ಜಿಲ್ಲಾ ಸಾಹಿತ್ಯ ಸಮ್ಮೇಳನದ ಹಿಂದೆ ಇರುವ ಪ್ರೇರಣೆ ಮತ್ತು ಪರಿಕಲ್ಪನೆಗಳು ಕುರಿತು ಕೆಲವು ವಿವರಗಳನ್ನು ಕೊಡಬಯಸುತ್ತೇನೆ. ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಜಿಲ್ಲೆಯ ಎಲ್ಲ ಸಾಹಿತಿಗಳಿಗೂ ಅವಕಾಶ ಸಿಗುವುದು ಅಸಾಧ್ಯ. ಅಲ್ಲದೆ ಆ ವೇದಿಕೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇವೆ ಸಲ್ಲಿಸಿ ಕೀರ್ತಿಶಾಲಿಗಳಾಗಿರುವ ಪ್ರತಿಷ್ಠಿತರಿಗೆ ಮೀಸಲು. ಅದು ಸಹಜವೂ ಆಗಿದೆ. ಇತ್ತೀಚೆಗೆ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ವಯೋಮಾನಕ್ಕೆ ಸೇರಿದ ಹೊಸಬರಿಗೂ ಪ್ರಾತಿನಿಧ್ಯ ಕೊಡಲಾಗುತ್ತಿದೆ. ಇಷ್ಟಿದ್ದೂ ನೂರಾರು ಜನ ಅದರ ಕಕ್ಷೆಗೆ ಒಳಪಡದೆ ಹೊರಗೇ ಇರುತ್ತಾರೆ.

ಅದರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿ ಅಲ್ಲಿ ಆಯಾ ಜಿಲ್ಲೆಯ ಪ್ರತಿಭೆಗಳಿಗೆ ಪ್ರಾತಿನಿಧ್ಯ ಹಾಗೂ ಪುರಸ್ಕಾರ ಕೊಡುವ ಪ್ರಯತ್ನ ನಡೆದಿದೆ. ವಾಸ್ತವವಾಗಿ ಜಿಲ್ಲೆಯ ಲೇಖಕರಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ಕಲ್ಪಿಸಿಕೊಡುವುದು ಎಂಬ ಸರಳ ನಿಲುವು ಮಾತ್ರ ಈ ಕಾರ್ಯಕ್ರಮಗಳ ಅಂತಿಮ ಗುರಿಯಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನಗಳಿಂದ ಇದಕ್ಕೂ ಹೆಚ್ಚಿನ ಪ್ರಯೋಜನಗಳಿವೆ. ಇಂಥ ಪರಿಮಿತ ಮತ್ತು ವಿಮರ್ಶೆ ನಡೆಸಲು ವಿಶೇಷವಾದ ಅನುಕೂಲವಿರುತ್ತದೆ. ಇದರಿಂದ ಸಾಹಿತ್ಯ ಚರಿತ್ರೆ ಹಾಗೂ ಸಾಹಿತ್ಯ ವಿಮರ್ಶೆ ಹೆಚ್ಚು ವಸ್ತುನಿಷ್ಠವಾಗಿರಲು ಪೂರಕ ಸಾಮಗ್ರಿ ಉಪಲಬ್ಧವಾಗಲು ಸಹಾಯವಾಗುತ್ತದೆ.

ವ್ಯಾಪಕವಾದ ಭೌಗೋಳಿಕ ಎಲ್ಲೆಯಲ್ಲಿ ವ್ಯವಾರ ಭಾಷೆಯಾಗಿರುವ ಕನ್ನಡದಂಥ ಪ್ರತಿಯೊಂದು ಜೀವಂತ ಭಾಷೆಯೂ ಪ್ರತಿ ೫.೫ ಕಿಲೋಮೀಟರಿಗೂ ಪ್ರಾದೇಶಿಕ ಭಿನ್ನತೆಯ ಲಕ್ಷಣಗಳನ್ನು ಮೈಗೂಡಿಸಿಕೊಂಡು ಬದಲಾಗುತ್ತಾ ಹೋಗುತ್ತಿರುತ್ತದೆ. ಹೀಗೆ ಭಾಷೆ, ಬದುಕು, ಉಡಿಗೆ, ಆಚಾರ, ವಿಚಾರ, ಆಹಾರ, ಬೇರೆಯಾಗುತ್ತಾ ಹೋಗುವುದು, ಹೊರಗೆ ಸ್ಪಷ್ಟವಾಗಿ ಬೇಗ ಕಾಣದಿರಬಹುದು. ಆದರೆ ಅದರಲ್ಲಿ ಇಂಥ ಪ್ರಕ್ರಿಯೆ ನಿರಂತರವಾಗಿ ನಡೆದೇ ಇರುತ್ತದೆ. ಪ್ರಾದೇಶಿಕ ನುಡಿಕಟ್ಟು, ಜಾನಪದ ಸತ್ಯ, ಅಲ್ಲಲ್ಲಿನ ಭಾಷಾ ಸೊಗಸು ವಿಶಿಷ್ಟತೆಯನ್ನೂ ಅಲ್ಲಲ್ಲಿನ ಲೇಖಕರು ಸಾಹಿತ್ಯದಲ್ಲಿ ಸಾಕ್ಷಾತ್ಕರಿಸುವ ಸಾಧ್ಯತೆಯಿರುತ್ತದೆ.

ಹೀಗೆ ಸ್ಥಳೀಯ ಪರಿಸರವನ್ನು, ಸಂಸ್ಕೃತಿಯನ್ನು ಸ್ಥಾಯಿಗೊಳಿಸಿರುವ ಕೃತಿಗಳು ಮೌಲಿಕವಾಗಿದ್ದಲ್ಲಿ ಅವು ಪ್ರಾದೇಶಿಕ ಸಾಹಿತ್ಯವಾಗಿ ಮಹತ್ವ ಪಡೆಯುತ್ತದೆ. ಪ್ರಾದೇಶಿಕ ಸಂಪತ್ತಿನ ಮಹತ್ವವನ್ನು, ಮುಖ್ಯ ಪರಂಪರೆಯನ್ನು ನಮ್ಮ ಕೆಲವು ಹಿರಿಯ ಲೇಖಕರು ದಾಖಲಿಸಿರುವ ಅನನ್ಯತೆಯನ್ನು ಇಲ್ಲಿ ನೆನೆಯಬಹುದು. ಕಾರಂತ, ಮಿರ್ಜಿ ಅಣ್ಣಾರಾಯ, ರಾವ್‌ಬಹದ್ದೂರು, ದು.ನಿಂ. ಬೆಳಗಲಿ, ಬಸವರಾಜ ಕಟ್ಟೀಮನಿ, ಜತ್ತಪ್ಪ ರೈ, ಚದುರಂಗ -ಮೊದಲಾದ ಕಥೆ ಕಾದಂಬರಿಗಳಲ್ಲಿ ಪ್ರಾದೇಶಿಕ ಜೀವನದ ಸೊಗಡು ಮತ್ತು ಸವಿ ಸೊಗಸಾಗಿ ಚಿತ್ರಿತವಾಗಿರುತ್ತದೆ. ಇದು ಕಿರಿಯ ಲೇಖಕರು ಹಾಗೂ ಅಪ್ರಸಿದ್ಧರ ಕೃತಿಗಳಲ್ಲೂ ಹೊಳಲುಗೊಟ್ಟಿರುವ ಸಾಧ್ಯತೆಯಿದೆ.

ಇಂಥ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಆ ಬಗೆಯ ಅಪರೂಪತೆಯನ್ನು ವಿಮರ್ಶಕರು ಗುರುತಿಸಬಹುದು, ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರ ಗಮನವನ್ನು ಸೆಳೆಯಬಹುದು. ಅದರೊಂದಿಗೆ ಆಯಾ ಜಿಲ್ಲೆಯ ಲೇಖಕರು ಒಂದೆಡೆ ಕಲೆತ್ತು ಪರಸ್ಪರ ಪರಿಚಯ ಪಡೆಯುವುದರೊಂದಿಗೆ ತಮ್ಮ ಸಮಸ್ಯೆಗಳನ್ನು ವೈಯಕ್ತಿಕ ನೆಲೆಯಲ್ಲಿ ಹೇಗೆ ಬಗೆಹರಿಸಿಕೊಳ್ಳಬಹುದೆಂಬುದನ್ನು ತಿಳಿದುಕೊಳ್ಳಬಹುದು. ಜಿಲ್ಲೆಯಲ್ಲಿ ಸಾಹಿತ್ಯದ ವಾತಾವರಣ ನಿರ್ಮಾಣಗೊಳ್ಳಲೂ ಇಂಥ ಸಮ್ಮೇಳನಗಳು ಸಹಕಾರಿಯಾಗುತ್ತವೆ.

(೨೨೮೫ರಂದು ಅರಸೀಕೆರೆ ಮಾಲೆಕಲ್ಲು ತಿರುಪತಿಲ್ಲಿ ನಡೆದ ಮೂರನೆಯ ಹಾಸನ ಜಿಲ್ಲೆ ಸಾಹಿತ್ಯ ಸಮ್ಮೇಳನದಲ್ಲಿ ಮಾಡಿ ಭಾಷಣ ಎಸ್.ಕೆ.ಕರೀಂ ಖಾನರು ಜಿಲ್ಲಾ ಸಮ್ಮೇಳನದ ಅಧ್ಯಕ್ಷರಾಗಿದ್ದರು.)

 (ಕನ್ನಡ ನುಡಿ, ಜುಲೈ , ೧೯೮೫)

* * *