ಕನ್ನಡದಲ್ಲಿ ಒಳ್ಳೆಯ ಪುಸ್ತಕಗಳು ಹೊರಬರಬೇಕಾದರೆ ಅದಕ್ಕೆ ಅಗತ್ಯವಾದ ವಾತಾವರಣ ನಿರ್ಮಾಣವಾಗಬೇಕಾದದ್ದು ಅವಶ್ಯ. ಈ ದಿಕ್ಕಿನಲ್ಲಿ ಯೋಚಿಸಿದಾಗ ಒಂದು ಕೊರತೆ ಕಂಡು ಬರುತ್ತಿದೆ. ಉತ್ತಮ ಪುಸ್ತಕಗಳ್ನು ಲೇಖಕರು ರಚಿಸಬೇಕಾದರೆ ಅದನ್ನು ಪ್ರಕಟಿಸುವ ಪ್ರಕಾಶಕರೂ ಬೇಕಾಗುತ್ತಾರೆ. ಉತ್ತಮ ಪುಸ್ತಕಗಳನ್ನು ಪ್ರಕಾಶಕರು ಪ್ರಕಟಿಸಬೇಕಾದರೆ ಅವರು ಪ್ರಕಟಿಸುವ ಪುಸ್ತಕಗಳು ಮಾರಾಟವಾಗುತ್ತದೆ ಎಂಬ ವಿಶ್ವಾಸ ಬೇಕಾಗುತ್ತದೆ. ಕನ್ನಡ ಪುಸ್ತಕ ಪ್ರಕಟಣೆಯಲ್ಲಿ ಇದು ಗಂಭೀರವಾಗಿ ಪರಿಶೀಲಿಸಬೇಕಾದ ಒಂದು ಮಹತ್ವದ ವಿಚಾರ. ಇದರಲ್ಲಿ ಕೇವಲ ಪ್ರಕಾಶಕರದೇ ಅಲ್ಲದೆ ಲೇಖಕರಿಗೆ ಸಂಬಂಧಿಸಿದ ಸಮಸ್ಯೆಯೂ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ತಮಿಳರಲ್ಲಿ, ಮಲೆಯಾಳಿಗಳಲ್ಲಿ, ಬಂಗಾಳಿಗಳಲ್ಲಿ ಇರುವ ಪ್ರಮಾಣದಲ್ಲಿ ಕೊಂಡು ಓದುವ ಪ್ರವೃತ್ತಿ ಕನ್ನಡಿಗರಲಿ ಇಲ್ಲ. ಜೊತೆಗೆ ಕರ್ನಾಟಕದಲ್ಲಿ ಗ್ರಂಥಾಲಯ ಇಲಾಖೆಯವರೂ ಮೌಲಿಕವಾದ ಗ್ರಂಥಗಳನ್ನು ಕೊಂಡುಕೊಳ್ಳುವ ವಿಚಾರದಲ್ಲಿ ಇನ್ನೂ ಹೆಚ್ಚಿನ ಅದರ ಮತ್ತು ಔದರ್ಯವನ್ನು ತೋರಬೇಕು. ಈಗ ಇರುವ ಒಂದು ವ್ಯವಸ್ಥೆಯಂತೆ ಸಾರ್ವಜನಿಕ ಗ್ರಂಥಾಲಯದವರು ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳ ಸುಮಾರು ೩೦೦ ಪ್ರತಿಗಳನ್ನು ಕೊಳ್ಳುತ್ತಾರೆ. ಆದರೆ ಇದರಲ್ಲಿ ಕೆಲವು ನ್ಯೂನತೆಗಳು ಲೇಖಕರಿಗೂ ಪ್ರಕಾಶಕರಿಗೂ ಕಂಡುಬಂದಿದೆ.

೧. ೩೦೦ ಪ್ರತಿಗಳನ್ನು ಕೊಳ್ಳುವುದು ಕಡಿಮೆ ಪ್ರಮಾಣವಾಯಿತು.

೨. ಹೀಗೆ ಕೊಳ್ಳುವ ೩೦೦ ಪ್ರತಿಗಳನ್ನು ಸುಮಾರು ೨೦ ಬೇರೆ ಬೇರೆ ಗ್ರಂಥಾಲಯಗಳಿಗೆ ಕಳಿಸಿಕೊಡಬೇಕಾಗುತ್ತದೆ.

೩. ಬೇರೆ ಬೇರೆ ಗ್ರಂಥಾಲಯಗಳಿಗೆ ಕಳಿಸುವ ಎಲ್ಲಾ ಸಾಗಾಣಿಕೆ ಮೊದಲಾದ ವೆಚ್ಚಗಳನ್ನು ಪ್ರಕಾಶಕರೇ ಹೊರಬೇಕಾಗುತ್ತದೆ.

೪. ಹೀಗೆ ಕಳಿಸುವ ಪುಸ್ತಕಗಳ ಹಣ ಒಟ್ಟಿಗೆ, ಬೇಗನೆ ಬರುವುದಿಲ್ಲ.

೫. ಹೀಗೆ ಕೊಳ್ಳುವ ಪುಸ್ತಕಗಳಿಗೆ ಶೇಕಡ ೨೪ ರಷ್ಟು ರಿಯಾಯಿತಿ ಕೊಡಬೇಕಾಗಿದೆ.

ಇದನ್ನು ತಪ್ಪಿಸಲು ನಾನು ಕಳೆದ (೧೯೭೦ ರಲ್ಲಿ ಕೆಲವು ಸಲಹೆಗಳನ್ನು ಬೆಂಗಳೂರಿನಲ್ಲಿ ನಡೆದ (ಲಾಲ್‌ಬಾಗಿನಲ್ಲಿ) ರಾಷ್ಟ್ರೀಯ ಪುಸ್ತಕ ಮೇಳದ ಸಂದರ್ಭದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅಧ್ಯಕ್ಷನಾಗಿ ಸೂಚಿಸಿದ್ದೆ. ಇದನ್ನು ಮತ್ತೆ ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ.

ಕನ್ನಡದಲ್ಲಿ ಆಚ್ಚಾದ ಎಲ್ಲಾ ಪುಸ್ತಕಗಳನ್ನೂ ಸಾರ್ವಜನಿಕ ಗ್ರಂಥಾಲಯದವರು ಕೊಳ್ಳಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಉತ್ತಮ ಕೃತಿಗಳನ್ನು ಲೇಖಕರು ರಚಿಸಲೂ ಪ್ರಕಾಶಕರೂ ಪ್ರಕಟಿಸಲೂ ಧೈರ್ಯ, ಸ್ಫೂರ್ತಿ ಉಂಟಾಗುವ ವಾತಾವರಣ ನಿರ್ಮಾಣವಾಗಬೇಕು. ಹೇಗೂ ಲೈಬ್ರರಿ ಸೆಸ್ ಎಂದು ಜನತೆಯಿಂದ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಲಾಗುತ್ತದೆ. ಆ ವರ್ಷಕ್ಕೆ ಎಷ್ಟು ಪ್ರಮಾಣದಲ್ಲಿ ಇದು ವಿತರಣೆ ಆಗಬೇಕು ಎಂದು ವಿನಿಯೋಗ ವಿಧಾನವನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳುವುದು ಅಗತ್ಯ.

ಕನ್ನಡದಲ್ಲಿ ಪ್ರಕಟವಾಗುವ ಕಥೆ, ಕಾದಂಬರಿ, ಕಾವ್ಯ, ನಾಟಕ ಮೊದಲಾದ ಸೃಜನಾತ್ಮಕ ಕೃತಿಗಳ, ಪ್ರೌಢ ವಿಮರ್ಶೆ, ಗ್ರಂಥ ಸಂಪಾದನೆ, ಪ್ರಬಂಧ ಮೊದಲಾದ ಸೃಜನೇತರ ಗ್ರಂಥಗಳ ರಚನೆಯನ್ನು ಪ್ರೋತ್ಸಾಹಿಸುವುದು ಒಳ್ಳೆಯದು, ಇದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಬಹುದು.

೧. ಸಾರ್ವಜನಿಕ ಗ್ರಂಥಾಲಯ ಇಲಾಖೆಯವರು ೫೦೦ರಿಂದ ೧೦೦೦ರವರೆಗೆ ಉತ್ತಮ ಗ್ರಂಥದ ಪ್ರತಿಗಳನ್ನು ಕೊಂಡುಕೊಳ್ಳಬೇಕು.

೨. ಹೀಗೆ ಕೊಳ್ಳುವ ಗ್ರಂಥಗಳನ್ನು ಲೇಖಕರು ಅಥವಾ ಪ್ರಕಾಶಕರು ಸಾರ್ವಜನಿಕ ಗ್ರಂಥಾಲಯದ ಕೇಂದ್ರ ಕಚೇರಿಗೆ ಒಂದೇ ಸಲಕೆ ತಂದುಕೊಡತಕ್ಕದ್ದು. ಅದರ ವಿತರಣೆಯನ್ನು ಸಾರ್ವಜನಿಕ ಗ್ರಂಥಾಲಯದವರೇ ಮಾಡತಕ್ಕದ್ದು.

೩. ಶೇಕಡ ರಿಯಾಯಿತಿಯನ್ನು ೨೭ರಿಂದ ೧೦ ಅಥವಾ ೧೫ಕ್ಕೆ ಇಳಿಸತಕ್ಕದ್ದು.

೪. ಹೀಗೆ ಕೊಳ್ಳುವ ಪುಸ್ತಕದ ಬಾಬ್ತು ಹಣವನ್ನು ಒಟ್ಟಿಗೆ ಒಂದೇ ಸಲಕ್ಕೆ ಲೇಖಕರಿಗೆ, ಪ್ರಕಾಶಕರಿಗೆ ಕೊಡತಕ್ಕದ್ದು.

ಹೀಗೆ ಮಾಡುವುದರಿಂದ ಈಗ ಇರುವ ನ್ಯೂನತೆಗಳು ನಿವಾರಣೆಯಾಗಿ ಲೇಖಕರಿಗೆ -ಪ್ರಕಾಶಕರಿಗೆ ಇಂದೊಂದು ವರದಾನವಾಗಿ ಪರಿಣಮಿಸಬಹುದು ಎಂದು ಭಾವಿಸಿದ್ದೇನೆ. ಕಳಪೆಯಾದ ಕೃತಿಗಳನ್ನು ಈ ಪ್ರಮಾಣದಲ್ಲಿ ಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಬರಬಹುದು. ಅಂತಹ ಸಂದರ್ಭದಲ್ಲಿ ಒಂದು ತಜ್ಞರ ಪರಿಶೀಲನಾ ಸಮಿತಿಯನ್ನು ಇಲಾಖೆಯವರು ರೂಪಿಸಬಹುದು. ಅವರು ಕೊಡುವ ಶಿಫಾರಸಿನಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯವರು ಸಂಬಂಧಪಟ್ಟ ಲೇಖಕರಿಗೆ, ಪ್ರಕಾಶಕರಿಗೆ ಆಜ್ಞಾಪತ್ರ ಕಳಿಸಬಹುದು. ಕನ್ನಡದಲ್ಲಿ ಪ್ರಕಟವಾದ ಪ್ರತಿಯೊಂದು ಪುಸ್ತಕದ ದಾಖಲೆಯನ್ನು ಮಾಡಬೇಕೆಂದು ಆಪೇಕ್ಷಿಸುವ ಸಂದರ್ಭದಲ್ಲಿ ಹೀಗೆ ಮಾಡಬಹುದೆಂದು ತೋರುತ್ತದೆ. (೧) ಕನ್ನಡದಲ್ಲಿ ಪ್ರಕಟವಾದ ಯಾವುದೇ ಪುಸ್ತಕದ ೨೦೦ ಪ್ರತಿಗಳನ್ನು ಮಾತ್ರ ಕೊಳ್ಳಬಹುದು. (೨) ಸಾಧಾರಣವೆಂದು ಪರಿಗಣಿಸುವ ಪುಸ್ತಕಗಳು ಸುಮಾರು ೩೦೦-೫೦೦ ಪ್ರತಿಗಳನ್ನು ಕೊಳ್ಳಬಹುದು. (೩) ಮೌಲಿಕ ಯೋಗ್ಯವಾದ ಕೃತಿಗಳ ಪ್ರತಿಗಳನ್ನು ಸುಮಾರು ೭೫೦ರಿಂದ ೧೦೦೦ರವರೆಗೆ ಕೊಳ್ಳಬಹುದು.

ಈ ಕೆಲವು ಸಂಗತಿಗಳನ್ನು ತಾವು ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆಯವರು ಅವಶ್ಯ ಸೂಕ್ತ ರೀತಿಯಲ್ಲಿ ಪರಿಗಣಿಸಬೇಕೆಂದು ಪ್ರಾರ್ಥಿಸುತ್ತೇನೆ.

ಇವಲ್ಲದೆ ಗ್ರಂಥ ಪ್ರಕಾಶನಕ್ಕೆ ಸಂಬಂಧಿಸಿದ ಉಪಯುಕ್ತವಾದ ಮಾಹಿತಿಯನ್ನು ಕೊಡುವ ಸಲುವಾಗಿ ಕನ್ನಡದಲ್ಲಿ ಪ್ರಕಟವಾಗುತ್ತಿರುವ ‘ಗ್ರಂಥಲೋಕ’ ಮತ್ತು ‘ಪುಸ್ತಕ ಪುರವಣಿ’ ಎಂಬ ಎರಡು ಕನ್ನಡ ಮಾಸಿಕಗಳ ಸುಮಾರು ೫೦೦ ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯವರು ಕೊಂಡು ವಿವಿಧ ಶಾಖೆಗಳಿಗೆ ವಿತರಣೆ ಮಾಡುವುದು ಸೂಕ್ತವೆಂದು ಭಾವಿಸಿದ್ದೇನೆ. ಈ ಸಂಬಂಧವಾಗಿ ತಮ್ಮ ಅಭಿಪ್ರಾಯವನ್ನು, ತಾವು ಕೈಗೊಂಡ ಕ್ರಮವನ್ನು ದಯವಿಟ್ಟು ನನಗೆ ತಿಳಿಸಬೇಕಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಕೋರಿದ್ದಾರೆ.

* * *