“ಒಂದು ಸಣ್ಣ ಅಪರೇಶನ್ನಿಗಾಗಿ ಒಂದು ವಾರ ಆಸ್ಪತ್ರೆಯಲ್ಲಿರುಬೇಕಾಗಿ ಬಂತು. ವೈದ್ಯರ ಅಜಾಗರೂಕತೆಯೋ ಅಥವಾ ನನ್ನ ಅಜಾಗರೂತೆಯೋ – ಅಚಿತೂ ಇನ್ನೊಂದು ವಾರ, ಆನಂತರ ಮತ್ತೊಂದು ವಾರ ಆಸ್ಪತ್ರೆಯಲ್ಲೇ ಉಳಿಯಬೇಕಾಗಿ ಬಂತು. ಅದು ಸರಕಾರಿ ಆಸ್ಪತ್ರೆ, ಸಿಬ್ಬಂದಿಗಳ, ನರ್ಸುಗಳ, ಡಾಕ್ಟರುಗಳ ಮತ್ತು ರೋಗಿಗಳ ಪರಿಚಯ ಹೆಚ್ಚಾದಂತೆಲ್ಲಾ ಅನುಭವವೂ ಹೆಚ್ಚಾಯಿತು. ಆಸ್ಪತ್ರೆಯಲ್ಲಿ ಕಂಡದ್ದನ್ನು, ಕೇಳಿದ್ದನ್ನು, ಅನುಭವಿಸಿದ್ದನ್ನು ಮತ್ತು ಕಾದಂಬರಿಗಾಗಿ ಸಂಗ್ರಹಿಸಿದ್ದನ್ನು ಪೋಣಿಸಿ ‘ಜಿರಳೆಗಳು’ ಎಂಬ ಕಾದಂಬರಿ ರಚಿಸಿದೆ. ಧಾರವಾಹಿ ಪ್ರಕಟಣೆಗಾಗಿ ಸಂಯುಕ್ತ ಕರ್ನಾಟಕಕ್ಕೆ ಕೊಟ್ಟೆ. ಸಂಪಾದಕರು ‘ಜಿರಳೆಗಳು’ ಹೆಸರಿನ ಬಗ್ಗೆ ಅಸಹ್ಯಪಟ್ಟಿದ್ದರಿಂದ ಇದು ‘ಹಂಸಕ್ಷೀರ’ವಾಗಿ ಪರಿವರ್ತನೆಗೊಂಡು ಧಾರವಾಹಿಯಾಗಿ ಪ್ರಕಟವಾಯಿತು. ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಪ್ರಮುಖ ವೈದ್ಯರಲ್ಲಿ, ದಾದಿಗಳಲ್ಲಿ ಅಥವಾ ನಾಯಕರಲ್ಲಿ ಹಂಸಕ್ಷೀರ ನ್ಯಾಯದ ತೀರ್ಪನ್ನು ವಾಚಕರು ಕಂಡುಕೊಳ್ಳುತ್ತಾರೆಂಬುದು ಲೇಖಕನ ಹಾರೈಕೆ” – ಇದು ತಮ್ಮ ಹಂಸಕ್ಷೀಕರ ಕಾದಂಬರಿಗೆ (೧೯೭೨) ಅಂತರಂಗವಾಗಿ ಬರೆದ ವಿಶುಕುಮಾರರ ಹೇಳಿಕೆ.

೧೫ ವರ್ಷಗಳ ಹಿಂದೆ ಸಣ್ಣ ಆಪರೇಶನ್ನಿಗೆ ಆಸ್ಪತ್ರೆ ಸೇರಿದ ಗೆಳೆಯ ವಿಶು ಮುಂದೆ ೧೯೮೫-೮೬ರಲ್ಲಿ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾದದ್ದು ವಿಧಿಯ ಲೀಲೆ. ಗಂಟಲಿಗೆ ಅಂಟಿಕೊಂಡ ಅರ್ಬುದ ರೋಗದಿಂದ ಅವರು ನರಳಿದ್ದು ದುರಂತದ ಅಧ್ಯಾಯ. ತಜ್ಞರ ಚಿಕಿತ್ಸೆಗಾಗಿ ವಿದೇಶಕ್ಕೂ ಹೋಗಿ ಬಂದರು. ಯಮಸ್ಯ ಕರುಣಣ ನಾಸ್ತಿ; ಜವರಾಯ ವಿದೇಶಕ್ಕೆ ಹೋಗಿ ಬಂದವರೆಂದು ರಿಯಾಯಿತಿ ಕೊಡುವವನಲ್ಲ. ಸಾವಿನೆದುರು ಈಜಲಾಗಲಿಲ್ಲ. ಸೆಣೆಸಾಡಿದರೂ ಕಡೆಗೆ ಸಾವಿಗೇ ಗೆಲುವು. ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಸರಾಂತ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯಲ್ಲಿ ವಿಶು ೪-೧೦-೧೯೮೬ರಂದು ಮಧ್ಯಾಹ್ನ ೧೨-೩೦ಕ್ಕೆ ಕೊನೆಯುಸಿರೆಳೆದರು. ಅಂತಹ ಹೇಳಿಕೊಳ್ಳುವ ಸಮಾಧಾನ ಪಟ್ಟುಕೊಳ್ಳುವ ವಯಸ್ಸೇನೂ ಅಲ್ಲ. ೫೦ ವರ್ಷದ ನಡುಪ್ರಾಯ (೧೯೩೬); ವ್ಯಕ್ತಿಗೆ ನಿಗದಿತವೆಂದು ವಾಡಿಕೆಯಲ್ಲಿ ಹೇಳುವ ಶತಾಯುಸ್ಸಿನ ಅರ್ಧ ಪ್ರಯಾಣ. ಶ್ರೀರಾಮಪುರದ ಹರಿಶ್ಚಂದ್ರ ರುದ್ರಭೂಮಿಯ ವಿದ್ಯುತ್ ಚಿತಾಗಾರದಲ್ಲಿ ಅವರು ೫೩/೪ ಅಡಿಯ ಪಾರ್ಥಿವ ಶರೀರ ಅಂದು ಬೆಂದು ಹಿಡಿ ಬೂದಿಯಾಯಿತು. ೫೦ ವರ್ಷ ಬಾಳಿದ್ದ ದೇಹದಿಂದ ಜೀವ ಹೊದ ಮೇಲೆ ೫ ಗಂಟೆಯೂ ಉಳಿಸಿಕೊಳ್ಳಲಾಗಲಿಲ್ಲ. ಉದಯಿಸಿ ಮೇಲು ಮೇಲಕ್ಕೇರಿ ಕೀರ್ತಿಶಾಲಿಯಾಗಿ ಮಿನುಗುತ್ತಿದ್ದ ನಕ್ಷತ್ರ ಮಾಯವಾಯಿತು; ಕನ್ನಡಿಗರ ಹಬ್ಬದ ವಿಜಯದಶಮಿಯದಿನ ಮರಣದ ಮಹಾನವಮಿಯತ್ತ ಪಯಣಿಸಿದ.

ವಿಶುಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಕುಡಿ. ಅವರ ತಂದೆ ಬೋಳೂರು ಸುಲ್ತಾನ ಬತ್ತೇರಿ ಬಿಳಿ ಚಿಕ್ಕ ಹೋಟೆಲು ನಡೆಸುತ್ತಿದ್ದ ದೋಗ್ರ ಅಮೀನರು. ಆ ತಂದೆ ಹೋಟೆಲಿಗಿಂತ ಯಕ್ಷಗಾನ ಪ್ರದರ್ಶನಗಳಿಗೆ ಪ್ರೋತ್ಸಾಯಿಸುತ್ತಿದ್ದರು; ಹಣಸಹಾಯ ಮಾಡುತ್ತಿದ್ದರು. ಆ ಹೆಸರಿನೊಂದಿಗೆ ಬೋಳೂರು ಸೇರಿಕೊಂಡು ‘ವಿಶ್ವನಾಥ್ ಬೋಳೂರು’ ಚಡ್ಡಿ ಸ್ಥಿತಿಯಿಂದ ಬೆಳದು ದೊಡ್ಡವನಾಗಿ ಒಲ್ಲದ ಕೆಲಸಕ್ಕೆ ಸೇರಿದ್ದೂ ಆಯಿತು. ಏಕೆಂದರೆ ಕಲಿಕೆಯ ಬದುಕು ಸರಳ ರೇಖೆಯಾಗಿರಲಿಲ್ಲ. ಈ ಬಡನಾಡಿನ ಬಹುಜನರ ಬಾಳಿನಂತೆ ವಿಶ್ವನಾಥ ಬೋಳೂರರ ಬಾಳೂ ಗೋಳಿನ ಗೆರೆಗಳ ಮೇಲೆ ನಡೆದು ಬಂತು. ಏಳು ಬೀಳಿನ ನಡುವೆ ತಾನು ಹೇಳಿ ಹೆಸರಿಲ್ಲದ ಹಾಗೆ ಕಳೆದು ಹೋಗದೆ ಉಳಿದದ್ದು ಸೋಜಿಗವಾಯಿತು. ತಾನೊಂದು ದಡ ಸೇರಲೇಬೇಕೆಂಬ ಹಟಯೋಗದಿಂದ ಮುಂದೆ ಬಂದ ಆಸಾಮಿ. ಸ್ವಂತ ಪರಿಶ್ರಮಪಟ್ಟು ತನ್ನ ಬಾಳನ್ನು ತಾನೇ ರೂಪಿಸಿಕೊಂಡ ವ್ಯಕ್ತಿ.

ಕೆಲಸಕ್ಕೆ ಸೇರಿದ್ದು ಕೂಡ ಸರಕಾರದಲ್ಲಿ ಹತ್ತರೊಂದಿಗೆ ಇನ್ನೊಂದು ಎಂಬಂತೆ ಅಪ್ರಸಿದ್ಧವಾಗಿರುವ ಧಾರ್ಮಿಕ ದತ್ತಿ ಇಲಾಖೆ. ಅವರ ಧೋರಣೆಗೆ, ಸ್ವಭಾವಕ್ಕೆ ಈ ಇಲಾಖೆಯ ಕೆಲಸ ಒಗ್ಗಲಿಲ್ಲ. ಆಗಿ ಬರಲಿಲ್ಲ. ಧಾರ್ಮಿಕ ಭಕ್ತಿಯಿಲ್ಲದ ವ್ಯಕ್ತಿಯೊಬ್ಬ ಧಾರ್ಮಿಕ ದತ್ತಿ ಇಲಾಖೆಯಲ್ಲಿರುವುದು ವಿಪರ್ಯಾಸವಾಯಿತು. ನಿರ್ವಾಹವಿಲ್ಲದೆ ಹಾಗೂ ಹೀಗೂ ಇಪ್ಪತ್ತು ವರ್ಷ ಸೇವೆಯೆಂದು ಚಿತ್ರಗುಪ್ತನೂ ಓದುವುದಕ್ಕೂ ಸೇವಾಖಾತೆಯ ಕಡತದಲ್ಲಿ ಲಿಪಿಬದ್ಧವಾಯಿತು. ಇನ್ನು ಈ ಇಲಾಖೆಗೆ ಸಲಾಮು ಹಾಕುವುದೆಂದೇ ಖಾತ್ರಿಯಾಯಿತು. ೧೯೭೫ರಲ್ಲಿ ಚಾಕರಿಗೆ ಕೈ ಮುಗಿದರು, ಸ್ವತಂತ್ರರಾದರು, ಕೆಲಸವನ್ನೂ ಅದರೊಂದಿಗೇ ವಿಶ್ವನಾಥ ಹೋಗಿ ವಿಶುಕುಮಾರ್ ಎಂಬ ತನ್ನಿಚ್ಛೆಯ ಕಾವ್ಯನಾಮವನ್ನು ಸ್ವೀಕರಿಸಿದ್ದರು. ಪುರುಷ ಪ್ರಯತ್ನ ನಂಬಿದ ಸಾಹಸಿ ಜೀವನಗತಿಗೆ ಹೊಸದಿಕ್ಕು ತೋರಿಸಿದರು.

ವಿಶ್ವನಾಥರು ವಿಶುಕುಮಾರರಾಗಿ ಈ ವೇಳೆಗೆ ವೃತ್ತಿಯಲ್ಲೇ ಅಲ್ಲದೆ ಹೊರಗಡೆ ವಿಶಾಲ ಜಗತ್ತಿನ ದಾಪುಗಾಲು ಹಾಕಿ ಬೆಳೆಯುತ್ತಿದ್ದರು. ಮದರ್, ಹಂಸಕ್ಷೀರ ಮೊದಲಾದ ಹೊತ್ತಗೆಗಳು ಆ ಹೊತ್ತಿಗಾಗಲೇ ಹೊರಬಂದಿದ್ದುವು. ಬದುಕು ಕಲಿಸಿದ ಪಾಠ ಅವರಿಗೆ ಹೊಸ ತೀಕ್ಷ್ಮ ಕಣ್ಣುಕೊಟ್ಟಿತ್ತು. ಪರಿಸರ ಪ್ರೇರಣೆಗಳನ್ನೊದಗಿಸಿತು. ಮಾತೃ ಭಾಷೆಯಾದ ತುಳು ಅವರ ಮೊದಲ ಪ್ರೇಮ ತುಳುನಾಡಿನ ಅಭಿಮಾನಿ. ತೌಳದ ಪ್ರಥಮ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಮುಂದಾಳುವಾಗಿ ದುಡಿದರು. ತುಳು ನಾಟಕಗಳನ್ನು ಆಡಿಸಿದರು, ಆಡಿದರು. ಕಷ್ಟದ ಬದುಕಿನಲ್ಲಿ ದಷ್ಟ ಪುಷ್ಟವಾಗಿ ಬೆಳೆದ ದೃಢಕಾಯದಲ್ಲಿ ಮಣ್ಣಿನ ಮಗನ ಜೀವ ಕಳೆಯಿತ್ತು. ಮಟ್ಟಿಯ ಮದನನ ಪಾತ್ರಾಭಿನಯ ಅರ್ಥಪೂರ್ಣವಾಗಿದ್ದು ಬೇಗ ಜನಾನುರಾಗ ಗಳಿಸಿತು. ಅಭಿನಯದಲ್ಲಿ ಚಾತುರ್ಯಕ್ಕಿಂತ ತಲ್ಲೀನತೆಯಿತ್ತು. ಇದೇ ಸಮಯದಲ್ಲಿ ಕಲಾಪ್ರೇಮದೊಂದಿಗೆ ಸಾಹಿತ್ಯ ಪರಿಶ್ರಮವೂಉ ಒಡನೊಡನೆ ಕೂಡಿ ಬೆಳೆಯಿತು. ಲೇಖಣಿ ಕೈಗೆತ್ತಿಕೊಂಡರು. ಕನ್ನಡದಲ್ಲಿ ಕೃತಿರಚನೆಗೆ ತೊಡಗಿದರು. ತುಳುನಾಡಿನ ಜನಕಷ್ಟೇ ಪರಿಚಿತರಾಗಿದ್ದ ವಿಶುಕುಮಾರ್ ಈಗ ಇಡೀ ಕನ್ನಡ ನಾಡಿನ ಸಾಹಿತ್ಯ ಪ್ರಿಯರಿಗೆ ಆತ್ಮೀಯರಾದ ಲೇಖಕರಾದರು.

ವಿಶುಕುಮಾರ್ ಬಹುಸಂಖ್ಯೆಯ ಕೃತಿಗಳ ಲೇಖಕರ ಪಂಕ್ತಿಗೆ ಸೇರಿದವರಲ್ಲ; ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದವರೂ ಅಲ್ಲ. ಕಥಾಸಂಕಲನ ಕೂಡ ‘ಕುಸುಮ ಕೀರ್ತನ’ ವೊಂದೇ. ನಾಟಕಗಳು; ಹೆಗಲಿಗೆ ಹೆಗಲು, ತರಂಗ ಅಂತರಂಗ, ಕೋಟಿ – ಚಿನ್ನಯ, ಡೊಂಮಕು ಬಾಲದ ನಾಯಕರು. ಆದರೆ ಕಾದಂಬರಿಗಳು ಹತ್ತಾರು : ನೆತ್ತರಗಾನ, ಗಗನಘಾಮಿಗಳು, ಮಿಯಾಂವ್ ಕಾಮತ್, ಭಗವಂತನ ಆತ್ಮಕಥೆ, ಕರಾವಳಿ, ಮದರ್, ವಿಪ್ಲವ, ಕರ್ಮಭೂಮಿ, ಕಾಮುಕರು, ಈ ಪರಿಯ ಬದುಕು, ಭಟಕಳದಿಂದ ಬೆಂಗಳೂರಿಗೆ, ಕಪ್ಪು ಸಮುದ್ರ, ಹಂಸಕ್ಷೀರ, ಪ್ರಜೆಗಳು – ಪ್ರಭುಗಳು, “ಹೊಸದಾಗಿ ಏನು ಬರೆದಿದ್ದೀರಿ?” ಎಂದು ಪ್ರಶ್ನೆ ಕೇಳುವವರು ಸಿಗುತ್ತಾರೆ. ಬರವಣಿಗೆ ನನ್ನ ವೃತ್ತಿಯಲ್ಲ. ಬರೆಯಬೇಕಾದ ವಸ್ತುಗಳು ಸಿಕ್ಕಾಗ ಬರೆಯಲು ಪ್ರಯತ್ನಿಸುತ್ತೇನೆ. ಹೊಸ ಕಾದಂಬರಿ ಬರೆಯಲು ಅನುಭವವೂ ಪಕ್ಷ ಆಗಬೇಕು. ಅಂಥ ಸಂದರ್ಭ ಬಂದಾಗ ಹೊಸ ಕಾದಂಬರಿಗಳನ್ನು ನಿರೀಕ್ಷಿಸಬಹುದು”. ಜನ ನಿರೀಕ್ಷಿಸಿದ್ದು ಹುಸಿಯಾಗಲಿಲ್ಲ. ಅವರ ಅರೇಳು ಕಾದಂಬರಿಗಳಂತೂ ಮೂರನೇ ಆವೃತ್ತಿ ಕಂಡಿವೆಯೆಂಬುದು, ಜನತೆ ಒಪ್ಪಿಕೊಂಡ ಲೇಖಕನೆಂದು ಕೊಟ್ಟ ಸಾರ್ವಜನಿಕ ಪ್ರಶಸ್ತಿ ಪತ್ರ. ಕೆಲವು ಕೃತಿಗಳು ಅತಿಯಾದ ಬಿಸಿಯಾದ ಚರ್ಚೆಗೆ, ಟೀಕೆಗೆ, ತೀವ್ರ ಪ್ರತಿಭಟನೆಗೆ ಒಳಗಾಗಿದ್ದುದು ಸಾಹಿತ್ಯಾಸಕ್ತರ ನೆನಪಿನಿಂದ ಮಾಸಿಲ್ಲ. ‘ಕರಾವಳಿ’ ಧಾರವಾಹಿಯನ್ನು ನಿಲ್ಲಿಸಬೇಕಾಯಿತು. ಅದು ಚಲನ ಚಿತ್ರವಾದಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರಾಯಿತು. ‘ಡೊಂಕು ಬಾಲದ ನಾಯಕರು’ ರಾಜಕೀಯ ವಿಡಂಬನೆ ನಾಟಕವೂ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಯಿತು.

ವಿಶುಕುಮಾರ್ ವರ್ಣರಂಜಿತ ಬದುಕು ನಡೆಸಿದ ಧೀಮಂತ. ಆತನ ಕುಲಾವಿಯಲ್ಲಿ ಎಷ್ಟೊಂದು ಗರಿಗಳು! ಕಥೆಗಾರ, ನಾಟಕಕಾರ, ಕಾದಂಬರಿಕಾರ, ನಟ, ಚಲನಚಿತ್ರ, ನಿರ್ದೇಶಕ, ಗೋಡಂಬಿ ನಿಗಮದ ಅಧ್ಯಕ್ಷ, ಸಂಜೆವಾಣಿ – ಚಿತ್ರದೀಪ ಪತ್ರಿಕಾ ಸಂಪಾದಕ, ರಾಜಕೀಯ ಪರಿಶ್ರಮ – ಇತ್ಯಾದಿಗಳ ಸರಮಾಲೆ, ಸಾದಾ ಸೀದಾ ಆಸಾಮಿ …, ಸ್ವಾಭಿಮಾನಿ, ಬೆನ್ನಿಗೆ ಚೂರಿ ಹಾಕುವ ಹಲ್ಕಾತನ ಇರಲಿಲ್ಲ.

ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ಏಳೂವರೆ ವರ್ಷಗಳ ಅವಧಿಯಲ್ಲಿ ಕಾರ್ಯಾಲಯಕ್ಕೆ ನೇರವಾಗಿ ಬಂದು ಕಂಡಿದ್ದು ಕೇವಲ ಆರುಸಲ. ಮೊದಲ ಸಲ ಬಂದು ವಿಶುಗೂ ಆರನೆಯ ಸಲ ಬಂದ ವಿಶುಗೂ ಧ್ರುವಗಳ ಅಂತರ. ಮೊದಲ ಸಲ ಬಂದಾಗ ಚೆಲುವ ಚೆನ್ನಿಗರಾಯನಾಗಿ ಮಿರುಗುತ್ತಿದ್ದರು. ಕಡೆಯ ಸಲ ಬರುವಾಗಾಗಲೇ ಸಾವು ಮುದ್ರೆಯೊತ್ತುತ್ತಿದ್ದ ಬತ್ತಿದ ಮುಖ; ಕಡ್ಡಿ ಪೈಲ್ವಾನ್ ಆಗಿದ್ದರು. ‘ಇಂಥ ಪರಿಸ್ಥಿತಿಯಲ್ಲಿ ನೀವೇಕೆ ಬರುವ ತೊಂದರೆ ತೆಗೆದುಕೊಂಡಿರಿ’ ಎಂದು ಮನಸ್ಸು ತಡೆಯದೆ ಕೇಳಿದ್ದೆ ತಡ ಬಡಬಡನೆ ಪುಟ್ಟ ಉಪನ್ಯಾಸ ಕೊಟ್ಟರು. ಅವರ ಮಾತುಗಳು ಗಂಟೆ ಬಾರಿಸಿದಂತೆ ಕಿವಿಯಲ್ಲಿ ಇನ್ನೂ ಅನುಕರಣನವಾಗುತ್ತಿದೆ: “ನಾನು ಇಷ್ಟಪಡುವವರಲ್ಲಿ ನೀವು ಒಬ್ಬರು. ಸಲುಗೆಯಿಂದ ನಾಲ್ಕು ನುಡಿ ಹೇಳೋಣವೆಂದು ಬಂದೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ಬರುವ ಹಗರಣದಲ್ಲಿ ಹಿನ್ನೆಲೆ ಗೊತ್ತಿದೆ. ಹಿಂದುಳಿದ ವರ್ಗಗಳಿಂದ ಬಂದ ಬಹುಜನ ಬರೆಹಗಾರರನ್ನು ಗುರುತಿಸುತ್ತಿದ್ದೀರಿ. ಪಟ್ಟಭದ್ರರ ಅವಕೃಪೆಗೆ, ಆಗ್ರಹಕ್ಕೆ ಬಲಿಯಾಗಿದ್ದೀರಿ. ಜೋಕೆ. ನಿಧನವಾಗಿ ಹೋಗಿ, ವೇಗ ಹೆಚ್ಚಾಯಿತು. ಆಕ್ಸಿಲೇಟರಿಂದ ಕಾಲು ತೆಗೆಯಿತಿ” – ಹೀಗೆ ಸಾಗಿತ್ತು ಅವರ ಹಿತವಚನ ಲಹರಿ. ಅಷ್ಟು ಆಪ್ತವಾಗಿ ನನಗೆ ಬುದ್ಧಿ ಹೇಳಿದವರು ಕಡಮೆ, ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ಆಮೇಲೆ ಸಿರಸಿ, ಕೈವಾರ, ಬೀದರ್ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಲು ಕೋರಿದೆ. ಜಪ್ಪಯ್ಯ ಅಂದರೂ ಒಪ್ಪಲಿಲ್ಲ. “ನೀವಿದ್ದೀರಿ ಅಂತ ಇಲ್ಲೀವರೆಗೆ ಪ್ರೀತಿಯಿಂದ ಬಂದದ್ದೇ ಹೊರತು, ಒಂದು ಅವಕಾಶ ಗಿಟ್ಟಿಸಿಕೊಳ್ಳೋದಕ್ಕೆ ಅಲ್ಲ. ಈ ಸಾಹಿತ್ಯ ಪರಿಷತ್ತು ಮಡಿವಂತರ ಗುಡಿ. ಆ ಪೂಜಾರಿಗಳು ನಮ್ಮಂಥ ಲೇಖಕರನ್ನು ಎಂದು ಕರೆದಿದ್ದಾರೆ ಹೇಳಿ? ನಾನು ಖಾರವಾಗಿ ಬರೆದದ್ದಕ್ಕೆ ಕೆಂಡ ಕಾರಿದ್ದಾರೆ. ಅವರ ಭರ್ತ್ಸನೆ ಬಿರುಗಾಳಿ ಧಾಳಿಗೆ ಸಿಕ್ಕಿ ಒಳಗೊಳಗೇ ನಲಗಿದ್ದೇನೆ. ನಿಮ್ಮ ಮುಖಪತ್ರಿಕೆ ‘ನುಡಿ’ – ‘ಪರಿಷತ್ ಪತ್ರಿಕೆ’ಗಳಲ್ಲಿ ನನ್ನ ಎಷ್ಟು ಕೃತಿ ವಿಮರ್ಶೆ ಬಂದಿದೆ ತೋರಿಸ್ತೀರಾ ಹಂಪನಾ? ನನ್ನ ಕೃತಿಗಳಿಗೆ ಪುರಸ್ಕಾರ ಪ್ರಶಸ್ತಿ ಪ್ರೋತ್ಸಾಹ ಎಷ್ಟೆಷ್ಟು ಕೊಟ್ಟಿದ್ದೀರಿ? ಲೆಕ್ಕ ಹೇಳ್ತೀರ, ಬೆರಳು ಮಡುಚುತೀನಿ? ಹೋಗಲಿಬಿಡಿ, ಕೊಂಡು ಓದೋ ಸಾವಿರಾರು ಕನ್ನಡಿಗರು ಬೆನ್ನು ತಟ್ಟಿದಾರೆ, ಅನ್ನಕೊಟ್ಟಿದಾರೆ, ಲೇಖಣಿಗೆ ಮಸಿ ತುಂಬಿದಾರೆ” – ಆವೇಶದಿಂದ ಮಾತನಾಡಿದರು. ಉದ್ವೇಗವಿದ್ದರೂ ವಾಸ್ತವಾಂಶವಿತ್ತು.

ಕಳೆದ ವರ್ಷ (೧೯೮೫) ಹೋಟೆಲ್ ಕಾವೇರಿ ಕಾಂಟಿನೆಂಟಿನಲ್ಲಿ ಒಂದು ಸರಳ ಆತ್ಮೀಯ ಬಳಗದ ಸಮಾರಂಭ. ಸಾಹಿತ್ಯ ಸಂಜೆ ಬೆಂಗಳೂರಲ್ಲಿ ನೆಲಸಿದ ದಕ್ಷಿಣ ಕನ್ನಡ ಜಿಲ್ಲೆಯ ಜನರು ಹೆಚ್ಚಾಗಿ ಭಾಗವಹಿಸಿದ್ದರು. ನಾನು ಮುಖ್ಯ ಅತಿಥಿ. ವಿಶುಕುಮಾರರಿಗೆ ಗೌರವ ತೋರಿಸುವ ಚೊಕ್ಕ ಸಮಾರಂಭ. ಅವರ ನಾಲ್ಕು ಕಾದಂಬರಿಗಳನ್ನು ವಿಶ್ಲೇಷಿಸಿ ವಿಮರ್ಶಾತ್ಮಕವಾಗಿ ಮಾತನಾಡಿದೆ. ಗುಣ-ದೋಷ ಎರಡನ್ನೂ ಉದಾಹರಣೆ ಸಹಿತ ಬಿಡಿಸಿ ಹೇಳಿದೆ. ಸಮಾರಂಭ ಮುಗಿದ ಮೇಲೆ ಹತ್ತಾರು ಜನರ ಎದುರಿನಲ್ಲಿ ವಿಶು ತನ್ನ ಎರಡೂ ಕೈಗಳ ತುಂಬ ನನ್ನ ಕೈಗಳನ್ನು ಹಿಡಿದು “ನೋಡಿ, ನಿಜಕ್ಕೂ ನನ್ನ ಕೃತಿಗಳನ್ನು ಇಷ್ಟು ವಸ್ತುನಿಷ್ಠವಾಗಿ ಅಭ್ಯಾಸಪೂರ್ಣವಾಗಿ ವಿವೇಚಿಸಿದ ಮೊಟ್ಟಮೊದಲನೆಯ ಹಿರಿಯ ಲೇಖಕರು ನೀವು. ನನ್ನ ಹೃದಯ ತುಂಬಿ ಬಂದಿದೆ. ನನ್ನ ಎಲ್ಲ ಪುಸ್ತಕಗಳ ಒಂದು ಸೆಟ್ ಕೊಡುತ್ತೇನೆ. ಪೂರ್ತಿ ಓದಿ ದೊಡ್ಡ ಪುಸ್ತಕ ಬರೆಯಿರಿ. ನೀವು ಹೊಗಳುವ ವಂದಿಮಾಗಧರ ಜಾತಿಯವರಲ್ಲ. ನಿಮಗೆ ಏನು ಅನ್ನಿಸುತ್ತದೆ ಅದನ್ನು ಮುಲಾಜಿಲ್ಲದೆ ಬರೆಯುತ್ತೀರಿ. ಅದನ್ನು ನಾನು ಸ್ವಾಗತ ಮಾಡುತ್ತೀನಿ.” ಇತ್ಯಾದಿ ನುಡಿದರು. ನಾನು ಅಷ್ಟು ಜನರ ಎದುರಲ್ಲಿ ನಾಚಿ ನೀರಾಗಿದ್ದೆ. ಅವರ ಅಭಿಮಾನಕ್ಕೆ ಏಕಕಾಲದಲ್ಲಿ ನನಗೆ ಸಂಕೋಚ, ಸಂತೋಷ. ಅವರು ನುಡಿದಂತೆಯೇ ನಡೆದರು. ಎಲ್ಲ ಪ್ರಕಟಿತ ಪುಸ್ತಕಗಳ ಒಂದು ಕಟ್ಟು ಕಳಿಸಿದರು. ಆದರೆ ನಾನು ಮಾತಿಗೆ ತಕ್ಕ ಹಾಗೆ ಪ್ರತಿ ಕೃತಜ್ಞತೆಯ ಕಾರ್ಯ ಮಾಡಲಾಗಲಿಲ್ಲ; ಹತ್ತಕ್ಕಿಂತ ಹೆಚ್ಚು ಪುಸ್ತಕಗಳನ್ನು ಇವತ್ತಿನವರೆಗೂ ಓದಲಾಗಲಿಲ್ಲ. ಇದಕ್ಕೆ ವಿಷಾದಪಟ್ಟಿದ್ದೇನೆ, ಗತಿಸಿದ ಗೆಳೆಯನ ಕ್ಷಮೆ ಬೇಡುತ್ತೇನೆ.

ವಿಶುಕುಮಾರ್ ಬರೆದಿರುವುದೆಲ್ಲಾ ಶ್ರೇಷ್ಠ ಸಾಹಿತ್ಯವೆಂದು ಹೊಗಳಿ ಹೊನ್ನಶೂಲಕ್ಕೇರಿಸಬೇಕಾದ್ದಿಲ್ಲ. ನ್ಯೂನತೆಗಳೇ ಇಲ್ಲದ ನಿರಭ್ರ ಬರವಣಿಗೆಯೆಂದೇನೂ ಉತ್ಪ್ರೇಕ್ಷಿಸಬೇಕಾಗಿಲ್ಲ. ಕೃಷ್ಣಮೂರ್ತಿ ಪುರಾಣಿಕ, ಬೀಚಿ ಮೊದಲಾದವರಿಗಿಂತ ವಿಶು ಉತ್ತಮ ಕಾದಂಬರಿಕಾರರೆಂದು ಹಿಂಜರಿಕೆಗಳಿಲ್ಲದೆ ಹೇಳುತ್ತೇನೆ. ಕನ್ನಡ ಕಾದಂಬರಿಗಳಿಗೆ ವಸ್ತುವಿನ ಆಯ್ಕೆ ದೃಷ್ಟಿಯಿಂದ ಹೊಸತನ ತಂದು ಕೊಟ್ಟವರಲ್ಲಿ ವಿಶು ಒಬ್ಬರು. ಆತ ಬಾಳಿನ ಏಣಿ ಏರಿಬಂದದ್ದನ್ನು ಮುಚ್ಚುಮರೆಗಳಿಲ್ಲದೆ ಹೇಳುತ್ತಿದ್ದರು; ಅದೇ ಒಂದು ರೋಮಾಂಚಕ ಕಾದಂಬರಿ. ನಮ್ಮಲ್ಲಿ ಬಹುಜನ ಲೇಖಕರಿಗೆ ಆ ವೈವಿಧ್ಯ ವಿಸ್ತಾರ ಸ್ವಾರಸ್ಯಗಳ ಬದುಕು ದಕ್ಕಿಲ್ಲ. ಎಂಥ ಮಹಾರಸಿಕ. ಕಾವೇರಿದ, ರಂಗೇರಿದ ಕ್ಷಣಗಳಲ್ಲಿ ಅವರನ್ನು ಮಾತಿಗೆ ಬಿಡಬೇಕು. ರಸಕವಳ. ಅವರಲ್ಲಿದ್ದ ಪ್ರತಿಭೆ, ಅನುಭವ ಸಮಸ್ತವೂ ಬರವಣಿಗೆಗೆ ಇಳಿಯಲಾಗಲಿಲ್ಲವೆಂಬುದು ಒಪ್ಪತಕ್ಕ ಮಾತು. ಕರಾವಳಿಯಲ್ಲಿ ತಾಜಾತನದ ಜೀವನ ಕಳೆಯಿದೆ. ಬದುಕಿಗಾಗಿ ನಡೆಯುವ ಮನುಷ್ಯನ ನಿರಂತರ ಹೋರಾಟದ, ನೋವು ನರಳಾಟದ ನಡುವೆ ಮಿಂಚುವ ಬೆಳ್ಳಿಗೆರೆಗಳ ಚಿತ್ರಣ ಸಹಜವಾಗಿ ಮೂಡಿಬಂದಿದೆ: ಮೊಗವೀರರ ಬದುಕಿನ ಒಂದು ಮುಖ ಅಲ್ಲಿ ಜೀವಂತವಾಗಿ ಅನಾವರಣಗೊಂಡಿದೆ.

ಕಳೆದ ಏಳೂವರೆ ವರ್ಷಗಳಲ್ಲಿ ಅವರ ಏಳು-ಬೀಳು ಎರಡನ್ನೂ ಕಂಡದ್ದಾಯಿತು. ತಮ್ಮ ಕಣ್ಣೆದುರಿಗೆ ನೋಡನೋಡುತ್ತಿದ್ದಂತೆ ವ್ಯಕ್ತಿಗಳು ಹೇಗೆ ಕರಗಿ ಸೊರಗಿ ಕಡ್ಡಿಯಾಗುತ್ತಾರೆಂಬುದನ್ನು ನೋಡಿದ್ದಾಯಿತು. ಇನ್ನೂ ನಿನ್ನ ಮೊನ್ನೆ ಮಾತನಾಡಿಸಿ ಮನೆಗೋ ಊರಿಗೋ ಹೋದ ವ್ಯಕ್ತಿಗಳು ಹಾಗೇ ನೇರವಾಗಿ ಹಿಂತಿರುಗಿ ಬಾರದೆ ಹೇಗೆ ಕಣ್ಮರೆಯಾದರೆಂಬುದನ್ನೂ ನೋಡಿದ್ದಾಗಿದೆ. ಡಾ.ಜಯಂತ ಕುಳ್ಳಿ, ಬಿ.ಬಿ.ಮಹೀಶವಾಡಿ, ಗೀತಾ ಕುಲಕರ್ಣಿ, ಎಂ.ಬಿ. ಕೊಟ್ರಶೆಟ್ಟಿ, ಮಲ್ಲೇಶ ಬಾರ್ಕರ, ವಿಶುಕುಮಾರ್ – ಇದು ಮುಗಿಯದ ಪಟ್ಟಿ, ಮರಣ ಪಯಣ. ಸಮೂಹ ಮಾಧ್ಯಮಗಳ ಪಕ್ಷಪಾತದ ಪರಿಣಾಮವಾಗಿ ಇದ್ದ ಕಾಲದಲ್ಲೂ ಸತ್ತ ಕಾಲದಲ್ಲೂ ಸರಿಯಾದ ಪ್ರಚಾರವಿಲ್ಲದೆ ಮೌನವಾಗಿ ಮರಣದ ಮಹಾಮನೆಗೆ ಸಾಗಿದವರು ಇವರು, ಇವರಂತಹವರು. ಎಲ್ಲರ ಬೆನ್ನ ಹಿಂದೆಯೂ ಸಾವು ಹೊಂಚು ಹಾಕಿ ಸಂಚರಿಸುತ್ತಿರುತ್ತದೆ. ಅದರ ಅಂಚಿನೊಳಗೆ ಬಾಳುವವರಿಗೆ ಇದು ತಿಳಿಯುವುದು ಅಪರೂಪ. ಮೃತ್ಯುವಿನ ಮುನ್‌ಸೂಚನೆ ಗ್ರಹಿಸುವವರು ಕಡಮೆ. ವಿಶುಕುಮಾರರು ಕರಿಯ ನೆರಳು ತನ್ನ ಹತ್ತಿರಕ್ಕೆ ಬರುತ್ತಿರುವುದನ್ನು ಗುರುತಿಸುವವರಾಗಿದ್ದರು. ಅವರೊಡನೆ ಕಟ್ಟಕಡೆಯ ಬಾರಿಗೆ ದೂರವಾಣಿಯಲ್ಲಿ ಕಳೆದ ತಿಂಗಳು ಮಾತನಾಡಿದಾಗ ಹೇಳಿದ ಅರ್ಥಗರ್ಭಿತ ಮಾತುಗಳನ್ನು ನೆನೆದು ಅಗಲಿದ ಗೆಳೆಯನಿಗೆ ನನ್ನ ಗೌರವದ ಶ್ರದ್ಧಾಂಜಲಿಯಾಗಿ ಈ ಬರೆಹದ ಹೂಗೊಂಚಲು! “ವಿಶು ಈ ಸಲ ಗುಲ್ಬರ್ಗದಲ್ಲಿ ನಡೆಯುವ ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀವು ಬರಬೇಕು, ಇದು ನನ್ನ ಅಕ್ಕರೆಯ ಆಹ್ವಾನ”

“ಹಂಪನಾ, ನಾನು ಆರೋ ದೀಪ. ಇದನ್ನು ಯಾಕೆ ಕರೀತೀರಿ. ಇನ್ನೂ ಎಣ್ಣೆ ಬತ್ತಿ ಬೆಳಕು ಇರೋ ದೀಪಗಳಿಗೆ ಅವಕಾಶ ಕೊಡಿ” – ಇದು ವಿಶು ಹೇಳಿದ ಕಡೆಯ ಮಾತು, ಕಡೆಯತನಕ ನಾವು ನೆನಪಿಡಬೇಕಾದ ಮಾತು, ಸಾಹಿತ್ಯ ಕ್ಷೇತ್ರದಲ್ಲಿಯೂ ಇತರ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುವವರು ಮನನ ಮಾಡಬೇಕಾದ ಸುಭಾಷಿತೋಕ್ತಿ.

(ಕನ್ನಡ ನುಡಿ, ನವೆಂಬರ್ , ೧೯೮೬)

* * *