ಪ್ರಿಯ ಮಿತ್ರರಾದ ಬಿ.ಎ. ಮಹೀಶವಾಡಿಯವರು ಇಷ್ಟು ಬೇಗೆ ನಮ್ಮನ್ನಗಲಿ ಇಹಯಾತ್ರೆ ಪೂರೈಸಿ ಹೊರಡುತ್ತಾರೆಂದು ನಾನು ನಿರೀಕ್ಷಿಸಿರಲಿಲ್ಲವಾಗಿ, ಇತ್ತೀಚೆಗೆ ಇದ್ದಕ್ಕಿದ್ದ ಹಾಗೆ ಅವರ ನಿಧನ ವಾರ್ತೆ ಬಂದಾಗ ನಾನು ನಂಬುವುದಕ್ಕೆ ಹಿಂಜರಿದೆ. ಯಮಸ್ಯ ಕರುಣಂ ನಾಸ್ತಿ.

‘ಬಿಬಿಮ’ರವರ ನಿಕಟವಾದ ಪರಿಚಯದ ಸುಖ ನನಗೆ ಒದಗಿತ್ತು – ನನ್ನ ಹೆಮ್ಮೆಗೆ ಕ್ಷಮೆಯಿರಲಿ. ಈಗ ಯೋಚಿಸಿದರೆ ಅದೊಂದು ಸುಯೋಗವೇ ಇರಬಹುದೆನಿಸುತ್ತದೆ. ಅವರ ಸ್ವಭಾವದ ಬಹ್ವಂಶ ನನಗೆ ಲಭಿಸಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರು ಹೆಸರಿಗಾಗಿ ಹಾತೊರೆದವರಲ್ಲ. ಅಷ್ಟೇನೂ ವ್ಯಾವಹಾರಿಕ ಕುಶಲರೂ ಅಲ್ಲ. ಎಲೆಮರೆಯಲ್ಲೇ ಸುಳಿದು ಕಾಯಕ ಮುಗಿಸುವ ತೃಪ್ತ ಜೀವಿ. ತಮಗೆ ನ್ಯಾಯವಾಗಿ ಸಿಗಬೇಕಾದ ಪ್ರಚಾರಕ್ಕೆ ಕೊರತೆ ಬಿದ್ದಾಗಲೂ ಕೊರಗಿದವರಲ್ಲ. ಪ್ರಸಿದ್ಧಿ ಬರಬೇಕಾದಷ್ಟು ಕಡೆಗೂ ಬರಲಿಲ್ಲ. ಅದರಲ್ಲಿಯೂ ಅವರ ಕವನ ಸಂಕಲನಗಳಿಗೆ –ಮಾಯಾ ಮಂದಿರ (೧೯೫೦), ಹಾಲು ಹಣ್ಣು (೧೯೫೪), ಕಟ್ಟುವ ಕೈ (೧೯೫೯), ಹಂಸ ಮಿಥನ (೧೯೬೪) – ನಾಲ್ಕು ಕವನ ಸಂಕಲನಗಳು ಅವರ ಕಾವ್ಯಶ್ರೀಯ ಪ್ರತಿಬಿಂಬವಾಗಿವೆ.

ಆದರೆ ಒಂದು ಮಾತು. ಅವರಿಗೆ ಸ್ನೇಹವಲಯ ಪರಿಮಿತವಾಗಿದ್ದರೂ ಅದು ಹರ್ಷದಾಯಕವಾಗಿತ್ತು. ‘ಅವರು ಮಖೇಡಿಯೇನೊ’ ಎನ್ನುವಷ್ಟು ಸಂಕೋಚ ಪ್ರವೃತ್ತಿ. ಆಮೆ ಸ್ವಭಾವದ ಬಿಬಿಮಗೆ ಆಯ್ಕೆ ಮಾಡಿದ ಕೆಲವೇ ಮಂದಿ ಸಜ್ಜನರ ಒಡನಾಟವಿದ್ದರೂ ಅದು ಹೆಜ್ಜೇನು ಮೆದ್ದಂತೆ ಆಗಿತ್ತು. ಅವರಲ್ಲಿದ್ದ ಇಂಥ ಕೆಲವು ಸ್ವಭಾವ ವೈಚಿತ್ರಗಳು ಅವರನ್ನು ದೂರವಿಡುವಂತೆ ಮಾಡಿರಲಿಲ್ಲ; ಆಕರ್ಷಕರಾಗೇ ಉಳಿದಿದ್ದರು. ತಮ್ಮ ಮಾನವ ಪ್ರೇಮದಿಂದ ಪ್ರಿಯರಾಗಿದ್ದರು, ಕರ್ತವ್ಯನಿಷ್ಠೆಯಿಂದ ಬಯಸಿ ಬೇಡುವ ಬೇಕಾದ ವ್ಯಕ್ತಿ ಆಗಿದ್ದರು, ತಮ್ಮ ಅಸೀಮ ಅಹಿಂಸಾಜನ್ಯ ದಯಾರ್ದ್ರ ಹೃದಯದಿಂದ ನಮ್ಮ ಹೃದಯ ಹೊಗುವ ಸಂಪನ್ನರಾಗಿದ್ದರು. ಪರಿಚಿತ ವಲಯದಲ್ಲಿ ಎಲ್ಲರ ಪ್ರೀತಿಯನ್ನು ಹೇಗೊ ಹಾಗೆ ಗೌರವವನ್ನೂ ಆಸ್ತಿಯಂತೆ ಗಳಿಸಿದ್ದರು. ಆಸ್ತಿ ಗಳಿಸಿದ್ದರು ಎಂದು ಹೇಳಿದ್ದು ಇಷ್ಟೆ; ಧನ ಪಿಶಾಚಿಗೆ ಬಲಿಯಾಗಲಿಲ್ಲ, ಹಣ ಸಂಪಾದನೆಗೆ ತಮ್ಮ ಸ್ನೇಹ ಪರಿಚಯಗಳನ್ನು ಬಂಡವಾಳ ಸಾಧನವಾಗಿ ಬಳಸಿಕೊಳ್ಳಲಿಲ್ಲ. ಆದರೆ ಶಿಷ್ಯ ಸಂಪತ್ತನ್ನು, ಸಹೃದಯ ಸ್ನೇಹ ಬಳಗವನ್ನು ವಿಪುಲವಾಗಿ ಪಡೆದರು; ಜಿನಧರ್ಮ ಸಿದ್ಧಾಂತದ ಕೆಲವು ತತ್ವಗಳನ್ನು ಅನುಷ್ಠಾನಿಸಿ ಮೈಗೂಡಿಸಿಕೊಂಡಿದ್ದರು. ಅದರ ಪರಿಣಾಮವಾಗಿ ಅಪರಿಗ್ರಹವನ್ನು ಉಸಿರಾಡಿದರು. ವಿನಯದಿಂದ ಬಾಳಿದರು, ವಿನಯದಿಂದಲೇ ಮರಣಿಸಿದರು.

ಬೆಳಗಾವಿಯ ಲಿಂಗರಾಜ ಕಾಲೇಜು, ಗದಗದ ಜೆ.ಟಿ.ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ – ಈ ಮೂರು ಅವರ ಮುಖ್ಯ ಸೇವಾ ಕ್ಷೇತ್ರಗಳು. ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಲಿಲ್ಲ, ಲೋಭವನ್ನೂ ತೋರಲಿಲ್ಲ. ಪ್ರಸನ್ನವಾದ ಮನೋವೃತ್ತಿಯಿಂದ ತಮ್ಮ ಪಾಲಿಗೆ ಬಂದದ್ದನ್ನು ನಿರ್ವಂಚನೆಯಿಂದ ಯಶಸ್ವಿಯಾಗಿ ನಿರ್ವಹಿಸಿ ನಿರ್ಗಮಿಸಿದ್ದಾರೆ; ಇದು ವೃತ್ತಿ ಗೌರವ ಘನತೆಯ ಪ್ರತೀಕ. ತಮ್ಮ ಶಕ್ತಿಯನ್ನು ಬೇಡಿದವರಿಗಾಗಿ ಬಳಸಿದರು. ಸುಪಾತ್ರರಲ್ಲಿ ವಿನಿಯೋಗಿಸಿದರು. ನನ್ನ ಮನಸ್ಸಿನ ಮೇಲೆ ಸುಲಭವಾಗಿ ಅಳಿಸಲಾಗದ ಚಿರಸ್ಥಾಯಿಯಾದ ನೆನಪು ಉಳಿಸಿದ್ದಾರೆ. ಅವರ ಹರ್ಷೋತ್ಪಾದಕ ಹಿತಮಿತ ಮಾತುಗಾರಿಕೆಯಿಂದ, ಕಲ್ಮಷರಹಿತವಾದ ಬೆಳ್‌ನಗೆಯಿಂದ ಅವರ ಕಪ್ಪು ಮುಖದಲ್ಲಿ ಶುದ್ಧಾಂತಃಕರಣದಂತೆ ನಗೆಯೂ ಒಪ್ಪವಾಗಿ ಎದ್ದು ಕಾಣುತ್ತಿತ್ತು.

ಡಾ||  ಆ.ನೇ. ಉಪಾಧ್ಯೆ ಮತ್ತು ಮಿರ್ಜಿ ಅಣ್ಣಾರಾಯ ಲೇಖನ ಮಾರ್ಗದಲ್ಲಿ ಬಿಬಿಮರವರು ಸಾಗಿದ್ದುಂಟು. ಕೇವಲ ಕೆಲವು ವರ್ಷಗಳಿಂದಾಚೆಗಷ್ಟೇ ಅವರ ಬರವಣಿಗೆ ವೇಗ ಪಡೆದಿತ್ತು. ವಿಶೇಷವಾಗಿ ಜೈನ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳು, ಪುಸ್ತಕಗಳು ಮೆರವಣಿಗೆ ಸಾಲಿನಂತೆ ಒಂದರ ಹಿಂದೊಂದು ಸಾಲಾಗಿ ಶಿಸ್ತಾಗಿ ಹೊರ ಬಂದವು – ಜೈನ ವಾಙ್ಮಯ ಪರಿಶೋಧನೆ(೧೯೭೬), ಪ್ರಶ್ನೋತ್ತರ ರತ್ನಮಾಲಿಕಾ (೧೯೭೭), ಜೈನ ಸಿದ್ಧಾಂತ ಸಮೀಕ್ಷೆ (೧೯೭೭), ಕನ್ನಡ ಜೈನ ವಾಙ್ಮಯ ವಿಚಾರ (೧೯೭೬), ಪ್ರಬಂಧ ಶ್ರೀಗಂಧ(೧೯೭೬), ಮಂಗರಸ ಸಮ್ಯುಕ್ತ್ವಕೌಮುದಿ (೧೯೭೬), ನೇಮಿಜಿನೇಶನ ಸಂಗತಿ(೧೯೭೯), ಅನಂತರನಾಥ ಪುರಾಣ(೧೯೭೫), ನಾಗಚಂದ್ರನ ಸೀತಾಪಹರಣ ಸನ್ನಿವೇಶ (೧೯೭೭), ಚಾರುದತ್ತ ಚರಿತ್ರೆ(೧೯೭೯). ಕಾವ್ಯ, ಚರಿತ್ರೆ, ವಿಮರ್ಶೆ, ಗ್ರಂಥ ಸಂಪಾದನೆ – ಇವು ಅವರ ಲೇಖನ ವ್ಯವಸಾಯದ ಚೌಕಟ್ಟು. ಅವರ ಒಟ್ಟು ಸಾಹಿತ್ಯ ಕೃಷಿ ನಿರಾಶಾದಾಯಕವಲ್ಲ. ಸನ್ಮತಿ ಪತ್ರಿಕೆಯ ಸಂಪಾದಕ ಮಂಡಲಿಯಲ್ಲಿದ್ದು ಸೇವೆ ಸಲ್ಲಿಸಿದ್ದು ಕೂಡ ಇಲ್ಲ ಉಲ್ಲೇಖನೀಯು ಅವರ – ನನ್ನ ಸ್ನೇಹ ಕುರಿತು ಪರಿಭಾವಿಸಿ ಮೆಲುಕು ಹಾಕುತ್ತಾ ಹೊರಟಂತೆ ಅಂತರಂಗ ಆರ್ದ್ರತರವಾಗುತ್ತದೆ. ಬಿ.ಬಿ.ಮಹಿಷವಾಡಿ ಈಗ ಬರಿಯ ಸ್ಮೃತಿ. ಆ ನೆನಪು ಕಹಿಯಲ್ಲ. ಕಹಿ ಅವರ ಹಗೆ. ಸಿಹಿ ಅವರ ಎರಡನೆಯ ಹೆಸರು. ಆ ಸಿಹಿ ಮುಪ್ಪಿಲ್ಲದ್ದು, ಮುಕ್ಕಿಲ್ಲದ್ದು ಮತ್ತು ಡಯಾಬಿಟಿಸ್ ತರುವಂತಹುದಲ್ಲ.

(ಕನ್ನಡ ನುಡಿ, ಆಗಸ್ಟ್ ೧೬, ೧೯೮೨)

* * *