ಸೃಜನಾತ್ಮಕ ಬರೆಹಕ್ಕೆ ಬೇಕಾದ ಕೆಲವಾದರೂ ಲಕ್ಷಣಗಳನ್ನು ಇವರಲ್ಲಿ ಕಾಣುತ್ತೇವೆಂಬ ಕಾರಣದಿಂದ ಮೇಲಿನ ನಿರೀಕ್ಷೆಯ ಮಾತುಗಳನ್ನಾಡಿರುವುದು. ಆದರೆ ಇತ್ತೀಚೆಗೆ ಬರೆದ ಕೃತಿಗಳಲ್ಲಷ್ಟೇ ಅಲ್ಲ, ಇವರ ಹಿಂದಿನಕಾದಂಬರಿಗಳೂ ಆದರ್ಶಪ್ರಾಯವಲ್ಲದ ಬರೆಹಗಳ ಗುಡ್ಡೆಯಾಗಿವೆ; ಗೊಡ್ಡು ಆದರ್ಶದ ಕಳಪೆ ಮಾಲಾದ ‘ಬಿಳಿಯ ಹೆಂಡತಿ’, ಅಘಟಿತ ಘಟನೆಗಳ ಟೊಳ್ಳಾದ ‘ಜಂಬದ ಕೋಳಿ’ ಅಸಂಭಾವ್ಯ ನೀರಸ ಬರೆಹದ ‘ಒಲಿದರೆ ನಾರಿ’ ಹಿಗ್ಗಾಮುಗ್ಗಾ ಎಳೆದ ಬರೆದ ‘ಹೊನ್ನಿನ ಮಳೆ’, ಅಪ್ರಬುದ್ಧ ಪ್ರಲಾಪವಾದ ‘ಅಲಕನಂದಾ’, ಸ್ವಾನುಭವಕ್ಕೆ ಬದ್ಧರಾಗದ ಕಾರಣ ಬಂದ ‘ನಾನು ಭಾರತೀಯ,’ ನೀರಸವಾದ ‘ಗಾಯನ ಚಕ್ರವರ್ತಿ – ಇವೆಲ್ಲ ಅಸ್ತವ್ಯಸ್ತ ಅರೆಬೆಂದ ಪಾಕದ ಸಾಮಗ್ರಿ. ಟೀಪುವನ್ನು ಕುರಿತು ಮೂರು ಭಾಗಗಳಲ್ಲಿ (ಸಂಧಾನ, ಸಂವಿಧಾನ, ಸಂಹಾರ) ರಚಿಸಿದ ಚಾರಿತ್ರಿಕ ಕಾದಂಬರಿ ಶುಷ್ಕ ಬರೆಹಕ್ಕೆ ತೆರೆದ ರಾಷ್ಟ್ರೀಯ ಹೆದ್ದಾರಿ. ಇವರ ಕಾದಂಬರಿಗಳ ಮೂಲ ಬಂಡವಾಳ ಹಾಗೂ ಸಂವಿಧಾನದಲ್ಲೇ ದೋಷಗಳು ತಲೆ ಹಾಕಿ ಕಲೆಗಾರಿಕೆ ಸಿದ್ದಿಸದಂತೆ ತಡೆಹಿಡಿದಿವೆ. ನೇಗಿಲಯೋಗಿಯೂ ಲೇಖಕನ ಕಲಾನೈಪುಣ್ಯವನ್ನು ನುಂಗಿನೊಣೆದ ವ್ಯರ್ಥ ಸಾಹಸ.

ಇದಕ್ಕೆ ಇನ್ನೂ ಹೆಚ್ಚಿನ ಕಾರಣವನ್ನು ಲೇಖಕರ ಒಳಮಾತಿನಲ್ಲಿ ಕಂಡುಕೊಳ್ಳಬಹುದು “ಬರವಣಿಗೆ ನಾನು ಮೊದಲು ಎಣಿಸಿದುದಕ್ಕಿಂತ ವೇಗವಾಗಿಯೇ ಸಾಗಿದೆ…. ಇಚ್ಚೆಯಿರಲಿ ಇಲ್ಲದಿರಲಿ. ಮನಧರ್ಮವಿರಲಿ, ಇಲ್ಲದಿರಲಿ, ಸ್ಪೂರ್ತಿಯೆಂಬುದೊಂದು. ನಿಜವಾಗಿಯೂ ಇದ್ದರೆ ಅದು ಬಂದಿರಲಿ ಬಾರದಿರಲಿ ಯಾಂತ್ರಿಕವಾಗಿ ವಾರವಾರವೂ ಒಂದಷ್ಟು ಪುಟಗಳನ್ನು ಬರೆಯಲೇ ಬೇಕಾದ ಕಾಯಕವನ್ನು ಕೈಗೊಂಡವನಿಗೆ ಅದರಿಂದ ಬಿಡುಗಡೆ ಎಲ್ಲಿ ಬಂತು?” ಇಲ್ಲಿನ ಅಸಂಗತ ಅಪಸ್ವರಗಳಂತಿರಲಿ, ಇಂಥ ದೃಷ್ಟಿ ಹೊಂದಿದ, ಈ ತೀರ್ಪು ತಳೆದ ಲೇಖಕರ ನಿರ್ಧಾರಕ್ಕೆ ವಿಷಾದವಾಗುತ್ತದೆ.

ವೇಗದ ಬರೆಹದಿಂದ ಎಷ್ಟು ಅಪಾಯವಿದೆಯೆಂಬುದಕ್ಕೆ ಇವರ ಇನ್ನಿತರ ಗ್ರಂಥಗಳಂತೆ ಈ ಹೊತ್ತಗೆಯೂ ಉತ್ತಮ ಉದಾಹರಣೆ. ತಮ್ಮ ಮನದ ಅಳಲನ್ನು ತೋಡಿಕೊಂಡ ಮಾತ್ರಕ್ಕೆ ಅದು ವಿಕೃತಿಯಾಗದಿದ್ದರೂ ಕೃತಿ ಆಗಲಾರದು. “ಇದನ್ನು ತಾಳ್ಮೆಯಿಂದ ಓದಿದರೆ ಅಷ್ಟೇ ಸಂತೋಷ” ಎನ್ನುತ್ತಾರೆ. ಹೌದು, ತಾಳ್ಮೆಯೇನೋ ಬಹಳಷ್ಟು ಬೇಕು. ಆದರೆ ಕಾದಂಭರಿ ಓದು ಮುಗಿಸಿದರೆ ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಯಾಗಲಿ, ಹಳ್ಳಿಯ ಬಾಳಾಗಲಿ ಸರಿಯಾಗಿ ತಿಳಿಯದು. ಹೀಗಿರುವಾಗ ಉಳಿದ ವಿಮರ್ಶೆ ಅನಾವಶ್ಯಕ.

ನಾನೂ ವಿದ್ಯಾವಂತಳಾದೆ (ದಕ್ಷಿಣಾಮೂರ್ತಿ) ಜಯಂತಿ-ಸುದರ್ಶನರ ಮದುವೆಗೆ ಒಂದೆರಡು ಆತಂಕಗಳುಂಟಾದರೂ ಅವಳು ವ್ಯಾಸಂಗವನ್ನೂ ನಿಲ್ಲಿಸದೆ ವ್ಯವಹಾರವನ್ನೂ ಬಿಡದೆ ಎರಡನ್ನೂ ತೂಗಿಸಿಕೊಂಡು ಹೋದ ಚತುರೆ ಎಂದು ನಿವೇದಿಸುವುದಕ್ಕೆಂದೇ ಬರೆದ ಒಂದು ಕಾದಂಬರಿ.

ಮಳೆ ಬಂದ ಒಂದು ದಿನ ಜಯಂತಿ ಕಾಲು ಬಾತುಕೊಂಡಿದ್ದು ಸಕಾರಣವಾಗಿಲ್ಲ ಮಾಲಾ ಕನಕ ಶ್ರೀಮತಿ ಕೃತಿಯ ಬೆಳವಣಿಗೆಯಲ್ಲಿ ಸಕ್ರಿಯ ಪಾಲುಗಾರರಾಗುವುದಿಲ್ಲ. ರಾಧಮ್ಮನಿಗೆ ರಕ್ತ ಒತ್ತಡ ಸಕ್ಕರೆ ರೋಗ ಬರಬೇಕಾದ ಅಗತ್ಯವಿಲ್ಲ. ಅದನ್ನು ಅವರು ಹಾಗೂ ಮಗಳ ಜಯಂತಿಯ ಬಾಲಿಗೊಂದು ದುರಂತದ ಹೊದಿಕೆ ಹೊದಿಸಲು ಹೊಲಿದಂತಿದೆ. ಲಲಿತಮ್ಮ ವತ್ಸಲ ಗೀತಾ ಸುಲೋಚನಾದೇವಿಯರಿಗೆ ಸ್ವಂತಿಕೆಯಿಲ್ಲ. ನಾಗಪ್ಪ ಅವನ ಹೆಸರನ್ನು ಅನ್ವರ್ಥಕಪಡಿಸಿಕೊಳ್ಳುವಂತೆ ಮಸಲತ್ತು ಮಾಡಿದ್ದಾರೆ. ಸುದರ್ಶನ ಮೋಹನ ಗೋವಿಂದಪ್ಪ ಖಾಲಿಜಾಗ ಭರ್ತಿ ಮಾಡುತ್ತಾರೆ. ರಘುಪತಿಯನ್ನು ನಿಷ್ಕಾರಣವಾಗಿ ವಿದೂಷಕನನ್ನು ನೆನಪಿಸುವಂತೆ ನಿರೂಪಿಸಿದ್ದಾರೆ.

ಕಾಲೇಜಿನ ಕಲ್ಪನೆ ಇವರಿಗಿರುವುದಿಷ್ಟು; ಕಾಲೇಜಿನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರಿಗೆ ಕೀಟಲೆ ಮಾಡಿ ತೊಂದರೆ ಕೊಡುವುದಷ್ಟೇ ಕೆಲಸ. ಜಯಂತಿ ಮನೆ ಕಟ್ಟಿಸಿದ ಪ್ರಕರಣವನ್ನು ಲೇಖಕರ ಅನಭಿಜ್ಞತೆಗೊಂದು ಉದಾಹರಣೆಯಾಗಿ ಕೊಡೋಣವೆಂದರೆ ಅದಕ್ಕೆ ಇಂಗ್ಲಿಷ್ ಅಧ್ಯಾಪಕ ರಘುಪತಿ ಮತ್ತು ಶಿಷ್ಯೆ ಶ್ರೀಮತಿ ಪ್ರಕರಣ ಸ್ಪರ್ಧಿಯಾಗಿ ಎದುರಾಗುತ್ತದೆ. ಕಲಿಯುತ್ತಿರುವ ಹುಡುಗಿಯರು ಸೇರಿ ಆ ಗುರುಶಿಷ್ಯೆಯರು ಹಾರ ಹಾಕಿಕೊಂಡು ನಿಲ್ಲುವಂತೆ ಮಾಡಿದ ಪ್ರಸಂಗದ ಮೋಜೇ ಮೋಜು. ಟೇಬಲ್ ಟೆನಿಸ್ ಆಟ ಅತಿ ಹಾಗೂ ಅನಗತ್ಯ. ಅದೊಂದು ಸಂಕೇತವೂ ಆಗುವುದಿಲ್ಲ.

ಸಣ್ಣಕತೆಗೆ ತಕ್ಕವಸ್ತು. ಕಾದಂಬರಿಯಾಗುವ ಬಲ ಇಲ್ಲ. ಮಂದಗತಿಯಿಂದ ತೆವಳುತ್ತದೆ. ಇವರಿಗೆ ಬದುಕು ಲೆಕ್ಕಾಚಾರದ್ದು, ಸರಳವಾದದ್ದು.

ನನ್ನ ಸುಮ (ರಮಾತನಯ) ತಂದೆ ತಾಯಿ ಮಗುವನ್ನು ಕಳೆದುಕೊಂಡದ್ದು ಈ ಕಾದಂಬರಿ ಹಂದರ, ದುರ್ಬಲವಾದ ಪಾತ್ರ ಕಲ್ಪನೆಯ ಜೊತೆಗೆ ಅಪಕ್ವ ವಿಚಾರಸರಣಿಯಿಂದ ಕಾದಂಬರಿ ನಮ್ಮನ್ನು ನಿರಾಶೆಗೊಳಿಸುತ್ತದೆ. ಇದು ಅವಸರದ ರಚನೆಯಿಂದಾಗಿ ನರಳುತ್ತದೆ. ಇಂಥ ಜೊಳ್ಳು ಬೆಹ ಕೊಟ್ಟು ಸಾಹಿತಿಯಾಗುವ ಮಾತು ಸುಳ್ಳು, ಸಾಧನೆ ಸೊನ್ನೆ.

ಹಡೆದವರು (ದು. ನಿಂ. ಬೆಳಗಲಿ) ಹಳೆಯ ಕಥೆಯನ್ನೇ ಒಂದು ಹೊಸಪಾತ್ರದ ಬೆಸುಗೆ ಹಾಕಿ ಹೊಸೆದ ಕಾದಂಬರಿಯಾದರೂ ಅದನ್ನು ಮೆಟ್ಟಿ ಮೊದಲಿಗೆ ಎದ್ದು ಕಾಣುವುದು, ನಿಸರ್ಗ ಕಾದಂಬರಿ ಮಾದರಿಯ, ಪ್ರಾದೇಶಿಕತೆಯ ಸೊಗಡಿನಿಂದ ಕೂಡಿದ ಬನಿಕಟ್ಟಿನ ಜೀವಂತ ಭಾಷೆ. ಪ್ರಾದೇಶಿಕ ಪರಿಸರವೂ ಉಪೇಕ್ಷಿಸುವಂತಿಲ್ಲ. ಒಕ್ಕಲು ಮಕ್ಕಳ ನೋವು ನಲಿವುಗಳನ್ನೂ ಜಾನಪದ ಸತ್ವನ್ನೂ ಹೊತ್ತು ಸಮರ್ಥವಾಗಿ ನಿಂತದ್ದೇ ಆದರೆ ಇದಕ್ಕೊಂದು ವಿಶಿಷ್ಟ ಸ್ಥಾನವಿರುತ್ತಿತ್ತು.

ಹಡೆದವರು (ನೀಲ್ಯಾ, ಚೆನ್ನಿ) ಇದ್ದರೂ ಅನಾಥೆಯಂತೆ ಬಾಳಿದ ಕರುಳು ಹಿಂಡುವ ಕಥೆಯನ್ನು ಬರೆಯುವಲ್ಲಿ ಕಲಾತ್ಮಕ ಸಾಫಲ್ಯ ಪಡೆದಿಲ್ಲ. ನೀಲಚೆನ್ನಿಯರ ವಿರಸ ದಾಂಪತ್ಯಕ್ಕಿ ಇದ್ದಿರಬೇಕಾದ ಕಾರಣ ತೆಳುವಾಗಿಬಿಟ್ಟಿದೆ. ನೀಲ ಹಾಗೂ ಗೌಡರ ನಡುವಿನ ಸಂಬಂಧ, ಸುಬ್ಬಿ ಅನಾಥ ಪ್ರಜ್ಞೆಯಿಂದ ನರಳುವ ಮಗುವಿನ ಮೇಲೆ ತೋರುವ ಅವ್ಯಾಜ ಕರುಣೆ-ಇವು ಇನ್ನೂ ಸ್ವಷ್ಟವಾಗಿ ಒಪ್ಪವಾಗಿ ಬರಬೇಕಿತ್ತು. ಚೆನ್ನಿಕರಿಯರ ಮರೆಯ ಬಾಳುವೆಯೂ ತಕ್ಕ ಬುನಾದಿಯ ಮೇಲೆ ನಿಂತಿಲ್ಲ.

ಒಳಗಿನ ಕರೆಯಿಲ್ಲದಿದ್ದರೂ ಕೈಹಿಡಿದ ನೀಲವನ್ನು ಬಿಟ್ಟು ಕರಿಯನ ಬಳಿಗೆ ಸರಿಯುವ ಚೆನ್ನಿಯ ಪಾತ್ರಕ್ಕೆ ಅಗತ್ಯವಿದ್ದ ಜೀವಕಳೆ ತುಂಬಲು ಈ ಲೇಖಕರಿಗೆ ಸಾಧ್ಯವಿತ್ತು. ಕರಿಯನೊಡನೆ ತನ್ನ ಮನೆಯಲ್ಲಿ ಮಲಗಿ ಸುಖಿಸುತ್ತಿದ್ದ ರಾತ್ರಿಯಲ್ಲೇ ಅನಿರೀಕ್ಷಿತವಾಗಿ ನೀಲ ಬಂದಾಗ ನಡೆದ ಘಟನೆಯ ವಿವರ ಸೊಗಸಾಗಿ ಸಂವಹನವಾಗಿದೆ. ರುಕ್ಮಿಯಷ್ಟು ದೀರ್ಘವಾಗಿ ಪ್ರಸ್ತಾಪವಾಗುವ ಪಾತ್ರವಾದ ಸೋನಿ ರುಕ್ಮಿಯಷ್ಟೇ ಓದುಗರ ಗಮನ ಸೆಳೆಯುವಂತೆ ಸಂಕೀರ್ಣವಾಗಿ ಬಂದಿದ್ದಾಳೆ. ಅವಳು ಅನಾಥ ಮಗು ‘ಹಾಲಿ’ಗೆ ಮುಂಬೈಯಲ್ಲಿ ಹೊಸಬಾಳು ಕರುಣಿಸುತ್ತಾಳೆಂಬುದರಲ್ಲಿ ಕಾದಂಬರಿ ಮುಗಿಯುತ್ತದೆ, ಅಲ್ಲಿಗೆ ಹಾಲಿಯ ಬಾಳೂ ಮುಗಿದಂತೆ ಎಂಬ ಧ್ವನಿಯೊಡನೆ.

ಆದರೆ-

ಹಾಲಿಯ ಮಾರಾಟ ಅನಿವಾರ್ಯವಾಗಿತ್ತೆ? ಇದಕ್ಕೆ ಪರಿಹಾರಗಳು ಬೇರೆ ಇರಲಿಲ್ಲವೇ? ಹಾಲಿ ಬೆಳೆದರೂ ಮಾತು ಬರುವವಳಾದರೂ ಅವಳನ್ನು ಭೀಕರ ಮೌನಿಯನ್ನಾಗಿ ಕಡೆಯ ನಿಲ್ಲಿಸಿದ ಕಾರಣವೇನು? ಅವಳಿಗೆ ಯಾವ ಒಳತೋಟಿಗಳೂ ಇರಲಿಲ್ಲವೇ? ಹಡೆದವರ, ಅವರ ಸುತ್ತಮುತ್ತಲವರ ಢಾಳಾದ ಬೆಳಕಿನಲ್ಲಿ ನೆರಳಾಗಿ ಸರಿದ ಹಾಲಿಗೆ ವ್ಯಕ್ತಿತ್ವವೇ ಇರಲಿಲ್ಲವೇ? ಅವಳ ಸಂವೇದನೆ ಸ್ಪಂದನ ಎಲ್ಲಿ? ಇದರಿಂದ ಒಂದು ಉತ್ತಮ ಪಾತ್ರವಾಗಬಹುದಿದ್ದ ಸಾಧ್ಯತೆಗಳಿಂದ ಹಾಲಿ ವಂಚಿತಳಾಗಲಿಲ್ಲವೇ? -ಎಂಬೆಲ್ಲ ಪ್ರಶ್ನಾವಳಿ ಏಳುತ್ತದೆ.

ಹಳ್ಳಿಯ ವಾತಾವರಣದಲ್ಲಿ ಹದಗೆಟ್ಟ ಹಾದರ ನಡೆಸಿದವರ ಕಥೆ ಇಲ್ಲಿನ ವಸ್ತು ಎಂದು ಹೇಳಿದೆ; ಇಂಥ ಕಾದಂಬರಿಗಳು ಹಿಂದೆ ಬಂದಿವೆ, ಇಲ್ಲಿನ ಜೀವನ ಪ್ರತಿಪಾದನೆಗೆ ಗ್ರಾಮ್ಯ ಭಾಷೆಯೇ ಅಳವಟ್ಟಿದೆ; ಅಂಥ ಕಾದಂಬರಿಗಳೂ ಸಾಕಷ್ಟು ಪ್ರಕಟವಾಗಿವೆ. ದಾಂಪತ್ಯದ ಪರಿಣಾಮಗಳ ಫಲವಾಗಿ ನೊಂದು ಬೆಂದ ಒಂದು ದುರ್ದೈವೀ ಮಗುವೂ ಸೇರಿಕೊಂಡಿರುವುದು ಇಲ್ಲಿನ ಅಗ್ಗಳಿಕೆ, ಆ ಮಗು ಹಾಲಿ ಹಳ್ಳಿಬಿಟ್ಟು ಮುಂಬಯಿ ಸೂಳೆಗೇರಿಗೆ ಮಾರಾಟವಾಗಿ ಹೋಗುವವರೆಗೆ ಹಳ್ಳಿಯಲ್ಲಿ ನಡೆದ ಏರುಪೇರಾದ ಸಂಸಾರ ವ್ಯಭಿಚಾರ ಬಲಾತ್ಕಾರ ಕೊಲೆ ಎಲ್ಲ ತಕ್ಕಮಟ್ಟಿಗೆ ಬಂದಿವೆ.

ಜಿಂದಾಬಾದ್ (ಚಂದ್ರಕಾಂತ ಮಲ್ಯ) ವಾಡಿಕೆಯ ವಸ್ತುವನ್ನೊಳಗೊಂಡಿದೆ. ಬೊಂಬಾಯಿ ಬಹುದೊಡ್ಡನಗರ, ಅಲ್ಲಿ ವಾಸಕ್ಕೆ ಮನೆ ಸಿಗುವುದು ಕಡುಕಷ್ಟ ಎಂಬುದು ಈ ಕಾದಂಬರಿಯ ಕಥಾವಸ್ತು. ಮನೆ ಕೊಡಿಸುತ್ತೇನೆಂಬ ಆಸೆ ಆಮಿಷ ಒಡ್ಡಿ ಮಗಳನ್ನು ಕೊಟ್ಟು ಮದುವೆ ಮಾಡಿದ ಮಾವನ ಮೋಸ ಬಯಲಾದ ಮೇಲೆ ಅಳಿಯ ಆನಂದ ಪಟ್ಟ ಬವಣೆ ಇಷ್ಷನ್ನು ಓದಬೇಕಾದರೆ ರಕ್ತದ ಒತ್ತಡ ಇರುವಾತ ದಿನ್ನೆ ಹತ್ತಿ ಇಳಿದಂತೆ ಆಗುತ್ತದೆ.

ಇಂಥ ಸಮಸ್ಯೆ ಕುರಿತ ಕೃತಿಗಳು ಈಗಾಗಲೇ ಹೊರಬಂದಿವೆ ಎಂಬುದಕ್ಕಿಂತ ಇದರಲ್ಲಿ ಅವುಗಳಿಗಿಂತ ಪ್ರತ್ಯೇಕ ಎಂಬಂಥ ಸ್ವಾರಸ್ಯ ಸ್ವೋಪಜ್ಞತೆ ಇಲ್ಲದಿರುವುದನ್ನು ಎತ್ತಿ ಹೇಳಬೇಕಿನ್ನಿಸುತ್ತದೆ. ಕಥಾನಕದ ಸ್ವಾರಸ್ಯವಾಗಲಿ, ವರದಿ ಎನಿಸದ ಬರಹವಾಗಲಿ ಇಲ್ಲಿಲ್ಲ.

ಅನಿರೀಕ್ಷಿತ (ಶಂಸ ಐತಾಳ) ಸಂವೇದನಾಶೂನ್ಯ ಸಾಧಾರಣ ಕೃತಿ. ಇದರಲ್ಲಿ ಓದುಗರಿಗೆ ನಿವೇದಿತವಾಗುವುದು ಏನೂ ಇಲ್ಲ.

ಮೇನಕ, ಶ್ಯಾಮಲ, ಸುಂದರಿ, ರಾಧ ಜವ್ವನೆಯರು; ಕೃಷ್ಣಮೂರ್ತಿ ಗಣಪತಿ ಸದಾಶಿವ ರಾಜಶೇಖರ, ಜವ್ವನಿಗರು. ಇವು ಪರಸ್ಪರ ಪ್ರೇಮಿಸುವ, ಮುಂದೆ ಜೋಡಿಗಳಾಗಲೆಳಸುವ ಜೊಂಪೆಗಳು. ಆದರೆ ಕಡೆಗೆ ಯಾರು ಯಾರನ್ನೋ ಮದುವೆಯಾಗುವರು. ಮದುವೆಯಾಗದೆ ನಿಂತವರೂ ಉಂಟು. ಈ ಜೋಡಿ ಕೂಡದೆ ಏರುಪೇರು ಆದುದಕ್ಕಿದ್ದ ಪ್ರಬಲ ಕಾರಣಗಳಾವುವು? ಉತ್ತರವಿಲ್ಲ. ಯಾರು ಯಾರನ್ನು ಯಾಕೆ ಮದುವೆಯಾಗುತ್ತಾರೆ. ಸಮರ್ಥನೆ ಇಲ್ಲ.

ಇಲ್ಲಿನ ಭಾಷೆ(?) ಬಹಳ ವಿನೋದ ಕೊಡುತ್ತದೆ. ಕನ್ನಡ ಕಾದಂಬರಿಕಾರರಲ್ಲಿ ಎಂತಹ ಭಾಷಾವಿದರಿದ್ದಾರೆಂಬುದು ಇದರಿಂದ ಬಹಿರಂಗವಾಗುತ್ತದೆ. ವಾಕ್ಯಗಳ ಪುನರಾವರ್ತನೆಯ ದೋಷಪ್ರಜ್ಞೆ ಗಮನಾರ್ಹ, ೭೭, ೮೧, ೯೧, ೯೩, ೯೪, ೯೮ ಮುಂತಾದ ಪುಟಗಳಲ್ಲಿ ಗೋಜಿನ ಮೆರವಣಿಗೆಯಿದೆ. ಒಂದು ಮಾದರಿ;

ಸುಮ್ಮನೆ ಹಾಳಾದ ಹುಡುಗ
ಸುಮ್ಮನೆ ಹಾಳಾದ ಹುಡುಗ
ಹುಡುಗ ಸುಮ್ಮನೆ ಹಾಳಾದ
ಹಾಳಾದ ಹುಡುಗ

ಭಾಷೆಯ ವಿಚಾರದಲ್ಲಿ ಮುತುವರ್ಜಿಯೂ ಇಲ್ಲ. ಪ್ರಜ್ಞೆಯೂ ಇಲ್ಲ. ವಸ್ತು ವಿಚಾರದ ಕಾಳಜಿಯಂತೂ ಸಾಸುವ ಕಾಳಿನಷ್ಟೂ ಇಲ್ಲ. ಉದ್ಗಾರಗಳ ಜಡಿಮಳೆ ಕಾದಂಬರಿಯನ್ನು ತೋಯಿಸಿದೆ.

“ಗೋಡೆಗೆ ತೂಗ ಹಾಕಿರುವ ಆ ಕನ್ನಡಿಯಲ್ಲಿ ನಿನ್ನ ಮುಖದ ಪ್ರತಿಬಿಂಬವನ್ನು ನೋಡಿಕೊಳ್ಳು” – ಈ ದ್ರಾವಿಡ ಪ್ರಾಣಾಯಾಮ ವಾಕ್ಯದ ಅರ್ಥ ಕನ್ನಡಿ ನೋಡಿಕೋ ಎಂಬುದು.

ಭಗ್ನತಂತು (ಕಲಾಪ್ರಿಯ) ಕಾದಂಬರಿಗೆ ವಿಚಿತ್ರ ಸಂಬಂಧಗಳು ಎಂಬ ಹೆಸರು ಕೊಡಬಹುದಿತ್ತು. ಯಥಾಪ್ರಕಾರದ ಕಥೆ.

ಇದರಲ್ಲಿ ಗಂಡ ಹೆಂಡತಿಯರ, ಹೆಣ್ಣು ಗಂಡಿನ, ತಂದೆಮಕ್ಕಳ, ಆಳುಒಡೆಯರ ಅನೂಹ್ಯ ಸಂಬಂಧಗಳ ಪ್ರಸ್ತಾಪವಿದೆ. ಜಿಮ್ಮಿ ಡಾಲಿಯರ ದಾಂಪತ್ಯದ ಟೊಳ್ಳು ಗಟ್ಟಿಯ ನಿರ್ಧಾರದಲ್ಲಿ ನಾಚುವಿನ ಮಧ್ಯಪ್ರವೇಶದ ಸ್ನೇಹಾಧಿಕ್ಯ, ಡಾಲಿಯ ತಂದೆ ತಾಯಿಯರಾದ ಮೇದಪ್ಪ-ಬೊಳ್ಳಮ್ಮನವರ ಸಂಸಾರ, ಅವರ ಮಗ ರಾಬಿನ್ ಅಮೇರಿಕದಲ್ಲಿ ವಾಚನಾಲಯಾಧಿಕಾರಿಣಿ ರೂಸಿಯ ಪ್ರೇಮದಲ್ಲಿ ಸಿಕ್ಕಿ ಬೀಳುವುದು, ರೂಸಿ ತನ್ನನ್ನೇ ಬೆನ್ನು ಹತ್ತಿ ಮದುವೆಯಾಗಿದ್ದ ಜೊಸೆಫೆನನ್ನು ಬಿಟ್ಟು ರಾಬಿನ್ನನ್ನ ಪ್ರೀತಿಗೆ ಮರುಳುವುದು, ಜಿಮ್ಮಿಯ ತಂದೆ ಪೂಣಚ್ಚ ಸ್ತ್ರೀಲೋಲುಪನಾಗಿ (ಅವನ ಹಾಸಿಗೆಗೆ ಕಡೆಯಲ್ಲಿ ಬಂದ ಬಂಗಾರು ಮಾಧವಿಯರ ವಿಚಾರಮಾತ್ರ ಇಲ್ಲಿದ್ದರೂ) ತನ್ನ ಸೊಸೆ ಡಾಲಿಯನ್ನೇ ಮದಿರೆ ಕಾಮಗಳಿಂದ ಉನ್ನತ್ತನಾಗಿ ಭೋಗಿಸಲು ಮಾಧವಿಯ ನೆರವಿನಿಂದ ಹವಣಿಸುವುದು, ಜಿಮ್ಮಿ ತನ್ನ ತಂದೆಯ ಹಾಸುಂಡ ಮಾಧವಿಯನ್ನು ತಾನೂ ಸಹಿಸುವುದೂ-ಇವು ಕಾದಂಬರಿಯ ಕೆಲವು ಪ್ರಮುಖ ಘಟನೆಗಳು. ಇವು ಯಾವೂ ಆಕರ್ಷಕವಾಗಿ ಆಕಾರ ತಳೆಯದೆ ವಾಹನ ತಪ್ಪಿತೆಂಬ ಭೀತಿಯಿಂದ ನಿಲ್ದಾಣಕ್ಕೆ ಧಾವಿಸುವ ಪ್ರವಾಸಿಯಂತಿವೆ, ಕಲಾತ್ಮಕ ಸಂಯೋಜನೆ ಸಾಲದು. ಪ್ರಮಾಣಾನುಸಾರವಾಗಿಲ್ಲದ ನಾದುರಸ್ತು ಕೃತಿ.

ವಿದ್ಯಾಸದನ (ಜಿ.ಬಿ. ಜಗದೀಶ್) ಒಂದು ಕಲ್ಪಿತ ಮಿಥ್ಯಾ ಕಥನ, ಶ್ರೀಪತಿಯ ಪ್ರೀತಿಗೆ ಪಾತ್ರಳಾದ ಸುಶೀಲೆಯ ಮಗಳೂ ವಿದ್ಯಾ, ಸುಶೀಲೆ ಭೇರೆ ಜಾತಿಯವಳಾದುದರಿಂದ ಮದುವೆಗೆ ಒಪ್ಪಿಗೆ ದೊರೆಯಲಿಲ್ಲ. ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡರು. ಗಂಡ ಹೆಂಡತಿಯರಾಗಿಯೇ ಬಾಳಿದರು. ಲೋಕ ಸುಶೀಲೆಯನ್ನು ಸೂಳೆ ಎಂದು ಕರೆಯಿತು. ಅವರ ಕಣ್ಣಿಗೆ (ಮಗಳು) ವಿದ್ಯಾ ಸೂಳೆಯ ಮಗಳಾದಳು. ಶ್ರೀಪತಿಗೆ ತಂದೆ ತಾಯಿ ನಂಟರು ಇಷ್ಟರು ಎಲ್ಲ ಸೇರಿ ಬಲವಂತದಿಂದ ಕಾವೇರಿಯನ್ನು ಕೊಟ್ಟು ಮದುವೆ ಮಾಡಿದರು.

ಕಾವೇರಿಗೂ ಇಬ್ಬರು ಮಕ್ಕಳಾದರು. ವಿದ್ಯಾ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಅಭ್ಯಾಸ ಮಾಡತೊಡಗಿದಳೂ. ಅಲ್ಲಿಯೇ ವಿದ್ಯಾ ಡಾ|| ಸದಾಶಿವನನ್ನು ಪ್ರೀತಿಸಿ ಮದುವೆಯಾಗಲು ಇಚ್ಚಿಸಿದಳು. ಶ್ರೀಪತಿ ತನ್ನ ಸಮ್ಮತಿ ಕೊಟ್ಟ. ಡಾ|| ವಿದ್ಯಾ, ಡಾ|| ಸದಾಶಿವ ‘ವಿದ್ವಾಸದನ ನರ್ಸಿಂಗ್ ಹೋಂ’ ತೆರೆದರು. ಕಾವೇರಿಯ ಹೊಟ್ಟೆಯಲ್ಲಿ ಹುಟ್ಟಿದ ಶ್ರೀಪತಿಯ ಮಗಳು ರಾಧಾ ಡಾ|| ಸದಾಶಿವನನ್ನೇ ಮದುವೆಯಾಗಲು ಮೇಲೆ ಬಿದ್ದು ಹೋದಳು. ಅಕ್ಕ ವಿದ್ಯಾ ಬಗ್ಗೆ ಸೂಳೆಯೆಂದು ಚಾಡಿ ಊದಿದಳು. ಅವಳ ಬೇಳೆ ಬೇಯಲಿಲ್ಲ. ನಿರಾಶೆಯಾಯಿತು. ಗಂಡಿನ ದೇಹ ದಾಹದಿಂದ ರಾಧಾ ಶ್ರೀಮಂತ ಪುತ್ರ ಪ್ರೇಮಾನಂದನ ‘ಒಳ್ಳೇ ರೂಪ, ದಷ್ಟಪುಷ್ಟವಾಗಿದ್ದ ದೇಹ’ ಕೈ ಒಲಿದು ಸ್ನೇಹ ಬೆಳೆಸಿದಳು. ಆ ಸಹವಾಸಫಲದಿಂದ ಫಲವತಿಯೂ ಆದಳು. ವಿಧಿಯಿಲ್ಲದೆ ಆಗ ಡಾ|| ವಿದ್ಯಾಳ ಆಶ್ರಯಕ್ಕೆ ಶರಣಾಗಿ ಗರ್ಭಪಾತ ಮಾಡಿಸಲು ಕಾವೇರಿ ರಾಧಾ ನಿರ್ಧರಿಸಿದರು.

ಚೂರುಪಾರುಗಳನ್ನು ಕಲೆಹಾಕಿ ತಳಕೆಳಗೆ ಮಾಡಿ ವಿರೂಪಗೊಳಿಸಿದ ಕೃತಿ.

ಪೂರ್ಣಿಮಾ (ಶಿವಾನಂದರಾವೋ) ಇದು ಇವರ ಐಯ್ದನೆಯ ಕಾದಂಬರಿ ಎಂದು ಕೇಳಿ ಭಯವಾಗುತ್ತದೆ. ಇಷ್ಟು ಒಡ್ಡೊಡ್ಡಾದ ಖೋಟಾ ಪಡಿಯಚ್ಚುಗಳನ್ನೂ ಕಾದಂಬರಿ ಎಂಬುದಾಗಿ ಬರೆಯುವ-ಪ್ರಕಟಿಸುವ ಹಾಗೂ ಓದುವ ಜನರಿದ್ದಾರೆಂಬುದು ಆಶ್ಚಯ್ಯ. ಎತ್ತಿಕೊಂಡ ವಸ್ತುವಿಗೆ ಅಸ್ತಿತ್ವ ಉಂಟೆಂಬ ನಂಬಿಕೆ ಹುಟ್ಟುವಂತಾದರೂ ಬರೆಯಲು ಇವರು ಎಚ್ಚರ ವಹಿಸಲಿಲ್ಲವೆಂದರೆ ಇದು ಎಷ್ಟು ಸಾಧಾರಣ ಪುಸ್ತಕವೆಂದು ಊಹಿಸಬಹುದು. ಈ ಮಿಥ್ಯೆಯ ಕುಪ್ಪೆಯಿಂದ ಪಾರಾಗಿ ಬದುಕನ್ನು ಚೆನ್ನಾಗಿ ನೋಡಿ ಸಾಹಿತ್ಯ ಕೃತಿಗಳನ್ನೂ ಅಭ್ಯಾಸ ಮಾಡಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವ ತನಕ ಇವರು ಆರನೆಯ ಗ್ರಂಥ ರಚೆನೆಗೆ ತೊಡಗದೆ ತಟಸ್ಥರಾಗಿರುವುದು ಎಲ್ಲರಿಗೂ ಒಳಿತು.

ದೃಷ್ಟಿಹೀನ (ಜನಾರ್ಧನ ಗುರ್ಕಾರ) ಆದರ್ಶವನ್ನು ಬೆನ್ನುಹತ್ತಿ ಇರುವ ಬದುಕಿಗೆ ಬೆನ್ನಾಗಿ ಹೊರಟ ಕಾದಂಬರಿಯಾದುದರಿಂದ ಅದರ ಬಗ್ಗೆ ವಿಮರ್ಶೆ ಅನಗತ್ಯ. ವಾಸ್ತವವನ್ನು ಕಡೆಗಣಿಸಿದ ವಸ್ತುವಿದ್ದರೂ ಕೃತಿ ಉಳಿದಂತೆ ಉತ್ತಮ ಬರೆಹದ ಲಕ್ಷಣಗಳನ್ನು ಒಳಗೊಂಡಿದೆ. ಓದಿ ಮುಗಿಸಿದಾಗ ಇದು ಯಾವ ಹೊಸ ಬೆಳಕನ್ನೂ ತುಳುಕಿಸುವುದಿಲ್ಲವಾದರೂ ನಿರಾಶೆಯಾಗುವುದಿಲ್ಲ.

ಆಪ್ತಗೆಳತಿ (ಮಾಭಿಶೇ) ‘ಚಿತ್ರೀಕರಣವಾಗಲಿರುವ ಹೃದಯ ಸ್ಪಶಿಕಥೆ’ ಎಂಬ ಹಣೆಪಟ್ಟಿ ಹೊತ್ತು ಹೊರಬಂದಿರುವ ಅಮೌಲಿಕ ಕಾದಂಬರಿ. ಅತ್ಯಂತ ಆಕ್ಷೇಪಾರ್ಹ ಕ್ಷುಲ್ಲಕ ಕೃತಿ.

“ಕನ್ನಡದಲ್ಲಿ ಹೃದಯ ವಿದ್ರಾವಕ ಕಥೆ ಹೇಳುವುದರಲ್ಲಿ ತನ್ನದೇ ಆದ ಸ್ಥಾನವನ್ನು” ಈ ಲೇಖಕರು ಪಡೆದಿದ್ದಾರೆಂದು ‘ಕನ್ನಡಕ್ಕೆ ಒಳ್ಳೆಯ ಸಾಹಿತ್ಯ’ ಕೊಡುವ ‘ಗುರಿ’ ಹೊಂದಿರುವ ಪ್ರಕಾಶಕರ ಒಗ್ಗರಣೆ; ಇಲ್ಲಿಯ ಪ್ರಶಂಸಾಪರ ಪಂಕ್ಷಿಗಳನ್ನು ನುಂಗುವುದು ಕಷ್ಟ.

ಪತ್ತೇದಾರಿ ಧಾಟಿಯ ಈ ಸಾಮಾಜಿಕ ಕಾದಂಬರಿ ಸ್ವಾರಸ್ಯವಿಲ್ಲದ ಸಪ್ಪೆ ಬರೆಹ. ಆದರೆ ಬೇಹುಷಾರಿನ ಕಳಪೆ ಪುಸ್ತಕಗಳಿಗೂ ಪ್ರಕಾಶಕರು ಜಾಹಿರಾತಿನ ಸಕ್ಕರೆ ಸವರಿ ಮಾರಾಟಕ್ಕೆ ಬಿಟ್ಟಿದ್ದಾರೆ.

ಲಕ್ಷ್ಮೀಪ್ರಸನ್ನ (ತ್ರಿವಿಕ್ರಮ) ಧರ್ಮಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳೆಂಬ ಸಿದ್ಧ ಆದರ್ಶದ ಅಭದ್ರ ಅಡಿಪಾಯದ ಮೇಲೆ ಅಸ್ಥಿರವಾಗಿ ನಿಂತಿದೆ.

ಧರ್ಮ ಸಾಹಿತ್ಯವಾಗಿ ಮೂಡಿ ಬರಬೇಕು, ಅದು ರೋಚಕವಾಗಬೇಕಾದರೆ. ಇಲ್ಲಿನ ಎರಕ ಅವೆರಡನ್ನೂ ಕೂಡಿಸುವಲ್ಲಿ ಸೋತಿದೆ. ಗೋದೆಯ ಚೇತನಕ್ಕೆ ದೊರೆತ ಸಂಸ್ಕಾರ, ಅವಳು ನಡೆಸಿದ ನಿರಂತರ ಹೋರಾಟ, ಮಾಡಿದ್ದ ಮಹಾತ್ಯಾಗ, – ಯಾವುದೂ ಲೇಖಕರ ಆಶಯಕ್ಕೆ ನಿಲುಕದೆ ಕಾದಂಬರಿ ಒಂದು ನಕಲಿ ನಿರ್ಮಿತ ಅಭಾಸವಾಗಿದೆ. ಇಷ್ಟರಲ್ಲೇ ಇದು ತೆರೆಯ ಮೇಲೆ ಬರಲಿರುವ ‘ಚಿತ್ರೀಕರಣವಾಗುತ್ತಿರುವ ಕಾದಂಬರಿ’. ಕಾದಂಬರಿಕಾರರು ಕಲ್ಪಿಸಿದ ಅನುಕರಣ ಪಾತ್ರಗಳು ನೈಜತೆಯ ಸೋಗಹಾಕುವುದಿಲ್ಲ. ಇಷ್ಟು ಕೃತ್ರಿಮ ಕೃತಿ ಚಲನ ಚಿತ್ರವಾಗುತ್ತಿರುವುದು ಅಚ್ಚರಿಯೇನೂ ಅಲ್ಲ. ಇದು ಎಂಥ ಪರಿಣಾಮ ಮಾಡಿದೆಯೆಂದು ಸಮಾಲೋಚಿಸತೊಡಗಿದರೆ ಕತ್ತಲು ಕಟ್ಟುತ್ತದೆ.

ಸೃಜನಶೀಲ ಸಾಹಿತ್ಯದ ವರ್ಗಕ್ಕೆ ಬರದಿರುವ ಅಪಕ್ವ ಹೊತ್ತಗೆಗಳನ್ನು ಹೊಸೆಯುತ್ತಿದ್ದರೂ “ಭಾಷಾಂತರ, ನಾಟಕೀಕರಣ, ಚಿತ್ರೀಕರಣ, ಪುನರ್ಮುದ್ರಣ, ಸಂಗ್ರಹ ಪ್ರಕಟನೆ, ರೇಡಿಯೋ ರೂಪಾಂತರ ಮುಂತಾದ ಎಲ್ಲದರ ಸ್ವಾಮ್ಯ” ತಮ್ಮದೆಂದು ಅಚ್ಚಿಸಿಕೊಳ್ಳುವ ಆಶಾವಾದಿಯಾಗಿದ್ದಾರೆ. “ಕಾಂಪೀರೈಟಿಗೆ ಸಂಬಂಧಿಸಿದ ಎಲ್ಲ ಹಕ್ಕುಗಳೂ ಲೇಖಕರಿಗೆ ಸೇರಿವೆ” ಎಂದೂ ಒಂದು ಕಡೆ ಬರೆದುಕೊಂಡಿದ್ದಾರೆ.

ಕಾರ್ಮುಗಿಲು (ಧಾರೇಶ್ವರ್) ‘ಕೃತಕ ಕನ್ನಡ ಭಾಷೆಯ’ ವಿಚಿತ್ರ ವೈಖರಿಯನ್ನೂ ಅಸಹಜ ವಸ್ತುವಿನ್ಯಾಸವನ್ನೂ ಒಳಗೊಂಡು ಸಾಹಿತ್ಯಕ ಮೌಲ್ಯವಿಲ್ಲದೆ ಬಳಲುವ ಸಾಮಾನ್ಯ ಕಾದಂಬರಿ.

ಹಳ್ಳಿಯ ಬಗ್ಗೆ ಭ್ರಾಂತಿಜನ್ಯ ಭಾವುಕ ರಮ್ಯ ಕಲ್ಪನೆಯಲ್ಲಿ ಉಲ್ಲಾಸಗೊಳ್ಳುವುದಕ್ಕಿಂತ ಹಳ್ಳಿ ಬಾಳನ್ನು ಕಣ್ಣಾರೆ ಕಂಡು ಚೆನ್ನಾಗಿ ಅನುಭವಿಸಿ ಏನಾದರೂ ಹೇಳಬೇಕಾದ್ದಿದೆಯೆನಿಸಿದರೆ ಆಗ ಬರವಣಿಗೆಗೆ ತೊಡಗುವುದು ವಾಸಿ. ಜೊತೆಗೆ ಕೃತಿರಚನೆ ಆರಂಭಿಸುವ ಮೊದಲು ಅಭಿವ್ಯಕ್ತಿ, ಮಾಧ್ಯಮಕ್ಕೆ ಆರಿಸಿಕೊಂಡ ಭಾಷೆಯ ನಿಕಟ ಪರಿಚಯ ಪಡೆಯುವುದೂ ಅಗತ್ಯ. ಈ ಕಾದಂಬರಿಕಾರರಿಗೆ ಕನ್ನಡ ಭಾಷೆ, ಸಾಹಿತ್ಯ, ಜನಜೀವನ-ಇವುಗಳ ಪರಿಚಯವಿದ್ದಂತೆ ಅನ್ನಿಸುವುದಿಲ್ಲ. ಆದರೆ ಕನ್ನಡ ನಿಘಂಟು ಪರಿಚಯ ತಕ್ಕಮಟ್ಟಿಗೆ ಇದ್ದಂತೆ ತೋರುತ್ತದೆ. ಅಲ್ಲಿಂದ ಅನೇಕ ಶಬ್ದಗಳನ್ನು ತನಿಯಾಗಿ ತಂದು ಪೇರಿಸುತ್ತಾರೆ. ವಾಕ್ಯದ ಆಯಾಮದಲ್ಲಿ ಅವು ಕೂಡಿಕೊಳ್ಳದಿರಬಹುದು.

ಪ್ರಾರಂಭದಿಂದ ಕೊನೆಯ ವರೆಗೂ ಎಲ್ಲೂ ಓದುಗರ ಆಕಾಂಕ್ಷೆ ಕುತೂಹಲ ಕೆರಳುವುದಿಲ್ಲ. ವಾಸ್ತವಿಕತೆಯಲ್ಲಿ ಮೈ ತಳೆಯದ ವೈವಿಧ್ಯರಹಿತವಾದ ಏನೇನೂ ಪರಿಣಾಮ ಮಾಡದ ನೀರಸ ಬರೆಹ. ಅರ್ಥಹೀನ ಶಬ್ದಾಡಂಬರ ವಾಕ್ಯಗಳಿಗೆ –

“ಬಡತನದ ದಾರಿದ್ರ‍್ಯತೆಯಲ್ಲಿ ತೊಳಲುವವರನ್ನು ಕಂಡೂ ಕಾಣದಂತೆ ಅವರದು ಅನವರತವೂ ಇದ್ದೇ ಇರುವುದು ಎಂದು ಗೊಣಗುಟ್ಟಿಕೊಂಡು ಹೋಗುವ ನರಹುಳು ದೀನರ ದುಃಖವನ್ನು ಪ್ರತ್ಯಕ್ಷವಾಗಿ ಪರಿಶೀಲಿಸಿಯೂ ಪಶ್ಚಾತ್ತಾಪಗೊಳ್ಳದವರು ನಮ್ಮಲ್ಲಿ ಅನೇಕರಿರುವರು.”

“ಅಂತಕನ ಸದನವನ್ನು ಸೇರುವ ಈ ತನ್ಮಧ್ಯೆ ಬಡವ ಬಲ್ಲಿದರನ್ನುವ ತಾರತಮ್ಮವನ್ನು ಕಲ್ಪಿಸಿಕೊಳ್ಳುವುದು ಅನುಚಿತವಾಗಿದೆ.”

“ಒಂದು ಜಂತುವಿನಿಂದ ಅಸಾಧ್ಯವಾದ ಕಾರ್ಯವನ್ನು ಹತ್ತಾರು ಇರುವೆಗಳು ಜೊತೆಗೂಡಿ ದೊಡ್ಡ ಆಹಾರದ ಚೂರನ್ನು ಸಾಗಿಸುವುದರಿಂದಾಗಿ ಒಗ್ಗಟ್ಟೆನ್ನುವ ನೀತಿಯನ್ನು ಆ ಮೂಲಕ ಜಂತುಗಳು ನಮಗೆ ತೋರ್ಪಡಿಸುವುವಲ್ಲದೆ ತಾವು ಶೇಖರಿಸಿಟ್ಟ ಪದಾರ್ಥಗಳನ್ನು ಎಲ್ಲವೂ ಹಂಚಿಕೊಂಡು ಒಮ್ಮತದಿಂದ ಜೀವಿಸುವ ಹಿತ್ತೋಕ್ತಿಯು ನಮಗೆ ಆದರ್ಶವಾಗಿದೆ.”

“ಸರಿಯಿತು ಕಾರ್ಮುಗಿಲು. ಹರಿಯಿತು ಗಂಗಾಜಲ, ತೊರೆಯಿತು ದುರಿತಗಳು.”

ವಿಷಚಕ್ರ (ಕೆ.ಆರ್.ಕೆ.) ಕೇವಲ ಮಾನವನ ದೋಷ ದೌರ್ಬಲ್ಯಗಳಿಗೆ ಹಿಡಿದ ದುರ್ಬೀನು. ಈ ಭೂತಗನ್ನಡಿಯಲ್ಲಿ ಸಹಜವಾಗಿಯೇ ಮಾನವೀಯತೆಗಿಂತ ಅದನ್ನು ನುಂಗಿ ನೊಣೆದ ಸ್ವಾರ್ಥಾದಿ ದುರ್ಮಾರ್ಗಗಳು ಉಬ್ಬಿ ನಿಲ್ಲುತ್ತವೆ.

ರಂಗಪ್ಪ ತನ್ನ ತಂದೆಯ ಸಂಭಾವಿತ ಗುಣಗಳನ್ನು ಬೆಳೆಸಿಕೊಳ್ಳದೆ ಧನದಾಹಕ್ಕೆ ವಶನಾದ. ಅದಕ್ಕೆ ಒದಗಿ ಬಂದ ಸನ್ನಿವೇಶದ ಪ್ರಾಬಲ್ಯ ಅನಿವಾರ್ಯವೆಂಬಂತೆ ಬೆಳೆದು ಬಂದಿಲ್ಲ. ಮೂರನೆಯ ಹೆಂಡತಿ (ಪಾರ್ವತಿ)ಯ ಅಗತ್ಯವಿತ್ತೆ. ಇವರ ಮಕ್ಕಳೂ ಅನೀತಿ ಪ್ರವರ್ತಕರಾಗಿಯೇ ಉಳಿದದ್ದು ಸೋಜಿಗವೆನಿಸುತ್ತದೆ, ‘ಸಹಜ ಸರಿ’, ಎಂದು ಅನ್ನಿಸುವುದಿಲ್ಲ. ತನ್ನ ತಂದೆಗೆ ತದ್ವಿರುದ್ಧವಾಗಿಯೆ ವಂಚಕತನದತ್ತ ಹೊರಟ ರಂಗಪ್ಪನಂತೆ ಅವನ ಮಕ್ಕಳೂ ತಂದೆಯಂತೆ ಸಮಾಜಕಂಟಕರಾಗದೆ ಇರಬಹುದಿತ್ತಲ್ಲ? ಅಥವಾ ಅವನ ಮೊಮ್ಮಕ್ಕಳಾದರೂ ಹಾಲಾಹಲದ ಹಾದಿಯಿಂದ ಕವಲೊಡೆಯಬಹುದಿತ್ತಿಲ್ಲ? ಸಾರಾಂಶವಿಷ್ಟೆ: ಕಾದಂಬರಿಕಾರರು ಸಮಂಜಸವಾದ ರೂಪರೇಖೆಗಳನ್ನಿಟ್ಟುಕೊಳ್ಳದೆ ದುಡುಕು ಬರೆಹಕ್ಕೆ ಧುಮುಕಿದ್ದಾರೆ. ತಮ್ಮ ತತ್ವದ ಆದರ್ಶದ ಹಂದರಕ್ಕೆ ಊರೆಯಾಗಿ ಆರಿಸಿಕೊಂಡ ಪಾತ್ರಗಳು ಸಬಲವಾಗಿ ಅವರ ಅನ್ನಿಸಿಕೆಯನ್ನು ಅಭಿವ್ಯಕ್ತಿಸಿಲ್ಲ. ಪ್ರಾರಂಭದಲ್ಲಿ ಬರುವ, ಯಮಲೋಕದಿಂದ ಹಿಂದಿರುಗುವ ಸನ್ನಿವೇಶ ಕಲ್ಪನೆಯೂ ಸಾಮಾಜಿಕ ಕಾದಂಬರಿಯ ಕವಚದೊಳಗೆ ಪೌರಾಣಿಕ ಭೂತ ಕೂತಂತೆ ಕಾಣುತ್ತದೆ.

ಒಂದು ಗೌಣ ಗ್ರಂಥ.

ಅಸಹಾಯಕರು (ಹಾ.ಸಾ.ಕೃ) ವಿಚಿತ್ರ ವಿಚಾರಧಾರೆಯಲ್ಲಿ ಹುಚ್ಚಾಪಟ್ಟೆ ಸಾಗುವ ಸಾಮಾನ್ಯ ಕಾದಂಬರಿ. ವಸ್ತು ಅನೇಕ ತೇಪೆಗಳ ಕೌದಿಯಾಗಿದ್ದರೂ ಕಡೆಗೆ ಆ ಕೌದಿಯ ಪ್ರಯೋಜನವೂ ಇದಕ್ಕಿಲ್ಲ. ಬುದ್ಧಿಗಮ್ಯ ಸರ್ಕಸ್ಸಿನ ಒಂದೆರಡು ವರಸೆಗಳಿಲ್ಲಿವೆ. ನಿಜ ಜೀವನದಿಂದ ಗಾವುದ ಹರದಾರಿ ದೂರ ನಿಲ್ಲುವ ಪುಸ್ತಕ.

ಭಗ್ನಹೃದಯ (ಕಾಶಿ ವಿಶ್ವನಾಥ ಶೆಟ್ಟಿ) ಬೆಳಿಗ್ಗೆ ಎದ್ದರೆ ನಿತ್ಯ ಪತ್ರಿಕೆಯಲ್ಲಿ ಓದುವ ‘ಪ್ರಣಯಿಗಳ ಆತ್ಮಹತ್ಯೆ’ ಎಂಬಂಥ ವಸ್ತುವಿಗೆ ಸಂಬಂಧಿಸಿದ್ದು.

ಪ್ರಣಯಿಗಳೆಂd ಮೇಲೆ ಅವರದು ಶುದ್ಧಪ್ರೇಮ ತಾನೇ? ಅಂಥವರ ಮದುವೆಗೆ ಹಲವು ಅಡ್ಡಿ ಆತಂಕಗಳು ಇರಬೇಕಲ್ಲವೇ? ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ಅವರು ಭಿನ್ನ ಜಾತಿಯವರಾಗಿರುತ್ತಾರಷ್ಟೇ? ಜಾತಿಯ ಕೋಟೆಯನ್ನು ಕೆಡವಲಾದೀತೇ? ಪರಿಣಾಮವಾಗಿ (ಹೇಡಿ) ಪ್ರಣಯಿಗಳು ಬಲಿದಾನಕ್ಕೆ ತೊಡಗುತ್ತಾರಲ್ಲವೇ? – ನಿಮ್ಮ ಎಲ್ಲ ಊಹೆಗಳೂ ಇಲ್ಲಿ ಯಶಸ್ವಿಯಾಗುತ್ತವೆ.

– ಈ ಬಗೆಯಲ್ಲಿ ಹಮ್ಮಿಕೊಂಡ ಕಾದಂಬರಿ ತನ್ನ ತೆಕ್ಕಗೆ ಸಮಾನ ಹೃದಯಿಗಳನ್ನೂ ಸಮಾವೇಶಗೊಳಿಸಿಕೊಂಡು ಇದರಲ್ಲಿ ತ್ಯಾಗದ ಔನ್ನತ್ಯವನ್ನು ತೋರ್ಪಡಿಸುವಂತೆ ರೂಪಗೊಂಡಿದೆ. ಆದರೆ ಸ್ವಾಮಿ ರೈಲಿಗೆ ಸಿಗುವುದೂ, ಶಾರದೆ ರೈಲಿಂದ ಕೆಳಕ್ಕೆ ಹಾರುವುದೂ ಅಸಹಜವಾಗಿ ನಿರೂಪಿತವಾಗಿದೆ. ಮಾಣಿಕ್ಯ, ಕೃಷ್ಣಯ್ಯ ಪಾತ್ರ ಚಿತ್ರಣ ಅಸ್ಫುಟ. ಸ್ವಾಮಿ, ಒಂದು ಕಡೆ ಮಾಣಿಕ್ಯಳನ್ನೂ ಇನ್ನೊಂದು ಕಡೆ ಶಾಂತಳನ್ನೂ ತನ್ನ ವರ್ತುಲಕ್ಕೆ ತಂದುಕೊಂಡು ಒಮ್ಮೆಲೇ ಬುಡಬೇರಿಲ್ಲದೆ ಅವರಿಬ್ಬರಿಂದ ಹಾರಿ ಶಾರದೆಯ ಸ್ನೇಹವಲಯಕ್ಕೆ ಕಾಲಿಟ್ಟಿದ್ದು ಕಾದಂಬರಿಯಲ್ಲಿ ಸರಿಯಾಗಿ ಸಕಾರಣವಾಗಿ ಸಾಕಾರಗೊಂಡಿಲ್ಲ. ರಾಜಣ್ಣ ಸರ್ವೇಶ್ವರ ಕಾದಂಬರಿಯ ಪುಟಗಳನ್ನು ತುಂಬಿಸಲು ಬಂದ ಪಾತ್ರಗಳಂತಿವೆ.

ಬಹುತೇಕ ಕಾದಂಬರಿಕಾರರಲ್ಲಿ ಕಂಡು ಬುವ ನ್ಯೂನಾತಿರೇಕಗಳು ಇಲ್ಲಿಲ್ಲ ಎಂಬುದೊಂದು ಗಮನಿಸಬೇಕಾದ ಅಂಶ.

ಹೆಣ್ಣಾಗಿ ಕಾಡಿತ್ತು ಸೇಡು (ಪಾ. ಸಂಜೀವ) ಕರಾವಳಿಯ ಬದುಕಿಗೆ ಸಂಬಂಧಿಸಿದ ಕಥೆ. ಡಾ|| ಪೈಗೆ ರೋಗಿ ತನ್ನ ಕಥೆ ನಿವೇದಿಸಿಕೊಳ್ಳುವ ತಂತ್ರದ ಮಾದರಿಯಲ್ಲಿ ಕೃತಿಯ ಬಹುಭಾಗ ಇದೆ. ರಾಯರ ಪ್ರೀತಿಯ ಮಗಳು ಆಶಾ, ಅವಳ ಪ್ರೇಮಪ್ರಕರಣ ಹಾಗೂ ಅವಳ ಸಾವಿನ ಸುತ್ತಿನ ಕಥೆ ಪರಿಭ್ರಮಿಸುತ್ತದೆ. ಉದ್ದಕ್ಕೂ ಮುಗ್ಗರಿಸುತ್ತಾಸಾಗುವ ಕಥೆಯಲ್ಲಿ ಚಂಪಾ. ಅವಳ ತಾಯಿ ಸೀತಮ್ಮ – ಇವರ ಆತ್ಮಹತ್ಯೆ ವಿಷಯದಲ್ಲಿ ತೋರಿದ ಅಸಾಧ್ಯ ನಿರ್ಲಕ್ಷ್ಯ ಅನಪೇಕ್ಷಿತ.

ಒಂದು ಗೌಣ ಕೃತಿ.

ಹಕ್ಕಿಗಿಟ್ಟ ಗುರಿ (ನರೇಂದ್ರ ಬಾಲು) ಕೃತಿಯಲ್ಲಿ ಕಥನ ಕಲೆಯಿದ್ದರೂ ವಸ್ತುವಿನ ಶೈಥಿಲ್ಯ ಹಾಗೂ ಶುಷ್ಕತೆಯಿಂದ ಕಾದಂಬರಿ ಅನಿವಾರ್ಯವಾಗಿ ಸೋತಿದೆ.

ಗೋಪಿ ರಾಯಣ್ಣನನ್ನು ವಂಚಿಸಿ ಹಾಳು ಮಾಡಿದ್ದಲ್ಲದೆ ಆತನ ಹೆಣ್ಣುಮಕ್ಕಳಾದ ರೇಣು-ಆರ್ಯ ಇಬ್ಬರನ್ನೂ ಬುಟ್ಟಿಗೆ ಹಾಕಿಕೊಂಡು ಕರಾಳವಾಗಿ ವಿಜೃಂಭಿಸಬೇಕಾದ ಕಾರ್ಯಕಾರಣ ಸಂಬಂಧದ ಸೂತ್ರ ಕಥೆಯಲಿಲ್ಲ. ರಾಯಣ್ಣನ ಹೆಂಡತಿ ಜಯಮ್ಮ ಗೋಪಿಗೆ ಹೆದರಿ ತೆಪ್ಪಗೆ ಅಡಿಯಾಳಿನಂತೆ ವರ್ತಿಸಿದ್ದೂ ಅಸಹಜವಾಗಿದೆ. ನವ್ಯಳನ್ನು ಮುಗಿಸುವ ಹಂಚಿಕೆಯೂ ಹಿಂದುಮುಂದಿಲ್ಲದಂತೆ ಬಂದಿದೆ. ರಾಯಣ್ಣ ಚಾಕು ಹಿಡಿದು ಹುಚ್ಚು ಹತ್ತಿದವನಂತೆ ಗೋಪಿಯ ಮೇಲೆ ಎರಗಿದ ಪ್ರಸಂಗದಲ್ಲೂ ಅವಾಸ್ತವ ವಿವರವೇ ಗೆದ್ದಿದೆ. ಕಲೆ ಬಿದ್ದಿದೆ.

ಬಿರುಗಾಳಿ (ಆನಂದ) ಅಲ್ಪವಿರಾಮ, ಪೂರ್ಣವಿರಾಮ, ಉದ್ಧರಣ ಚಿಹ್ನೆಗಳೂ, ಒತ್ತಕ್ಷರಗಳೂ ನಿರ್ದಿಷ್ಟ ಗೊತ್ತುಗುರಿಯಿಲ್ಲದೆ ಬೇಕದೆಂದಾಗ ಬೇಡವೆಂದಾಗ ಪ್ರತ್ಯಕ್ಷವಾಗುತ್ತವೆ.

ಇವರಿಗೆ ಕಥೆಗಿಂತ ಪುಟಗಳನ್ನು ತುಂಬಿಸುವ ಕಡೆ ಗಮನ ಹೆಚ್ಚು (ಮುನ್ನೂರು ಪುಟ) ವಸ್ತುವಂತೂ ದುರ್ನಾತ ಬೀರುವಷ್ಟು ಹಳಸಲು; ಹಳೆಯದೆಂದಾಕ್ಷಣ ತಿರಸ್ಕರಿಸಬೇಕೆಂದೆಲ್ಲ; ಅದರ ತಂದೆ ತಾಯಿ ಅಡ್ಡಿ-ಇದು ಅಸ್ಥಿಪಂಜರ, ಸಂತೋಷಾಧೀಕ್ಯವಾದಾಗ ‘ಚೀರಿ ಅಪ್ಪಿಕೊಳ್ಳುವ’ ಪಾತ್ರಗಳು ಇಲ್ಲಿವೆ. ದುಃಖದ ತೀವ್ತೆಯನ್ನು ತಾಳದೆ ‘ಚೀರು’ ತ್ತಾರೆಂದು ಕೇಳಿ ತಿಳಿದವರಿಗೆ ಇಲ್ಲಿ ಹೊಸ ಹಾರಾಟ ಚೀರಾಟಗಳ ಪರಿಚಯ ಆಗುತ್ತದೆ. ಅಳುವುದು ನಗುವುದು ಇಲ್ಲಿ ಬಹಳ ಸುಲಭ. ಓದುವುದನ್ನು ಎಷ್ಟು ಸಲೀಸಾಗಿ ಬಿಡುತ್ತಾರೋ ಅಷ್ಟೇ ಸಲೀಸಾಗಿ ಕೆಲಸವೂ ಪಡೆಯುತ್ತಾರೆ. ಇಲ್ಲಿನ ಪಾತ್ರಗಳು. ಭಾವಾತಿರೇಕಗಳ ಸುರಿಮಳೆ. ಯಾರೆಂದರವರು ಯಾರೆಂದವರ ಕಾಲಿಗೆ ಬೀಳುತ್ತಾರೆ. ಇಲ್ಲಿ ಎಲ್ಲ ಸಂಪನ್ನರೆ. ಸಮಸ್ಯೆಗಳು ಬರುವುದು ತಡವಾಗಬಹುದೇ ಹೊರತು ಪರಿಹಾರದಲ್ಲಿ ವಿಳಂಬವಿಲ್ಲ.

ಎಷ್ಟೊತ್ತಾಯ್ತು (೯) ಎಲ್ಹೋಗಿದ್ದೆ (೧೦) -ಇದೇಕೋ ತಿಳಿಯದು. ಶಿಷ್ಟರೂಪಕ್ಕೆ ಇಲ್ಲವೇ ವ್ಯಾಕರಣ ರೂಪಕ್ಕೆ ಇಲ್ಲವೇ ವ್ಯಾವಹಾರಿಕ ಕನ್ನಡಕ್ಕೆ ಮಾನ್ಯತೆ ಕೊಡುವುದು ಒಳಿತು. ಒಂಭತ್ತು (೨೫) ಗಾಭರಿ (೨೬) ಪ್ರಥಮಾಥಿತ್ಯ (೩೯) ಮುಂತಾದ ರೂಪಗಳು ಕ್ಷಮ್ಯವಾದರೂ ಅಸಾಧು ರೂಪಗಳೂ ಇವೆ. ಕಾಗದ ಮುದ್ರಣ ಕೆಳಮಟ್ಟದ್ದು, ಓದುಗರನ್ನು ಮುಟ್ಟದಂತೆ ದೂರ ತಳ್ಳುತ್ತದೆ. ಅಕ್ಷರಗಳು ಕಣ್ಣುಮುಚ್ಚಾಲೆ ಆಡುತ್ತವೆ.

ಆಪಕ್ವ ಬರವಣಿಗೆ: ಪ್ರಾರಂಭದಲ್ಲೇ ಬರುವ ಒಂದು ಸಂದರ್ಭ; ಕಾಲೇಜು ಪುಸ್ತಕ ಭಂಡಾರದೊಳಗೇ ಅಷ್ಟೊಂದು ಜನ ಗೆಳತಿಯರು ಸೇರಿ ಅಷ್ಟು ಹೊತ್ತು ನಡೆಸುವ ಗಟ್ಟಿಯಾಗಿ ಆಡುವ ‘ಮಾತುಕತೆ’ ಈ ಕಾದಂಬರಿಯಲ್ಲಿ ಸಾಧ್ಯ, ಪುಸ್ತಕ ಭಂಡಾರದೊಳಗೆ ಹಾಗೆ ಮಾತಾಡಿದರೆ ಅಲ್ಲಿಂದ ಹೊರಗೆ ಕಳಿಸುತ್ತಾರೆ. ಸಂಭಾಷಣೆಯಲ್ಲಿ ಜೀವಂತಿಕೆಯ ಕಳೆಯಿಲ್ಲ. ಶೈಲಿಯಲ್ಲೂ ಆಕರ್ಷಣೆಯಿಲ್ಲ. ರಾಜಾ, ರಾಣಿ ಎಂದು ಕರೆಯುವುದು ಪ್ರೇಮ ಚಿತ್ರಣವೆಂದು ಲೇಖಕರ ಕಲ್ಪನೆ.

ಮಗಳು ಗಂಡನನ್ನು ತೊರೆದು ಬಂದರೂ ಅವಳ ತಂದೆ ‘ಏಕೆ?’ ಎಂದು ಕೇಳುವ ತೊಂದರೆ ಕೂಡ ತೆಗೆದುಕೊಳ್ಳುವುದಿಲ್ಲ (ಒಳ್ಳೆ ತಂದೆ). ಕೈ ಹಿಡಿದ ಹೆಂಡತಿ ತಾನಾಗಿ ಇನ್ನೊಬ್ಬ ಸವತಿಯನ್ನು ಗೆಲುವಿನಿಂದ ಸಾಹಸದಿಂದ ತಂದುಕೊಳ್ಳುವುದು ಇಲ್ಲಿ ಸಲೀಸಾಗಿ ನಡೆಯುತ್ತದೆ, ಓದುಗರಿಗೆ ವಿಚಿತ್ರವಾಗಿ ಕೃತ್ರಿಮವಾಗಿ ಕಂಡರೂ, ಅಡಿಗೆ ಕೆಲಸಕ್ಕೆ ಸೇರಿದವಳು ಹಿಂಡುವ ನಂಜಿನಹುಳಿಯಲ್ಲಿ ಸತ್ಯವೇ ಇಲ್ಲ. ಕಾದಂಬರಿ ಇನ್ನೇನು ಸೋಲುವ ಹೊತ್ತಿಗೆ ಸರಿಯಾಗಿ, ಖಳನಾಯಕ ಚಲನಚಿತ್ರದಲ್ಲಿ ಬಂದಂತೆ, ಅಡಿಗೆಯವಳು ಕಾಣಿಸಿಕೊಳ್ಳುತ್ತಾಳೆ. ಕಾದಂಬರಿಗೊಂದು ಬೇರೆ ತಿರುವು ಕೊಡಲೆಂದೇ ಹೊರಗಿನಿಂದ ತಂದು ಹೇರಿದ ಪಾತ್ರವಿದು. ಸುಶೀಲೆಯ ಗೆಳತಿಯರು ನೆನೆದಾಗ ಸಿಗುವುದಂತೂ ಸೋಜಿಗದ ಪರಮಾವಧಿ. ವೆಂಕಮ್ಮನ ಪಾತ್ರ ಏನೇನೂ ಹೊಂದಿಕೊಂಡಿಲ್ಲ.

ಕಾದಂಬರಿಯ ಮೊದಲರ್ಧವೆಲ್ಲ ಮೋಹನ ಸುಶೀಲರ ಪ್ರೇಮದ ಬಾಳಿಗೆ ಮೀಸಲಾಗಿದ್ದು ಅದು ಯಾವುದೇ ಉದ್ದೇಶಕ್ಕೆ ದುಡಿಯದೆ ನೀರಸವಾಗಿದೆ. ಬಿರುಗಾಳಿ ಎಂಬ ಹೆಸರಿದ್ದರೂ ವ್ಯಕ್ತಿಗಳ ಬಾಳಿನಲ್ಲಿ ಯಾವ ಬಿರುಗಾಳಿಯೂ ಬೀಸುವುದಿಲ್ಲ. ಬಹುಶಃ ಸುಶೀಲೆ ತಂದೆ ತಾಯಿಯನ್ನೂ ಬಿಟ್ಟು ಮೋಹನನೊಡನೆ ಹೋಗಿ ಮದುವೆ ಯಾದದ್ದೇ ಬಿರುಗಾಳಿ ಎಬ್ಬಿಸಿದ ಘಟನೆಯೆಂಬ ಭಾವನೆ ಅವರಿಗೆ ಇದ್ದಂತೆ ಊಹಿಸುವುದಕ್ಕೆ ಅದನ್ನು ಸ್ಥಿರಪಡಿಸುವ ಶಿಲ್ಪ ಇಲ್ಲಿಲ್ಲ.

ಅಂತೂ ಎಳಸು ಎಳಸಾಗಿ ತೋಚಿದ್ದನ್ನು ಗೀಚಿಕೊಂಡು ಹೋಗಿರುವ ಅಸಂಬದ್ಧ ವಿವರವನ್ನು ಧಾರಾವಾಹಿಯಾಗಿ ಧಾರಾಳವಾಗಿ ಪ್ರಕಟಿಸುವ ಪತ್ರಿಕೆಗಳಿರುವ ತನಕ, ಮುದ್ರಿಸುವ ಪ್ರಕಾಶಕರಿರುವ ತನಕ ಇಂಥ ಬರೆಹಗಳಿಗೆ ಭವಿಷ್ಯ.

ಬಾಡಿದ ಹೂವು ಹಾಗೂ ಕತ್ತಲೆಯ ಕಡಲು (ಇನಾಂದಾರ್) ಎಂಬ ಕಾದಂಬರಿಗಳು ‘ಮೋಹಿನಿ’ ಮಾಲೆಗೆ ಸೇರಿದ ಮೂರನೆಯ ಹತ್ತು ನಾಲ್ಕನೆಯ ಭಾಗಗಳು, ಮೊದಲೆರಡು ಭಾಗಗಳು ಪ್ರಕಟವಾದ ಹದಿನೆಂಟು ವರ್ಷಗಳ ಅನಂತರ ಹೊರಬಂದಿವೆ. ಕಾದಂಬರಿಕಾರರಿಗೆ ಬರೆಯುವ ವಿಷಯ ಬಲಿತ ಬಲವಂತವಾಗಿ ಲೇಖನಿ ಹಿಡಿದಿಲ್ಲ. ಕಾದಂಬರಿ ಪ್ರಿಯರ ಹಾಗೂ ಪ್ರಕಾಶಕರ ಕುತೂಹಲ-ಕೇಳಿಕೆಗಾಗಿ ಬರೆದಿರುವುದಾಗಿ ಅವರೇ ಒಪ್ಪಿಕೊಂಡಿದ್ದಾರೆ.

ವಸ್ತು, ಕರಾವಳಿಯ ಬೆಸ್ತರ ದೊಡ್ಡ ಬಲೆಯಂತೆ ಉದ್ದ. ಅಷ್ಟೇ ತೂತುಗಳೂ ಇವೆ: ವಿಚಾರ ಸಂಕೇತ ಸೊಗಸು ಜೀವಂತಿಕೆ ಕಾದಂಬರಿಯಲ್ಲಿ ಇನ್ನೇನು ಮೂರ್ತಗೊಂಡೀತೆಂಬ ವೇಳೆಗೆ ಜಾಳಾಗಿ ನುಸುಳಿ ಹೋಗುತ್ತದೆ. ಇದರಿಂದಾಗಿ ಸಂವಹನಗೊಳ್ಳುವುದು ಏನೂ ಉಳಿಯುವುದಿಲ್ಲ. ಇದು ಇನ್ನೂ ಸಂಕೀರ್ಣ ಸಂಗ್ರಹ ಸ್ವರೂಪಕ್ಕೆ ಅಳವಟ್ಟಿದರೆ ಒಂದು ಉತ್ತಮ ಕಾದಂಬರಿ ಆಗುವ ಸಾಧ್ಯತೆಯಿತ್ತು. ನುರಿತ ಈ ಲೇಖಕರಿಗೆ ಆ ಔಚಿತ್ಯ, ಹೊಳೆಯದೆ ಹೋದುದು ಆಕಸ್ಮಿಕ.

ಇಲ್ಲಿಯ ಭಾಷೆ ಹಸಿಯಿದ್ದು, ಹಿತವಾದ ನೇವರಿಕೆಯ ಅನುಭವ ಕೊಡುತ್ತದೆ. ಕೃತ್ರಿಮ ಆಧುನಿಕತೆಯ ಡಂಭ ಕೆಲವು ಕಡೆ ಬೇಸರ ತರಿಸಿದರೂ, ರಂಜಕವಾಗಿ ಕತೆ ಹೇಳುತ್ತಾರೆ. ಬೇಸರ ಬರುವುದಿಲ್ಲ. ‘ಬೋರ್’ ಆಗುವುದಿಲ್ಲ – ಸ್ವಲ್ಪ ಹಿಂಜರಿಕೆಯಿಂದ ಹೇಳಬಹುದಾದ ಮಾತು. ತಮ್ಮ ಅನುಭವ ಅಭಿಜ್ಞತೆಗಳಿಗೆ ಮಾಧ್ಯಮವಾಗಬಲ್ಲ ಪಾತ್ರಗಳನ್ನು ಆರಿಸಿಕೊಳ್ಳುತ್ತಾರೆ.

ಅಷ್ಟು ಓದಿಸಿಕೊಂಡು ಹೋದರೂ ಇವರ ಕಾದಂಬರಿಗಳ ಸೋಲಿಗೆ ಕಾರಣವೇನು? ಉತ್ತರ-

ಹಲವು ದೃಷ್ಟಿಕೋನಗಳಿಂದ ಜೀವನವನ್ನು ತೂಗಿ ನೋಡಿ ಪರಿಭಾವಿಸಬಲ್ಲ ಅಸಾಧಾರಣ ಸಾಮರ್ಥ್ಯದ ಅಭಾವ; ಮೋಹಕವಾಗಿ (ಮನೋಜ್ಞವಾಗಿ ಎಂದು ಪೂರ್ಣಾರ್ಥದಲ್ಲಿ ಹೇಳಲಾರೆ) ಕಥೆ ನಿರೂಪಿಸುವ ಸ್ತರದಿಂದ ಇನ್ನೂ ಮೇಲಿನ ಬೇರೊಂದು ಸ್ತರಕ್ಕೆ ಹೋಗುವ ಪ್ರಯತ್ನ ಮಾಡದಿರುವುದು; ಇಲ್ಲಿನ ಪಾತ್ರಗಳು ದೇಶಕಾಲಮಿತಿಗಳನ್ನು ಅತಿಕ್ರಮಿಸಿ ಸರ್ವವ್ಯಾಪಿ ವಾಸ್ತವ ಪ್ರಪಂಚಕ್ಕೆ ಸಲ್ಲುವಂತೆ ಮಾಡುವ ಕಲೆಗಾರಿಕೆಯಿಂದ ದೂರ ಸರಿಯುವುದು.

– ಈ ನಿಲುವು ಸ್ವಲ್ಪ ಕಟುವೆನಿಸಿದರೂ, ಕಟುಸತ್ಯ. ಮುಂದಿರುವ ಈ ಎರಡೇ ಭಾಗಗಳನ್ನು ವಿಮರ್ಶಿಸುವುದು ತಪ್ಪಾಗಲಾರದಾದರೂ ವಿಮರ್ಶೆ ಸಮಗ್ರವಾಗದಿರ ಬಹುದು. ಮೋಹಿನಿ ಮಾಲೆಯ ನಾಲ್ಕೂ ಭಾಗಗಳನ್ನು ಒಟ್ಟಿಗೆ ಓದಿ ವಿಮರ್ಶೆ ಮಾಡುವುದು ಸಾಧುವಾದ ಕ್ರಮವೆಂದು ಭಾವಿಸಿ ಆ ಎಲ್ಲ ಭಾಗಗಳನ್ನೂ ಓದಿದ್ದೇನೆ. ಮೋಹಿನಿಯ ಬದುಕಿನಲ್ಲಿ ನಡೆದ ಸ್ಥಿತ್ಯಂತರಗಳನ್ನು ಘಟ್ಟದಿಂದ ಘಟ್ಟಕ್ಕೆ ಮುಟ್ಟಿಸಲೆಂದೇ ಹೀಗೆ ಭಾಗಗಳಾಗಿ ಕಥೆ ಎಳೆದಂತೆ ತೋರುತ್ತದೆ. ಸುಮಾರು ೧೩೨೫ ಪುಟಗಳ ಹೊರೆಯನ್ನು ಓದಿದರೆ, ಬೆಲೂನಿಗೆ ಗಾಳಿ ತುಂಬಿದಂತಾಗಿದೆ.

ಸ್ವಚ್ಛಂದ, ಸ್ವತಂತ್ರ ಜೀವನಕ್ಕಾಗಿ ಮೋಹಿನಿ ತಹತಹ ಪಡುವುದಾಗಲಿ, ವಿಚ್ಛೇದ ಪ್ರಕರಣವಾಗಲಿ ಆಕೆಯ ಬಾಳಿಗೆ ಅದು ಅನಿವಾರ್ಯವಾಗಿತ್ತೆಂದು ಅನ್ನಿಸುವಷ್ಟು ಸಾಂದ್ರವಾಗಿಲ್ಲ. ಎಲ್ಲ ವಿಧದಲ್ಲೂ ತನ್ನದೇ ಆದ ಒಂದು ಮನೆ ಕಟ್ಟಿಕೊಳ್ಳುವ ಉತ್ಕಟ ಹಂಬಲ (ಈ ಮನೆಯ ಪ್ರಸಂಗ ಚಿಟ್ಟು ಹಿಡಿಯುವಷ್ಟು ಲಂಬಿಸಿದೆ), ಹಟ, ಹಣದಿಂದ ಎಲ್ಲವೂ ಆದೀತೆಂಬ ನಂಬಿಕೆ ಹಾಗೂ ಅದು ನನಸಾಗಿ ಈಡೇರುವಲ್ಲಿ ನಿಲ್ಲುವ ರಂಗನಾಥ. ಅವನ ಇಬ್ಬಗೆಯ ವ್ಯಕ್ತಿತ್ವ-ಈ ಭಾಗ ರೋಚಕವಾಗಿದೆ. ಆನಂದ ತನ್ನ ಅಕ್ಕನಿಗಾಗಿ ಮನೆ ನಿಲ್ಲಿಸಿದ್ದು ಕೂಡ ಸ್ವಲ್ಪವೇ ಬಂದಿದ್ದರೂ ಸಾವಯವವಾಗಿದೆ.

ಮೋಹಿನಿ ತನ್ನ ಹಟ ಸ್ವಭಾವಕ್ಕೆ ತಾನೇ ಬಲಿಯಾದಳೆನ್ನಬಹುದು. ಅವಳು ಚಿತ್ರರಂಗ ಪ್ರವೇಶಿಸಿ ಅಲ್ಲಿಯೂ ತೋರಿಕೆಗೇ ಆಗಲಿ, ಯಶಸ್ವಿಯಾದಳೆಂಬುದು ಕೃತಿಕಾರರ ಕಲ್ಪನೆಯಲ್ಲಿರಬಹುದು, ಕೃತಿಯಲ್ಲಿ ಇಲ್ಲ. ಆನಂದ, ವಸಂತ, ರಂಗನಾಥನ್ – ಇವರೆಲ್ಲರ ಬಳಿ ತನ್ನ ಹೆಬ್ಬಯಕೆಗಳನ್ನು ಬೇರೂರಿಸಲೆಳಸದೆ ಸ್ನೇಹ ಹಂಚಿಕೊಂಡದ್ದು ಯಾವ ಪುರುಷಾರ್ಥಕ್ಕೆ? ಅವಳು ಅತಿಭಾವುಕಳೆಂದರೂ ಭಾವಜೀವನಕ್ಕೆ ಗುರಿ ಗತಿ ಇರುವುದಿಲ್ಲವೇ? ಅತೃಪ್ತಳಾಗಿ ಕೊರಗುವುದನ್ನು ತಪ್ಪಿಸುವುದಕ್ಕೆ ಸಾಧ್ಯವಿರಲಿಲ್ಲವೇ? ಮಾಜಿ ನಟಿ ನಂದಿನಿಯ ಅಗತ್ಯವೇನು/ ದಾಂಪತ್ಯದಲ್ಲಿ ಏರುಪೇರುಗಳಿದ್ದರೂ ಅದನ್ನು ಸರಿಪಡಿಸಿ ತೂಗಿಸಿಕೊಂಡು ಹೋಗುವುದೇ ಜಾಣತನವೆಂದು ತೋರಿಸುವುದಕ್ಕಷ್ಟೇ, ಅತಿಥಿ ಕಲಾವಿದರನ್ನು ಆಹ್ವಾನಿಸುವಂತೆ, ತಂದ ಸಿದ್ಧಪಾತ್ರ ಜೋಡಿ ಆಪಟೆ-ಅನುರಾಧೆ ಬೇಕಿತ್ತೆ? ಇದ್ದಕ್ಕಿದಂತೆ ವಸಂತ-ಶಕುಂತಲೆಯರ ದಾಂಪತ್ಯದಲ್ಲಿ ದೊಡ್ಡ ಧ್ಯೇಯಗಳನ್ನು ಗೆಲುವನ್ನೂ ಗುರುತಿಸಿದಳೆಂಬುದು ಕಾದಂಬರಿಯ ಶಿಲ್ಪದಲ್ಲಿ ಎದ್ದು ಕಾಣುವ ಬಿರುಕು. ಹಲವು ಅತಿಗಳಲ್ಲಿ ಮೋಹಿನಿಯನ್ನು ಬೊಂಬಾಯಿ ಮದರಾಸು ಪುಣೆಯ ಹೀಗೆ ಸುತ್ತಿಸಿ ಗತಿ ಕಾಣಿಸದೆ ಬಳಲಿಸಿ ಕಾದಂಬರಿ ಬೆಳೆಸಬೇಕೆಂಬ ಭಾವನೆಗೆ ಬಲಿಕೊಟ್ಟಿದ್ದಾರೆ. ಅವಳ ಅಹಂಕಾರಕ್ಕೆ ಆಘಾತ ಕೊಡುವುದಕ್ಕಾಗಿಯೇ ಮೂರನೆಯ ಭಾಗ ಹುಟ್ಟಿಕೊಂಡಿದೆ. ಹರಡಿಕೊಂಡು ಚೆಲ್ಲಾಪಿಲ್ಲಿಯಾಗಿ ಹಬ್ಬಿದ ತನ್ನ ಬಾಳಿನ ಇತಿಮಿತಿಗಳನ್ನು ಅರಿತುಕೊಳ್ಳುವುದಕ್ಕಾಗಿ ಕಡೆಯ ಭಾಗವೇ ಮೀಸಲಗಬೇಕಿರಲಿಲ್ಲ.