ಕಳೆದ ಹತ್ತು ದಿನಗಳಿಂದ ಎಡೆಬಿಡದೆ, ಮುಂಜಾನೆಯಿಂದ ಸಂಜೆಯವರೆಗೆ, ನಡೆದುಕೊಂಡು ಬಂದ ಸಂಶೋಧನ ಕಮ್ಮಟ ಇಲ್ಲಿಗೆ ಮುಕ್ತಾಯವಾಗಲಿದೆ. ಇದು ಒಂದರ್ಥದಲ್ಲಿ ನಿಮಗೆ ಹೃದಯಸ್ಪರ್ಶಿ ಬೀಳ್ಕೊಡಿಗೆ ಸಮಾರಂಭ. ನಿಮ್ಮ ಗುರುಗಳೂ ನೀವು ಒಕ್ಕೊರಲಿನಿಂದ ನನ್ನನ್ನೂ ನನ್ನ ಮೂಲಕ ಪರಿಷತ್ತನ್ನೂ ಪದಾಧಿಕಾರಿಗಳನ್ನೂ ಪ್ರಶಂಶಿಸಿದ್ದೀರಿ. ಸಂಸ್ಕೃತದಲ್ಲಿರುವ ಮಾತೊಂದು ನನ್ನ ಸಹಾಯಕ್ಕೆ ಬರುತ್ತಿದೆ. ‘ಅಹಂ ಕರೋತೀತಿ ವೃಥಾಭಿಮಾನ’. ಇದು ಸಾಮೂಹಿಕ ಪ್ರಯತ್ನ, ಸಮೂಹಗಾನ. ಗೋಷ್ಠಿಗಾನದಲ್ಲಿ ಯಾರೊಬ್ಬರ ಶ್ರುತಿ ತಪ್ಪಿದರೂ ಒಟ್ಟು ಪರಿಣಾಮ ಕೆಡಬಹುದು. ಇಲ್ಲಿ ಎಲ್ಲರೂ ಸಹಕರಿಸಿದ್ದೀರಿ. ಗೊಟ್ಟಿಯ ಅಲಂಪಿನ ಇಂಪಿಗೆ ಆಗರವಾಗಿರುವ ನೀವು ಧನ್ಯರು. ನಮಗೆ, ಇನ್ನೂ ಹಿಂದಿನವರಿಗೆ ಈ ಬಗೆಯ ವ್ಯವಸ್ಥಿತ ಕುಮ್ಮಟಗಳು ಇರಲಿಲ್ಲ. ಇಂಥ ಅನುಕೂಲ ಪರಿಸರ ದೊರೆತಿದ್ದರೆ ಅವರು ಇನ್ನೆಷ್ಟು ಪ್ರಗತಿ ಸಾಧಿಸಿದ್ದರೊ. ತಮಗಿದ್ದ ಮಿತಿಗಳಲ್ಲಿ ಅವರು ಮಾಡಿರುವ ಅದ್ಭುತ ಸಂಶೋಧನೆಗಳನ್ನು ನೆನೆಸಿಕೊಂಡಾಗ ಆಶ್ಚರ್ಯದ ಜೊತೆಗೆ ಗೌರವವೂ ಕಾಣಿಸಿಕೊಳ್ಳುತ್ತದೆ.

ಹಳೆಯದೆಲ್ಲ ಕಸವಲ್ಲ, ಹೊಸದೆಲ್ಲ ಚಿನ್ನವಲ್ಲ. ಅಥವಾ ಹೊಸದೆಲ್ಲ ಕಸವಲ್ಲ, ಹಳೆಯದೆಲ್ಲ ಚಿನ್ನವಲ್ಲ, ಹೊಸದಿರಲಿ, ಹಳೆಯದಿರಲಿ ಅದು ಕಸವೊ ರಸವೊ ಆಗುವುದು ಅದರ ಅಂತಃಸತ್ವದಿಂದ, ಸಂಶೋಧನೆ ಪೊಗದಸ್ತಾಗಿದ್ದರೆ ನಿಲ್ಲುತ್ತದೆ, ಇಲ್ಲವಾದರೆ ಎಷ್ಟೇ ಟೇಕ ಕೊಟ್ಟರೂ ಕುಸಿಯುತ್ತದೆ. ತಿಳಿವಳಿಕೆಯ ಆಳ ಅಗಲ ನವಿರು ಚಿಗುರು ಚುರುಕು ಎಷ್ಟೆಷ್ಟು ಮೊನಚಾಗಿರುತ್ತದೆಯೊ ಅಷ್ಟಷ್ಟು ಸಂಶೋಧನೆ ಪುಷ್ಟಿಗೊಂಡು ಹರಳುಗೊಳ್ಳುತ್ತದೆ. ಹಾಗಾದಾಗ ಸಂಶೋಧನೆಯನ್ನು ಕಂಡರೆ ಒಗ್ಗದೆ ಮೂಗು ಮುರಿಯುವವರೂ ಕೂಡ ಮೂಗಿನ ಮೇಲೆ ಬೆರಳಿಟ್ಟು ಬಿಲ್ಲುಂಬೆರಗಾಗಿ ಬಾಯಿಬಿಟ್ಟು ನೋಡುತ್ತಾರೆ, ಅವರ ಮಂಡೆ ಸಂಶೋಧನೆಯ ಕಾಲಡಿಗೆ ಬಾಗಿರುತ್ತದೆ.

ಸೂಕ್ಷ್ಮಗ್ರಹಣಶಕ್ತಿ ಕವಿಯ, ಸೃಜನಶೀಲ ಲೇಖಕರ ಗುತ್ತಿಗೆಯಲ್ಲ, ಕಾವ್ಯ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ. ಹಾಗೇ ನೋಡುವುದಾದರೆ ಸಂಶೋಧನೆಗೇ ಹೆಚ್ಚು ಸೂಕ್ಷ್ಮ ದೃಷ್ಟಿ ಬೇಕಾಗುತ್ತದೆ. ಸಂಶೋಧನೆ ಮನರಂಜನೆಯಲ್ಲ. ಧೂಳು ಕೊಡವಿ ಮೂಲ ಸ್ವರೂಪವನ್ನು ಖಚಿತಪಡಿಸಿ ತೋರಿಸುವ ಪರಿಶ್ರಮ ಪರಿಚಾರಿಕೆ, ಕತ್ತಲೆಯತ್ತ ಬಿಡುಗಣ್ಣು ಹಾಯಿಸಿ ಕ್ಷ-ಕಿರಣ ಬೀರುವ ಸಂಶೋಧನೆಯೂ ಒಂದು ಶಿಸ್ತು, ಶಾಸ್ತ್ರ, ದರ್ಶನ. ಕಣ್ಣಿಗೆ ಕಾವುವುದರ ಹಿಂದಿರುವ ಅದ್ಭುತವನ್ನು ಅನಾವರಣ ಮಾಡುವ ಸಂಶೋಧನೆಯ ಕಾರ್ಯ ಕಡಮೆಯದಲ್ಲ ಎಂಬ ಆತ್ಮವಿಶ್ವಾಸವಿರಬೇಕು.

ಸಂಶೋಧನೆಯೆಂಬ ಗಂಡಭೇರುಂಡದ ಎರಡು ಮುಖಗಳಲ್ಲಿ ಒಂದು ಬಿಡುವು ಬಯಸದ ಕಾಯಕ. ಇನ್ನೊಂದು ಪ್ರಾಮಾಣಿಕತೆ ಪ್ರತಿಯೊಂದು ಪ್ರಯತ್ನದ ಹಿಂದೆ ಪೂರ್ವ ಗ್ರಹಗಳಿಲ್ಲದ ಸಂಯಮ, ಬುದ್ಧಿಯ ತೇಜಸ್ಸು, ಪ್ರಾಮಾಣಿಕತೆ ತೂಕ ಇರಬೇಕು. ಮಂಥನ, ವಿಧಾನ, ಶೋಧನ ಕ್ರಮ -ಇವುಗಳ ನಿಕಟ ಪರಿಚಯ ಪಡೆದಿರುವ ನಿಮಗೆ ಈಗ ಮತ್ತೆ ಸಂಶೋಧನೆ ಕುರಿತು ಹೊಸ ವ್ಯಾಖ್ಯೆ ಕೊಡುವ ಅಗತ್ಯವಿಲ್ಲ. ನೀವು ಭಾಗ್ಯಶಾಲಿಗಳು. ನಿಮಗೆ ದಾರಿ ತೋರಿಸಲು ವಿಶ್ವಾಸಾರ್ಹರಾದ ಒಳ್ಳೆಯ ಗುರುಗಳು ದೊರೆತರು. ಇಂದಿನ ದಿನಗಳಲ್ಲಿ ಯುವಜನಾಂಗ ಪಥಭ್ರಾಂತರಾಗಲು ಒಮ್ಮಮ್ಮೆ ಸಮರ್ಥ ಬೋಧಕರ ಕೊರತೆಯೂ ಕಾರಣ. ಮೊದಲೇ ವಿದ್ಯಾರ್ಥಿಗಳಿಗೆ ಗುರಿ ಇರದು. ಸರಿ ಯಾವದ ಗುರುಗಳೂ ಇರದಿದ್ದರೆ ದೇವರೇಗತಿ. ಗುರು ದೊರೆತರೆ ಗುರಿ ತೋರಿಸಿಯಾರು. ಅದೃಷ್ಟಶಾಲಿಗಳಾದ ನಿಮಗೆ ಒಂದೇ ಏಟಿಗೆ ಹಣ್ಣೂ-ಹೂ ಒಟ್ಟಿಗೆ ಬುಟ್ಟಿಗೆ ಬಿದ್ದಿದೆ. ಈ ಲಾಭವನ್ನು ಹಾಳುಮಾಡಿಕೊಳ್ಳದೆ ಜನತ ಜೋಪಾನಗಳಿಂದ ಊರ್ಜಿತಗೊಳಿಸಿರಿ. ಆಸ್ತಿ ಕಳೆದುಕೊಂಡು ಪಾಪರ್ ಆದರೆ ಯಾರು ಕೇಳುತ್ತಾರೆ?

ಹಸಿರು ಕ್ರಾಂತಿ. ಔದ್ಯೋಗಿಕ ಕ್ರಾಂತಿ ಎಂಬೆಲ್ಲಾ ಹೊಚ್ಚ ಹೊಸ ಹೇಳಿಕೆಗಳು ಕೇಳಿಬರುತ್ತಿರುತ್ತವೆ. ಅದರೊಂದಿಗೆ ಸಂಶೋಧಕ ಕ್ರಾಂತಿಯೂ ಸೇರಲೆಂಬುದು ನನ್ನ ಬಯಕೆ. ಸರಕಾರ ಜನಗಣತಿ ದನಗಣತಿ ಮಾಡಿಸುತ್ತಾರೆ. ಕೋಳಿ, ಕುರಿ, ಹಂದಿ ಎಣಿಸುತ್ತಾರೆ. ಓಲೆಗರಿಗಳನ್ನು ಶಾಸನಗಳನ್ನು ವಿದ್ವಾಂಸರನ್ನು ಕಡೆಗಣಿಸುತ್ತಾರೆ. ಇದಕ್ಕೆ ಪರಿಹಾರ ಕಾಣುವ ವಿಚಾರದ ಜತೆಗೆ ಆಸಕ್ತರಾದ ಯುವಪೀಳಿಗೆಗೆ ಇಂಥ ಹೊಸ ಅನುಭವದ ಕಾಣಿಕೆ ಕೊಡಬೇಕೆಂಬ ಹಂಬಲ ಈ ಕಮ್ಮಟದ ಏರ್ಪಾಟಿನಿಂದ ಸ್ವಲ್ಪ ಮಾತ್ರ ಈಡೇರಿದಂತಾಗಿದೆ. ಆದರೆ ನಮ್ಮ ದಾರಿ ಇನ್ನೂ ತುಂಬ ದೂರ ಇದೆ ಎಂಬುದನ್ನು ಮರೆಯುವಂತಿಲ್ಲ. ಈ ಕಮ್ಮಟ ಪರಿಮಿತ ಪ್ರಯೋಗಶಾಲೆ. ಜ್ಞಾನ ಪ್ರಪಂಚ ವಿಶಾಲವಾಗಿದೆ, ಮಹೋನ್ನತವಾಗಿದೆ – ನಿರವಧಿಯೋರ್ಕಾಲ : ವಿಪುಲಾ ಚ ಪೃಥ್ವೀ.

ನೀವು ೨೦ ರಂದು ಇಲ್ಲಿಗೆ ಬಂದಾಗ ಇದ್ದುದಕ್ಕಿಂತ ಇಂದು, ೩೦ರಂದು ಸಾಕಷ್ಟು ಬೇರೆಯಾಗಿದ್ದೀರಿ. ಬದಲಾಗಿದ್ದೀರಿ. ಈಗ ನಿಮ್ಮನ್ನು ಹೇಗೆ ಕಳಿಸಿಕೊಡುವುದು ಎಂದು ನನಗೂ ತಿಳಿಯದಾಗಿದೆ. ಇಂಥ ನಿರ್ಮಲ, ಅನುಪಮ, ಆನಂದ ತುಂಬಿದ ದಿವ್ಯ ಸಮಾರಂಭದಲ್ಲಿ ಸಾಮಾನ್ಯವಾಗಿ ವಾಚಾಳಿಯಾದ ನಾನು ಮೂಕನಂತಾಗಿದ್ದೇನೆ. ನನ್ನ ಕಣ್ಣು ಅಭಿಮಾನ ಕೃತಜ್ಞತೆ ಧನ್ಯತೆ ತುಂಬಿದ ಪುಟ್ಟ ಸರೋವರವಾಗುತ್ತಿದೆ. ನನ್ನ ಬದುಕಿನಲ್ಲೊಂದು ಮಹತ್ತರ ಗಳಿಗೆ, ಪರಿಷತ್ತಿನ ಇತಿಹಾಸದಲ್ಲೊಂದು ಮೈಲಿಗಲ್ಲು. ಇಷ್ಟು ದಿನ ನೀವು ಕೂಡಿ ಕಲಿತಿದ್ದೀರಿ. ಹತ್ತು ಹೆಜ್ಜೆ ಒಟ್ಟಿಗೆ ಇಟ್ಟರೆ ಆತ್ಮೀಯರಾಗುತ್ತಾರಂತೆ. ನೀವು ಹತ್ತು ದಿನ ಪುದುವಾಳಿದ್ದೀರಿ. ಸಹಜೀವನ ನಡಸಿ ಸಹ ಪಂಕ್ತಿಯಲ್ಲಿ ಉಂಡಿದ್ದೀರಿ. ಸಹ ಶಕ್ತರಾಗಿದ್ದೀರಿ. ಸಹ ತೇಜಸ್ವಿಗಳಾಗಿದ್ದೀರಿ. ಸಂಶೋಧನೆಯಲ್ಲಿ ಅನುರಕ್ತಿ ಬೆಳೆಸಿಕೊಂಡಿದ್ದೀರಿ. ಸಂಶೋಧನೆಯೊಂದಿಗೆ ಸಖ್ಯಸಾಂದ್ರವೂ ಅರ್ಥಪೂರ್ಣವೂ ಆಗಲು ಶ್ರಮಿಸಿದ್ದೀರಿ. ಸಂಶೋಧನೆ ಕ್ಷೇತ್ರದ ಉತ್ಥಾನಕ್ಕೆಂದು ಒಂದು ಹೊಸ ಸುಸಜ್ಜಿತ ಪಡೆ ಕಾಲಿಡುತ್ತಲಿದೆ. ಇಷ್ಟು ದೊಡ್ಡ ತಂಡ ಒಂದೇ ಚಾವಣಿಯ ಅಡಿಯಲ್ಲಿ ಎಂದೂ ಎಲ್ಲೂ ಕೂಡಿದ್ದು, ಆಸಕ್ತಿ ತೋರಿದ್ದು ನನಗೆ ತಿಳಿಯದು. ಬೋಧಕರು ಹೇಳಿದ ಬುದ್ಧಿವಾದವನ್ನು ಕಿವುಡುಗೇಳದಿರಿ. ಇಲ್ಲಿ ನಿಮ್ಮ ಶಕ್ತ್ಯಾನುಸಾರ ಕಟ್ಟಿಕೊಂಡಿರುವ ಬುತ್ತಿ ಬಾಳಿನುದ್ದಕ್ಕೂ ತವನಿಧಿಯಾಗಿ ಒದಗಿ ಬರಲಿ. ಈ ಬುತ್ತಿ ಹಳಸದಿರಲಿ, ಕೊಳೆಯದಿರಲಿ. ತಿದ್ದಿದಬುದ್ಧಿಗೆ ತುಕ್ಕು ಹಿಡಿಯದಿರಲಿ, ಆಗಾಗ ಮಸೆಯುತ್ತೀರಿ, ಬಳಸುತ್ತೀರಿ. ಬಳಸಿದಷ್ಟೂ ಬುದ್ಧಿ ಬೆಳೆಯುತ್ತದೆ, ಸಾಗಣೆ ಹಿಡಿದಷ್ಟೂ ಬೆಳಕು ಚೆಲ್ಲುತ್ತದೆ. ನಿತ್ಯದ ಅಭ್ಯಾಸ ಮುಗಿದ ಮೇಲೆ ಸಿಕ್ಕಷ್ಟು ಬಿಡುವಿನ ವೇಳೆಯಲ್ಲಿ ಇಲ್ಲಿ ಕಲಿತ ಮರೆಯಬಾರದ ಪಾಠಗಳನ್ನು ಮೆಲುಕು ಹಾಕುತ್ತಾ ಬನ್ನಿ. ಇಲ್ಲಿ ಕಲಿತದ್ದು ಬೊಗಸೆಯಷ್ಟು, ಇನ್ನೂ ನೀವು ಕಲಿಯಬೇಕಾದದ್ದು ಕಡಲಿನಷ್ಟು. ಇದರ ಕಡೆಗಂಡವನಾವನುಮಿಲ್ಲ! ಮರ ಹತ್ತಿಸುವವರು ಕೈಗೆ ಎಟುಕುವಷ್ಟು ದೂರ ಮಾತ್ರ ಆಸರೆಯಾಗಬಲ್ಲರು. ಸಂಸ್ಕೃತದ ಶ್ಲೋಕ ನೆನಪಿಗೆ ಬರುತ್ತದೆ:

ಆಚಾರ್ಯಾತ್ಪಾದಮಾದತ್ತೇ ಪಾದಂ ಶಿಷ್ಯಃ ಸ್ವಮೇಧ ಸಾ
ಪಾದಂ ಸಬ್ರಹ್ಮ ಚಾರಿಭ್ಯಃ ಶೇಷಃ ಕಾಲಕ್ರಮೇಣ ತು!

ಅಖಂಡ ವಿದ್ಯೆಯ ಒಂದು ಭಾಗವನ್ನು ಗುರುವಿನಿಂದಲೂ ಇನ್ನೊಂದನ್ನು ಸ್ವಬುದ್ಧಿಯಿಂದಲೂ ಮತ್ತೊಂದನ್ನು ಸಹಪಾಠಿಯಿಂದಲೂ ಮಗದೊಂದನ್ನು ಕಾಲಕ್ರಮೇಣ ಜೀವನದಿಂದಲೂ ಸಂಪಾದಿಸಬೇಕಂತೆ. ಈ ಮಾತು ನಿಮ್ಮ ಹೃದಯದಲ್ಲಿ ಸದಾ ನೆಲಸಿರಲಿ; ಪರಿಶ್ರಮ ತೋರುತ್ತಾ ಆಸಕ್ತಿ ಒಣಗದಂತೆ, ಬತ್ತಿ ಆರದಂತೆ ಜೀವಂತವಾಗಿರಿಸಿ. ಕಲ್ಲು ಕಾವ್ಯ ತಾಳೆಗರಿ ಶಾಸ್ತ್ರ ಗ್ರಂಥಗಳು ನಿಮ್ಮನ್ನು ಕೈಬೀಸಿ ಕರೆಯುತ್ತಿವೆ. ನೀವು ಪ್ರೀತಿಯಿಂದ ಮೈದಡವಲೆಂದು ಹಾತೊರೆಯುತ್ತಿವೆ. ಅನಾಥ ಪ್ರಜ್ಞೆ ಕಾಡುತ್ತಿರುವ ಕವಿ ಕೃತಿಗಳನ್ನು ನಿಮ್ಮ ಮಡಿಲಿಗೆ, ಮನಸ್ಸಿಗೆ ಹಾಕಿಕೊಳ್ಳಿ. ನೀವು ಅವಕ್ಕೆ ದಾದಿಯಾಗಿ. ಯುರೇಕಾ ಯುರೇಕಾ ಎಂದು ಹೊಸ ನೋಟಗಳಿಂದ ಆನಂದೋದ್ಗಾರಗಳು ನಿಮ್ಮ ಬಾಯಿಂದ ಹೊಮ್ಮುವ ಪುಳಕದ ಅಮೃತಗಳಿಗೆಗಳು ನಿಮಗೆ ಒದಗಲಿ. ದಣಿವರಿಯದ ಪ್ರಾಂಜಲ ಉಪಾಸನೆ ನಿಮ್ಮನ್ನು ವಿಶ್ವದ ಸೌಭಾಗ್ಯದೆಡೆಗೆ ರಹಸ್ಯಗಳೆಡೆಗೆ ಕೊಂಡೊಯ್ಯಲಿ. ಇದೇ ನನ್ನ ಪ್ರಾರ್ಥನೆ.

(ಸಂಶೋಧನೆ ಕಮ್ಮಟದಲ್ಲಿ ಮಾಡಿದ ಸಮಾರೋಪ ಭಾಷಣ)

(ಕನ್ನಡ ನುಡಿ, ಜನವರಿ ೧, ೧೯೮೫)

* * *