ಅಂತೂ ಜೀವನಪಥ ವ್ಯಕ್ತಿಗಳು ಎಣಿಸಿಕೊಂಡಷ್ಟು ಸುಲಭಗಮ್ಯವಲ್ಲವೆಂಬ ಸಿದ್ಧಾಂತ ಸ್ಥಾಪನೆಗೆ ನಾಲ್ಕು ಸಂಪುಟಗಳು ಬೇಕೆ? ಎಂಬ ಯಕ್ಷಪ್ರಶ್ನೆ ಎದುರಾಗುತ್ತದೆ. ಇವರೇನು ಕಾದಂಬರಿ ಬರೆಯುತ್ತಿದ್ದಾರೊ ಡಾಕ್ಟರೇಟ್‌ಗಾಗಿ ಮಹಾನಿಬಂಧ ರಚಿಸಬಯಸುವರೋ ಎಂದೂ ಅನಿಸುತ್ತದೆ. ಹಾರ್ದಿಕ ಪ್ರೀತಿ ಹಾಗೂ ಅದರ ಅಚಂಚಲ ಭರವಸೆಯ ಅಭಾವದಿಂದ ಮೋಹಿನಿಯ ಬಾಳು ಎತ್ತಲೆತ್ತಲೋ ಕಿತ್ತೆಸಳಂತೆ ಅರ್ಥ ಹಾಗೂ ಅಂದ ನೀಗಿಕೊಂಡಿತೆಂಬುದು ಈ ಕಾದಂಬರಿ ಮಾಲೆಯ ಅಂತರಂಗೆ. ಗಂಡಿನೊಡನೆ ತಾನು ಬಾಳುವೆ ಮಾಡಿದರೆ ಹೇಗೆ ಎಂಬ ಆಸೆ ಪ್ರಕಟಿಸುತ್ತ ಮತ್ತೆ ಮದುವೆಯಾಗಿ ತನ್ನ ವ್ಯಕ್ತಿತ್ವ ಸ್ವಾತಂತ್ರ‍್ಯ ಕಳೆದುಕೊಳ್ಳಲಾರೆನೆಂಬ ನಿಲುವಿನಿಂದ ತೂಗಾಡುತ್ತಾ ಮದುವೆಯಾಗದೆ, ಮೋಹ ಬಿಡದೆ ವಿಕ್ಷಿಪ್ತ ಮನಃಸ್ಥಿತಿಯಿಂದ ತೊಳಲುವ ಮೋಹಿನಿ ಮರುಕಕ್ಕೆ ಪಾತ್ರಳೆನ್ನಬಹುದು.

ಆದರೂ, ಈ ಕಾದಂಬರಿ ಒಟ್ಟು ಐನೂರು ಪುಟಗಳ ಅಳತೆಗೆ ಸಂಯೋಜಿತವಾಗಬೇಕೆನ್ನಿಸುತ್ತದೆ, ಆಗ ಇನ್ನೂ ಕಲಾತ್ಮಕವಾಗಿ ನಿಲ್ಲುತ್ತಿತ್ತು. ಮೋಹಿನಿಯ ಬಾಳಿನ ಉತ್ತರಾರ್ಧದ ಸೋಲಿಗೆ ಕಾರಣಗಳನ್ನೂ, ಆಕೆಯ ಒಂಟಿತನದ ವಿಕಾರ ವೈಭವಗಳನ್ನೂ ಇನ್ನೂ ಪರಿಣಾಮಕಾರಿಯಾಗಿ ಕೊಡುವುದು ಸಾಧ್ಯವಿತ್ತು. ಗ್ರಂಥಕರ್ತರಿಗೆ ಸಂಗ್ರಹಕ್ಕಿಂತ ವಿಸ್ತಾರ ಪ್ರಿಯವಾದದ್ದು; ಇದನ್ನು ಅವರ ಹಿಂಜಿದ ಮುನ್ನುಡಿಗಳೂ ಕನ್ನಡಿಸುತ್ತವೆ.

ಒಂದು ಕಾದಂಬರಿಯನ್ನು ಒಂದೇ ಉಸಿರಿಗೆ ಅಖಂಡವಾಗಿ ಸಂಯೋಜಿಸಿಕೊಂಡು ಬರೆಯುವ ಪ್ರಯತ್ನದಿಂದ ಸಡಿಲಿಸಿಕೊಂಡು ಈ ಪಾಟಿ ಬೇರೆ ಬೇರೆ ಭಾಗಗಳಾಗಿ ಪ್ರತ್ಯೇಕ ಹೆಸರುಗಳಿಂದಲೂ ಬರೆದುಕೊಡುವ ಪರಿಪಾಟಿ ಸರಿಯಲ್ಲವೆಂಬುದು ನಮ್ಮ ವೈಯಕ್ತಿಕ ಅನಿಸಿಕೆ. ಇಂಥ ಪ್ರಯತ್ನದ ಪ್ರಕಟನೆಗಳಲ್ಲಿ ಕೃತಿಯ ಸಮಗ್ರತೆ ಮುಕ್ಕಾಗುವ, ಒಟ್ಟಂದ ಮಾಸುವ ಭೀತಿಯಿದೆ. ಅಲ್ಲದೆ ಇದರಲ್ಲಿ ಕಲಾತ್ಮಕ ದೃಷ್ಟಿಗಿಂತ ವ್ಯಾಪಾರಿ ಮನೋಧರ್ಮ ಅಡಗುವ ಸಾಧ್ಯತೆಯಿದೆ. ನನ್ನ ಈ ಅಭಿಪ್ರಾಯ ‘ಮೋಹಿನಿಮಾಲೆ’ಗೇ ಅಲ್ಲದೆ ಈಗ ತೀರ ಸಾಮಾನ್ಯ ವಾಡಿಕೆಯಾಗಿ ಹೋಗಿರುವ ಈ ಅಂಟ ಜಾಡ್ಯಕ್ಕೆ ತುತ್ತಾದ ಇತರ ಕಾದಂಬರಿಕಾರರ ಕೃತಿಗಳಿಗೂ ಅನ್ವಯಿಸುತ್ತದೆ. ಈ ಪ್ರಯತ್ನಕ್ಕೆ ಸೇರಿದ ಇನ್ನೂ ಮೂರು ಮುಂದುವರಿದ ಕಾದಂಬರಿಗಳು ಈ ವರ್ಷ ಬಂದಿವೆ; ಮೂವರು ಲೇಖಕರು ಈಗ ಪ್ರಕಟವಾಗಿರುವ ಪುಸ್ತಕಗಳ ಮುಂದಿನ ಭಾಗವನ್ನು ಬೇಗ ಪ್ರಕಟಿಸುವುದಾಗಿ ಡಂಗುರ ಸಾರಿದ್ದಾರೆ. ಒಂದೇ ಅಳತೆಗೆ ಮುಗಿಸಬಹುದಾದ ವಸ್ತುವನ್ನು ಬೇರೆ ಬೇರೆ ಭಾಗಗಳಾಗಿ ಮಾಡುವ ಆಮಿಷಕ್ಕೆ ಸಿಕ್ಕಿಬೀಳದೆ ಗ್ರಂಥಕರ್ತರು ಕೃತಿ ರಚನೆಗೆ ತೊಡಗುವುದರಿಂದ ಅವರಿಗೂ (ಸಾಹಿತ್ಯಕ್ಕೂ) ಲಾಭವಾದೀತು.

ಪೂಜಾಪುಷ್ಪ (ನಾರಾಯಣಸ್ವಾಮಿ) ಹೇಗೋ ರಂಜಕವಾಗಬಹುದಾದ ವಸ್ತುವನ್ನು ಆರಿಸಿಕೊಂಡು ಪಾತ್ರಗಳನ್ನು ಸೇರಿಸಿ ಕಥೆ ಬೆಳೆಸಿ ಬರೆದರೆ ಅದೂ ಒಂದು ಕಾದಂಬರಿ ಆಗಬಹುದೆಂಬ ಸುಳ್ಳು ನಂಬಿಕೆಯನ್ನವಲಂಬಿಸಿ ಬರೆದ ಜಳ್ಳು.

ಚೆಲುವೆಯರು (ಸಾರಂಗ) ಕನ್ನಡ ಕಾದಂಬರಿಗಳಿಗೆ ಚಿರಪರಿಚಿತ ವಸ್ತುವಿಗೆ ತೆಕ್ಕೆಹಾಕಿಕೊಂಡ ಕಥೆ ಇಲ್ಲಿದೆ.

ಸೋಮನಾಥರಾವ್ ರಾಮಯ್ಯ ನರಸಮ್ಮ ಸುಬ್ಬಮ್ಮ ರತ್ನಾ ಚಂಪಾ ನಳಿನಿ ಅನುರಾಧಾ ರೋಹಿಣಿ ಸೌಂಯ ನಾಗೇಶ ಕಿರಣ್ ಶ್ರೀನಿವಾಸ ಸೂರಿ ಇವರಲ್ಲಿ ಯಾವ ಪತ್ರ ಹೊಸ ಧ್ವನಿ ಮಿಡಿದಿದೆ? ಗ್ರಂಥಕರ್ತರು ಅನೇಕ ಪ್ರಶ್ನೆಗಳನ್ನು ಒಡ್ಡಿದ್ದಾರೆ. ಸವಲುಗಳನ್ನೆಸದರೆ ಕೃತಿಕಾರನ ಕೆಲಸ ಮುಗಿಯುವುದಿಲ್ಲ, ಆರಂಭವಾಗುತ್ತದೆ. ಅವಕ್ಕೆ ಪರಿಹಾರವನ್ನೂ ಸೂಚಿಸಬೇಕಾಗುತ್ತದೆ. ಅಲ್ಲದೆ ಇಲ್ಲಿ ಅವರು ಎತ್ತಿ ಹಿಡಿದ ಸಮಸ್ಯೆ ಕೂಡ ಹುಸಿಯಾಗಿದ್ದು ರಕ್ತಮಾಂಸಗಳಿಂದ ತುಂಬಿಕೊಂಡು ಉಸಿರಾಡುತ್ತಿಲ್ಲ.

ಕಾದಂಬರಿ ಓದಿ ಮುಗಿಸುತ್ತಿದ್ದಂತೆಯೇ ಮೂಡುವ ಮೊದಲ ಅನ್ನಿಸಿಕೆ ಇವರಿಗೆ ಒಂದೆಡು ಸಲಹೆ ಕೊಡಬೇಕೆಂಬುದು. ಇವರು ಕೃತಿ ರಚನೆಯಲ್ಲಿ ಧಾವಂತ ತೋರಬಾರದು. ವ್ಯವಧಾನ ಅವಧಾನಗಳಿಂದ ರಚನೆಗೆ ತೊಡಗಬೇಕು. ಸಮರ್ಥನೆ; ಚಂಪಾ ಗಂಡ ಕಿರಣ್ ಪತ್ರಿಕೋದ್ಯಮಿ. ಅವನ ವಿಚಾರವನ್ನು ಆತನ ಹೆಂಡತಿ ಬಾಯಲ್ಲೇ ಕೇಳಿ-

ನಾಗೇಶನ ತಾಯಿ ಸುಬ್ಬಮ್ಮನ ಹತ್ತಿರ ಹೇಳುವ ಮಾತು: “ಸಂಬ್ಳ ಏನೋ ಧಾರಾಳ ಬರುತ್ತೆ ಅನ್ನಿ. ಆದ್ರೆ ಅವ್ರು ರಾತ್ರಿ ಹೊತ್ತು ಬರೋದು ನೋಡಿದ್ರೆ ಆ ಕೆಲ್ಸಾನೇ ಬೇಡಾ ಅನ್ನಿಸ್ತೆ (ಅನ್ಸುತ್ತೆ ಇರಬಹುದು)”

“ಅಂದ್ರೇ?”

“ರಾತ್ರಿ ಒಂದು ಘಂಟೆಯಲ್ಲದೆ ಅವ್ರು ಮನೆ ಕಡೆ ಬರೋಹಾಗಿಲ್ಲ…”

-ಪತ್ರಿಕೋದ್ಯಮಿಗಳಿಗೆ ಸಂಬಳ ಧಾರಾಳವಾಗಿ ಬರುವುದು (ಬಂದರೆ) ಶಂತೋಷ. ಅದಿರಲಿ. ಅವರೆಲ್ಲ ನಡುರಾತ್ರಿಯ ನಿಶಾಚರರೆಂಬ ಮಾತು ಪ್ರಶ್ನಾರ್ಹ. ರಾತ್ರಿ ಕೆಲಸ (ನೈಟ್ ಷಿಫ್ಟ್) ಬಂದ ದಿಗಳನ್ನು ಬಿಟ್ಟರೆ ಪ್ರತಿದಿನವೂ ರಾತ್ರಿ ಒಂದು ಗಂಟೆಗೇ ಬರುವ ಪತ್ರಿಕೋದ್ಯೋಗಿ ಚಂಪಾಳ ಗಂಡ ಮಾತ್ರ ಇರಬಹುದು. ಇರಲಿ, ಅಂದಮಾತ್ರಕ್ಕೆ ಆಕೆ ತನ್ನ ಗಂಡನಿಗೆ ವಂಚಿಸಿ ನಾಗೇಶನ ಹಾಸಿಗೆ ಹಂಚಿಕೊಳ್ಳಬೇಕೆ? ಅವಳು ನಡತೆ ಜಾರುವುದಕ್ಕೆ ಬೇರೆ ಪ್ರಬಲ ಕಾರಣಗಳಿರಬೇಕು.

ಧರ್ಮರಾಯನ ಸಂಸಾರ : ಸಮಕಾಲೀನ ಜೀವನದ ಶೋಧನೆಗೆ ಹೊರತು ಗಟ್ಟಿಮುಟ್ಟಾದ ಕಾದಂಬರಿಕಾರರಾದ ಶಿವರಾಮ ಕಾರಂತರ ಈ ಕಾದಂಬರಿ ವೈಚಾರಿಕತೆಯ ಹೊರೆಯಿಂದ ಕುಸಿಯುತ್ತದೆ. ಸಾವಯವ ಸಂಬಂಧ ಅಷ್ಟಾಗಿ ಸಿದ್ಧಿಸುವುದಿಲ್ಲ.

ಪರಂಪರಾಗತವಾದ ಮೌಲ್ಯಗಳನ್ನು ಕಣ್ಣುಮುಚ್ಚಿಕೊಂಡು ಒಪ್ಪದೆ ಆ ಮೌಲ್ಯ ಶೋಧನೆಗೆ ತೊಡಗುವುದು ಇವರ ಉದ್ದೇಶ. ಎತ್ತಿಕೊಂಡ ಸಮಸ್ಯೆಯನ್ನು ತೇಲಿಸದೆ ಅದರ ತಳಕ್ಕೆ ಇಳಿಯುತ್ತಾರೆ. ಜೊಳ್ಳು ಆದರ್ಶದ ಅತಿಭಾವುಕತೆಯನ್ನು ಬಿಟ್ಟು ಕೊಟ್ಟರೂ ತಮ್ಮ ಅಕಾರಣ ಆಂತರಿಕ ಅಸ್ವಸ್ಥತೆಯನ್ನು ಹೇರುತ್ತಾರೆ.

‘ಧರ್ಮರಾಯನ ಸಂಸಾರ’ ಬಡತನ-ಸಿರಿತನಗಳ ಭೇದದ ಪರಿಣಾಮ, ದೊಡ್ಡವರ ನಡವಳಿಕೆ ಅವರ ಮಕ್ಕಳ, ಮೊಮ್ಮಕ್ಕಳ ಹಾಗೂ ಒಟ್ಟು ಸಂತಾನದ ಮೇಲೆ ಯಾವರೀತಿ ಬೀಳುತ್ತದೆ ಎಂಬುದನ್ನು ನಿರರ್ಗಳವಾದ ಶೈಲಿಯಲ್ಲಿ ಚಿತ್ರಿಸುತ್ತದೆ. ಯಮಧರ್ಮರಾಯನ ಸಂಸಾರದಂತೆ ನೋವು, ಕಷ್ಟ, ಸಂಕಟಗಳಿಗೆ ಇಲ್ಲಿ ಬರುವ ಸಂಸಾರದ ಚಿತ್ರಣ ಸಂಕೇತವಾಗುತ್ತದೆ.

ಲಚ್ಚಐತಾಳರು, ನಾರಾಯಣ ಹೆಬ್ಬಾರರು, ಸರಸ್ವತಿ, ಮಹಾಬಲ – ಈ ಪಾತ್ರಗಳಲ್ಲಿ ಸಂಕೀರ್ಣತೆ ಕಂಡುಬರುವುದಿಲ್ಲ. ಮಹಾಲಕ್ಷ್ಮಿಯ ಪಾತ್ರ ಓದುಗರ ಮನದಲ್ಲಿ ನಿಲ್ಲುತ್ತದೆ.

ಸರಸ್ವತಿ-ಮಹಾಬಲರ ದಾರುಣವಾದ, ಭೀಕರವಾದ ಹಾಗೂ ವಿಚಿತ್ರವಾದ ದಾಂಪತ್ಯದ ಚಿತ್ರಣ ಓದುಗರ ಮುಂದೆ ಸಮಸ್ಯೆಯನ್ನು ಇಡುತ್ತದೆ.

ನಾಗಿಯನ್ನು ಅಂಗಳದ ಚಪ್ಪರಕ್ಕೆ ಬಿಗಿದು ನಾಗ ಬೆತ್ತದಿಂದ ಬರೆಎಳೆಸಿದ ಪ್ರಕರಣ, ಉಂಗುರದ ಪ್ರಕರಣ, ಪರಿಣಾಮವಾಗಿ ನಾಗಿ ‘ಕೆರೆಗೆ ಹಾರ’ – ಆದದ್ದು – ಇವು ಮಹಾಬಲಯ್ಯನ ವಿಕೃತ ಕರಾಳ ವ್ಯಕ್ತಿತ್ವವನ್ನು ತೋರಿಸಬೇಕೆಂಬ ಹಟದಿಂದ ಮೂಡಿಬಂದಿರುವಂತೆ ತೋರುತ್ತದೆ.

ಒಟ್ಟಿನಲ್ಲಿ ಕಾದಂಬರಿ ಹಳೆಯ ತಲೆಮಾರಿನ ಬದುಕಿನ ಚಿತ್ರಣವನ್ನು ಕೇಂದ್ರ ಬಿಂದುವಾಗಿಸಿಕೊಂಡಿದೆ. ವಸ್ತುವಿನ ಆಯ್ಕೆ ಹಾಗೂ ಗ್ರಹಿಕೆಗೆ ಸಂಕುಚಿತತೆ ಪ್ರಾಪ್ತವಾಗಿದೆ.

ರವಿಯ ಬಂದನು ಹಳ್ಳಿಗೆ (ಚಿದಂಬರಾನಂದ) ಮತ್ತೊಂದು ಕತೆಪುರಾಣ. ಕಥಾ ವಿಷಯದ ಮೇಲೆ ಇವರಿಗೆ ಹಿಡಿತವೇ ಇಲ್ಲ. ಒಟ್ಟು ರೂಪರೇಖೆಗಳು ಬಾಲಂಗೋಚಿ ಇಲ್ಲದ ಗಾಳೀಪಟದಂತಾಗಿವೆ. ಅನಾವಶ್ಯಕವಾಗಿ ಗ್ರಂಥವನ್ನು ಬೆಳೆಸಿದ್ದಾರೆ. ಚರ್ವಿತ ವಸ್ತುವಿನ ಜೊತೆಗೆ ಅಪ್ರಬುದ್ಧ ಬರವಣಿಗೆಯೂ ಸೇರಿದೆ. ಡಾ|| ರವಿ ಹಾಗೂ ಅರುಣ ಮತ್ತು ವನಕ ಹೀಗೆ ಪ್ರಣಯ ತ್ರಿಕೋನ (ಒಂದು ಗಂಡು ಎರಡು ಹೆಣ್ಣು) ಅಪ್ರಮಾಣಬದ್ಧವಾಗಿ ಬಂದಿದೆ, ಭಾರತ – ಅಮೆರಿಕಗಳ ಬಗೆಗೆ ಅಸ್ಪಷ್ಟ ತಿಳುವಳಿಕೆ, ಕಲ್ಪನೆಯಿದೆ. ಕಾಲೇಜು, ಶಿಕ್ಷಣ, ಪಕ್ಷಪಾತ, ಪ್ರಣಯ, ಗ್ರಾಮೋದ್ಧಾರ, ಆದರ್ಶ, ವಿವೇಕಾನಂದ ಉಪದೇಶವಿಲ್ಲದವರ ಕಲಸುಮೇಲೋಗರವಾಗಿದೆ. ಅರುಣ ಏನಾದಳು? ವನಜಳ ಭವಿಷ್ಯವೇನಾಯಿತು? ಡಾ|| ರವಿ ಹಳ್ಳಿಯಲ್ಲಿ ದವಾಖಾನೆ ತೆರೆದುದರ ಪರಿಣಾಮವೇನಾಯಿತು? – ಯಾವುದೂ ಇಲ್ಲಿ ಇಲ್ಲ. ಕಾದಂಬರಿಕಾರರು ಮುಂದಿನ ಭಾಗದಲ್ಲಿ ಅದನ್ನು ವಿವರಿಸಬಯಸಿದ್ದಾರೆ! ಬೆಲೆಯೂ ಹೆಚ್ಚು, ಕಾದಂಬರಿಯೂ ಚೆನ್ನಾಗಿಲ್ಲ.

ವೃಂದಾವನ, ಬಿತ್ತಿ ಬೆಳೆದವರು, ಧೂಮಕೇತು – ಇವು (ರಾವ್ ಬಹದ್ದೂರ್) ಒಬ್ಬ ಲೇಖಕರ ಮೂರು ಗಮನಾರ್ಹ ಕಾದಂಬರಿಗಳು, ಗ್ರಾಮಾಯಣದ ನಂತರದ ಕೃತಿಗಳು, ಒಂದರ್ಥದಲ್ಲಿ ಗ್ರಮಾಯಣದಲ್ಲಿ ಸಾಹಿತ್ಯ ಸಿದ್ಧಿಯನ್ನು ಮುಟ್ಟಿದ ಇವರು ಬರೆದ ಈ ಮೂರೂ ಹೊತ್ತಗೆಗಳು ಓದುಗನಿಗೆ ಅಭ್ಯಾಸದ ದೃಷ್ಟಿಯಿಂದ ಕುತೂಹಲಕರವಾದ ವಿಷಯ.

ವೃಂದಾವನದ ಮುನ್ನುಡಿಯಲ್ಲೇ ಹೇಳಿಕೊಳ್ಳುವ ಕೃತಿಯ ಉದ್ದೇಶ ಅದರ ಒಟ್ಟು ವಿಮರ್ಶೆಗೆ ಸಹಕಾರಿಯಾಗುತ್ತದೆ. ದೈವದ ಅನಂತತೆ, ಅಗಮ್ಯತೆ, ಮಾನವ ಅಧಿಕಾರ (ಶಕ್ತಿ) ವ್ಯಾಮೋಹ, ಮುಕ್ತಿಯಿಲ್ಲದವರ ತೊಳಲಾಟ, ಧರ್ಮಾಧರ್ಮಗಳ ವಿವೇಚನೆ ಪಾಪ ಪುಣ್ಯ ಕುರಿತು ಪಾತ್ರಗಳ ಕಲ್ಪನೆ – ಇವೆಲ್ಲ ಕಾದಂಬರಿಯ ತೆಕ್ಕೆಗೊಗ್ಗಿಸುವ ಪ್ರಯತ್ನವೆಂದು ಮುನ್ನುಡಿಯಿಂದ ವ್ಯಕ್ತವಾಗುತ್ತದೆ.

ಇಲ್ಲಿ ಮತ್ತೆ ಕಥಾ ಪರಿಚಯ ಮಾಡಿಕೊಡದೆ ನೇರವಾಗಿ ಅವರ ಮುನ್ನುಡಿಯಿಂದಲೇ ಕೃತಿ ವಿಮರ್ಶೆಗೆ ತೊಡಗಿದೆ. ಕಾದಂಬರಿಯನ್ನು ಹಲವು ಉದ್ದೇಶಗಳಿಗೆ ದುಡಿಸಿಕೊಳ್ಳಲು ಹೆಣಗಿದ್ದಾರೆಂಬುದನ್ನು ಸುಲಭವಾಗಿ ಅರಿಯಬಹುದು. ಇದಕ್ಕೆಲ್ಲ ರಾಘವೇಂದ್ರರಾಯರ ವೃಂದಾವನವನ್ನು ಕೇಂದ್ರ ಪ್ರದೇಶವನ್ನಾಗಿ ಇಟ್ಟುಕೊಂಡಿದ್ದಾರೆ. ಕಥೆ ಬೆಂಗಳುರು ದೆಲ್ಲಿ ವಿದೇಶಗಳಿಗೂ ಹೋಗಿ ಬರುತ್ತದೆ; ನೂರೆಂಟು ರೀತಿಯ ಪಾತ್ರಗಳನ್ನು ಅವುಗಳ ಸ್ವಭಾವಗಳನ್ನು ವಿವರವಾಗಿ ಕೊಡಲು ತೊಡಗುತ್ತಾರೆ.

ಪಾತ್ರ ಪೋಷಣೆಗೆಂದೇ ಕೆಲವೆಡೆ ವಸ್ತುವಿಗೆ ನೇರವಾಗಿ ಸಂಬಂಧ ಪಡೆಯದ ಅನೇಕ ಪಾತ್ರಗಳ ವಿವರ (ಉದಾ: ಪತ್ರಕರ್ತ ಮುಕುಂದರಾಯ, ಅಚ್ಯುತ) ಬಿಚ್ಚುತ್ತಾ ಹೋಗುತ್ತದೆ. ಗ್ರಾಮಾಯಣದಲ್ಲಿನ ಕೊರತೆಯೆಂದು ಕೆಲವು ವಿಮರ್ಶಕರು ಪರಿಗ್ರಹಿಸಿರುವ ಪಾತ್ರಗಳ ಮನೋಗರ್ಭವನ್ನು ಬಿಚ್ಚುವಿಕೆ ಈ ಕಾದಂಬರಿಯಲ್ಲಿ ನಿವಾರಣೆಯಾಗಿದ್ದರೂ ಅನೇಕ ಕಡೆ ಮೂಲ ಕಥೆಗೆ ಬೆಸುಗೆಬಿಟ್ಟು ನಿಂತು ಕಾದಂಬರಿಯ ದೀರ್ಘತೆಗೆ ಕಾರಣವಾಗಿದೆ. ಅದರಂತೆ ಅನವಶ್ಯಕ ವಿವರಣೆಗಳೂ ಪಟ್ಟಿಗಳೂ ಸೇರಿಕೊಳ್ಳುತ್ತಾ ಹೋಗಿ ಕಾದಂಬರಿಯ ಕೇಂದ್ರ ಬಿಂದುವಾದ ವೃಂದವನ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ದುರಂತ ಚಿತ್ರಣಕ್ಕೆ ಪುಷ್ಟಿ ಸಿಗುವುದಿಲ್ಲ. ಬಂಧದ ಬಿಗಿ ಸಡಿಲಗೊಳ್ಳುತ್ತದೆ.

ಕಾದಂಬರಿಕಾರರು ಪಾತ್ರಗಳ ಜೀವಂತಿಕೆಯನ್ನು ಅಚ್ಚಳಿಯದೆ ಉಳಿಸಿದ್ದೇನೆಂದು ಹೇಳಿಕೊಳ್ಳುವುದನ್ನು ಪ್ರಶ್ನಿಸಬೇಕಾಗುತ್ತದೆ. ಒಂದೇ ಪಾತ್ರದ ಬೆಳವಣಿಗೆಯಲ್ಲೇ ಹೊಂದಾಣಿಕೆ ಕಾಣಿಸಲು ಸಾಧ್ಯವಾಗಿಲ್ಲ. ಇದಕ್ಕೆ ಉದಾಹರಣೆಯಾಗಿ ರಾಮಾಚಾರಿ ರತ್ನಾ-ಇವರ ಪಾತ್ರಗಳನ್ನು ನೋಡಬಹುದು. ಇದರ ಅರ್ಥ ಕಥೆಗೆ ಬೇಕಾದಂತೆ ಪಾತ್ರಗಳನ್ನು ತಿದ್ದಿಕೊಂಡಿದ್ದಾರೆಂಬುದು ಎದ್ದು ಕಾಣುತ್ತದೆ. ಪಾತ್ರಗಳು ಸ್ವಾತಂತ್ರ‍್ಯವಹಿಸಿದ ಕೆಲವೆಡೆ ಮೂಲ ಕಥೆಯಿಂದ ದೂರ ಸರಿಯುತ್ತವೆ. ಗ್ರಾಮಾಯಣದ ಬಾಳಚಾರಿ ಪಡದಪ್ಪನವರಂತೆ ಸ್ಪುಟವಾಗಿ ಬೆಳೆಯಬಹುದಾಗಿದ್ದ ಪರಿಮಳಾಚರಿ ದೇಭಣ್ಣಸ್ಫುಟತ್ವ ಪಡೆಯುವುದಿಲ್ಲ. ಹಾಗೆ ನೋಡಿದರೆ ಪರಿಮಳಾಚಾರ್ಯರಿಗಿಂತ ಉತ್ತರಾರ್ಧದಲ್ಲಿ ಮೂಡಿಬಂದ ರಾಮಾಚಾರಿಯ ವ್ಯಕ್ತಿತ್ವ ಪರವಾಗಿಲ್ಲ.

ವ್ಯಾಮೋಹವೇ ಅವರ ಜೀವಂತ ದುರಂತಕ್ಕೆ ಎಷ್ಟರ ಮಟ್ಟಿಗೆ ಕಾರಣವಾಯಿತೆಂಬುದು ನಾರಾಯಣರಾಯರು ಹಾಗೂ ಮೋಹನರಾವ್ ಪಾತ್ರದಲ್ಲಿ ಸೊಗಸಾಗಿ ಮೂಡಿ ಬಂದಿದೆ. ಕೆಲವೆಡೆ ಪಾತ್ರ ಚಿತ್ರಣದಲ್ಲಿ ‘ವೈದ್ಯ ಚಿಕಿತ್ಸೆ ನಡೆಸುತ್ತೇನೆ, ನಾನು ನರಳುವುದಿಲ್ಲ’ ಎಂದು ಹೇಳಿಕೊಂಡ ಮಾತು ಸಫಲವಾಗಿಲ್ಲ. ಸನ್ನಿವೇಶದ ತೀವ್ರತೆ ದಾರುಣತೆಯನ್ನು ಹೆಚ್ಚಿಸುವುದಕ್ಕಾಗಿ ಮೇಲೋಆರ್ಟ್‌ತರುತ್ತಾರೆ. ಆಗ ಪಾತ್ರಗಳ ಅತಿ ಭಾವುಕತೆ ಓದುಗನ ಸಂವೇದನೆಯನ್ನು ತಲಪದೆ ಹೋಗುತ್ತದೆ. ಉದಾಹರಣೆಯಾಗಿ ಲಕ್ಷ್ಮೀಬಾಯಿಯ ಮರಣಪ್ರಸಂಗ, ನಾರಾಯಣರಾಯರ ಮರಣ ಪ್ರಸಂಗ, ರತ್ನಾ ಮೋಹನನನ್ನು ಮದುವೆಯಾಗಲೆಂದು ಬುಕ್ ಮಾಡಲು ನಡೆದುಕೊಳ್ಳುವ ಖಳನಾಯಕಿಯ ರೀತಿ-ಇದನ್ನು ನೋಡಬಹುದು. ಇಂಥ ಕಡೆಗಳಲ್ಲಿ ಕಾದಂಬರಿಕಾರರ ಸಾಕ್ಷಿತ್ವದೃಷ್ಟಿ ಉಳಿದಿಲ್ಲವೆಂದೇ ಹೇಳಬೇಕಾಗುತ್ತದೆ.

ಇವರ ಇನ್ನೊಂದು ದೋಷವೆಂದರೆ ಒಂದು ಯುಗದ ಸಮಷ್ಟಿ ಜೀವನವನ್ನು ಗಮನಿಸಬೇಕೆಂಬ ಆತುರ. ಅಲ್ಲೆಲ್ಲ ಕೃತಿಯೊಂದಿಗೆ ಆತ್ಮೀಯತೆ ಕಳೆದುಕೊಂಡು ರಾಜ ಕಾರಣ, ಜಡವಾದ ಆಧ್ಯಾತ್ಮ, ಇವನ್ನು ಹರಿತವಾದ ವಿಚಾರದ ಒರೆಗಲ್ಲಿಗೆ ತಿಕ್ಕಿನೋಡುವ ಪ್ರಯತ್ನಪೂರ್ವಕ ವಾಂಛೆ- ಇನ್ನು ಕಾದಂಬರಿಯ ಸಮಗ್ರತೆ ಸಾಂದ್ರೀಕರಣವನ್ನು ಶಿಥಿಲಗೊಳಿಸುತ್ತವೆ. ಸಂಭಾಷಣೆಗಳು ನಾಟಕೀಯತೆಯನ್ನು ಕಳೆದುಕೊಂಡು “ಆಳ-ನಿರಾಳ” ಕಾದಂಬರಿಯ ನಾಯಕ ಪತ್ರಕರ್ತನಂತೆ ಚಿಟ್ಟು ಹಿಡಿಸುವ ದೀರ್ಘ ಭಾಷಣ ವರದಿಗಳಿಗೆ ಕಾರಣವಾಗುತ್ತವೆ. ಗ್ರಾಮಾಯಣದ ಪಾದಳ್ಳೀ ತನ್ನಲ್ಲೇ ವಸ್ತುವನ್ನು ಬೆಳೆಸಿಕೊಂಡರೆ ವೃಂದಾವನ ದೇಶದ ರಾಜಕೀಯದ ಆಗುಹೋಗುಗಳ ವರೆಗೆ ಹೆಜ್ಜೆಯಿಡುತ್ತದೆ. ಪಾತ್ರ ಪ್ರಧಾನವಾಗಲು ಬಯಸುವ ವೃಂದಾವನ ಎಂಬ ಹೆಸರಲ್ಲೇ ವಸ್ತು ಪ್ರಾಧಾನ್ಯವಿದೆಯೆಂಬ ವಿಚಾರವನ್ನು ಗುರುತಿಸಬಹುದು. ಇಡೀ ಕಾದಂಬರಿ ಕತ್ತರಿಸಿಹೋದ ರೀಲುಗಳಂತೆ ಕಾಣುತ್ತದೆಯೇ ಹೊರತು ಸುರುಳಿಯಾಗಿ ಬಿಚ್ಚಿಕೊಳ್ಳುವ ರೀಲಾಗುವುದಿಲ್ಲ.

ಪ್ರಾದೇಶಿಕ ಭಾಷೆಯಲ್ಲಿ ಪಳಗಿದವರಾದಾಗ್ಯೂ ಇವರು ಅದನ್ನು ಬಳಸಿಕೊಳ್ಳದೆ ಬರೀ ಪ್ರದೇಶವನ್ನು ಮಾತ್ರ ಚಿತ್ರಿಸುವುದೂ, ಅವರಿಗೆ ಅಸಹಜವಾದ ಭಾಷಾಚೌಕಟ್ಟನ್ನು ಬಳಸುವುದೂ ಕೃತಿಯ ಅಧಿಕೃತತೆ ಕಡಮೆಯಾಗಲು ಮುಖ್ಯ ಕಾರಣಗಳು.

ಇದುವರೆಗೆ ಹೇಳಿದ ಅಂಶಗಳಿಂದ ವೃಂದಾವನ ಸುಮಾರು ಕಾದಂಬರಿಯೆಂದು ಅರ್ಥೈಸಬೇಕಿಲ್ಲ. ಅನೇಕ ಕಡೆ ‘ರಸದ ಮಡು’ ಗಳಿವೆ; ಓದುಗರನ್ನು ಬಡಿದೆಬ್ಬಿಸುವ ಚಿತ್ರಗಳಿವೆ. ವೃಂದಾವನದಲ್ಲಿ ರಾತ್ರಿ ನಡೆಯುವ ಗಲಾಟೆ ಪ್ರಸಂಗ, ಪರಿಮಳಾಚಾರ್ಯರನ್ನು ಹೊಡೆಯುವುದು, ಹೆಜ್ಜೆ ಹೆಜ್ಜೆಗೂ ವೃಂದಾವನ ಅಧಃಪತನದತ್ತ ಸಾಗುವುದು. ಇವರಿಗೆ ಬರೆಯುವ ಕಾವು ಕುಮ್ಮುಕ್ಕು ಸಿಕ್ಕಾಗ ಹೇಗೆ ಬರೆಯಬಲ್ಲರೆಂಬುದಕ್ಕೆ ಇವು ‘ಬೊಟ್ಟುಮಾಡಿ’ ತೋರಿಸುತ್ತವೆ.

ರತ್ನಾಳ ಮದುವೆ ಮೋಹನನೊಂದಿಗೆ ಮಾಡಬೇಕೆಂದು ಶುರುವಾಗುವುದರಿಂದ ಅವರಿಬ್ಬರ ಮದುವೆ ಮುಗಿಯುವ ವರೆಗಿನ ಸಂದರ್ಭಗಳಲ್ಲಿ ಇವರ ಕುಸುರಿ ಕೆಲಸದ ಕೈ ಚಳಕ ಕಾಣುತ್ತದೆ. ರತ್ನಾಳ ವಿವಾಹ ವಿಚ್ಛೇದನ ಪತ್ರ ಮೋಹನನ್ನು ತಲುಪಿದಾಗ ಅಚ್ಚುತನನ್ನು ಅಲ್ಲಿ ತಂದು ಅವನ ಬಾಯಿಂದ ರತ್ನಾಳ ಬಗ್ಗೆ ಆಡಿಸುವ ಮಾತುಗಳು – ಒಂದು ಸಣ್ಣ ವಿಷಯದಲ್ಲೂ ಗಮನ ಹರಿಸಿ ಹೇಗೆ ಬದುಕನ್ನು ನೋಡುತ್ತಾರೆಂಬುದನ್ನು ಧ್ವನಿಸುತ್ತವೆ.

ಬಿತ್ತಿ ಬೆಳೆದವರುಪ್ರಮಾಣದಲ್ಲೂ ಸತ್ವದಲ್ಲೂ ವೃಂದಾವನಕ್ಕಿಂತ ಒಂದು ಗುಲಗಂಜಿ ತೂಕ ಹೆಚ್ಚು. ಇಲ್ಲಿ ಬಿತ್ತುವುದೂ ಬೆಳೆಯುವುದೂ ಸಂಕೇತಗಳು. ಬಿತ್ತಿದಂತೆ ಬೆಳೆಯೇ ಹೊರತು ಬಯಸಿದಂತೆ ಅಲ್ಲ. ಇದು ನಿಸರ್ಗದ ನಿಯಮ ಕೂಡ. ನಮಗೆ ಯಾವ ಹೆಣ್ಣೆ ಬೇಕೋ ಅಂತಹುದನ್ನು ಕೊಡುವ ಕಾಳು ಬಿತ್ತುವುದು ನಮ್ಮ ಕರ್ತವ್ಯ.

ಇಲ್ಲಿಯ ವಸ್ತುವೂ ಪ್ರಾದೇಸಿಕದ್ದೇ ಆದರೂ ಮೇಲಿನದಕ್ಕಿಂತ ನೇರವಾಗಿ ಮಣ್ಣಿನ ಮಕ್ಕಳಿಗೆ ಸೇರಿದ್ದು, ಯಾವುದೇ ಹಳ್ಳಿಗೆ ಸಲ್ಲುವಂತಹುದು. ಅಲ್ಲದೆ ಭಾಷೆ ಶಿಷ್ಟ-ಶಿಷ್ಟೇತರ ಭಾಷೆಯ ಸಂಲಗ್ನದಿಂದ ವೀರ್ಯವತ್ತಾಗಿ ನಿಷ್ಪನ್ನವಾಗಿದೆ. ಕೂಡಿ ಬಾಳುವುದರಲ್ಲಿ ಸುಖ, ಬಲಿ ಉಂಟು; ಬೇರೆಯಾಗುವುದರಿಂದ ಇವೆಲ್ಲ ತಗ್ಗುತ್ತವೆ- ಎಂಬ ತಳಪಾಯದ ಮೇಲೆ ಒಟ್ಟು ಕಾದಂಬರಿ ನಿಂತಿದೆ. ಮೋದನೂರು ಗ್ರಾಮ, ಅಲ್ಲಿನ ಮಂದಿ ಈ ಸಂದೇಶ ಸಾರುವ ಸಂಕೇತಗಳು. ಇದು ಮಣ್ಣಿನಲ್ಲಿ ಹುಟ್ಟಿ ಮಣ್ಣಿನ ವಾಸನೆಯನ್ನೆರಚುತ್ತಿರುವ ವಾಸ್ತವಿಕ ಕಾದಂಬರಿಯೆಂದು ಧಾರಾಳವಾಗಿ ಹೇಳಬಹುದು.

“ಕಾದಂಬರಿಯು ೧೯೦೮ ರಿಂದ ೧೯೪೪ರ ಕಾಲಾವಧಿಯಲ್ಲಿ ಉತ್ತರ ಕರ್ನಾಟಕದಲ್ಲಿರುವ ವಿಜಾಪುರ ಜಿಲ್ಲೆಯ ಮೋದನೂರು ಇನಾಂ ಗ್ರಾಮ, ಅದರ ಸಮೀಪದ ಹಳ್ಳಿಗಳನ್ನೊಳಗೊಂಡ ಪ್ರದೇಶದಲ್ಲಿ ನಡೆದ ಘಟನೆಗಳ ಚಿತ್ರಣ. ಹಳ್ಳಿಗಳ ರಾಷ್ಟ್ರದ ಘಟಕಗಳಾಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ನಡೆಯುವ ವಿಚಾರಕ್ರಾಂತಿಯ ಪ್ರಭಾವಕ್ಕೆ ಹಳ್ಳಿಯ ಜನ ಸಾಮಾನ್ಯರು ಒಳಗಾಗುವುದು ಸ್ವಾಭಾವಿಕ. ಶತಮಾನಗಳಿಂದ ನಮ್ಮ ಹಳ್ಳಿಯ ಬಾಂಧವರು ಧರ್ಮವೆಂದು ನಂಬಿಕೊಂಡು ಆಚರಿಸುತ್ತ ಬಂದ ಬಾಲವಿವಾಹ, ಅಸ್ಪೃಶ್ಯತೆ, ರಾಜನಿಷ್ಠೆ, ಇವು ಧರ್ಮಸಮ್ಮತವಾದವುಗಳಾಗಿರದೆ ಮೂಢ ನಂಬಿಕೆಯ ಫಲವೆಂಬ ವಿಚಾರ ಕ್ರಾಂತಿಯನ್ನು ಮಾಡಿದ ಪವಾಡ ಪುರುಷರು ಮಹಾತ್ಮಾಗಾಂಧೀಜಿಯವರು.”

ಗಾಂಧೀಜಿಯವರ ವರ್ಚಸ್ಸಿನಿಂದ ಸಮಾಜದಲ್ಲಿ ಬೀಸಿದ ವೈಚಾರಿಕ ಕ್ರಾಂತಿಯ ಗಾಳಿಯಿಂದಾಗಿ ರಜಕೀಯ ಪಟ್ಟಭದ್ರ ಹಿತಾಸಕ್ತ ಬುದ್ಧಿಜೀವಿಗಳೆನ್ನಿಸಿಕೊಂಡವರ ಕಾರ್ಯಕ್ಷೇತ್ರವಾಗುಳಿಯದೆ ಶ್ರೀಸಾಮಾನ್ಯರಲ್ಲೂ ರಾಜಕೀಯ ಹೋರಾಟಕ್ಕೆ ಧುಮುಕುವ ಹುಮ್ಮಸ್ಸು ತುಂಬಿತು. ಎಲ್ಲರೂ ಪಾಲುಗೊಳ್ಳತೊಡಗಿದಾಗ ಎಚ್ಚರವಹಿಸುವ ಅಗತ್ಯವಿದೆ, ಅವ್ಯವಸ್ಥೆ ತಲೆ ಹಾಕುವ ಸಾಧ್ಯತೆಗಳಿರುವುದರಿಂದ. ಆದುದರಿಂದಲೇ ಗಾಂಧೀಜಿಯವರು ಕನಸು ಕಂಡವರಂತೆ ದೇಶಭಕ್ತಿಯ ಜೊತೆ ಜೊತೆಯ್ಲೇ ಈಶಭಕ್ತಿಯನ್ನೂ ಮೇಳೈಸಿದ್ದು. ಇದು ಲೌಕಿಕದೊಡನೆ ಆಧ್ಯಾತ್ಮಿಕವನ್ನು ಕೂಡಿಸುವ ಪ್ರಯತ್ನವಷ್ಟೆ ಆಗಿರದೆ ಬಾಳಿಗೊಂದು ಒಳಿತು ತರುವ ಹರಹು ತಂದುಕೊಡುವ ದೂರದೃಷ್ಟಿಯೂ ಆಗಿದೆ. ಅವರು ಪ್ರಾರ್ಥನೆಗೆ ವಿಶೇಷ ಮಹತ್ವ ಕೊಟ್ಟಿದ್ದು ಈ ಉದ್ದೇಶದಿಂದಲೂ ನಿಜ. ಆದರೆ ಅವರ ಮರಣಾನಂತರದ ರಾಷ್ಟ್ರೀಯ ಜೀವನ ರಾಜಕೀಯ ಜೀವನ ನೈತಿಕ ದಿವಾಳಿಯಿಂದ ತತ್ತರಿಸಿತು. ಸ್ವಾರ್ಥದ ತಾಂಡವ ನೃತ್ಯ ನಡೆದಿದೆ.

ಈ ಹಿನ್ನೆಲೆಯನ್ನೂ ತನ್ನ ಕಕ್ಷೆಯಲ್ಲಿರಿಸಿಕೊಂಡು ಬಹು ಸೊಗಸಾಗಿ ಬೆಳೆದ ಉತ್ತಮ ಕಾದಂಬರಿ ‘ಬಿತ್ತಿ ಬೆಳೆದವರು.’ ಕೂಡಿ ಬಾಳುವುದರಲ್ಲಿನ ಮಹತ್ವ ಮರೆತ ತಮ್ಮಣ್ಣರಾಯನಿಂದ ಅವನೂ ಅವನ ಕುಟುಂಬವೂ ಅಲ್ಲದೆ ನೆರೆಹೊರೆಯಲ್ಲ ಬೆಂದು ಬೇಗುದಿಯಾಯಿತು. ರಾಷ್ಟ್ರವಿಭಜನೆಯ ಬಿತ್ತನೆ ಮೊದಲು ಅಂತರಂಗದಲ್ಲೇ, ಆತ ಅದರ ಸಾಕಾರ ಮೂರ್ತಿ. ಮನೆ ಆಳುವವಳೂ ಅಳಿಸುವವಳೂ ಹೆಣ್ಣು ತಾನೆ! ಶಾಮಲಾಬಾಯಿ-ಲಕ್ಷ್ಮೀಬಾಯಿ ಈ ನಾಣ್ಯದ ಎರಡು ಮುಖಗಳು. ಶಾಮಲಾಬಾಯಿ ತಿಮ್ಮಣ್ಣರಾಯನನ್ನು ಅಮ್ಮಾವ್ರಗಂಡನನ್ನಾಗಿಸಿ ಕುಣಿಸುವಳು ಸ್ವಪ್ರತಿಷ್ಠೆಯ ಧ್ವಜಾರೋಹಣಕ್ಕಾಗಿ ವ್ಯಕ್ತಿಗಳನ್ನು ಆಹುತಿ ತೆಗೆದುಕೊಳ್ಳುವಳು.

ಮನೆಯ ಮನೆತನದ ಸಮಾಜದ ಗ್ರಾಮದ ಏಳುಬೀಳುಗಳಿಗೆ ತನ್ನ ಕರುಳಬಳ್ಳಿಯೇ ಕಾರಣವಾದುದನ್ನು ಕಣ್ಣಾರೆ ಕಂಡು ಕಮರಿ ಕರಗಿ ಕಣ್ ಮರೆಯಾಗುವ ಮಾಗಿದ ಜೀವ ಶ್ರೀಪತಿರಾಯ. ಆತನಲ್ಲಿ ಆದರ್ಶದ ಅಲೆಯಿದ್ದರೂ ನೆಲದಲ್ಲಿ ನಿಲ್ಲಲೆತ್ನಿಸುವ ಪಾತ್ರವೆಂಬುದು ಖಾತ್ರಿ. ಆತನ ನೆರಳು ಅಣ್ಣರಾಯ, ಲಕ್ಷ್ಮೀಬಾಯಿ. ಇವರು ತಿಮ್ಮಣ್ಣರಾಯ ಶಾಮಲಾಬಾಯಿ ಒಡ್ಡುವ ಪರೀಷಹಗಳನ್ನು ಸ್ವೀಕರಿಸುವ ರೀತಿ ಕೂಡ ಬಹುವಾಗಿ ಸಹಜವಾಗಿ ಬಂದಿದೆ. ಅಲ್ಲಲ್ಲಿ ವ್ಯಕ್ತಿಗಳ ಒಳಮನಸ್ಸಿನ ಜಟಿಲ ಸಂಕೀರ್ಣ ತೆರೆ ತೆರೆದ ಕಿಟಕಿಗಳಂತಿರುವ ಉಜ್ವಲ ಭಾಗಗಳಿವೆ.

ಒಂದು ಮಹಾ ಕಾದಂಬರಿಗೆ ಬೇಕಾಗುವ ಅನೇಕ ಗುಣಗಳು ಈ ಕಾದಂಬರಿಯಲ್ಲಿ ಕಾಣಿಸುತ್ತವೆ. ಒಂದೇ ಘಟನೆಯನ್ನು ಎಷ್ಟು ಮಗ್ಗುಲುಗಳಿಂದ ಆಳವಾಗಿ ವಿಸ್ತಾರವಾಗಿ ನೋಡಬಹುದೆಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು. ಗ್ರಾಮಾಯಣದ ತರುವಾಯ ಇವರ ಕೃತಿ ಶ್ರೇಣಿಯಲ್ಲಿ ದ್ವಿತೀಯ ಸ್ಥಾನ ಈ ಕಾದಂಬರಿಗೆ ದಕ್ಕುವುದೆಂಬ ಭಾವನೆ ನನಗಿದೆ. ೧೯೭೨ ರಲ್ಲಿ ಪ್ರಕಟವಾದ ಕಾದಂಬರಿಗಳಲ್ಲಿ ಇದು ಹೆಚ್ಚು ಗಮನಾರ್ಹ.

ಧೂಮಕೇತುವಾರಪತ್ರಿಕೆಯ ಸ್ಪಧೆಯೊಂದರಲ್ಲಿ ಬಹುಮಾನ ಪಡೆದ ಕಾದಂಬರಿ, ಧೂಮಕೇತು ಒಂದು ಪ್ರತಿಮೆ. ಅದರ ಸುತ್ತ ಇರುವ ನಂಬಿಕೆ ಇಲ್ಲಿ ವ್ಯಕ್ತಗೊಂಡಿದೆ. ಬೇರೆ ಬೇರೆ ಪಾತ್ರ ಘಟನೆಗಳ ಮೂಲಕ, ರಾಜಕೀಯ ರಂಗದ ಪುಢಾರಿಗಳ ಸ್ಥಾನಪಲ್ಲಟಕ್ಕೂ ಧೂಮಕೇತುವಿಗೂ ಕಲೆಯ ಕುಲಾವಿ ತೊಡಿಸಿದ್ದಾರೆ.

ರಾಜಕೀಯ, ಅದರಲ್ಲಿರುವ ವ್ಯಕ್ತಿಗಳೂ, ಅವರ ಮಹತ್ವಾಕಾಂಕ್ಷೆ, ಅದನ್ನು ಈಡೇರಿಸಿಕೊಳ್ಳುವಲ್ಲಿ ಅನುಸರಿಸುವ ವಿಧಾನಗಳು, ಪಕ್ಷಾಂತರ, ಸ್ಥಾನಪಲ್ಲಟ, ಜಾತ್ಯಂಧ ಮನೋವೃತ್ತಿ, ಕಾನೂನು ಕಟ್ಟಳೆಗಳ ಹೆಸರಿನಲ್ಲಿ ದುರ್ಲಾಭ ಪಡೆಯುವ ಪ್ರವೃತ್ತಿ ಇವು ಈ ಕಾದಂಬರಿಯ ತಿರುಳು. “ಅವರ ತಲೆಯ ಮೇಲಿರುವುದು ಗಾಂಧೀಟೋಪಿ ಅಲ್ಲ; ಜನರ ಕಣ್ಣಲ್ಲಿ ಧೂಳೆಬ್ಬಿಸಿ ಭ್ರಮಿಷ್ಠರನ್ನಾಗಿ ಮಾಡುವ ಧೂಮಕೇತು (ಎಂಬ) ಚಿಂತನದ ಫಲವೇ ಧೂಮಕೇತು ಕಾದಂಬರಿ”. ಈ ಬಣ್ಣದ ಬದುಕಿಗೆ ಕಾಮನ ಹಬ್ಬದ ಬೆಡಗೂ ಸೇರಿ ಒಟ್ಟು ಕದಂಬರಿಯೇ ಧ್ವನಿಪೂರ್ಣವಾಗಿ ತೋರುತ್ತದೆ. ರಾಜಕೀಯದಲ್ಲಿ ಲೇಖಕರಿಗಿರುವ ಪ್ರಾವೀಣ್ಯವನ್ನು ಇವರ ಉಳಿದ ಕಾದಂಬರಿಗಳಂತೆ, ಒಂದು ಪಟ್ಟು ಮಿಗಿಲಾಗಿ ಇಲ್ಲಿ ಕಣಬಹುದು. ರಾಜಕೀಯ ರಂಗದ ವಿಲಾಸ ವಿಭ್ರಮ ವಿಕೃತಿಗಳನ್ನು ಇವರಷ್ಟು ಸಮರ್ಥವಾಗಿ ಕಾದಂಬರಿಗೆ ಅಳವಡಿಸಿಕೊಂಡವರು ಕನ್ನಡದಲ್ಲಿ ಹಲವರಿಲ್ಲವೆಂದರೆ ಅತಿಶಯೋಕ್ತಿಯಲ್ಲ.

ಹೆಣ್ಣು ಹೊನ್ನು ಮಣ್ಣುಗಳ ಸೆಳೆತ ಅಪ್ರತಿಹತ. ಇಲ್ಲಿ ಈ ಮೂರರ, ಮುಖ್ಯವಾಗಿ ಮಣ್ಣಿನ ಪ್ರಸ್ತಾಪ ಪ್ರಲೋಭ ಇದೆ. ಆದರೆ ಈ ಕಾದಂಬರಿಯ ಪಾತ್ರಗಳು ಮಾತಿನ ಮಲ್ಲರಾಗಿ ಸಡ್ಡು ಹೊಡೆಯುವುದನ್ನು ತಗ್ಗಿಸಿದ್ದರೆ ಒಟ್ಟಂದ ದ್ವಿಗುಣಿತವಾಗುತ್ತಿತ್ತು. ವಾಚಾಳಿತನಕ್ಕೆ ಇತಿಮಿತಿಗಳಿವೆ. ಮಾತಿನ ಚಟ ಗುಣವೂ ಹೌದು, ಅದಕ್ಕಿಂತ ಹೆಚ್ಚಾಗಿ ದೌರ್ಬಲ್ಯವೂ ಕೂಡ. ಇದರಿಂದಾಗಿ ಧೂಮಕೇತು ಇಲ್ಲಿ ಪರಿಶೀಲಿಸಿದ ಉಳಿದೆರಡು ಕಾದಂಬರಿಗಳ ಪರಡಿಗೆ ಹೊರತಾಗಿ ನಿಲ್ಲುತ್ತದೆ.

ಹೆಚ್ಚಿನ ಒಂದು ಹೇಳಿಕೆ :

ಇವರ ಎಲ್ಲ ಬರಹಗಳಲ್ಲಿ ಜೀವನದ ಹಸಿತನದ ಸೊಗಡಿದೆ. ಅನುಭವಗಳ ಮುಖಾಂತರ ಹೊಸ ಮೌಲ್ಯಗಳನ್ನು ಶೋಧಿಸುವ ಪ್ರವೃತ್ತಿಯಿದೆ. ಇಂದಿನ ಅನೇಕ ಕಾದಂಬರಿಕಾರರಲ್ಲಿ ಕಾಣಬರದ ಅನನ್ಯತೆಯಿದೆ; ಕಾರಣ, ಬಾಳಿನ ಹಲವು ಪದರುಗಳನ್ನು ಸಮರ್ಥವಾಗಿ ಗುರುತಿಸಬಲ್ಲರು.

ಗ್ರಹಣ:- ಎಸ್.ಎಲ್. ಭೈರಪ್ಪನವರ ಗ್ರಹಣ ಕಾದಂಬರಿ ಈ ವರ್ಷದ ಒಂದು ಕುತೂಹಲಕಾರಿಯಾದ ಬರವಣಿಗೆ. ಕಳೆದ ವರ್ಷ ಪ್ರಕಟವಾದ ನಿರಾಕರಣದಲ್ಲಿ ಕಾಣಿಸಿಕೊಂಡ ಸಾಂಕೇತಿಕತೆ ಇಲ್ಲಿ ಇನ್ನಷ್ಟು ದಟ್ಟವಾಗಿ ಹರಡಿಕೊಂಡಿದೆ. ಇಡೀ ಕಾದಂಬರಿಯಲ್ಲಿ ಮೊದಲ ಘಟನೆಯಾಗಿ ಬರುವ ಸೂರ್ಯಗ್ರಹಣ ಒಂದು ಯಶಸ್ವಿಯಾದ ಸಂಕೇತವಾಗಿ ರೂಪುಗೊಂಡಿದೆ.

ಸಂಪ್ರದಾಯ ಹಾಗೂ ವಾಸ್ತವಿಕತೆಗಳ ನಡುವಿನ ತಾಕಲಾಟವನ್ನು ಚಿತ್ರಿಸುವುದು ಕಾದಂಬರಿಯ ಪ್ರಮುಖ ಉದ್ದೇಶ. ಇಡೀ ಕಾದಂಬರಿಯ ವಸ್ತು ಸಂನ್ಯಾಸದ ಕಲ್ಪನೆಯನ್ನು ಕುರತದ್ದು. ನಿರಾಕರಣ ಕಾದಂಬರಿಯಲ್ಲಿ ಸಂನ್ಯಾಸಿಯಾಗಲು ಹೊರಟವನೊಬ್ಬನ ವ್ಯಕ್ತಿತ್ವವನ್ನು ಚಿತ್ರಿಸಿದರೆ, ಗ್ರಹಣದಲ್ಲಿ ನಿಜವಾಗಿ ಸಂನ್ಯಾಸಿಯಾಗಿ ಬದುಕಿದವನೊಬ್ಬನ ಚಿತ್ರಣವನ್ನು ಕೊಡುತ್ತಾರೆ. ಆದರೆ ಈ ಸಂನ್ಯಾಸಿ, ಲೋಕ ಯಾವುದನ್ನು ಸಂನ್ಯಾಸವೆಂದು ಒಪ್ಪಿಕೊಳ್ಳುತ್ತದೆಯೋ ಅದಕ್ಕೆ ವಿರುದ್ಧವಾದ ನಡವಳಿಕೆಯುಳ್ಳವನು.

‘ಸಂನ್ಯಾಸ’ ಎಂಬುದೊಂದು ಮನಃಸ್ಥಿತಿ. ಪರಂಪರಾಗತವಾದ ಬದುಕು ಸಂನ್ಯಾಸಿಯೆಂದರೆ-ಸರ್ವಸಂಗ ಪರಿತ್ಯಾಗಿ, ಅವಿವಾಹಿತನಾದವನು- ಎಂದು ಭಾವಿಸಿದರೆ, ಇಲ್ಲಿ ಬರುವ ಸ್ವಾಮಿಗಳೂ ಇದ್ದಕ್ಕಿದ್ದ ಹಾಗೇ ತಾವು ಲೇಡಿ ಡಾಕ್ಟರ್ ಸರೋಜಳನ್ನು ಮದುವೆಯಾಗುವ ನಿರ್ಧಾರವನ್ನು ಪ್ರಕಟಿಸಿ ಪರಂಪರಾಗತವಾದ ರಕ್ತಗತವಾದ ನಂಬಿಕೆಗಳನ್ನು ತಲೆಕೆಳಗು ಮಾಡುತ್ತಾರೆ. ಹೀಗಾಗಿ ಸ್ವಾಮಿಗಳೇ ಕತೆಯ ಕೇಂದ್ರಬಿಂದುವಾಗುತ್ತಾರೆ. ಅವರ ಮದುವೆಯ ನಿರ್ಧಾರದ ಸುತ್ತ ಕತೆಯನ್ನು ಹೆಣೆದಿದ್ದಾರೆ. ಈ ಬದಲಾವಣೆಗಳನ್ನು ಒಪ್ಪಲಾರದ ಸಮಾಜದಿಂದ ಸ್ವಾಮಿಗಳು ತಿರಸ್ಕೃತರಾಗುತ್ತಾರೆ.

ಒಂದು ಬಗೆಯಲ್ಲಿ ಸರೋಜ ಸ್ವಾಮಿಗಳಿಗೆ ಗ್ರಹಣ, ಸಮಾಜದ ಮೂಢನಂಬಿಕೆಗೆ ಗ್ರಹಣ, ಸಂಪ್ರದಾಯ ಶರಣತೆ ಗ್ರಹಣ-ಹೀಗಾಗಿ ಕಾದಂಬರಿಯ ಕತೆ ಸಂಕೀರ್ಣವಾಗಿದೆ.

ಸರೋಜಳ ವರ್ತನೆ ಸ್ತ್ರೀ ಸಹಜವೆನಿಸಿದರೂ ಅವಳು ಮಾಡಿದ್ದೆಲ್ಲ ಸರಿ ಎನಿಸುವುದಿಲ್ಲ. ಸಮಾಜವನ್ನು ಧಿಕ್ಕರಿಸಿ ಎದುರಿಸಿ ತಮ್ಮದೇ ಸಾಧುವೆಂದು ಸಾಧಿಸುವ ಸ್ವಾಮಿಗಳ ಮತ್ತು ಸರೋಜಳ ಬುದ್ಧಿಗೂ ಗ್ರಹಣ ಹಿಡಿದಿರುವಂತೆ ಭಾಸವಾಗುತ್ತದೆ.

ಸ್ವಾಮಿಗಳು ಸರೋಜಳನ್ನು ಬಿಟ್ಟು ಹೊರಟು ಹೋಗುವಲ್ಲಿ ಕಾದಂಬರಿ ನಿಜವಾಗಿ ಮುಕ್ತಾಯವಾಗುತ್ತದೆ. ಆದರೆ ಮುಂದೆ ಕತೆಯನ್ನು ಎಳೆದಿರುವುದು ತೇಪೆಹಾಕಿದಂತೆ ತೋರುತ್ತದೆ.

ಬಯಲುದಾರಿ (ಭಾರತೀಸುತ) ಇಂಗ್ಲೀಷ್ ಕಾದಂಬರಿಯೊಂದರ ಕಥಾವಸ್ತುವನ್ನು ಆಧರಿಸಿ ಬರೆದದ್ದು.

ಈ ಕಾದಂಬರಿಗೆ ಕೊಡಗಿನ ಕವಚ ತೊಡಿಸಿದ್ದಾರೆ. ಭಾಷೆ ಅಲ್ಲಲ್ಲಿ ಕೃತ್ರಿಮವೆನಿಸಿದರೂ ಕಾದಂಬರಿ ಒಪ್ಪವಾಗಿ ರೂಪಗೊಂಡಿದೆ. ಮಾದಪ್ಪ, ಮಗಳು ಚೋಂದು, ಅಳಿಯ ಬೋಪು, ಕರುಂಬಯ್ಯ, ಜೆಪ್ಪು, ಸುಜ್ಜು, ಚೋಂದು ಮಗ ಡಾಲಿ – ಈ ಪಾತ್ರಗಳ ಜೀವಂತಿಕೆ ಲೇಖಕರ ಕಥನ ಕಲೆಯನ್ನೂ ಪಾತ್ರಪ್ರಜ್ಞೆಯನ್ನೂ ಸಾರುತ್ತದೆ. ಹಾಗೆ ನೋಡುವುದಾದರೆ ಒಂದರ್ಥದಲ್ಲಿ ಈ ಕಾದಂಬರಿ ಕೊಡಗರ ವೀರ ಮುಕ್ತ ಜೀವನದ ರನ್ನದರ್ಪಣವಾಗಿ ಯಶಸ್ವಿಯಾಗಿದೆ. ಕೊಡಗರ ಜೀವನ ಕಥೆ ಬಿತ್ತಿರಿಸಿದ ಗಣಪತಿಯವರ ಕನ್ನಿಕಾವೇರಿಯನ್ನು ನೆನಪಿಸುತ್ತದೆ.

ಇಷ್ಟಿದ್ದೂ ಇದು ಕನ್ನಡದ ಅತ್ಯುತ್ತಮ ಕಾದಂಬರಿಗಳ ಸಾಲಿಗೆ ಸೇರುವುದಿಲ್ಲ, ಇದು ಪಡೆದಿರುವ ಇತಿಮಿತಿಗಳಿಂದ.

ಲೇಡಿ ಡಾಕ್ಟರ್ ಹಾಗೂ ದೂರದ ತೀರ (ನಾಡಿಗೇರ ಕೃಷ್ಣರಾಯ) ಕಾದಂಬರಿಗಳು ಈ ವರ್ಷದ ಅತ್ಯಂತ ಸತ್ವಹೀನ ಬರೆಹದ ಫಲವೆಂದು ನಿರ್ಧಾರವಾಗುವ ಕೃತಿಗಳತ್ತ ಅಭಿಮುಖವಾಗಿವೆ. ಜಳ್ಳುಪೊಳ್ಳು ಬರೆದವರನ್ನೂ ಜನಪ್ರಿಯ ಬರಹಗಾರರೆಂದು ಅಟ್ಟಕ್ಕೇರಿಸಿಬಿಟ್ಟರೆ ಬರುವ ಹೊತ್ತಗೆಗಳು ಹೀಗೆ ಇರುವುದು ಎಂದು ತೋರಿಸಲು ಇವನ್ನು ಬಳಸಿಕೊಳ್ಳುವುದು.

ಗಂಭೀರ ವಿಚಾರಶೀಲತೆ, ಭಾಷೆಯ ಬಳಕೆಯಲ್ಲಿ, ಪಾತ್ರ ಸೃಷ್ಟಿಯಲ್ಲಿ ಸಹಜತೆ-ಇವು ಎಳ್ಳಷ್ಟೂ ಇಲ್ಲವೆಂಬುದು ಈ ಎರಡು ಕಾದಂಬರಿಗಳಿಗೇ ಅಲ್ಲದೆ ಇವರ ಇನ್ನಿತರ ಕಾದಂಬರಿಗಳಿಗೂ ಒಪ್ಪುವ ಹೇಳಿಕೆ. ಕಥನಶಕ್ತಿಗೊಂದು ಪ್ರತಿಭೆ ಬೇಕು. ರಕ್ತಮಾಂಸಗಳಿಂದ ತುಂಬಿದ ಪಾತ್ರಗಳು ಇವರ ಲೇಖನಿಗೆ ಬಹುದೂರ ನಿಲ್ಲುತ್ತವೆ. ಈ ನೆಲೆದ ನೀರು ಹವೆಗಳನ್ನುಂಟು ಬಾಳುವ ಸಹಜ ಪಾತ್ರ ಚಿತ್ರಣ ಇವರ ಕಾದಂಬರಿಗಳ ನೇಮಿಯೊಳಗೆ ಸುಳಿಯುವುದಿಲ್ಲ.

ಮಸಣದತ್ತ ಮನೆ (ಹೆಚ್.ವೆಂಕಟೇಶ್) ತೀರ ಸಾಮಾನ್ಯವೂ ಎಳಸೂ ಆದ ಕೃತಿ. ಅಪಕ್ವ ಭಾವನೆಗಳಿಂದ ಅನನುಭವಿ ಲೇಖಕ ಭಾಷೆ ಸಾಹಿತ್ಯಕ್ಕೆ ಮಾಡಬಹುದಾದ ಅನಾಹುತಗಳೆಲ್ಲ ಇಲ್ಲಿ ಸಂಭವಿಸಿವೆ.

ಗುರು (ಆರ್ಯ) ವಿಭಿನ್ನ ಅರ್ಥ ವಿಶ್ಲೇಷಣೆಗೆ ಅವಕಾಶ ಮಾಡಿಕೊಡುವ ಒಳೆಎಳೆಗಳನ್ನೊಳಗೊಂಡಂತೆ ಮೊದಲ ಓದಿಗೆ ಭಾಸವಾದರೂ ಪರಿಭಾವಿಸಿದಾಗ ಅದರ ಆಭಾಸವೇ ಸ್ಪಷ್ಟವಾಗುತ್ತದೆ. ಸ್ಮೃತಿ, ವಿಸ್ಮೃತಿ, ಸಂಸ್ಕೃತಿ ಎಂಬ ಮೂರು ಭಾಗಗಳಾಗಿ ವಿಂಗಡಿಸಿಕೊಂಡಿದ್ದರೂ ಶೀರ್ಷಿಕೆಗಳ ಔಚಿತ್ಯವೂ ನಿಚ್ಚಳವಾಗುವುದಿಲ್ಲ. ಧರ್ಮ ಅರ್ಥ, ಕಾಮ (ಪ್ರವೃತ್ತಿ), ಜೊತೆಗೆ ತಲೆಮಾರಿನ ಅಂತರ, ನಗರ ಜೀವನ, ಅನಾಥ ಪ್ರಜ್ಞೆ- ಇವೆಲ್ಲ ಇಲ್ಲಿ ನೀರಸವಾಗಿವೆ.

ಆನಂದನ ಹುಟ್ಟು, ತಾಯಿಯ ಹದ್ದುಬಸ್ತಿನಲ್ಲಿ ಬೆಳವಣಿಗೆ, ಯೌವನದ ಆಟ, ಹಳ್ಳಿಯಲ್ಲಿ ಇಷ್ಟವಾದ ತಾತ, ಹಿತಕನಸಿನ ಗುಂಗು-ಇದು ಸ್ಮೃತಿಯ ಕಾಲ, ತಾಯಿಯ ಅಂಕೆ ತಪ್ಪಿ ಪಟ್ಟಣ ಮುಟ್ಟಿದ ಮೇಲೆ ಪರರನ್ನು ಹಿಂಸಿಸಿರುವ, ಆ ಮೂಲಕ ಸುಖ ಕಾಣುವ ಪ್ರವೃತ್ತಿ ಉಂಟಾಯಿತಂತೆ, ಬೇಬಿಯನ್ನು ಪ್ರೇಮಿಸಿಯೂ ಕಾಮಿಸಲಾಗಿದೆ, ಸೂಳೆಯೊಡನೆ ಸಂಭೋಗಿಸಲಾಗದೆ ಕಾಮ ಆನಂದನಿಗೆ ಸವಾಲಾಯಿತಂತೆ. ಮುಷ್ಠಿ ಮೈಥುನದಲ್ಲಿ ಸಲಿಂಗ ರತಿಯಲ್ಲಿ ಅಫೀಮು ಸೇವನೆಯಲ್ಲಿ ಹೊರದಾರಿ ಹುಡುಕಿದನಂತೆ. ಈ ವಿಲಕ್ಷಣ ಪರಿಸರದ ದುರಂತ ಬಾಳುವೆ ನಿವಾರ್ಯವೇ ಹೊರತು ಅನಿವಾರ್ಯವೆಂಬಂತೆ ಬಂದಿಲ್ಲ. ಆನಂದನ ತಂದೆ ತಾಯಿಯ ಸಾವು ಸಾಯಿಸಲೇಂದೇ ಕಾದಂಬರಿಕಾರರು ಪ್ರಯತ್ನಪಟ್ಟದ್ದರಿಂದ ಘಟಿಸಿದೆ- ಆನಂದದನ್ನು ವಿಸ್ಮೃತಿಗೆ ದೂಡಬೇಕಲ್ಲಾ!

ಆನಂದ ಸನ್ಯಾಸಿಯಾದುದಂತೂ ಕೃತಕ ಬರವಣಿಗೆಗೆ ಕಿರೀಟವಿಟ್ಟಂತಿದೆ. ಅಜ್ಜನ ಸಂಸ್ಕಾರ ಮೊಮ್ಮಗನಲ್ಲಿ ಮೈಗೂಡಿ ಮೂರ್ತಿಮತ್ತಾಯಿತೆಂಬುದಕ್ಕೆ ಮಾರ್ಪಾಡು ಆಗಿದೆಯೇ ಹೊರತು ಆನಂದ ಈ ನಿರ್ಧಾರಕ್ಕೆ ಬರಲು ಅಥವಾ ನಿಲುವಿಗೆ ಮುಟ್ಟಲು ಅಗತ್ಯವಾದ ಗುಟ್ಟಿಮುಟ್ಟಾದ ನೆಲೆಗಟ್ಟು ಇಲ್ಲ. ಕಾರಣ, ಅಗತ್ಯಗಳನ್ನು ತಿಳಿಸುವುದಿಲ್ಲ, ಸೂಚ್ಯವಾಗಿ ತೋರಿಸುವುದಿಲ್ಲ. ಕಾಮ ಒಂದು ಮೌಲ್ಯ ಎಂದು ಮಾನ್ಯ ಮಾಡಿದ ಮೇಲೆ ಅದರ ಸಾರ್ಥಕ್ಯ ಇರುವುದು ಅದನ್ನು ಅನುಭವಿಸಿ ಸುಖಿಸುವುದರಲ್ಲಿ. ಹೀಗಿರುವಾಗ ಒಮ್ಮೆಲೇ ಆನಂದ ಸನ್ಯಾಸಕ್ಕೆ ಅರ್ಪಿತನಾದುದರಿಂದ ಮಾನ್ಯವಾದ ಮೌಲ್ಯ ಮತ್ತೆ ಅಮಾನ್ಯವಾದಂತಾಯಿತು ಇದರಿಂದ ಕೃತಿಯ ಅಪಮೌಲ್ಯವಾಗಿದೆ. ಉದ್ದಕ್ಕೂ ಆನಂದ ಒಬ್ಬ ಪರಿವ್ರಾಜಕನಾಗಬಲ್ಲನೆಂಬ ಸುಳಿವು ಹೊಳವುಗಳೇ ಇಲ್ಲದೆ (ತಾತನ ಒಡನಾಟ ಅಷ್ಟು ಗಾಢವಾಗಿಲ್ಲ) ಏಕ್‌ದಂ ಅವನ ಛಿದ್ರ ವ್ಯಕ್ತಿತ್ವವೆಲ್ಲ ಗಾಳಿಗೆ ತೂರಿಕೊಂಡು ಇನ್ನೂ ಕಾಮದ ಹಿಡಿತ ತಪ್ಪಿಲ್ಲದಿದ್ದರೂ ಕಾವಿಯ ಕವಚ ತೊಡಿಸಿದ್ದು ಕಾದಂಬರಿಯ ಶಿಲ್ಪದಲ್ಲೇ ದೊಡ್ಡರಂಧ್ರ.

ಗಾಢವಾಗಿ ಮನಸ್ಸು ಕಲಕಬಹುದಾಗಿದ್ದ ಪ್ರಯತ್ನ ವಿಫಲವಾಗಿದೆ. ಅದರ ಬದಲು ಓದುಗನನ್ನು ಹನ್ನೊಂದು ತಿರುವುಗಳಲ್ಲಿ ತಿರುಗಿಸಿ ಬಳಲಿಸುತ್ತದೆ. ಸಂಕೀರ್ಣತೆಯನ್ನು ಸೆರೆ ಹಿಡಿದು ನಿಲ್ಲಿಸುವಲ್ಲಿ ಶಕ್ತಿ ಸಾಲದೆ ಸೋಲುತ್ತದೆ. ಭಾಷೆ ಕೂಡ ಅನೇಕ ಕಡೆ ಕೇವಲ ಜಾಳು ವಿವರಣೆಯಾಗಿ ಬಂದು ಸಾಂದ್ರವಾದ ಅಖಂಡ ಅನುಭವವನ್ನು ಕಟ್ಟಿಕೊಡುವುದರಲ್ಲಿ ಅನಿವಾರ್ಯವಾಗಿ ಮುಗ್ಗರಿಸಿದೆ.

ತಾಯಿ ಸಾಹೇಬ (ರಂ.ಶಾ) ಕಾದಂಬರಿ, ಉತ್ತಮ ಲೇಖಕನಿಗೆ ಇರಬೇಕಾದ ಸಿದ್ಧತೆ ಸಂಯಮ ಸಂಯೋಜನೆಗಳ ಕೊರತೆಯಿಂದಾಗಿ ಸೋತಿದೆ. ತೆಳವಾದ ಎಳೆಗಳನ್ನು ಅವು ತಾಳಬಲ್ಲ ಅಳವನ್ನೂ ತಿಳಿಯದೆ ಎಳೆದು ಹಿಂಜಿ ಜಾಳಾಗಿಸಿದ್ದಾರೆ. ಇಷ್ಟು ಹೇಳಿಯೂ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆಂಬುದನ್ನು ಮರೆಯುವಂತಿಲ್ಲ.

ಒಂದು ಹಿರಿಯ ಮನೆತನವನ್ನು ನಂಟರಿಷ್ಟರು ಎಷ್ಟು ವಿಧದಲ್ಲಿ ಜಗ್ಗಾಡುತ್ತಾರೆಂಬುದು ವಸ್ತು. ಗ್ರಾಮಾಯಣದ ಮಾದರಿಯನ್ನು ಸ್ಥೂಲವಾಗಿ ಮುಂದುವರಿಸಿದಂತೆ ಮೇಲು ನೋಟಕ್ಕೆ ತೋರುತ್ತದೆ. ಆದರೆ ಅಲ್ಲಿನ ‘ಕ್ಯಾನ್‌ವಾಸ್’, ಹರಹು, ನಿರ್ವಹಣೆ ಚಳಕ ಇಲ್ಲಿಲ್ಲ. ಕೋರ್ಟಿನ ವಿವರಣೆ ನಿರಾಸಕ್ತಿ ಹುಟ್ಟಿಸುತ್ತದೆ. ಅಲ್ಲದೆ ಅನಾವಶ್ಯಕವಾದ ಹೊರೆಯಾಗಿ ನಿಂತು ಉಪಕಥೆಗಳಂತೆ ಪ್ರತ್ಯೇಕವಾಗಿ ಒಡೆಯುತ್ತಾ ಹೋಗುವ ಭಾಗಗಳನ್ನು ಕೈ ಬಿಡುಬೇಕಿತ್ತು.

ಬಾಳ ಸಾಹೇಬರ (ಬಾಳಕೃಷ್ಣ ರಾಮಚಂದ್ರ ಇನಾಮದಾರರು) ಶರೀರ ದಹನಾನಂತರ, ವಾಡೆಯ ದಹನ, ತರುವಾಯ ಅಲ್ಲಿ ನಡೆದ ಘಟನೆಗಳು ತುಂಬಾ ಢಾಳಾಗಿ ಹಿಗ್ಗಿಸಿದಂತೆ ಕಾಣುತ್ತವೆ. ಸವತಿಯರ ದತ್ತಕದ ವಿಚಾರದ ಸುತ್ತಕತೆ ಹಬ್ಬಿದೆ. ನರ್ಮದ ಕೇಂದ್ರ ಬಿಂದುವೆಂದು ಮೊದಲಿಗೇ ತೋರಿದರೂ ಕಾದಂಬರಿ ಬೆಳೆದಂತೆಲ್ಲಾ ಕೊಕ್ಕೋ ಆಟದಂತೆ ಆಗುತ್ತದೆ. ದತ್ತಕ ಬಂದ ನಾರಾಯಣ ತನ್ನಹಡೆದ ತಂದೆ ಗೋವಿಂದಪ್ಪನಿಗೆ ಎದುರು ನಿಂತು ಕಾಲಿನ ಕೆರ ಕಳಚಿ ಹೊಡೆದಾಟಕ್ಕೆ ಅಣಿಯಾದ. ಅದರಿಂದ ಗೋವಿಂದಪ್ಪನ ಎಣಿಕೆಗಳೆಲ್ಲಾ ತಿಪ್ಪರಲಾಗ ಹಾಕಿದಂತಾಗಿ ಸೋತವನಾಗುತ್ತಾನೆ. ಅವನ ಮಡದಿ ಬೇರೆ ಸಾಯುತ್ತಾಳೆ. ಅಲ್ಲಿಂದ ರಟ್ಟೆಗಿದ್ದ ಬಲ ಮನಸ್ಸಿಗೂ ಇಳಿದು ತಾನೇ ಅಧಿಕಾರದ ಸೂತ್ರ ಹಿಡಿದು ತಂಬಾಕು ಬೆಲ್ಲ ಮಾರಾಟ ಮಾಡಿ ಪಟ್ಟಣ ಸುತ್ತಾಡಿ ಬರುತ್ತಾನೆ ನಾರಾಯಣ. ಪತ್ತಾರಾಕಿ ಚಂದ್ರಾಳ ಮಗಳು ಮಂಜರಿಯನ್ನು ಮದುವೆಯಾಗುವ ಕ್ರಾಂತಿಕಾರಿ ನಿರ್ಧಾರ ತಳೆಯುತ್ತಾನೆ. ಕೊಲ್ಲಾಪುರದಲ್ಲಿ ಇಬ್ಬರು ಹೆಣ್ಣುಗಳಲ್ಲಿ ಪಡೆದ ಮೋಜು, ಅನುಸೂಯೆಯೊಡನೆ ರಮಿಸಾಟ, ಕೋರ್ಟು ಕಟ್ಟಳೆ ವ್ಯವಹಾರ- ಹೀಗೆ ನಾರಾಯಣ ತ್ರಿವಿಕ್ರಮನಂತೆ ವ್ಯಾಪಿಸಿಕೊಳ್ಳುತ್ತಾನೆ.

ಕಾದಂಬರಿ ಆರಂಭವಾಗುವ ವೇಳೆಗೆ ನರ್ಮದೆ, ವಿಧವೆ, ಬಂಜೆ ಆಗಿರುತ್ತಾಳೆ. ಅವಳ ಸವತಿ ಅಕ್ಕಾಸಾಹೇಬಳದೂ ಇದೇ ಬಾಳೆ. ಈ ಗರತಿಯರು ಕೊಡಲಾರದ ಫಲ ಕೊಟ್ಟವಳೊಬ್ಬಳಿದ್ದಾಳೆ. ಅವಳು ಕಟ್ಟಿಕೊಂಡವಳಲ್ಲ, ಇಟ್ಟುಕೊಂಡವಳು. ಇವರಂತೆ ಪುಷ್ಪವತಿಯಾಗಷ್ಟೇ ನಿಲ್ಲದೆ ಫಲವತಿಯೂ ಆದ ವೇಶ್ಯೆ ಚಂದ್ರಾಳ ಅನೌರಸಪುತ್ರರ ಬಗೆಗೆ ನರ್ಮದೆ ಉದಾರವಾಗಿ ವರ್ತಿಸುತ್ತಾಳೆ. ಚಂದ್ರಾಳ ಮಗಳು ಮಂಜರಿಯನ್ನು ತನ್ನ ದತ್ತಕ ಪುತ್ರ ನಾರಾಯಣ ಮದುವೆಯಾಗಲೆಳಸಿದಾಗ ಸಹಜವಾಗಿಯೇ ಪ್ರತಿಭಟಿಸುತ್ತಾಳೆ. ವಾಡೆಯ ವಾರಸುದಾರನಾಗಿದ್ದು ತನ್ನ ಗೋಮುಖವ್ಯಾಘ್ರ ವ್ಯಕ್ತಿತ್ವವನ್ನು ಬಹು ಬೇಗ ಪ್ರದರ್ಶಿಸಿ ಬಿಡುತ್ತಾನೆ ನಾರಾಯಣ. ಅವನ ತಾಮಸ ಗುಂಡಿನೇಟಿಗೆ ಸಾತ್ವಿಕಳಾದ ನರ್ಮದೆ ಬಲಿಯಾಗುತ್ತಾಳೆ. ಸಾಯುವುದಕ್ಕೆ ಮೊದಲು ವಾಡೆಯ ಬಡೆತನವನ್ನು ಅನೌರಸ ಪುತ್ರರಿಗೆ ವರ್ಗಾಯಿಸುತ್ತಾಳೆ.

ಕಾದಂಬರಿಯ ಕೇಂದ್ರ ಪ್ರಜ್ಞೆ ನರ್ಮದೆಯಾದರೂ ಆಕೆಯ ಪ್ರಜ್ಞೆಯ ಪಾತಳಿಯಲ್ಲಿ ಈ ಕಾದಂಬರಿ ಹುಟ್ಟಿ ಬೆಳೆದಿಲ್ಲ. ನ್ಯಾಯವಾಗಿ ತೋರಬೇಕಾದ್ದು ನೈತಿಕ ದ್ವಂದ್ವ. ಅದು ತಲೆದೋರಿಲ್ಲ. ಘಟನೆ ಸನ್ನಿವೇಶಗಳ ನಿರೂಪಣೆಯಲ್ಲಿ ತೀವ್ರತೆಯಿಲ್ಲ. ಬಂದಳಿಕೆಯಂತೆ ಹಬ್ಬ ವಂಶದ ಜೀವ-ಗೌರವ ಹೀರುವ ದತ್ತಕ ಮಗ ನಾರಾಯಣನ ಪಾತ್ರವೂ ನಿರೀಕ್ಷಿಸಿದ ಹಂತಕ್ಕೆ ಏರುವುದಿಲ್ಲ.