ಚಿನ್ನದ ಹೂವು (ಪ್ರೇಮಲತಾ ಸುಂದರೇಶನ್) ಚೊಚ್ಚಲು ಕೃತಿ; “ಕಾದಂಬರಿ ಪ್ರಪಂಚದಲ್ಲಿ ಇದು ನನ್ನ ಮೊದಲ ಹೆಜ್ಜೆಯಾದರೂ ಬರವಣಿಗೆ ನನ್ನ ಲೇಖನಿಗೆ ಹೊಸದಲ್ಲ. ಹತ್ತು ವರ್ಷ ವಯಸ್ಸಿನಿಂದಲೇ ಬರೆಯುವ ಚಟ ಬೆಳಸಿಕೊಂಡು ಹಲವು ಪ್ರಮುಖ ವಾರಪತ್ರಿಕೆಗಳು, ಮಾಸಪತ್ರಿಕೆಗಳ ಬಾಲ ಲೇಖಕಿಯಾಗಿ ಬೆಳಕಿಗೆ ಬಂದವಳು ನಾನು.”

ಕಾದಂಬರಿ ಓದಿ ಮುಗಿಸಿದ ಮೇಲೂ ಲೇಖಕಿಯ ‘ಎರಡು ಮಾತು’ಗಳಲ್ಲಿ ಬರುವ ಮೇಲಿನ ಹೇಳಿಕೆಯನ್ನು ಒಪ್ಪಿಕೊಳ್ಳಬಹುದು. ಅವರಿಗೆ ಬರೆಯುವ ಗೀಳು ಇದೆ ಎಂದು ಅತಿಭಾವುಕತೆಯ ಈ ಪೀಚು ಬರೆಹ ತಿಳಿಸುತ್ತದೆ. ಆ ಚಪಲದಿಂದ ಅವರು ಪಾರಾಗದಂತೆ ಪತ್ರಿಕೆಗಳವರೂ ಪ್ರಚಾರ ಪ್ರೋತ್ಸಾಹಗಳ ಕಳ್ಳು ಕುಡಿಸಿದ್ದಾರೆ. ಧಾರಾವಾಹಿ ಅಭಿಶಾಪಕ್ಕೆ ತುತ್ತಾದ ಕೃತಿಗಳಲ್ಲಿ ಇದೂ ಒಂದು. ಚೊಚ್ಚಿಲ ಪ್ರಸವವೆಲ್ಲ ಮಿರ್ಜಿ ಅಣ್ಣಾರಾಯರ ನಿಸರ್ಗದಂತೆ, ಕುವೆಂಪು ಅವರ ಕಾನೂನು ಹೆಗ್ಗಡಿತಿಯಂತೆ, ಅನಂತಮೂರ್ತಿಯವರ ಸಂಸ್ಕಾರದಂತೆ ಅಥವಾ ಶಾಂತಿನಾಥ ದೇಸಾಯರ ಕೃತಿಯಂತೆ ಕಲಾತ್ಮಕವಾಗಿ ಯಾವುದೇ ಕೋನದಿಂದ ಯಶಸ್ವೀ ಆಗಬೇಕೆಂದಲ್ಲ. ಹಾಗೆಂದು ಮೊದಲ ಬೀಡೆಲ್ಲ ಸಪ್ಪೆ ಇಲ್ಲವೇ ಆಶಾದಾಯಕ – ಇತ್ಯಾದಿ ಆಗಬೇಕಿಲ್ಲ. ಲೇಖಕರ ಪ್ರಮಾಣಿಕತೆ, ಸೂಕ್ಷ್ಮ ನಿರೀಕ್ಷಣಾ ಶಕ್ತಿ ಸಾಚಾ ಅನುಭವಗಳನ್ನು ಅರದಂತೆ ಹೇಳಬಲ್ಲ ಭಾಷೆ, ಮೌಲ್ಯಗಳನ್ನು ಜರೂರಿನಿಂದ ವಿವೇಚಿಸಬಲ್ಲ ಮನೋಧರ್ಮ ಇವುಗಳಾದರೂ ವ್ಯಕ್ತವಾಗಬೇಕಾಗುತ್ತದೆ. ಈ ಅನನುಭವಿ ಕೃತಿಯಲ್ಲಿ ಇವೆಲ್ಲ ಕನಸಿನ ಗಂಟು.

ಈ ಕಾದಂಬರಿಯ ವಸ್ತು ವಿನ್ಯಾಸ ನಿರೂಪಣೆ ಇಲ್ಲವೂ ‘ಸಂಧ್ಯಾರಾಗ’ದ ಪಡಿನೆರಳು, ಅಲ್ಲಿನ ಗುಣ ಲಕ್ಷಣ ಹೊರತಾಗಿ. ತಮ್ಮ ಗ್ರಂಥಕ್ಕೆ ವಾಸ್ತವಿಕತೆಯ ಸೊಗಸು ಸೋಕದಂತೆ ಲೇಖಕಿ ಸ್ವಂತಿಕೆಯನ್ನು ತೋರಿದ್ದಾರೆ. ಸಂಗೀತ, ಸಾಹಿತ್ಯಗಳಲ್ಲಿ ಬರೆಹಗಾರ್ತಿಗೆ ಹೆಚ್ಚು ಆಸಕ್ತಿಯಿದೆ. ಅಭಿರುಚಿ ಆಸಕ್ತಿಗಳಷ್ಟೇ ಸಾಹಿತ್ಯ ನಿರ್ಮಾಣ ಶಕ್ತಿಗೆ ಅಗತ್ಯ ಬಂಡವಾಳವಾಗಲಾರವು. ‘ಕನ್ನಡ ನಾಡಿನಿಂದ ದೂರನಿಂತು ಸೇವೆ ಸಲ್ಲಿಸು’ತ್ತಿರುವಂತೆ ಭ್ರಮೆ ಪಟ್ಟಿರುವುದು ಅಚ್ಚರಿ. “ಕನ್ನಡಿಗರ ಒಲವಿನ ಶ್ರೀರಕ್ಷೆ ಎಂದೆಂದಿಗೂ ನನ್ನ ಪಾಲಿಗಿರಲಿ” ಇತ್ಯಾದಿ ಅರಿಕೆಗಳೆಲ್ಲ ಅವರು ತಮ್ಮ ಬಗೆಗೆ ಜನತೆಯಲ್ಲಿ ಇಲ್ಲದಿರುವ ನಂಬಿಕೆಗಳನ್ನು ತಾವೇ ಹುಟ್ಟಿಸಿಕೊಂಡಿದ್ದಾರೆಂಬ ವಿಚಾರ ತಿಳಿಸುತ್ತವೆ.

ಇವರ ಬರಲಿರುವ ಕೃತಿಗಳ ಚೆನ್ನಾಗಿವೆಯೆಂಬ ಶಿಪಾರಸ್ಸನ್ನು ಲೇಖಕಿಯ ಬಂಧುಗಳೂ ಹಿತೈಷಿಗಳೂ ಆದ ಮುನ್ನುಡಿಕಾರರು ಕೊಟ್ಟಿದ್ದಾರೆ!

ಮೂರು ದೀಪಾವಳಿ (ಬೆ. ಪಾರ್ವತಮ್ಮ) ಕಾದಂಬರಿಯ ಸಾಹಿತ್ಯಿಕ ಮೌಲ್ಯ ಶೂನ್ಯ ಎಂದಿನಂತೆ, ಇದು ಇವರ ಮೊದಲ ಬೀಡಂತೆ. ಹದಿನೈದು ವರ್ಷಗಳ ಹಿಂದೆ ಬರೆದಿದ್ದಂತೆ.

ತಿದ್ದಿ ತೀಡಿದ ಒಪ್ಪ ಒರಣವಿಲ್ಲದ ಹಸಿಹುಸಿಯಾಗಿ ಹೊರಬಂದಿದೆಯೆಂಬ ಕಾರಣವಲ್ಲದೆ ಅನುಭವದ ಅಭಾವದಿಂದಲೂ ಅಭಿವ್ಯಕ್ತಿಯ ನ್ಯೂನತೆಯಿಂದಲೂ ಕಾದಂಬರಿಯ ಒಟ್ಟು ಕಾಣಿಕೆ ಇಲ್ಲವೇ ಪರಿಣಾಮ ಸಾಧಾರಣಕ್ಕಿಂತ ಮೇಲೇರುವುದಿಲ್ಲ ನೀರು ನೀರಾದ ಅಭಿವ್ಯಕ್ತಿ ಗ್ರಂಥ.

ದಾಹ, ದೇವರ ಗೊಂಬೆ, ಆಶ್ರಯ, ಬಾಳಿದ ಮನೆ – (ಕೆ. ಸರೋಜರಾವ್) ಇವು ಜಡ ಬರೆಹಕ್ಕೆ ಮಾದರಿ, ವ್ಯರ್ತ ಪ್ರಯತ್ನಕ್ಕೆ ಉದಾಹರಣೆ. ಇವರ ಕಾದಂಬರಿಗಳನ್ನು ಹಲವಾರು. ಅವೆಲ್ಲ ಒಂದರೊಸನೊಂದು ಸ್ಪರ್ದಿಸುತ್ತವೆ. ದೋಷಗಳನ್ನು ಇಮ್ಮಡಿಸಿಕೊಳ್ಳುವ ಸ್ಪರ್ದೆಯಲ್ಲಿ. ಇವರ ಈ ನಾಲ್ಕು ಕಾದಂಬರಿಗಳನ್ನು ಇನ್ನಿತರ ಕೆಲವು ಪುಸ್ತಕಗಳನ್ನೂ ಓದಿದ ಮೇಲೆ ಸ್ಥಾಯಿಯಾಗಿ ನಿಲ್ಲುವ ಅಭಿಪ್ರಾಯ – ‘ಇವರು ಬರವಣಿಗೆ ನಿಲ್ಲಿಸಿದರೆ ಬಹುದೊಡ್ಡ ಉಪಕಾರ ಮಾಡಿದಂತೆ/’ (ಇದು ಬೇರೆ ವಿಮರ್ಶಕರ ಅಭಿಪ್ರಾಯ).

ಇವರ ಯಾವ ಗ್ರಂಥವೂ ಗಂಭೀರ ವಿಮರ್ಶೆಗೆ ಯೋಗ್ಯವಿಲ್ಲದಿದ್ದರೂ ಇಲ್ಲಿ ಮುಂದೆ ಸುದೀರ್ಘ ವಂದರಿಗೆ ಹಿಡಿದಿದೆ. ಕಾರಣ; ಅವರ ಹೊತ್ತಗೆಗಳನ್ನು ಓದಿದವರು ಮೇಲಿನ ವಿಮರ್ಶೆ ನೋಡಿ ಸಂದೇಹಿಸಬಹುದು, ಲೇಖಕಿಯವರೂ ತಮ್ಮ ಕೃತಿಗಳನ್ನು ಓದದೆಯೇ ಕಟುವಾಕ್ಯಗಳನ್ನಾಡಿದ್ದಾರೆಂದು ಶಂಕಿಸಬಹುದು; ಇಷ್ಟು ಜಾಳುಜಾಳಾಗಿ ಬರೆಯುವ ಇನ್ನೊಬ್ಬ ಲೇಖಕರು ಕನ್ನಡದಲ್ಲಿ ಕಡಮೆ, ಆದರಿಂದ ಈ ಲೇಖಕಿಯ ಅನನ್ಯತೆಯನ್ನು ವಿವರವಾಗಿಯೇ ತಿಳಿದುಕೊಳ್ಳುವುದು ಲೇಸು – ಇವು ಕೆಲವು ಉತ್ತಮ ಗ್ರಂಥಗಳಿಗೆ – ಕಥೆ ಮೀಸಲಿಡದಷ್ಟು ಪುಟಗಳನ್ನು ನಾಲ್ಕು ಕಾದಂಬರಿಗಳಿಗೆ ಕೊಟ್ಟಿರುವುದಕ್ಕಿರುವ ಕಾರಣಗಳು.

ಸದಾಶಿವಯ್ಯನ ಮೊಮ್ಮಗಳೂ ಮಲ್ಲಿ (ಅವಳ ತಂದೆ ತಾಯಿಗಳ ವಿವರವೇ ಇಲ್ಲಿ ಬರುವುದಿಲ್ಲ) ಉದ್ಯಾನವನದಲ್ಲಿ ಹಾಡುವ ಸಂದರ್ಭದಿಂದ ಪ್ರಾರಂಭವಾಗುತ್ತದೆ ದಾಹಕಾದಂಬರಿ, ಅಲ್ಲಿ ಕುಳಿತಿದ್ದ ಶಂಕರನಿಗೆ ಹಳೆಯ ಗೆಳೆಯ ರಾಜು ಬಂದು ಮಾತನಾಡಿಸುತ್ತಾನೆ (?). ರಾಜು ಮಲ್ಲಿಗೆ ನೆರವಾದವನು. ಮಲ್ಲಿಗೆ ಆಶ್ರಯ ಕೊಡಲು ಶಂಕರನನ್ನು ಕೇಳುತ್ತಾನೆ (?). ಅವನು ಒಪ್ಪಿ ತನ್ನ ಕಾರಿನಲ್ಲೇ ಮಲ್ಲಿ ರಾಜು ಇಬ್ಬರನ್ನು ಕರೆದುಕೊಂಡು ಹೋಗಿ ಅವರ ವಾಸಸ್ಥಾನದ ಬಳಿ ಬಿಡುತ್ತಾನೆ. ಕಾರಿನಲ್ಲಿ ಹೋಗುತ್ತಿರುವಾಗಲೇ ಮಲ್ಲಿಗೆ ಶಂಕರನಲ್ಲಿ ಆಸಕ್ತಿ ಹುಟ್ಟುತ್ತದೆ (?). ಶಂಕರ ಶ್ರೀಮಂತನಂತೆ (?) ಸಪ್ತವ್ಯಸನೀಯೂ ಹೌದು, ಅವನೂ ಕೃಷ್ಣೇಗೌಡನೂ ಕ್ಯಾಬರೆ ನಡೆಸುವ ಗುಂಪಿನ ಸದಸ್ಯರು (?) ಇದ್ದಕ್ಕಿದ್ದ ಹಾಗೆ ಶಂಕರನ (ಹೋಟೆಲಿನ) ಕೋಣೆಗೆ ಮಲ್ಲಿ ಬರುತ್ತಾಳೆ (?) ರಾಜು ಹಿಂದಿನ ದಿನವೇ ಆಕಸ್ಮಿಕವಾಗಿ ಸತ್ತನೆಂದು ಹೇಳುತ್ತಾಳೆ (?) ಶಂಕರ ಕೇಳಿದ್ದಕ್ಕೆಲ್ಲ ಒಪ್ಪುತ್ತಾಳೆ (?). ಸುಬ್ಬಮ್ಮನ ಬಳಿ ಕ್ಯಾಬರೆ ಕಲಿತು ವಿಖ್ಯಾತಳಾಗುತ್ತಾಳೆ (?) ಶಂಕರ ಅವಳ ದೇಹದ ರುಚಿನೋಡಲು ಒಂದು ಕೊಠಡಿಗೆ ಕರೆದುಕೊಂಡು ಹೋಗುತ್ತಾನೆ (?) ಎಷ್ಟೋ ಹೆಣ್ಣುಗಳ ಸವಿ ಕಂಡಿದ್ದರೂ ಅಂದು ಇವಳ ಚೆಲುವನ್ನು ಹೀರದೆ ಬೀರು ತರಿಸಿ ಮಲಗುತ್ತಾನೆ (?) ಮಲ್ಲಿ ಮಲ್ಲಿಕಾ ಆಗುತ್ತಾಳೆ.

ಮಲ್ಲಿಕಾ ಡಾ|| ಅಮರನಾಥನ ಜೊತೆ ಕುಡಿತ ಕಲಿತಳು (?). ಅಲ್ಲಿಂದ ಅವಳು ಮಧು ಕೃಷ್ಣೇಗೌಡ ವೀರಪ್ಪ ಮೊದಲಾದವರಿಗೆ ಸೆರಗು ಹಾಸುತ್ತಾಳೆ (?). ಈ ಮಧ್ಯೆ ಶಂಕರ ಬಂದು ಕರೆದರೂ ಗುರುತು ಮರೆತವರಂತೆ ಬೇರೆಯವರೊಡನೆ ಅವನ ಎದುರಿನಲ್ಲೇ ಹೋಗುತ್ತಾಳೆ (?). ಆಗಾಗ್ಗೆ ತಾನು ಮಾಡುತ್ತಿರುವುದು ಸರಿಯಲ್ಲವೆಂದೂ ಅನ್ನಿಸುತ್ತಿರುತ್ತದಂತೆ (?). ಶಂಕರನ ಮೇಲೆ ಕೊಲೆ ಆರೋಪ ಬಂದಿದೆಯೆಂದು (?). ತಿಳಿದಾಗ ನೊಂದುಕೊಳ್ಳುತ್ತಾಳೆ (?). ಕಡೆಗೆ ಮುಪ್ಪು ಅಡರಿ ವೈರಾಗ್ಯ ಮೂಡುತ್ತದೆ (?)

ಕೆರೆಗೆ ಬೀಳುತ್ತಿದ್ದವಳನ್ನು ತಡೆದ ಬ್ರಹ್ಮಾನಂದ ಸ್ವಾಮಿಗಳ ನೆರವಿನಿಂದ ಶಿವಾನಂದ ಸ್ವಾಮಿಗಳ ಆಶ್ರಮದಲ್ಲಿ ವಿರಾಗಿಣಿಯಾಗುತ್ತಾಳೆ. ಹೊಸ ಹೆಸರು ಮಾತಾ ಮಲ್ಲೇಶ್ವರಿ (?). ಖೋಟಾ ನೋಟುಗಳ ಮುದ್ರಣಸ ಕಳ್ಳಭಟ್ಟಿ ತಯಾರಿಕೆ ಬಂಗಾರದ ವ್ಯವಹಾರ ಇವುಗಳಿಂದ ತುಂಬಿದ ಆಶ್ರಮದ ಅಂದರ್ ಬಾಯರ್ ಗುಟ್ಟನ್ನು ಮಾತಾ ಶಾರದಾಂಬ ರಟ್ಟುಮಾಡುತ್ತಾಳೆ (?). ಮಲ್ಲಿ ಅಲ್ಲಿಂದ ಎಲ್ಲೂ ನಿಲ್ಲದೆ ಓಡುತ್ತಾಳೆ (?). ಸ್ಮಶಾನ ಸಿಗುತ್ತದೆ. ಅಲ್ಲಿ ಯಾರೂ ಇರುವುದಿಲ್ಲ. ಚಿತ ಉರಿಯುತ್ತಿರುತ್ತೆ (?); “ಸಾವೊಂದೇ ಈ ಭವದ ಭುವಿಯ ಭೀಷಣವಾದ ಬವಣೆಯಿಂದ ಮುಕ್ತಿಗೊಳಿಸುವ ಬಿಡುಗಡೆಯ ಮಹದ್ವಾರ…. ಅದೇ ಆ ಭಗವಂತನ ಅನುಗ್ರಹ ಅಭಯಹಸ್ತ. ಬಿರುಗಾಳಿ ಬೀಸಿದ ಕಾರಣ ಗಾಳಿಗೆ ಜ್ವಾಲೆ ಹೆದರಿದ ಮಲ್ಲೇಶ್ವರಿಯತ್ತ ನೀಳವಾದ ಉರಿನಾಲಿಗೆ ಚಾಚಿತು. ಮಲ್ಲೇಶ್ವರಿ ಬೆಚ್ಚಿಗಳು. ಆ ಭೀಷಣ ಉರಿಯ ಕಾವಿನ ಸ್ಪರ್ಶವನ್ನು ಸಹಿಸಲಾರದೆ ಜೀವದಾಸೆಯಿಂದ ಓಡಿದಳು. ಭವದ ಬಂಧನದಿಂದ ಬಿಡುಗಡೆಯಾಗಿ ಬೇಡಿದ ಅವಳ ಮನ ಮತ್ತೆ ಬದುಕುವ ಇಚ್ಛೆಯಿಂದ ಮೋಹ, ದಾಹದ ಕಿಚ್ಚನತ್ತ ಕರೆದು ಓಡಿತು. ಆ ಸ್ಮಶಾನದ ಕರಾಳವಾದ ಕಾರ್ಗತ್ತಲ ಗರ್ಭದಲ್ಲಿ ಕರಗಿ ಕಣ್ಮರೆಯಾಗಿ ಓಡಿಬಿಟ್ಟಳು.” (ಇತ್ಯಾದಿ. ಇಲ್ಲಿ ಇನ್ನೂ ಒಂದೂವರೆ ಪುಟದ ತತ್ವೋಪದೇಶವಿದೆ. ಅದರ ಮುಂದೆ ವಿದುರ ನೀತಿಯನ್ನು ನೀವಳಿಸಬೇಕು).

ಇಲ್ಲಿ ಉದಾಹರಿಸಿದ ಅವರ ವಾಕ್ಯಗಳು ಅರ್ಥಪೂರ್ಣವಾಗಿರದೆ ಹರುಕು ಮುರುಕುಗಳನ್ನು ತೇಪೆಹಾಕಿದಂತೆ ಇದ್ದರೆ, ಅದು ಲೇಖಕಿಯ ಹಲವು ಸಮಾನ ಹೆಗ್ಗಳಿಕೆಗಳಲ್ಲಿ ಒಂದು ಎಂದು ಸಮಾಧಾನ ಹೇಳೀಕೊಳ್ಳಬೇಕು. ಮೇಲಿನ ಕಥಾಸಂಗ್ರಹ ಭಾಗದಲ್ಲಿ ಉದ್ದಕ್ಕೂ ಕಂಸದೊಳಗೆ ಕೊಟ್ಟ ಪ್ರಶ್ನಾರ್ಥಕ ಚಿಹ್ನೆಗಳು ಎಲ್ಲ ಓದುಗರಿಗೂ ಎದುರಾಗುತ್ತವೆ. ಅಲ್ಲೆಲ್ಲ ಹಿಂದುಮುಂದು ಹೊಂದಿಕೊಳ್ಲದ ಅಸಂಬದ್ಧ ಕಂದರಗಳಿವೆಯೆಂದು ಸಾರುತ್ತವೆ. ಕಾದಂಬರಿಕಾರರಿಗೆ ಓದುಗರ ಕಾಳಜಿಯೇ ಇಲ್ಲ. ಭಿನ್ನರುಚಿಯ ಜನರಿಗೆ ಇವರ ಕಾದಂಬರಿ ಒಂದೇ ಕಡೆ ಸಮಾರಾಧನೆ ಒದಗಿಸುತ್ತದೆ; ಅರ್ಥವಾಗದ ಅಸಂಬದ್ಧ ವಾಕ್ಯಗಳು ಬೇಕೆ? ಚಿತ್ರವಿಚಿತ್ರ ಘಟನೆಗಳು ಬೇಕೆ? ಸಾಮಾಜಿಕ ಹಾಗೂ ಪತ್ತೇದಾರಿಗಳು ಒಂದೆಡೆ ಸಂಗಮಿಸಿದ ಕಾದಂಬರಿ ಬೇಕೆ? ವಿವೇಕ ವಾಸ್ತವ್ಯಗಳನ್ನು ಗಾಳಿಗೆ ತೂರಿದ ಬರೆಹ ಬೇಕೆ? ಭಾಷೆಯನ್ನು ಹಿಂಸೆ ಮಾಡುವುದು ಸಾಧ್ಯ ಎಂದು ತೋರಿಸಿದ ಕೃತಿಬೇಕೆ? ಯಾವ ಶಬ್ದಕೋಶದಲ್ಲೂ ಸಿಗದ ಕಲಬೆರಕೆ ಶಬ್ದಗಳು ಬೇಕೆ? ಅದೆಲ್ಲವೂ ಇವರ ಕಾದಂಬರಿಗಳಲ್ಲಿವೆ.

ಕೃತಿ ಅನೇಕ ಇತಿಮಿತಿಗಳ ಗಡಿ ದಾಟುವುದೇ ಇಲ್ಲ. ಇವರಿಗೆ ಕಥೆಗೂ ಕಲೆಗೂ ವ್ಯತ್ಯಾಸವೇ ಗೊತ್ತಿಲ್ಲ. ಸಿನಿಮೀಯ ಬರೆಹಕ್ಕೆ ವಿರಾಮ ಹೇಳಿದ ಹೊರತು ಇವರ ಬರವಣಿಗೆ ಬೆಳವಣಿಗೆ ಅಸಾಧ್ಯ ಎಂದಷ್ಟೇ ಹೇಳಿದರೆ ಸಾಲದು. ಏಕೆಂದರೆ ಈ ಪ್ರಯೋಗಗಳನ್ನು ಪರಿಶೀಲಿಸಿ (ಮುದ್ರಣ ದೋಷಗಳನ್ನು ಬಿಟ್ಟು)-

ಎಡವುದುಂಟು, ತಾಳುಮೇಳುಗಳೇನೂ, ಸಂಗೀತ ಆಲೈಸುತ್ತಿದ್ದಾರೆ, ಅಹಂ ಬ್ರಹ್ಮೋಸಿ, ಸಧ್ಯಕ್ಕೆ, ಅವಕ್ಕಾಗಿ, ಮಾರ್ಡನ್ ಕೆಫೆ (ಹತ್ತುಸಲ ಇದೇ ರೀತಿ ಇದೆ) ಸೋಗಸಾದ, ಬರ‍್ತೀವಿ ಕಣ್ಗಳು, ಯಥಾಪ್ರಾಕಾರ, ಬೊರಟುಹೋಗಿದ್ದೆ, ಸುಮ್ಮನೇ ಬಿಕ್ಷಕನೊಬ್ಬ, ಅನ್ನದದಾವೋ, ದಿಳಿದಿತ್ತು, ವಾರಕ್ಕೆರಡಾಸರ್ತಿ, ವಿಶೇಷ, ತೆರೆಗೆದರ ಗಂಪಾದಿಸಿದ ಪುಣ್ಯ, ಆದೆ ಸಹಾಯ, ಬೇರಳು, ಚೌಚ್, ಮಾರ್ಗಕ್ಕಿಳಿದಿದಾಳು, ಶಬ್ದ ಯುದ್ಧ ವಸ್ತವೇ, ಕಷ್ಣೇಗೌಡ, ಅಸರ್ಹ್ಯವಾಗಿ, ಬರ‍್ತೀತಿ, ಪ್ರಾಯಶ, ಗಡಸರ ಮೈಮೊಟವನ್ನು, ನಿಮನೇ, ಹುಡುರಯರಂತಲ್ಲ, ಒಡಿವೆ ಒಸ್ತ್ರ (ನಾಲ್ಕು ಕಡೆ ಇದೇ ಪ್ರಯೋಗವಿದೆ). ಪ್ರಾಣೇಶಜಾರ್ರೆ, ಅವಳಿಂಲ್ಲಿ, ಅಶ್ವಥ ಮರ, ಆಖರ್ಹಿಕರಾಗಿಯೇ, ಶತಕೋಟಿಮಾನವರೊಬ್ಬರಂತೆ – ಇತ್ಯಾದಿ, ಇತ್ಯಾದಿ.

ಕೆಲವು ವಾಕ್ಯಗಳು –

‘ಪುಂಡು ಹುಡುಗರ ಗುಂಪೊಂದು ಮಾತನಾಡುತ್ತಿದ್ದರು’

‘ಅಂದ್ರೆ ಅರ್ಥಬಿಡಿಸಿ ಹೇಳಿದ್ರೆ ಅನರ್ಥವಾಗುತ್ತೆ, ಅದ್ರಿಂದ ಏನೂ ವಿವರವಾಗಿ ಕೇಳಬೇಡ. ದಯಬಿಟ್ಟು ಬೇಕಿದ್ರೆ ನಡಿ. ಏನು ಬೇಕೋ ತಿನ್ನು ಬೇಕಾದ್ದು’

‘ಕೋರ್ಟುಯಾವ್ದು ನ್ಯಾಯ ಎಲ್ಲಿದೆ?’

‘ಇಸಂಸಾರ ನಂಗ್ಯಾಕೆ ಇನ್ನು ಸುಖವಾಗಿದ್ದೀನಿ ದಿನಕೊಬ್ಬಳು ಹೆಂಡತಿ’

‘ಅವನು ಕಾರಿನೊಳಗೆ ಕುಳಿತಾಗ ಅವನು ತಲೆಗೆ’

‘ಅವಳು ಅವನ ಹೃದಯದಲ್ಲೇನಿರುವುದೆಂದು ಅವಳು ಅರಿಯದಾದರೂ ಅವನದು ವಿಶಾಲವಾದ ಹೃದಯವೆಂದು ಅವಳು ತಿಳಿದಳು”

‘ಬಡ್ಜಟ್‌ನ ಒಂದು ನೋಡಿ ಹೋಗೀಂತ”

‘ಹಣಹಣ ಅನ್ನ ಅನ್ನಾಂತ ನಿಮಗೆ ಅನ್ನಹಣದ ದಾಹ ಆಗಿರಬೇಕು’

‘ತಾನು ಇದು ಕನಸೆ ಸರಿ’, ‘ನಿಂಗೆ ಉಪಕಾರ ಮಾಡಿದ್ದಾರೇಂತ ಅವನು ಒಳ್ಳೆ ಯವನೂಂತ’

‘ಈವತ್ತು ತಡೆ’ ‘ಅವನು ಅವಳಿಗೆಂದು ಎದ್ದ’

‘ತನ್ನ ಚಿಕ್ಕತನದಲ್ಲಿ ತಾನು ಯೋಚಿಸಿದ್ದಕ್ಕೂ ಮಿತಿ ಮೀರದೆ ನಿಂಗೆ’

‘ಆ ಕಾಲದ ಕೆರಾಳ ಕುಣಿತಕ್ಕೆ ಆಳುದಿನ ಮೇಳತಾಳ ಹಾಕೋದೊಂದೇ ನಮ್ಮ ಕರ್ತವ್ಯ’

‘ಅಮಾನುಷ ಇತಿಹಾಸ ಅವಳಿಗಿದ್ದ ಅಲ್ಪಶಾಂತಿಗೂ ಭಂಗಪ್ರಭಂಜನವಾಯಿತು’

‘ನಾನು ಹೇಳಿದ ವಿಷವನ್ನ ಸುಬ್ಬಮ್ಮನ ಮುಂದೆ’

‘ಅದೊಂದು ಸುಶ್ಮಾನ ಆ ನಡುರಾತ್ರಿಯ ಮೌನಸುತ್ತಿತ್ತು’

‘ದಾರಿದ್ರಕ್ಕೆ ಮೈ ಭೋಗದ ದಾಹ’

‘ಅವನ ವಯಸ್ಸು ಇಪ್ಪತ್ತಕ್ಕೆ ಮೀರಿಲಿಲ್ಲವಾದರೂ ಅವನ ಅನುಭವ ಐವತ್ತರ ಪ್ರಾಯದವರ ಅನುಭವವಿದ್ದಷ್ಟು ಇದ್ದಿತ್ತು’

-ಈ ಬಗೆಯ ಅರ್ಥ, ವ್ಯಾಕರಣ, ವಾಕ್ಯರಚನೆಯ ಸೌಷ್ಠವಗಳನ್ನು ಸಂಹಾರ ಮಾಡಿ ವಿಜೃಂಭಿಸುವ ಸಾಲುಗಳು ಗ್ರಂಥದ ಆರಂಭದಿಂದ ಅಂತ್ಯದವರೆಗೂ ಇವೆ. ಮೇಲೆ ಉದಾಹರಿಸಿದ ವಾಕ್ಯಗಳಲ್ಲಿ ಕಡೆಯದು ಒಂದು ಪಾತ್ರವನ್ನು (ಶಂಕರ) ಪರಿಚಯಿಸುವ ವಾಕ್ಯ. ಇಡಿಯ ಕಾದಂಬರಿ ಓದಿದ ಮೇಲೆ ಎಲ್ಲೂ ಇದರ ಪುಷ್ಠಿ ದೊರೆಯುವುದಿಲ್ಲ. ಈ ಪಾತ್ರದ ಸ್ಪಷ್ಟ ಕಲ್ಪನೆಯೂ ಇಲ್ಲ. (ಈ ಮಾತು ಇವರ ಇತರ ಕೃತಿಗಳ ಕೆಲವು ಪಾತ್ರಗಳಿಗೂ ಅನ್ವಯಿಸುತ್ತದೆ). ಹೋದ ಪುಟ್ಟ ಬಂದ ಪುಟ್ಟ ಎಂಬಂತಿದೆ. ಅವನಿಗೆ ದಿನಕ್ಕೊಂದು ಕಾರು ಇತ್ತೆಂದೂ, ಇದೇ ತನ್ನ ಕಾರು ಎದು ನಿಗದಿಯಾಗಿ ಅವನೇ ಹೇಳುವಂತಿರಲಿಲ್ಲವೆಂದೂ, “ಅವನ ಯಜಮಾನಿಕೆ ಐಶ್ವರ್ಯ ಸಂಸಾರ ಎಲ್ಲವೂ ಕ್ಷಣಿಕ, ಅವನಿಗೆ ಅದರಲ್ಲಿ ನಂಬಿಕೆಯಿರಲಿಲ್ಲ” ಎಂದೂ ಒಂದು ಕಡೆ ಪರಿಚಯಿಸುತ್ತಾರೆ. ಆದರೆ ಅದನ್ನು ಮುಂದೆ ಮರೆತೇಬಿಡುತ್ತಾರೆ.

ವಸ್ತುವಿನ ಮೇಲೆ ಹಿಡಿತವಿಲ್ಲ, ಹಿನ್ನೋಟ ಮುನ್ನೋಟ – ಯಾವ ನೋಟವೂ ಇಲ್ಲ. ‘ಬಿಳಿಯ ದಂತದ ಮೈ ಬಣ್ಣದ ಕೃಶಾಂಗಿ’ (ಕರಿಯ ದಂತವೂ ಇದೆಯೇ?) ಎಂದು ಬರೆದು ಅದರ ಮುಂದಿನ ವಾಕ್ಯದಲ್ಲಿ ಅದನ್ನೇ ಕನ್ನಡದ ಮಾತುಗಳಲ್ಲಿ ಹೇಳುತ್ತಾರೆ ‘ತೆಳ್ಳಗೆ ಬೆಳ್ಳಗೆ ಇದ್ದಳು’ ; ಏನು ವ್ಯತ್ಯಾಸವಾಯಿತು? ಯಾವ ಸಾಧನೆ ಆಯಿತು? ಶಂಕರ ರಾಜನಿಗೆ ತನ್ನ “ಸಂಖ್ಯೆ (‘ಮಾರ್ಡನ್ ಕೆಫೆಯ ಮರನೆಯ ಮಹಡಿಯ ಮೇಲಿನ ಸೋಗಸಾದ’) ಕೋಣೆಯ ನಂಬರು ಹನ್ನೊಂದು’ ಎಂದು ಹೇಳುತ್ತಾನೆ; ‘ರೂಮು ನಂಬರು ಹನ್ನೊಂದು.’ ಅದರ ಮುಂದಿನ ಪ್ಯಾರಾದಲ್ಲೇ ಅದು ‘ನೂರ ಹನ್ನೊಂದು’ ಆಗಿರುತ್ತೆ. ತಮ್ಮನ್ನು ಕಾರಿನಲ್ಲಿ ಕರೆದುಕೊಂಡು ಹೋಗಲು ತೊಂದರೆ ಶಂಕರನಿಗೆ ಏಕೆಂದು ಹೇಳಿದ ರಾಜ ನಾಲ್ಕು ವಾಕ್ಯವಾದ ಮೇಲೆ (ಶಂಕರ ಮತ್ತೆ ಕರೆಯದಿದ್ದರೂ ತಾನಾಗಿ) ‘ಇನ್ನರ್ಧಗಂಟೆ, ಅಮೇಲೆ ಹೊರಟು ಬಿಡೋಣ’ ಎಂದು ನಿಲ್ಲಿಸಿಕೊಳ್ಳುತ್ತಾನೆ.

ಗೌಡರಿಗೆ “ಚೌಡವನ್ನು ಬಂದು ಪ್ಲೇಡಿನಲ್ಲಿಟ್ಟು” ಕಳಿಸಿದ ಮೇಲೆ ‘ಬಟ್ಲರ್ ಬಂದು ಪ್ಲೇಟಿನಲ್ಲಿಟ್ಟು’ ಮುಂದಿಟ್ಟನಂತೆ, ರೂಮ್ ಬಾಯ್ (ಬಟ್ಲರ್ ಎಲ್ಲಿಹೋದ? ಈ ರೂಮ್ ಬಾಯ್ ಯಾವಾಗ ಬಂದ ಗೊತ್ತಾಗದು) ಗೌಡರ ಬ್ರಾಂದಿ ದಾಹವನ್ನೂ, ನಡತೆಯನ್ನೂ ಖಂಡಿಸಿ ನಿಂದಿಸಿ ಯೋಚಿಸಿದನಂತೆ – “ಯಜಮಾನ ಆ ಹೋಟಲಿಗೆ ಯಜಮಾನ ತಮಗೆ ಅನ್ನ ಕೊಟ್ಟವರು, ಅವರ ಬಗ್ಗೆ ದುರಾಲೋಚನೆ ನಡೆಸುವುದೆ ತಪ್ಪು”. ಇಲ್ಲಿ ಯಜಮಾನನ ಪ್ರಸ್ತಾಪದ ಧಾಟಿಯೇ, ಆಕಾಶವಾಣಿಯಾದಂತೆ ಬರುತ್ತದೆ.

ಲೇಖಕಿ ಕುಡಿತದ ವಿವರಗಳನ್ನೂ ತಪ್ಪಾಗಿ ಸಂಗ್ರಹಿಸಿದ್ದಾರೆ. ಗೌಡ ಒಂದು ಸಲಕ್ಕೆ ಆರೇಳು ಬಾಟಲಿ ಬ್ರಾಂದಿ ಕುಡಿಯುತ್ತಾನಂತೆ. ಬ್ರಾಂದಿ ಕುಡಿದವರು ತೂರಾಡುತ್ತಾರೆ. ಅಮಲಿನಲ್ಲಿರುತ್ತಾರೆ, ತೊದಲುತ್ತಾರೆ -ಎಂದೆಲ್ಲಾ ಬರೆದಿದ್ದಾರೆ. ಶಂಕರ ತೂರಾಡಿಕೊಂಡೇ ಕೋಣೆಯ ಬಾಗಿಲು ತೆಗೆದುನೋಡಿದರೆ ಮಲ್ಲಿಯೇ ಬಂದಿರುತ್ತಾಳೆ. ಅರೆ, ರಾಜ ಎಲ್ಲಿ ಹೋದ ಎಂದು ಅನುಮಾನಿಸಿದವರಿಗೆ ಅವನು ‘ಹೃದಯಾಘಾತದಿಂದ ತೀರಿಕೊಂಡ್ರು’ ಎಂಬುದು ತಿಳಿಯುತ್ತೆ. ಅದನ್ನು ಕೇಳಿ ‘ಹ್ಞೂ’ ಎಂದು ಶಂಕರ ನುಡಿದು ‘ಹಾ ರಾಜ ತೀರಿಕೊಂಡನೇ’ ಎಂದು ಕೇಳೂತ್ತಾನೆ. ‘ಪಾಪ ಇದ್ದಕ್ಕಿದ್ದಂತೆ ಸತ್ತು ಹೋದ್ನೇ ಅನ್ಯಾಯವಾಗಿ ಎಂಬ ಸಾಲಿದೆ. ಅದು ಯಾರು ಹೇಳಿದ್ದೊ ತಿಳಿಯುವುದಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಶಂಕರ ಮಲ್ಲಿಗೆ ಕೇಳಿದ ಪ್ರಶ್ನೆ – ‘ಕಾಫಿ ಕುಡೀತೀರೋ ಟೀ ಸೇವಿಸ್ತೀರೋ?” (ಕಾಫಿಯನ್ನು ಕುಡಿಯುತ್ತಾರೆಂದೂ ಟೀಯನ್ನು ಸೇವಿಸ್ತಾರೆಂದೂ ಹೊಸ ಸಂಶೋಧನೆ ಮಾಡಿದ್ದಾರೆ). ಮಲ್ಲಿಗೆ ಯಾವ ಸಂಕೋಚವೂ ಇಲ್ಲವೆಂದು ಅವಳು ಕೊಟ್ಟ ಉತ್ತರದಿಂದ ಮನದಟ್ಟಾಗುತ್ತದೆ “ಎರಡೂ ಸೇರುತ್ತೆ ನಂಗೆ ಯಾವುದೂ ಸೇರೋಲ್ಲಾಂತ ಇಲ್ಲ” ಅವಳನ್ನು ಶಂಕರ (ಕುಡಿದಿದ್ದರೂ) ಬಹುವಚನದಲ್ಲೇ ಮಾತನಾಡಿಸುತ್ತಿದ್ದವನು ಒಂದು ಪುಟ ದಾಟುವುದರೊಳಗೆ ಏಕವಚನಕ್ಕಿಳಿದಿರುತ್ತಾನೆ; ‘ನಿಂಗೆ ಈ ಸ್ವರ್ಗ ಬೇಖದ್ರೆ ನಾನು ಹೇಳಿದ ಹಾಗೆ ಕೇಳಲೇಬೇಕು’ ಎಂದು ಅವಧಾರಣೆಯ ಧೋರಣೆಯಿಂದ ಹೇಳುತ್ತಾನೆ.

ತಾನು ಯೋಚನೆಮಾಡಿ ಮರುದಿವಸ ತಿಳಿಸುವುದಾಗಿ ಹೇಳಿದ ಮಲ್ಲಿ ಕಾಫಿ ಕುಡಿದ ಕೂಡಲೇ (ಕ್ಷಮಿಸಿ, ‘ಕಾಫಿಯನ್ನು ಹೀರಿದಳು’) ಇಬ್ಬರೂ ಅದುವರೆಗಿನ ಸಂಭಾಷಣೆ ಮರೆತು ನಾಲ್ಕನೆಯ ಮಹಡಿಗೆ ಕ್ಯಾಬರೇ ನೃತ್ಯ ನಡೆಸುವ ಸ್ಥಳಕ್ಕೆ ಹೋಗುತ್ತಾರೆ. “ಹಾಗಿದ್ರೆ ಪ್ರಯತ್ನ ಪಡ್ತೀನಿ’ ಅಂತ ಅಂದೇ ಆಗಲೇ ಒಪ್ಪಿಗೆ ಕೊಡುತ್ತಾಳೆ. ತಿಳಿಸಿದ ಕೂಡಲೇ ಬರುವುದಾಗಿ ಸಮ್ಮತಿಸಿ ಮನೆಗೆ ಹೊರಡುತ್ತಾಳೆ. ಪಾಪ. ತನ್ನ ಎಲ್ಲ ಷರತ್ತುಗಳಿಗೂ ಬೇಷರತ್ತಾಗಿ ಒಪ್ಪಿಗೆಕೊಟ್ಟ ಬಡ ಮಲ್ಲಿಗೆ ಮನೆಗೆ ಹೊರಟಾಗ ಮೊದಲಸಲದಂತೆ ಕಾರಿನಲ್ಲಿ ಬಿಟ್ಟುಬರಲು ಶಂಕರ ಮರೆತುಹೋದದ್ದು ಕುಡಿತದ ಪರಿಣಾಮವೇ? “ಹಲವು ಕಾರುಗಳೊಡೆಯ’ನಿಗೆ ಕಾರು ಇರಲಿಲ್ಲವೆ? ಹಿಂದೆ ಅವನ ಪರಿಚಯ ಓದುಗರಿಗೆ ಆದಾಗ, ಹುಲ್ಲಿನ ಮೇಲೆ ಆಡುತ್ತಿದ್ದ ಮಗುವಿಗೆ ಕ್ಯಾಡ್ ಬರೀಸ್ ಚಾಕಲೇಟು ಕೊಟ್ಟಿದ್ದ. ಭಿಕ್ಷುಕನಿಗೆ ಎರಡು ರೂಪಾಯಿ ನೋಟು ಕೊಟ್ಟಿದ್ದಲ್ಲದೆ (ಅವನು ಚಿಲ್ಲರೆ ಇಲ್ಲ ಸ್ವಾಮಿ ಎಂದದ್ದಕ್ಕೆ) ಚಿಲ್ಲರೆ ಇಲ್ಲವೇ ಮೂರ್ಖ. ನಿನ್ನ ಚಿಲ್ಲರೆ ಕೇಳಿದವರ‍್ಯಾರೂಂತ, ಅಷ್ಟೂ ನಿನ್ನದೇ’ ಎಂದು ಬಡಬಡಿಸಿದ್ದ. ಈಗ ಆ ಔದಾರ್ಯದ ಒರತೆ ಬತ್ತಿತೆ? ಇಂಥ ವಿಚಾರಸರಣಿ ಇವರ ಕೃತಿಗಳಿಗೆ ಕೊಂಡಿಹಾಕಿಕೊಂಡಿಲ್ಲ.

ಈ ಮಧ್ಯೆ ಕ್ಯಾಬರೇ ನರ್ತಕಿಯರ ಶಿಕ್ಷಕಿ ಸುಬ್ಬಮ್ಮನ ಪಾತ್ರ ಚಿಂದಿ ಚಿಂದಿಯಾಗಿ ಬರುತ್ತದೆ. ಅವಳ ಕಥೆ ಕೇಳಿ ವ್ಯಥೆಪಟುವ ಪಾಡು ಓದುಗರದು, ಆಕೆ ತರುಣಿಯಾಗಿದ್ದಾಗ ತಾಣು ದುಡಿಯುವ ಕಚೇರಿಯಲ್ಲೇ ಇದ್ದ ಯುವಕ ರಂಗಯ್ಯನಗೆ ತನ್ನನ್ನೇ ಅವಳು ತೆತ್ತುಕೊಂಡಳಂತೆ. ಅವನ ಫಲಹೊತ್ತು ಮುಂದೆ ಬೆಳಗಾವಿಗೆ ಅವನನ್ನು ಅರಸಿಕೊಂಡು ಹೋದಾಗ ತನ್ನ ಪರಿಚಯವೇ ಇಲ್ಲದಂತೆ ನಟಿಸಿದ ರಂಗಯ್ಯ ‘ಬೇಕಿದ್ರೆ ನಾಲ್ಕಾಣೆಯನ್ನು ಕೊಡ್ತೀನಿ ತಗೊಂಡು ಹೋಗು’ ಎಂದು ಹೇಳಿ ‘ತನ್ನ ಜೇಬಿನಿಂದ ಒಂದು ರೂಪಾಯನ್ನ ತೆಗೆದು’ ಎಸೆದನಂತೆ.

ಈ ಕಾದಂಬರಿ ಬರೆಯುವ ಲೇಖಕಿಗೇ ಕಡೆಕಡೆಗೆ ತಮ್ಮ ಬರೆಹದಿಂದ ಬೇಸರ ಬಂದಂತೆ ತೋರುತ್ತದೆ. ಅದಕ್ಕೆ ಅವರು ಬರೆಹದ ದಾರಿಯನ್ನೇ ಬದಲಾಯಿಸುತ್ತಾರೆ. (ಲೇಖಕಿಗೆ ಎಲ್ಲಾ ಸ್ವಾತಂತ್ರ್ಯವಿದೆ. ಇದು ಅವರ ಕಾದಂಬರಿಯಲ್ಲವೆ? ಸರಿ. ಪತ್ತೇದಾರಿ ದಾರಿ ಹಿಡಿದರೆ ಹೇಗೆ? ಎಂಬ ಯೋಚನೆ ಬಂದು ಅದನ್ನು ಪ್ರಯತ್ನಿಸಿ ನೋಡುತ್ತಾರೆ (ನಾಳೆ ಒಂದು ಪತ್ತೇದಾರಿ ಬರೆಯಬೇಕಾಗಬಹುದು):

“ಕರಾಳ ರಾತ್ರಿ –

ಆ ರಾತ್ರಿಯಲ್ಲಿ ಭೀಕರವಾದ ನಾಯಿಯೊಂದು ಅರಚುತ್ತಿತ್ತು ಒಂದೇ ಸಮನೇ ಅಮಾವಾಸ್ಯೆಯ ದಿನದಂದು ಬೀದಿಯ ದೀಪಗಳೂ ತಮ್ಮ ಶಕ್ತಿಯನ್ನು ಕಳೆದುಕೊಂಡಿದ್ದವು. ನಕ್ಷತ್ರಗಳು ಎಲ್ಲೋ ಒಂದೊಂದು ಮಿನುಗುತ್ತಿದ್ದವು.

ಆ ಅಪರಾತ್ರಿಯಲ್ಲಿ ವ್ಯಕ್ತಿಯೊಂದು ಬಿಳಿಯ ಉಡುಪುತೊಟ್ಟು ಸರಸರನೆ ನಡೆದಿತ್ತು. ಗೊತ್ತುಗುರಿಯಿಲ್ಲದ ಸ್ಥಳಕ್ಕೆ. ಏಕಾಂಗಿಯಾಗಿ ಈ ಆ ವ್ಯಕ್ತಿ ಸಾಗಲು ಕಾರಣವೇನೆಂಬುದನ್ನು ಅರಿಯಲು ಯಾರೂ ಇರಲಿಲ್ಲ. ಬೀದಿಯಲ್ಲಿ.

ನಡಿಗೆ ಆಗಾಗ್ಗೆ ತುಸು ನಿಧಾನವಾಗುತ್ತಿತ್ತು. ಮತ್ತೆ ವೇಗವಾಗತೊಡಗಿತ್ತು.

ಹೋಗುತ್ತಲಿದ್ದ ವ್ಯಕ್ತಿ ಇದ್ದಕ್ಕಿದ್ದಂತೆಯೇ ಓಡತೊಡಗಿತು…. ಹತ್ತು ಹದಿನೈದು ನಿಮಿಷಗಳು ಕಳೆದಿವೆ. ಓಡುತ್ತಿದ್ದ ವ್ಯಕ್ತಿ ಕೆರೆಯ ಏರಿಯಿಂದ (ಅರೆ, ಕೆರೆ ಹತ್ತಿದ್ದು ಯಾವಾಗ? ಕತ್ತಲಲ್ಲವೆ? ಲೇಖಕಿಗೆ ಸರಿಯಾಗಿ ಗೊತ್ತಾಗಲಿಲ್ಲ) ಕೆರೆಯ ಕಟ್ಟೆಯ ಮೆಟ್ಟಿಲುಗಳನ್ನು ಇಳಿಯತೊಡಗಿತ್ತು. ವಿಕಾರವಾದ ನಾಯಿಯ ಕೂಗು. ನಿರ್ಜನವಾದ ಪ್ರದೇಶ. ಇನ್ನೇನು ಕೆರೆಯೊಳಗೆ ಆ ವ್ಯಕ್ತಿ ಧುಮುಕಬೇಕು… ಹಿಂದಿನಿಂದ ಯಾರೋ ಹಿಡಿದು ಜಗ್ಗಿದಂತಾಯ್ತು…”

ಆ ಯಾರೋ ಅಲ್ಲಿಗೆ ಅದೇ ವೇಳೆಗೆ ಬಂದುದೇಕೆ? ಆತನೂ ಅವಳಂತೆ ಕೆರೆಗೆ ಬೀಳಲು ಬಂದನೆ? ಮುಂದಿನ ಕಥೆಯನ್ನು ರಜತಪರದೆಯ ಮೇಲೆ ನೋಡಿ ನಲಿಯ ಬಹುದು. ಇದೂ ಚಲನಚಿತ್ರವಾದರೆ ಅಚ್ಚರಿಯಿಲ್ಲವಾದುದರಿಂದ.

ಈ ಕಾದಂಬರಿಯಲ್ಲಿ ಏನಿಲ್ಲ? ಮಲ್ಲಿ – ಮಲ್ಲಿಕಾ – ಮಾತಾ ಮಲ್ಲೇಶ್ವರಿ ಇದ್ದಾಳೆ. ಜ್ಯೋತಿ ರೀಟಾದಿ ಕ್ಯಾಬರೆ ನರ್ತಕಿಯರಿದ್ದಾರೆ. ಪುಡಾರಿ ಕೃಷ್ಣೇಗೌಡ ಇದ್ದಾನೆ. ಸುಬ್ಬಮ್ಮ. ಸಾಹಿತಿ ರವೀಂದ್ರ (ಹೀಗೆ ಬಂದು ಹಾಗೆ ಸಾಯುತ್ತಾನಂತೆ) ಖಳನಾಯಕನಂತೆ ಭುಜಂಗರಾಯ – ಇದ್ದಾರೆ. ಶಂಕರನನ್ನು ಬಿಟ್ಟು ಒಮ್ಮೆಲೇ ಮಲ್ಲಿಕಾ ಮಧುವಿನೊಡನೆ ಮೈಮಾರಿ ಹೊರಟಿದ್ದಕ್ಕೆ ಬುಡವೇ ಇಲ್ಲ – ಇತ್ಯಾದಿ ವಿಮರ್ಶೆಯನ್ನು ಬದಿಗೊತ್ತಬಹುದು. ಇವರು ಬಯಸುವುದು ಪ್ರಶಂಸೆ, ವಿಮರ್ಶೆ ಅಲ್ಲ.

ಕಾಕೋಳು ಕಾದಂಬರಿಗಳು ಕನ್ನಡ ಕಾದಂಬರಿ ಪ್ರಕಾರದಲ್ಲಿ ಅವಸರದ ಹೆರಿಗೆ. ಇದನ್ನು ಅವರ ಇನ್ನೊಂದು ಕಾದಂಬರಿ ಪುರಾವೆಯಿತ್ತು ಸ್ಥಿರಪಡಿಸುತ್ತದೆ.

ಗುಂಡಣ್ಣ-ಭಾಗೀರಥಿ ಎಂಬ ದಂಪತಿಗಳಿಗೆ ಬಹುಕಾಲ ಮಕ್ಕಳಾಗಲಿಲ್ಲ. ಭಾಗೀರಥಿ ಗಮಡನಿಗೆ ಬೇರೆ ಮದುವೆ ಮಾಡಿಕೊಳ್ಳಲು ಹೇಳಿದಳು. ಅವರು ಒಪ್ಪದೆ ಅವಳನ್ನು ಅಪ್ಪಿ ಮಲಗಿದ ಅಂದೇ ಗರ್ಭನಿಂತಿತು. ಮುದ್ದಾದ ಮಗು ಹುಟ್ಟಿತು. ಸುಬ್ಬು ಎಂದು ಹೆಸರಿಟ್ಟರು. ಅವನಿಗೆ ಒಂದು ಸಲ ಕಾಯಿಲೆ ಆಯಿತು. ಕಣ್ಣೂ ಹೋಯಿತು. ಹಾಡು ಒಲಿಯಿತು. ಸರಸು ಮೆಚ್ಚಿದಳು. ಮದುವೆ ಆಯಿತು. ಸುಬ್ಬನಿಗೆ ಶಸ್ತ್ರಚಿಕಿತ್ಸೆ ಆಯಿತು. ಕಣ್ಣೂ ಬಂತು. ನಾಗರಾಜ ಎಂಬ ಸ್ನೇಹಿತ ಇವನಿಗೆ ನಗರದಲ್ಲಿ ಸಂಗೀತ ಕಲಿಸಲು ಮನೆ ಗೊತ್ತುಮಾಡಿಕೊಟ್ಟ. ಸುಂದ್ರಮ್ಮನ ಮಗಳು ನೀಲಳೇ ಶಿಷ್ಯೆ. ಮೊದಲ ದಿನವೇ ಇಬ್ಬರಿಗೂ ಆಕರ್ಷಣೆ. ಒಂದು ದಿನ ಭಾರೀಮಳೆ. ನೀಲಳ ಒತ್ತಾಯದಿಂದ ಅವಳ ಮನೆಯಲ್ಲೇ ಅಂದು ಉಳಿದುಕೊಂಡ. ನೀಲ ಗೆದ್ದಳು. ಅವಳ ಒಡನಾಟದಲ್ಲಿ ಸುಬ್ಬ ಸರಸುವನ್ನು ಮರೆತ. ಒಂದು ದಿನ ಅವನು ಲಾರಿಗೆ ಸಿಕ್ಕಿ ‘ಜಖಂ ಆಯಿತು. ಅವಳನ್ನು ಊರಿಗೆ ಸಾಗಿಸಿದರು. ‘ಸರಸಿಯ ಕೈ ಬಲವಾಗಿ ಹಿಡಿದು ಸುಬ್ಬು ನಿಟ್ಟಸಿರು ಬಿಟ್ಟ’

ಈ ಕಥೆ ಇನ್ನೂ ಅಡ್ಡಾದಿಡ್ಡಿ ನಡೆದಿದೆ. ದೇವರಗೊಂಬೆ ಎಂಬ ಹೆಸರಿನ (?) ಈ ಕಾದಂಬರಿಯಲ್ಲಿ ಬರುವ ಭಾಗೀರಥಿ ಗೌರಿ ಸರಸು ಜಾನಕಮ್ಮ ಗುಂಡಣ್ಣ ನಾಗಜ್ಜಿ ಭೀಮರಾಯ ಶ್ಯಾಮರಾಯ ಪುಟ್ಟೇಗೌಡ ಪಂಡಿತರು ವೆಂಕಣ್ಣ ಮೇಷ್ಟ್ರು ಸುಬ್ಬು-ಎಲ್ಲ ನಿರ್ಜೀವ ಬೊಂಬೆಗಳು. ತೊಗಲುಗೊಂಬೆ ಅಟವಾದರೂ ನೂರುಪಟ್ಟು ಮೇಲು ಕಥೆ ೧೪೪ ಪುಟಗಳಷ್ಟಿದೆ. ಅದರಲ್ಲಿ ಬೆಳವಣಿಗೆಯೇ ಇಲ್ಲ. ಮಕ್ಕಳಿಲ್ಲದ ಭಾಗೀರಥಿ ತನ್ನ ಗಂಡ ಗುಂಡಣ್ಣನೆದರು ಆತ ಇನ್ನೊಂದು ಮದುವೆ (ಸೀತಕ್ಕನ ಮಗಳು ರುಕ್ಮಿಣಿಯನ್ನು) ಮಾಡಿಕೊಳ್ಳಲು ಒಪ್ಪಿಸುವ ಸನ್ನಿವೇಶವನ್ನು ಓದಬೇಕು. ಅದೆಷ್ಟು ಅಸಹಜವಾಗಿ ಬರೆಯುತ್ತಾರೆಂದು ತಿಳಿಯುತ್ತದೆ.

ನಾಗರಾಜ ಹೇಳಿದ ಒಂದು ಮಾತಿನಿಂದಲೇ ಸುಬ್ಬು ತಂದೆತಾಯಿಯನ್ನು ಬಿಟ್ಟು ಬೇರೆ ಸಂಸಾರಹೂಡಲು ನಿರ್ಧರಿಸುತ್ತಾನೆ (ಮತ್ತಾವ ಪೂರ್ವಭಾವೀ ಘಟನೆಗಳಿಲ್ಲದೆ) ತಲೆಜುಟ್ಟು, ಕಿವಿಯೋಲೆ ತ್ಯಜಿಸಿ ಕ್ರಾಪುಬಿಡಲು ಒಪ್ಪುತ್ತಾನೆ. ಸುದ್ರಮ್ಮನ ಮಗಳು ನೀಲಳಿಗೆ ಸಂಗೀತ ಹೇಳಿಕೊಡಲು ಹೋದ ಮೊದಲದಿನವೇ ಅವಳ ಮೇಲೆ ಮೋಹಿತ ನಾಗುತ್ತಾನೆಂಬುದಂತೂ. ಅದುವರೆಗಿನ ಅವನ ಪಾತ್ರ ಚಿತ್ರಣದಿಂದ, ಊಹೆಗೂ ನಿಲುಕದ್ದು ಅವನು ಅಂತಹವನೆಂಬ ಸೂಚನೆ ಎಲ್ಲಿಯೂ ಇಲ್ಲ. ಕುರುಡನಾಗಿದ್ದರೂ ತನ್ನನ್ನು ಮೆಚ್ಚಿ ಕೈಹಿಡಿದ ಸರಸು ಕಪ್ಪು. ಈ ನೀಲ ಬೆಳದಿಂಗಳು ಎಂದು ಹೋಲಿಸಿಕೊಂಡ ಚಿಂತಿಸತೊಡಗುತ್ತಾನೆ.

ನೀಲ ತಾನಾಗಿ ಬಂದು ‘ಸಾರ್, ನಾನಾಗಿ ಎಂದೂ ಯಾರ ಹತ್ತಿರವೂ ಹೋಗಿಲ್ಲ. ಆದ್ರೆ ಯಾಕೋ ನಿಮ್ಮನ್ನು ನೋಡಿದಾಗಿನಿಂದ ನನ್ನ ಮನಸ್ಸು ತುಂಬಾ ಚಂಚಲವಾಗಿದೆ. ಏನುಮಾಡ್ಲಿ. ನನಗೇನಾದರೂ ಬೇಕು ಅನ್ನಿಸಿದರೆ ಬಿಡೋಕ್ಕೆ ಸಾಧ್ಯವಾಗಲ್ಲ. ಅವಳು ಅವನ ಕೊರಳಿಗೆ ತನ್ನ ತೋಳುಗಳ ಮಾಲೆ ಹಾಕಿದಳು’ ಎಂಬ ನಿರೂಪಣೆಯಿಂದ. ಅವಳು ಅಂಥವಳೆಂಬುದಕ್ಕೆ ಕಾದಂಬರಿಯ ಒಡಲಿನಲ್ಲಿ ಅಂತರಿಕ ಪ್ರಮಾಣಗಳಿಲ್ಲ.

ಸುಬ್ಬು ನೀಲಳ ಬಳಿ ತಾನು ಮಾಡಿರುವುದು ಸರಿಯೇ ಎಂದು ಕೇಳುತ್ತಾನೆ. ಅವಳು ‘ಇದು ಯಾರಿಗೂ ವಂಚನೆ ಮಾಡಿದಹಾಗಿಲ್ಲ ಸಾರ್, ನಾನು ನಿಮ್ಮ ಸಂಗ ಅಪೇಕ್ಷಿಸಿ ಬಂದವಳು. ನನಗೆ ನಿರಾಸೆ ಮಾಡಬಾರದು ನೀವು’ ಎಂದಾಗ ಅವನು ಕೂಡಲೆ ಕೊಡುವ ಉತ್ತರ ‘ನೀಲ ನೀನು ನಿಜವಾಗಿ ಗಂಧರ್ವಕನ್ಯೆ’ ಅವನಲ್ಲಿ ವಂಚನೆಯ ಅರಿವು ಬಂದೇ ಇಲ್ಲ ಎಂಬುದಕ್ಕೆ (೧೪೨ನೆಯ ಪುಟದಲ್ಲಿ) ತಂದೆಯ ಉಪದೇಶಕ್ಕೆ ತೋರುವ ತಾತ್ಸಾರವೇ ಸಾಕ್ಷಿ.

ನೀಲ ರೋಗದಿಂದ ಹಾಸಿಗೆ ಹಿಡಿದು ಮಲಗಿರುತ್ತಾಳೆಂದು ೧೩೩ನೇಯ ಪುಟದಲ್ಲಿ ವರ್ಣಿಸಿ ಅದರ ಮುಂದಿನ ಪುಟಕ್ಕಾಗಲೇ ಲೇಖಕಿ ಇದನ್ನು ಮರೆತು ‘ಅವಳು ಹಾಲು ತರಲು ಒಳಗೆ ಹೊರಟಳು’ ಎಂದು ಬರೆಯುತ್ತಾರೆ. ಅವನು ಹಾಲು ಕುಡಿದು ‘ನೀವು ಮಲಗಿ ವಿಶ್ರಂತಿ ತಗೊಳ್ಳೀ ನಾನಿನ್ನು ಬರ‍್ತೀನಿ’ ಎನ್ನುತ್ತಾನೆ. ಅದಕ್ಕೆ ಅವಳು ಈ ವಿದ್ಯಾಗುರುಗಳ ಬಳಿ ‘ಇರ‍್ಲಿ ಕೂತ್ಲೊಳ್ಳಿ ಸಾರ್, ನಂಗೂ ಬೇಜಾರು’ ಎಂದು ನುಡಿಯುತ್ತಾಳೆ. ಇಬ್ಬರೂ ಚದುರಂಗಕ್ಕೆ ತೊಡಗುತ್ತಾರೆ. ಕೂಡಲೇ ಗುಡುಗು ಮಿಂಚಿನಿಂದ ಕೂಡಿದ ಮಳೆ ಆರಂಭವಾಗುತ್ತದೆ. ಅವರಿಬ್ಬರ ಸಂಭಾಷಣೆ ಅಪೂರ್ವವಾದುದು!

ಈ ವಾಕ್ಯಗಳಲ್ಲಿ ನೋಡಿ :

‘ತಾಯಿಯ ಕರೆ ಬಂದಾಗ ನೀಲ ಹರಿಣಿಯಂತೆ ಒಳಗೋಡಿದಳು. ಮಿಂಚಿನಂತೆ ಸುಬ್ಬುವಿನ ದೃಷ್ಟಿ ಅವಳನ್ನನುಸರಿಸಿತು. ನಾಗರಾಜ ಮನದಲ್ಲಿಯೇ ಅಟ್ಟಹಾಸದಿಂದ ನಕ್ಕ.’

‘ಶಾಮರಾಯರು ಮೊಮ್ಮಗಳನ್ನೂ ಇವನಿಗೆ ಕೊಟ್ಟಾರೇ ಕುರುಡ?’

‘ಅದೇನು ಮಲುಗು. ಎಂತಹ ಶುಶ್ರಾವ್ಯ ಕಂಠಮಾದುರ್ಯ’

-ವಾಕ್ಯಗಳು ಅಪೂರ್ಣವಾಗಿದ್ದು ಹುಚ್ಚುಹಿಡಿದವರು ಏನೇನೋ ಜ್ಞಾಪಿಸಿಕೊಂಡು ಹೇಳುತ್ತಿರುವಂತೆ ಭಾಸವಾಗುತ್ತದೆ. ವಿರಾಮ, ಅಲ್ಪವಿರಾಮ, ಪ್ರಶ್ನಾರ್ಥಕ ಆಶ್ಚರ್ಯಸೂಚಕ ಚಿಹ್ನೆಗಳು ಇರಬೇಕಾದಾಗ ಇರುವುದಿಲ್ಲ ಹಾಗೂ ತದ್ವಿರುದ್ಧವಾಗಿರುತ್ತವೆ. ಭಾಷೆ, ಭಾವ ವಸ್ತು ಎಲ್ಲ ರಾಮನವಮಿಯ ಪಾನಕ!

ಇವರ ಆಶ್ರಯ ಕಾದಂಬರಿ ಕೂಡ ಇದೇ ಮೇಲ್ಪಂಕ್ತಿಯಲ್ಲಿ ನಡೆದಿದೆ. ಇದನ್ನು ಕರ್ನಾಟಕ ರಾಜ್ಯ ಶುಭಾಶಯಗಳೊಡನೆ ‘ಕನ್ನಡ ಕುಲಕೋಟಿಗೆ ಸಮರ್ಪಿಸುತ್ತಿ’ದ್ದಾರಂತೆ (ಕನ್ನಡ ಕುಲಕೋಟಿಗೆ ರಾಜ್ಯೋತ್ಸವದಂದು ಎಂಥ ಕೃತಿ ಕಾಣಿಕೆ! ಎಂದು ನಿಡುಸುಯ್ಯುವಂತಾಗುತ್ತದೆ). ಆಶ್ರಯ ಕಾದಂಬರಿ ಅವ್ಯವಸ್ಥೆಯ ತೊಪ್ಪೆ. “ರೋಹಿಣಿ ಕಾರಿನ ಕಿಟಕಿಯಿಂದಾಚೆಗೆ ಮುಖತೂರಿದಳು. ಮನಸ್ಸು ಎತ್ತಲೋ ಹಾರಾಡುತ್ತಿತ್ತು. ಆದರೆ ದೇಹ ಇಂದು ಯಾವುದೋ ಕಾಣದ ಸ್ಥಳಕ್ಕೆ ಧಾವಿಸುತ್ತಿದೆ.” ಮುಖ ತೂರುವುದೂ ದೇಹ ಧಾವಿಸುವುದೂ ಹೊಸ ಸಂಗತಿ. ಅವಳ ಅಪ್ತ ಗೆಳತಿ ಸುಶೀಲ ರೋಹಿಣಿಯ ಗುಂಗುರು ಕೂದಲನ್ನು ಚೆಲುವನ್ನೂ ಕುರಿತು ಹೇಳಿದ್ದಳಂತೆ. ಅವಳು ಯಾರೋ ತಿಳಿಯದು. “ತಾನೀಗ ಕುಳಿತಿರುವುದು ಪೂರ್ಣ ಪ್ರಸಾದದ ಒಡತಿ ಜಾನಕಮ್ಮನವರ ಕಾರಿನಲ್ಲಿ” ಎಂಬ ಅರಿವಿದೆ. ಆದರೆ ಮುಂದಿನ ಪುಟದಲ್ಲೇ “ಜಾನಕಮ್ಮ ತಾನು ಆಕೆಯ ಹೆಸರು ಕೇಳುತ್ತಿರುವುದು ಇದೇ ಮೊದಲ ಆಕೆ ಹೇಗಿರುವರೋ ಅವರ ಸ್ವಭಾವ ಹೇಗೋ?” ಎಂದು ಬರೆದಿದೆ.

ಕಾದಂಬರಿಕಾರ್ತಿ ಅದೆಷ್ಟು ಮರಗುಳಿಯದೆ ಬರೆಯುತ್ತಾರೆಂಬುದಕ್ಕೆ ಇಂತಹ ನಿದರ್ಶನಗಳನ್ನು ಹೆಸರಿಸಬಹುದು. ಅವನ್ನೆಲ್ಲ ಕನ್ನಡಿ ಹಿಡಿದು ಬಿಂಬಿಸುವ ಒಂದು ನಿದರ್ಶನ; “ಡ್ರೈವರ್ ರಾಮಯ್ಯ ಮುಖಸಿಂಡರಿಸಿ, ಮೀಸೆತೀಡಿ ನುಡಿದ ‘ಕೈಲಿರೋ ಕಿಟ್ಟನ್ನು ಸೀಟಿನ ಮೇಲಿಡಬಾರದೇ ರೋಹಿಣಿ. ಏನಿದೆ ಅದರಲ್ಲಿಂತ ಅದ್ನ ಭದ್ರಪಡಿಸುತ್ತಾ ಇದ್ದಿಯೋ ನಾನು ಬೇರೆ ಕಾಣೆ’ ಎಂದನಂತೆ. ಇಲ್ಲಿ ಮೊದಲನೆಯದಾಗಿ ಅವರಿಬ್ಬರಿಗೂ ಅದೇ ಪ್ರಥಮ ಪರಿಚಯ; ಮುಖ ಸಿಂಡರಿಸಿಕೊಳ್ಳುವುದಕ್ಕೂ ಮೀಸೆ ತೀಡುವುದಕ್ಕೂ ರೋಹಿಣಿಯನ್ನು ಏಕವಚನದಲ್ಲಿ ಸಲುಗೆ ದರ್ಪಗಳಿಂದ ಮಾತನಾಡಿಸುವುದಕ್ಕೂ ಸಂಬಂಧ ಹಿನ್ನೆಲೆ ಸನ್ನಿವೇಶ ಏನೆಂದೂ ಅರ್ಥವಾಗುವುದಿಲ್ಲ. ಅಲ್ಲೇ ಬರುವ “ಕಾರಿನ ಚಕ್ರಕ್ಕೆ ಜೀವ ತೆರೋಕ್ಕೆ ಬಂದು ದರಿದ್ರಮುಂಡೇದು ಸಾಯೋಕ್ಕೆ ಈ ಕಾರೇ ಬೇಕಾಯ್ತೇನೋ?” ಎಂಬುದನ್ನು ಯಾರು ಯಾರಿಗೆ ಹೇಳಿದರೆಂಬುದು ಕಡೆಗೂ ತಿಳಿಯುವುದಿಲ್ಲ. ಸಂದರ್ಭ ಬಲದಿಂದ ವಾಹನಚಾಲಕ ರೋಹಿಣಿಗೇ ಹೇಳೀರಬೇಕೆಂದು ಊಹಿಸಿಕೊಳ್ಳಬಹುದು. ಆದರೆ ಇಡೀ ಕಾದಂಬರಿಯಲ್ಲಿ ಮತ್ತೆಲ್ಲಿಯೂ ಇದರ ಪ್ರಸ್ತಾಪ ಅಥವಾ ಸುಳಿವು ಸಿಗದೆ ಊಹೆ ಹಾಗೆಯೇ ಉಳಿಯುತ್ತದೆ.

ದಾವಣಿಗತ್ತು, ವಿಷಯ, ದುಃಖಿಸಿದಳು, ಆಕರ್ಷಕ ವ್ಯಂಗರಾಘನು ಏಳು ಬಂದವಳು ಇಲ್ಲೇನು ಕೆಲಸ. ಒಡಿವೆ, ಮ್ಯೂಜಿಯಂ ಮುಂತಾದ ಹಲವಾರು ಪ್ರಯೋಗಗಳು ಕೇವಲ ಅಚ್ಚಿನ ತಪ್ಪುಗಳಲ್ಲ, ಅವರ ಗ್ರಂಥಗಳುದ್ದಕ್ಕೂ ಈ ಹೇಳಿಕೆ ಸಮರ್ಥಿಸುವ ಗಟ್ಟಿ ಆಧಾರಗಳಿವೆ. ರಾಜ ಎಂಬಾತ ರೋಹಿಣೀಯನ್ನು ತನ್ನ ಮನೆಗೆ ಮತ್ತೊಮ್ಮೆ ಬರುವಂಥೆ ಕೇಳಿದ. ಅವಳು ‘ಬಂದ್ರೆ ಏನು ಕೊಡ್ತೀರಿ?’ ಎಂದು ಕೇಳಿದ್ದಕ್ಕೆ ಅವನ ಉತ್ತರ ‘ನಿಂಗೆ ಸ್ನೇಹ ನಾಲ್ಕು ಜನರ ಸಂಗಸುಖ ಬೇಕಲ್ಲವೆ?’ ಅದಕ್ಕೆ ಅವಳು ‘ಬೇಡವೆನ್ನುತ್ತೇನೆಯೇ?’ ಎಂದು ಮಾರುತ್ತರಗೊಡುತ್ತಾಳೆ. ಲೇಖಕಿಗೆ ಭಾಷೆಯ ಸತ್ವ, ಶಬ್ದಶಕ್ತಿ, ಧ್ವನಿ ಪರಿಚಯವಿಲ್ಲ ತನಗಿನ್ನೂ ಪರಿಚಯವಾಗದ, ಆತ್ಮೀಯವಾಗದ ಹೆಣ್ಣಿನೊಡನೆ ಮಾತನಾಡುವಾಗ ಹೇಗೆ ಮಾತನಾಡುತ್ತಾರೆಂಬುದನ್ನು ಜೀವನದಲ್ಲಿ ನೋಡಿ ತಿಳಿಯಲೆಂದು ಹಾರೈಸೋಣ. ಸರಿಯೆ. ಆದರೆ ಹೆಣ್ಣಿಗೆ ‘ನಿಂಗೆ ನಾಲ್ಕು ಜನರ ಸಂಗಸುಖ ಬೇಕಲ್ಲವೆ?’ ಎಂದು ಕೇಳುವಾಗ ಆಗುವ ಅರ್ಥಪರಿಣಾಮದ ಕಲ್ಪನೆಯೂ ಬೇಡವೆ? ಏಕೆಂದರೆ ರೋಹಿಣಿ ಕುಲಟೆಯಲ್ಲ ರಾಜ ತಲೆಹಿಡುಕನಲ್ಲ ಅಥವಾ ಅವರಿಬ್ಬರೂ ಜಾರಜಾರೆಯರಾಗುವರೂ ಅಲ್ಲ. ಬಹುಶಃ ಆ ಮಾತುಗಳಿಗಿರುವ ಅರ್ಥಕೋಶ ಲೇಖಕಿಗೆ ಗೋಚರಿಸಿಲ್ಲವೆಂದು ಸಮಾಧಾನಪಟ್ಟುಕೊಳ್ಳಬಹುದು, ಆದರೆ ಅವರು ಇದೇ ಮಾದರಿಯಲ್ಲಿ ಉಳಿದ ಕಾದಂಬರಿಗಳಲ್ಲೂ ಮುಂದುವರಿಸಿಕೊಂಡು ಬಂದಿದ್ದಾರೆ.

ಗೋಪಿ ರೋಹಿಣಿ ಸಂಬಂಧ ಕಾದಂಬರಿಯ ನಡುವೆ ಹರಡಿಕೊಳ್ಳುತ್ತದೆ, ಜಾಳುಜಾಳಾಗಿ. ಉಂಗುರದ ಸಂಬಂಧವಂತೂ ಪಾಚಿಗಟ್ಟುತ್ತದೆ. ಬಡವಿ ರೋಹಿಣಿಗೆ ಯಾವ ನಂಟೂ ಇಲ್ಲದೆ ಶ್ರೀಮಂತೆ ಜಾನಕಮ್ಮನವರು ತೋರುವ ಮಮತೆ, ಕೊಡುವ ಸ್ವಾತಂತ್ರ್ಯ ಕಾದಂಬರಿ ಪ್ರಪಂಚದಲ್ಲಷ್ಟೇ ನಡೆಯುವಂತಹುದು. ರೋಹಿಣಿ ಮನೆಗೆ ಬರುತ್ತಿದ್ದಂತೆಯೇ ಅವರು “ಇದು ನಿನ್ನ ಮನೆ. ಈ ಮನೇಲಿ ನಿಂಗೆ ಸ್ವಾತಂತ್ರವಿದೆ ನಿನ್ನಿಷ್ಟ ಬಂದಂತಿರಬಹುದು” ಎಂದು ಹೇಳುತ್ತಾರೆ. ಹೀಗಾಗಿ ಈ ಲೇಖಕಿ ಆರಿಸಿಕೊಂಡ ವಸ್ತು ನಿರ್ವಹಿಸುವ ವಿಧಾನ ಈ ನೆಲವನ್ನು ಮುಟ್ಟದೆ ಮುಗಿಲ ಮಲ್ಲಿಗೆ ಮುಡಿದು ದಂತಗೋಪುರದಲ್ಲಿ ವಿಹರಿಸುತ್ತದೆ.

ಇವರ ಬಾಳಿದ ಮನೆ ಕಾದಂಬರಿ ಕೂಡ ಇದುವರೆಗಿನ ಆಕ್ಷೇಪಾರ್ಹ ಬರೆಹಕ್ಕೆ ಅಪವಾದವಲ್ಲ. ಅದೇ ಹಳಸಿದ ವಸ್ತು, ಸಪ್ಪೆ ಬರವಣಿಗೆ, ಅರ್ಥವಂತಿಕೆಯಿಂದ ಕತ್ತರಿಸಿಕೊಂಡಂತೆ ದೂರಸರಿದು ನಿಲ್ಲುವ ವಾಕ್ಯಗಳು, ಪ್ರಕಾಶಕರೇನೋ ಇದನ್ನು ‘ಸುರಸ ಸಾಮಾಜಿಕ ಕಾದಂಬರಿ’ ಎಂದು ಕರೆದಿದ್ದಾರೆ, ನೀರಸ ಎಂಬುದಕ್ಕೆ ಬದಲು, ಪ್ರಕಾಶಕರೂ ಕಾಸಿಗೆ ತಕ್ಕ ಕಜ್ಜಾಯದ ಮಾದರಿಯವರು. ಅವರ ಮಾತುಗಳಲ್ಲೂ ವಾಕ್ಯರಚನೆ ಭಾಷಾಶುದ್ಧಿ ವಿಚಾರಸರಣಿ ಕೊಂಡಿಕಳಚಿಕೊಂಡಿದೆ; ‘ಮಾನವನ ತನ್ನ ಆಸೆ ಆಕಾಂಕ್ಷೆಗಳನ್ನು ಭವಿಷ್ಯದ ಬೆನ್ನಮೇಲೆ ಹಾಕಿ, ಕ್ರಿಯಾಶೀಲನಾಗುವ ಬದಲು ಭವಿಷ್ಯದ ಬಗ್ಗೆ ಹಗಲುಗನಸು ಕಾಣುತ್ತಾನೆ. ಸಮಾಜದಲ್ಲಿ ಇಂಥಹವರ ಸಂಖ್ಯೆ ಹೆಚ್ಚು. ಉದ್ದೇಶಗುರಿ ಮಾನವನಿಗೆ ಇರಬೇಕಾದುದು ನ್ಯಾಯ. ಅಂತೆಯೇ ತನ್ನ ಪ್ರಮಾಣಿಕ ಬದುಕಿನಿಂದ ಸುಖಮಯ ಜೀವನವನ್ನು ಅನುಭವಿಸುವ ಸಾಮರ್ಥ್ಯವೂ ಅವನ ಕೈಯಲ್ಲಿಯೇ ಇರುತ್ತದೆ. ಅನಿರೀಕ್ಷಿತ ಘಟನೆಗಳು ಆತನ ಜೀವನ ನಾಟಕದ ಏರಿಳಿತಗಳನ್ನು ಸೂಚಿಸುತ್ತದೆ. ಇಂತಹ ಒಂದು ಸುಂದರ ಚಿತ್ರಣ ಬಾಳಿದ ಮನೆಯಲ್ಲಿದೆ. ಈ ಕೃತಿಯನ್ನು ಕಾದಂಬರಿ ಪ್ರಿಯರೆಲ್ಲಾ ಓದಬೇಕು. ಶ್ರೀಮತಿ… ಬರೆದುದು ಎಂದಮೇಲೆ ಅದು ಚೆನ್ನಾಗಿರಬೇಕಲ್ಲವೇ?”

ಇಲ್ಲಿಯ ಅನ್ನಿಸಿಕೆ ಹಾಗೂ ವಿಶೇಷಣಗಳ ತದ್ವಿರುದ್ಧ ಅಭಿಪ್ರಾಯ ಓದುಗರಿಗೆ ಉಂಟಾಗುತ್ತದೆ. ಅಮೌಲಿಕ ರೂಪಗಳು ಇವರ ಗ್ರಂಥಭಂಡಾರದಲ್ಲಿ ದಂಡಿಯಾಗಿವೆ. ಭಾಷೆಯ ವಿಚಿತ್ರ ಬಳಕೆಯಿಂದ, ಲೇಖಕಿ ಸಾಧಿಸಬಹುದಾಗಿದ್ದ ಪರಿಣಾಮಕ್ಕೆ ಊನ ಉಂಟಾಗಿ ಕೃತಿ ಸೋಲುತ್ತದೆ. ಭಾಷೆ ವಸ್ತು ದೃಷ್ಟಿ ಇವು ಪರಸ್ಪರ ಅವಲಂಬಿಗಳು, ಭಾಷೆ ಒಂದು ಸಮರ್ಥ ಅಭಿವ್ಯಕ್ತಿಮಾಧ್ಯಮ, ಲೇಖಕಿ ತಾವು ಆರಿಸಿಕೊಂಡ ಮಾಧ್ಯಮದ ಬಿಗಿಬನಿಗಳನ್ನೂ ಬೇಡಿಕೆ ಆಕಾರವನ್ನೂ ಗುರುತಿಸಿ ಕೊಳ್ಳಬೇಕು. ಶಬ್ದಗಳಿಗಿರುವ ಅರ್ಥ-ವ್ಯಾಪ್ತಿ-ಔಚಿತ್ಯ ತಿಳಿದಿರಬೇಕು. ಅದರ ಸತ್ವದಂತೆ ಸೂಕ್ಷ್ಮ ವನ್ನೂ ಅರಿತಿರಬೇಕು. ಈ ಯಾವ ಸಂವೇದನೆಗೂ ಲೇಖಕಿ ವಸ್ತುವಿಗೂ ಬೆಲೆ ಕೊಡದಿರುವುದು ಓದುಗರ ವೇದನೆಗೆ ಕಾರಣವಾಗಿದೆ. ಲೇಖಕರಿಗೂ ಜವಾಬ್ದಾರಿಯುಂಟೆಂಬ ಪ್ರಜ್ಞೆಯೇ ಇಲ್ಲದೆ ‘ಕನ್ನಡದ ಸೇವೆ ಮಾಡು’ತ್ತೇನೆಂದು ಹೊರಡುವುದು ಸರಿಯಲ್ಲ.

ಸಾಂದ್ರವಾದ ಅನುಭವದ ಸಂವಹನ ಇಲ್ಲಿರುವ ಮುಖ್ಯ ಕೊರತೆ. ಯಾವುದೇ ಒಂದು ಸಾಹಿತ್ಯಕೃತಿ ಸಾವಯವ ಸೃಷ್ಟಿ. ಪ್ರತಿಯೊಬ್ಬ ಸಾಹಿತಿಗೂ ತಾವು ಆರಿಸಿಕೊಂಡ ವಸ್ತುವಿನ ಕಸುವು ಎಂತಹುದೆಂಬ ಕಲ್ಪನೆಯಿರಬೇಕು. ಕಾದಂಬರಿಗಳಿಗೆ ಅನಿರೀಕ್ಷಿತ ತಿರುವು ಮುಗಿತಾಯ ತಂದುಬಿಟ್ಟರೆ ಅದೊಂದು ದೊಡ್ಡ ತಂತ್ರವಾದೀತೆಂಬ ಭ್ರಮೆ ನಿರಸನವಾಗಬೇಕು. ಇವರು ಕೆಲವು ವರ್ಷ ಲೇಖನ ಕಲೆಯಲ್ಲಿ ವಿಶೇಷ ಶಿಕ್ಷಣ ಪಡೆದು ಕನ್ನಡ ಕಲಿಯುವುದು ಅಗತ್ಯವಿದೆ. ಏಕೆಂದರೆ ಈಗಾಗಲೇ ಐವತ್ತು ಪುಸ್ತಕಗಳ ಸಂಖ್ಯೆ ಮುಟ್ಟಿರುವ ಇವರು ನೂರರ ಗೆರೆ ಸೇರುವವರೆಗೂ ನಿರಂತರವಾಗಿ ಬರೆದೇತೀರುವ ಪ್ರತಿಜ್ಞೆ ಮಾಡಿರುವರಂತೆ ಸಂತೋಷವೆ. ನಿರರ್ಗಳವಾಗಿ ಬರೆಯುವ ತಮ್ಮ ಸೃಜನ ಸಾಮರ್ಥ್ಯಕ್ಕೆ ಅಧ್ಯಯನ ಪ್ರಾಪ್ತ ಶಿಸ್ತನ್ನು ರೂಢಿಸಿಕೊಂಡರೆ ಒಳ್ಳೆಯದು. ಸಿದ್ಧವಾದ ಹಸ್ತಪ್ರತಿಯನ್ನು ಮತ್ತೊಮ್ಮೆ ಪರಿಷ್ಕರಿಸಿದರೆ ದೋಷಗಳನ್ನು ಲೇಖಕಿಯೇ ಸರಿಪಡಿಸಬಹುದು.