ಇತ್ತೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತರಾದವರ ಗಮನವನ್ನು ಸೆಳೆದಿರುವ ವಿಷಯ ಎಂದರೆ ಪ್ರೌಢ ಶಿಕ್ಷಣದಲ್ಲಿ ಸಂಸ್ಕೃತ ಭಾಷೆ ಸ್ಥಾನ ಯಾವುದಿರಬೇಕೆಂಬುದು. ಈ ಸಂಗತಿ ವಾಸ್ತವವಾಗಿ ಚರ್ಚೆಗೆ ಅವಕಾಶ ಮಾಡಿಕೊಡಬೇಕಾದುದಿಲ್ಲ. ಯಾವ ದೇಶದಲ್ಲೂ ಯಾವ ಪ್ರಾಂತದಲ್ಲೂ ಮಾತೃ ಭಾಷೆ ಅಲ್ಲದ ಮತ್ತೊಂದು ಭಾಷೆ ಪ್ರಥಮ ಭಾಷೆಯ ಸ್ಥಾನದಲ್ಲಿ ವಿಜೃಂಭಿಸುತ್ತಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಒಂದು ವಿಪರ‍್ಯಾಸ ತಲೆದೋರಿದೆ. ಅದು ಏಕೆಂದರೆ ಮೂರು ವರ್ಷಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಹಸ್ತಕ್ಷೇಪದಿಂದ ಸಂಸ್ಕ್ರತ ಭಾಷೆ ಕನ್ನಡದ ಜತೆಗೆ ಪ್ರಥಮ ಭಾಷೆಯ ಸ್ಥಾನದಲ್ಲಿ ಬಂದು ಸೇರಿಕೊಂಡಿತು. ಈ ಕೈವಾಡವನ್ನು ಕಳೆದ ವರ್ಷ ಸರಿಯಾಗಿ ಗುರುತಿಸಲಾಯಿತು.

ಕಳೆದ ವರ್ಷ ಕನ್ನಡ ನಾಡಿನ ೧೯ ಜಿಲ್ಲೆಗಳಿಂದ ಈ ವಿಚಾರದಲ್ಲಿ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತವಾಯಿತು. ತಜ್ಞರು, ಶಿಕ್ಷಣತಜ್ಞರು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಸಂಘ ಸಂಸ್ಥೆಗಳವರು ವಿಚಾರ ಸಂಕಿತಣಗಳನ್ನು ಏರ್ಪಡಿಸಿ ಹಿರಿಯ ಅನುಭವಿಕರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಲು ವೇದಿಕೆಗಳನ್ನು ನಿರ್ಮಿಸಿದರು. ಎಲ್ಲ ಕಡೆಗಳಿಂದಲೂ ಮೂಡಿ ಬಂದ ಅಭಿಪ್ರಾಯ ಬಹುಮಟ್ಟಿಗೆ ಏಕಪ್ರಕಾರವಾಗಿತ್ತು.

ಮಾತೃ ಭಾಷೆಗಳು, ಜನರ ವ್ಯವಹಾರದಲ್ಲಿರುವ ಜನಭಾಷೆಗಳು, ಪ್ರೌಢ ಶಿಕ್ಷಣದಲ್ಲಿ ಪ್ರಥಮ ಸ್ಥಾನದಲ್ಲಿರುವುದು ನ್ಯಾಯಸಮ್ಮತವಾಗಿರುತ್ತದೆ. ರಾಷ್ಟ್ರಕವಿ ಕುವೆಂಪು ಅವರನ್ನು ಹಿಡಿದು ಅನೇಕ ಜನ ಸಾಹಿತಿಗಳು ಕೂಡ ಇದೇ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ಎಲ್ಲ ಸಂಗತಿಗಳನ್ನು ಜನಭಿಪ್ರಾಯವನ್ನು ಗುರುತಿಸಿ ಗೌರವಿಸಿ ಹಿಂದಿನ ಕರ್ನಾಟಕ ಸರ್ಕಾರ ಸಂಸ್ಕೃತ ಭಾಷೆಯನ್ನು ಪ್ರಥಮ ಭಾಷೆಯ ಸ್ಥಾನದಿಂದ ಮೂರನೆಯ ಸ್ಥಾನಕ್ಕೆ ಬದಲಾಯಿಸಿ ಸರ್ಕಾರದ ಆಜ್ಞೆಯನ್ನು ಹೊರಡಿಸಿತ್ತು. ಅಲ್ಲದೆ ಹಿಂದಿನ ಸರ್ಕಾರದವರು ಒಂದು ತಜ್ಞರ ಸಮಿತಿಯನ್ನು ಕೂಡ ರಚಿಸಿದ್ದು ಅದರ ಅಭಿಪ್ರಾಯವನ್ನೂ ಪಡೆದಿದ್ದರು.

ಆದರೆ ಕೋಲಾರ ಜಿಲ್ಲೆಯ ಕೆಲವರು, ಕೆಲವು ವಿದ್ಯಾರ್ಥಿಗಳನ್ನು ಮುಂದೆ ಮಾಡಿ ಸರ್ಕಾರದ ಆಜ್ಞೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಅಪೇಕ್ಷೆಯನ್ನು ಪರಿಗಣಿಸಿ ನ್ಯಾಯಾಲಯ ಸರ್ಕಾರದ ಆಜ್ಞೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸದೆ ತಡೆಹಿಡಿಯುವಂತೆ ಆದೇಶವಿತ್ತಿದೆ. ಇಲ್ಲಿ ನಾವು ಮುಖ್ಯವಾಗಿ ಯೋಚಿಸಬೇಕಾದ ವಿಷಯ ಎಂದರೆ ಶಿಕ್ಷಣ ಕ್ಷೇತ್ರದ ಪಠ್ಯಕ್ರಮವನ್ನು ನ್ಯಾಯಾಲಯಗಳ ಮೂಲಕ ನಿರ್ಧರಿಸುವುದು ಸರಿಯಲ್ಲ ಎಂಬುದು. ಜತೆಗೆ ಘನಸರ್ಕಾರದವರು ಪೂರ್ವಾಪರಗಳನ್ನು ಪರಿಶೀಲಿಸಿ ಕೈಗೊಂಡ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದು ಸರಿಯಾಗುವುದಿಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಿನ ಮುಖ್ಯಮಂತ್ರಿಗಳು ಸಂಸ್ಕೃತವನ್ನು ಮತ್ತೆ ಪ್ರಥಮ ಭಾಷೆಯನ್ನಾಗಿ ಮಾಡುವ ವಿಚಾರವನ್ನು ಪರಿಶೀಲಿಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ. ಆದರೆ ಶಿಕ್ಷಣ ಸಚಿವರು ದುಡುಕಿ ನಿರ್ಧಾರ ಕೈಗೊಳ್ಳದೆ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಇಲ್ಲಿ ಮತ್ತೆ ಯೋಚಿಸಬೇಕಾದ ಅಥವಾ ಪರಿಶೀಲಿಸಬೇಕಾದ ಯಾವ ಪ್ರಮೇಯವೂ ಇಲ್ಲ. ಯೋಚಿಸುವುದು ಪರಿಶೀಲಿಸುವುದು ಎಲ್ಲ ಮುಗಿದ ಮೇಲೆಯೇ ಸರ್ಕಾರ ಕಳೆದ ವರ್ಷ ಆಜ್ಞೆಯನ್ನು ಹೊರಡಿಸಿತ್ತು. ಕನ್ನಡ ಉಳಿಸಿ ಕ್ರಿಯಾ ಸಮಿತಿಯವರು “ಪ್ರಾಢ ಶಿಕ್ಷಣದಲ್ಲಿ ಕನ್ನಡ” ಎಂಬ ಕೈಹೊತ್ತಿಗೆಯನ್ನು ಇತ್ತೀಚೆಗೆ ಹೊರತಂದಿದ್ದಾರೆ. ಸಂಸ್ಕೃತ ಭಾಷೆಗೆ ಶಿಕ್ಷಣದಲ್ಲಿ ಯಾವ ಸ್ಥಾನ ಇರಬೇಕೆಂಬ ವಿಷಯವಾಗಿ ಈ ಪುಸ್ತಕ ಹೆಚ್ಚಿನ ಮಾಹಿತಿಗಳನ್ನು ಒದಗಿಸುತ್ತದೆ. ಆಸಕ್ತರು ಅದನ್ನು ಅವಲೋಕಿಸಬಹುದು.

ಕರ್ನಾಟಕ ಸರ್ಕಾರದವರು ಜನಭಾಷೆಯನ್ನು ಮನ್ನಿಸಬೇಕೆಂದೂ ಅದರ ಸರಿಸಾಟಿಯಾಗಿ ಗ್ರಂಥಸ್ತ ಭಾಷೆಯನ್ನು ಪರಿಗಣಿಸಬಾರದೆಂದೂ ವಿನಂತಿಸುತ್ತೇನೆ.

ಇಲ್ಲಿ ಮತ್ತೆ ಯೋಚಿಸಬೇಕಾದ ಅಥವಾ ಪುನರ್ ಪರಿಶೀಲಿಸಬೇಕಾದ ಯಾವ ಅಂಶವೂ ಇಲ್ಲ. ಪ್ರಜಾಪ್ರಭುತ್ವದಲ್ಲಂತೂ ಪ್ರಜೆಗಳ ಭಾಷೆ ಅಂದರೆ ಜನಭಾಷೆಯೇ ಪ್ರಧಾನ. ಅದಕ್ಕೆ ಸರಿಸಮ ಆಗಿ ಯಾವ ಭಾಷೆಯನ್ನೂ ತರುವಂತಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಇಲ್ಲಿಯ ಜನಭಾಷೆ. ಅದನ್ನು ಬಿಟ್ಟರೆ ಅಲ್ಪಸಂಖ್ಯಾತರ ಜನಭಾಷೆಗಳು. ಈ ಭಾಷೆಗಳಿಗೆ ಭಾರತದ ರಾಜ್ಯಾಂಗ ಸಂವಿಧಾನದಲ್ಲಿ ನಿರೂಪಿಸಲಾದ ವ್ಯವಸ್ಥೆಯಿದೆ. ಆ ಪ್ರಕಾರ ಅವುಗಳ ಸ್ಥಾನ ಇರುವುದು ಸಹಜ. ಆದರೆ ಸಂಸ್ಕೃತದ ಪ್ರಶ್ನೆಯೇ ಬೇರೆ. ಅದು ಅಂಶತಃ ಈ ದೇಶದ ಸಂಸ್ಕೃತಿಯ ಭಾಷೆ. ಇನ್ನು ಅಂಶತಃ ಅದು ಒಂದು ಧಾರ್ಮಿಕ ಮತಪಂಥದ ಭಾಷೆ. ಅದು ಜನಭಾಷೆಯೇ ಅಲ್ಲ. ಅಂಥ ಭಾಷೆಯನ್ನು ಜನಭಾಷೆಯ ಸ್ಥಾನಕ್ಕೆ ತಂದರೆ ಕನ್ನಡಕ್ಕೆ ಅಷ್ಟೇ ಅಲ್ಲ, ಎಲ್ಲ ಜನ ಭಾಷೆಗಳಿಗೇ ಅನ್ಯಾಯ.

ಯೂರೋಪಿನ ಸಂಸ್ಕೃತದಂತೆಯೇ ಹಿಬ್ರೂ ಗ್ರೀಕ್ ಲ್ಯಾಟಿನ್‌ಗಳೂ ಮತಪಂಥಗಳು ಸಂಸ್ಕೃತಿ ನಾಗರಿಕ ಪರಂಪರೆಗಳ ಭಾಷೆಗಳು. ಆದರೂ ಅವುಗಳು ಜನಭಾಷೆಗಳಲ್ಲವೆಂಬ ಕಾರಣ ಅವಕ್ಕೆ ಪ್ರಥಮ ಭಾಷೆಯ ಸ್ಥಾನವಿಲ್ಲ, ಜನಭಾಷೆಗಳ ಸ್ಥಾನವಿಲ್ಲ. ಅವುಗಳನ್ನು ಕಡ್ಡಾಯವಾಗಿ ಕಲಿಸುವ ಕ್ರಮವೂ ಇಲ್ಲ. ಬದಲಾಗಿ ಕೇವಲ ಐಚ್ಛಿಕವಾಗಿ ಮಾತ್ರ ತೆಗೆದುಕೊಳ್ಳುವವರು ಇದ್ದಾರೆ. ಜನಭಾಷೆಗಳಿಗೆ ಮುಂದುವರಿದ ದೇಶಗಳಲ್ಲಿ ಎಷ್ಟು ಮಹತ್ವವಿದೆಯೆಂದರೆ ಯೂರೋಪಿನಲ್ಲಿ ಕೇವಲ ೫೦೦ ಜನ ಮಾತನಾಡುವಂಥ ಉಪಭಾಷೆಯನ್ನೂ ಜನಭಾಷೆಯೆಂಬ ಕಾರಣ ಬೆಳೆಸುವ ಯತ್ನವಿದೆ. ರಷ್ಯದಲ್ಲಿ ೩೦೦ ಜನ ಮಾತನಾಡುವ ಲಿಪಿಯಿಲ್ಲದ ಭಾಷೆಗಳಿಗೆ ಮಾಸ್ಕೊವೈಟ್ ರಷ್ಯನ್ ಲಿಪಿಯನ್ನು ಕೊಟ್ಟು ವಾಙ್ಮಯ ಪ್ರಸಾರವನ್ನು ಸರಕಾರವೇ ಮಾಡುತ್ತದೆ. ಇದನ್ನೆಲ್ಲ ರಾಜ್ಯದ ಜನಪ್ರಿಯ ಸರಕಾರ ಗಮನಿಸುವುದು ಅವಶ್ಯವಾಗಿದೆ.

ಮತಧರ್ಮ, ಸಂಸ್ಕೃತಿ, ನಾಗರಿಕತೆಗಳ ಹೆಸರಿನಲ್ಲಿ ರಾಜಾಶ್ರಯದ ಅನುಕೂಲದಲ್ಲಿ ಕೂಡ ಸಂಸ್ಕೃತವು ಜನ ಭಾಷೆಯಾಗಿ, ಆಡುವ ಬರೆಯುವ ವ್ಯವಹಾರ ಭಾಷೆಯಾಗಿ ನಿತ್ಯ ಜೀವನದಲ್ಲಿ ಶತಮಾನಗಳಲ್ಲಿಯು ಬೆಳೆಯಲಿಲ್ಲ. ಕನ್ನಡವೇ ಮೊದಲಾದ ಜನಭಾಷೆಗಳು, ರಾಜಾಶ್ರಯವೇ ಮೊದಲಾದ ಅನುಕೂಲಗಳು ಸಂಸ್ಕೃತಕ್ಕಿದ್ದಷ್ಟು ಇಲ್ಲದಿದ್ದರು, ಇಂದಿಗೂ ಉಳಿದು ಬೆಳೆದು ಬರುತ್ತಲೇ ಇವೆ. ಇದು ಜನರ ಬೆಳೆವಣಿಗೆಯ ಪ್ರತಿಫಲವಾಗಿದೆ. ಇಂಥ ಜನಭಾಷೆಯ ಪ್ರಥಮ ಸ್ಥಾನಕ್ಕೆ, ಜನಭಾಷೆಯಾಗಿರದ ಯಾವ ಭಾಷೆಯನ್ನು ಏರಿಸಿದರೂ ಫಲವಿಲ್ಲ. ಕನ್ನಡದ ಸ್ಥಾನ ಕರ್ನಾಟಕದಲ್ಲಿ ಏಕೈಕ, ಏಕಮೇವ ಮತ್ತು ಅದ್ವೀತಿಯ.

ಆದ್ದರಿಂದ ಜನಪ್ರಭುತ್ವದ ಸರಕಾರವು ಜನಭಾಷೆಯನ್ನು ಈ ಸರ್ವಪ್ರಧಾನ ಸ್ಥಾನದಲ್ಲಿರಿಸಿ ಜನತೆಯ ಶ್ರೇಯೋಭಿವೃದ್ಧಿ ಸಾಧಿಸುವುದಕ್ಕೆ ಬಾಧ್ಯವಾಗಿದೆ. ಇದನ್ನು ಮುಖ್ಯಮಂತ್ರಿ ಗಂಡೂರಾಯರು ಅರಿತಿದ್ದಾರೆಂದು ನಾವು ಭಾವಿಸುತ್ತೇವೆ. ಅವರು ಉಡುಪಿ ಮೊದಲಾದೆಡೆಗಳಲ್ಲಿ ಯಾವುದೇ ಸಂದರ್ಭಗಳಲ್ಲಿ ಸಂಸ್ಕೃತಕ್ಕೆ ಯಾವುದೇ ಮಹತ್ವವನ್ನು ಕೊಟ್ಟು, ಏನೇ ಹೇಳಿರಲಿ, ಕನ್ನಡದ ಸರ್ವಪ್ರಥಮ ಘನೋನ್ನತ ಸಾರ್ವಭೌಮ ಸ್ಥಾನವನ್ನು ಕಿಂಚಿದೂನಕ್ಕೂ ತರಲಾರರು. ಅದಕ್ಕೆ ಸರಿಸಮವಾಗಿ ಸಂಸ್ಕೃತವಲ್ಲ, ಯಾವ ಅಂಥ ಭಾಷೆಯನ್ನೂ ತರಲಾರರು ಎಂಬುದನ್ನು ಎತ್ತಿ ಹೇಳುತ್ತೇವೆ.

(ಕನ್ನಡ ನುಡಿ, ಮೇ , ೧೯೮೦)

* * *