ದೊಡ್ಡಮನೆ (ಎಚ್.ಎಲ್. ನಾಗೇಗೌಡ) ಓದುಗರನ್ನು ಹೊಸ ಅಭಿರುಚಿಗೆ ತಿರುಗಿಸಲೆತ್ನಿಸಿದ ದೊಡ್ಡ (೭೩೭ ಪುಟಗಳ) ಕಾದಂಬರಿ. ೧೯೭೨ ರಲ್ಲಿ ಬಂದ ಒಂದು ವಿಶಿಷ್ಟ ಗ್ರಂಥ ಕೂಡ. ಬಯಲು ಸೀಮೆಯ ಒಕ್ಕಲು ಮಕ್ಕಳ ಬಾಳು ಈ ಕಾದಂಬರಿಯ ವಸ್ತು. ಇಲ್ಲಿನ ನನ್ನೂರು ಯಾವುದೇ ಊರಿನಂತೆ ಆತ್ಮೀಯವಾಗಿ ಬಿಡುತ್ತದೆ. ಎಲ್ಲ ಊರುಗಳಲ್ಲಿರುವಂತೆ ಇಲ್ಲಿಯೂ ಒಳ್ಳೆಯವರೂ ಕೆಟ್ಟವರೂ ಇದ್ದಾರೆ.

ನನ್ನೂರಿನ ದೊಡ್ಡಮನೆಯ ಸುತ್ತಹಬ್ಬಿದ ಹಂದರವಾದುದರಿಂದ ಕಾದಂಬರಿಗೆ ಅದೇ ಹೆಸರಿದೆ. ಆ ಊರಿನ ಆ ಮನೆ ಎರಡು ತಲೆಮಾರಿನ (ನಾಗುವಿನದೂ ಸೇರಿದರೆ ಮೂರು ತಲೆಮಾರಿನ) ಜೀವನ ವಿಸ್ತಾರವಾಗಿ ಬಂದಿದೆ; ದೊಡ್ಡಮನೆಯ ಹಿರಿಯರ ಸಾವುನೋವುಗಳಿಂದ (ನಂಜೇಗೌಡ, ಚಿಕ್ಕೇಗೌಡ, ಮುದ್ದೇಗೌಡ, ಇವರ ಹೆಂಡತಿಯರು) ದೊಡ್ಡಮನೆ ಹಿರಿಯ ಮೊಮ್ಮಗ ನಾಗುವಿನ ವೈಭವದವರೆಗೆ ಸಾಗಿದೆ, ಒಂದು ಹಿರಿಯ ಮನೆತನದ ಕಥೆ, ಅದಕ್ಕೆ ಹೊಂದಿಕೊಂಡವರು ಹಲವರು. ಅವರೆಲ್ಲ ಪೋಷಕ ಪಾತ್ರಗಳಾಗಿ ಬಂದು ಹೋಗುತ್ತಾರೆ, ಎರಡನೆಯ ತಲೆಮಾರಿನ ಶಿಖರವಾದ ಲಿಂಗೇಗೌಡರ ಪಾತ್ರಕ್ಕೆ.

ಕಾದಂಬರಿಯ ಚಿತ್ರಪಟ ದೊಡ್ಡದೆಂಬ ಅರಿವು ಲೇಖಕರಿಗೂ ಇದೆ, ಗಾತ್ರ ಅತಿಯಾಯಿತೇನೋ ಎಂಬ (ಭೀತಿ ಅಲ್ಲ) ಸಂಕೋಚದಿಂದ ಅವರು- “ಎರಡು ತಲೆಮಾರಿನ ಬಾಳನ್ನು ಚಿತ್ರಿಸುವಾಗ ಚಿತ್ರಪಟ ಬಹು ದೊಡ್ಡದಾಗಿರಬೇಕಾದ್ದು ಅನಿವಾರ್ಯವಾಯಿತು. ಜೊತೆಗೆ ಆ ಬಾಳನ್ನು ಈ ಲೇಖಕ ಕಂಡುಂಡ ಕಾರಣವಾಗಿ ಯಾವುದನ್ನು ಬಿಡುವುದು, ಯಾವುದನ್ನು ಸೇರಿಸುವುದು ಎಂಬ ತುಯ್ದಾಟಕ್ಕೂ ಸಿಕ್ಕಬೇಕಾಯಿತು. ಈ ಕಾರಣ, ಎಷ್ಟೇ ಹಿಡಿತ ಮಾಡಿದರೂ ಈ ಕಾದಂಬರಿ ಸುಮಾರು ೮೦೦ ಪುಟಗಳಷ್ಟಾಗಿ ಗಾತ್ರದಲ್ಲಿಯಾದರೂ ಬೃಹತ್ ಕಾದಂಬರಿಯಾಗಿ ಬಿಟ್ಟಿದೆ. ಗುಣದಲ್ಲಿಯೂ ಇದು ಬೃಹತ್ ಆದರೆ ನನಗಾಗುವ ಆನಂದ ಅಷ್ಟಿಷ್ಟಲ್ಲ.”

ಕಾದಂಬರಿಕಾರರ ಆಶಯ ಸ್ವಲ್ಪಮಟ್ಟಿಗೆ ಈಡೇರಿದೆ. ಒಂದು ಕಾದಂಬರಿಯ ವಸ್ತು ಯಾವುದಿರಬೇಕು? ಎಷ್ಟಿರಬೇಕು? ಹೇಗಿರಬೇಕು? ಎಷ್ಟು ಪುಟಗಳಿರಬೇಕು? ಎಷ್ಟು ಪಾತ್ರಗಳಿರಬೇಕು? ಯಾವ ಶೈಲಿಯಲ್ಲಿರಬೇಕು? ಯಾವ ತಂತ್ರ ಮಾಧ್ಯಮದಲ್ಲಿರಬೇಕು? – ಮೊದಲಾದ ಪ್ರಶ್ನೆಗಳು ಅನಾವಶ್ಯಕ. ವಸ್ತು ಯಾವುದೇ ಇರಬಹುದು ನಿರ್ಬಂಧವಿಲ್ಲ. ಹೇಗೇ ಇರಬಹುದು, ಆದರೆ ಸಹಜವೂ ಕಲಾತ್ಮಕವೂ ಆಗಿ ಬರಬೇಕು. ಎಷ್ಟೇ ಪುಟಗಳಿರಬಹುದು. ಇರುವಷ್ಟು ಸಾಂದ್ರ ಆಗಿರಬೇಕು. ಪಾತ್ರಗಳಿಗೆ ಮಿತಿಯೇನೂ ಇಲ್ಲ. ಆದರೆ ಯಾವ ಪಾತ್ರವೂ ‘ಇದನ್ನು ಬಿಟ್ಟರೂ ನಷ್ಟವಿಲ್ಲ’ ಎಂಬಂತಿರಬಾರದು. ಶೈಲಿ ಇಂತಹುದೇ ಸರಿ ಎಂದು ಗೆರೆ ಎಳೆದಿಲ್ಲ. ಅಕೃತಕವಾಗಿರಬೇಕು ಅಷ್ಟೆ. ತಂತ್ರಕ್ಕಾಗಿ ಕಾದಂಬರಿ ರಚನೆಯಾಗುವುದಿಲ್ಲ.

ದೊಡ್ಡಮನೆ ಗ್ರಾಮೀಣ ಜೀವನದ ರನ್ನಗನ್ನಡಿ. ನನ್ನೂರು ಹಳ್ಳಿಯನ್ನು ಅದರ ಸಮಸ್ತ ಸೂಕ್ಷ್ಮ ಸ್ಥೂಲಗಳೊಡನೆ ಸಮಗ್ರವಾಗಿ ಚಿತ್ರ ಹಿಡಿದಿದೆ. ನಂಜೇಗೌಡರ ದೊಡ್ಡಬಾಳು ಕಣ್ಣಿಗೆ ಕಟ್ಟುತ್ತದೆ. ಅವರ ಹಿರಿಯ ಮಗ ಲಿಂಗಯ್ಯ (ಲಿಂಗೊಯ್ಯ ಲಿಂಗೇಗೌಡ) ತನ್ನ ಅಪಾರ ಬಂಧು ಬಳಗದ ನಡುವೆ ಬಾಳುತ್ತಾ ದೊಡ್ಡಮನೆ ಕಟ್ಟಿಸಿದ ವಿವರ ಸಪ್ಪೆಯಾಗಿಲ್ಲ. ಆ ಮನೆಯವರನ್ನೆಲ್ಲ ಒಗ್ಗಟ್ಟಿನಲ್ಲಿ ಆತ ನೋಡಿಕೊಂಡ ಭಾಗವೂ ನಿಚ್ಚಳವಾಗಿದೆ. ಇವನ ಮಗ ನಾಗು ಓಇದ ಕಲಿತು ಕೆಲಸಕ್ಕೆ ಸೇರಿ ಅಮಲ್ದಾರನಾಗುವ ವೇಳೆಗೆ ದೊಡ್ಡಮನೆಯಲ್ಲಿ ತೂತು ಬಿರುಕುಗಳು ಬರುವ ಸಮಯ. ಅದರ ಮುನ್ಸೂಚನೆಯನ್ನು ಕಂಡು ಲಿಂಗೇಗೌಡ ಕಣ್ಮುಚ್ಚಿದ ಪ್ರಸಂಗ ಸ್ವಾರಸ್ಯವನ್ನು ಕಾಪಾಡಿಕೊಂಡಿದೆ.

ಒಂದು ಜೀವಂತ ಜನಾಂಗದ ಜೀವನ ವಿಧಾನದ ಚಿತ್ರ ಸಮರ್ಥವಾಗಿ ಬಂದಿದೆ. ಅಕ್ಕಪಕ್ಕದ ಮನೆಯವರೇ ಆಗಲಿ, ಒಂದೇ ಮನೆಯವರೇ ಆಗಲಿ ಎಲ್ಲರ ಗುಣ ಏಕ ರೀತಿಯಿರುವುದಿಲ್ಲ. ಲಿಂಗೇಗೌಡ-ರಂಗೇಗೌಡರು ಈ ಸಿದ್ಧಾಂತದ ಸಂಕೇತ. ಹೆಂಡ ಮಾರಿದರೂ ಅದರಲ್ಲೊಂದು ನಿಯತ್ತಿದೆ, ಜಾತಿಗಳಿದ್ದರೂ ಅದರಲ್ಲೊಂದು ವ್ಯವಸ್ಥೆಯಿದೆ ಎಂಬುದು ಇಲ್ಲಿನವರ ವ್ಯವಹಾರದಲ್ಲಿ ಸ್ಪಷ್ಟವಾಗಿದೆ. ರಂಗೇಗೌಡನ ದಾಯಾದಿ ಮತ್ಸರ, ಲಿಂಗೇಗೌಡರ ಘನತೆ, ಔದಾರ್ಯ, ನಾಲ್ಕುಜನ ಹೆಂಡಿರ ಯೋಗ, ಆಪ್ತೇಷ್ಟರ ಬೃಹತ್ ಪರಿವಾರ, ಗೌಡರ ತಾಯಿ ತಾಯಿಯ ತಾಯಿ, ಹೊಲೆಯ ಗೆಂಡೇಕಾಳ, ಅಯ್ಯಾಮೇಷ್ಟ್ರು-ಕೇವಲ ಪಾತ್ರಗಳಾಗದೆ ಸತ್ವಯುತ ಸುರುಚಿಯ ಬರೆಹದ ಸೃಷ್ಟಿಯಾಗಿದ್ದಾರೆ.

ಈ ಫೋಟೋದಲ್ಲಿ ಎಲ್ಲ ಇದೆ. ಬಿಡಿ ಚೆಲುವೂ ಇದೆ. ಒಟ್ಟಂದ ಇರಬೇಕಾದ ಪ್ರಮಾಣದಲ್ಲಿ ಮೂಡಿ ಬಂದಿಲ್ಲ. ಒಂದು ಬಣ್ಣ ಹೆಚ್ಚು ಇನ್ನೊಂದು ಸುಣ್ಣ ಕಡಮೆ ಎಂಬಂತಾಗಿದೆ. ದೊಡ್ಡಮನೆ ಸಣ್ಣ ಮನೆಗಳಾಗಿ ಒಡೆಯುವ ಪ್ರಸಂಗವನ್ನು ಉದಾಹರಿಸಬಹುದು. ಸಾವಯವತೆ ಈ ಕಟ್ಟಡದ ಕೊರತೆ. ಬರಹಗಾರರು ಇನ್ನೂಮಮಕಾರದಿಂದ ಮುಕ್ತರಾಗಿಲ್ಲ. ತಾದಾತ್ಮ್ಯ ದೋಷವಲ್ಲ, ವಸ್ತುನಿಷ್ಠ ದೃಷ್ಟಿ ಶುದ್ಧವಾಗಿರಬೇಕು. ಯಾವುದನ್ನು ಬಿಡುವುದು. ಯಾವುದನ್ನು ಸೇರಿಸುವುದು ಎಂಬ ತುಯ್ದಾಟಕ್ಕೆ ಸಿಕ್ಕ ಬೇಕಾಯಿತೆನ್ನುವ ಲೇಖಕರ ಮಾತು ಪ್ರಶ್ನಾರ್ಹ. ಸಮರ್ಥ ಲೇಖಕ ಇದನ್ನು ಬಹಳ ಸುಲಭವಾಗಿ ಪರಿಹರಿಸಿಕೊಂಡು ಅನುಚಿತ ಹೊರೆ ಎನ್ನಿಸುವುದನ್ನೆಲ್ಲ ಮುಲಾಜಿಲ್ಲದೆ ಬಿಡಬೇಕು.

ಒಂದು ಕಡೆ (ಪುಟ ೭೩೪) ನಾಗು ಮಾತ್ಸರ್ಯದ ಮೊಟ್ಟೆಯಾದ ರಂಗೇಗೌಡನಿಗೆ ಹೇಳುವ ಮಾತುಗಳಿವು: “ಮನುಷ್ಯ ಮನುಷ್ಯನಾಗಿ ಬಾಳಬೇಕೇ ಹೊರತು. ಬೇರೊಂದು ರೀತಿ ಎಂದೂ ಬಾಳಬಾರದು. ಹಾಗೆ ಬಾಳಿದರೆ ಪ್ರಾಯಶ್ಚಿತ್ತ ತಪ್ಪದು ಹೊರಗಿನ ಬೆಂಕಿ ಮರಗಿಡ ಸುಟ್ಟರೆ, ಒಳಗಿನ ಬೆಂಕಿ ತನ್ನನ್ನೇ ಸುಡುತ್ತದೆ. ನಿಮ್ಮ ಹೊಟ್ಟೆಕಿಚ್ಚು ದೊಡ್ಡಮನೆಯನ್ನು ಒಂಬತ್ತ ಪಾಲು ಮಾಡಲು ಸಾಧ್ಯವಾಯಿತು ಅಷ್ಟೆ. ಆದರೆ ಅದೇ ಬೆಂಕಿ ನಿಮ್ಮ ಮನೆಯನ್ನೇ ಸುಟ್ಟಿತು. ನಿಮ್ಮ ನಾನೂ ಆಗಿ ಹೇಳುತ್ತಿದ್ದೇನೆ. ಇನ್ನಿಂಥ ಕೆಲಸಕ್ಕೆ ಕೈ ಹಾಕಬೇಡಿ. ನಿಮ್ಮ ಮನೆಗೆ ನೆಮ್ಮದಿ ಬೇಕೆಂದರೆ ಇನ್ನೊಬ್ಬರ ಮನೆಗೆ ಬೆಂಕಿ ಇಡಲು ಹೋಗಬೇಡಿ” – ಇದು ಇವರ ಸಂದೇಶ. ಈ ಉದ್ದೇಶ ಸಾಧನೆಗೆ ಸಿದ್ಧವಾದ ಕೃತಿ ಈ ಕಾದಂಬರಿ. ರಂಗೇಗೌಡ, ಅವನ ಮಗ ಮದ್ದು ರಾಜಕುಮಾರ (ಮುದ್ದೇಗೌಡ) ಉಪ್ಪು ತಿಂದವನು ನೀರು ಕುಡಿಯುತ್ತಾನೆಂಬ ನಾಣ್ಣುಡಿಗೆ ಸಾಕ್ಷಿಯಾಗಿ ನಿಂತವರು.

ಆದರೆ ಸಂಗ್ರಹಕ್ಕಿಂತ ವಿಸ್ತಾರದತ್ತ ನಡೆಯುತ್ತಾರೆ: “ಒಬ್ಬರ ಕಣ್ಣೀರನ್ನು ಇನ್ನೊಬ್ಬರು ಒರಸಿದರು. ತಮ್ಮನ ಕಣ್ಣೀರನ್ನು ಅಣ್ಣ, ಅಣ್ಣನದನ್ನು ತಮ್ಮ, ಅಕ್ಕನ ಕಣ್ಣೀರನ್ನು ತಂಗಿ ತಂಗಿಯದನ್ನು ಅಕ್ಕ…” (೧೪೭) ಇದರಲ್ಲಿ ಮೊದಲ ವಾಕ್ಯವೇ ಉಳಿದ ಮಾತುಗಳ ಕೆಲಸವನ್ನು ನಿರ್ವಹಿಸಿದ ಮೇಲೂ ಅದನ್ನೇ ವ್ಯಾಖ್ಯಾನಿಸುವುದು ಅನಾವಶ್ಯಕ. ಶೈಲಿಯಲ್ಲಿ ವ್ಯವಸ್ಥೆ ಅಥವಾ ಏಕರೂಪತೆ ಒಮ್ಮೊಮ್ಮೆ ಜೋಲಿ ಹೊಡೆಯುತ್ತದೆ, ಅತಿ ಭಾವುಕತೆ-ಅತಿ ನೀರಸತೆಗಳ ನಡುವೆ. ಪ್ರಬಂಧದಂತೆ, ಸಣ್ಣ ಕಥೆಯಂತೆ, ಗದ್ಯಕಾವ್ಯದಂತೆ-ಕೆಲವು ಭಾಗಗಳು ಸಿಡಿದೇಳುತ್ತವೆ. (ಮುದ್ರಣ ಸ್ಖಾಲಿತ್ಯಗಳಿಗೆ ಸ್ವಾತಂತ್ರ‍್ಯವಿದೆ).

ನಿತ್ಯ ಕುಯ್ಯುವ ಕುರಿಕೋಳಿಗಳ ಅಂಗಾಂಗಗಳನ್ನು ಹಲವು ಸಲ ವಿವರಿಸಿರುವುದು ಅನುಚಿತ. ಊರಿನಲ್ಲಿ ನಡೆಯುವ ಹಳ್ಳಿ ಹಬ್ಬಗಳು, ರಾಶಿಯ ವೈಭವ, ಬಿತ್ತುವ ಬೆಳೆಯುವ ಒಕ್ಕಲು ಕೆಲಸ, ಮದುವೆಯಲ್ಲಿ ಹಾಡುವ ಸೋಬಾನದ ಪದಗಳು ಇನ್ನೂ ಸಂಕ್ಷಿಪ್ತ ಸ್ಪರ್ಶ ಬಯಸುತ್ತವೆ. ವಿದುರನೀತಿ ಭಾಗವನ್ನು ಉದ್ಯೋಗ ಪರ್ವದಿಂದ ಅಳೀಸಂದ್ರದ ಗಾಣಿಗರ ವೆಂಕಟರಮಣ ಶೆಟ್ಟರ ಬಾಯಲ್ಲಿ ಹೇಳಿಸಿದ ಪ್ರಸಂಗದಲ್ಲಿನ ವಿಸ್ತಾರ ಮೊಟಕುಗೊಳ್ಳಬಹುದಿತ್ತು. ಗೌಡರು ಸತ್ತು ಮರುದಿನ ಮುಂಜಾನೆ “ಇಡೀ ಊರಿಗೆ ಊರೇ ದುಃಖದಲ್ಲಿ ತಲೆ ತಗ್ಗಿಸಿಕೊಂಡಿತು” ಎಂಬ ಅರ್ಥಪೂರ್ಣ ಮಾತಿನ ಮಹತ್ವವೆಲ್ಲ. ಅದನ್ನು ಹಿಂಬಾಲಿಸಿ ಬರುವ “ಕೋಳೀ ಕೂಗಲಿಲ್ಲ, ಹಕ್ಕಿಗಳು ಚಿಲಿಪಿಲಿಗುಟ್ಟಲಿಲ್ಲ, ಬೆಳಗಿನ ತಂಗಾಳಿ ಬೀಸಲಿಲ್ಲ. ಮೂಡಣ ಕೆಂಪು ಕಾಣಲಿಲ್ಲ…” (೮೨) ಎಂಬೆಲ್ಲ ವರ್ಣನೆಯಲ್ಲಿ ಬಸಿದು ಹೋಗಿವೆ.

ಆಡುನುಡಿಯ ಸೊಗಡಿದೆ. ಕನ್ನಡ ಜನಜೀವನದ ಹಲವು ಪದರುಗಳ ಪರಿಚಯವಿದೆ, ಹಬ್ಬಹರಿದಿನಗಳ ಶೋಬನ ಪ್ರಸ್ತಗಳ ಅಚರಣೆಯಿಂದ, ಕೊಬ್ಬಿದ ಜನರ ನಡವಳಿಕೆಯವರೆಗೆ, ಸಾಕುಪ್ರಾಣಿಗಳು ಕಾದಂಬರಿಯ ಪಾತ್ರಗಳಾಗುವ ಆತ್ಮೀಯ ಪರಿಸರವೇರ್ಪಟ್ಟಿದೆ. ನಿಸರ್ಗವೂ ಒಂದೊಂದು ಸಲ ಮಾತನಾಡುತ್ತಿರುವಂತೆ ವಸ್ತುವಿನಲ್ಲಿ ಐಕ್ಯಗೊಳ್ಳುತ್ತದೆ. ದೇಸಿಯ ದರ್ಶನವಿದೆ. -(ಒಮ್ಮೊಮ್ಮೆ ಪ್ರದರ್ಶನವೂ ಆಗಿ ಬಿಡುತ್ತದೆ). ಗಾದೆಗಳೂ ಗೀತೆಗಳೂ ಸೂತ್ರವಾಕ್ಯಗಳೂ ಕೋದುಕೊಂಡಿವೆ. ಭಾಷೆ ಶಾಸ್ತ್ರಜ್ಞರಿಗೂ ಜಾನಪದಾಭ್ಯಾಸಿಗಳಿಗೂ ಸಮಾಜಶಾಸ್ತ್ರಜ್ಞರಿಗೂ ಇಲ್ಲಿ ಗ್ರಾಸವಿದೆ. (ಒಂದೊಂದು ಕಡೆ ಜಾನಪದ ಗೀತೆಗಳ ಸಂಕಲನವೇನೋ ಎಂಬ ಅನುಮಾನ ಬಂದು ಬಿಡುತ್ತದೆ). ಕೇವಲ ಅಯ್ವತ್ತು ವರ್ಷಗಳ ಹಿಂದೆ ಕನ್ನಡ ನಾಡಿನ ಯಾವುದ ಹಳ್ಳಿಯಲ್ಲಿ ಕಾಣಬಹುದಾಗಿದ್ದ, ಸಂದು ಹೋದ ಒಂದು ಬಾಳಿನ ವಿಜೃಂಭಣೆ ಇಲ್ಲಿ ಕಣ್ಣಿಗೆ ಕಟ್ಟಿ ನಿಲ್ಲುತ್ತದೆ.

ಇಷ್ಟೆಲ್ಲ ಗುಣಾಂಶಗಳಿದ್ದರೂ, ದೊಡ್ಡಮನೆ ಕಾದಂಬರಿ, ಗುಣಗಳನ್ನು ಗೌಣವನ್ನಾಗಿಸಿ ಮಸುಳಿಸುವ ದೋಷಗಳಿಂದಾಗಿ ‘೭೨ರ ಗಮನಾರ್ಹ ಕಾದಂಬರಿ’ ಆಗಿದ್ದೂ, ಕನ್ನಡದ ಅತ್ಯುತ್ತಮ ಪ್ರಾತಿನಿಧಿಕ ಕಾದಂಬರಿ ಆಗುವುದಿಲ್ಲ.

ಬಾಳೇ ಬಂಗಾರ (ಎಸ್.ವಿ. ಶ್ರೀನಿವಾಸರಾಯ) ಕಾದಂಬರಿಯ ಮೊದಲನೆಯ ಪುಟದಲ್ಲೇ ಕಣ್ಣಿಗೆ ಚುಚ್ಚುತ್ತದೆ: ಧಾರಾವಾಹಿಯಾಗಿ ಪ್ರಕಟವಾದಾಗ ಇದಕ್ಕಿದ್ದ ಕಾಡಬೆಳದಿಂಗಳು ಎಂಬ ಹೆಸರು, ಚಲನಚಿತ್ರವಾಗುತ್ತಿರುವ ಕಾದಂಬರಿ ಎಂಬ ಜಾಹಿರಾತು.

ಈ ಕೃತಿಯನ್ನು ಸಾಹಿತಿಗಳಲ್ಲದಿದ್ದರೂ ಇಬ್ಬರು ಚಿತ್ರತಯಾರಕರು ಮೆಚ್ಚಿದ್ದಾರೆ. ಏಕೆಂದರೆ ಇದು ಸಾಹಿತ್ಯಮೌಲ್ಯವಿಲ್ಲದ ಕೃತಿ: ಚಲನಚಿತ್ರಕ್ಕೆ ಹೇಗೋ ತಿಳಿಯದು. ಗಂಭೀರವಾದ ಚಿಂತನೆ, ವೈಚಾರಿಕತೆ, ಓದುಗರನ್ನು ಸೆರೆಹಿಡಿಯಬಲ್ಲ ಸೊಗಸು ಯಾವುದೂ ಇಲ್ಲ. ಅಘಟಿತ ಘಟನೆಗಳ ಹುಚ್ಚುಹಿಡಿದ ಯಾಂತ್ರಿಕ ವರದಿಯಿದು. ಮುಂಬಯಿಯ ಬದುಕು ಇಲ್ಲಿ ಬಹು ಚೆನ್ನಾಗಿ ಬಂದಿದೆಯೆಂದು ಚಿತ್ರತಯಾರಕರು ನುಡಿದಿದ್ದಾರೆ. ಕಾದಂಬರಿ ಓದಿದ ಮೇಲೆ ಮುಂಬಯಿಯ ಸಮುದ್ರದಂಡೆ ಬೀದಿ-ಚಿತ್ರಮಂದಿರಗಳ ಹೆಸರು ಬಂದಿದೆಯೆಂದು ಒಪ್ಪಬಹುದು. ವಾಸ್ತವವಾಗಿ ಒಂದು ಕೃತಿಯ ವಿಮರ್ಶೆಮಾಡುವುದು ಒಂದು ಊರಿನ ಚಿತ್ರ ಚೆನ್ನಾಗಿ ಬಂದಿದೆಯೋ ಇಲ್ಲವೋ ಎಂದಲ್ಲ. ಆ ಕೃತಿ ಎಷ್ಟರಮಟ್ಟಿಗೆ ಸಾಹಿತ್ಯಕೃತಿಯಾಗಿ, ಕಲೆಯಾಗಿ ಬಂದಿದೆಯೆಂಬುದು ಮುಖ್ಯ.

ತುಮಕೂರು ತಾಲೂಕು ಆಫೀಸಿನ ಗುಮಾಸ್ತೆ ನರಸಿಂಗರಾಯನ ಮಗಳು ನರ್ಮದೆಯ ಬಾಳು ಇಲ್ಲಿ ಕೇಂದ್ರ. ಹೊಳವನಹಳ್ಳಿಯ ಶಾಮಾಶಾಸ್ತ್ರಿ ಮಗ ಶ್ಯಾಮ ಸುಂದರ ಅವಳ ಗಂಡ. ಅವನೊಡನೆ ಕಳೆದ ಸಂತೋಷದ ದಿನಗಳು ಪೂರ್ವಾರ್ಧ, ಅವನ ಸಾವಿನ ಅನಂತರ ಕಳೆದ ಕಷ್ಟದ ದಿನಗಳು ಉತ್ತರಾರ್ಧ- ಇದು ವಸ್ತು. ಬಾಲ್ಯದಲ್ಲಿ ಬಡತನ ಅನುಭವಿಸಿದರ ಮದುವೆಯಾದಾಗ ಉಲ್ಲಾಸದ ಬದುಕು ದೊರೆಯಿತೆಂದು ತಿಳಿದಳು. ಆದರೆ ಬದುಕಿನ ಮುಂದಿನ ದಿನಗಳು ಅವಳು ಎಣಿಸಿದಂತೆ ಸುಖದ ಸುಪ್ಪತ್ತಿಗೆ ಆಗಲಾರದೆಂದು ಅಪಶಕುನ ಸೂಚಿಸಿತು: ಮಂಗಳ ಗೌರಿ ವ್ರತದಂದು ಭಕ್ತಿಯಿಂದ ಧಾರಾಳವಾಗಿ ಹರಿದ್ರಾಕುಂಕುಮ ಹೂವು ಪೂಜೆ ಮಾಡಿ ಪತಿಗೆ ದೀರ್ಘಾಯಸ್ಸು ಬೇಡಿ ಆರತಿ ಬೆಳಗಲು ಪಕ್ಕದ ಮನೆಯ ಸೋನಾಬಾಯಿಯನ್ನು ಕರೆಯಲು ಉತ್ಸಾಹದಿಂದ ಎದ್ದಾಗ ಚಿಮ್ಮಿದ ಸೀರೆಯ ಜರತಾಗಿ ಅಂಚು ಕಾಲಿಗೆ ತೊಡಗಿ ದೊಪ್ಪನೆ ಬಿದ್ದಾಗ, ಗಂಡನಿಲ್ಲದ ಒಂಟಿ ಹೆಣ್ಣು ಕೆಲಸಕ್ಕೆ ಸೇರಿದಳು. ಕಚೇರಿಯ ಜನ ಕಣ್ಣೂ ಹಾಕುತ್ತಿದ್ದರು. ಸೂಪರಿಂಟೆಂಡೆಂಟರ ಖಾಸಗಿ ಜವಾನ ನಾರಾಯಣಜಾದವ ನರ್ಮದೆ ಒಬ್ಬಳೇ ಇದ್ದಾಗ ‘ನೀನು ಏಟು ಚೆಂದಾಕಿದ್ದೀಯ’ ಎಂದು ಸಲುಗೆ ತೋರಿದ, ನರ್ಮದೆ ಮಾತ್ರ ಸಹೋದ್ಯೋಗಿ ನರಗುಂದನಿಗೆ ಸೋತಳು. ಆದರೆ ನರಗುಂದನ ಮಾವ, ಭಟ್, ರೀಟಾಳ ಮನೆ- ಎಲ್ಲ ಅವಳ ದೇಹದ ಮೇಲೆ ಧಾಳಿಗೆ ಧಾವಿಸಿತು, – ಹೀಗೆ ಈ ಕಾದಂಬರಿಯಲ್ಲಿ ಮಾತ್ರ ಸಾಧ್ಯವಾಗು ಅವಾಸ್ತವ ಘಟನೆಗಳು ನಡೆಯುತ್ತವೆ.

ಕಾದಂಬರಿಯ ಕಥಾಸೂತ್ರ ಹೆಣೆದುಕೊಂಡು ಹೋಗುವಾಗ ಉದ್ದಕ್ಕೂ ಕಡಿದು ಕತ್ತರಿಸಿದಂತೆ ತುಂಡುತುಂಡಾಗಿ ನಿಲ್ಲುತ್ತದೆ. ಮತ್ತೆ ಹರಿದ ಚೂರುಗಳನ್ನು ಕೂಡಿಸಿದಂತೆ ಮುಂದುವರಿಯುತ್ತದೆ. ಈ ನೆಲದ ಮಣ್ಣಿನ ವಾಸನೆಯಿಲ್ಲದೆ ಕಾದಂಬರಿ ನಿರ್ಜೀವ ಬೊಂಬೆಯಾಗಿದೆ. ಇಡೀ ಕಾದಂಬರಿ ಚಲನಚಿತ್ರವಾಗಲು ಹೇಳಿಸಿ ಬರೆದಂತಿದೆ.

ಕನಸಿನ ಬಳ್ಳಿ (ಡಾ|| ಎನ್. ಬಿ. ಮೊಗಸಾಲೆ) ವೈದ್ಯನೊಬ್ಬನ ಜೀವನವನ್ನು ಕೃತಕವಾಗಿ ಚಿತ್ರಿಸ ಹೊರಟಿದ್ದರಿಂದ ಸಹಜವಾಗಿಯೇ ಅಯಶಸ್ವಿಯಾಗಿದೆ. ಡಾ|| ಸದಾನಂದನಿಗೆ ವ್ಯಕ್ತಿತ್ವವೇ ಇಲ್ಲ. ನರ್ಸ್‌ವಸಂತಿ ಕಾದಂಬರಿಕಾರರು ಬೇಕೆಂದಾಗ ಹೃದಯಘಾತದಿಂದ ಸಾಯಲೆಂದೇ ತಂದ ಪಾತ್ರ. ಕಾರಂತರ ಮಗಳು ಪಾರ್ವತಿ, ರಾಘವ ಲೆಕ್ಕಾಚಾರದಿಂದ ಪಾತ್ರಗಳಾಗಿ ಹೊಕ್ಕಿದ್ದಾರೆ. ಸಿನಿಮೀಯ ತಂತ್ರವನ್ನಾಶ್ರಯಿಸಿ ಕಲೆಯನ್ನು ಬಲಿಕೊಟ್ಟ ಕಾದಂಬರಿಯಿದು. ಇಂಥ ಅಪಕ್ಷ ಸತ್ವಹೀನ ಕಾದಂಬರಿಗಳು ಈ ವರ್ಷ ಹಲವಾರಿವೆಯಾದುದರಿಂದ ಇದೊಂದನ್ನೇ ಟೀಕಿಸಿ ಪ್ರಯೋಜನವಿಲ್ಲ.

ದಾರಿತೋರೋ ಪುರಂಧರಾ (ಆರ್. ಸೂರ್ಯನಾರಾಯಣಮೂರ್ತಿ) ಅಸಂ ಭಾವ್ಯತೆಯಿಂದ ಅನಿರ್ದಿಷ್ಟವಾಗಿ ಸಾಗುವ ದೋಷಗಳ ಮೂಟೆ.

ಸವ್ಯಸಾಚಿ ಪಂಪ (ಹಂಪ. ನಾಗರಾಜಯ್ಯ) ಕನ್ನಡದ ಆದಿಕವಿಯನ್ನು ಕುರಿತು ಬರೆದ ಮೊಟ್ಟಮೊದಲ ಐತಿಹಾಸಿಕ ಕಾದಂಬರಿ. ವಿಮರ್ಶಕರು ಇದರ ಬಗೆಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಲ್ಲಿ ಎರಡನ್ನು ಇಲ್ಲಿಯ ಉದಾಹರಿಸಿದೆ: “ಸವ್ಯಸಾಚಿ ಪಂಪ ಕಾದಂಬರಿಯ ಪ್ರಕಾಶನ ಸಕಾಲಿಕವಾಗಿದೆಯೆನ್ನಬಹುದು. ಏಕೆಂದರೆ ಅದರ ಪ್ರತಿಭಾವಂತ ಲೇಖಕರು ಅದರಲ್ಲಿ ಪಂಪನ ಹುಟ್ಟು, ಬಾಲ್ಯ, ವಿದ್ಯಾಭ್ಯಾಸ, ಮದುವೆ, ರಾಷ್ಟ್ರಸೇವೆ ಕಾವ್ಯರಚನೆಗಳನ್ನೂ, ಅವನ ಕವಿ ವ್ಯಕ್ತಿತ್ವ ವಿಶಿಷ್ಟ ರೀತಿಯಲ್ಲಿ ಅರಳುತ್ತ ಬಂದ ಹಿನ್ನೆಲೆಯನ್ನೂ ತುಂಬ ಕುಸುರಿನಿಂದ ಬಣ್ಣಿಸಿದ್ದಾರೆ. ಈ ಕಾದಂಬರಿಯನ್ನು ಓದುವವರಿಗೆ ಪಂಪನ ಹಿರಿಮೆಯ ಮನವರಿಕೆಯಾಗುವುದಲ್ಲದೆ ಅವನು ಬಾಳಿದ ಕಾಲದ ಸಮಾಜ ಪರಿಸ್ಥಿತಿ, ಜೈನಧರ್ಮದ ಪ್ರಭಾವದಿಂದ ತುಂಬಿದ ವಾತಾವರಣ, ಜೈನ ವಿಭೂತಿಗಳ ದರ್ಶನ ಮತ್ತು ಆಗ ಪ್ರಚಾರವಾದ ತಿರುಳ್ಗನ್ನಡದ ಅಂದ ಚೆಂದಗಳ ಸಾಕ್ಷಾತ್ಕಾರವೂ ಆಗುವುದು” (ಡಾ. ಎಂ. ಗೋಪಾಲಕೃಷ್ಣ ರಾವ್, ದೀರ್ಘಾಯು ಪುಟ ೨೫).

“ಸವ್ಯಸಾಚಿ ಪಂಪ ಕನ್ನಡದ ಹಿರಿಯ ಕವಿಯೊಬ್ಬನ ಬದುಕು ಚಿಂತನೆ ರಚನೆಗಳನ್ನು ಇಂದಿನ ಸಾಹಿತ್ಯ ಮಾಧ್ಯಮಗಳಲ್ಲಿ ಹೆಚ್ಚು ಜನಕ್ಕೆ ತಾಗಬಲ್ಲ ಕಾದಂಬರಿಯ ರೂಪದಲ್ಲಿ ಆದಷ್ಟು ಸಂಗ್ರಹವಾಗಿ ಕಟ್ಟಿಕೊಡುವ ಪ್ರಯತ್ನದಲ್ಲಿ ಮೈದಾಳಿರುವ ಕೃತಿ. ಹಳೆಯ ಕವಿ ಕೃತಿಗಳತ್ತ ಜನಸಾಮಾನ್ಯರ ಆಸಕ್ತಿಯನ್ನು ಸೆಳೆಯಲಿಕ್ಕೆ ಈ ರೀತಿಯ ಪ್ರತ್ಯನ ತುಂಬಾ ಫಲಕಾರಿ ಎಂದು ತೋರುತ್ತದೆ. …ಪಂಪನ ಬಗ್ಗೆ ಮಹಿತಿ ಒದಗಿಸುವ ದೊರಕಿರುವ ಎಲ್ಲ ಶಾಸನ ಸಾಮಗ್ರಿಗಳನ್ನು ತಮ್ಮ ಕಾದಂಬರಿಯಲ್ಲಿ ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. ದೊರೆತ ಸಾಮಗ್ರಿಗಳನ್ನೆಲ್ಲಾ ಒಂದು ವ್ಯವಸ್ಥಿತ ಕ್ರಮದಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ್ದಾರೆ.

“ಕಾದಂಬರಿಯಲ್ಲಿ ಕಂಡುಬರುವ ಕೆಲವು ಒಳ್ಳೆಯ ಗುಣಗಳು ಸಹೃದಯರಿಗೆ ತುಂಬಾ ತೃಪ್ತಿ ನೀಡುವಂಥವು; ಮುಖ್ಯವಾಗಿ ಆಕರ್ಷಕ ಬರವಣಿಗೆ, ಅನೇಜ ಜೈನ ಧರ್ಮದ ಪಾರಿಭಾಷಿಕ ಶಬ್ದಗಳನ್ನು ಬಳಸಿ ಕೃತಿಗೆ ತತ್ಕಾಲೀನ ಆವರಣವನ್ನು ಕಲ್ಪಿಸಿರುವ ಬಗೆ. ಪಂಪನ ದಾಂಪತ್ಯ ಜೀವನದ ರಸಮಯ ಚಿತ್ರಣಗಳು, ಪಂಪನ ಕಾವ್ಯಗಳ ಅತ್ಯಂತ ಉತ್ಕಟ ಭಾಗಗಳಿಗೆ ಅವನ ಸ್ವಂತ ಅನುಭವದ್ದೇ ಪ್ರಚೋದನೆ ಇರಬೇಕೆಂಬ ಸೂಚನೆ – ಇತ್ಯಾದಿ. ಇವನ್ನು ಗಮನಿಸಿದಾಗ ಶ್ರೀಯುತರ ಮುಂದಿನ ಕೃತಿಗಳ ಬಗ್ಗೆ ಸಹೃದಯರು ಇನ್ನೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಹುದೆಂದು ತೋರುತ್ತದೆ.” (ಜೀವನ, ೩೨-೧೧)

ಸವ್ಯಸಾಚಿ ಪಂಪ ಒಂದು ಉಲ್ಲೇಖನೀಯ ಚಾರಿತ್ರಿಕ ಕಾದಂಬರಿಯಾದರೂ ಪಂಪನ ಸಮಗ್ರ ಜೀವನಚಿತ್ರವನ್ನು ತುಂಬಿಕೊಡುವುದರಲ್ಲಿ ಅಷ್ಟು ಯಶಸ್ವಿಯಾಗಿಲ್ಲ. ಪಂಪನ ಪೂರ್ವ ವಯಸ್ಸಿನ ಸುಂದರ ಚಿತ್ರಣ ಅದೇ ಪ್ರಮಾಣದಲ್ಲಿ ಆಮೇಲಿನ ಬದುಕಿನಲ್ಲಿ ಕಾಣವುದಿಲ್ಲ. ಬಹುಮುಖ್ಯವಾಗಿ ಪಂಪ ವಿಕ್ರಮಾರ್ಜುನ ವಿಜಯ ಮಹಾಕಾವ್ಯವನ್ನು ರಚಿಸಿದಾಗಿನ ಸಂದರ್ಭ ವಿಶೇಷವಾಗಿದ್ದು ಪರಿಣಾಮಕಾರಿಯಾಗಿ ಬಂದಿಲ್ಲ.

ಕರ್ತಾರನ ಕಮ್ಮಟ (ಡಾ|| ತಿಪ್ಪೇರುದ್ರಸ್ವಾಮಿ) ಈ ವರ್ಷದ ಮೂರು ಬೃಹತ್ ಕಾದಂಬರಿಗಳಲ್ಲೊಂದು, ಎರಡು ಚಾರಿತ್ರಿಕ ಕಾದಂಬರಿಗಳಲ್ಲೊಂದು. ಕನ್ನಡ ನಾಡನ್ನು ಹಲವು ಮೊಗನಾಗಿ ಹಬ್ಬಿನಿಂತ ಬಸವಣ್ಣನವರ ಹಾಗೂ ಅವರ ಸಮಕಾಲೀನ ವಿರಾಡ್ ರೂಪವನ್ನು ಕಾದಂಬರಿಯ ಚೌಕಟ್ಟಿಗೆ ಒಗ್ಗಿಸಿಕೊಳ್ಳುವುದು ಸಾಹಸದ ಕೆಲಸ. ಲೇಖಕರಿಗೆ ಇದಕ್ಕೆ ಬೇಕಾದ ಸಿದ್ಧತೆ ಸಾಕಷ್ಟಿದೆ ಎಂಬುದಕ್ಕೆ ಅವರ ಹಿಂದಿನ ಇಂಥದೆ ವಸ್ತುವನ್ನು ಕುರಿತು ಬರೆದ ಎರಡು ಕಾದಂಬರಿಗಳು (ಪರಿಪೂರ್ಣದೆಡೆಗೆ, ಕದಳಿಯ ಕರ್ಪೂರ) ಸಾಕ್ಷಿ. ವಾಸ್ತವವಾಗಿ ಅವೆರಡೂ ಕಾದಂಬರಿಗಳನ್ನು ಓದಿದ ಮೇಲೆಯೇ ಇದನ್ನು ಓದುವುದು ಹೆಚ್ಚು ಪ್ರಯೋಜನಕಾರಿಯಾದೀತು. ಅಂದ ಮಾತ್ರಕ್ಕೆ ಅಲ್ಲಿನ ವಸ್ತುಪಾತ್ರಗಳನ್ನೇ ಇಲ್ಲಿ ಬಳಸಿಕೊಂಡು ಕಾದಂಬರಿಯನ್ನು ಬೆಳಸಿದ್ದಾರೆಂದು ಅರ್ಥೈಸಬಾರದು. ಅವುಗಳನ್ನು ಹಿನ್ನೆಲೆಯಲ್ಲಿಟ್ಟಾಗಲೂ ಇದೇ ಒಂದು ಸ್ವತಂತ್ರ ಕಾದಂಬರಿ.

ಕರ್ತಾರನ ಕಮ್ಮಟ ಮೂರು ಸಂಪುಟಗಳಲ್ಲಿ ಹರಡಿಕೊಂಡು ಒಟ್ಟು ೧೦೭೨ ಪುಟಗಳಿರುವ ಚಾರಿತ್ರಿಕ ಕಾದಂಬರಿ. ಬಸವಣ್ಣ ಇಲ್ಲಿಯ ನೆತ್ತಿಯಾಗಿ ನಿಲ್ಲುತ್ತಾನೆ. ಉಳಿದೆಲ್ಲರೂ ಎಲ್ಲವೂ ಆ ಶಿಖರದ ಎತ್ತರ ಬಿತ್ತರಗಳಿಗೆ ಪೂರಕ. ಒಬ್ಬ ಸಾಮಾಜಿಕ ಕ್ರಾಂತಿಕಾರನಾಗಿ, ರಾಜಕೀಯದ ನಡುವೆಯೂ ಎರಡು ತೊಡರುಗಳನ್ನು ದಾಟಿಬಂದವನಾಗಿ, ಧಾರ್ಮಿಕ ರಂಗದಲ್ಲಿ ಹೊಸ ಬೆಳೆತಂದ ಕರ್ತಾರನಾಗಿ ಬಸವಣ್ಣನ ಬದುಕು ಸ್ತರಸ್ತರವಾಗಿ ಬಿಚ್ಚಿಕೊಂಡು ಕೂಡಿಕೊಂಡು ಸಾಗುತ್ತದೆ. ಅವನ ಬಾಳು ಮಹಾನದಿಯಾಗಿ ಹರಿಯುತ್ತದೆ.

ಇಲ್ಲಿ ಬಸವಣ್ಣ ಒಬ್ಬ ಪವಾಡಪುರುಷ ಇಲ್ಲವೇ ಕೇವಲ ಕಾರಣಿಕನಾಗಿಲ್ಲ. ಆತ ಒಬ್ಬ (ಐತಿಹಾಸಿಕ) ವ್ಯಕ್ತಿಯಾಗಿ ಚಿತ್ರಿತನಾಗಿದ್ದಾನೆ. ಇದು ಸಿಕ್ಕಗೋಜುಗಳನ್ನು ಬಿಡಿಸಿ ಜಾಲಾಡಿಸಿ ಗ್ರಹ್ಯಮೂರ್ತಿಯನ್ನು ಕಡೆದುಕೊಡುವಲ್ಲಿ ಅನುಸರಿಸಬೇಕಾದ ಮಾರ್ಗ. ಇದಕ್ಕಾಗಿ ಸಾಹಿತ್ಯ ಕೃತಿಗಳನ್ನೂ, ಶಾಸನ ಸಾಮಗ್ರಿಯನ್ನೂ ಸ್ವತಃ ಬಸವಣ್ಣನದೇ ಆಗಿರಬಹುದಾದ ವಚನಗಳನ್ನು ಬಳಸಿಕೊಂಡಿರುವುದು ಕಂಡುಬರುತ್ತದೆ.

ಕಾದಂಬರಿಕಾರರು ಆಸಕ್ತಿ ಉಳಿಯುವಂತೆ ಅಚ್ಚುಕಟ್ಟಾಗಿ ಕತೆ ಹೇಳುತ್ತಾರೆ. ಬಸವಣ್ಣ ಬಲದೇವರಸನ ಅಳಿಯನಾಗುವ ಸೂಚನೆಯೊಡನೆ ಕಾದಂಬರಿಯ ಮೊದಲ ಸಂಪುಟ ಮುಗಿಯುತ್ತದೆ. ಬಲದೇವರಸ ಹಾಗೂ ಸಿದ್ಧರಸ ಬಿಜ್ಜಳನ ಮಂತ್ರಿಗಳಾಗಿರುವುದೂ ಅವರಿಬ್ಬರ ಮಗಳಂದಿರಾದ ಗಂಗಾಂಬಿಕ, ನೀಲಲೋಚನೆಯರು ಅಕ್ಕತಂಗಿಯರಂತೆ ಬೆಳೆದು ಇಬ್ಬರೂ ಬಯಸಿ ಬಯಸಿ ಬಸವನಿಗೆ ಮಡದಿಯರಾದದ್ದೂ ಚಾತುರ್ಯದಿಂದ ಕೂಡಿಬಂದಿದೆ. ಮುಂದೆಯೂ ಲೆಕ್ಕಾಚಾರದ ದಾಂಪತ್ಯ ನಡೆಸಿದಂತೆ ತೋರುತ್ತದೆ. ಕಾದಂಬರಿಯ ಎರಡನೆಯ ಸಂಪುಟದ ಆರಂಭದಲ್ಲಿ ಅಡಿಯಿಟ್ಟರೂ ಬಿಜ್ಜಳ ಅಲ್ಲಿಂದ ಮುಂದೆ ಬರುವ ಪಾತ್ರಗಳಲ್ಲಿ ಕಡೆದು ಮೂಡುತ್ತಾನೆ.

ಬಿಜ್ಜಳ ತಾನು ಕನ್ನೆಯ ಅಣ್ಣನಾಗಿ ಬಸವಣ್ಣನನ್ನು ಪ್ರಾರ್ಥಿಸುವುದರಲ್ಲಿ ಜಾಣ್ಮೆ ಇದೆ, ಕಲಾವಂತಿಕೆ ಇಲ್ಲ. ಬಿಜ್ಜಳನ ಬಳಿ ಶ್ರೀಕರಣ ಸಾರ್ವಾಧಿಕಾರಿಯಾಗಿ ಒಪ್ಪಿ ಮನೆಗೆ ಹೋಗಿ ಅಕ್ಕನ ಬಳಿ ಗೋಳು ನಿವೇದಿಸಿಕೊಂಡಂತೆ ಹೇಳಿದ ಅಸಮ್ಮತಿ ಸೂಚನೆ ಶೋಭಿಸುವುದಿಲ್ಲ. ಲಿಂಗಕಟ್ಟುವ ಕೆಲಸ ಸಲೀಸಾಗಿ ನಡೆದುಬಿಡುತ್ತದೆ. ಆದರೆ ಅಂಬಿಗರ ಚೌಡಯ್ಯ ಲಿಂಗದೀಕ್ಷೆಗೆ ಅನುವಾಗುವ ಸಂದರ್ಭ, ಹರಳಯ್ಯ ಮಧುವಯ್ಯನವರ ಪ್ರಸಂಗ ಸ್ವಾರಸ್ಯದಿಂದ ಕೂಡಿದೆ.

ಕಾದಂಬರಿ ತಡೆಯಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಬಸವಣ್ಣನ ಭೂಮ ವ್ಯಕ್ತಿತ್ವದ ಬಹ್ವಂಶದ ಗಾಢಪರಿಚಯವಾಗುವಂತೆ ಅಲ್ಲಮಪ್ರಭು, ಚೆನ್ನಬಸವಣ್ಣ, ಸಿದ್ಧರಾಮ, ಮಹಾದೇವಿಯಕ್ಕ – ಇವರ ವ್ಯಕ್ತಿತ್ವದ ಪರಿಚಯವಾಗದಿರುವುದಕ್ಕೆ ಇದು ಪ್ರಧಾನವಾಗಿ ಬಸವಣ್ಣನನ್ನು ಕುರಿತ ಕಾದಂಬರಿ ಎಂಬುದು ಕಾರಣವಾಗಿರಬಹುದು. ಹಾಗೆಂದು ಅವರ ಪಾತ್ರಗಳು ನಿರ್ಜೀವವಾಗಿಲ್ಲ. ಅಲ್ಲಮನ ಪಾತ್ರ ಮಾತ್ರ ಇನ್ನೂ ಸಹಜವಾಗಿ ಬರಬೇಕೆನ್ನಿಸುತ್ತದೆ. ಮಹಾಮನೆ, ಅನುಭವ ಮಂಟಪ. ಕಲ್ಯಾಣನಗರ, ಶರಣರ ಬಾಳು, ಕಾಯಕದ ಮಹತ್ವ, ಅದರ ಅರಿವು – ಇವೆಲ್ಲ ಒಪ್ಪವಾಗಿ ರೂಪಗೊಂಡಿವೆ.

ಬಿಜ್ಜಳನ ಕೊಲೆಯ ಪ್ರಸಂಗದಲ್ಲಿ ಸೋವಿಲನ ಸಂದೇಹದ ಸೋಗು ಬೇಕಿರಲಿಲ್ಲ. ಬಿಜ್ಜಳನ ಕೊಲೆಗೆ ಕಾರಣರಾದವರಲ್ಲಿ ಅವನೂ ಒಬ್ಬನೆಂದು ಸೇರಿಸುವ ಪ್ರಯತ್ನ ಬಿಟ್ಟು ನೇರವಾಗಿ ಕಸಪಯ್ಯನ ಕಡೆಯ ಆಳುಗಳ ಕೈವಾಡಕ್ಕೆ ಮೀಸಲಿರಿಸಬಹುದಿತ್ತು. ಅಂತೂ ಭ್ರಾಂತುಜನ್ಯವಾದ ಶರಣರೇ ಬಿಜ್ಜಳನ ಕೊಲೆಗಾರರು ಎಂಬ ಹೇಳೀಕೆಗೆ ಮೂಲವಾಗಿರಬಹುದಾದ ಸನ್ನಿವೇಶವನ್ನು ಚಲೋದಾಗಿ ಚಿತ್ರಿಸಿದ್ದಾರೆ. ಕಾದಂಬರಿಯ ಉತ್ತರಾರ್ಧದ ಚುರುಕುಗತಿ ಪೂರ್ವಾರ್ಧದಲ್ಲಿಲ್ಲ.

ಶಿವಸ್ವಾಮಿ ಹೆಂಡತಿ, ಬಸವನ ತಂಗಿ ನಾಗಮ್ಮನ ಮಾವ ನೀಲಕಂಠಶಾಸ್ತ್ರಿ ಕಾದಂಬರಿಕಾರರು ಹೇಳಿದಂತೆ ಹೇಳುವ ಗೊಂಬೆಗಳಾಗಿದ್ದಾರೆ. ಹಾಗೆ ನೋಡುವುದಾದರೆ ಕಾದಂಬರಿ ತನ್ನತನವನ್ನು ಕಂಡುಕೊಳ್ಳುವದೇ ಶಿವಸ್ವಾಮಿ ನಾಗಮ್ಮ ಲಿಂಗಧಾರಣೆಗೆ ಅಣಿಯಾಗುವ ಸಂದರ್ಭದಿಂದ. ಅಲ್ಲಿಂದಾಚೆಗೆ ಬಸವಣ್ಣನೂ ಈ ನೆಲದ ಮಗನಾಗಿ ವಾಸ್ತವದ ನೆಲಗಟ್ಟಿನ ಮೇಲೆ ಕಾಲೂರುತ್ತಾನೆ. ಚೆನ್ನಬಸವಣ್ಣ ಬಂದ ಮೇಲೆ ಅದರ ಗತಿಯನ್ನು ಗುರುತಿಸಬಹುದು. ಕಾಳಿಮರಸನನ್ನು ಶಿಷ್ಯನನ್ನಾಗಿಸಿಕೊಂಡ ಘಟನೆ ಅವಶ್ಯಕವೆನಿಸುವುದಿಲ್ಲ. ಸುವರ್ಣಾಂಬೆ, ಶಿವದೇವಯ್ಯ, ಮಾದಾಂಬೆ, ಮಾದರಸರು ಬಸವಣ್ಣನಿಗೊಂದು ಪ್ರಭಾವಳಿ ಕಟ್ಟಿಕೊಡುತ್ತಾರೆ; ದೇವರಾಜ ನಾಗಮ್ಮ ಕೂಡ ಇದೇ ಕಾರ್ಯತೃಪ್ತರು.

ಯಜ್ಞೋಪವೀತವನ್ನು ಬಸವಣ್ಣ ಕಿತ್ತುಹರಿದು ಎಸೆಯುವಾಗ ಮತ್ತು ಅದಕ್ಕೆ ಅಗ್ರಹಾರದಲ್ಲಿ ಆಗುವ ಪ್ರತಿಕ್ರಿಯೆಯಲ್ಲಿ ಕಾವು ಇಲ್ಲ. ಕಾದಂಬರಿಯಲ್ಲಿ ವಾಸ್ತವವಾಗಿ ಅದೂ ಒಂದು ಪ್ರಧಾನ ಘಟ್ಟ. ಕಥೆಯ ಓಟಕ್ಕೆ ಹೊಸತಿರುವು ತಂದು ಭಟ್ಟೋಪಾಧ್ಯಾಯರು ದಿವಾಕರರ ಎದುರಿನಲ್ಲಿ ವೇದಾಧ್ಯಯನಕ್ಕೆ ತೊಡಗಿದ ಬಸವಣ್ಣ ಕೊರಳಲ್ಲಿರುವ ಬಟ್ಟೆಯ ಗಂಟನ್ನು (ಲಿಂಗವನ್ನು) ಬಿಚ್ಚುವಂತೆ ತಿಳಿಸಿದಾಗಿನ ಸಂಭಾಷಣೆಯಲ್ಲಿ ಸ್ವಾರಸ್ಯ ಸಾಲದು. ಸಮಕಾಲೀನ ಸಮಾಜದ ಮೇಲಿದ್ದಿರಬಹುದಾದ ಪಾಶುಪತ ಕಾಳಾಮುಖರ ಪ್ರಭಾವ ಗುರುತಿಸಿದ್ದಾರೆ

ಬಸವಣ್ಣನವರ ಬಾಲ್ಯದ ದಿನಗಳು ಇನ್ನೂ ಜೀವಂತವಾಗಿ ಮೂಡಬೇಕಿತ್ತು. ಭುಜಬಲಿಶಾಸ್ತ್ರಿಗಳ ದೇವೇಂದ್ರಪಂಡಿತರ ಪ್ರಸಂಗ ತೇಪೆಯಾಯಿತು. ಕೇತ ಚೌಡರ ಪ್ರಸ್ತಾಪ, ಮುಂದೆ ಅವರ ಪರಿವಾರವೆಲ್ಲ ಬಸವನನ್ನು ಭಗವಂತನೆಂದು ಆರಾಧಿಸುವುದು – ಬೌದ್ಧಿಕ ಸ್ತರದಲ್ಲಿ ನಡೆದಿದೆ, ಕಾದಂಬರಿಯ ಅವಶ್ಯಕ ಅಂಗವಾಗಿ ಹುಟ್ಟಿ ಬೆಳೆದಿಲ್ಲ. ಬಾಗೇವಾಡಿ ಅಗ್ರಹಾರದ ನರಸಿಂಹಪೆದ್ದಿ ಮೊದಲಾದವರು ಕೇತನ (ಚೌಡನ ಮಗ) ಮೇಲೆ ಘೋರಶಿಕ್ಷೆಗೆ ಒತ್ತಾಯಿಸುತ್ತಿರುವಾಗ ಅದರ ಪರಿಹಾರಕ್ಕೆ ಬಸವನ ಜನನವನ್ನು ನಿಮಿತ್ತ ಮಾಡಿದುದು ಹೊಂದಿಕೊಳ್ಳದಿದ್ದರೂ ಚತುರತೆಯಿಂದ ಸೇರಿಸಲು ಪ್ರಯತ್ನಿಸಿದ್ದಾರೆ: ಪುಟ ೨೧೩ ಹಾಗೂ ೨೫೪ ರಲ್ಲಿ ಉದಾಹರಣೆಗಳಿವೆ.

ಶ್ರೀಕಂಠಶಾಸ್ತ್ರಿ ಚೆನ್ನಬಸವಣ್ಣನಿಗೆ ಉಪನಯನಕ್ಕೆಂದು ಮುಹೂರ್ತ ನಿಶ್ಚಯಿಸಿಕೊಂಡು ಬಂದಾಗ ಅವನ ನಡವಳಿಕೆ ವಿಚಿತ್ರವೆನಿಸುತ್ತದೆ. ಈಶಾನ್ಯ ಗುರುಗಳ ಬಗೆಗೆ ವಿಶ್ವಾಸ ಗೌರವಾದರ ತಳೆದಂತೆ ಶಾಸ್ತ್ರಿಗಳ ಪಾತ್ರ ಚಿತ್ರಿಸಿದ ಕಾದಂಬರಿಕಾರರು ಈಗ ಅದರ ವಿರುದ್ಧ ಚಿತ್ರವಿತ್ತಾಗ ಓದುಗರಿಗೆ ತಬ್ಬಿಬ್ಬಾಗುತ್ತದೆ. ಬಸವಣ್ಣ ಬರವಣಿಗೆಗೆ ಒಲಿಯುವ ಸಂದರ್ಭವೂ ಸಪ್ಪೆಯಾಯಿತು. ವಚನಗಳ ಉದಾಹರಣೆಗಾಗಿ ಸನ್ನಿವೇಶ ಹುಟಿಸುವುದು ಸರಿಯಲ್ಲ. ಸನ್ನಿವೇಶದ ಅನುಭವ- ಅನುಭಾವದ ಒತ್ತಡದಿಂದ ಮೂಡಿ ಬಂದ ವಚನಗಳಿಗೆ ಅಪಚಾರವಾಗಬಾರದು.

ಗಾಢಭಾವನೆ, ಅನುಭವದ ಒತ್ತಡದಿಂದ ಸಿಡಿದು ಬರುವ ಕ್ರಿಯಾಸರಪಳಿ ಅಲ್ಲಲ್ಲಿ ತನ್ನ ಕೊಂಡಿಯನ್ನು ಕಳಚಿಕೊಳ್ಳುತ್ತದೆ. ಇದ್ದಕ್ಕಿದ್ದ ಹಾಗೆ ಬರವಣಿಗೆ ಪ್ರವಾಸಿಯ ಕೈಪಿಡಿಯಂತೆ, ದಿನಚರಿಯಿಂದ ಕಿತ್ತಹಾಳೆಗಳನ್ನು ಕಾದಂಬರಿಗಳಿಗೆ ಅಂಟಿಸಿದಂತೆ ಭಾಸವಾಗುತ್ತದೆ. ಹೊರಬದುಕಿನ ಸಿಕ್ಕು ಸಮಸ್ಯೆಗಳನ್ನು ನಿರಾಯಾಸವಾಗಿ ನಿರೂಪಿಸುತ್ತಾರೆ, ಮನಸ್ಸಿನ ಒಳಪದರಗಳನ್ನು ಬಿಚ್ಚಿತೋರಿಸುವುದರಲ್ಲಿ ನಿರಾಸಕ್ತರಾಗುತ್ತಾರೆ. ಪಾತ್ರಗಳ ಸ್ಥಳಗಳ ಹೆಸರುಗಳನ್ನು ಹೇಳುವಾಗ ‘ಅಥವಾ’ ಎಂಉದ ಸೇರಿಸಿ ನಿರೂಪಿಸಿರುವ ಧಾಟಿ ಚಾರಿತ್ರಿಕ ಕಾದಂಬರಿಗೆ ತಗದು. ಬಿ.ಪುಟ್ಟಸ್ವಾಮಯ್ಯನವರ ಕಲ್ಯಾಣ ಕ್ರಾಂತಿ ಕಾದಂಬರಿ ಶ್ರೇಣಿಯೊಡನೆ ಈ ಕಾದಂಬರಿಯ ತುಲನಾತ್ಮಕ ಅಧ್ಯಯನ ಸ್ವಾರಸ್ಯಕರವೆನಿಸಿದರೂ ಇಲ್ಲಿ ಅಂಥ ಪ್ರಯತ್ನಕ್ಕೆ ಅವಕಾಶದ ಅಭಾವವಿದೆ.

(ಸಾಹಿತ್ಯ ವಾರ್ಷಿಕ ೧೯೭೨: ಸಂಪಾದಕರು, ಜಿ.ಎಸ್. ಶಿವರುದ್ರಪ್ಪ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ೧೦೭೪)

* * *