವೆಂದರೆ ಆಯಾಯ ಜಿಲ್ಲೆಯ ಪ್ರತಿಭಾಶಾಲಿಗಳಿಗೆ ಹೆಚ್ಚು ಅವಕಾಶ ಕೊಡಬೇಕು ಎಂಬುದು. ಹೊರಗಿನವರನ್ನು ಕರೆಯಬಾರದೆಂದು ಅಲ್ಲ. ಆದರೆ ಅಖಿಲ ಭಾರತ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಎಲ್ಲಾ ಜಿಲ್ಲೆಯ ಎಲ್ಲಾ ಲೇಖಕರು ಎಷ್ಟೇ ಪ್ರಯತ್ನ ಪಟ್ಟರು ಅವಕಾಶ ಕಲ್ಪಿಸಿಕೊಡಲು ಸುತಾರಾಂ ಸಾಧ್ಯವಿಲ್ಲದ ಮಾತು. ಯಾವ ಲೇಖಕನೂ ಕೇವಲ ತನ್ನನ್ನು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನಿಸಬೇಕೆಂದು ಬರವಣಿಗೆಯಲ್ಲಿ ತೊಡಗುವುದಿಲ್ಲ. ತನಗೆ ತಿಳಿದುದ್ದನ್ನು ತನಗೆ ತೋರಿದಂತೆ ತಿಳಿಸಲು ಪ್ರತಿಯೊಬ್ಬ ಲೇಖಕನು ಬರವಣಿಗೆಯಲ್ಲಿ ತೊಡಗುತ್ತಾನೆ. ಅವನವನ ಅನುಭವ ಶೋಧನೆಗೊಂಡು ಪ್ರತಿಭೆ – ಸ್ಫೂರ್ತಿಗಳಿಂದ ಒಂದು ಮಹತ್ವದ ಕೃತಿ ರೂಪುಗೊಳ್ಳುತ್ತದೆ. ಈ ರೀತಿ ಮೌಲಿಕ ಸಾಹಿತ್ಯ ರಚನೆ ಮಾಡಿದ ಸಾಹಿತಿಗಳಿಗೆ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾತಿನಿಧ್ಯ ಕೊಡಲು ಎಷ್ಟು ಸಾಧ್ಯವೋ ಅಷ್ಟು ಸದಾ ಪ್ರಯತ್ನ ಪಡುತ್ತಿರುತ್ತೇನೆ. ಆದರೆ ಕರ್ನಾಟಕದಲ್ಲಿ ಸಾಹಿತಿಗಳ ಸಂಖ್ಯೆ ಬಹಳ ದೊಡ್ಡದು. ಭಾರಿ ಪ್ರಮಾಣದಲ್ಲಿರುವ ಆ ಸಾಹಿತಗಳಿಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಲು ಪ್ರಯತ್ನಿಸಬೇಕಾದುದು ಸಂಬಂಧಪಟ್ಟವರೆಲ್ಲರು ಕರ್ತವ್ಯ ಎಂಬುದೂ ನಿಜ. ಈ ನಿಜವನ್ನು ಒಪ್ಪಿಕೊಂಡರು ಅದರ ಇತಿಮಿತಿಯನ್ನು ಮರೆಯಬಾರದು.

ಜಿಲ್ಲಾ ಸಮ್ಮೇಳನಗಳ ಉದ್ದೇಶ

ಇವೆಲ್ಲವನ್ನೂ ಮನಗಂಡು ಜಿಲ್ಲಾ ಸಾಹಿತ್ಯ ಸಮ್ಮೇಳವನ್ನು ಆರಂಭಿಸಲಾಯಿತು. ಹೊಸದಾಗಿ ಲೇಖನ ವ್ಯವಸಾಯಕ್ಕೆ ತೊಡಗಿರುವಾಗ ಎಳೆಯ ಪ್ರತಿಭೆ ಕೂಡ ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸಲು, ಹಿರಿಯರ ಜೊತೆಗೆ ಭಾಗವಹಿಸುವಂತೆ ಮಾಡಿಕೊಡಲು ಸಾಧ್ಯವಾಗುತ್ತದೆ. ಇದರಿಂದ ಹಳೆಯ ಬೇರು ಹೊಸ ಚಿಗುರು ಎರಡೂ ಕೂಡ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ತುಂಬಾ ಆಕರ್ಷಕವಾಗಿ, ಫಲಪ್ರದವಾಗಿ ಉಪಯುಕ್ತವಾದ ರೀತಿಯಲ್ಲಿ ಏರ್ಪಾಟಾಗಿ ಬಂದಿವೆ. ಇದೀಗ ಮಾರ್ಚಿ ೭ ಮತ್ತು ೮ ರಂದು ಶನಿವಾರ ಭಾನುವಾರ ಬಳ್ಳಾರಿಯಲ್ಲಿ ನಡೆಯುತ್ತಿರುವ ಈ ಮೂರನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಶುಭವಾಗಿ ಪರಿಣಾಮಕಾರಿಯಾಗಿ ನಡೆಯಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ.

(ಬಳ್ಳಾರಿಯ ಬಳ್ಳಾರಿ ರಾಘವ ಕಲಾ ಮಂದಿರದಲ್ಲಿ ರಚಿಸಲಾಗಿದ್ದವೈ.ನಾಗೇಶಶಾಸ್ತ್ರಿ ಮಂಟಪದ ಬೀಚಿ ವೇದಿಕೆಯಲ್ಲಿ ಮಾರ್ಚಿ ಮತ್ತು ೮ರಂದು ನಡೆದ ಬಳ್ಳಾರಿ ಜಿಲ್ಲಾ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಹಂಪನಾ ಶುಭ ಹಾರೈಸಿ ಮಾಡಿದ ಭಾಷಣದ ಪೂರ್ಣಪಾಠ)

* * *