ಪೀಠಿಕೆ :

೧೯೭೨ರ ಕಾದಂಬರಿಗಳನ್ನು ಕುರಿತ ಒಂದು ವಿಮರ್ಶಾತ್ಮಕ ಪ್ರತಿಕ್ರಿಯೆ ಈ ಪ್ರಬಂಧ.

ಜವಾಬ್ದಾರಿಯುತವಾದ ಬರೆಹಕ್ಕೆ ಲೇಖಕರು ಅಣಿಯಾದ ಹೊರತು ಮೇಲು ಮಟ್ಟದ ಹೊತ್ತಗೆಯ ನಿರೀಕ್ಷೆ ಮೃಗಮರೀಚಿಕೆ. ಅದರಿಂದಾಗಿ ಇಲ್ಲಿನ ಮೌಲ್ಯಮಾಪನ ಕಾಲದಲ್ಲಿ ಕಾದಂಬರಿಗಳಲ್ಲಿ ಕಾಣುವ ನ್ಯೂನತೆಗಳಿಗೆ ನಿರ್ದಾಕ್ಷಿಣ್ಯವಾಗಿ ಬೆರಳು ಮಾಡಿದೆ.

ಇಲ್ಲಿ ವಿಮರ್ಶಿಸಿರುವ ಕೆಲವು ಕಾದಂಬರಿಕಾರರ ಇತರ ಕಾದಂಬರಿಗಳನ್ನು ಓದಿದ್ದ ನೆರವಿನಿಂದಾಗಿ ಆಯಾ ಲೇಖಕರ ಬರವಣಿಗೆಯ ದಾರಿ. ಬೆಳವಣಿಗೆ ಗುಣದೋಷ ತಿಳಿಸಲೂ ಸಾಧ್ಯವಾಗಿದೆ.

ಅಚ್ಚಿನ ದೋಷಗಳನ್ನು ಕುರಿತು ತೀರ ಅನಿವಾರ್ಯವೆಂಬ ಪ್ರಮಾಣಾಧಿಕ್ಯದ ಪುಸ್ತಕಗಳು ಹೊರತು, ಸಾಮಾನ್ಯವಾಗಿ ಪ್ರತಿ ಪುಸ್ತಕಕ್ಕೂ ಹೇಳಿಲ್ಲ, ಸ್ಖಾಲಿತ್ಯಗಳು ಎಲ್ಲ ಪುಸ್ತಕಗಳಲ್ಲೂ ಇವೆ.

ಈ ವರ್ಷ ಪ್ರಕಟವಾದ ಕಾದಂಬರಿಗಳಲ್ಲಿ ನಮ್ಮ ಗಮನಕ್ಕೆ ಬಂದ ಕಾದಂಬರಿಗಳು ೧೨೮. ಅವುಗಳಲ್ಲಿ ಸಾಮಾಜಿಕ ಕಾದಂಬರಿಗಳು ೯೮, ಲೇಖಕಿಯರವು ೪೩, ಅನುವಾದಗಳು ೧೫, ಐತಿಹಾಸಿಕ ೨, ಪೌರಾಣಿಕ ೧, ಹಾಗೂ ಪತ್ರೇದಾರಿ ೧೨.

ಸಮೀಕ್ಷಕ ಗಮನಿಸಿದ ಕೆಲವು ವಿಶೇಷ ಅಂಶಗಳು :

ಪ್ರಕಾಶಕರು ಹೆಚ್ಚು. ಹಿಂದಿನ ವರ್ಷಗಳಲ್ಲಿ ಇಲ್ಲದಷ್ಟು ಭಾರೀ ಪ್ರಮಾಣದಲ್ಲಿ ಹೊಸ ಲೇಖಕರು ಕಾದಂಬರಿಗಳನ್ನು ರಚಿಸಿದ್ದಾರೆ. ಅದರಲ್ಲಿ ಮಹಿಳೆಯರ ಮೊತ್ತ ಅತ್ಯಧಿಕ ಕಾದಂಬರಿಗಳ ಒಟ್ಟು ಸಂಖ್ಯೆಯೂ ಹೊಸ ದಾಖಲೆ. ಮಹತ್ವದ ಪ್ರಾತಿನಿಧಿಕ ಕೃತಿಗಳು ಹೊರಬರುತ್ತಿಲ್ಲ. ೧೯೭೨ ಜಳ್ಳಿನ ಸುಗ್ಗಿ, ಪತ್ರಿಕೆಗಳವರು ದೀಪಾವಳಿ ಮೊದಲಾದ ವಿಶೇಷ ಸಂದರ್ಭ ಸ್ಪರ್ಧೆಯನ್ನು ಸಣ್ಣ ಕಥೆ ನಾಟಕಗಳಿಂದ ಕಾದಂಬರಿಗೂ ವಿಸ್ತರಿಸಿದ್ದಾರೆ. ಅವಕಾಶಗಳು ಹಲವು.

ಪ್ರಕಾಶಕರು ನೂರಾರು. ಪತ್ರಿಕೆಗಳವರು ಹತ್ತಾರು. ಇಷ್ಟಿದ್ದೂ ಉತ್ತಮ ಕೃತಿಗಳನ್ನು ಪ್ರಕಟಿಸುವ ಆರೋಗ್ಯಕರ ಸ್ಪರ್ಧೆಯಿಲ್ಲ, ಗ್ರಂಥಗಳ ಸಂಖ್ಯೆಯನ್ನು ಹೆಚ್ಚಿಸಿ ಕೊಳ್ಳುವುದರಲ್ಲೇ ಆಸಕ್ತರಾದ ಸತತ ಸಮೃದ್ಧಿಯ ಲೇಖಕರು. ಮನರಂಜನೆಗಷ್ಟೇ ಬರೆಯುವವರು, ಮಾರಾಟಕ್ಕೆ ತಮ್ಮಲ್ಲಿ ದೊರೆಯುವ ತಾವು ಪ್ರಕಟಿಸಿದ ಪುಸ್ತಕ ಪಟ್ಟಿಯನ್ನು ಲಂಬಿಸುವುದರಲ್ಲೇ ಅಸ್ಥೆ ತಳೆದ ಪ್ರಕಾಶಕರು, ಕಥೆಗೆ ಹೊಂದದಿದ್ದರೂ ಮಾರಾಟದ ಮಾಲಿಗೆ ಬೇಕಾದ ಕಳೆಕೊಡುವ ಚಿತ್ರಗಳಲ್ಲೇ ಒಲವಿರುವ ಚಿತ್ರಕಾರರು. ಸತ್ಯಕ್ಕಿಂತ ಗುಣೇತರ ಪಕ್ಷಪಾತಾದಿ ಪಾರ್ಶ್ಚವಾಯು ಪೀಡಿತ ಕಾರಣಗಳಿಂದ ಧಾರಾವಾಹಿ ಪ್ರಕಟಿಸಿ ಅನುಚಿತ ಪ್ರೋತ್ಸಾಹ ಕೊಡುತ್ತಿರುವ ಪತ್ರಿಕೆಗಳವರು. ಕಳಪೆಯನ್ನೇ ಉತ್ತಮವೆಂದುಕೊಂಡು ಓದುತ್ತಾ ಜನಪ್ರಿಯ ಸಾಹಿತಿಗಳನ್ನು ಸೃಷ್ಟಿಸುತ್ತಿರುವ ಓದುಗರು. ವೈಯಕ್ತಿಕ ಸ್ನೇಹಾದಿಗಳಿಂದ ಮುಲಾಜಿನ ಮಾತುಗಳ ಗಿಲೀಟು ವಿಮರ್ಶಕರು ಹೀಗೆ ಸಾಗಿದೆ ಈ ಚಕ್ರಗತಿ. ಕನ್ನಡದಲ್ಲಿ ಕಳೆ-ಕಳಪೆ ತಗ್ಗಬೇಕಾದರೆ ಈ ವರ್ತುಲದ ಎಲ್ಲ ಅವಿಭಾಜ್ಯ ಅಂಗಗಳೂ ಎಚ್ಚಿತ್ತು ಗುಣೈಕ ಪಕ್ಷಪಾತಿಗಳಾಗಬೇಕು. ಈ ವರ್ಷದಲ್ಲಿ ಚಾರಿತ್ರಿಕ ಕಾದಂಬರಿಗಳಿಗೆ ಮುಗ್ಗಟ್ಟು. ಪೌರಾಣಿಕ ಕಾದಂಬರಿಯೂ ಅಷ್ಟೆ. ಪತ್ತೇದಾರಿ ಎಂದಿನ ಸಂಖ್ಯಾಪ್ರಮಾಣವನ್ನು ಕಾಪಾಡಿಕೊಂಡಿದೆ. ಸಾಮಾಜಿಕ ಕಾದಂಬರಿಗಳದೇ ಮಹಾಪೂರ.

೧೯೭೩ರಲ್ಲಿ ಪ್ರಕಟವಾದ, ನಾನು ಓದಿದ ೧೨೮ ಕಾದಂಬರಿಗಳಲ್ಲಿ ಸುಮಾರು ೮೦ ಕಾದಂಬರಿಗಳಿಗೆ ಅರಿಕೆ, ಹರಕೆ, ಮುನ್ನುಡಿ, ಹಿನ್ನುಡಿ, ವಿಮರ್ಶೆ (ಒರೆಗಲ್ಲು ಇಲ್ಲವೆ ಮೆಚ್ಚುಗೆ೦ ಅಭಿಪ್ರಾಯ – ಹೀಗೆ ಒಂದಿಲ್ಲೊಂದು ಮಾತು, ಬಿನ್ನಪ ಇದ್ದೇ ಇರುತ್ತದೆ. ಇದು ಮುತ್ತೈದೆ ಹಣೆಗೆ ಕುಂಕುಮ, ಕೃತಿಯ ಮೊದಲಿಗೆ ಮುನ್ನುಡಿ ಕ್ಲೀಷೆಯ ಪ್ರಯತ್ನವಾದರೂ ಇದರಲ್ಲಿ ತಪ್ಪಿಲ್ಲ.

ಆದರೆ ಸ್ನೇಹಕ್ಕೆ ಸಂಚಕಾರ ಬಂದೀತೆಂಬ ಅತಂಕದಿಂದ ಈ ನುಡಿಗಳು, ಕೃತಿಗಳು ಹೊರಲಾರದ ಹೊಗಳಿಕೆಯ ಹೊನ್ನಶೂಲವಾಗಬಾರದು. ಅನೇಕ ಎಂಬುದಕ್ಕಿಂತ ತೊಂಬತ್ತು ಪಾಲು ಮುನ್ನುಡಿಗಳು ಕಾದಂಬರಿಗಳಿಗೆ ಕಾಪಾಡಲೆಂದೇ ತೊಡಿಸಿದ ಉದ್ದನೆಯ ಸಡಿಲ ಕವಚಗಳು. ಇಂಥ ಅನುಚಿತ ಕಾರ್ಯದಿಂದಾಗುವ ಹಾನಿ ದೊಡ್ಡದು, ಓದುಗನನ್ನು, ಓದುವ ಮೊದಲೇ ‘ಬ್ರೈನ್ ವಾಷ್’ ಮಾಡಿಸುವ, ಮುನ್ನುಡಿಯ ಹೊನ್ನುಡಿಗಳಿಗೆ ವಿರುದ್ಧವಾದ ಅಭಿಪ್ರಾಯ ಮೂಡಿದರೂ ಹೇಳಲಾಗದ ಅಸಹಾಯಸ್ಥಿತಿಯ ಕಮರಿಗೆ ತಳ್ಳುತ್ತವೆ.

ಸಾಹಿತ್ಯದ ಉಳಿದ ಪ್ರಕಾರಗಳಿಗಿಂತ ಹೆಚ್ಚು ವಿಕಸನಶೀಲವಾದ ಪ್ರಕಾರ ಕಾದಂಬರಿ ವೈಯಕ್ತಿಕ ವೈಚಾರಿಕತೆಯ ಅವಿಷ್ಕಾರಕ್ಕೆ ಇದು ಸುವರ್ಣ ಮಾಧ್ಯಮ. ಅನೇಕ ಕಾದಂಬರಿಕಾರರು ಕಾದಂಬರಿ ರಚನೆಗಿರುವ ಅನುಕೂಲತೆಗಳನ್ನು ಉಪಯೋಗಿಸಿಕೊಂಡಿಲ್ಲ. ವಾಸ್ತವವಾಗಿ ವೈಚಾರಿಕತೆಯ ಅಭಿವ್ಯಕ್ತಿಗೆ ಇದು ಎಂಥ ಸಮರ್ಥ ಮಾಧ್ಯಮ ಎಂಬ ಕಲ್ಪನೆಯಿಂದ ರಚಿತವಾದ ಕೃತಿಗಳು ಕಡಮೆ.

ಇತ್ತೀಚೆಗೆ ಕಾದಂಬರಿ ಬೆಳೆಯಲ್ಲಿ ಹುಲುಸಾಗಿದೆ. ಗುಣದಲ್ಲಿ ಅಲ್ಲ. ಕನ್ನಡ ಭಾಷೆಯ ಪ್ರಾತಿನಿಧಿಕವೆನ್ನಬಲ್ಲ ಅತ್ಯಂತ ಗಣನೀಯ ಕಾದಂಬರಿ ೧೯೭೨ರಲ್ಲಿ ಪ್ರಕಟವಾಗಿಲ್ಲವೆಂಬುದು ನನ್ನ ಅಭಿಪ್ರಾಯ, ಕ್ಲೀಷೆ ಭಾಷೆಯಲ್ಲಿ ಹೇಳುವುದಾದರೆ ಇದು ಅತ್ಯಂತ ಶೋಚನೀಯ. ಒಂದು ಪ್ರತ್ಯೇಕ ಪಥ ಸೃಷ್ಟಿಮಾಡಬಲ್ಲ. ಕಾದಂಬರಿಕಾರರು ಕನ್ನಡದಲ್ಲಿ ಇನ್ನೂ ಬರಬೇಕಾಗಿದೆ. ಹೀಗಾಗಿ ಕಾದಂಬರಿ ಬಹುವಾಗಿ ನಿಂತ ನೀರಾಗಿದೆ. ಆಗಾಗ ತಮ್ಮ ಕಸುವಿನ ಕೃತಿಕಾಣಿಕೆಗಳಿಂದ ಮಲೆತ ನೀರನ್ನು ಕಲಕಿ ತರಂಗಗಳನ್ನೆಬ್ಬಿಸಿದ ಸಮರ್ಥ ಕಾದಂಬರಿಕಾರರು ಬೆರಳೆಣಿಕೆಗೂ ಕಡಿಮೆ. ಗ್ರಂಥಿಕ ನುಡಿಯ ಅಸಹಜ ಪರಿಸರದಿಂದ ಓದುಗರನ್ನು ಬಳಲಿಸದೆ ತಾಜಾ ಭಾಷೆಯನ್ನು ಬಳಸಿ ಓದುಗರನ್ನು ವಾಸ್ತವದಲ್ಲಿ ಉಸಿರಾಡಿಸುವ ಸತ್ತಸಾಲೀ ಪ್ರಯತ್ನಗಳೂ ಅಲ್ಲಲ್ಲಿ ನಡೆದಿವೆ. ಉದಾ: ‘ಬಿತ್ತಿ ಬೆಳೆದವರು’ ಒಮ್ಮೊಮ್ಮೆ ಒಳ್ಳೆಯ ಸಾಮಗ್ರಿಸಿಕ್ಕಿದ ಲೇಖಕರೂ ಸಮಗ್ರೀಕರಣವಿಲ್ಲದೆ ಸೋತಿದ್ದಾರೆ. ಉದಾ: ‘ದೊಡ್ಡಮನೆ’ ಈ ವರ್ಷದ ಅವಧಿಯಲ್ಲಿ ನಮ್ಮ ಹೆಸರಾಂತ ಕಾದಂಬರಿಕಾರರು ಕುಡಾ ಸರ್ವಶ್ರೇಷ್ಠವೆನ್ನಬಹುದಾದ ಕಾದಂಬರಿ ಕೊಟ್ಟಿಲ್ಲ.

ತಂತ್ರಕ್ಕೆ ಬೀಳುವ ಲೇಖಕರಿದ್ದಾರೆ. ಇವರಿಗೆ ಕೃತಿಯ ವೈಭವವೆಲ್ಲ ಕೇವಲ ತಂತ್ರದಲ್ಲೇ ನಿಂತಿರುತ್ತದೆಂಬ ಭ್ರಮೆ. ಅರಿಸಿಕೊಂಡ ವಸ್ತು, ಯಾವುದೇ ಇರಲಿ ಹೇಗೇ ಇರಲಿ, ಅದು ಗೌಣ, ನಿರೂಪಣೆಗೆ ಅಳವಡಿಸಿಕೊಂಡ ತಂತ್ರ ವಿಧಾನ ಪ್ರಧಾನ. ಇವರೆಲ್ಲ ಬಹುವಾಗಿ ಅದೇ ಕಾರಣದಿಂದ ಸೋತಿದ್ದಾರೆ. ಅನುಭವದ ಅಧಾರವಿಲ್ಲದ ವಸ್ತು ವಿಷಯ ಅಯ್ಕೆ ಮಾಡಿ ಕೃತ್ರಿಮ ಮೌಲ್ಯಗಳ ಕೃತಿರಚನೆ ಮಾಡಿರುವ ಲೇಖಕರೂ ಇದ್ದಾರೆ. ಗಟ್ಟಿ ನೆಲಗಟ್ಟಿನ ಮೇಲೆ ಬರಹ ಕಟ್ಟದ ಕಾರಣ ಕಾದಂಬರಿ ಕಟ್ಟಡ ಬಿರುಕು ಬಿಟ್ಟು ಜೀರ್ಣಾವಸ್ಥೆ ಮುಟ್ಟುತ್ತದೆ. ಓಧುಗರ ಮನ ಮುಟ್ಟುವುದಿಲ್ಲ. ಚಲನಚಿತ್ರವಾಗುತ್ತಿರುವ ಕಾದಂಬರಿ ಎಂದು ರಕ್ಷಾಪುಟದಲ್ಲೇ ತಲೆಚೀಟಿ ಅಂಟಿಸಿಕೊಂಡ ಕಾದಂಬರಿಗಳು ಅರೇಳಿವೆ. ಉಳಿದ ಹಲವರು ಕಾದಂಬರಿಕಾರರಿಗೂ, ಅವರ ಕೃತಿಗಳ ಈ ಹಣೆಪಟ್ಟಿ ಕಟ್ಟಿಕೊಂಡಿಲ್ಲದಿದ್ದರೂ, ಒಳ ಬಯಕೆ ಇದೇ ಆಗಿದೆ. ಮತ್ತೆ ಕೆಲವರನ್ನಂತೂ ಕಾದಂಬರಿಕಾರರೆಂಬ ಗಣನೆಗೆ ತೆಗೆದುಕೊಳ್ಳುವುದೇ ಸರಿಯಲ್ಲ. ಕಾದಂಬರಿ ಬರೆಯುವುದು ನೀರು ಕುಡಿದಷ್ಟು ಸರಾಗವಾಗಿ ಕಾದಂಬರಿ ಬರೆಯುವುದನ್ನೇ ಕಸುಬು ಮಾಡಿಕೊಂಡಿರುವವರೂ ಇದ್ದಾರೆ. ಆ ಗೀಳು ಗೋಳಾಗಿ ಸುಯ್ಯಲಿಟ್ಟ ಪುಸ್ತಕಗಳು ಹತ್ತಾರಿವೆ. ಕನ್ನಡ ಹಾಗೂ ಕನ್ನಡೇತರ ಚಲನ ಚಿತ್ರಗಳನ್ನ ನೋಡಿಬಂದು ಅಂದೇ ಒಂದು ಕಾದಂಬರಿ ರಚನೆಗೆ ತೊಡಗಿ ಅದೇ ವೇಗದಲ್ಲಿ ಬರೆದು ಮುಗಿಸುವ ಲೇಖಕಿಯರಿದ್ದಾರೆ.

ಕಥೆ – ಕಾದಂಬರಿ ಪ್ರಕಾರದ ಬರವಣಿಗೆ ಸುಲಭ ಎಂಬವ ಭ್ರಾಂತಿಜನ್ಯಗ್ರಹಿಕೆ ಈ ವಿಪುಲ ರಚನೆಗೆ ಕಾರಣವಾಗಿರಬಹುದು. ಇದರಿಂದ ಬರವಣಿಗೆಗೆ ಅಗತ್ಯವಾದ ಗುಣ ಮಟ್ಟವನ್ನು ಕಾಯ್ದುಕೊಳ್ಳುವುದು ಕಷ್ಟವಾಗಿದೆ. ವರ್ಷದಿಂದ ವರ್ಷಕ್ಕೆ ಕಾದಂಬರಿಗಳ ಪ್ರಮಾಣ ಗಾತ್ರ ಬೆಳೆಯುತ್ತಲೇ ಇದೆ. ಗುಣ ಪ್ರಮಾಣ ಇಳಿಯುತ್ತಲೇ ಇದೆ. ತಾವೇ ಅಚ್ಚು ಹಾಕಿಸಿ ಲೇಖಕರೂ ಪ್ರಕಾಶಕರೂ ಆದ ಊತ್ಸಾಹೀ ಕಾದಂಬರಿಕಾರರಿದ್ದಾರೆ, ಅಪರಾಧವೇನಲ್ಲ, ಆದರೆ ಬೇಗ ಹೆಸರು ಗಳಿಸಬೇಕೆಂಬ ಕೀರ್ತಿ ಕಾಮನೆಯಿಂದ ಶೀಘ್ರ ಬರೆಹಕ್ಕೆ ದಾಸರಾಗಿ ದೀಢೀರ್ ಕಾದಂಬರಿ ತರುವ ಹುಚ್ಚು ಸಾಹಸಕ್ಕೆ ಕಡಿವಾಣ ಅಗತ್ಯ. ತಮ್ಮ ಇತಿಮಿತಿಗಳನ್ನು ತಿಳಿಯದೆ, ಅಭಿವ್ಯಕ್ತಿ ಮಾಧ್ಯಮವನ್ನು ಕಂಡುಕೊಳ್ಳದೆ ಸಾಹಿತ್ಯದ ಎಲ್ಲ ಪ್ರಕಾರಕ್ಕೂ ಕೈ ಚಾಚುತ್ತಿರುವವರು ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ಅದರಿಂದಾಗಿ ಕಾದಂಬರಿ ಸವೆದ ನಾಣ್ಯವಾಗಿದೆ. ಅದಕ್ಕೆ ಚಲಾವಣೆಯ ಪುನಮೌಲ್ಯ ದೊರಕಿಸಬಲ್ಲ ಸಮರ್ಥರ ಅಭಾವವಿದೆ.

ದಿವಂಗತ ತ್ರಿವೇಣಿಯವರನ್ನು ಸೇರಿಸಿಕೊಂಡು. ಕನ್ನಡದ ಲೇಖಕಿಯರಲ್ಲಿ ಉತ್ತಮ ಸಾಹಿತಿ ಎನಿಸಿಕೊಳ್ಳಬಲ್ಲ ಶ್ರೇಷ್ಠ ಕೃತಿ ಬರೆದವರು ಇದುವರೆಗೆ ಒಬ್ಬರೂ ಇಲ್ಲ. ಬರಿಕೈಗಿಂತ ಹಿತ್ತಾಳೆ ಕಡಗ ವಾಸಿ ಎಂಬಂತೆ ಇದ್ದುದರಲ್ಲಿ ಸಹ್ಯ ಬರಹ ವಿತ್ತವರು ಎಂ.ಕೆ ಇಂದಿರಾ ಅನುಪಮಾ ನಿರಂಜನ. ಅವರನ್ನು ಬಿಟ್ಟರೆ ವಾಣಿಯವರನ್ನು ಹೆಸರಿಸಬಹುದೇನೋ ಎಂದಿದ್ದ ನಮ್ಮ ನಿರೀಕ್ಷೆಯನ್ನು ಹೂಮುಳ್ಳು, ಬಲೆ, ಪ್ರೇಮಸೇತು ಈ ಕೃತಿಗಳು ನುಚ್ಚು ನೂರಾಗಿಸುತ್ತವೆ. ಅವರು ಇಷ್ಟು ಸಾದಾರಣ ದರ್ಜೆಯ ಲೇಖನಕ್ಕೆ ತೊಡಗಿ ಉತ್ತಮ ಕೃತಿ ರಚನೆಗೆ ತೊಡಗುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ನೀಗಿಕೊಂಡಂತೆಯೇ ತೋರುತ್ತದೆ.

ಬಲೆ ಕಾದಂಬರಿಯಲ್ಲಿ ಜಾನಕಮ್ಮ, ಗೋಪೀ, ಕುಮುದಾ, ರಾಧಕ್ಕ, ಸತೀಶ ತಾರಾ ಮುಂತಾದವರೆಲ್ಲ ಬರುತ್ತಾರೆ ಹೋಗುತ್ತಾರೆ ಹೊರತು ಯಾವ ಭದ್ರ ಮುದ್ರೆಯನ್ನೂ ಒತ್ತುವುದಿಲ್ಲ. ಗೋಪಿ-ತಾರಾ ವಿರಸ ಕೃತ್ರಿಮ ಸೃಷ್ಟಿ. ಸಂಭಾಷಣೆಗಳು ಪ್ರೇತಗಳ ಮಾತುಕತೆಯಾಗಿವೆ. ಸತೀಶ ವಿಧೇಶಕ್ಕೆ ಹೊರಟಾಗ ತಾರಾ ‘ನಾವಿಬ್ಬರೂ ಪರಸ್ಪರ ನೋಡುವುದು ಇದೇ ಕೊನೆಯಾಗಬಹುದು. ಆದರೂ….ನನ್ನ ಸದಾಶಯ ನಿಮ್ಮೊಡನೆ ಬರುವುದು’ ಎನ್ನುವಳು. ಅದಕ್ಕೆ ಉತ್ತರವಾಗಿ ಆತ “ಹಾಗೇಕೆನ್ನುವಿರಿ? ಪ್ರಪಂಚ ಅಷ್ಟು ದೊಡ್ಡದಲ್ಲ. ನಾನು ಹೊರಗೆ ಹೋದರೂ ಮತ್ತೆ ಇಲ್ಲಿಗೆ ಬರುವವನೇ!… ನಿಮ್ಮೊಡನೆ ಕಳೆದ ಕೆಲವು ನಿಮಿಷಗಳೂ ನನ್ನ ಬಾಳಿನ ರಸನಿಮಿಷಗಳು. ಅದು ಇದೆ ನನ್ನ ಜೊತೆಗೆ”- “ನಿಜ ನಿಜ….. ಜೀವನ ಬೇಸರವೆನಿಸಿದಾಗ ಆ ನೆನಪು ಬದುಕಿಗೆ ಉತ್ಸಾಹ ಕೊಡಬಲ್ಲುದು ಎಂಬ ಭರವಸೆ ಒದೆ” – ಇಲ್ಲಿ ಪ್ರಪಂಚದ ಕಲ್ಪನೆಯೇ ಇಲ್ಲದವರ ಬರಹ ಕಂಡುಬರುತ್ತದೆ. ಜೊತೆಗೆ ಇವರಿಬ್ಬರ ಈ ಮಾತಿಗೆ ಹಿನ್ನಲೆಯಾಗಿ ನಿಂತ ಪ್ರಸಂಗಗಳು ಇಂಥ ಒಂದು ಮೌನ ಸ್ಪಂದನಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಪಾತ್ರಗಳು ಕಂಠಪಾಠ ಮಾಡಿದುದನ್ನು ನಿರ್ದೇಶಕನ ಮುಂದೆ ಕಾರಿಕೊಂಡಂತೆ ಸಂಭಾಷಣೆ ಇರುತ್ತದೆ.

ಎರಡು ಕಿರು ಕಾದಂಬರಿಗಳು ಒಟ್ಟಿಗೆ ಇರುವ ಹೂವು ಮುಳ್ಳು ಮತ್ತು ಹಾಲು ಒಡೆದಾಗ ‘ಬಲೆ’ಗಿಂತ ಹೆಚ್ಚಿನ ಸಾಧನೆಗೆ ತೊಡಗುವುದಿಲ್ಲ. ಇಲ್ಲಿ ಬರುವ ಚಿತ್ತಾಳ ವಿಚಿತ್ರ ವರ್ತನೆ ಅತಾರ್ಕಿಕವಾಗಿದೆ. ಮಾಲಿನಿ. ಶಶಿ (ರೋಗ ಬಂದದ್ದು ಯಾವಾಗ? ಹೇಗೆ? ಏಕೆ?) ಈ ಪಾತ್ರಗಳಲ್ಲಿ ಕಳೆ-ವಿಶೇಷ ಇಲ್ಲ. ಜಗನ್ನಾಥ ಕಾಗದ ಕೂಡ ಹಾಕದೆ ಬಂದು ಅಪ್ಪಿದ ಕೂಡಲೆ ಚಿತ್ರಾಳ ಅದುವರೆಗಿನ ಕೋಪ, ಸಿಡುಕು ಕರಗಿಹೋಯಿತೆಂಬುದು ಈ ಕಿರುಕಾದಂಬರಿಯ ತಿರುಗಳು. ಹಳೆಯ ಹಾಡನ್ನೇ ಹಾಡಿದಾರೆ. ಚಿತ್ರಾಳ ಒಳ ಮನಸ್ಸಿನ ಹೊಯ್ದಾಟ ಅಸಮರ್ಥ ವಿಷಯ ರಚನೆಯ ಫಲ.

ಹಾಲು ಒಡೆದಾಗ ಕೂಡ ಇದಕ್ಕೆ ಅಪವಾದವಲ್ಲ, ವೇಣು, ರಂಗಸ್ವಾಮಿ, ಸರೋಜ, ಶೀಲ (ಇವಳೂ ರೋಗದ ಕರಾಳ ಹಸ್ತದಿಂದ ಬದುಕಿ ಕುಂಟಿ ಆದವಳು) ಶ್ರೀಹರಿ, ಮಯಾ (ಮುಖ್ಯವಾಗಿ ವೇಣು ಕಾಣುವ ಕನಸಿನಲ್ಲಿ), ವೇಣುಗೆ ಅಪಘಾತವಾಗಿ ಅಸ್ಪತ್ರೆ ಸೇರಿ ಕಾಲು ಕಳೆದುಕೊಳ್ಳುವುದು – ಪ್ರಧಾನ ಪಾತ್ರಗಳು, ಪ್ರಮುಖ ಘಟನೆಗಳು, ರಂಜನೆ ಉಂಟು ಮಾಡಲು ಇಷ್ಟು ಸಾಕೆನ್ನಿಸಬಹುದು. ಶ್ರೀಲಳಿಗೆ ತಕ್ಕ ಗಂಡ ಆಗಬೇಕಾದರೆ ಅವಳಂತೆ ತಾನೂ ಅಂಗವಹೀನನಾಗಬೇಕೆಂಬ ನಿಯಮ ಇಲ್ಲ. ಪಶ್ಚಾತ್ತಾಪ ದಗ್ಧನಾಗಿ (ಹಳೆಯ) ಹೆಂಡತಿಯ ಸೆರಗಿಗೇ ಬರುವುದಕ್ಕೆ ಈ ಸಿನಿಮೀಯ ತಂತ್ರದ ಆಶ್ರಯ ಅಗತ್ಯವಿಲ್ಲ. ಬಾಳಿನ ಅಳ ಅಗಲವನನ್ನು ಗೂಢವನ್ನೂ ಸಮಗ್ರವಾಗಿ ಪರಿಗ್ರಹಿಸಬಲ್ಲ ಪರಿಭಾವಿಸಬಲ್ಲ ಬಲ ಲೇಖಕಿಯಲ್ಲಿಲ್ಲವೆಂಬುದು ಈ ಸತ್ಯವೀರದ ಬರವಣಿಗೆಯಿಂದ ಸ್ಪಷ್ಟ.

ಪ್ರೇಮಸೇತು ಕಾದಂಬರಿಯಲ್ಲೂ ಲೇಖಕಿಗೆ ಪರಿಚಯವಿರುವ ಪರಿಮಿತಿ ಪ್ರಪಂಚದ ಸಿದ್ಧ (ಸಮೆದ) ವಸ್ತು, ಸಿದ್ಧಪಾತ್ರಗಳು; ರತ್ನ, ಮಧು, ರುಕ್ಮಿಣಿ, ರಾಮಣ್ಣ, ಪ್ರಸಾದ, ರತ್ನ ಮನೆ-ಮಂದಿ ಬಿಟ್ಟು ಪ್ರಣಯಿ ಪ್ರಸಾದನ ಜೊತೆ ಪಲಾಯನ ಮಾಡುವುದು ಚಲನಚಿತ್ರಗಳ ಧಾಟಿಯ ಕಾಪಿಚಟ್, ಪ್ರಣಯ ಪಕ್ಷಿಗಳು ಹಾರಿಹೋದ ಮೇಲೆ ಮುಂಬಯಿ ಮುಟ್ಟುವವರೆಗೆ ಅವರ ಹಾರಾಟ ನಿಲ್ಲುವುದಿಲ್ಲ. ತಂಗಿ ರತ್ನಾ ಪ್ರಸಾದನ ಜೊತೆ ಓಡಿಹೋದ ಮಾತ್ರಕ್ಕೆ ಅಣ್ಣ ಮಧು ಮದುವೆ ಆಗಬೇಡವೇ? ಅವನಿಗೆ ಹೆಣ್ಣು (ಉಮಾ) ಕೊಡಲು ಭದ್ರಾವತಿ ಭಾಸ್ಕರಯ್ಯ ಇಲ್ಲವೇ? ಮಗಳ ಅಗಲಿಕೆ ತಂದೆಗಿಂತ ತಾಯಿಗೆ ದುರ್ಬರ ತಾನೇ? ಅದರಂತೆ ರತ್ನಳ ತಾಯಿ ರುಕ್ಮಿಣಿ ಸಾಯುತ್ತಾರೆ. ಔದರ್ಯ ಕ್ಷಮಾಗುಣಗಳಿಂದ ತಂದೆ ಮಗಳನ್ನು ಬರಮಾಡಿಕೊಳ್ಳುತ್ತಾರೆ. ಇಲ್ಲಿಂದ ಮುಂದೆ ಮಧುವಿನ ಬಾಳಿನಲ್ಲಾದ ಅಘಾತಗಳಿಗೆ ಮಾತ್ರ ಬುಡಬೇರು ಇಲ್ಲ. ಇದರಿಂದಾಗಿ ಒಟ್ಟು ಕೃತಿ ಕ್ಷುಲ್ಲಕವಾಗಿದೆ. ಈ ಮೂರು ಕಾದಂಬರಿಗಳಲ್ಲಿ ಬರುವ ಘಟನಾವಳಿಗಳಿಂದಾಗಲೀ. ಪಾತ್ರಪರಂಪರೆಯಿಂದಾಗಲೀ, ಲೇಖಕಿ ಏನ್ನು ಧ್ವನಿಸಬಯಸುತ್ತಾರೆಂಬುದು ತಿಲಿಯುವುದಿಲ್ಲ.

ಮಧುರ ಜಾಲ (ಉಷಾದೇವಿ) ಭಾಷೆಯ ಅತಿ ದುಂದುಗಾರಿಕೆಯಿಂದ ತಲೆ ಶೂಲೆ ಬರಿಸುವ ಕೃತಿ.

ಕಾದಂಬರಿಕಾರ್ತಿಯರು ಓದುಗರ ಮೆಚ್ಚುಗೆ ಪತ್ರ ಬಂದುದನ್ನೋ ಓದುಗರ ಕೋರಿಕೆ ಮೇರೆಗೆ ಬರೆದುದನ್ನೋ ತಿಳಿಸುತ್ತಾರೆ. (ನಮ್ಮ ಹಳೆಗನ್ನಡ ಕವಿಗಳಲ್ಲಿ ಕೆಲವರು ರಾಜರ ಪಂಡಿತರ ಪ್ರಾರ್ಥನೆಯಂತೆ ಕೃತಿರಚನೆ ಮಾಡಿರುವುದಾಗಿ ಹೇಳಿಕೊಂಡಿರುವುದನ್ನು ನೆನಪಿಸುತ್ತಾರೆ). ಈ ಕಾದಂಬರಿಯೂ ಅದೇ ಜಾಡು ಹಿಡಿದು ಬರೆದ ಕೃತಿ: “ಕಾದಂಬರಿ ಓದುಗರ ಮೆಚ್ಚುಗೆ ಮಡೆದು, ಅವರಿಂದ ಒತ್ತಾಸೆ ಬೆಂಬಲದ ಮಾತು ಹಾಗೂ ಪತ್ರ ಬಂದಾಗ ನನ್ನ ಶ್ರಮ ಸಾರ್ಥಕವಾಯಿತೆಂದು ತೃಪ್ತಿ ಪಟ್ಟಿದ್ದೆ. ಅದೇ ಬಗೆಯ ಅಭಿಮಾನದ ಮಾತು ಓದುಗರಿಂದ ಬಂದರೆ ನನ್ನ ಶ್ರಮ ಸಾರ್ಥಕ”!

ಇಲ್ಲಿನ ಸೀತೆ. ಶಂಕರ ಹಾಸುಗಂಬಿಗಳ ಮೇಲೆ ಉರುಳುವ ರೆಡಿಮೇಡ್ ಪಾತ್ರಗಳು. ಇವರು ಲೇಖಕಿ ಬರೆಯಲುದ್ದೇಶಿಸಿದ ಆದರ್ಶ ದಾಂಪತ್ಯದ ಸಂಕೇತವಾಗಿ ನಿಲ್ಲದೆ ಸರಳ ಕುಟುಂಬದ ಬೊಂಬೆಗಳಾಗಿ ಬಿಡುತ್ತಾರೆ. ಇವರನ್ನು ಕಂಡು ಕರುಬಿದ-ಮೆಚ್ಚಿದ ನಾಗಪ್ಪ, ರೋಜಿ, ತಾಯಮ್ಮ, ಮಂಗಳಮ್ಮ, ವೇಣಿ, ಶೌರಿ, ರಾಜ ಮೊದಲಾದ (ಗೌಣ) ಪಾತ್ರಗಳ ಚಿತ್ರಣದಲ್ಲಿ ಕೃತಿಕಾರ್ತಿ ಯಾವ ಶ್ರಮಶ್ರದ್ಧೆಯನ್ನೂ ವಹಿಸುವುದಿಲ್ಲ. ದೃಢವಾದ ಸಮಸ್ಯೆಗಳನ್ನು ಹಿಡಿಯದ ಆಳವಾಗಿ ವಿಚಾರ ಮಾಡಲು ತಲೆ ಬಳಸದ ಮನೋಧರ್ಮದಿಂದಾಗಿ ಕಾದಂಬರಿ ವಾಸ್ತವ ಆದರ್ಶಗಳ ಒಂದು ಬಗೆಯ ಹುರುಕು ಮುರುಕು ತೇಪೆಯಾಗಿದೆ.

ಯಾರು ಹಿತಕರು ಮತ್ತು ಸುಖಾಂತ ಇಂದಿರಾ ಅವರ ಎರಡು ಕಾದಂಬರಿಗಳು. ಇವರ ಬರಹ ಸಾಮಾಜಿಕ ಕೌಟುಂಬಿಕ ಸಮಸ್ಯೆಗಳಿಗೆ ಸೀಮಿತ. ಕಲೆಗಾರಿಕೆ ಕೂಡ ನಿರ್ದಿಷ್ಟ ಚೌಕಟ್ಟಿಗೆ ಮೀಸಲು. ಇದು ದೋಷವೆಂದು ಅರ್ಥೈಸುವುದಕ್ಕೆ ಕಾರಣ – ಈ ಪರಿಮಿತ ಪರಿಧಿಯೊಳಗೆ ಹೃದ್ಯವೆನಿಸಲು ಸಾಧ್ಯವಿದ್ದ ಸಂಸಾರದ ಆತ್ಮೀಯ ಚಿತ್ರಣದ ಕೊರೆ.

ಇವರ ಬರಹ ತನ್ನ ಸರಳ, ಲಲಿತ ನಿರೂಪಣೆಯಿಂದ ಓದಿಸಿಕೊಂಡು ಹೋಗುತ್ತದೆ. ಆದರೆ ಈ ಅತಿ ಸರಳತೆಯೇ ಉರುಳಾಗಿ ಅವರ ಹೊತ್ತಗೆಗಳು ನರಳುತ್ತವೆ. ಅಲ್ಲದೆ ಅವರ ಕಾದಂಬರಿಗಳ ಕ್ಷೇತ್ರ ವಿಸ್ತಾರವಾಗಿಲ್ಲವೆಂಬುದೊಂದೇ ಕೊರತೆಯಲ್ಲ. ಹದ ಪಡೆಯದ ಭಾಷೆ, ಕಾದಂಬರಿಯ ಸಂವಿಧಾನದಲ್ಲಿ ಬೆರೆಯುವ ಘಟನೆಗಳು, ‘ಕಾದಂಬರೀಪ್ರಿಯ’ ಓದುಗರ ‘ರಂಜನೆ-ವಿನೋದ’ ಕ್ಕಾಗಿ ಬರೆಯುವ ಚಟ – ಇವು ಅಡಿಗಡಗೆ ಕಂಡು ಬರುವ ಇತರ ದೌರ್ಬಲ್ಯಗಳು.

ಅನಪೇಕ್ಷಣೀಯ ಬೆಳವಣಿಗೆಯ ಭಾರದಿಂದ ‘ಯಾರು ಹಿತವರುಅಪರಿಣತ ಪ್ರಯೋಗವಾಗಿದೆ. ಶರ್ವಾಣಿ, ಪ್ರಸನ್ನ, ರೇಣುಕೆ, ಪಾರ್ವತಮ್ಮ, ಸಂಪಂಗಿ, ಗೀರ್ವಾಣಿ ಲೇಖಕಿಯ ಅರ್ಥಹೀನ ಅಸಂಗತ ಬರೆಯದ ಬೊಂಬೆಗಳಾಗಿವೆ.

ಇದೇ ವಿಮರ್ಶೆ ಸುಖಾಂತಕಾದಂಬರಿಗೂ ಸಲ್ಲುತ್ತದೆ. ಸಣ್ಣ ಕಥೆಯಾಗಿ ಮೊದಲು ಪ್ರಕಟವಾದುದನ್ನು ಓದಿದವರೊಬ್ಬರು (?) ‘ಇದನ್ನು ಕಾದಂಬರಿ ಮಾಡಿದರೆ ಬಹಳ ಚೆನ್ನಾಗಿರುತ್ತದೆ. ಪುಸ್ತಕಕ್ಕೆ ಒಳ್ಳೆ ಭವಿಷ್ಯ ಒದಗಿ ಬರುತ್ತದೆ’ ಎಂದು ಭವಿಷ್ಯ ನುಡಿದರಂತೆ. ಅವರ ಹಾರೈಕೆಯಂತೆ ಇವರು ಕಾದಂಬರಿ ಮಾಡಿದರಂತೆ. ಹೇಳಿದವರಿಗೆ ವಿವೇಚನೆ ತಪ್ಪಿದರೂ ಕೇಳಿದವರು ಅಲೋಚಿಸಬೇಕಿತ್ತು. ಬರವಣಿಗೆಯನ್ನು ಇಷ್ಟು ಲಘುವಾಗಿ ತೆಗೆದುಕೊಂಡ ಲೇಖಕರಿಂದ ಉತ್ತಮ ಕೃತಿ ನಿರೀಕ್ಷೆ ಅಸಾಧ್ಯ. ಸುಖಾಂತ ಕಾದಂಬರಿಯೇ ಈ ಮಾತಿಗೆ ತಾಳ ಹಾಕುತ್ತದೆ.

ಶಿವರಾಮನಿಗೆ ವ್ಯಾಸಕ್ಟಮಿ ಶಸ್ತ್ರ ಚಿಕಿತ್ಸೆ ಆದಮೇಲೆ ಅದರ ವಿಷಯವನ್ನೇ ತಿಳಿಸದೆ ಕಮಲೆಯನ್ನು ಎರಡನೆಯ ಹೆಂಡತಿಯಾಗಿ ತಂದುಕೊಂಡ, ಅವಳಿಗೆ ಸದಾ ರಾಮನದೇ ಚಿಂತೆ. ರಾಮನ ಜೊತೆ ಉತ್ತರ ಭಾರತ ಪ್ರವಾಸ ಹೋಗಿ ಬರಲು (ಚಲನ ಚಿತ್ರವಾದರೆ ಛಾಯಾಚಿತ್ರ ಗ್ರಾಹಕರಿಗೆ ಸದವಕಾಶ!) ಕಮಲಿಗೆ ಗಂಡ ಶಿವರಾಂ ಹೇಳಿದ. ಅದನ್ನು ಕೇಳಿ “ಕಮಲಿಗೆ ತಿಕಲು ಏರಿದಂತಾಯ್ತು” ರಾಮ-ಕಮಲಿ ಆರಾಮವಾಗಿ ತೆಕ್ಕೆ ಹಾಕಿಕೊಂಡು ಪ್ರವಾಸ ಮಾಡುತ್ತಾರೆ. ಹೋಟೆಲು ಕೊಠಡಿಗಳಲ್ಲಿ ತಬ್ಬಿದಾಗಲೆಲ್ಲಾ ಹಾಗೆ ಮಾಡುವುದು ಸರಿಯೋ ಎಂದು ಯೋಚಿಸುತ್ತಾರಂತೆ!… ಇತ್ಯಾದಿ.

ಸಾಮಾನ್ಯ ಸ್ತರದ ಕಲ್ಪನೆಯಲ್ಲಿ ಲೇಖಕಿ ಸುಖಿಸುತ್ತಾರೆ. ಅಲ್ಪತೃಪ್ತಿಯ ತೀರ ಬಾಲಿಶ ಬರೆಹದ ಬೊಂಬೆ ‘ಸುಖಾಂತ’, ಅಡುಗೊಲಜ್ಜಿ ಹೇಳುವ ರಾಜಕುಮಾರ (ರಿ) ಕಥೆಯಲ್ಲಿರಬಹುದಾದ ಆಕರ್ಷಣೆ ಕೂಡ ಇಲ್ಲಿಲ್ಲ. ಸಂಯಮ, ವಿವೇಚನೆ, ಲೋಕ ಪ್ರಜ್ಞೆ- ಇವುಗಳ ಅಭಾವ ಇವರ ಈ (ಮತ್ತು ಇತರ ಕಾದಂಬರಿಗಳ) ವೈಶಿಷ್ಟ್ಯೇ ಲೇಖಕಿ ನಿತ್ಯ ಜೀವನದ ಸಂಗತಿಗಳನ್ನು ಅನಾಮತ್ತಾಗಿ ಕಾದಂಬರಿ ಲೋಕಕ್ಕೆ ತಂದು ತುರುಕುತ್ತಾರೆ. ಸಮಕಾಲೀನ ಸಮಾಜದ ಸ್ಥಿತ್ಯಂತರಗಳಲ್ಲಿ ಕಳಕಳಿ ಇಲ್ಲ. ಯಾವ ಹೊಸ ಅನುಭವವನ್ನೂ ಜೋಡಿಸುವುದಿಲ್ಲ ಕಾದಂಬರಿಯ ಶಿಲ್ಪಕ್ಕೆ ಸಡಿಲವಾದ ಶೈಲಿ. ಆರಿಸಿಕೊಂಡ ವಸ್ತುವಿನ ಅರ್ಥಪೂರ್ಣ ಸಾಧ್ಯತೆಯನ್ನು ದುಡಿಸಿಕೊಳ್ಳುವ ಪ್ರಯತ್ನಕ್ಕೂ ತೊಡಗುವುದಿಲ್ಲ.

ಅವಳು ಪಡೆದ ಭಾಗ್ಯ (ಟಿ. ಶಾಂತಿ) ಕಾದಂಬರಿಯ ನಿರೂಪಣೆ ಒಮ್ಮೊಗನಾಗಿ ಸಾಗದೆ ತೊಡರುಗಾಲು ಹಾಕಿಕೊಂಡು ಮುಗ್ಗರಿಸಿದೆ. ಕಡೆಗೆ ವ್ಯಾಕರಣ ಶುದ್ಧಿಯೂ ಇಲ್ಲದ ಇಲ್ಲಿನ ಭಾಷೆ ಬರಹಗಾರರಿಗೆ ಬೆಲೆ ತಂದುಕೊಡುವಂತಹುದಲ್ಲ: “ಗಂಧದ ಮರವನ್ನು ದೂರದಲ್ಲಿ ಹಾಕಿದ್ದರೆ ಅದೂ ಸೌದೆಯ ತುಂಡಾಗುತ್ತದೆ. ನಳಿನಿಯು ತನ್ನ ಕಷ್ಟದಲ್ಲಿ ಬೆಂದು ಪತಿಯ ಪ್ರೇಮವನ್ನು ಪಡೆದಳು. ಅಂತೆಯೇ ಸಹನೆಯಿಂದ ಇದ್ದಲ್ಲಿ ಕಾಹಿಲೆಯೂ ವಾಸಿಯಾದೀತು.” ಇಂಥ ವಾಕ್ಯಗಳು ಮಾಲೆಗಟ್ಟಿವೆ.

ಭಾಷೆಯ ಕ್ಲಿಷ್ಟತೆಯೇ ಅಲ್ಲದೆ ಯಾವ ಮಹತ್ವದ ಸಂಗತಿಗಳೂ ಕೃತಿಯಲ್ಲಿ ಸಂಭವಿಸುವುದಿಲ್ಲ. ಇನ್ನು ಮುಂದೆಯೂ ಇವರಿಂದ ಸತ್ಯಪೂರ್ಣವಾದ ಕೃತಿಗಳನ್ನು ನಿರೀಕ್ಷಿಸುವುದೂ ಮೃಗಜಲದ ಬೆನ್ನುಹತ್ತಿದಂತೆ ಎಂಬ ನಿರಾಶೆ ಕಾದಂಬರಿಯ ಓದಿನಿಂದ ಅವರಿಸುತ್ತದೆ.

ಜೀವನ ಸ್ರವಂತಿ (ನಿರುಪಮಾ) ಕಾದಂಬರಿಯಲ್ಲಿ ಬರುವ ಅನಂತ, ಚೆಂಟಾಟದ ಮೈದಾನದಲ್ಲಿ ಆಟಗಾರರ ಕಾಲಿಗೆ ಸಿಕ್ಕಿ ಎದ್ದು ಬಿದ್ದು ಓದ್ದಾಡುವಂತೆ ಇದ್ದಾನೆ. ಅವನದೆಂಬ ವ್ಯಕ್ತಿತ್ವವೇ ಇಲ್ಲದೆ. ಆಟದ ಚೆಂಡಿಗಾದರೂ ಅಷ್ಟು ಒದೆಸಿಕೊಂಡರೂ ಗೋಲಿನ ಗುರಿ ಇರುತ್ತದೆ. ಇಲ್ಲಿನ ಲೇಖಕಿಗೆ ಪಾತ್ರಗಳನ್ನು ಚಿತ್ರಿಸುವಾಗ ಯಾವ ವ್ಯವಸ್ಥೆ ಉದ್ದೇಶಗಳೂ ಇರುವಂತೆ ತೋರುವುದಿಲ್ಲ. ‘ಅರಿಕೆ’ ಯಲ್ಲೇನೋ ತಮ್ಮ ವಿಚಾರವನ್ನು ಲೇಖಕಿ ಉದಾರವಾಗಿ ನಿವೇದಿಸಿದ್ದಾರೆ. ಕೃತಿಯಲ್ಲಿ ಅದು ಅವಿರ್ಭವಿಸಿಲ್ಲ. ಕಾದಂಬರಿ ಓದುಗನಿಗೆ ಏನನ್ನೂ ಸಂವಹನಗೊಳಿಸುವುದಿಲ್ಲ. ಇವರ ಉಳಿದ ಮೂರು ಕಾದಂಬರಿಗಳಂತೆ ಇದೂ ಅಸ್ಪಷ್ಟತೆಯಲ್ಲೇ ಅಡಗಿ ಬಿಡುತ್ತದೆ. ಲೇಖಕಿಗೆ ಜೀವನದ ಸಂಕೀರ್ಣ ಸಮಸ್ಯೆಗಳ ಆಳಕ್ಕೆ ಇಳಿಯುವ ಶಕ್ತಿ, ಸಿದ್ಧತೆ ಸಾಲದು. ಈ ಕೊರತೆಯಿಂದಾಗಿ ಇವರ ಬರಹ ನರಳುತ್ತದೆ. ಕಥನ ಕಲೆಯಲ್ಲಿ ಇನ್ನೂ ಅಪಾರವಾಗಿ ಪಳಗಬೇಕು. ಕಡೆಗೆ ಕಡತಂದ ಪೊಳ್ಳು ಅನುಭವವನ್ನು ಧಾರಾಳವಾಗಿ ಉಪಯೋಗಿಸಿಕೊಳ್ಳುವ ಕುಸುರಿ ಜಾಣ್ಮೆಯೂ ಕಾಣುವುದಿಲ್ಲ.

ಬಾಳ ಪಲ್ಲವಿ (ವಿ.ವಿ. ಲಕ್ಷ್ಮಿ) ಕಾದಂಬರಿ ಮಾಮೂಲಿಗಿಂತ ತುಸು ಬೇರೆ ಯಾದ ಸ್ವರದಂತೆ ತೋರಿದರೂ ವಿಶ್ಲೇಷಿಸಿ ನೋಡಿದಾಗ ದುರ್ಬಲವಾಗಿದೆ. “ಮಾಲಿನಿ ಕಾದಂಬರಿಯ ಮೂಲಕ ಕನ್ನಡ ಸಿಡಿಮುಡಿಯನ್ನು ಸಿಂಗರಿಸಿದ” ಲೇಖಕಿಯೆಂದು ರಕ್ಷಾಪುಟದಲ್ಲಿ ಬೆನ್ನ ಚಪ್ಪರಿಸಿದೆ. ಈ ಪ್ರಶಂಸೆ ಎಷ್ಟು ದುಬಾರಿಯ ಪೊಳ್ಳು ಅಲಂಕಾರ ಭಾಷೆಯಿಂದ ಈ ಗ್ರಂಥವನ್ನೂ ಓದಿದಮೇಲೆ ಅರಿವಾಗುತ್ತದೆ.

ಪರಿಚಯ ಭಾಗದಲ್ಲಿ ಲೇಖಕಿಯ ‘ಪ್ರತಿಭೆ’ಯನ್ನು ಶ್ಲಾಘಿಸಿದ್ದಾರೆ. ಇಲ್ಲದಿರುವುದನ್ನು ಕುರಿತೂ ನಮ್ಮಲ್ಲಿ ಹೊಗಳುತ್ತಾರೆಂಬುದಕ್ಕೆ ಇದು ದಾಖಲೆ. ಗೀತಾ-ಮೋಹನರ ಪ್ರಣಯ ತೀರ ಸರಳೀಕೃತಿಗೊಂಡಿದೆ. ಕುಸುಮ, ಶಾಮು, ರಾಮಚಂದ್ರಯ್ಯ, ಡಾ|| ಅರವಿಂದ ಈ ಪಾತ್ರಗಳು ಅಥೆಯ ಎರಕದಲ್ಲಿ ಸರಿಯಾಗಿ ಸೇರಿಲ್ಲ. ಹುಚ್ಚಾಸ್ಪತ್ರಗೆ ಒಂದು ಪಾತ್ರವನ್ನು ಸೇರಿಸಿ ಅಲ್ಲಿನ ವಾತಾವರಣವನ್ನು ವಾರ್ತೆಯಾಗಿ ಹೇಳೀದ ಮಾತ್ರಕ್ಕೆ ಆ ಕೃತಿ ಮನಃಶ್ಯಾಸ್ತ್ರಕ್ಕೆ ಸಂಬಂಧಿಸುವುದೆಂಬ ನಂಬಿಕೆ ಲೇಖಕಿಗೆ. ಚಲನಚಿತ್ರ ಪ್ರಭಾವಿತ ಈ ಬರೆಹದಲ್ಲಿ ಕಥನ ಕಲೆಯ ಸೌಷ್ಠವ ಮೂಡಿಲ್ಲ.

ಯಾರಿವಳು (ಪುಷ್ಪಾ) ವಾರಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಅಚ್ಚಾಗಿ ಪುಸ್ತಕರೂಪದಲ್ಲಿ ಪ್ರಕಟವಾಗಿದೆ.

ಮುಖ್ಯ ಪಾತ್ರ ಉಷಾ. ನೃತ್ಯಗಾರ್ತಿ, ಉಷೆಯ ಬಾಳಿನ ಏಳುಬೀಳುಗಳನ್ನು ಉದ್ದಕ್ಕೂ ನೀರಸವಾದ ಧಾಟಿಯಲ್ಲಿ ಹೇಳಿಕೊಂಡು ಹೋಗಿದ್ದಾರೆ. ಅಸಂಬದ್ಧ ಸಂದರ್ಭಗಳಿಂದ ಕಾದಂಬರಿಯನ್ನು ರೋಮಾಂಚಕಾರಿಯಾಗಿಸಲು ಪ್ರಯತ್ನಿಸಿಯೂ ಕೃತಿ ಸಾಧಾರಣ ಮಟ್ಟ ಮುಟ್ಟುವುದಿಲ್ಲ ಮಧು-ಸುಲೋಚನ ಶಾರದ-ಸುಬ್ರಹ್ಮನ್ಯ-ಎಲ್ಲ ಇಲ್ಲಿ ಡ್ರಿಲ್ ಮಾಡುತ್ತಾರೆ. ವಸ್ತುವಿಗೂ, ಪಾತ್ರಗಳಿಗೂ ಸಮನ್ವಯವಿಲ್ಲ. ಉಷೆ ಮೈಸೂರಿನಲ್ಲಿ ಹೇಳ ಹೆಸರಿಲ್ಲದವಳಂತೆ ಸಾಯುವ ಪರಿಸ್ಥಿತಿ ಕೂಡ ಗಾಢವಾಗಿ ಬಂದಿಲ್ಲ.

ಲೇಖಕಿ ಕ್ಲೀಷೆಗಳಲ್ಲೇ ನಿಲ್ಲದೆ ಬದಲಾಗುತ್ತಿರುವ ಸಮಾಜ-ಪರಿಸ್ಥಿತಿಗಳನ್ನು ವಸ್ತುನಿಷ್ಠವಾಗಿ ಗ್ರಹಿಸಿ ಸಂಘರ್ಷಗಳ ಮುಖಾಮುಖಿಯಲ್ಲಿ ಪಾತ್ರಗಳ ತಪ್ತಸ್ಥಿತಿಯನ್ನು ರೂಪಿಸಬಹುದಾದ ಸೊಗಸಾದ ಅವಕಾಶವನ್ನು ಉಪಯೋಗಿಸಿಕೊಂಡಿಲ್ಲ.

ಮುಖ (ಮಂಗಳಾ ಸತ್ಯನ್) ವಾರಪತ್ರಿಕೆಯೊಂದರ ಧಾರಾವಾಹಿ ಕೂಸು: ಬಣ್ಣಕ್ಕಿಂತ ಗುಣ ಮುಖ್ಯ ಎಂಬ ಹಳೆಯ ಹೇಳಿಕೆಯನ್ನು ಪ್ರತಿಷ್ಠಾಪಿಸಲು ಲೇಖಕರು ಸುಮಾರಾಗಿ ಪ್ರಯತ್ನಿಸಿದ್ದಾರೆ. ಒಂದು ವ್ಯತ್ಯಾಸ; ಇಲ್ಲಿ ಬರುವ ವಾಣಿ ಚೆಲುವಿನಲ್ಲೂ ನಡತೆಯಲ್ಲೂ ಎಣೆಯಿಲ್ಲದವಳು. ವೀಣಾ ಮಾತ್ರ ನೋಡಲಷ್ಟೇ ಚೆಲುವೆ. ಇವರಿಬ್ಬರ ನಡುವೆ ಒಬ್ಬ ಬೇಕಲ್ಲ! ಶ್ರೀಧರ ಆ ಸ್ಥಾನ ತೆಗೆದುಕೊಳ್ಳುತ್ತಾನೆ. ವಾಣಿ ಸೌಂದರ್ಯ ಕಳೆದುಕೊಂಡು ಕುರೂಪಿಯಾಗಿ ಪಡುವ ಕಷ್ಟ ತಮಾಷೆಯಾಗಿ ತೋರುತ್ತದೆ. ಲೇಖಕಿಯ ವಿವಕ್ಷಿತ ಅರ್ಥ ಕೂಡ ಮಬ್ಬಿನಲ್ಲಿ ತಬ್ಬಿಬ್ಬಾಗಿ ತೇಲುತ್ತದೆ: ಕಾರಣ, ತತ್ವದ ಮುಖ್ಯ ಪಾತಳಿಯ ಪ್ರಸ್ತಾಪ ಆಗಾಗ್ಗೆ ಬರುತ್ತದೆ, ಸಿದ್ಧಾಂತ ಸಾಹಿತ್ಯವಾಗದೆ ಸೋತಿದೆ.

ಕಾದಂಬರಿಯಲ್ಲಿ ನಡೆಯುವ ಅಘಟಿತಘಟನೆಗಳ ಪರಂಪರೆ ಕಂಡಾಗ, ನಿಜ ಜೀವನದ ಪರಿಚಯವನ್ನು, (ಕ್ಲೀಷೆಯನ್ನು ಉಪಯೋಗಿಸಿ ಹೇಳುವುದಾದರೆ, ದರ್ಶನವನ್ನು,) ಮೂರು ಕಾದಂಬರಿಗಳನ್ನು ಬರೆದ ಮೇಲೂ, ಸಿದ್ದಿಸಿಲ್ಲದಿರುವುದು ಸ್ಪಷ್ಟವಾಗುತ್ತದೆ. ಕಪ್ಪು-ಬಿಳುಪು ವಸ್ತುವನ್ನು ಮತ್ತೊಬ್ಬರಿಂದ ಬಳಸಿಕೊಂಡಂತೆ ಆಕರ್ಷಕವಾಗಿ ಕಥೆಯನ್ನು ನಿರೂಪಿಸುವ ಕಲೆ ಇವರಿಗೆ ಇದೆ.

ಪ್ಲಾಟ್ ಫಾರಂ ಮೇಲೆ ಒಂದು ರಾತ್ರಿ (ನೀಳಾದೇವಿ) ‘ಬಾಂಬೆ ಸೆಂಟ್ರಲ್’ ಸ್ಟೇಷನ್ನಿನಲ್ಲಿ ನಡೆಯುವ ಕಾರ್ಯಗಳ, ವ್ಯವಸ್ಥೆಗೆ ದಕ್ಕದ ವೀಕ್ಷಕ ವಿವರಣೆ. ಈ ರನ್ನಿಂಗ್ ಕಾಮೆಂಟಿಯಲ್ಲಿ ಆಟದ ಸ್ವಾರಸ್ಯಗಳೆಲ್ಲ ನುಸುಳಿ ಹೋಗಿ ಬೋಳು ಬೋಳಾದ ಬರಹವಷ್ಟೆ ನಿಲ್ಲುತ್ತದೆ. ಮೊದಲೊಂದು ಸಲ ಇಂಗ್ಲಿಷ್ ಕಾದಂಬರಿಯನ್ನು ಮೂಲದ ಕೃತಜ್ಞತೆಯ ಸೂಚನೆಯೂ ಇಲ್ಲದೆ ಕನ್ನಡಕ್ಕೆ ತಿರುಗಿಸಿ ಬರೆದ (ಚಲನಚಿತ್ರವೂ ಆಯಿತು) ಲೇಖಕಿಯ ಈ ಕೃತಿಯೂ ಬೇರೊಂದು ಮಾಮಾದರಿಯನ್ನು ಆಧರಿಸಿ ನಿಂತಂತೆ ಭಾಸವಾಗುತ್ತದೆ. ‘ಭವಾನಿ ಜಂಕ್ಷನ್’ ಕಾದಂಬರಿ ಹಾಗೂ ಹಿಂದಿಚಿತ್ರ ‘ರೈಲ್ವೇ ಪ್ಲಾಟ್ ಫಾರಂ’ ಪ್ರಭಾವ ಇಲ್ಲಿರುವಂತೆ ತೋರುತ್ತದೆ, ಇನ್ನೂ ನುರಿತಿಲ್ಲದ ಬರೆಹ. ಆಕ್ಷೇಪಾರ್ಹ ಅಂಶಗಳಿಂದಾಗಿ ಒಂದು ನಿಷ್ಫಲ ಪ್ರಯತ್ನವಾಗಿದೆ. ನಿರ್ಮಿತ ವಸ್ತುವಾದರೂ ವಾಸ್ತವ ರೂಪ ಕೊಡುವ ಬಲವಿಲ್ಲ.

ಪಡಿ ಎಡವಿ ಬಂದವಳು (ವಿಶಾಲಾಕ್ಷಿ) ಮಾಮೂಲೀ ಘಟನೆಗಳನ್ನು ತೀರ ಪರಿಮಿತ ವಲಯದಲ್ಲಿ ಅಸಹಜ ಚಿತ್ರಿಸುತ್ತದೆ.

ಇದರ ಸಾರಾಂಶ ಅಣ್ಣತಮ್ಮಂದಿರ ನಡುವಿನ (ನಡತೆಯಲ್ಲಿನ) ವೈದೃಶ್ಯ. ಶ್ರೀಕಂಠ ಹಾಗೂ ಅವನ ಮಡದಿ ಗೌರಮ್ಮ ಆದರ್ಶ ದಂಪತಿಗಳು. ಮನುಷ್ಯರಲ್ಲಿರಬೇಕೆಂದು ಬಯಸುವ. ಪುರಾಣಾದಿಗಳಲ್ಲಿ ಹೆಚ್ಚಾಗಿ ಕಾಣುವ ಜೋಡಿ ಇವರದು. ಉತ್ತಮ ಗುಣಗಳು ಮೈತಾಳಿ ಬಂದವರು. ಶ್ರೀಕಠ ಚಿಕ್ಕವನಾದರೂ ದೊಡ್ಡವನಾಗಿ ಮಹಾನುಭಾವನಂತೆ ಬಾಳಿದ. ಅವನು ಮೂರ್ಛೆ ರೋಗವನ್ನು ಸೂರ್ಯೋಪಾಸನೆಯಿಂದ ವಾಸಿ ಮಾಡುವ ದೈವಾಂಶ ಸಂಭೂತ, ಅನುರೂಪಳಾದ ಮಡದಿ ಗೌರಮ್ಮ.

ಶ್ರೀಕಂಠನ ಅಣ್ಣ ಹಾಗೂ ಅತ್ತಿಗೆ; ಅವರದೂ ಅನುರೂಪ ದಾಂಪತ್ಯವೇ, ಆ ಅನುರೂಪ್ಯ ಕೇವಲ ಸ್ವಾರ್ಥದ ಪರಾಕಾಷ್ಠೆಯಲ್ಲಿ ಕಂಡು ಬರುತ್ತದೆ. ತಮ್ಮ – ನಾದಿನಿಯರ ಬೆಳಕಿನ ಬಾಳಿಗೆ ಒಡ್ಡಿದ ಕತ್ತಲೆಯ ಬದುಕು ಅಣ್ಣ-ಅತ್ತಿಗೆಯರದು.

ನೀತಿಯನ್ನು ನೆಮ್ಮಿ ನಿಂತ ಕಥೆ. ನೈಜತೆಯನ್ನು ನೀಗಿಕೊಂಡು ಕಾದಂಬರಿ ಅಪೂರ್ಣವಾಗಿ ನಿಲ್ಲತ್ತದೆ. ಸಾಧಾರಣ ದರ್ಜೆಯ ನಿರಸ ಬರೆಹ. ಇಂಥ ಪಳಗದ ಬರೆಹಗಳಿಂದ ಸಾಹಿತ್ಯಕ ಮೌಲ್ಯವನ್ನು ಅಪೇಕ್ಷಿಸುವಂತಿಲ್ಲ.

ನೆರಳು ಸರಿದಾಗ (ತನುಜ) ಹೆಚ್ಚುಗಾರಿಕೆಗೆ ಸೇರದ, ವಿಮರ್ಶೆ ಬಯಸುದ ಸುಮ್ಮನೆ ದೂರ ಸರಿಸಬಹುದಾದ ಸಾಮಾನ್ಯ ಗ್ರಂಥ.

ನೋವಿನ ಪರಂಪರೆಗೆ ಸಿಕ್ಕಿ ಬೆಂದು ಬಸವಳಿದ ಹೆಣ್ಣಿನ (ಕುರುಣ) ಹಳಸಲು ಕಥೆ ಅಸ್ವಾಭಾವಿಕ ಸ್ವರೂಪದಿಂದ ಇಲ್ಲಿದೆ. ಎಲ್ಲ ಇಕ್ಕಟ್ಟಿನಿಂದಲೂ ತನ್ನ ನಡತೆ ಎಡವದಂತೆ ನೋಡಿಕೊಂಡಳೆಂಬುದು ಕರುಣಳ ಹೆಚ್ಚಳ. ಅವಳಂತಹ, ಹರಿಯುಂತಹ ನಿಸ್ವಾರ್ಥ ಜೀವಿಗಳೂ, ಸುಮಂತ್‌ನಂತಹ ಉದಾರಿಗಳೂ ಸಮಾಜದಲ್ಲಿ ಒಬ್ಬಿಬ್ಬರಾದರೂ ಸಿಕ್ಕುವಂತಾದರೆ ಲೇಖಕಿ ತಮ್ಮ ಶ್ರಮ ಸಾರ್ಥಕವೆಂದು ತಿಳಿಯುತ್ತಾರಂತೆ. ಬರೆಹದಿಂದ ಸಮಾಜ ಸುಧಾರಣೆ ಸಾಧ್ಯವೆಂಬ ನಂಬಿಕೆ ಮೆಚ್ಚತಕ್ಕದ್ದು.

‘ಪ್ರಿಯವಾಚಕ’ರಿಗೆ ಬರೆದ ಅರಿಕೆಯಲ್ಲಿ ಲೇಖಕಿ ‘ನಾನು ಕಾದಂಬರಿ ಕ್ಷೇತ್ರಕ್ಕೆ ಈಗ ತಾನೇ ಹೆಜ್ಜೆಯಿಡುತ್ತಿರುವ ಪುಟ್ಟ ಮಗು. ಮಗು ತಪ್ಪು ಹೆಜ್ಜೆಯಿಟ್ಟು ಎಡವಿದರೂ ಮಾತೆ ಬೇಸರ ಪಡದೆ ನಗುತ್ತಾ ಮಗುವಿಗೆ ಎಚ್ಚರಿಕೆ ಕೊಡ್ಡು ಕೈಹಿಡಿದು ನಡೆಸುವಂತೆ ನನ್ನೊಡನೆ ನೀವುಗಳೂ ಸಹಕರಿಸುವಿರೆಂದು ನಂಬಿ….; ಸಣ್ಣಪುಟ್ಟ ತಪ್ಪುಗಳನ್ನು ಹೊಟ್ಟೆಯಲ್ಲಿ ಹಾಕಿಕೊಂಡು ಚೆನ್ನಾಗಿರುವುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವಿರೆಂದು ನಂಬಿದ್ದೇನೆ’ – ಈ ವಿಧದಲ್ಲಿ ವಿನಂತಿಸಿದವರಿಗೆ ವಿಮಶೆಧ ಅಹಿತಕರ. ಹಾಗೆಂದು ಸುಮ್ಮನಿರುವುದಕ್ಕೂ ಇವರು ಬಿಡುವುದಿಲ್ಲ ‘ನಿಮ್ಮ ಪ್ರೋತ್ಸಾಹ ನನ್ನಿಂದ ಇನ್ನೂ….. ‘ಅನೇಕ ಕೃತಿಗಳನ್ನು ರಚಿಸಿದ ಸ್ಪೂರ್ತಿ ನೀಡಲು’ – ಎಂದು ಹಾರೈಸಿದ್ದಾರೆ.

ಕಣಿವೆಗೆ ಬಂತು ಬೇಸುಗೆ ಮತ್ತು ಚಿತ್ತಮೋಹನ (ಡಾ|| ಅನುಪಮಾ ನಿರಂಜನ ಕಾದಂಬರಿಗಳೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆಂಬ ಕಾಣಿಕೆ ಸಲ್ಲಿಸಲಾರವು. ಆದರೂ ಉಳಿದ ಕಾದಂಬರಿಕಾರ್ತಿಯರಂತೆ ಇವರದು ಸಪ್ಪೆ ಬರಹವಲ್ಲ. ಕನ್ನಡದಲ್ಲಿ ಬರೆಯುತ್ತಿರುವ ಲೇಖಕಿಯರಲ್ಲಿ ಇವರು ಪ್ರಮುಖರಾಗಿ ನಿಲ್ಲುತ್ತಾರೆ.

ಈ ಎರಡೂ ಕಾದಂಬರಿಗಳೂ ಸಾಧಾರಣ ದರ್ಜೆಯವೇ, ಸಾಧಾರಣತೆಗಿರುವ ಕಾರಣಗಳು ಬೇರೆಯಾಗಿವೆ. ಅನುಭವದ ಅಭಾವ ಇಲ್ಲಿಲ್ಲ. ವಸ್ತು ನಿರ್ವಹಣೆ ಚೆನ್ನಾಗಿದೆ.

ಶ್ರೀದೇವಿಯನ್ನು ಅತ್ತಿಗೆ ನಾದಿನಿಯರ, ಭಾವ-ಮೈಧುನರ ಕಾಟವಿಲ್ಲದ ಮನೆಗೆ ಬಂದ ಸೊಸೆ, ಗಂಡ ನಾರಾಯಣ ಶರ್ಮ ಅರ್ಚಕ, ಐರಿನ ಜಮೀನ್ದಾರನ ಮಡದಿ ಇವರನ್ನು ಚೆನ್ನಾಗಿ ನೋಡಿಕೊಂಡಳು. ಮಗ ನರಹರಿಗೆ ಶ್ರೀದೇವಿ, “ಹಳ್ಳೀಲಿ ನಂಪಾಡಿಗೆ ನಾವಿದ್ವಿ. ಮಿಲ್ಲುಗಿಲ್ಲು ಇವೆಲ್ಲಾ ಯಾಕೆ ಬೇಕಾಗಿತ್ತಪ್ಪ? ಇದೇನೋ ಒಳ್ಳೇದಕ್ಕಲ್ಲ ಅನ್ಸುತ್ತೆ, ಹರಿ” ಎಂದು ಹೇಳಿದ ಮಾತಿನ ಸಮರ್ಥನೆ ಒಟ್ಟು ಕಾದಂಬರಿಯ ವಸ್ತು. ಆ ಉದ್ದೇಶ ಈಡೇರಲು ಸಿದ್ಧವಾದ ಪಾತ್ರಗಳು ಸಿದ್ದಪ್ಪ ಹಾಗೂ ಅವನ ಇಬ್ಬರು ಮಗಳದಿರು ಜಯಾ, ಸರಸು.

ಶರ್ಮ ದೇವಸ್ಥಾನಕ್ಕೆ ಬೆಳಗ್ಗೆ ಬಂದು ಅಲ್ಲಿ ಆಶ್ರಯ ಪಡೆದು ಮಲಗಿದ್ದ ಮುದುಕ ಜೋಗಯ್ಯನನ್ನು ‘ನಿನ್ನೇಸ್ರೇನು?’ ಅಂತ ಕೇಳೀ ಒಳಗೆ ಹೋಗಿ ಪೂಜೆಗೆ ತೊಡಗದೆ ತನ್ನ ಗತಕಾಲದ ದಿನಗಳ ಮೆಲುಕು ಹಾಕತೊಡಗಿದ ತಂತ್ರ ಹಳೆಯದೇ, ಆದರೆ ಗುಡ್ಡದ ಮೇಲಿನ ಮಂಟಪ ಅರ್ಥಪೂರ್ಣವಾದ ಸಂಕೇತವಾಗಿ ನಿಲ್ಲುತ್ತದೆ.

ಶರ್ಮನ ಮಗ ನರಹರಿ ಸಾದ್ವಿ ಶಾಂತಾಳನ್ನು ನಡೆಸಿಕೊಂಡ ರೀತಿ ಆಕ್ಷೇಪಾರ್ಹ ಗೋಪಾಲಕೃಷ್ಣ, ರಾಜಮ್ಮ, ಇವರ ಮಕ್ಕಳು ಭೀಮ-ರಾಮ ಓದಿ ಪಟ್ಟಣದಲ್ಲೇ ಕೆಲಸಕ್ಕೆ ಸೇರಿದರೆಂಬ ಸೂಚನೆ ಹೊರೆತು ಪುನರ್ ಪ್ರಸ್ತಾಪವಿಲ್ಲ. ಮಾಲೀಕರ ದತ್ತು ಮಗ ಗಂಗಾಧರ ಖಳನಾಯಕನಾಗಿರುವುದು ಲೇಖಕಿಯ ಬಲಾತ್ಕಾರ ವಿಶ್ವಾಮಿತ್ರ ಸೃಷ್ಟಿ. ಸರಸಳನ್ನು ಅವನು ಸಲೀಸಾಗಿ ಸಂಭೋಗಿಸಿದ್ದರೂ ಮತ್ತೆ ಅವಳ ಒಡಹುಟ್ಟಿದ ಜಯಳನ್ನೂ ಬಲಾತ್ಕರಿಸುವಾಗ ಮನೆ ಬಿದ್ದು. ಅವನು ಹತನಾದದ್ದು ಕೃತ್ರಿಮವಾಗೇ ಬಂದಿದೆ. ಚಲನಚಿತ್ರಕ್ಕೆ ಅಣಿಗೊಳಿಸುವ ಇಂಥ ಪ್ರಯತ್ನಗಳು ಅಕ್ಷಮ್ಯ.

ಸರಸಳಲ್ಲಿ ವ್ಯಕ್ತವಾಗಬೇಕಿದ್ದ ಗ್ರಾಮ್ಯ ಮುದ್ಧತೆ ಮರೆಯಲಾಗಿದೆ. ಜಯಾಳ ಪಾತ್ರದ ಗಡಸು ಸಾಧು. ಶಾಂತಳಿಗೆ ಅಪೆಂಡಿಸೈಟಿಸ್ ಆದುದರ ಹಿನ್ನೆಲೆ ಇಲ್ಲ. ವೈದ್ಯರೇ ಆದ ಲೇಖಕಿಗೆ ಅದರ ಕಾರ್ಯಕಾರಣ ಚಿತ್ರಣ ಕ್ಲಿಷ್ಟವಾಗಿರಲಿಲ್ಲ. ರಂಗಸ್ವಾಮಿ ಹಾಗೂ ಇತರ ಪೂಷಕ ಪಾತ್ರಗಳು ನರಳುಗಳು. ಲಕ್ಕಮ್ಮನ ತಮ್ಮ ರಾಜಣ್ಣ ಹೀಗೆ ಬಂದು ಹಾಗೆ ಹೋಗುವ ಅಲಂಕಾರ ಪುಟ್ಟಸ್ವಾಮಿ ಆಗಿದ್ದಾನೆ. ಅವನಿಂದ ಜಯ ನಿರಾಶಳಾದುದು ನೆರಳು ಚಿತ್ರ. ಜಯ-ಸಿದ್ದಪ್ಪ (ತಂದೆ ಮಗಳು) ನಗರಕ್ಕೆ ಹೊರಟಿದ್ದು ಅನಿವಾರ್ಯವಾಗಿರದೆ ಕಾದಂಬರಿಕಾರರೇ ಅವರನ್ನು ಪಟ್ಟಣಕ್ಕೆ ಪಲಾಯನ ಮಾಡಿಸಿದಂತಾಗಿದೆ. ಕೊಳಚೆವಾಸಿಗಳ ದರಿದ್ರ ಜೀವನ, ಹಳ್ಳಿಗಾಡಿನವರ ಹೀನದಿನ ಹಾಗೂ ಗಟ್ಟಿ ಬದುಕು. ಕಾರ್ಮಿಕಾದಿ ಶ್ರಮಜೀವಿಗಳ ಶೋಷಣೆ ಇವು ಇಲ್ಲಿ ಇನ್ನೂ ದಟ್ಟವಾಗಿ ಬರಲು ಸಾಧ್ಯವಿತ್ತು ಈ ಸುವರ್ಣಾವಕಾಶವನ್ನು ಕಾದಂಬರಿಕಾರ್ತಿ ಕಳೆದುಕೊಂಡಿದ್ದಾರೆ.

ಇವರ ಇನ್ನೊಂದು ಕಾದಂಬರಿ ಚಿತ್ರಮೋಹನ ಇದರ ಸಮಕ್ಕೂ ಬರುವುದಿಲ್ಲ, ಸುಂದರಮ್ಮ, ರಾಮಸ್ವಾಮಿ, ಇವರ ಮಗ ಶ್ರೀನಿವಾಸ, ಅವನ ಹೆಂಡತಿ ಜಾನಕಿ, ಕಾಮತ, ಸೋಫಿಯಾ’ ಎಲ್ಲ ಪಾತ್ರಗಳೂ ಹತ್ತಕ್ಕೆ ಹತ್ತದೆ ಮೂರಕ್ಕೆ ಇಳಿಯದೆ, ಅಳತೆಗನುಗುಣವಾಗಿ ಸಾಗುತ್ತದೆ. ಶ್ರೀನಿವಾಸನ ಸಾವು. ಗಂಡ ಸತ್ತನತಿಕಾಲದಲ್ಲಿಯೇ ಜಾನಕಿ ತಾನು ಕೆಲಸಕ್ಕೆ ಸೇರಿದ ಕಛೇರಿಯ ಹಿರಿಯ ಅಧಿಕಾರಿ ಕಾಮತನಲ್ಲಿ ಅನುರಕ್ತಿ ತಳೆಯುವುದೂ. ಅದೇ ವೇಳೆಗೆ ಕಾಮತನ ಹೆಂಡತಿ ಆಕಸ್ಮಿಕ ಮರಣಕ್ಕೀಡಾಗುವುದೂ ಸಿನಿಮೀಯ ತಂತ್ರಕ್ಕೆ ಗೆಜ್ಜೆ ಹಾಕಿದೆ. ಕಾಮತನ ಮೊದಲ ಹೆಂಡತಿ ಮಗು ರೀನಾ ಜಾನಕಿಯನ್ನು ತುಂಬಾ ಹಚ್ಚಿಕೊಳ್ಳುವುದೂ. ಇನ್ನೇನು ಮರುಮದುವೆ ಕೈಗೂಡುತ್ತೆನ್ನುವಷ್ಟರಲ್ಲಿ ಕಾಮತ್ ಕಾರು ಬಸ್ಸು ಅಪಘಾತದಲ್ಲಿ ಸಾಯುವುದೂ – ಇದೇ ಹೆಜ್ಜೆ ಇಟ್ಟಿವೆ.

ತಮ್ಮ ಕಾದಂಬರಿ ಚಲನಚಿತ್ರ ನಷ್ಟವಿಲ್ಲ. ಅದೊಂದು ಯಶಸ್ವಿ ಕಲಾಕೃತಿಯಾದರೆ ಸಾಕು – ಎಂಬ ಪ್ರಜ್ಷೆ ಆರೋಗ್ಯಕರ.

ಅಪೂರ್ವ ಮಿಲನ (ಎ.ಎನ್. ಲಕ್ಷ್ಮಿ) ಲೇಖಕಿಯ ಮೊದಲ ಕಾದಂಬರಿ ಎಂಬ ಕಾರಣದಿಂದ ಸಂಭವಿಸಬಹುದಾದ ದೋಷಗಳಿಗೂ ಮೀರಿದ ಕೊರತೆಗಳ ಕಂತೆ. ಮುನ್ನುಡಿ ಬರೆದವರಂತೂ ಎಷ್ಟು ಉದಾರತೆಯಿಂದ ಬರೆಯುವುದು ಸಾಧ್ಯವಿದೆಯೆಂಬುದನ್ನು ಸ್ಪಷ್ಟಪಡಿಸಿದ್ದಾರೆ; ಅವರು ಕೃತಿಯ ಗುಣಾವಗುಣಗಳ ವಿಶ್ಲೇಷಣೆಯ ನಿರೂಪಣೆ ಬಿಟ್ಟು ಪ್ರಕಾಶಕರನ್ನು ಕೊಂಡಾಡಿದ್ದಾರೆ (ತಮ್ಮ ಕೃತಿಗಳನ್ನೂ ಅಚ್ಚಿಸಲೆಂಬ ಅಮಿಶ). ಔಚಿತ್ಯ ಜ್ಞಾನದ ಅಭಾವ ಮುನ್ನುಡಿಕಾರರಲ್ಲಿ ಎಷ್ಟಿದೆಯೆಂದರೆ, ಒಂದು ಕಡೆ ಲೇಖಕಿಯರನ್ನು ಪರಿಚಯಿಸುತ್ತಾ “…..ಕುಲೀನ ಮನೆತನದ ಸದ್ಗೃಹಿಣಿ. ತುಂಬು ಸಂಸಾರಿ. ಲೇಖನ ಕಲೆಯಲ್ಲಿ ಒಲವು ಜಾಸ್ತಿ, ಓದುಗರನ್ನು ಸೆರೆ ಹಿಡಿಯಬಲ್ಲ. ಇಂದ್ರಜಾಲಿಕೆ ಭಾಷೆ ಅವರದಾಗಿದೆ. ಹಾಗೂ ಶೈಲಿಯಲ್ಲಿ ಹಿಡಿತವಿದೆ. ಹಿತ-ಮಿತವೂ ಇದೆ. ಎಳೆಯ ಬಳಗ ಮೆಚ್ಚುವ ಮೊದಲ ಕೃತಿ…..” ಎಂಬಂಥ ದಾಟಿ ಇದೆ. ಮುನ್ನುಡಿಯಲ್ಲಿ ಎರಡು ಭಾಗ ಮಾಡಿ ಬರೆದಿರುವ ಅಭ್ಯಾಸ ಹಾಗಿರಲಿ, ಇಲ್ಲಿ ಬರೆದ ಬೇಕಾಬಿಟ್ಟಿ ಮಾತುಗಳ ಅವೈಚಾರಿಕತೆಯನ್ನು ಕಡೆಗಣಿಸುವಂತಿಲ್ಲ.

ಈ ಗ್ರಂಥದ ಬಗೆಗಿನ ವಿಮರ್ಶೆ ಮೇಲಿನ ಪರಿಚಯ ಮಾತುಗಳಲ್ಲೇ ಅಡಗಿದೆ ಎಳೆಯ ಬಳಗ ಮೆಚ್ಚುವ ಕೃತಿ; ಈ ಮಾತನ್ನು, ಹೊಗಳುವ ಪರಿಸರದಲ್ಲಿ ಬಂದಿದ್ದರೂ, ಯಾವ ಅರ್ಥದಲ್ಲಿ ಮುನ್ನುಡಿಕಾರ್ತಿ ಬರೆದಿದ್ದಾರೋ ಊಹಿಸುವುದು ಕಷ್ಟ. ಏಕೆಂದರೆ ಮುನ್ನುಡಿಯಲ್ಲಿ ‘ಶೈಲಿ ನಿರೂಪಣೆ ಪರಿಣಾಮಗಳು ಅವಳಿಗೆ (ಲೇಖಕಿಗೆ) ಕರತಗವಾಗಿದೆ’ ಎಂದಿದ್ದಾರೆ (ವಚನದಲ್ಲಿ ಏರುಪೇರಾಗಿದ್ದರೂ). ಆದರೂ “ಈ ಮೊದಲ ಕೃತಿಯನ್ನೋದಿ ಅವಳನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮ ನಲ್ಮೆಯ ಓದುಗರ ಪಾಲಿನ ಕರ್ತವ್ಯ. (ನಾಟಕದ ಭಾಷೆ). ಕೃತಿ ಪ್ರಕಟವಾದರೆ ಓದುಗರು ಅವಶ್ಯ ಓದುತ್ತಾರೆ. ಪ್ರಕಟಿಸುವ ಮೊದಲ ಹೊಣೆ ಪ್ರಕಾಶಕರದು.”

ಈ ಬಗೆಯ ದೃಷ್ಟಿ ಧೋರಣೆಗಳೇ ಕಳಪೆ ಕಾದಂಬರಿಗಳ ಅಪಾಯಕರ ಸೃಷ್ಟಿಗೆ ಮುಖ್ಯ ಕಾರಣ, ಕಥೆಯಲ್ಲಿ ಕುತೂಹಲವಿಲ್ಲ. ಪಾತ್ರ ಸೃಷ್ಟಿಯಲ್ಲಿ ಖಚಿತತೆಯಿಲ್ಲ. ಸನ್ನಿವೇಶದಲ್ಲಿ ಜ್ವಲಂತತೆಯಿಲ್ಲ. ಉದ್ದೇಶಿಸಿ ಅರ್ಥವನ್ನು ಹೊರಡಿಸದ ಶಬ್ದಗಳ ವ್ಯರ್ಥ ಬಳಕೆ ಇದೆ.