ಎಪ್ಪತ್ತೊಂಭತ್ತು ವರ್ಷಗಳ ಸಾರ್ಥಕ ಜೀವನವನ್ನು ನಡೆಸಿದ ಹಿರಿಯ ಸಾಹಿತಿ ಡಾ.ವಿ.ಸೀ.ಯವರನ್ನು ಗೌರವಿಸುವುದೆಂದರೆ ಕನ್ನಡವನ್ನೇ ಗೌರವಿಸಿದಂತೆ. ಇವರ ನಡೆ, ನುಡಿ, ಊಟ-ಉಡಿಗೆ, ಬರವಣಿಗೆ, ಬಾಳು-ಎಲ್ಲದರಲ್ಲಿಯೂ ನಾಜೂಕು ಎದ್ದು ಕಾಣುತ್ತವೆ. ಉಡುವ ಗರಿಗರಿಯಾದ ನವುರು ಪಂಚೆ, ತೊಡುವ ಹಾಲು ಬಿಳಿಯ ಅಂಗಿ, ತಲೆ ತುಂಬಿ ಸ್ಫಟಿಸಿದ ಶಲಾಕೆಯಿಂತಿರುವ ಶುಭ್ರ ಮೈಸೂರು ಪೇಟ, ಕುಡಿಯುವ ಹದವಾದ ರುಚಿಯಾದ ಕಾಫಿ, ತಿನ್ನುವ ಕೋಮಲಪ್ರಾಯದ ಹೆಣ್ಣಿನ ಕಿರುಬೆರಳಿನ ಗಾತ್ರದ ಐದು ಸುತ್ತಿನ ಚಕ್ಕುಲಿ, ಮೆಲ್ಲುವ ಎಳೆಯ ಚಿಗುರಾದ ಮೈಸೂರು ವೀಳೆಯ – ಎಲ್ಲದರಲ್ಲೂ ನಯ, ಚೊಕ್ಕತನ. ಇದಲ್ಲವೆ ರಸಿಕತೆ? ಕಾವ್ಯ ಇರುವುದು ಇಂಥವರಿಗಾಗಿ.

ಹೊಸಗನ್ನಡ ಅರುಣೋದಯ ಕಾಲದ ಪ್ರಾತಃ ಸ್ಮರಣೀಯರಾದ ಬಿ.ಎಂ.ಶ್ರೀ., ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಡಿ.ವಿ.ಜಿ. ಮೊದಲಾದ ಶ್ರೀಗಂಧದ ಒಡನಾಟದಲ್ಲಿ ಬೆಳೆದವರು ಇವರು. ಒಳಗಿನ ಭಾವನೆಗಳಿಗೂ ಹೊರಗಿನ ಬದುಕಿಗೂ ಭೇದವಿರದಂಥ ಸತ್ಪುರಷದ ಜೀವನ ನಡೆಸಿದವರು. ಹೊರಗೆ ಎಷ್ಟು ಪ್ರಸನ್ನವದನವೋ ಒಳಗೆ ಅಷ್ಟೇ ಪ್ರಸನ್ನ ಹೃದಯ. ಇವರ ಶ್ರೀಮಂತಿಕೆಯೆಲ್ಲ ಹೃದಯದ ಶ್ರೀಮಂತಿಕೆ. ಇಷ್ಟು ಆರ್ದ್ರವಾದ ಉದಾರವಾದ ಅಕಳಂಕ ವ್ಯಕ್ತಿತ್ವ ಯಾರನ್ನು ತಾನೆ ಸೆಳೆಯುವುದಿಲ್ಲ? ಇವರ ಸ್ನೇಹ ವರ್ತುಲಕ್ಕೆ ಸಿಕ್ಕಿದವರೆಲ್ಲರ ಅನುಭವ ಒಂದೇ – ಸ್ವರ್ಗದೊಳಗೀ ಸ್ನೇಹ ದೊರೆವುದೇನು? ಎಂಬ ಪ್ರಶ್ನೆ.

ವಿಶಿಷ್ಟ ವೈಖರಿ

ಈ ಸೌಜನ್ಯಮೂರ್ತಿಯನ್ನು ಒಮ್ಮೆ ಕಂಡವರು ಎಂದೂ ಮರೆಯಲಾರರು. ಮಹಾರಾಜಾ ಕಾಲೇಜಿನಲ್ಲಿ, ಸೆಂಟ್ರಲ್ ಕಾಲೇಜಿನಲ್ಲಿ ಇವರ ಶಿಷ್ಯರಾಗಿ ತಮ್ಮ ಬಾಳನ್ನು ಬೆಳಗಿಸಿಕೊಂಡವರು, ಕನ್ನಡದ ದೀಪ ಹಿಡಿದವರು ಸಾವಿರಾರು; ಆದರೆ ಅದಕ್ಕಿಂತ ಮಿಗಿಲಾಗಿದ್ದಾರೆ ಇವರ ಉಪನ್ಯಾಸ ಕೇಳಿ ಕನ್ನಡದ ದೀಕ್ಷೆ ಪಡೆದವರು. ಇವರಿಗೆ ಸಾಹಿತ್ಯ ಕಲೆ ಸಂಸ್ಕೃತಿ ಸಂಗೀತ-ಎಲ್ಲದರಲ್ಲಿಯೂ ಸದಭಿರುಚಿಯ ಜತೆಗೆ ಪರಿಶ್ರಮವೂ ಬೆರೆತಿದ್ದು ವಿಮರ್ಶನ ಶಕ್ತಿ ಸದಾ ಜಾಗೃತವಾಗಿರುತ್ತದೆ. ಇವರ ಮಾತು ತನ್ನ ವಿಶಿಷ್ಟ ವೈಖರಿಯಿಂದ, ಇಂಗ್ಲಿಷ್ ಕನ್ನಡ ಎರಡರ ಸಮಪಾಕದ ಸಂಪತ್ತಿನಿಂದ ರಸಪರವಶಗೊಳಿಸುತ್ತದೆ.

ಇವರು ರಚಿಸಿರುವ ಗೀತೆಗಳು, ದೀಪಗಳು, ನೆರಳು, ಬೆಳಕು, ದ್ರಾಕ್ಷಿ ದಾಳಿಂಬೆ ಮುಂತಾದ ಕವನ ಸಂಕಲನಗಳು, ಪಂಪಾಯಾತ್ರೆ, ಸೊಹ್ರಾಬ್ ರುಸ್ತುಂ, ಹಣ ಪ್ರಪಂಚ, ಮಹನೀಯರು, ಕಾಲೇಜ್ ದಿನಗಳು ಮುಂತಾದ ಇನ್ನಿತರ ಕೃತಿಗಳು, ಇಂಗ್ಲಿಷಿನಲ್ಲಿರುವ ಮಹಾಕವಿ ಪಂಪ, ಅನುವಾದಿಸಿರುವ ಪಿಗ್‌ಮೇಲಿಯನ್ – ಇವು ಯಾವುದೇ ಲೇಖಕರಿಗೆ ಗೌರವ ತರುವ ಸ್ವರೂಪದಲ್ಲಿವೆ. ಇತ್ತೀಚೆಗೆ ಇಂಡಿಯಾ ಬುಕ್ ಹೌಸ್ ಪ್ರಕಟಣೆಯಾದ ಕವಿಕಾವ್ಯ ಪರಂಪರೆಗೆ ಸಂಪಾದಕರಾಗಿದ್ದು ಪರಾಮರ್ಶೆಗೆ ಪ್ರಶಸ್ತವಾದ ಪುಸ್ತಕಗಳನ್ನು ಹೊರತರುತ್ತಿದ್ದಾರೆ.

ಪರಿಷತ್ತಿನ ಜೊತೆ ಸಂಬಂಧ

ಕನ್ನಡ ಸಾಹಿತ್ಯ ಪರಿಷತ್ತಿಗೂ ಇವರಿಗೂ ಇರುವ ಸಂಬಂಧ ದೀರ್ಘವಾದುದು. ಪರಿಷತ್ತಿನ ಕೋಶಾಧಿಕಾರಿಯಾಗಿ, ಕನ್ನಡ ನುಡಿ, ಪರಿಷತ್ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾರವಾರದಲ್ಲಿ ೧೯೩೧ರಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾಗಿ. ಕುಮಟಾದಲ್ಲಿ ೧೯೫೩ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇವರು ಕನ್ನಡಿಗರ, ಷರತ್ತಿನ ಗೌರವವನ್ನೂ ಮಾನ್ಯ ಮಾಡಿದ್ದಾರೆ. ಇಂಥ ಗಣ್ಯಸಾಹಿತಿಯೊಬ್ಬರನ್ನು, ಸುಸಂಸ್ಕೃತ ಮಹಾವ್ಯಕ್ತಿಯೊಬ್ಬರನ್ನು ಸನ್ಮಾನಿಸಬೇಕೆಂಬ ಸದ್ಬುದ್ಧಿ ಸತ್ಟ್ರೇರಣೆ ಶಿವಮೊಗ್ಗದ ಕರ್ನಾಟಕ ಸಂಘದವರಿಗೆ ಉಂಟಾದುದು ಸಂತೋಷಕರ ವಿಷಯ. ಈ ಸನ್ಮಾನದಿಂದ ಡಾ. ವಿ.ಸಿ.ಯವರಿಗೆ ಆಗಬೇಕಾದುದು ಏನೂ ಇಲ್ಲ. ಆದರೆ ಇದರಿಂದ ಅವರ ಅಭಿಮಾನಿಗಳ ಪಾಲಿಗೆ ಕೃತಜ್ಞತಾ ಭಾವದ ಹರ್ಷವುಂಟಾಗಿದೆ. ಈ ಸಮಾರಂಭವೇನಿದ್ದರೂ ಒಂದು ಸದಭಿರುಚಿಯ ಆರಾಧನೆ. ಇಂತಹ ಮಹಾನುಭಾವರ ಸಂಶ್ರಯ ಸಾಮೀಪ್ಯಗಳಿಂದ ನಮ್ಮ ಜನ್ಮ ಸಾರ್ಥಕತೆಯತ್ತ ನಡೆಯುತ್ತದೆಂದು ನಾನು ನಿಜವಾಗಿ ನಂಬಿದ್ದೇನೆ. ಇಷ್ಟು ಹಿರಿಯೊಬ್ಬರನ್ನು ಗೌರವಿಸುವ ಈ ಅಪರೂಪ ಸಮಾರಂಭದ ಅಧ್ಯಕ್ಷತೆ ವಹಿಸುವ ಅವರ್ಣನೀಯ ಆನಂದವನ್ನು ನನಗೆ ಒದಗಿಸಿದಕೊಟ್ಟ ಶಿವಮೊಗ್ಗದ ಮಹಾ ಜನತೆಗೆ ನಾನು ಸದಾ ಕೃತಜ್ಞನಾಗಿದ್ದೇನೆ.

(ಕನ್ನಡ ನುಡಿ, ಸೆಪ್ಟೆಂಬರ್ ೧೬, ೧೯೭೮)

* * *