ದೇವರೇ ಸಾಕ್ಷಿ ಹಾಗೂ ಇದರಲ್ಲೇ ಇರುವ ಭುವನ್ ಷೋಮ್ (ಅನು: ನಿರುಪಮಾ) ಕಾದಂಬರಿಗಳ ಕನ್ನಡ ಅವತರಣ ತೀರ ಸಾಧಾರಣ.

ಶುದ್ಧರೂಪಗಳನ್ನು ಗೋಣ್ಮುರಿದು ವಿರೂಪ ಗೊಳಿಸುವುದರಲ್ಲಿ ಈ ಅನುವಾದಕಿ ಸಿದ್ಧಹಸ್ತರು; ಸಂಕ್ಷಿಪ್ತವಾಗಿ, ಉದಾಹರಿಸಬಹುದು ಅಯೆಷಾ, ಸೌಂಜ್ಞೆ, ಸಿಪಾರ್ಸು, ಅಪಿಲ್ಸ್, ಟ್ರೆಯಾಮಗಿಲ್, ಕಥೆಯ ಸಂಬಂಧಿಸಿದ, ದಲಗಳು ಬೇಕಾಗಿದೆ, ಈಜೀಚೆಯರನ್ನು ಶಾಂತಿವಾಗಿಯೇ, ಜಡ್ಜಿಮೆಂಟ್, ಪೀಜ್, ಚಾಜೂ, ಐಕ್ಸ್ಯೂಜ್ಮಿ, ಬೆಸಿದುಕೊಂಡ – ಇಂಥ ವಿರೂಪಗಳಿಂದ ತುಂಬಿದ ಬರೆಹ ಎಲ್ಲಿ ಮಿಡಿದರಲ್ಲಿ ಅಪಸ್ಪರ ಹೊರಡಿಸುತ್ತದೆ.

ಒಂದು ಕಡೆ ಜಡ್ಜ್ ಎನ್ನುತ್ತಾರೆ. ಇನ್ನೊಂದು ಕಡೆ ನ್ಯಾಯಮೂರ್ತಿ ಎನ್ನುತ್ತಾರೆ. ‘ಓಹೋ ಆದರೆ ಮುಂತಾದ ಶಬ್ದಗಳು ಹಾಳತವಿಲ್ಲದೆ ಬಳಕೆಯಾಗುತ್ತದೆ. ವಾಕ್ಯರಚನೆಯಲ್ಲಿ ಅಸಂಬದ್ಧತೆ ಧಾಳಿಮಾಡಿದೆ. ಅನವಶ್ಯಕ ಇಂಗ್ಲಿಷ್ ಶಬ್ದಗಳು ಅಂಗವಿಕಲತೆಯಿಂದ ಬರುತ್ತವೆ. ನ್ಯಾಯಾಧೀಶರು ಒಂದು ಸಲ ‘ಓಹೋ ಬಂದ್ಬಿಟ್ಟೆವಾ’ ಎಂದು ಮುಂತಾಗಿ ಸಂಭಾಷಣೆಯ ಧಾಟಿಯಲ್ಲಿ ಆರಂಭಿಸಿ ಅದರ ಮುಂದಿನ ವಾಕ್ಯವನ್ನೇ ಬರವಣಿಗೆ ಶೈಲಿಯಲ್ಲಿ ಮಾತನಾಡುತ್ತಾರೆ.

ಇವರಿಗೆ ಬಂಗಾಳಿ ಭಾಷೆ ಬರುವುದಿಲ್ಲವೆಂಬುದು ನಿಶ್ಚಯ. ತಮಗೆ ತಿಳಿಯದ ಭಾಷೆಯ ಗ್ರಂಥಗಳನ್ನು ಭಾಷಾಂತರ ಮಾಡುವುದರ ಮೂಲಕ ಇಂಥ ಕನ್ನಡಕ್ಕೆ ತರುವುದು ಸರಿಯಲ್ಲ. ಈ ಅನುವಾದವಂತೂ ವ್ಯರ್ಥಪ್ರಯತ್ನ. ಇವರ ಸ್ವತಂತ್ರ ಕೃತಿಗಳ ಕೃತಿಯೂ ಇದೇ ಆಗಿದೆ. ಇವರು ಬರೆಹ ತಿದ್ದಿಕೊಳ್ಳಬೇಕಾದ್ದು ಬಹಳ ಇದೆ. ವಂಗಭಾಷೆಯ ಉತ್ತಮ ಲೇಖಕರ (ತಾರಾಶಂಕರ ಬ್ಯಾನರ್ಜಿ ಹಾಗೂ ಬನಪೂಲ್) ಹೊತ್ತಗೆಗಳನ್ನು (ಬಿಚಾರಕ್ ಹಾಗೂ ಭುವನ್ ಷೋಂ) ಹೀಗೆ ಕೊಲೆಮಾಡುವ ಸೇಡು ಬೇಡ. ಇವರಂತಹ ಭಾಷಾಂತರಕಾರರನ್ನು ಕುರಿತೇ ಭಾಷಾಂತರಕಾರರು ಕೊಲೆಗಾರರೆಂದು ಹೇಳಿರಬೇಕು.

ಬಂಗಾಳಿ ಭಾಷೆ ಬಾರದ ಕನ್ನಡಿಗನಿಗೆ ಮೂಲದ ಚೆಲುವು ಮಾಸದಂತೆ ಸೋರದಂತೆ ಹಿಡಿದುಕೊಡುವ ಅನುವಾದ ಕೃತಿ ಸ್ವಾಗತಾರ್ಹ. ಅನುವಾದಕನಿಗೆ ಎರಡೂ ಭಾಷೆಗಳ ಪ್ರಭುತ್ವವಿಲ್ಲದಿದ್ದರೂ ಕಡೆಗೆ ಮೇಲುಮಟ್ಟದ ಪರಿಚಯವಾದರೂ ಇರಬೇಕು. ಅನುವಾದಿಸಲಿರುವ ಭಾಷೆಯಲ್ಲಿ ಪಳಗಿರಬೇಕು. ಈ ಲೇಖಕರಿಗೆ ಅಲ್ಲೇ ಐಬು.

ಮೂಲಕಾದಂಬರಿಗಳ ಸತ್ವ ಕುರಿತು ನಡಸುವ ವಿಮರ್ಶೆ ಅನಪೇಕ್ಷಣೀಯ, ಅಸಾಧು, ಭಾರ‍್ತೀಯ ಜ್ಞಾನಪೀಠ ಪ್ರಶಸ್ತಿ ವಿಜೇತ ತಾರಾಶಂಕರ ಬ್ಯಾನರ್ಜಿಯವರ ಬಿಚಾರಕ್ (ಇಲ್ಲಿ ದೇವರೇ ಸಾಕ್ಷಿ)ಕಾದಂಬರಿ ಅಪರಾಧವೆಸಗದವನೊಬ್ಬನ (ನಾಗೇನ್) ಮೇಲೆ (ಖಗೇನ್) ಕೊಲೆಯ ಆರೋಪ ಹೇರುತ್ತಾರೆ. ಆದರೆ ಅವನು ಮಾತ್ರ ತಾನು ಸಪ್ಪಿತಸ್ಥನಲ್ಲವೆಂದೂ ಅದಕ್ಕೆ ದೇವರೇ ಸಾಕ್ಷಿ ಎಂದು ನುಡಿಯುತ್ತಿರುತ್ತಾನೆ. ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭ. ನ್ಯಾಯಧೀಶ (ಜ್ಞಾನೇಂದ್ರನಾಥ)ಈ ಕೇಸಿನ ವಿವರಕ್ಕೆ ತೊಡಗಿದ ಮೇಲೆ ಇದೇ ಬಗೆಯ ಘಟನೆಯೊಂದರಲ್ಲಿ ಒಮ್ಮೆ ತಾನೇ ಒಳಗಾದುದು ನೆನಪಾಗುತ್ತದೆ.

“ಅಪರಾಧಿ ಕಟಕಟೆಯಲ್ಲಿ ತುಂಬುಕೊಡದಂತೆ ಸ್ವಲ್ಪವೂ ಅಂಜದೆ ನಿಂತಿದ್ದ. ಭೀತಿಯ ಛಾಯೆ ಹುಡುಕಿದರೂ ಕಾಣಸಿಗುತ್ತಿರಲಿಲ್ಲ. ಮುಖ ಶಾಂತ ಗಂಭೀರವಾಗಿತ್ತು. ಆಶ್ಚರ್ಯ ಆತನ ಮುಖ ಶಿಲೆಯಿಂದ ಕೊರೆದಂತಿತ್ತು. ಆ ಮುಖಾರವಿಂದ ಅತಿ ನಿರ್ವಿಕಾರವಾಗಿತ್ತು” (ಪುಟ ೨೧). ಇಲ್ಲಿ ಮೂಲದ ಮಾತುಗಳಿಗೆ ಹೊಸ ಸೇರ್ಪಡೆ ಆಗಿರಬಹುದೆಂದು ಗುಮಾನಿ ಆಗುತ್ತದೆ. “ಬೇರೆದಾರಿಯೇ ಇಲ್ಲದೇ ಗತ್ಯಂತರವಿಲ್ಲದೆ…” ಇದು ನಿಘಂಟು ಮಾದರಿ ಬರವಣಿಗೆ. “ಆಯುಷ್ಯನೆದು ತಲೆ ಎತ್ತಿದರೆ ಬಾಳಿನಲ್ಲಿ ಪ್ರತಿಯೊಂದು ನರಕ ಸದೃಶವಾಗಿ ಹೋಗುತ್ತೆ.” “ನನ್ನ ವಾದವೇನೆಂದರೆ; ನಾವು ಖಚಿತವಾಗಿ -ಪರಿಸ್ಥಿತಿಗಳ ಪರಿಶೀಲನೆ, ವಿವರಗಳು, ಅವಗಾಹನೆ ಮಾಡಿಕೊಳ್ಳದ ಹೊರತು ನಿಜಾದ ಕೇಸು ಸ್ವಭಾವ – ಸ್ವರೂಪ ಸಿಗುವುದಿಲ್ಲ. ಇದು ಕೇವಲ ಜೀವನದ ಮೇಲೆ ಮನುಷ್ಯನಿಗಿರುವ ಅಸ್ಥೆ ಸ್ವಭಾವ ಫಲ” – ಈ ತೆರನಾದ ಸಾಲುಗಳ ಸಮುದಾಯ ಲೇಖಕಿಗೆ ಒಂದು ನಿರ್ದಿಷ್ಟ ಯೋಜನೆ, ಯೋಚನೆ ಇಲ್ಲವೆಂದು ಖಚಿತಪಡಿಸುವುದಲ್ಲದೆ ಭಾಷೆಯ ಮೇಲೆ ಪ್ರಭುತ್ವ ಇಲ್ಲವೆಂಬುದನ್ನೂ ಸ್ಪಷ್ಟಪಡಿಸುತ್ತದೆ. ಟೆನಿಸ್ ಆಡುವವನ ‘ಬ್ಯಾಟಿಂಗ್’ ಚೆನ್ನಾಗಿದೆಯೆಂದು ಒಂದು ಕಡೆ ಬರೆದಿದ್ದಾರೆ!

ಅನುರಾಗ ಬಂಧನ (ಎ. ಪಂಕಜ) ಕೊಳೆ ಕುಳಿತ ಕಾಗದದ ಹೂ. ಏಕವಚನ, ಬಹುವಚನ, ಭೂತ ಭವಿಷ್ಯತ್ ವರ್ತಮಾನಕಾಲ-ಯಾವುದನ್ನೂ ಬರವಣಿಗೆಯಲ್ಲಿ ಗಮನಿಸಿದ ಯಾವ ನೇಮ ನಿಯಮದ ಮೂಲಾಜೂ ಇಲ್ಲದ ಕ್ರಾಂತಿಕಾರಿ ಬರೆಹ. ಮಾಧ್ಯಮಿಕ ಶಾಲಾಮಕ್ಕಳನ್ನು ಕೂಡಿಸಿಕೊಂಡು ಕಥೆ ಹೇಳುವ ಧಾಟಿ ಇವರಿಗೆ ತುಸು ಒಲಿದಿದೆ. ಜೀವದ್ಭಾಷೆಯ ಲಕ್ಷಣಗಳನ್ನು ನೀಗಿಕೊಂಡು ನೀರಸತೆ ತಪ್ಪದಂತೆ ಕಾಪಾಡಿಕೊಂಡು ಹೋಗುವ ಪ್ರಯತ್ನದಲ್ಲಿ ಗೆದ್ದಿದ್ದಾರೆ.

ಲೆಕ್ಕಾಚಾರಕ್ಕೆ ಸಿಕ್ಕಿಬಿದ್ಧ ಇವರ ಬರೆಹದಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಬೇಕಾದ್ದಿಲ್ಲ. ಕಾದಂಬರಿಗೆ ಜನಪ್ರಿಯವಾಗಬಲ್ಲ ಹೆಸರಿಸಬೇಕು. ಆದಕ್ಕೆ ‘ಅನುರಾಗ ಬಂಧನ’ “ಕಾದಂಬರಿಯ ಹೆಸರು ಸುಂದರ ಹಾಗೂ ಆಕರ್ಷಕವಾಗಿ ಕಾಣುವುದು ಸಹಜ” ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಕಾದಂಬರಿ ಎಂದು ಕರೆಸಿಕೊಳ್ಳಬೇಕಾದರೆ ಸಾಕಷ್ಟು ಪುಟಗಳಿರಬೇಕು. ಇಲ್ಲಿ ೧೮೦ ಪುಟಗಳಿವೆ. ಒಂದು ಉದ್ದೇಶವಿರಬೇಕು. ಲೇಖಕಿಗೆ ಉದ್ಧೇಶವಿದೆ; “ಯೌವನದ ಕಾವಿನಲ್ಲಿದ್ದಾಗ ಪ್ರಣಯ, ಅನುರಾಗ, ಒಲವು (ಈ ಶಬ್ದಗಳಲ್ಲಿರುವ ಅರ್ಥವ್ಯತ್ಯಾಸವೇನು? ಈ ಬಂಧನಗಳೆಲ್ಲವೂ ಅತಿ ಮಧುರ. ಆಗ ಯುಕ್ತಾಯುಕ್ತಗಳ ಪರಿಜ್ಞಾನವಿಲ್ಲದೆ ಅಜ್ಞಾನದಿಂದ ಪ್ರಣಯವೆಂಬ ಅಗ್ನಿಗೆ ಹಾರಿ ಬೀಳುವ ಪತಂಗಗಳಂತೆ ಇರುವ ಈ ಯುವಕ ಯುವತಿಯರಿಗೆ ಹಿರಿಯರ ಬುದ್ಧಿವಾದದ ಮಾತುಗಳು ವಿಷಕ್ಕೆ ಸಮಾನವಾಗಿರುತ್ತೆ.”

ಪ್ರಣಯವಿದ್ದರೆ ಪುಸ್ತಕ ರಂಜನೀಯ: “ಪ್ರೀತಿಪ್ರೇಮ ಈ ಶಬ್ದಗಳು ಕೇವಲ ಕಥೆಗಳಲ್ಲಿ ಬರೆಯುವುದಕ್ಕೆ ಮಾತ್ರ ಚೆನ್ನು” – ಈ ನನ್ನಿಯ ನುಡಿಗೆ ಇದೇ ಕಾದಂಬರಿ ನಿದರ್ಶನವಾಗಿದೆ. ಈ ಕಾದಂಬರಿಯ ವಸ್ತುವನ್ನು ಕಿರಿದರಲ್ಲಿ ಬರೆಹಗಾರ್ತಿ ಅರಿಕೆ ಮಾಡಿದ್ದಾರೆ, “ಇನ್ನು ಈ ಕಥೆಯನ್ನು ಕುರಿತು ಒಂದೇ ವಾಕ್ಯದಲ್ಲಿ ಹೇಳುವುದಾದರೆ ಇದರ ನಾಯಕ ಶ್ಯಾಮಸುಂದರನು ಇಂತಹುದೇ ಬಂಧನಕ್ಕೆ ತಾನಾಗಿ ಆಶಿಸಿ, ಸಿಕ್ಕಿಹಾಕಿಕೊಂಡು ನಂತರ ತನ್ನ ಅಜ್ಞಾನಕ್ಕಾಗಿ ವ್ಯಥೆಪಡುತ್ತಾನೆ.” ಈ ಕೃತಿಯ ಓದುಗರು ತಮ್ಮ ಅಮೂಲ್ಯವೇಳೆ ಹಾಗೂ ಇದಕ್ಕೆ ದಂಡತೆತ್ತ ನಾಲ್ಕು ರೂಪಾಯಿ ವ್ಯರ್ಥವಾಯಿತಲ್ಲಾ ಎಂದು ವ್ಯಥೆಪಡುತ್ತಾರೆ.

ಇಲ್ಲಿನ ಭಾಷೆ ಕೊಡುವ ಮನರಂಜನೆ ಗಮನಾರ್ಹ : ಆಜಗಜಾಂತರ, ಆದೆಷ್ಟು, ನಿತ್ರಾಣಿಯಾಗಿ, ಹಸಿಗೂಸು, ತರೀಕೆರಿಯಲ್ಲಿ ತೆಕ್ಕೊಡಬೇಡಬೇಕಂತೆ, ಕೂತ್ಕೋಳ್ಳೋ ಇದಕ್ಕಿದ್ದಂತೆ, ವ್ವಾನು, ಬೆರತಳು – ಮೊದಲಾದ ‘ಮಾದರಿ’ ಮಾತುಗಳಿವೆ.

ಈ ಲೇಖಕಿಗೆ ಭಾಷಾಂತರ ವಿಭಾಗದಲ್ಲಿ ಆಸಕ್ತಿ ಇರುವಂತೆ ತೋರುತ್ತದೆ. ಲಿಕ್ವಿಡ್ಸ್, ಯೂನಿಪಾರಂ ಮುಂತಾದ ಶಬ್ದಗಳನ್ನಿತ್ತು ಅವಕ್ಕೆ ಕಂಸದೊಳಗೆ ದ್ರವಪದಾರ್ಥಗಳು ಸಮವಸ್ತ್ರ ಎಂಬರ್ಥ ಕೊಡುತ್ತಾರೆ (ಕಾದಂಬರಿಯೊಳಗೆ). ಇಂಥ ಪ್ರಯತ್ನದ ಉದ್ದೇಶ ಸಾಧು. ಆದರೆ ಉಳಿದೆಡೆಗಳಲ್ಲಿ ಇಂಗ್ಲಿಷ್ ಶಬ್ದಗಳನ್ನು ಲಿಪ್ಯತರಗೊಳಿಸಿ ಕನ್ನಡ ಲಿಪಿಯಲ್ಲಿ ಕೊಟ್ಟು ಮತ್ತೆ ಅದರ ಜೊತೆಗೆ ಕಂಸದೊಳಗೆ ಇಂಗ್ಲಿಷ್ ಲಿಪಿಯಲ್ಲೂ ಕೊಡುತ್ತಾರೆ. ಕಂಗ್ರಾಜ್ಯುಲೇಷನ್ಸ್, ಚಿಲ್ಡ್ರನ್ ಸ್ಪೆಷಲಿಸ್ಟ್, ವರಿಗುಡ್, ಎಮರ‍್ಜೆನ್ಸಿ, ಅಂಪ್ಯುಟೇಷನ್ ಮುಂತಾದ ಶಬ್ದಗಳನ್ನಿತ್ತು ಅವುಗಳಿಗೆಲ್ಲಾ ಮತ್ತೆ ಇಂಗ್ಲಿಷಿನಲ್ಲೂ (ರೋಮನ್ ಲಿಪಿಯಲ್ಲೂ ಕೊಡುತ್ತಾರೆ. ಇದು ಅನಗತ್ಯ.

‘ಸಣ ಆಸಿನ್ ಕಾರೊಂದನು ಇಟಿದರು’ – ಎಂಬ ಕಡೆಗಳಲ್ಲಿ ಮುದ್ರಣದೋಷವೆಂದು ಒಪ್ಪಿಕೊಂಡರೂ ‘ಮಾರ್ತ ಆಸ್ಪತ್ರೆ ಅಚ್ಚುಕಟ್ಟುತನ ‘ನಿಮ್ಮ ಮಗ ನನ್ನ ಮಗಳನ್ನು ಒಪ್ಕೊಂಡು ಬಿಟ್ಟಿದ್ದಾನೆ.’ ತನ್ನ ಸ್ವಭಾವದಿಂದ ಅನೇಕರು ಶೀನಪ್ಪನ ಸ್ನೇಹಿತರಾದರು’? – ಮುಂತಾದ ರಚನೆ ಹಾಗೂ ಪ್ರಯೋಗದ ಸಾಧುತ್ವ ಸಂದೇಹಕ್ಕೆಡೆಗೊಡುತ್ತದೆ :

ಶೀನಪ್ಪ ಉರುಫ್ ಶ್ರೀನಿವಾಸರಾವ್ ಬಗೆಗೆ ಒಂದು ಸಾಲಲ್ಲಿ ಏಕವಚನ, ಇನ್ನೊಂದು ಸಾಲಲ್ಲಿ ಬಹುವಚನ ಬಂದು ಕಸಿವಿಸಿಯಾಗುತ್ತದೆ. ‘ರಾಮಮೂರ್ತಿಗಳು’ ಎಂಬ ಪ್ರಯೋಗವಂತೂ ಕಿರಿಕಿರಿ ಉಂಟುಮಾಡುವಂತೆ ಬಂದಿದೆ. ಲೇಖಕಿ ಆ ಪಾತ್ರ ಕುರಿತು ಬರೆಯುವಾಗಲಾದರೂ ರಚನೆ ಹಿತವಾಗುವಂತೆ ಮಾಡುವುದು ಸಾಧ್ಯವಿತ್ತು. “ಈ ಫ್ಯಾಕ್ಟರಿಗಾಗಿ ರಾಮಮೂರ್ತಿಗಳು ಹಗಲಿರುಳೂ ದುಡಿಯುತ್ತಿದ್ದರು,” ಆದರೆ ಅದರ ಮುಂದಿನ ಪ್ಯಾರಾದಲ್ಲಿ “ರಾಮಮೂರ್ತಿಯ ಕೈಹಿಡಿದ ರತ್ನಮ್ಮ” ಎಂದಿದೆ. “ತನ್ನ ಹೆಂಡತಿ ಒಳ್ಳೆಯವಳು ಎಂಬ ಅಭಿಮಾನ ಮೂರ್ತಿಗೆ ಇತ್ತು” ಎನ್ನುತ್ತಾರೆ.

“ರತ್ನಮ್ಮನಿಗೆ ಆದದ್ದೇ ಎರಡು ಗಂಡುಮಕ್ಕಳು” ಎಂಬ ಅವಧಾರಣೆ ಅಲ್ಲಿ ಹೊಂದಿಕೊಳ್ಳುವುದಿಲ್ಲ. ಭಾಷೆಯ ವಿಚಾರದಲ್ಲಿ ಲೇಖಕಿಯದು ಸ್ಥಿತಪ್ರಜ್ಞತ್ವ “ಶಾಂತ ಸ್ವಭಾವದ ಹೆಣ್ಣು ರತ್ನಮ್ಮ, ಮುದ್ದಾದ ಎರಡು ಗಂಡುಗಳು, ಚಿಕ್ಕದಾದ ಸಂಸಾರ” ಇಲ್ಲಿ ಇಬ್ಬರು ‘ಗಂಡುಮಕ್ಕಳು’ ಎಂಬುದು ಲೇಖಕಿಯ ಅರ್ಥ!

ಮರೆಯುವುದು ಮನುಷ್ಯನಿಗೆ ಸಹಜತಾನೆ? ಲೇಖಕಿ ಪಾತ್ರಗಳ ಹೆಸರನ್ನೇ ಒಮ್ಮೊಮ್ಮೆ ಮರೆತರೆ ತಪ್ಪೇನು? ರತ್ನಮ್ಮನ ಹುಸಿಕೋಪ ಕಂಡು ನಕ್ಕ ಮೂರ್ತಿಗಳು (ಪುನಃ ‘ಗಳು’ ಬಂತು) ‘ಬಾರೋ ಮೂರ್ತಿ ಪಾತೂ ಮನೆಗೆ’ ಎಂದು ಶ್ಯಾಮನನ್ನ ಕರೆದುಕೊಂಡು ಹೋಗುವರು” (೧೭) ಇಲ್ಲಿ ಶ್ಯಾಮೂ ಎಂಬುದಕ್ಕೆ ಮೂರ್ತಿ ಎಂದಿದ್ದಾರೆ. ಪಾಪೂ ಅಥವಾ ಲಕ್ಷ್ಮೀ ಎಂಬುದಕ್ಕೆ ಪಾತೂ ಎಂದಿದ್ದಾರೆ. ಮಗುವಿನ ಬಾಯಲ್ಲಿ ಬಾಲಭಾಷೆ ಆಡಿಸಬೇಕೆಂದು, ಇದ್ದಕ್ಕಿದ್ದಂತೆ ಬೋಧೆಯಾದಂತೆ, ‘ಇಲ್ಲ ಇಂಗ ನಾ ಬಿಲೋದಿಲ್ಲ ಅಮ್ಮಂಗೆ ಏಲ್ಬೇಡ’ ಎಂದು ಸರಸಳ ಬಾಯಲ್ಲಿ ಹೇಳಿಸುತ್ತಾರೆ, ಅದರ ಹಿಂದೆಮುಂದೆ ಹೇಗಾದರೂ ಇರಲಿ ಯೋಚಿಸುವುದಿಲ್ಲ.

-ಈ ಬಗೆಯ ಹಲವು ತೀರ ಆಕ್ಷೇಪಾರ್ಹ ದೋಷಗಳಿಂದ ಗ್ರಂಥ ದುರ್ಬಲವಾಗಿ ನೇದುಕೊಂಡಿದೆ, ಇದು ಸಾಮಾಜಿಕ ಸಂಪರ್ಕದಿಂದ ಹೊರತಾಗಿ ನಿಂತು ಓದುಗರಿಗೆ ಪರಕೀಯವೆನಿಸಿ ಸಂವಹನ ಸಹಜವಾಗಿಯೇ ಕಷ್ಟವಾಗುತ್ತದೆ.

ವಕೀಲ್ ವೈದೇಹಿ (ಎಂ.ಎಸ್. ಶಾರದ) ಒಂದು ಕಳಪೆ ಕಾದಂಬರಿ, ತುಂಬ ಕೆಟ್ಟದಾಗಿ ಬರೆಯುತ್ತಾರೆ. ಓದಿದ ಹೆಂಗಸರೆಲ್ಲ ಕಾದಂಬರಿ ಬರೆಯಬೇಕೆಂಬ ನಿಯಮವಿದೆಯೆಂದು ಇವರೂ ಇವರಂತಹ ಇತರರೂ ತಿಳಿದಿದ್ದಾರೆ. ಇವರ ಕಾದಂಬರಿ ಅಭ್ಯಾಸಮಾಡಿದ ಮೇಲೆ ಇವರು ಓದಿದವರೆಂದು ತಿಳಿಯುವುದೂ ಕಷ್ಟ.

“ಅಹ್ಹಾ! ಇಂಥಹ ಮಗ ಸೊಸೆಯನ್ನು ನೋಡಿ ಸಂತೋಷ ಪಡುವ ಸುಯೋಗವು ನನ್ನ ಹೆಂಡತಿಗಿಲ್ಲದೆ ಹೋಯಿತಲ್ಲಾ! ಎಂದು ಪತ್ನಿಯ ಪೋಟೋವಿನ ಮುಂದೆ ನಿಂತು ಎರಡುತೊಟ್ಟು ಕಣ್ಣೀರು ಮುತ್ತಿನಂತೆ ಹಾಕುವ ಸಮಯಕ್ಕೆ ಸರಿಯಾಗಿ, ಅಡಿಗೆಯಾಕೆಯಿಂದ, ‘ಕೋರ್ಟಿಗೆ ಹೊತ್ತಾಯಿತು. ಗಂಟೆ ಹತ್ತು ಹೊಡೆಯಿತು. ಊಟಮಾಡಿ ಹೊರಡುವ ವೇಳೆಗೆ ಮತ್ತೂ ಕಾಲವಾಗುವುದು’ ಎಂದು ಕರೆ ಬಂದೊಡನೆ ಚಂದ್ರಪ್ಪನವರು ದಢಬಢನೆ ಓಡಾಟದಲ್ಲಿ ಮಗ, ಸೊಸೆ ಮತ್ತು ಹೆಂಡತಿಯನ್ನು ಮರೆತು. ತಮ್ಮ ಮುಂದಿನ ಕೆಲಸದಲ್ಲಿ ಮಗ್ನರಾಗುತ್ತಿದ್ದರು. ಊಟಮಾಡಿ ಸಿದ್ಧರಾಗುತ್ತಿದ್ದಂತೆಯೇ ಬೀಗರಾದ ಚಿದಾನಂದರ ಕಾರಿನ ಹಾರನ್ ಶಬ್ದವು ಚಂದ್ರಪ್ಪನವರನ್ನು ಕರೆಯುತ್ತಿತ್ತು. ಹೀಗೆ ದಿನಗಳು ಲೆಕ್ಕವಿಲ್ಲದೆ ಉರುಳಿ ತಿಂಗಳುಗಳಾಗಿ ಮಾರ್ಪಟ್ಟವು.”

ಆಗಾಗ್ಗೆ ಬರುವ ವಾಕ್ಯಗಳೂ ಅಯ್ವತ್ತು ವರ್ಷಗಳ ಹಿಂದಿನ ಕನ್ನಡ ಶೈಲಿಯನ್ನು ನೆನಪಿಸುವುದಲ್ಲದೆ ಮೊಸರಿನಲ್ಲಿ ಕಲ್ಲು ಸಿಕ್ಕ ಅನುಭವ ನೀಡುತ್ತವೆ. ಅಶುದ್ಧ ಭಾಷಾಪ್ರಯೋಗಕ್ಕೆ ಉದಾಹರಣೆಗಳು ಇಲ್ಲಿವೆ. ಬರೆಯಬೇಕೆಂಬ ಚಾಪಲ್ಯಕ್ಕೆ ತುತ್ತಾದ ಲೇಖಕಿಯರಲ್ಲಿ ಇವರೂ ಒಬ್ಬರು. ಇದು ಕಾದಂಬರಿಯೋ. ಭಾಷಣಗಳ ಸಂಕಲನವೋ ಎಂಬ ಸಂಶಯಕ್ಕೆ ಅಸ್ಪದ ಕೊಡುತ್ತದೆ. ಇವರು ಇದರ ಮುಂದಿನ ಭಾಗ ಬೇರೆ ಬರೆಯುತ್ತಾರೆಂತೆ! ಅದು ಬರುವ ಮೊದಲೇ ‘ವಕೀಲ್ ವೈದೇಹಿ (ಎರಡನೆಯ ಭಾಗ “ಬಹುಶಃ ಎರಡನೆಯ ಭಾಗವೇ ಇರಬೇಕು”) ತಪ್ಪದೇ ಓದಬೇಕಾದ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಸ್ಪಷ್ಟ ಚಿತ್ರವನ್ನೂ ತೋರಿಸುವ ಪುಸ್ತಕ” – ಎಂಬ ಮಾದರಿಯ ಜಾಹಿರಾತು ಬೇರೆ ಇದೆ.

ಒಲಿದ ಮನ (ಡಾ|| ವಿ.ಎಸ್. ಲಕ್ಷ್ಮೀ) ಕಾದಂಬರಿಯ ಭಾಷೆ ವಸ್ತು ನಿರೂಪಣೆ ಪಾತ್ರಚಿತ್ರಣ ಕುರಿತು ಉತ್ಪ್ರೇಕ್ಷಿತ ದುಬಾರಿ ಮೆಚ್ಚುಗೆ ಮಾತುಗಳಿವೆ. ಆ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಕಾದಂಬರಿ ಇದೆ. ಕೆಲವು ಬುದ್ಧಿವಂತರು ಹೊಗಳುವುದರ ಮೂಲಕ ತೆಗಳುತ್ತಾರಂತೆ. ಬಹುಶಃ ಪ್ರಾಜ್ಞರ ಆ ಲಕ್ಷಣಕ್ಕೆ ಒಂದು ಲಕ್ಷ್ಯವಾಗಿರಲೆಂದು ಈ ಪ್ರಶಂಸೆ ಮೊದಲ ಪುಟಗಳಲ್ಲಿ ಕಾಣಿಸಿಕೊಂಡಿದೆ. ಗೌಡರ ಪಾತ್ರ ಚಿತ್ರಣದಲ್ಲಿ ಕಾಣುವ ಅಲ್ಪಸ್ವಲ್ಪ ವ್ಯವಸ್ಥೆಯೂ ಡಾ|| ಲಲಿತ, ರವಿ, ತುಂಗೆಯರ ಪಾತ್ರದಲ್ಲಿಲ್ಲ. ಕನ್ನಡ ಭಾಷೆ ತನ್ನ ಜೀವಂತಿಕೆಯ ಲಕ್ಷಣ ಕಳೆದುಕೊಂಡು ಪುಸ್ತಕದ ಬದನೆಕಾಯಿ ಆಗಿದೆ. ಶೈಲಿಯಾದರೂ ನಿರ್ದೋಷವಾಗಿದ್ದರೆ ಕುಟುಂಬ ಯೋಜನೆಯ ಪ್ರಚಾರ ಮಾಧ್ಯಮವಾಗಬಹುದಿತ್ತು. ಪ್ರಧಾನವಾಗಿ ಇದು ರವಿಯ ಕಥೆ; ಎಳೆಯವನಾಗಿದ್ದಾಗಲೇ ತಾಯಿ ಸತ್ತಳು. ತಂದೆಯನ್ನು ಅತನಿಗಿದ್ದ ಕೆಟ್ಟನಡತೆಗಾಗಿ ಮನೆಯಿಂದ ಅಟ್ಟಿದರು. ತಾತನದೇ ಆರೈಕೆ. ಓದಿ ಪದವೀಧರನಾದ, ಅಮಲ್ದಾರನಾದ, ಅನ್ಯ ಜಾತಿಯ ಡಾ|| ಲಲಿತಳನ್ನು ಒಲಿದ, ತಾತ ಅಂತರ್ಜಾತೀಯ ವಿವಾಹ ವಿರೋಧಿಸಿದ. ತಾತನ ಮಾತು ವೇದವಾಕ್ಯ. ತಾತ ತೀರ್ಮಾನಿಸಿದ ಹೆಣ್ಣು ಗೌರಿಯನ್ನೇ ರವಿ ಕೈಹಿಡಿದ. ಲಲಿತ ರೈಲು ದುರಂತದಲ್ಲಿ ಮಡಿದಳು. ಸ್ಟಂಟ್ ಸಿನಿಮಾ ತೆಗೆಯಬಹುದು.

ಜೀವರಥ (ವಸಂತದೇವಿ) ಕಾದಂಬರಿಯ ಕೇಂದ್ರವ್ಯಕ್ತಿ ಕೇದಾರನಾಥ, ಆತ ತನ್ನ ಮನೆತನದ ಹಿನ್ನೆಲೆ ಸಂಸ್ಕಾರಗಳಿಂದ ಬೇರುಕಳಚಿಕೊಂಡು ನಗರದ ಬಾಳಿಗೆ, ಹೆಣ್ಣಿಗೆ ಸೋತು ಪಟ್ಟಣವಾಸಕ್ಕೆ ಶರಣಾದ ಕಥೆಯನ್ನು ಲೇಖಕಿ ಬಡಬಡ ಹೇಳಿದ್ದಾರೆ. ಕೇದಾರನಾಥನ ಜೀವನ ವಿಧಾನದಲ್ಲಿ ಸ್ಥಿತ್ಯಂತರಗಳುಂಟಾಗಲು ಪ್ರೇರಣೆಯಾದ ಕಾರಣಗಳೂ ಸ್ಪಷ್ಟವಾಗಿಲ್ಲ. ರಂಗನಾಥ, ಸೀತಾಲಕ್ಷ್ಮಿ, ಜಾಹ್ನವಿಯರಲ್ಲೂ ಆರೋಗ್ಯದ ಚಿಹ್ನೆಗಳು ಸಾಲವು. ಅನೇಕ ಅರೆಕೊರೆಗಳಿಂದ ಮುರಿದು ಮುಕ್ಕಾದ ಬೊಂಬೆಯನ್ನು ನೆನಪಿಗೆ ತರುವ ಕಾದಂಬರಿ ಇದು.

ಸುಮಂಗಲೆ (ವಿಜಯಶ್ರೀ) ಕಾದಂಬರಿ ತಲೆನೋವು ಇಲ್ಲದವರಿಗೆ ಬರಿಸುವ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುತ್ತದೆ. “ಹಸ್ತಪ್ರತಿ ರೂಪದಲ್ಲೇ ಕೃತಿಯನ್ನು ಓದಿ ಪ್ರಕಟಿಸಲರ್ಹ ಕೃತಿಯೆಂದು ಮೆಚ್ಚಿದ ಖ್ಯಾತ ಕಾದಂಬರಿಕಾರ್ತಿಯಾದ” ರೂ ಇದನ್ನು ಸರಿಯಾಗಿ ತಿದ್ದಿ ಬುದ್ಧಿ ಹೇಳಿದ್ದರೆ ಓದುಗರು ಅವರಿಗಾದರೂ ಋಣಿಯಾಗಿರಬಹುದಿತ್ತು.

ಇದು ಎಷ್ಟು ಎಳಸು ಬರೆಹ ಎಂಬುದಕ್ಕೆ ಲೇಖಕಿಯ ‘ಕೃತಜ್ಞತೆ’ಯಲ್ಲಿ ಬರುವ ಮಾತುಗಳು ಸಾಕ್ಷಿ ನುಡಿಯುತ್ತದೆ. ಕೂಲಂಕುಶವಾಗಿ ಕೃತಿಯನ್ನು ಓದಿ, ಲೇಖಕಿಗೆ ಅಭೇದ್ಯವಾಗಿದ್ದ ಅನೇಕ ಗುಣಗಳನ್ನು ಎತ್ತಿತೋರಿ. ಮನಃಪೂರ್ವಕವಾಗಿ ಕೃತಿಯನ್ನು ಮೆಚ್ಚಿದರವರಿಗೆ ನನ್ನಿಂದ ಹೇಗೆ ವಂದನೆ ಸಲ್ಲಿಸಬೇಕೋ ಅರಿಯೆ” ಈ ವಾಕ್ಯದ ಅರ್ಥ ಅಭೇದ್ಯ. ಕಾದಂಬರಿ ಬರೆಯಹೊರಟ ಇವರ ಧೈರ್ಯವನ್ನು ಸಹಾನುಭೂತಿಯಿಂದ ನೋಡಬೇಕು.

‘ಕೂಲಂಕುಶ’ ಶಬ್ಧ ಲೇಖಕಿಗೆ ಇರುವ (ಕನ್ನಡ) ಭಾಷೆಯ ಪರಿಚಯದ ಅಭಾವವನ್ನು ಕನ್ನಡಿಸುತ್ತದೆ. ಕೂಲ ಎಂಬ ಶಬ್ದಕ್ಕೆ – ಅಂಕುಶ ಎಂಬ ಮುಕ್ತ ಆಕೃತಿಮಾ ಸೇರಿ ಆದ ಸಮಾಸ ಕೂಲಂಕುಶವಾದರೂ ಇಂಥ ಶಬ್ಧ ಕನ್ನಡ ಇಲ್ಲವೇ ಸಂಸ್ಕೃತ ಭಾಷೆಯಲ್ಲಿ ಇಲ್ಲ. ವಾಸ್ತವವಾಗಿ ಅದು ಕೂಲಂಕುಶ ಎಂದಿರಬೇಕು. ಕೂಲ ಎಂದರೆ ದಡ, ಕಷ ಎಂದರೆ ಉಜ್ಜಿಕೊಂಡು ಹೋಗುವುದು. ಕೂಲಂಕಷ ಎಂದರೆ (ನದಿ) ಎರಡು ದಡಗಳನ್ನು ಸ್ಪರ್ಶಿಸುತ್ತಾ ತುಂಬಿ ಹರಿಯುವುದು ಎಂಬುದು ವಿಶೇಷಾರ್ಥ. ಅದು ಶಬ್ದದ ಮೂಲಾರ್ಥದಿಂದ ಛಾಯೆಗಳು ತಲೆದೋರಿ ಸಮಗ್ರವಾಗಿ, ಅಮೂಲಾಗ್ರವಾಗಿ ಎಂಬ ಅರ್ಥಗಳುಂಟಾಗಿವೆ.

ಅಜ್ಜಿ ಮೊಮ್ಮಗಳ ನೋವು ನಲಿವುಗಳನ್ನೊಳಗೊಂಡ ಈ ಬರವಣಿಗೆಯಲ್ಲಿ ಮೊದಲ ಕೆಲವು ಪುಟಗಳಲ್ಲೇ ಅಜ್ಜಿಯ ಪ್ರಸ್ತಾಪ ಮುಗಿದುಬಿಡುತ್ತದೆ. ಅಲ್ಲಿಂದ ಮುಂದೆ ಉದ್ದಕ್ಕೂ ಪ್ರಧಾನ ಪಾತ್ರವಾದ ಮೊಮ್ಮಗಳ ಕಥೆ ಮುಂದುವರಿಯುತ್ತದೆ. ಮದುವೆಯಾಗಿ ಬಾಳಿನೊಸಗೆ ದಡಮುಟ್ಟಿತೆನ್ನುವಷ್ಟರಲ್ಲಿ ಗಂಡ ಸತ್ತು ಮುಂಡೆಯಾಗಿ ನಿಲ್ಲುತ್ತಾಳೆ. ಭಾವನ ಕಾಟ ಬೇರೆ. ತವರಿಗೆ ಹೋದರೆ ಅಲ್ಲಿಯೂ ಹಸಿ ಕಣ್ಣುಗಳ ಬೇಟೆ. ಈ ಇಕ್ಕಟ್ಟಿನಿಂದ ಪಾರಾಗಲು ತನಗೆ ನೆರಳು ನೆರವು ನೀಡಲು ಮುಂದೆ ಬಂದವನನ್ನು ಸೀರುಡ್ಕೆ ಮಾಡಿಕೊಳ್ಳುತ್ತಾಳೆ. ಮಕ್ಕಳೂ, ಮೊಮ್ಮಕ್ಕಳೂ ಸಂತಾನಶ್ರೀ ಅಚ್ಯುತವಾಗಿ ನಡೆಯುತ್ತದೆ.

ಕೋಳಿಗಳು ಮರಿ (ಮೊಟ್ಟೆ) ಹಾಕುವಷ್ಟು ಸುಲಭವಾಗಿ ಈ ಮಕ್ಕಳೂ, ಮೊಮ್ಮಕ್ಕಳೂ ಹುಟ್ಟಿ ಬೆಳೆಯುತ್ತಾರೆ. ಕಥೆಯಲ್ಲಿ ಒಂದು ಆಕಾರವಾಗಲಿ, ಉದ್ದೇಶ ವ್ಯವಸ್ಥೆಯಾಗಲಿ, ಚೆಲುವಾಗಲಿ ಕಂಡುಬರುವುದಿಲ್ಲ. ಭಾಷೆ ತೀರ ಕೃತಕ, ಭಾಷಾ ಶುದ್ಧಿಯ ವಿಚಾರ ಪ್ರಸ್ತಾಪಿಸುವುದು ಬೇಡ.

ಆತ್ಮ ಚರಿತ್ರೆಯ ಶೈಲಿಯೂ ಹಿತವಾಗಿಲ್ಲ. ವಿಧವಾವಿವಾಹ ಪ್ರತಿಪಾದನೆ ಗಂಭೀರವಾಗಿ ಪ್ರಭಾವಶಾಲಿಯಾಗಿ ತರುವುದು ಸಾಧ್ಯವಿತ್ತು. ಕಾದಂಬರಿಕಾರರ ನಿರೀಕ್ಷೆಯಿಂತೆ ಕಥಾನಾಯಕ ಓದುಗರ ಅನುಕಂಪೆಗೆ ಪಾತ್ರನಾಗುವುದಿಲ್ಲ. ಬದಲು ಅವಜ್ಞೆಗೆ ಅರ್ಹನಾಗುತ್ತಾನೆ. ಶಂಕರನ ಸಾವು ಅನಿವಾರ್ಯವಾಗಿತ್ತೆನ್ನಿಸದು. ಅದರಂತೆ ಚೆನ್ನಮ್ಮ ಅಸಹಾಯಳಾಗಿ ವರ್ತಿಸಿದ್ದೇಕೆಂಬುದು ನಿಚ್ಚಳವಾಗುವುದಿಲ್ಲ. ಅವಳನ್ನು ತನ್ನ ಒಡ ಹುಟ್ಟಿದ ತಂಗಿಯಂತೆ ಕಾಣುವ ರೇಣುಕನ ಪಾತ್ರದಲ್ಲಿ ಅವ್ಯಾವಹಾರಿಕ ಆದರ್ಶವಿದೆ. ಸನ್ನಿವೇಶಗಳು ಅಸಹಜ. ಕಥಾನಾಯಕ ಕಾಣುವ ಕನಸುಗಳೂ ಅವಾಸ್ತವ. ಭಾಷೆಯ ಬಿಗಿ, ಬಿನಿ, ಸೂಕ್ಷ್ಮಗಳನ್ನು ಗ್ರಹಿಸಿದ್ದಾದರೆ ಇವರು ಮೌಲಿಕ ಕೃತಿಗಳನ್ನು ರಚಿಸಬಲ್ಲರು.

ಅಂಜನಾ (ಶಾಂತಾಶಶಿಕಿರಣ) ಗುಣಭದ್ರಾಚಾರ್ಯರ (ಒಂಭತ್ತನೆಯ ಮತ್ತು ಹತ್ತನೆಯ ಶತಮಾನ) ಉತ್ತರ ಪುರಾಣದಲ್ಲಿ ಬರುವ ಅಂಜನಾದೇವಿಯ ಕಥೆಯನ್ನು ವಸ್ತುವಾಗಿರಿಸಿಕೊಂಡು ಬರೆದ ಪೌರಾಣಿಕವೆನ್ನಬಹುದಾದ ಕಾದಂಬರಿ, ಅಂಜನೆ ಪತಿವ್ರತೆ. ಅವಳ ಪಾತಿವ್ರತ್ಯದ ಅಗ್ನಿಪರೀಕ್ಷೆ ನಡೆದು ಕಡೆಗೆ ಅವಳ ಅಕಳಂಕ ಶೀಲದ ಧವಳಿಮೆ ಬೆಳಗುತ್ತದೆ. ‘ಪುರಾಣ ಕತೆಗೆ ಒಪ್ಪುವಂಥ ಗಂಭೀರಭಾಷೆ ಮತ್ತು ಶೈಲಿ, ಸರಳ ಕಾದಂಬರಿ ಸುಂದರವಾಗುವಂತೆ ಮಾಡಿದೆ’ (ಉದಯವಾಣಿ ೧೬-೧-೭೨) ಎಂಬ ವಿಮರ್ಶೆಯನ್ನು ತುಸು ಹಿಂಜರಿಕೆಯಿಂದ, ಒಪ್ಪಬಹುದು.

ಮುದುಡಿದ ತಾವರೆ ಅರಳಿತು (ಚಿತ್ರಲೇಖ) ಈ ಅವಧಿಯ ಲೇಖಕಿಯರ ಸವೆದ ಸಿದ್ದವಸ್ತು. ಮಧು ತನ್ನ ಗೆಳತಿಯರ ಮುಂದೆ ತಾನು ಮದುವೆಯಾಗುವುದಿಲ್ಲವೆಂದು ಪ್ರತಿಜ್ಞೆಮಾಡಿದ್ದಳಂತೆ, ಅವಳ ತಾಯಿ ಲಲಿತಮ್ಮನಿಗಿಂತ ತಂದೆ ರಾಯರು ಹಟವಾದಿಗಳು. ಅವರು ಮಗಳು ಮಧು ತೊಟ್ಟಿಲ ಕೂಸಾಗಿದ್ದಾಗಲೇ ದೇವರ ಮುಂದೆ ಸತ್ಯಮಾಡಿದ್ದಂತೆ ಚಂದ್ರಶೇಖರನಿಗೆ ಕೊಟ್ಟು ಮದುವೆ ಮಾಡಿದರು. ಮಗಳ ಮಾತನ್ನು ಲೆಕ್ಕಿಸಲಿಲ್ಲ. ಮಧು-ಚಂದ್ರ ನೂತನ ದಂಪತಿಗಳಾದರೂ ಅವರ ಮೊದಲರಾತ್ರಿ ಮಧುಚಂದ್ರವಾಗದೆ ಇಬ್ಬರೂ ಉತ್ತರ ದಕ್ಷಿಣ ಧ್ರುವಗಳಾಗಿ ಸಿಡಿದು ನಿಂತರಂತೆ….

ಹೀಗೇ ಇನ್ನಿತರ ವಿವರಗಳೂ, ಘಟನೆಗಳೂ, ಪಾತ್ರಗಳೂ, ವಿಚಾರಗಳೂ ಸಾಃಇತ್ಯದ ಸಂಭಾವ್ಯತೆಉ ಶ್ರುತಿಯೇ ಇಲ್ಲದೆ ಸುಳಿದು ಸೊರಗುತ್ತದೆ. ಓದುಗರು ೨೨೦ ಪುಟಗಳ ಅಸಂಬದ್ಧ ಕೊರೆತದ ಚಿತ್ರಹಿಂಸೆ ಸಹಿಸಿಕೊಳ್ಳುವುದು ಅಸಾಧ್ಯ. ಪುಸ್ತಕ ಕೈಗೆತ್ತಿಕೊಳ್ಳುವ ಮೊದಲು ಅರಳಿದ್ದ ಮನಸ್ಸು ಓದಿದಮೇಲೆ ಮುದುಡಿ ಕೊಳ್ಳುತ್ತದೆ.

ನಂಜುನೇಹ (ಯಾಮಿನೀ) ಇಂಗ್ಲಿಷ್-ಕನ್ನಡಗಳ ಚೌಚೌ. ಆದರೂ ಕಲಬೆರಕೆಯಲ್ಲಿ ರುಚಿಯಿರಲಿ, ಪಾಕವೇ ಇಲ್ಲ. ಅತಿಭಾವುಕತೆಯ ಅತಿಸಾರದಿಂದ ಸಾಹಿತ್ಯಕ ಗುಣಗಳನ್ನು ನೀಗಿಕೊಂಡು ಕಾದಂಬರಿ ಅಯಶಸ್ವಿಯಾಗಿದೆ.

ಹೂಬಿಸಲು (ಪ್ರೇಮಾಭಟ್) ಅತಿಭಾವುಕತೆಯ ಹೊರೆಯಿಂದ ಕುಸಿದ ಕಾದಂಬರಿ, ಜೀವನದ ಅನುಭವ ಇಲ್ಲವೇ ಸಾಹಿತ್ಯದ ಪರಿಚಯವಿಲ್ಲದೆ, ಮಾತನಾಡುವುದನ್ನು ಕಲಿಯುವ ಮೊದಲೇ ಹಾಡಲು ತೊಡಗಿದಂತೆ ಕಥೆಯ ಸಾಕಲ್ಯ ನಿರ್ವಹಣೆ ಬೇಕಾದ ಪೂರ್ವ ಸಿದ್ಧತೆಯ ಕೊರತೆ ಕಾಣುತ್ತದೆ. ಕಥೆ ಕಾದಂಬರಿಗಳನ್ನು ಆಕರ್ಷಕವಾಗಿ ರಚಿಸುವ ಶೈಲಿ ಇವರಿಗಿದೆ ಎಂಬುದು ಪ್ರಶಂಸನೀಯ.

ಅತ್ತು ನಗಿಸಿದಾಗ (ಆರ‍್ಯಾಂಬ ಪಟ್ಟಾಭಿ) ಸರ್ಕಸ್ಸಿನ ಸುತ್ತ ಸುತ್ತಿ ಲೇಖಕಿಯೂ ಸರ್ಕಸ್ಸು ಮಾಡಿರುವ ನಿರರ್ಥಕ ಕಾದಂಬರಿ, ಚಿಕ್ಕಪ್ಪ ಚಿಕ್ಕಮ್ಮನ ಹಂಗಿನ ಬಾನ ಉಂಡು ಬೆಳೆದ ಮಕ್ಕಳ ಬಾಳಿನ ನೀರಸ ನಿರೂಪಣೆ ಇಲ್ಲದೆ. ಹೇಳಿಕೊಳ್ಳುವಂತಹ ಹೊಸ ಗುಣಗಳಾಗಲಿ, ಸ್ವೋಪಜ್ಞತೆಯಾಗಲಿ, ವೈವಿಧ್ಯವಾಗಲಿ ಇಲ್ಲದ ಬಲಾತ್ಕಾರದ ಹೆರಿಗೆ.

ಜೀವನ ಜಾಲ (ಪಾರ್ವತಿ) ಕಾದಂಬರಿಯೂ ಉಳಿದ ಕಾದಂಬರಿಕಾರ್ತಿಯರ ಕೃತಿ ದೌರ್ಬಲ್ಯಕ್ಕೆ ಅಪವಾದವಲ್ಲ. ಜಟಿಲವೂ, ಸಂಕೀರ್ಣವೂ ಆದ ಇಂದಿನ ಜೀವನವನ್ನು ಚಿತ್ರಸಿಸಲೆತ್ನಿಸಿದ್ದಾರೆ. ಪ್ರಯತ್ನ ಶ್ಲಾಘ್ಯವಾದರೂ ವಸ್ತು ಲೇಖಕಿಯ ಹಿಡಿತಕ್ಕೆ ಸಿಕ್ಕಿಲ್ಲ. ಇಬ್ಬಂದಿ ಬದುಕು ನಡೆಸುತ್ತಿರುವ ಈಗಿನ ಜನ ಯಾಕಾಗಿ ಹಾಗೆ ಮಾಡುತ್ತಿದ್ದಾರೆಂಬ ಅನ್ವೇಷಣೆಗೆ ಉತ್ತರ ಅಷ್ಟು ಸುಲಭಗಮ್ಯವಲ್ಲವಾದರೂ ಅವರು ಜೀವನದ ಮೂಲಭೂತ ಪ್ರಶ್ನೆಗಳ ಅಳಕ್ಕೆ ಇಳಿಯದೆ ತಡಿತಡಿಯಲ್ಲೇ ತೇಲುತ್ತಾರೆ. ಕಾದಂಬರಿಯಲ್ಲಿ ಕ್ರಿಯೆಯೇ ಇಲ್ಲ. ವೈಚಾರಿಕತೆಯೂ ಪ್ರಸಂಗಗಳ ಮುಖಮುಖಿಯಲ್ಲಿ ಪ್ರತೀತವಾಗುವುದಿಲ್ಲ.

ನಳಿನಿ ಕಾದಂಭರಿಕಾರ್ತಿಯ ಕೈಗೆ ಸಿಕ್ಕು ನರಳಿ ಎಡಬಿಡಂಗಿಯಾಗಿದ್ದಾಳೆ. ಅವಳ ನೆನಪಿನ ಸುರುಳಿ ಅರಳುತ್ತಾ ಹೋಗುವ ತಂತ್ರ ಪರಸ್ಪರ ಪೂರಕವಾಗಿ ಅರ್ಥಪೂರ್ಣ ಸಂಕೇತಗಳ ಮೂಲಕ ಅಭಿವ್ಯಕ್ತಿವಾಗಿದ್ದಲ್ಲಿ ಆಕರ್ಷಕವಾಗಬಹುದಿತ್ತು. ನಳಿನಿಯ ತಾಯಿಯ ಪಾತ್ರ ಬಾಯಿಲ್ಲದವರು ಮಾತಾಡಿದಂತಿದೆ. ಗೌರಿ. ವಿಮಿ, ಸುನಂದ, ರಾಜಮ್ಮ ಸಿದ್ಧಪಾತ್ರಗಳು; ತೆಳ್ಳಗೆ ಬಳುಕುತ್ತಾರೆ. ಮೈತುಂಬಿಕೊಂಡು ನಿಲ್ಲುವುದಿಲ್ಲ. ಸತೀಶನ ಪಾತ್ರದಲ್ಲಿ ಕಾಣೂವ ಕಳಕಳಿ ಪ್ರಧಾನ ಪಾತ್ರವಾದ ನಳಿನಿಯ ಪಾತ್ರದಲ್ಲಿ ಅವಿಯಾಗಿದೆ. ಭಾವಾತೀರೇಕಕ್ಕೆ ಒಳಗಾಗಿಲ್ಲ. ಅನುಕಂಪೆ ಇದೆ -ಎಂಬೆಲ್ಲ ಮುನ್ನುಡಿಯ ಮೆಚ್ಚುಗೆ, ಕಾದಂಬರಿ ಓದಿದ ಮೇಲೆ, ಮರಳಿದ ಮನೆಯಾಗಿ ಪಿಚ್ಚೆನ್ನಿಸಬಿಡುತ್ತದೆ.

ಅಸಂಬದ್ಧತೆಯ ಅಂಶಗಳು ಕಡಮೆ ಇದೆ ಎಂಬುದೊಂದೇ ಸಮಾಧಾನ ಜೀವನದ ನೀರಸೆಯನ್ನು ನಿರೂಪಿಸುವುದೆಂದರೆ ನಿರೂಪಣೆಯೂ ನೀರಸವಾಗಬೇಕೆಂದು ಅರ್ಥವಲ್ಲ.

ಮಹಿಳಾ ಕಾದಂಬರಿಕಾರರ ಕಾದಂಬರಿಗಳೇನೂ ‘ಪುಸ್ತಕ ಮಾರುಕಟ್ಟೆ’ಯಲ್ಲಿ ‘ಚೆನ್ನಾಗಿ’ ಮಾರಾಟವಾಗುತ್ತವೆಂಬುದು ನಿಜ. ಕಾದಂಬರಿ ಸಂತೆಯಲ್ಲಿ ಎಲ್ಲ, ಎಲ್ಲರ ಕೃತಿಗಳೂ ಮಾರಾಟವಾಗುತ್ತಿವೆ (-ತ್ತವೆ). ಮಾರಾಟ ಪರಿಮಾಣ ಕೃತಿಯ ಮೌಲ್ಯ ಮಾಪನದಂಡ ಅಲ್ಲ. ಸಿನಿಮಾ ಹೆಜ್ಜೆಯಲ್ಲಿ ನಡೆಯಲೆತ್ನಿಸುವ ಮಹಿಳಾ ಕಾದಂಬರಿ ಕಾರರ ದೊಡ್ಡದಂಡೇ ಇದೇ. ಈ ಅನುಕರಣತೃಪ್ತರು ಸ್ವಂತಿಕೆಯ ಹಾದಿ ಹುಡುಕಿಕೊಂಡ ಹೊರೆತು ಮಹತ್ವಪೂರ್ಣ ಕಾದಂಬರಿಗಳನ್ನು ಬರೆಯಲಾರದು. ಈ ಕುಂದೇ ಅವರಿಗೆ, ತಮ್ಮ ಅನುಭವಕಕ್ಷೆಗೆ ದಕ್ಕಿದ ಜೀವನ ವೈವಿಧ್ಯವನ್ನು ಯಥಾವತ್ತಾದ ವಿವರಗಳ ನಿರೂಪಣೆಯಲ್ಲಿ ಸೆರೆಹಿಡಿದಿಡುವ ಸೃಜನ ಸಾಮರ್ಥ ಸಿಗದಂಥೆ ದೊಡ್ಡ ಮುಳುವಾಗಿದೆ. ನಿರಾಯಾಸವಾಗಿ ಬರೆಯ ಹೊರಟರಷ್ಟೇ ಸಾಲದು; ಕಾದಂಬರಿ ಉತ್ಪಾದಕರಾಗದೆ ಸರಜನಶೀಲ ಸಾಹಿತ್ಯದ ಕಲ್ಪನೆ ಹೊಂದಿರಬೇಕು.

ಲೇಖಕಿಯರಲ್ಲಿ ಹಲವಾರು ಸಣ್ಣಕಥೆಯಿಂದ ಕಾದಂಬರಿಗೆ ವಿಸ್ತರಿಸಿದ್ದಾರೆ. ಸಂತೋಷದ ವಿಷಯ. ಇಲ್ಲಿಯಾದರೂ ಅವರು ವಸ್ತುವನ್ನೂ, ಭಾಷೆಯನ್ನೂ ಜೀವಂತವಾಗಿ ಸಮರ್ಪಕವಾಗಿ ಸಹಜವಾಗಿ ಬಳಸುವುದಕ್ಕೆ ಆದ್ಯತೆ ಕೊಡಬೇಕಿತ್ತು.

ಸುಂದರಿಯರ ಕೊಲೆ (ಪುಲಿಕೇಶಿ) ಸಾಮಾನ್ಯ, ತೀರ ಸಾಮಾನ್ಯ ಮಟ್ಟದ ಪತ್ತೇದಾರಿ, ವಿಚಾರವಂತಿಕೆಯ ಕೊಲೆಯ ಹೊರತಾಗಿ ಇದರಲ್ಲಿ ಪತ್ತೇದಾರಿಯೇ ಇಲ್ಲ.

ಅಡಿಗೆಭಟ್ಟ ಸುಬ್ಬಯ್ಯ ಮೊದಲು ಒಬ್ಬ ನಟಿಯನ್ನೂ ಆಮೇಲೆ ಲಲಿತಳನ್ನೂ ಕೊಂದುದಲ್ಲದೆ ಸೀತಮ್ಮ ಎಂಬಾಕೆಯನ್ನು ಬುಟ್ಟಿಗೆ ಹಾಕಿಕೊಂಡು. ಕಡೆಗೆ ವೆಂಕಟಸ್ವಾಮಿ ಎದೆಗೆ ಚೂರಿಹಾಕುವಾಗ ಸಿಕ್ಕಿಬಿದ್ದು ಮಿಖದ ಮುಸುಗು ಗೆತೆದಾಗ ಅವನ ಗುಟ್ಟೆಲ್ಲಾ ರಟ್ಟಾಯಿತು. – ಇದು ಪತ್ತೇದಾರಿ.

ಇದನ್ನು ಮುಗ್ಧರ ಮುಂದೆ ಹೇಳಿ ಪಾರಾಗುವುದೂ ಕಷ್ಟ.

ಎರಡು ದೆವ್ವಗಳು (ನರಸಿಂಹಯ್ಯ) ಹೇಳಿದ್ದೇ ಹೇಳಿ ಹಿಂಜಿ ಹಿಗ್ಗಲಿಸಿ ಬರೆದು, ಓದುಗರಿಗೆ ನರಕಯಾತನೆಯ ಚಿತ್ರಹಿಂಸೆ ಕೊಡುವ ತಂತ್ರ. ಈ ನೆಲದ ಮೇಲೆ ನಿಲ್ಲದ ವಸ್ತು, ಅಸಹ್ಯವಾಗುವಷ್ಟು ಕೃತಕ ವಸ್ತು, ಪಾತ್ರ, ನಿರೂಪಣೆ. ಕನ್ನಡಕ್ಕೆ ಈ ದೆವ್ವಗಳ ಜೊಳ್ಳುಬರೆಹ ಬೇಕಿಲ್ಲವೆನ್ನಿಸುತ್ತದೆ.

ಅಂತೋಣಿ ಆಯಿಷಳ ಮದುವೆ, ಗಂಡುಮಗುವಿನ ಜನನ, ಗಂಡಹೆಂಡಿರ ಸಾವು, ಹಿಂದೂ ಹುಡುಗಿಯನ್ನು (ಈ ದಾಂಪತ್ಯದ ಫಲವಾಗಿ ಮಗ) ಮದುವೆಯಾಗದಂತೆ (ಮೂರು) ಬೇರೆ ಬೇರೆ ಜಾತಿಗೆ ಸೇರಿದ ದೆವ್ವಗಳು ಬಂದು ದೇವನಾಯಕನನ್ನು ಪೀಡಿಸುತ್ತವೆ, ಅವರವರ ಜಾತಿಗೆ ಸೇರಿದ ಹುಡುಗಿಯನ್ನೇ ಮದುವೆಯಾಗುವಂತೆ.

– ಇದು ದಾಸ್ತಾನು, ಜಡ್ಡುಹಿಡಿಯುವಷ್ಟು ಗೊಡ್ಡುವೇದಾಂತವನ್ನು ತಂದು ತುರುಕಿದ್ದಾರೆ. ಹೊರೆಹೊರೆಯಾಗಿ ಹರಿಯುವ ಉದ್ಧೃತ ಭಾಗಗಳಲ್ಲೂ ಅಸಾಂಗತ್ಯವೇ ತುಂಬಿ ಮಹಾಪರ್ಯಾಸ ಕಂಡುಬರುತ್ತದೆ. ವಿಭಿನ್ನ ಧರ್ಮಗ್ರಂಥಗಳಿಂದ ಆಯ್ದ ಭಾಗಗಳನ್ನು ಅನಾಮತ್ತಾಗಿ ತಂದು ಕುಣಿಕೆಹಾಕಿ ಒಂದೆಡೆ ಪೋಣಿಸಿಬಿಟ್ಟರೆ ಅದೇ ಒಂದು ಹೊಸ ಹೊತ್ತಗೆಯಾದೀತೆಂಬ ಭ್ರಾಂತಿಯ ಗ್ರಂಥವಿದು.

ರೈಲಿನ ರೂಪಸಿ (ಹೆಚ್.ವೆಂಕಟೇಶ್) ಒಂದು ತರಲೆ ಪತ್ತೇದಾರಿ ಕಾದಂಬರಿ. ಯಾವುದೋ ಒಂದು ಹೊಯ್ದಾಟಕ್ಕೆ ಸಿಲುಕಿಕೊಂಡ ಇವರ ಮನಸ್ಸು ಪತ್ತೇದಾರಿ ಪುಸ್ತಕವನ್ನು ಬರೆಯಬೇಕೆಂಬ ನಿರ್ಧಾರಕ್ಕೆ ಬಂದು ಈ ಸಣ್ಣ (೧೨೮ ಪುಟಗಳ) ಹೊತ್ತಗೆಯನ್ನು ರಚಿಸಿದ್ದಾರಂತೆ. ಮನಸ್ಸು ಹೊಯ್ದಾಟಕ್ಕೆ ಸಿಕ್ಕಿದವರೆಲ್ಲಾ ಈ ರೀತಿ ಸಿಕ್ಕಾಪಟ್ಟೆ ಹೊತ್ತಗೆಗಳನ್ನು ಬರೆದು ರಾಶಿಹಾಕಿದರೆ ಸಾಹಿತ್ಯದ ಸಮಾಧಿ ಸಿದ್ಧ.

“ಕೃತಿಯ ಬಗೆಗೆ ಹೇಳುವುದೆಂದರೆ ನನ್ನ ಮನಸ್ಸಿನ ನಿರ್ಧಾರದಂತೆ ನಾನು ಕೃತಿಯನ್ನು ರಚಿಸಲೋದಾಗ ಇನ್ನೂರ ಅರವತ್ತು ಪುಟಗಳು ಬರೆದರೂ ಕೃತಿ ಮುಗಿಯುದೆ ಮುಂದೆ ಮುಂದೆ ಸಾಗುತ್ತಲೇ ಇತ್ತು. ಆಗ ನನ್ನ ಮನಸ್ಸಿಗೆ ತೋಚಿದ್ದು ಎರಡು ಭಾಗಗಳನ್ನಾಗಿ ಮಾಡುವುದಷ್ಟೇ!” – ಈ ಕುತರ್ಕಕ್ಕೆ ಸಾಟಿಯಾದದ್ದು ಇಲ್ಲಿಯಾದರೂ ಉಂಟೆ? ಕೃತಿಕಾರನ ಯೋಗ್ಯತೆ ಸಿದ್ಧತೆಗಳನ್ನು ಈ ಮಾತುಗಳೇ ಮಾರ್ದನಿಗೊಡುವಾಗ ಬೇರೆ ವಿಮರ್ಶೆ ಬೇಡ.

ಇವರ ಮುಂದುವರಿದ ಮಾತುಗಳು: ಈ ಪತ್ತೇದಾರಿ ಕಥೆ ಇಲ್ಲಿ ಅಪೂರ್ಣವಾಗಿದೆಯಂತೆ. ಅದರಿಂದ ಓದುಗರಿಗೆ ನಿರಾಶೆಯುಂಟು ಮಾಡಿದೆಯಂತೆ. ಓದುಗರಿಗೆ ನಿರಾಶೆಯಾಗಿರುವುದೇನೋ ನಿಜ, ಇಂಥದನ್ನು ಬರೆದುದೇ ಅಲ್ಲದೆ ಅಚ್ಚುಮಾಡಿಸಿರುವುದರಿಂದ. ಇದು ಸಾಲದೆಂಬಂತೆ ಮುಂದಿನ ಭಾಗವನ್ನು ಬೇಗ ಹೊರತರುತ್ತಾರಂತೆ. ಇವರು ಹಾಕಿರುವ ಈ ಬೆದರಿಕೆಯನ್ನು ಹಿಂತೆಗೆದುಕೊಂಡು, ಈ ಪುಸ್ತಕ ಓದಿ ಆಗಿರುವ ನಿರಾಶೆಯ ಅಧಿಕ್ಯವನ್ನು ಅಷ್ಟುಮಟ್ಟಿಗಾದರೂ ತಡೆಗಟ್ಟಿದರೆ ಉಪಕಾರ ಮಾಡಿದಂತೆ.

ಕಣಿವೆಯ ಮನೆ (ವಿ. ಜಿ. ಕೃಷ್ಣಮೂರ್ತಿ) ಪತ್ತೇದಾರಿಯೂ ಯಾವ ಹೆಚ್ಚಿನ ಮಾತುಗಳನ್ನಾಗಲಿ, ವಿಮರ್ಶೆಯನ್ನಾಗಲಿ ಬಯಸುವ ಕಳಪೆ ಕೃತಿ. ‘ಜೇಮ್ಸ್ಬಾಂಡ್ ಮಾದರಿ’ಯ ಈ ಕಪಟ ಪತ್ತೇದಾರಿಯನ್ನು ಪ್ರಕಟಿಸುತ್ತಿರುವುದು ಬರೆದವರಿಗೆ ಸಂತೋಷದ ವಿಷಯವಂತೆ. ಓದುಗರಿಗಂತೂ ಈ ರವಾನಿಸಬಾರದ ಅಂಚೆ ತಲುಪಿರುವುದು ದುರ್ದೈವ.

ಹದ್ದಿನ ಕಣ್ಣು (ಮಾ.ಭಿ.ಶೇ) ವಾಚಕವೃಂದ ನೀಡಿದ ಸಂತೋಷದಿಂದ ‘ಲೇಖನಿಗೆ ಹೊಸಸ್ಪೂರ್ತಿಯನ್ನಿತ್ತ’ ಫಲವಾಗಿ ಹುಟ್ಟಿದ ಪತ್ತೇದಾರಿ ಕಾದಂಬರಿ. ಇತರ ತಮ್ಮ ‘ಜನಪ್ರಿಯ ಕಾದಂಬರಿಗಳ’ ಸಾಲಿಗೆ ಇದೂ ಸೇರುವುದರಲ್ಲಿ ಇವರಿಗೆ ‘ವಿಶ್ವಾಸವಿದೆ’ ಅಲ್ಲದೆ “ಈ ಹೊಸ ವರುಷದಲ್ಲಿ ಎರಡು ಕಾದಂಬರಿಗಳನ್ನು ಖಂಡಿತಾ ಬರೆಯುತ್ತೇನೆ” ಎಂಬ ಅಸ್ಪಲಿತ ಆಶ್ವಾಸನೆ ಕೊಟ್ಟಿದ್ದಾರೆ. ವಾಙ್ಮಯ ವ್ಯವಸಾಯ ಮಾಡದೆ ಗ್ರಂಥಪೂರ ಹರಿಸುವ ನಿರ್ಧಾರಕ್ಕೆ ಅಂತ್ಯವಿರಾಮ ಹಾಕುವುದೊಳಿತು.

ಹದ್ದಿನ ಕಣ್ಣು ದೋಷಗಳ ಹುಣ್ಣು. ಹಲವು ಅವಾಸ್ತವ ಅಭ್ಯಾಸಗಳ ನಡುವೆ ಈ ಪತ್ತೇದಾರಿ ತೊಳಲಾಡುತ್ತದೆ. ಸರ್ಪಚುಂಬಲ ಉಂಗುರ, ದೀನನಾಥ ಓಡುವಾಗ ಹುತ್ತಕ್ಕೆ ಡಿಕ್ಕಿ ಹೊಡೆದದ್ದು. ಹುತ್ತ ಅವನ ಡಿಕ್ಕಿಗೆ ಪುಡಿಪುಡಿಯಾದದ್ದು (?). ಹುತ್ತದ ದೊಗರಿನಲ್ಲಿ ದೀನನಾಥನ ಕಾಲು ಸಿಕ್ಕಿ ಹುತ್ತದಿಂದ ಸಿಡಿದೆದ್ದ ಸರ್ಪಗಳಿಂದ ಕಚ್ಚಿಸಿಕೊಂಡು ಸತ್ತುಬಿದ್ದದ್ದೂ. ಮೋಹಿನಿ ಉಂಗುರದ ವಿಷದಿಂದ ‘ವಿಲಿವಿಲಿ’ ಒದ್ದಾಡಿ’ ಸತ್ತದ್ದೂ ಕುಮಾರ ಹಾಗೂ ಅಂತೋಣಿ ‘ಮರದ ಕೊಂಬೆಗಳ ಮೂಲಕ ನಾರು ಹಾಗೂ ತಮ್ಮ ಬಟ್ಟೆಗಳನ್ನು ಕಟ್ಟಿ ಒಂದು ಚಿಕ್ಕ ತೆಪ್ಪ ನಿರ್ಮಿಸಿ’ ಅದರ ಮೇಲಿಂದ ಹೊಳೆ ದಾಡುವುದೂ, ಮೊಸಳೆ ಬಾಯಿಗೆ ಅಂತೋಣಿಯನ್ನು ತಳ್ಳುವುದೂ. ಕುಮಾರ ಸಿಂಹಕ್ಕೆ ಆಹಾರವಾಗುವುದೂ – ಇವೆಲ್ಲ ರೋಮಾಂಚಕ ಪತ್ತೇದಾರಿ ಅಲ್ಲದೆ ಮತ್ತೇನು? ಚಂದೂಲಾಲ್, ರಾಧಾ, ಸುಂದರ್, ನಾಯರ್, ರಾಧಾ ಕುಡಿಯುವುದು, ಇತ್ಯಾದಿ ಪಾತ್ರಗಳೂ ಘಟನೆಗಳೂ ಕಣ್ಣೂ ಮಿಟಿಕಿಸುತ್ತವೆ.

ಇಲ್ಲಿಯ ಭಾಷೆಯ ವಿಚಾರ ಹೇಳದಿರುವುದು ಒಳ್ಳೆಯದು.

ಇದೇ ಮಾದರಿಯನ್ನು ಮುಂದುವರಿಸಿವೆ – ಮಾರೀಚನ ಮರ್ಮ (ನರಸಿಂಹಯ್ಯ) ಪತ್ತೆಯಾಗದ ಕೊಲೆ (ಗುಂಡಾಶಾಸ್ತ್ರ) ಹಾಗೂ ಎರಡು ಚೂರಿಗಳು (ರಾಮಮೂರ್ತಿ) ಇವುಗಳಲ್ಲಿ ಕ್ಷುಲ್ಲಕ ರೋಮಾಂಚವಿದೆ. ಸಾಹಸವಿಲ್ಲ; ನಿರೂಪಣೇ ಘಟನೆ ಕೊಲೆ ಸುಲಿಗೆ ವ್ಯಭಿಚಾರ ಗೂಢಚಾರ ಎಲ್ಲ ಉಂಟು, ಸಾಹಿತ್ಯಕ್ಕೆ ಮೌಲ್ಯ ಇಲ್ಲ. ಈ ಕಾದಂಬರಿಗಳ ಪತ್ತೇದಾರಿ ತಡಿಕೆ ಅಭದ್ರವಾಗಿದೆ.

ನಿದರ್ಶನ –

ಅರಿಂಜಯನ ಪತ್ತೇದಾರಿಕೆ ವೈಭವಕ್ಕೆ ಮೀಸಲಾದ ಮಾರೀಚನ ಮರ್ಮ ಕಾದಂಬರಿಯಲ್ಲಿ ಪದ್ಮನಾಭಯ್ಯ (ಮಾರೀಚ)ನೇ ಅಳು ಕೆಂಚಯ್ಯನ ಕೊಲೆಗಾರ ಹಾಗೂ ಉಳಿದ ಕಾರ್ಯ-ಕ್ರೌರ್ಯಗಳ ಪಾಲುಗಾರನೆಂದು ಅರ್ಧ ಕಾದಂಬರಿ ಓದುವ ಮೊದಲೇ ಓದುಗರಿಗೆ ಪತ್ತೆಯಾಗುತ್ತದೆ. ಪ್ರತಾಪ ಡ್ರೈವರ್ (ಭದ್ರಯ್ಯ) ಆಗಿ ಬರುವುದೂ ಹಳೆಯ ಡ್ರೈವರ್ ಕಣ್ಣಪ್ಪ ಪ್ರೇಯಸಿ ರಾಗಿಣಿಯೊಡನೆ ಕಣ್ಮರೆಯಾಗುವುದೂ, ಪ್ರೇಮನಾಥ ನಳಿನಿ ಹುಸೇನ ವೀರಶೇಖರ ರಾಜಾಸ್ವಾಮಿ ಸಾವಪ್ಪ ಇವರ ಮನೆಗಳ ಡಕಾಯಿತಿ-ಇವು ನೇರ ಗೆರೆಯೆಳೆದು ರೂಪಿಸಿದಂತಿವೆ.

ಸುಲಿಗೆ ಕೊಲೆ ರಕ್ತಪಾತ ಮಾಯ ಮಂತ್ರ ಮಾಟ ಕಾಡು ಪಿಸ್ತೂಲು ಕುಡಿತ ಹೆಣ್ಣು ವಾಹನ ರಹಸ್ಯ ಹೋರಾಟ ಒಬ್ಬಕೇಡಿ ಇನ್ನೊಬ್ಬ ಇನ್ಸ್ ಪೆಕ್ಟರ್ ಮತ್ತೊಬ್ಬ ಪತ್ತೇದಾರಿ ಕಡೆಗೊಂದು ಕೋರ್ಟು-ತೀರ್ಪು-ಇವಿಷ್ಟೇ ಪತ್ತೇದಾರಿ ಕಾದಂಬರಿಯ ಜೀವಾಳವೆಂದು ಈ ಲೇಖಕರು- ಜನಪ್ರಿಯ ಓದುಗರು’ ತಿಳಿದಂತೆ ತೋರುತ್ತದೆ. ಕೇವಲ ಇಂಗ್ಲಿಷ್ ಕಾದಂಬರಿಗಳ ಆಕರ, ಅನುಕರಣೆಗೆ, ನಕಲಿಗೆ, ಸೀಮಿತವಾಗುವುದು ತಪ್ಪಬೇಕು. ವಸ್ತು ಅರಿಸಲು ಕನ್ನಡೇತರ ಪರಿಸರಕ್ಕೆ ಧಾವಿಸಿ ದಾಸರಾಗದೆ ಇಲ್ಲೇ ಈ ನೆರೆಹೊರೆಯಲ್ಲೇ ಆಗಿಹೋದ ಘಟನೆಗಳನ್ನು (ಅಂಶಿಕವಾಗಿಯಾದರೂ)ಆಧರಿಸಿ. ಪತ್ತೇದಾರಿ ಕಾದಂಬರಿ ಬರೆಯುವ ಸಾಧ್ಯತೆಗಳನ್ನು ನೋಡಬೇಕು. ಅಂಥ ಪ್ರಯತ್ನಗಳಿಂದ ವಾಸ್ತವ ಪ್ರಜ್ಞೆಯಷ್ಟೇ ಅಲ್ಲದೆ ಕಥೆಗೆ ಗಟ್ಟಿತನ ಬರುತ್ತದೆ. ಓದುಗರು ಕುತೂಹಲ ಹೆಜ್ಜೆ ತುದಿಗಾಲಿನಲ್ಲಿ ನಿಲ್ಲುವಂತೆ, ಊಹೆಗಳು ಹುಸಿಯಾಗಿ ಕಥೆ ದಿವ್ಯ ತಿರುವು ಪಡೆಯುವಂತೆ, ಓದುಗರನ್ನು ದಣಿಸುತ್ತ ಕಡೆಗೆ ಅಚ್ಚರಿ ಮೂಡಿಸಿ ತಣಿಸುವಂತೆ ರಚಿಸಿದ ಪತ್ತೇದಾರಿ ಕಾದಂಬರಿ ಒಂದೂ ರಚಿತವಾಗಿಲ್ಲ.

ಹರಿಣಿ ಹಾಗೂ ಮನಸು ಕಂಡ ಕನಸು (ಅನು : ಎಂ.ಜಿ. ಭೀಮರಾವ್) ಎರಡೂ ತೆಲುಗು ಭಾಷೆಯಿಂದ ಅನುವಾದವಾಗಿರುವ ಕೃತಿಗಳು. ಈ ಅನುವಾದಕರು ಕಾದಂಬರಿ ಬರೆಯುವುದನ್ನು ಉದ್ಯೋಗ ಮಾಡಿಕೊಂಡಿರುವಂತೆ ಕಾಣುತ್ತದೆ. ಇಷ್ಟ, ಸ್ಪೂರ್ತಿ, ವಸ್ತು ಸಂವೇದನೆ, ಇಲ್ಲದಿದ್ದರೂ ವರತ್ತಿ ನಡೆಸಬೇಕಾದ ಲಾಭಕೋರ ಉದ್ಯೋಗಿಯಂಥೆ ಇವರು ಬರೆಯುವ ರೀತಿ ಇದೆ. ಇವರ ಉಳಿದ ಕೃತಿಗಳಲ್ಲಿ ಇನ್ನೂ ಮೂರು ಪುಸ್ತಕಗಳನ್ನು ಓದಿರುವುದರಿಂದ ಇವರ ಒಟ್ಟು ಬರೆಹಕ್ಕೆ ಸಂಬಂಧಿಸಿದಂತೆ ಹೇಳಬಹುದಾದ, ಮಾತು, ಈ ಬಗೆಯ ಬರವಣಿಗೆ ನಿಂತರೆ ಕನ್ನಡಕ್ಕೆ ಯಾವ ನಷ್ಟವೂ ಆಗುವುದಿಲ್ಲ.

ಸಂಸ್ಕೃತ ಭೂಯಿಷ್ಠವಾಗಿ, ಒಮ್ಮೊಮ್ಮೆ ಆವೇಶದಿಂದ, ಶಬ್ದಗಳ ದುಂದು ವೆಚ್ಚ ಮಾಡಿ ಓದುಗರ ತಲೆ ಚಿಟ್ಟು ಹಿಡಿಸುತ್ತಾರೆ. ಸಂಭಾಷಣೆಯಲ್ಲಿ ಸಹಜತೆಯ ಸ್ಪರ್ಶವೂ ಆಗದಂತೆ ಎಚ್ಚರ ವಹಿಸಿದ್ದಾರೆ. ವಾಕ್ಯರಚನೆ ಶೈಥಿಲ್ಯದಿಂದ ಒಡೆದ ಕನ್ನಡಿಯನ್ನು ನೆನಪಿಸುತ್ತದೆ. ೧೨, ೩೧, ೩೫, ೩೭, ೭೩, ೯೬, ೧೦೩, ೧೧೬, ೧೨೧, ೧೯೩ ಇತ್ಯಾದಿ ಪುಟಗಳಲ್ಲಿ ಅವಶ್ಯ ಅವಲೋಕಿಸಬೇಕು ಹರಿಣಿ ಪುಸ್ತಕದಲ್ಲಿ.

ಇವರಿಗೆ ಸಂಸ್ಕೃತ ಇಂಗ್ಲಿಷ್ ಭಾಷೆಗಳ ಕಿಂಚಿತ್ ಪರಿಚಯವಿದೆ. ಆದರೆ ಕನ್ನಡ ಇನ್ನೂ ಚೆನ್ನಾಗಿ ಬರಬೇಕಿತ್ತು. ವಿದ್ಯಾರ್ಥಿನಿಯರು ವಿದ್ಯಾರ್ಥಿನಿಲಯದಲ್ಲಿದ್ದಾಗ ನಡೆದು ಕೊಳ್ಳುವ ರೀತಿಯನ್ನು ಇವರು ಅಗದೇ ಭಯಂಕರವಾಗಿ ಊಹಿಸಿ ಕಡೆಗೂ ಸೋತಿದ್ದಾರೆ. ಹುಡುಗಿಯರು ಅವರವರು ಕಲೆತಾಗ ಮಾತನಾಡಿಕೊಳ್ಳುವ ಬಗೆ ತಿಳಿಯದಿದ್ದರೆ ತಪ್ಪಗಿರಬೇಕು. ಆದರಿಂದ ಅಪಮಾನವಿಲ್ಲ. ತೋಚಿದ್ದನ್ನು ಗೀಚಿ ತಮ್ಮ ಅಜ್ಞಾನ ಪ್ರದರ್ಶನ ಮಾಡಬಾರದು. ಪ್ರಣಯದ ವಿಚಾರವಾಗಿ ಹೆಣ್ಣು ಮಕ್ಕಳು ಎಷ್ಟು ಹಗುರವಾಗಿ, ಧಾರಾಳವಾಗಿ ಮಾತನಾಡುವರೆಂಬುದನ್ನು ಇವರ ಬರೆಹದ ಆಧಾರದಿಂದ ನಂಬಿ ಮೋಸಹೋಗಬಹುದು.