ಧರ್ಮನಾಥಪುರಾಣಕ್ಕೆ ಬಳಸಕೊಂಡ ನಾಲ್ಕು ಪ್ರತಿಗಳಲ್ಲಿ ಮೂರು ಪ್ರತಿಗಳು ಮೂಡಬಿದ್ರಿಯವೆಂಬುದು ಗಮನಾರ್ಹ. ಇದರಿಂದಾಗಿ ಕ ಗ ಚ ಪ್ರತಿಗಳಲ್ಲಿ ಪಾಠಾಂತರಗಳು ಅತಿ ಕಡಮೆ. ಇವು ಮೂರು ಪ್ರತಿಗಳು ಒಂದೇ ಮೂಲ ಪ್ರತಿಯ ನಕಲುಗಳೆಂದು ಧಾರಾಳವಾಗಿ ತಿಳಿಯಲವಕಾಶವಿದೆ. ಕ ಮತ್ತು ಚ ಪ್ರತಿಗಳೆರಡೂ ಶಕ ೧೩೪೨ (ಅಂದರೆ ಕ್ರಿ.ಶ. ೧೪೨೦) ರಲ್ಲಿ ಪ್ರತಿಯಾಗಿವೆ. ಇವೆರಡೂ ಕಾರ್ಕಳದ ಲಲಿತಕೀರ್ತಿ ಭಟ್ಟಾರಕರ ಶಿಷ್ಯ ದೇವರಶೆಟ್ಟಿ ಬರೆಸಿಕೊಟ್ಟ ಪ್ರತಿಗಳು. ಸ್ವಾರಸ್ಯವೆಂದರೆ ಕ ಮತ್ತು ಚ ಪ್ರತಿಗಳು ಪ್ರತ್ಯೇಕವಾಗಿರದೆ ಒಂದೇ ಆಗಿದೆಯೆಂಬುದು. ಇದನ್ನು ಆಂತರಿಕ ಪ್ರಮಾಣಾಧಾರಗಳಿಂದ ಅಸ್ಖಲಿತವಾಗಿ ಸ್ಥಾಪಿಸಬಹುದು.

ಮೂಡಬಿದ್ರಿಯಲ್ಲಿದ್ದ ಲೋಕನಾಥ ಶಾಸ್ತ್ರಿಗಳಿಂದ (ಕ) ಓಲೆಗರಿ ಪ್ರತಿಯನ್ನು ಮೈಸೂರಿನವರು ತರಿಸಿಕೊಂಡು ಅದರ ಪ್ರತಿ ಮಾಡಿಕೊಂಡರು, ಹೀಗೆ ಬರೆದುಕೊಂಡ ಕಾಗದದ ಪ್ರತಿಯೇ ‘ಕ’ ಪ್ರತಿ, ಪ್ರತಿ ಎತ್ತಿದ್ದು ಆದ ಮೇಲೆ ಮೂಲ ಓಲೆಗರಿ ಪ್ರತಿಯನ್ನು ಮೈಸೂರಿನವರು ಮೂಡಬಿದ್ರಿಗೆ ಹಿಂತಿರುಗಿಸಿದರು. ಇತ್ತೀಚೆಗೆ, ಮತ್ತೆ ಆಧುನಿಕ ಉಪಕರಣಗಳ ನೆರವು ದೊರೆತ ಮೇಲೆ ಮೈಸೂರಿನವರು ಪುನಃ ಮೂಡಬಿದ್ರಿಗೆ ಹೋಗಿ, ಈ ಹಿಂದೆ ಆಗಲೇ ತರಿಸಿ ಕಾಗದದ ಪ್ರತಿಮಾಡಿಕೊಂಡು ಹಿಂತಿರುಗಿಸಿದ್ದ ಅದೇ ಓಲೆ ಪ್ರತಿಯ ಮೈಕ್ರೋಫಿಲಂ ತೆಗೆದುಕೊಂಡು ಬಂದರು. ಹೀಗೆ ಮೈಕ್ರೋಫಿಲಂ ಎತ್ತಿದ ಪ್ರತಿಯೇ ‘ಚ’ ಪ್ರತಿ. ಆದ್ದರಿಂದ ಚ ಪ್ರತಿಯನ್ನು ಪ್ರತ್ಯಂತರವೆಂದು ಕರೆಯಬಹುದು. ಇದನ್ನು ಸಂಪಾದಕರು ಗುರುತಿಸಲು ಸೋತಿದ್ದಾರೆ. ಅಲ್ಲದೆ ಚ ಪ್ರತಿಯ ಬಗ್ಗೆ ‘ಈ ಪ್ರತಿಯನ್ನು ಕಾರ್ಕಳದ ಭಟ್ಟಾರಕರಾಗಿದ್ದ ಲಲಿತ ಕೀರ್ತಿಯವರ ಶಿಷ್ಯ ದೇವರ ಶೆಟ್ಟಿ ಬರೆದ ಶಾಂತಿನಾಥ ಮಂದಿರಕ್ಕೆ ದಾನವಾಗಿ ಕೊಟ್ಟಂತೆ ಹೇಳಿದೆ’ ಎಂದು ತಿಳಿಸಿದ್ದಾರೆ (ಪು ೩೫). ಇಲ್ಲಿ ‘ದೇವರ ಶೆಟ್ಟಿ ಬರೆದು’ ಎಂಬುದು ತಪ್ಪು, ಅದು ‘ದೇವರ(ರು) ಶೆಟ್ಟಿ ಬರಸಿಕೊಟ್ಟ’ ಎಂದಿರಬೇಕು. ‘ಗ’ ಪ್ರತಿಯೂ ಬಹುಮಟ್ಟಿಗೆ ಕ ಪ್ರತಿಯನ್ನು ಮತ್ತೊಂದು ನಕಲೆಂದೂ ತೋರುತ್ತದೆ. ಹೀಗಾಗಿ ಧರ್ಮನಾಥ ಪುರಾಣದ ಸಂಪಾದನೆಗೆ ಆಧಾರ ಮೂರೇ ಪ್ರತಿಗಳು :

೧. ಕ ಅಥವಾ ಚ ಪ್ರತಿ
೨. ಗ ಪ್ರತಿ
೩. ಜ ಪ್ರತಿ

ಜತೆಗೆ ಎಂ.ಸಿ. ಪದ್ಮನಾಭಶರ್ಮರು ಪ್ರಕಟಿಸಿದ (ಅಸಮಗ್ರ) ಪ್ರತಿಗೆ ಉಪಯೋಗಿಸಿಕೊಂಡ ಮೂಲ ಪ್ರತಿಗಳು ಯಾವುವು? ಅವರು ಅದನ್ನು ತಿಳಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಈ ಸಂಪಾದಕರು ಹೇಳಬೇಕಿತ್ತು.

‘ಬಾಹು ಬಲಿ ಪಂಡಿತ ತನ್ನ ಕಾವ್ಯಕ್ಕೆ ಯಾವ ಕೃತಿಯನ್ನು ಆಧರಿಸಿದ್ದಾನೆಂಬುದನ್ನು ಹೇಳಿಕೊಂಡಿಲ್ಲ’ ಎಂದು ಸಂಪಾದಕರು ಪ್ರಸ್ತಾವನೆಯಲ್ಲಿ (ಪುಟ ೩೩) ನಿರೂಪಿಸಿದ್ದಾರೆ. ಇದು ತಪ್ಪು. ಬಾಹುಬಲಿ ಪಂಡಿತ ತನ್ನ ಕಾವ್ಯದ ಆಕರವನ್ನು –

ಮೊದಲೊಳ್ತದ್ಧರ್ಮ ಶರ್ಮಾಭ್ಯುದಯಮನೊಲವಿಂದೋದಿ ಕರ್ಣಾ
ಟದಿಂ ಮತ್ತದನೀಗಳ್ ಪೇಳ್ವೆನೆಂಬುಜ್ಜುಗದೊಳಿರುತಿರಲ್ ಭವ್ಯ ಸಂದೋಹಮಂ |
ಮ್ಮದಮಾಗಲ್ ಜೀಯ ನೀವೀಕೃತಿಯನಿರದೆ ಪೇಳಲ್ಕೆವೇಳ್ಕೆಂದೊಡೆ ಸೌ
ಹೃದ ಮೂರ್ತೋತ್ಕಂಪಮಾಗುತ್ತಿರೆ ವಿರಚಿಸಿದಂ ಚಾತುರೀ ಜನ್ಮಗೇಹಂ || ೫೮)

ಎಂಬ ಪದ್ಯದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಗ್ರಂಥ ಸಂಪಾದನೆ ಚೆನ್ನಾಗಿದೆಯಾದರೂ ಅನೇಕ ದೋಷಗಳು ಉಳಿದು ಬಿಟ್ಟಿವೆ; ಹತ್ತನೆಯ ಆಶ್ವಾಸದಿಂದ ಕೇವಲ ಎರಡು ಮೂರು ಉದಾಹರಣೆಗಳನ್ನು ಕೊಡುವುದರಿಂದ ನನ್ನ ಹೇಳಿಕೆ ಸ್ಪಷ್ಟವಾಗುತ್ತದೆ; ಪದ್ಯ ೧೨೬ ರಲ್ಲಿ ‘ಸಿರಿಸಿಂಬಿ ತಂಪುಗಂ’ ಎಂದಿದೆ, ೧೩೨ರ ವಚನದಲ್ಲಿ ‘ಸಿರಿಸಿಂಬಿ… ಕಂಪಿಗಂ’ ಎಂದಿದೆ. ತಂಪುಗಂ – ಕಂಪಿಗಂ ಇವೆರಡರಲ್ಲಿ ಯಾವುದಾದರೂ ಒಂದು ರೂಪ ಸರಿಯಿರಬಹುದೆಂಬ ಸಂದೇಹ ಬರುತ್ತದೆ; ಸಂಪಾದಕರು ಅರ್ಥಕೋಶದಲ್ಲಿ ತಂಪು (ಗಂ) ಶಬ್ದಕ್ಕೆ ‘ಒಂದು ಬಗೆಯ ಹೆಂಡ’ ವೆಂದು ಅರ್ಥಕೊಟ್ಟಿದ್ದಾರೆ. ಕಂಪು (ಗಂ) ಶಬ್ದಕ್ಕೆ ಕೊಟ್ಟಿಲ್ಲ, ಇದು ಕೂಡ ಓದುಗರ ಅನುಮಾನವನ್ನು ಬಲಗೊಳಿಸುತ್ತದೆ. ೧೩೪ನೆಯ ಪದ್ಯ ಹೀಗಿದೆ :

ದೇಯದ ನೀಲದುಂಗುರದ ಕಾಂತಿಗಳಿಂ ಕರಿದಾಗಿ ಶೋಭೆಯುಂ
ಭೀಯದ ಪಾಣಿ ಶೋಣಮಣಿ ಕಂಕಣ ಸತ್ಕಿರಣಂಗಳಿಂದೆ ಕೆಂ |
ಪಾಯತ ಮಾಗಿ ತೋಱೆದೊಡೆ ಮಾನಸದೊಳ್ ಪುದಿಯಲ್ಕೆ ಕೌತುಕಂ
ಮಾಯದ ಮದ್ಯಮೆಂದಬಳೆ ಪಿರದೆ ನೋಡಿದಳೊಂದು ಜಾವಮಂ ||

ಇಲ್ಲಿಯ ಕಡೆಯ ಸಾಲಿನಲ್ಲಿ ಬರುವ ಪಿರದೆ ಶಬ್ದಕ್ಕೆ ಏನು ಅರ್ಥ? ಅಂಥದೊಂದು ಶಬ್ದ ಅಸ್ತಿತ್ವದಲ್ಲಿರುವಂತೆ ತೋರುತ್ತಿಲ್ಲ. ಇಲ್ಲಿ ಅರ್ಥಕ್ಕೆ ಚ್ಯುತಿಯುಂಟಾಗಿದೆಯಷ್ಟೇ ಇಲ್ಲ ಛಂದಸ್ಸಿಗೂ ಭಂಗವಾಗಿದೆ. ಈ ಪದ್ಯ ಉತ್ಪಲಮಾಲಾ ಜಾತಿಗೆ ಸೇರಿದ್ದು. ಇದರಲ್ಲಿ ಗುರು ಲಘು ವಿನ್ಯಾಸ ಪ್ರತಿಪಾದದಲ್ಲೂ ಹೀಗಿರಬೇಕು –

UUUUUUUUUUUU

ಆದರೆ ೧೩೪ನೆಯ ಪದ್ಯ ನಾಲ್ಕನೆಯ ಪಂಕ್ತಿ ಹೀಗಿದೆ: UUUUUUUUUUUUU ಹೀಗಾಗಿ ಇಲ್ಲಿನ ನಾಲ್ಕನೆಯ ಗಣ UUU (ಪಿರದೆ) ಎಂದಿರುವುದರ ಬದಲು UU ಎಂದಿರಬೇಕು. ಈಗ ಬರುವ ಪ್ರಶ್ನೆ ಇದಕ್ಕೆ ಪಾಠಾಂತರವಿದೆಯೆ ಎಂಬುದು. ಪಿರದೆ ಎಂಬುದಕ್ಕೆ ಪಿಂದೆ ಎಂದು ಕ ಪ್ರತಿಯಲ್ಲಿ ಪಾಠಾಂತರವಿದೆ. ‘ಪಿರ’ ಎಂಬ ಎರಡು ಲಘ್ವಕ್ಷರಗಳ ಸ್ಥಾನದಲ್ಲಿ ‘ಪಿಂ’ ಎಂಬ ಒಂದು ಗುರು ಇರುವುದು ಸರಿಯಾಗಿದೆ. ಪಿರದೆ ಎಂಬುದನ್ನು ಕ ಪ್ರತಿಯ ಪಾಠಾಂತರ ಒಪ್ಪಿಕೊಂಡು ಪಿಂದೆ ಮಾಡಿದರೆ ಅರ್ಥದ ಹೊಂದಾಣಿಕೆಯೇನೋ ಆಗುತ್ತದೆ. ಆದರೆ ಆಗಲೂ ಛಂದೋಭಂಗವೇ ಆಗುತ್ತದೆ. ಪಿರದೆ (UUU) ಎಂಬುದರ ಸ್ಥಾನದಲ್ಲಿ ಪಿಂದೆ (U) ಎಂದು ಇಟ್ಟುಕೊಂಡಾಗ ಇನ್ನೊಂದು (ಲಘು) ಅಕ್ಷರ ಲೋಪವಾದಂತಾಗುತ್ತದೆ. ಆದ್ದರಿಂದ ಅನ್ಯಾಧಾರಗಳಿಲ್ಲದಿರುವ ಇಂಥ ಪರಿಸ್ಥಿತಿಯಲ್ಲಿ ಉಳಿದಿರುವ ಮಾರ್ಗವೆಂದರೆ ಪದ್ಯದ ಒಟ್ಟು ಅರ್ಥವನ್ನು ಅನುಸಂಧಾನಿಸಿ ಮೂಲಪಾಠವನ್ನು ಊಹಿಸುವುದು. ಈ ಪ್ರಯತ್ನದಲ್ಲಿ ಪಾಂಡಿತ್ಯದ ಜತೆಗೆ ಪ್ರತಿಭೆಯೂ ಬೇಕಾಗುತ್ತದೆ. ಪದ್ಯದ ಒಟ್ಟು ಓಟಕ್ಕೆ, ಅರ್ಥಕ್ಕೆ, ಛಂದಸ್ಸಿಗೆ, ಕವಿಯ ಆಶಯಕ್ಕೆ ಕುಂದಾಗದಂತೆ ನೋಡಿಕೊಳ್ಳಬೇಕು. ಪಿರದೆ ಎಂಬ ಸ್ಥಾನದಲ್ಲಿ (ಪೀ) ರದೆ ಎಂದಿದ್ದಿರಬೇಕೆಂದು ಒಂದು ಊಹಾಪಾಠವನ್ನು ನಿರ್ಣಯಿಸಬಹುದೆಂದು ನನಗೆ ತೋರುತ್ತದೆ. ಈ ಊಹಾಪಾಠದಿಂದ ಮೇಲಿನ ಪದ್ಯದ ಅರ್ಥಕ್ಕೆ ಒಂದು ನೂತನ ಆಯಾಮ ದೊರೆತು ಪದ್ಯ ಮತ್ತೂ ಪರಿಭಾವ್ಯವಾಗುತ್ತದೆ.

ಪದ್ಯ ೧೩೬ರ ಅನಂತರದಲ್ಲಿನ ವಚನದಲ್ಲಿ ‘ಕಳ್ಳಂ ಕುಡಿದಡಗಂ ತಿಂದದ ಱಮಹಿಮೆಯಂ ಮೆಚ್ಚಿಬಿಚ್ಚತಂ ನಡಿದೊರ್ವರ್ವರ ನಗೆಮೊಗಮಂ ನೋಡಿ’ ಎಂದು ಇದೆ. ಇಲ್ಲಿನ ವಾಚ್ಯಾರ್ಥವನ್ನೇ ಹಿಡಿದು ಹೊರಟರೂ ‘ನಡಿದೊ….’ ಎಂಬುದು ‘ನುಡಿದೊ…’ ಅಥವಾ ‘ಕಡಿದೊ…’ ಇಲ್ಲವೇ ‘ಕುಡಿದೋ,…’ ಎಂದಿರಬೇಕು ಹೊರತು ‘ನಡಿದೊ…’ ಎಂದಿರಲು ಸಾಧ್ಯವಿಲ್ಲ. ಇಂಥ ಇನ್ನೂ ಕೆಲವು ಪಾಠಕ್ಲಿಷ್ಟತೆಗಳಿವೆ. ವಿಶಿಷ್ಟ ಪದ ಸೂಚಿಯಲ್ಲಿ ಪ್ರಯೋಜನನಾಂಶ ಕಂಡು ಬರುವುದಿಲ್ಲ. ಈ ಉದಾಹರಣೆಗಳನ್ನು ನೋಡಿ :

ಅಕಳಂಕವ್ರತಿಒಬ್ಬ ಜೈನಮುನಿ
ಉಗ್ರವಂಶಒಂದು ವಂಶ
ಊರ್ಜಯಂತಒಂದು ಪರ್ವತ
ಕಾಳಿಂದೀಒಂದು ನದಿ
ಕೊಂಡಕುಂದಒಬ್ಬ ಮುನಿ
ನಾಥ ವಂಶಒಂದು ವಂಶ
ಪಾವಾಪುರಿಒಂದು ಊರು
ಭಾನುರಾಜಒಬ್ಬರಾಜ

ಈ ರೀತಿ ಹೇಳುತ್ತಾ ಹೊರಡುವುದಾದರೆ ಅದಕ್ಕೆ ಮಿತಿಯೇ ಇರುವುದಿಲ್ಲ. ಅಲ್ಲದೆ ಅದರಿಂದ ಯಾವ ಪ್ರಯೋಜನವೂ ಆಗುವುದಿ‌ಲ್ಲ. ಜತೆಗೆ ವಿಶಿಷ್ಟ ಪದ ಸೂಚಿ ನೋಡದೆಯೇ ಓದುಗರಿಗೇ ಅರ್ಥವಾಗುವಂತೆ ಕವಿಯೇ ಸ್ಪಷ್ಟಪಡಿಸಿದ್ದಾನೆ. ಶಬ್ದಾರ್ಥ ವಿವರಣೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಕೊಡುವಂತಿದ್ದರೆ ಮಾತ್ರ ವಿಶಿಷ್ಟ ಪದ ಸೂಚಿಯ ಬೀಳುತ್ತದೆ. ಈಗ ಉದಾಹರಣೆಗೆ ಮೇಲಿನ ಶಬ್ದಗಳಲ್ಲಿ …….. ಶಬ್ದಕ್ಕೆ ೧-೩೦ನೆಯ ಪದ್ಯದಲ್ಲಿ ಬಾಹುಬಲಿ ಪಂಡಿತ ಕವಿ ಹೇಳಿರುವ ಹಲವು ಕನ್ನಡ ಕವಿಗಳನ್ನು ಮತ್ತೆ ಆಕಾರಾದಿಯಾಗಿ ಈ ಪಟ್ಟಿಯಲ್ಲಿ ಕೊಟ್ಟು ಪ್ರತಿಯೊಂದಕ್ಕೂ ‘ಒಬ್ಬ ಕನ್ನಡ ಕವಿ’ ಎಂದು ವಿವರಿಸಿರುವುದು ಹಾಸ್ಯಾಸ್ಪದವಾಗುತ್ತದೆ; ಕಡೆಗೆ ಈ ಕವಿಗಳ ಕಾಲ – ಕೃತಿಗಳನ್ನಾದರೂ ಕೊಟ್ಟಿದ್ದರೆ ಇದರ ಉಪಯುಕ್ತತೆಯನ್ನು ಪ್ರಶ್ನಿಸುವಂತಾಗುತ್ತಿರಲಿಲ್ಲ. ಇದೇ ರೀತಿ ಪಾರಿಭಾಷಿಕ ಪದಸೂಚಿಯೂ ಅಸಮಗ್ರವಾಗಿದೆ. ಧರ್ಮನಾಥ ಪುರಾಣವನ್ನು ಹಲವು ಮಗ್ಗಲುಗಳಿಂದ ವಿಮರ್ಶಿಸಿದ್ದರೆ ಪ್ರಸ್ತಾವನೆಯಾದರೂ ಸರಿಯಾಗುತ್ತಿತ್ತು. ಉದಾಹರಣೆಗೆ ಸಮಕಾಲೀನ ಜನಜೀವನವನ್ನು ಬಾಹುಬಲಿ ಪಂಡಿತಕವಿ ಕಂಡರಿಸಿರುವ ಭಾಗಗಳನ್ನು ಗುರುತಿಸಬಹುದಿತ್ತು. ಇದರಲ್ಲಿ ಬರುವ ಹೆಂಡದಂಗಡಿಯ ಸಂಬಂಧವಾದ ವಿಸ್ತಾರವಾದ ಹೃದ್ಯವಾದ ಜೀವಂತ ವರ್ಣನೆ, ಇದಕ್ಕೆ ಮೂಲವಾದ ಉತ್ತರ ಪುರಾಣ ಮತ್ತು ಚಾವುಂಡರಾಯ ಪುರಾಣಗಳಲ್ಲಿ ಇಲ್ಲ, ಇದು ಬಾಹುಬಲಿ ಪಂಡಿತನ ಸ್ವಂತಿಕೆಯನ್ನು ಸಾರುವ ಸುರೆಯ ಸರೋವರ. ತನ್ನ ಕಾಲದ ಬದುಕಿಗೆ ಕವಿ ಇಲ್ಲಿ ಕಣ್ಣು ತೆರೆದಿದ್ದಾನೆ. ಪಂಪನ ವಿಕ್ರಮಾರ್ಜುನ ವಿಜಯವನ್ನು ಬಿಟ್ಟರೆ, ಇಡೀ ಕನ್ನಡ ಸಾಹಿತ್ಯದಲ್ಲಿಯೇ ಇಂಥ ಇನ್ನೊಂದು ಚಿತ್ರವಿಲ್ಲ. ಕಳ್ಳನ್ನು ಕುಡಿಯುವುದನ್ನು ಮನುಷ್ಯ ಸಾವಿರಾರು ವರ್ಷಗಳ ಹಿಂದೆಯೇ ಕಲಿತಿದ್ದಾನೆ. ನಾಗರಿಕತೆಯ ಬೆಳವಣಿಗೆಯ ಜತೆಜತೆಯಲ್ಲೇ ಮಧುಪಾನ ವಿಧಾನವೂ ವ್ಯತ್ಯಾಸಗಳನ್ನು ಪಡೆದುಕೊಳ್ಳುತ್ತಾ ಉಳಿದು ಬಂದಿದೆ. ಜನಜೀವನದಲ್ಲಿ ಆಳವಾಗಿ ಬೇರುಬಿಟ್ಟ ಈ ಪದ್ಧತಿಯನ್ನು ನಿರ್ಮಮಕಾರವಾಗಿ, ಅಹಿಂಸಾ ಪ್ರತಿಪಾದಕನಾದ ಬಾಹುಬಲಿ ಕವಿ, ದಾಖಲು ಮಾಡಿರುವ ಕ್ರಮ ವಿಸ್ಮಯಕಾರಿಯಾಗಿದೆ. ಏಕೆಂದರೆ ಬಾಹುಬಲಿ ಪಂಡಿತಕವಿ ಅಷ್ಟಾದಶ ವರ್ಣನೆಯ ಗೀಳಿಗೆ ಒಳಗಾಗಿ ವರ್ಣಿಸಿಲ್ಲ. – ಒಂದು ಕಾವ್ಯವನ್ನು ವಿಮರ್ಶಿಸುವಾಗ ಇಂಥ ಅಂಶಗಳತ್ತ ದೃಷ್ಟಿ ಹರಿಸಬೇಕಾಗುತ್ತದೆ.

ವಿಜಯಣ್ಣನ ದ್ವಾದಶಾನುಪ್ರೇಕ್ಷೆ (ಸಂ : ಕೆ.ಆರ್. ಶೇಷಗಿರಿ) ಈ ವರ್ಷದ ಸಂಪಾದಿತ ಕೃತಿಗಳಲ್ಲಿ ಅಚ್ಚುಕಟ್ಟಾಗಿ, ಶುದ್ಧವಾಗಿ ಸಂಪಾದಿತವಾಗಿರುವ ಕೃತಿ. ವಿಜಯಣ್ಣನ ಗ್ರಂಥವನ್ನು ಅರ್ಥಮಾಡಿಕೊಳ್ಳಲು ಪೂರಕವಾಗಬಲ್ಲ ಸಾಮಗ್ರಿಯನ್ನೆಲ್ಲ ಶ್ರಮಪಟ್ಟು ಪೀಠಿಕೆಯಲ್ಲೂ ಅನುಬಂಧಗಳಲ್ಲೂ ಸಂಗ್ರಹಿಸಿಕೊಟ್ಟಿದ್ದಾರೆ. ಪೀಠಿಕೆಯಂತೂ ಭರ್ಜರಿ ಆಗಿ ಬಂದಿದೆ : ಸಾಹಿತ್ಯ, ಧರ್ಮ, ವಸ್ತು – ಆಕರ, ಛಂದಸ್ಸು – ಹೀಗೆ ಬೇರೆ ಬೇರೆ ದೃಷ್ಟಿಕೋನಗಳಿಂದ ದ್ವಾದಶಾನುಪ್ರೇಕ್ಷೆಯನ್ನು ಸಮೀಕ್ಷಿಸಲಾಗಿದೆ. ಗ್ರಂಥದ ಪರಿಷ್ಕರಣಕ್ಕೆ ಹನ್ನೊಂದು ಪ್ರತಿಗಳನ್ನು ನೋಡಿದ್ದರೂ ಮುಖ್ಯವಾಗಿ ಆರು ಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಅವುಗಳಲ್ಲಿ ಅ, ಇ. ಉ ಪ್ರತಿಗಳು ಮುಖ್ಯವಾದವು. ಅನುಬಂಧ ಮೂರರಲ್ಲಿ ಕೊಟ್ಟಿರುವ ಅನುಪ್ರೇಕ್ಷೆಯ ಕಂದ ಪದ್ಯಗಳು (ಪದ್ಯಗಳು ೧ ರಿಂದ ೧೫, ಪು. ೨೬೦-೨೬೨) ಅಜ್ಞಾತ ಮೂಲಕ್ಕೆ ಸೇರಿಲ್ಲ. ಅವನ್ನು ಶಾಂತರಸ ವಿರಚಿತ ‘ಯೋಗರತ್ನಾಕರ’ ಎಂಬ ಕಾವ್ಯದಿಂದ ಎತ್ತಿಕೊಳ್ಳಲಾಗಿದೆ. ಇದನ್ನು ಸಂಪಾದಕರು ಗುರುತಿಸಲಾಗಿಲ್ಲ; ಅದರ ಪ್ರಥಮಾಂಗದಲ್ಲಿನ ಪದ್ಯ ೨೪ ರಿಂದ ೩೮ರ ವರೆಗಿನ ಪದ್ಯಗಳೇ ಇವು, ಇದರ ನೆರವಿನಿಂದ ಮೊದಲ ಪದ್ಯವನ್ನು ಸರಿಯಾಗಿ ಪೂರ್ಣಗೊಳಿಸಬಹುದು. ಪೂರ್ವ ಕಥೆಗಳಲ್ಲಿ ಪುಟ ೨೨೫ ರಲ್ಲಿ ಪದ್ಯ ೬೭೯ ರಲ್ಲಿ ಬರುವ ನಾಗದತ್ತ (ನಾಗಕುಮಾರ)ನ ಕಥೆ ಕೊಡಬೇಕಿತ್ತು.

ಸಾಂಗತ್ಯ ಛಂದಸ್ಸಿನಲ್ಲಿ ರಚಿತವಾದ ಆರಂಭದ ಕೃತಿಗಳಲ್ಲಿ ಒಂದಾದ ವಿಜಯಣ್ಣನ ದ್ವಾದಶಾನುಪ್ರೇಕ್ಷೆಗೆ ಆ ದೃಷ್ಟಿಯಿಂದ ಒಂದು ವಿಶಿಷ್ಟವಾದ ಸ್ಥಾನವಿದೆ (ಹಂಪ ನಾಗರಾಜಯ್ಯ : ಸಾಂಗತ್ಯ ಕವಿಗಳು, ೧೯೭೫, ಪು ೨೭-೨೯).

ಇಮ್ಮಡಿ ಗುರುಸಿದ್ದ ವಿರಚಿತ ಹಾಲಾಸ್ಯ ಪುರಾಣಂ (ಸಂ: ಜಿ. ಮಂಜುನಾಥನ್) ಛಂದಸ್ಸಿನ ದೃಷ್ಟಿಯಿಂದ ಬಹು ಗಮನಾರ್ಹ ಚಂಪೂ ಕೃತಿ. ನಾಲ್ಕು ಕಾಂಡಗಳು ಹಾಗೂ ೬೬ ಆಶ್ವಾಸಗಳಿರುವ (೩೬೩೭ ಪದ್ಯಗಳು, ತ್ರಿಪದಿ, ರಗಳೆ) ಹಿರಿಯ ಗಾತ್ರದ ಕಾವ್ಯ. ಶುದ್ಧ ಕಾವ್ಯದ ಆಧಾರದಿಂದ ನೋಡಿದಾಗ ಇದು ತೀರ ಸಾಧಾರಣ ಕೃತಿ, ಆದರೆ ವಿವಿಧ ಜಾತಿಯ ವೃತ್ತಗಳ ಪ್ರಯೋಗದಲ್ಲಿ ಹಾಗೂ ಪ್ರಾಸಸ್ಥಾನವನ್ನುಳಿಸಿ ಕೊಂಡಿರುವ ಕ್ರಮದಲ್ಲಿ ಈ ಕೃತಿಗೆ ಮೇಲಾದ ಮನ್ನಣೆಯಿದೆ. ಈ ಕವಿಗೆ ಷಡಕ್ಷರ ಕವಿಯ ಮೇಲ್ಪಂಕ್ತಿಯನ್ನು ಪರಿಪಾಲಿಸುವುದರಲ್ಲಿ ಅನನ್ಯ ಆನಂದವಿರುವಂತೆ ತೋರುತ್ತದೆ. ಸತ್ವಕ್ಕಿಂತ ಚಮತ್ಕಾರವೇ ಬಂಡವಾಳವಾಗಿರುವ ಇಷ್ಟು ದೊಡ್ಡ ಪ್ರಮಾಣದ ಗ್ರಂಥವನ್ನು ಸಂಪಾದಿಸುವುದಕ್ಕೆ ಎಣೆಯಿಲ್ಲದಷ್ಟು ತಾಳ್ಮೆಬೇಕು. ಕೇವಲ ಎರಡು ಓಲೆಯ ಹಸ್ತ ಪ್ರತಿಗಳನ್ನಿಟ್ಟುಕೊಂಡು ಸಂಪಾದಕರು ವಿಶೇಷ ಶ್ರದ್ಧೆಯಿಂದ ಈ ಕೃತಿಯನ್ನು ವ್ಯವಸ್ಥಿತ ರೀತಿಯಲ್ಲಿ ಸಿದ್ಧಪಡಿಸಿದ್ದಾರೆ. ಅಷ್ಟೇ ಪ್ರಯೋಜನಕಾರಿಯಾದ ಪೀಠಿಕೆಯನ್ನು ಕೊಟ್ಟಿದ್ದಾರೆ. ಛಂದಸ್ಸನ್ನೇ ವಿಶೇಷ ವಿಷಯವಾಗಿ ಅಭ್ಯಾಸ ಮಾಡಬಯಸುವ ಜಿಜ್ಞಾಸುಗಳಿಗೆ ಹಾಲಾಸ್ಯ ಪುರಾಣದ ಸಾಕಷ್ಟು ಗ್ರಾಸವಿದೆ.

ಕೇಶಿರಾಜನ ಶಬ್ದಮಣಿದರ್ಪಣವನ್ನು (ಸಂ: ತ.ಸು. ಶಾಮರಾಯ – ನಂಜೇಗೌಡ) ಮತ್ತೆ ಸಂಪಾದಿಸಲಾಗಿದೆ. ಈಗಾಗಲೇ ಹಲವು ಮುದ್ರಣಗಳನ್ನು, ಸಂಪಾದಕರನ್ನು, ಸಂಗ್ರಹಗಳನ್ನು ಕಂಡಿರುವ ಈ ವ್ಯಾಕರಣಕ್ಕೆ ಸದಾ ಬೇಡಿಕೆಯಿದೆಯೆಂದು ಪ್ರಕೃತ ಕೃತಿಯನ್ನು ಹೊಸಗನ್ನಡ ತಾತ್ಪರ್ಯ ಹಾಗೂ ‘ವಿಶೇಷ ವಿಷಯ’ದ ವಿವರಣೆಯೊಡನೆ ಸಿದ್ಧಪಡಿಸಲಾಗಿದೆ. ಮುದ್ರಣಾದಿ ಕೆಲವು ದೋಷಗಳು ಇಲ್ಲಿ ಉಳಿದಿದ್ದರೂ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಿದೆಯೆಂಬುದು ನಿಜ; ಎರಡು ಸಾವಿರ ಪ್ರತಿಗಳನ್ನು ಮುದ್ರಿಸಿ ಬೆಲೆಯನ್ನು ಹತ್ತು ರೂಪಾಯಿಗೆ ಇಳಿಸಿದ್ದರೆ ಇದರ ವಿದ್ಯಾರ್ಥಿ ಜನಪ್ರಿಯತೆ ದ್ವಿಗುಣಿತವಾಗುತ್ತಿತ್ತು.

ಉರಿಲಿಂಗ ಪೆದ್ದಿಗಳ ವಚನಗಳು ಹಾಗೂ ಸ್ವತಂತ್ರ ಸಿದ್ಧಲಿಂಗೇಶ್ವರನ ಕೃತಿಗಳು ಒಬ್ಬರಿಂದ (ಸಂ: ಎಚ್.ಪಿ. ಮಲ್ಲೇದೇವರು) ಸಂಪಾದಿತವಾಗಿವೆ. ಎರಡರಲ್ಲೂ ಮುದ್ರಣ ಸ್ಖಾಲಿತ್ಯಗಳು ಹೇರಳವಾಗಿ ಉಳಿದಿವೆ. ಉರಿಲಿಂಗ ಪೆದ್ದಿಗಳ ವಚನಗಳನ್ನು ಹಲವು ಮುದ್ರಿತ ಪ್ರತಿಗಳ ಹಾಗೂ ಮೂರು ಹಸ್ತ ಪ್ರತಿಗಳ ಆಧಾರದಿಂದ ಸಂಕಲನ ಮಾಡಲಾಗಿದೆ. ಸ್ವತಂತ್ರ ಸಿದ್ಧಲಿಂಗೇಶ್ವರನ ಕೃತಿಗಳು ಮೂರು; ವಚನಗಳು, ಮುಕ್ತ್ಯಾಂಗನಾ ಕಂಠಮಾಲೆ ಮತ್ತು ಒಂದು ಪುಟ್ಟ ‘ಜಂಗಮ ರಗಳೆ’. ವಚನಗಳನ್ನು ಆರು ತಾಡೆಯೋಲೆ ಪ್ರತಿಗಳಿಂದಲೂ, ಮುಕ್ತ್ಯಾಂಗನಾ ಕಂಠಮಾಲೆಯನ್ನು ಒಂದು ತಾಳೆಯೋಲೆ ಹಾಗೂ ಮೂರು ಮುದ್ರಿತ ಪ್ರತಿಗಳಿಂದಲೂ ಸಂಕಲಿಸಿದ್ದಾರೆ. ಪ್ರಸ್ತಾವನೆ ಎರಡೂ ಕೃತಿಗಳಲ್ಲಿ ಓದುಗರಿಗೆ ಸಹಾಯಕವಾಗಿವೆ. ಇಷ್ಟಿದ್ದೂ ಸಂಪಾದಕರ ಒಟ್ಟು ಧೋರಣೆಯಲ್ಲಿ ಶಾಸ್ತ್ರ ಶುದ್ಧಿಗಿಂತ ಜನಪ್ರಿಯಧಾಟಿಗೇ ಒಲವು ಕಂಡು ಬರುತ್ತದೆ.

ಅಜ್ಞಾನ ಕವಯಿತ್ರಿಯೊಬ್ಬಳ ಚಂದನಾಂಬಿಕೆಯ ಕಥೆ (ಸಂ : ಎಂ.ಎ. ಜಯಚಂದ್ರ-ಧವಳಶ್ರೀ) ಪ್ರಥಮಬಾರಿಗೆ ಬೆಳಕು ಕಾಣುತ್ತಿರುವ ತ್ರಿಪದಿಕಾವ್ಯ. ಅಲ್ಲಲ್ಲಿ ತ್ರುಟಿತವಾಗಿದ್ದ ಏಕೈಕ ಹಸ್ತಪ್ರತಿಯಿಂದ ಈ ಕಾವ್ಯವನ್ನು ಸಿದ್ಧಪಡಿಸಿದ್ದಾರೆ. ಕೃತಿ ಪೂರ್ತಿ ಅಚ್ಚಾದ ಮೇಲೆ ಸಂಪಾದಕರ ಮನೆಯಲ್ಲೇ ಇದ್ದ ಇನ್ನೊಂದು ಕಾಗದದ ಹಸ್ತಪ್ರತಿ ದೊರೆತು, ತ್ರಟಿತ ಭಾಗಗಳಿಗೆ ಸಂವಾದಿಯಾದ ಸರಿಪಾಠ ಭಾಗವನ್ನು ಅದರಿಂದ ಎತ್ತಿ ಅನುಬಂಧದಲ್ಲಿ ಕೊಟ್ಟಿದ್ದಾರೆ. ಸಂಪಾದಕರು ಮೊದಲೇ ಇನ್ನೂ ಶ್ರಮವಹಿಸಿದ್ದರೆ ಆರಾದಲ್ಲಿದ್ದ ಇದರ ಮತ್ತೊಂದು ಹಸ್ತಪ್ರತಿಯನ್ನೂ ದೊರಕಿಸಿಕೊಂಡು ಶುದ್ಧಪಾಠವನ್ನು ನಿರ್ಣಯಿಸಿಕೊಡಬಹುದಿತ್ತು. ಈಗ ಇವರು ಕೊಟ್ಟಿರುವ ಕೆಲವು ಊಹಾಪಾಠಗಳು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ. ಇದೇನೇ ಇದ್ದರೂ ಪೀಠಿಕೆ. ಅನುಬಂಧ, ಮುದ್ರಣ, ಗ್ರಂಥದ ಹೊರಮೈ – ಎಲ್ಲ ಒಪ್ಪವಾಗಿವೆ.

ಚಂದನಾಂಬಿಕೆಯ ಕಥೆಗೆ ಕನ್ನಡ ಸಾಹಿತ್ಯದಲ್ಲಿ ಅದರಲ್ಲಿಯೂ ತ್ರಿಪದಿಯ ಚರಿತ್ರೆಯಲ್ಲಿ ವಿಶಿಷ್ಟವಾದ ಸ್ಥಾನವಿದೆ. ಇದುವರೆಗೆ ಕನ್ನಡದಲ್ಲಿ ತ್ರಿಪದಿಯಲ್ಲಿ ರಚಿತವಾಗಿರುವ ಕೆಲವೇ ಕಾವ್ಯಗಳಲ್ಲಿ ಈ ಕೃತಿಗೆ ಅಗ್ರಸ್ಥಾನ ಸಲ್ಲಬಹುದಾಗಿದೆ. ಸರ್ವಜ್ಞ (ಪರಮಾರ್ಥ-ಪರಮಾತ್ಮ) ವಿರಚಿತ-ಅಂಕಿತ ತ್ರಿಪದಿಗಳಲ್ಲಿ ಬುದ್ಧಿಗಮ್ಯ ಚಮತ್ಕಾರ ಪದ್ಯಗಳೂ, ಆಯಾಕ್ಷಣದ ಪರಿಭಾವನೆಯ ಕಿರಣಗಳೂ ಕಂಡು ಬರುತ್ತವೆ, ಒಟ್ಟು ಕೃತಿಯನ್ನು ಕೂಡಿಸಿದ ಅಚ್ಯುತವಾದ ಒಂದು ಕಾವ್ಯ ತಂತು ಅದರಲ್ಲಿಲ್ಲ. ಬಿಡಿಬಿಡಿಯಾದ ಮುಕ್ತಕಗಳ ಮಹತ್ವ ಅದಕ್ಕಿದ್ದರೂ ಇಡಿಯಾದ ಒಂದು ‘ಅಖಂಡ ಕಾವ್ಯದ’ ಆನಂದ ಅದರಲ್ಲಿಲ್ಲ. ಚಂದನಾಂಬಿಕೆಯ ಕಥೆಯಲ್ಲಿ ಈ ಕೊರತೆಗಳು ನಿವಾರಿತವಾಗಿವೆ. ಒಂದು ಉತ್ತಮ ಕಾವ್ಯದ ಲಕ್ಷಣಗಳು ಕಂಡು ಬರುತ್ತಿವೆ. ಇದರ ಕಾಲ ಸರಿಯಾಗಿ ತಿಳಿಯದಿದ್ದರೂ ಅಂಶಬದ್ಧವಾದ ತ್ರಿಪದಿಯ ಲಯವಿನ್ಯಾಸ, ಭಾಷೆ ಮೊದಲಾದ ಆಂತರಿಕ ಪ್ರಮಾಣಾಧಾರಗಳಿಂದ ಈ ಕೃತಿಯನ್ನು ೧೫ನೆಯ ಶತಮಾನದ್ದೆಂದು ಊಹಿಸಬಹುದು.

ಅಜ್ಞಾನ ಜಂಗಮ (ದೇಶಿಕ) ಕರ್ತೃಕ ಲಿಂಗಚಿದಮೃತ ಬೋಧೆ (ಸಂ : ಎಂ.ಎಸ್. ಸುಂಕಾಪುರ)ಯಲ್ಲಿ ವೀರಶೈವ ಸಿದ್ಧಾಂತ ಪರಿಚಯಕ್ಕೆ ಬೇಕಾದ ಸಾಮಗ್ರಿಯನ್ನು ಸಂಕಲಿಸುವ ಪ್ರಯತ್ನವಿದೆ. ಮಗ್ಗೆಯ ಮಾಯಿದೇವನ ಶತಕದಿಂದ ಮೂವತ್ತೊಂದು ವೃತ್ತಗಳನ್ನು ಆಯ್ದು ಅವುಗಳಿಗೆ ಒಂದೊಂದಕ್ಕೂ ಬಸವಾದಿ ಪ್ರಮಥರ ವಚನಗಳಿಂದ ಸಂವಾದಿ ಮಾತುಗಳನ್ನು ಕೊಟ್ಟು ವಿವರಿಸಿದೆ. ಹೀಗಾಗಿ ಇದರಲ್ಲಿ ಸಂಕಲನ ಕಾರ್ಯವಿದೆಯೇ ಹೊರತಾಗಿ ಕೃತಿಕಾರನ ಸ್ವೋಪಜ್ಞ ಭಾಗವಿಲ್ಲ. ಇದರ ಸಂಪಾದನೆಗೆ ಬಳಸಿಕೊಂಡ ಹಸ್ತಪ್ರತಿಯ ವಿವರವಿಲ್ಲ.

ಇದುವರೆಗೆ ಅಪ್ರಕಟಿತವಾಗಿದ್ದ ಸಾನಂದಚರಿತೆಯನ್ನು (ಸಂ: ಎಸ್. ಬಸಪ್ಪ) ಮೊದಲ ಬಾರಿಗೆ ಮೂರು ಪ್ರತಿಗಳ ನೆರವಿನಿಂದ ಹೊರತರಲಾಗಿದೆ. ಕೆರೆಯ ಪದ್ಮರಸನ ಈ ಕೃತಿಗೆ ಶಿವಾದ್ವೈತಸಾಕಾರ ಸಿದ್ಧಾಂತವೆಂಬ ಹೆಸರೂ ರೂಢಿಯಲ್ಲಿದೆ. ಇದು ಪ್ರಧಾನವಾಗಿ ಶಿವಾದ್ವೈತ ಸಿದ್ಧಾಂತವನ್ನು ೪೬ ಮಹತ್ವದ ಪ್ರಕರಣಗಳಲ್ಲಿ ನಿರೂಪಿಸುತ್ತದೆ. ಜೈನ ಪುರಾಣ-ಚರಿತೆಗಳಲ್ಲಿ ಪಂಚ ನಮಸ್ಕಾರದ (ಣಮೋಕಾರದ) ಮಹಿಮೆಯನ್ನು ಕಾಣುವಂತೆ, ಇದರಲ್ಲಿ ಪಂಚಾಕ್ಷರಿ ಮಹಿಮೆ ವ್ಯಕ್ತವಾಗಿದೆ. ಒಂಬತ್ತು ಸಂಧಿಗಳ ಈ ಕೃತಿಯ ಸಂಪಾದನೆ ಉತ್ತಮವಾಗಿದ್ದರೂ ಓದುಗನಿಗೆ ನೆರವಾಗಬಲ್ಲ ಸಹಾಯಕ ಸಾಮಗ್ರಿಯನ್ನು ಗ್ರಂಥಾಂತ್ಯದ ಅನುಬಂಧದಲ್ಲಿ ಸಿದ್ಧಪಡಿಸಿಕೊಡಬೇಕಾಗಿತ್ತು.

ಚಾವುಂಡರಾಯನ ತ್ರಿಷಷ್ಟಿ ಲಕ್ಷಣ ಮಹಾಪುರಾಣ ಅಥವಾ ಚಾವುಂಡರಾಯ ಪುರಾಣದ (ಸಂ: ಡಾ|| ಬಿ.ಎಸ್. ಕುಲಕರ್ಣಿ) ಪ್ರಟಕನೆಯನ್ನು ೧೯೭೫ರ ಒಂದು ವಿಶೇಷ ಕೊಡುಗೆಯೆಂದು ತಿಳಿಯಬಹುದು. ಇದರ ಪ್ರಕಟಣೆಯಿಂದಾಗಿ ಬಹುಕಾಲದಿಂದ ವಿದ್ವಾಂಸರು ನಿರೀಕ್ಷಿಸುತ್ತಿದ್ದ ಚಾವುಂಡರಾಯ ಪುರಾಣ ಕಡೆಗೂ ಒಮ್ಮೆ ಹೊರಬಂದಂತಾಗಿದೆ. ಕನ್ನಡ ಗದ್ಯ ಗ್ರಂಥಗಳ ಸಾಲಿನಲ್ಲಿ ಇದಕ್ಕಿರುವ ಸ್ಥಾನವನ್ನೂ, ಕನ್ನಡ ಜೈನ ಪುರಾಣಗಳ ರಚನೆಯಲ್ಲಿ ಆಗಬೇಕಾದ ತೌಲನಿಕ ಅಧ್ಯಯನದಲ್ಲಿ ಇದರ ಮೌಲಿಕ ಪಾತ್ರವನ್ನೂ ಈಗಾಗಲೇ ಸೂರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಚರಿತ್ರೆಯಲ್ಲಿ, ಸಾಂಸ್ಕೃತಿಕ ಸಾಹಿತ್ಯ ಪರಂಪರೆಯಲ್ಲಿ ಚಾವುಂಡರಾಯನ ಸ್ಥಾನ ದೊಡ್ಡದು. ಈತನ ಬಗ್ಗೆ ಉಪಲಬ್ಧವಿರುವ ಶಾಸನ ಸಾಮಗ್ರಿ ಜತೆಗೆ, ಚಾವುಂಡರಾಯ ಪುರಾಣದ ವಿವರಣೆಯನ್ನೂ ಸೇರಿಸಿಕೊಂಡು ಚಾವುಂಡಾರಾಯನ ಒಂದು ಸಮಗ್ರ ವ್ಯಕ್ತಿತ್ವವನ್ನು ಪುನಾರಚಿಸಿಕೊಳ್ಳುವುದು ಸಾಧ್ಯ. ಗೊಮ್ಮಟಶಿಲ್ಪದ ಕಾಣಿಕೆಯಷ್ಟೇ ಚಾವುಂಡರಾಯ ಪುರಾಣದ ಕೊಡುಗೆಯೂ ಮಹತ್ವಪೂರ್ಣವಾಗಿದೆ. ಸ್ವಾರಸ್ಯದ ಸಂಗತಿಯೆಂದರೆ ಈ ಗ್ರಂಥದಲ್ಲಿ ಎಲ್ಲಿಯೂ ಬಾಹುಬಲಿ (ಗೊಮ್ಮಟ) ವಿಗ್ರಹದ ಪ್ರಸ್ತಾಪವಿಲ್ಲ, ಇದರಿಂದ ಈ ಗ್ರಂಥರಚನೆಯಾದ ಮೇಲೆ ಗೊಮ್ಮಟಮೂರ್ತಿ ಪ್ರತಿಷ್ಠಾಪನೆಯಾಗಿರಬೇಕೆಂದು ತಿಳಿಯಬಹುದು.

ಕನ್ನಡ ಜೈನ ಕವಿಗಳು ಸಮಂತಭದ್ರ – ಪೂಜ್ಯಪಾದ – ಕವಿಪರಮೇಷ್ಠಿ – ಈ ಮೂವರನ್ನು ಸ್ಮರಿಸಿ ಸ್ತುತಿಸಿದ್ದಾರೆ. ಇವರಲ್ಲಿ ಸಮಂತಭದ್ರರ ಹಾಗೂ ಪೂಜ್ಯಪಾದರ ಕೃತಿಗಳು ಸಿಕ್ಕಿವೆ, ಅಚ್ಚಾಗಿವೆ. ಕವಿಪರಮೇಷ್ಠಿಯ ಕೃತಿ ಇದುವರೆಗೂ ಲಭಿಸಿಲ್ಲ. ಅದರ ನಾಲ್ಕು ಪದ್ಯಗಳು ಚಾವುಂಡರಾಯ ಉದಾಹರಿಸಿರುವುದು ತುಂಬ ಗಮನಾರ್ಹವಾಗಿದೆ. ಅನೇಕ ಜೈನಾಚಾರ್ಯರ ಪ್ರಸ್ತಪ ಇಲ್ಲಿ ಬರುತ್ತದೆ, ಅವರೆಲ್ಲರ ವಿಚಾರವಾಗಿ ಡಾ|| ಆ.ನೇ. ಉಪಾಧ್ಯೆಯವರು ಪರಿಚಯಾತ್ಮಕ ಲೇಖನ ಬರೆದಿದ್ದಾರೆ.

ಇಷ್ಟು ಪ್ರಮುಖವಾದ ಕೃತಿಯೊಂದನ್ನು ಡಾ|| ಬಿ.ಎಸ್. ಕುಲಕರ್ಣಿಯವರು ಪ್ರಥಮ ಬಾರಿಗೆ ಪ್ರಕಟಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಇದನ್ನು ಎರಡು ತಾಳೆ ಓಲೆಯ ಹಾಗೂ ಎರಡು ಕಾಗದದ ಹಸ್ತ ಪ್ರತಿಗಳನ್ನು ಬಳಸಿಕೊಂಡು ಸಂಸ್ಕರಿಸಿದ್ದಾರೆ. ಇವರು ಬಳಸಿರುವ ನಾಲ್ಕೂ ಪ್ರತಿಗಳು (ಅ.ಬ.ಕ.ಡ.) ಅರ್ವಾಚೀನವಾದುವು. ಸ್ವಾದಿ ಜೈನ ಮತಕ್ಕೆ ಸೇರಿದ ‘ಅ’ ಪ್ರತಿಯನ್ನು ‘ಸುಮಾರು ಮೂರು ನೂರು ವರ್ಷಗಳ ಪೂರ್ವದಲ್ಲಿ ರಚಿತವಾದ’ದ್ದೆಂದೂ, ‘ಬ’ ಪ್ರತಿಯನ್ನು ‘ಸುಮಾರು ೩೫೦ ವರುಷಗಳನ್ನು ಪ್ರಾಚೀನವಾದು’ದೆಂದೂ, ಸಂಪಾದಕರು ಹೇಳಿದ್ದಾರೆ. ಇದನ್ನು ಯಾವ ಆಧಾರದಿಂದ ನಿರ್ಧರಿಸಿದರೆಂಬುದನ್ನು ಅವರು ಸ್ಪಷ್ಟಪಡಿಸಬೇಕಾಗಿತ್ತು. ಆ ಪ್ರತಿಗಳ ಮೇಲೆ ಖಚಿತವಾದ ದಿನಾಂಕ ಇಸವಿ ಮೊದಲಾದ ನಿರ್ದೇಶನವಿರದಿದ್ದರೂ ಬೇರೆ ಆಧಾರಗಳನ್ನು ಹಿಡಿದು ಪತ್ತೆ ಮಾಡಲು ಸಾಧ್ಯವೇ ಎಂಬುದನ್ನು ಪರಾಮರ್ಶಿಸಬೇಕು. ನನ್ನ ಈ ಸೂಚನೆಯನ್ನು ಇವರು ಬಳಸಿಕೊಂಡ ಪ್ರತಿಯಿಂದಲೇ ಒಂದು ಉದಾಹರಣೆಯನ್ನು, ಕೊಟ್ಟು ಸಮರ್ಥಿಸುತ್ತೇನೆ;

‘ಅ’ ಪ್ರತಿಯು (ಸ್ವಾದಿ ಜೈನ ಮಠಕ್ಕೆ ಸೇರಿದ್ದು) ಕಡೆಯಲ್ಲಿ ಈ ಹೇಳಿಕೆಯನ್ನು ಪಡೆದಿದೆ; “ಶ್ರೀ ತಾರಣ ಸಂವತ್ಸರದ ಕಾರ್ತಿಕಮಾಸದ ಶುಕ್ಲ ಪಕ್ಷದ ಪಂಚಮಿಯಲ್ಲು ಬೈಲೂರ ಅಣಂತನ ಸೆಟ್ಟಿ ಚಂದ್ರನಥ ಚೈತ್ಯಾಲಯದಲ್ಲಿ ಶ್ರುತಸ್ಕಂದದ ನೋಂಪಿಯ ಉದ್ಯಾಪನೆಯನ್ನು ಮಾಡಿ ಇಪ್ಪತ್ತುನಾಲ್ಕು ಪುರಾಣವೆನಿಸಿದ ಚಾವುಂಡರಾಯ ಪುರಾಣಮಂ ಸಂಗ್ರಹಿಸಿ ತನಗೆ ಕೇವಲ ಜ್ಞಾನ ಪ್ರಾಪ್ತಿ ನಿಮಿತ್ತಮಾಗಿ ದೇಶಿಗಣದ ಬಾಹುಬಲಿದೇವರ ಶಿಷ್ಯರಾದ ಅನಂತಕೀರ್ತಿ ದೇವರಿಗೆ ಶಾಸ್ತ್ರದಾನವನು ಮಾಡಿದನು” ಎಂದಿದೆ.

ಇದು ಹೊಸ ಅನ್ವೇಷಣೆಗೆ ದಾರಿ ತೆರೆಯುವ ಸಾಮಗ್ರಿಯಾಗಿದೆ. ಇಲ್ಲಿ ಪ್ರಸ್ತಾಪಿತವಾಗಿರುವ ಬಾಹುಬಲಿ ಮತ್ತು ಅನಂತಕೀರ್ತಿ ಆಚಾರ್ಯರ ಕಾಲವನ್ನು ಗುರುತಿಸಿದ್ದೇ ಆದರೆ ಆಗ ಈ ಪ್ರತಿಯ ಕಾಲ ನಿರ್ಧರಿಸಬಹುದು. ಬಾಹುಬಲಿದೇವರೆಂಬ ಹೆಸರಿನ ಆಚಾರ್ಯರು ನನಗೆ ತಿಳಿದಂತೆ ಹಲವರಿದ್ದಾರೆ. ಇವರಲ್ಲಿ ಯಾಪನೀಯ ಸಂಘದ ಕಣ್ಡೂರು ಗಣದವರು ೯೮೦ ರಲ್ಲಿದ್ದವರು (ಜೆ.ಬಿ.ಬಿ.ಆರ್‌. ಎ.ಎಸ್. ಸಂಪುಟ-೧೦ ಪುಟ ೨೦೪). ಹನ್ನೊಂದನೆಯ ಶತಮಾನದವರು ಇಬ್ಬರಿದ್ದಾರೆ. ಬಿ.ಕೆ.ಐ.ಐ. ಭಾಗ-೨. ನಂ.೧೨೩, ೨೦೯ ಮತ್ತು ಎಂ.ಇಂ,, ೧೮, ಪುಟ ೨೦೧). ಮೂಲಸಂಘ ದೇಸಿ ಗಣ ಕೊಂಡ ಕುಂದಾನ್ವಯ ಪುಸ್ತಕಗಚ್ಛ ಇಂಗಳೇಶ್ವರ ಬಳಿಯ ಬಾಹುಬಲಿ ೧೨ನೆಯ ಶತಮಾನದವರು (ಎಸ್‌ಐಐ., ೪, ನಂ. ೭೯೮). ಮಣಿಗುಂದಗೆಯ ಶಾಸನೋಕ್ತ ಬಾಹುಬಲಿ ಸಿದ್ಧಾಂತ ದೇವರು ೧೩ನೆಯ ಶತಮಾನದವರು ಆದರೆ ಇವರು ಯಾರೂ ‘ಅ’ ಪ್ರತಿಯಲ್ಲಿ ಉಕ್ತರಾದ ಬಾಹುಬಲಿ ದೇವರಲ್ಲ. ಆರ್ಯ ಶುಭೇಂದು ಕಂದ ವಿಜಯಕೀರ್ತಿ ದೇವರ ಪ್ರಿಯ ಶಿಷ್ಯರಾದ ಬಾಹುಬಲಿ ದೇವರ ವಿಚಾರ ೧೮-೪-೧೩೯೦ ರ ಶಾಸನವೊಂದರಲ್ಲಿದೆ (ಎಕ.ಐ.೭೫ (೩೯)) ಇದು ಗಮನಾರ್ಹ. ಇದರಂತೆ ‘ಸ್ವಿಸ್ತಿಶ್ರೀ’ ಮೂಲಸಂಘ ದೇಸಿಗಣ ಹನಸೋಗೆಯ ಶ್ರೀ ಬಾಹುಬಲಿ ಮಲಧಾರಿದೇವರ ಪ್ರತಿಮೆ’ ಎಂದು ಸುಮಾರು ೧೪೩೦ರ ಅವಧಿಯ ಇನ್ನೊಂದು ಶಾಸನದಲ್ಲಿದೆ. (ಎಕ., ೨, ೪೮೩). ಇವರೇ ಚಾವುಂಡರಾಯ ಪುರಾಣದ ‘ಅ’ ಪ್ರತಿಯಲ್ಲಿ ಉಕ್ತರಾದವರೆಂದು ಭಾವಿಸಲು ಅವಕಾಶವಿದೆ. ಹಾಗಿದ್ದಲ್ಲಿ ಇವರ ಶಿಷ್ಯ ಅನಂತಕೀರ್ತಿಯವರ ಕಾಲ ಸು. ೧೪೬೦ ಎಂದಿಟ್ಟುಕೊಳ್ಳಬಹುದು, ಅದರಿಂದಾಗಿ ‘ಅ’ ಪ್ರತಿಯ ಕಾಲ ೧೪೬೦ ಕ್ಕಿಂತ ಈಚಿನದೆಂದು ಸಾಬೀತಾಗುತ್ತದೆ. ಆದರೆ ಇದು ಸರಿಯೆ ಎಂಬುದನ್ನೂ, ‘ಶ್ರೀತಾರಣ ಸಂವತ್ಸರದ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪಂಚಮಿ’ ಯಾವ ಯಾವ ಇಸವಿಗೆ ಬೀಳುತ್ತದೆಂಬುದನ್ನೂ ಮತ್ತೆ ಪರಿಶೀಲಿಸಬೇಕಾಗುತ್ತದೆ. ತಾವು ಬಳಸಿಕೊಂಡ ಪ್ರತಿಗಳ ವಿಚಾರದಲ್ಲಿ ಸಂಪಾದಕರು ಈ ಕ್ರಮದಲ್ಲಿ ಸಂಶೋಧಿಸಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು.

ಱ/ೞ ಕಾರಗಳ ಬಳಕೆಯನ್ನು ಇನ್ನೂ ಸರಿಯಾಗಿ ನೋಡಬೇಕಿತ್ತು. ಪಾಠಾಂತರಗಳನ್ನು ಗುರುತಿಸಿರುವ ರೀತಿ ಅಶಾಸ್ತ್ರೀಯವಾಗಿದೆ. ಯಾವ ಪ್ರತಿಯ ಪಾಠಾಂತರ ಯಾವುದೆಂಬುದು ಗೊತ್ತಾಗುವುದಿಲ್ಲ. ಕೃತಿಯ ಮೌಲ್ಯ ವಿವೇಚನೆ ಇನ್ನೂ ವಿಮರ್ಶಾತ್ಮಕವಾಗಿರಬೇಕಿತ್ತು. ಕಾಗದ ಮುದ್ರಣ, ರಕ್ಷಾಕವಚ ಚೆನ್ನಾಗಿವೆ.

ಕುಮಾರವ್ಯಾಸನ ವಿರಾಟಪರ್ವ (ಸಂ: ಕೃಷ್ಣಾಜೋಯಿಸ್) ಮತ್ತೆ ಮುದ್ರಣವಾಗಿದೆ. ಇದು ಕೇವಲ ಹಿಂದಿನ ಮುದ್ರಣಗಳ ಪುನರ್ ಮುದ್ರಣವಲ್ಲ. ಒಟ್ಟು ಇಪ್ಪತ್ತು ಪ್ರತಿಗಳ ಸಹಾಯದಿಂದ ಇದನ್ನು ವಿಶ್ವಾಸಾರ್ಹ ರೀತಿಯಲ್ಲಿ ಸಂಪಾದಿಸಲಾಗಿದೆ. ಪ್ರಸ್ತಾವನೆ ಪರಿಶಿಷ್ಟಗಳು ಚೊಕ್ಕವಾಗಿವೆ. ಅದರಲ್ಲಿಯೂ ಎರಡನೆಯ ಪರಿಶಿಷ್ಟದಲ್ಲಿ ವ್ಯಾಸಭಾರತದ ಸಂವಾದಿ ಮೂಲ ಶ್ಲೋಕಗಳನ್ನು ಕೊಟ್ಟಿರುವುದು ತೌಲನಿಕ ಅಧ್ಯಯನಕ್ಕೆ ಉಪಯುಕ್ತವಾಗಿದೆ.

ಒಟ್ಟು ಕುಮಾರವ್ಯಾಸ ಭಾರತದ ಶುದ್ಧಪಾಠ ನಿರ್ಣಯಕ್ಕೆ, ಅದರ ಹತ್ತೂ ಪರ್ವಗಳ ಉತ್ತಮ ಗ್ರಂಥ ಸಂಪಾದನೆಯ ಕಾರ್ಯ ಮೊದಲು ಆಗಬೇಕು. ಆ ದಿಕ್ಕಿನಲ್ಲಿ ಇದರ ಸ್ಥಾನವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕುಮಾರವ್ಯಾಸನ ಕಾಲನಿರ್ಣಯದ ವಿಚಾರವಾಗಿ ಸಂಪಾದಕರು ಇದುವರೆಗಿನ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಈ ಸಂಬಂಧವಾಗಿ ವಿದ್ವಾಂಸರು ಅವಶ್ಯ ಗುರುತಿಸಬೇಕಾದ ಹೊಸ ವಿಚಾರವೊಂದನ್ನು ಸಾಳ್ವಭಾರತದ ಪೀಠಿಕೆಯಲ್ಲಿ (ಹಂಪನಾ: ಸಾಳ್ವ ಭಾರತ, ಬೆಂಗಳೂರು ವಿಶ್ವವಿದ್ಯಾಲಯ, ೧೯೭೬) ತಿಳಿಸಿದ್ದೇನೆ. ಸಾಳ್ವಕವಿಯ ಮೇಲೆ ಕುಮಾರವ್ಯಾಸನ ಪ್ರಭಾವ ಸ್ಪಷ್ಟವಾಗಿ ಕಂಡು ಬರುತ್ತದೆ. ಸಾಳ್ವನ ಕಾಲವನ್ನು ೧೪೮೫ ಎಂಬುದಾಗಿ ಪ್ರಸ್ತಾವನೆಯಲ್ಲಿ ಸಾಧಾರಣವಾಗಿ ಸಾಧಿಸಿ ತೋರಿಸಿದ್ದೇನೆ. ಸಾಳ್ವನಂಥ ಕವಿಯ ಮೇಲೆ ಪ್ರಭಾವ ಬೀರುವುದಕ್ಕೆ ಸ್ವಲ್ಪ ಹಿಂದೆಯೇ ಆ ಕವಿ ಆಗಿ ಹೋಗಿರಬೇಕು. ಇದರಿಂದ ಕುಮಾರವ್ಯಾಸನ ಕಾಲವನ್ನು ೧೪೮೫ ಕ್ಕೂ ಮೊದಲು, ಬಹುಶಃ ೧೪೫೦ ಎಂದು ಭಾವಿಸಲು ಅವಕಾಶವಿದೆ.

ವಿರಕ್ತ ತೋಂಟದಾರ್ಯನ ಕರ್ನಾಟ ಶಬ್ದ ಮಂಜರಿಯ (ಸಂ: ಶಿವಾನಂದ) ಈ ಎರಡನೆಯ ಮುದ್ರಣ, ಹಿಂದೆ ಅಚ್ಚಾದ (೧೮೯೧) ಪ್ರತಿಯ ಜತೆಗೆ ಇನ್ನೊಂದು ಮಾತೃಕೆಯನ್ನು ಬಳಸಿಕೊಂಡು ಸಿದ್ಧವಾಗಿದೆ. ಇದಕ್ಕೆ ಲಗತ್ತಿಸಿರುವ ಅರ್ಥಕೋಶ ಉಪಯುಕ್ತವಾಗಿದೆ.

ಸಿದ್ಧರಾಮನ ವಚನಗಳು (ಸಂ: ತಿಪ್ಪೇರುದ್ರಸ್ವಾಮಿ) ಒಂದು ಸಂಗ್ರಹ ಮಾತ್ರ, ಕೃತಿಯ ಹೆಸರು, ಇದರಲ್ಲಿ ಸಿದ್ಧರಾಮನ ವಚನಗಳು ಪೂರ್ಣವಾಗಿ ಇರಬಹುದೆಂಬ ತಪ್ಪು ಕಲ್ಪನೆಗೆ ಎಡೆಗೊಡುತ್ತದೆ. ಸಂಗ್ರಹದಲ್ಲಿನ ಕೆಲವು ಉತ್ತಮ ವಚನಗಳಿಂದ ಕೆಲವನ್ನಾದರೂ ಸೇರಿಸಬೇಕಿತ್ತೆನಿಸುತ್ತದೆ; ಇದು ಸಂಪಾದಕರ ದೃಷ್ಟಿಕೋನವನ್ನು ಅವಲಂಬಿಸಿದ ವಿಷಯ. ಪೀಠಿಕೆ ಪ್ರಯೋಜನಕಾರಿಯಾಗಿದೆ.

ಅಜ್ಞಾನ ಕವಿ ಕರ್ತೃಕವಾದ ರುಂಡ ಭೈರವನ ಕಾಳಗ (ವಿ.ಕೆ. ಹೆಗಡೆ) ಸಾಧಾರಣವಾಗಿ ಸಂಪಾದಿತವಾಗಿದೆ. ಇದು ವಾಲಗಳ್ಳಿ ವರದವಿಠ್ಠಲ ಅಥವಾ ಬತ್ತಲೇಶ್ವರ ರಾಮಾಯಣದಲ್ಲಿಯ ಯುದ್ಧಕಾಂಡದಲ್ಲಿ ಬರುವ ಅಖ್ಯಾನ. ‘ಸಹೃದಯ ಓದುಗರ ಕರಕಮಲಗಳಲ್ಲಿ ನಮ್ಮ ಈ ಕನ್ನಡ ಕರಾವಳಿ ಗ್ರಂಥ ಪ್ರಕಾಶನದ ನಾಲ್ಕನೆಯ ಕುಸುಮವಾದ ಸಂತೋಷವೆನಿಸುತ್ತದೆ’ ಎಂದು ಅರಿಕೆ ಮಾಡಿದ್ದಾರೆ. ಅಂದರೆ ಇದನ್ನು ಓಲೆಗರಿ ಹಸ್ತಪ್ರತಿಯಿಂದ ಸಿದ್ಧಪಡಿಸಲಾಗಿದೆಯೆಂಬುದು ಇಲ್ಲಿನ ಆಶಯ, ಆಶಯಕ್ಕೆ ತಕ್ಕ ಭಾಷೆಯನ್ನು ಬಳಸಿಲ್ಲ. ‘ಈ ಪ್ರತಿಯು ಐದಾರು ತಾಡವೋಲೆ ಹಾಗೂ ಕೈ ಬರಹದ ಪ್ರತಿಗಳಿಂದ ತಯಾರ ಮಾಡಲ್ಪಟ್ಟಿದೆ’ ಎನ್ನುತ್ತಾರೆ (೪). ಅಂದರೆ ಇದನ್ನು ಎಷ್ಟು ಪ್ರತಿಗಳಿಂದ ಸಿದ್ಧಪಡಿಸಿದ್ದಾರೆಂಬುದು ಅವರಿಗೇ ತಿಳಿಯದು. ಈ ವಾಕ್ಯದ ಕೆಳಗೆ ಒಂಬತ್ತು ಪ್ರತಿಗಳ ವಿವರ ಹೇಳಿ, ಅನಂತರ (೫) ‘ಇವುಗಳಲ್ಲದೆ… ಇತ್ಯಾದಿ ೧೦-೧೨ ಪ್ರತಿಗಳನ್ನು ನಿರೀಕ್ಷಿಸಲಾಗಿದೆ…. ಹೀಗೆ ಹಲವಾರು ಪ್ರತಿಗಳ ಸಹಾಯದಿಂದ ಈ ಪ್ರತಿಯನ್ನು ಸಿದ್ಧಪಡಿಸಲಾಗಿದೆ’ ಎಂದು ತಿಳಿಸಿದ್ದಾರೆ. ಅಸ್ಪಷ್ಟ ಭೂಮಿಕೆಯ ಮೇಲೆನಿಂತ ಸಂಪಾದಕರ ವಿವರಣೆಯಲ್ಲಿ ವಿರೋಧಾಭಾಸಗಳಿವೆ. ಗ್ರಂಥದ ಅಭ್ಯಾಸದಿಂದ ಕೇವಲ ಕ ಖ ಗ ಘ ಚ ಎಂಬ ಅಯ್ದು ಪ್ರತಿಗಳನ್ನು ಮಾತ್ರ ಬಳಸಿ ಕೊಂಡಿರುವುದಾಗಿ ತಿಳಿದು ಬರುತ್ತದೆ. ‘ಆ’ ಪ್ರತಿಯನ್ನು ಕುರಿತು ‘ಇದರಿಂದ ಹಲವಾರು ಪಾಠಾಂತರ ಗುರುತಿಸಲು ಸಹಾಯವಾಗಿದೆ’ ಎನ್ನುತ್ತಾರೆ, ಎಲ್ಲೆಲ್ಲಿ ಎಂಬುದು ತಿಳಿಯುವುದೇ ಇಲ್ಲ. ಮುದ್ರಣ ಕೆಟ್ಟದಾಗಿದೆ.

ಅಜ್ಞಾತಕವಿ ಕರ್ತೃಕವಾದ (ಕೆಂಪುನಂಜಯ್ಯ?) ಕಪೋತ ಚರಿತ್ರೆ (ಸಂ: ಭೋಜರಾಜ ಪಾಟೀಲ) ಮನುಷ್ಯನ ಸ್ವಭಾವಾದಿಗಳನ್ನು ಪಕ್ಷಿಗಳ ಮೂಲಕ ಧ್ವನಿಸಿರುವ ರೂಪಕ ಕಥೆ. ಈ ಜನಪ್ರಿಯ ಪುಟ್ಟ ಸಾಂಗತ್ಯ ಕಾವ್ಯವನ್ನು ಸಂಪಾದಿಸುವ ಕಾರ್ಯದಲ್ಲಿ, ಈಗಾಗಲೇ ಒಮ್ಮೆ ಪ್ರಕಟವಾಗಿದ್ದ ಮುದ್ರಿತ ಪ್ರತಿಯ ಜತೆಗೆ ಇನ್ನಿತರ ೧೯ ಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಪಾಠಾಂತರಗಳ ಆಯ್ಕೆಯಲ್ಲಿ ಇನ್ನೂ ಕಾಳಜಿ ವಹಿಸಬೇಕಿತ್ತು. ಜತೆಗೆ ಅವರು ನೋಡದೆ ಹೋದ ಹುಲ್ಲೂರು ಶ್ರೀನಿವಾಸ ಜೋಯಿಸರ ಮುದ್ರಿತ ಪ್ರತಿಯನ್ನು ದೊರಕಿಸಿಕೊಂಡಿದ್ದರೆ ಇನ್ನೂ ಪ್ರಯೋಜನವಾಗುತ್ತಿತ್ತು. ಇದರ ಕರ್ತೃವಿನ ಹೆಸರಿನ ವಿಚಾರದಲ್ಲಿ ಸಂದೇಹಕ್ಕೆ ಎಡೆಯಿದ್ದರೂ ಆತ ಚಿತ್ರದುರ್ಗ (ಚಿನ್ಮೂಲಾದ್ರಿ) ಮಠದ ಶಿಷ್ಯನೆಂಬುದರಲ್ಲಿ ಸಂಶಯವಿಲ್ಲವೆಂಬುದು ಗಮನಿಸಬಹುದಿತ್ತು.

ಪಂಪಭಾರತ ಕಥಾಲೋಕ (ಆರ್.ಎಲ್. ಅನಂತರಾಮಯ್ಯ) ಪಂಪನ ವಿಕ್ರಮಾರ್ಜುನ ವಿಜಯದ ಹೊಸಗನ್ನಡ ರೂಪಾಂತರ. ಇಲ್ಲಿ ಪಂಪಭಾರತದ ಮೂಲ ನಿರೂಪಣೆಯನ್ನು ಆದಷ್ಟೂ ಸೋರದಂತೆ ತಿಳಿಯಾದ ಕನ್ನಡದಲ್ಲಿ, ಕಾವ್ಯದ ಪರಿಚಯ ಚೆನ್ನಾಗಿ ಆಗುವಂತೆ ಸಂಗ್ರಹಿಸಿ ಕೊಡಲಾಗಿದೆ. ಇದಿಷ್ಟೇ ಆಗಿದ್ದರೆ ಈ ಗ್ರಂಥಕ್ಕೆ ಪ್ರಾಮುಖ್ಯ ಬರುವುದು ಕಷ್ಟವಾಗುತ್ತಿತ್ತು. ಪಂಪಭಾರತ ಕಥಾಸಾರವನ್ನು ಬಹಳ ಹಿಂದೆಯೇ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತ್ತು. ಆದರೆ ಈ ‘ಕಥಾಲೋಕ’ದ ಎರಡನೆಯ ಭಾಗದಲ್ಲಿ ಪಂಪನ ಹಾಗೂ ಅವನ ಕಾವ್ಯದ ವಿಚಾರವಾಗಿ ಮಮಕಾರ ದೂರವಾದ ವಿವೇಚನೆಯೂ ಇದೆ, ಇಲ್ಲದೆ ಮೂರನೆಯ ಭಾಗದಲ್ಲಿ ಕಾವ್ಯದಿಂದ ಆರಿಸಿಕೊಟ್ಟ ಕೆಲವು ಒಳ್ಳೆಯ ಪದ್ಯಗಳೂ ಇವೆ. ಮೂರು ವರ್ಷಗಳ ಹಿಂದೆ ಪ್ರಕಟವಾದ ಡಾ|| ಡಿ.ಎಲ್.ಎನ್. ರವರ ‘ಪಂಪಭಾರತ ದೀಪಿಕೆ’ ತೋರಿದ ದಾರಿಯನ್ನು ಹಿಡಿದು ಇನ್ನೂ ಮುಂದೆ ಹೊರಟಿರುವ ಈ ಆಲೋಕ ಪಂಪಭಾರತ ಅಭ್ಯಾಸಿಗಳಿಗೆ ಉಪಯುಕ್ತ ಕೈಗನ್ನಡಿ. ಇದು ಪಂಪಭಾರತದ ವ್ಯಾಸಂಗಕ್ಕೆ ಓದುಗನಿಗೆ ಬೇಕಾದ ಪೂರ್ವಭಾವಿ ಸಿದ್ಧತೆಯನ್ನು ಯಥೋಚಿತವಾದ ರೀತಿಯಲ್ಲಿ ಪೂರೈಸಿಕೊಡುತ್ತದೆ. ಹೊಸಗನ್ನಡದ ಬರವಣಿಗೆಯಲ್ಲಿ ಹಳಗನ್ನಡದ ಕೆಲವು ಮಾತುಗಳನ್ನು ಅಲ್ಲಲ್ಲಿ ಉಳಿಸಿಕೊಂಡಿರುವುದು ಉಚಿತವಾಗಿದೆ. ಇದರ ಮುಂದಿನ ಮುದ್ರಣಕ್ಕೆ ಕೆಲವು ಸೂಚನೆಗಳು.

  1. ‘ಪಂಪಭಾರತದಲ್ಲಿ ಜೈನಧರ್ಮದ ಸುಳುಹು’ (ಪುಟ ೩೧೬) ಅಸಮಗ್ರವಾಗಿದೆ. ಇಂಥ ಇನ್ನಿತರ ಉದಾಹರಣೆಗಳನ್ನು ಗಮನಿಸಬಹುದು.
  2. ಗಾದೆ ಮಾತುಗಳು, ನುಡಿಗಟ್ಟುಗಳು (ಪುಟ ೩೨೯) ಸಾಲದು. ಇದಕ್ಕೆ ಪೂರಕವಾಗಿ ವಿವೇಕಾಭ್ಯುದಯ (೧೯೭೦) ದಲ್ಲಿ ಪ್ರಕಟವಾಗಿರುವ ‘ಪಂಪನ ವಾಕ್ಯ ಮಾಣಿಕ್ಯಕೋಶ’ ವನ್ನು ನೋಡಬಹುದು.

iii. ಪಂಪನ ಹಿತಮಿತ ಶೈಲಿಗೆ ಇನ್ನೂ ಉತ್ತಮ ಉದಾಹರಣೆಗಳನ್ನು ಕೊಡಬಹುದಿತ್ತು.

  1. ಎರಡನೆಯ ಭಾಗದಲ್ಲಿ ಬರುವ ಕೆಲವು ವಿವರಣೆಗಳು ವಿವಾದಾಸ್ಪದವಾಗಿವೆ. ಪಂಪನಿಗಿಂತ ಪೂರ್ವದಲ್ಲಿ ಕನ್ನಡದಲ್ಲಿ ಎಷ್ಟರ ಮಟ್ಟಿಗೆ ಕಾವ್ಯರಚನೆ ನಡೆದಿತ್ತೊ ತಿಳಿಯದು ಎಂದು (ಪುಟ ೨೬೩) ಹೇಳಿರುವುದು ಸರಿಯಲ್ಲ. ಕವಿರಾಜ ಮಾರ್ಗದ ಮಾತು ಹಾಗಿರಲಿ, ಒಮ್ಮಡಿ ಗುಣವರ್ಮನ ಶೂದ್ರಕ ಮತ್ತು ಹರಿವಂಶಗಳನ್ನು ಮರೆಯುವಂತಿಲ್ಲ. ಭಾರತದ ಕಥೆಯನ್ನು ಇಡಿಯಾಗಿ ಅಥವಾ ಬಿಡಿಯಾಗಿ ಬೇರೆಯಾರಾದರೂ ಬರೆದಿದ್ದರೆ ಎಂಬುದು ಗೊತ್ತಾಗುವುದಿಲ್ಲವೆನ್ನುತ್ತಾರೆ. ಶಬ್ದಮಣಿದರ್ಪಣದಲ್ಲಿ ಉದಾಹೃತವಾಗಿರುವ ಮಹಾಭಾರತ ಕಥಾಸಂಬಂಧಿಯಾದ ಪದ್ಯಭಾಗಗಳನ್ನು ತನಿಯಾಗಿ ಅವಲೋಕಿಸಿದಾಗ ಅಂಥ ಪ್ರಯತ್ನಗಳು, ಕಡೆಗೆ ಬಿಡಿಯಾಗಿಯಾದರೂ ನಡೆದಿದ್ದುವೆಂಬುದು ಮನದಟ್ಟಾಗುತ್ತದೆ.

ಆದರೆ ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಗದ್ಯ ರೂಪಾಂತರದ ಗುಣದ ಮುಂದೆ ಇವೆಲ್ಲಾ ಗೌಣವಾಗಿಬಿಡುತ್ತವೆ.

ಆಚಣ್ಣನ ವರ್ಧಮಾನ ಪುರಾಣವನ್ನು ಸಂಪೂರ್ಣ ಹೊಸಗನ್ನಡ ಅನುವಾದದೊಡನೆ ತ.ಸು. ಶಾಮರಾಯ ಮತ್ತು ಪ. ನಾಗರಾಜಯ್ಯ ಅವರುಗಳು ಸಂಪಾದಿಸಿದ ಕೃತಿಯನ್ನು ಭಾರತೀಯ ಜ್ಞಾನಪೀಠ ಪ್ರಕಟಿಸಿದೆ. ಅದರಲ್ಲಿ ಬರುವ ಮಹಾವೀರನ ಕಥೆಯನ್ನೇ ಪ್ರತ್ಯೇಕವಾಗಿ ತೆಗೆದು ‘ಮಹಾವೀರ’ ಎಂಬ ಹೆಸರಿನಿಂದ ಈಗ ಪ್ರಕಟಿಸಿದ್ದಾರೆ, ಆಚಣ್ಣನ ಚಂಪೂಕಾವ್ಯದ ಕಥಾನುಸಂಧಾನಕ್ಕೆ ಇದೊಂದು ಪ್ರವೇಶಿಕೆಯಂತಿದೆ.

(ಸಾಹಿತ್ಯ ವಾರ್ಷಿಕ ೧೯೭೫ : ಸಂಪಾದಕರು, ಜಿ.ಎಸ್. ಶಿವರುದ್ರಪ್ಪ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು೧೯೭೭)

* * *