ನಿಘಂಟಿನಲ್ಲಿರುವ ಶಬ್ಧಗಳನ್ನು ಬಳಸಬೇಕೆಂಬ ಲೇಖನ ಚಾಪಲ್ಯವಿದೆ. ವ್ಯಾವಹಾರಿಕ ಕನ್ನಡ ಬಿಟ್ಟುಕೊಟ್ಟು ಸಂಭಾಷಣೆ ಸಪ್ಪೆ ಮಾಡಿಸಿದ ಉದ್ದೇಶ ಅಸಾಧು. ಅಲ್ಲದೆ ಇದು ಚಾರಿತ್ರಿಕ ಕಾದಂಬರಿಯೂ ಅಲ್ಲ.

“ಖರ್ಚು ಸಂಯೋಗದಿಂದ”

“ಹರಿಣೀಯ ಛಾರ್ಚ್ ಕೇಳಿ ಕೊಂಚ ತಡೆದಳು ತಾರ”.

“ಏನೂ ಅರಿಯದ ಅರ್ಭಕತೆಯಿಂದ ಬರುತ್ತಿದ್ದ ನಗುವನ್ನು….”

(ತಾಯಿ ಮಗಳ ಬಳಿ ಹೇಳುವ ಧಾಟಿ) “ ವಿವೇಕದಿಂದ ವಿಶಾಲ ದೃಕ್ಪಥದಿಂದ ಧೈರ್ಯ ಗಾಂಭೀರ್ಯಗಳಿಂದ ಅಡಿ ಇರಿಸುತ್ತಿ ಎಂದುಕೊಂಡಿದ್ದಾರೆ ಕೇವಲ ಒದು ಯಃಕಶ್ಚಿತ ಸುಖಕ್ಕೋಸ್ಕರ ವಿಚಕ್ಷಣಾ ಜ್ಞಾನವನ್ನೂ ಕಳೆದುಕೊಂಡು”

“ನಿನಗೆ ಸಂಪೂರ್ಣ ಸ್ವೇಚ್ಛೆ ಸ್ವತಂತ್ರತೆಗಳನ್ನು ಕೊಟ್ಟು……”

“ರಾತ್ರಿ ಮೆಸ್ ನಲ್ಲಿ ಪ್ರತಿದಿನವೂ ರೊಟ್ಟಿ ಆಲೂಗಡ್ಡೆ ಪಲ್ಯವನ್ನೂ ಬೇಸರಿಸಿಕೊಳ್ಳುತ್ತಿದ್ದ ಹರಿಣಿ ಮೌನದಿಂದ…”

“ಒಂಥೆಲ್ಲೊ ಹಾಗಿದ್ದ ಮಾತ್ರ ಅವನಂತೆ ಅಪಾಮಾರ್ಗ ಹಿಡಿಯುತ್ತಾರೇನೋ?”

“ನೊಸಲ ಮೇಲೆ ಕೊಂಚ ಕಿತ್ತಂತಾಗಿ…..”

“ನನಗೆ ಮೊಗ್ಗಿನ ಜಡೆ ಹಾಕಲಿಲ್ಲವೆಂದು ನಮ್ಮತ್ತೆಗೆ ದುಃಪ್ತಿ ಇದ್ದಂತಿತ್ತು”

“ಅತ್ತಿಗೆಯ ಧಾಳಿಗೆ ಅಪ್ಪ ತಿರೋಗಮಿಸಿದರು.”

“ನಕ್ಕಷ್ಟು ವಿಕ್ಕನೆವಾದಿರದೆ ಕಂಠ ಮಾಮೂಲಿನಂತೆಯೇ ಇತ್ತು”

“ಅರೆಸ್ಟ್ ಅದವರ ಪೈಕಿ ಮೂರು ಒಬ್ಬ ವ್ಯಕ್ತಿ”

ತರಿದವನ, ಕುರುಪಿ, ಕರುಣಿಯುಂಟಾಗಲಿಲ್ಲ, ಮುಖ್ಖಾಲೆಲ್ಲಾ, ನಿರ್ದಶನ, ಮಾಳಿನಿಂದ, ಅಸ್ಪೇ, ಅಲೋವಬಲ್, ಅಪ್ಯಾಯತೆ, ಇಗಿನಂಥೆ, ಹೂವಾಗಿರಲಿಲ್ಲ. ಮೈದುತ್ತ ಮಂದಿನೂರು, ನಿರ್ಧಾಗ್ಯ, ಅಸಮಾನಿಂದ-ಮೊದಲಾದ ನೂರಾರು ಪ್ರಯೋಗಗಳಲ್ಲಿ ಅನೇಕವು ಮುದ್ರಣ ಸ್ಖಾಲಿತ್ಯಗಳಿರಬಹುದು.

ಇವರಿಗೆ ಎಂದೋ ಕಲಿತ ನಾಲ್ಕು ಸಂಸ್ಕೃತ ಶಬ್ದಗಳನ್ನು ಇಲ್ಲವೇ ಇಂಗ್ಲಿಷ್ ಶಬ್ದಗಳನ್ನೂ. ಇವೆರಡರ ಬೆರಕೆ ಪದಗಳನ್ನು ಹೇಗಾದರೂ ಮಾಡಿ ಬಳಸಬೇಕೆಂಬ ಹೆಬ್ಬಯಕೆ-ಓದುಗರು ಮನ್ನಿಸಬೇಕು. ಹಲವು ಸಲ ಇವರ ವಾಕ್ಯಗಳನ್ನು ನೋಡಿ “ಯಾಕಪ್ಪಾ ಈ ಕಷ್ಟ ಸರಿಯಾಗಿ ನಾವು ಮಾತನಾಡುವ ಕನ್ನಡದಲ್ಲಿ ಹೇಳಬಾರದೇ?” ಅಂಥ ಅನ್ನಿಸುತ್ತೆ ಕಾದಂಬರಿ. ವಸ್ತು ವಿಶೇಷಗಳ ವಿಷಯದ ಪ್ರಸ್ತಾಪ ಅನಗತ್ಯ. ಇದು ವಿಮರ್ಶೆಗೂ ಎಟುಕದ ಕೃತಿ. ಪಾತ್ರಗಳಗೆಲ್ಲ ಸಂಭಾಷಣೆಗಿಂತ ಉದ್ದುದ್ದ ಭಾಷಣಬಿಗಿಯುವ ಜಿಹ್ವಾಚಾಪಲ್ಯ. ಯಾವ ಸ್ಟಂಟ್ ಸಿನಿಮಾದಲ್ಲೂ ನಡೆಯುವ ಅತ್ಯಾಕಸ್ಮಿಕ ಅಸಹಜ ಘಟನೆಗಳು ಇಲ್ಲಿ ನಡೆಯುತ್ತವೆ. ಸುಂದರಿಯಾದವಳಿಗೆ ಬಣ್ಣದಲ್ಲೂ ಆಕಾರದಲ್ಲೂ ಗುಣದಲ್ಲೂ ರಾಕ್ಷಸನಾದವನು ಸಿಗುತ್ತಾನೆ. ಅದರಿಂದ ಜಿಗುಪ್ಸೆ ಹೊಂದಿ ಅವಳು ಆತ್ಮಹತ್ಯ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದ ಎರಡು ಸಲವೂ ವಿದ್ಯಾವಂತೆ ಅತ್ತೆ ಪ್ರತ್ಯಕ್ಷಳಾಗುತ್ತಾಳೆ. ಹರಿಣಿಯನ್ನು ಹೆತ್ತ ತಂದೆ ಕೈಹಿಡಿದ ಮಡದಿ (ಹರಿಣಿ ತಾಯಿ)ಯನ್ನು ಕೊಂದು ಮಗಳೂ ಹರಿಣಿಯನ್ನು ಹಗೆ ಹಿಡಿದು ಕರಡಿಯಂಥವನ ಕೊರಳಿಗೆ ಕಟ್ಟುವುದು, ಅನವಶ್ಯಕವೂ ಅರ್ಥಹೀನವೂ ಆದ ಮುಗಿತಾಯ – ಇವು ಈ ಲೇಖಕರ?) ಕಲೆ ಸ್ಪೂರ್ತಿ ಪ್ರತಿಭೆ ವ್ಯುತ್ಪತ್ತಿ ಲೋಕಾನುಭವ ಭಾಷಾಜ್ಞಾನ ಬಿಂಬಿಸುವ ಕನ್ನಡಿ.

ಮನಸು ಕಂಡ ಕನಸು ಕೂಡ ತೆಲುಗು ಕಾದಂಬರಿಯನ್ನು ಕನ್ನಡಕ್ಕೆ ಅಳವಡಿಸಲು ನಡೆಸಿರುವ ಅಸಮರ್ಥ ಪ್ರಯತ್ನ, ಮೂಲದಲ್ಲೇ ಇರಬಹುದಾದ ಮಂದಗಾಮಿ ರಚನೆಯ ವೈಪರೀತ್ಯದ ಜೊತೆಗೆ ಕನ್ನಡ ಲೇಖಕರ ಸಾಧಾರಣವಾದ ಶುಷ್ಕ ನಿರೂಪಣೆಯೂ ಸೇರಿ ಕಾದಂಬರಿ ಅಸ್ವಾದ್ಯವಾಗುವುದಿಲ್ಲ. ಅವಶ್ಯಕತೆಯಿದ್ದಷ್ಟು ಪಾತ್ರಗಳನ್ನು ಮಾತ್ರ ಬಳಸಿಕೊಳ್ಳಬೇಕು.

ಬೊಂಬೆಯ ಕುಣಿತದ ಕಥಾಪ್ರಸಂಗ (ಅನು: ಅ. ಶಂಕರ) ವಂಗ ಸಾಹಿತ್ಯವ ಹೆಸರಾಂತ ವಿಭೂತಿಭೂಷಣ ಬ್ಯಾನರ್ಜಿ, ತಾರಾಶಂಕರ ಬ್ಯಾನರ್ಜಿ ಹಾಗೂ ಮಾಣಿಕ್ಯ ಬ್ಯಾನರ್ಜಿ – ಎಂಬ ಬ್ಯಾನರ್ಜಿ ತ್ರಯರಲ್ಲಿ ಒಬ್ಬರಾದ ಮಾಣಿಕ್ ರ ‘ಪುತೊಲ್ ನಾ ಚೇರ್ ಇತಿ ಕಥಾ’ ಎಂಬ ಕಾದಂಬರಿಯ ಕನ್ನಡಾನುವಾದ.

ಹಳ್ಳಿಯ ಜನರ ಬಾಳನ್ನು ಕಂಡು ಎದೆಕರಗಿ ಬರೆದವರು ಮಾಣಿಕ್ ಬ್ಯಾನರ್ಜಿ. ಆ ಅನುಭವದ ಕೈವಾಡ ಇಲ್ಲಿಯೂ ಕಾಣುತ್ತದೆ. ವಂಗವಿಮರ್ಶಕರು ಇದನ್ನು ನೂತನ ಸಂವಿಧಾನದಲ್ಲಿ ಬರೆದ ಒಂದು ವಾಸ್ತವಿಕ ಕಾದಂಬರಿ ಎಂದೂ. ಇದರಲ್ಲಿನ ಕಥಾಶಿಲ್ಪದ ಪ್ರೌಢಿಯ ಅಪರೂಪವಾದದ್ದೆಂದೂ ಕೊಂಡಾಡಿದ್ದಾರೆ. ಇದರಿಂದಾಗಿ ಈ ಕೃತಿ ಈಗಾಗಲೇ ಹಲವು ಭಾರತೀಯ ಭಾಷೆಗಳಲ್ಲೂ ಇಂಗ್ಲಿಷಿನಲ್ಲೂ ಅನುವಾದಿತವಾಗಿದೆ.

ಭಾಷೆ ಕ್ಲಿಷ್ಟವೆನ್ನಿಸದೆ ಸರಳವಾಗಿ ಸಾಗುತ್ತದೆಯಾದರೂ ಹದ ಸಾಲದು. ‘ಹಲಕೆಲವು ಮುಂತಾದ ರೂಪಗಳು ಪದೇ ಪದೇ ಬಂದು ಅಹಿತವನ್ನುಂಟು ಮಾಡುತ್ತದೆ. “ದುಡ್ಡಿಗೊಸ್ಕರ ಅರ್ಟನ ಕೊಲೆ ಮಾಡುತಾಯಿದ್ದಾನೆ” (೨೬೭) ಎಂದು ಕುಮುದ ತನ್ನ ಹೆಂಡತಿ ಮಾತಿಗೆ ಗೆಳೆಯ ವನವಿಹಾರನ ಬಗ್ಗೆ ಹೇಳುತ್ತಾನೆ. ಅವಳು ಹಳ್ಳಿಯವಳು, ಇಲ್ಲಿ ಆರ್ಟ ಬದಲು ಕಲೆಶಬ್ದ ಹಾಕಬಹುದಿತ್ತು; ಮಾಡುತ್ತಾಯಿದ್ದಾನೆ ಎಂಬ ಸಮಾಸ ರಚನೆ ಸುಲಭವಾಗಿಲ್ಲ. ಅನೇಕ ಕಡೆ ವಾಕ್ಯ ರಚನೆ ಕನ್ನಡದ ಜಾಯಮಾನಕ್ಕೆ ನಿಡುತ್ತದೆ. ಈ ಕೆಲವು ಕೊರತೆಗಳ ಹೊರತು ಪ್ರಸ್ತುತ ಅನುವಾದ ಕನ್ನಡದ ಇನ್ನಿತರ ಈ ವರ್ಷದ ಅನುವಾದ ಕಾದಂಬರಿಗಳಿಗಿಂತ ಮೇಲ್ಮಟ್ಟದ್ದಾಗಿದೆ.

ಬೋರಬನ್ ಕ್ಲಬ್ (ಅನು: ಪಂಚಾಕ್ಷರಿ ಹಿರೇಮಠ) ಕೃಷ್ಣಚಂದರ ಉರ್ದು ಭಾಷೆಯ ಕೃತಿ. ಕನ್ನಡ ರೂಪಾಂತರ ಅಚ್ಚುಕಟ್ಟಾಗಿ ಬಂದಿದೆ.

ಚೌಕಟ್ಟಿನ ಮನೆ (ಅನು: ಬಿ.ಕೆ. ತಿಮ್ಮಪ್ಪ)ವಾಸುದೇವನ್ ನಾಯರ್ ಅವರ ಮಲೆಯಾಳಿ ಕಾದಂಬರಿ. ಕೇರಳ ಸಾಹಿತ್ಯ ಅಕಾಡೆಮಿಯಿಂದ ಶ್ರೇಷ್ಠ ಕಾದಂಬರಿ ಡಂದು ಪ್ರಶಸ್ತಿ ಪಡೆದದ್ದು. ಅದರ ಕನ್ನಡಾನುವಾದ ಉತ್ತಮವಾಗಿದೆ.

ಈ ಅಭಿಪ್ರಾಯ ಇದೆ ಲೇಖಕರು ಮಲೆಯಾಳಿ ಭಾಷೆಯಿಂದ ಮಾಡಿರುವ ಎರಡು ಕಿರುಕಾದಂಬರಿಗಳ ಭಾಷಾಂತರಾದ ಪಾತಮ್ಮನ ಆಡು ಮತ್ತು ಬಾಲ್ಯಕಾಲ ಸಖಿಗೂ ಅನ್ವಯಿಸುತ್ತದೆಯಾದರೂ ಇಲ್ಲಿನ ಭಾಷಾಂತರ ಪ್ರಯತ್ನ ಮೇಲಿನದಕ್ಕಿಂತ ಉತ್ತಮವಾಗಿದೆ.

ಬಿಳಿಯ ರಕ್ತ (ಅನು: ಪಾರ್ವತಿ) ಹೆಸರಾಂತ ಪಂಜಾಬಿ ಕಾದಂಬರಿ ‘ಚಿಟ್ಟಾಲಾಹು’ ತೀರ ಸಾಧಾರಣಮಟ್ಟದ ಅನುವಾದ.

ಇಂಗ್ಲಿಷಿನ ಎರಡು ಕಾದಂಬರಿಗಳು (ಅನು: ಆರ್. ನಾಗರಾಜ್) ಹಾಳತವಿಲ್ಲದ ಭಾಷೆಯಲ್ಲಿವೆ. ಒಮ್ಮೆ ತೀರ ಕನ್ನಡ ಮಾತುಗಳಿದ್ದರೆ ಇನ್ನೊಮ್ಮೆ ಪ್ರೌಢ ಸಂಸ್ಕೃತ ಪ್ರಯೋಗ ಕಂಡು ಬರುತ್ತದೆ. ಇವೆರಡರಲ್ಲಿ ಯಾವುದಾದರೂ ಒಂದು ಕ್ರಮಕ್ಕೆ ಲೇಖಕರು ಕಟ್ಟುಬಿದ್ದರೆ ಚೆನ್ನು. ಏಕೆಂದರೆ ಇವೆರಡರ ಏರುಪೇರು ವಿರಸ ದಾಂಪತ್ಯದ ಕಹಿ ಅನುಭವ ತರುತ್ತದೆ. ಕೆಲವು ಇಂಗ್ಲಿಷ್ ಶಬ್ದಗಳಿಗೆ ಇಟ್ಟುಕೊಂಡ ಕನ್ನಡ ಅನುವಾದ ಶಬ್ದಗಳು ಹೊಂದಿಕೆಯಾಗುವುದಿಲ್ಲ. ಈಗಾಗಲೇ ಮಾನ್ಯತೆ ಬಂದಿರುವ ನುಡಿನಾಣ್ಯಗಳಿಗೆ ಮಾನ್ಯತೆ ಕೊಡದೆ ಚಲಾವಣೆಯಾಗದ ಟಂಕ ಹಾಕುತ್ತಾರೆ. ಗುಡ್ ಮಾರ್ನಿಂಗ್ ಶಬ್ದಕ್ಕೆ ಸುಪ್ರಭಾತ ರೂಢಿಯಲ್ಲಿದೆ. ಕನ್ನಡ ನಾಡಿನ ಎಲ್ಲಡೆಯಲ್ಲೂ. ಇಲ್ಲಿ ಅದಕೆ ಸೊಗವೆಳಗು ಎಂಬ ಅನುವಾದವಿದೆ. ಇದು ತಪ್ಪಲ್ಲವಾದರೂ ಶಬ್ದಕ್ಕೆ ಶಬ್ದವಿಟ್ಟು ಮಾಡಿದ ಅನುವಾದ.

ಕಂಗಾಂತಿ (೫) ಶ್ವೇತಾಂಬರಿಯರು (೫) ಕುಡಿಮನೆ (೭, ೧೩) (ಆದರೆ ಮತ್ತೆ ಪಾನಗೃಹ (೯) ಪ್ರಯೋಗವಾಗಿದೆ.) ಚಿಂತನೆ (೧೪) ಹತಾಸಿಗತನ (೧೬) ಕೋಳಿಗಾರ (೧) ಕೋಳಿಸಾಕಣೆ (೨೬) ಆದರೆ ಕುಕ್ಕುಟ ಪ್ರೇಮ (೨೬) ಬಣ್ಣಗುಬ್ಬಿ (೨೬) ಹೆಗ್ಗಣಿಕೆ ಹೆಣ್ಣು (೧೯) – ಇವು ಇನ್ನೂ ಕೆಲವು ಉದಾಹರಣೆ. ಆಂಗ್ಲ ಶಬ್ದಗಳನ್ನು ಅಚ್ಚಗನ್ನಡಗೊಳಿಸುವ ಪ್ರಯತ್ನ ಪ್ರಶಂಸನೀಯ.

ಟೇಸ್ (೧೬) ಮಸ್ಸಿಲ್ಲ (೨೧) ದುಃಖ (೨೧) – ಮುಂತಾದ ಮುದ್ರಣ ಸ್ಖಾಲಿತ್ಯಗಳ ಜೊತೆಗೆ. ಮುರಿದ ಮೊಳೆಗಳ ಜೋಡಣೆಯಿಂದಾಗಿ ಮುದ್ರಣ ಕಳೆಗೆಟ್ಟಿದೆ.

ಮೂಲ ಒಳ್ಳೆಯ ಕಾದಂಬರಿ. ಅನುವಾದ ಸಹ್ಯ ಅಲ್ಲ. ಮುಂದೆ ಇದೇ ಪ್ರಕಾಶಕರ ಇನ್ನೆರಡು ಇದೇ ಮಾದರಿಯ ಕೃತಿಗಳು ವಿಮರ್ಶೆಗೆ ಬಂದಿವೆ. ಅವನ್ನು ಸೇರಿಸಿ ವ್ಯವಸ್ಥೆಗೆ ಸಂಬಂಧಿಸಿದ ಒಂದು ಕೊರತೆ: ಇವೆರಡು ಕಾದಂಬರಿಗಳನ್ನು ಒಂದೇ ಹೊತ್ತಗೆಯಲ್ಲಿ ಜೋಡಿ ತೆನೆಗಳಾಗಿ ಕೂಡಿಸಿ ಕೊಟ್ಟಿರುವ ಯೋಜನೆ ಸರಿಯಿಲ್ಲ. ಅದರಿಂದ ಯಾವ ಪುರುಷಾರ್ಥವೂ ನೆರವೇರದು. ಅಲ್ಲದೆ ಅವೆರಡೂ ಕಾದಂಬರಿಗಳು ಒಬ್ಬನೇ ಲೇಖಕನದಾಗಿದ್ದರೆ ಸ್ವಲ್ಪವಾದರೂ ಅರ್ಥವಿರುತ್ತಿತ್ತು. ಭಿನ್ನವಸ್ತು – ಪ್ರಕೃತಿಯ ಬೇರೆ ಬೇರೆ ಲೇಖಕರ ಕಾದಂಬರಿಗಳನ್ನು ಒಂದೇ ಪುಸ್ತಕವಾಗುಇ ಕೊಡುವುದರ ಅಗತ್ಯ ಇಲ್ಲವೇ ಪ್ರಮೇಯ ಏನೆಂಬುದು ಖಚಿತವಾಗುತ್ತಿಲ್ಲ. ಒಟ್ಟಿಗೆ ಒಂದೇ ಉಸಿರಿಗೆ ಓದಿ ಮುಗಿಸಲವಶ್ಯ ಬೇಕಾದ, ಪುಟದ ದೃಷ್ಟಿಯಿಂದಲೂ ಅಗತ್ಯವಾದ ಒಂದೇ ಕಾದಂಬರಿಯನ್ನು ಸ್ವಾರ್ಥಕ್ಕಾಗಿ ಭಾಗಗಳಾಗಿ ಪ್ರಕಟಿಸುವ ತುದಿ ಒಂದು: ಪ್ರತ್ಯೇಕವಾಗಿ ಪ್ರಕಟಿಸಬೇಕಾದ ಎರಡು ಕಾದಂಬರಿಗಳನ್ನು ಇಲ್ಲಿ ಒಟ್ಟಿಗೆ ಕೊಡುತ್ತಿರುವುದು ಇನ್ನೊಂದು ತುದಿ.

ಚಾರು ಚಂದ್ರಲೇಖ (ಅನು: ದಕ್ಷಿಣಾಮೂರ್ತಿ) ಕಾದಂಬರಿಯ ಅನುವಾದ ಲೇಸಾಗಿದ್ದರೂ ಪೆಡಸಾಗಿದೆ. ಕ್ಲಿಷ್ಟತೆಯ ಗೆಣ್ಣುಗಳನ್ನು ಕತ್ತರಿಸಿ ನಿವಾರಿಸಬಹುದಿತ್ತು.

ಕವಿ (ಅನು: ಶಂಕರ)ತಾರಾಶಂಕರ ಬಂದೋಪಾಧ್ಯಾಯ ಅವರ ಜನಪ್ರಿಯ ಬಕಾದಂಬರಿ. ಭಾಷಾಂತರ ಪರವಾಗಿಲ್ಲ ಹಾಗೂ ದೋಷಗಳಿಲ್ಲ.

ರಶಿಯನ್ ಎರಡು ಕಾದಂಬರಿಗಳು (ಅನು: ಎಕ್ಕುಂಡಿ) ಸರಳವಾದ ಭಾಷಾಂತರದಿಂದ ಓದಿಸಿಕೊಳ್ಳುತ್ತವೆ. ಇದರಲ್ಲಿರುವ ಎರಡು ಕಾದಂಬರಿಗಳು : ಹಾರಿ ಹೋದ ಹೊಳೆ (ಸರ್ಗೆಯಿ ಕ್ರುತಿಲಿನ್), ವಸಂತ (ಲಿಡಿಯಾ ಒಬುಖೋವಾ). ಅಷ್ಟೇನೂ ಪ್ರಸಿದ್ದಿ ಪಡೆದ ಸಾಹಿತ್ಯ ಕೃತಿಗಳಲ್ಲ.

ವಿಷ್ಲವ ಹಾಗೂ ಹಂಸಕ್ಷೀರ ವಿಶುಕುಮಾರ ಅವರ ಎರಡು ಕಾದಂಬರಿಗಳು ವಿಪ್ಲವ, ಪ್ರಧಾನವಾಗಿ ಡಾ| ಮೈಥಿಲಿಯಲ್ಲೇ ನಡೆದರೂ ಅವಳ ಆಚಾರ್ಯ ಹಾಗೂ ಪ್ರೇಮಿ ಶ್ಯಾಮನಲ್ಲೂ, ಅನುಷಂಗಿಕವಾಗಿ ಮಲ್ನಾಡು ಮಠದ ಸ್ವಾಮಿಗಳಲ್ಲೂ ನಡೆದಿದೆ. ಮದುವೆಯಾಗಿ ಗಾರ್ಹಸ್ಥ್ಯ ಬಿಟ್ಟು ಸನ್ಯಾಸಕ್ಕೆ ಮನಸಾರೆ ಸೋತ ಆಚಾರ್ಯರ ಪಾತ್ರ ಸಾಕಾರವಾಗಿ ಮೈಗೂಡಿದ್ದೂ ಅವರ ಸಂಸಾರತ್ಯಾಗ ಸಬಲವಾಗಿ ಬೇರೂರುಲ್ಲ. ಮೈಥಿಲಿಯ ಮಾನಸಿಕ ಅಲ್ಲೋಲ ಕಲ್ಲೋಲ ಸಿನಿಮೀಯ ಮಾದರಿಗೆ ಮೊರೆ ಹೋಗದೆ ಅಚ್ಛವಾಗಿ ಚಿತ್ರಿತವಾಗುವುದು ಸಾಧ್ಯವಿತ್ತು.

ಡಾ|| ಶ್ಯಾಮ್ ಮೈಥಿಲಿಯಲ್ಲಿ ಮೋಹಗೊಂಡು ತನ್ನ ಓದನ್ನೂ ಕಡೆಗಣಿಸಿದ ಭಾಗದಲ್ಲಿ ಅಗತ್ಯವಿದ್ದ ಕಾವು ಇಲ್ಲ. ಉಳಿದ ಪೋಷಕ ಪಾತ್ರಗಳು ದುರ್ಬಲವಾಗಿವೆ. ಇದೇ ವಿಧದ ಒಂದೆರಡು ನ್ಯೂನತೆಗಳನ್ನು ಬಿಟ್ಟರೆ ಒಟ್ಟಾರೆ ಕಾದಂಬರಿ ಚೆನ್ನಾಗಿದೆ. ಇದರಂತೆ ಹಂಸಕ್ಷೀರ ಕಾದಂಬರಿಯೂ ಲೇಖಕರ ಕಥನ ಕೌಶಲವನ್ನು ಸ್ಪಷ್ಟಪಡಿಸುತ್ತದೆ. ಯಾದರೂ ವಿಪ್ಲವದ ಗೆರೆಗೆ ಬರುವುದಿಲ್ಲ.

ಹಂಸಕ್ಷೀರದ ಆಸ್ಪತ್ರೆ ವಾತಾವರಣ, ವೈದ್ಯರ, ನರ್ಸುಗಳ ಪಾತ್ರಚಿತ್ರಣ-ಲವಲವಿಕೆಯಿಂದ ಸ್ಪಂದಿಸಿದರೂ ತೀರ ಕಾಲ್ಪನಿಕವಾದ ವಸ್ತುವಿನಿಂದಾಗಿ ಕೃತಿ ಪ್ರಭಾವಶಾಲಿಯಾಗಿಲ್ಲ. ಕ್ಲೌಡಿಯ ಪಾತ್ರಕ್ಕೆ ಲೇಖಕರ ಅವಜ್ಞೆ ಅನವಧಾನದಿಂದಾಗಿ ಅನ್ಯಾಯವಾಗಿದೆ. ಹೆಗ್ಡೆಯ ಸ್ತ್ರೀಲಂಪಟತ್ವ ಸ್ವಾಭಾವಿಕವೆನ್ನಿಸುವುದಿಲ್ಲ. ಸ್ತ್ರೀಲಂಪಟರು ಲೋಕದಲ್ಲಿ ಇಲ್ಲವೆಂದು ಇದರರ್ಥವಲ್ಲ. ಹೆಗ್ಡೆಯ ಪಾತ್ರದಲ್ಲಿ ಅದು ಸಾಕಾರಗೊಂಡಿಲ್ಲ. ಕ್ಲೌಡಿಯ ನೆರವಿನಿಂದ ಆತ ನರ್ಮದಳನ್ನು ತನ್ನವಳನ್ನಾಗಿಸಿಕೊಳ್ಳುವ ಹಂಚಿಕೆಯಲ್ಲೂ ಈ ಬಗೆಯ ವೈಪಲ್ಯ ಎದ್ದು ಕಾಣುತ್ತದೆ. ಜಯಂತ-ನರ್ಮದರ ಒಲವು ಸಾಕಾರಗೊಳ್ಳುವ ಪರಿಸರಗಳು ಚಲೋದಾಗಿ ಬಂದಿವೆ.

ಇಷ್ಟಾಗಿಯೂ ಈ ವರ್ಷ ಸಮಾಧಾನ ಹುಟ್ಟಿಸಿದ ಕಾದಂಬರಿಕಾರರಲ್ಲಿ ಇವರೂ ಒಬ್ಬರೆಂಬುದನ್ನು ಗಮನಿಸಬೇಕಾಗುತ್ತದೆ.

ಹೊಸ ಸುಗ್ಗಿ ದಿ|| ಅನಕೃರವರ ಕೊನೆಯ ಕಾದಂಬರಿ ಎಂಬುದೊಂದೇ ಇದರ ವಿಶೇಷ. ಅವರ ಕಾದಂಬರಿಗಳ ಜೀವಾಳ ಇಲ್ಲವೆ ಬಂಡವಾಳ ಆದ ಸರಸ ಶೈಲಿಯ ಆಕರ್ಷಣೆ ಇಲ್ಲೂ ಇದೆ. ಸಂಯಮ, ಸಮನ್ವಯ ಸಾಲದ ಸಡಿಲ ಬರೆಹ. ವಸ್ತು ಉದ್ದೇಶಗಳ ವಿಶ್ಲೇಷಣೆ ಅನಗತ್ಯ. ಕಾರಣ ಕಾದಂಬರಿಯ ಬೆನ್ನೆಲುಬೇ ಅದೃಢ. ಇಲ್ಲಿನ ಪಾತ್ರಗಳ ಹೆಸರುಗಳನ್ನು ಬದಲಾಯಿಸಿ ಇವರ ಉಳಿದ ಬಹುಪಾಲು ಕಾದಂಬರಿಗಳ ಹೆಸರುಗಳನ್ನೇ ಹಾಕಿದರೂ ನಡೆಯುತ್ತದೆ; ವಸ್ತು ಅಷ್ಟು ಅಳ್ಳಕವಾಗಿ ವೈವಿದ್ಯ ವಿಸ್ತಾರಗಳನ್ನು ಕಾಣುವುದಿಲ್ಲ.

ಬಂಗಾರದ ಬಾತು, ಮೇಸ್ಟ್ರ ಚೀಲ (ರಘುಸುತ) ಇವೆರಡೂ ಹೆಸರಿಗೆ ಸರಿಬರುವ ಕೃತಿಗಳಲ್ಲ. ಸಂವೇದನೆಗೆ ತಕ್ಕ ಅಭಿವ್ಯಕ್ತಿಯಾಗಿ ಭಾಷೆಯನ್ನು ದುಡಿಸಿಕೊಳ್ಳುವ ಕಾಳಜಿಯಾಗಲಿ, ಶ್ರೀಮಂತ ಕಲ್ಪನೆಯಾಗಲಿ ಕಾಣುವುದಿಲ್ಲ.

ಬಂಗಾರದ ಬಾತು ಗುಣಾಂಶಗಳಿಲ್ಲದ ಸಾಮಾಜಿಕ ಕಾದಂಬರಿ. ಬಾಗಿಲು ತೆರೆದು ಒಳಕ್ಕೆ ಬಂದರು ಎಂಬುದನ್ನು “ಬಾಗಿಲು ತೆರೆಯಲ್ಪಟ್ಟು ಒಳಗಡೆ ಪ್ರವೇಶಿಸಿದರು” (೭೯) ಎನ್ನುತ್ತಾರೆ. ಇನ್ನೊಂದು ಸಾಲು “ಮದುವೆ ಸ್ವಂತ ಗೃಹದಲ್ಲಿ ನೆರವೇರಿಸಲ್ಪಟ್ಟಿತು” (೮೬).

ಲೇಖಕರು ಸಮಾಜದ ದೋಷ ದೌರ್ಬಲ್ಯಗಳನ್ನು. ದಾಳಿದದ್ದುಳಿತಗಳನ್ನು ರೊಚ್ಚಿಗೆದ್ದು ಬಯಲಿಗೆಳೆಯುತ್ತಿರುವಂತೆ ತೋರುತ್ತದೆ. ಕೇವಲ ರೊಚ್ಚು ಇದ್ದರೆ ಸಾಲದು. ಅದು ಒಂದು ಕೃತಿಗಿಳಿಯುವಾಗ ಕಲಾತ್ಮಕವಾಗಿ. ಸಕ್ರಿಯವಾಗಿ ಕೃತಿಯ ಒಡಲಿನಲ್ಲಿ ಮೂಡಿಬರಬೇಕು. ಆ ಸಾವಯವಶಿಲ್ಪದ ಶೈಥಿಲ್ಯದಿಂದಾಗಿ ಈ ಬರೆಹ ಅನಾದರಣೀಯ. ಕಥೆ ಹೇಳಬಲ್ಲ. ಚಾತುರ್ಯವಿದ್ದರೂ ಅದು ಚಿಲ್ಲರೆ ಸಿನಿಮೀಯ ಇಲ್ಲವೇ ಪತ್ತೇದಾರಿ ತಂತ್ರವನ್ನಾಶ್ರಯಿಸಿ ನಿರ್ವೀರ್ಯವಾಗುತ್ತದೆ.

‘ಮೇಷ್ಟ್ರಚೀಲ’ದಲ್ಲಿ ಹಾಸ್ಯಚಟಾಕಿಗಳನ್ನು ಸಂಗ್ರಹಿಸಿ ಅವಕ್ಕೆ ಒಂದೊಂದು ಸನ್ನಿವೇಶ ಕಲ್ಪಸಿ ರಾಘಪ್ಪಮೇಷ್ಟ್ರ ಬದುಕಿಗೆ ಜೋಡಿಸುವ ಪ್ರಯತ್ನವಿದೆ. ಈ ಸಂಯೋಜನೆಯಲ್ಲಿ ಜೀವಂತಿಕೆಯ ಹಾಗೂ ಕಲೆಯ ಬೆಸುಗೆಯಿಲ್ಲ. ಕಲಾತ್ಮಕ ಸಮನ್ವಯದಿಂದ ವಿವಂಚಿತವಾಗಿ ಅವಸರದಲ್ಲಿ ಕಲೆಹಾಕಿದ ಹಾಸ್ಯಚಟಾಕಿಗಳ ಟಿಪ್ಪಣಿಯಾಗಿದೆ.

ರಂಗಣ್ಣನ ಕನಸಿನ ದಿನಗಳು ಕೃತಿಯ ನೆರಲಾಗುವ ಸತ್ವಕೂಡ ಇಲ್ಲಿಲ್ಲ. “ಅಂಥಹ ಎಂಥಹ ಇಂಥಹ” – ಎಂಬಂತಹ ಪ್ರಯೋಗಗಳ ಅಶುದ್ಧಯ ಮಾತು ಹಾಗಿರಲಿ, ರಾಘಪ್ಪ ನಾಟಕ ವಿದೂಷಕ ಇಲ್ಲವೇ ಸರ್ಕಸ್ ಚಾರ್ಲಿ ಆಗಿದ್ದಾನೆ. ಅದಕ್ಕೂ ಮೀರಿ ಒಬ್ಬ ಅಧ್ಯಾಪಕನ ಬದುಕು. ಅದರ ಹಲವು ಪದರಗಳ ಗಂಭೀರ ಪರಿಭಾವನೆ ಇಲ್ಲಿಲ್ಲ. ಉಳಿದ ಪಾತ್ರಗಳೂ ಜೋಕ್ ಪೂರ್ಣಗೊಳಿಸಲಷ್ಟೇ ಬರುತ್ತದೆ. ಪರಿಣಾಮವಾಗಿ ಕಾದಂಬರಿ ಸಮತೆಯಿಲ್ಲದೆ ಕುಸಿಯುತ್ತದೆ.

ಚಕ್ರಾಯಣ (ಇಂದಿರಾತನಯ) ಪೌರಾಣಿಕ ಸಾಮಾಜಿಕಗಳ ಕಲಸು ಮೇಲೂಗದ. ತಂತ್ರಶಾಸ್ತ್ರ ಮಂತ್ರಶಾಸ್ತ್ರಗಳ ವಿಚಾರ ಇದೆ. ಅದನ್ನು ಕಲಿಯಲೆಳಸುವವರ ಕಥೆಯಿದೆ. ಲೇಖಕರ ಮಿಥ್ಯಾಜ್ಞಾನಕ್ಕೆ ಲಂಗುಲಗಾಮು ಏನೂ ಇಲ್ಲ.

ಸುಪರ್ಣ (ಗಂಡಸು) ಶ್ಯಾಮರ ಕಥೆ ಹಾಗಿರಲಿ, ಮುಖ್ಯಪಾತ್ರಗಳಲ್ಲೊಂದಾದ ಚಂದ್ರಧರನ ಕಥೆಯ ಒಂದು ಭಾಗ ಕೇಳಿ: ಅವನ ತಾಯಿಗೆ ಹಲವು ಗಂಡಂದಿರು. ಮದುವೆಯಾಗದವಳ ಮಗನಾಗಿಹುಟ್ಟಿ ಸಾಹುಕಾರ ಕಳಿಸಿದ ಸಂಸ್ಕೃತ ಪಂಡಿತರ ಮನೆಗೆ ಹೋದ. ಆ ರಸಿಕ ಪಂಡಿತರ ನಾಲ್ಕನೆಯ ಹೆಂಡಿತಿಯೊಡನೆ ಸಮೃದ್ಧವಾಗಿ ಭೋಗಿಸಿದ. ಆ ಪಂಡಿತರೂ ಅವರ ತಾಯಿ ಮಾಡಿದ ಅಜಕಲ್ಪದಿಂದ ಪುನರ್ ಯೌವನ ಪಡೆದು ತಮ್ಮ ನಾಲ್ಕನೆಯ ಹೆಂಡತಿಯೊಡನೆ ನವತರುಣನೂ ನಾಚುವಂತೆ ಭೋಗಿಸತೊಡಗಿದರು. ಅಂದಿನಿಂದ ಅವರ ಹೆಂಡತಿ ಚಂದ್ರಧರನನ್ನು ಗಮನಿಸುವುದನ್ನೇ ಬಿಟ್ಟಳು. ಇವನು ಮುಷ್ಟಿಮೈಥುನದಿಂದ ತೃಪ್ತಿಗೊಳ್ಳತೊಡಗಿದ. ಕಡೆಗೆ ಹೆಂಡತಿಯ ಸಲಹೆಯಂತೆ ಪಂಡಿತರು ಇವನನ್ನು ಮನೆಬಿಟ್ಟು ಕಳಿಸಿದರು.

ಶ್ಯಾಮಲಾ, ಸಾವಿತ್ರಿ ಮೊದಲಾದ ಸ್ತ್ರೀಪಾತ್ರಗಳೂ ಇತರರೂ ನಿರ್ದೇಶಕ ಲೇಖಕರ ಅಪೇಕ್ಷೆಯಂತೆ ಬರುತ್ತಾರೆ. ಹೋಗುತ್ತಾರೆ. ಶ್ಯಾಮಲಾಳಿಗೆ ಅವಳನ್ನು ಪ್ರೇಮಿಸಿದಾತನ ಜೊತೆಯಲ್ಲಿ ತನ್ನ ಗಂಡನ್ನು ಬಿಟ್ಟು ಒಡಿಬರಲು ಒಪ್ಪದಿರಲು ಆತ ಅವಳು ನೀರು ಸೇದುವಾಗ ಹಾವುಬಿಟ್ಟು ಸಾಯಿಸಿದ್ದು. ಆಕೆ ಸಾಯುತ್ತಿರುವಾಗಲೂ ಅವಳನ್ನು ಅಪ್ಪಿ ಚಪ್ಪರಿಸಿದ್ದೂ-ಇನ್ನೂ ಅನೇಕ ರಂಗುರಂಗಿನ ಸಂಗತಿಗಳಿವೆ.

ಈ ಬರೆಹ ಏನನ್ನಾದರೂ ಓದುವ ಚಟ ಇರುವವರಿಗೆ ಮೋಜು ಕೊಟ್ಟೀತು. ಓದುಗರ ಅನುಭವ ಅಭಿರುಚಿ ಪ್ರತಿಭೆಗಳಿಗನುಗುಣವಾಗಿ ತನ್ನ ಹುರುಳನ್ನು ಅರಳಿಸಿ ಹಿಗ್ಗಿಸಿಕೊಳ್ಳಬಲ್ಲ ಕಸುವು ಇಲ್ಲಿಲ್ಲ. ಒಟ್ಟು ಕಾದಂಬರಿಯನ್ನು ನಿಯಂತ್ರಿಸುವ ಸಾಕಲ್ಯವಿಲ್ಲ. ಪಾತ್ರಗಳು ವಿರೂಪಗೊಂಡು ಅಸಹಾಯಕತೆಗೆ ಬೀಳುವ ಕಾರಣಗಳು ಕಾಣಿಸುವುದಿಲ್ಲ ಕಥನ ಕ್ರಮ ಇಕ್ಕಟ್ಟಿನ ಮಾರ್ಗದ್ದು. ಚಾಳಿಗೆ ಬಿದ್ದ ವ್ಯಕ್ತಿಗಳು ಎದುರಿಸಬೇಕಾದ ಸಮಸ್ಯೆಯನ್ನು ಸರಳಗೊಳಿಸಿ ಸಲೀಸಾಗಿ ತಳ್ಳಿಹಾಕುತ್ತಾರೆ. ಸತ್ಯವಲ್ಲದ ಯುಕ್ತಿ ಸಂಚುಹೂಟಗಳನ್ನೂ ನಿಜದಂತೆ ರೂಪಿಸುವ ಸಾಮರ್ಥ್ಯವಿದ್ದು ಅವರ ಶ್ರಮ ಬೆಟ್ಟಕ್ಕೆ ಕಲ್ಲು ಹೊತ್ತಂತಾಗಿದೆ.

ಹೂವು ಹಾವು ತೀರ್ಥ (ಪಾರ್ಥಸಾರಥಿ) ಸನ್ಯಾಸಿ ಸಂಸಾರಿಯಂತೆ ವರ್ತಿಸಿದ ವಸ್ತುವನ್ನು ಆಧರಿಸಿ ಬರೆದ ಕಾದಂಬರಿ.

ಇಲ್ಲಿ ಹಯವದನನನ್ನು ಇಂದಿನ ಯುವಜನಾಂಗದ ಸ್ಥಿತ್ಯಂತರಗಳ ಸಂಕೇತವಾಗಿ ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಪ್ರಾಚೀನ ಅರ್ವಾಚೀನಗಳ ಮಿಶ್ರಣ ಅವನಲ್ಲಿ ಕಂಡುಬರುತ್ತದೆ. ಸಂಸ್ಕೃತ ಕಲಿತಂತೆ ಇಂಗ್ಲಿಷ್ ಸಾಹಿತ್ಯವನ್ನೂ ಅಭ್ಯಾಸಮಾಡಿದವನು. ಎಲ್ಲರಂತೆ ಅವನಲ್ಲೂ ಅಸೆಗಳಿವೆ. ಆತ ಬ್ರಹ್ಮಣೇಂದ್ರ ಪೀಠಕ್ಕೆ ಉತ್ತಾರಾಧಿಕಾರಿಯಾಗಲು ಬಯಸುತ್ತಾನೆ. ಅದಕ್ಕೆ ಹಿರಿಯರ ಸಮ್ಮತಿಯೂ ಇದೆ. ಆದರೆ ಅವನಿಗೆ ಸನ್ಮತಿ ಸಾಲದು. ಹಂಬಲಿಸಿದ್ದು ಬೇಗ ಈಡೇರಲಿಲ್ಲವೆಂದು ಹಯವದನ ತಾಳ್ಮೆಗೆಟ್ಟು ಬೆದೆಬಂದು ಚಡಪಡಿಸುತ್ತಾನೆ. ಆಶೆ ಅಮಿಷದ ಬಲೆಗೆ ಬಿದ್ದ ಮೀನಾಗಿ ಮೀನಾಮೇಷ ಎಣಿಸದೆ ಗುಟ್ಟಾಗಿ ಸ್ವಾಮಿಗಳನ್ನು ಮೆತ್ತಗೆಮಾಡಿ ವೃಂದಾವನಸ್ಥರನ್ನಾಗಿಸಿ ತಾನೇ ಪೀಠಸ್ಥನಾಗುತ್ತಾನೆ. ಪ್ರಣವೇಂದ್ರತೀರ್ಥಾಭಿಧಾನದಿಂದ.

ಅವನು ಪೀಠಸ್ಥನಾದರೂ ಪ್ರಾಯಸ್ಥನೂ ಹೌದು. ಸಹಜವಾಗಿ ಹಣ್ಣಾದವನಲ್ಲ. ಬಲವಂತವಾಗಿ ಒತ್ತಿಹಾಕಿ ಕಾವಿನಿಂದ ಹಣ್ಣಿನ ಬಣ್ಣಪಡೆದವನು, ರುಚಿ ಅಲ್ಲ. ಎಳೆಯಂದು ಒಡನಾಡಿದ ಶಾರಿಯ ನೆನಪು ಶರೀರಕ್ಕೆ ಬಿಸಿಕೊಡುತ್ತದೆ. ಮಠಕ್ಕೆ ಬರುವ ಜಾನಕೀಬಾಯಿ ಮೈಮಾಟ ಚಿತ್ತಸ್ಖಲನೆಗೆ ಕಾರಣವಾಗುತ್ತದೆ. ಜಾರಿದ ಮನ ಕಮಲೆಯ ಕಾಯದಲ್ಲಿ ಕರಗಿಹೋಗುತ್ತದೆ. ಅವಳೊಡನೆ ಆನಂಧಸುಖವನ್ನು ಅನುಭವಿಸುತ್ತಿರುವಾಗಲೇ ಗರುಡಾಚಾರಿಸ್ವಾಮಿಗಳ ಗೃದ್ರ ದೃಷ್ಟಿಗೆ ಸಿಕ್ಕಬೀಳುತ್ತಾರೆ. ಆದರೆ ಅದರಿಂದ ಪ್ರಣವೇಂದ್ರರೇನೂ ಅಧೀರವಾಗಲಿಲ್ಲ. ಅವರೊಳಗೆ ಕುಳಿತ ಹಯವದನ ಜಾಗೃತನಾಗುತ್ತಾನೆ. ತಾನೇ ಹೊರಬರುತ್ತಾನೆ. ಸ್ವಾಮಿಯ ಪೊರೆ ಕಳಚಿಕೊಂಡು.

ಫಲವಾಗಿ ಪೀಠತ್ಯಾಗ. ಆತ ಹಣದೊಡನೆ ಕಮಲೆಯನ್ನೂ ಕರೆದುಕೊಂಡು ಬೆಂಗಳೂರಿಗೆ ಪ್ರಯಾಣ. ಅಲ್ಲಿ ಹಳೆಯ ಗೆಳೆಯ (?) ಇವರನ್ನು ಕಂಡು ಒಂದು ಕೆಲಸ ಕೊಡಿಸುವ ನಂಬಿಕೆ ಹುಟ್ಟಿಸುತ್ತಾನೆ. ಗೆಳೆಯನೂ ಪಳಗಿದ ಪಟಿಂಗ, ಇಂಥವರನ್ನು ಮೇಯಿಸಿದ್ದಾನೆ. ಹಯವದನನಿಂದ ಹಣ ಹೆಣ್ಣು ಎರಡನ್ನು ಲಪಟಾಯಿಸಿಕೊಂಡು ಮಣ್ಣಿರಚುತ್ತಾನೆ.

ಉಂಡೂ ಹೋದ, ಕೊಂಡೋ ಹೋಡ ಆ ದಗಲಬಾಜಿ ದೋಸ್ತನಿಂದ ಮೋಸಹೋಗಿದ್ದಾಯಿತು. ಬೆಸ್ತುಬಿದ್ದು ಅಸಹಾಯಕತೆಯಿಂದ ಒದ್ದಾಡಿದ್ದಾಯಿತು. ಏನೂ ತೋಚದೆ (?) ಬಾರುಗಳನ್ನು ಹೊಕ್ಕು, ಬೀರುಗಳಲ್ಲಿ ಮುಳುಗಿ ಕ್ಯಾಬರೆಯಲ್ಲಿ ತೇಲಿ ಬೇರೊಂದು ಹೆಣ್ಣಿನೊಡನೆ ಮಲಗುತ್ತಾನೆ. ಅಲ್ಲಿಯೂ ಕಳ್ಳುಕಾಮದ ಅಮಲಿನಲ್ಲಿರುವಾಗ ಜೇಬಿನಲ್ಲಿದ್ದ ಅಳಿದುಳಿದ ದುಡ್ಡೂ ಮಾಯವಾಗುತ್ತದೆ.

ಅವನೀಗ ಪೂರ್ತಿ ನಿಸ್ಸಹಾಯಕ. ದೇಹವೂ ದುರ್ಬಲ ಆಸೆ. ಬಯಕೆಗಳು ಬತ್ತಿವೆ. ಈಗ ಸಹಜವಾದ ವೈರಾಗ್ಯ ಚಿಗುರುತ್ತದೆ. ಒಮ್ಮೆಲೇ ಮಹಾಬೋಧೆ ಆಗುತ್ತದೆ. ಮಧ್ವಾಚಾರ್ಯರ ದ್ವೈತಸಿದ್ಧಾಂತಕ್ಕೆ ಹೊಸ ವಿವರಣೆ ಕೊಡುತ್ತಾನೆ. ಅವನ ವಚಶ್ರೀಧಾರೆಯಿಂದ ಪ್ರಭಾವಿತ ಜನ ಮೆಚ್ಚುಗೆ ಮಳೆಗೆರೆಯುತ್ತಾರೆ. ಈ ಸಲದ ಆಶ್ರಮವಾಸದಲ್ಲಿ ಹಿಂದಿನ ಬಗಡು ರಾಡಿಯಿರುವುದಿಲ್ಲ. ತತ್ವದ ತಿಳಿ ಹೊಳಿಯುತ್ತದೆ. ಮತ್ತೆ ಪೀಠಾರೋಹಣವಾಗುತ್ತದೆ. ಪೂರ್ಣಬೋಧಾಚಾರ್ಯ ಎಂಬ ಹೊಸ ಹೆಸರು ದೊರೆಯುತ್ತದೆ.

ಕಾದಂಬರಿಯ ಕಥೆಯನ್ನು ನಾನು ಮೇಲೆ ಉದಾಹರಿಸಿಕೊಟ್ಟ ಉದ್ದೇಶ ಎರಡು ಒಂದು. ವಸ್ತುವಿನ ವಿರೋಧಾಭಾಸಗಳೂ ಶೈಥಿಲ್ಯವೂ ಅಷ್ಟರಿಂದಲೇ ಸ್ಪಷ್ಟವಾಗುವುದು; ಎರಡು, ಹೆಚ್ಚಿನ ವಿಮರ್ಶೆ ಅನಪೇಕ್ಷಿತವೆನ್ನುವುದು.

ಕಾದಂಬರಿಕಾರರ ಉದ್ದೇಶದಲ್ಲಿ ಗೊಂದಲವಿದೆ. ಅವರ ತಿಳಿವಳಿಕೆಯ ಪರಿಮಿತಿಯಿಂದಾಗಿ ಕೃತಿ ನಿರೀಕ್ಷಿಸಿದ ಗುರಿ ಮುಟ್ಟಲಾಗಿಲ್ಲ. ಅಷ್ಟೇ ಅಲ್ಲ. ಉತ್ತಮ ವಸ್ತುವಿದ್ದೂ ಲೇಖಕ ಅಸಮರ್ಥನಾದಾಗ ಕೃತಿ ನಿಸ್ತೇಜವಾಗುತ್ತದೆಂಬುದನ್ನೂ ಇದು ಸಾರುತ್ತದೆ. ಹಯವದನನಲ್ಲಿ ಆಗುವ ಮಾರ್ಪಾಟುಗಳನ್ನು ಮೂರು ಮುಖ್ಯ ಹಂತಗಳಲ್ಲಿ ಚಿತ್ರಿಸಲೆತ್ನಿಸಿದ್ದಾರೆ. ಬ್ರಹ್ಮಣೇಂದ್ರ ಮಠಾಧಿಕಾರಿಯಾಗುವ ತನಕ. ಬೆಂಗಳೂರಿಗೆ ಬಂದು ಎಲ್ಲ ಕಳೆದುಕೊಂಡು ಬೀದಿಯ ಭಿಕಾರಿಯಾಗುವ ವರೆಗೆ, ಮತ್ತು ಮತ್ತೆ ಪೂರ್ಣಬೊಧಾಚಾರ್ಯನಾಗಿ ಪೀಠ ಸಂಪಾದನೆ ಮಾಡಿಕೊಳ್ಳವ ತನಕ.

ಹೂವು ಹಾವು ತೀರ್ಥ ಎಂಬ ಮೂರು ಶಬ್ದಗಳ ಹೆಸರು ಮೇಲೆ ಹೇಳಿದ ಸಂಕೇತವನ್ನು ಹೊತ್ತಿರಬಹುದು. ಹಯವದನ ಎಂಬ ಹೆಸರು ಕೂಡ ಸಾಂಕೇತಿಕವನ್ನಾಗಿಸಲು ಪ್ರಯತ್ನವಿದ್ದರೂ ಅದರ ಸಂಕೇತ ಮಂಕಾಗಿದೆ. ಅವನಲ್ಲಾಗುವ ವಿಕಾಸದ ಚಿತ್ರ ಲೆಕ್ಕಾಚಾರಕ್ಕೆ ಪಕ್ಕಾಗಿ, ಪ್ರಾಣಿಶಾಸ್ತ್ರದ ಅಧ್ಯಾಪಕರು ಚಿಟ್ಟೆಯ ಜೀವನ ವಿಕಾಸದ ಚಿತ್ರವನ್ನು ತರಗತಿಯಲ್ಲಿ ತಿಳಿಸುವಂತೆ ಪೂರ್ವನಿಯೋಜಿತ ವ್ಯವಸ್ಥೆಯಾಗಿದೆ. ಇಲ್ಲಿನ ನಿರೂಪಣೆ ಕೂಡ ಅಡ್ಡಾದಿಡ್ಡಿ ನಡೆದಿದೆ. ಈ ತೆರನಾದ ವಸ್ತು ನಿರೂಪಣೆಯಲ್ಲಿ ನಿರ್ವಹಣೆಯಲ್ಲಿ ಅಗತ್ಯ ಬೇಕಾದ; ಅಂತರಂಗ ಬಹಿರಂಗ ಪದರಗಳ ಸೂಕ್ಷ್ಮ ಸಂಕೀರ್ಣ ಸಂವೇದನೆ ಇವರಿಗೆ ಸಿದ್ಧಿಸಿಲ್ಲ. ಒಂದರ ಮೇಲೊಂದರಂತೆ ಸುಮ್ಮನೆ ಘಟನೆಗಳನ್ನು ಒಡ್ಡಿದ್ದಾರೆ. ಭಾಷೆ ಕೂಡ ರೂಕ್ಷತೆಯಿಂದ ಸಪ್ಪೆಯಾಗಿದೆ. ಅದಕ್ಕೆ ಜೀವನದ ಹೃದಯ ಸ್ಪಂದನ ಕೇಳಿಸಬಲ್ಲ ಸಾಮರ್ಥ್ಯವಿಲ್ಲ.

ಕಾದಂಬರಿ ಜಟಕಾಗಾಡಿ ಕುದುರೆಯಂತೆ ಕಣ್ ಪಟ್ಟಿ ಕಟ್ಟಿಕೊಂಡು ಸಾಗುತ್ತದೆ. ಒಂದು ಅಸಂಬದ್ಧ ಕಗ್ಗ ಪುಸ್ತಕದ ರಕ್ಷಾಕವಚದಲ್ಲಿ ಧಾರಾಳವಾಗಿ ಬರುವ ಮಾತುಗಳಿವೆ: “ಪ್ರಬುದ್ಧ ಚಿಂತನೆಯ ಉನ್ನತ ಮಟ್ಟದ ಪ್ರಚಂಡಶೈಲಿ ಇವರ ಪೆನ್ನಿನ ಸ್ವಂತಗುಣ. ಕನ್ನಡ ಭಾಷೆಯನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಶ್ರೀಮಂತವನ್ನಾಗಿ ಬರವಣಿಗೆಗೆ ಒಗ್ಗಿಸಿಕೊಳ್ಳುವ ಈತ…. ತನ್ನ ಕಲಾತ್ಮಕ ಅನಿಸಿಕೆಗಳನ್ನು ಭಾಷೆಗೆ ಸಹಸ್ಪಂದಿಯನ್ನಾಗಿ ಬೆಸೆಯಬಲ್ಲ. ಉತ್ತಮ ಪ್ರಜ್ಞಾವಂತ. ಇಂದಿನ ಎಲ್ಲ ವಿಚಾರವಂತ ಲೇಖಕರ ಬೌದ್ಧಿಕ ತಾತ್ವಿಕತೆಯನ್ನೂ ಮತ್ತು ಹಿಂದಿನಹಿರಿಮೆ ಸಾಹಿತಿಗಳ ಹೃದಯವಂತಿಕೆಯನ್ನೂ ಪರಿಪೂರ್ಣ ಹದದಲ್ಲಿ ಅಳವಡಿಸಿಕೊಂಡು ಕಲಾತ್ಮಕ ಅಭಿವ್ಯಕ್ತಿ ಮೂಡಿಸಬಲ್ಲ ಕಲಾವಿದ…. ಇವರ ಶೈಲಿಯ ವ್ಯಾಪಕತೆಯನ್ನು ಭಾಷೆಯ ಅದ್ಭುತ ರಭಸವನ್ನೂ ಯಶಸ್ವಿಯಾಗಿ ಪ್ರತಿನಿಧಿಸಬಲ್ಲ…..” ಮುಂತಾದ ಮಾತುಗಳು ಹೊಲಬು ತಪ್ಪಿದ ಉತ್ಪ್ರೇಕ್ಷಾಲಂಕಾರಕ್ಕೂ ವಿಶೇಷಣಗಳ ದುಂದುಗಾರಿಕೆಗೂ ಉತ್ತಮ ಉದಾಹರಣೆ.

ಎಲ್ಲಾ ಅವನ ಹೆಸರಿನಲ್ಲೇ (ತ,ರಾ.ಸು) ಎಂಬ ಕಾದಂಬರಿ ಅದೇ ಹೆಸರಿನ ಮೊದಲಭಾಗಕ್ಕೆ ಸಂಬಂಧಿಸಿದ ಎರಡನೆಯ ಹಾಗೂ ಕೊನೆಯ ಭಾಗ. ಇದರ ಪ್ರಥಮಾರ್ಧ ಪ್ರಕಟವಾಗಿ ಎಂಟು ವರ್ಷಗಳಾಗಿವೆ. ‘ಇಷ್ಟು ದಿನ ಮುಂದಿನ ಭಾಗ ಎಂದು ಬರುತ್ತದೆ? ಎಂದು ಕೇಳಿದ ಅಭಿಮಾನಿ ವಾಚಕರಿಗೂ. ಅಂತೇ ಸಹನೆಯಿಂದ ಕಾದ ಪ್ರಕಾಶಕರಿಗೂ ಈ ಮುಕ್ತಾಯ ಭಾಗವನು ಇಂದು ಕೈಯಲ್ಲಿಡಲು ನನಗೆ ಸಂತೋಷವಾಗುತ್ತದೆ” ಎನ್ನುತ್ತಾರೆ ಲೇಖಕರು.

ಈ ಸಂದರ್ಭದಲ್ಲಿ ಭಾಗಗಳಲ್ಲಿ ಕಾದಂಬರಿಗಳನ್ನು ಪ್ರಕಟಿಸುವ ಪದ್ಧತಿ ಕುರಿತ ಎರಡು ಮಾತು ಹಳಬೇಕೆನ್ನಿಸುತ್ತೇ. ಒಂದೊಂದು ಭಾಗ ನಾಲ್ಕು ನೂರು ಆಯ್ದುನೂರು ಪುಟಗಳಿಗೆ ಮೀರಿ ನಿಲ್ಲುವಂತಿದ್ದರೆ ಆಗ ಆ ವಿಚಾರ ಸಾಧುವೇ. ಕೇವಲ ೨೫೦ ಪುಟಗಳಷ್ಟಿರುವ ಒಂದೊಂದು ಭಾಗ ತರುವ ಅಗತ್ಯವಿಲ್ಲ. ಈ ಕಾದಂಬರಿ ಕೇವಲ ೧೩೮ ಪುಟಗಳಷ್ಟಿದ್ದು ಇದನ್ನು ಹಿಂದೆಯೇ ಬರೆದ ಕಾದಂಬರಿಯ ಒಡಲಿನಲ್ಲೇ ನಿಲ್ಲಿಸಬಹುದಿತ್ತು. ಎಂಟು ವರ್ಷ ಬಿಟ್ಟು ಈ ಕಿರಿಯ ಅನುಬಂಧ ಹೊರ ತರುವ ಯೋಜನೆ ಅಥವಾ ಯೋಚನೆ ಸರಿಕಾಣದು.

ಕೇವಲ ಪ್ರಕಾಶಕರಿಂದ ಅಥವಾ ಓದುಗರಿಂದ ಪಡೆಯುವ ವರಮಾನ ಹೆಚ್ಚಿಸಿಕೊಳ್ಳುವ ಇಲ್ಲವೇ ಪ್ರಕಟಿತ ಪುಸ್ತಕಪಟ್ಟಿ ಬೆಳೆಸುವ ಉದ್ದೇಶವಿದ್ದರೆ ಅದು ಬೇರೆಯೇ ಆಯಿತು. ಲೇಖಕ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇರುವ ಕಥೆಯನ್ನೇ ಭಾಗಗಳಾಗಿ ಎಳೆದು ಪುಟಗಳನ್ನು ತುಂಬಿಸಿ ಬರೆಯುತ್ತಾನೆಂಬ ಆರೋಪವೂ ಇದೆ. ಅಂತೂ ವಿಭಜಿಸುವ ಪ್ರಯತ್ನದ ಔಚಿತ್ಯವೇ ಇದ್ದಂತೆ ತೋರುತ್ತಿಲ್ಲ. ಹಿಂದೆ ಎಂದೋ ಓದಿದ ಕೃತಿಯ ಕಥೆ ನೆನಪಿಸಿಕೊಂಡು ಇಂದು ಅದೇ ಮಾನಸಿಕ ಸಿದ್ಧತೆಗೆ ಹೊಂದಿಸಿಕೊಂಡು ಓದುವವರಾದರೂ ಎಷ್ಟು ಜನ? ಓದುಗರಿಗೂ ಅನಾನುಕೂಲವೇ ಅಲ್ಲವೇ? ಈ ಕೃತಿಯನ್ನು ವಿಮರ್ಶೆ ಮಾಡುವಾಗಲೂ ಇದೇ ಪ್ರಶ್ನೆ ಎದುರಾಗುತ್ತದೆ; ಇದರ ಮೊದಲ ಭಾಗವನ್ನು ಬಿಟ್ಟು ಸ್ವತಂತ್ರವಾಗಿ ಇದೊಂದನ್ನೇ ವಿಮರ್ಶೆಮಾಡುವುದು ನ್ಯಾಯವೇ ಎನ್ನಿಸುತ್ತದೆ.

ಲೇಖಕರು ಶ್ರೇಷ್ಠ ಕಥೆಗಾರರು. ಬರೆಯುವ, ವಿಸ್ತರಿಸಿ, ವಿವರಿಸಿ, ಬರೆಯುವಾಗಲೂ ಬೇಸರಕ್ಕೆಡೆಗೊಡದಂತೆ ನೋಡಿಕೊಳ್ಳುವ, ಕಲೆಯಲ್ಲಿ ಸಿದ್ಧಹಸ್ತರು. ಆರು ಹಳ್ಳಿಯ ಶಾನುಭೋಗ ಸೂರ್ಯನಾರಾಯಣಪ್ಪನ ಜೋರು ಜಬರ್ದಸ್ತು ಛಲ ಆತ್ಮಾಭಿಮಾನ ಹಣದ ಆಸೆಗಳು ಕಾದಂಬರಿಯ ಮೊದಲಲ್ಲೇ ಸ್ಪಷ್ಟವಾಗುವಂತೆ ನಿರೂಪಿಸಿದ್ದಾರೆ. ಅವನನ್ನು ಚಿಕ್ಕಜೋಡಿದಾರರ ನಾಗೇಶ ಹೀನಾಮಾನ ಅಂದಕ್ಷಣದಲ್ಲಿ ಅವನ ಅಂತರಂಗದಲ್ಲಿ ನಡೆದ ತುಯ್ತು ತಕ್ಕಮಟ್ಟಿಗೆ ಇದೆ. ಸಂಭಾಷಣೆಯಲ್ಲಿ ದೇಸಿಯ ಸೊಗಡು ಮಾತು ಪ್ರಾಕೃತ ಸೊಗಸಿನಿಂದ ಹಿತವಾಗುತ್ತದೆ. ಉದಾ: ಸೂರ್ಯನಾರಾಯಣ ಹಾಗೂ ಶಂಕರೇಗೌಡ, ಸಿಂಗಾರಿಗೌಡರ ಮಾತುಕತೆ. ಹಲ್ಳಿಯ ವಿರಸಗಳ ಬುಡದಲ್ಲಿ ಒಂದು ಸಣ್ಣ ಕಾರಣವಷ್ಟೇ ಇರುತ್ತದೆಂಬುದು ಒಟ್ಟು ಕಾದಂಬರಿಯ ಧ್ವನಿ. ಇಲ್ಲಿ ನಡೆದ ಹಗರಣಕ್ಕೆ ಜೋಯಿಸರ ಕಿಟ್ಟಪ್ಪ ಮೂಲ ಕಾರಣ.

ಶೈಲಿ ಮೋಡಿಯಾಗಿ ಸೆಳೆಯುತ್ತದೆ. ಇವರ ಮಾತು ಮೊನಚು. ಇದೇ ಕಸುಬಿನ ‘ಟ್ರಂಪ್ ಕಾರ್ಡ್’ ಆಗಿಬಿಟ್ಟಿದೆ. ಇವರ ಬರೆಹ ಇನ್ನೂ ಸಂಕೀರ್ಣವಾಗಿ ಸಂಗ್ರಹವಾಗಿ ಬಂದುದೇ ಆದರೆ ಬಂಗಾರಕ್ಕೆ ವಜ್ರದ ಕುಂದಣವಿಟ್ಟಂತೆ ಆದೀತು. ಪರಕೀಯ ಪ್ರಜ್ಞೆಯನ್ನು ಮೂಲದ್ರವ್ಯವನ್ನಾಗಿಸಿಕೊಂಡು ಅತೃಪ್ತ ಪಾತಳಿಯ ಮೇಲೆ ಕಾದಂಬರಿಯ ಪ್ರಧಾನ ಪಾತ್ರಗಳನ್ನು ನಡದಾಡಿಸಿರುವುದು ತರವಲ್ಲ. ಕ್ರೋಧೋನ್ಮತ್ತರ, ರಾಗ ದ್ವೇಷಾಧಿಕ್ಯದಿಂದ ಸೊಕ್ಕಿದವರ ಪಾತ್ರಚಿತ್ರಣದಲ್ಲಿ ಇವರು ಅನಗತ್ಯವಾಗಿ ಹೆಚ್ಚಿನ ಮಾತುವರ್ಜಿ ತೋರಿಸುತ್ತಾರೆ. ರಘೋತ್ತಮ ರಾಯರ ಒಬ್ಬಣೇ ಮಗ ನಾಗೇಶ ಕುಡಿತಾದಿ ದುರ್ವ್ಯಸನಗಳಿಂದ ಬೀಗಿ ನಾಲಗೆ ಹತೋಟಿ ಹಂಗು ಇಲ್ಲದೆ ಡಣಾಯಕನ ಪುರದ ಜೋಡಿದಾರರ ಮನೆತನಕ್ಕೆ ಮಸಿ ಬಳಿಯುತ್ತಾ ನಡೆಯುವ ಗತ್ತು ಇಲ್ಲಿ ಢಾಳಾಗಿ ಎದ್ದು ಕಾಣುತ್ತದೆ. ಕೃಷ್ಣವೇಣಿಯನ್ನು ಗೌರಿಯನ್ನು ಅವನು ಬಳಸಿಕೊಳ್ಳುವ ಸಂದರ್ಭದಲ್ಲಿ ತೋರುವ ನಡವಳಿಕೆ ಕೃತಕವಾಗಿದೆ. ಕಟರೆಯಾಗುತ್ತದೆ.

ಇವರು ಕಾಮಾತಿಶಯವನ್ನು ಬೈನಾಕ್ಯುಲರ್ ನಲ್ಲಿ ನೋಡಿ ಬರೆಯುತ್ತಾರೆನ್ನಿಸುತ್ತದೆ. ಭಕ್ತಿ ಬಣ್ಣಿಸಿದರೆ ಅದೂ ಅತಿ (ಶಿವಾನಂದ ಸ್ವಾಮಿ ಪಾತ್ರ ಉದಾ:) ಆಗುತ್ತದೆ. ಹಲವು ಅತಿಗಳ ನಡುವೆ ಇವರ ಕಾದಂಬರಿ ಗತಿಕಾಣದೆ ವಿಕೃತವಾಗಿ ನರಳುತ್ತದೆ. ಬಹುಶಃ ಈ ಮಾತು ಇವರ ಇತರ ಹಲವು ಹೊತ್ತಗೆಗಳಿಗೂ ಸಲ್ಲಿ ನಿಲ್ಲಿಬಹುದು. ಉದ್ವೇಗ ಉದ್ರೇಕಗಳಿಗೆ ಬ್ರೇಕು ಹಾಕಬೇಕು. ನಮ್ಮ ಕೆಲವೇ ಹಿರಿಯ ಹೆಸರಾಂತ ಬರಹಗಾರರು ತಮಗೆ ದತ್ತವಾದ ವಿಶಿಷ್ಟ ಶಕ್ತಿಯನ್ನು ಪೋಲಾಗದಂತೆ ನೋಡಿಕೊಳ್ಳುವುದಗತ್ಯ.

ನವಿಲೂರ ಚೆಲುವೆ (ಎಸ್. ಪ್ಲೊಮಿನ್ ದಾಸ್)-ಇದನ್ನು ವಿಚಿತ್ರ ಭಾಷೆಯ ರಂಜನೆಗಾಗಿ ಓದಬಹುದು: “ಆಶಾಮುಗಿಲೆಡೆಗೆ ನನ್ನ ಕಣ್ಣು. ಕನ್ನಡ ಸಾಹಿತ್ಯದಲ್ಲಿ ನನ್ನ ಉಸಿರು. ಶಾಂತಿದಾಯಕವೇ ಕೃತಿ ಕುಸುಮಗಳ ಪರಿಮಳವು. ಲೇಖನಿಯೇ ನನ್ನ ಆತ್ಮೀಯ ಬಂಧು. ಅಚುಲವಾಗಿರಲಿ ನನ್ನ ಸವಿನೆನಪು ನಿಮ್ಮ ಹೃದಯ ಮಂದಿರದಲಿ ಎಂಬುದೇ ನನ್ನ ನಮ್ರ ನಿವೇದನೆ.”

ಯಾವುದೋ ಭಾಷೆಯಲ್ಲಿ ಆಲೋಚಿಸಿ ಯಾವುದೋ ಭಾಷೆಯಲ್ಲಿ ಬರೆದ ಒಂದು ಗಡಿಬಿಡಿಯ ಸುರುಳಿ. ಪ್ರತಿಬಿಮಭ. ವೀರಾಜಿಸು-ಮೊದಲಾದ ಶಬ್ದಗಳ ಪ್ರಯೋಗ ಅಹಿತವಾಗಿದೆ. “ಆ ಬರಡು ಗೂಡಿನಲ್ಲಿ ತನ್ನ ಹೃದಯಕ್ಕೆ ಬದಲು ಅನುರಾಗಿಸಿದವನಿಂದ ಅನಂತ ಅನುರಾಗವನ್ನು ಅನುಪಮ ಅನುಕಂಪವನ್ನು ತುಂಬಿಕೊಳ್ಳಲು ಅನಂತವೂ ಆಶಿಸುತ್ತಿರುತ್ತಾಳೆ”- ಈ ಬಗೆಯ ಸಾಲುಗಳು ಅರ್ಥವಾಗದಿದ್ದರೂ ಆರ್ಭಟ ಕೇಳಿಸುತ್ತದೆ.

ಶಬ್ದ ಚಮತ್ಕಾರ ಮೋಹದ ಸುಳಿಗೆ ಸಿಕ್ಕಿ ಲೇಖಕರಿಗೆ ನಿರ್ದಿಷ್ಟ ಉದ್ದೇಶದ ದಿಕ್ಕೇ ತಪ್ಪಿ ಹೋಗಿದೆ. ಅಸಂಬದ್ಧ ಬಾಲಿಶ ಬರೆಹ.

ಪೋಂತಿಯಾನೋ (ರಾಶಿ) ಒಂದು ಮಿನಿ ಕಾದಂಬರಿ. ಇದನ್ನು ಕಾದಂಬರಿ ಎಂದು ಕರೆಯುವುದಕ್ಕಿಂತ ಶುಷ್ಕ ಕಗ್ಗ ಎಂದೇ ಕರೆಯಬಹುದು. ಜಿಮ್ಮಿ ಮೆಕ್ಕ್ಯಾರಿಸನ್ ಎಂಬ ಹುಡುಗ ಹಳ್ಳಿಯಿಂದ ರಾತ್ರೋರಾತ್ರಿ ಎಲ್ಲರೂ ಮಲಗಿರುವಾಗ ಕದ್ದು ಲಂಡನ್ನಿಗೆ ಹೋದ. ಕ್ಲಬ್ ಚಾಕರನಾದ. ಅಲ್ಲಿ ಸರ್ ರಾಬಟ್ ಲ್ಯಾಡಿಂಗ್ ಎಂಬೊಬ್ಬ ಶ್ರೀಮಂತನ ಪರಿಚಯ; ಆತ ಇವನನ್ನು ಮೆಚ್ಚಿ ಮಲಯಾ ದೇಶದ ತನ್ನ ಶ್ರೀಮಂತ ರಬ್ಬರ್ ತೋಟಕ್ಕೆ ಕರೆದೊಯ್ದು ಅಲ್ಲಿಯೂ ಜಿಮ್ಮಿ ಧಣಿಯನ್ನು ತಣಿಯುವಂತೆ ತನ್ನ ಸೇವೆಯಿಂದ ಮೆಚ್ಚಿಸಿದ ಯಜಮಾನನಿಗೆ ‘ಆಂಚೈನಲ್ ಅಟ್ಯಾಕ್’ ಮೂರುಸಲ ಬಡಿದು ಮರಣ ಹೊಂದಿದ.

ಅವನ ಉಯಿಲು ಲಂಡನ್ನಿನ ಬ್ಯಾಂಕಿನಲ್ಲಿತ್ತು. ಅದರಲ್ಲಿ ಎಲ್ಲ ಆಸ್ತಿಯನ್ನೂ ಜಿಮ್ಮಿಗೆ ಬರೆದಿತ್ತು. ಡಯಾನಾಳೊಡನೆ ಅವನದು ಅಮರ ಪ್ರೀತಿಯ ಅತ್ಮೀಯತೆ. ಅತ್ಯಂತ ಬೆಲೆ ಬಾಳುವ ಉಂಗುರವನ್ನು ಒಡೆಯನಾಣತಿಯಂತೆ ಚೀಣೀ ಪಾರುಪತ್ತೇದಾರನಿಗೆ ಜಿಮ್ಮಿ ಕೊಟ್ಟ. ಆಗ ಆತ ತನ್ನ ಮಗಳು ಕೊಳದಲ್ಲಿ ಬಟ್ಟೆ ‘ಹೊ(?) ಗೆಯಲು’ ಇತರರೊಂದಿಗೆ ಹೋಗಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸತ್ತಳೆಂದು ತಿಳಿಸಿದ: ‘ನೀವು ಎಂದಾದರೂ ಮದುವೆಯಾಗಬೇಕು. ನಿಮ್ಮ ಹೆಂಡತಿಯಾಗುವವಳಿಗೆ ನನ್ನ ಉಡುಗೊರೆ(?) ಯಾಗಿ ಇದನ್ನು ಸ್ವೀಕರಿಸಿ” ಎಂದು ಉಂಗುರವನ್ನು ಜಿಮ್ಮಿಗೇ ಕೊಟ್ಟ.

ಮುಂದೆ ಜಿಮ್ಮಿ ಡಯಾನಾರ ಮದುವೆ, ಡಯಾನಾ ಕೊಳದೊಳಕ್ಕೆ ಜಾರಿದ್ದು ಕೊಳದೊಳಗೆ ಕೆಸರಲ್ಲಿ ಪೋಂತಿಯಾನೋ (=ಶಾಕಿನಿ) ಅಸ್ಥಿಪಂಜರದ ಹಲ್ಲುಗಖು ಡಯಾನಾಳ ಕತ್ತನ್ನು ಬಲವಾಗಿ ಕಚ್ಚಿದ್ದು-ಇತ್ಯಾದಿ. ದೆವ್ವದ ಕಥೆ-ಹೇಗಿದ್ದರೂ ನಡೆಯುತ್ತದೆ. ವೈಚಾರಿಕತೆಗೆ ಅವಕಾಶವಿಲ್ಲ. ಮುದ್ರಣ ಸ್ಖಾಲಿತ್ಯಗಳಿಗೆ ವಿಶೇಷಾವಕಾಶ-ವರಾಂಟ (೫೦) ಲೆಸ್ಲಿಯೋ/ಲೆಸ್ಟಿಯೊ (೫೦) ಕಣಕಾಲ (೬೦) ತೆಂಪೆರ (೬೧).

ಜೋಗಿ ಮಂಟಪದ ಡಾಕಿಣಿ ಇದರಲ್ಲಿ ಬರುವ ಜೋಡಿ ಕಥೆ. ಪೋಂತಿಯಾನೋ ಕಾದಂಬರಿ ಎಂದು ಕರೆಸಿಕೊಳ್ಳದಿದ್ದರೂ ಕೆಟ್ಟ ನೀಳ್ಗತೆ ಎಂದಾದರೂ ಕರೆಸಿಕೊಳ್ಳುತ್ತದೆ. ಇದು ಅನುವಾದ ಕೂಡ. ಜೋಗಿ ಮಂಟಪದ ಡಾಕಿಣಿ ಮಾತ್ರ ಶುದ್ಧ ಸುಳ್ಳಿನ ಕಂತೆಯಾದ ಸಣ್ಣ ಕಥೆ. ಭೂತಗಳಿಗೆ, ಹೆಣ್ಣುದೆವ್ವಗಳಿಗೆ, ಸಂಬಂಧಿಸಿದ್ದು. ಕಡೆಯ ಹತ್ತು ಪುಟಗಳ ಪ್ರಸ್ತಾವನೆಯಲ್ಲಿ ಎಲ್ಲ ಜನಾಂಗಗಳಲ್ಲಿಯೂ ಶಾಕಿನಿಡಾಕಿನಿ ಕಥೆ ನಂಬಿಕೆ ಉಂಟೆಂದು ವಿವರಣೆಯಿದೆ.

ಏನಾದರೂ ಒಂದು ಕಥೆ ಹೇಳುವ ಪ್ರಾಥಮಿಕ ನೆಲೆಯಲ್ಲೇ ಪರ್ಯವಸಾನವಾಗುವ ಕೃತಿ.

ಕುಸುಮ (ಜೀಜಿ) ಕಾದಂಬರಿಯೂ ಕೊರಕಲು ಜಾಡಿನಲ್ಲಿ ಹೆಜ್ಜೆ ಹಾಕಿದೆ. ತಮ್ಮ ತನವನ್ನು ಕಂಡುಕೊಳ್ಳದೆ ಲೇಖಕರು ಅತಿಭಾವುಕರಾಗಿ ಆದರ್ಶದ ಅವಾಸ್ತವ ಹೊಂಗನಸನ್ನು ತಲೆತುಂಬ ತುಂಬಿಕೊಂಡು ಅದನ್ನು ಬರವಣಿಗೆಗೆ ಅನಾಮತ್ತಾಗಿ ಭಟ್ಟಿಯಿಳಿಸಿದ ಇಲ್ಲವೇ ಜೀವನದ ಘಟನೆಗಳನ್ನು ಹಸಿಹಸಿಯಾಗಿ ತುಂಬಿಕೊಟ್ಟ ಮಾತ್ರಕ್ಕೆ ಅದು ಸಾಹಿತ್ಯವಾಗಲಾರದು. ಒಂದು ಕೃತಿ ಕಲಾತ್ಮಕವಾಗಿ ಹೇಗೆ ಯಶಸ್ವಿಯಾಗಿದೆಯೆಂಬುದೇ ವಿಮರ್ಶಕನ ಮುಖ್ಯ ಅಳತೆಗೋಲು.

ಈ ಕಾದಂಬರಿಯ ಕಥಾನಾಯಕಿ ಕುಸುಮ ಬದುಕಿನ ಬವಣೆ ಬೇಗುದಿಗಳಲ್ಲಿ ಬಳಲಿ ಬೆಂಡಾದ ವಿಚಾರವಿದೆ. ಅವಳ ನೋವಿನ ಜೀವನದ ನಡುವೆ ಎಂಥ ಪ್ರಸಂಗದಲ್ಲೂ ಶೀಲವನ್ನು ಬಲಿ ಕೊಡದೆ ಬಾಳಿದಳು. ಈ ಅಂಶವನ್ನು ಎತ್ತಿ ತೋರಿಸಬೇಕೆಂಬ ಪೂರ್ವ ಗ್ರಹಿಕೆಯನ್ನು ಲೇಖಕರು ಇದನ್ನೇ ಹಿಂಜಿ ಹಿಗ್ಗಿಸಿ ಓದುಗರಿಗೆ ಚಿಟ್ಟು ಆಗುವಷ್ಟು ಲಂಬಿಸಿದ್ದಾರೆ…

ವಿಸಂಗತಿಗಳಿಂದ ಕೂಡಿದ ಅಸಂಯಮ ಬರವಣಿಗೆ.

ನೇಗಿಲ ಯೋಗಿ (ಮ.ನ. ಮೂರ್ತಿ) ಗ್ರಮ್ಯ ಜೀವನದ ಓರೆಕೋರೆಗಳನ್ನು ಅದಕ್ಕೆ ಕಾರಣರಾಗುವ ವ್ಯಕ್ತಿಗಳನ್ನೂ ಚಿತ್ರಿಸಲೆತ್ನಿಸಿರುವ ಹಳ್ಳಿಗಳ ಬಗ್ಗೆ ರೋಮ್ಯಾಂಟಿಕ್ ಪ್ರೀತಿ ಕಟ್ಟಿಕೊಂಡ ಕಾದಂಬರಿ. ಜೀವಕಳೆಯೇ ಇಲ್ಲದ ಮೂಳೆ ಚಕ್ಕಳ ನೆನಪಿಗೆ ತರುತ್ತದೆ

ಈಗಾಗಲೇ ಹಲವು ಕಾದಂಬರಿಗಳನ್ನು ಬರೆದು ಬೆಳ್ಳಿಹಬ್ಬದ ಹಾದಿಯಲ್ಲಿ ನಡೆದ ಲೇಖಕರ ಕೃತಿಯಾದುದರಿಂದ ನಾಲ್ಕು ಒಳ್ಳೆಯ ಮಾತು ಹೇಳುವ ಅವಕಾಶ ಮಾಡಿಕೊಟ್ಟೀತೆಂಬ ಆಶೆಯಿಂದ ಓದಿದರಂತೂ ನಿರಾಶೆ ಕಟ್ಟಿಟ್ಟ ಬುತ್ತಿ. ಎಷ್ಟೇ ಪ್ರಯತ್ನಿಸಿದರೂ ಭೋಳೇತನವೇ ತೋರುವಂತೆ ಬರೆಯುವುದನ್ನು ಕಾಪಾಡಿಕೊಂಡು ಬರುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಲೇಖಕರಿಗೆ ಸಾಮಾಜಿಕ ಹೊಣೆ ಇದೆಯೆಂಬ ತಿಳುವಳಿಕೆ ಇವರಲ್ಲೂ ಕಾಣದೆ ಹೋದರೆ ಹೇಗೆ? ಲೇಖಕನ ಜವಾಬ್ದಾರಿ ಕುರಿತು ಉದ್ದುದ್ದ ಭಾಷಣ ಮಾಡುತ್ತಾರೆ. ಮುನ್ನುಡಿ ಬರೆಯುತ್ತಾರೆ.